ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂವಾದದಲ್ಲಿ ಮಾತನಾಡಿದ್ದಾರೆ ನಾ ಡಿಸೋಜ

ಸಮ್ಮೇಳನದ ಎರಡನೆಯ ದಿನ ಸಮ್ಮೇಳನಾಧ್ಯಕ್ಷರೊಡನೆ ಸಂವಾದ ಕಾರ್ಯಕ್ರಮ ಇತ್ತು

ಸಂವಾದದ ಕೆಲವು ಪ್ರಶ್ನೆಗಳು ’ಅವಧಿ’ ಓದುಗರಿಗಾಗಿ :

ಶ್ರೀಧರ್ ಹೆಗಡೆ – ಸಾಂಪ್ರದಾಯಿಕತೆ ಮತ್ತು ಸೌಹಾರ್ದತೆ ಹೇಗಿರಬೇಕು ? ಮತ್ತು ನಾವು ಏನನ್ನು ಕಳಕೊಂಡರೆ ಏನನ್ನು ಪಡೀತೇವೆ ?
ಅಧ್ಯಕ್ಷರು – ನಮ್ಮ ದೇಶದಲ್ಲಿ ವಿಶೇಷವಾಗಿ ಕರ್ನಾಟಕದ ಸಾಮಾನ್ಯ ಜನ ಜಾತಿ,ಮತ,ಪಂಥ,ಧರ್ಮ ಇತ್ಯಾದಿಗಳನ್ನು ನೋಡದೆ ಒಟ್ಟಾಗಿ ಬದುಕಿರೋದನ್ನು ನಾನು ಬಹಳಸಲ ನಾನು ಕಂಡಿದ್ದೇನೆ. ನಮ್ಮ ಸಾಂಸ್ಕೃತಿಕ ಜಗತ್ತು ತುಂಬಾ ಶ್ರೀಮಂತವಾಗಿದೆ. ಈ ಕಾರಣಕ್ಕೋಸ್ಕರ ಹೊರಗಡೆಯ ಶಕ್ತಿಗಳಿಗಾಗಲೀ ದುಷ್ಠ ಶಕ್ತಿಗಳೇ ಆಗಲಿ ತಾತ್ಕಾಲಿಕವಾಗಿ ನಮ್ಮ ಸಮಾಜವನ್ನು ಒಡೆಯಬಹುದೇ ಹೊರತು ನಮ್ಮ ಸಮಾಜದ ಮೂಲ ಸತ್ವ ಏನಿದೆ ಅದನ್ನ ಖಂಡಿತಾ ಅವ್ರು ನಿರ್ನಾಮ ಮಾಡಲಾರರು ಎಂಬ ಭರವಸೆ ನಂಗಿದೆ.
ನಿಮ್ಮ ಇನ್ನೊಂದು ಪ್ರಶ್ನೆ ’ನಾವು ಏನನ್ನ ಕಳಕೊಂಡ್ರೆ ಏನನ್ನ ಪಡೀತೇವೆ?’,  ಸ್ವಲ್ಪ ಕಷ್ಟದ ಪ್ರಶ್ನೆ ಅದು. ನಾವು ಕಳೆದುಕೊಳ್ಳುವ ಮುಂಚೆನೇ ಯೋಚನೆ ಮಾಡಬೇಕು. ನಾನು ಇಂಥಹ ಒಂದು ವಸ್ತುವನ್ನು ಕಳಕೊಳ್ತಾಯಿದೇನೆ. ಮತ್ತು ನಾನು ಏನನ್ನು ಪಡೀತೇನೆ. ಒಂದು ಉದಾಹರಣೆಯನ್ನ ತಗೋತೀನಿಲ್ಲಿ, ಒಬ್ಬ ಜಗದ್ಗುರುಗಳು ಒಂದು ಪದ್ಧತಿಯನ್ನು ಜಾರಿಗೆ ತಂದಿದ್ದಾರೆ. ಒಂದು ಜೋಳಿಗೆಯನ್ನ ಹಾಕಿಕೊಂಡು ಬರ್ತಾರೆ, ಆ ಜೋಳಿಗೆಯಲ್ಲಿ ನಾನು ನನ್ನ ದುಶ್ಚಟವನ್ನು ಹಾಕ್ತೇನೆ. ಆ ಜೋಳಿಗೆಯಲ್ಲಿ ನಾವು ನಮ್ಮ ದುಶ್ಚಟಗಳನ್ನು ಹಾಕಿದ್ರೆ ನಾವು ನೆಮ್ಮದಿಯನ್ನು ಪಡೀತೇವೆ, ಸುಖವನ್ನು ಪಡೀತೇವೆ, ಶಾಂತಿಯನ್ನು ಪಡೀತೇವೆ, ನಮ್ಮ ಹೆಂಡ್ರು ಮಕ್ಳು ಸುಖವಾಗಿರ್ತಾರೆ. ಹಾಗೆ ಒಂದು ವಸ್ತುವನ್ನು ಕಳೆದುಕೊಳ್ಳುವ ಮೂಲಕ ಅಮೂಲ್ಯವಾದ ಮತ್ತೊಂದು ವಸ್ತುವೊಂದನ್ನು ನಾವು ಪಡೆದುಕೊಳ್ಳಲಿಕ್ಕೆ ಸಾಧ್ಯವಿದೆ.
ಡಾ ಪಾರ್ವತಿ ಲೆಂಕಣ್ಣವರ್ – ಮಾನ್ಯ ಸಮ್ಮೇಳನಾಧ್ಯಕ್ಷರೇ, ‘ಮುಳುಗಡೆ’ ಕಾದಂಬರಿಯಲ್ಲಿ ನೀವು ಒಬ್ಬ ಸಂಶೋಧಕರಾಗಿ ಇತಿಹಾಸಕ್ಕೆ ಸಂಬಂಧಿಸಿದ ಶಾಸನ,ಶಿಲ್ಪಕಲೆ,ಅರಮನೆ,ಮಾಸ್ತಿಕಲ್ಲು ಮುಂತಾದವುಗಳನ್ನು ಸಂರಕ್ಷಿಸುವ ಮತ್ತು ದಾಖಲಿಸುವುದರ ಜೊತೆಗೆ ಮುಳುಗಡೆ ಜನರ ಸಮಸ್ಯೆ ಸಂಕಟಗಳನ್ನು ತುಂಬಾ ಅರ್ಥಪೂರ್ಣವಾಗಿ ಚಿತ್ರಿಸಿದ್ದೀರಿ. ಕಾದಂಬರಿಯ ಕೊನೆಯಲ್ಲಿ ನಿಮ್ಮ ಪತ್ನಿ ಕಮಲಾರ ಕಡೆಯ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ ಪತ್ರಗಳ ಪೆಟ್ಟಿಗೆಯೊಂದನ್ನ ನೀವು ತೆಗೆದು ಓದದೇ ಮುಳುಗಡೆ ನೀರಿಗೆ ಎಸೆದು ಅದ್ಭುತ ತಿರುವನ್ನು ಕಾದಂಬರಿಗೆ ಕೊಟ್ಟಿದ್ದೀರಿ. ನಾನು ಕೂಡಾ ಮುಳುಗಡೆ ಪ್ರದೇಶದಿಂದ ಅಂದ್ರೆ ಬಾಗಲಕೋಟೆ ಜಿಲ್ಲೆಯಿಂದ ಬಂದಿರುವೆ. ಊರ ಸುತ್ತಾ ನೀರಿದ್ದರೂ ಕುಡಿಯುವ ನೀರಿಗೆ ನಮ್ಮ ಜಿಲ್ಲೆಯಲ್ಲಿ ಬರವಿದೆ. ತಾವು ಮೂರು ದಶಕಗಳ ಹಿಂದೆ ಬರೆದ ‘ಮುಳುಗಡೆ’ ಕಾದಂಬರಿಯಲ್ಲಿ ನೀವು ಸಂರಕ್ಷಿಸುವ ಮತ್ತು ಖಾಸಗಿಯಾಗಿ ಸಂರಕ್ಷಿಸಿಕೊಂಡು ಬಂದಿರುವ ಪ್ರಕರಣಗಳನ್ನು ಮುಳುಗಿಸುವಂಥಹ ಕಡತಗಳೇನಾದರೂ ಉಳಿದಿವೆಯಾ ? ಹಾಗೇನಾದರೂ ಉಳಿದಿದ್ದರೆ ನಮಗೆ ತಿಳಿಸಿಕೊಡಬೇಕು.
ಅಧ್ಯಕ್ಷರು – ನಾನು ಮುಳುಗಡೆ ಬಗ್ಗೆ ಸುಮಾರು ನಾಲ್ಕು ಕಾದಂಬರಿಗಳನ್ನು ಬರೆದಿದ್ದೇನೆ. ‘ದ್ವೀಪ’ ಮತ್ತೊಂದು ‘ಬಿಡುಗಡೆ’ ಮತ್ತೊಂದು ‘ಒಡ್ಡು’ ಕೊನೆಯದಾಗಿ ನಾನು ಇನ್ನೂ ಒಂದು ಕಾದಂಬರಿಯನ್ನು ಬರೆದಿದ್ದೇನೆ. ಮುಳುಗಡೆಯ ಸಮಸ್ಯೆಗಳು ನನಗೆ ಯಾಕೆ ಕಾಡ್ತವೆ ಅಂದ್ರೆ ಒಂದು ಪ್ರದೇಶದಲ್ಲಿ ಮನುಷ್ಯ ಸುಮಾರು ವರ್ಷಗಳಿಂದ ಬದುಕಿ ಬಂದಿರ್ತಾನೆ. ಆ ಪ್ರದೇಶ ಅವನ ಮೇಲೆ ತುಂಬಾ ಪರಿಣಾಮವನ್ನುಂಟು ಮಾಡುತ್ತೆ. ಅಲ್ಲಿರುವ ಮರ,ಗಿಡ,ಬೆಟ್ಟ ಪ್ರತಿಯೊಂದು ಕೂಡಾ ಆ ಮನುಷ್ಯನೊಂದಿಗೆ ಬೆರೆತುಕೊಂಡಿರುತ್ತೆ. ಒಂದುವೇಳೆ ಒಂದು ನದಿ ತಡೆಯನ್ನ ಕಟ್ಟಿದ್ದೇ ಆದ್ರೆ, ಆ ಪ್ರದೇಶ ಮುಳುಗಡೆಯಾದ್ರೆ ಮನುಷ್ಯ ಅನಾಥನಾಗ್ತಾನೆ.
ಒಂದು ಉದಾಹರಣೆ ತೆಗೆದುಕೊಳ್ತೇನೆ, ನಮ್ಮ ಶರಾವತಿ ನದಿಯಲ್ಲಿ ಮುಳುಗಡೆಯಾದ ಜನ ಬಹಳ ದೂರದ ಪ್ರದೇಶದಲ್ಲಿ ಅವರಿಗೆ ಜಮೀನು ಕೊಡ್ತಾರೆ. ನಮ್ಮ ಹಳ್ಳಿಯ ಪ್ರದೇಶದಲ್ಲಿದ್ದ ದನ-ಕರುಗಳನ್ನ ಅವ್ರು ಆ ಪ್ರದೇಶಕ್ಕೆ ಹೊಡಕೊಂಡು ಹೋಗ್ತಾರೆ. 120 ಕಿ.ಮೀ.ದೂರದವರೆಗೂ ಆ ದನಕರುಗಳನ್ನು ಹೊಡಕೊಂಡು ಹೋಗಿ ಅಲ್ಲಿ ಬಿಟ್ಟು ಆ ಜನ್ರು ಮತ್ತೆ ತಮ್ಮ ಹಳ್ಳಿಗೆ ವಾಪಾಸ್ ಬರ್ತಾರೆ. ಐದಾರು ದಿನಗಳ ನಂತ್ರ, 120 ಕಿ.ಮೀ. ದೂರ ಹೊಯ್ದು ಬಿಟ್ಟು ಬಂದ ಆ ದನಕರುಗಳು ದಾರಿಯನ್ನು ಗುರ್ತು ಹಿಡಿದು ನೇರವಾಗಿ ಇವರ ಹಳ್ಳಿಗೆ ಬಂದು ತಲುಪ್ತವೆ. ಪ್ರಾಣಿಗಳಿಗೆಮಣ್ಣಿನ ಬಗ್ಗೆ ಈ ಬಗೆಯ ಒಂದು ವ್ಯಾಮೋಹ ಇದೆ ಅಂದ್ರೆ, ಮನುಷ್ಯನಿಗೆ ಇನ್ನೆಂಥಾ ವ್ಯಾಮೋಹ ಇರೋದಿಲ್ಲ ಯೋಚ್ನೆ ಮಾಡಿ. ಇದು ನನ್ನ ಬಹಳ ಕಾಡಿದ ಪ್ರಶ್ನೆ.
‘ಈ ಪ್ರದೇಶ ಮುಳುಗಡೆ ಆಗ್ತದೆ. ಅಲ್ಲಿ ನೀರು ನಿಲ್ತದೆ’ ಎಂಬುದು ಕೇವಲ ಸರ್ಕಾರಕ್ಕೆ ಸಂದ ಮಾತು. ಆದ್ರೆ ನಾನದನ್ನ ನಂಬೋದಿಲ್ಲ. ನೀರು ನಿಂತಾಗ ಒಂದು ಸಂಸ್ಕೃತಿ ಮುಳುಗುತ್ತೆ, ಸಂಬಂಧಗಳು ಮುಳುಗುತ್ವೆ, ನೆಂಟರಿಷ್ಟರು ಮುಳುಗ್ತಾರೆ, ಹಲವಾರು ಕಲೆಗಳು ಮುಳುಗ್ತವೆ. ಮನುಷ್ಯನನ್ನು ಮುಳುಗಡೆ ಮಾಡುವ ಯೋಜನೆಗಳ ಬಗ್ಗೆ ಸರ್ಕಾರ ಮತ್ತೆ ಮತ್ತೆ ಯೋಚನೆ ಮಾಡಬೇಕೆಂದು ನಾನು ತಿಳಿಸುತ್ತೇನೆ. ಹೊರ ದೇಶಗಳಲ್ಲಿ ಈಗಾಗಲೇ ಕಟ್ಟಿರೋ ಆಣೆಕಟ್ಟುಗಳಿಂದ ಅಪಾಯ ಸಂಭವಿಸುತ್ತೆ ಅನ್ನುವ ಕಾರಣಕ್ಕೋಸ್ಕರ ಅನೇಕ ಆಣೆಕಟ್ಟುಗಳನ್ನು ನಿರ್ಮೂಲನೆ ಮಾಡ್ತಾಯಿದಾರೆ. ನಾವು ಮತ್ತೆ ಮತ್ತೆ ಆಣೆಕಟ್ಟುಗಳನ್ನು ಕಟ್ತಾನೇ ಇದ್ದೇವೆ. ಈ ಬಗ್ಗೆ ನಮ್ಮ ಸರ್ಕಾರ, ಇಂಜಿನಿಯರ್ ಗಳು ಯೋಚ್ನೆ ಮಾಡಬೇಕೆಂದು ನಾನು ವಿನಂತಿ ಮಾಡ್ತೇನೆ.

ಡಾ ಎನ್ ವೈ ಮತ್ತಿಹಾಳ – ನಾ.ಡಿಸೋಜಾ ಅವರು ತಮ್ಮ ಹೆಚ್ಚು ಕಡಿಮೆ 45 ಕಾದಂಬರಿಗಳಲ್ಲೂ ಕೂಡಾ (ನೆಲವೂರು) ಸಂಸ್ಕೃತಿಯನ್ನು ಕಟ್ಟಿ ಕೊಡ್ತಾರೆ. ಹೀಗೆ ದೇಸೀ ಬದುಕನ್ನ ಹೇಳತಕ್ಕಂಥ ಬರಹಗಾರರು ಇವತ್ತು ಜಾಗತೀಕರಣ ಮತ್ತು ಆಧುನೀಕರಣ ಸಂದರ್ಭದಲ್ಲಿ ಇಡೀ ವಿಶ್ವ ಒಂದು ಕುಟುಂಬವಾಗಿ ಆ ಕುಟುಂಬದ ಭಾಷೆ ಇಂಗ್ಲಿಷ್ ಆಗಿರ್ತಕ್ಕಂಥ ಸಂದರ್ಭದಲ್ಲಿ ಕನ್ನಡದ ದೇಸೀ ಭಾಷೆ ನಶಿಸಿ ಹೋಗ್ತಾಯಿದೆ, ಕಳೆದು ಹೋಗ್ತಾಯಿರುವ ಸಂದರ್ಭಗಳಲ್ಲಿ ನಮ್ಮ ದೇಸೀ ಕಲೆಗಳನ್ನ ಹೇಗೆ ಉಳಿಸಿಕೊಳ್ಳಬೇಕು ಮತ್ತು ರಾಜ್ಯ ಮಟ್ಟದವರೆಗೆ ಹೇಗೆ ಬೆಳೆಸಬೇಕು ?
ಅಧ್ಯಕ್ಷರು – ಬಹಳ ಒಳ್ಳೆಯ ಪ್ರಶ್ನೆ. ದೇಸೀತನ ಅಂದ್ರೆ ನಮ್ಮತನ. ನಮ್ಮ ಆತ್ಮದೊಳಗಿರುವಂಥಹ ನಮ್ಮ ವ್ಯಕ್ತಿತ್ವವನ್ನು ಎತ್ತಿ ಹಿಡಿಯುವಂಥಹ ಪರಂಪರೆಯನ್ನು ಉಳಿಸಿಕೊಂಡಿರುವುದನ್ನು ನಾನು ದೇಸೀತನ ಅಂತೀನಿ. ಅದು ಹೊರಗಿನಿಂದ ಬಂದದ್ದಲ್ಲ. ಎಲ್ಲಿಯೋ ನೋಡಿ ಕಲಿತದ್ದಲ್ಲ. ನನಗೆ ನನ್ನದೇ ಆದ ಬದುಕಿದೆ. ವಿಚಾರವಿದೆ. ಒಂದು ಸಣ್ಣ ಉದಾಹರಣೆ ಕೊಡ್ತೇನೆ ಇವತ್ತು ಬೇರೆ ಬೇರೆ ದೊಡ್ಡ ಮಾಲ್ ಗಳು ಪಾಸ್ಟ್ ಫುಡ್ ಗಳು ಎಲ್ಲವೂ ಬಂದಿವೆ. ನಮ್ಮ ಅಜ್ಜಿ ಒಂದು ಹುಣಸೆ ಹಣ್ಣಿನ ಗೊಜ್ಜು ಮಾಡತಿದ್ರು, ಒಂದು ಸ್ವಲ್ಪ ಹುಣಸೆ ಹಣ್ಣು, ಒಂದರಳು ಉಪ್ಪು, ಒಂದು ಹಸಿ ಮೆಣಸಿನ ಕಾಯಿ ಇಷ್ಟನ್ನ ಕೊಟ್ರೆ ಆಕೆ ಹುಣಸೆ ಹಣ್ಣಿನ ಗೊಜ್ಜು ಮಾಡ್ತಾ ಇದ್ಲು. ಆ ಗೊಜ್ಜನ್ನು ಹಾಕ್ಕೊಂಡು ನಾವು ಐದಾರು ಬಾರಿ ಊಟ ಮಾಡ್ತಾ ಇದ್ವಿ. ಬಹಳ ರುಚಿಕಟ್ಟಾದ ಗೊಜ್ಜು. ಬಹುಶಃ ನಿಮ್ಮಲ್ಲಿ ಎಷ್ಟು ಜನ ಊಟ ಮಾಡಿದಿರೋ ಗೊತ್ತಿಲ್ಲ. ಆದ್ರೆ ಇವತ್ತು ಬರ್ತಾ ಇರುವಂಥಹ ಈ ಫಾಸ್ಟ್ ಫುಡ್, ಚಿಕನ್ ಗಳು, ಇವುಗಳು ರುಚಿಕರವಾಗಿರೊಲ್ಲ. ಆರೋಗ್ಯ ಪೂರಕವೂ ಅಲ್ಲ. ಈ ಸಂಸ್ಕೃತಿಯನ್ನ ದಯವಿಟ್ಟು ಬಿಟ್ಟು ನಾವು ನಮ್ಮ ದೇಸೀತನವನ್ನು ಉಳಿಸಿಕೊಳ್ಳಬೇಕು. ನಮ್ಮ ಸುತ್ತ ಏನು ಬೆಳೆಯುತ್ತೇವೆಯೋ ಅದನ್ನೇ ತಿನ್ನಬೇಕು. ವಿದೇಶದಲ್ಲಿ ಬೆಳೆದ ಫುಡ್ ನಮಗೆ ಒಗ್ಗೊಲ್ಲ. ಈ ಮಾಲ್, ಇತರೆ ವ್ಯಾಪಾರಗಳ ಮೂಲಕ ವಿದೇಶಿಯರು ತಮ್ಮ ಆಹಾರ ಪದ್ಧತಿಯನ್ನು ನಮ್ಮ ಮೇಲೆ ಹೇರ್ತಾಯಿದ್ದಾರೆ. ನಾವೂ ಅವರನ್ನು ಅನುಕರಿಸುತ್ತಿದ್ದೇವೆ. ಹಾಗಾಗಬಾರದು.
ಡಾ ಡಿ ಕೆ ಚಿತ್ತಯ್ಯ ಪೂಜಾರ – ನಾನು ಅಧ್ಯಕ್ಷರ ಭಾಷಣದ ಕುರಿತು ಪ್ರಶ್ನೆಯನ್ನು ಎತ್ತುತ್ತಿದ್ದೇನೆ. ಅಧ್ಯಕ್ಷೀಯ ಭಾಷಣದಲ್ಲಿ ನಾ.ಡಿಸೋಜ ಅವರು ನೈತಿಕ ಪೊಲೀಸ್ ಗಿರಿ ವಿಜೃಂಬಿಸುತ್ತಿದೆ ಸರ್ಕಾರ ಕೈ ಕಟ್ಟಿಕೊಂಡು ಕೂತಿದೆ ಅಂದಿದ್ದಾರೆ. ಅದರ ಬಗ್ಗೆ ಅಧ್ಯಕ್ಷರ ಅಭಿಪ್ರಾಯವೇನು ? ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರವನ್ನು ಮುಳುಗಿಸ್ತಾಯಿದಾವೆ. ಇದು ಹೀಗೇ ಹೋದ್ರೆ ಮುಂದೆ ಕರ್ನಾಟಕಕ್ಕೆ ಒದಗಬಹುದಾದ ವಿಪತ್ತು ಎಂಥಹದ್ದು ಎಂಬುದನ್ನು ಅಧ್ಯಕ್ಷರು ಮನವರಿಕೆ ಮಾಡಿಕೊಡಬೇಕು.
ಅಧ್ಯಕ್ಷರು – ಒಳ್ಳೇ ಪ್ರಶ್ನೆಯನ್ನು ಕೇಳಿದ್ದೀರಾ. ನೈತಿಕ ಪೊಲೀಸ್ ಎನ್ನುವ ಹೊಸ ಪೋಲೀಸ್ ಗಿರಿ ಸೃಷ್ಟಿಯಾಗಿದೆ. ನಮ್ಮ ಸರ್ಕಾರ ಸಮಾಜದ ಸ್ವಾಸ್ಥ್ಯಕ್ಕಾಗಿ, ಸಮಾಜದಲ್ಲಿ ಶಾಂತಿ ಇರಲಿ ಎಂಬ ಕಾರಣಕ್ಕೋಸ್ಕರ ಸಮಾಜ ಹೀಗೇ ಇರಬೇಕೆಂಬ ಉದ್ದೇಶದಿಂದ ಒಂದು ಪೊಲೀಸ್ ಇಲಾಖೆಯನ್ನು ಸೃಷ್ಟಿ ಮಾಡಿದೆ. ಆ ಪೊಲೀಸ್ ನಮ್ಮ ದೇಶದಲ್ಲಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇದೆ, ಕಳ್ಳತನ ಇತ್ಯಾದಿ ದೊಡ್ಡತನದಲ್ಲಿ ನಡೆಯದಂತೆ ನಮ್ಮ ಪ್ರಾಮಾಣಿಕ ಪೊಲೀಸರು ಕೆಲಸ ಮಾಡ್ತಾಯಿದಾರೆ. ಈ ಪೊಲೀಸ್ ಮಾಡೋ ಕೆಲಸವನ್ನು ಮತ್ಯಾರೋ ಬಂದು ನಾವ್ ಮಾಡ್ತೀವಿ ಅಂತ ಮುಂದೆ ಬಂದ್ರೆ ಅದು ಮೂರ್ಖತನ. ಯಾಕಂದ್ರೆ ಯಾವುದೇ ಸರ್ಕಾರ ಅವರನ್ನ ನೇಮಿಸಿಲ್ಲ. ಅವ್ರು ತಮ್ಮನ್ನು ತಾವು ಪೊಲೀಸ್ರು, ನೈತಿಕ ಪೊಲೀಸ್ರು ಅಂತ ಘೋಷಣೆಯನ್ನ ಮಾಡಿ ಇಲ್ಲಿ ನಡೆಯುವಂಥಹ ಕೆಲವು ತಮಗೆ ಸರಿ ಕಾಣದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅದ್ರ ಬಗ್ಗೆ ಒಂದು ಹಿಡಿತವನ್ನು ಸಾಧಿಸಲು ಅವರು ಪ್ರಯತ್ನ ಮಾಡ್ತಾಯಿದಾರೆ ಇದನ್ನು ನಾವು ನೈತಿಕ ಪೊಲೀಸ್ರು ಅಂತ ಕರೆದದ್ದು. ಈ ನೈತಿಕ ಪೊಲೀಸರಿಂದ ಸಮಾಜಕ್ಕೆ ಯಾವುದೇ ಒಳ್ಳೆಯದಾಗುವುದಿಲ್ಲ.
ಯಾಕಂದ್ರೆ ಇವತ್ತು ಒಂದು ತಂಡ ನೈತಿಕ ಪೊಲೀಸ್ರು ಅಂತೇಳಿಕೊಂಡು ಬಂದ್ರೆ ನಾಳೆ ಮತ್ತೊಂದು ತಂಡ ಬರಬಹುದು. ಈ ನಮ್ಮ ಸಮಾಜದಲ್ಲಿ ನೈತಿಕ ಪೊಲೀಸರ ತಂಡ ಹೆಚ್ಚಾಗಬಹುದು. ಇದು ದೊಡ್ಡ ಆತಂಕ ಎನ್ನೋದ್ರಿಂದ ನನ್ನ ಅಧ್ಯಕ್ಷೀಯ ಭಾಷಣದಲ್ಲಿ ಅದನ್ನು ಉಲ್ಲೇಖ ಮಾಡಿದಿನಿ.
ಖಾಸಗೀ ಶಿಕ್ಷಣ ಸಂಸ್ಥೆಗಳು ಬಲವಾಗ್ತಾಯಿವೆ. ಎಂಬುದನ್ನು ನಾನು ಹೇಳಿದ್ದೆ. ಖಂಡಿತಾ ಬಲವಾಗ್ತಾಯಿದೆ. ಕನ್ನಡ ಶಾಲೆಗಳು ಮುಚ್ತಾಯಿವೆ. ತಂದೆ ತಾಯಿಗಳು ಕೂಡಾ ಖಾಸಗೀ ಶಾಲೆಗಳಿಗೆ ಕಳಿಸ್ತಾರೆ, ಸರ್ಕಾರಿ ಶಾಲೆಗಳಿಗೆ ಕಳಿಸ್ತಿಲ್ಲ. ಇದು ಅತಿ ದೊಡ್ಡ ಪ್ರಮಾಣದಲ್ಲಿ ಇವತ್ತು ಯಾರು ಸಂಸ್ಥೆಗಳಿವೆ ಅವ್ರು ತಮ್ಮ ಕೈಯಲ್ಲಿ ಆಡಳಿತವನ್ನು ಅಧಿಕಾರವನ್ನು ಕೈಯಲ್ಲಿ ಇಟ್ಕೊಂಡು ತಮ್ಮ ಖಾಸಗೀತನವನ್ನು ಕಾಯ್ತರೆ ಎಂಬುದನ್ನು ನಾವು ಯೋಚನೆ ಮಾಡಬೇಕಿದೆ. ಶಾಲೆಗಳನ್ನು ನಡೆಸೋದಾದ್ರೆ ಸರ್ಕಾರಾನೇ ನಡೆಸಬೇಕು. ಸರ್ಕಾರದ ಮೂಲಕ ಏನು ಶಾಲೆಗಳು ನಡೀತವೆ ಆ ಶಾಲೆಗಳಲ್ಲಿ ಒಳ್ಳೇ ಭವಿಷ್ಯವಿದೆ. ಖಾಸಗಿ ಶಾಲೆಗಳು ಇವತ್ತು ಎಷ್ಟು ಡೊನೇಷನ್ ತಗೋತವೆ ಎಂಬುದನ್ನು ನೀವೆಲ್ಲ ಕೇಳಿದ್ದೀರಿ. ಒಬ್ಬ ವಿದ್ಯಾರ್ಥಿ ಶಾಲೆಗೆ ಹೋಗಬೇಕಾದ್ರೆ ಪಾಕೆಟ್ ಮೊನಿ ಅಂತೇಳಿ 100/ ರೂ ತಗೊಂಡೋಗುತ್ತಾನೆ, ಆ 100/ ರೂ ಯಾವ ರೀತಿ ವಿನಿಯೋಗವಾಗ್ತಾಯಿದೆ ಅನ್ನೋದು ಯಾರಿಗೂ ಗೊತ್ತಾಗಲ್ಲ. ಇಂಥಹ ಕಾರಣಗಳಿಗೆ ನಾನು ಆ ಮಾತುಗಳನ್ನು ಹೇಳಿದ್ದೇನೆ.
ಡಾ ಶಿವಗಂಗಮ್ಮ – ಮೊನ್ನೆ ಮೊನ್ನೆ ನೂರು ಶ್ರೀಧರ್ ಮತ್ತೊಬ್ರು ನಾವು ಮುಖ್ಯವಾಹಿನಿಗೆ ಬರ್ತೀವಿ ಅಂತ ಹೇಳಿದ್ರು ಇದ್ರ ಬಗ್ಗೆ ಸಾಹಿತಿಗಳಾದವ್ರು ರಾಜಕೀಯ ಪ್ರಜ್ಞೆ ಮತ್ತು ಐಡ್ಯಾಲಜಿಯನ್ನು ಹೇಗೆ ಇಟ್ಟುಕೊಳ್ಳಬೇಕೆಂದು ನಮ್ಮ ಯುವ ಬರಹಗಾರರಿಗೆ ಹೇಳಬೇಕು.
ಅಧ್ಯಕ್ಷರು – ಒಳ್ಳೆಯ ಒಂದು ಪ್ರಶ್ನೆ ಕೇಳಿದ್ದಾರೆ. ನಕ್ಸಲ್ ಸಮಸ್ಯೆ ನಮ್ಮಲ್ಲರನ್ನು ಕೂಡಾ ಕಾಡ್ತಾಯಿದೆ. ಕೇವಲ ನನ್ನನ್ನು ಮಾತ್ರ ಅಲ್ಲ ಸರ್ಕಾರವನ್ನು ಕೂಡಾ ಆ ಸಮಸ್ಯೆ ಕಾಡ್ತಾಯಿದೆ. ಆ ನಕ್ಸಲರು ಮುಖ್ಯವಾಹಿನಿಗೆ ಬರಬೇಕೆಂದು ನನಗನ್ನಿಸುತ್ತೆ ಅಲ್ಲಿರುವ ಯವಕ/ಯುವತಿಯರು ಇಲ್ಲಿನ ರಾಜಕೀಯ ಅವ್ಯವಸ್ಥೆಯನ್ನು ನೋಡಿ ಇಲ್ಲಿ ನಡೀತಿರುವಂಥಹ ಪ್ರಜಾ ಪ್ರಭುತ್ವಕ್ಕೆ ವಿರೋಧವಿರುವಂಥಹ ಹಲವಾರು ಸಮಸ್ಯೆಗಳನ್ನು ಅವ್ರು ಗಮನಿಸಿ ಈ ವ್ಯವಸ್ಥೆಯ ವಿರುದ್ಧ ಸಿಡಿದು ನಿಂತರು ಎಂಬುದನ್ನು ನಾವು ಯೋಚ್ನೆ ಮಾಡಬೇಕು. ಹೀಗೆ ಸಿಡಿದು ನಿಲ್ಲಲಿಕ್ಕೆ ಕಾರಣ ನಾವೇ ಸೃಷ್ಠಿ ಮಾಡಿರುವಂಥಹ ಕೆಟ್ಟ ವ್ಯವಸ್ಥೆ. ಇವನ್ನು ನಾವು ಸರಿಪಡಿಸಿದ್ರೆ ಬಹುಶಃ ಅವರು ಕೂಡಾ ಮುಂದೊಂದು ದಿನ ನಮ್ಮ ಜೊತೆ ಸೇರ್ಕಂತಾರೆ. ನಾ ಪತ್ರಿಕೆಯಲ್ಲಿ ಓದಿದ ಹಾಗೆ ಒಂದು ತಂಡ ನಾವು ಪ್ರಾಮಾಣಿಕವಾಗಿ ಬರ್ತೇವೆ, ದಯವಿಟ್ಟು ನಮ್ಮನ್ನು ಸ್ವೀಕರಿಸಿ ಕರೆಸಿಕೊಳ್ಳಿ ಅನ್ನುವಂಥಹ ಕರೆಯನ್ನು ಕೊಟ್ಟಿದ್ದಾರೆ. ಈ ಕರೆಯನ್ನು ಸರ್ಕಾರ ಸ್ವೀಕರಿಸಬೇಕೆಂದು ನಾನು ಕೇಳಿಕೊಳ್ಳುತ್ತೇನೆ. ನಮ್ಮ ಯುವಕರು ಎಲ್ಲೋ ನಿಂತು ನಮ್ಮ ಮೇಲೇ ಗುಂಡು ಹಾರಿಸೋದು ಒಳ್ಳೇದಲ್ಲ. ಅದು ಆಗಬಾರದು ಅವ್ರನ್ನು ಯಾವುದಾದ್ರೂ ರೀತಿಯಲ್ಲಿ ವಿಶ್ವಾಸಕ್ಕೆ ನಾವು ತೆಗೆದುಕೊಳ್ಳಬೇಕು.

‍ಲೇಖಕರು G

9 January, 2014

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. shivu

    its a good thoughts.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading