ಸಂಪು ಕಾಲಂ : ಲೋಕದೊಳಿತಿಗೆ ನಿನ್ನ ಕಾಣ್ಕೆ ಏನು?!

ಬೆಳಗಾದರೆ ಮನೆ ಮಂದಿಯನ್ನೂ ಸರಿಯಾಗಿ ಮಾತನಾಡದೆ, ಕೆಟ್ಟೆನೋ ಜೀವವೇ ಎಂದು ಹಾರಿ ಆಫೀಸಿಗೆ ಸೇರುವುದು. ಅಲ್ಲಿ ಜರುಗುವ ಎಲ್ಲ ರೀತಿಯ ‘ಅಂದರ ಬಾಹರ್’ ಗಳನ್ನೂ ಅರಿಯುವುದು, ಪ್ರಯತ್ನ ಪೂರ್ವಕವಾಗಿ ಸಹಿಸಿಬಿಡುವುದು, ಇದು ನಮ್ಮಲ್ಲಿ ಸಾಕಷ್ಟು ಮಂದಿ ಅನುಭವಿಸಿರಬಹುದಾದಂತಹ ನಿತ್ಯಕರ್ಮ.
ಇಂದಿನ ಜೀವನ ಶೈಲಿ, ಒಬ್ಬರ ಮೇಲೆ ಒಬ್ಬರು ನಿಲ್ಲುವ ತವಕದ ಪೈಪೋಟಿಗಳು, ತಾವೇ ಮುಂಬರಬೇಕು ಎಂಬ ಸಂಕುಚಿತ ಮನೋಭಾವಗಳು ನಮ್ಮ ಕೆಲಸದ ಸ್ಥಳವನ್ನು ಒಮ್ಮೊಮ್ಮೆ ಚದುರಂಗವಾಗಿ,
ರಣರಂಗವಾಗಿ ಮಾರ್ಪಡಿಸಿ ಬಿಡುತ್ತದೆ.
ಸೆಣಸಾಡಿ ಗೆದ್ದವರಿಗೆ ಫಲ. ಆ ದೊಡ್ಡ ಫಲವೋ, ತಮ್ಮ ತುಂಬಿದ ಜೇಬಿನ ಜೊತೆಗೆ ಟೇಬಲ್ಗಳ ಮೇಲೆ ಮಿರುಗುವ ಒಂದು ಲೋಹವಾಗಿಯಷ್ಟೇ ಸೀಮಿತಗೊಳ್ಳುತ್ತದೆಯೇ ಹೊರತು ಅದಕ್ಕೂ ಮಿಗಿಲಾದ ಬೆಲೆ, ಪ್ರಾಧಾನ್ಯ ಪಡೆಯುವುದಿಲ್ಲ.
ಇತರರ ಡೆಸ್ಕುಗಳ ಮೇಲೆ ತಮ್ಮ ಕಿವಿ ಹರಿದು ಚೆಲ್ಲಿರುವ ಕೆಲವರಿಗೆ ತಮ್ಮ ಜೀವನಕ್ಕಿಂತ ಇತರರ ಜೀವನದ ಆಗು ಹೋಗುಗಳು ಸುಖ. ‘ಸಾರಿ’, ‘ಥ್ಯಾಂಕ್ಸ್’ ಎಂಬ ನಯವಂಚಕ ಪದಗಳಿಂದಲೇ ಬ್ರಿಟಿಷ್ ಅಧಿಕಾರಶಾಹಿಗಳು ನಮ್ಮನ್ನು ಮುಗ್ಗರಿಸಿ ನೆಲಕ್ಕುರುಳಿಸಿದಂತೆ,
ಅಲ್ಲಲ್ಲಿ ಕಾಣುವ ಅಧಿಕಾರಶಾಹೀ
‘ವಿನಮ್ರ ನಗೆಗಳು’, ತಮ್ಮ ಮಹತ್ವವಾದ ಟೈಯನ್ನು ಉಪಯೋಗಿಸಿ ಬೇರೆಯವರ ಕುತ್ತಿಗೆ ಬಿಗಿಯುವ ಪಂಚಾಯಿತಿ ನ್ಯಾಯಗಳು, ಮೂರನೆಯವರಿಗೆ ತಿಳಿಯದಂತೆ ಜಗಜ್ಜಾಹೀರಾದ ಕೆಲ (ಅ)ಪ್ರಣಯ ಪ್ರಸಂಗಗಳು, ಇವೆಲ್ಲವುಗಳಿಂದ ಬೇಸತ್ತ ಕೆಳದರ್ಜೆ ಕೆಲಸಗಾರರಿಗೆ ತಾವು ಮಾಡದ ತಪ್ಪಿಗೆ ಸಿಗುವ ಕೆಂಪು ಚೀಟಿಗಳು (ಕೆಲಸದಿಂದ ಕೊಕ್). ಈ ರೀತಿ ನಮ್ಮ ಮೈಮೇಲೆ ಒಂದು ಕೃತಕ ಪೊರೆಯನ್ನು ಹೊರುವ ಆಂತರಿಕ ಬೇಜವಾಬ್ದಾರಿತನವನ್ನು ಸೃಷ್ಟಿಸುತ್ತದೆ ಇಂದಿನ ಅನಗತ್ಯವಾದರೂ ನಾವಾಗಿಯೇ ಅಗತ್ಯವಾಗಿಸಿಕೊಂಡಿರುವ ಕೆಲ(ಸದ)
ಕಟ್ಟು ಪಾಡುಗಳು.
ಇದಕ್ಕೆ ಇಂತಹ ಸ್ಥಳ ಎಂದು ಹೆಸರಿಸಬೇಕಿಲ್ಲ, ಇವು ಇಂದಿನ ಸುಮಾರು ಎಲ್ಲ ಕಚೇರಿಗಳಲ್ಲಿಯೂ ನಡೆಯುವ ಕೆಲವು ಸಾಫ್ಟ್ ಪಾತಕಗಳು. ನಮ್ಮಲ್ಲಿ ಎಲ್ಲರೂ ಈ ಇಂತಹ ಅನುಭೂತಿಯನ್ನು ಪಡೆದೇ ಇರುತ್ತೇವೆ. ಇದೇ ರೀತಿ ಇತ್ತೀಚಿಗೆ ಒಂದು ಅಯಿಷ್ಟ ಸಂದರ್ಭವನ್ನು ಕಂಡು ಮನ ನೊಂದಿತ್ತು. ಅನೀತಿ ಜರುಗುತ್ತಿದ್ದರೂ ಅಸಹಾಯಕತೆಯ ಅಳಲು ತೇಲುತ್ತಿದ್ದುದು ಹೆಚ್ಚು ಕಾಡಿತ್ತು. ಕಾಕತಾಳೀಯವೆಂಬಂತೆ ಅದೇ ಸಂಜೆ ನನಗೆ ತಿಳಿದು ಬಂದ ಎರಡು ಸಂಗತಿಗಳು ನನ್ನ ವೃತ್ತಿಜೀವನಕ್ಕೆ ಸಂಬಂಧ ಪಟ್ಟ ಕೆಲ ದೃಷ್ಟಿಕೋನಗಳನ್ನು ತಿದ್ದಿತ್ತು ಎಂದರೆ ತಪ್ಪಾಗಲಾರದು.
ಮೊದಲನೆಯದು, ಜಪಾನೀಸ್ ಏರ್ಲೈನ್ಸ್ ನ ಪ್ರಧಾನ ಆಡಳಿತಾಧಿಕಾರಿಯ ಬಗ್ಗೆ. ಎರಡನೆಯದು,
ಮತ್ತೂ ಮೈ ನವಿರೇಳಿಸುವ ದಶರಥ ಮಂಜಿ ಅವರ ಒಂದು ರೋಚಕ ಜೀವನ ಚರಿತ್ರೆ.
ಆತ ಜಪಾನೀಸ್ ಏರ್ಲೈನ್ಸ್ ಎಂಬ ಬಹು ದೊಡ್ಡ ಕಂಪನಿ ಮಾಲೀಕ, ಹಿರಿಯ ಆಡಳಿತಾಧಿಕಾರಿ ಹರುಕ ನಿಶಿಮಾತ್ಸು, ಇಂದಿಗೂ ಆತನ ಓಡಾಟ ಸಾರ್ವಜನಿಕ ಸಾರಿಗೆಯ ಮೂಲಕ. ಕಚೇರಿಯಲ್ಲಿ ಎಲ್ಲರಿಗಿಂದಲೂ ಮೊದಲು ಬರುವ ಈತ, ಇತರ ಸಾಮಾನ್ಯ ನೌಕರರೊಡನೆ ಕುಳಿತುಕೊಳ್ಳುತ್ತಾರೆ. ಊಟಕ್ಕೆ ಎಲ್ಲರೊಡನೆ ಕ್ಯೂ ನಲ್ಲಿ ಸಾಲಾಗಿ ನಿಂತು, ಕಾದು ಆಹಾರ ಕೊಳ್ಳುತ್ತಾರೆ. ಒಬ್ಬ ಪೈಲೆಟ್ ಗೆ ದೊರೆಯಬಹುದಾದ ತಿಂಗಳ ಸಂಬಳಕ್ಕಿಂತಲೂ ಕಡಿಮೆ ತೆಗೆದುಕೊಳ್ಳುತ್ತಾರೆ ಮತ್ತು ಆಪತ್ಕಾಲ ಬಂದಾಗ ಅವರ ಎಲ್ಲಾ ಇತರ ಸೌಲಭ್ಯಗಳನ್ನೂ ಮಾಫ್ ಮಾಡಿಬಿಟ್ಟಿದ್ದಾರೆ. ಇದು ಕಾರ್ಪೊರೇಟ್ ಜಗತ್ತಿನಲ್ಲಿ ಒಂದು ಅದ್ಭುತವೇ ಸರಿ! ಸಮಯ ಸಿಕ್ಕರೇ ತುಳಿಯಲು, ದೋಚಲು ಮುಂದಾಗಿ ಮುಂದಾಳತ್ವ ವಹಿಸಿರುವ ಜಗತ್ತಿನ ಇಂತಹ ಸಂದರ್ಭದಲ್ಲಿ,
ಈ ರೀತಿಯ ಅಧಿಕಾರದ ಎಲ್ಲಾ ದುರುಪಯೋಗ ಪಡೆಯಬಲ್ಲ ಸಾಮರ್ಥ್ಯವಿರುವ ಒಬ್ಬ ವ್ಯಕ್ತಿ ಇಷ್ಟು ಸರಳವಾಗಿ ಇರಬಲ್ಲ ಎಂದರೆ, ‘ತುಂಬಿದ ಕೊಡ’ ಎನ್ನುವುದು ಇದಕ್ಕೆ ಇರಬಹುದಲ್ಲವೇ?
ಬಿಡಿ ಅದು ಒಂದು ಸ್ವಲ್ಪ ಮಡಿವಂತಿಕೆಯ, ವೈಟ್ ಕಾಲರ್ ನ ವಿಶೇಷತೆ. ಅದು ನಿಜಕ್ಕೂ ಒಳ್ಳೆಯ ವಿಚಾರವೇ ಆಗಿದ್ದರೂ, ಆತನ ಹೊಟ್ಟೆ ತುಂಬಿತ್ತು ಆದ್ದರಿಂದ ಹೀಗೆ ನಡೆದುಕೊಂಡಿರಬಹುದು. ಆದರೆ, ಈ ಎರಡನೆಯ ಕಥೆ ಕೇಳಿ: ದಶರಥ ಮಂಜಿ ಎಂಬ ತೀರಾ ಸಾಧಾರಣ, ಬಡ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿ. ಬಿಹಾರದ ಗಯಾದ ಬಳಿ ಇರುವ ಒಂದು ಬೆಟ್ಟಗಾಡಿನಲ್ಲಿ ಈತನ ವಾಸ. ಆತನ ಹೆಂಡತಿ ಫಾಲ್ಗುಣಿ ದೇವಿ ಖಾಯಿಲೆ ಬಿದ್ದು, ಹತ್ತಿರದ ಡಾಕ್ಟರ್ ಎಂದರೂ ಎಪ್ಪತ್ತು ಕಿಲೋಮೀಟರ್ ಇದ್ದು, ಹೋಗಲಾಗದೆ ಪ್ರಾಣ ಕಳೆದುಕೊಂಡಳು. ತನ್ನ ಹೆಂಡತಿಗೆ ಜರುಗಿದ ಈ ಅನ್ಯಾಯ ಇತರರಿಗೆ ಆಗಬಾರದು ಎಂದು ಬಗೆದ ದಶರಥ, ಒಂದು ಪಣ ತೊಟ್ಟು ಇಪ್ಪತ್ತೆರಡು ವರ್ಷಗಳ ಕಾಲ ಹಗಲು ರಾತ್ರಿ ದುಡಿದು, ದೊಡ್ಡ ಬೆಟ್ಟವನ್ನು ತಾನೊಬ್ಬನೇ ಕೊರೆದು ಎಪ್ಪತ್ತು ಕಿಲೋಮೀಟರ್ ಇರುವ ದೂರವನ್ನು ಒಂದು ಕಿಲೋಮೀಟರ್ ಗೆ ಇಳಿಸಿದ್ದ. ಈ ವಿಷಯವನ್ನು ಕೇಳಿದ ತಕ್ಷಣ ನಾನು ಸ್ಥಬ್ದಳಾಗಿದ್ದೆ!
ನಿಶಿಮಾತ್ಸು ನ ಕಾರ್ಯ ತತ್ಪರತೆ, ನಿಸ್ವಾರ್ಥ,
ಸರಳ ಜೀವನ, ದಶರಥನ ಛಲ, ಕೆಲಸದ ಬಗೆಗಿನ ಶ್ರಧ್ಧೆ, ಇತರರಿಗೆ ಈ ಪರಿಸ್ಥಿತಿ ಆಗಬಾರದು ಎಂಬ ಸಾಮಾಜಿಕ ಕಳಕಳಿ, ಇವೆಲ್ಲವೂ ನಮಗೆ ಪಾಠವಾಗಬೇಕು.
ಈ ರೀತಿಯ ನಿಷ್ಠಾವಂತ ನಡವಳಿಕೆ, ಕೆಲಸದ-ಜೀವನದ ಬಗೆಗಿನ ಮೌಲ್ಯಗಳನ್ನು ಮೊಟ್ಟ ಮೊದಲಿಗೆ ನಾವು ಅಳವಡಿಸಿಕೊಳ್ಳಬೇಕು. ನಂತರವೇ ನಮಗೆ ಬೇರೆಯವರ ಮೇಲೆ ಬೆರಳು ತೋರುವ ಅಧಿಕಾರವಾಗಲೀ, ಈ ಬೆರಳು ತೋರಿಕೆಯ ಹುನ್ನಾರದಲ್ಲಿ ನಾನು ತುಂಬಾ ಸರಿ ಎಂದು ಬೆನ್ನು ತಟ್ಟಿಕೊಳ್ಳುವುದಾಗಲೀ ಸಾಧ್ಯವಾಗುತ್ತದೆ ಎನಿಸಿತ್ತು.
ನನ್ನ ತಂದೆ ಪಾಠ ಮಾಡಿದ್ದ, ಬಿ ಟಿ ಲಲಿತಾ ನಾಯಕರ ಈ ಸಾಲುಗಳು ನೆನಪಿಗೆ ಬಂದವು:
ನಾ ಮೇಲಿನವನು ಬಲು ದೊಡ್ಡವನು ಎಂದು
ಮೆರೆದಾಡ ಬೇಡ ಗೆಳೆಯ
ನಿನಗಿಂತ ಮಿಗಿಲವರು ಇದ್ದಾರೋ ಭುವಿಯಲ್ಲಿ
ಸುಳ್ಳು ಭ್ರಮೆಯಲಿ ನೀ ಮುಳುಗಬೇಡ

‍ಲೇಖಕರು avadhi-sandhyarani

February 8, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Gopaal Wajapeyi

    ದಶರಥ ಮಂಜಿಯ ಬಗೆ ಓದಿದ್ದೆ. ಎಂಥಾ ಆದರ್ಶ ಆತನದು…! ಎಷ್ಟು ಉದಾತ್ತ-ಉದಾರ ವಿಚಾರ…! ಇಂಥವರು ಅಲ್ಲಲ್ಲಿ ನಮ್ಮ ಸುತ್ತಮುತ್ತಲೇ ಸದ್ದಿಲ್ಲದೆ ಸೇವೆ ಮಾಡುತ್ತಿದ್ದಾರೆ. ಚಿಕ್ಕಂದಿನಲ್ಲಿ ನಮಗೊಂದು ಪಾಠವಿತ್ತು. ಒಬ್ಬ ಹೆಳವನ ಸೇವೆಯ ಕುರಿತಾದದ್ದು. ಆತ ತನ್ನ ವೈಕಲ್ಯದ ದುಃಖವನ್ನು ಮರೆಯಲು, ವೈಕಲ್ಯವನ್ನು ಮೆಟ್ಟಿ ನಿಲ್ಲಲು ಆಯ್ದುಕೊಂಡ ಮಾರ್ಗ ಪಾಳಾ-ಬದಾಮ ರಸ್ತೆಯ (ಇದು ಹಾವೇರಿಯಿಂದ ಬದಾಮಿಯವರೆಗೂ ಸಾಗುವ ರಸ್ತೆ) ಎಡಬಲಕ್ಕೆ ಉದ್ದಕ್ಕೂ ಸಸಿಗಳನ್ನು ನಡುತ್ತ ಸಾಗಿದ್ದು. ಮತ್ತು ಅವುಗಳಿಗೆ ನೀರುಣಿಸಿ ಬೆಳೆಸಿದ್ದು. ಪ್ರಯಾಣಿಕರಿಗೆ ಬಿಸಿಲು ಬಾಧಿಸದಿರಲಿ ಎಂಬ ಆತನ ಕಾಳಜಿ ಮೆಚ್ಚುವಂಥದ್ದು. ಆ ಮೇಲೆ ಯಾವುದೇ ಊರಿಗೆ ಬಸ್ಸಿನಲ್ಲಿ ಹೋಗುತ್ತಿರುವಾಗಲೂ ಇಕ್ಕೆಲಗಳಲ್ಲಿ ಕಾಣುವ ಮರಗಳನ್ನು ಕಂಡಾಗ ನನಗೆ ಅಲ್ಲಿ ಒಬ್ಬ ಹೇಳವನೆ ಕಾಣುತ್ತಿದ್ದ…
    ಬಹುಶಃ ಆತ ನಮ್ಮ ಸಾಲುಮರದ ತಿಮ್ಮಕ್ಕನ ತಾತನೋ ಮುತ್ತಾತನೋ ಆಗಿರಬೇಕು…
    ಇಂಥವರ ಬಗ್ಗೆ ಓದಿದಾಗೆಲ್ಲ ನಾವು ಎಲ್ಲಿದ್ದೇವೆ ಏನಾಗಿದ್ದೇವೆ ಎಂಬ ಕುರಿತು ಚಿಂತನೆ ನಡೆಸುವಂತಾಗುತ್ತದೆ… ನಿಮ್ಮ ಈ ಲೇಖನ ಆ ಚಿಂತನೆಗೆ ಮತ್ತೆ ಕಾರಣವಾಗಿದೆ.

    ಪ್ರತಿಕ್ರಿಯೆ
  2. M.S.Prasad

    ಆವಿಯಂತೆ ಸುತ್ತುತ್ತಾ,
    ಬೆಂಕಿಯಂತೆ ನರ್ತಿಸುತ್ತಾ,
    ನೀರಿನಂತೆ ನುಸುಳುತ್ತಾ,
    ಭೂಮಿಯಂತೆ ಸವೆಯುತ್ತಾ,
    ಆಗಸದಂತೆ ತೋರುತ್ತಾ,
    ಮಾನವರಂತೆ ಕಂಡರೂ
    ಮನುಷ್ಯರಾಗದೆ ಬದುಕೆ ಬಿಡುತ್ತೇವೆ,
    ಸಮಯದ ಬೊಂಬೆಗಳಾಗಿ…..

    ಪ್ರತಿಕ್ರಿಯೆ
  3. sumathi

    ತಾಳ್ಮೆ,ಅರ್ಥೈಸಿಕೊಳ್ಳುವಿಕೆ,ಕಷ್ಟಸಹಿಷ್ಣುತೆ ಮುಖ್ಯ,ಹೌದು. ಒಳ್ಳೆಯ ವಿಚಾರ,ಸ೦ಯುಕ್ತಾ.

    ಪ್ರತಿಕ್ರಿಯೆ
  4. Jayalaxmi Patil

    ಅದೇನೋ ಗೊತ್ತಿಲ್ಲ, ತುಂಬಾ ಜನ ಮೋಸ ಮಾಡ್ಕೊಂಡು ಬದುಕಿದ್ರೇನೆ ಬದುಕು/ಬದುಕೋಕೆ ಸಾಧ್ಯ ಅನ್ಕೊಂಡಿರ್ತಾರೆ! ಹಾಗನ್ಕೊಂಡು ಜಗತ್ತನ್ನ ಮೋಸಗೊಳಿಸೋಕೆ ನೋಡ್ತಾ,ಇನ್ನೊಬ್ಬರನ್ನ ನೋಯಿಸ್ತಾ, ಇರೋ ಒಂದು ತಮ್ಮ ಜನ್ಮಕ್ಕೆ ತಾವೇ ಮೋಸ ಮಾಡ್ಕೊಳ್ತಾರೆ. ಹರುಕ ನಿಶಿಮಾತ್ಸು ಮತ್ತು ದಶರಥ ಮಂಜಿ, ಇವರಿಬ್ಬರ ಬಗ್ಗೆ ಈ ಮೊದಲೂ ಓದಿದ್ದೆನಾದರೂ ಈ ಲೇಖನದ ಮೂಲಕ ಮತ್ತೊಮ್ಮೆ ನೆನಪಿಸಿಕೊಳ್ಳುವಂತೆ ಮಾಡಿದ್ದಕ್ಕೆ ಥ್ಯಾಂಕ್ಸ್ ಸಂಯುಕ್ತಾ.

    ಪ್ರತಿಕ್ರಿಯೆ
  5. Ahalya Ballal

    ವಾಸ್ತವದ ಭಾಗವೇ ಆಗಿರುವ ಇಂತಹ ಘಟನೆ/ವ್ಯಕ್ತಿಗಳನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು. ಇನ್ನಷ್ಟು ಇಂತಹ ಬರಹಗಳು ನಮಗೆ ಸಿಗುವಂತಾಗಲಿ!

    ಪ್ರತಿಕ್ರಿಯೆ
  6. Raghunandan K

    ದಶರಥ ಮಾಂಜಿ ಕಾಯಕಕ್ಕೂ ಪ್ರೇಮಕ್ಕೂ ಮಾದರಿಯಾಗಿ ನಿಲ್ಲುತ್ತಾರಲ್ಲವೇ…
    ನನ್ನ ಬರಹವೊಂದಕ್ಕೆ ಇವರ ಬದುಕು ಸ್ಪೂರ್ತಿಯಾಗಿತ್ತು, ಬರಹದ ಲಿಂಕ್ – http://samudrateera.blogspot.in/2012_09_01_archive.html
    ಕಾಯಕದಲ್ಲಿದ್ದೇ ಕಾಯಕದಾಚೆ ಬೆಳೆವ ಎಲ್ಲರಿಗೂ ಇಂತಹ ಕಥೆಗಳು ಸ್ಪೂರ್ತಿಯಾಗಲಿ…
    Nice Article.

    ಪ್ರತಿಕ್ರಿಯೆ
  7. Pramod

    ಮ೦ಜಿ ನ್ಯಾಷನಲ್ ಹೀರೋ.
    ನಮ್ಮ ಕಾಲೇಜು ಪ್ರಾ೦ಶುಪಾಲರು ಹೇಳುತ್ತಿದ್ದ ಮಾತು. “We have decreased distance between Man and Moon, But we have increase distance between Man and Man”. ಎಷ್ಟು ಸತ್ಯ.
    ಇ೦ತಹ ಲೇಖನ ಜಾಸ್ತಿ ಬರಲಿ. ಒಳ್ಳೆಯ ಕೆಲಸಗಳು, ಸುದ್ದಿಗಳು ಎಲ್ಲಾ ಕಡೆ ಹರಡಲಿ. ಒಳ್ಳೆಯ ಕೆಲಸ ಮಾಡಲು ಎಲ್ಲರನ್ನೂ ಪ್ರೇರೇಪಿಸಲಿ 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: