ಸಂಪು ಕಾಲಂ : ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸು!

ಇತ್ತೀಚೆಗಷ್ಟೇ ಬಿಡುಗಡೆಯಾದ ಒಂದು ಉತ್ತಮ ಸಿನೆಮಾ, ಎಲ್ಲರೂ ನೋಡಿರುತ್ತೀರಿ. ನಮ್ಮ ಹಳೆಯ ನೆಚ್ಚಿನ ಸಿನೆ ತಾರೆ ಅಭಿನಯಿಸಿರುವ ‘ಇಂಗ್ಲಿಷ್-ವಿಂಗ್ಲಿಷ್’. ಅದರಲ್ಲಿ ಒಂದು ಸನ್ನಿವೇಶ ಗಮನಿಸಿದ್ದೀರಾ? ಶ್ರೀದೇವಿಗೆ ಒಮ್ಮೆ ತನ್ನ ಮಗಳ ಶಾಲೆಗೆ ಹೋಗಬೇಕಾದ ಸಂದರ್ಭ ಒದಗುತ್ತದೆ. ಆದರೆ ಆಕೆಯ ಮಗಳಿಗೆ ತನ್ನ ತಾಯಿ ತನ್ನೊಟ್ಟಿಗೆ ಬರುವುದು ಇಷ್ಟವಿಲ್ಲ. ಏಕೆಂದರೆ ಆಕೆಗೆ ಇಂಗ್ಲಿಷ್ ಬರುವುದಿಲ್ಲ ಎಂದು. ಶಾಲೆಯ ಪ್ರಿನ್ಸಿಪಾಲರ ಜೊತೆಗೆ ಮಾತು ಮುಗಿಸಿ ಮನೆಗೆ ಮರಳುವವರೆಗೂ ಅವಳಿಗೆ ಕಸಿವಿಸಿ, ತನ್ನ ತಾಯಿ ತನ್ನ ಮಾನ ಕಳೆದಾಳೆಂಬ ಕಳವಳ!
ಅದ್ಯಾವುದೋ ಒಂದು ಜಾಹೀರಾತಂತೆ, ಮಗ ಅಮ್ಮನನ್ನು ತನ್ನೊಟ್ಟಿಗೆ ಬರಬೇಡ ಅಂತ, ತಾಯಿ ಬರಲೇಬೇಕು ಅಂತ. ಕೊನೆಗೆ ವಿಷಯ ತಿಳಿದ ಆ ತಾಯಿ, ತನ್ನ ಕೂದಲಿಗೆ ಕಪ್ಪು ಬಳಸಿ, ಬಿಳಿಕೂದಲನ್ನು ಮರೆಮಾಚಿ, ಸ್ಮಾರ್ಟ್ ಆಗಿ ಕಾಣುವ ಹಾಗೆ ತನ್ನನ್ನು ಅಲಂಕರಿಸಿಕೊಂಡ ನಂತರ ಆ ಮಗ ಕುಣಿದು ತಾನೇ ತಾನಾಗಿ ಬಂದು ತನ್ನಮ್ಮನನ್ನು ಜೊತೆಗೊಯ್ಯುತ್ತಾನೆ.
ಈ ಎರಡು ಉದಾಹರಣೆಗಳಲ್ಲೂ ಖಿನ್ನರಾದವರು ‘ತನ್ನ ಜೀವ’ ಎಂದು ತಮ್ಮ ಮಕ್ಕಳನ್ನು ಸಾಕಿ ಬೆಳೆಸಿದ ಆ ಹಿರಿಯರೇ! ಇದೊಂದು ಹೇಳಿಕೊಳ್ಳಲಾಗದ ಮುಜುಗರದ ಪರಿಸ್ಥಿತಿ. ಬರಿಯ ಮಾಧ್ಯಮಗಳಲ್ಲಿ ಅಷ್ಟೇ ಅಲ್ಲ, ನಮ್ಮ ಸುತ್ತಲೂ ಇಂತಹ ಘಟನೆಗಳು ಅನೇಕ ನಡೆಯುತ್ತಿವೆ (ಮಾಧ್ಯಮಗಳೂ ಇದಕ್ಕೆ ಪೂರಕವಾಗಿ ತುಪ್ಪ ಸುರಿಯುತ್ತಿವೆ ಎಂಬ ಮಾತೂ ಸುಳ್ಳಲ್ಲ). ಇಂತಹ ಆಘಾತಕಾರೀ ವರ್ತನೆಗಳು, ಅವುಗಳ ಬಗ್ಗೆ ಗಮನ ಹರಿಸದ ಬೇಜವಾಬ್ದಾರಿತನ ಎಲ್ಲವೂ ಮೌನವಾಗಿಯೇ ನಮ್ಮ ಹದಿಹರೆಯದ ಮಕ್ಕಳ ಮನದಲ್ಲಿ ಬೀಜರೂಪ ತಾಳಿರುತ್ತದೆ.
ಈ ‘ಟೀನ್’ ಎಂಬ ಪದ ಎಲ್ಲರಿಗೂ, ಎಲ್ಲ ಕಾಲಕ್ಕೂ ಯಾವುದೋ ಒಂದು ರೀತಿಯ ಭಾವೋತ್ಪನ್ನತೆ ಉಂಟು ಮಾಡುತ್ತದೆ. ತರುಣರಿಗೆ ಕನಸಿನಾಗರ, ಹಿರಿಯರಿಗೆ ಅದೊಂದು ‘ಹುಡುಗು’ ವಿಚಾರ, ಪೋಷಕರಿಗಂತೂ ಸಹಿಸಲಾರದ ಸಮಾಚಾರ! ಆ ವಯಸ್ಸೇ ಹಾಗೆ, ಭಾವನೆಗಳ, ಉದ್ವೇಗಗಳ ಕಲಸುಮೇಲೋಗರ, ಮಾಗಿಯೂ ಮಾಗದ ಒಗರಾದ ಕಾಯ ಹಾಗೆ, ಸಿಡಿ ಮಿಡಿ ಗುಟ್ಟುವ ಸುರುಸುರು ಬತ್ತಿಯ ಹಾಗೆ. ಈ ಹದಿಹರೆಯದ ದಿನಗಳಲ್ಲಿ ತಮ್ಮ ಮೂಗಿನ ನೇರಕ್ಕೇ ಪ್ರಪಂಚವನ್ನು ಕಾಣುವ ‘ಜಸ್ಟ್ ಬಾರ್ನ್’ ಯುವಕ, ಯುವತಿಯರು ತಾವು ತಮ್ಮ ರೀತಿ ನೀತಿಗಳಿಂದ, ನಡತೆಗಳಿಂದ ಪೋಷಕರನ್ನು ಎಷ್ಟು ನೋಯಿಸಿರುತ್ತಾರೆ, ಅವಮಾನಗೊಳಿಸಿರುತ್ತಾರೆ ಎಂಬ ಪರಿಕಲ್ಪನೆಯೂ ಅವರಿಗೆ ಇರುವುದಿಲ್ಲ. ಈ ‘ದುರ್ನಡವಳಿಕೆ’ಯನ್ನು ಕೆಲವರು, “ಹಣೆಬರಹ” ಎಂದು ಅನುಭವಿಸುತ್ತಾರೆ, ಮತ್ತೆ ಕೆಲವರು “ಸರಿಯಾಗಿ ಬೆಳೆಸಿಲ್ಲ” ಎಂದು ಮಕ್ಕಳನ್ನೂ, ಪೋಷಕರನ್ನೂ ದೂಷಿಸುತ್ತಾರೆ. ಇದು ಯಾಕೆ ಹೀಗೆ! ಮಕ್ಕಳೇ ಹೀಗಾ ಅಥವಾ ಪೋಷಣೆಯ ಕೊರತೆನಾ? ಅಥವಾ ಮತ್ತೇನಾದರೂ ಕಾರಣಗಳು? ನೋಡೋಣ.
“ಆಡಿ ಬಾ ನನ ಕಂದ ಅಂಗಾಲ ತೊಳೆದೇನ, ತೆಂಗಿನ ಕಾಯ ತಿಳಿನೀರ ತಕ್ಕೊಂಡು ಬಂಗಾರ ಮಾರಿ ತೊಳೆದೇನ”; ಎನ್ನುವ ಹಾಗೆ, ಅತ್ಯಂತ ಪ್ರೀತಿ ಕಾಳಜಿಯಿಂದ ಹೆತ್ತವರು ಮಕ್ಕಳನ್ನು ಬೆಳೆಸುತ್ತಾರೆ. ತಮ್ಮದೇ ಶರೀರದ ತುಂಡು ಸುತ್ತ ಹಾಯುವಂತೆ ಅಂಗೈಯಲ್ಲೇ ಬೆಚ್ಚಗೆ ಭದ್ರಿಸಿ ಸಾಕಿ ಸಲಹುತ್ತಾರೆ. ಈ ರೀತಿ ಸುಖಾನಂದಗಳಿಂದ ಬೆಳೆಯುತ್ತಾ ಬಂದ ಮಕ್ಕಳು ಒಮ್ಮೆಲೇ ತಮ್ಮ ಗೂಡಿನಿಂದ ಹೊರಬಂದು ಪ್ರಪಂಚವನ್ನು ಕಾಣುವುದು ಶಾಲೆಯ ಹಿರಿಯ ತರಗತಿಗಳಿಗೆ ಬಂದಾಗಲೇ. ‘ಪೀರ್ ಇನ್ಫ್ಲುಯೆನ್ಸ್’ ಅನ್ನುವುದು ತುಂಬಾ ಪ್ರಬಲವಾದದ್ದು. ಅವರ ಬೆಳೆಯುತ್ತಿರುವ ಬುಧ್ಧಿ, ಭ್ರಮೆಗಳಿಗೆ ಪ್ರಭಾವ ಬೀರುವುದು ಶಾಲೆಯ ಸಹಪಾಠಿಗಳ ಮಾತು, ಹಾವಭಾವಗಳು ಮತ್ತು ಜೀವನ ಶೈಲಿ. ಈ ರೀತಿ ಕಲಿತ ಮಕ್ಕಳು ತಮ್ಮ ತಂದೆ ತಾಯಂದಿರಲ್ಲಿಯೂ ಅದೇ ರೀತಿ ಗುಣಗಳನ್ನು ಪಡೆಯಲು ಇಷ್ಟಪಡುತ್ತಾರೆ. ತಮ್ಮ ಬಟ್ಟೆ ಬರೆ, ತಮ್ಮ ಪುಸ್ತಕ ಅಟ್ಟು, ಟಿಫನ್ ಬಾಕ್ಸು, ತಲೆ ಬಾಚುವ ಬಗೆ ಇವುಗಳಿಂದ ಹಿಡಿದು, ತಮ್ಮ ಮನೆ, ತಾಯ್ತಂದೆಯರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ತನ್ನನ್ನು, ತನ್ನ ಸ್ವಂತ ಪರಿಸರವನ್ನು ಅವೆಲ್ಲವುಗಳಿಗೆ ಹೋಲಿಸಿ ನೋಡಿ ಅಂತರ್ಮುಖಿಯಾಗುತ್ತಾರೆ. ಇದರಿಂದ ಅವರಲ್ಲಿ ಹೆಜ್ಜೆ ಹೆಜ್ಜೆಗೂ ಪ್ರಶ್ನೆಗಳೂ, ಅಸಮಧಾನಗಳೂ ತಾಂಡವವಾಡುತ್ತಿರುತ್ತದೆ. ಇನ್ನೂ ತುಂಬದ ಕೊಡ ಹೆಚ್ಚು ತುಳುಕುವಂತೆ, ಅವರಲ್ಲಿನ ಅರೆ ಬರೆ ಅನುಭವ, ಜ್ಞಾನಗಳು ಹಾಗೂ ದೈಹಿಕ ಚೈತನ್ಯದ ಹುರುಪು, ಅವರನ್ನು, ತಮ್ಮ ಸಮನಾರೂ ಇಲ್ಲ ಎಂಬಂತೆ ಮಾಡಿಬಿಡುತ್ತದೆ. ಇದರಿಂದಾಗುವ ಪರಿಣಾಮ?
ಇತ್ತ ತಾಯಿ ತಂದೆ, ತಮ್ಮ ಮಕ್ಕಳ ಈ ವಿರೋಧಾಭಾಸಗಳು, ಮಾನಸಿಕ ತುಮುಲಗಳನ್ನು ಅರಿಯದೆ, ನಮ್ಮ ಮಗುವೆ ನಮ್ಮನ್ನು ಹೀಗೆ ಕಡೆಗಣಿಸುತ್ತಿದೆಯಲ್ಲಾ ಎಂಬ ವಿಷಣ್ಣತೆಗೆ ಒಳಗಾಗುತ್ತಾರೆ. ಅತ್ತ ಆ ಹದಿವಯಸ್ಸಿನ ಮಕ್ಕಳು ತನ್ನನ್ನು ತನ್ನ ಪೋಷಕರು ಅರ್ಥವೇ ಮಾಡಿಕೊಳ್ಳುತ್ತಿಲ್ಲ ಎಂದು ಕೊರಗುತ್ತಾರೆ. ಒಟ್ಟಾರೆ ಇಂತಹ ನಡವಳಿಕೆ ಪೋಷಕರು-ಮಕ್ಕಳ ನಡುವೆ ಒಂದು ದೊಡ್ಡ ಬಿರುಕು ಮೂಡಿಸಿ ಇಬ್ಬರೂ ಸಮಾನಾಂತರವಾಗುವಂತೆ ಮಾಡಿಬಿಡುತ್ತದೆ. ಎ ಟೋಟಲ್ ಮಿಸ್ ಕಮ್ಯುನಿಕೇಶನ್! ಈ ರೀತಿ ತೊಡಕುಗಳು ಉಂಟಾಗುವುದು ಸಾಮಾನ್ಯ. ಹೀಗೆಲ್ಲ ಆದ ಮಾತ್ರಕ್ಕೆ “ಈಗಿನ ತರುಣ ತರುಣಿಯರು ಧಿಮಾಕಿನವರು, ಸ್ವಲ್ಪ ರೆಕ್ಕೆ ಬಂದು ಬಿಟ್ಟರೆ ತಂದೆ ತಾಯಿ ಯಾರೂ ಬೇಡ” ಎಂಬ ನಿಲುವುಗಳಿಗೆ ಬಂದು ಬಿಡುವುದು ತಪ್ಪು. ಮನಶ್ಶಾಸ್ತ್ರದ ಬಗೆಗಿನ ಶಿಕ್ಷಣ ಈ ರೀತಿ ಸೂಕ್ಷ್ಮ ವಿಚಾರಗಳಿಗೆ ಉತ್ತರ ಕೊಡುತ್ತದೆ. ಇಂತಹ ಮೌನ ರೋಧನೆಗಳಿಗೆ ಪರಿಹಾರ ಸೂಚಿಸುತ್ತದೆ.
ತಂದೆ ತಾಯಿಯರು ಮಕ್ಕಳ ಈ ಮನೋಸ್ಥಿತಿಯನ್ನು ಅರಿಯಬೇಕು. ಅವರೊಟ್ಟಿಗೆ ಮುಕ್ತ ಮಾತುಕತೆ ನಡೆಸಬೇಕು. ತಮ್ಮ ಹದಿಹರೆಯದ ಮಕ್ಕಳನ್ನು ಸ್ನೇಹಿತರಾಗಿ ವರ್ತಿಸಬೇಕು. ಈ ಸ್ನೇಹವನ್ನು ಯಾವಾಗ ಮಕ್ಕಳು ನಂಬುತ್ತಾರೆ, ಆಗ ಅವರೂ ಸಹ ಮುಕ್ತವಾಗಿ ತಮ್ಮ ತುಮುಲಗಳನ್ನು ಹಂಚಿಕೊಳ್ಳಲು ಅನುವಾಗುತ್ತಾರೆ. ದೈಹಿಕವಾಗಿ, ಮಾನಸಿಕವಾಗಿ ಬೆಳವಣಿಗೆಯನ್ನು ಕಾಣ ಹತ್ತಿರುವ ಈ ಹದಿಹರೆಯದ ಮಕ್ಕಳಿಗೆ, ತಂದೆ ತಾಯಿಯರ ಮುದ್ದುಗರೆಯುವಿಕೆಗಿಂತ “ನೀನೀಗ ದೊಡ್ಡವನು” ಎಂಬ ಸಮಾನ ಭಾವ ಹುಟ್ಟಿಸುವ ಅವಶ್ಯಕತೆ ಇದೆ. ಒಬ್ಬ ಹದಿನಾಲ್ಕು ವಯಸ್ಸಿನ ಹುಡುಗನ ಕೆನ್ನೆ ಚಿವುಟಿ “ಅಯ್ಯೋ ಮುದ್ದು” ಎಂದು, ಅವನ ಪ್ರತಿಕ್ರಿಯೆ ಗಮನಿಸಿ ನೋಡಿದರೆ ತಿಳಿಯುತ್ತದೆ. ಇದರ ಜೊತೆ ಜೊತೆಗೆ ಸರಿ ತಪ್ಪುಗಳ ನೀತಿ ಪಾಠಗಳು ಮಗುವಿಗೆ ಸಿಗುತ್ತಿರಬೇಕು. ಇವೆಲ್ಲವೂ ಪರೋಕ್ಷವಾಗಿ ಆ ಮಕ್ಕಳ ನಡವಳಿಕೆ, ಅವಶ್ಯಕತೆಗಳನ್ನು ತಾರ್ಕಿಕವಾಗಿ, ಮಾನಸಿಕವಾಗಿ ತಿದ್ದುತ್ತವೆ. ತಮಗೇ ತಿಳಿಯದೆ ಸರಿ ತಪ್ಪುಗಳ ಅರಿವುಗಳು ಅವರಲ್ಲಿ ಮೂಡಿರುತ್ತದೆ. ಹಿರಿಯರೊಡನೆ ನಾವೂ ದನಿ ಸೇರಿಸಬಹುದು, ನಮ್ಮನ್ನು ಅವರು ‘ಮಕ್ಕಳು’ ಎಂದು ಕಡೆಗಣಿಸುವುದಿಲ್ಲ ಎಂಬ ಭರವಸೆ, ವಿಶ್ವಾಸಗಳು ಅವರಲ್ಲಿ ಮೂಡಿದರೆ, ಉಳಿದೆಲ್ಲ ಬಾಹ್ಯ, ನೆರೆಹೊರೆ ವಿಚಾರಗಳು ಅವರನ್ನು ಸುಳಿಯುವುದಿಲ್ಲ, ಮತ್ತು ಯಾವುದೇ ರೀತಿ ತಂದೆ ತಾಯಿಯ ಮನಸ್ಸು ನೋಯಿಸುವ ಆಭಾಸಗಳು ಉಂಟಾಗುವುದಿಲ್ಲ. ಹದಿಹರೆಯದ ಹುಚ್ಚು ಖೋಡಿ ಮನಸನ್ನು ಅರಿತು ಬೆರೆತು ಬೆಳೆಸುವುದೇ ಈ ಎಲ್ಲ ಸಮಸ್ಯೆಗಳಿಗೆ ಸರಿಯಾದ ಮಾರ್ಗ.
(ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದ್ದ ಬರಹ)

‍ಲೇಖಕರು avadhi

April 12, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Jayalaxmi Patil

    ಹೀಗೆ ಮಾಡಿದ ಮಕ್ಕಳಲ್ಲಿ ನಾನೂ ಒಬ್ಬಳು ಸಂಯುಕ್ತಾ! 🙁 ಅಮ್ಮ ತನ್ನ ಜೊತೆ ಸಿನಿಮಾಕ್ಕೆ ಬಾ ಅಂದರೆ ತಪ್ಪಿಸಿಕೊಳ್ಳುತ್ತಿದ್ದ ನಾನು ಆರಾಮಾಗಿ ಗೆಳತಿಯರ ಜೊತೆಯಲ್ಲಿ ಸಿನಿಮಾಗೆ ಹೋಗುತ್ತಿದ್ದೆ. ಅಮ್ಮ ಸಿನಿಮಾ ನೋಡುವುದು ಕ್ಯಾನ್ಸಲ್ ಆಗುತ್ತಿತ್ತು! ಅಪ್ಪನ ಆರೋಗ್ಯದ ಕಾರಣದಿಂದಾಗಿ ಅವರು ಟಾಕೀಜಿಗೆ ಬಂದು ಸಿನಿಮಾ ನೋಡಲು ಸಾಧ್ಯವಿರಲಿಲ್ಲ.ತಮ್ಮ ತಂಗಿಯರಿನ್ನೂ ಚಿಕ್ಕವರು. ಆಗ ಅಮ್ಮನೊಡನೆ ನಾನು ಸಿನಿಮಾಗೆ ಹೋಗದಿರಲು ಕಾರಣವಾಗುತಿದ್ದುದು, ಸಿನಿಮಾದಲ್ಲಿ ಹೀರೊ ಹಿರೋಯಿನ್ ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಯಿಂದ ಮಾತಾಡಿಸುವುದಷ್ಟೇ ಅಲ್ಲ ಆಕೆಯನ್ನು ತಬ್ಬಿಕೊಳ್ಳುತ್ತನೆ ಸಹ! ಅದನ್ನು ಅಮ್ಮನ ಜೊತೆ ಕೂತು ನೋಡಲು ಸಾವಿನಂಥ ಮುಜುಗರ…. ಆ ಕಾರಣಕ್ಕೆ ನಿರಾಕರಿಸುತ್ತಿದ್ದೆ. ಅಮ್ಮನ ಮುಖ ಚಿಕ್ಕದಾಗುವುದನ್ನು ಕಂಡು ನೊಂದುಕೊಳ್ಳಿತ್ತಿದ್ದೆ, ಆದರೆ ಅವಳ ಜೊತೆ ಬರಲಾಗದ ಕಾರಣ ಇದು ಎಂದು ಹೇಳುವುದಾದರೂ ಹೇಗೆ??! ವರ್ಷಕ್ಕೆ ಒಂದೆರಡು ಸಿನಿಮಾ ನೋಡುತಿದ್ದ ನಾನು, ನನ್ನಿಂದಾಗಿ ಅಮ್ಮ ವರ್ಷಾನುಗಟ್ಟಲೇ ಸಿನಿಮಾ ನೋಡದಂತೆ ಮಾಡಿದ ನೋವು ಇವತ್ತಿಗೂ ಚಿಟುಗು ಮುಳ್ಳಿನಂತೆ ಆಗಾಗ ಅಳುಕುತ್ತಲೇ ಇರುತ್ತದೆ ಮನಸಲ್ಲಿ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: