ಸಂಪಿಗೆ ತೋಂಟದಾರ್ಯ ಓದಿದ ʼಪ್ರೇಮವೆಂಬ ಅವರ್ಗೀಯ ವ್ಯಂಜನʼ

ಪ್ರೇಮದ ಪರಿಗಳ ಅನ್ವೇಷಣೆಯ ವಿನೂತನ ವಚನ ಸಂಕಲನ

ಸಂಪಿಗೆ ತೋಂಟದಾರ್ಯ

ಮೌನೇಶ ಬಡಿಗೇರ ಅವರ ಹೊಚ್ಚ ಹೊಸ ಕೃತಿ ‘ಪ್ರೇಮವೆಂಬ ಅವರ್ಗೀಯ ವ್ಯಂಜನ’, ಪ್ರೇಮದ ಹಲವು ಬಗೆಗಳ ಹಲವು ಮಜಲುಗಳನ್ನು ಕಂಡು, ಉಂಡು, ಪಡೆದ ಅನುಭವಗಳ ಚಿಂತನೆಗಳ ವಚನ ರೂಪದ ವಿನೂತನ ಕೃತಿಯಾಗಿದೆ. ಎರಡು ನೂರು ಪ್ರೇಮ ವಚನಗಳಿರುವ ಈ ಕೃತಿಯಲ್ಲಿ ಭಾವನಾತ್ಮಕವಾಗಿ ಕಾವ್ಯತ್ಮಕವಾಗಿ ಪ್ರೇಮದ ಅವಸ್ಥೆಗಳನ್ನು ಅನ್ವೇಷಿಸುತ್ತಾ ನಡೆದರೂ ವೈಚಾರಿಕತೆಯ ವಾಸ್ತವತೆಯ ನೆಲಗಟ್ಟಿನಲ್ಲಿಯೂ ಒಡಮೂಡಿದ ವಚನಗಳಿವೆ.

ಇದು ಒಂದು ರೀತಿ ಖ್ಯಾತ ನಾಟಕಕಾರ ಬ್ರೆಕ್ಟ್ ನ ‘ಏಲಿಯನೇಷನ್’ ತತ್ತ್ವದಂತೆ, ಒಳಗಿದ್ದೂ ಒಳಗಾಗದೆ ಎಲ್ಲಕ್ಕೂ ಸಾಕ್ಷಿಯಾಗಿ ನಿಂತು ಹೇಳಿರುವುದರಿಂದ ಓದುಗನಲ್ಲಿ ಕೂಡ ತಲ್ಲೀನತೆಗಿಂತ ಜಾಗ್ರತ ಮನಸ್ಸನ್ನು ಬೇಡುತ್ತದೆ.

ಪ್ರೇಮ ಎಂಬುದು ಕಾಮ, ವಿಕಾರ, ವಿಕೃತಿ ಮಟ್ಟದಿಂದ ತ್ಯಾಗ, ಬಲಿದಾನ, ನಿಸ್ವಾರ್ಥ, ಸಹೃದಯತೆ, ಸಾತ್ವಿಕತೆಯ ಮಟ್ಟಕ್ಕೆ ಏರಿ ನಂತರ ಅದನ್ನೂ ಮೀರಿ ನಾ- ನೀ ಎಂಬ ಭೇದವಳಿದು ಒಂದೇ ಆಗಿರುವ ಅಧ್ಯಾತ್ಮಿಕ ಅದ್ವೈತದಂತೆ ಚಿತ್ರಿತವಾಗಿದೆ. ಹಾಗಾಗಿ ಪ್ರೇಮದ ಅನ್ವೇಷಣೆ ಮಾಡುತ್ತಾ ಹೊರಟವನಿಗೆ ಕೇವಲ ಸುಂದರ ಕನಸುಗಳ, ರೋಮಾಂಚಕ ಕ್ಷಣಗಳ ಆನಂದಾತಿರೇಕಗಳ ಅನುಭೂತಿಗಳ ಚಿತ್ರಣ ಮಾತ್ರ ಸಿಗುವುದಿಲ್ಲ ಅವುಗಳ ಜೊತೆಗೇ ಬಗೆಬಗೆಯ ಒಳ್ಳೆಯ ಕೆಟ್ಟ ನಾಟಕೀಯತೆಯಿಂದ ಕೂಡಿದ ನಡಾವಳಿಕೆಗಳ ಚಿತ್ರಣಗಳೂ ಕಾಣುತ್ತವೆ.

‘ಪ್ರೇಮಕ್ಕೂ ಕಾಮಕ್ಕೂ ವ್ಯತ್ಯಾಸವೇನು ?’
ಒಂದು ನಡುರಾತ್ರಿ ಯೋಚಿಸುತ್ತಾ ಕುಳಿತಿದ್ದೆವು
ಎಷ್ಟೋ ಹೊತ್ತಿನ ಬಳಿಕ
‘ಹೌದೂ…ಕಾಮಕ್ಕೆ ಇಷ್ಟು ಯೋಚಿಸುವ ವ್ಯವಧಾನವಾದರೂ ಎಲ್ಲಿರುತ್ತೆ ?’
ಎಂದು ನನ್ನ ಹಣೆಗೆ ಮುತ್ತನಿತ್ತಳು!’ ( ವ‌. 6 )

‘ಈ ಲೋಕದಲ್ಲಿ ಪ್ರೇಮವನ್ನು ಮಾಡಿ ಗೆದ್ದವರಿಗಿಂತ ಸೋತವರೇ ಹೆಚ್ಚು ಅನಿಸುವುದಿಲ್ಲವೆ ? ‘
ಸೋಲು ಗೆಲವು ಯುದ್ಧದಲ್ಲಿ ;
ಪ್ರೇಮದಲ್ಲಿ ಸೋಲೇ ಗೆಲವು ! ( ವ. 87 )

ಎಂಬಲ್ಲಿಂದ,

‘ಕಿತ್ತೆಸೆ ನಿನ್ನ ಮುಖವಾಡವ
ಧೈರ್ಯವಿದ್ದರೆ ಬಾ ಎದುರಿಸು ಪ್ರೇಮವ
ಹಾರಬೇಡ ಹೂವಿಂದ ಹೂವಿಗೆ
ದುಂಬಿ ಹಾರುವುದು ಹಸಿವಿಗೆ
ಪ್ರೇಮಿಯ ಹಸಿವು ಬೇರೆ’ (ವ. 166)

ನಂತರ ವಾಸ್ತವತೆಯ ನೆಲಗಟ್ಟಿಗೂ ಬರುತ್ತಾ,

‘ನನ್ನ ಬಿಟ್ಟು ಬೇರೆ ಯಾರೊಂದಿಗೂ ನೀನು ಬದುಕಲಾರೆ ಎಂದು ನಿನಗೂ ಗೊತ್ತು ನನಗೂ ಗೊತ್ತು
ಆದರೂ ಯಾಕೆ ಹೀಗೆ ಹೊಸ ಪ್ರೇಮ ಹೊಸ ಹುಡುಗ
ಅಂತೆಲ್ಲ ಬಣ್ಣಬಣ್ಣದ ಪುಗ್ಗಗಳನ್ನು ತೇಲಿ ಬಿಡುತ್ತೀಯಾ ?
ಬರಿ ಹೊರಗಣ ಲೋಕಕ್ಕೆ ನೀನು
ಯಾವ ಹಾಡು ಬೇಕಾದರೂ ಹಾಡಬಹುದು
ಆದರೆ ಒಳಗಿನ ನಮ್ಮ ಹಾಡು ಪಾಡು ನಮಗಷ್ಟೆ ಗೊತ್ತು.” ( ವ.176)

ಹೀಗೆ ಪ್ರೇಮದ ಹಲವು ಮಜಲುಗಳ ದರುಷನ ಆಗುತ್ತಾ ಹೋಗುತ್ತದೆ.

‘ಮಾನವ ಜನ್ಮದಲ್ಲಿ ಹುಟ್ಟಿ ಪ್ರೇಮದ ಅನುಭೂತಿ ಆಗದಿದ್ದರೆ ಅದೇ ನರಕ ಎಂದು ತಿಳಿಯಬೇಕು’
(ವ.42)

ಎನ್ನುವ ಕೃತಿಕಾರರು ಪ್ರೇಮಿಗಳಿಗೆ
‘ಪ್ರೇಮ ಎಂಬುದು ಕೆಲಸವಲ್ಲ ಅದೇ ಬದುಕು’
( ವ. 38) ಎಂದು ಹೇಳುತ್ತಾರೆ.

‘ಬದುಕು ಸಾರ್ಥಕವಾಗುವುದು ಬದುಕಿರುವಾಗಲೇ ಸಾವನ್ನು ಸಾಕ್ಷಾತ್ಕಾರಿಸಿಕೊಳ್ಳುವುದರಿಂದ! ಇದಕ್ಕೆ ಪ್ರೇಮಕ್ಕಿಂತ ಉತ್ತಮ ಪರಿಕರ ಮತ್ತೊಂದಿಲ್ಲ’ (ವ. 56 ) ಎನ್ನುವುದು ಅರ್ಥವಾಗಬೇಕಾದರೆ, ‘ಸಾಯುವಷ್ಟು ಯಾರನ್ನಾದರೂ ಪ್ರೀತಿಸಿದ್ದರೆ ನಿಮಗಿದೆಲ್ಲ ಅರ್ಥವಾಗುತ್ತದೆ’ ಎನ್ನುವ ಅದೇ ವಚನದ ಮಾತನ್ನೂ ನಿಗಾ ವಹಿಸಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಬದುಕಿರುವಾಗ ಸಾವನ್ನು ಸಾಕ್ಷಾತ್ಕಾರಿಸಿಕೊಳ್ಳುವುದು ಅಂದರೆ ಸಾವನ್ನೂ ಬದುಕಾಗಿಸಿಕೊಳ್ಳುವ ಪರಿ. ಅದಕ್ಕೆ ‘ಪ್ರೇಮಿ ಅನುಕ್ಷಣವೂ ಸಾಯಲು ಪ್ರೇಮಿಸುತ್ತಾನೆ’ ಎಂದಿದ್ದಾರೆ. ಹೀಗೆ ಕೆಲವು ಅಸಂಗತೆತೆಯ ಮಜಲುಗಳೂ ಬರುವ ಈ ಕೃತಿಯಲ್ಲಿ ಪ್ರೇಮದ ಅದ್ವೈತ ಭಾಗವನ್ನೂ ತಂದಿದ್ದಾರೆ.

ರಾಧಾ- ಕೃಷ್ಣ ಒಂದಾಗಲಿಲ್ಲ ಏಕೆ ?
ಒಂದೇ ಆಗಿರುವುದು ಮತ್ತೆ ಹೇಗೆ ಒಂದಾಗಲು ಸಾಧ್ಯ ?’ ( ವ.119 )
ಎನ್ನುವ ವಚನದಲ್ಲಿ ಪ್ರಸಿದ್ಧವಾದ ರಾಧಾ- ಕೃಷ್ಣರ ನಿರಂತರ ಪ್ರೇಮಾನುಭೂತಿಯ ವ್ಯಾಖ್ಯಾನವಿದೆ .

ಪ್ರೇಮಾನುಭೂತಿಗೆ ಅಸ್ಥಿರವಾದ ದೇಹಗಳು ಒಂದಾಗುವುದಲ್ಲ, ಶಾಶ್ವತವಾದ, ಸ್ಥಿರವಾದ ‘ಆತ್ಮ’ಗಳು ಒಂದಾಗಿರಬೇಕು ಎನ್ನುವುದು ಪ್ರೇಮಾದ್ವೈತದ ಆಖ್ಯಾನ. ಸಾಮಾನ್ಯ ಅರ್ಥದಲ್ಲಿ ಹೇಳಬೇಕಾದರೆ ಪ್ರೇಮಿಗಳು ಕಾಮಿಸತೊಡಗಲು ಪ್ರಾರಂಭಿಸಿದರೆ ಪ್ರೇಮದ ಕಾವು ಇಳಿಯುತ್ತಾ ಬರುತ್ತದೆ.

ಪ್ರೇಮ ನಿರಂತರವಾಗಿ ಉಕ್ಕುತಿರ ಬೇಕಾದರೆ ಕಾಪಾಲಿಕರು ‘ನಿರಂತರ ಸುರತಾನಂದ ‘ವನ್ನು ಸಾಕ್ಷಾತ್ಕರಿಸಿಕೊಳ್ಳುವಂತೆ ಪ್ರೇಮಿಗಳು ದೇಹ ಮೀರಿದ ಮನ ಚಿತ್ತಗಳ ದಾಟಿ ಆತ್ಮಗಳ ‘ಸಂಯೋಗ’ವನ್ನು ಸಾಕ್ಷಾತ್ಕಾರ ಮಾಡಿಕೊಳ್ಳ ಬೇಕಾಗುತ್ತದೆ. ಆದರೆ ಇದು ಎಲ್ಲರಿಗೂ ಸಾಧ್ಯವಾಗದು. ಬಹುಶಃ ಆದರ್ಶವಾಗಿರಬಹುದು. ಅದಕ್ಕೆ ಉದಾಹರಣೆಯಾಗಿ ರಾಧಾ-ಕೃಷ್ಣರ ರಾಸ ವಿಲಾಸ ಕಥೆಯೂ ಸೃಷ್ಟಿಯಾಗಿರಬಹುದು. ಇದನ್ನು ಕೃತಿಕಾರರು ಅಲ್ಲಲ್ಲೆ ಚೆನ್ನಾಗಿಯೇ ಪರಿಚಯಿಸಿದ್ದಾರೆ.

“ಪ್ರೇಮ ಎಂಬುದು ಗುರಿಯಲ್ಲ, ಅದು ದಾರಿ.”
( ವ.132 )

‘ಪ್ರೇಮದ ವ್ಯಾಖ್ಯಾನವೇನು‌ ?
ಪ್ರೇಮ ವ್ಯಾಖ್ಯಾನವೇ ಇಲ್ಲ…
ಬರಿ ಆಖ್ಯಾನ’ ( ವ.137 )

‘ಪ್ರೇಮದ ಆಳಕ್ಕೆ ಹೋದಷ್ಟೂ ನೀವು ಪ್ರೇಮಿಯಿಂದ ವಿಮುಖರಾಗುತ್ತಾ ಆಗುತ್ತ ಕಡೆಗೆ ಪ್ರೇಮವೇ ಆಗಿ ಹೋಗುವಿರಿ …
ಆಗ ಪ್ರೇಮಿಗಳು ಬರಿ ಸಂಕೇತಗಳಾಗುತ್ತಾರೆ
ರಾಧಾ ಕೃಷ್ಣರ ಪ್ರೇಮ ಅಂಥಾದ್ದು’ ( ವ. 140 )

148 ನೆ ವಚನದಲ್ಲಿ ದೈಹಿಕ (ಕಾಮ) ಮಾನಸಿಕ (ಪ್ರೀತಿ ಭಾವ) ಅಧ್ಯಾತ್ಮಿಕ (ಆತ್ಮ ) ವರ್ಣನೆ ಇದೆ. ಇವೆಲ್ಲವೂ ವಾಸ್ತವದಲ್ಲಿ ಆನಂದದಾಯಕವೇ ಆಗಿದ್ದರೂ, ‘ಆತ್ಮವನ್ನು ಧಾರೆಯೆರೆದವಳ ಆತ್ಮ ಮಾತ್ರ ನನ್ನೊಳಗೆ ಬೆರೆತುಹೋಗಿದೆ’ ಎನ್ನುತ್ತಾ ಅಧ್ಯಾತ್ಮಿಕ ಹಂತದ ಮಹತ್ವವನ್ನು ಎತ್ತಿ ಹಿಡಿಯುತ್ತಾರೆ. ಪ್ರಕೃತಿ ರಚನೆಯಲ್ಲೂ ಪ್ರೇಮ ತತ್ತ್ವ ವನ್ನು ಬಿಂಬಿಸಲು 67 ನೆ ವಚನದಲ್ಲಿ ವಿಶ್ವ ರಚನೆಯಿಂದ ದೇಹ ರಚನೆಯ ಹಂತಗಳ ನೆನಪಿಸುತ್ತಾ ಪ್ರೇಮ ಕಾಂತತ್ವ ಬಲ ದರ್ಶನ ಮಾಡಿಸುತ್ತಾರೆ.

‘ಪರಮಾಣುವಿನ ಒಂದು ಪ್ರೋಟಾನಿನ ಸುತ್ತಾ ಒಂದು ಎಲೆಕ್ಟ್ರಾನು ಸದಾ ಸುತ್ತುತ್ತಿರುತ್ತದೆ.…’ ಎಂದು ವೈಜ್ಞಾನಿಕ ಸಂಗತಿಗಳ ಹೇಳುತ್ತಾ , ಪರಮಾಣುಗಳಿಂದ ಅಣು, ಅಣುಗಳಿಂದ ಜೀವಕೋಶ , ಜೀವಕೋಶಗಳಿಂದ ಅವಯವ, ಅವಯವಗಳಿಂದ ದೇಹ ರೂಪುಗೊಂಡಿರುವುದನ್ನು ಹೇಳುತ್ತಾ’ ಒಮ್ಮೆ ಇದಕ್ಕೆ ಪ್ರೇಮದ ಅನುಭೂತಿಯಾದರೆ ಇಡೀ ದೇಹ ಎಲೆಕ್ಟ್ರಾನಿನಂತೆ ಪ್ರೇಮಿಯ ಸುತ್ತ ಸುತ್ತ ತೊಡಗುತ್ತದೆ !’ ಎನ್ನುವಾಗ ಹೇಗೆ ಎಲೆಕ್ಟ್ರಾನು ನ್ಯೂಕ್ಲಿಯಸ್ಸಿನ ಸುತ್ತಲು ವಿದ್ಯುತ್ ಕಾಂತತ್ವ ಎಂಬ ಆಕರ್ಷಕ ಬಲ ಕಾರಣವೋ ಹಾಗೆ ಪ್ರೇಮಿ ಪ್ರೇಮಿಯ ಸುತ್ತ ತಿರುಗಲು ಪ್ರೇಮ ಕಾಂತತ್ವ ಎಂಬ ಆಕರ್ಷಕ ಬಲ ಕಾರಣ ಎಂದು ಅರ್ಥೈಸಿಕೊಳ್ಳ ಬಹುದಾಗಿದೆ.

ಒಟ್ಟಾರೆ ಪ್ರೇಮದ ಪರಿ ಪರಿಯ ರೀತಿಗಳನ್ನು ಅನ್ವೇಷಿಸುತ್ತಾ ಅರ್ಥೈಸುತ್ತಾ ನಡೆದಿರುವ ಕೃತಿಕಾರರು ಶ್ರೀಕೃಷ್ಣನ ವಿಶ್ವರೂಪ ಕಂಡು ಮೂಕ ವಿಸ್ಮಿತನಾಗಿ ನಿಂತ ಅರ್ಜುನನಂತಾಗಿ ಇರುವರೇನೋ ಎಂದೆನಿಸುತ್ತದೆ.!! ಅದಕ್ಕೆ ವಚನ 198 ರಲ್ಲಿ- ‘ಪ್ರೇಮವೊಂದು ಭಾವವಲ್ಲ ಪ್ರೇಮವೊಂದು ಸಂಬಂಧವಲ್ಲ ಪ್ರೇಮವೊಂದು ಬರಿ ಕ್ರಿಯೆಯೂ ಅಲ್ಲ ಭರತನೆಂಬ ಭರತ ಮುನಿಯೇ ತನ್ನ ಎಂಟು ರಸಗಳಲ್ಲಿ ಪ್ರೇಮಕ್ಕೆ ಜಾಗವನ್ನೇ ಕೊಟ್ಟಿಲ್ಲ! ಕಾರಣ ಪ್ರೇಮವೊಂದು ರಸವೂ ಅಲ್ಲ; ಯಾವ ವರ್ಗಗಳಿಗೂ ಸೇರದ ಪ್ರೇಮವೊಂದು ಅವರ್ಗೀಯ ವ್ಯಂಜನ’. ಎಂದು ಅಚ್ಚರಿ ಪಡುತ್ತಾರೆ. !!

ಕೃತಿಯಲ್ಲಿ ಹಲವು ಕಡೆ ಸೀಮಿತ ಅರ್ಥಗಳು, ವೈಚಾರಿಕತೆ, ವೈಜ್ಞಾನಿಕ ವಿಚಾರಗಳೂ, ಬಂದಿವೆ. ಆದರೆ ಅವು ಮುಖ್ಯ ವಿಷಯದ ದೃಷ್ಟಿಯಿಂದ ಅಷ್ಟು ಮುಖ್ಯವೇನಲ್ಲ. ಆದರೂ ಸರಿ ಪಡಿಸಲೇಬೇಕಾದ ಒಂದೆರೆಡು ಅಂಶಗಳು ಇವೆ.

ಅವೆಂದರೆ, 126 ನೆ ವಚನದಲ್ಲಿ ‘ಸುತ್ತುವುದಿಲ್ಲ ಭೂಮಿ ಸೂರ್ಯನ ಸುತ್ತಾ ಗೊತ್ತಿರುವುದೇ ಇದು ಎಲ್ಲರಿಗೂ’ ಎಂದಿರುವುದು ವಾಸ್ತವತೆಗೆ ವಿರುದ್ಧವಾದುದಾಗಿದೆ. ಬದಲಾಗಿ ‘ಸುತ್ತುವುದಿಲ್ಲ ಸೂರ್ಯ ಭೂಮಿಯ ಸುತ್ತ ‘ ಎಂದು ಮಾಡಿದರೆ ಸರಿ ಹೋಗುತ್ತದೆ. ಮುಂದಿನ ಸಾಲುಗಳಿಗೂ ಸರಿ ಹೊಂದಿಕೊಳ್ಳುತ್ತದೆ. ಹಾಗೆ ವಚನ 96 ರಲ್ಲಿ, ‘ನನ್ನ ರಕ್ತದ ಕಣಕಣದಲ್ಲೂ ಇರುವ ನಿನ್ನ ಪ್ರೀತಿಕಳೆಯನ್ನು ಕಿತ್ತು ಕಿತ್ತು ಸೋಸುತ್ತಿದೆ ಈ ಯಂತ್ರ ! ಮತ್ತೆ ಮತ್ತೆ ಬಂದು ಸೇರುತ್ತಿದೆ ನಿನ್ನ ಪ್ರೀತಿ ಉಸಿರಿನ ಮೂಲಕ!” ಎಂಬುದು ಪ್ರೇಮದ ಆಖ್ಯಾನಕ್ಕೆ ರಸಾಭಾಸ ಆಗುವಂತಿದೆ. ಪ್ರೀತಿಯನ್ನು ‘ಕಳೆ’ ಎಂದು ಹೇಳುವುದು, ಅದನ್ನು ಕಿತ್ತು ಕಿತ್ತು ಸೋಸುತ್ತಿರುವುದು ಈ ಯಂತ್ರ ಎಂದು ದೇಹ ಕಾಮದ ಬಗ್ಗೆ ಹೇಳುವುದು ಪ್ರೇಮದ ಆಖ್ಯಾನಕ್ಕೆ ಹೊಂದಿಕೊಳ್ಳುವುದಿಲ್ಲ.

ಇರಲಿ…

ಈ ಕೃತಿ ಪ್ರೇಮದ ಅನ್ವೇಷಣೆಯಲ್ಲಿ ಹೊಸ ಬಗೆಯದಾಗಿ ಮೂಡಿಬಂದಿದೆ. ರೋಮ್ಯಾಂಟಿಕ್ ಭಾವವನ್ನು ಇಟ್ಟುಕೊಂಡೂ ಅದನ್ನು ಮೀರಿ ವಾಸ್ತವಗಳ, ಕಪಟ ಭಾವಗಳ, ಚಂಚಲತೆಗಳ ದರ್ಶನವನ್ನು ಅನಾವರಣಗೊಳಿಸುತ್ತಲೇ ಪ್ರೇಮದ ಸಾತ್ವಿಕತೆ , ಅಧ್ಯಾತ್ಮಿಕತೆಯ ಔನತ್ಯವನ್ನೂ ಬಿಂಬಿಸುವ ಪ್ರಯತ್ನ ಮಾಡಿದೆ.

ಸಾಮಾನ್ಯ ಓದುಗರು ಈ ಬಗೆಯ ಕೃತಿಗಳನ್ನು ಆಸ್ವಾದಿಸುವುದು ಸ್ವಲ್ಪ ಕಷ್ಟದಾಯಕವೇ. ಅಸ್ವಾದಿಸಲು ಮನಸ್ಸು ತಾತ್ವಿಕವಾಗಿ ಹಲವು ಬಗೆಯ ಆಯಾಮಗಳನ್ನು ಅರಿತಿರಬೇಕಾಗುತ್ತದೆ. ಅದರಲ್ಲೂ ಬದುಕಿನ ಸ್ವಭಾವ ಗುಣಗಳ ಅಸಂಗತತೆಯನ್ನು ಅರಿತಿರ ಬೇಕಾಗುತ್ತದೆ. ಹಾಗಿದ್ದರೆ ಮಾತ್ರ ಕೃತಿ ಹೆಚ್ಚು ರುಚಿಸುತ್ತದೆ. ಅಂದರೆ ಇದು ಚಿಂತನಕಾರರಿಗೆ ಹಿಡಿಸುವಂತಹ ಕೃತಿಯಾಗಿದೆಯೇ ವಿನಾ ರಂಜನೆ ಬಯಸುವವರಿಗೆ ಅಲ್ಲ.

ಕನ್ನಡ ಸಾಹಿತ್ಯ ಲೋಕದಲ್ಲಿ ಇಂತಹದೊಂದು ವಿನೂತನ ಬಗೆಯ ಚಿಂತನಾ ಕಾವ್ಯ ಕೃತಿ ನೀಡಿರುವ ಮೌನೇಶ ಬಡಿಗೇರ
ಅವರಿಗೆ ಹೃತ್ಪೂರ್ವಕ‌ ಅಭಿನಂದನೆಗಳು.

‍ಲೇಖಕರು Admin

January 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: