ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಣ್ಣ ಚಿಗುರು..

-ರಾಜು ಹೆಗಡೆ

1.ಉಳಿದಿರುವುದು

ಅದೇ ಹುಮ್ಮಸ್ಸಿನಲ್ಲಿ
ನಾನೊಂದು ಕವಿತೆ
ಬರೆದೆ
ಅಲ್ಲೆಲ್ಲ ನೆರಳುಗಳು
ಚಿಲಿಪಿಲಿ:
ಹಳ್ಳದಲ್ಲಿ ಹರಿಯುತ್ತಿತ್ತು
ಹಾಡು
ಏಡಿಗಳು ಸಂಕದ ಮೇಲೆ
ಬರುವವರ ನೋಡಿ
ಓಡಿ ಹೋಗುತ್ತಿದ್ದವು ಒಳಗೆ
ತೋಟದ ದಾರಿ
ದಣಪೆಗಳ ಹಾವಳಿ
ಮರಮರಗಳಾಚೆ ಮನೆ
ಬೆನ್ನು ನೋಯುತ್ತಿದೆ
ಓಡಿಬಂದು ಬಿದ್ದ ಹೊಡತಕ್ಕೆ
ಈಗಲ್ಲಿ ಹಕ್ಕಿ ಕೂಗುತ್ತವೆ
ಚೌಡಿ ಮನೆ ಮುಂದೆ
ಸುರಳೀತ ದಾರಿ
ಅಂಗಡಿಗಳ ಗೊಂಚಲು
ಜಟಕನ ಬಲೆಯಲ್ಲಿ
ಟಾರು ರಸ್ತೆ
ಸೇತುವೆ ನೋಡುವ
ಹೊಳೆ
ಉಳಿದಿರುವುದು ನಕ್ಷತ್ರ
ನಿಹಾರಿಕೆಗಳು ಮಾತ್ರ.

2.ಅರಮರುಳನ ಅರವತ್ತು

ಇಂತದ್ದೇ ಮಳೆಯಲ್ಲಿ
ಅವನು ಹುಟ್ಟಿದನಂತೆ
ಹೊಳೆಯಲ್ಲಿ ನೆಗಸು
ಒಳಗೆ ಅಳುವ ಕೂಸು!

ದೋಣಿಯಲಿ ಅಪ್ಪಯ್ಯ
ಅಂಗಳಕ್ಕೇ ಬಂದಿಳಿದಿದ್ದನಂತೆ
ಊರೆಲ್ಲ ಸಾಗರ
ಸಾಗರದ ಹತ್ತಿರದ ಊರಲ್ಲಿ

ಈಗ ಮತ್ತೆ
ಅಂತದ್ದೇ ಮಳೆ
ತುಂಬಿರುವ ಹೊಳೆ!
ಅರವತ್ತು ದಾಟಿದ ದೋಣಿ
ಅವನು
ಜಲ್ಲು ಎಲ್ಲೋ ಮರೆತಿದೆ

ನಿಂತುಬಿಟ್ಟಿದೆ ನೀರು
ಎದೆಯೊಳಗೆ
ಕಸ ಕಡ್ಡಿ ಹಾವು ಹರಣೆ
ಎಲ್ಲ ಮುಳುಗಿದೆ ಅಡಿಗೆ
ನಿವೃತ್ತಿಯಾಯಿತೇ ಎಂದು
ನೋಡುತ್ತಿದ್ದಾನೆ ದಾರಿಯಲಿ

3.ಸಣ್ಣ ಚಿಗುರು

ಬೇಸಿಗೆಯ ಹಳ್ಳದ ಹಾಗೆ
ತೆಳ್ಳಗೆ ಪರಿಮಳ
ಆಗಾಗ
ಬಿದ್ದ ಮರ
ಎದ್ದು ನಿಂತಂತಾಗಿ
ಮಲಗುವುದು
ಸಣ್ಣ ಚಿಗುರು
ಮೈ
ಸಾವಿನ ಆಸೆಯ
ಹೊಸಕುವುದು ತುಸು
ದೂರಕ್ಕೆ
ಆಸೆಯೂ ಇಲ್ಲದ
ಆತಂಕವೂ ಅಲ್ಲದ
ಈ ನವುರು ಕಂಪನಕ್ಕೆ
ಕೆಂಪಾಗುವುದು
ಬಾನು.

‍ಲೇಖಕರು Admin

4 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading