ಸತ್ತವನ ಜೊತೆಯಲ್ಲಿ…

ಬಸವನಗೌಡ ಹೆಬ್ಬಳಗೆರೆ

ಇದ್ದಾಗ ಬಡಿದಾಡಿದೆ ಆಸ್ತಿಗೆ
ತನಗೆ,ಮಕ್ಕಳಿಗೆ, ಮೊಮ್ಮಕ್ಕಳಿಗೆ
ಮರಿಮಕ್ಕಳಿಗೆ, ಗಿರಿಮಕ್ಕಳಿಗೆ
ಮೂರು ತಲೆಮಾರು ಕೂತು ತಿಂದರೂ
ಕರಗಲಾಗದಷ್ಟು ಮಾಡಲು….

ಗಳಿಕೆ ಬೇಕಿತ್ತು ನಿಜ
ಪ್ರಾಮಾಣಿಕವಾಗಿದ್ದರೆ ಸಾಕಿತ್ತು
ಗಳಿಸಿದೆ ಜನರಿಂದ ಕಿತ್ತು ಕಿತ್ತು
ನೋವಿನ ಉಸಿರು ತಾಗಿತು
ಜನರು ಅತ್ತೂ ಅತ್ತು
ಶಾಶ್ವತವಲ್ಲ‌ ಎಂಬುದನರಿಯದೇ
ಕೂಡಿಟ್ಟೆ ಮತ್ತು ಮತ್ತು…

ಸತ್ತಾಗ ಮಾತ್ರ
ಏನೂ ಒಯ್ಯಲಿಲ್ಲ
ಸಾಕಷ್ಟು ಗಳಿಸಿಯೂ
ಮಕ್ಕಳು ಉಡುದಾರವನೂ
ಬಿಡಲಿಲ್ಲ…
ಇಷ್ಟಪಟ್ಟು ಕೊಂಡಿದ್ದ
ಅಂಗಿ, ಚೊಣ್ಣವನೂ ಬಿಡಲಿಲ್ಲ
ನೀ ಬಡಿದಾಡಿದ್ದು ಏತಕೆ??

ನೀ ಮಾಡಿದ್ದೂ ನಿನ್ನಪ್ಪನಿಗಷ್ಟೇ..!
ಅಂದಾದರೂ ಅರಿಯಬೇಕಿತ್ತು
‘ಕೊಟ್ಟಿದ್ದು ತನಗೆ’
ಕಲಿಯಬೇಕಿತ್ತು ಪಾಠವ
ಚೂರಾದರೂ
ಮಾಡಬೇಕಿತ್ತು ದಾನವ..
ಎಂಜಲ ಕೈಲೂ
ಕಾಗೆ ಓಡಿಸಲಿಲ್ಲ!!
ಹ್ಹ, ಇನ್ನು ಉದಾರತೆ,ದಾನ!!

ಗರಿ ಗರಿ ನೋಟ
ಎಣಿಸಿದ ಕೈ
ಇಂದು ಮಂಡಕ್ಕಿ,ಚಿಲ್ಲರೆಯ
ಬೀಳಿಸಿಕೊಳ್ಳುತಾ ಬೊಂಬಿನ
ಮೆರವಣಿಗೆ ಸಾಗಿದೆ..
ಅದಕ್ಕೂ ಮಾಡುತಿಹರು
ಎಸೆಯಲು ಚೌಕಾಸಿ..
ನಿನ್ನ ಕಿಮ್ಮತ್ತು ಇಷ್ಟೇನಾ??!

ಹಾಸಿಗೆ ಹಿಡಿದಾಗ
ಗುಳಿಗೆ, ಔಷಧಿಯ
ರೊಕ್ಕಕೆ ಮಾಡಿದರೂ ಬರ..
ಇಂದು ದೊಡ್ಡ ಪೋಟೋಗೆ
ಮಣಭಾರದ ಹಾರ
ಗಂಧದ ಕಡ್ಡಿ ಹಚ್ಚಿದರಷ್ಟೆ
ತೋರಿಕೆಗೆ…
ಒಳಗೊಳಗೇ ಮಕ್ಕಳು
ಲೆಕ್ಕ ಹಚ್ಚುತಿಹರು ಖರ್ಚಿನ
ಪಾಲಿಗೆ!!

ಆರಡಿ ಮೂರಡಿಗೂ
ಲೆಕ್ಕ ಹಾಕಿ
ಬೆಳೆ ಬಾರದಿಹ ಪೆಳೆ ಬೆಳೆದ
ಬರಡು ಭೂಮಿಯಲೇ
ಹೂಳುವರು..
ಸತ್ತಾಗ ಒಂದೆರಡು ವರ್ಷವಷ್ಟೇ
ನಿನ್ನ ಸಮಾಧಿಯ ಪೂಜೆ
ಇಂದು ಸಮಾಧಿಯೂ
ಯಾರದ್ದೋ ಮನೆಯ
ನಿವೇಶನಕೆ ಆಪೋಶನಗೊಂಡಿದೆ..!!

ಆಸ್ತಿ, ನಗ ನಾಣ್ಯ ಹಂಚಿಕೊಂಡರಷ್ಟೇ
ನಿನ್ನ ಜೊತೆ ಬರುತ್ತಿರುವುದು
ಬರೀ ಪುಣ್ಯ ಪಾಪವಷ್ಟೇ…
ಗಳಿಸಿದ ಆಸ್ತಿ ಹಿಂದೆ ಬರಲಿಲ್ಲ
ಜನರ ಮನದಲೂ ಉಳಿಯಲಿಲ್ಲ…

ಜಗವ ಗೆಲ್ಲ ಹೊರಟ
ಅಲೆಗ್ಸಾಂಡರನ ಮಾತೂ
ಅರಿಯಲಿಲ್ಲ.. ಹಠ ತೊಟ್ಟು
ತೊಡೆ ಮುರಿದು ಸತ್ತ ಕೌರವನೂ ಉದಾಹರಣೆಯಾಗಲಿಲ್ಲ..
ಜನರ ಜೊತೆ ಬೆರೆಯಲಿಲ್ಲ
ಇಡಲಿಲ್ಲ, ಕೊಡಲಿಲ್ಲ
ದುರಾಸೆಯ ಬಿಡಲಿಲ್ಲ..

ಹಲವರದು ಮೊಸಳೆ ಕಣ್ಣೀರಷ್ಟೇ
ಒಳಗೊಳಗೆ ಖುಷಿ ಪಡುತಿಹರು
ಜೀವನವಿಷ್ಟೇ!!
ಒಳಿತು ಮಾಡಬೇಕಿತ್ತು
ಜನರ ಹೃದಯದಲಿ
ಅಮರನಾಗಿರುತ್ತಿದ್ದೆ
ಸತ್ತರೂ ಬದುಕುತ್ತಿದ್ದೆ
ಸತ್ತರೂ ಬದುಕುತ್ತಿದ್ದೆ‌..

‍ಲೇಖಕರು Admin

November 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: