ಸಂಪಾದಕನಾಗಿ ‘ಮುಜುಗರಗಳ ಮಾಲೆ’

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಭಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

ಕನ್ನಡ ಪತ್ರಿಕೋದ್ಯಮದಲ್ಲಿ ಕ್ರೀಡಾ ವಾರ್ತೆಗಳಿಗೆ ಒಂದು ಪುಟವನ್ನು ಮೀಸಲಿಟ್ಟ ಮೊದಲ ಪತ್ರಿಕೆ ಪ್ರಜಾವಾಣಿ. ಅದರ ಮೊದಲ ಕ್ರೀಡಾ ವರದಿಗಾರ ಎಚ್.ಎಸ್. ಸೂರ್ಯನಾರಾಯಣ. ‘ಕ್ರೀಡಾಂತರಂಗ’ ಎಂಬ ವಾರದ ಅಂಕಣ ಬರೆಯುತ್ತಿದ್ದ ಅವರು ‘ಸೂರಿ’ ಎಂದೇ ಕ್ರೀಡಾ ವಲಯಗಳಲ್ಲಿ ಪರಿಚಿತರಾಗಿದ್ದರು. ಎಚ್.ಎಸ್. ಸೂರ್ಯನಾರಾಯಣ ಕ್ರಿಡಾ ವಿಭಾಗದ ಮುಖ್ಯ ಉಪಸಂಪಾದಕರಾಗಿದ್ದರು. ಎಸ್.ದೇವನಾಥ್, ಆನಂದರಾಜ ಅರಸು, ತಾಯಿ ನಾಡು ಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗಿದ್ದ ಡಿ.ಎಚ್. ಶ್ರೀನಿವಾಸ್, ಪ್ರಭಾಕರ್, ಗೋಪಾಲ ಹೆಗಡೆ, ಅಪ್ಪಾಜಿ  ಆನಂತರ ಸೇರಿಕೊಂಡವರು. ಇವರು ಒಬ್ಬೊಬ್ಬರೂ ಒಂದೊಂದು ಕ್ರೀಡೆಯ ವರದಿಗಾರಿಕೆಯಲ್ಲಿ ಪರಿಣಿತರಾಗಿದ್ದರು. ಸೂರಿ ಆಲ್ ರೌಂಡರ್ ಥರಾ ಇದ್ದರು. ಸೂರಿ ಮಾತಿನಲ್ಲಿ ಕಠಿಣ, ಆದರೆ ಹೃದಯದಲ್ಲಿ ಮಾನವೀಯ ಅಂತಃಕರಣ ಮಿಡಿಯುತ್ತಿತ್ತು.

ಕ್ರೀಡಾ ಪುರವಣಿ ಪಾರಂಭಿಸುವ ವೇಳೆಗೆ ಸೂರಿ ನಿವೃತ್ತರಾಗಿದ್ದರು. ದೇವನಾಥ್ ಕ್ರೀಡಾ ವಿಭಾಗದ ಮುಖ್ಯಸ್ಥರಾಗಿದ್ದರು. ಕ್ರಿಕೆಟ್ ನಲ್ಲಿ ವಿಶೇಷ ಪರಿಣತಿ ಹೊಂದಿದ್ದರು. ಎಸ್.ಜೆ. ಪಾಲಿಟೆಕ್ನಿಕ್‌ನಲ್ಲಿ ಸಿನಿಮಾಟೊಗ್ರಫಿಯಲ್ಲಿ ಡಿಪ್ಲೊಮ ಪಡೆದು, ಕ್ರೀಡಾ ಪತ್ರಿಕಾ ವೃತ್ತಿಯಲ್ಲಿ ಒಲವು ಬೆಳೆಸಿಕೊಂಡಿದ್ದ ದೇವನಾಥ್ ‘ತಾಯಿ ನಾಡು’ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರಿಕೆ ಆರಂಭಿಸಿದರು.

ಸೂರಿಯಂತೆ ಖಂಡಿತವಾದಿ, ಮುಚ್ಚುಮರೆಯಿಲ್ಲದೆ ಮಾತಾಡುತ್ತಿದ್ದ ವ್ಯಕ್ತಿ. ನಿಷ್ಠುರ ಮನೋಭಾವ, ಖಂಡಿತವಾದಿ ಲೋಕವಿರೋಧಿ ಮಾದರಿಯವರು. ನಾನು ಕಾರ್ಯನಿರ್ವಾಹಕ ಸಂಪಾದಕನಾಗುವ ವೇಳೆಗೆ ಅವರು ಎರಡು ಸಾರಿ ‘ಪ್ರವಾ’ ಬಿಟ್ಟು ಮೂರನೆಯ ಸಾರಿ ಮತ್ತೆ ಒಳಕ್ಕೆ ಬಂದಿದ್ದರು. ಯಾವುದೋ ಭಿನ್ನಾಭಿಪ್ರಾಯವೋ, ಹಠವೋ ಕಾರಣವಾಗಿ ಸೇರಿದ ಪತ್ರಿಕೆಗಳನ್ನೆಲ್ಲ ಬಿಟ್ಟುಬರುತ್ತಿದ್ದ ದೇವನಾಥ್ ‘ಕ್ರೀಡಾರತ್ನ’ ಅನ್ನುವ ಸ್ವಂತ ಪತ್ರಿಕೆಯನ್ನು ಸ್ವಲ್ಪ ಕಾಲ ನಡೆಸಿ ಕೈ ಸುಟ್ಟಿಕೊಂಡಿದ್ದರು. ನಿರುದ್ಯೋಗಿಯಾಗಿದ್ದಾಗ ಆಟೋರಿಕ್ಷಾ ಓಡಿಸಿದ್ದೂ ಉಂಟು.

ಕ್ರೀಡಾ ಪುರವಣಿಯ ಹೊಣೆ ದೇವನಾಥನದಾಗಿತ್ತು. ಕ್ರೀಡಾ ಪುರವಣಿಯ ವೈಶಿಷ್ಠ್ಯಗಳೇನಿರಬೇಕು ಎಂದು ಚರ್ಚಿಸುತ್ತಿದ್ದಾಗ ದೇವನಾಥ್ ‘ಜಾನುಪ್ರಿಯ’ ಅವರಿಂದ ಒಂದು ಅಂಕಣ ಬರೆಸಿದರೆ ಹೇಗೆ ಎನ್ನುವ ಪ್ರಸ್ತಾಪ ಮಾಡಿದರು. ಜಾನುಪ್ರಿಯರ ನಿಜ ನಾಮಧೇಯ ಸಿದ್ದೇ ಗೌಡ ಎಂದು. ಜಾನುಪ್ರಿಯ ಕಾವ್ಯನಾಮದಲ್ಲಿ ಬರೆಯುತ್ತಿದ್ದರು. ಕನ್ನಡ ಪ್ರಭ, ಪ್ರಜಾಮತ ಪತ್ರಿಕೆಗಳಲ್ಲಿ ಕೆಲವು ಕಾಲ ಕ್ರೀಡಾ ವರದಿಗಾರ/ಉಪಸಂಪಾದಕರಾಗಿದ್ದ ಅವರು ಕ್ರಿಕಿಟ್ ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಅವರ ಬರಹಗಳನ್ನು ನಾನು ಓದಿದ್ದೆ. ಕ್ರೀಡಗಳ ಬಗ್ಗೆ ಕೇವಲ ಅಂಕಿ ಅಂಶಗಳನ್ನು ತುಂಬದೆ ಅದಕ್ಕೆ ಸಂಬಂಧಿಸಿದ ಸ್ವಾರಸ್ಯಕರ ಸಂಗತಿಗಳಿಂದ ರೋಚಕವಾಗಿ ಬರೆಯುತ್ತಿದ್ದರು. ಅವರ ಶೈಲಿಯಲ್ಲಿ ಲವಲವಿಕೆ ಇತ್ತು. ಒಂದಷ್ಟುಕಾಲ ‘ಕ್ರೀಡಾ ದೀಪ’ ಎನ್ನುವ ಸ್ವಂತ ಪತ್ರಿಕೆ ನಡೆಸಿದ್ದರು. ಅವರಿಂದ ಅಂಕಣ ಬರೆಸಬಹುದು ಎನ್ನಿಸಿತು. ಮಾತಾಡಿ, ಆದರೆ ನನ್ನ ಕಾಣಲು ಹೇಳಿ ಎಂದೆ.

ಸಿದ್ದೇ ಗೌಡ ತುಂಬ ಆತ್ಮಾಭಿಮಾನಿ ವ್ಯಕ್ತಿ. ನಿಷ್ಠುರವಾಗಿ ಮಾತನಾಡುತ್ತಿದ್ದರು. ತನಗೆ ಸಿಗಬೇಕಾದ ಮಾನ್ಯತೆ ಸಿಕ್ಕಿಲ್ಲ, ತನನ್ನು ತುಳಿಯಲಾಗಿದೆ ಎನ್ನುವ ಸಿಟ್ಟೂ ಅವರಲ್ಲಿ ಸ್ವಲ್ಪ ಇತ್ತು. ಏಕೋ ಏನೋ ಕನ್ನಡದ ಕ್ರೀಡಾ ಪತ್ರಿಕೋದ್ಯಮದಲ್ಲಿ ಅವರಿಗೆ ಅವಕಾಶ/ಪ್ರೋತ್ಸಾಹ ಸಿಕ್ಕಿರಲಿಲ್ಲ. ಕ್ರೀಡಾ ಪುರವಣಿಗೆ ಅಂಕಣ ಬರೆಯಿರಿ ಎಂದಾಗ, ‘ಬರೆಯುತ್ತೇನೆ. ಆದರೆ ನನ್ನ ಎರಡು ಶರತ್ತುಗಳಿಗ ನೀವು ಒಪ್ಪಿದರೆ ಮಾತ್ರ’ ಎಂದರು.

‘ಹೇಳಿ’

‘ನನ್ನ ಲೇಖನದಲ್ಲಿ ಏನೂ ಬದಲಾವಣೆ ಮಾಡಬಾರದು. ಎಡಿಟ್ ಮಾಡಬಾರದು’

‘ಆಗಬಹುದು. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲೇ ಇದೆ. ಎಡಿಟಿಂಗ್‌ಗೆ ಅವಕಾಶವಿಲ್ಲದಂತೆ ಲೇಖನ ಸತ್ಯಾಂಶಗಳಿಂದ ಅಚ್ಚುಕಟ್ಟಾಗಿದ್ದರೆ, ೫೦೦ ಪದ ಮಿತಿಯೊಳಗಿದ್ದರೆ ಆಯಿತು’

‘ಆ ಭರವಸೆ ನಾನು ಕೊಡುತ್ತೇನೆ. ನನ್ನ ಲೇಖನಗಳನ್ನು ನೀವು ಓದಿರಬೇಕಲ್ಲ’

‘ಓದಿ ಬಲ್ಲೆನಾದ್ದರಿಂದಲೇ ನಿಮಗೆ ಬರೆಯಲಿ ಹೇಳುತ್ತಿರುವುದು. ಎರಡನೆಯ ಶರತ್ತು ಹೇಳಿ’

‘ಸಂಭಾವನೆ ….?’

‘ಯೋಗ್ಯ ಪ್ರತಿಫಲ ನೀಡಲಾಗುವುದು. ನೀವು ಆ ಬಗ್ಗೆ ಯೋಚಿಸ ಬೇಕಿಲ್ಲ’

ಸ್ವಲ್ಪ ಹೆಚ್ಚಿನ ಸಂಭಾವನೆ ಬಯಸುತ್ತಾರೆಂದು ದೇವನಾಥ್ ಸುಳಿವು ನೀಡಿದ್ದರು.

ಜಾನುಪ್ರಿಯರ ಅಂಕಣ ಶುರುವಾಯಿತು. ನನ್ನ ಅಧಿಕಾರ ಮಿತಿಯಲ್ಲಿ ಇದ್ದ ಗರಿಷ್ಠ ಸಂಭಾವನೆ (ರೂ ೫೦೦) ಕೊಡಲು ನಿರ್ಧರಿಸಿದ್ದೆ. ಎರಡನೆಯ ತಿಂಗಳು ಒಂದು ದಿನ ಸಿದ್ದೇಗೌಡ ನನ್ನೊಡನೆ ಮಾತನಾಡುವ ಇರಾದೆಯನ್ನು ದೇವನಾಥರಲ್ಲಿ ವ್ಯಕ್ತಪಡಿಸಿದರು. ಬರಲಿ, ಬೆಳಿಗ್ಗೆ ಹನ್ನೆರಡರ ಒಳಗೆ ಅಥವಾ ಸಂಜೆ ನಾಲ್ಕರ ನಂತರ ಎಂದು ತಿಳಿಸಿದೆ.

ಸಂಜೆ ೫ರ ವೇಳೆಗೆ ಬಂದರು. ಉಭಯಕುಶಲೋಪರಿ ನಂತರ,’ಬನ್ನಿ ಸಾರ್ ಕಾಫಿಗೆ ಹೋಗೋಣ’ಎಂದರು. ನಾನು ಸಾಮಾನ್ಯವಾಗಿ ಯಾರ ಜೊತೆಗೂ ಕಾಫಿಗೆ ಹೋಗುತ್ತಿರಲಿಲ್ಲ.

‘ಈಗ ಅಷ್ಟು ಸಮಯವಿಲ್ಲ. ನಿಮ್ಮ ಅಂಕಣಕೆ ಒಳ್ಳೆ ಪ್ರತಿಕ್ರಿಯೆ ಬರ್ತಿದೆ. ಏನು ಹೇಳಬೇಕೋ ಅದನ್ನು ಇಲ್ಲೇ ಹೇಳಿ’

‘ಸಂಪಾದಕರಿಗೆ ತಮ್ಮ ಪತ್ರಿಕೆಗೆ ಬರೆಯುವ ಲೇಖಕರ ಜೊತೆ ಕಾಫಿ ಕುಡಿಯುವಷ್ಟೂ ಸೌಜನ್ಯವಿಲ್ಲ ಎಂದರೆ ಹೇಗೆ? ಸಂಪಾದಕರ ಈಗೋ ಇಷ್ಟೊಂದು ದೊಡ್ಡದೋ. ನಾವು ಸಣ್ಣವರು..’

‘ಹಾಗಲ್ಲ ಸಿದ್ದೇ ಗೌಡರೆ…’ ಎಂದು ನಾನು ತಡೆದೆ. ಅವರ ಮಾತಿನಲ್ಲಿ ಅನಗತ್ಯವಾದ ವ್ಯಂಗ್ಯ, ಕಹಿ ಇದ್ದಂತೆ ತೋರಿತು. ಅದನ್ನು ಮುಂದುವರಿಸಲು ಬಿಡದೆ ಆಯಿತು ಬನ್ನಿ ಎಂದೆ. ಪಕ್ಕದ ಕಾಫಿ ಹೌಸಿಗೆ ಹೋದೆವು. ಕಾಫಿ ಬಂತು. ಕಾಫಿ ಕುಡಿಯುತ್ತ ಕೇಳಿದೆ:

‘ಏನು ವಿಷಯ ಹೇಳಿ ಸಿದ್ದೇ ಗೌಡರೆ?’

‘ಏನಿಲ್ಲ ಸಾರ್, ಮೊನ್ನೆ ನಿಮ್ಮ ಆಫೀಸಿನಿಂದ ಚೆಕ್ಕು ಬಂತು. ಹೇಳಿದಂತೆ ನಡೆದುಕೊಂಡಿದ್ದೀರಿ. ಅದಕ್ಕೆ ನಿಮ್ಮ ಜೊತೆ ಕಾಫಿ ಕುಡಿಯ ಬೇಕೆನಿಸಿತು.ಅಷ್ಟೇ’

 ‘ಸಂತೋಷವಾಗಿರಬೇಕಲ್ಲ?’

 ‘ಆಗಿದೆ ಸಾರ್’

ಬಿಲ್ ಬಂತು. ಅದನ್ನು ನಾನು ಕೈಗೆತ್ತಿಕೊಂಡೆ.

‘ಇಲ್ಲ ಸಾರ್ ನೀವು ಕೊಡಬಾರದು’

 ‘ಬೇಡ ಸಿದ್ದೇಗೌಡರೆ…’

 ‘ನನ್ನ ಒಂದು ಕಾಫಿ ಸತ್ಕಾರವೂ ನಿಮಗೆ ತಿರಸ್ಕರಣೀಯವಾಯಿತೆ’

‘ಹಾಗಲ್ಲ ಸಿದ್ದೇಗೌಡರೆ, ನಮ್ಮ ಅಂಕಣಕಾರರನ್ನು ಸತ್ಕರಿಸುವ ಸಂತೋಷ ಮೊದಲು ನಮ್ಮದಾಗಬೇಕು. ಅಷ್ಟೇ. ನಿಮ್ಮ ಅಂಕಣ ಪ್ರಕಟವಾಗುತ್ತಿರುವಾಗ ನಿಮ್ಮಿಂದ ಬಿಲ್ ಕೊಡಿಸುವುದು ಸರಿಯಲ್ಲ. ಈಗ ಬೇಡ ಇನ್ನೊಮ್ಮೆ ಕೊಡುವಿರಂತೆ’

ಸಿದ್ದೇ ಗೌಡರು ಮತ್ತೆ ನನನ್ನು ಭೇಟಿ ಮಾಡಲಿಲ್ಲ. ಅಂಕಣ ಬರೆಯುತ್ತಿದ್ದರು. ಸಿದ್ದೇಗೌಡರ ವರ್ತನೆಯ ಹಿಂದೆ ಅತೀವ ಆತ್ಮಾಭಿಮಾನದ ಜೊತೆಗೆ ವ್ಯವಸ್ಥೆಯ ವಿರುದ್ಧ ಮಡುಗಟ್ಟಿದ ಸಿಟ್ಟು ಆಕ್ರೋಶಗಳೂ ಇದ್ದಂತೆ ತೋರಿತು. ಸಿದ್ದೇಗೌಡರಿಗೆ ಕನ್ನಡ ಕ್ರೀಡಾ ಪತ್ರಿಕೋದ್ಯಮದಲ್ಲಿ ಒಂದು ಸ್ಥಿರ ನೌಕರಿ ಸಿಗಲಿಲ್ಲ. ಸಿಕ್ಕ ಒಂದೆರಡು ಅವಕಾಶಗಳನ್ನು ಅವರು ಬಿಟ್ಟು ಬಂದಿದ್ದರು. ಆದರೆ ಕ್ರೀಡಾ ಲೇಖಕನಾಗಿ ಅವರು ಒಂದು ಸ್ಥಾನ ಪಡೆದುಕೊಂಡಿದ್ದರು. ನಾನು ನಿವೃತ್ತನಾದ ಕೆಲವು ವರ್ಷಗಳ ನಂತರ ಅವರು ಒಂಟಿಯಾಗಿ ಉಳಿದಿದ್ದ ರೂಮಿನಲ್ಲಿ ಹೃದಯಾಘಾತದಿಂದ ನಿಧನರಾದ ಸುದ್ದಿ ನನಗೆ ಸಹೋದ್ಯೋಗಿ ರಾಮಕೃಷ್ಣನಿಂದ ತಿಳಿದು ಬಹಳ ದುಃಖವಾಯಿತು. ‘ಪ್ರವಾ’ ಕಂಪೋಸಿಂಗ್ ವಿಭಾಗದಲ್ಲಿ ಮೇಕಪ್ ಮ್ಯಾನ್ ಆಗಿದ್ದ ರಾಮಕೃಷ್ಣ ಕೊನೆಯ ದಿನಗಳಲ್ಲಿ ಸಿದ್ದೇಗೌಡರಿಗೆ ಆಸರೆಯಾಗಿದ್ದ.

ವೃತ್ತಿಜೀವನದ ಕೊನೆಯಲ್ಲಿ ನನ್ನನ್ನು ತುಂಬ ಕಾಡಿದ, ನನಗೆ ಕಿರಿಕಿರಿ ಉಂಟುಮಾಡಿದ ಒಂದು ಸಂಗತಿ  ಎಂದರೆ ವೃತ್ತಿ ನೀತಿವಂತಿಕೆ (ಪ್ರೊಫೆಷನಲ್ ಎಥಿಕ್ಸ್). ನಾನು ಕಾಫೀ ಸತ್ಕಾರ ಬೇಡ ಎಂದಾಗ, ಅದು ಸಿದ್ದೇಗೌಡರಿಗೆ ನನ್ನ ಅಹಂಕಾರದ ಅಂತಸ್ತಿನ ಗರ್ವದ  ಅಭಿವ್ಯಕ್ತಿಯಾಗಿ ತೋರಿದ್ದು ನನ್ನನ್ನು ತುಂಬ ವ್ಯಾಕುಲಗೊಳಿಸಿತ್ತು. ಪತ್ರಕರ್ತರು ಇಂಥ ಆಮಿಷಗಳಿಗೆ ಒಳಗಾಗಬಾರದು, ಹಾಗಾದಲ್ಲಿ ಅದು ಅವರ ನೈತಿಕತೆಯ ಅಡಿಪಾಯವನ್ನು ಶಿಥಿಲಗೊಳಿಸುತ್ತದೆ ಎನ್ನುವ ವೃತ್ತಿ ನೀತಿ ಅವರಿಗೇಕೆ ಅರ್ಥವಾಗಲಿಲ್ಲ ಎಂದು  ಹಿಂಸೆಯಾಯಿತು.

ಕಾಫಿತಿಂಡಿ ಸತ್ಕಾರಗಳನ್ನು ಮಾನವೀಯ ಸೌಜನ್ಯದ ನಡಾವಳಿ ಎಂದು ಕೆಲವರು ಹೇಳುತ್ತಾರೆ. ಆದರೆ ಇದು ನನಗೆ ಒಪ್ಪಿತವಲ್ಲ. ಭ್ರಷ್ಟಾಚಾರ ಶುರುವಾಗುವುದೇ ಕಾಫಿಯ ಮೇಜಿನಲ್ಲಿ. ಸೌಜನ್ಯವಾಗಿ ಶುರುವಾಗುವುದು ಒಂದೊಂದು ಮೆಟ್ಟಿಲೇ ಜಾರಿಸುತ್ತಿರುತ್ತದೆ. ಎಂದೇ ನಾನು ಸಹೋದ್ಯೋಗಿಗಳು ಮತ್ತು ಆಫೀಸಿಗೆ ಬರುವ ಸ್ನೇಹಿತರ ಈ ʼ’ಕಾಫಿಗೆ ಹೋಗೋಣ’ದಿಂದ ದೂರವಿರುತ್ತಿದ್ದೆ. ಇಂಥ ಪ್ರಲೋಭನೆಗಳ ವಿವಿಧ ರೂಪಗಳನ್ನು ನಾನು ನನ್ನ ಸಹೋದ್ಯೋಗಿಗಳಲ್ಲೇ ಕಂಡು ಅವರಿಗೆ ನಿರ್ದಾಕ್ಷಿಣ್ಯವಾಗಿ ‘ಬೇಡ’ ಎಂದು ಹೇಳಿ ನಿಷ್ಠುರನಾಗಿದ್ದೆ.

‘ಸುಧಾ’ದಲ್ಲಿ ಫೋಟೊಕಾಮಿಕ್ಸ್ ಎನ್ನುವ ಚಿತ್ರಕಥಾಮಾಲಿಕೆಯನ್ನು ಪ್ರಕಟಿಸುತ್ತಿದ್ದೆವು. ಇದರ ಪ್ರವರ್ತಕರು ಎಂ.ಬಿ.ಸಿಂಗ್. ಜನಪ್ರಿಯವಾಗಿತ್ತು. ಆದರೆ ಕಥೆಯನ್ನ ನಾವೇ, ಅಂದರೆ ಸಂಪಾದಕೀಯ ವಿಭಾಗದವರೇ ಆಯ್ಕೆಮಾಡುತ್ತಿದ್ದವು. ಮುಂದಿನದು ಆ ಕಥೆಯ ಪಾತ್ರಗಳಿಗೆ ಅಗತ್ಯವಾದ ನಟ ನಟಿಯರನ್ನು ಆರಿಸಿ ದೃಶ್ಯರೂಪದಲ್ಲಿ ಅದನ್ನು ಶೂಟ್ ಮಾಡಿಕೊಡಬೇಕಿತ್ತು. ಈ ಕೆಲಸ ಸಿನಿಮಾ ಮಾಧ್ಯಮದಲ್ಲಿ ಅನುಭವವಿರುವವರು ಮಾಡಬೇಕಿದ್ದ ಕೆಲಸ. ಎಂದೇ ಈ ಕೆಲಸ ಮಾಡಿಕೊಡುವಂತೆ ಸಿನಿಮಾ ರಂಗದ ನಿರ್ದೇಶನ ವಿಭಾಗದವರನ್ನು, ನಟರನ್ನು ಕೇಳಿಕೊಳ್ಳುತ್ತಿದ್ದೆವು.

ಒಮ್ಮೆ ಇದ್ದಕ್ಕಿದಂತೆ ಇದರಲ್ಲಿ ಏನೋ ವಾಸನೆ ಹೊಡೆಯುತ್ತಿದೆ ಎಂಬ ಪುಕಾರು ಆಡಳಿತ ವರ್ಗವನ್ನು ತಲುಪಿ ಇನ್ನು ಮುಂದೆ ಫೋಟೋಕಾಮಿಕ್ಸ್ ಅನ್ನು ಟೆಂಡರ್ ಕರೆದು ಯಾರು ಅತಿ ಕಡಿಮೆ ವೆಚ್ಚದಲ್ಲಿ ಮಾಡಿಕೊಡಬಲ್ಲರೋ ಅವರಿಗೆ ವಹಿಸಬೇಕೆಂದೂ ನನಗೆ ಸೂಚನೆ ಬಂತು. ಕಲೆ ಪಿ.ಡಬ್ಲ್ಯು.ಡಿ ಮಟ್ಟಕ್ಕೆ. ಚಲಚಿತ್ರ ನಿರ್ಮಾಣದಲ್ಲಿ ಅನುಭವ ಉಳ್ಳ ನಟ, ನಿರ್ದೇಶಕರುಗಳಿಂದ ಟೆಂಡರ್ ಕರೆಯಲಾಗುತ್ತಿತ್ತು. ಕಥೆಗೆ ಸೂಕ್ತವಾದ ರೂಪದರ್ಶಿಗಳು ಮತ್ತು ಛಾಯಾಗ್ರಾಹಕರ ಆಯ್ಕೆಯನ್ನು ನಿರ್ದೇಶಕರಿಗೇ ಬಿಡಲಾಗುತ್ತಿತ್ತು. ಒಮ್ಮೆಯಂತೂ ನನ್ನ ಹಳೆಯ ಗೆಳೆಯರಾದ ಖ್ಯಾತ ರಂಗಭೂಮಿ/ಚಿತ್ರ ನಟ ಸುಂದರರಾಜ್ ಫೋಟೋಕಾಮಿಕ್ಸ್ ಮಾಡಲು ಮುಂದಾಗಿ ಕೊಟೇಶನ್ ಸಲ್ಲಿಸಿದ್ದರು. ಆದರೆ ಅವರ ಕೊಟೇಶನ್ ಮೊತ್ತ ಬೇರೊಬ್ಬ ಟೆಂಡರುದಾರರಿಗಿಂತ ಹೆಚ್ಚಾಗಿದ್ದುದರಿಂದ ಅವರಿಗೆ ಅದು ಲಭ್ಯವಾಗಲಿಲ್ಲ. ‘ಏನು ಸಾರ್ ನೀವು ಹೇಳಿದ್ದಿದ್ದರೆ ನಾನು ಕಮ್ಮಿ ಮಾಡುತ್ತಿದ್ದೆನಲ್ಲ’ ಎಂದು ಅವರು ತಮ್ಮ ನಿರಾಶೆ ತೋಡಿಕೊಂಡಿದ್ದೂ ಉಂಟು..

ಒಮ್ಮೆ ಕ್ಯಾಮೆರಾಮೆನ್ ಒಬ್ಬರಿಗೆ ಎರಡನೆಯ ಸಲ ಫೋಟೊಕಾಮಿಕ್ಸ್ ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಅದು ನಿರ್ದೆಶಕರ ಆಯ್ಕೆಯಾಗಿತ್ತು. ಇಷ್ಟೆಲ್ಲ ಪಾರದರ್ಶಕವಾಗಿದ್ದರೂ, ತಮಗೆ ಬೇಕಾದವರಿಗೆ ಕೊಡಲಾಗುತ್ತಿದೆ ಎಂದು ನನ್ನ ಸಹೋದ್ಯೋಗಿಯೇ ಒಬ್ಬರು ನನ್ನ ವಿರುದ್ಧ ನಿರ್ದೇಶಕರಿಗೆ ಪತ್ರ ಬರೆದದ್ದು ನನ್ನನ್ನು ಬಹಳ ಖಿನ್ನನನ್ನಾಗಿಸಿತ್ತು.

ಪ್ರಧಾನ ಮಂತ್ರಿಗಳು ವಿದೇಶ ಪ್ರವಾಸ ಕೈಗೊಂಡಾಗ, ರಕ್ಷಣಾ ಸಚಿವರು ಗಡಿಪ್ರದೇಶಗಳಿಗೆ ಭೇಟಿಕೊಟ್ಟಾಗ, ಕೇಂದ್ರ ಸಚಿವರುಗಳ ಮಹತ್ವದ ಪ್ರವಾಸಗಳು ಇಂಥ ಸಂದರ್ಭಗಳಲ್ಲಿ ಜೊತೆಗೆ ಪತ್ರಕರ್ತರನ್ನು ಕರೆದೊಯ್ಯುವ ಪರಿಪಾಠ ಕೇಂದ್ರದಲ್ಲಿತ್ತು. ಸಾಮಾನ್ಯವಾಗಿ ಪ್ರಧಾನ ಮಂತ್ರಿಯವರ ವಿದೇಶ ಯಾತ್ರೆ ಹಾಗೂ ಇನ್ನಿತರರ ಪ್ರವಾಸಗಳನ್ನು ವರದಿಮಾಡಲು ಪತ್ರಕರ್ತರನ್ನು ಕಳುಹಿಸಿಕೊಡುವಂತೆ ದೇಶದ ಪ್ರಮುಖ ಪತ್ರಿಕೆಗಳಿಗೆ ಪ್ರೆಸ್ ಇನ್ ಫರ್ಮೇಶನ್ ಬ್ಯೂರೊ (ಪಿ.ಐ.ಬಿ) ಪತ್ರ ಬರೆಯುತ್ತಿತ್ತು. ಇಂಥ ಆಮಂತ್ರಣ ಬಂದಾಗ ‘ಪ್ರ ವಾ’ದಲ್ಲಿ, ಸಂಪಾದಕರು ಈ ಪ್ರವಾಸಕ್ಕೆ ವರದಿಗಾರರಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತಿದ್ದರು. ಹಿರಿಯ ವರದಿಗಾರರಿಗೆ ಇಂಥ ಅವಕಾಶಗಳು ಹೆಚ್ಚಾಗಿ ಲಭಿಸುತ್ತಿದ್ದವು. ಹಿರಿಯ ವರದಿಗಾರರಲ್ಲದೆ, ಸುದ್ದಿ ಸಂಪಾದಕರು/ಸುದ್ದಿ ಮೇಜಿನ ಮುಖ್ಯ ಉಪ ಸಂಪಾದಕರು/ ಹಿರಿಯ ಉಪಸಂಪಾದಕರನ್ನು ಇಂಥ ವಿದೇಶ ಪ್ರವಾಸಗಳಿಗೆ ಕಳುಹಿಸಿರುವ ನಿದರ್ಶನಗಳು ‘ಪ್ರವಾ’ದಲ್ಲಿದೆ.

ಇದಲ್ಲದೆ ಅಮೆರಿಕ ರಾಯಭಾರ ಕಚೇರಿ, ಬ್ರಿಟಿಷ್ ಕೌನ್ಸಿಲ್‌ನಂಥ ಸಂಸ್ಥೆಗಳು ತಮ್ಮ ದೇಶದ ಮಹತ್ವದ ಕಾರ್ಯಕ್ರಮಗಳಿಗೆ, ವಿಜ್ಞಾನ-ತಂತ್ರಜ್ಞಾನ, ಪರಿಸರ ಮೊದಲಾದ ವಿಚಾರ ಸಂಕಿರಣಗಳಿಗೆ ಭಾರತದ ಪ್ರಮುಖ ಪತ್ರಿಕೆಗಳಿಗೆ ಪತ್ರಕರ್ತರೊಬ್ಬರನ್ನು ಕಳುಹಿಸಿಕೊಡುವಂತೆ ಆಮಂತ್ರಣ ನೀಡುತ್ತಿದ್ದವು. ಪತ್ರಕರ್ತರಿಗೆ ಇವು ಅಧಿಕಾರಕ್ಕೆ ಹತ್ತಿರವಾಗಲು ಹಾಗೂ ಹೆಚ್ಚಿನ ಆಧ್ಯಯನಕ್ಕೆ, ವೃತ್ತಿ  ನೈಪುಣ್ಯ ವೃದ್ಧಿಗೆ ಉತ್ತಮ ಅವಕಾಶಗಳಾಗುತ್ತಿದ್ದವು. ಎಂದೇ ವರರದಿಗಾರರು ಇಂಥ ಅವಕಾಶಗಳಿಗಾಗಿ ತುದಿಗಾಲಿನಲ್ಲಿ ನಿಂತಿರುತ್ತಿದ್ದರು. ಕೆಲವು ಚಾಣಾಕ್ಷರು ಇಂಥ ಆಹ್ವಾನಕ್ಕಾಗಿ ಲಾಬಿ ನಡೆಸಿದ ಪ್ರಸಂಗಗಳೂ ನನ್ನ ಗಮನಕ್ಕೆ ಬಂದಿದ್ದವು.

ಆಹ್ವಾನಗಳು ಬಂದಾಗ ಪ್ರಧಾನ ಸಂಪಾದಕರ/ಎಂ.ಡಿ.ಯವರ ಜೊತೆ ಸಮಾಲೋಚಿಸಿಯೇ ಯಾರನ್ನು ಕಳುಹಿಸಬೇಕೆಂಬ ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ಒಮ್ಮೆ ಹೀಗಾಯಿತು. ೧೯೯೭- ಶ್ರೀ ದೇವೇಗೌಡರು ಆಗ ಪ್ರಧಾನ ಮಂತ್ರ‍್ರಿಯಾಗಿದ್ದರು. ಗೌಡರು ಸ್ವಿಜರ್ಲೆಂಡ್ ಮತ್ತು ಮಾರಿಷಸ್‌ಗಳಲ್ಲಿ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದರು. ಪ್ರಧಾನಿಗಳ ಈ ವಿದೇಶ ಪ್ರವಾಸ ವರದಿ ಮಾಡಲು ‘ಪ್ರವಾ’ದಿಂದ ಪತ್ರಕರ್ತರೊಬ್ಬರನ್ನು ಕಳುಹಿಸುವಂತೆ ಪಿ.ಐ.ಬಿ.ಯಿಂದ ಅಧಿಕೃತ ಆಮಂತ್ರಣ ಬಂತು. ನಂತರ ಪಿ.ಐ.ಬಿ. ಬೆಂಗಳೂರು ಕಚೇರಿಯ ಮುಖ್ಯಸ್ಥರಿಂದ ನನಗೊಂದು ಫೋನ್ ಬಂತು. ಶ್ರೀ ದೇವೇಗೌಡರ ವಿದೇಶ ಪ್ರವಾಸಕ್ಕೆ ನಿಮ್ಮ ವರದಿಗಾರ ಶ್ರೀ… ಅವರನ್ನೇ ಕಳುಹಿಸಕೊಡಬೇಕೆಂದು ದೆಹಲಿ ಪಿ.ಐ.ಬಿ ಮುಖ್ಯಸ್ಥರು ಸೂಚಿಸಿದ್ದಾರೆ ಎಂದು ತಿಳಿಸಿದರು.

ನನಗೆ ಈ ದೆಹಲಿ ಫರ್ಮಾನು ಕೇಳಿ ತಲೆಬಿಸಿಯಾಯಿತು. ಪ್ರಧಾನಿಯವರ ವಿದೇಶ ಪ್ರವಾಸವನ್ನು ವರದಿ ಮಾಡಲು ಯಾರು ಸಮರ್ಥರು ಎಂಬುದನ್ನು ನಾನು ನಿರ್ಧರಿಸುವುದೇ ಅಥವಾ ಪಿ.ಐ.ಬಿ ನಿರ್ಧರಿಸುವುದೆ? ಯಾರು ಅವರಿಗೆ ಈ ಅಧಿಕಾರ ಕೊಟ್ಟವರು? ನಾನು ಇದನ್ನು ಪ್ರಧಾನ ಸಂಪಾದಕರಿಗೆ ತಿಳಿಸಿದೆ.

‘ನೋ..ನೋ ವಿ ಕಾಂಟ್ ಸೆಂಡ್ ಎ ಪರ್ಸನ್ ಆಫ್ ದೇರ್ ಛಾಯ್ಸ್… ಇಟೀಸ್ ಅವರ್ ಪ್ರೆರೊಗೆಟಿವ್’ – ಎಂಬುದು ಪ್ರಧಾನ ಸಂಪಾದಕರ ಪ್ರತಿಕ್ರಿಯೆ ಆಗಿತ್ತು.

ಯಾರನ್ನು ಕಳುಹಿಸಬಹುದೆಂದು ಚರ್ಚಿಸಿದ ನಂತರ  ಪ್ರಧಾನ ಸಂಪಾದಕರು ಒಬ್ಬರ ಹೆಸರನ್ನು ಸೂಚಿಸಿದರು. ನಾನು ಇದನ್ನು ಪಿ.ಐ.ಬಿ.ಗೆ ತಿಳಿಸಿದೆ. ಅವರು ತಾವು ಈ ಮೊದಲು ಸೂಚಿಸದ ವರದಿಗಾರನ ಹೆಸರು ಹೇಳಿ, ಪ್ರಧಾನ ಮಂತ್ರಿಯವರ ಕಚೇರಿಯ ಅಪೇಕ್ಷೆ ಇದಾಗಿದೆ ಎಂದು ತಿಳಿಸಿದರು. ‘ಅವರ ಆಯ್ಕೆಯ ವ್ಯಕ್ತಿಯನ್ನು ಕಳಹಿಸಲಾಗದು. ಅದು ನಮ್ಮ ಸ್ವಾತಂತ್ರ್ಯ’ ಎಂದೆ ನಾನು. ಅಲ್ಲಿಗೆ ಮುಗಿಯಿತು. ಮರು ದಿನ ಮಧ್ಯಾಹ್ನದ ಸಭೆಯ ನಂತರ ಪ್ರಧಾನ ಸಂಪಾದಕರು ನನಗೆ ಹೇಳಿದರು:

‘ಸೀ ದಟ್ ಫೆಲೋ, ಯಾರದು? ….’ ಕ್ಷಣಕಾಲ ತಡೆದು,

‘ಪಿ.ಎಂ.ಕಚೇರಿಯಿಂದ ಫೋನ್ ಬಂದಿತ್ತು. ಅವರು ಕೇಳುತ್ತಿರುವವರನ್ನೇ ಕಳುಹಿಸಿಬಿಡಿ.’

ಇನ್ನೊಮ್ಮೆ ಪರಿಸರ ಸಂರಕ್ಷಣೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ ಒಂದಕ್ಕೆ ಆಹ್ವಾನ ಬಂದಿತ್ತು. ವಿದೇಶದಲ್ಲಿ ನಡೆಯಲಿದ್ದ ಆ ಸಮ್ಮೇಳನಕ್ಕೆ ಇಂಥ ವರದಿಗಾರರನ್ನೇ ಕಳುಹಿಸತಕ್ಕದ್ದೆಂದು ವ್ಯವಸ್ಥಾಪಕ ಸಂಸ್ಥೆ ತಾಕೀತು ಮಾಡಿತ್ತು. ಪ್ರಧಾನ ಸಂಪಾದಕರು ಆಗದು, ಅವರು ಬಯಸುವ ವ್ಯಕ್ತಿಯನ್ನು ಕಳಹಿಸಲಾಗದೆಂದು ಸ್ಪಷ್ಟವಾಗಿ ತಿಳಿಸಿ ಬಿಡಿ ಎಂದು ಆದೇಶಿಸಿದರು. ಇಂಥ ಸಂದರ್ಭಗಳಲ್ಲಿ ನಾನೇ ತಮ್ಮ ದಾರಿಯಲ್ಲಿ ಅಡ್ಡಗಾಲು ಎಂದು ಆ ಸಹೋದ್ಯೋಗಿಗಳು ನನ್ನನ್ನು ತಪ್ಪಾಗಿ ತಿಳಿದದ್ದೂ, ಕೋಪತಾಪ ತೋರಿದ್ದೂ ಉಂಟು.

ದೇಶವಿದೇಶಗಳಿಗೆ ವಿಶೇಷ ಸಂದರ್ಭಗಳ್ಲಿ ವರದಿ ಮಾಡುವುದಕ್ಕೆ ಯಾರನ್ನು ಕಳುಹಿಸಬೇಕು ಎಂಬುದರಂತೆಯೇ ನಂತರದ ಪರಿಣಾಮಗಳೂ ನನಗೆ ತುಂಬ ಮುಜುಗರ ಉಂಟುಮಾಡುತ್ತಿದ್ದವು.ವಿದೇಶಗಳಿಗೆ ಹೋಗಿ ವಾಪಸಾದವರು ‘ಏನದರೊಂದು ವಿದೇಶಿ ಉಡುಗೊರೆಯೊಂದಿಗೆ’ ನನ್ನಲ್ಲಿಗೆ ಬರುತಿದ್ದರು. ವಿದೇಶಿ ಪ್ರವಾಸದ ಚರ್ಚೆಯ ನಂತರ-

‘ಸಾರ್,ಇದೊಂದು ಸ್ಮಾಲ್ ಗಿಫ್ಟ್, ಆ ದೇಶಕ್ಕೆ ಹೆಸರುವಾಸಿಯಾದದ್ದು. ನಿಮಗೆ ಇಷ್ಟವಾದೀತು ಎಂದು…ಒಂದು ಮೊಮೆಂಟೋ’

ನನಗೆ ಇಂಥವರನ್ನು ಅವರ ಉಡುಗೊರೆ ಸಮೇತ ಸಾಗಹಾಕುವುದು ತುಂಬಾ ಮುಜುಗರ ಉಂಟುಮಾಡುತ್ತದೆ, ಕಿರಿಕಿರಿ ಉಂಟು ಮಾಡುತ್ತಿತ್ತು. ಒಮ್ಮೆಯಂತೂ ತುಂಬಾ ಪೇಚಿನ ಪ್ರಸಂಗ ಉಂಟಾಯಿತು ವಿದೇಶ ಪ್ರವಾಸ ಮುಗಿಸಿ ಬಂದ ಹಿರಿಯ ವರದಿಗಾರರೊಬ್ಬರು ನಾನಿಲ್ಲದ ವೇಳೆ ನಮ್ಮ ಮನೆಗೆ ಹೋಗಿ ವಿದೇಶಿ ಉಡುಗೊರೆಯ ಒಂದು ಪ್ಯಾಕೆಟ್ಟನ್ನು ನನ್ನ ಮಗನ ಕೈಯ್ಯಲ್ಲಿಟ್ಟು ಬಂದಿದ್ದರು. ಆ ವೇಳೆಗೆ ತುಂಬ ವಾಚಾಳಿಯಾಗಿದ್ದ ನನ್ನ ಮಗ ಚಿ.ತೀರ್ಥ ಸಹೋದ್ಯೋಗಿಗಳು ಕರೆ ಮಾಡಿದಾಗಲೆಲ್ಲ, ನಾನು ಫೋನಿಗೆ ಬರುವವರೆಗೆ ಅವರೊಂದಿಗೆ ಹರಟೆ ಕೊಚ್ಚುತ್ತಿದ್ದ. ಇಂಥ ನಂಟು ಈ ಹಿರಿಯ ವರದಿಗಾರರೊಂದಿಗೂ ಬೆಳೆದಿತ್ತು. ಹಿರಿಯ ವರದಿಗಾರರು ಪ್ಯಾಕೆಟ್ಟನ್ನು ನನ್ನ ಮಗನ ಕೈಯ್ಯಲ್ಲಿಟ್ಟು ಹೋಗಿದ್ದರು.

ಸರಳಾ ಅದನ್ನು ಒಡೆದು ನೋಡಿದಾಗ ತೀರ್ಥನಿಗೆ ಪ್ರಿಯವಾದ ಚಾಕೊಲೆಟ್ ಗಳಲ್ಲದೆ ಸ್ಕಾಚ್ ವಿಸ್ಕಿಯ ಒಂದು ಶೀಸೆ ಇತ್ತು. ಬಾಲಕ ಅದನ್ನು ಪೆಪ್ಸಿ ಕೋಲಾಗಳಂತೆಯೇ ಭಾವಿಸಿದ್ದ. ಮನೆಗೆ ಹೋದಾಗ ಸರಳಾ, ‘ಏನ್ರೀ ನಿಮ್ಮ ಆಫೀಸಿನವರಿಗೆ ಇಂಥದ್ದನ್ನೆಲ್ಲ ತಂದುಕೊಡಬಾರದು ಎನ್ನುವಷ್ಟು ಸಭ್ಯತೆಯೂ ತಿಳಿಯದೆ? ಹೀಗೇಕೆ ಮಾಡುತ್ತಾರೆ? ಇದು ಲಂಚವಲ್ಲದೆ ಮತ್ತೇನು? ಲೋಕಕ್ಕೆ ಬುದ್ಧೀ ಹೇಳಬೇಕಾದವರು ಹೀಗೆ ಮಾಡಿದರೆ…’ ಎಂದು ನನ್ನನ್ನು ತರಾಟೆಗೆ ತೆಗೆದುಕೊಂಡಳು.

ಮರು ದಿನ ಅದನ್ನು ನಾನು ಆಫೀಸಿಗೆ ಒಯ್ದು, ಆ ಹಿರಿಯ ವರದಿಗಾರನಿಗೆ ‘ಇದನ್ನೆಲ್ಲ ನಿಮ್ಮಿಂದ ನಿರೀಕ್ಷಿಸಿರಲಿಲ್ಲ’ ಎಂದು ಸ್ವಲ್ಪ ಒರಟಾಗಿಯೇ ಹೇಳಿ ಹಿಂದಿರುಗಿಸಿದೆ.

ಇಂಥ ‘ಸೌಜನ್ಯ’ಗಳಿಂದ ಬಿಡಿಸಿಕೊಳ್ಳಲು ನಾವು ಎಷ್ಠೇ ಜಾಗೃತವಾಗಿದ್ದರೂ ಕೆಲವೊಮ್ಮೆ ಅನಿವಾರ್ಯತೆಯಿಂದಲೋ ಅಚಾನಕವಾಗಿಯೋ ಅವು ನಮ್ಮನ್ನು ಹಿಡಿದುಬಿಡುತ್ತವೆ. ಅನ್ನ ಋಣ ಅಂಥವುಗಳಲ್ಲಿ ಒಂದು. ನಾನು ಹೈಸ್ಕೂಲ್ ಮುಗಿಸಿ ಮುಂದೆ ದಾರಿಕಾಣದೆ ಇದ್ದಾಗ ನನಗೆ ಅನ್ನ, ವಸತಿ ನೀಡಿದವರು ನನ್ನ ದೊಡ್ಡಪ್ಪ ಶ್ರೀ ಎಂ.ಕೃಷ್ಣ ರಾವ್ (ಖ್ಯಾತ ಲೇಖಕ ಜಿ.ವರದರಾಜಾ ರಾವ್ ಅವರ ಅಣ್ಣ) ಮತ್ತು ದೊಡ್ಡಮ್ಮ ಶ್ರೀಮತಿ ರಾಜಮ್ಮ ಮಾವಸಿ. ಇದು ತೀರಿಸಲಾಗದ ಅನ್ನ ಋಣ. ಮುಂದೆ ನಾನು ಸಂಪಾದಿಸತೊಡಗಿದ ಮೇಲೆ ಇಂಥ ಪ್ರಸಂಗ ಒದಗಿ ಬಂದಿರಲಿಲ್ಲ. ಆದರೆ ಒಮ್ಮೆ ಆಫೀಸಿನ ಕೆಲಸದ ಮೇಲೆ ಕಲ್ಬುರ್ಗಿಗೆ ಹೋಗ ಬೇಕಾಯಿತು.

ಆಗ ಕಲ್ಬುರ್ಗಿಯಲ್ಲಿ ಜಿ.ಎನ್.ಮೋಹನ್ ‘ಪ್ರವಾ’ ಮುಖ್ಯ ವರದಿಗಾರರರಾಗಿದ್ದರು. ಹೋದ ಕೆಲಸವೆಲ್ಲ ಮುಗಿಯುವ ವೇಳೆಗೆ ರಾತ್ರಿ ಹತ್ತು ಗಂಟೆಯಾಗಿತ್ತು. ಹನ್ನೊಂದು ಗಂಟೆ ಬಸ್ಸಿಗೆ ನಾನು ಬೆಂಗಳೂರಿಗೆ ವಾಪಸು ಹೊರಡುವುದಿತ್ತು. ಅಷ್ಟರಲ್ಲಿ ಮೋಹನ್, ಸಾರ್ ಐದು ನಿಮಿಷ ನಮ್ಮ ಮನೆಗೆ ಬನ್ನಿ ಎಂದು ಕೇಳಿಕೊಂಡರು. ಆಯಿತು ಎಂದೆ. ಅವರ ಮನೆಗೆ ಹೋದೆವು. ಉಭಯ ಕುಶಲೋಪರಿ ಉಪಚಾರಗಳೆಲ್ಲ ಆದವು. ಇನ್ನು ಹೊರಡೋಣ, ಬಸ್ಸಿಗೆ ಹೊತ್ತಾಗುತ್ತೆ ಎಂದೆ. ಶ್ರೀಮತಿ ಸತ್ಯ ಅವರು ಊಟ ಮಾಡಿಕೊಂಡು ಹೋಗಿ ಸಾರ್, ಈ ಹೊತ್ತಿನಲ್ಲಿ ನಿಮಗೆ ಇಲ್ಲಿನ ಹೋಟೆಲ್ ಊಟ ಸರಿಹೋಗಲಾರದು ಎಂದರು. ಇಲ್ಲಮ್ಮ, ನಾನು ಹೋಗಬೇಕು. ನಿಮ್ಮ ಉಪಚಾರದಿಂದಲೇ ನನ್ನ ಹೊಟ್ಟ ತುಂಬಿದೆ. ಹಸಿವಿಲ್ಲ ಎಂದೆ. ಆದರೆ ಮೋಹನ್ ದಂಪತಿಗಳ ಒತ್ತಡ ಜಾಸ್ತಿಯಾಯಿತು. ಅತಿಥಿ, ಆತಿಥೇಯರ ಬಂದಿಯಾಗಿದ್ದ. ಮೋಹನ್ ಪುಷ್ಕಳ ಊಟ ಮಾಡಿಸಿಯೇ ನನ್ನನ್ನು ಬೆಂಗಳೂರಿನ ಬಸ್ಸು ಹತ್ತಿಸಿದರು. ಇದು ಅನ್ನದ ಋಣ.

February 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: