ಜಯಶ್ರೀ ಕಾಸರವಳ್ಳಿ ಬರೆದ ನೀಳ್ಗತೆ – 'ಕೊಲೆಗಾರ ..?'

ಒಬ್ಬ ಕೊಲೆಗಾರನನ್ನು ನೋಡುವುದು ಹೇಗೆ?

ಜಯಶ್ರೀ ಕಾಸರವಳ್ಳಿ

ವ್ಯೂ ಪಾಯಿಂಟ್ ಎಂಬ ಹೆಸರು ಆ ಅಪಾರ್ಟ್‍ಮೆಂಟ್‍ಗೆ ಅದು ಹ್ಯಾಗೆ ಬಂತೋ, ಹಾಗೆ ಹೇಳಿಕೊಳ್ಳುವಂತಹ ಯಾವ ವ್ಯೂನೂ ಇರದ ಆ ಕಟ್ಟಡದಲ್ಲಿ ಇದ್ದದ್ದು ಕೇವಲ ಹತ್ತೇ ಮನೆ. ಮುಖ್ಯ ರಸ್ತೆಗೆ ಅಂಟಿಕೊಂಡಂತೆ ಇದ್ದ ಅದು ನಗರದ ಎಲ್ಲಾ ಸಂಪರ್ಕಗಳೊಂದಿಗೆ, ಸದ್ದುಗದ್ದಲದ ನಡುವೆ, ತನ್ನ ಅಸ್ತಿತ್ವವನ್ನು ಸಾರುವಂತೆ ತಲೆ ಎತ್ತಿ ನಿಂತಿತ್ತಾದರೂ, ರಸ್ತೆಯ ಅಷ್ಟೂ ಬದಿಯಲ್ಲಿನ ಬಹು ಮಹಡಿ ಕಟ್ಟಡಗಳ ನಡುವೆ ಸುಣ್ಣಬಣ್ಣ ಕಳೆದುಕೊಂಡು ಈಗಲೋ ಆಗಲೋ ಬೀಳುವ ಹಾಗಿದ್ದು ತನ್ನ ಆಕರ್ಷಣೆಯನ್ನು ಎಂದೋ ಕಳೆದುಕೊಂಡದ್ದರಿಂದ ಯಾರ ಗಮನವನ್ನಾಗಲಿ ಸೆಳೆಯಲು ಅಶಕ್ತವಾಗಿದ್ದ ಅದು ಅಲ್ಲಿ ನೆಲೆಸಿದವರಿಗೆ ಬಿಟ್ಟು ಬೇರೆಯವರಿಗೆ ಆ ಒಂದು ಅಪಾರ್ಟ್ಮೆಂಟ್ ಬಗ್ಗೆ ತಿಳಿಯುವುದೂ ಸಾದ್ಯವಿರಲಿಲ್ಲ.
ನಾವು ಮದರಾಸಿನ ಈ ಅಪಾರ್ಟ್‍ಮೆಂಟಿಗೆ ಬಂದು ಆಗಲೇ ಕೆಲ ವರುಷಗಳು ಕಳೆದಿದ್ದರೂ ಊರು ಇಷ್ಟವಾಯಿತೇ ಹೇಳಲಾರೆ. ನಮ್ಮ ಮನೆಯಿಂದ ಸುಮಾರು ಎರಡು ಕಿಲೊಮೀಟರ್ ನಡೆದರೆ ಎಲಿಯಟ್ ಬೀಚ್ ಇತ್ತಾದರೂ, ಮದರಾಸಿಗೆ ಹೋದ ಉತ್ಸಾಹದಲ್ಲಿ ಅಡಿಗಡಿಗೆ ಬೀಚ್ಗೆ ಹೋದ ಹಾಗೆ ಊರು ಹಳತಾಗುತ್ತಾ ಬರುತ್ತಿದ್ದಂತೆ ಆ ಉತ್ಸಾಹವನ್ನೂ ಕಳೆದುಕೊಂಡಿದ್ದರಿಂದ ಮೊದಲಿನ ಹಾಗೆ ಸಮುದ್ರದ ಆಕರ್ಷಣೆ ನಮ್ಮಲ್ಲಿ ಉಳಿದಿರಲಿಲ್ಲ. ಅಲ್ಲದೆ ಬೇರೆ ದೊಡ್ಡ ದೊಡ್ಡ ನಗರಗಳಂತೆ ಮದರಾಸೇನೂ ಆಗಂತುಗರನ್ನು ತನ್ನ ಬಾಹುಗಳಲ್ಲಿ ಬಂಧಿಸಿ, ನಿಮ್ಮನ್ನು ತನ್ನವರೊಡನೆ ಯಾವತ್ತೂ ಒಂದು ಮಾಡಿಕೊಳ್ಳುವ ಊರೇನೂ ಅಲ್ಲ ಎಂಬುದು ನನ್ನ ಭಾವನೆ. ಅದೂ ಅಲ್ಲದೆ ಬೆಂಗಳೂರಿನವರಿಗೆ ಅಷ್ಟು ಪಕ್ಕನೆ ಬೇರೆ ಊರು ಹಿಡಿಸುವುದಿಲ್ಲ ಹಾಗೂ ಬೆಂಗಳೂರಿಗೆ ಬಂದ ಪರ ಊರಿನವರು ಅಷ್ಟು ಪಕ್ಕನೆ ಬೆಂಗಳೂರು ಬಿಟ್ಟುಹೋಗುವುದೂ ಇಲ್ಲವಾದ್ದರಿಂದ ಸಹಜವಾಗಿ ಬೆಂಗಳೂರಿನವರಲ್ಲಿ ಇದ್ದಿರಬಹುದಾದ ‘ನಮ್ಮೂರು ಬೆಂಗಳೂರು’ ಎಂಬ ಹಮ್ಮು ಪ್ರಾಯಶಃ ನನ್ನಲ್ಲೂ ಇದ್ದಿರಬಹುದು. ಹಾಗಾಗಿ ಯಾವ ಊರನ್ನಾಗಲಿ ನಮ್ಮಂತಹವರು ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟ. ಏನೋ ಗೊಂದಲ; ಅದೂ ಕ್ಷಣಕ್ಷಣಕ್ಕೂ ಬಿಟ್ಟು ಬಂದ ಊರೇ ಕಣ್ಣ ಮುಂದೆ ತಾಂಡವವಾಡುತ್ತಿರುವಾಗ? ನೀವೇನೋ ಬಲಗಾಲಲ್ಲೇ ಅಕ್ಕಿ ಒದ್ದು, ಸಂತೋಷದಿಂದಲೇ ಹೊಸ್ತಿಲು ದಾಟಿದ್ದರೂ, ಒಳಹೊಕ್ಕ ಮನೆಯಲ್ಲಿ ಅಂತಹ ಸ್ವಾಗತ ನಿಮಗೆ ಎದುರಾಗದಿದ್ದರೇ…? ಬಿಟ್ಟು ಬಂದದ್ದು ಬಿಡಲಾರದಷ್ಟು ಸನಿಹದಲ್ಲಿ ನಿಂತು ಪೀಡಿಸುತ್ತಿರುತ್ತೆ. ಅಂತಹ ಮನಃಸ್ಥಿತಿಯಲ್ಲಿ ಹೊಕ್ಕಂತಹ ಊರು ಕೂಡ ಹಲವು ದಿನ…ಹಲವಾರು ದಿನ…ಅಥವಾ ವರುಷಗಟ್ಟಲೆ ನಿಮ್ಮನ್ನು ಪರಕೀಯನಾಗಿ ಇಟ್ಟು, ಸತಾಯಿಸಿ, ಸತಾಯಿಸುತ್ತಲೇ ಪೀಡಿಸುವಂತಹ ಊರಾಗಿ ಕಾಣಿಸಿಬಿಡುತ್ತೆ…

ಮತ್ತೆ ಹೊರಗಿನವರಿಗೋ, ಬೇರೆ ಪ್ರಾಂತ್ಯದವರಿಗೋ ಮೇಲುನೋಟಕ್ಕೆ ಸಿಗುವ ಆ ತಮಿಳು ಸಂಸ್ಕೃತಿ ಒಳಗಿನ ಬದುಕಿನೊಡನೆ ಒಂದಾದವರಿಗೆ ಎಂದೂ ಸಿಗುವುದೇ ಇಲ್ಲ. ನೀವು ಕಾಣುವುದು ಏನಿದ್ದರೂ ವರುಷದ ಅಷ್ಟೂ ದಿನ ಮುಲಾಜಿಲ್ಲದೇ ಏಕತಾನದಲ್ಲಿ ರಾಚುವ ಒಂದೇ ಬಿಸಿಲು, ದಗೆಯೆದ್ದು ಉರಿವ, ಉದ್ದಾನುದ್ದಕ್ಕೂ ಹರಿದಿರುವ ಕಪ್ಪಗಿನ ಡಾಂಬರು ರಸ್ತೆ, ಬಿಸಿಯುಸಿರು ಕಾರುವ ಸಮುದ್ರ, ಸುರಿವ ಬೆವರನ್ನೂ ಮರೆತು ಉಸಿರಿಗಾಗಿ ತೇಕುತ್ತಾ ಉಬ್ಬಸಪಡುವ ಜನಜಂಗುಳಿಯ ನಡುನಡುವೆಯೇ ನುಸುಳುವ ರಾಜಕಾರಣಿಗಳ ದಿನನಿತ್ಯದ ಹಣಾಹಣಿ, ಬಿಸಿಲಿನೊಂದಿಗೆ ಜಡಗಟ್ಟಿಹೋದ, ಬದುಕಿನೊಂದಿಗೆ ಹೆಣೆದುಹೋಗಿರುವ ಜನಸಾಮಾನ್ಯ ತಮಿಳರ ಅತಿ ಮಡಿವಂತಿಕೆಯ ಸೋಗು, ಮೈಯಿಂದ ಬೆವರು ಸುರಿದಷ್ಟೇ ಸಲೀಸಾಗಿ ಹರಿದು ಬರುವ ಲೆಕ್ಕಾಚಾರದಲ್ಲಿ ಪೈಸೆ ಪೈಸೆ ಕೂಡಿ ತಪ್ಪದೇ ತಿಂಗಳ ಕೊನೆಯಲ್ಲಿ ತಂಗಂ ಮಳಿಗೆಗಳಲ್ಲಿ ಜಮಾಯಿಸಿ ವರ್ಷದ ತುದಿಯಲ್ಲಿ ವೃದ್ಧಿಸಿದ ಸಂಪತ್ತನ್ನು ಬ್ಯಾಂಕಿನ ಸೇಫ್ ಡಿಪಾಸಿಟ್ ಲಾಕರ್ನಲ್ಲಿ ಭದ್ರ ಮಾಡಿ, ದಿನಾ ಬೆಳಗ್ಗೆ ಮರೆಯದೇ ಢಾಳಾಗಿ ವಿಭೂತಿ ಪಟ್ಟೆ ಬಳಿದುಕೊಂಡು, ಹರಿದ ಬನಿಯನ್ನ ಸ್ವಯಂಪ್ರೇರಿತ ಬಡತನದಲ್ಲಿ ಬದುಕುವ ಮೇಲುವರ್ಗದವರ ಶಿಸ್ತಿನ ಶಿಷ್ಠ ಬದುಕು, ಮಾತೆತ್ತಿದರೆ ಜಗಳಕ್ಕೆ ಬರುವ, ತಮ್ಮೆಲ್ಲಾ ನೋವುಗಳನ್ನು ಸಿನಿಮಾ ಜಗತ್ತಿನ ಥಳಕಿನಲ್ಲಿ ಸಂಪೂರ್ಣ ಮರೆಯುವ, ಕಡುಬಡತನದಲ್ಲೂ ತೀವ್ರ ಬದುಕಿನ ಹಂಬಲದ ಹೋರಾಟದಲ್ಲಿ ದಿನ ತಳ್ಳುವ ಬೀದಿ ಜನರ ಬವಣೆಯಲ್ಲಿ ಹೊಂದಿಯೋ, ಹೊಂದಲಾರದೆಯೋ ಬದುಕಬೇಕಾದ ನೀವು ಕಡೆಯವರೆಗೂ ಆಗಂತುಗರೇ. ಬಹುಷಃ ಹಿಂದೆಂದೂ ಕಾಡದಷ್ಟು ನಿಮ್ಮ ಊರು ಇಲ್ಲಿ ಬಂದಾಗ, ಇದ್ದಾಗ, ಕಾಡುತ್ತೆ.
ಆದರೆ ಹಾಗೆ ಹೇಳಿದಾಕ್ಷಣ ನಾನು ಹೇಳುವ ಇವೆಲ್ಲವೂ ಸತ್ಯ ಎಂಬುದು ಸ್ವತಃ ನನಗೂ ಗೊತ್ತಿಲ್ಲ. ನನ್ನ ಅನುಭವವೇ ಉಳಿದವರ ಅನುಭವವಲ್ಲವಲ್ಲಾ…ಇನ್ಯಾರೋ ಇದಕ್ಕೆ ವಿರುದ್ಧವಾದದ್ದನ್ನು ಬರೆದಿರುವುದನ್ನ ನೀವೆಲ್ಲೋ ಖಂಡಿತಾ ಓದಿರುತ್ತೀರ…ಘಟನೆಗಳು ಹೇಗೆ ಉಲ್ಟಾ ಹೊಡೆಯುತ್ತವೆ ಎಂದರೆ ನಾವು ನಂಬಿದ್ದ ಕೆಲವೊಂದು ವಿಷಯಗಳು ನಮಗೆ ಗೊತ್ತಿಲ್ಲದ ಹಾಗೆಯೇ ವಿಭಿನ್ನ ರೂಪ ತಾಳುತ್ತಿರುತ್ತವೆ. ಕಡೆಗೆ ಹೊಳೆಯುವುದು ಸತ್ಯವೆನ್ನುವುದು ಯಾರ ತಕ್ಕಡಿಯ ಸ್ವತ್ತೂ ಅಲ್ಲ…
ನಾವು ಇದ್ದದ್ದು ಒಂದು ಚಿಕ್ಕ ಪ್ಲ್ಯಾಟ್. ನಗರದ ಮಧ್ಯೆ ಇದ್ದ ಆ ಅಪಾರ್ಟಮೆಂಟಿನಿಂದ ಒಂದಿಪ್ಪತ್ತು ಹೆಜ್ಜೆಯಿಟ್ಟರೆ ಸಾಕು – ಬ್ಯಾಂಕ್, ಸ್ಕೂಲ್, ಸೂಪರ್ ಮಾರ್ಕೆಟ್, ಫೈಓವರ್ ಎಲ್ಲವೂ ಸಿಗುತ್ತಿತ್ತು. ನಮ್ಮದು ಎರಡನೇ ಫ್ಲೋರ್ನಲ್ಲಿನ ಮನೆ. ಮೊದಲ ಮಹಡಿಯಲ್ಲಿ ಒಬ್ಬರು ವಯಸ್ಸಾದ ಮಾಮಿ. ಬಹಳ ವರುಷ ಬೆಂಗಳೂರಿನಲ್ಲಿ ಇದ್ದುದ್ದರಿಂದ ಅವರಿಗೆ ಸ್ವಲ್ಪ ಕನ್ನಡ ಬರುತ್ತಿದ್ದುದ್ದು ಬಿಟ್ಟರೆ, ಎರಡು ಕ್ರಿಶ್ಚಯನ್ ಕುಟುಂಬವೂ ಸೇರಿ, ತಮಿಳರಿಂದಲೇ ತುಂಬಿದ ಅಪಾರ್ಟ್ಮೆಂಟು. ನಾವು ಆ ಫ್ಲ್ಯಾಟಿಗೆ ಹೋದ ನಂತರ, ಮಾಮಿ ಮನೆ ಪಕ್ಕ ಇದ್ದ ಮೊದಲಿನವರು ಮನೆ ಮಾರಿದ ನಂತರ ಬಂದ ಕ್ರಿಶ್ಚಿಯನ್ನರದೇ ಎರಡನೇ ಕ್ರಿಶ್ಚಿಯನ್ ಕುಟುಂಬ. ತಾಯಿ ಹಾಗೂ ಎರಡು ಗಂಡು ಮಕ್ಕಳು. ಆ ತಾಯಿಯ ಗಂಡನಿಗೆ ಈರೋಡ್ನಲ್ಲಿ ಸರ್ಕಾರಿ ಕೆಲಸ. ವಾರಾಂತ್ಯದಲ್ಲಿ ಬರುತ್ತಿದ್ದ. ತಾಯಿ ಮದರಾಸಿನ ಯಾವುದೋ ಆಸ್ಪತ್ರೆಯಲ್ಲಿ ನರ್ಸ್. ದೊಡ್ಡ ಮಗ ಏನು ಮಾಡುತ್ತಿದ್ದ ಯಾರಿಗೂ ತಿಳಿಯದು. ಚಿಕ್ಕವನು ಇಂಜಿನಿಯರಿಂಗ್ ಓದುತ್ತಿದ್ದ. ದೊಡ್ಡವನು ಕಣ್ಣನ್, ಚಿಕ್ಕವನು ಮ್ಯಾಥ್ಯೂ ಎಂದು ಮಾಮಿ ಹೇಳಿದ್ದರು. ಒಬ್ಬನಿಗೆ ಹಿಂದೂ ಹೆಸರು ಇನ್ನೊಬ್ಬನಿಗೆ ಕ್ರಿಶ್ಚಿಯನ್ ಹೆಸರು ಕೇಳಲು ವಿಚಿತ್ರವಾಗಿತ್ತು. ಆದರೆ ತಮಿಳುನಾಡಿನಲ್ಲಿ ಹಿಂದೂ ದೇವರ ಹೆಸರನ್ನು ಕ್ರಿಶ್ಚಿಯನ್ನರು ಇಟ್ಟುಕೊಳ್ಳುತ್ತಿದ್ದುದ್ದರಿಂದ ನಮ್ಮ ಹಾಗೆ ಅವರಿಗೆ ಅದು ವಿಚಿತ್ರವಾಗಿ ಕೇಳಿಸುತ್ತಿರಲಿಲ್ಲ. ಉಲಗನಾಥನ್, ಆರೋಗ್ಯಚಾಮಿ, ಏಳುಮಲೈ, ಪಳನಿಚಾಮಿ – ಇಂತಹ ಹಲವು ಹೆಸರುಗಳು ಹಿಂದೂ-ಕ್ರಿಶ್ಚಿಯನ್ ಎರಡೂ ಪಂಗಡಗಳಲ್ಲಿ ಸವರ್ೇಸಾಮಾನ್ಯ. ಕೆಲವು ಸಲ ಹಿಂದೂ ದೇವದೇವಾದಿಗಳ ಹೆಸರುಗಳನ್ನೂ ಇಟ್ಟುಕೊಂಡು ನಮ್ಮಂತಹವರಿಗೆ ಗಲಿಬಿಲಿ ಹುಟ್ಟಿಸುವುದೂ ಇದೆ. ಅದು ನನಗೆ ಗೊತ್ತಾಗಿದ್ದು ಹೀಗೆ:
ನಮ್ಮವರದ್ದು ಊರೂರು ಸುತ್ತುವ ಕೆಲಸ. ಮನೆಯಲ್ಲಿ ಇರುತ್ತಿದ್ದುದ್ದೇ ಅಪರೂಪ. ಮದರಾಸಿನ ಏಕತಾನತೆಯಿಂದ ಬೇಸತ್ತು ನಾನು ಒಂದು ಶಾಲೆಯಲ್ಲಿ ಕೆಲಸಕ್ಕೆ ಸೇರಿದ್ದೆ. ನಾ ಕೆಲಸ ಮಾಡುತ್ತಿದ್ದ ಆ ಶಾಲೆಯಲ್ಲಿ ಇದ್ದ ಒಬ್ಬ ಆಯಾಳ ಹೆಸರು ಸರಸ್ವತಿ. ಸದಾ ಬಿಳಿ ಸೀರೆ ಉಟ್ಟು, ಕೈ ಕಿವಿ ಹಣೆ ಬೋಳುಬೋಳಾಗಿ, ಒಣಗಿಕೊಂಡಿದ್ದ ಅವಳನ್ನು ಬಹಳ ದಿನ ನಾನು ವಿಧವೆ ಎಂದುಕೊಂಡಿದ್ದೆ. ನೋಡಲು ಲಕ್ಷಣವಾಗಿದ್ದ ಆಕೆ ಚಿಕ್ಕ ಪ್ರಾಯದ ಹುಡುಗಿ. ಚಿಕ್ಕ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ನನಗೆ ಸಹಾಯಕಿಯಾಗಿ ನನ್ನ ತರಗತಿಯಲ್ಲೇ ಅವಳು ಇರುತ್ತಿದ್ದದ್ದು. ಆದರೆ ಆಯಾ ಜೊತೆ ಕೂಡ ಹೆಚ್ಚು ಮಾತನಾಡುವ ಹಾಗಿರಲಿಲ್ಲವಾದ್ದರಿಂದ, ನನ್ನ ತಮಿಳು ಅಷ್ಟಕಷ್ಟೆಯಾದ್ದರಿಂದ, ಜೊತೆಗೆ ಪ್ರೈಮರಿ ಸೆಕ್ಷನ್ನ ಕೋ-ಆರ್ಡಿನೇಟರ್ ನಮ್ಮ ತರಗತಿಯ ಮುಂದೆಯೇ ಸುಳಿಯುತ್ತಿದ್ದುದರಿಂದ ನಾನು ಅನಾವಶ್ಯಕ ಅವಳೊಡನೆ ಮಾತಿಗೆ ಇಳಿಯುತ್ತಿರಲಿಲ್ಲ. ಒಂದು ದಿನ ಮಕ್ಕಳನ್ನು ಟಾಯ್ಲೆಟ್ಟಿಗೆ ಕರೆದುಕೊಂಡು ಹೋದ ಸರಸ್ವತಿ ಎಷ್ಟು ಹೊತ್ತಾದರೂ ಹಿಂತಿರುಗಿ ಬಾರದಾಗ ಹೋಗಿ ನೋಡಿದರೆ ಬಾತ್ರೂಮ್ನ ಗೋಡೆ ಹಾರಿ ಬಂದ ಯಾವನೋ ಕುಡುಕ ಅವಳ ಮುಡಿ ಹಿಡಿದು ಜಗಳವಾಡುತ್ತಿದ್ದ.
ಒಂದು ಹರಿತವಾದ ಚೂರಿ ಹಿಡಿದು ತೂರಾಡುತ್ತಿದ್ದ ಅವನು ಎಂದೋ ನೋಡಿದ್ದ ಶಿವಾಜಿ ಗಣೇಶನ್ ಇಲ್ಲಾ ಎಮ್.ಜಿ.ಅರ್. ಸ್ಟೈಲಿನಲ್ಲಿ ಚೂರಿಯನ್ನು ಝಳಪಿಸುತ್ತಾ, ಒನ್ನು ನೀ ಇರ್ಕಣು, ಇಲ್ಲೈ ನಾ ಇರ್ಕಣು. ಆನಾಲ್ ರೆಂಡು ಪೇರುಂ ಇಂದ ಉಲಗತ್ತಿಲೈ ಇರ್ಕಕೂಡದು…ಎಂದು ನಮ್ಮ ಶಾಲೆಯ ಥ್ರೋ ಬಾಲ್ ಕೋಟರ್್ ಸುತ್ತ ಸಡ್ಡು ಹೊಡೆದು ಹೊಡೆದು ಅವನು ಸುತ್ತಿಬರುತ್ತಿದ್ದುದನ್ನ ಶಾಲೆಗೆ ಶಾಲೆಯೇ ಹೊರ ಬಂದು ವೀಕ್ಷಿಸಿತ್ತು -ಇವೆಲ್ಲವೂ ಸಹಜವೆಂಬಂತೆ ಮತ್ತು ಬದುಕು ಇರಬೇಕಾಗಿದ್ದು ಹೀಗೆಯೇ ಎಂಬಂತೆ.
ಆಗ ಹೊರಬಿದ್ದ ಕತೆಯಿಂದ ನನಗೆ ತಿಳಿದು ಬಂದ ವಿಷಯವಿಷ್ಟೆ: ಹಾಗೆ ಕುಡಿದು ಬಂದು ಗಲಾಟೆ ಮಾಡಿದವನು ಬೇರೆ ಯಾರೂ ಅಲ್ಲ, ಅವನು ಸರಸ್ವತಿಯ ಗಂಡ ಆರೋಗ್ಯಚಾಮಿ. ಬೆಸೆಂಟ್ನಗರದ ಒಂದು ಚರ್ಚ್‍ನಲ್ಲಿ ಕಸ ಗುಡಿಸುವ ಕೆಲಸ. ಸದಾ ಕುಡಿದು ಬಿದ್ದಿರುವ ಅವನ ಕಾರ್ಯವೈಖರಿಯಿಂದ ಬೇಸತ್ತು, ಅವನನ್ನ ಚರ್ಚ್‍ನಿಂದ ಹೊರಹಾಕಿದ್ದಾರೆ. ಕಳೆದ ಆರು ತಿಂಗಳಿಂದ ಬೇರೆ ಕೆಲಸವಿಲ್ಲ, ಕುಡಿಯಲು ದುಡ್ಡಿಲ್ಲ. ಗಂಡಹೆಂಡತಿ ಮಾರಾಮಾರಿ ಜಗಳ ಬೀದಿಗೆ ಬಿದ್ದಿದೆ. ಪಾವಂ, ಇವಳ್ ಎನ್ನಾ ಪಣ್ಣಮುಡಿಯುಂ…ಒಂದು ತರ್ಕವಾದರೆ, ಪಾವಂ, ಇವಾಳ್ದಾನ್ ಒರು ರಾಕ್ಸಸಿ. ಅವನ್ ದಾನ್ ಎನ್ನಾ ಸೆಯ್ಗಿರಾನ್….ಇನ್ನೊಂದು ತರ್ಕ. ಸಂದರ್ಭ ಅವನನ್ನು ಹಾಗೆ ಮಾಡಿದೆ. ಇಂದ ಅಮ್ಮನಗು ಅವಳ್ ಸಂಪಾದಿಕಿರಾನ್ನು ತಿಮಿರು, ಅವನ್ ಸುವನೆಲೆಯಿಲೆ ಅವನಿರಕ್ಕಾ…ಕೊಂಜಂ ಕೂಡ ಅಕ್ಕರೈ ವೇಂಡಮಾ…? ಅಕ್ಕರೇಂತ ಕೂತರೆ ಇವಳ ಹೊಟ್ಟೆ ಹೊರೆಯುತ್ತಾ? ದುಡಿಯಬೇಕಾದವನೇ ಕುಡಿದು, ಕುಡಿದು ಚಚ್ಚೋದೂ ಅಲ್ಲದೆ ಕಷ್ಟಪಟ್ಟು ದುಡೀತಿರೋ ಇವಳ ದುಡ್ಡೂ ಬೇಕಂತೆ…ವೆಕ್ಕಮೇ ಇಲೈ…ಕೊಂಜಂ ಓವರ್ ಆಚಿ…ನಾಲ್ಕು ಕಾಸು ಸಂಪಾದಿಸಿ ಎರಡು ಮಕ್ಕಳ ಹೊಟ್ಟೆ ಹೊರೆದು ಮರ್ಯಾದೆಯಿಂದ ಬಾಳೋದು ಅವನ ಕೈಲಿ ಸಹಿಸಕ್ಕಾಗೋಲ್ಲ…ಮುಠ್ಠಾಳ್! ಮುಠ್ಠಾಳ್! ತಿಮಿರ್ ಅವನ್ಗು! ಅಂದ ಆಣ್ಕುಲತ್ತಿಲೈ ಇರಕ್ಕ್ರುರ ತಿಮಿರು…ಪಾವಂ ಸರಸ್ವತೀ…!
ಪ್ರಿನ್ಸಿಪಾಲ್ ಯಾವುದೋ ಕೆಲಸದ ಮೇಲೆ ಹೊರಗೆ ಹೋದಂತಹ ಸಂದರ್ಭ. ಪೋಲೀಸರಿಗೆ ಕಂಪ್ಲೇಂಟ್ ಮಾಡಬಾರದೇ? ಯಾರಿಗಾದರೂ ಸಹಜವಾಗಿ ಅನ್ನಿಸುವಂತಹದು. ಅಯ್ಯೋ ಅವಳ ಜೀವನದಲ್ಲಿ ಇರೋ ಸಮಸ್ಯೆಯೇ ಸಾಲದೂಂತ ಪೋಲೀಸರನ್ನು ಬೇರೆ ಕರೆಸಬೇಕೇ?    I mean, you want me to add spice to her life?  ನನ್ನ ಕೋ-ಆರ್ಡಿನೇಟರಳ ನೇರ ಪ್ರಶ್ನೆ. ತಮಿಳರ ವಿಚಿತ್ರ ಅನುಕಂಪ, ಮರುಕ, ಸಹಾನುಭೂತಿ ಕೂಡ ನಂಗೆ ಹೊಸತು. ತಿವಿಯುವಂತೆ ಚಾಕು ಝಳಪಿಸುತ್ತಾ ನಿಂತ ಸರಸ್ವತಿಯ ಗಂಡ ದುಷ್ಟನಂತೆ, ಕೇಡಿಯಂತೆ ನನ್ನ ಎದೆಗುಂಡಿಗೆಯನ್ನು ಜಾಗೃತಗೊಳಿಸಿದರೆ, ಅಲ್ಲಿ ಸುತ್ತುವರಿದು ನೋಡುತ್ತಿದ್ದ ಸಮಸ್ತರಿಗೂ ಕೊಲ್ಲುವ ಮಟ್ಟಕ್ಕೆ ಸರಸ್ವತಿಯ ಗಂಡ ಖಂಡಿತಾ ಹೋಗಲಾರನೆಂಬ ವಿಶ್ವಾಸ. ಸುಮ್ಮನೆ ಹೆದರಿಸುತ್ತಾನೆ, ಧಂ ಇದ್ದರೇ ತಾನೆ……..Frustration! He takes out on her. Where’ll he go, poor chap!   ಮಾಡಲಿಕ್ಕೆ ಕೆಲಸವಿಲ್ಲ, ತಿನ್ನಲ್ಲಿಕ್ಕೆ ಗಂಜಿಯಿಲ್ಲ…ಚಾಕು ಅಲ್ಲದೆ ಇನ್ನೇನು ತಾನೇ ತಕ್ಕೋಬೇಕು ಅವನಾದರೂ…ಪಾವಂ.

ಎಲ್ಲರೂ ಏಕಪ್ರಕಾರದಲ್ಲಿ ಅನುಕಂಪ ತೋರಿ ಲೊಚಗುಟ್ಟುವ ಹೊತ್ತಿಗೆ ಸರಸ್ವತಿ ಹೈರಣಾಗಿಹೋಗಿದ್ದಳು. ಸ್ಕೂಲ್ ಬಸ್ಸಿನ ಡ್ರೈವರ್ಸ್ ಮತ್ತು ಕಂಡಕ್ಟರ್ಸ್ ಸೇರಿ ಜಗಳವನ್ನು ಹದ್ದುಬಸ್ತಿಗೆ ತಂದು ಆರೋಗ್ಯಚಾಮಿ ಕೈಯಲ್ಲಿ ಒಂದಷ್ಟು ದುಡ್ಡು ತುರುಕಿದ ಮೇಲೆಯೇ ಎಲ್ಲವೂ ಶಾಂತವಾಗಿದ್ದು!
ಮೊದಲೇ ದೂಳು ತುಂಬಿದ ಊರು. ಥ್ರೋಬಾಲ್ ಕೋರ್ಟ್ ತುಂಬಾ ಬೆದೆಗೆ ಬಂದ ಗೂಳಿ ತರಹ ಅವನು ಹೊರಳಾಡಿ ಹೋಗಿದ್ದಕ್ಕೆ ಇಡೀ ದಿನ ಸುಂಟರಗಾಳಿ ಎದ್ದ ನಂತರದ ದೂಳಿನ ಘಾಟು ಅಲ್ಲೆಲ್ಲಾ ಆವರಿಸಿಕೊಂಡಿತ್ತು. ಉಸಿರಿನಲ್ಲಿ, ಊಟದಲ್ಲಿ, ಕ್ಲಾಸ್ರೂಮ್ನಲ್ಲಿ, ಮನಸ್ಸ್ಸಿನಲ್ಲಿ ಎಲ್ಲೆಲ್ಲೂ ದೂಳು. ಸರಸ್ವತಿ ಏನೂ ನಡೆದಿಲ್ಲವೆಂಬಂತೆ ತನ್ನ ಪಾಡಿಗೆ ತಾನು ಬಂದು ನನ್ನ ಕ್ಲಾಸ್ ಸೇರಿಕೊಂಡಿದ್ದಳು. ಮತ್ತೆ ಅದೇ ವಿಧವೆಯ ಕಳೆ, ನಿರ್ಲಿಪ್ತ ಮುಖ!
ಆ ಶಾಲೆಗೆ ನಾ ದುಡಿದ ಹತ್ತು ವರುಷಗಳಲ್ಲಿ ಒಮ್ಮೆಯೂ ಆ ಮುಖದ ಭಾವ ಬದಲಾಗಲಿಲ್ಲ; ಒಮ್ಮೆಯೂ ಬಾಯಿ ತೆರೆದು ಅವಳು ತನ್ನ ಬದುಕಿನ ಗೋಳು ಹೇಳಿಕೊಳ್ಳಲಿಲ್ಲ. ಯಾಂತ್ರಿಕವಾಗಿ ಬರುತ್ತಿದ್ದಳು, ಯಂತ್ರದಂತೆ ದುಡಿಯುತ್ತಿದ್ದಳು. ‘ನಿಂಗೆ ಹಿಂದೂ ದೇವರ ಹೆಸರು ಇಟ್ಟವರು ಯಾರು?’ ನಮ್ಮ ಪ್ರಮುಖ ದೇವರಲ್ಲಿ ಸರಸ್ವತಿ ಒಬ್ಬಳಾದ್ದರಿಂದ ಒಮ್ಮೆ ಕುತೂಹಲದಿಂದ ಕೇಳಿದೆ. ‘ತೆರಿಯಾದು’ ಅದೇ ನಿರ್ಲಿಪ್ತ ಮುಖ. ‘ದೇವರ ಹೆಸರು ಇಟ್ಟುಕೊಂಡಾಕ್ಷಣ ದೇವರಂಥಾ ಬದುಕು ಸಿಗುತ್ತೇನು?’ ನನ್ನನ್ನೇ ಮರು ಪ್ರಶ್ನೆ ಮಾಡಿದ್ದಳು, ಆ ಸರಸ್ವತಿ!
ಒಣಗಿದ ಕಟ್ಟಿಗೆಯಂತಹ ಮನುಷ್ಯನೊಬ್ಬ ನಮ್ಮ ಬಿಲ್ಡಿಂಗ್ನ ವಾಚ್ಮನ್. ನಾವು ಆ ಮನೆಗೆ ಹೋದ ನಂತರ ಅವನು ವಾಚ್ಮನ್ ಆಗಿ ನಮ್ಮ ಬಿಲ್ಡಿಂಗ್ಗೆ ಬಂದು ಸೇರಿಕೊಂಡ. ಅವನೂ ಕ್ರಿಶ್ಚಿಯನ್ ಅನ್ನುವುದು ಬಹಳ ದಿನ ನನಗೆ ಗೊತ್ತಿರಲಿಲ್ಲ. ಹೆಸರು ಏಳುಮಲೈ. ಹೇಳಿದೆನಲ್ಲಾ ಹೆಸರಿನಿಂದ ಏನೂ ಗೊತ್ತಾಗುವುದಿಲ್ಲ. ಜೊತೆಗೆ ನಮ್ಮ ಎಲ್ಲಾ ಹಬ್ಬ ಹುಣ್ಣಿಮೆಗಳನ್ನು ಅವನೂ ಆಚರಿಸುತ್ತಿದ್ದ.
ನನಗೂ ಎರಡು ಚಿಕ್ಕ ಮಕ್ಕಳು. ಶಾಲೆಯಿಂದ ಬೇಗ ಬರುತ್ತಿದ್ದ ಮಕ್ಕಳು ಮನೆ ಬೀಗ ತೆರೆದು ಇಬ್ಬರೇ ನಾನು ಬರುವವರೆಗೂ ಇರುತ್ತಿದ್ದುದನ್ನು ಈಗ ನೆನೆದರೂ ನನಗೆ ಗಾಬರಿಯಾಗುತ್ತದೆ. ಆದರೆ ಅನಿವಾರ್ಯ. ವಾಚ್ಮನ್ಗೆ ತಿಂಗಳಿಗೆ ಸ್ವಲ್ಪ ದುಡ್ಡು ಕೊಟ್ಟು ಮಕ್ಕಳು ಮನೆ ಒಳಗೆ ಹೋದ ನಂತರ ಹೊರಗಿನಿಂದ ಮನೆಗೆ ಬೀಗ ಹಾಕಲು ಹೇಳಿದ್ದೆ. ನಿಯತ್ತಿನಿಂದ ಮಾಡಿದ ಮನುಷ್ಯ ಅವನು. ನಾನು ಕೊಡುತ್ತಿದ್ದ ದುಡ್ಡಿನ ಮೇಲೆ ಒಂದು ಚಿಕ್ಕಾಸನ್ನೂ ಬಯಸಲಿಲ್ಲ. ಬೀಗ ಜಡಿದು ತನ್ನ ಸೊಂಟಕ್ಕೆ ಕೀಲಿಯನ್ನು ಸಿಕ್ಕಿಸಿಕೊಳ್ಳುತ್ತಿದ್ದ. ನಾನು ಬರುತ್ತಿದ್ದಂತೆ ವಣಕ್ಕಂ ಎಂದು ಸೆಲ್ಯೂಟ್ ಹೊಡೆದು ಕೀಲಿ ಕೊಡುತ್ತಿದ್ದ. ಹೊರಗೆ ನಾವು ಆಡಬೇಕು, ಬಾಗಿಲು ತೆಗೀಂತ ಮಕ್ಕಳು ಕಿರಿಚಿಕೊಂಡರೂ ತೆಗೆಯುತ್ತಿರಲಿಲ್ಲ. ನಿಮ್ಮಮ್ಮ ಬಾಗಿಲಿಗೆ ಬೀಗ ಹಾಕಲು ಹೇಳಿದ್ದಾರೆ-ಅದಷ್ಟೇ ಅವನ ಉತ್ತರ!
ಹೆಸರು ಏಳುಮಲೈ ಅಂದೆನಲ್ಲವೇ? ಒಂದು ಶನಿವಾರ ನಮ್ಮ ಬಿಲ್ಡಿಂಗ್ನ ಕೆಳಗೆ ಬೆಳಿಗ್ಗೆ ಬೆಳಿಗ್ಗೆಯೇ ಏನೋ ಗಲಾಟೆ ಶುರುವಾಯಿತು. ಏಳುಮಲೈ ನಮ್ಮ ಅಪಾಟರ್್ಮೆಂಟ್ನ ಮುಂದಿನ ಗೇಟಿಗೊರಗಿ ನಿಂತಿದ್ದ. ಅವನ ಮುಂದೆ ನಾ ಎಂದೂ ನೋಡಿರದ ಧಡೂತಿ ಹೆಂಗಸೊಬ್ಬಳು ನಿಂತಿದ್ದಳು. ಕೈ ಬಾಯಿ ತಿರುಗಿಸುತ್ತಾ ಹಾವಭಾವದೊಂದಿಗೆ ಒಂದೇ ಸಮನೆ ಅರಚಿಕೊಳ್ಳುತ್ತಿದ್ದ ಆಕೆ ಏನು ಹೇಳುತ್ತಿದ್ದಾಳೆಂದು ಸ್ವಷ್ಟವಾಗದಿದ್ದರೂ, ತಲೆಗೂದಲು ಕೆದರಿ, ಸೀರೆ ಸೆರಗನ್ನು ಮೇಲಿಂದ ಮೇಲೆ ಜಾಡಿಸಿ ವದರಿ, ನೆರಿಗೆ ಕಟ್ಟಿ ತೊಡೆಗೆ ಸಡ್ಡು ಹೊಡೆದು, ಹೊಡೆದು, ಎರಡೂ ಕೈಗಳಿಂದ ಎದೆಯನ್ನ ಟಪಟಪ ಬಡಿದುಕೊಂಡು, ನೆಲದ ಮಣ್ಣನ್ನ ಬಾಚಿ ಬಾಚಿ ಅವನ ಮುಖದ ಮೇಲೆ ಮೇಲಿಂದ ಮೇಲೆ ಎರಚುತ್ತಾ ಹಿಡಿಹಿಡಿ ಶಾಪ ಹಾಕುತ್ತಿದ್ದದನ್ನು ನೋಡಿದಾಗ, ಏನೋ ನಡೆಯಬಾರದ್ದು ನಡೆದು, ಅವನ ವೈಯಕ್ತಿಕ ಬದುಕಿಗೆ ಸಂಬಂಧಪಟ್ಟಿದ್ದೇನಾದರೂ ಇದ್ದಿರಬೇಕೆಂದು ನಾ ಊಹಿಸಿಕೊಂಡಿದ್ದೆಷ್ಟೋ ಅಷ್ಟೆ. ಗೇಟಿಗೊರಗಿ ಅವಳನ್ನು ಸಂಪೂರ್ಣ ನಿರ್ಲಕ್ಷಿಸಿ, ತನ್ನ ಪಾಡಿಗೆ ತಾನು ಎತ್ತಲೋ ನಿರ್ಲಿಪ್ತನಾಗಿ ನಿಟ್ಟಿಸುತ್ತಾ ಅವನು ಈ ಯಾವುದಕ್ಕೂ ಸಂಬಂಧವಿಲ್ಲದಂತೆ ವಿಗ್ರಹದಂತೆ ನಿಂತೇ ಇದ್ದ.
ಆಫೀಸಿಗೆ ಹೋಗುವವರು ಹೋಗುತ್ತಿದ್ದರು, ಬಿಲ್ಡಿಂಗ್ ಒಳಗೆ ಬರುವವರು ಬರುತ್ತಲೇ ಇದ್ದರು, ಹೆಣ್ಣಿನ ಚೀರಾಟ-ಕೂಗಾಟಗಳೊಂದೂ ತಮಗೆ ಸಂಬಂಧಿಸಿದವಲ್ಲವೆಂಬಂತೆ. ನೋಡ ನೋಡುತ್ತಿದ್ದಂತೇ ಅವಳು ತಾನುಟ್ಟ ಸೀರೆಯನ್ನೇ ಬಿಚ್ಚಿ ಅದನ್ನ ಸರಸರ ಅವನ ಕುತ್ತಿಗೆಗೆ ಸುತ್ತಿ ಇನ್ನೇನು ಅವನನ್ನು ಕೊಲ್ಲುವ ಮಟ್ಟಕ್ಕೇ ಹೋದಳೆನ್ನುವಂತೆ ಅವನ ಕುತ್ತಿಗೆಯ ಸುತ್ತ ಗಸಗಸ ಬಟ್ಟೆಯನ್ನು ಮಸೆದಳು. ಎರಡನೇ ಮಹಡಿಯಲ್ಲಿ ನಿಂತ ನಾನು ಏನು ಮಾಡಲೂ ತೋಚದೆ ಕೈ ಕೈ ಹಿಸುಕಿಕೊಳ್ಳುತ್ತಿರುವಾಗಲೇ ನನ್ನ ಕಣ್ಣಿಗೆ ಕಂಡ ಮತ್ತೊಂದು ಆಶ್ಚರ್ಯ – ನಮ್ಮ ಅದೇ ವಾಚ್ಮನ್ ಯಾವುದೋ ನಾಟಕದ ರಿರ್ಹಸಲ್ ಎಂಬಂತೆ ಭಾವನಾರಹಿತನಾಗಿ ನಿಂತಿದ್ದವ ಒಂದು ಚೂರೂ ಮಿಸುಕಾಡದೆ ಇಂತಹ ಸಾವು ಬದುಕಿನ ಆಟ ಇರದ ಬದುಕೇ ಇಲ್ಲವೆಂಬಂತೆ ಆ ಉರುಳನ್ನು ಇನ್ನಷ್ಟು ತನ್ನ ಕುತ್ತಿಗೆಗೆ ಸರಿಯಾಗಿ ಸಿಕ್ಕಸಿಕೊಂಡು ತಾನು ಏನಿದ್ದರೂ ಒಂದಲ್ಲಾ ಒಂದು ದಿನ ಬಲಿಪಶು ಆಗಿಯೇ ತೀರಬೇಕಾದ್ದು ವಿಧಿ ಬರೆದಿಟ್ಟ ಕರ್ಮವೆಂಬಂತೆ, ಅದನ್ನು ಗಟ್ಟಿಯಾಗಿ ಎಳಿಯೆಂದು ಆ ಹೆಂಗಸಿಗೆ ಹಂದಾಡದೇ ಹಾಗೇ ನಿಂತು ಶಾಂತವಾಗಿ ಹೇಳುತ್ತಿದ್ದ.
ಆಮೇಲೊಂದು ದಿನ ಅದೇ ಹೆಣ್ಣೇ ಅವನ ಹೆಂಡತಿ ಎಂದು ತಿಳಿಯಿತು. ಆನಂತರ ಇದ್ದಕ್ಕಿದ್ದಂತೆ ಒಂದಷ್ಟು ದಿನ ಅವನು ನಾಪತ್ತೆಯಾದ. ಎಲ್ಲಿ ಹೋದ ಎಂದು ಯಾರಿಗೂ ತಿಳಿಯದು. ಒಂದೆರಡು ತಿಂಗಳಾದರೂ ಪತ್ತೆಯಿಲ್ಲದಾಗ ಬೇರೆ ವಾಚ್ಮನ್ನನ್ನ ನೇಮಿಸಲು ನಮ್ಮ ಅಪಾಟರ್ಟ್‍ಮೆಂಟ್ನಲ್ಲಿ ಮೀಟಿಂಗ್ ಸೇರಿದ ಮಾರನೇ ದಿನವೇ ಹೇಳಿ ಕಳುಹಿಸಿದ ಹಾಗೆ ಪ್ರತ್ಯಕ್ಷನಾದ. ಅವನ ಗೈರುಹಾಜರಿಯನ್ನ ಯಾರೆಂದರೆ ಯಾರೂ ಪ್ರಶ್ನಿಸಲಿಲ್ಲ. ಆನಂತರ ಅವನು ರಜ ಹಾಕಿದ್ದನ್ನೇ ನಾ ನೋಡಲಿಲ್ಲ.
ಈಗ ಮೊದಲ ಹೆಂಡತಿ ಎಂದೋ ಸತ್ತಿದ್ದಾಳೆ. ಎರಡನೇ ಹೆಂಡತಿಯೊಡನೆ ಜೀವನ. ಆದರೆ ಕಟ್ಟಿಕೊಂಡವಳೂ ಅಲ್ಲ…ಇಟ್ಟುಕೊಂಡವಳೂ ಅಲ್ಲ…ಮೊದಲ ಹೆಂಡತಿ ಬಹಳ ಶೋಕಿ ಹೆಂಡತಿ…ಇವನಿಗೆ ಒಂದು ಕುಡಿತವಿಲ್ಲ. ಬೀಡಿಯಿಲ್ಲ, ಸಿನಿಮಾ ಇಲ್ಲ…ಮೊದಲ ಹೆಂಡತಿಗೆ ಅದೇ ಬೇಜಾರು…! ಲಕ್ಷಕ್ಕೆ ಒಬ್ಬ, ಕೈ ತೊಳೆದು ಮುಟ್ಟಬೇಕು ಅಂತಹ ತಂಗಂ ಅದು…! ಆ ಹೆಂಗಸಿಗೆ ಕೈಗೆ ಸಿಕ್ಕ ಚಿನ್ನ ಬೇಡಾ ಕಾಗೆ ಬಂಗಾರದ ಆಸೆ, ಮನೆ ಪಕ್ಕದಲ್ಲೇ ಒಬ್ಬ ಇದ್ದ. ಈಯಪ್ಪಾ ದುಡಿದು ತರೋಕೆ…ಸಿನಿಮಾ ಕುಡಿತಾ ಹೋಟೆಲ್ ಮಜಾಗೆ ಆಯಪ್ಪಾ…ಇದರ ಮೇಲೆ ಎರಡು ಮಕ್ಕಳು ಬೇರೆ. ಆಯಪ್ಪಂದೋ ಈಯಪ್ಪಂದೋ ಗೊತ್ತಿಲ್ಲ….ಈಯಪ್ಪನೇ ಆ ಮಕ್ಕಳ ತಲೆ ಬಾಚಿ, ಗಂಜಿ ಕಾಸಿ, ಸ್ಕೂಲ್ಗೆ ಕಳುಹಿಸಿ ತನ್ನ ಕೆಲಸಕ್ಕೆ ಹೋಗುತ್ತಿದ್ದ…ಅದೇ ರಸ್ತೆ ಮೂಲೆಯಲ್ಲಿ ಗಂಡ ಬಿಟ್ಟ ಒಂದು ಹೆಣ್ಣಿತ್ತು…ಸಾಯಂಕಾಲ ಮಕ್ಕಳು ಸ್ಕೂಲ್ನಿಂದ ಬಂದ ಮೇಲೆ ಆಯಮ್ಮ ಬಂದು ಈ ಮಕ್ಕಳನ್ನ ನೋಡಿಕೊಳ್ಳುತ್ತಿತ್ತು…ಯಾರು ಹೇಳಿದ್ದಲ್ಲ…ಆಯಮ್ಮಂಗೆ ಅದೇನು ಅನ್ನಿಸಿತ್ತೋ…ದಿನಾ ಬರೋದು ಮಕ್ಕಳನ್ನ ನೋಡಿಕೊಳ್ಳೋದು ದಿನಾ ಬರೋದು ಮಕ್ಕಳನ್ನ ನೋಡಿಕೊಳ್ಳೋದು… ಅದೆಷ್ಟು ದಿನವೋ ಹಿಂಗೆ ಹೋತ್ತು…ಒಂದು ದಿನ ಈಯಮ್ಮ ಈಯಪ್ಪನ ಮೊದಲ ಹೆಂಡತಿ ಅದೇನು ವಾಂತಿ ವಾಂತಿ ವಾಂತೀಂತ ವಾಂತಿ ಮಾಡಿಕೋತಾನೇ ಸತ್ತುಹೋಯ್ತು…ಅಷ್ಟು ಹೊತ್ತಿಗೆ ಆ ಮಕ್ಕಳು ಆಯಮ್ಮನ ಜೊತೆಯಿದ್ದವಾ…ಸರೀಂತ ಈಯಪ್ಪ ಆಯಮ್ಮನ ಮಕ್ಕಳನ್ನು ನೋಡಿಕೊಳ್ಳಕ್ಕೇಂತ ಮನೆಗೆ ಕರೆದುಕೊಂಡು ತನ್ನ ಮನೇಲಿ ಇಟ್ಟುಕೊಂಡನಾ…ಅಷ್ಟೇ ಅಮ್ಮ…ತಾನಾಗಿ ಇನ್ನೊಬ್ಬರನ್ನು ಕಣ್ಣೆತ್ತಿ ನೋಡಿದವನಲ್ಲಮ್ಮ…ಈಗ ನಾಲ್ಕು ತಿಂಗಳಾಯಿತು. ಈಯಮ್ಮ ಇದ್ದಾಗ ಬರೀ ಜಗಳ…ತಾನು ಪೆತ್ತ ತನ್ನೊಡಲ ಮಕ್ಕಳನ್ನ ಒಂದು ದಿನವೂ ನೆಟ್ಟಗೆ ನೋಡಿಕೊಳ್ಳಲಿಲ್ಲ…ಆಯಮ್ಮ ಬರುತ್ತಾಳೇಂತ ಕೊಲ್ಲೋ ಮಟ್ಟಕ್ಕೆ ಈಯಮ್ಮ ಈಯಪ್ಪನ ಚರುಪು ಎತ್ತಿಕೊಂಡು ಎಪ್ಪಡಿ ಅಡಚಿರುಕ್ಕ್ರಾಳ್ ತೆರಿಯುಮಾ…ನರಕತ್ತಿಲೈ ಇಂದ ಅಮ್ಮಾಗು ಯೆಡಂ ಇಲೈಮಾ! ಪೊಯ್ ಸೊಲ್ಳ್ರಾಕೂಡಾದು, ಕಡವಳಗು ಅದು ಪುಡಿಕ್ಕಾದು, ಇಪ್ಪೋ ರೊಂಡ್ ಪೇರು ರೊಂಬಾ ಸಂತೋಸಮಾ ಸೂಪರ್ರಾ ಇರಕ್ಕ್ರಾಂಗ….! ಇದು ನಮ್ಮ ಮನೆ ಕೆಲಸದ ಹುಡುಗಿ ಗೋಮತಿ ಹೇಳಿದ ಕತೆ.
ಕನ್ನಡ ಬರುತ್ತೆ ಎಂದು ಆಗೊಮ್ಮೆ ಈಗೊಮ್ಮೆ ನಮ್ಮ ಮನೆಗೆ ಬಂದು ಕೂರುವ ಈ ಮಾಮಿ ಮೂಲತಃ ಎಲ್ಲಿಯವರೋ ದೇವರಿಗೇ ಗೊತ್ತು. ಇದ್ದೊಬ್ಬ ಮಗ ಈ ತಾಪತ್ರಯವೇ ಬೇಡವೆಂದು ಅಮೆರಿಕಾದಲ್ಲಿ ಯಾರನ್ನೋ ಮದುವೆ ಮಾಡಿಕೊಂಡು ಆರಾಮವಾಗಿ ಇದ್ದಾನೆ. ವಾರಕ್ಕೆ ಒಮ್ಮೆ ನಿಷ್ಠೆಯಿಂದ ಅಮ್ಮನಿಗೆ ಪೋನ್ ಹಚ್ಚುತ್ತಾನೆ. ಮಾಮಿ ಅವನೊಡನೆ ಮಾತನಾಡುತ್ತಾರೋ, ಜಗಳ ಕಾಯುತ್ತಾರೋ ಗೊತ್ತಿಲ್ಲ. ‘ಇವರು ಕಿರಿಚಿಕೊಳ್ಳುತ್ತಿರೋದು ಅಮೆರಿಕಾದಲ್ಲಿರೋ ಸಮಸ್ತ ತಮಿಳರಿಗೂ ಕೇಳಿಸುತ್ತಿರಬೇಕು!’ ಅಂತ ನಮ್ಮ ಮನೆಯವರು ತಮಾಷೆಮಾಡುತ್ತಿದ್ದರೂ ಮಾಮಿ ಕಂಠ ವಾರದಿಂದ ವಾರಕ್ಕೆ ಮುಲಾಜಿಲ್ಲದೇ ಏರುತ್ತಲೇ ಇರುತ್ತೆ.
ಈ ಕಣ್ಣನ್ ಏನು ಓದುತ್ತಿದ್ದ, ಏನು ಮಾಡುತ್ತಿದ್ದ ಅನ್ನುವುದು ಯಾರಿಗೂ ಗೊತ್ತಿಲ್ಲದ್ದಿದ್ದರೂ, ಮೆಟ್ಟಿಲು ಹತ್ತುವಾಗ ಇಳಿಯುವಾಗ ಅವನು ಎಲ್ಲರಿಗೂ ಯಾವಾಗಲೂ ಸಿಕ್ಕುತ್ತಿದ್ದ; ಎಲ್ಲರೊಡನೆ ಬಹಳ ಸ್ನೇಹದಿಂದ ಮಾತನಾಡುತ್ತಿದ್ದ. ನಾನು ಸ್ಕೂಲಿಗೆ ಹೊರಟ ಸಮಯದಲ್ಲೇ ಅವನು ಹೊರಟಿದ್ದರೆ ಡ್ರಾಪ್ ಮಾಡಲಾಂತ ಕೇಳುತ್ತಿದ್ದ; ಕೈಯಲ್ಲಿ ಏನಾದರೂ ಸಾಮಾನು ಹಿಡಿದು ಬಂದರೆ, ಕೊಡಿ ಆಂಟಿ ಎಂದು ಇಸಿದುಕೊಂಡು ಮನೆಯವರೆಗೂ ತಂದು ಕೊಡುತ್ತಿದ್ದ. ನನ್ನ ತಮಿಳು ಅಷ್ಟಕ್ಕಷ್ಟೆ. ಒಳ್ಳೆ ಇಂಗ್ಲೀಷ್ ಮಾತನಾಡುತ್ತಿದ್ದರಿಂದ ಬಹುಷಃ ಕಾನ್ವೆಂಟ್ನಲ್ಲಿ ಓದಿರಬಹುದೆಂದು ನಾನು ಊಹಿಸಿಕೊಂಡಿದ್ದೆ. ಅವನ ಮನೆ ಪಕ್ಕದ ಮಾಮಿ ಗಂಡನನ್ನು ಕಳೆದುಕೊಂಡು ಒಬ್ಬರೇ ಇದ್ದುದರಿಂದ ಅವರ ಮನೆಯ ಬೇಕು ಬೇಡಗಳನ್ನೆಲ್ಲಾ ಇವನೇ ನೋಡಿಕೊಳ್ಳುತ್ತಿದ್ದ. ಇದ್ದ ಅವರ ಒಬ್ಬನೇ ಮಗ ಫಾರಿನ್ನಲ್ಲಿ ಇದ್ದುದ್ದರಿಂದ ಮಾಮಿಯಂತೂ, ಕಣ್ಣನ್ತಾನ್ ಎನ್ ಮಗನ್ ಅಂತ ಎಲ್ಲರೆದುರೂ ಹೇಳಿಕೊಳ್ಳುತ್ತಿದ್ದರು. ಇವನು ಪೆತ್ತ ಪುಳ್ಳೆಕ್ಕಿನ್ನ ಕೊಂಚ ಅಧಿಕಮೇ ಮಾಮಿ, ಮಾಮೀಂತ ಅವರ ಹಿಂದಿಂದೇ ಸುತ್ತುತ್ತಿದ್ದ. ಅವನು ಕ್ರಿಶ್ಚಿಯನ್ ಹುಡುಗ ಎನ್ನುವುದು ಎಲ್ಲರಿಗೂ ಮರೆತೇಹೋಗಿತ್ತು. ಜೊತೆಗೆ ಅವನ ಹೆಸರು ಬೇರೆ ಕಣ್ಣನ್ ತಾನೆ, ಅದು ಬರುಬರುತ್ತಾ ಎಲ್ಲರ ಬಾಯಲ್ಲಿ ಕಣ್ಣಾ, ಕಣ್ಣಾ ಆಗಿಹೋಗಿತ್ತು. ಅವನ ತಾಯಿಯೂ ಈ ಹುಡುಗನ ವಿಷಯಕ್ಕೆ ಬರುತ್ತಿರಲೇ ಇಲ್ಲ. ಅವನ ಕಡೆ ಗಮನವೇ ಇಲ್ಲದ ಹಾಗೆ ಇರುತ್ತಿದ್ದರು. ಬೆಳಗಿನಿಂದ ಸಂಜೆಯವರೆಗೆ ಅವರು ಮನೆಯಲ್ಲೇ ಇರುತ್ತಿರಲಿಲ್ಲ. ಇದ್ದರೂ ಕಣ್ಣಾ, ಅದು ಎಂಗೆ ವೆಚ್ಚಿರ್ರಿಕೆ…ಅದು ಇಂಗೆ ಕೊಂಚಂ ಕೊಂಡುವಾ…ಅದು ಅಂಗೆ ಪೋಡು…ಇಂಗೆ ವಂದು ಇದ್ದಾ ಸೈ…ಎಂದು ಆರ್ಡರ್ ಮೇಲೆ ಆರ್ಡರ್ ಮಾಡುತ್ತಿದ್ದದ್ದು ಅವರ ಮನೆ ಕಿಟಕಿ ಸೀಳಿ ನಮ್ಮ ಮನೆ ಅಡುಗೆಮನೆಯಲ್ಲೇ ಅವನೇನಾದರೂ ಅಡುಗೆ ಮಾಡುತ್ತಿದ್ದಾನೇನೋಂತ ಅನ್ನಿಸುವಂತೆ ಅವನಮ್ಮನ ಕರ್ಕಶ ದ್ವನಿ ನಮ್ಮ ಮನೆಯಲ್ಲೆಲ್ಲಾ ಝೇಂಕರಿಸುತ್ತಿತ್ತು.
ಹಬ್ಬ ಹುಣ್ಣಿಮೆ ಹರಿದಿನವೆಂದರೆ ಸಾಕು, ಮಾಮಿ ಮನೆಬಾಗಿಲಲ್ಲಿ ತೋರಣ ಕಟ್ಟುತ್ತಾ, ಕೇದಿಗೆ ಮಾಲೆ ತೂಗುಬಿಡುತ್ತಾ ಅವರ ಮನೆಯ ಬಾಗಿಲಲ್ಲೇ ಇವನು ನಿಲ್ಲುತ್ತಿದ್ದದ್ದು ಹೆಚ್ಚು. ಕೆಳಗೆ ನೀರಿನ ಸಂಪೆದುರು ಹೋಗಿ ತೇಂಗಾಯ್ ಒಡಚಿ ಮಾಮಿಗ್ ಕೊಟ್ಟ ಮೇಲೇ ಮಾಮಿಯಾರ್ ರಸಂ, ಅವಿಯಲ್, ವತ್ತಕೊಳ್ಳಂಬ್, ವಡಾ ಪಾಯಸಂ ಮಾಡಿ, ಇನ್ನಾ ಕೊಂಜಂ ಸಾಪಿಡು, ಕೊಂಜಂ ಸಾಪಿಡು ಕಣ್ಣಾ ಎಂದು ದೂರದ ಮಗನನ್ನು ನೆನಪಿಸಿಕೊಳ್ಳ್ಳುತ್ತಾ ಕಣ್ಣನ್ಗೆ ಉಪಚರಿಸುತ್ತಿದ್ದದ್ದು ಮೆಟ್ಟಲೇರುವಾಗ, ಇಳಿಯುವಾಗ ನಾ ದಿನವೂ ನೋಡುತ್ತಿದ್ದ ಸಂಗತಿ. ಅದೊಂದು ರೀತಿಯ ಆತ್ಮೀಯ ಸಂಬಂಧ. ನೋಡಲೇ ಸುಂದರವಾಗಿರುತ್ತಿತ್ತು. ಸಕ್ಕರೆ ಖಾಯಿಲೆಯಿಂದ ನರಳುತ್ತಿದ್ದ ಮಾಮಿಗೆ ಮಾತೆತ್ತಿದರೆ ಸಾಕು, ಅಲ್ಲಿ ನೋವು ಇಲ್ಲಿ ನೋವು ಎಂದು ನೋವಿನ ಪುರಾಣದಿಂದಲೇ ತಲೆ ತಿನ್ನುತ್ತಿದ್ದರು. ಕಣ್ಣನ್ ಸ್ವಂತ ಮಗನಿಗಿಂತ ಜೋರಾಗಿ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಮಿಯೋಪತಿ, ಆಯುವರ್ೇದ ಡಾಕ್ಟರ್ ಎಂದು ಸುತ್ತಿಸುತ್ತಿದ್ದ. ಈ ಮಧ್ಯೆ ಕಣ್ಣನ್ ಅಮ್ಮ ಮೂರು ಮೂರು ದಿನಕ್ಕೆ ಗಂಡನನ್ನು ನೋಡಲು ಈರೋಡ್ಗೆ ಹೋಗುತ್ತಿದ್ದುದರಿಂದ ಮತ್ತು ಹಾಗಂತ ಎಲ್ಲರೂ ನಂಬಿದ್ದರಿಂದ ಕಣ್ಣನ್ ಒಂದು ರೀತಿಯಲ್ಲಿ ಫ್ರೀಯಾಗಿಯೇ ಇರುತ್ತಿದ್ದ.

ಇನ್ನು ನಮ್ಮ ಮನೆಗೂ ಬರುತ್ತಿದ್ದ ಮಾಮಿ ಹೇಳುವುದೆೇನೆಂದರೆ, ಕಣ್ಣಾಗೆ ಓದಲು ತುಂಬಾ ಆಸಕ್ತಿಯಿದ್ದರೂ ಅವನಮ್ಮನೇ ಅವನ ಓದು ಬಿಡಿಸಿದ್ದಳು, ಮನೆ ಕೆಲಸ ಅದು-ಇದು ಮಾಡಲಿಕ್ಕಾಗಿ ಮನೆಯಲ್ಲಿಟ್ಟಿದ್ದಳು…ತಾಯಿ ಊರಿಗೆ ಹೋದಾಗ ತಮ್ಮನಿಗೆ ಅಡುಗೆ ಮಾಡಿಕೊಂಡು, ಬಟ್ಟೆ ಒಗೆದು, ಮನೆ ಗುಡಿಸಿ ಒರೆಸಿ ಮಾಡಿಕೊಂಡು ಇದ್ದಾನೆ…ರೊಂಬ ನಲ್ಲ ಪಯ್ಯ…ಈಗಿನ ಕಾಲಕ್ಕಂತೂ ಹುಡುಕಿದರೂ ಸಿಗುವುದಿಲ್ಲ…ಅಪ್ಪಟ ಅಪರಂಜಿ, ತಂಗ್ಂ! ಹಿರಿಯರೆಂದರೆ ಅದೆಷ್ಟು ಗೌರವ…ಅಡಡಾ, ಪೊರಂದಿರದು ಪೊರಂದುಟಾನ್…ಬ್ರಾಹ್ಮಣನಾಗಿ ಹುಟ್ಟಬಾರದಿತ್ತಾ…ಎಲ್ಲಾ ದೈವಲೀಲೆ, ಪಿಳ್ಳೈಯಾರ್ಗು ಮಟ್ಟುಂ ತೆರ್ರಿಯು…ಏನು ವಿನಯ, ಏನು ನಯ…ಈಗಿನ ಕಾಲದಲ್ಲಿ ಇಂತಹ ಮಕ್ಕಳನ್ನು ಪಡೆಯೋದೂಂದರೆ…ಚುಮ್ಮವಾ, ಪೊದ ಜನ್ಮತ ಪುಣ್ಯಂ ಅದು…!
ಇದಲ್ಲದೆ ಕಣ್ಣನ್ ವಾರಕ್ಕೊಮ್ಮೆ ಮಾಮಿಯನ್ನು ತನ್ನ ಕಾರಿನಲ್ಲಿ ಬೆಸೆಂಟ್ನಗರ್ದ ಪಿಳ್ಳೈಯಾರ್ ಕೋಯಿಲ್ಗೋ ಇಲ್ಲಾ ಅಡ್ಯಾರ್ನ ಅನಂತಪದ್ಮನಾಭಸ್ವಾಮಿ ಕೋಯಲ್ಗೋ ಕರೆದುಕೊಂಡುಹೋಗುತ್ತಿದ್ದ. ಹೋಗಿದ್ದು ಅಲ್ಲದೇ ಮಾಮಿಯಂತೆ ಅವನೂ ಅದೆಷ್ಟೊ ಪ್ರದಕ್ಷಿಣೆ ಹಾಕಿ ಕಡವಳ್ ಎದುರು ಕಣ್ಣು ಮುಚ್ಚಿ ತನ್ಮಯನಾಗಿ ಪ್ರಾಥರ್ಿಸುತ್ತಿದ್ದನಂತೆ. ಅವನ್ ಪೋದ ಜನ್ಮತಲೆ ಬ್ರಾಹ್ಮಣನಾಗ್ ಪೊರೆಂದಿರಕ್ಕಾನ್…ಇಲ್ಲವೆಂದರೆ ಎಲ್ಲಿಂದ ಬರುತ್ತೆ ಅಷ್ಟೊಂದು ಸಂಸ್ಕಾರ, ಆ ಭಯ, ಆ ಭಕ್ತಿ!
ಇದ್ದಕ್ಕಿದ್ದಂತೆ ಒಂದು ದಿನ ಕಣ್ಣನ್ ನೈಟ್ ಕಾಲೇಜಿನಲ್ಲಿ ಓದುತ್ತಿದ್ದಾನೆಂದೂ ಈಗಾಗಲೇ ಅವನ ಓದು ಮುಗಿದಿರಬೇಕೆಂದೂ ನಮ್ಮ ಮನೆ ಕೆಲಸದವಳು ಹೇಳಿದಳು. ಕೇಳಿದರೆ ಮಾಮಿಗೂ ಇದು ಗೊತ್ತಿರಲಿಲ್ಲ. ಅವನನ್ನೇ ವಿಚಾರಿಸಿದಾಗ ಬಹಳ ಸಂಕೋಚದಿಂದ ಹೌದೆಂದು ಒಪ್ಪಿಕೊಂಡನಂತೆ. ಯಾಕೆ ಹೇಳಲೇ ಇಲ್ಲವೆಂದು ಮಾಮಿ ಕೇಳಿದಾಗ, ಹೇಳಲಿಕ್ಕೆ ನಾಚಿಕೆ, ಅದಕ್ಕೇ ಮುಚ್ಚಿಟ್ಟಿದ್ದೆ ಅಂದನಂತೆ. ಪೈತ್ಯಂ, ಓದೋದು ಹೇಳೋಕೂ ನಾಚಿಕೆಯಾ, ನೋಡು ಹೇಗಿದ್ದಾನೆ ಮಾಮಿ ನಗುತ್ತಿದ್ದರು…
ಅವನು ಆಗೊಮ್ಮೆ ಈಗೊಮ್ಮೆ ಮಾಮಿಯನ್ನು ಸಿನಿಮಾಕ್ಕೂ ಕರೆದುಕೊಂಡುಹೋಗುತ್ತಿದ್ದ. ಮಣಿರತ್ನಂ ಅವರ ಅಂಜಲಿ ಸಿನಿಮಾಕ್ಕೆ ಅವನ ಜೊತೆ ಹೋದ ಮಾಮಿ, ನೀನೂ ಹೋಗು, ರೊಂಬಾ ನಲ್ಲ ಪಡಂ, ಅವನ್ ಪತ್ತು ವಾಟಿ ಪಾತರ್ರುಕ್ರಾನ್, ನೀ ಒರು ವಾಟಿಯಾನ ಪಾತುಟ್ವಾ… ಎಂದು ಮೇಲೇ ಮೇಲೇ ಶಿಫಾರಸು ಮಾಡಿ, ಸಿನಿಮಾವೇ ನೋಡದ ಇವರನ್ನೂ ಎಬ್ಬಿಸಿಕೊಂಡು ಮಕ್ಕಳನ್ನೂ ಕರೆದುಕೊಂಡು ಹೋಗಿ ಎಲ್ಲರಿಂದ ಬೈಸಿಕೊಂಡಿದ್ದೆ.
ಅವನ ತಮ್ಮ ಇಂಜಿನಿಯರಿಂಗ್ ಓದುತ್ತಿದ್ದನಾದರೂ ಯಾವ ಕಾಲೇಜೋ ನನಗೆ ಗೊತ್ತಿರಲಿಲ್ಲ. ಅಷ್ಟಾಗಿ ನಮ್ಮ ಮುಂದೆ ಅವನು ಕಾಣಿಸಿಕೊಳ್ಳುತ್ತಿರಲೂ ಇಲ್ಲ. ಆಗೊಮ್ಮೆ ಈಗೊಮ್ಮೆ ಸಿಕ್ಕರೂ ಹಲೋಗಿಂತ ಹೆಚ್ಚೇನೂ ಅವನು ಯಾರೊಡನೆಯೂ ಮಾತನಾಡುತ್ತಿರಲಿಲ್ಲ. ಅಣ್ಣ ತಮ್ಮಂದಿರಲ್ಲಿ ಎಂತಹ ವ್ಯತ್ಯಾಸ ಎಂದು ಮತ್ತೆ ಮಾಮಿಯೇ ಹೇಳುತ್ತಿದ್ದದ್ದಿತ್ತು. ನನ್ನ ಮಗಳ ಸ್ಕೂಲ್ ಮುಗಿದು ಇಂಜಿನಿಯರ್ಗೆ ಸೀಟ್ ಸಿಕ್ಕಾಗಲೇ ನನಗೆ ತಿಳಿದಿದ್ದು, ಮ್ಯಾಥ್ಯೂ ಕೂಡ ಅದೇ ಕಾಲೇಜ್ನಲ್ಲಿ ಓದುತ್ತಿದ್ದಾನೆ ಎಂದು. ಕ್ರಿಶ್ಚಿಯನ್ ಮೈನಾರಿಟಿ ಕಾಲೇಜು ಅದು. ಸಿಕ್ಕಾಪಟ್ಟೆ ಸ್ಟ್ರಿಕ್ಟ್. ಎಲ್ಲರೂ ಕಾಲೇಜಿಗೆ ಕಾಲೇಜ್ ಬಸ್ಸಿನಲ್ಲಿಯೇ ಹೋಗಬೇಕು, ಅವರು ಕೊಟ್ಟ ಊಟವೇ ತಿನ್ನಬೇಕು. ಶುರುವಾಗಿ ಕೆಲ ತಿಂಗಳಿಗೇ ಏನೋ ಮ್ಯಾನೇಜ್ಮೆಂಟ್ ಗಲಾಟೆ. ಒಂದು ದಿನ ಕಾಲೇಜಿಗೆ ಹೋದ ನನ್ನ ಮಗಳು ಮನೆಗೇ ಬರಲಿಲ್ಲ. ಇವರು ಬೇರೆ ಊರಲ್ಲಿಲ್ಲ. ರಾತ್ರಿ ಹತ್ತಾದರೂ ಅವಳ ಸುಳಿವೇ ಇಲ್ಲ. ಕಾಲೇಜಿಗೆ ಫೋನ್ ಮಾಡಿದರೆ ಯಾರೂ ಎತ್ತುವವರಿಲ್ಲ. ಏನೂ ತೋಚದೇ ಕೆಳಗೆ ಹೋಗಿ ಕಣ್ಣನ್ ಮನೆ ಬಾಗಿಲು ತಟ್ಟಿದೆ. ಕಣ್ಣನ್ನ ತಮ್ಮ ಮ್ಯಾಥ್ಯೂದು ಕಡೇ ವರುಷವಾದ್ದರಿಂದ ಅವನು ಪ್ರಾಜೆಕ್ಟ್ನ ಮೇಲೆ ಮನೆಯಲ್ಲಿದ್ದ. ಕಾಲೇಜ್ಗೆ ಹೋಗದೇ ತಿಂಗಳೇ ಆಗಿತ್ತು. ಆದರೂ ಅವನು ತನ್ನ ಒಂದಿಬ್ಬರು ಗೆಳೆಯರಿಗೆ ಫೋನ್ ಮಾಡಿ ವಿಚಾರಿಸಿದ ನಂತರ ತಿಳಿದು ಬಂದ ವಿಷಯ ಇಷ್ಟು: ಮದರಾಸಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ನನ್ನ ಮಗಳು ಓದುತ್ತಿದ್ದ ಕಾಲೇಜ್ನ ಪ್ರಿನ್ಸಿಪಾಲ್ರಿಗೂ ಹಾಗೂ ಮ್ಯಾನೇಜ್ಮೆಂಟ್ಗೂ ಏನೋ ಬಿನ್ನಾಭಿಪ್ರಾಯ ಉಂಟಾಗಿ ಪ್ರಿನ್ಸಿಪಾಲ್ಗೆ ಸಪೋರ್ಟ್ ಮಾಡಿದ ವಿದ್ಯಾರ್ಥಿಗಳನ್ನು ಅವರವರ ಕ್ಲಾಸ್ರೂಮ್ಗಳಲ್ಲಿ ಬಂಧಿಸಿಟ್ಟಿದ್ದಾರೆ. ಬಹುಷಃ ನಿಮ್ಮ ಮಗಳೂ ಕೂಡ ಅಂತಹ ಯಾವುದಾದರೂ ಕ್ಲಾಸ್ರೂಮ್ನಲ್ಲಿ ಇರಬಹುದೆಂದು ಆ ನಡುರಾತ್ರಿಯಲ್ಲಿ ಅವನು ಸುದ್ದಿ ಕೊಟ್ಟ. ಏನೂ ಯೋಚನೆ ಮಾಡಬೇಡಿ ಆಂಟಿ, ಕಾಲೇಜ್ ಬಸ್ಸಿನಲ್ಲಿ ಹೋದವರೆಲ್ಲಾ ಅಲ್ಲೇ ಇದ್ದಾರೆ. ಬಸ್ಸು ತೆಗೆಯಲೇ ಬಿಡುತ್ತಿಲ್ಲವಂತೆ. ಗಲಾಟೆಯೆಲ್ಲಾ ನಿಂತು ಬಸ್ಸು ತೆಗೆದ ನಂತರ ನಿಮ್ಮ ಮಗಳು ಮನೆಗೆ ಬರುತ್ತಾಳೆ, ತುಂಬಾ ಸ್ಟೂಡೆಂಡ್ಸ್ ಇದ್ದಾರೆ. ಎಲ್ಲರೂ ಕಾಯುತ್ತಿದ್ದಾರೆ ಅಂತ ಆ ಹುಡುಗನೇನೋ ವಿಷಯ ತಿಳಿಸಿದ. ಆದರೆ ಮನಸ್ಸು ಕೇಳಬೇಕಲ್ಲ? ನನ್ನ ಮಗ ಇನ್ನೂ ಚಿಕ್ಕವನು. ಆ ನಡು ರಾತ್ರಿಯಲ್ಲಿ ಅವನನ್ನು ಕಾಲೇಜಿಗೆ ಕರೆದುಕೊಂಡು ಹೋಗುವುದು ಇರಲಿ, ಊರಾಚೆಗಿರುವ ಕಾಲೇಜ್ ಎಲ್ಲಿದೆಯೆಂದೇ ನನಗೂ ಸರಿಯಾಗಿ ಗೊತ್ತಿರಲ್ಲಿಲ್ಲ.
ಬಾಗಿಲಲ್ಲಿ ಯೋಚಿಸುತ್ತಾ ಇನ್ನೂ ನಿಂತೇ ಇದ್ದ ನನ್ನನ್ನು ಕಂಡು ಕಣ್ಣನ್ಗೆ ಅದೇನನ್ನಿಸಿತ್ತೋ? ಬನ್ನಿ ಆಂಟಿ ಎಂದು ತುಂಬಾ ಒತ್ತಾಯಿಸಿ, ಕೂತ್ಕೊಳ್ಳಿ ಎಂದು ಒಳಗೆ ಹೋಗಿ ಫ್ರೂಟ್ ಸಲಾಡ್ ತಂದು ನನ್ನ ಮುಂದಿಟ್ಟ. ಏನನ್ನೂ ತಿನ್ನುವ ಸ್ಥಿತಿಯಲ್ಲಿ ನಾನಿರಲಿಲ್ಲವಾದ್ದರಿಂದ, ಬೇಡ, ಊಟವಾಗಿದ್ದಷ್ಟೇ ಎಂದು ಸುಳ್ಳಾಡಿದೆ. ಈ ಟೆನ್ಷನ್ನಲ್ಲಿ ಊಟ ಎಲ್ಲಿ ಮಾಡಿರುತ್ತೀರಿ, ಸುಳ್ಳು ಹೇಳಬೇಡಿ. ಸ್ವಲ್ಪ ತಿಂದು ಆರಾಮಾಗಿ ಎಂದು ನನ್ನ ಕೈ ಹಿಡಿದು ಬೌಲ್ ಕೊಟ್ಟ. ಆಂಟಿ ಏನು ಯೋಚನೆ ಮಾಡಬೇಡಿ, ಇನ್ನೊಂದು ಅರ್ಧ ಗಂಟೆ ನೋಡೋಣ, ನಿಮ್ಮ ಮಗಳು ಬರಲ್ಲಿಲ್ಲವೆಂದರೆ ನಾನು ಕಾರ್ ತೆಕ್ಕೊಂಡು ಬರುತ್ತೀನಿ, ಕಾಲೇಜ್ವರೆಗೂ ಹೋಗಿಬಿಟ್ಟು ಬರೋಣ ಅಂದ. ಅಂದು ನನ್ನ ಕಣ್ಣಿನಲ್ಲಿ ಕಣ್ಣೀರು ಬಾರದೇ ಇದ್ದದ್ದು ದೊಡ್ಡ ವಿಷಯ.
ಇನ್ನೇನು ನಾನು, ನನ್ನ ಮಗ, ಕಣ್ಣನ್ ಜೊತೆ ಹೊರಡಬೇಕೂಂತ ರೆಡಿಯಾಗುತ್ತಿದ್ದಂತೆ, ನನ್ನ ಮಗಳಿಂದ ಫೋನ್ ಬಂದಿತ್ತು – ತಾನೂ ಮತ್ತು ತನ್ನ ಕೆಲವೊಂದಷ್ಟು ಫ್ರೆಂಡ್ಸ್ಗಳು ಯಾರದ್ದೋ ಕಾರಿನಲ್ಲಿ ಮನೆಗೆ ಬರುತ್ತಿದ್ದೇವೆ ಎಂದು ತಿಳಿಸಿದ್ದಳು. ಮಾರನೇ ದಿನದ ಪತ್ರಿಕೆಯಲ್ಲಿ ಅದೊಂದು ದೊಡ್ಡ ವಿಷಯವಾದದ್ದು ಎಲ್ಲಾ ಹಳೇ ಕತೆ.
ಕ್ರಮೇಣ ಮದರಾಸು ಇನ್ನೇನು ನನಗೆ ಒಗ್ಗುತ್ತಿದೆಯೇನೋ ಅನ್ನುವಷ್ಟರಲ್ಲಿ ಅದನ್ನು ಬಿಡುವ ಸಮಯ ಹತ್ತಿರ ಬಂತು. ಸಾಮಾನು ಪ್ಯಾಕ್ ಮಾಡಿ ಬೆಂಗಳೂರಿಗೆ ಬರುವವರೆಗೂ ಕಣ್ಣನ್ ಎಲ್ಲದಕ್ಕೂ ಜೊತೆಯಲ್ಲಿರುತ್ತಿದ್ದ. ಅವನ ತಮ್ಮ ಮ್ಯಾಥ್ಯೂ ಇಂಜಿನಿಯರಿಂಗ್ ಮುಗಿಸಿ, ಮುಂದೆ ಓದಲು ಆಗಲೇ ಆಮೇರಿಕಾಕ್ಕೆ ಹಾರಿ ಹೋಗಿದ್ದ. ಕಣ್ಣನ್ ಕೂಡ ನೈಟ್ ಕಾಲೇಜ್ನಲ್ಲಿ ಓದು ಮುಗಿಸಿ ಯಾವುದೋ ಕಾಲ್ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ. ನೀನು ಇಲ್ಲದೇ ಇದ್ದಿದ್ದರೆ ಈ ಮದರಾಸಿನಲ್ಲಿ ಹೇಗೆ ಇರುತ್ತಿದ್ದನೋ ಏನೋ ಕಣ್ಣಾ, ಎಂದು ಭಾವುಕಳಾಗಬಾರದೆಂದರೂ ಒಂದು ಮಾತು ನನ್ನ ಬಾಯಲ್ಲೂ ಬಂದಿತ್ತು. ನಾನು ಆಡಿಸಿದ ಮಕ್ಕಳೆಂದು ಆಗಷ್ಟೇ ಇಂಜಿನಿಯರಿಂಗ್ ಮುಗಿಸಿದ ನನ್ನ ಮಗಳಿಗೂ ಬೆಂಗಳೂರಿನಲ್ಲಿ ಬಯೋಟೆಕ್ ಸೇರಿದ ನನ್ನ ಮಗನಿಗೂ ತನ್ನ ನೆನಪಿನ ಒಂದಷ್ಟು ಕಾಣಿಕೆ ಕೊಟ್ಟ. ನಿಮ್ಮ ನೆನಪಿನಲ್ಲಿ ಸದಾ ನಾನು ಇರಬೇಕು ಅಂದ. ನಂಗೆ ನಗು ಬಂತು. ನೀನಲ್ಲದೇ ಮತ್ಯಾರಪ್ಪಾ ಇರುತ್ತಾರೆ ಅಂದೆ.
ಬೆಂಗಳೂರಿಗೆ ಬಂದ ಮೇಲೆ ಅವನ ನೆನಪು ಆಗಾಗ ಬರುತ್ತಿದ್ದರೂ ಬಹಳ ದಿನಗಳವರೆಗೆ ಅವನಿಗೆ ಫೋನ್ ಮಾಡಲೇ ಆಗಲಿಲ್ಲ. ಹಾಗೆ ತಿಂಗಳುಗಳೇ ಕಳೆದುಹೋದವು. ಆಮೇಲೆ ಬಿಡುವು ಮಾಡಿಕೊಂಡು ಎಷ್ಟು ಸಲ ಅವನಿಗೆ ಫೋನ್ ಮಾಡಿದರೂ ನಾಟ್ ರೀಚಬಲ್ ಅಂತಲೇ ಬರುತ್ತಿತ್ತು. ಈ ನಡುವೆ ಮಾಮಿ ಬೇರೆ ಮಗನ ಮನೆಗೆಂದು ಫಾರಿನ್ಗೆ ಹೋಗಿದ್ದರು. ದಿನಗಳು ಉರುಳಿಹೋದವು. ಹೆಚ್ಚು ಕಮ್ಮಿ ವರುಷದ ನಂತರ ಫಾರಿನ್ನಿಂದ ಹಿಂತಿರುಗಿ ಬಂದ ಮಾಮಿಯೇ ಮೊನ್ನೆ ಫೋನ್ ಮಾಡಿದರು. ನನ್ನ ಸಂತೋಷಕ್ಕೆ ಪಾರವೇ ಇಲ್ಲ. ಅದು ಇದು ಮಾತಾಡಿದ ನಂತರ ನಾನೇ ಕೇಳಿದೆ, ಎನ್ನಾ ಮಾಮಿ, ಕಣ್ಣನ್ ಎಪ್ಪಡಿ ಇರುಕ್ಕ್ರಾನ್, ಒರು ಸಮಾಚಾರಮೂ ಕಡಿಯಾದು, ನಲ್ಲ ಇರುಕ್ಕ್ರಾನಾ ?
ಆಗ ಬಿಚ್ಚಿಕೊಂಡ ಕತೆ ಬದುಕಿನ ಮತ್ತೊಂದು ಮಗ್ಗುಲ ರಹಸ್ಯವನ್ನು ನನ್ನ ಮುಂದೆ ತೆರೆಯಿತು.
ನಿಮ್ಮ(?) ಕಣ್ಣನ್ ಈಗ ಅಂಡರ್ ಅರೆಸ್ಟ್! ಎಂದು ನಾಟಕೀಯವಾಗಿ ಶುರುಮಾಡಿದ ಮಾಮಿ ಹೇಳಿದ್ದು ಇಷ್ಟು: ಈಗ ಹದಿಮೂರು ವರುಷದ ಹಿಂದೆ ಉತ್ತರ ಭಾರತದ ಒಂದು ಇಂಜಿನಿಯರಿಂಗ್ ಕಾಲೇಜ್ನಲ್ಲಿ ಪ್ರತಿಷ್ಠಿತ ಇಂಡಸ್ಟ್ರಿಯಲಿಸ್ಟ್ರ ಮಗನೊಬ್ಬನ ಕೊಲೆಯಾದ ವಿಷಯ ನಿಮಗೆ ಗೊತ್ತಲ್ಲಾ, ಆರ್ಕಿಟೆಕ್ಟ್  ಮಾಡಲು ಕಾಲೇಜ್ ಸೇರಿದ್ದ ಹದಿನೆಂಟು ವರುಷದ ಹುಡುಗನೊಬ್ಬನನ್ನು ragging ಮಾಡಲಿಕ್ಕೆ ಹೋಗಿ ಕೊಲೆಯಾದ ವಿಷಯ…ಅದರಲ್ಲಿ ಮೈನ್ ಅಕ್ಯೂಸ್ಡ್, ಕೊಲೆ ಮಾಡಿದವನೇ ಈ ನಿಮ್ಮ ಕಣ್ಣನ್…! ಕೊಲೆ ಮಾಡಿದ್ದೂ ಅಲ್ಲದೇ ಎವಿಡೆನ್ಸೆಲ್ಲಾ ಮುಚ್ಚಿಟ್ಟುಬಿಟ್ಟಿದ್ದನಂತೆ ಅಡಾ ಪಾವಿ, ಅಷ್ಟೂ ಸಾಲದೂಂತ ಯಾರ್ಯಾರಿಗೋ ಲಂಚ ಕೊಟ್ಟು ಪೋಲೀಸರಿಂದ ತಪ್ಪಿಸಿಕೊಂಡು ರಾತ್ರೋರಾತ್ರಿ ಮದರಾಸಿಗೆ ಓಡಿ ಬಂದಿದ್ದನಂತೆ…ಯಾರಿಗೂ ಸುಳಿವು ಕೊಡದೇ ಈ ಮನೆ ಕೊಂಡು ಅವನ ಅಮ್ಮ ಅವನನ್ನು ಇಲ್ಲಿ ಅಡವಿ ಇಟ್ಟಿದ್ದಂತೆ…ಅದಕ್ಕೇ ಕಾಲೇಜೂ ಇಲ್ಲ ಏನೂ ಇಲ್ಲದೇ ರಾತ್ರಿ ಮಾತ್ರ ಹೊರಗೆ ಓಡಿಯಾಡಿಕೊಂಡು ಇದ್ದಿದ್ದಂತೆ…ಮೂರು ವರುಷ ಇಂಜಿನಿಯರಿಂಗ್ ಓದಿದ್ದ, ರಾತ್ರಿ ಕಾಲೇಜೂ ಇಲ್ಲ ಒಂದೂ ಇಲ್ಲ ಮಣ್ಣಂಗಟ್ಟಿ…! ಕಾಲ್ಸೆಂಟರ್ಗೆ ಬೇಕಾದ ಯಾವುದೋ ಕೋರ್ಸ್ ಮಾಡಿದ್ದಂತೆ…ಈಗ ಯಾರಿಗೆ ಬೇಕಾದ್ರೂ ಕೆಲಸ ಸಿಗುತ್ತೆ, ಹಾಗೇ ಅವನಿಗೂ ಸಿಕ್ಕಿದ್ದಂತೆ…ನೈಸ್ ಆಗಿ ಎಲ್ಲಾರ ಹತ್ತಿರ ಮಾತಾಡಿ ಐಸ್ ಇಟ್ಟ ಪೊರಿಕಿ…! ಅಂವ ಪೇಸಿರಿದೆಲ್ಲಾಮ್ ಎಪ್ಪಡಿ ನಂಬಿ ನಾಂಗೆಲ್ಲಾರುಮ್ ಮೋಸಂ ಪೊಯಿಟ್ಟೋಮ್…
ಮಾಮಿ ಇನ್ನೂ ಏನೇನೋ ಹೇಳುತ್ತಲೇ ಇದ್ದರು. ನಾನು ಮಾತ್ರ ದಂಗಾಗಿ ಕುಳಿತಿದ್ದೆ. ಆ ನಂತರ ಅವರು ಹೇಳಿದ ಯಾವ ಮಾತೂ ನನ್ನ ತಲೆಗೆ ಹೋಗಲೇ ಇಲ್ಲ. ಇದೇ ಕಣ್ಣನ್ ಜೊತೆ ಸರಿರಾತ್ರಿಯಲ್ಲಿ ನಾನೊಬ್ಬಳೇ ನನ್ನ ಮಗಳನ್ನು ಹುಡುಕುತ್ತಾ ಅರಿಯದ ಊರಿನಲ್ಲಿ, ತಿಳಿಯದ ಹುಡುಗನೊಡನೆ ನಂಬಿ ಹೊರಟಿದ್ದೆನಲ್ಲಾ? ಅವನು ಕೊಲೆಗಡುಕನೆಂದು ಮೊದಲೇ ಗೊತ್ತಿದ್ದರೆ ಹೋಗುತ್ತಿದ್ದೆನೇ?
ಸಂಜೆ ಮನೆಗೆ ಬಂದ ಮಗನಿಗೆ ಹೇಳಿದೆ: ಯು ನೋ ಒನ್ ಥಿಂಗ್, ಕಣ್ಣನ್ ಈಸ್ ಎ ಮರ್ಡರರ್. ಅಂತ ಮಾಮಿ ಹೇಳಿದ ಎ ಟು ಝಡ್ ವರದಿ ಒಪ್ಪಿಸಿದೆ. ಮಗ ಕೇಳಿದ. ಆದರೆ ಮಾತನಾಡಲಿಲ್ಲ. ಯಾಕೆ ಏನೂ ಹೇಳುತ್ತಿಲ್ಲ ಅಂದೆ. ಸೀ, ನೋಬಡಿ ವಾಂಟ್ಸು ಟು ಬಿ ಎ ಮರ್ಡರರ್ ಬೈ ಬರ್ತ್. ಎವರಿ ಸ್ಟೋರಿ ಹ್ಯಾಸ್ ಟೂ ವರ್ಷನ್ಸ್. ಕೊಲ್ಲಬೇಕೂಂತ ಅವನ ಕೊಲೆಮಾಡಿರಲಿಕ್ಕಿಲ್ಲ, ಏನೋ ತಮಾಷೆಗೇಂತ ಶುರುವಾಗಿದ್ದು ಸಾವಿನಲ್ಲಿ ಮುಗಿದಿರಬಹುದೂಂತ ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ?
ವಾಟ್, ಅರ್ ಯು ಸಪೋರ್ಟಿಂಗ್ ಎ ಮರ್ಡರರ್?
ಇಲ್ಲ ಅಮ್ಮ, ಕಣ್ಣನ್ ನೋಡಿದರೆ ಮರ್ಡರರ್ ತರ ಅನ್ನಿಸುತ್ತಾ? ದಿಸ್ ಮೈಟ್ ನಾಟ್ ಬಿ ಹಿಸ್ ಅಲ್ಟಿಮೇಟ್ ಚಾಯ್ಸ್. ಕೊಲೆ ಆಗಿದೆ. ಕೊಲೆ ಮಾಡಿದ್ದು ಸರೀಂತ ನಾ ಹೇಳುತ್ತಿಲ್ಲ. ಅದನ್ನು ಪ್ರಶ್ನಿಸುವಷ್ಟು ಕಾನೂನೂ ನಂಗೆ ಗೊತ್ತಿಲ್ಲ. ಆದರೆ ಯಾಕೆ ಕಣ್ಣನ್ ಕೊಲೆ ಮಾಡಿದ, ಈಸ್ ಎ ಮಿಸ್ಟರಿ ಫಾರ್ ಎವರಿಒನ್…
ಬದುಕಿನ ಅಸದೃಶ ಗರ್ಭದಲ್ಲಿ ಹುಗಿದುಹೋಗಿರುವ ಅದೆಷ್ಟೋ ರಹಸ್ಯಗಳು ಒಮ್ಮೊಮ್ಮೆ ಸಲೀಸಾಗಿ ತೆರೆದುಕೊಳ್ಳುವ ಸಹಜ ರೀತಿಯೇ ಆಶ್ಚರ್ಯವನ್ನೂ, ಆತಂಕವನ್ನೂ ತರುತ್ತದೆ. ಒಳ್ಳೆಯದು, ಕೆಟ್ಟದ್ದು ಎಂಬ ವಿಂಗಡನೆಗೆ ಸಿಕ್ಕಿ ಬಿದ್ದು ನರಳುತ್ತಿರುವ ಸಿದ್ಧ ಬದುಕಿನಲ್ಲಿ ಬಾಳ್ವೆ ನಡೆಸುವ ಅನಿವಾರ್ಯ ಸ್ಥಿತಿಯಲ್ಲಿರುವ ನಮಗೆ ಹಾಗೆ ನೋಡಿದರೆ ಹಲವು ವಿಷಯಗಳಲ್ಲಿ ಆಯ್ಕೆಯೆಂಬುದೇ ಇರುವುದಿಲ್ಲ. ಪಾಲಿಸಿಕೊಂಡು ಬಂದ ನಿಯಮವನ್ನು ಪ್ರಶ್ನೆ ಮಾಡಿದಾಗ ಮೇಲಿನ ವಿಂಗಡಿತ ನಂಬಿಕೆಯೊಳಗೆ ಸಿಲುಕಿಬಿಡುವ ಭಯ ನಮಗೂ ಇದೆ. ಜಾಣತನದ ಉತ್ತರವೆಂದರೆ ಇಂತಹವುದಕ್ಕೆ ತಲೆ ಕೆಡಿಸಿಕೊಳ್ಳದೆ ಬಾಳುವುದು. ಮತ್ತು ಒಂದು ಕಾಲದ ಘಟನೆಯನ್ನು ವಿಶ್ಲೇಷಿಸಲು ಇನ್ನೊಂದು ಕಾಲದ ಕೃತಿಗೆ ಈಗ ಇಳಿಯಬೇಕೋ ಏನೋ? ದೋಸ್ತೋವಿಸ್ಕಿಯ ಕ್ರೈಮ್ ಅಂಡ್ ಪನಿಷ್ಮೆಂಟ್ ಅಥವಾ ಕಮೂನ ಔಟ್ಸೈಡರ್?
 

‍ಲೇಖಕರು avadhi

March 1, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Jayalaxmi Patil

    ನಿಮ್ಮ ಕತೆಯ ಸರಸ್ವತಿ, ಏಳುಮಲೈ ಮತ್ತು ಕಣ್ಣನ್, ಅವರಂತೆಯೇ ಮೌನವಾಗಿಯೇ ಕಾಡುತ್ತಾರಿನ್ನು ಮೂರು ದಿನ!

    ಪ್ರತಿಕ್ರಿಯೆ
  2. bharathi bv

    Waaah jayashree … modlinda konevarge onde usirinalli odide …. entha sogasaagi kathe katti kodtiraa .. tumba ishtavaytu

    ಪ್ರತಿಕ್ರಿಯೆ
  3. Tejaswini Hegde

    ಕಾಡುವ ಕಥೆ..thought provoking too.. ಕೆಲವು ಸಾಲುಗಳು ತುಂಬಾ ಇಷ್ಟವಾದವು…:)
    ‘ದೇವರ ಹೆಸರು ಇಟ್ಟುಕೊಂಡಾಕ್ಷಣ ದೇವರಂಥಾ ಬದುಕು ಸಿಗುತ್ತೇನು?’ 🙂 ದೇವರ ಬದುಕೂ ನಮ್ಮಂತಹವರಿಗಿಂತ ಭಿನ್ನವಾಗಿರಲಿಲ್ಲ ಎಂದೆನಿಸುತ್ತದೆ ನನಗೆ.. ನಮ್ಮ ಬದುಕೊಳಗಿದ್ದ, ಇರುವ ಕಷ್ಟ, ಕೋಟ, ಸಂಕಷ್ಟ, ಪರೀಕ್ಷೆ, ಸೋಲು ಎಲ್ಲವೂ ದೇವರಂಥ ದೇವರನ್ನೂ ಬಿಟ್ಟಿಲ್ಲ!! ಶಿವನಿಂದ ಹಿಡಿದು, ವಿಷ್ಣುವಿನವರೆಗೂ ಬಂತು.. ಎಂದೆನಿಸುತ್ತದೆ ನನಗೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: