ಸ್ನೇಹಾಂಕುರ
ನಾ ದಿವಾಕರ್
ಅವ್ಯಕ್ತ ವೇದನೆಗಳು
ಕೊರಳ ಚಿಪ್ಪುಗಳಲಿ ಹುದುಗಿ
ಅಂತರ್ಗತವಾದಾಗ
ಎತ್ತಲೋ ದೂರದಲೊಂದು
ಹೃದಯ ಮಿಡಿಯುತ್ತದೆ
ಮೌನದ ನೀರವತೆಯಲಿ !
ಮೌನ ಮಾತಾದಾಗ
ಆಂತರ್ಯದಲಡಗಿರುವ
ನೋವು ವಿರಮಿಸುತ್ತದೆ
ನಿರ್ಜನತೆಯ ಭಾವದಲಿ ;
ಸಂಬಂಧಗಳ ಸೆಲೆ
ಎಳೆಎಳೆಯಾಗಿ
ನಿರ್ಭಾವದ ಬಂಧಿಯಾದಾಗ
ಪ್ರೀತಿ ಪ್ರವಹಿಸುತ್ತದೆ !
ಸಂಕರದ ನೆರಳಲ್ಲಿ
ಸಾಂತ್ವನದ ಹೆಜ್ಜೆ ಗುರುತುಗಳು
ನವಿರಾಗಿ ಸಂಧಿಸುತ್ತವೆ
ವಾತ್ಸಲ್ಯದ ನೆಲೆಯಲ್ಲಿ ;
ನಲ್ಮೆಯ ಮನಸು
ಕದ ತಟ್ಟಿದಾಗ
ಪಲ್ಲವಿಸುತದೆ
ಸುಪ್ತ ಭಾವದ ಬಡಿತ!







nice..poem
beautiful
ಪದ್ಯಾಂಕುರ ..ಚನ್ನಾಗಿದೆ.