ಪ್ರವರ ಬರೆದದ್ದು: ಕೊಡ ರೊಕ್ಕ ಕೊಡಲಿಕ್ಕ ಈಟು ಮಾಡ್ತಿರಲ್ಲಾ… ಬ್ಯಾಡ ಬುಡ್ರಿ

ಊರ ಗೌಡನ ಉಂಗುರ

ಪ್ರವರ ಕೊಟ್ಟೂರ್

“ಎಲೋ ಬಾಡ್ಯ, ನಿನ ಬಾಯಾಗ್ ಮಣ್ ಹೊಯ್ಲಿ, ಸಾಸಿವಿ ಡಬ್ಬ್ಯಾಗ್ ಇಟ್ ರೊಕಾನೋಟು ಕದ್ದು ಕುಡ್ಕಂಡ್ ಬಂದೀಯಲ್ಲೋ…” ಎಂದು ತನ್ನೆಲ್ಲ ಕಸುವನ್ನು ಬಳಸಿ ಗಂಡನನ್ನು ಕೆಳಗೆ ಹಾಕಿಕೊಂಡು ಹರಿದ ಕೆರದಲ್ಲಿ ಬಡಿಯುತಿದ್ದ ದ್ಯಾಮವ್ವಳೂ, “ನಿನ್ ಎಮ್ಮಿ ಸಗಣಿ ವಾಸಿನಿ ಮನಿ ತುಂಬ ಹಳ್ಡ್ಯಾತಿ ನೋಡು, ಮಾಡಿದ್ ಅಡಿಗಿ ತಿನುವಲ್ಲ ನನ ಗಂಡ, ಯಪ್ಪಾ ಕೈ ಮುಗಿತಿನಿ ಬ್ಯಾರೆ ಎಲ್ಲ್ಯಾರ ಕಟಿಗೊಳಪ್ಪ ನಿನಗ ಪುಣ್ಯ ಬಂದರು ಬರುತೈತಿ” ಎಂದು ಅಂಜಿನಪ್ಪನ ಹೆಂಡತಿ ಅಂಜಿನವ್ವಳು ಎಮ್ಮಿ ಕಾಯೊ ಎಲುಗಪ್ಪನಲ್ಲಿಯೂ, “ನಾನು ಸಾಲಿಗೆ ಹೊಗದಿಲ್ಲಬೇ, ಏನ್ ಮಾಡ್ಕ್ಯಂಬ್ತಿ ಮಾಡಿಕ್ಯಾ, ಆ ಸೂಳಿ ಮಗ ಸಾರು ಕೈಯಾಗ್ ರಗೂತ ಬರಂಗ ಒಡಿತಾನ, ಚಡ್ಡಿ ಹಿಂದುಕಾ ಕಂಡಿ ಬಿಟ್ಟು ಮುಕುಳಿ ಕಾಣದಕ್ಕ ಕಿಲ್ಯಾಸಿನಾಗ ಆಡಿಕ್ಯಂಡು ನಗುತಾನ, ಬೇಕಂದ್ರ ಊರಾಗಿನ್ ಮಂದೀವು ಕೆರ ಹೊಲ್ಕಂಡ್ ಕುತ್ಕಂಡೇನು…. ನಾನ್ ಮಾತ್ರ ಸಾಲ್ಯಾಕ ಕಾಲ್ ಇಡಂಗಿಲ್ಲ” ಎಂದು ಸೂಲಗಿತ್ತಿ ಗುರುಬಸವ್ವನ ಮಗ ಎಂಕಟೇಸಿಯೂ…..

ಗುಡಿಸಲುಗಳ ಮುಂದೆ ಮೀಸಿ ಬಂದು ಬಾಯಾಗ ಬಿದ್ದು ದೊಡ್ಡವರೆನ್ನಿಸಿಕೊಂಡವರು, ಊರಿಗೆ ಊರೆ ಕಾಣುವಂತಿದ್ದ ತೂತು ಬಿದ್ದ ಅಂಗಿ ಚಡ್ಡಿಗಳನ್ನು ತೊಟ್ಟು ಕರ್ರನೆ ಹಣೆಗಳಲ್ಲಿ ಇಬತ್ತಿಯನ್ನು ಹಚ್ಚಿಕೊಂಡ ಚಿಳ್ಳೆ ಮಿಳ್ಳೆಗಳು, ಗಂಡನನ್ನು ದ್ಯಾವರಿಗಿಂತ ಹೆಚ್ಚಾಗಿಯೂ ಮಕ್ಕಳಿಗಿಂತ ಕಡಿಮೆಯಾಗಿಯೂ ಪ್ರೀತಿಸುತಿದ್ದ ಹೆಂಡರೂ, ಎಲೆಅಡಕೆ ತಂಬಾಕನ್ನು ತಮ್ಮ ಮಿಶಿನ್ನುಗಳಂಥ ಬಾಯಿಗಳಲ್ಲಿ ಅಗಿದು ಪೀಕದಾನಿಗಳಲ್ಲಿ ಉಗಿಯುತ್ತಾ ಅಲ್ಲಲ್ಲೇ ಕಟ್ಟೆಗಳಲ್ಲಿ ಕೂತು ಪರಸ್ಪರ ವಟ ವಟ ಎನ್ನುತ್ತಲಿ ಕೂತಿದ್ದ ನೂರರ ಆಸು ಪಾಸಿನನ್ನಿದ್ದ ಮುದುಕ ಮುದುಕಿಯರು…. ಪಟ್ಟಣವೆಂದರೆ ಪಟ್ಟಣ ಹಳ್ಳಿಯೆಂದರೆ ಹಳ್ಳಿ, ದೇಶದ ಹೆಸರೂ ಗೊತ್ತಿಲ್ಲದ ಜನರಿದ್ದ ಊರು, ಒಂದು ಶಾಲೆ, ಒಂದು ಡಾಕ್ಟರ್ರಿಲ್ಲದ ಆಸ್ಪತ್ರೆ, ಸುಮಾರು ಮೂವತ್ತರಿಂದ ನಲವತ್ತು ತರಹೇವಾರಿ ದೇವಸ್ಥಾನಗಳು, ಹತ್ತಾರು ರಾಜಕೀಯ ಪಕ್ಷಗಳೂ ಅದಕ್ಕೊಂದಿಷ್ಟು ಮುಖಂಡರುಗಳೂ ಇದ್ದರು….

ಅದೇ ತಾನೆ ಪಟ್ಟಣ ಪಂಚಾಯ್ತಿ ಎಲೆಕ್ಷನ್ನುಗಳ ಪ್ರಚಾರ ಶುರುವಾಗಿದ್ದವು. “ಯಾವ್ ಬೋಳಿಮಕ್ಳು ಬಂದ್ರು ಕಿತ್ತಾದು ಅಷ್ಟ್ರಾಗ ಐತಿ ಬುಡಲೇ ನಿನ್ನ” ಎಂದುಕೊಂಡು ಆಲಸ್ಯದಿಂದ ತಿರುಗಾಡುತಿದ್ದ ಯುವಪ್ರಜೆಗಳು ಹೆಚ್ಚಿದ್ದರು. ಹೆಬ್ಬಟ್ಟನು ಗುರುತು ಮಾಡಿಕೊಂಡಿದ್ದ ಸುಂಕಲೇಸಪ್ಪನು, ಸೀಲಿಂಗ್ ಫ್ಯಾನನ್ನು ಗುರುತು ಮಾಡಿಕೊಂಡಿದ್ದ ಬದ್ರಶೆಟ್ಟಿಯೂ, ಎಲ್ಲರನ್ನೂ ಸೆಳೆಯಬಹುದೆಂದು ಪ್ಲಾನು ಮಾಡಿ ಮೊಬೈಲನ್ನು ಗುರುತು ಮಾಡಿಕೊಂಡಿದ್ದ ಬಡಿಗೇರ ಮೌನೇಶಿಯೂ ಹೀಗೆ ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಪಕ್ಷಗಳು ಚುನಾವಣೆಗಾಗಿ ಬ್ಯಾನರ್ರು ಕಟೌಟುಗಳನ್ನು ಊರು ಮುಚ್ಚುವಷ್ಟರ ಮಟ್ಟಿಗೆ ಹಾಕಿ, ನಮ್ಮ ಪಕ್ಷಕ್ಕೆ ಓಟು ಹಾಕಿ ಗೆಲ್ಲಿಸಿದರೆ ಮನೆಗೊಂದರಂತೆ ಮೊಬೈಲು, ಮಕ್ಕಳಿಗೆ ನಾಗಮ್ಮ ಮಿಸ್ ಇಂಗ್ಲೀಶು ಮೀಡಿಯಂ ಸ್ಕೂಲಿನಲ್ಲಿ ಸೀಟು, ಕುಡಿಯುವವರಿಗೆಲ್ಲಾ ವಾರಕ್ಕೊಮ್ಮೆ ವಿಸ್ಕಿ-ವೋಡ್ಕ-ರಮ್ಮು ಜೊತೆ ಬಿರಿಯಾನಿಯನ್ನು, ಹೆಂಗಸರಿಗೆ ಮೈಸೂರು ಸಿಲ್ಕು ಸೀರೆ ಜೊತೆಗೆ ಎರಡು ಬ್ಲೌಸಿನ ಪೀಸುಗಳನ್ನು, ಟಿ.ವಿ ಇದ್ದವರಿಗೆ ದಿನಪೂರ್ತಿ ದಾರವಾಹಿ ಬರುವ ಚಾನೆಲ್ಲುಗಳನ್ನು ಹಾಕಿಸಿಕೊಡುವ ಆಶ್ವಾಸನೆಗಳನ್ನು ತಾ ಮುಂದು ನಾ ಮುಂದೆಂದು ಕೊಟ್ಟು ಮತದಾರರನ್ನು ಸೆಳೆಯಲಿಕ್ಕೆ ನೂರಾರು ರೀತಿಯ ಕಸರತ್ತನು ಮಾಡುತಲಿದ್ದವು. ಹೀಗಿರುವಾಗ್ಗೆ….

ಕೆಳಗಿನೋಣಿಯ ದುರುಗಮ್ಮನ ಗುಡಿಯ ಹಿಂದೆ ಬೆಕ್ಕು ಬಾಲ ನಿಗುರಿಸಿಕೊಂಡು ಮಿಯಾವ್ ಎನ್ನುತ್ತಲೇ ಬಾಗಿಲಲ್ಲಿ ನಿಂತಿರುವಾಗ ಒಳಗಡೆಯಿಂದ “ನಮ್ಮವ್ವಗ ಬ್ಯಾಡ ಬ್ಯಾಡ ಅಂದ್ರು ಕ್ಯೇಳುಲಿಲ್ಲ ಈ ಕುಡುಕ್ ಸೂಳ್ಯಾ ಮಗನೀಗೆ ಕೊಟ್ಟು ನನ್ ಬಾಳ್ನ್ ಹಾಳ್ ಮಾಡಿದ್ಲು, ಮಸಾಣ್ದಾಗ ಗುಣಿ ತೆಗಿಯದು ಅವುರು ಕೊಡ ರೊಕ್ಕದಾಗ ಹಗುಲು ರಾತ್ರಿ ಯೆತ್ಯಾಸ ಗೊತ್ತಿಲ್ದೇ ಕುಡುದು ಚರಂಡ್ಯಾಗ ಬಿದ್ದು ಸಾಯದು, ಯವ್ವಾ ನನಗ ಸಾಕಾಗ್ ಹೋಗ್ಯಾತಿ, ನಿನ್ನಿಯಿಂದ ಮನ್ಯಾಗ ಉಣಲಿಕ್ಕ ಒಂದು ಹಿಡಿ ಅಕ್ಕಿ ತರುವಲ್ಲ ಬಿಡುವಲ್ಲ, ಗಂಡ್ಸಂತ ಗಂಡ್ಸು ಸ್ಯಾಟದ್ ಗಂಡ್ಸು” ಎಂದು ಮುಂಜಾನೆಯನ್ನು ಲೋಕಲ್ಲು ಬ್ರ್ಯಾಂಡಿನ ರಮ್ಮು ಕುಡಿದು ಗೋಡೆಗೆ ಆನಿಕೊಂಡು ಕೂತಿದ್ದ ಗಂಡ ಚೌಡನನ್ನು, ಎಲ್ಲಾ ಸಂಸ್ಕೃತ ಶ್ಲೋಕಗಳನ್ನು ತನ್ನ ಅಜ್ಜಿ ಮುತ್ತಜ್ಜಿಗಳಿಂದ ರಕ್ತಗತವಾಗಿ ಪಡೆದಿದ್ದ ದ್ಯಾವಲಾಪುರದ ಮೂಗವ್ವಳು ಅರ್ಜುನನ ಬಾಣಗಳಿಗಿಂತಲೂ ಹರಿತವಾಗಿದ್ದ ನಾಲಿಗೆಯನ್ನು ಬಳಸಿ ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡಳು. ಅಲ್ಲಿಯವರೆಗೂ ಸಾಕ್ಷಾತ್ ತಾಯಿ ಕಾಳವ್ವನ ಅವತಾರವಾದ ತನ್ನ ಹೆಂಡತಿಯ ಮಾತುಗಳನ್ನು ಸಮಾಧಾನವಾಗಿ ಕೇಳಿಸಿಕೊಂಡಿದ್ದ ಚೌಡ ತುಟಿ ಪಿಟುಕ್ ಎನ್ನದೇ ಸಗಣಿ ಸಾರಿದ್ದ ನೆಲಕಂಟಿದ್ದ ತನ್ನ ಅಂಡನ್ನು ಮೇಲೆತ್ತಲೇ ಇಲ್ಲ, ಕೂತಲ್ಲಿಂದಲೇ “ಹೋಗಲೇ ನಿಮ್ಮೌನ್, ನಾನ್ ಮನಸ್ ಮಾಡಿದ್ರೆ ನೂರ್ ಮಂದಿ ನಿಲುತಾರ ಮದ್ವಿ ಆಗಾಕ, ನಿಮ್ಮ ಅವ್ವ ಕಾಲು ಹಿಡುಕೊಂಡ್ ಕೇಳಿಕೊಂಡಿದ್ದಕ ಕಟ್ಕೊಂಡೆ, ಇಲ್ಲಾ ಅಂದಿದ್ರ ರಂಬಿಯಂತ ಹುಡುಗೀನ ಮದ್ವಿ ಆಗಿ ರಾಜ ರಾಜ ಇದ್ದಂಗಿರ್ತಿದ್ದೆ, ನನ ಗಂಡ್ಸ್ತನದ್ ಬಗ್ಗೆ ಮಾತಾಡ್ ಬ್ಯಾಡ… ” ಎಂದು ಜೊಲ್ಲು ಇಳಿಯುತಿದ್ದ ತನ್ನ ಬಾಯನ್ನು ಒರೆಸಿಕೊಳ್ಳುತ್ತಾ ತನ್ನೊಳಗಿರುವ ಅಖಂಡ ಪುರುಷತ್ವವನ್ನು ಪ್ರತ್ಯುತ್ತರದ ಮೂಲಕ ಹೇಳಿದಾಗ ಎಲ್ಲಿಂದಲೋ ಬಾಯಿ ಬಡಿದುಕೊಳ್ಳುವ ಸದ್ದು ಕೇಳಿದ ತಕ್ಷಣ ಮೈ ಕೊಡವಿ ಛಂಗನೆ ಎದ್ದು ನಿಂತು ಬಾಯಿ ಬಡಿದುಕೊಳ್ಳುತಿದ್ದ ಸದ್ದು ಬಂದ ದಿಕ್ಕಿನತ್ತಲೇ ಶಬ್ದವೇಧಿಯಂತೆ ಹೊರಟುಬಿಟ್ಟ…

ಸದರಿ ಗ್ರಾಮದ ಶ್ರೀಮಂತ ಮನೆತನದ ಹಾಗೂ ನೂರಾರು ಎಕರೆ ತೋಟಗಳ ಒಡೆಯರಾಗಿದ್ದ ಹಾಗೂ ಒಬ್ಬರಾದ ನಂತರ ಇನ್ನೊಬ್ಬರಂತೆ ಇಬ್ಬರನ್ನು ಶಾಸ್ತ್ರೋಪ್ತವಾಗಿ ಇನ್ನೊಬ್ಬಳನ್ನು ಗುಟ್ಟಾಗಿಯೂ ಮದುವೆಯಾಗಿ ತಮ್ಮದೇ ವಿಚಿತ್ರ ನಡುವಳಿಕೆಗಳಿಂದ ಗ್ರಾಮದ ಇತಿಹಾಸದ ಪುಟದಲ್ಲಿ ಸೇರಿಕೊಂಡಿದ್ದ ಶ್ರೀಮಾನ್ ಎಮ್.ನಂಜುಡೇ ಗೌಡರು ರಾಷ್ಟ್ರೀಯ ಪಕ್ಷವಾದ ಹೆಬ್ಬಟ್ಟಿನ ಗುರುತಲ್ಲಿ ಟಿಕೇಟ್ ಪಡೆದು ಸ್ಪರ್ಧಿಸಿದ್ದರು. ಇಲೆಕ್ಷನ್ ಪ್ರಚಾರಕ್ಕೆ ಹೋದ ವೇಳೆ, ಸಂಭ್ರಮಕ್ಕೆ ಹಚ್ಚಿದ ಪಟಾಕಿ ಸದ್ದಿಗೆ ಹಾರ್ಟ್ ಅಟ್ಯಾಕ್ ಆಗಿ ಮೂಗಪ್ಪ ಡಾಕ್ಟರ್ರು ಎಷ್ಟೇ ಪ್ರಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸ್ವರ್ಗವಾಸಿಗಳಾಗಿದ್ದರು. ಈ ಸುದ್ದಿ ತಿಳಿಯುತಿದ್ದಂತೆಯೇ ಚೌಡನ ಮೈಯ ರೋಮಗಳೆಲ್ಲವೂ ಮೊಳೆಗಳಂತೆ ನಿಮುರಿ ನಿಂತು ಬಿಟ್ಟವು, ಮದುವೆಗಳಿಗಿಂತಲೂ ಅದ್ಧೂರಿಯಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ತನಗೆ ಏನೆನೆಲ್ಲಾ ಸಿಗಬಹುದು, ಅದಲ್ಲದೇ ಈ ಊರಿನಲ್ಲಿ ಯಾರೆ ಸತ್ತರೂ ಗುಣಿ ತೆಗಿಯಲಿಕ್ಕೆ ಇರುವ ಏಕೈಕ ಚೌಡ ತಾನೇ, ತಾನಿರದಿದ್ದರೆ ಮಣ್ಣು ಮಾಡುವುದು ಅಸಾಧ್ಯವೆಂದು ಸಣ್ಣಗೆ ಕಡಿಯುತಿದ್ದ ತನ್ನ ತಳವನ್ನು ಮೂರ್ನಾಲ್ಕು ಬಾರಿ ಪರ ಪರ ಕೆರೆದುಕೊಂಡು ಖುಶಿಪಟ್ಟುಕೊಂಡನು. ಆಗಲೇ ನಂಜುಂಡೇ ಗೌಡರ ಶರೀರವನ್ನು ತಮ್ಮ ಬಂಗಲೆಯ ಬಳಿ ಜನರ ದರ್ಶನಕ್ಕೆ ಇಟ್ಟಿದ್ದರು, ವೈಟ್ ಅಂಡ್ ವೈಟ್ ಹಾಕಿಕೊಂಡು ಗ್ರಾಮಸ್ಥರೆಲ್ಲಾ ಹಾಜರಿದ್ದರು. ಮನೆಯ ಆಳಾಗಿದ್ದ ಅಗಸರ ಮಂಜ, ಕೈ ಕಟ್ಟಿಕೊಂಡು ಜನಗಳ ನಡುವೆ ಮಳ್ಳಿಗನಂತೆ ನಿಂತಿದ್ದ ಚೌಡನನ್ನು ಕರೆದು ಊರ ಸ್ಮಶಾನದಲ್ಲಿ ಗುಣಿ ತೆಗಿಯಲು ಹೇಳಿದ, ನಮ್ಮೂರ ಅಗರ್ಭ ಶ್ರೀಮಂತ ಶವಕ್ಕೆ ಗುಣು ತೋಡುವುದೆಂದರೇನು ಸುಮ್ಮನೆಯೇ,….

ತನ್ನ ಗುಡಿಸಲ ಬಾಗಿಲ ಹಿಂದಿದ್ದ ಗುದ್ದರಿ ಚಲಿಕೆ ಹಾರೆಗಳನ್ನೆಲ್ಲಾ ಹೆಗಲಿಗೇರಿಸಿಕೊಂಡು ಬಿಸಿಲಿಗೆ ಕಾದು ಬರೆ ಇಡುತಿದ್ದ ಟಾರು ರೋಡಿನಲ್ಲಿ ಹೆಜ್ಜೆ ಹಾಕುತ್ತಾ, ಗೌಡನ ಹೆಂಡರು, ಅಪ್ಪನ ನಂತರ ಆಸ್ತಿಗೆ ಕಣ್ಣು ಬಿಡುತ್ತಾ ಕೂತಿದ್ದ ಮಕ್ಕಳು ತನಗೆ ಗುಣಿ ತೆಗೆದರೆ ಏನೆನೆಲ್ಲಾ ಕಾಣಿಕೆ ಕೊಡಬಹುದೆಂದು ತಲೆಯಲ್ಲಿ ಹತ್ತಾರು ಆಲೋಚನೆಗಳನ್ನು ದೋಸೆಗಳಂತೆ ತಿರುವಿಹಾಕುತ್ತ ತನ್ನ ಫೇವರೆಟ್ ಬ್ರ್ಯಾಂಡ್ ಗಣೇಶ ಬೀಡಿಯನ್ನು ಸೇದಿ ಬುಸು ಬುಸುನೆ ಹೊಗೆ ಬಿಡುತ್ತಾ ಸುಮಾರು ಅರ್ಧ ಕಿಲೋಮೀಟರ್ರು ದೂರವಿದ್ದ ಸ್ಮಶಾನಕ್ಕೆ ಬಂದು ನಂಜುಂಡೇ ಗೌಡರ ಶ್ರೀಮಂತ ದೇಹವನ್ನು ಯಾವ ಜಾಗದಲ್ಲಿ ಹೂಳಬೇಕೆಂದು ಸರ್ವೇ ಮಾಡಿ ಕೊನೆಗೆ ಈಶಾನ್ಯ ದಿಕ್ಕಿನಲ್ಲಿ ಸರಿಯಾಗಿ ಅಳತೆ ತೆಗೆದುಕೊಂಡು, ಗುಣಿ ತೆಗೆಯಲು ಶುರು ಮಾಡುತ್ತಾನೆ, ಏನನ್ನೋ ಗುನುಗುತ್ತಾ..

ಊರ ಕೇರಿ ಮ್ಯಾಲ

ಜನರ ಮಾರಿ ಮ್ಯಾಲ

ಹರಿದಾವ ಹಾವು ನೋಡ~~

ಮರುಗ್ಯಾವ ಹೂವು ಬಳ್ಳಿ~~

ತಿರುಗ್ಯಾದ ಗಾಳಿ ಹೊಳ್ಳಿ

ಹಣೆಯಿಂದ ಬೆವರು ಇದ್ದಿಲ್ಲನ್ನು ಸವರಿಕೊಂಡಂತಿದ್ದ ಆ ಬಡಕಲು ದೇಹದ ಮೇಲಿಂದ ಕೆಳವರೆಗೂ ಸವರಿಕೊಂಡು ಮಣ್ಣನ್ನು ಸೇರಿ ಆವಿಯಾಗಿ ಹೋಗುತಿತ್ತು, ಲುಂಗಿಯನ್ನು ಕಳಚಿದವನೇ ಬೆವರು ಒರೆಸಿಕೊಳ್ಳುತ್ತಾ

“ಮಣ್ಣಾಗ ಮಣ್ಣಾಗೊ ದೇಹಕ್ಕ ಏಟೊಂದು ಐತಿ ನೋಡು, ಬದುಕಲಿಕ್ಕ ಧರುಮ ಅಂತಾ ಮಾಡಿಕೊಂಡ ಅದು ಸಾಕಾತಂತ ಜಾತಿ ಮಾಡಿಕೊಂಡ, ಕುಡಿಕಿ ಮಾಡಿದ್ರ ಕುಂಬಾರ ಅಂದ್ರು, ಬಾಗಿಲು ಮಾಡಿದ್ರ ಬಡಿಗಿ ಅಂದ್ರು, ಬೆಳ್ಳಿ ಬಂಗಾರ ಮಾರಿದ್ರ ಅಕ್ಸಾಲಿಗ ಅಂದ್ರು, ದ್ಯೇವರು ಪೂಜಿ ಮಾಡಿದ್ರ ಪೂಜಾರಿ ಅಂದ್ರು, ದಿನಿಸಿ ಮಾರಿದ್ರ ಸೆಟ್ಟಿ ಅಂದ್ರು, ಊರು ಆಳಿದ್ರ ಗೌಡ್ರು ಅಂದ್ರು, ಕೆರ ಹೊಲಿಯಕ್ಕ ಅಂತಾನ ನಮ್ಮನ್ನ ಊರ ಹೊರಗ ಇಟ್ಟಾರ.. ಶ್ರೇಷ್ಠ ಅಂಬೋರು ಮ್ಯಾಲ ಕುಂತಾರ, ಕೀಳು ಅನಿಸಿಕೊಂಡೊರನ್ನ ಕಾಲಿನ್ ಕೆಳಾಗ ಹಾಕಿ ತುಳ್ದಾರ… ಯ್ಯೋಟೆ ದೊಡ್ಡರಾದ್ರು ನಾಕು ದಿನ ಉರಿತಾರ ಕೊನೀಗೆ ನಮ್ಮಂತೋರು ತೋಡಿದ್ ಕುಣ್ಯಾಗ ಮಣ್ಣಾಗುತಾರ… ” ಎನ್ನು ಎಂದುಕೊಳ್ಳುತ್ತಲೇ ಮಣ್ಣನ್ನೆಲ್ಲಾ ಹೊರಗೆ ಎತ್ತಿಹಾಕಿದ.

ಬೀದಿಗಳಲ್ಲಿ ಕೆಮ್ಮುತಿದ್ದವರು, ಕ್ಯಾಕರಿಸುತಿದ್ದವರು, ಬೀಡಿಗಳನ್ನು ಸೇದುತ್ತಾ ಮರ್ಮಾಂಗಗಳನ್ನು ಕೆರೆದುಕೊಳ್ಳುತಿದ್ದವರು, ಸಿಂಬಳಗೊಣ್ಣಿ ಇಳಿಸುತ್ತಾ ಅಳುತಿದ್ದ ಪಿಳ್ಳೆಗಳು, ಅಲ್ಲಲ್ಲೇ ಕಕ್ಕಸ ಮಾಡಿಕೊಂಡಿದ್ದ ಮಕ್ಕಳ ಅಂಡುಗಳ ತೊಳೆಯುತಿದ್ದ ಮಹಿಳಾ ಮಣಿಗಳು.. ಊ..ಹು… ಯಾರೊಬ್ಬರೂ ಅಲ್ಲಿ ಕಾಣಿಸುತಿಲ್ಲ ಎಲ್ಲರೂ ಗೌಡರ ಶ್ರೀಮಂತ ಶರೀರದ ಕೊನೆಯ ದರ್ಶನಕ್ಕೆಂದು ಮನೆಯ ಮುಂದೆ ಜಮಾಯಿಸಿದ್ದ ಕಾರಣ ಊರಿಗೆ ಊರೆ ಬಿಕೋ ಎನ್ನುತಿತ್ತು. ಆಗಲೇ ತನ್ನ ಗೆಳಗರ ಬಳಗ ಎಣ್ಣೆ ಹಾಕಿಕೊಂಡು ತಮಟೆಯನ್ನು ಬೆಂಕಿಗೆ ಕಾಯಿಸುತಿದ್ದರು, ಈರ, ಬೋರ, ದೊಡ್ಡಿ ಮೊದಲಾದವರೇ ಪಟಾಕಿ ಹೊಡೆಯುವ ಸಡಗರದಲ್ಲಿದ್ದಾರೆ. “ಎದ್ಯಳೋ ಎದ್ದ್ಯಳು, ಈಟು ಬೇಗ ಸಾಯಾಕ್ ನಿಂಗೇನ್ ಅಂತಾ ವಯಸ್ಸಾಗ್ಯಾತಿ, ಮಂಚದ ಮ್ಯಾಲ ಕಾಮನಂಗ, ಕುಸ್ತ್ಯಾಗ ಭೀಮನಂಗ… ಮೊನಮೊನ್ನಿ ಅಷ್ಟ ಹೊಸ ರೇಸುಮಿ ಸೀರಿ ಕೊಟ್ಟಿದ್ದ್ಯಲ್ಲೋ ಉಟುಕಂಡು ಹೂವ ಮುಡಿಕೊಂಡು ಬಾ ಅಂದಿದ್ದಿ, ಉಟಕಂಡೀನಿ ಯಾಕ ನೋಡವಲ್ಲಿ, ಕಣ್ಣು ತ್ಯೆಗಿರಿ, ಅದ್ಯೇಟು ಮಲಿಕ್ಯಂಬ್ತೀರಿ, ಉದುಕಾ ಮುದ್ದಿ ಮಾಡೀನಿ ವಾಸಿನಿ ಬರುವಲ್ಲುದೇನು, ಎದ್ದು ಒಂದು ಮುದ್ದಿಯಾದ್ರು ಉಣ್ಣೋ…” ಎಂದು ಎರಡನೇ ಹೆಂಡತಿ ಶಾರದಮ್ಮ ಎದಿ ಎದಿ ಬಡಕೊಂಡು, ಕೂದಲೆಲ್ಲಾ ಕೆರಕೊಂಡು, ನೆಲದ ಮ್ಯಾಲೆಲ್ಲಾ ಉಳ್ಳಾಡಿಕೊಂಡು, ತಾನು ಅಳುತ್ತಿರುವುದು ಎಲ್ಲರಿಗೂ ಕೇಳಲೆಂದು ಗಂಟಲಿಗೆ ಆಗಾಗ ಒಂದೊಂದು ಪೆಗ್ಗಿನಷ್ಟು ನೀರು ಹೊಯ್ದುಕೊಳ್ಳುವುದು ಮತ್ತೆ ಅಳುವುದು ಮಾಡುತಿದ್ದಳು, ಮೊದಲನೇ ಹೆಂಡತಿ ಒಳಗೆ ಎಚ್ಚರದಪ್ಪಿ ಮಲಗಿದ್ದಳಂತೆ. ಇದ್ದೊಬ್ಬ ಮಗ ಚುನಾವಣೆಯಲ್ಲಿ ಅಪ್ಪನ ಸಾವಿನ ಅನುಕಂಪವನ್ನು ಓಟುಗಳನ್ನಾಗಿ ಪರಿವರ್ತಿಸಿಕೊಳ್ಳಬಹುದೆಂಬ ಖುಷಿಯಲ್ಲಿದ್ದರೂ ತಿಣುಕಿ ಅಳುತಿದ್ದ ಆತನನ್ನು ಹಿರಿಯರೆಲ್ಲ ತಾವೂ ನಿನ್ನ ತಂದೆಯಂತೆ ಎಂದು ತಲೆಯನ್ನು ನೇವರಿಸುತ್ತಾ ಸಮಾಧಾನ ಮಾಡುತಿದ್ದರು.

ಗೌಡರೆಂಬೋ ಗೌಡರ ಕಳೇಬರವನ್ನು ತಾನು ಸ್ಮಶಾನದಲ್ಲಿ ತೆಗೆದ ಪವಿತ್ರ ಗುಣಿಯಲ್ಲಿ ಮಣ್ಣು ಮಾಡಿದ ಮೇಲೆ ಕೊಡಬಹುದಾದ ಐನೂರು-ಸಾವಿರ ನೋಟುಗಳನ್ನು ಹಾಗೂ ಮಾಡಿಸಬಹುದಾದ ಭೃಷ್ಟಾನ್ನ ಭೋಜನವನ್ನು ನೆನೆದು ಒಣಗಿದ್ದ ಬಾಯೊಂಬೋ ಬಾಯಿಯಲ್ಲಿ ನೀರು ಗಂಗಾ ನದಿಯೋಪಾದಿಯಲ್ಲಿ ಉಕ್ಕತೊಡಗಿತು.ಅಲ್ಲಿ ಜನಗಳ ಮಧ್ಯೆ ಬೀಡಿ ಸೇದುತ್ತ ಗೌಡರ ಗುದ್ದಿಗೆ ಗುಣಿ ತೋಡಿದವ ಎಂಬ ಗರ್ವದಿಂದ ನಿಂತರೆ ಒಬ್ಬ ಬೋಳಿ ಮಗನಾದರೂ ಕ್ಯಾರೆ ಎನ್ನುವುದು ಬೇಡವೆ ಎಂದು ಮನಸ್ಸಿನಲ್ಲಿಯೇ ನೂರೊಂದು ಯೋಚನೆ ಮಾಡುತ್ತಾ ಹೊಗೆ ಬಿಡುತ್ತಾ ನಿಂತ. ಹತ್ತು ಹೆಜ್ಜೆ ಮುಂದೆಯೇ ಗೌಡರ ಮನೆಯಾಳು ನಿಂತಿದ್ದ ಕಂಡು ಕೆಲಸಕ್ಕೆ ಹಲ್ಲು ಕಿರಿಯುತ್ತಾ ಕೈ ಚಾಚಿದ ಅದಕ್ಕೆ “ಲೇ ಚೌಡ, ಮರಿ ದಣಿ ಕೊಡ್ತಾರ ನನ್ ಬಳಿ ನಯಾ ಪೈಸ ರೊಕ್ಕಾನು ಇಲ್ಲಾ, ನಾಳಿಗೆ ಒಂತ್ತುಂಟ್ಲೆ ಬಂದ್ಬಿಡು ನಾ ಹೇಳಿ ಕೊಡಿಸ್ತಿನಿ” ಎಂದು ಮೂಗಿನಲ್ಲಿ ಬೆರಳು ತೂರಿಸಿ ದೊಗೆಯುತ್ತಾ ನಡೆದ. “ಇವ್ನವ್ವುನ್ ದಣಿ ಹತ್ರ ಹೇಳಿ ಕೊಡುಸ್ತಾನಂತ ಹೇಳಿ, ಪುಗುಸಟ್ಟೆ ಕೊಡಂಗಿದ್ರ ಇನ್ನೇಟು ಮಾತಾಡ್ತಿದ್ದ ಬೋಳಿಮಗ… ದಣಿ ಸಂಜೀಕೆ ಬಟವಾಡಿ ಮಾಡಕಾರ ಕೊಟ್ಟ ಕೊಡ್ತಾರ ಎಲ್ಲಿಗ್ ಹೊಕ್ಕಾರ”…

“ಏಟು ಅಳೂತಿಯೋ ಯಪ್ಪಾ, ಯ್ಯೋಟು ಅತ್ರು ನಿಮ್ಮಪ್ಪನ ಜೀವ ವಾಪಾಸು ಬರುತೈತ್ಯಾ ಹೆಂಗ!!! ಟೇಮಾತು ಎತ್ರ್ಯಪ್ಪಾ ಗೌಡ್ರನ್ನ ಎತ್ರಿ” ಎಂದು ಗೌಡರ ಗೆಳೆಯರೂ ಹಿತೈಶಿಗಳೂ ಆದ ಕರಿಬಸಪ್ಪನವರು ಇತ್ತ ಸಮಾಧಾನ ಮಾಡುತ್ತಲೂ ಅತ್ತ ತಮ್ಮ ಟೈಂ ಸೆನ್ಸನ್ನು ಬ್ಯಾಲೆನ್ಸು ಮಾಡುತಿದ್ದರು. ಗೌಡರ ಶವವನ್ನು ಮೇಲಕ್ಕೆತ್ತುತ್ತಿದ್ದಂತೆ ಸುತ್ತಲೂ ಕೂತು ಅಳುತಿದ್ದವರ ಕೀರಲು ದ್ವನಿ ಆಕಾಶವೂ ಕಿವಿಯಲ್ಲಿ ಹತ್ತಿ ತುರುಕಿಕೊಳ್ಳುವಷ್ಟು ಜೋರಾಗಿತ್ತು, ಒಬ್ಬರನ್ನೊಬ್ಬರು ನೋಡುತ್ತಾ ಅಳು ಸಾಂಕ್ರಾಮಿಕವಾಗಿ ಹರಡಿ ಅರ್ಧ ಊರನ್ನೇ ವ್ಯಾಪಿಸಿಕೊಂಡಿತು, ಒಂದಷ್ಟು ಜನರಂತು ಅಳುವಿನಲ್ಲೇ ಗೌಡರ ಗುಣಗಾನ ಮಾಡುತ್ತಾ ಶರೀರದ ಮೇಲೆ ದೊಪ್ ದೊಪ್ ಎಂದು ಬೀಳುತಿದ್ದರು! ಅಲ್ಲಿಯವರೆಗೂ ಸೈಲೆಂಟಾಗಿದ್ದ ಶಹನಾಯಿ ಸಮ್ಮಾಳ ತಮಟೆಗಳು ಗೌಡರ ಶವ ಮೇಲೆ ಎತ್ತಿದ್ದನ್ನು ನೋಡಿದ ಕೂಡಲೆ ಸಿನಿಮಾದ ಹಾಡುಗಳನ್ನು ಹಂಸಲೇಖರ ಮ್ಯೂಸಿಕ್ಕಿನೋಪಾದಿಯಲ್ಲಿ ಬಾರಿಸತೊಡಗಿದವು, ಗೌಡರು ತೀರಿಕೊಂಡರೆಂಬ ಬೇಜಾರಿಗೋ, ಖುಷಿಗೋ ಸಿಕ್ಕಿದ್ದೇ ಛಾನ್ಸೆಂದು ಕಂಠಮಟ್ಟ ಕುಡಿದು ಮೆರವಣಿಗೆಯ ಮುಂದೆ ವಿಚಿತ್ರ ಶೈಲಿಯಲ್ಲಿ ಕುಣಿದಿದ್ದೇ ಕುಣಿದಿದ್ದೆ ಕುಣಿದಿದ್ದು, ಕುಣಿತಕ್ಕೆ ಮನಸೋತು ಐದು-ಹತ್ತುರ ನೋಟುಗಳನ್ನು ಅಂಗಿಗೆ ಪಿನ್ನು ಮಾಡಿ ಇನ್ನೊಂಚೂರು ಹೆಚ್ಚು ಹುರುಪು ಬರುವಂತೆಯೂ… ಶವವನ್ನು ಊರಿನ ಓಣಿ ಓಣಿಯ ಇಕ್ಕೆಲಗಳಲ್ಲಿ ಸಕಲ ಮರ್ಯಾದೆಗಳೊಂದಿಗೆ ಮೆರವಣಿಗೆಯ ಮಾಡಿ ಕೊನೆಗೆ ಚೌಡನ ತೋಡಿದ ಗುಣಿಯಲ್ಲಿ ಹೂಳಿ ಎಲ್ಲರೂ ತಮ್ಮ ತಮ್ಮ ಮನೆಗಳತ್ತ ಹೆಜ್ಜೆ ಹಾಕಿದರು.

ಮನೆಯ ಮಂದೆ ಸುಮಾರು ಒಂದುವರೆ ತಾಸಿನಿಂದ ಕಾಯುತಿದ್ದರೂ ಒಬ್ಬರೂ ಕ್ಯಾರೆ ಎನ್ನಿಲಿಲ್ಲದ್ದಕ್ಕೆ, ಕೊನೆಗೆ ಇಪ್ಪತ್ತು ಅಡಿ ದೂರ ನಿಂತು “ಧಣಿ, ನಾನ್ ಚೌಡ ಬಂದೀನಿ, ಒಸಿ ಇತ್ತಾಗು ನೋಡ್ರಿ, ಕುಡಿಯಾಕ್ ರೊಕ್ಕ ಇಲ್ಲದ್ಕ ಕೈ ನಡುಗಾಕತ್ಯಾವ ಮೈಯಾಗ್ ಬೆಂಕಿ ಹತ್ತಿ ಸುಡಾಕತ್ಯಾವ… ಯ್ಯೇಟೊತ್ತಿನಿಂದ ಕಾಯಾಕತ್ತೀನಿ ಒಬ್ಬುರಾರು ನೋಡುವಲ್ರಲ್ಲ” ಒಳಗಿನಿಂದ ಗೌಡನ ಮಗ ಬಂದವನೇ “ಏನಲೇ ಸಣ್ ಸೂಳಿ ಮಗ್ನೆ, ನನ್ ಮನಿ ಮುಂದ್ ನಿಂತ್ ಮಾತಾಡೋವಷ್ಟು ದೊಡ್ಡೋನಾಗಿ ಮಗನಾ, ಮೈಯಾಗ್ಳ ಚಮ್ಡ ಸುಲ್ದು ಕೆರ ಮಾಡ್ಕ್ಯಂಬ್ತಿನಿ…” ಅಲ್ಲಿಯವರೆಗೂ ಕೈ ಕಟ್ಟಿಕೊಂಡು ತಲೆ ಬಗ್ಗಿಸಿ ಮಾತನಾಡುತಿದ್ದ ಚೌಡ ತಲೆ ಎತ್ತಿ ಲುಂಗಿಯನ್ನು ಮೇಲಕ್ಕೆ ಕಟ್ಟಿ “ನಾನ್ಯೇನ್ ಕ್ಯೇಳಿದೆ ನಿಂಮ್ನ, ನಿಮ ಆಸ್ತಿ ಕ್ಯೇಳಿದ್ನಾ ಹೆಂಗಾ…. ದೊಡ್ ಧಣಿ ಅಸ್ತಿ ಹೂಳಾಕ ಗುಣಿ ತಗ್ದೀನಿ ನಾನೇನು ಪುಗಸಟ್ಟೇ ಕ್ಯೇಳುತಿಲ್ಲ ಕೊಡ ರೊಕ್ಕ ಕೊಡಲಿಕ್ಕ ಈಟು ಮಾಡ್ತಿರಲ್ಲಾ… ಬ್ಯಾಡ ಬುಡ್ರಿ” ಎಂದು ಜೋರಾಗಿ ಹೇಳಿ “ನಿಮ್ ಸ್ಯಾಟದ್ ರೊಕ್ಕದ್ ಮ್ಯಾಲ ಮಣ್ಣ ಹಾಕ್ಲಿ….” ಎಂದು ಮೆಲ್ಲಗೆ ಹೇಳಿಕೊಳ್ಳುತ್ತಲೂ ಸಾರಯಿ ಅಂಗಡಿಯಲ್ಲಿ ಸಾಲ ಮಾಡಿ ಎಂದಿಗಿಂತ ಹೆಚ್ಚಾಗೆ ಕುಡಿದ. ಬೆಳಿಗ್ಗೆಯಿಂದ ಅಂದುಕೊಂಡಿದ್ದೆಲ್ಲಾ ಹೊಳೆಯಲ್ಲಿ ಹುಣ್ಸೆ ಹಣ್ಣು ಹಿಂಡಿದಾಯ್ತೆಂದು ಹಾಗೂ ಹೆಂಡತಿ ಬಳಿ ತಾನು ಗೌಡರ ಗುಣಿ ತೆಗೆದು ಮನೆಗೆ ಅಕ್ಕಿಯನ್ನು ತಂದೆ ತರುವುದಾಗಿ ಭೀಶ್ಮ ಪ್ರತಿಜ್ಞೆ ಮಾಡಿ ಬಂದಿದ್ದು ಎಲ್ಲವನ್ನೂ ನೆನಪು ಮಾಡಿಕೊಳ್ಳುತ್ತಲೇ ಮತ್ತೆ ಸ್ಮಶಾನದ ಕಡೆ ಹೊರಟ….

ಊರಿಗೆ ಊರೆ ಮಲಗಿ ಅರ್ಧ ನಿದ್ದೆಯನ್ನಾಗಲೇ ಮುಗಿಸಿರುವಾಗ ಚೌಡ ಮಾತ್ರ ಗೋರಿಗಳಿಗೆ ಆನಿಕೊಂಡು ಏನೇನೊ ಲೆಕ್ಕ ಹಾಕುತಿದ್ದ ಅದೇನೆಂದರೆ….

“ಗೌಡನ ಮಣ್ಣಾಗಿಡುಬೇಕಾದ್ರೆ ಬೆಳ್ಳಾಗ ಉಂಗುರಾ ಇತ್ತಲಾ!!! ಛೇ ಛೇ ಸತ್ತೋರ್ ಮೈಯಾಗ್ಳು ಬಂಗಾರ ಮುಟ್ಟೋದಂದ್ರ ಏನು, ಇಂಥಾ ಮನೆ ಹಾಳು ಪಿಲ್ಯಾನಿಗಿಂತ ಹಸಿವಿನ್ಯಾಗ ಸಾಯೋದ ವಾಸಿ… ಬೇಕಾದ್ರ ದ್ಯಾವರು ನನಗ ಕುಷ್ಠ ರೋಗ ಕೊಡ್ಲಿ, ಯಾಲ್ಡು ಕಣ್ಣು ಕಳಿಲಿ ಮನೀಗೆ ಅಕ್ಕಿ ತಗಂಡ್ ಹೋಕ್ಕಿನಿ… ಅದ್ಯಾವ್ ದ್ಯಾವರು ಬರ್ತಾನ ಬರ್ಲಿ” ಎಂದು ಅತ್ತ ಕೊಂಚ ಹೆದರಿಕೆಯಿಂದಲೂ ಇತ್ತ ಹಸಿವಿನ ನಾಳೆಯಿಂದಲೂ… ಹಚ್ಚಿದ್ದ ಊದಿನಕಡ್ಡಿ ಇನ್ನೂ ಉರಿಯುತಲೇ ಇತ್ತು, ಬರಿ ಮುಕ್ಕಾಲು ಗಂಟೆಯಲ್ಲೇ ಗೌಡರ ಅಸ್ತಿಯನ್ನು ತೆಗೆದು ಕೈಯಲ್ಲಿದ್ದ ಉಂಗುರವನ್ನು ಒದ್ದಾಡಿ ತೆಗೆದು ಡ್ರಾಯರ್ರಿನ ಒಳ ಜೇಬಿಗೆ ಸೇರಿಸಿ ಯಥಾರೀತಿ ಗೌಡರನ್ನು ಮಣ್ಣು ಮಾಡುತ್ತಾನೆ. ಉಂಗುರವನ್ನು ಮತ್ತೆ ಕೈಯಲ್ಲಿ ಹಿಡಿದುಕೊಂಡು ನೋಡುತ್ತಾ ಖುಷಿ ಪಡುತ್ತಾ ಮನೆಯತ್ತ ಹೆಜ್ಜೆ ಹಾಕುತ್ತಾನೆ.

‍ಲೇಖಕರು avadhi

March 29, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

17 ಪ್ರತಿಕ್ರಿಯೆಗಳು

  1. Santhoshkumar LM

    ಮಣ್ಣಾಗ ಮಣ್ಣಾಗೊ ದೇಹಕ್ಕ ಏಟೊಂದು ಐತಿ ನೋಡು, ಬದುಕಲಿಕ್ಕ ಧರುಮ ಅಂತಾ ಮಾಡಿಕೊಂಡ ಅದು ಸಾಕಾತಂತ ಜಾತಿ ಮಾಡಿಕೊಂಡ, ಕುಡಿಕಿ ಮಾಡಿದ್ರ ಕುಂಬಾರ ಅಂದ್ರು, ಬಾಗಿಲು ಮಾಡಿದ್ರ ಬಡಿಗಿ ಅಂದ್ರು, ಬೆಳ್ಳಿ ಬಂಗಾರ ಮಾರಿದ್ರ ಅಕ್ಸಾಲಿಗ ಅಂದ್ರು, ದ್ಯೇವರು ಪೂಜಿ ಮಾಡಿದ್ರ ಪೂಜಾರಿ ಅಂದ್ರು, ದಿನಿಸಿ ಮಾರಿದ್ರ ಸೆಟ್ಟಿ ಅಂದ್ರು, ಊರು ಆಳಿದ್ರ ಗೌಡ್ರು ಅಂದ್ರು, ಕೆರ ಹೊಲಿಯಕ್ಕ ಅಂತಾನ ನಮ್ಮನ್ನ ಊರ ಹೊರಗ ಇಟ್ಟಾರ..
    Superb Pravara!!

    ಪ್ರತಿಕ್ರಿಯೆ
  2. poornima

    hasivemba “hasivu”…
    “ಮಣ್ಣಾಗ ಮಣ್ಣಾಗೊ ದೇಹಕ್ಕ ಏಟೊಂದು ಐತಿ ನೋಡು, ಬದುಕಲಿಕ್ಕ ಧರುಮ ಅಂತಾ ಮಾಡಿಕೊಂಡ ಅದು ಸಾಕಾತಂತ ಜಾತಿ ಮಾಡಿಕೊಂಡ, ಕುಡಿಕಿ ಮಾಡಿದ್ರ ಕುಂಬಾರ ಅಂದ್ರು, ಬಾಗಿಲು ಮಾಡಿದ್ರ ಬಡಿಗಿ ಅಂದ್ರು, ಬೆಳ್ಳಿ ಬಂಗಾರ ಮಾರಿದ್ರ ಅಕ್ಸಾಲಿಗ ಅಂದ್ರು, ದ್ಯೇವರು ಪೂಜಿ ಮಾಡಿದ್ರ ಪೂಜಾರಿ ಅಂದ್ರು, ದಿನಿಸಿ ಮಾರಿದ್ರ ಸೆಟ್ಟಿ ಅಂದ್ರು, ಊರು ಆಳಿದ್ರ ಗೌಡ್ರು ಅಂದ್ರು, ಕೆರ ಹೊಲಿಯಕ್ಕ ಅಂತಾನ ನಮ್ಮನ್ನ ಊರ ಹೊರಗ ಇಟ್ಟಾರ.. ಶ್ರೇಷ್ಠ ಅಂಬೋರು ಮ್ಯಾಲ ಕುಂತಾರ, ಕೀಳು ಅನಿಸಿಕೊಂಡೊರನ್ನ ಕಾಲಿನ್ ಕೆಳಾಗ ಹಾಕಿ ತುಳ್ದಾರ… ಯ್ಯೋಟೆ ದೊಡ್ಡರಾದ್ರು ನಾಕು ದಿನ ಉರಿತಾರ ಕೊನೀಗೆ ನಮ್ಮಂತೋರು ತೋಡಿದ್ ಕುಣ್ಯಾಗ ಮಣ್ಣಾಗುತಾರ… ”
    ee saalugalu bhahala artha purna anisidavu..
    adehllakintha ee saalugalanna obba kudukana bhaiyalli yehlisiddu maatthoo esta aythu….
    kudukanadaru swabimaani anisikondu….
    mathae hasivigae talaebhagiddu…..
    tumbha chanda edae kathae……

    ಪ್ರತಿಕ್ರಿಯೆ
  3. Jayalaxmi Patil

    ಹಸಿ ಮಣ್ಣಿನಲ್ಲಿಯ ಹೆಜ್ಜೆಗಳು ನಿನ್ನವು ಪ್ರವರ. ಬಳ್ಳಾರಿ ಭಾಷೆಯ ಸೊಗಡು, ಕಣ್ಣಿಗೆ ಕಟ್ಟುವ ಬಡತನದ ಚಿತ್ರಣ, ಸಿರಿತನದ ಕಡೆಗಿರುವ ಸ್ವಲ್ಪ ಅತೀ ಎನಿಸುವ ನಿನ್ನ ಅಸಹನೆ ಎಲ್ಲವೂ ಓದುಗರನ್ನು ತಲುಪುತ್ತವೆ.

    ಪ್ರತಿಕ್ರಿಯೆ
  4. Paresh Saraf

    ಈ ಭಾಷೆಯ ಶೈಲಿಯಲ್ಲಿ ಓದುವುದು ನನಗೆ ಸ್ವಲ್ಪ ಕಷ್ಟವಾಯಿತು. ಕಷ್ಟಕ್ಕೆ ತಕ್ಕ ಫಲ- ಉತ್ತಮ ಬರಹ ಓದಿದ ಖುಷಿಯಿದೆ 🙂

    ಪ್ರತಿಕ್ರಿಯೆ
  5. lakshmi

    kathe tumbaa chennagide pravara, bhasheya sogadu chennagide. ninage shubhavagali.:)

    ಪ್ರತಿಕ್ರಿಯೆ
  6. Rukmini Nagannavar

    ಪ್ರವರ, ತುಂಬಾ ಚೆನ್ನಾಗಿ ಬರೆದಿದ್ದೀಯ, ಗ್ರಾಮೀಣ ಭಾಷಾ ಸೊಗಡು, ಜನರ ರೀತಿ, ನೀತಿ, ಅವರ ಭಂಗಿಗಳು ಕಣ್ಣ ಮುಂದೆ ನಿಲ್ಲುವಂತವುಗಳು. ಅವುಗಳನ್ನೆಲ್ಲ ಬಲು ಸೊಗಸಾಗಿ ವರ್ಣಿಸಿದ್ದೀಯ. ಬಡತನದ ಬೇಗೆಯಲಿ ಬೇಯುವುದರ ಜೊತೆಗೆ ಕೆಳಜಾತಿಯವರು ಎಂಬ ನಿರ್ಲಕ್ಷಕ್ಕೆ ಒಳಗಾದ ದಲಿತರಚಿತ್ರಣವನ್ನು ನಿನ್ನ ಲೇಖನದಲ್ಲಿ ಸೊಗಸಾಗಿ ಬಿಂಬಿಸಿದ್ದೀಯ. ಇದೆ ತರದ ಲೇಖಗಳನ್ನು ಹೆಚ್ಚು ಹೆಚ್ಚು ಓದಿಸಪ್ಪ. ಶುಭವಾಗಲಿ.

    ಪ್ರತಿಕ್ರಿಯೆ
  7. Ishwara Bhat K

    ಸುಪರ್ ಪ್ರವರ. 🙂 ಮಾರ್ಮಿಕ ಮತ್ತು ಗ್ರಾಮ್ಯ ಭಾಷೆಯ ಬಳಕೆ ಅತ್ಯಂತ ಸುಂದರವಾಗಿದೆ.

    ಪ್ರತಿಕ್ರಿಯೆ
  8. Azad IS

    ಜೀವನ ಮತ್ತು ವಾಸ್ತವಗಳ ನಡುವಿನ ಸಂಬಂಧ ಕಣ್ಣ ಮುಂದೆ ಬಂದಂತಿದೆ ಪ್ರವರ ನಿಮ್ಮ ಕಥಾ ಶೈಲಿ

    ಪ್ರತಿಕ್ರಿಯೆ
  9. krishna

    ಕತೆಯಲ್ಲಿ ಗ್ರಾಮ್ಯ ಕಲಾತ್ಮಕವಾಗಿ ಮೂಡಿಬಂದಿದೆ. ಭರವಸೆಯ ಕತೆಗಾರ ಪ್ರವರ. ಻ಪ್ಪನ ಪ್ರಭಾವಕ್ಕೆ ಪೂರ್ತಿ ಒಳಗಾಗಬಾರದು. ಅಭಿನಂದನೆಗಳು.

    ಪ್ರತಿಕ್ರಿಯೆ
  10. ಉದಯ್ ಇಟಗಿ

    ನಿಮ್ಮ ಕಥೆಯಲ್ಲಿ ನಿಮ್ಮ ತಂದೆಯವರ ಶೈಲಿಯ ಪ್ರಭಾವ ದಟ್ಟವಾಗಿದೆ ಅನಿಸುತ್ತದೆ. ಹಾ, ಇದು ನನ್ನ Compliment ಅಷ್ಟೇ! ಬಳ್ಳಾರಿಯ ಮಣ್ಣಿನ ಸೊಗಡನ್ನು ತುಂಬಿಕೊಂಡು ಬರೆಯುವ ನಿಮಗೆ ಉಜ್ವಲ ಭವಿಷ್ಯವಿದೆ ಎನಿಸುತ್ತದೆ. Good Luck.

    ಪ್ರತಿಕ್ರಿಯೆ
  11. Sathish Naik

    Super Pravara.. Nimma thandeyavara baraha dhaatiyanna & avara halavaaru rachanegalanna nenapinellege thandeleda baraha.. 🙂 ishtavaaythu.. 🙂

    ಪ್ರತಿಕ್ರಿಯೆ
  12. Gopaal Wajapeyi

    ಏನು ಹೇಳಲಿ ಹುಡುಗಾ…!? ನೀನು ‘ಒಳಗೊಳಗೇ’ ಬೆಳೆಯುತ್ತಿರುವಿ ಅಂತ ಮಾತ್ರ ಹೇಳಬಲ್ಲೆ.

    ಪ್ರತಿಕ್ರಿಯೆ
  13. CHANDRASHEKHAR VASTRAD

    ಸಂತಸ. ಅಪ್ಪನ ತೆಕ್ಕೆಯಿಂದ ಬಿಡಿಸಿಕೊ,ಹೆಗಲಿನಿಂದ ಕೆಳಗಿಳಿ. ಅಪ್ಪನೂ ಸಂತೋಷಿಸುವ. ಅಪ್ಪನಲ್ಲಿಲ್ಲದ ಏನೋ ಒಂದು ನಿನ್ನಲ್ಲಿದೆ. ಅಭಿನಂದನೆಗಳು/

    ಪ್ರತಿಕ್ರಿಯೆ
  14. ಜಿ.ಎನ್ ನಾಗರಾಜ್

    ಒಂದು ಒಳ್ಳೆಯ ಪುಟ್ಟ ಕಥೆ.ಸಾಕಷ್ಟು ಆಳವನ್ನು, ಹಲವು ಮಗ್ಗಲುಗಳನ್ನು ಹೊಂದಿದೆ.ಭಾಷೆ,ಶೈಲಿ ಈ ಬದುಕಿನ ದುರಂತವನ್ನು ಬಿಂಬಿಸುವಲ್ಲಿ ಪರಿಣಾಮಕಾರಿಯಾಗಿದೆ.ನಮ್ಮೆಲ್ಲರನ್ನೂ ಚಿಂತನೆಗೆ ಹಚ್ಚುವ ವಿಷಯ

    ಪ್ರತಿಕ್ರಿಯೆ
  15. Shashidhar KM

    ನಮ್ ಕಡೆ ಭಾಷೆನ ಸಕ್ಕತ್ತಾಗಿ ಬಳಸಿದ್ದೀರಿ ಪ್ರವರ….
    ಮಾನ್ಯ ಕುಂವೀಯವರ “ದೇವರ ಹೆಣ” ತುಂಬಾ ನೆನಪಾಯ್ತು…!
    🙂
    ಇಂಥ ಒಳ್ಳೆಯ ಕಥೆ ಓದಿಸಿದ್ದಕ್ಕೆ ಧನ್ಯವಾದ 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: