ಸತೀಶ ಕುಲಕರ್ಣಿ ಓದಿದ ʼನಾರಿ ಪದ್ಯʼ

ಸತೀಶ ಕುಲಕರ್ಣಿ

ಸಾವಿತ್ರಿ ಮುಜುಮದಾರರ ‘ನಾರಿಪದ್ಯ’ ಓದುತ್ತಾ ಹೋದಂತೆ ಮಹಿಳಾ ಕಾವ್ಯ ಹೊಸ ವ್ಯಾಖ್ಯಾಯನದತ್ತ ಮಗ್ಗಲು ಬದಲಿಸುತ್ತಿದೆ ಎಂದೆನಿಸದೇ ಇರಲಾರದು. ಸುಮಾರು ಒಂದು ದಶಕದಿಂದ ಚಿಂತಕಿ, ಲೇಖಕಿ ಸಮಾಜ ಪರವಾಗಿ ಹೋರಾಟಗಾರ್ತಿಯಾಗಿರುವ ಮುಜುಮದಾರರು ಈಗ ತಮ್ಮೆಲ್ಲ ಅನುಭವಗಳನ್ನು ಕಾವ್ಯ ಮುಖೇನ ನಾರಿಪದ್ಯದಲ್ಲಿ ಪ್ರಕಟಿಸಿದ್ದಾರೆ.

ದಲಿತ ಬಂಡಾಯ ಚಳವಳಿಗಳ ಮೂಲಕ ನನ್ನಂತವರು ಸಮಾಜ ಜೀವನ ದೃಷ್ಠಿಕೋನವನ್ನು ಕಂಡುಕೊಂಡವರು. ರಸ್ತೆಯಲ್ಲಿ ನಿಂತು ಮಾತನಾಡಿ ಜನರೊಡನೆ ಹೇಳಿಕೇಳಿ ಹಾಡುಗಳ ಹಾಡಿದವರು. ನಮ್ಮ ಉದ್ದೇಶವೊಂದೆ : ನಮ್ಮ ಬರಹ ಬದುಕು ಸಮಾಜಕ್ಕೆ ತೆರೆದುಕೊಂಡು ಎರಡರಲ್ಲಿಯೂ ನಮ್ಮನ್ನೇ ನಾವು ವ್ಯಾಖ್ಯಾಯಿನಿಸಿಕೊಳ್ಳಬೇಕೆಂಬ ಸದುದ್ದೇಶದ್ದು. ಇಂತಹುದರಲ್ಲಿ ಸಾಕಷ್ಟು ಮಾನ ಅವಮಾನ ವಾಗ್ವಾದ ಪರೀಕ್ಷೆಗಳು ನಮ್ಮ ನಡೆ ನುಡಿಗಳ ಬಗ್ಗೆ ಚರ್ಚೆಯಾದದ್ದೂ ಉಂಟು.

ಹೋರಾಟ ಮತ್ತು ಬರವಣಿಗೆಯನ್ನು ಸಮದೂಗಿಸುತ್ತಲೇ ನಮ್ಮಗಳ ಇಂಟಿಗ್ರೆಟಿಯನ್ನು ಕಾಯ್ದುಕೊಳ್ಳುವುದೇ ಒಂದು ಸವಾಲಿನ ಕೆಲಸ. ಹೋರಾಟ, ಪ್ರತಿಭಟನೆ ಬೀದಿಗೆ ಬಂದಾಗಲೆಲ್ಲ ಒಮ್ಮೊಮ್ಮೆ ನಮ್ಮ ಕ್ರಿಯೇಟಿವಿಟಿ ನಮ್ಮಿಂದ ದೂರ ಸರಿಯುತ್ತಿದೆ ಎಂದನಿಸಿದ್ದುಂಟು. ನಾರಿಪದ್ಯದ ಶ್ರೀಮತಿ ಸಾವಿತ್ರಿ ಇಂಥ ಇಕ್ಕಟ್ಟಿನ ಹಾದಿಯಲ್ಲಿ ಹಾಯ್ದು ಕಾವ್ಯಕ್ಕೆ ಬಂದಿದ್ದಾರೆ. ಒಂದು ಸುದೀರ್ಘ ಸಮಯದ ನಂತರ ಬರವಣಿಗೆಗೆ ಮರಳಿದ್ದಾರೆ. ಈ ಮೊದಲು ಹೆಣ್ಣು ಹೆಜ್ಜೆ ಎಂಬ ಗದ್ಯಯ ಬರಹಗಳ ಕೃತಿ ಪ್ರಕಟವಾಗಿತ್ತು.

ನಾರಿಪದ್ಯ ಸಾವಿತ್ರಿ ಅವರು ತಾವುಂಡ ಎಲ್ಲ ಅನುಭವಗಳ ಹಿಂಡಿ ಕಾವ್ಯವಾಗಿಸಿದ್ದಾರೆ. ಅಂತಿಮವಾಗಿ ಅವರು ಬಯಸುವುದು ಗಂಡು ಹೆಣ್ಣಿನ ಸಮಾನತೆ.

ನೀನು ನನ್ನಂತಾಗು
ನನಗೆ ಸಮನಾಗು
ಬೆಳಕ ಬಿತ್ತೋಣ ಬಾ
( ಬೆಳಕ ಬಿತ್ತೋಣ )

ಕವಯತ್ರಿಯ ಆಲೋಚನೆಗಳನ್ನು ವಿವೇಚಿಸುವ ಬೆಳಕ ಬಿತ್ತೋಣ ಬಾ ಕವಿತೆ, ತಿದ್ದುವ ತಿದ್ದಿಕೊಳ್ಳುವ ಹೆಣ್ಣು ದೃಢ ನಡೆತೆಗಳನ್ನು ಗಟ್ಟಿಗೊಳಿಸುವ ಆಶೆಯದ್ದಾಗಿದೆ.

ಸಂಕಲನದುದ್ದಕ್ಕೂ ಗಂಡು ಮನಸ್ಸಿನ ವಿರುದ್ಧ ಪ್ರತಿರೋಧವನ್ನು ಒಡ್ಡುತ್ತ, ಲಿಂಗ ಸಮಾನತೆಯನ್ನು ತರುವ ದನಿಯಿದೆ. ಅತ್ಯಂತ ಸೂಕ್ಷö್ಮ ಸಂವೇದನೆಗಳ ಹೆಣ್ಣಿನ ಮುಗ್ಧತೆಯ ಗೋಡೆ ಮುರಿದು, ಪ್ರಶ್ನೆ ಕೇಳುವ ಕವಿತೆಗಳಿವು. ಪರಿತಪಿಸುವ ಪರಂಪರೆಯನ್ನು ದಾಟಿ ಪ್ರಶ್ನಿಸಿ ಗಟ್ಟಿಯಾಗಿ ಮಾತನಾಡುವ ಹೆಣ್ಣ್ ದನಿಯೊಂದು ನಾರಿಪದ್ಯದುದ್ದಕ್ಕೂ ಅನುರಣಿಸಿದೆ.

ನಾನು ಮಾರು ಹೋದೆ
ನನ್ನನ್ನು ಮಾರಿ ಹೋದೆ

ನಾನು ಮೋಹಗೊಂಡೆ
ನನ್ನನ್ನು ಮೋಹಿನಿ ಎಂದೆ

ನಾನು ಹೂವಾಗಿ ಅರಳಿದೆ
ನನ್ನನ್ನು ಚಿವುಟಿ ಹಾಕಿದೆ

ನಾನು ಹಿಂಬಾಲಿಸಿದೆ
ನನ್ನನ್ನು ಹಿಮ್ಮೆಟ್ಟಿದೆ

ನಾನು ಸುಖ ನೀಡಿದೆ
ನನ್ನನ್ನು ಸುಖಿಸಿ ಹೋದೆ

ನಾನು ಬದುಕು ಕೊಟ್ಟೆ
ನನ್ನನ್ನು ಬಂಧನದಲ್ಲಿ ಇಟ್ಟೆ

ನಾನು ನಾನಾದೆ
ನನ್ನನ್ನು ಗೌರವಿಸಿದೆ

ನಾನಾದೆ ಎಂಬ ಪದ್ಯದಲ್ಲಿ ಸ್ವಾಭಿಮಾನ ಹೆಣ್ಣಸ್ಮಿತೆಯೊಂದಿಗೆ ರೂಪಾಂತರ ಪಡೆದು ಹಕ್ಕು ಚಲಾವಣೆಯತ್ತ ದಿಕ್ಕು ತೋರಿಸುವಂತಹದ್ದು.
ಮತ್ತೆ ಮತ್ತೆ ತನ್ನ ತನವನ್ನು ಡಿಫೈನ್ ಮಾಡಿಕೊಳ್ಳುವ ಸಾವಿತ್ರಿ, ಕಾವ್ಯ ತನ್ನೆಲ್ಲ ಹೋರಾಟದ ಹಿನ್ನಲೆಯಲ್ಲಿ ಉತ್ತರ ಕಂಡುಕೊಳ್ಳುತ್ತಿದ್ದಾರೆ. ಕನ್ನಡದ ಬೇರೆ ಬೇರೆ ಪ್ರಮುಖ ಕವಯತ್ರಿಯರು ಇಂತಹ ಪ್ರಯೋಗವನ್ನು ಮಾಡಿದ್ದಾರೆ. ಸಾವಿತ್ರಿ ಅವರಿಗೆ ಒಂದು ಹಿನ್ನಲೆ ಇರುವುದರಿಂದ ಈ ಕಾವ್ಯಕ್ಕೆ ಹೆಚ್ಚು ಅಥೆಂಟ್ಯಾಸಿಟಿ ಇದೆ.

ಬಂಡಾಯ ಚಳವಳಿಯ ಸಂದರ್ಭದಲ್ಲಿ ಇಂತಹದೊಂದಿಷ್ಟು ಸ್ವಾಭಿಮಾನದ ದನಿಗಳಿಗೆ ವಾತಾವರಣ ಸೃಷ್ಠಿಯಾದದ್ದು ಸುಳ್ಳಲ್ಲ. ೭೦ – ೮೦ರ ದಶಕದಿಂದ ಬಹಳ ದೂರ ಸಾಗಿ ಬಂದಿರುವಾಗ ಆ ವ್ಯಾಖ್ಯಾಯನಗಳನ್ನು ದಾಟುವ ಅಗತ್ಯವಿದೆ. ಸಾವಿತ್ರಿ ಮುಜುಮದಾರ ತಮ್ಮ ಅನುಭವಗಳಿಗೆ ಕಲಾತ್ಮಕ ಸ್ಪರ್ಶ ಕೊಟ್ಟು ದಾಟಲೆತ್ನಿಸಿದ್ದಾರೆ.

ಕತ್ತಲೊಡನೆ ಕೂಡಿದೆ
ಮುಂಜಾವನು ಹೆತ್ತೆ

ಬೆಂಕಿಯೊಡನೆ ಕೂಡಿದೆ
ದೀಪವನು ಹೆತ್ತೆ

ದುಂಬಿಯೊಡನೆ ಕೂಡಿದೆ
ಹಣ್ಣುಗಳನು ಹೆತ್ತೆ

ಮೇಘದೊಡನೆ ಕೂಡಿದೆ
ವರುಣನನು ಹೆತ್ತೆ

ಗಾಳಿಯೊಡನೆ ಕೂಡಿದೆ
ಪರಿಮಳವ ಹೆತ್ತೆ

ಮಣ್ಣಿನೊಡನೆ ಕೂಡಿದೆ
ಬಯಲನ್ನೇ ಹೆತ್ತೆ

ಗಂಡು ಹೆಣ್ಣು, ಪ್ರಕೃತಿ ಪುರುಷ ನಾನಾ ಸ್ತರಗಳಲ್ಲಿ ವಿಸ್ತಾರಗೊಳ್ಳುವ ಕೂಡಿಕೆ ಎಂಬ ಕವಿತೆ ಜೀವಗುಟ್ಟನ್ನು ಬಿಚ್ಚಿಕೊಳ್ಳುವ ಅತ್ಯುತ್ತಮ ಮಾದರಿ.
ಕೋವಿಡ್ ಸಂದರ್ಭದಲ್ಲಿ ಕವಯತ್ರಿ ತನ್ನೆಲ್ಲ ಸಂಘರ್ಷಗಳನ್ನು ಮಂಥನಕ್ಕೆ ಹಚ್ಚಿ ಬರೆದಿರುವ ಈ ಕವಿತೆಗಳು ಬಂಡಾಯ ಸಂದರ್ಭದಲ್ಲಿ ಅಂತ್ಯಂತ ಪಾಪ್ಯುಲರ್ ಆದ ಕವಿತೆಗಳ ಛಾಯೆಯಿಂದ ಹೊರ ಬರಲಾಗಿಲ್ಲ. ನನ್ನ ಕವನ, ನಾರಿ ಸಿಂಹಗಳು, ನನ್ನ ದೇಹ ನನ್ನದೆ, ದೀಪಧಾರಿಣಿ ಇವೆಲ್ಲ ಬಂಡಾಯ ಕಾವ್ಯದ ಕತ್ತರಿಸಿಕೊಳ್ಳಲಾಗದ ಹೊಕ್ಕಳು ಬಳ್ಳಿಯಂತಹ ಕವಿತೆಗಳು. ಒಂದು ರೀತಿಯಲ್ಲಿ ಹಳೆಯ ಬಂಡಾಯ ಕವಿತೆಗಳನ್ನು ಮುರಿದು ಕಟ್ಟಿದಂತಿದೆ.

ಮತ್ತೆ ಮತ್ತೆ ಸಂಕಲನದುದ್ದಕ್ಕೂ ಭಯ ಅಭಯ, ಅರಿವು ಎಚ್ಚರ, ಸಮನ್ವಯ ಪ್ರತಿರೋಧಗಳ ದ್ವಂದ್ವದಲ್ಲಿ ಬೆಂದ ಕವಿತೆಗಳು. ಒಂದಂತು ಸತ್ಯ ಕೆಲವು ಕವಿತೆಗಳನ್ನು ಓದುತ್ತ ಹೋದಂತೆ ಸಿದ್ದಗೊಂಡ ಬುದ್ಧಿ ಭಾವಗಳಿಗೆ ಘರ್ಷಣೆಯನ್ನು ಕೊಡುತ್ತವೆ.

ಒಮ್ಮೆ ಹೇಳಿದ ಮನು
ಅಂದೇ ಸತ್ತ,
ಹೇಳಿದ್ದು ಕೇಳುತ್ತ
ದಿನವೂ ನಾ ಸತ್ತೆ
(ಹೊಸ ಶಾಸ್ತ್ರ)

ಹಕ್ಕಿಯಾಗಿ ನಾ ಹಾರಿದೆ
ಬಾಣವಾಗಿ ನೀ ತಾಕಿದೆ
ಜಿಂಕೆಯಾಗಿ ನಾ ಜಿಗಿದೆ
ಹುಲಿಯಾಗಿ ನೀ ತಿಂದೆ
(ಪಂಜರ)

ನೀನೊಂದು ದೀಪ
ನಾನೊಂದು ದೀಪ
ಎಲ್ಲರೂಪದಲ್ಲೆ ಮೀರಿ
ಹಚ್ಚೋಣ ಸಮತೆ ದೀಪ
(ನಿರೂಪ)

ನನ್ನೊಡನೆ ಸಪ್ತಪದಿ ತುಳಿದ
ನಿನ್ನ ಹೆಜ್ಜೆಗಳೇ ಇಲ್ಲ
(ಶತಪದಿ)

ಒಂದು ಇತಿಮಿತಿಯಲ್ಲಿ ಉದ್ದೇಶಿತ ಆಶೆಯಗಳನ್ನು ಗಂಡು ಹೆಣ್ಣಿನ ಸಂಬಂಧದಲ್ಲಿ ಬರೆದ ಕವಿತೆಗಳು ಹೊಸ ವಿಸ್ತರಣೆಗೆ ಬಂದು ನಿಂತಿವೆ. ತನಗೆ ದಕ್ಕಿದ ಅನುಭವಗಳನ್ನು ಪ್ರಸ್ತುತಕ್ಕೂ ವಿಸ್ತರಿಸಿಕೊಳ್ಳಬೇಕೆಂಬ ಹಂಬಲ ಇವುಗಳದ್ದು. ಚರಿತ್ರೆ ನಂಬಿಕೆಗಳ ಭಂಜನದಾಚೆ ವಿಸ್ತರಿಸಿಕೊಂಡಂತಹವು.

ಹೊಸ ಶತಮಾನದಲ್ಲಿ ಗಂಡು ಹೆಣ್ಣು ಅನುಭವಿಸುತ್ತಿರುವ ಶಿಕ್ಷಣ ಉದ್ಯೋಗ ಸಾರ್ವಜನಿಕ ಬದುಕಿನಾಚೆ ಇಣುಕುವ ಸತ್ಯಗಳನ್ನು ಸಾವಿತ್ರಿ ಕಾಣಲೆತ್ನಿಸಿದ್ದಾರೆ. ಕಾವ್ಯ ಹೀಗೆ ಇರಬೇಕೆಂದು ಹೇಳಲು ಸಾದ್ಯವಿಲ್ಲ. ನೀರು ಕೊಳದಲ್ಲಿ ಕೈಹಾಕಿ ಮೀನು ಹಿಡಿಯಲು ಹೋದಂತೆ ಕವಿತೆ ಇರಬಹುದೇನೊ ?

‍ಲೇಖಕರು Admin

January 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: