ಸಖೀ ಗೀತ ಅಲ್ಲ….ಸಿಟಿ ಗೀತ….

sudhanvafinal-1.jpg

ಕುಮಾರ ಪರ್ವತವನ್ನು ಇನ್ನೇನು ಚುಂಬಿಸಿಯೇಬಿಡುತ್ತೇನೆ ಎನ್ನುವಷ್ಟು ಹತ್ತಿರದಲ್ಲಿರುವ ನಾರ್ಣಕಜೆ, ಚೊಕ್ಕಾಡಿ, ಎಲಿಮಲೆ, ಕುಕ್ಕುಜಡ್ಕ… ಇವೆಲ್ಲವೂ ಕವಿತೆ ಅರಳಲು ಹೇಳಿ ಮಾಡಿಸಿದ ತಾಣಗಳು. ಇಂತಹ ಹಸಿರಿನ ಮಧ್ಯದಿಂದ ಎದ್ದು ಬಂದಾತ ಸುಧನ್ವಾ ದೇರಾಜೆ.

ಅಷ್ಟು ಚೆನ್ನಾಗಿ ಕವನ ಬರೆಯುವ ಈತ ಪತ್ರಿಕೋದ್ಯಮಕ್ಕೆ ಏಕೆ ಜೋತು ಬಿದ್ದನೋ? ಈಗ ಪತ್ರಕರ್ತ. ಪದಗಳ ಗಿರಣಿಯಲ್ಲಿ ಕಳೆದು ಹೋದವರೆಷ್ಟೋ, ಮತ್ತೆ ಹಲ್ಲು ಕಚ್ಚಿ ಎದ್ದು ಬಂದವರೆಷ್ಟೋ.. ಆ ನ್ಯೂಸ್ ಪ್ರಿಂಟ್ ರಾಶಿಗಾಗಲೀ, ರಕ್ಕಸ ಗಾತ್ರದ ಮೆಶಿನ್ಗಳಿಗಾಗಲೀ ಗೊತ್ತಿಲ್ಲ.

ದೇರಾಜೆ ಕುಟುಂಬ ಎಂದರೆ ಸಾಕು ದಕ್ಷಿಣ ಕನ್ನಡ ವಿನೀತವಾಗುತ್ತದೆ. ಅಂತಹ ಕುಟುಂಬದ ಹುಡುಗನೊಬ್ಬ ಸುಬ್ರಾಯ ಚೊಕ್ಕಾಡಿ, ಜಿ ಎಸ್ ಉಬರಡ್ಕ ಹಾಗೂ ಸುಳ್ಯದ ಅನೇಕ ಬರಹಗಾರರ ಮುಚ್ಚಟೆಯಿಂದ ಬೆಳೆದು ನಿಂತಿದ್ದಾನೆ. ಸುಧನ್ವ  ‘ಚಂಪಕಾವತಿ’ ಎಂಬ ಬ್ಲಾಗ್ ಮಾಡಿಕೊಂಡು ತನ್ನ ಪಾಡಿಗೆ ತಾನಿದ್ದಾನೆ. ಸುಳ್ಯದ ಒಡಲಿಂದ ಬೆಂಗಳೂರೆಂಬ ಬೆಂಗಳೂರಿಗೆ ಬಂದ ಈತನಿಗೆ ಏನನ್ನಿಸಿದೆ ಎಂಬ ಕುತೂಹಲ ಎಲ್ಲ ಗೆಳೆಯರಿಗೂ ಇತ್ತು. ಈಗ ಸುಧನ್ವ ‘ಪೇಟೆಯ ಪಾಡ್ದನ’ ಎಂಬ ಹೆಸರಲ್ಲಿ ನಗರಿಯ ಅನುಭವಗಳನ್ನು ಬಿಚ್ಚಿಡುತ್ತಿದ್ದಾನೆ. ಅದರ ಮೊದಲ ಕಂತು ಇಲ್ಲಿದೆ.

ಇದು ಸಖೀ ಗೀತ ಅಲ್ಲ.. ಸಿಟಿ ಗೀತ ಎಂಬುದು ಸುದನ್ವ ಹೇಳುತ್ತಿರುವ ಕಿವಿಮಾತು. 

 

 up-pete.jpg

1

ಲಕಲಕಿಸುವ ಈ ನಗರಕ್ಕೊಂದು
ಬೆದರಿದ ಬೆದರುಗೊಂಬೆ ಬೇಕು.
ಇಲ್ಲಾ ದೃಷ್ಟಿಯಾದೀತು ಅಥವಾ ನಿಮ್ಮ ದೃಷ್ಟಿ ಹೋದೀತು .
ಕಣ್ಣುಜ್ಜಿ ನೋಡಿಕೊಳ್ಳಿ ,ಅಗೋ …
ಆ ಗೊಂಬೆಯೂ ಮಾರಾಟವಾಯಿತು !
2
ಇದು ಉದ್ಯೋಗ ಪರ್ವದ ಭಾಗ .
ದ್ಯೂತ ಪ್ರಸಂಗ .
ತನ್ನನ್ನೇ ಒತ್ತೆಯಿಟ್ಟು ಸೋತ ರಾಯನಿಗೆ
ಇನ್ನೊಬ್ಬಳ ಒತ್ತೆಯಿಡಲು ಅಧಿಕಾರವಿದೆಯೆ?
ಓಲೇಲಯ್ಯಾ ಐಸಾ, ಎಳೀರಿ ಸೀರೆ, ಎಸೆಯಿರಿ ಪೈಸಾ
‘ಗಿನ್ನಿಸ್ ದಾಖಲೆಗೆ ಇನ್ನೊಂಚೂರು’ ಅಂದ
ಕೃಷ್ಣಾ ಮಾಲ್ ಸೀರೆ ಸೆರಗು ಎಷ್ಟು ಚೆಂದ !ಹೋ ಅದೋ ಮತ್ತೆ ದಾಳ, ಗಾಳ, ಗೆದ್ದೆವು , ಮನೆಹಾಳ.
ಸೋತವರಿಗೆ ಹನ್ನೆರಡು ವರ್ಷ ಹಳ್ಳಿವಾಸ
ಗೆದ್ದವರಿಗೊಂದು ವರ್ಷ ನಗರದಜ್ಞಾತವಾಸ !

‍ಲೇಖಕರು avadhi

February 8, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. dundiraj

    modalu aha annisi nathra ayyo che che annisuva intha kavana intha kavana odade bahala dinagalagittu.thank you

    ಪ್ರತಿಕ್ರಿಯೆ
  2. ಗಾಣಧಾಳು ಶ್ರೀಕಂಠ

    ಶುಭಾಶಯ ಸುಧನ್ವಾ.
    ನೀನು ಕಥೆ ಬರೆಯುತ್ತಿದ್ದೆ. ಲೇಖನ ಬರೆಯುತ್ತಿದ್ದೆ. ಪುಸ್ತಕ ವಿಮರ್ಶೆ ಬರೆದಿದ್ದನ್ನೂ ಓದಿದ್ದೇನೆ. ಅಂಥ ಗಂಭೀರ ಬರಹದಿಂದ, ಹೀಗೆ ಕವನಗಳ ಜಾಡು ಹಿಡಿದಿದ್ದು ಯಾವಾಗ ? ಅದ್ಯಾವಾಗಲಾದ್ರೂ ಇರಲಿ, ನಿನ್ನ ಕವನ ಕೃಷಿಗೆ ನನ್ನ ಶುಭಾಶಯಗಳು. ಕವನಗಳು ಸೊಗಸಾಗಿದೆ. ಚಂಪಕಾವತಿ ಅರಳಲಿ. ಸುಬ್ರಾಯರು, ಉಬರಡ್ಕ ಅವರ ಹೆಸರು ನಿಮ್ಮ ಬರಹಗಳ ಮೂಲಕ ಬೆಳಗಲಿ

    ಪ್ರತಿಕ್ರಿಯೆ
  3. G N Mohan

    ಕವನ ಚೆನ್ನಾಗಿದೆ. ಹಿಂದೆ ಸುಧಾದಲ್ಲಿ ರಂಜಾನ ದರ್ಗಾ ‘ನಗರದ ಚಕ್ರವ್ಯೂಹದಲ್ಲಿ ಹಳ್ಳಿಯ ಅಭಿಮನ್ಯುಗಳು’ ಎಂಬ ಲೇಖನ ಬರೆದಿದ್ದರು. ಕವಿತೆ ಓದುತ್ತಾ ಅದು ನೆನಪಾಯಿತು. ಹಳ್ಳಿಯ ಮನಸ್ಸುಳ್ಳ ಎಲ್ಲರನ್ನೂ ಬೆಂಗಳೂರು ಎಂಬ ಬಿಡುವಿಲ್ಲದ ಮಾಯಗಾತಿ ಕಾಡಿಸಿ ಧಣಿಸಿ ಸುಸ್ತು ಮಾಡಿಸುತ್ತಾಳೆ.

    ಸುಳ್ಯದ ಬೆಟ್ಟ ಕಾಡುಗಳಲ್ಲಿ ನಾನು ಓಡಾಡಿದ್ದೇನೆ. ಅಲ್ಲಿಂದ ಬಂದವರಿಗೆ ಬೆಂಗಳೂರು ಕರುಣೆ ತೋರುವುದಿಲ್ಲ ಎಂಬುದು ಗೊತ್ತಾಗಿದೆ. ಸುಧನ್ವನಿಗೂ ಇದು ಗೊತ್ತಾಗಿದೆ ಎಂದುಕೊಂಡಿದ್ದೇನೆ. ಅದಕ್ಕಾಗಿಯೇ ಈ ಹೊಸ ರೀತಿಯ ಪಾಡ್ದನ ಆರಂಭವಾಗಿದೆ. ಸುಧನ್ವ ಇನ್ನೂ ಬರೆಯಲಿ.
    -ಜಿ ಎನ್ ಮೋಹನ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: