
ಸ್ವರ್ಣಾ ಎನ್ ಪಿ
ಪತ್ರಿಕೆಯೊಂದರಲ್ಲಿ ಪ್ರಕಟವಾಗುವ ಅಂಕಣಗಳಿಗಾಗಿಯೇ ಪತ್ರಿಕೆಗಳನ್ನು ಕೊಳ್ಳುವ ಓದುಗರ ಸಂಖ್ಯೆ ದೊಡ್ಡದು . ಅಂಕಣಕಾರರ ಅತೀ ದೊಡ್ಡ ಸವಾಲು ಪ್ರತೀ
ಬಾರಿಯೂ ಅವರು ಆರಿಸಿಕೊಳ್ಳುವ ವಿಷಯ. ಎಲ್ಲ ವಿಷಯಗಳನ್ನೂ ಎಲ್ಲೆಡೆಯೂ ಹೇಳುವಂತಿಲ್ಲ! ಹೇಳಲು ಶುರುವಿಟ್ಟರೆ ಎಷ್ಟು ಹೇಳಬೇಕೆಂಬುದು ಮುಂದಿನ ಸವಾಲು. ಭಾಷೆ , ಭಾವ, ಸಾಮಾಗ್ರಿ ನಂತರದವು . ಶೀರ್ಷಿಕೆಯಿಂದ ಮೊದಲುಗೊಂಡು ಎಲ್ಲವೂ ಒಪ್ಪವಾಗಿರಬೇಕು. ಓದುಗರ ಸಂಖ್ಯೆ ಹೆಚ್ಚಿದಂತೆಲ್ಲ ಪತ್ರಿಕೆಗಳ ಸಂಖ್ಯೆಯೂ ಹೆಚ್ಚಿದೆ. ಹಾಗಾಗಿ ಓದುಗನನ್ನು ಬರಹದ ಕೊನೆಯವರೆಗೆ ಉಳಿಸಿಕೊಳ್ಳುವುದೂ ಒಂದು ಸವಾಲು .
ಟಿ-20 ಮ್ಯಾಚುಗಳಂತೆ, ಮೈದಾನಕ್ಕಿಳಿದ ಮರು ಕ್ಷಣ ಆಟ ಪ್ರಾರಂಭವಾಗಬೇಕು. ಒಂದೆರಡು ಅಂಕಣಗಳು ಇಷ್ಟವಾದ ನಂತರ ಓದುಗ ಮುಂದಿನ ಬರಹಕ್ಕಾಗಿ ಕಾಯುತ್ತಾನೆ. ವಿಷಯವೊಂದರ ಬಗ್ಗೆ ಅಂಕಣಕಾರನ ಅಭಿಪ್ರಾಯಕ್ಕಾಗಿ ಎದುರು ನೋಡುತ್ತಾನೆ. ಅಂಕಣಕಾರ ಮತ್ತು ಓದುಗನ ನಡುವೆ ಅವ್ಯಕ್ತ ಸೇತುವೆಯೊಂದು ನಿರ್ಮಾಣವಾಗುತ್ತದೆ. ಈ ಸೇತುವೆ ಇಂದಿನ ಸತ್ಯವೇ? ಅಗತ್ಯವೇ? ಗೊತ್ತಿಲ್ಲ. ಬದುಕು ಬರಹಗಳ ನಡುವಿನ ಅಂತರ ಹೆಚ್ಚುತಿರುವಾಗ ಪ್ರಶ್ನೆಗಳಿಗೆ ಆಸ್ಪದವಿಲ್ಲ. ಎಲ್ಲ ಹಂತಗಳನ್ನೂ ದಾಟಿ ಕಡೆಗೆ ಪದಮಿತಿಗೆ ಒಳಪಟ್ಟು ತಮ್ಮ ವಿಚಾರಧಾರೆಯನ್ನೋ , ಭಾವಧಾರೆಯನ್ನೋ ಸಮರ್ಥವಾಗಿ ಅಭಿವ್ಯಕ್ತಿಸುವ ಅಂಕಣಕಾರರಿಗೆ ಈ ಬರಹ ಅರ್ಪಿತ.
ರಾಜಕೀಯ ವಿಶ್ಲೇಷಣೆಗಳು, ಅಡುಗೆ, ಆಪ್ತ ಸಲಹೆ ಕಾಲಂಗಳ ಅಂಕಣಕಾರರು ಸಾಮಾನ್ಯವಾಗಿ ಓದುಗರಿಗೆ ನೆನಪಿರುತ್ತಾರೆ . ಪದ್ಮಿನಿ ಪ್ರಸಾದ್, ಡಾ.ಶ್ರೀಧರ್, ಶಾಂತ ನಾಗರಾಜ್, ಡಾ. ಆಶಾ ಬೆನಕಪ್ಪ ಮತ್ತು ಇನ್ನೂ ಕೆಲವರು ಈಗಲೂ ಅಲ್ಲಲ್ಲಿ ಬರೆಯುತ್ತಿದ್ದಾರೆ. ಆದರೆ ನಾನು ಹೇಳಹೊರಟಿರುವವರು ಎಲ್ಲೋ ಮರೆತ ಹಾಡನ್ನು ಹೆಕ್ಕಿ ತಂದವರು, ಚಂದದ ಸಿನೆಮಾ ಒಂದನ್ನು ಪರಿಚಯಿಸಿದವರು, ಬದುಕಿನ ಪಾಠವೊಂದನ್ನು ಸರಾಗವಾಗಿ ಕಲಿಸಿದವರು, ಪುಸ್ತಕವೊಂದನ್ನು ಓದಿಸಿದವರು, ಕವಿತೆಯೊಂದನ್ನು ನಮ್ಮದಾಗಿಸಿದವರು.
ಬಾಲವನದಲ್ಲಿ ಕಾರಂತಜ್ಜನೊಂದಿಗೆ ವಿಹರಿಸದವರು ಕಡಿಮೆ . ಬಾಲವನವನ್ನು ದಾಟಿದ ಮೇಲೆ ಕಂಡಿದ್ದು ಈಶ್ವರಯ್ಯನವರ ಸರಸಿ. ಸರಸಿಯ ನೆರಳಿನಲ್ಲೇ ಪ್ರಾರಂಭವಾದ ಬ್ಲಾಗು ಕೂಡ ಅತ್ಯಂತ ಪ್ರಸಿಧ್ಧವಾಗಿದ್ದು ಸರಸಿಯ ಜನಪ್ರಿಯತೆಗೆ ಸಾಕ್ಷಿ . ಲಂಕೇಶರ ನಿಮ್ಮಿಯನ್ನು ಮರೆತವರಾರು. ಪತ್ರಿಕೆಯನ್ನು ಕೊಳ್ಳುತ್ತಿದ್ದಂತೆ ಮೊದಲು ಓದುತ್ತಿದ್ದುದೇ ಬಾಟಮ್ ಐಟಂ. ಒಂದೇ ಪುಟದಲ್ಲಿ ಮೂರು ಬಗೆಯ ಮೂರು ಕಾಲಂಗಳನ್ನು ಬರೆಯುವ ರವಿ ಬೆಳಗೆರೆಯವರ ಅಂಕಣ ಬರಹಗಳು ಇಂದಿಗೂ ಫೇಮಸ್ಸು .
ಕಾಯ್ಕಿಣಿಯವರ ಬೊಗಸೆಯಲ್ಲಿ ಮಳೆ , ಜೋಗಿಯವರ ಜಾನಕಿ ಕಾಲಂ , ಆಲೂರರ ಒಲಿದಂತೆ ಹಾಡುವೆ, ಅವಧಿಯಲ್ಲೇ ಬರೆದ ಭಾರತಿ ಬಿ.ವಿ. , ಸಂಯುಕ್ತಾ ಪುಲಿಗಲ್ , ಕುಸುಮಬಾಲೆಯವರಿಂದ … ನಿಯಮಿತವಾಗಿ ಫೆಸ್ಬುಕ್ಕಿನಲ್ಲಿ ಮಾತ್ರ ತಮ್ಮ ಬರಹಗಳನ್ನು ಪ್ರಕಟಿಸುವ ಬರಹಗಾರರವರೆಗೆ ಪಟ್ಟಿ ಬೆಳೆಯುತ್ತಲೇ ಇರುತ್ತದೆ . ಜೋಗಿಯವರು ಬರೆದಿದ್ದನ್ನು ಓದಿ ತಮಿಳಿನ ‘ಮೈ ಆಟೋಗ್ರಾಫ್’ ಸಿನೆಮಾ ನೋಡಿದ್ದು ನೆನಪಿದೆ . ಎಲ್ಲಕ್ಕಿಂತ ಹೆಚ್ಚಾಗಿ ಅಂಕಣಗಳು ಎಷ್ಟೋ ಬಾರಿ ಆ ಹೊತ್ತಿಗೆ ಬೇಕಾದ ಸಮಾಧಾನವನ್ನು ತಮ್ಮಲ್ಲಿ ಅಡಗಿಸಿಕೊಂಡಿರುತ್ತವೆ. ಈಚೆಗೆ ನಾನು ಓದುವ ಪತ್ರಿಕೆಗಳ ಸಂಖ್ಯೆ ಸೊನ್ನೆಯಾದ್ದರಿಂದ ಅಂಕಣಕಾರರ ಬಗ್ಗೆ ನನಗೆ ಗೊತ್ತಿರುವುದು ಅತ್ಯಲ್ಪ.
ಅಲ್ಪವನ್ನೇ ಬರೆಯಲು ಕೂತದ್ದು ಸಂಧ್ಯಾರಾಣಿಯವರ ‘ಯಾಕೆ ಕಾಡುತಿದೆ ಸುಮ್ಮನೇ…’ ಕೈಗೆ ಬಂದ ನಂತರ. ಅಂಕಣ ಬರಹಗಳ ಗುಚ್ಚಕ್ಕೆ ಹೊಚ್ಚ ಹೊಸ ಸೇರ್ಪಡೆ ಯಾಕೆ ಕಾಡುತಿದೆ … . ಬರಹಗಾರ್ತಿ ರಶ್ಮಿ ಕಾಸರಗೋಡು ಫೇಸ್ಬುಕ್ಕಿನಲ್ಲಿ ಬರೆದುಕೊಂಡಂತೆ ’ಸಂಧ್ಯಾರಾಣಿ ಕಾಲಂ’ಗಾಗಿ ಕಾಯುವ ಓದುಗರ ಬಳಗ ದೊಡ್ಡದಿದೆ. ಅವಧಿಯಲ್ಲಿ ಪ್ರಕಟವಾದಾಗ ಎಷ್ಟೋ ಬರಹಗಳಿಗೆ ಬಂದ ಪ್ರತಿಕ್ರಿಯೆಯೂ ಬರಹದಷ್ಟೇ ಸೊಗಸಾಗಿತ್ತು.
ಬರಹವೆಂಬುದು ಎಲ್ಲ ಓದುಗರಿಗೂ ಒಂದೇ ರೀತಿಯಾಗಿ ದಕ್ಕುವುದಿಲ್ಲ. ಓದಿದ ಪ್ರತೀ ಸಾಲು ನಮ್ಮಲ್ಲೊಂದು ಹೊಸ ಸಾಲಿಗೆ ಜನ್ಮ ನೀಡಬಹುದು, ಮರೆತ ಯಾವುದೋ ನೆನಪನ್ನು ಹಸಿರಾಗಿಸಬಹುದು, ಹಿಡಿದಿಟ್ಟ ಒಡ್ಡನ್ನು ಕೆಡವಿ ಕಂಬನಿಗೆ ದಾರಿಯಾಗಬಹುದು, ಏನೂ ಆಗದೆಯೂ ಇರಬಹುದು. ಹಾಗಾಗಿ ಇದು ಬರಹಗಳ ವಿಶ್ಲೇಷಣೆಯಲ್ಲ. ‘ಯಾಕೆ ಕಾಡುತಿದೆ…’ ಯಲ್ಲಿನ ಕೆಲ ಬರಹಗಳನ್ನು ಮತ್ತೆ ಓದಿದಾಗ ಮೂಡಿದ ಕೆಲವು ಸಾಲುಗಳೆನ್ನಲು ಅಡ್ಡಿಇಲ್ಲ .
“ಮಾತು ಮಾತು ಮಥಿಸಿದರೆ ನಾದದ ನವನೀತ .” ಸರಿ . ಆದರೆ ಆ ನಾದದ ಸ್ವರೂಪವನ್ನು ಅಜ್ಜ ಹೇಳಿಲ್ಲ . ನಾದದ ಅನುಸಂಧಾನ ಮೌನ. ಹಾಗಾಗಿ ಮಾತು ಮಾತು ಮಥಿಸಿ ಬಂದ ಮೌನದ ನವನೀತ . ಕೆಲವು ಬಾರಿ :
ಬೆಣ್ಣೆಗಾಗಿ ಹಂಬಲಿಸಿ
ಮೊಸರ ಕಡೆಯಲು ಕುಂತರೆ
ಮಂತಿಗೆ ಗೆದ್ದಲು ಹಿಡಿದಿದೆ!
ಪಾಲಿಸಬೇಕಾದ ಮೌನ, ಆಲಿಸಬೇಕಾದ ಮಾತು, ಹೆಗಲಾಗುವ, ದನಿಯಾಗುವ, ಕಣ್ಣಾಗುವ, ಕಂಬನಿಯಾಗುವ, ಪ್ರಾರ್ಥನೆಯಾಗುವ, ಹಾರೈಕೆಯಾಗುವ, ಕರವಾಗುವ, ಬೆರಳಾಗುವ ಒಟ್ಟು ಪ್ರಕ್ರಿಯೆಗೆ ಬಂಧವೆನ್ನಬಹುದಾದರೆ, ಈ ಎಲ್ಲದರ ಹಿಂದಿನ ಕ್ರಿಯಾ ಶಕ್ತಿ ಪ್ರೀತಿ ಎಂಬುದು ಕ್ರಿಯಾ ಪದವಾಗಲೇ ಬೇಕಲ್ಲವೇ?ಆದ್ದರಿಂದ Love is a Verb.
ಪಯಣವೊಂದರ ಮೆಲುಕು, ‘ಹೀಗೊಂದು ರಾತ್ರಿ ಹೀಗೊಂದು ರಾಗ ‘. ತಿಂಗಳುಗಳ ನಂತರ ಗೆಳತಿಯೋಬ್ಬರು ಈ ಬರಹವನ್ನು ಮತ್ತೆ ಓದಬೇಕೆಂದು ಸಂಧ್ಯಾರಾಣಿಯವರಿಂದ ಬರಹದ ಲಿಂಕನ್ನು ಪಡೆದುಕೊಂಡಿದ್ದರು . ಓದಿದ ಬಹುಪಾಲು ಓದುಗರಿಗೆ ಇದೊಂದು ಗದ್ಯ ರೂಪದ ಕವಿತೆ ಎನಿಸಿತ್ತು.
ಏಳುಸುತ್ತಿನ ಕೋಟೆಯೊಳಗೆ
ಏಳು ಮಲ್ಲಿಗೆ ತೋಟ
ನಡುವೆ ಅವಳ ಅಂತಃಪುರ
ಎಲ್ಲ ಕದಗಳನ್ನು ದಾಟಿದವರು
ಕೇಳಿದರು ಅವಳ ಹಾಡು,
ಅರಮನೆಯಲ್ಲೊಂದು ಮೌನರಾಗ
ಸಖಿಗೀತದಲ್ಲಿ ಮಿಡಿವ ಏಕತಾರಿ.
ಮುಚ್ಚಿದ ಬಾಗಿಲಿನ ಆಚೆ ನಿಂತು … : ಕದವಿಕ್ಕಿ ಕುಂತವರಿಗೆ ಆಚೆ ನಿಂತು ಕಾಯುವವರ ಪರಿವೆ ಇಲ್ಲ , ಆಚೆ ನಿಂತು ಕಾಯುವವರಿಗೆ ಒಳಗಿರುವವರ ಒಂಟಿತನದ ಅಂದಾಜಿಲ್ಲ. ಬಡಿಯದೇ ಕದ ತೆರೆಯದು, ತೆರೆಯದೆ ಮೌನ ಮುಗಿಯದು. ಈ ಸ್ಥಿತಿಯನ್ನು ತಲುಪಿ ಅದೆಷ್ಟು ಬಂಧಗಳು ಮುರಿದುಬಿದ್ದಿರಬಹುದು? ಎಲ್ಲ ಮುಗಿದ ನಂತರ ಅದೇ ನಿಯತಿಯಾಗಿತ್ತೆಂದು ನಂಬಲೇ ಬೇಕು.
ಅಳಲು ಬೇಕಾದ ಏಕಾಂತ, ಆಡದೇ ಉಳಿದು ಕಾಡುವ, ಹಾಡಾದ ಮಾತುಗಳು ಎಲ್ಲವೂ ಕಾಡುತ್ತವೆ. ಹೀಗೆ ಕಾಡುವ ರಾಗಗಳಿಗೆ ಲೇಖಕಿ ಶಬ್ಧಗಳನ್ನು ಕೊಟ್ಟಿದ್ದಾರೆ. ‘ಯಾಕೆ ಕಾಡುತಿದೆ ಸುಮ್ಮನೆ ನನ್ನನು’ ಎಂಬ ಪ್ರಶ್ನೆಯ ಉತ್ತರ ನಮಗೆಲ್ಲರಿಗೂ ಗೊತ್ತಿದೆ. ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಮನಸು ಮಾಡಬೇಕಷ್ಟೆ .





ಸ್ವರ್ಣಾ ಸರಿಯಾಗಿ ಹೇಳಿದ್ದೀಯ …. ಮತ್ತೊಮ್ಮೆ ಕಾಡಿಸಿಕೊಳ್ಳಬೇಕು ಅನ್ನಿಸುತ್ತಿದೆ