ಸಂಧ್ಯಾರಾಣಿ ಕಾಲಂ : ’ಪ್ರೇಮ’ ಇದು ನಾಮಪದವಲ್ಲ, ಕ್ರಿಯಾಪದ…


ಗೆಳತಿಯ ಪತ್ರ ಮೇಲ್ ಬಾಕ್ಸಿನಲ್ಲಿ ಮುಗುಳ್ನಗುತ್ತಿತ್ತು. ಅವಳು ಬರೆದಿದ್ದಳು. “’ಒಂದು ಕಡೆ ಜೋಗಿ ಬರೆದಿದ್ರು ‘love is a verb’ ಅಂತ, ನನಗೆ ಯಾವಾಗಲೂ ನೆನಪಿರತ್ತೆ ಆ ಸಾಲು”. ಓದುತ್ತಿದ್ದವಳು ಮತ್ತೊಮ್ಮೆ ಆ ಸಾಲುಗಳನ್ನು ಕಣ್ಣಿನಿಂದ ಸ್ಪರ್ಶಿಸಿದೆ. ’ಪ್ರೇಮ ಒಂದು ಕ್ರಿಯಾಪದ..’, ಓದಿದವರ ವಯಸ್ಸು, ಮನಸ್ಸು, ಮನಸ್ಸಿನ ಸ್ಥಿತಿ, ಮನೋಭಾವಗಳಿಗೆ ತಕ್ಕದಾಗಿ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಅರ್ಥ ಧ್ವನಿಸುವ ಸಾಲು. ಜೋಗಿಯವರ ಹಲವು ಕಥೆಗಳ ರೀತಿ ಓದಿದಾಗೆಲ್ಲಾ ಬೇರೆ ಬೇರೆ ಅರ್ಥ ಕೊಡಬಲ್ಲ ಸಾಲು ಅದು. ಎಳೆವಯಸ್ಸಿನವರಿಗೆ ತುಂಟತನವಾಗಿ, ಮಾಗಿದ ಮನಸ್ಸಿಗೆ ಜೀವನದುದ್ದದ ನೆರಳಾಗಿ ಕಾಣುವ ಸಾಲು.
ಅದನ್ನು ಓದಿದ ಮೇಲೆ ಅಚಾನಕ್ಕಾಗಿ ಅಂದೇ ಒಂದು ಸಿನಿಮಾ ನೋಡಿದೆ. ’ಇಷ್ಕಿಯಾ’, ವಿಶಾಲ್ ಭಾರದ್ವಾಜ್ ನಿರ್ಮಿಸಿದ, ಅಭಿಷೇಕ್ ಚೌಬಾಲ್ ನಿರ್ದೇಶಿಸಿದ ಚಿತ್ರ. ಅದು ಬಂದಾಗ ಯಾರಿಗೂ ಅದರ ಬಗ್ಗೆ ದೊಡ್ಡ ಉಮೇದೇನೂ ಇರಲಿಲ್ಲ. ಅದರಲ್ಲಿ ನಟಿಸಿದ್ದು ನಾಸಿರುದ್ದೀನ್ ಶಾ, ಅರ್ಷದ್ ವಾರ್ಸಿ ಮತ್ತು ವಿದ್ಯಾ ಬಾಲನ್. ಎಲ್ಲಾ ಉತ್ತಮ ನಟರೇ, ಆ ಬಗ್ಗೆ ಎರಡು ಮಾತೇ ಇಲ್ಲ, ಆದರೆ ಯಾರೂ ಸ್ಟಾರ್ ಗಳಲ್ಲ. ವಿದ್ಯಾ ಬಾಲನ್ ಚೀಲದಲ್ಲಿ ಇನ್ನೂ ಡರ್ಟಿ ಪಿಕ್ಛರ್ ಮತ್ತು ಕಹಾನಿ ಬಿದ್ದಿರಲಿಲ್ಲ. ಹಾಗಾಗಿ ಮೊದಮೊದಲು ಈ ಚಿತ್ರಕ್ಕೆ ಸಿಕ್ಕಿದ್ದು ತಣ್ಣನೆಯ ಪ್ರತಿಕ್ರಿಯೆ. ಆದರೆ ಸ್ಟಾರ್ ಗಳಿಲ್ಲದ ಈ ಚಿತ್ರಕ್ಕೆ ನಟನೆ, ಸಂಗೀತ, ಸಾಹಿತ್ಯ, ಕಥೆಗಳೇ ಸ್ಟಾರ್ ಗಳಾಗಿಬಿಟ್ಟವು. ಕೇವಲ ಚಿತ್ರ ನೋಡಿ ಬಂದವರ ಬಾಯಿ ಮಾತಿನ ಪ್ರಚಾರದ ಮೇಲೆ ಚಿತ್ರ ಚೇತರಿಸಿಕೊಂಡಿತ್ತು.
ಚಿತ್ರದ ಕಥೆ ಸಾಧಾರಣ ಮಸಾಲೆ ಚಿತ್ರಗಳ ಕಥೆ ಆಗಿರಲಿಲ್ಲ, ಅಸಲು ಈ ಚಿತ್ರದ ಕಥೆಗೆ ಯಾವ ಫಾರ್ಮುಲಾ ಸಹ ಇರಲಿಲ್ಲ! ನಾಯಕರು ಅಂದುಕೊಂಡವರು ಚಿತ್ರದ ಖಳನಾಯಕನ ಪಾದಕ್ಕೆ ಬಿದ್ದು ಒದ್ದಾಡುತ್ತಿರುತ್ತಾರೆ, ಆ ಬಿಳಿ ಕೂದಲ, ಕುರಚಲು ಗಡ್ಡದ ಖಳನಾಯಕ ಅಂತೂ ತನ್ನ ಮೊಬೈಲ್ ರಿಂಗ್ ಟೋನ್ ನಲ್ಲಿ ’ಓ ಮೆರಿ ಮೆಹರೆ ಜಬೀನ್, ತುಝೆ ಮಾಲೂಮ್ ನಹಿ, ತೂ ಅಭಿ ತಕ್ ಹೈ ಹಸೀನ್ ಔರ್ ಮೆ ಜವಾನ್’ ಅನ್ನುವ ಹಾಡನ್ನು ಹಾಕಿಕೊಂಡಿರುತ್ತಾನೆ. ಹೆಂಡತಿ ಫೋನ್ ಮಾಡಿದಾಗೆಲ್ಲಾ ಫೋನ್ ತೆಗೀತಾನೆ ಮತ್ತು ಕವನ ಕಟ್ಟುವಂತೆ ಮಾತನಾಡುತ್ತಾನೆ!
ಇನ್ನು ಚಿತ್ರದ ಹೀರೋಯಿನ್ ಬೆಳಗಿನಲ್ಲಿ ಅದ್ಭುತವಾಗಿ ಹಿಂದೂಸ್ತಾನಿ ಆಲಾಪ ಮಾಡಿ ಹಾಡುತ್ತಾ, ತಂಬೂರಿ ನುಡಿಸುತ್ತಾಳೆ, ದೀಪದ ಬೆಳಕಿನಲ್ಲಿ ಕಂಡರೆ ಸಾಕ್ಷಾತ್ ಮೀರಾ ಬಾಯಿ!  ಮತ್ತೆ ಅಷ್ಟೇ ತನ್ಮಯತೆಯಲ್ಲಿ ಒಬ್ಬನನ್ನು ಹೇಗೆ ಕಿಡ್ನ್ಯಾಪ್ ಮಾಡಿ ಹಣ ಕೀಳಬಹುದು ಎಂದು ಪ್ಲಾನ್ ಹಾಕುತ್ತಾಳೆ. ಎಲ್ಲಾ ಫಾರ್ಮುಲಾಗಳನ್ನೂ ಬಿಟ್ಟು, ಚಿತ್ರದಲ್ಲಿ ಮುಳುಗಿದರಷ್ಟೇ ನೀವು ದಡ ಸೇರಬಹುದು!
ಚಿತ್ರ ನಡೆಯುವುದು ಉತ್ತರ ಪ್ರದೇಶದ ಗೋರಖ್ ಪುರ್ ಎನ್ನುವ ಊರಿನ ಪ್ರದೇಶದಲ್ಲಿ. ಅಲ್ಲಿ ಠಾಕೂರರು, ದಲಿತರು, ಯಾದವರು ಎಲ್ಲರೂ ತಮ್ಮ ತಮ್ಮ ಸೇನೆ ಕಟ್ಟಿಕೊಂಡಿರುತ್ತಾರೆ. ಹದಿ ವಯಸ್ಸಿನ ಮಕ್ಕಳು ಗೋಲಿ ಜೊತೆ ಜೊತೆ ತಮಾಂಚ (ದೇಸಿ ಬಂದೂಕು) ಬಳಸುವುದನ್ನು ಕಲಿತಿರುತ್ತಾರೆ. ಊರಿನಲ್ಲಿ ೧೮ಕ್ಕೂ ಮೇಲ್ಪಟ್ಟ ಹುಡುಗರು ಕಾಣುವುದೇ ಅಪರೂಪ, ಅವರೆಲ್ಲರೂ ಯಾವುದೋ ಒಂದು ಸೇನೆ ಸೇರಿ, ಕಾಡಿಗೆ ಬಿದ್ದಿರುತ್ತಾರೆ. ಊರಲ್ಲಿ ಉಳಿದಿರುವವರಲ್ಲಿ ಹೆಚ್ಚಿನವರು ಹೆಂಗಸರು, ವೃದ್ಧರು ಮತ್ತು ಅಂಗವಿಕಲರು…
ಈ ಊರಿಗೆ ಒಂದು ಕಳ್ಳತನದ ಹಣದ ವಿಷಯಕ್ಕೆ ಗುಂಪಿನ ನಾಯಕನಿಗೆ ಮೋಸ ಮಾಡಿ ಓಡಿ ಬಂದ ಕಾಲೂ ಜಾನ್(ನಾಸಿರುದ್ದೀನ್ ಶಾ) ಮತ್ತು ಬಬ್ಬನ್ (ಅರ್ಷದ್ ವಾರ್ಸಿ) ಬರುತ್ತಾರೆ. ಅಲ್ಲಿಗೆ ನೇಪಾಳದ ಗಡಿ ಸಮೀಪ. ಅಲ್ಲಿಗೆ ಓಡಿ ಹೋಗುವ ಮೊದಲು ಒಂದೆರಡು ದಿನದ ಆಸರೆಗಾಗಿ ಅಲೆಯುತ್ತಾ ಇಲ್ಲಿಗೆ ಬರುತ್ತಾರೆ. ಇಲ್ಲಿ ವರ್ಮಾ ಎನ್ನುವ ವ್ಯಕ್ತಿ ಕಾಲೂ ಜಾನ್ ಗೆ ಯಾವಾಗಲೋ ಪರಿಚಯ, ಸರಿ ಅವರ ಮನೆಗೆ ಹೋಗಿ ಬಾಗಿಲು ತಟ್ಟುತ್ತಾರೆ. ದೊಂದಿಯ ಬೆಳಕಿನಲ್ಲಿ ಬಾಗಿಲು ತೆಗೆಯುತ್ತಾಳೆ ದೊಂದಿಯಂತೆ ಧಗ ಧಗ ಪ್ರಜ್ವಲಿಸುವ ಕೃಷ್ಣಾ (ವಿದ್ಯಾ ಬಾಲನ್). ಸರಿ ಇವರಿಬ್ಬರೂ ಅಲ್ಲಿ ಸೇರಿಕೊಳ್ಳುತ್ತಾರೆ.
ಮುಂಜಾನೆ ಸೂರ್ಯ ಹುಟ್ಟುವ ಮೊದಲೇ ರಾಗ್ ಲಲಿತ್ ನ ಒಂದು ಮಧುರವಾದ ಆಲಾಪ ಕೇಳಿಸಲು ಶುರುವಾಗುತ್ತದೆ. ವೃತ್ತಿಯಲ್ಲಿ ಕಳ್ಳನಾಗಿ, ಪ್ರವೃತ್ತಿಯಲ್ಲಿ ಕವನ ಬರೆಯದ ಕವಿಯಾಗಿರುವ, ಒಂದು ಕಪ್ಪು ಬಿಳುಪಿನ ಹುಡುಗಿ ಫೋಟೋವನ್ನು ಅದು ಮಸುಕಾದರೂ ಪರ್ಸಿನಲ್ಲಿ ಇಟ್ಟುಕೊಂಡು ಆಗಾಗ ದಿಟ್ಟಿಸುವ ನಾಸಿರುದ್ದೀನ್ ಶಾ ಅ ರಾಗದ ಎಳೆಯನ್ನು ಹಿಡಿದು ಹೋಗುತ್ತಾ, ಹೋಗುತ್ತಾ ಕೃಷ್ಣಳ ಹಾಡಿನ ಪ್ರಪಂಚದೊಳಕ್ಕೆ ದಬಕ್ಕನೆ ಬಿದ್ದು ಬಿಡುತ್ತಾನೆ. ಆ ನಂತರದ ದೃಶ್ಯ ನೋಡಬೇಕು, ಮೊದಲನೆಯ ಸಲ ಅವನಿಗೆ ತನ್ನ ಮುಖ ಜೋತು ಬಿದ್ದಿದೆಯಲ್ಲಾ ಅನ್ನಿಸುತ್ತೆ, ಬೆಳ್ಳಿ ಕೂದಲು ಅಣುಕಿಸುತ್ತವೆ, ಅವಳ ಕಾಡಿಗೆ ಡಬ್ಬಿಯಿಂದ ಬಣ್ಣ ತೆಗೆದು ವಯಸ್ಸು ಮುಚ್ಚಲು ಪ್ರಯತ್ನಿಸುತ್ತಾನೆ, ಭುಜವನ್ನು ನೆಟ್ಟಗಾಗಿಸಿ, ಎದೆ ಸೆಟೆಸಿ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುತ್ತಾನೆ.
ಇವನ ಪಾಲಿಗೆ ಪ್ರೇಮ ಎಂದರೆ ಒಂದು ರಾಗ, ಒಂದು ನಾಮಪದ, ಮಧುರವಾದ ನಾಮಪದ.

ಇನ್ನೊಬ್ಬನಿದ್ದಾನೆ ಬಬ್ಬನ್, ಹುಡುಗನ ಮನಸ್ಸು ಮೂರು ಹೊತ್ತು ಹೆಣ್ಣಿನ ಸುತ್ತ ಗಿರಕಿ ಹೊಡೆಯುತ್ತಿರುತ್ತದೆ. ಜೀವ ಉಳಿಸಿಕೊಳ್ಳಲು ಬಂದು, ಯಾರದೋ ಮನೆಯಲ್ಲಿ ಆಶ್ರಯ ಪಡೆದು ತಲೆ ಮರಿಸಿಕೊಂಡಿರುತ್ತಾರೆ. ಹಳ್ಳಿಯ ಹುಡುಗ ಬಂದರೆ, ಅವನ ದೋಸ್ತಿ ಬೆಳಸಿಕೊಂಡ ಇವ ಕೇಳುವ ಪ್ರಶ್ನೆ, ’ಇಲ್ಲಿ ರೆಡ್ ಲೈಟ್ ಏರಿಯಾ ಎಲ್ಲಿದೆ’ ಅಂತ! ಇವನ ಮಟ್ಟಿಗೆ ಪ್ರೇಮ ಯಾಕೆ, ಇಡೀ ಜೀವನವೇ ಪ್ರೇಮದ ’ಕ್ರಿಯಾ’ ಪದ!
ಹೀಗೆ ಒಬ್ಬ ಭಾವದ ಮೂಲಕ ಮತ್ತೊಬ್ಬ ದೇಹದ ಮೂಲಕ ತಮ್ಮನ್ನು ಹುಡುಕಿಕೊಳ್ಳುತ್ತಿರುತ್ತಾರೆ.
ಆದರೆ ಆ ಹೆಣ್ಣು ಕೃಷ್ಣಾಳಿಗೆ ಅವಳದೇ ಒಂದು ಕಥೆ ಇದೆ, ಉರಿಯುತ್ತಿರುವ ಸಿಟ್ಟು, ಬಾಕಿ ತೀರಿಸಬೇಕಾದ ಒಂದು ಸೇಡು ಇದೆ. ಅದಕ್ಕೆ ಇವರಿಬ್ಬರನ್ನೂ ದಾಳಗಳನ್ನಾಗಿ ಬಳಸಿಕೊಳ್ಳುತ್ತಾಳೆ. ಆ ಕಾರ್ಯದಲ್ಲಿ ತನ್ನ ಪೂರ್ತಿ ಹೆಣ್ತನವನ್ನು ಪಣವಾಗಿಡುತ್ತಾಳೆ.  ಕಾಲೂನ ಪಾಲಿಗೆ ಮಂದ್ರ ದನಿಯ ಸಂಗೀತದಂತೆ, ಬಬ್ಬನ್ ಪಾಲಿಗೆ ಕತ್ತಿ ತಾಗಿ ಕತ್ತರಿಸಿ ಚಿಮ್ಮಿದ ಬೆರಳನ್ನು ತುಟಿಗಳಿಂದ ಒತ್ತಿ ಸಮಾಧಾನ ಮಾಡುವ ಬಿಸುಪಿನ ಅನುಭೂತಿಯಂತೆ…
ಮಾಗಿದ ವಯಸ್ಸಿನಲ್ಲಿ ಪ್ರೀತಿ ಬಂದರೆ ಆಗುವ ಆಸೆ, ತನ್ನದಾದೀತೆ ಎನ್ನುವ ಹಿಂಜರಿಕೆ, ತನ್ನ ಹೃದಯದಲ್ಲಿ ನದಿ ಇನ್ನೂ ಓಡುತ್ತಿದೆ ಎನ್ನುವ ಅಚ್ಚರಿ, ಈ ವಯಸ್ಸಲ್ಲಿ ಇವೆಲ್ಲಾ ಬೇಕಾ, ನಗೆಪಾಟಲಿಗೀಡಾಗುವೆನೋ ಎನ್ನುವ ಆತಂಕ …. ’ದಿಲ್ ತೋ ಬಚ್ಚಾ ಹೈ ಜೀ…..’, ಗುಲ್ಜಾರ್ ಹಾಡಿನ ಒಂದೊಂದು ಅಕ್ಷರಕ್ಕೂ ಅಭಿನಯಿಸಿದ್ದಾರೆ ನಾಸಿರುದ್ದೀನ್. ಕೊನೆಗೂ ಮನಸ್ಸಿನ ತುಂಟ ಮಗುವಿನ ಹಟ ಗೆಲ್ಲುತ್ತದೆ. ಇವಳನ್ನು ಮದುವೆಯಾಗಿ ಹಳ್ಳಿಗೆ ಹೋಗಿ ಬಿಡಬೇಕು ಎಂದುಕೊಳ್ಳುತ್ತಾನೆ.
ಆದರೆ ಅಷ್ಟರಲ್ಲಿ ಪ್ರೇಮದ ನವಿರು ಭಾವಗಳನ್ನು ಅರಿಯದ ಬಬ್ಬನ್ ಅವಳನ್ನು ನೇರವಾಗಿ ತನ್ನ ತೋಳುಗಳಿಗೆ ಎಳೆದುಕೊಂಡುಬಿಡುತ್ತಾನೆ.  ಬಬ್ಬನ್ ಮತ್ತು ಕೃಷ್ಣಾ ಒಂದಾಗಿದ್ದಾರೆ ಮತ್ತು ತಾನು ಎಲ್ಲೋ ಬಳಕೆಯಾಗಲ್ಪಟ್ಟಿದ್ದೇನೆ ಎಂದು ತಿಳಿದಾಗ ಕಾಲೂ ಜಾನ್ ಜ್ವಾಲಾಮುಖಿಯಂತೆ ಕುಳಿತುಬಿಡುತ್ತಾನೆ. ಈ ವಯಸ್ಸಿನಲ್ಲಿ ಪ್ರೀತಿ ನಂಬಿ ಸೋತ ಭಾವ, ಅದಕ್ಕೆ ತನ್ನ ಜಾರಿದ ವಯಸ್ಸು ಕಾರಣವಿರಬಹುದೇ, ಹುಡುಗ ಬಬ್ಬನ್ ಯೌವನದೆದಿರು ತಾನು ಸೋತೆನೇ ಎನ್ನುವ ಒಳಕುದಿ … ಆ ವಯಸ್ಸಿನಲ್ಲಿ ಪ್ರೇಮ ಕಳೆದುಕೊಳ್ಳುವುದು ಬೇರೆ, ಚಿಕ್ಕ ವಯಸ್ಸಿಗೆ ಸೋಲುವುದು ಬೇರೆ .. ಮೊದಲನೆಯದು ನೋವು, ಎರಡನೆಯದು ಆತ್ಮಕ್ಕಂಟುವ ಅವಮಾನ, ಕೀಳರಿಮೆ, ಆ ಮೂಲಕ ಬರುವ ಸಿಟ್ಟು..
ನಂತರ ಇಬ್ಬರಿಗೂ ಆಕೆ ತಮ್ಮಿಬ್ಬರನ್ನೂ ಮೋಸಗೊಳಿಸಿದಳು ಎಂದು ಗೊತ್ತಾಗುತ್ತದೆ. ಅವಳನ್ನು ಕುರ್ಚಿಗೆ ಕಟ್ಟಿ, ಮನೆಯಲ್ಲಿನ ಹಣ ಗಂಟುಕಟ್ಟಿಕೊಂಡು ಹೋಗುವಾಗ ನಾಸಿರುದ್ದೀನ್ ಅರ್ಷದ್ ಗೆ ಅವಳನ್ನು ಗುಂಡು ಹಾರಿಸಿ ಕೊಲ್ಲಲು ಹೇಳುತ್ತಾನೆ. ಬಂದೂಕು ಹಿಡಿದ ಬಬ್ಬನ್ ಕೈಯಿ ನಡುಗುತ್ತಿರುತ್ತದೆ. ಹೆಣ್ಣೆಂದರೆ ದೇಹ, ಪ್ರೇಮವೆಂದರೆ ಒಂದು ಕ್ರಿಯೆ ಎಂದು ನಂಬಿದ್ದ ಹುಡುಗ ಅವಳ ಕಣ್ಣುಗಳನ್ನು ನೋಡಿ ಕಣ್ಣೀರಿಡಲು ಶುರು ಮಾಡುತ್ತಾನೆ….’ ನೀನು ಮಲಗಿದ ಮೇಲೆ ಇಡೀ ರಾತ್ರಿ ನಿನ್ನ ಮುಖ ನೋಡುತ್ತಾ ಕಳೆದೆ…’ಎಂದು ತೊದಲುತ್ತಾನೆ. ಅದಕ್ಕಿಂತ ಹೆಚ್ಚಿನ ಪ್ರೀತಿ ಮಾತಾಡಿ ಗೊತ್ತೇ ಇಲ್ಲ ಅವನಿಗೆ. ಎಷ್ಟೇ ಪ್ರಯತ್ನಿಸಿದರೂ ಬಂದೂಕನ್ನು ಹಿಡಿದ ಕೈನ ನಡುಕವನ್ನೂ ನಿಲ್ಲಿಸಲಾಗುವುದಿಲ್ಲ ಅವನಿಗೆ. ಸೋಲೊಪ್ಪಿಕೊಂಡು ಬಂದೂಕನ್ನು ನಾಸಿರುದ್ದೀನ್ ಶಾ ಕೈಗೆ ಕೊಡುತ್ತಾನೆ. ನೀನೆ ಕೊಲ್ಲು ಅನ್ನುತ್ತಾನೆ. ನಾಸಿರುದ್ದೀನ್ ಹಿಂಜರೆದಾಗ, ಯಾಕೆ, ನಿನ್ನಿಂದ ಯಾಕೆ ಕೊಲ್ಲೋಕ್ಕಾಗ್ತಿಲ್ಲ ಅಂತ ಕೇಳ್ತಾನೆ. ’ನಾನು ಈ ಹರಾಮಿಯನ್ನು ಪ್ರೀತಿ ಮಾಡ್ತಿದ್ದೀನಿ ಕಣೋ’ ಕವಿ ಹೃದಯದ ನಾಸಿರ್ ಚೀರುತ್ತಾನೆ. ’ಅಂದರೆ ನಿನ್ನ ಪ್ರೇಮ ಪ್ರೇಮ, ನಮ್ಮದು ಲಾಲಸೆ?’, ’ಏ ಠೀಕ್ ಹೈ ಕಾಲೂ, ತುಮ್ಹಾರೆ ಇಷ್ಕ್ ಇಷ್ಕ್ ಹೈ, ಔರ್ ಹಮಾರಾ ಇಷ್ಕ್ ಸೆಕ್ಸ್’? ಎಂದು ಕೇಳುತ್ತಾನಲ್ಲಾ ಆಗ ಅರಿವಾಗುತ್ತದೆ ಈ ಹುಡುಗನ ಪಾಲಿಗೆ ಪ್ರೇಮ ಈಗ ನಾಮಪದವಾಗಿ ಅಥವಾ ಆ ’ಕ್ರಿಯೆಯ’ ರೂಪವಾಗಿ ಉಳಿದಿಲ್ಲ ಅಂತ. ಆ ಒಂದು ಘಳಿಗೆಯಲ್ಲಿ ಇಡೀ ಚಿತ್ರವಿದೆ, ಮಿಕ್ಕದ್ದು ಬರೀ ಮುನ್ನುಡಿ ಮತ್ತು ಬೆನ್ನುಡಿ.
ಅವಳನ್ನು ಕೊಲ್ಲಲಾಗದೆ ಕಟ್ಟಿಬಂದವರು ಮತ್ತೆ ಅವಳಿಗಾಗಿ ಸಾವಿನ ಮನೆಗೆ ಬರುತ್ತಾರೆ, ಏನೇನೋ ಪಾಡು ಬಿದ್ದು ಅವಳನ್ನು ರಕ್ಷಿಸುತ್ತಾರೆ. ಇದು ಮುಗಿಯುವಾಗ ಪ್ರೇಮ ಅವರಿಬ್ಬರ ಪಾಲಿಗೂ ನಾಮಪದವಾಗಿ ಉಳಿದಿರುವುದಿಲ್ಲ, ಅದು ಪ್ರತಿ ಕ್ಷಣ ನಡೆಯಬೇಕಾದ, ಕಾಪಿಟ್ಟುಕೊಳ್ಳಬೇಕಾದ, ಎಣ್ಣೆ ಹಾಕುತ್ತಾ ನಂದದಂತೆ ನೋಡಿಕೊಳ್ಳಬೇಕಾದ ದೀಪದಂತಹ ಕ್ರಿಯಾಪದ ಎನ್ನುವುದರ ಅರಿವು ಆಗಿರುತ್ತದೆ.

ಕ್ರಿಯೆಯ ಕಾಯ ಪಡೆಯದ ಪ್ರೇಮ ಒಂದು ಪರಿಮಳದ ಅಲೆಯಂತೆ. ಇಲ್ಲಿ ಕ್ರಿಯೆ ಎಂದರೆ ಅದನ್ನು ಒಂದು ಬದ್ಧತೆಯನ್ನಾಗಿ ಒಪ್ಪಿಕೊಳ್ಳುವ, ನಿಭಾಯಿಸುವ ಮನೋಭಾವ. ಪ್ರೇಮದ ರೊಮ್ಯಾಂಟಿಕ್ ಭಾವ ನಾಮಪದವಾದರೆ, ಅನುದಿನದ ನಮ್ಮ ನಡವಳಿಕೆ ಕ್ರಿಯಾಪದ.  ನಾಮಪದವಾಗಿ ಪ್ರೇಮ ಆ ಕ್ಷಣಕ್ಕೆ ಗಾಢವಾಗಿ ಕಾಡಿ, ಸಮಯ ಕಳೆದಂತೆ ತೆಳುವಾಗಿ, ಗಾಳಿಯಲ್ಲಿ ಇಲ್ಲವಾಗಿ, ಕೇವಲ ನೆನಪಾಗಿ ಉಳಿಯಬಹುದು. ನಮಗೆ ಬೇಕಿರುವುದು ಆ ಕ್ಷಣದ ತೀವ್ರ ಅನುಭೂತಿಯೋ, ರೋಮಾಂಚವೋ ಅಥವಾ ತೆಕ್ಕೆಗೆ ತೋಳಾಗುವ, ಕಣ್ಣೀರಿಗೆ ಹೆಗಲಾಗುವ, ದುಗುಡಕ್ಕೆ ಮಡಿಲಾಗುವ ಸಾತತ್ಯವೋ ಎನ್ನುವುದರ ಮೇಲೆ ನಮಗೆ ಬೇಕಿರುವುದು ಪ್ರೇಮ ಎನ್ನುವ ನಾಮಪದವೋ, ಕ್ರಿಯಾಪದವೋ ಎನ್ನುವುದರ ನಿರ್ಧಾರ.
ಹದಿ ಹರಯದ ಮೊದಲ ದಿನಗಳ ಅನುಭೂತಿ ಸಾಕು, ಸ್ಪರ್ಶದ ಹಂಗು ಬೇಡ ಎನ್ನುವ ಪ್ರೇಮ ಎನ್ನುವ ಭಾವಕ್ಕೂ ಸಹ ನಂತರ ಒಂದು ದೇಹ ಸಿಗುತ್ತದೆ, ಪ್ರೇಮಕ್ಕೆ ಒಂದು ಆಕಾರ ಸಿಗುತ್ತದೆ. ಹಾಗೆ ದೇಹದ ಹಂಗು ಪಡೆದ ಮೇಲೆ ಒಂದು ಬದ್ಧತೆ ಬೇಕಾಗುತ್ತದೆ.   ನಾಮ ಪದವಾಗಿ ಪ್ರವೇಶಿಸುವ ಪ್ರೇಮ ಸದಾ ಸ್ಪಂದಿಸುವ ಕ್ರಿಯಾಪದವಾದಾಗ ಅಲ್ಲೊಂದು ಪೂರ್ಣತೆ.
ಅದೊಂದು ಪ್ರತಿ ಕ್ಷಣದ ಕ್ರಿಯೆ, ತುಳಸಿ ಸಸಿಗೆ ಪ್ರತಿ ದಿನ ನೀರೆರೆದ ಹಾಗೆ, ಹೊತ್ತು ಹೊತ್ತಿಗೆ ಕಂದನ ಹೊಟ್ಟೆ, ನೆತ್ತಿ ತಂಪಾಗಿಡುವ ಹಾಗೆ, ಎಣಿಕೆ ತಪ್ಪದೆ, ಸಾಲು ತಪ್ಪಿಸದೆ ಚುಕ್ಕೆ ಇಟ್ಟು ಅಪಾರ ಏಕಾಗ್ರತೆಯಲ್ಲಿ ಚುಕ್ಕಿಗಳನ್ನು ಸೇರಿಸಿ, ಎಳೆಗಳನ್ನು ಕಟ್ಟಿಟ್ಟ ಹಾಗೆ….
ಹಾಗೆ ನಿಭಾಯಿಸಿದರೆ, ರೋಮಾಂಚವನ್ನಷ್ಟೇ ಅಲ್ಲ ಒಂದು ನಿರಾಕರಣೆಯನ್ನು ಅರ್ಥ ಮಾಡಿಕೊಂಡೂ ಆ ಪ್ರೀತಿಯನ್ನು ಉಳಿಸಿಕೊಳ್ಳುವುದಾದರೆ, ಕ್ಷಮಿಸುವುದು ಸಾಧ್ಯವಾದರೆ ಆಗ ಪ್ರೇಮ ಒಂದು ನಿರಂತರ ಕ್ರಿಯೆಯ ಜೀವನವಾಗುತ್ತದೆ. ಪ್ರೇಮವನ್ನು ಉಳಿಸಿಕೊಳ್ಳುವ ಕ್ರಿಯೆಯಲ್ಲಿ ಪ್ರೇಮ ಗೆಲ್ಲುತ್ತದೆ.
ಹೌದು ಪ್ರೇಮ ಎಂದರೆ ಅದು ವ್ಯಕ್ತಿ, ವಸ್ತು, ಊರು, ಪ್ರಾಣಿಯ ಹೆಸರಲ್ಲ,
Love is a verb.

‍ಲೇಖಕರು avadhi

November 28, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

26 ಪ್ರತಿಕ್ರಿಯೆಗಳು

  1. bharathi b v

    Kelavu saalugalu kaadi saayisuttave….aadre as hudugana paalige adeega naamapadavaagi ulidirlilla anthideyalla ..aathanigadu endadroo naamapadavagitta? Bere reethiya ‘kriya’ padavagittu ashte allavaa …

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಆ ಹುಡುಗನ ಪಾಲಿಗೆ ಪ್ರೇಮ ಎನ್ನುವುದು ಕೇವಲ ಒಂದು ಹೆಸರಾಗಿತ್ತು, ಒಂದು ಪದವಾಗಿತ್ತು ಅಷ್ಟೇ ಎನ್ನುವುದು ಇಲ್ಲಿ ನನ್ನ ಉದ್ದೇಶ. ಅದನ್ನು ಆತ ವ್ಯಕ್ತಪಡಿಸುತ್ತಿದ್ದದ್ದು ಒಂದು ಕ್ರಿಯೆಯಲ್ಲಿ ಮಾತ್ರ. ಆದರೆ ಪ್ರೇಮ ಅಂದ್ರೆ ಅದಷ್ಟೇ ಅಲ್ಲ ಅನ್ನುವುದು ಅವನಿಗೆ ಅರ್ಥವಾಗುತ್ತದೆ… ದೈಹಿಕ ಆಯಾಮಕ್ಕೂ ಮೀರಿದ ಕ್ರಿಯೆ ಇರುತ್ತದೆ ಅನ್ನುವುದು ಗೊತ್ತಾಗುತ್ತದೆ.

      ಪ್ರತಿಕ್ರಿಯೆ
  2. Vidyashankar H

    I have watched this movie and liked it immensely. I will watch it again for more insights.

    ಪ್ರತಿಕ್ರಿಯೆ
  3. Girish

    ನಾನೂ ಜೋಗಿಯವರ ಸಾಲು ಓದಿದ್ದೆ. ಈಗ ಸಿನಿಮಾ ನೋಡೋಣ ಅನಿಸ್ತಿದೆ. ಅದ್ಭುತವಾಗಿ ನಿರೂಪಿಸಿದ್ದಿರಿ.

    ಪ್ರತಿಕ್ರಿಯೆ
  4. Kiran

    ಹದಿ ಹರಯದ ಮೊದಲ ದಿನಗಳ ಅನುಭೂತಿ ಸಾಕು, ಸ್ಪರ್ಶದ ಹಂಗು ಬೇಡ ಎನ್ನುವ ಪ್ರೇಮ ಎನ್ನುವ ಭಾವಕ್ಕೂ ಸಹ ನಂತರ ಒಂದು ದೇಹ ಸಿಗುತ್ತದೆ, ಪ್ರೇಮಕ್ಕೆ ಒಂದು ಆಕಾರ ಸಿಗುತ್ತದೆ. ಹಾಗೆ ದೇಹದ ಹಂಗು ಪಡೆದ ಮೇಲೆ ಒಂದು ಬದ್ಧತೆ ಬೇಕಾಗುತ್ತದೆ. ನಾಮ ಪದವಾಗಿ ಪ್ರವೇಶಿಸುವ ಪ್ರೇಮ ಸದಾ ಸ್ಪಂದಿಸುವ ಕ್ರಿಯಾಪದವಾದಾಗ ಅಲ್ಲೊಂದು ಪೂರ್ಣತೆ. Extrapolating this, when Love becomes a verb prematurely, it may become a liability and likely to be renamed as Infatuation. Not only noun to verb transition takes time, getting into the phase of Noun also takes time. Nice read. Thank you.

    ಪ್ರತಿಕ್ರಿಯೆ
  5. K.S Parameshwar

    … ಪ್ರೇಮ, ಕಾಮ – ನಾಮಪದ ಕ್ರಿಯಾಪದ ಅದ್ಭುತ ಕಲ್ಪನೆ. ಚಂದನೆಯ ಬರಹ

    ಪ್ರತಿಕ್ರಿಯೆ
  6. Renuka Nidagundi

    ಪ್ರೇಮವೇ ಆಗಾಧವಾದುದು. ಪ್ರೇಮ ದೇಹ-ಭಾವ,ಮನಸು, ಎಲಲ್ ವಿಕಲ್ಪಗಳನ್ನೂ ಮೀರಿದ ಹಿತವಾದ ಭಾವ. ತುಂಬಾ ಚೆನ್ನಾಗಿ ತಎರೆದಿಟ್ಟಿದ್ದಿ ಸಂಧ್ಯಾ. Love is verb….ಇನ್ನೂ ಅದೇ ಗುಂಗಲ್ಲಿದೀನಿ..

    ಪ್ರತಿಕ್ರಿಯೆ
  7. amardeep.p.s.

    ನಾನು ಸಿನೆಮಾ ನೋಡಿಲ್ಲ… ಆದರೆ ಚಿತ್ರ ಚೆನ್ನಾಗಿರುವ ಬಗ್ಗೆ ಗೆಳೆಯರು ಹೇಳಿದ್ದರು .ನೋಡಬೇಕೆನಿಸಿದೆ, ನೋಡುತ್ತೇನೆ . .. ಲೇಖನ ಚೆನ್ನಾಗಿದೆ ಮೇಡಂ …. ಅಭಿನಂದನೆಗಳು … Love is verb….beautiful …. like it….

    ಪ್ರತಿಕ್ರಿಯೆ
  8. ಹರೀಶ್‌ಬಸವರಾಜ್‌, ಹುಳಿಯಾರು

    ಮೇಡಂ ನಿಮ್ಮ ಲೇಖನ ಅದ್ಭುತವಾಗಿದೆ……….ನೀವು ಕಟ್ಟಿಕೊಟ್ಟಿರುವ ಪದ ಪುಂಜಗಳಂತು ಓದುಗರನ್ನು ಸೆಳೆಯುತ್ತವೆ ಹ್ಯಾಟ್ಸ್‌ ಆಫ್‌ ಯೂ ಮೇಡಂ…………….

    ಪ್ರತಿಕ್ರಿಯೆ
  9. Sharanappa Bachalapur

    ಮೆಡಮ್ ನಿಮ್ಮ ಲೇಖನ ಅದ್ಭುತವಾಗಿದೆ..

    ಪ್ರತಿಕ್ರಿಯೆ
  10. Anil Talikoti

    love well to live well and live well to leave well. ಮೋಹಕ ಬರಹ -ತುಂಬಾ ಇಷ್ಟವಾಯಿತು
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  11. ಮಂಜಿನ ಹನಿ

    ’ಲವ್ ಈಸ್ ಅ ವರ್ಬ್…’ ಲೇಖನವನ್ನು ಕಟ್ಟಿ, ಓದುಗನೆದೆಗೆ ಸಮರ್ಪಿಸುವ ನಿಮ್ಮ ಸೃಜನಶೀಲತೆ ಹಿಡಿಸುತ್ತದೆ. ನಿಮ್ಮ ವಿವರಣೆಗೆ ’ಇಷ್ಕಿಯಾ’ ಸಿನೇಮಾವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೀರಿ. ಚೆನ್ನಾಗಿದೆ 🙂
    – ಪ್ರಸಾದ್.ಡಿ.ವಿ.

    ಪ್ರತಿಕ್ರಿಯೆ
  12. ಮಂಜುನಾಥ ದಾಸನಪುರ

    ತುಂಬಾ ಚೆನ್ನಾಗಿದೆ…ಮತ್ತೆ, ಮತ್ತೆ ಓದಬೇಕೆಂನಿಸುತ್ತದೆ.

    ಪ್ರತಿಕ್ರಿಯೆ
  13. ಶಮ, ನಂದಿಬೆಟ್ಟ

    ಚೆಂದಗೆ ಬರೆದೂ ಬರೆದೂ ಸಾಯಿಸ್ಬಹುದು ಅಂತ ಗೊತ್ತಾಗೋದೇ ಹಿಂಗಿದ್ದನ್ನೆಲ್ಲ ಓದುವಾಗ 🙂

    ಪ್ರತಿಕ್ರಿಯೆ
  14. vageesha JM

    ಕ್ರಿಯೆಯ ಕಾಯ ಪಡೆಯದ ಪ್ರೇಮ ಒಂದು ಪರಿಮಳದ ಅಲೆಯಂತೆ. ಇಲ್ಲಿ ಕ್ರಿಯೆ ಎಂದರೆ ಅದನ್ನು ಒಂದು ಬದ್ಧತೆಯನ್ನಾಗಿ ಒಪ್ಪಿಕೊಳ್ಳುವ, ನಿಭಾಯಿಸುವ ಮನೋಭಾವ. ಪ್ರೇಮದ ರೊಮ್ಯಾಂಟಿಕ್ ಭಾವ ನಾಮಪದವಾದರೆ, ಅನುದಿನದ ನಮ್ಮ ನಡವಳಿಕೆ ಕ್ರಿಯಾಪದ. ನಾಮಪದವಾಗಿ ಪ್ರೇಮ ಆ ಕ್ಷಣಕ್ಕೆ ಗಾಢವಾಗಿ ಕಾಡಿ, ಸಮಯ ಕಳೆದಂತೆ ತೆಳುವಾಗಿ, ಗಾಳಿಯಲ್ಲಿ ಇಲ್ಲವಾಗಿ, ಕೇವಲ ನೆನಪಾಗಿ ಉಳಿಯಬಹುದು. ನಮಗೆ ಬೇಕಿರುವುದು ಆ ಕ್ಷಣದ ತೀವ್ರ ಅನುಭೂತಿಯೋ, ರೋಮಾಂಚವೋ ಅಥವಾ ತೆಕ್ಕೆಗೆ ತೋಳಾಗುವ, ಕಣ್ಣೀರಿಗೆ ಹೆಗಲಾಗುವ, ದುಗುಡಕ್ಕೆ ಮಡಿಲಾಗುವ ಸಾತತ್ಯವೋ ಎನ್ನುವುದರ ಮೇಲೆ ನಮಗೆ ಬೇಕಿರುವುದು ಪ್ರೇಮ ಎನ್ನುವ ನಾಮಪದವೋ, ಕ್ರಿಯಾಪದವೋ ಎನ್ನುವುದರ ನಿರ್ಧಾರ.
    ಇಷ್ಟವಾದ ಸಾಲುಗಳು.. ಇನ್ನು ಓಂದ್ ಸಲ್ ಓದಿ ಆರ್ಥಮಾಡಿಕೊಳ್ಳಬೇಕು..
    ಅರ್ಥಪೂರ್ಣ.. ಅಂಕಣ ಸಂದ್ಯಾಕ್ಕ..

    ಪ್ರತಿಕ್ರಿಯೆ
  15. Anonymous

    ಉತ್ತಮ ಬರಹ ಪ್ರಿತಿ,ಪ್ರೆಮದ ಬಗೆಗೆ ಪಪದಗಳ ಬಳಕೆ ಅದಅದಮ್ಯವಾಗಿದೆ.

    ಪ್ರತಿಕ್ರಿಯೆ
  16. Durgesh naik.

    ಉತ್ತಮ ಬರಹ ಪ್ರೀತಿ,ಪ್ರೇಮದ ಬಗೆಗೆಗಿನ ಪದಗಳು ಅದ್ಭುತವಾಗಿವೆ.

    ಪ್ರತಿಕ್ರಿಯೆ
  17. ಡಾ.ಶಿವಾನಂದ ಕುಬಸದ

    ಎಂಥ ಚೆಂದದ , ನವಿರಾದ ನಿರೂಪಣೆ..
    ಇನ್ನು ಆ ಸಿನಿಮಾ ನೋಡದೆ ವಿಧಿಯಿಲ್ಲ..!!
    Hats off..

    ಪ್ರತಿಕ್ರಿಯೆ
  18. lakshmishankarjoshi.

    ಸಿನಿಮಾ ನೋಡಲೆಬೇಕಾಯ್ತು!ಅದಿರಲಿ ಎಷ್ಡು ಚಂದಗೆ ಹೇಳಿದ್ದಿರಿ ಪ್ರೀತಿ ಬಗ್ಗೆ!ಮೆಲುಕಾಡಿಸುತ್ತಿದ್ದೇನೆ.love is verb.s.verb..ಹೌದು…

    ಪ್ರತಿಕ್ರಿಯೆ
  19. niveditha

    abbha… sandhya madam… maathinalli hora haakalu asaadhyavenisida nanna bhaavanegalige maathaagiddeeri…

    ಪ್ರತಿಕ್ರಿಯೆ
  20. vishwanath Hebballi

    anubhoothi,romanchana,thekkege tholaguva,kanneerige hegalaguva, dugudakke madilaguva saadhyathe aa saakaratva ee naamapada/kriyapadagalu aaya paristhithiganugunavagi kaama prema anubhavisi/acharisi belgina navirannu haagu sanjeya bisupannu nirantharavagi ulisikondu naamapada, kriyapadagala hangannu kalachittu “iduve prema” endu saaruttave..
    cenema nodilla aadre intha cenemagala bagge nanage yaavagloo ondu thuditha irutte.
    cenemavannu arthaisi thirulannu unabadisida shiliyinda khanditha ee cenema nodugara sankhe innoo hechirabahudu. Really I too want to see the movie.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: