ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಸತ್ 'ಪ್ರಲಾಪ' ಮತ್ತು ಪ್ರಜಾಪ್ರಭುತ್ವ – ಸಿ ಎನ್ ರಾಮಚಂದ್ರನ್

download

ಸಿ ಎನ್ ರಾಮಚಂದ್ರನ್

ಈಗ ತಾನೇ ಮುಗಿದ ಸಂಸತ್ ಅಧಿವೇಶನವು ಸೋಲುವುದಕ್ಕೆ ಮುಖ್ಯ ಕಾರಣ ವಿರೋಧ ಪಕ್ಷಗಳ, ಅದರಲ್ಲಿಯೂ ಕಾಂಗೆಸ್ ಪಕ್ಷದ, ಅಸಾಂಸದೀಯ ವರ್ತನೆ ಎಂಬುದು ಕೇವಲ ಅರ್ಧ ಸತ್ಯ. ಈ ಅರ್ಧ ಸತ್ಯದ ಇನ್ನೊಂದು ಮುಖವೆಂದರೆ, ಭಾರತವು ಆಯ್ಕೆ ಮಾಡಿಕೊಂಡಿರುವ ಪ್ರಜಾಪ್ರಭುತ್ವ ಮಾದರಿಯಲ್ಲಿಯೇ ಈ ಸೋಲಿಗೆ (ಮತ್ತು ಮುಂದೆ ಆಗಬಹುದಾದ ಸೋಲುಗಳಿಗೆ) ಕಾರಣಗಳಿವೆ.

1) ವಿಪ್ (whip): ಒಂದು ಪಕ್ಷದ ಎಲ್ಲಾ ಸದಸ್ಯರಲ್ಲಿಯೂ ಶಿಸ್ತು ಮತ್ತು ಪಕ್ಷದ ತತ್ವಗಳ ಪಾಲನೆ ಇರುವಂತೆ  ನೋಡಿಕೊಳ್ಳುವ ಓರ್ವ ವ್ಯಕ್ತಿ ‘ವಿಪ್.’ ಆದರೆ ಇಂದು, ಇದು ಪಕ್ಷದ ಆದೇಶದ ಹೆಸರಾಗಿ ಉಪಯೋಗಿಸಲ್ಪಡುತ್ತಿದೆ; ಎಂದರೆ, ರಾಷ್ಟ್ರೀಯ-ಪ್ರಾಂತೀಯ ಸಂಸತ್ತಿನಲ್ಲಿ ಒಂದು ಪಕ್ಷದ ಆದೇಶದಂತೆ ಎಲ್ಲಾ ಸದಸ್ಯರೂ ತಮ್ಮ ಮತವನ್ನು ನೀಡುವುದು. ಈ ಸಂಪ್ರದಾಯ ಇಂಗ್ಲೇಂಡ್ನ ಪ್ರಜಾಸತ್ತಾತ್ಮಕ ವಿಧಿ-ವಿಧಾನಗಳನ್ನು ಅನುಸರಿಸುವ ಎಲ್ಲಾ ಕಾಮನ್ವೆಲ್ತ್ ರಾಷ್ಟ್ರಗಳಲ್ಲಿದೆ; ಇತರ ದೇಶಗಳಲ್ಲಿ ಇಲ್ಲ. ಅಮೆರಿಕಾದಲ್ಲಿ ‘ವಿಪ್’ ಎಂದು ಗುರುತಿಸಲ್ಪಡುವ ವ್ಯಕ್ತಿಯೊಬ್ಬನಿದ್ದರೂ ಅವನ ಆದೇಶವನ್ನು ಪಾಲಿಸದ ಸದಸ್ಯರನ್ನು ಪಕ್ಷದಿಂದ ಹೊರಹಾಕಲು ಸಾಧ್ಯವಿಲ್ಲ. ಪ್ರಮುಖ ವಿಷಯಗಳ ಚರ್ಚೆ ನಡೆಯುವಾಗ, ಅದನ್ನು ಮತಕ್ಕೆ ಹಾಕಿದರೆ, ಯಾವ ಪಕ್ಷದ ಸದಸ್ಯನೂ ಅದನ್ನು ಒಪ್ಪಬಹುದು ಅಥವಾ ತಿರಸ್ಕರಿಸಬಹುದು.

‘ವಿಪ್’ ಸಂಪ್ರದಾಯ ಪ್ರಜಾಪ್ರಭುತ್ವದ ತತ್ವಗಳನ್ನು ಸೋಲಿಸುತ್ತದೆ. ಎಂದರೆ, ಭಾರತದಲ್ಲಿ, ಈಗಿನ ಪರಿಸ್ಥಿತಿಯಲ್ಲಿ, ಪಕ್ಷದ ಆದೇಶವನ್ನು ಯಾರೂ ಮೀರುವಂತಿಲ್ಲ. ಪರಿಣಾಮತಃ, ಸಂಸತ್ತಿಗೆ ಆಯ್ಕೆಯಾಗುವ ಸದಸ್ಯರಲ್ಲಿ ಸ್ತ್ರೀಯರು, ಧಾರ್ಮಿಕ-ಭಾಷಿಕ ಅಲ್ಪಸಂಖ್ಯಾಕರು, ಬುಡಕಟ್ಟು ಜನಾಂಗದವರು, ಇತ್ಯಾದಿ ಅತಿ ಹೆಚ್ಚು ಸಂಖ್ಯೆಯಲ್ಲಿ ಆಯ್ಕೆಯಾದರೂ ಅಥವಾ ಯಾರೂ ಆಯ್ಕೆಯಾಗದೆ ಹೋದರೂ ಸಂಸತ್ತಿನ ಕಲಾಪದಲ್ಲಿ ಮತ್ತು ಅದು ರಚಿಸುವ ಮಸೂದೆಗಳಲ್ಲಿ ಹೆಚ್ಚೇನೂ ವ್ಯತ್ಯಾಸವಾಗುವುದಿಲ್ಲ. ಉದಾಹರಣೆಗೆ, ಸ್ತ್ರಿಯರ ಮೀಸಲಾತಿ/ ಒಳ ಮೀಸಲಾತಿಯ ಮಸೂದೆ ಚರ್ಚೆಗೆ ಬಂದಾಗ ಒಂದು ಪಕ್ಷ ಅದನ್ನು ವಿರೋಧಿಸಿದರೆ ಆ ಪಕ್ಷದ ಎಲ್ಲಾ ಸ್ತ್ರೀಯರೂ ಅದನ್ನು ವಿರೊಧಿಸಲೇ ಬೇಕಾಗುತ್ತದೆ; ಅಥವಾ ತಮ್ಮ ಪಕ್ಷ ಅದನ್ನು ಒಪ್ಪಿದರೆ ಅವರೆಲ್ಲರೂ ಅದನ್ನು ಒಪ್ಪಲೇ ಬೇಕಾಗುತ್ತದೆ. ಈ ಬಾರಿಯ ಅಧಿವೇಷನದಲ್ಲಿ ಅತಿ ಹೆಚ್ಚು ವಿವಾದಗಳಿಗೆ ಕಾರಣವಾದ ಭೂಸ್ವಾಧೀನ ಪ್ರಕ್ರಿಯೆಯನ್ನು ಕುರಿತ ಚರ್ಚೆಯಲ್ಲಿ, ಅದನ್ನು ಮಂಡಿಸಿರುವ ಪಕ್ಷದ ಎಲ್ಲಾ ಸದಸ್ಯರೂ (ಅವರ ವೈಯಕ್ತಿಕ ನಿಲುವು ಏನೇ ಇದ್ದರೂ) ಅದರ ಪರವಾಗಿಯೇ ಮಾತನಾಡಬೇಕಾಗುತ್ತದೆ, ಮತದಾನದಲ್ಲಿ ಅದನ್ನು ಒಪ್ಪಿ ತಮ್ಮ ಮತವನ್ನು ಹಾಕಬೇಕಾಗುತ್ತದೆ.

ಅರ್ಥಾತ್, ಸಂಸತ್ತಿಗೆ ಆಯ್ಕೆಯಾದ ವ್ಯಕ್ತಿಗಳ ವೈಯಕ್ತಿಕ ವೈಚಾರಿಕ ಸ್ವಾತಂತ್ರ್ಯವನ್ನೇ ಈ ‘ವಿಪ್’ ಪದ್ಧತಿ ಹರಣಮಾಡುತ್ತದೆ. ಭಾರತೀಯ ಸಂಸತ್ತಿನಲ್ಲಿ ಈ ಬಗೆಯ ‘ವಿಪ್’ ಪದ್ಧತಿ ಇಲ್ಲದಿದ್ದರೆ, ಪ್ರಾಯಃ, ಭೂಸ್ವಾಧೀನ ಪ್ರಕ್ರಿಯೆಯನ್ನು ಕುರಿತ ಚರ್ಚೆಯಲ್ಲಿ ಆಳುವ ಪಕ್ಷದ ಅನೇಕ ಸದಸ್ಯರೂ ಅದನ್ನು ವಿರೋಧಿಸಬಹುದಾಗಿತ್ತು; ಅಥವಾ, ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷದವರೂ ಅದನ್ನು ಸಮರ್ಥಿಸಬಹುದಾಗಿತ್ತು. ಎಂದರೆ, ಮೂರು ಬಾರಿ ಸುಗ್ರೀವಾಜ್ಞೆಯನ್ನು ತರುವ ಮುಜುಗರದ ಪರಿಸ್ಥಿತಿ ಬರುತ್ತಿರಲಿಲ್ಲ.

A view of the parliament building is seen in New Delhi July 21, 2008. REUTERS/B Mathur/Files

2) ಸಂಸತ್ತಿನ ಸ್ಪೀಕರ್: ಭಾರತೀಯ ಸಂವಿಧಾನದ ಚೌಕಟ್ಟಿನಲ್ಲಿ ಸಂಸತ್ತಿನ ‘ಸ್ಪೀಕರ್’ ಆಗಿ ಆಳುವ ಪಕ್ಷದ ಸದಸ್ಯನೊಬ್ಬನನ್ನು/ ಒಬ್ಬಳನ್ನು ಆಯ್ಕೆ ಮಾಡಲಾಗುತ್ತದೆ. ಆ ಕಾರಣದಿಂದ, ಸ್ಪೀಕರ್ ಎಷ್ಟೇ ವಸ್ತುನಿಷ್ಠವಾಗಿರಬೇಕೆಂದರೂ ಅದು ಸಾಧ್ಯವಾಗುವುದಿಲ್ಲ; ಭಿನ್ನ ವಿಷಯಗಳನ್ನು ಕುರಿತ ಚರ್ಚೆಗೆ ನೀಡುವ ಅವಕಾಶ, ಸದಸ್ಯರ ನಿಯಂತ್ರಣ, ಪ್ರಶ್ನೋತ್ತರ ಸಮಯ, ಇಂತಹ ಅನೇಕ ಸಂದರ್ಭಗಳಲ್ಲಿ ಸ್ಪೀಕರ್ ತನ್ನನ್ನು ಆಯ್ಕೆ ಮಾಡಿದ ಪಕ್ಷದತ್ತ ವಾಲಬೇಕಾಗುತ್ತದೆ. ಇದಕ್ಕೆ ಬದಲಾಗಿ, ಚುನಾವಣೆಯ ನಂತರ ಎಲ್ಲಾ ಪಕ್ಷಗಳೂ ಸೇರಿ, ಒಮ್ಮತದಿಂದ, ಯಾವ ರಾಜಕೀಯಪಕ್ಷಕ್ಕೂ ಸೇರದ ಶ್ರೇಷ್ಠ ವ್ಯಕ್ತಿಯೊಬ್ಬನನ್ನು/ ಒಬ್ಬಳನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿದರೆ, ಪ್ರಾಯ:, ಸಂಸತ್ತಿನ ಕಲಾಪಗಳು ಹೆಚ್ಚು ಫಲಪ್ರದವಾಗಿ ನಡೆಯಬಹುದು.

ಕಳೆದ ಸಂಸತ್ತಿನ ಅಧಿವೇಷನದಲ್ಲಿ, ಸ್ಪೀಕರ್ ಆಡಳಿತ ಪಕ್ಷಕ್ಕೆ ಸೇರಿದವರಾಗದಿದ್ದರೆ, ಮಾನ್ಯ ವಿದೇಶಾಂಗ ಸಚಿವೆ ಸಂಸತ್ತಿನಲ್ಲಿಲ್ಲದ, ಮೃತ ವ್ಯಕ್ತಿಗಳ ಬಗ್ಗೆ ಅಷ್ಟು ತುಚ್ಛವಾಗಿ ಮಾತನಾಡಲಾಗಲಿ, ಅಥವಾ ಒಂದೇ ಪಕ್ಷಕ್ಕೆ ಸೇರಿದ 25 ಸದಸ್ಯರನ್ನು ಒಂದು ವಾರ ಕಾಲ ಕಲಾಪದಿಂದ ಹೊರಗಿಡುವುದಾಗಲಿ, ಅಥವಾ ಸಂಸತ್ತಿನ ಅಧಿವೇಷನದ ಕಾಲದಲ್ಲಿಯೇ ದೇಶದ ಪ್ರಧಾನಿ ವಿದೇಶಯಾತ್ರೆಗೆ ತೆರಳುವುದಾಗಲಿ ಸಾಧ್ಯವಾಗುತ್ತಿರಲಿಲ್ಲ.

3) ಮಂತ್ರಿಮಂಡಳ ರಚನೆ: ಈಗಿರುವಂತೆ, ಭಾರತದಲ್ಲಿ, ಆಡಳಿತ ಪಕ್ಷವು ತನ್ನ ಮಂತ್ರಿಮಂಡಳಕ್ಕೆ ತನ್ನ ಪಕ್ಷಕ್ಕೆ ಸೇರಿದವರಲ್ಲಿಯೇ ಆಯ್ಕೆ ಮಾಡಬೇಕಾಗುತ್ತದೆ. ಇದಕ್ಕೆ ಬದಲಾಗಿ, ಅಮೆರಿಕಾದಲ್ಲಿ ಸಾಧ್ಯವಿರುವ ಹಾಗೆ, ಸಂಸತ್ತಿಗೆ ಆಯ್ಕೆಯಾಗದ ಹಾಗೂ ಯಾವ ಪಕ್ಷಕ್ಕೂ ಸೇರದ, ಒಂದು ಕ್ಷೇತ್ರದಲ್ಲಿ (ಉಚ್ಚ ಶಿಕ್ಷಣ/ ಆರ್ಥಿಕ ನೀತಿ, ಇತ್ಯಾದಿ ಕ್ಷೇತ್ರಗಳಲ್ಲಿ) ಅದ್ವಿತೀಯ ಪ್ರಾವೀಣ್ಯತೆಯನ್ನು ಪಡೆದಿರುವ ವ್ಯಕ್ತಿಯನ್ನು ಮಂತ್ರಿಮಂಡಳಕ್ಕೆ ಆಯ್ಕೆ ಮಾಡುವುದು ಸಾಧ್ಯವಾದರೆ, ಪ್ರತಿಯೊಂದು ಕ್ಷೇತ್ರದಲ್ಲಿಯೂ ತಜ್ಞರೇ ಇರುವುದು ಸಾಧ್ಯವಾಗುತ್ತದೆ. ಯಾವ ಒಂದು ಪಕ್ಷದಲ್ಲಿಯೂ ಎಲ್ಲಾ ಕ್ಷೇತ್ರಗಳಲ್ಲಿಯೂ ತಜ್ಞರು ಇರುವುದು ಅಪರೂಪ.

4) ರಾಷ್ಟ್ರಪತಿಯ ಅಧಿಕಾರ: ಈಗಿರುವ ಭಾರತದ ಸಂವಿಧಾನ ಎಮರ್ಜೆನ್ಸಿ ಕಾಲದಲ್ಲಿ ಹೊರತು ಉಳಿದ ಸಂದರ್ಭಗಳಲ್ಲಿ ರಾಷ್ಟ್ರಪತಿಗೆ ಕೇವಲ ಅಲಂಕಾರಿಕ ಸ್ಥಾನವನ್ನು ಕೊಟ್ಟಿದೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ; ಆದರೆ ಅದು ವಸ್ತುಸ್ಥಿತಿಯಲ್ಲ. ಅವರಿಗೆ ಆಡಳಿತಾತ್ಮಕ ಅಧಿಕಾರವಿಲ್ಲದಿದ್ದರೂ ಅಗಾಧ ನೈತಿಕ ಅಧಿಕಾರವಿದೆ. ಒಂದು ಕರಡು ಶಾಸನಕ್ಕೆ ಮಂತ್ರಿಮಂಡಳ (ಕ್ಯಾಬಿನೆಟ್) ಶಿಫಾರಸ್ಸು ಮಾಡಿ ಒಪ್ಪಿಗೆಗೆ ಕಳುಹಿಸಿದರೂ ರಾಷ್ಟ್ರಪತಿಗಳು ಎರಡು ಬಾರಿ ‘ಪುನರ್ವಿಮರ್ಶೆ’ಗಾಗಿ ಅದನ್ನು ಸಂಸತ್ತಿಗೆ ಮರಳಿಸಬಹುದು; ಹಾಗೆ ಮರಳಿಸುವುದೇ ಒಂದು ಬಗೆಯ ನೈತಿಕ ಒತ್ತಡವಾಗಿ ಆ ಕರಡು ಶಾಸನ ಸಂಸತ್ತಿನಲ್ಲಿ ಪುನಃಪರಿಶೀಲನೆಗೆ ಒಳಪಡುತ್ತದೆ. ಉದಾ. ಭೂಸ್ವಾಧೀನ ಶಾಸನದ ಕರಡನ್ನು ರಾಷ್ಟ್ರಪತಿಗಳು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತರಲು ಒಪ್ಪದೆ ಮಂತ್ರಿಮಂಡಳಕ್ಕೆ ಹಿಂತಿರುಗಿಸಿದ್ದರೆ ಅದನ್ನು ವಿರೋಧಿಸಿ ರಾಷ್ಟ್ರಾದ್ಯಂತ ಕೃಷಿಕರಿಂದ, ಭಿನ್ನ ಪಕ್ಷಗಳಿಂದ, ಎನ್ ಜಿ ಓಗಳಿಂದ ಪ್ರತಿಭಟನೆ ಹಾಗೂ ಸಾಮೂಹಿಕ ಚಳುವಳಿಗಳು ವಾರಗಳ ಕಾಲ ನಡೆಯುತ್ತಿರಲಿಲ್ಲ.

5) ರಾಷ್ಟ್ರೀಯ ಅತ್ಯುನ್ನತ ಸ್ಥಾನಗಳು: ಸೇನೆಯ ಅತ್ಯುಚ್ಚ ಅಧಿಕಾರಿಗಳು, ಸುಪ್ರೀಮ್ ಕೋರ್ಟ್ ನ ಮುಖ್ಯ ನ್ಯಾಯಾಧೀಶರು, ರಿಸರ್ವ್ ಬ್ಯಾಂಕ್ ಅಧ್ಯಕ್ಷರು, ಸಿ ಬಿ ಐ ನಿರ್ದೇಶಕರು, ಮುಂತಾದವರು ನಿವೃತ್ತರಾದನಂತರ ಮತ್ತೆ ಯಾವ ಅಧಿಕಾರಸ್ಥಾನವನ್ನೂ ಪಡೆಯಲು ಸಾಧ್ಯವಿರಕೂಡದು. ಹಾಗಿದ್ದಾಗ ಮಾತ್ರ, ಅಂತಹ ಮಹನೀಯರು ತಮ್ಮ ಸೇವಾವಧಿಯ ಕೊನೆಯ ಘಟ್ಟದಲ್ಲಿಯೂ ನಿಷ್ಪಕ್ಷಪಾತದಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಕಳೆದ ಚುನಾವಣೆಯ ಕಾಲದಲ್ಲಿ ನಾವು ನೋಡಿದಂತೆ, ತಾವು ನಿವೃತ್ತರಾಗುವ ತನಕ ಸುಮ್ಮನಿದ್ದು, ಅನಂತರ ತಾವು ಸೇವೆ ಸಲ್ಲಿಸಿದ ಕ್ಷೇತ್ರದಲ್ಲಿ ‘ಇದ್ದ’ / ‘ನಡೆದ’ ‘ಅನೀತಿ’ ಭ್ರಷ್ಟಾಚಾರಗಳ ಬಗ್ಗೆ ಉನ್ನತ ಸ್ಥಾನಗಳಲ್ಲಿದ್ದ ಅಧಿಕಾರಿಗಳು ತಮ್ಮ ಆತ್ಮಚರಿತ್ರೆಗಳನ್ನು, ನೆನಪುಗಳನ್ನು ಬರೆಯುವಂತಹ ಪರಿಸ್ಥಿತಿಯು ಬರುತ್ತಿರಲಿಲ್ಲ.

6) ‘ಬಹುಮತ’ದ ಅಹಂ: ಈಗಿರುವಂತೆ, ಸ್ಪರ್ಧಿಸಿದ ಪಕ್ಷಗಳ ನಡುವೆ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆದರೆ, ಚುನಾವಣೆಯಲ್ಲಿ ಲಭಿಸಿರುವ ‘ಬಹುಮತ’ವು ಮತದಾನಮಾಡಲು ಅರ್ಹತೆಯಿರುವವರ ಸಂಖ್ಯೆಯನ್ನು ಗಮನಿಸಿದರೆ, 50% ನ್ನು ಯಾವ ಪಕ್ಷವೂ ಕಳೆದ ಐವತ್ತು ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ಗಳಿಸಿಲ್ಲ; ಎಂದರೆ, ನಿಜವಾದ ‘ಬಹುಮತ’ವನ್ನು ಪಡೆದಿಲ್ಲ. ಈ ಅಂಶವನ್ನು ಆಡಳಿತ ಪಕ್ಷಗಳು ಯಾವಾಗಲೂ ನೆನಪಿನಲ್ಲಿಟ್ಟುಕೊಂಡರೆ, ಭಿನ್ನ ಕಾಲಘಟ್ಟಗಳಲ್ಲಿ ಆಡಳಿತಾರೂಢ ಪಕ್ಷಗಳು ಸರ್ವಾಧಿಕಾರಿಯಂತೆ ಮೆರೆಯುವುದು ತಪ್ಪುತ್ತದೆ; ವಿರೋಧ ಪಕ್ಷಗಳನ್ನು ಗೌರವಿಸುವಂತಾಗುತ್ತದೆ.
ಉದಾಹರಣೆಗೆ: ಕೇವಲ ಸಂಖ್ಯಾಬಲಕ್ಕೆ ಮಹತ್ವ ಕೊಡದೆ, ಕಾಂಗ್ರೆಸ್ ಪಕ್ಷಕ್ಕೆ ಆಳುವ ಪಕ್ಷ ‘ಅಧಿಕೃತ ವಿರೋಧ ಪಕ್ಷ’ದ ಸ್ಥಾನ ನೀಡಿದ್ದರೆ, ದೇಶಾದ್ಯಂತ ಪ್ರಧಾನಿಯವರ ವರ್ಚಸ್ಸು ಇನ್ನಿಲ್ಲದಂತೆ ಹೆಚ್ಚುತ್ತಿತ್ತು; ಆದರೆ, ಅದನ್ನು ನಿರಾಕರಿಸಿದುದರಿಂದ ‘ಅವರಲ್ಲಿ ಅಧಿಕಾರದ ಅಹಂ ಇದೆ, ಸೇಡಿನ ಭಾವನೆಯಿದೆ’ ಎಂಬಂತಹ ಭಾವನೆ ಸಾಮಾನ್ಯ ಜನರಲ್ಲಿಯೂ ಮೂಡುವಂತಾಯಿತು. ತಮಗೆ ಪ್ರಶ್ನಾತೀತ ಛವಿಯಿದ್ದರೂ ನೆಹರೂ ಭಾರತೀಯ ಸಂಸತ್ತನ್ನು ಪ್ರತಿನಿಧಿಸಲು ವಿರೋಧ ಪಕ್ಷದ ಅಟಲ್ ಬಿಹಾರಿ ವಾಜಪೇಯಿಯವರನ್ನು ಆಯ್ಕೆ ಮಾಡಿ ಕಳುಹಿಸಿದುದು ಕೇವಲ ಅವರ ವ್ಯಕ್ತಿತ್ವವನ್ನೇ ಅಲ್ಲದೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ ಇತರ ರಾಷ್ಟ್ರಗಳು ಗೌರವಿಸುವಂತೆ ಮಾಡಿತು.

ಎಮರ್ಜನ್ಸಿಯ ನಂತರ ನಡೆದ ಚುನಾವಣೆಯಲ್ಲಿ ನೆಲ ಕಚ್ಚಿದ್ದ ಇಂದಿರಾ ಗಾಂಧಿಯವರೇ ಮುಂದಿನ ಚುನಾವಣೆಯಲ್ಲಿ ‘ಬಹುಮತ’ವನ್ನು ಪಡೆದು ಅಧಿಕಾರಕ್ಕೆ ಬಂದರು; ಅಸಾಧಾರಣ ಬಹುಮತದಿಂದ ಅಧಿಕಾರಕ್ಕೆ ಬಂದ ರಾಜೀವ ಗಾಂಧಿಯವರು ಮುಂದಿನ ಚುನಾವಣೆಯಲ್ಲಿ ಅಧಿಕಾರವನ್ನು ಕಳೆದುಕೊಂಡರು. ಬೇಂದ್ರೆಯವರು ಅದ್ಭುತವಾಗಿ ಹೇಳುವಂತೆ, ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ . . . ಸಾರ್ವಭೌಮರಾ ನೆತ್ತಿಯ ಕುಕ್ಕಿ ಕಾಲ ತನ್ನ ಪಾಡಿಗೆ ತಾನು ಹರಿಯುತ್ತಿರುತ್ತದೆ. ಇದು ಗೆದ್ದವರು-ಸೋತವರು ಎಲ್ಲರೂ ನೆನಪಿಟ್ಟುಕೊಳ್ಳಬೇಕಾದ ಸತ್ಯ.

ಸೌಜನ್ಯ : ಕನ್ನಡ ಪ್ರಭ

‍ಲೇಖಕರು avadhi-sandhyarani

25 August, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading