ಸಂಪು ಕಾಲಂ : ’…..'ಅನುಭಾವ ಕವಿ' ಎಂದೇ ಕರೆಯಬಹುದು ನಮ್ಮ ಬೇಂದ್ರೆಯವರನ್ನು’!

ಮೆಟಾಫಿಸಿಕಲ್ ಬೇಂದ್ರೆ

“Heads we lose and hearts we win
We spend our lives through thick and thin
The Head or Tail of love is one
The whole is understood by none”
 
ಇತ್ತೀಚಿಗೆ ಈ ಮೇಲ್ಕಂಡ ಸಾಲುಗಳನ್ನು ಮೊಟ್ಟ ಮೊದಲ ಬಾರಿಗೆ ಓದಿದೆ. ಇದನ್ನು ಬರೆದ ಕವಿ ಯಾರೆಂದು ತಿಳಿದು ಬೆರಗಾದೆ. ಇವು ನಮ್ಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ವರಕವಿ ಬೇಂದ್ರೆಯವರ ಸಾಲುಗಳು. ಬೇಂದ್ರೆ ಆಂಗ್ಲ ಭಾಷೆಯಲ್ಲೂ ಪದ್ಯ ರಚಿಸಲು ಇಚ್ಚಿಸಿದ್ದು, ರಚಿಸಿದ್ದು ತಿಳಿಯದ ನಾನು ಕುತೂಹಲದಿಂದ ಓದತೊಡಗಿದೆ. ಆಗ ತಿಳಿದು ಬಂದದ್ದು ಬೇಂದ್ರೆಯವರು ಆಂಗ್ಲ ಭಾಷೆಯಲ್ಲಿ ಅನೇಕ ಪದ್ಯಗಳನ್ನು ಬರೆದಿದ್ದು, ಅವುಗಳಲ್ಲಿ ಕೆಲವು ಕೆ. ರಾಘವೇಂದ್ರ ರಾವ್ ಅವರು ಸಂಪಾದಿಸಿರುವ ‘ಆಸ್ಪೈರಿಂಗ್ ಫೈರ್’ ಎಂಬ ಪುಸ್ತಕದಲ್ಲಿ ಮರುಜನ್ಮ ಪಡೆದಿವೆ ಎಂದು.
ಕಾಕತಾಳೀಯವೆಂಬಂತೆ ಈ ವಿಷಯದಿಂದ ಪುಳಕಗೊಂಡಿದ್ದ ನನಗೆ, ಹೀಗೆ ನಡೆಯುತ್ತಿದ್ದ ‘ಆನ್ಲೈನ್ ಕಣ್ಣಾಡಿಸುವಿಕೆ’ಲ್ಲಿ ಚುಕ್ಕುಬುಕ್ಕುವಿನ ಬೋಗಿಯೊಂದರಲ್ಲಿ ಬೇಂದ್ರೆಯವರ ಮಹತ್ ಗ್ರಂಥಾಲಯ ಕಂಡುಬಿಟ್ಟಿತು. ಇನ್ನು ಕೇಳುವಷ್ಟೇ ಇಲ್ಲ, ದಿನವಿಡೀ ಬೇಂದ್ರೆ ಪದ್ಯಗಳ ಗುಂಗು. ಈ ಮೇಲಿನ ಸಾಲುಗಳ ಕನ್ನಡಿಯಲ್ಲಿ ಥಟ್ಟನೆ ೧೭ನೇ ಶತಮಾನದ ಜಾನ್ ಡನ್, ಹೆನ್ರಿ ವಾಗನ್ ಮುಂತಾದವರ ಛಾಯೆ ಕಂಡಿತು. ಆಗಲೇ ಅರಿವಾದ್ದು ಬೇಂದ್ರೆ ನವೋದಯದ ಕವಿ ಅಷ್ಟೇ ಅಲ್ಲ ಒಬ್ಬ ಮೆಟಾಫಿಸಿಕಲ್ ಕವಿಯೂ ಹೌದು ಎಂದು.
ಹದಿನೇಳನೆ ಶತಮಾನದ ಇಂಗ್ಲಿಷ್ ಸಾಹಿತ್ಯದ ಮೈಲಿಗಲ್ಲು ಎಂದರೆ, ಈ ಮೆಟಾಫಿಸಿಕಲ್ ಅಥವಾ ಅನುಭಾವ ಕಾವ್ಯ. ಹೊರನೋಟಕ್ಕೆ ಜಿಗುಟಾದ, ಅರ್ಥವಿಲ್ಲದ, ವ್ಯಾಖ್ಯೆ ಇಲ್ಲದಂತೆ ತೋರುವ ಈ ರೀತಿಯ ಪದ್ಯಗಳು ಅಗಾಧವಾದ ಆಧ್ಯಾತ್ಮರಸದ ತುಣುಕುಗಳಿಂದ ಮನೆಮಾಡಿರುತ್ತದೆ. ತಾರ್ಕಿಕತೆ, ಬೌದ್ಧಿಕ ಚಿಂತನೆ, ವಿಡಂಬನೆ ಮತ್ತು ಶಬ್ದಗಳ ಕಣ್ಣು ಮುಚ್ಚಾಲೆ ಆಟ, ಈ ಪದ್ಯಗಳಲ್ಲಿ ಕಂಡು ಬರುವ ಮುಖ್ಯ ರೂಪ ಲಕ್ಷಣಗಳು. ಮತ್ತಿವು ಬೇಂದ್ರೆ ಪದ್ಯಗಳಲ್ಲಿ ಹೊರಹೊಮ್ಮುವ ಧಾರಾಳ ಬೆಳಕುಗಳು.
ಬ. ವಿವೇಕ ರೈ ರವರು ಬೇಂದ್ರೆಯನ್ನು “The Kannada Poet Of Reason And Vision” ಎಂದು ಕರೆಯುತ್ತಾರೆ. ಇಂತಹ ತಾರ್ಕಿಕ ಮತ್ತು ದಾರ್ಶನಿಕ ವೈಭವಗಳು ಬೇಂದ್ರೆ ಸಾಹಿತ್ಯದಲ್ಲಿ ಹೇರಳ ಮತ್ತು ಇದೇ ಮೆಟಾಫಿಸಿಕಲ್ ಕಾವ್ಯದ ಜೀವಾಳ. ಈ ಕಾವ್ಯದ ಮತ್ತೊಂದು ಪ್ರಮುಖ ಲಕ್ಷಣ, ಇವು ವಿಲಕ್ಷಣವಾಗಿ, ವಾಚ್ಯವಾಗಿ ಕಂಡರೂ ಇವು ಲಿರಿಕ್ಕುಗಳು (ಹಾಡುಗಳು). ಲಯಬದ್ಧವಾಗಿರುತ್ತವೆ. ನಮ್ಮ ಶಬ್ದ ಗಾರುಡಿಗನ ಕಾವ್ಯದ ವಿಶೇಷತೆ ಈ ಲಯಬದ್ಧ ರಚನೆ. ಹೀಗಾಗಿ ನಮ್ಮ ವರಕವಿ, ಈ ರೀತಿ ಮೆಟಾಫಿಸಿಕಲ್ ಪದ್ಯಗಳ ಪಂಕ್ತಿಗೆ ಸೇರುತ್ತಾರೆ ಎನ್ನಬಹುದು.
“ತಾಂಡವ ನಡೆಸಿದ ಝಂಝಾವಾತದ
ಕಾಲಿನ ಹುಲುಗೆಜ್ಜೆ ನಾವಾಗಿರೆ
ನನಗೂ ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿ!”
ಈ ಮೇಲಿನ ಸಾಲುಗಳು ತೋರುವಂತೆ ಇಲ್ಲಿ ಅಗಾಧ ಪ್ರೇಮ ಭಾವ ಇದೆ, ಆದರೆ ಸಾಧಾರಣವಾಗಿ ಪರಿಚಿತಗೊಂಡಿರುವ ಪ್ರೀತಿಯ ನವುರಾದ ಭಾಷಿಕೆ ಕಾಣದು. ಇದೇ ರೀತಿ ಜಾನ್ ಡನ್ ನ ಪದ್ಯವೊಂದು “For god’s sake hold your tongue and let me love” ಎಂದು ಪ್ರಾರಂಭವಾಗುತ್ತದೆ.

ಒಟ್ಟಾರೆ ಬೇಂದ್ರೆಯ ಪದ್ಯಗಲಾಗಲೀ ಮೆಟಾಫಿಸಿಕಲ್ ಪದ್ಯಗಲಾಗಲೀ ಅತ್ಯಂತ ಸೂಕ್ಷ್ಮ ಭಾವಗಳನ್ನು ಒಸರುತ್ತವೆ. ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ತಾಳ್ಮೆ, ಜಾಣ್ಮೆ ನಮಗಿರಬೇಕು ಅಷ್ಟೇ. ಬೇಂದ್ರೆಯವರ ನಾಕುತಂತಿ, ಈ ರೀತಿಯ ಪದ್ಯಗಳಿಗೆ ಒಂದು ಒಳ್ಳೆ ಉದಾಹರಣೆ.
“The Head or Tail of love is one
The whole is understood by none”
ಎಂಬ ಸಾಲುಗಳು ಮತ್ತು:
“Thy firmness makes my circle just,
And makes me end where I begun”
” A Valediction forbidding mourning ” ಎಂಬ ಪದ್ಯದ ಸಾಲುಗಳೂ ಭಿನ್ನವಾಗಿ ಕಂಡರೂ ಅದರ ಮೂಲ ಧಾತು ಒಂದೇ ಎಂದು ಹೇಳಬಹುದು. ಈ ರೀತಿ ಹೇಳಿಯೂ ಹೇಳದಂತೆ ವೇದಾಂತ ಹೇಳುವುದು ಒಂದು ಅಮೂಲ್ಯ ಕಲೆಯೇ ಸೈ. ಇದನ್ನು ಸುಲಭವಾಗಿ ತಮ್ಮದಾಗಿಸಿಕೊಂಡಿದ್ದರು ಬೇಂದ್ರೆ.
“ಸಲ್ಲುವಲ್ಲಿ ಸಂದಿದೆ
ನಿಲ್ಲುವಲ್ಲಿ ನಿಂದಿದೆ
ಬರುವದೇನೆ ನೆಪ್ಪಿಗೆ
ಜೀವಜೀವದಪ್ಪಿಗೆ”
ಈ ರೀತಿ ಕಂಡೂ ಕಾಣದ ಹಾಗೆ ಭಾವಚಿತ್ತಗೊಳಿಸುವ ತಾಕತ್ತು ನಮ್ಮ ಬೇಂದ್ರೆಯಲ್ಲಿಯೇ ಇತ್ತು ಎಂದು ಹೇಳಲು ಹೆಮ್ಮೆಯಾಗುತ್ತದೆ. ಹೀಗೆ ನವೋದಯ ಅಥವಾ ‘ರೋಮಾಂಟಿಕ್’ ಎನ್ನುವುದಕ್ಕಿಂತಲೂ ‘ಅನುಭಾವ ಕವಿ’ ಎಂದೇ ಕರೆಯಬಹುದು ನಮ್ಮ ಮೆಟಾಫಿಸಿಕಲ್ ಬೇಂದ್ರೆಯವರನ್ನು.

‍ಲೇಖಕರು avadhi

March 1, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Gopaal Wajapeyi

    ವಾಮನ ಮೂರ್ತಿ ಬೇಂದ್ರೆ ನಭೋವಾಣಿ ಅನುಭಾವದ ಉತ್ತುಂಗ…

    ಪ್ರತಿಕ್ರಿಯೆ
  2. ವಿನಯ

    ಹೊಸದೇನಿಲ್ಲ ಮತ್ತದೇ ರಾಗ ನನ್ನದೂ , ತುಂಬಾ ಚೆನ್ನಾಗಿದೆ 🙂 ಒಳ್ಳೆ ಅಧ್ಯಯನ ಕೂಡ 🙂 ಗುಡ್ ಒನ್ ಅಕ್ಕೋ 🙂

    ಪ್ರತಿಕ್ರಿಯೆ
  3. ಸತೀಶ್ ನಾಯ್ಕ್

    ಟಿಪಿಕಲ್ ಬೇಂದ್ರೆ.. ಇಳಿದಷ್ಟೂ ಆಳ.. ಕಲ್ಪಿಸಿಕೊಂದಷ್ಟೂ ಅಗಲ.. ಅವರನ್ನ ಮತ್ತೂ ಒಂದಿಷ್ಟು ಬಿಡಿಯಾಗಿ ಪರಿಚಯ ಮಾಡಿಸಿ ಕೊಟ್ರಿ.. ಒಳ್ಳೆಯ ಬರಹ.. 🙂 🙂

    ಪ್ರತಿಕ್ರಿಯೆ
  4. Swarna

    ಚೆನ್ನಾಗಿದೆ, ಬೇಂದ್ರೆಯವರ ಅನುಭಾವ ಪದ್ಯಗಳ ಕುರಿತು ತಾವು ಇನ್ನೂ ವಿವರವಾಗಿ ಬರೆಯಿರಿ.

    ಪ್ರತಿಕ್ರಿಯೆ
  5. Anil Talikoti

    ಗೊತ್ತಿಲ್ಲದ ಎಷ್ಟೊಂದನ್ನು ತಿಳಿಸಿ ಕೊಡುತ್ತಿರಿ ಸಂಯುಕ್ತಾ ಅವರೇ. ತುಂಬಾ ಚೆನ್ನಾಗಿದೆ. ಬೆಂದ್ರೆ – ಬೇಂದ್ರೆ ಎಂಬುವದು ಬರೀ ಕ್ಲೀಷೆ ಅಲ್ಲ.
    ಉದಿತ ದಿನ! ಮುದಿತ ವನ
    ವಿಧವಿಧ ವಿಹಗಸ್ವನ
    ಇದುವೆ ಜೀವ, ಇದು ಜೀವನ
    ಪವನದಂತೆ ಪಾವನ
    ಹೇಳಿಯೂ ಹೇಳದಂತೆ ಹೇಳುವ ವೇದಾಂತ – ಸಂಪೂರ್ಣ ಒಪ್ಪುವ ಮಾತು.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: