ಸಂಧ್ಯಾರಾಣಿ ಕಾಲಂ : ಶೇಕ್ಸ್‌ಪಿಯರ್ ಜೊತೆಯಲ್ಲಿ ಕಳೆದ ಒಂದು ಸಂಜೆ


’ಇರುಳು ನೆತ್ತಿಗೆ ಬಂದಿದೆ, ಪಯಣ ಬಾಕಿ ಇದೆ
ತುಸು ಮುಂಜಾನೆಯೇ ಹೊರಡಬೇಕಿತ್ತು ನಾವು…’
ಜಾವೇದ್ ಅಖ್ತರ್ ಬರೆದ ಈ ಸಾಲುಗಳು ಇತ್ತೀಚೆಗೆ ಹೆಚ್ಚೆಚ್ಚು ನೆನಪಾಗುತ್ತಿವೆ. ತಡವಾಗಿ ಪ್ರೀತಿಸಲು ಕಲಿತ ಹಿಂದೂಸ್ತಾನಿ ಸಂಗೀತ, ಮೂರ್ನಾಲ್ಕು ವರ್ಷಗಳ ಹಿಂದೆಯಷ್ಟೇ ನನ್ನ ಅಂಗಳ ತುಳಿದ ರಂಗಗೀತೆಗಳು, ಪರಿಚಿತರಾಗಿ, ಪರಿಚಿತರಾಗಿಯಷ್ಟೇ ಉಳಿಯುವ ವಯಸ್ಸಿನಲ್ಲಿ ಬಾಲ್ಯದ ಸಂಗಾತಿಯಂತೆ ನನ್ನದಾದ ಸ್ನೇಹ ಹೀಗೆ ತಡವಾಗಿ ಸಿಕ್ಕವುಗಳನ್ನು ಸ್ಪರ್ಶಿಸುವಾಗೆಲ್ಲಾ ಅನ್ನಿಸಿದ್ದಿದೆ, ’ತುಸು ಮುಂಜಾವಿಗೇ ಹೊರಡಬೇಕಿತ್ತು ನಾವು’ ಅಂತ.
ಕೆಲವು ನಡುವಯಸ್ಸಿನ ಪರಿಚಯಗಳು ಹಾಗೆಯೇ, ಎರಡು ಜೀವನಗಳು ತಮ್ಮ ತಮ್ಮ ಹಾದಿಯಲ್ಲಿ ಎಷ್ಟೋ ದೂರ ಕ್ರಮಿಸಿ ಆಗಿರುತ್ತವೆ, ಅಲ್ಲಿ ಎರಡು ಹಾದಿಗಳು ನಿರ್ಮಾಣ ಆಗಿರುತ್ತವೆ, ಕಣ್ಣ ಮುಂದಿನ ಹಾದಿಗಿಂತ, ಬೆನ್ನ ಹಿಂದಿನ ಹಾದಿ ದೊಡ್ಡದಿರುತ್ತದೆ, ಹೌದು ಆಗೆಲ್ಲಾ ತಪ್ಪದೆ ಅನ್ನಿಸುತ್ತದೆ, ’ತುಸು ಮುಂಜಾವಿಗೇ ಹೊರಡಬೇಕಿತ್ತು ನಾವು’ ಅಂತ. ಆಗೆಲ್ಲಾ ಅದೇ ಜಾವೇದ್ ಅಖ್ತರ್ ಬರೆದ ಇನ್ನೊಂದು ಹಾಡು ನೆನಪಾಗುತ್ತದೆ,’ಕಂದುಗಣ್ಣುಗಳ ಆ ಹುಡುಗಿಯದು ಒಂದೇ ತಕರಾರು, ’ಛೆ, ಇನ್ನೂ ಮೊದಲೇ ಸಿಗಲಿಲ್ಲ ಯಾಕೆ ನೀನು?’. ನಾನೂ ಥೇಟ್ ಆ ಕಂದುಗಣ್ಣುಗಳ ಹುಡುಗಿಯಂತೆಯೇ ಜಗಳ ಆಡಬೇಕು ಅನ್ನಿಸುತ್ತದೆ! ಹಾಗೆ ನಡುವಯಸ್ಸಿನಲ್ಲಿ ನನಗೆ ಹತ್ತಿರವಾಗಿ, ಛೇ ಇನ್ನೂ ಮೊದಲೇ ಇವರು ಯಾಕೆ ನನಗೆ ಸಿಗಲಿಲ್ಲ ಅನ್ನಿಸಿದವರು ಶೇಕ್ಸ್ ಪಿಯರ್ ಮತ್ತು ಖಲೀಲ್ ಗಿಬ್ರಾನ್.
ಗಣಿತ ಸರಿಯಾಗಿ ಕಲಿಯುವ ಮೊದಲೇ ಕಾದಂಬರಿ ಓದುವುದ ಕಲಿತವಳು ನಾನು, ಗಣಿತ ನನಗೆ ಒಲಿದದ್ದಕ್ಕಿಂತ ಹೆಚ್ಚಾಗಿ, ಭಾಷೆ ನನ್ನನ್ನು ಪೊರೆದಿದೆ! ಕನ್ನಡ ಪುಸ್ತಕಗಳನ್ನೇ ಓದಿದವಳು. ಕಾಲೇಜಿಗೆ ಬಂದ ನಂತರವೂ ಓದಿದ್ದು ಕನ್ನಡ ಪುಸ್ತಕಗಳನ್ನೇ. ಅಮೇಲಾಮೇಲೆ ಇಂಗ್ಲಿಷ್ ಭಾಷೆಯನ್ನು ಮಣಿಸುವ ಹಠದಿಂದ ಓದಲು ಪ್ರಾರಂಭಿಸಿದ್ದು ಸುಲಭಕ್ಕೆ ಅರ್ಥವಾಗುವ, ಯಾವುದೇ ನಿರ್ದೇಶನ, ಸೂಚನೆಯ ನೆರವಿಲ್ಲದೆಯೂ ನನ್ನದಾಗಬಹುದಿದ್ದ ಕಾದಂಬರಿಗಳನ್ನು. ಆಮೇಲೆ ತುಸು ಗಂಭೀರ ಇಂಗ್ಲಿಷ್ ಪುಸ್ತಕಗಳನ್ನು ಓದಲು ಪ್ರಾರಂಭಿಸಿದರೂ ಯಾಕೋ ಶೇಕ್ಸ್ ಪಿಯರ್ ಮತ್ತು ಖಲೀಲ್ ಗಿಬ್ರಾನ್ ನನಗೆ ಅಪರಿಚಿತರಾಗಿಯೇ ಉಳಿದುಬಿಟ್ಟರು.
ಕಾಲೇಜಿನಲ್ಲಿದ್ದಾಗ ಶೇಕ್ಸ್ ಪಿಯರ್ ನಾಟಕಗಳಲ್ಲಿನ ಭಾಷೆಯ ಬಳಕೆಯನ್ನು, ಬೆರಗಾಗಿಸುವ ನಾಟಕೀಯತೆಯನ್ನು ಉಷಾ ಮೇಡಂ ಪಾಠ ಮಾಡುತ್ತಿದ್ದಾಗ ಅಲ್ಲೇ ಡಯಾಸಿನ ಮೇಲೆ ನಗುತ್ತಿದ್ದ ಶೇಕ್ಸ್ ಪಿಯರ್ ಆಮೇಲಾಮೇಲೆ ಒಬ್ಬಳೇ ಎದುರಾದಾಗ ಹೆದರಿಸಿಬಿಡುತ್ತಿದ್ದ. ಕನ್ನಡ ಮಾಧ್ಯಮದಿಂದ ಬಂದ ನನಗೆ ಆಗ ಶೇಕ್ಸ್ ಪಿಯರ್ ನೊಂದಿಗೆ ಸ್ನೇಹ ಸುಲಭವಾಗಿರಲಿಲ್ಲ. ಆಗೆಲ್ಲಾ ದೂರವೇ ಇದ್ದ ಶೇಕ್ಸ್ ಪಿಯರ್ ನನ್ನತ್ತ ನೋಡಿ ಮುಗುಳ್ನಗತೊಡಗಿದ್ದು ಇತ್ತೀಚಿನ ವರ್ಷಗಳಲ್ಲಿ, ಅದೂ ಪುಸ್ತಕದೊಳಗಿಂದ ಅಲ್ಲ, ರಂಗದ ಮೇಲಿಂದ. ಶೇಕ್ಸ್ ಪಿಯರ್ ನ ನಾಟಕಗಳಿದ್ದರೆ ತಪ್ಪದೆ ಹೋಗುತ್ತೇನೆ. ಆ ಮೂಲಕ ಅವನನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.
ಶೇಕ್ಸ್ ಪಿಯರ್ ಬಗ್ಗೆ ನನಗೆ ಇರುವುದು ಪ್ರೀತಿ ಆದರೆ ಖಲೀಲ್ ಗಿಬ್ರಾನನ ಬಗೆಗೆ ನನಗಿರುವುದು ಇನ್ನಿಲ್ಲದ ಮೋಹ. ಇವನೂ ಅಷ್ಟೆ, ತಡವಾಗಿ ಪರಿಚಯವಾದವನು, ಅರ್ಧದಾರಿ ಕ್ರಮಿಸಿದ ಮೇಲೆ ಜೊತೆಯಾದವನು, ಮತ್ತು ಅವನ ಕೈ ಜಗ್ಗಿ ’ಇನ್ನೂ ಮೊದಲೇ ಯಾಕೆ ಸಿಗಲಿಲ್ಲ ನೀನು’ ಎಂದು ಜಗಳವಾಡಬೇಕು ಅನ್ನಿಸುವವನು. ’ನಾನು ನೀರು ಕುಡಿಯಲು ಹೋದಾಗ ನೀರೂ ಬಾಯಾರಿತ್ತು, ನಾನು ನೀರು ಕುಡಿದಂತೆ, ನೀರೂ ನನ್ನನ್ನು ಕುಡಿಯಿತು’ ಎಂದು ನನ್ನನ್ನು ಬೆಚ್ಚಿಬೀಳಿಸಿದ, ಬದುಕನ್ನು ಹೀಗೆ ತೀವ್ರವಾಗಿ, ನೀರಿನ ಹನಿ ಹನಿಯನ್ನೂ ತುಟಿಗಳಿಂದ, ನಾಲಿಗೆಯಿಂದ, ಗಂಟಲಿನಿಂದ, ಎದೆಯಿಂದ, ಇಡೀ ತನುವಿನಿಂದ ಸವಿಯುವ ಹಾಗೆ ಬದುಕಲು ಪ್ರೇರೇಪಿಸುವ ಇವನನ್ನು ಮೋಹಿಸದೆ ಇರುವುದು ಹೇಗೆ?! ಇವನು ಮಾತ್ರ ರಂಗದ ಮಾಧ್ಯಮವಿಲ್ಲದೆಯೇ ಪುಸ್ತಕಗಳ ಮೂಲಕವೇ ಈಗ ನನ್ನವನಾಗುತ್ತಿದ್ದಾನೆ.
ಈ ಇಂತಹ ಶೇಕ್ಸ್ ಪಿಯರ್ ಮೊನ್ನೆ ಸಂಜೆ ರಂಗಶಂಕರದಲ್ಲಿ ಸಿಕ್ಕಿದ್ದ. ಸಂಚಯ ತಂಡದ ’ಟೆಂಪೆಸ್ಟ್’ ನಾಟಕಕ್ಕೆ ಹೋಗಿದ್ದೆ. ಆ ನಾಟಕದ ಇನ್ನೊಂದು ರೂಪಾಂತರ ವೈದೇಹಿಯವರ ’ಧಾಮ್ ಧೂಮ್ ಸುಂಟರಗಾಳಿ’ಯನ್ನು ಮಂಡ್ಯ ರಮೇಶ್ ಬೆರಗಾಗಿಸುವಂತೆ ರಂಗದ ಮೇಲೆ ತಂದಿದ್ದರು. ಅದ್ಭುತವಾದ ದೃಶ್ಯಕಾವ್ಯ ಅದು. ರಂಗದ ಮೇಲೆ ನಾಟಕ ಭವ್ಯವಾಗಿ ಬಿಚ್ಚಿಕೊಳ್ಳುತ್ತಿರುವಾಗಲೇ, ಆ ಗುಡುಗು, ಮಳೆ, ಸುಂಟರಗಾಳಿಯ ನಡುವೆಯೂ ’ಕ್ಯಾಲಿಬನ್’ನ ನಿಟ್ಟುಸಿರು ನನ್ನನ್ನು ತಾಕುತ್ತಿತ್ತು. ನೆಲೆತಪ್ಪಿ ದ್ವೀಪಕ್ಕೆ ಬಂದ ಪ್ರಾಸ್ಪರಸ್ ಅಲ್ಲಿನ ಮೂಲನಿವಾಸಿಯಾದ ಚೌಡಿಯನ್ನು ಕೊಂದು, ಆಕೆಯ ಮಗನ ನೆಲೆತಪ್ಪಿಸಿ ತನ್ನ ಗುಲಾಮನನ್ನಾಗಿ ಮಾಡಿಕೊಂಡ ಕಥೆ. ಇಡೀ ನಾಟಕವನ್ನು ನೋಡುವಾಗ ನನ್ನ ಮನಸ್ಸು ಮಿಡಿದದ್ದು ಆ ಕ್ಯಾಲಿಬನ್ ಗಾಗಿ.

ಮೊನ್ನೆ ಮತ್ತೆ ಆ ನಾಟಕ ನೋಡಿದೆ. ಸಂಚಯ ತಂಡದ ನಾಟಕ, ಶ್ರೀಕಾಂತ್ ಬಿ ಆರ್ ಕನ್ನಡಿಸಿ, ಜೋಸೆಫ್ ನಿರ್ದೇಶಿಸಿದ್ದ ನಾಟಕ. ನಾಟಕ ಶುರುವಾಗುವುದೇ ಬಿರುಗಾಳಿಯಲ್ಲಿ ಸಿಲುಕುವ ಹಡಗಿನಿಂದ. ಧಾಮ್ ಧೂಮ್ ಸುಂಟರಗಾಳಿಯಲ್ಲಿ ಹಡಗಿನ ಭವ್ಯತೆ ಮೊದಲ ದೃಶ್ಯದಲ್ಲೇ ನಮ್ಮನ್ನು ಮೂಕಾಗಿಸಿತ್ತು. ಆದರೆ ಇಲ್ಲಿ ಹಡಗಿರಲಿಲ್ಲ, ಹಡಗಿನಲ್ಲಿರುವವರ ಓಲಾಟದಲ್ಲಿ ನಮಗೆ ಹಡಗು ಗೋಚರವಾಗುತ್ತದೆ. ಅದೇ ಪ್ರಾಸ್ಪರೋ , ಅದೇ ಕ್ಯಾಲಿ ಬನ್, ಪ್ರಾಸ್ಪರಸ್ ನ ಮಗಳು ಮಿರಾಂಡಾ, ಏರಿಯಲ್ ಗಳು, ಫರ್ಡಿನ್ಯಾಂಡ್ … ಎಲ್ಲಾ ಅದೇ ಪಾತ್ರಗಳು. ಆದರೆ ನಾಟಕಕ್ಕೊಂದು ಹೊಸತನ ಇತ್ತು, ಲವಲವಿಕೆ ಇತ್ತು.
ಪ್ರಾಸ್ಪರೋ ಮಿಲಾನಿನ ರಾಜ. ಅವನು ಓದಿನಲ್ಲಿ, ತಂತ್ರವಿದ್ಯೆಯಲ್ಲಿ ಮುಳುಗಿರುವಾಗ ಅವನ ತಮ್ಮ ನೇಪಲ್ಸ್ ನ ದೊರೆಯ ನೆರವಿನಿಂದ ಅಣ್ಣನನ್ನು ಮುಗಿಸುವ ಸಂಚು ಮಾಡುತ್ತಾನೆ. ದೂತಿಯೊಬ್ಬಳ ನೆರವಿನಿಂದ ಮಗುವಿನೊಂದಿಗೆ ಜೀವ ಉಳಿಸಿಕೊಂಡು ಊರು ಬಿಟ್ಟು ಹೋಗುವ ಪ್ರಾಸ್ಪೆರೋ ಒಂದು ದ್ವೀಪ ಸೇರಿಕೊಳ್ಳುತ್ತಾನೆ. ಅಲ್ಲಿದ್ದ ಮೂಲನಿವಾಸಿ ಚೌಡಿಯನ್ನು ಸಂಹರಿಸಿ ಆಕೆಯ ಮಗನನ್ನು ತನ್ನ ಗುಲಾಮನನ್ನಾಗಿ ಮಾಡಿಕೊಳ್ಳುತ್ತಾನೆ. ಅವನಿಗೆ ಅಗತ್ಯವೇ ಇಲ್ಲದ ನಾಗರೀಕ ಭಾಷೆಯನ್ನು ಅವನಿಗೆ ಕಲಿಸುವ ಸೋಗಿನಲ್ಲಿ ತನಗೆ ಅಗತ್ಯವಿದ್ದ ಎಲ್ಲಾ ಕೆಲಸಗಳನ್ನೂ ಅವನಿಂದ ಮಾಡಿಸಿಕೊಳ್ಳುತ್ತಿರುತ್ತಾನೆ. ಅವನ ತಂತ್ರ ವಿದ್ಯೆಯ ಸಹಾಯದಿಂದ ಅವನ ಕೈವಶವಾಗಿರುವ ಏರಿಯಲ್ ಅವನಿಗೆ ಬೇರೆ ಕೆಲಸಗಳಲ್ಲಿ ಸಹಾಯ ಮಾಡುವಂತೆ, ಈ ಕ್ಯಾಲಿಬನ್ ನನ್ನು ನಿಯಂತ್ರಿಸುವುದರಲ್ಲೂ ಸಹಾಯ ಮಾಡುತ್ತಿರುತ್ತದೆ. ತನ್ನ ತಂತ್ರಾಭ್ಯಾಸದಲ್ಲಿ ಮುಳುಗಿ, ತಮ್ಮನ ಸಂಚಿಗೆ ಬಲಿಯಾಗಿ ರಾಜ್ಯ ಕಳೆದುಕೊಂಡು ನಮ್ಮ ಅನುಕಂಪಕ್ಕೆ ಪಾತ್ರವಾಗುವ ಪ್ರಾಸ್ಪರೋ ಮುಂದೆ ಅದೇ ವಿದ್ಯೆಯ ನೆರವಿನಿಂದ ಆರಿಯಲ್ ಮತ್ತು ಕ್ಯಾಲಿಬಾನ್ ನನ್ನು ಶೋಷಿಸುವುದು ಇಲ್ಲಿನ ದುರಂತ.
ಇವನ ಇಂದಿನ ಸ್ಥಿತಿಗೆ ಕಾರಣನಾದ ನೇಪಲ್ಸ್ ನ ದೊರೆ, ಆತನ ತಮ್ಮ, ಮಗ, ಪ್ರಾಸ್ಪರೋನ ತಮ್ಮ, ಮಿಕ್ಕ ಪರಿವಾರ ಎಲ್ಲರೂ ಬರುವ ಹಡಗು ಮುಳುಗಿ ಅವರೆಲ್ಲಾ ಈ ದ್ವೀಪಕ್ಕೆ ಬಂದು ಸೇರುವುದರೊಂದಿಗೆ ನಾಟಕ ಶುರುವಾಗುತ್ತದೆ. ಅಲ್ಲಿ ಬೇರೆ ಬೇರೆಯಾಗುವ ರಾಜನ ಸಂಸಾರ, ಪರಿವಾರ, ರಾಜನ ಮಗನ ಜೊತೆ ಮಿರಾಂಡಾಳ ಭೇಟಿ, ಅವರಿಬ್ಬರ ಪ್ರೇಮ, ಆ ಪ್ರೇಮ ಪ್ರಾಸ್ಪರೋನನ್ನು ಬದಲಾಯಿಸುವುದು ನಾಟಕದ ಕಥೆ. ಸೇಡಿನ ಕಥೆಯಾಗಿ ಶುರುವಾಗುವ ನಾಟಕ ಪ್ರೇಮದ ಕಥೆಯಾಗಿ ಸುಖಾಂತ್ಯವಾಗುತ್ತದೆ. ಕಥೆ ಗೊತ್ತಿರುವುದೇ, ಆದರೆ ಆ ಕಥೆಯನ್ನು ನಾಟಕವಾಗಿಸಿ, ಹೊಸದೊಂದು ನೋಟ ಕೊಡುವುದು ನಿರ್ದೇಶಕ ಮತ್ತು ತಂಡದ ಮುಂದಿರುವ ಸವಾಲು. ಅದನ್ನು ಅವರು ಎಷ್ಟರ ಮಟ್ಟಿಗೆ ಎದುರಿಸುತ್ತಾರೆ ಎನ್ನುವುದರ ಮೇಲೆ ನಾಟಕದ ಸೋಲು, ಗೆಲುವು.
ನಾಟಕದ ಕಥೆ ಬಿಚ್ಚಿಕೊಳ್ಳುತ್ತಿರುವಾಗಲೇ ನಿನ್ನೆಯಿಂದ ಇಂದಿಗೆ ಜಿಗಿದು ಇಂದಿನ ಮಾತನಾಡುವ ಪಾತ್ರಧಾರಿಗಳ ಮೂಲಕ ಗಂಭೀರ ನಾಟಕದಲ್ಲಿ ಅತ್ಯಂತ ಸ್ವಾಭಾವಿಕವಾಗಿ ಹಾಸ್ಯ ಒಡಮೂಡುತ್ತಿತ್ತು. ನಾಟಕದ ಭಾಷೆಯ ನಡುವೆ ಆಡು ಭಾಷೆ ಎಲ್ಲೂ ಕೃತವೆನಿಸದೆ ಹಾಸ್ಯ ಸೃಷ್ಟಿಸುತ್ತಿತ್ತು. ಅಷ್ಟೇ ಗಮನ ಸೆಳೆದದ್ದು ಇವರು ರಂಗಪರಿಕರಗಳನ್ನು ಬಳಸಿಕೊಂಡ ರೀತಿ. ನಾಟಕದ ಒಂದು ದೃಶ್ಯದಲ್ಲಿ ಏರಿಯಲ್ ಕನ್ನಡಿ ಹಿಡಿದು ಎಲ್ಲರಿಗೂ ಅವರ ಇನ್ನೊಂದು ಮುಖವನ್ನು ತೋರಿಸುವ ರೀತಿ ಮೆಚ್ಚೆನಿಸಿತು.
ನಾಟಕದ ಬಗ್ಗೆ ಹೇಳುವಾಗ ತಂಡ ಇದು ’ತಮ್ಮ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಗುದ್ದಾಡಿ, ಹೋರಾಡಿ ಕಡೆಗೆ ಪ್ರೀತಿಯ ಕಡೆಗೆ ಸಾಗುವ ಕಥೆ ಎಂದು ಹೇಳುತ್ತದೆ. ನಾಟಕ ನೋಡುವಾಗ ಅನ್ನಿಸಿದ್ದು, ಇದು ಪ್ರೀತಿಯ ಕಥೆಯಾದರೂ ಮಿರಾಂಡ ಮತ್ತು ಫರ್ಡಿನಾಂಡರ ಪ್ರೇಮಕ್ಕಿಂತ ಮಿಕ್ಕ ಪಾತ್ರಗಳ ತಲ್ಲಣಗಳು ನಮ್ಮನ್ನು ಹೆಚ್ಚು ಪರಿಣಾಮಕಾರಿಯಾಗಿ ತಾಕುತ್ತದೆ. ಅವರ ಹುಡುಕಾಟ, ಹಾಸ್ಯ, ಕಂಬನಿ, ನರಳಾಟ, ಸ್ವಾತಂತ್ರ್ಯದ ಬಯಕೆ, ಒಳಗಿನ ಕುತ್ಸಿತತೆ, ಮೋಸ, ಪ್ರಾಮಾಣಿಕತೆ, ಕಷ್ಟದ ಎದುರಲ್ಲಿ ಬರುವ ಒಳನೋಟ, ಅವಲೋಕನ ಎಲ್ಲವೂ ನಮ್ಮೊಳಗೆ ಇಳಿಯುತ್ತದೆ.
ನಾಟಕದ ಕಲಾ ನಿರ್ದೇಶನ, ವಸ್ತ್ರ ವಿನ್ಯಾಸ, ಬೆಳಕು, ಮೇಳ, ರಂಗ ಸಜ್ಜಿಕೆ ಇಷ್ಟವಾದವು. ಆದರೆ ಕೆಲವು ಪಾತ್ರಗಳಿಗೆ ಅಥೆಂಟಿಕ್ ಆಗಿದ್ದ ವಸ್ತ್ರ ವಿನ್ಯಾಸ ಮತ್ತು ಇನ್ನು ಕೆಲವು ಪಾತ್ರಗಳಿಗೆ ವರ್ತಮಾನ ಕಾಲದ ವಸ್ತ್ರ ನೀಡಿರುವ ಔಚಿತ್ಯ ಅರ್ಥವಾಗಲಿಲ್ಲ. ಮೇಳ ಚೆನ್ನಾಗಿತ್ತು, ನಾನು ನೋಡಿದ್ದು ನಾಟಕದ ಮೊದಲ ಪ್ರದರ್ಶನ. ಈ ಹಿನ್ನಲೆಯಲ್ಲಿ ನಾಟಕ ತುಂಬಾ ಚೆನ್ನಾಗಿ ಬಂತು ಎಂದೇ ಹೇಳಬೇಕು. ೨೬ನೆಯ ವರ್ಷಕ್ಕೆ ಕಾಲಿಡುತ್ತಿರುವ ಸಂಚಯದಿಂದ ಇದು ಒಂದು ಸುಂದರ ಕೊಡುಗೆ.
ಮೊದಲು ನೋಡಿದ್ದರೂ, ಹಲವಾರು ರೂಪಗಳನ್ನು ದಾಟಿದ್ದರೂ, ಟೆಂಪೆಸ್ಟ್ ಹೊಸದಾಗಿಯೇ ಕಂಡಿತ್ತು. ಶೇಕ್ಸ್ ಪಿಯರ್ ನ ತಾಕತ್ತು ಅದು ಅನ್ನಿಸುತ್ತೆ, ಅವನ ನಾಟಕಗಳನ್ನು ನೂರು ನಿರ್ದೇಶಕರು ನೂರು ರೀತಿಯಲ್ಲಿ ಕಟ್ಟಿ ಕೊಟ್ಟ ಮೇಲೂ ನಾಟಕ ಆ ನೂರು ಜನರ ಸ್ಪರ್ಶದಾಚೆಗಿನದೇನೋ ಒಂದು ಹೊಸ ಸ್ಪರ್ಶಕ್ಕೆ ಕಾಯುತ್ತಿರುತ್ತದೆ. ಇನ್ನೊಬ್ಬ ನಿರ್ದೇಶಕನಿಗೆ ಶೇಕ್ಸ್ ಪಿಯರ್ ನಲ್ಲಿ ಯಾವಾಗಲೂ ತಾವಿರುತ್ತದೆ.
ಮೊದಲೇ ಹೇಳಿದ ಹಾಗೆ, ’ಇರುಳು ಆಗಲೇ ನೆತ್ತಿಗೆ ಬಂದಿದೆ, ಪಯಣ ಬಾಕಿ ಇದೆ’, ಬೆಳಕು ಇರುವ ಸ್ವಲ್ಪ ಸಮಯದಲ್ಲಿಯೇ ಶೇಕ್ಸ್ ಪಿಯರ್ ನ ಪ್ರೀತಿಯನ್ನೂ, ಖಲೀಲ್ ಗಿಬ್ರಾನನ ತೀವ್ರ ಮೋಹವನ್ನೂ ನನ್ನೊಳಗೆ ಬಸಿದುಕೊಂಡುಬಿಡಬೇಕು.

‍ಲೇಖಕರು G

February 6, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

16 ಪ್ರತಿಕ್ರಿಯೆಗಳು

  1. Palahalli Vishwanath

    Thanks for the article. Here is a view of Caliban ” Caliban stands for countless victims of European imperialism and colonization. Like Caliban (so the argument goes), colonized peoples were disinherited, exploited, and subjugated. Like him, they learned a conqueror’s language and perhaps that conqueror’s values. Like him, they endured enslavement and contempt by European usurpers and eventually rebelled. Like him, they were torn between their indigenous culture and the culture superimposed on it by their conqueror”
    ಇದು ಇನ್ನೂ ಪ್ರಸ್ತುತ

    ಪ್ರತಿಕ್ರಿಯೆ
  2. bharathi b v

    ಚೆಂದದ ನಾಟಕದ ಬಗ್ಗೆ ಚೆಂದದ ಬರಹ …

    ಪ್ರತಿಕ್ರಿಯೆ
  3. Shylesh

    Very Many Times Even i have Felt , ” Should have Started a bit more Earlier …… “. Neverteheless ,” Better Late than Never”…
    Excellent Review …..

    ಪ್ರತಿಕ್ರಿಯೆ
  4. shobhavenkatesh

    avadhiyalli natakada bagge neediruva space bagge kushiyaguthade.chenngide baraha sandhya

    ಪ್ರತಿಕ್ರಿಯೆ
  5. Ravi Kulkarni

    ‘ಇರುಳು ನೆತ್ತಿಗೆ ಬಂದಿದೆ, ಪಯಣ ಬಾಕಿ ಇದೆ
    ತುಸು ಮುಂಜಾನೆಯೇ ಹೊರಡಬೇಕಿತ್ತು ನಾವು…’
    ಜಾವೇದ್ ಅಖ್ತರ್-ರ ಈ ಸಾಲುಗಳು ಎಂದೆಂದಿಗೂ ಪ್ರಸ್ತುತ.. ನಿಜ, ಎಷ್ಟೋ ಜನಕ್ಕೆ ಈ ಭಾವನೆ ಮರಳಿ ಮರಳಿ ಬೆಂಬಿಡದೆ ಕಾಡುತ್ತಿರುತ್ತದೆ.
    ಅಲ್ಲದೆ ನಿಮ್ಮ ಮಾತು “ನಾನು ನೀರು ಕುಡಿಯಲು ಹೋದಾಗ ನೀರೂ ಬಾಯಾರಿತ್ತು, ನಾನು ನೀರು ಕುಡಿದಂತೆ, ನೀರೂ ನನ್ನನ್ನು ಕುಡಿಯಿತು” ಕೂಡ ಅಷ್ಟೇ ಚೆನ್ನ..
    “ಟೆಂಪೆಸ್ಟ್”ನ ನಿಮ್ಮ ಈ ಬರಹ, ನಾಟಕವನ್ನು ನೋಡಿದಷ್ಟೇ ಅನುಭವ ಕೊಡುತ್ತೆ.

    ಪ್ರತಿಕ್ರಿಯೆ
  6. Anil Talikoti

    ನಿಜದ ನುಡಿಗಳು -ಎಷ್ಟೊಂದಿದೆ ಓದಲು, ಹುಡುಕಲು, ಕೇಳಲು -ನಾಟಕದಷ್ಟೆ ನವನವಿನ ನಿಮ್ಮ ನೋಟ !

    ಪ್ರತಿಕ್ರಿಯೆ
  7. Venkata subba rao

    ನಿಮ್ಮ ಈ ಬರಹವನ್ನ Face book ನಲ್ಲಿ share ಮಾಡಿದ್ದಕ್ಕೆ ಭಾನುಮತಿ ಅವರಿಗೆ ಒಂದು ಥ್ಯಾಂಕ್ಸ್ .Would have missed it otherwise . ಎಷ್ಟು ಚೆನ್ನಾಗಿ ಬರೆದಿದ್ದೀರಿ !
    ನಾನು ಈಗ ಇಂಡಿಯಾದಲ್ಲೇ ಇಲ್ಲದ ಕಾರಣ , ಈ ರಂಗ ಪ್ರಯೋಗ ನೋಡಿಲ್ಲವಾದ್ದರಿಂದ , ಅದರ ಬಗ್ಗೆ ನೀವು ಬರೆದಿರುವ ಸಂಗತಿಗಳ ಕುರಿತು obviously ನಾನು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ . ಆದರೆ ,ಲೇಖನದ ಆರಂಭದಲ್ಲಿ ನೀವು ಶೇಕ್ಸ್ಪಿಯರ್ ಕುರಿತು ಪ್ರಸ್ತಾಪಿಸಿರೋ ಒಂದು ಆಸಕ್ತಿಕರ ಮತ್ತು ಮಹತ್ವದ ಒಂದು ಸಂಗತಿಯ ಬಗ್ಗೆ ನನಗೆ ಎರಡು ಮಾತು ಹೇಳಬೇಕಿದೆ.
    ಕೆಲವು ದಿನಗಳ ಹಿಂದೆ ಇಲ್ಲಿ ಕೆನಡಾದಲ್ಲಿ , 12th grade ನಲ್ಲಿ (ಅಂದ್ರೆ,ಇಂಡಿಯಾದ 2nd P.U.C) ಓದುತ್ತಾ ಇರೋ ನನ್ನ ಮಗಳು ನಾಗಶ್ರೀ , ಅವಳ ಕ್ಲಾಸ್ಮೇಟ್ ಒಬ್ಬಳ ಜೊತೆ ಫೋನ್ ನಲ್ಲಿ The way Shakespear has used “Soliloquy ” in the play ‘ Hamlet” ಅನ್ನೋ ಒಂದು Exam question ಬಗ್ಗೆ ಮಾತಾಡ್ತಾ ಇದ್ದಳು . It just fell on my ears and I felt curious and a bit surprised as well . ಕುತೂಹಲ ತಡೆಯಲಾರದೆ ಹೋಗಿ ,ಅದೇನೋ ” Soliloquy ” ಅಂತಿದ್ಯಲ್ಲಾ , ಅದೇನೋ ಬಂಗಾರಾ ?, ಅಂತ ಕೇಳಿದೆ . ಅದಕ್ಕೆ ಅವಳು ಹೇಳಿದ್ದು ಇದು –
    ” ಅದೂಂದು Literary tool ತರಹದ್ದ್ದು ಕಣಪ್ಪಾ . It is some thing similar to monologue but different from it . ಅದನ್ನ ಶೇಕ್ಸ್ಪಿಯರ್ Hamlet ನಲ್ಲಿ ಬರೋ “To be or not to be ‘ ಅನ್ನೋ ಒಂದು ಅದ್ಭುತ ಸಂಗತಿಯ ಬಗ್ಗೆ ಹೇಳೋಕೆ ಒಂದು technique ಆಗಿ ಬಳಸ್ತಾನೆ . “Monologue is a speech given by a single person to an audience ” eg: Mark Antony’s speech in “Julius Caesar “. ಆದರೆ , ” Soliloquy ” is a speech that one gives to oneself. In a play, a character delivering a soliloquy talks to herself — thinking out loud, as it were — so that the audience better understands what is happening to the character internally.ಅಂತೆಲ್ಲ ತೋರಿಸಿ ವಿವರಿಸಿದಳು.
    ನನ್ನ ಮನಸ್ಸಿಗೆ ಆಗ ಏಕಕಾಲಕ್ಕೆ ಎರಡು ಸಂಗತಿಗಳ ಬಗ್ಗೆ ಹೆಮ್ಮೆ ಮೂಡಿತು.. ಒಂದು ಈ ಶೇಕ್ಪಿಯರ್ ಅನ್ನೋ ಮಹಾನ್ ಪ್ರತಿಭೆ ,ಹೇಗೆ ಆಕಾಲಕ್ಕೇ ರಂಗ ತಂತ್ರಗಳನ್ನು ಕುರಿತು ಯೋಚಿಸಿತ್ತು ಅನ್ನುವುದು ! ವಿಶ್ವದ ಆಧುನಿಕ ರಂಗ ಭೂಮಿಯ ಮಹಾನ್ ಪ್ರತಿಭೆ ಅಂತ ಗುರುತಿಸಲ್ಪಡುವ “ಬರ್ಟೋಲ್ಡ್ ಬ್ರೆಕ್ಟ್ ” ,ತನಗೆ ಹೊಳೆಯುವ “ರಂಗ ತಂತ್ರಗಳಿಗಾಗಿಯೇ ” ಒಂದು ನಾಟಕ ರಚಿಸುತ್ತಿದ್ದನಂತೆ ! ಆದರೆ “the content and the technique of the theatre”ಇವೆರಡರ ಬಗ್ಗೆಯೂ ಅದ್ಭುತ ಜ್ಞಾನ ಹೊಂದಿದ್ದ ಈ ಶೇಕ್ಪಿಯರ್ ಅನ್ನೋ ಮಹಾನುಭಾವ ಯಾಕೆ ಇಷ್ಟೊಂದು ಕಾಲಾತೀತವಾಗಿ ಖ್ಯಾತ ,ಮತ್ತು ವಿಶ್ವದ ಸಾಹಿತ್ಯ ಪರಂಪರೆಯಲ್ಲಿ literally immortal ಅನ್ನಿಸುತ್ತಾನೆ ಅನ್ನುವ ಸಂಗತಿ ಸ್ಪಷ್ಟವಾಯಿತು .
    ಎರಡನೆಯ ಸಂಗತಿ ಅಂದರೆ , ಇಲ್ಲಿ ನಾರ್ತ್ ಅಮೇರಿಕಾದಲ್ಲಿ ಎಂಟನೇ ತರಗತಿಯಿಂದಲೇ ‘ಶೇಕ್ಸ್ಪಿಯರ್’ ಅಂದರೆ ಇಂಗ್ಲಿಶ್ ಭಾಷೆಗೆ ಸಂಬಂಧಿಸಿದಂತೆ , ಅವನ ಕೃತಿಗಳೇ syllabus ! ಹ್ಯಾಮ್ಲೆಟ್ , ಕಿಂಗ್ ಲಿಯರ್ , ಟೆಂಪೆಸ್ಟ್ ಇವೆಲ್ಲ ಎಂಟರಿಂದ ಹನ್ನೆರಡನೆ ತರಗತಿ ಮುಗಿಯುವುದರ ಒಳಗೆ ಎಲ್ಲ ವಿದ್ಯಾರ್ಥಿಗಳೂ ಓದಿರುತ್ತಾರೆ , and the standards of the academics and the curriculum of this country is so high that one wonders whether even the so called Bachelors degree of English Literature of our country would ever match !
    ನಿಮ್ಮ , “ಸ್ವಲ್ಪ ಮುಂಚೆ ಹೊರಡಬೇಕಿತ್ತು” ಅನ್ನೋ ಜವೇದ ಅಖ್ತರ್ ನ ಆ ಮಾತಿಗೆ ನೇರ ಸಂಬಂಧಿದಂತೆ ಇದೆಲ್ಲ ಹೇಳಬೇಕಾಯಿತು . ಶೇಕ್ಪಿಯರ್ಗೆ ಸಂಬಂದಿಸಿದಂತೆ ,”ಬೇಗ ಹೊರಡುವ ಭಾಗ್ಯ’ ನನಗಿರಲಿಲ್ಲ. ಆದರೆ ಅದು ಈಗ ನನ್ನ ಮಗ ಮತ್ತು ಮಗಳು ಇಬ್ಬರದ್ದೂ ಆಗಿದೆ . That is some consolation never the less !

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಅಕ್ಯಾಡಮಿಕ್ ಆಗಿ ಶೇಕ್ಸ್ ಪಿಯರ್ ನನ್ನು ಓದಲಾಗಲಿಲ್ಲ ಎನ್ನುವ ಕೊರಗು ನನ್ನಲ್ಲಿ ಯಾವಾಗಲೂ ಇರುತ್ತದೆ. ಈ ಬಗ್ಗೆ ಎಂ ಆರ್ ಕಮಲಾ ಅವರಿಗೂ ಸಹ ಮೊನ್ನೆ ಹೇಳಿದೆ. ಈಗ ಬ್ರೆಕ್ಟ್ ನನ್ನೂ ಓದಬೇಕಿದೆ. ನಿಜ ನಿಮ್ಮ ಮಕ್ಕಳು ಅದೃಷ್ಟವಂತರು. ಅವರ ಕಣ್ಣುಗಳಲ್ಲಿ, ಮನಸ್ಸಿನಲ್ಲಿ ಶೇಕ್ಸ್ ಪಿಯರ್ ತುಂಬಿಕೊಳ್ಳಲಿ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

      ಪ್ರತಿಕ್ರಿಯೆ
    • Anonymous

      ಚೆನ್ನಾಗಿದೆ, ಸರ್.
      ಆದರೆ soliloquy ಷೇಕ್ಸ್ಪಿಯರ್ ಸೃಷ್ಟಿಯಲ್ಲ; ಆ ಕಾಲಕ್ಕಿಂತ ಮುಂಚೆಯೇ ಚೆನ್ನಾಗಿ ಪ್ರಚಲಿತವಿದ್ದ ತಂತ್ರ.
      ಅದನ್ನು ಹಿಂದೆ ಎಳೆಯುತ್ತಾ ಹೋದರೆ, ಸೀದಾ Greek ರಂಗಭೂಮಿಗೆ ತಲುಪಬಹುದು.
      ಸಂಸ್ಕೃತ ನಾಟಕಗಳಲ್ಲಿಯೂ ಈ ತಂತ್ರ ಅಧ್ಬುತವಾಗಿ ಬಳಸಲಾಗಿದೆ. ಸ್ವಪ್ನ ವಾಸವದತ್ತ ನೆನಪಿಸಿಕೊಳ್ಳಿ.
      ಷೇಕ್ಸ್ಪಿಯರ್ ನ ಮಹಾಪ್ರತಿಭೆ ಮೆಚ್ಚುವಂತಹದ್ದೆ; ಆದರೆ ಆತ ಯಾರ ಭುಜಗಳ ಮೇಲೆ ನಿಂತು ತನ್ನ ದೃಷ್ಟಿ ವಿಸ್ತರಿಸಿಕೊಂಡ ಎಂಬುದೂ ಮುಖ್ಯ. ಆ ಭುಜಧಾರಿಗಳ ತಾಕತ್ತನ್ನೂ ಷೇಕ್ಸ್ಪಿಯರ್ ನಿಗೆ ಆರೋಪಿಸುವುದೂ ಸಲ್ಲ!
      ಅಲ್ಲವೇ?

      ಪ್ರತಿಕ್ರಿಯೆ
  8. lakshmikanth itnal

    ಶೇಕ್ಷ್ ಪೀಯರ್ ನ ಅದ್ಭುತ ರಚನೆಗಳ ಬಗ್ಗೆ ಸುಂದರವಾದ ಬರಹ, ಸಾಹಿತ್ಯದ ರಸಬಿಂದುಗಳ ಬಳಕೆ ಬಹಳ ಚನ್ನ. ಇದು ತಮಗೆ ಮಾತ್ರ ಸಾಧ್ಯ ಸಂಧ್ಯಾಜಿ….

    ಪ್ರತಿಕ್ರಿಯೆ
  9. vishwanath hebballi

    jeevanada haadiya ore koregalannu kramisi ninthu…….. thusu munjaneye horadabekittu endu kavi JAVED AKHTHAR na salugalannu nenapisi, arthagarbhithavagi holisi, Shakespear khalil gibranana kruthigala atthittha kannadisi bareda salugalu adbhutha.
    Nijakkoo thusu munjaneye horadabekittu…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: