ಸಂಪು ಕಾಲಂ : ಪೆಹಲಾ ನಶಾ ಮತ್ತು ಸಿಂಗಾಪುರ!

ಮೊದಲ ಮಳೆ, ಮೊದಲ ಪ್ರೇಮ, ಮಗುವಿನ ಮೊದಲ ತಪ್ಪು ಹೆಜ್ಜೆ; ಈ ರೀತಿ ಎಲ್ಲಾ ಮೊದಲ ಅನುಭವಗಳೂ ರೋಮಾಂಚನ ಮತ್ತು ಸುಮಧುರ. ಈ ರೀತಿ ಅನುಭವ ಮತ್ತು ಅದರ ಅನುಭೂತಿ ಖಂಡಿತ ನಮ್ಮ ಜೀವನದಲ್ಲಿ ಒಂದು ವಿಶೇಷ. ಇದು ‘ವಿಶೇಷ’ ಎನಿಸಿಕೊಳ್ಳುವುದು ಬಹುಷಃ ಮನುಷ್ಯನ ‘ಹೊಸದನ್ನು ಕಲಿಯುವ ತಿಣುಕಾಟ’, ‘ಆ ಕೌತುಕದಲ್ಲಿ ಯಾವುದನ್ನೋ ಅರಿಯುವ ಹುಡುಕಾಟ’ ಇತ್ಯಾದಿ ಸಿದ್ಧ ಸ್ವಭಾವಗಳಿಂದಲೇ ಇರಬಹುದು. ನಮ್ಮ ತಿಳಿವಿನ ಪರಿಧಿಯೊಳಗೆ ಸುಳಿಯದ ಯಾವ ವಿಚಾರವೇ ಆಗಲಿ, ನಮ್ಮಲ್ಲಿ ಒಂದು ಕುತೂಹಲವನ್ನು ಕೆರಳಿಸುತ್ತದೆ. ಈ ಕುತೂಹಲ ನಮ್ಮ ಚೈತನ್ಯವನ್ನು ಹೊಸತರ ಆಕರ್ಷಣೆಗೆ, ಕಲಿಕೆಗೆ ಅಣಿಮಾಡುತ್ತದೆ. ಈ ರೀತಿ ನನ್ನ ಜೀವನದಲ್ಲೂ ಆದ ಅನೇಕ ವಿಶೇಷ ಮೊದಲ ಅನುಭವಗಳಲ್ಲಿ ಇದೂ ಒಂದು. ಕಂಡದ್ದು, ಕಣ್ಣರಳಿಸಿದ್ದು, ಕಲಿತದ್ದು ಸಾಕಷ್ಟು, ಅವುಗಳಲ್ಲಿ ಈಗ ನಿಮ್ಮೊಡನೆ ಒಂದಷ್ಟು:
ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಮೊದಲ ಸಿಹಿ, ಹಿತವಾದ ಅಪಘಾತ ನನ್ನೊಡನೆಯೂ ಆಯಿತು. ಇನ್ ಅದರ್ ವರ್ಡ್ಸ್, ಮದುವೆಯಾಯಿತು. ಒಂದಷ್ಟು ಸಂಭ್ರಮ, ಒಂದಷ್ಟು ತಲ್ಲಣಗಳೊಂದಿಗೆ ಭರ್ಜರಿಯಾಗಿಯೇ ಪ್ರಾರಂಭವಾಯಿತು ಸಂಸಾರದ ಝಲಕ್. “ಉರುಳುವವು ಗಳಿಗೆಗಳು ಹೊರಳುವವು ದಿವಸಗಳು” ಎಂಬಂತೆ, ಮದುವೆಯಾಗಿ, ಗಂಡನ ಹೆಸರ ಕಾಗುಣಿತ ಸಂಪೂರ್ಣ ಬರೆದಿಲ್ಲ ಆಗಲೇ ಗೋಡೆಯ ಕ್ಯಾಲೆಂಡರ್ ಬದಲಾಗಿ ಹೋಯಿತು! ಆ ಸಮಯದಲ್ಲಿ ನನ್ನ ಜೀವನದಲ್ಲಿ ಉಂಟಾದ ಅನೇಕ ದಿವ್ಯ ಮತ್ತು ದಿಢೀರ್ ಬದಲಾವಣೆಗಳೊಂದಿಗೆ ನನ್ನ ಮುಂದೆ ಬಂದು ನಿಂತದ್ದು ಸಿಂಗಪೂರ್ ಪ್ರಯಾಣ. ಅದು ನನಗೆ ಮೊದಲನೇ ವಿದೇಶ ಪ್ರವಾಸ ಹಾಗೂ ಮೊದಲನೇ ವಿಮಾನ ಪ್ರಯಾಣವೂ ಆಗಿದ್ದದ್ದು ಡಬಲ್ ವಿಶೇಷ. ಆಗ ಇನ್ನೂ ಕಷ್ಟಪಟ್ಟೆ ನನ್ನನ್ನು ಅರಿಯಲು ಪ್ರಯತ್ನಿಸುತ್ತಿದ್ದ ನನ್ನ ಕೈಹಿಡಿದವನಿಗೆ ಮತ್ತಷ್ಟು ಹಿಗ್ಗು.
ಆ ಮೊದಲ ವಿಮಾನ ಯಾನ, ಹೊಸ ದೇಶ, ಭಾಷೆಗಳ ಅವಲೋಕನದಲ್ಲಿ ಮೌನವಾಗಿಯೇ ಮೆರೆದಿದ್ದ ಆ ದಿನಗಳು, ಒಂದು ಷೋ ಕೇಸ್ ಗಾಜಿನ ಹಿಂದಿನ ವಸ್ತುವನ್ನು ಗಮನಿಸುವಷ್ಟೇ ಕಾಳಜಿಯಿಂದ ಇಡೀ ಪ್ರಯಾಣವನ್ನು ಕಣ್ಮನವರಳಿಸಿ ಮನದ ಪುಟಗಳಲ್ಲಿ ದಾಖಲಿಸಿದ್ದು, ನಡುನಡುವೆ ಭಾವನೆಗಳ ಬೆಸೆಯುವಿಕೆಯ ರೂಪಾಂತರಿಕೆಯಲ್ಲಿ ಜರುಗಿದ ಹುಸಿ ಮುನಿಸು ಅಲಿಯಾಸ್ ಘೋರ ಕಾದಾಟಗಳು, ಇತ್ಯಾದಿಯವು ಇಂದಿನ ನೆನಪಿನ ಆಲ್ಬಮ್ಮು.
ಸಾಕಷ್ಟು “ಮಾಡು/ಬೇಡ”ಗಳೊಂದಿಗೆ ಮತ್ತಷ್ಟು ಕನಸುಗಳ ಪ್ಯಾಕ್ ಮಾಡಿಕೊಂಡು ಹೊರಟದ್ದು ಮಧ್ಯರಾತ್ರಿ. ವಿಮಾನದ ವೈಭವ ಸೀಟಿನಲ್ಲಿ ಆಸೀನಳಾಗಿ ಗಗನಸಖಿಯನ್ನೂ, ಆಕೆಯ ಮೇಲೆ ಕಣ್ಣಾಡಿಸಿದ್ದ ಅನೇಕ ಸಖರನ್ನೂ ಒಮ್ಮೆ ಗಮನಿಸಿ, ಕತ್ತಲ ಕಿಟಕಿ ಕಂಡು ಪೇಚಾಗಿ ಕೂತೆ. ಕೆಲ ಮಕ್ಕಳ ಕೇಕೆಗಳೂ, ಟರ್ಬ್ಯುಲೆನ್ಸ್ ನ ಕಂಪನಗಳು ಅಲಾರಂ ಆಗಿ ಜಡಾಯಿಸಿದ್ದರೂ, ಒಂದಷ್ಟು ಜೋಂಪು ಹಾಯಾಗೇ ಮೈ ಆವರಿಸಿತ್ತು. ಬೆಳ್ಳಂಬೆಳಗ್ಗೆ ಥಟ್ಟನೆ ಎಚ್ಚರವಾಗಿ ಕಣ್ಣು ಬಿಟ್ಟರೆ ಕಾದಿತ್ತು ಆಶ್ಚರ್ಯ. ಕಿಟಕಿಯ ಹೊರಗೆ ಅದೊಂದು ವಿಸ್ಮಯ ಮಾಯಾಲೋಕವೇ ಸೃಷ್ಟಿಯಾಗಿತ್ತು. ದೈತ್ಯಾಕಾರದ ದೊಡ್ಡ ದೊಡ್ಡ ಕಟ್ಟಡಗಳೂ ಸಹ ಕಂಡೂ ಕಾಣದಂತೆ, ಪುಟ್ಟ ಬೆಂಕಿ ಪೆಟ್ಟಿಗೆಗಳಂತೆ ಕಂಡಿದ್ದವು. ಮೋಡಗಳ ಮೇಲಕ್ಕೇ ಹಾರಿ ಮರೆಯಾಗಿದ್ದ ಆ ವಿಮಾನದಲ್ಲಿ ಅಂದು ನಾನು ನಿಜಕ್ಕೂ ‘ಕ್ಲೌಡ್ ನೈನ್’ ನಲ್ಲೇ ಇದ್ದೆ.
ಸಿಂಗಾಪೂರ ಒಂದು ದ್ವೀಪ ದೇಶ. ಇದರಲ್ಲಿ ಹೆಚ್ಚು ಕಡಿಮೆ ಅರವತ್ತಮೂರು ಪುಟ್ಟ ಪುಟ್ಟ ದ್ವೀಪಗಳಿವೆ. ಸುತ್ತಲೂ ನೀರು ಆವರಿಸಿ, ಅಲ್ಲಲ್ಲಿ ಜಹಜುಗಳು ದೀಪಗಳಂತೆ ಮಿನುಗುತ್ತಾ, ಕತ್ತಲು ಬೆಳಕಿನ ಮಂಜಿನಲ್ಲಿ ಕಂಡ ಊರಿನ ದೃಶ್ಯ ರಮಣೀಯವಾಗಿತ್ತು. ಅಂತೂ ಇಂತೂ ಸೇರಿದ್ದಾಯ್ತು ಸಿಂಗಾಪೂರ. ನಮ್ಮ ಮನೆಯವರೇ ಅಲ್ಲಿದ್ದದ್ದರಿಂದ, ಅವರಲ್ಲಿಯೇ ನಮ್ಮ ಬಿಡಾರ. ಅವರ ಮನೆಯತ್ತ ಸಾಗಿದ ನನಗೆ ದಾರಿಯಲ್ಲಿ ಮೊಟ್ಟ ಮೊದಲು ಕಂಡದ್ದು, ಮತ್ತು ಅದು ಪ್ರಯಾಣದ ಎಲ್ಲಾ ದಿನಗಳಲ್ಲೂ ಒಂದು ಕಾಮನ್ ಫ್ಯಾಕ್ಟರ್ ಆಗಿ ಉಳಿದದ್ದು ಅಲ್ಲಿನ ಅಚ್ಚುಕಟ್ಟುತನ. ಜನರಾಗಲಿ, ರಸ್ತೆಯಾಗಲೀ, ಕಟ್ಟಡ-ಮನೆಗಳಾಗಲೀ ಎಲ್ಲವೂ ಶುಭ್ರತೆ ಮತ್ತು ಅಚ್ಚುಕಟ್ಟುತನವನ್ನು ಸಾರುತ್ತಿತ್ತು. ಹೆಜ್ಜೆ ಹೆಜ್ಜೆಗೂ ಕಂಡುಬರುವ ನಿಯಮ-ನಿಬಂಧನೆಗಳು ಮತ್ತು ಅವನ್ನು ಮೀರಿದರೆ ಜರುಗುವ ಅನಾಹುತಗಳು ಇದಕ್ಕೆ ಮುಖ್ಯ ಕಾರಣವಾಗಿರಬೇಕು.
ಅಲ್ಲಿ ನನ್ನ ಗಮನ ಸೆಳೆದ ಮತ್ತೊಂದು ಮುಖ್ಯ ಅಂಶವೆಂದರೆ ಸಾರಿಗೆ ವ್ಯವಸ್ಥೆ. ಜಗತ್ತಿನ ಉತ್ತಮ ಸಾರಿಗೆ ವ್ಯವಸ್ಥೆಗಳಲ್ಲಿ ಸಿಂಗಪೂರವೂ ಹೆಸರುವಾಸಿ ಎಂದು ಕೇಳಿದ್ದೆ. ಆದರೆ ಕಣ್ಣಾರೆ ಕಂಡು ಚಕಿತಳಾದೆ. ಅಲ್ಲಿ ಪಾದಚಾರಿಗಳಿಗೆ ಮೊದಲ ಆದ್ಯತೆ. ಪಾದಚಾರಿಗಳು ರಸ್ತೆ ದಾಟಬೇಕು ಎಂಬುದನ್ನು ಸೂಚಿಸಲು ಒಂದು ಗುಂಡಿ ಒತ್ತಿದರೆ ಸಾಕು, ಅಲ್ಲಿ ಕಾಣಸಿಗುವ ಸಿಗ್ನಲ್ ಬದಲಾಗುತ್ತದೆ. ಮತ್ತು ಜೀಬ್ರಾ ಪಟ್ಟಿಗಳಿರುವ ಕಡೆಯಲ್ಲಂತೂ ಯಾರ ಹಂಗಿಲ್ಲದೆ ಒಬ್ಬ ಪಾದಚಾರ ನಡೆಯಬಲ್ಲ. ಎಲ್ಲೆಡೆ, ಅಗಲವಾದ ರಸ್ತೆಗಳು, ರಸ್ತೆ ಸಂಖ್ಯೆಗಳು, ಹೆಸರುಗಳು, ಅದಕ್ಕೆ ತಕ್ಕಂತೆ ಸುಲಭವಾಗಿ ಸಿಗುವ ಸಾರ್ವಜನಿಕ ಸಾರಿಗೆ ವಾಹನಗಳು ಇವೆಲ್ಲವೂ ಗಮನಸೆಳೆವಂತಿತ್ತು. ಬಸ್ಸಿನಲ್ಲಿ ಹಾಗೂ ರೈಲ್ ಗಳಲ್ಲಿ ಕಂಡಕ್ಟರ್ ನ ಗೋಜಲೂ ಇಲ್ಲ. ಹೀಗಾಗಿ ಅಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ನಡೆಯುವ ಸಂಚಾರ ಅತ್ಯಂತ ಸುಗಮ. ನೆಲಮಾಳಿಗೆಯ ಕೆಳಗೆ ಎರಡನೇ ಅಂತಸ್ತಿನಲ್ಲಿ ಕಂಡು ಬಂದ ರೈಲು ಮಾರ್ಗ ನನ್ನ ಆಶ್ಚರ್ಯದ ತುತ್ತಾಗಿತ್ತು!
ಸಿಂಗಪೂರಿನಲ್ಲಿ ಕಂಡ ಮತ್ತೊಂದು ವಿಶೇಷ ಅಂದರೆ ನಿತ್ಯ ಜರುಗುವ ಕಾಗೆ ಮತ್ತು ಕತ್ತೆ ಮದುವೆ! ಬಿಸಿಲು ಮತ್ತು ಮಳೆ ಒಟ್ಟಿಗೆ ಬಂದಲ್ಲಿ, ನಾವು ಚಿಕ್ಕವರಾಗಿದ್ದಾಗ ಕಾಗೆ ಮತ್ತು ಕತ್ತೆ ಮದುವೆಯಂತೆ ಎಂದು ಕುಣಿಯುತ್ತಿದ್ದೆವು. ಅದನ್ನು ನೆನಪಾಗಿಸುವಂತೆ, ಅಲ್ಲಿ ಪ್ರತಿನಿತ್ಯ ತಾಳಲಾರದ ಬಿಸಿಲು ಜೊತೆ ಜೊತೆಗೇ ಮಳೆಯೂ ಕೂಡ. ಒಂದಂತೂ ಸತ್ಯ, ನನಗೆ ಅಲ್ಲಿ ಎಲ್ಲಕ್ಕಿಂತಲೂ ಮಿಗಿಲಾಗಿ ಆಪ್ತವಾದದ್ದು, ನನ್ನದೆನಿಸಿದ್ದು ಅಂದರೆ ಮಳೆ. ನನ್ನ ಎಳೆ ವಯಸ್ಸಿನಿಂದ ಕಂಡ ಎಷ್ಟೆಲ್ಲಾ ಆನಂದಗಳೂ, ನೆನಪುಗಳೂ ಆ ಮಳೆಯ ಪ್ರತಿ ಹನಿಯಲ್ಲೂ ಜಿನುಗುತ್ತಿರುವಾಗ, ಹೊಸ ಊರಿನಲ್ಲಿ ಅದಕ್ಕಿಂತಲೂ ಆಪ್ತ, ಆತ್ಮೀಯವೆನ್ನಿಸುವುದು ಮತ್ಯಾವುದು!
ಅಲ್ಲಿದ್ದ ಮನೆಯವರಲ್ಲಿ ಟೆಂಟ್ ಹಾಕಿ, ಕುಶಲೋಪರಿ ವಿಚಾರಿಸಿಕೊಂಡ ಮೇಲೆ ಪ್ರಾರಂಭವಾದದ್ದು ಸುತ್ತಾಟ. ರೋಡ್ ಮ್ಯಾಪ್ ಹಿಡಿದು, ಕಂಡಲ್ಲಿ ಅಲೆದು, ಬಿಸಿಲಲ್ಲಿ ಜರೆದು, ಅನೇಕ ಸುಂದರ ತಾಣಗಳನ್ನು ಕಂಡು, ಕಣ್ತುಂಬಿ ಜೊತೆಗೆ ಊಟಕ್ಕೆ ಉಪ್ಪಿನ ಕಾಯಿ ಎಂಬಂತೆ ಗಂಡ ಹೆಂಡಿರು ಶೀತಲ ಸಮರ ಜರುಗಿಸಿದ್ದು ಕೂಡ ಒಂದು ಮೊದಲ ರೋಚಕ ಅನುಭವವೇ. ನಮ್ಮ ಸುತ್ತಾಟ ಮೊದಲಾದದ್ದು ಅಲ್ಲಿ ಕಂಡ ಸುಂದರ ಚೈನೀಸ್ ಗಾರ್ಡನ್ ನಿಂದ. ಚೈನೀಸ್ ಮತ್ತು ಜಪಾನೀಸ್ ಗಾರ್ಡನ್ ಎಂದು ಅಲ್ಲಿ ಎರಡು ಉದ್ಯಾನವನಗಳಿವೆ. ಹೆಸರೇ ಸೂಚಿಸುವಂತೆ ಅವೆರಡೂ ಚೀನೀ ಮತ್ತು ಜಪಾನೀ ಸಂಸ್ಕೃತಿಗಳನ್ನು ಬಿಂಬಿಸುವಂತಹ ಅಕ್ಕ-ತಂಗಿ ಉದ್ಯಾನವನಗಳು. ಅಲ್ಲಿದ್ದ ವಿಶೇಷ ಎಂದರೆ ಜನ್ಮ ರಹಸ್ಯದ ಕಲ್ಲುಗಳು! ನಮ್ಮ ಜನ್ಮ ದಿನಕ್ಕೆ ಅನುಗುಣವಾಗಿ ಒಂದು ಕಲ್ಲಿರುತ್ತದೆ. ಅಲ್ಲಿ ಬರೆದದ್ದು ನಮ್ಮ ಹಣೆಬರಹವಾಗಿರುತ್ತದೆ ಎಂಬ ಪ್ರತೀತಿ. ಪಗೋಡಾಗಳು ಅಲ್ಲಿ ನಮ್ಮ ಗಮನ ಸೆಳೆದ ಮತ್ತೊಂದು ಅಂಶ.
ನಮ್ಮ ಮುಂದಿನ ಪಯಣ ಸಿಂಗಪೂರ್ ಜೂ ಮತ್ತು ಬರ್ಡ್ ಪಾರ್ಕ್ ಕಡೆಗೆ. ಅವೆರಡೂ ಒಂದು ಮರೆಯಲಾರದ ವೈಶಿಷ್ಟ್ಯ. ದೊಡ್ಡದೊಂದು ಕಾಡು, ಆ ಕಾಡಿನೊಳಗೆ ಹೋಗಲು ಪ್ರವೇಶ ಶುಲ್ಕ ಕಟ್ಟುವಾಗ ಒಂದು ನಕ್ಷೆ ಕೈಗಿಟ್ಟು ಒಳಗೆ ಕಳುಹಿಸಿ ಬಿಡುತ್ತಾರೆ. ನಾವು ಆ ನಕ್ಷೆಯ ಪ್ರಕಾರ ಒಂದು ಭೂ ಸಂಶೋಧನೆ ಮಾಡುವಂತೆ ಹುಡುಕುತ್ತಾ, ನಕ್ಷೆ ಭೇದಿಸುತ್ತಾ ಹೋದಷ್ಟೂ ಕಣ್ಣಿಗೆ ಮುದ ನೀಡುವಂತಹ ಮುದ್ದಾದ, ತರಾವರೀ ಪಕ್ಷಿಗಳು, ಪ್ರಾಣಿಗಳು. ನಾವಿಬ್ಬರೂ ನಮಗಿಬ್ಬರು ಎಂಬಂತೆ, ನಾವಿಬ್ಬರೂ ಕೈಯಲ್ಲಿ ಎರಡು ನಕ್ಷೆ ಮತ್ತು ನೀರಿನ ಬಾಟಲ ಹಿಡಿದು ನಿಧಿ ಹುಡುಕುವಂತೆ ಸುತ್ತಾಡಿದ್ದು, ದಣಿದದ್ದು, ಇದ್ದಕ್ಕಿದ್ದಂತೆ ಅಲ್ಲೊಂದು ಅಪೂರ್ವ ಪ್ರಾಣಿಯನ್ನು ಕಂಡು ಬೆರಗಾದದ್ದು ನೆನೆದರೆ ಇಂದಿಗೂ ಮಂದಹಾಸ.
ಪ್ರಾಣಿ ಪಕ್ಷಿ ಪ್ರದರ್ಶನಗಳ ನಂತರ ನಮ್ಮ ದಾರಿ ಕಾದಿತ್ತು ಹೂಮಡಿಲ ಉದ್ಯಾನವನ, ಆರ್ಚಿಡ್ ಗಾರ್ಡನ್. ನಮ್ಮನ್ನು ಬೆರಗಾಗಿಸುವಷ್ಟು ವಿವಿಧ ಬಗೆಯ ಆರ್ಚಿಡ್ ಹೂಗಳನ್ನು ಒಂದೇ ಬಾರಿಗೆ, ಒಂದೇ ಸ್ಥಳದಲ್ಲಿ ಕಂಡು ಮನಸ್ಸು ಆಹ್ಲಾದಗೊಂಡಿತ್ತು. ಈ ಎಲ್ಲ ನೈಸರ್ಗಿಕ ಆಮೋದಗಳ ನಡುವೆ ಸೆಂಟೋಸಾದಂತಹ ದ್ವೀಪದ ಕೃತಕ ಆಟಗಳು, ಸ್ಥಳಗಳು ಅಷ್ಟು ಮನಸೂರೆಗೊಳ್ಳಲಿಲ್ಲ. ಆದರೂ ಹೊಸತಾಗಿತ್ತು.
ಈ ಎಲ್ಲ ಅನುಭವಗಳೂ ರಮ್ಯವಾಗಿದ್ದು, ಮರೆಯಲಾರದಂತಹವಾಗಿದ್ದು, ಇದು ‘ಮೊದಲು’ ಎಂಬುದರ ಕಾರಣಕ್ಕಾಗಿಯೇ. ಬಹುಷಃ ಮತ್ತೊಮ್ಮೆ ಭೇಟಿ ಕೊಡಬಹುದು, ಮಗದೊಮ್ಮೆ ಇನ್ನೂ ಹೆಚ್ಚಾಗಿ ಪರ್ಯಟನೆ ಮಾಡಬಹುದು. ಆದರೂ ಆ ಮೊದಲನೇ ಬಾರಿಯ ಕಿಕ್ ಇರುವುದಿಲ್ಲ ಅಲ್ಲವೇ.
 

‍ಲೇಖಕರು avadhi

March 29, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ಶಮ, ನಂದಿಬೆಟ್ಟ

    ಚೆಂದಗೆ ಬರೆದಿದ್ದಿ ಸಂಯುಕ್ತಾ.. ಮದುವೆಯ ಜತೆಗೆ ಇಂಥ ಮೊದಲ ಅನುಭವಗಳ ಅನನ್ಯತೆ ಬದುಕು ಪೂರ್ತಿ ಮಂದಹಾಸ ತರುತ್ತವೆ. 🙂

    ಪ್ರತಿಕ್ರಿಯೆ
  2. Gopaal Wajapeyi

    ಲೇಖನ ಓದುತ್ತಿದ್ದಂತೆಯೇ ನನಗೆ ‘ಸಿಂಗಾಪುರದಿಂದ ಬಂದೆ…’ ಅನ್ನೋ ಹಾಡು ನೆನಪಾಯಿತು.
    ನಿಮ್ಮ ಬರಹ ನನ್ನ ಮೊದಲ ವಿಮಾನ ಯಾನದ ಅನುಭವ ಮರುಕಳಿಸುವಂತೆ ಮಾಡಿತು. ‘ಸಿಂಗಾಪುರದ ನಶಾ’ ಇಷ್ಟೇನಾ, ಇನ್ನೂ ಇದೆಯಾ…?

    ಪ್ರತಿಕ್ರಿಯೆ
  3. Paresh Saraf

    ಎಂದಿನಂತೆ ಬಹಳ ಚೆನ್ನಾಗಿ ಬರೆದಿದ್ದೀರಿ. ಮನಸ್ಸಿಗೆ ಹಿತ ನೀಡುವ ಬರಹ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: