ಸಂಧ್ಯಾರಾಣಿ ಕಾಲಂ : ’ಲೇಡಿಸ್ ಕೂಪೆ’ಯಲ್ಲಿ ಸಿಕ್ಕ ಅಖಿಲಾಂಡೇಶ್ವರಿ


ಪ್ರತಿಯೊಬ್ಬರೂ ಇಲ್ಲಿ ಎರಡೆರಡು ರೀತಿಯ ಹೋರಾಟಗಳನ್ನು ನಡೆಸುತ್ತಿರುತ್ತಾರೆ. ಒಂದು ಬದುಕಿನೊಡನೆ, ಮತ್ತೊಂದು ತಮ್ಮೊಡನೆಯೇ. ಬದುಕಿನೊಡನೆ ಹೋರಾಟ ನಿರಂತರ, ಬದುಕಿರುವವರೆಗೂ. ಆದರೆ ನಮ್ಮೊಳಗಿನ, ನಮ್ಮೆಡೆಗಿನ ನಮ್ಮ ಹೋರಾಟ ಹಾಗಲ್ಲ. ನಮ್ಮ ನಮ್ಮ ಗ್ರಹಿಕೆ, ಅನುಭವ ಮತ್ತು ತಿಳುವಳಿಕೆಗನುಗುಣವಾಗಿ ಬದುಕಿನ ಯಾವುದೋ ಒಂದು ಹಂತದಲ್ಲಿ ನಮ್ಮೊಡನಿನ ನಮ್ಮ ಹೋರಾಟ ನಿಲ್ಲುವ ಸಾಧ್ಯತೆ ಇದೆ, ಅದು ಬಿಡುಗಡೆ, ಅದೇ ಮುಕ್ತಿ.
ನಮ್ಮೊಳಗಿನ ಹೋರಾಟ ಇರುವುದು ನಮ್ಮಲ್ಲಿನ ಭಯ, ಭೀತಿ, ಪೂರ್ವಾಗ್ರಹ, ಕೀಳರಿಮೆ, ಬಾಲ್ಯದ ಯಾವುದೋ ಕಹಿಯ ಭಾರ, ಹಿಂಜರಿಕೆ, ಕಾಂಪ್ಲೆಕ್ಸ್, ದೌರ್ಬಲ್ಯಗಳ ಜೊತೆಗೆ. ಇವನ್ನು ಗೆಲ್ಲಬೇಕಾದರೆ ಮೊದಲು ಇವನ್ನು ಗುರುತಿಸಬೇಕು, ಅವುಗಳ ಅಸ್ತಿತ್ವವನ್ನು ಒಪ್ಪಿಕೊಳ್ಳಬೇಕು. ಮುಂದಿನ ಹೆಜ್ಜೆ ಅದನ್ನು ಗೆಲ್ಲುವುದು. ಎಷ್ಟೋ ಸಲ ಅವುಗಳ ಇರುವಿಕೆಯನ್ನು ಗುರುತಿಸಿ ಒಪ್ಪಿಕೊಳ್ಳುವುದರಲ್ಲೇ ಆಯಸ್ಸು ಕಳೆದುಹೋಗಿಬಿಡುತ್ತದೆ. ಆದರೆ ಅದನ್ನು ಗುರುತಿಸಿ, ಅದರೊಡನೆ ತಮ್ಮ ತಮ್ಮ ಮಟ್ಟದಲ್ಲಿ ಹೋರಾಡಿ, ಅದರಿಂದ ಬಿಡುಗಡೆ ಪಡೆದ ಹೆಣ್ಣುಗಳು ಒಂದು ಟ್ರೇನಿನ ಲೇಡೀಸ್ ಕೂಪೆಯಲ್ಲಿ ಒಂದು ರಾತ್ರಿ, ಒಂದು ಹಗಲು ಕಳೆದ ಕಥೆ ಇದು. ಅನಿತಾ ನಾಯರ್ ಬರೆದ Ladies Coupe ಪುಸ್ತಕದ ಬಗ್ಗೆ ಮಾತಾಡ್ತಾ ಇದೀನಿ ನಾನು.  ಅಲ್ಲ ಪುಸ್ತಕದ ಬಗ್ಗೆ ಅನ್ನುವುದಕ್ಕಿಂತ ಹೆಚ್ಚಾಗಿ, ಅದರಲ್ಲಿ ನನ್ನೊಂದಿಗೆ ಮಾತಾಡಿದ ಗೆಳತಿಯರ ಬಗ್ಗೆ ಮಾತನಾಡುತ್ತಿದ್ದೇನೆ.
ಅದೊಂದು ಕನ್ಯಾಕುಮಾರಿಗೆ ಹೋಗುವ ರೈಲಿನಲ್ಲಿಯ ಒಂದು ಸೆಕೆಂಡ್ ಕ್ಲಾಸ್ ಕೂಪೆ. ಅಲ್ಲಿನ ಪ್ರಯಾಣಿಕರು ೬ ಜನ, ೬ ಸ್ಲೀಪರ್ ಬರ್ತ್ ಗಳಲ್ಲಿ ಆರು ಪ್ರಯಾಣಿಕರು … ವಯಸ್ಸು ಭಿನ್ನ, ಸಾಮಾಜಿಕ ಹಿನ್ನಲೆ ಭಿನ್ನ, ಆರ್ಥಿಕ ಪರಿಸ್ಥಿತಿ ಭಿನ್ನ. ಆದರೆ ಎಲ್ಲರದೂ ಒಂದೊಂದು ಹೋರಾಟ ಇದೆ, ಅವರೊಡನೆಯೇ … ಅವರೊಳಗಣ ತೊಯ್ದಾಟವನ್ನು ಅವರು ಗೆಲ್ಲುವುದು ಇಲ್ಲಿನ ಕಥೆ,
ಮತ್ತೆ ಅವರು ಭೇಟಿಯಾದಾರೆಂಬ ನೆಚ್ಚಿಗೆಯಿಲ್ಲ, ಭೇಟಿಯಾಗಬೇಕೆಂಬ ನಿರೀಕ್ಷೆಯೂ ಇಲ್ಲ. ಅಥವಾ ಮತ್ತೆ ಭೇಟಿ ಆಗುವುದಿಲ್ಲವೆಂಬ ಸಂಭಾವ್ಯವೇ ಅವರು ಅಷ್ಟು ಮುಕ್ತವಾಗಿ ತಮ್ಮ ಮನಸ್ಸನ್ನು ಬಿಚ್ಚಿ ಎದುರಿಗಿಡಲು ಪ್ರೇರೇಪಿಸುತ್ತದೆ ಎನ್ನಬಹುದು. ಆ ಪ್ರಯಾಣ ಅವರ ಪಾಲಿಗೆ ಒಂದು ಪುಸ್ತಕದಿಂದ ಬೇರೆಯಾಗಿ, ಹಾರಿಹೋದ ಒಂದು ಹಾಳೆಯಂತೆ. ಅಲ್ಲಿ ಹಿಂದಿನ ಕಥೆಯ ನೆರಳಿದೆ, ಮುಂದೆ ಕಥೆ ಎತ್ತ ಚಲಿಸಬಹುದು ಎನ್ನುವ ನೋಟ ಸಹ ಇದೆ, ಆದರೆ ಪುಸ್ತಕದ ಹೆಸರು ಅನಾಮಿಕವಾಗೇ ಇದ್ದುಬಿಡುತ್ತದೆ. ಇಲ್ಲಿ ನಮಗೆ ಕಾಣುವುದು ಕೇವಲ ಅವರ ಜೀವನದ ಒಂದು ದಿನವಲ್ಲ, ಅವರ ಮನಸ್ಸಿನ ಒಂದು ಪುಟ. ಅಲ್ಲಿರುವ ಹೆಂಗಸರು ಅಖಿಲಾ ಅಥವಾ ಅಖಿಲಾಂಡೇಶ್ವರಿ, ಜಾನಕಿ, ಪ್ರಭಾ ದೇವಿ, ಶೀಲಾ, ಮಾರ್ಗರೇಟ್ ಮತ್ತು ಮರಿಕೊಳಂತು.
ಇಲ್ಲಿನ ಕಥೆಗಳಿಗೊಂದು ಸಾರ್ವತ್ರಿಕತೆ ಬರುವುದು ಈ ಹೋರಾಟ ನಮ್ಮ ನಿಮ್ಮ ನಡುವಿನ ಯಾವುದೇ ಹೆಣ್ಣಿನದಾಗಿರಬಹುದು ಎಂಬುದರಿಂದ. ಇಲ್ಲಿ ಕಥೆಯ ನಾಯಕಿ, ಅಖಿಲಾ ಅಥವಾ ಅಖಿಲಾಂಡೇಶ್ವರಿ. ಎಸ್ ಎಸ್ ಎಲ್ ಸಿ ಗೆ ಓದನ್ನು ಬಿಟ್ಟು ಮದುವೆಗೆ ಅಂತ ಕೆಲಸ, ಬೊಗಸೆ ಕಲಿಯುತ್ತಿದ್ದ ಹುಡುಗಿ. ಅಪ್ಪನ ಆಕಸ್ಮಿಕ ಮರಣದಿಂದ(ಅದು ಅಕಸ್ಮಿಕವೇ ಅಥವಾ ಮನೆಯ ಜವಾಬ್ದಾರಿಗೆ ಹೆದರಿ ಅಪ್ಪ ಮಾಡಿಕೊಂಡ ಆತ್ಮಹತ್ಯೆಯೇ ಎನ್ನುವ ಪ್ರಶ್ನೆ ಸಹ ಅವಳನ್ನು ಕಾಡುತ್ತಿರುತ್ತದೆ) ರಾತ್ರಿ ಕಳೆದು ಹಗಲಾಗುವುದರಲ್ಲಿ ಇಬ್ಬರು ತಮ್ಮಂದಿರು, ಒಬ್ಬ ತಂಗಿ ಮತ್ತು ಅಮ್ಮನ ಭಾರ ಹೊರಬೇಕಾಗುತ್ತದೆ.
ದುಡಿಯುತ್ತಾ, ದುಡಿಯುತ್ತಾ ತಾನು ಕಳೆದುಕೊಂಡ ಯೌವನದ ಎಲ್ಲಾ ಕ್ಷಣಗಳನ್ನೂ ತನ್ನ ತಮ್ಮಂದಿರು, ತಂಗಿ ಸೂರೆ ಮಾಡುವುದನ್ನು ನೋಡುತ್ತಾ ನೋಡುತ್ತಾ ಬರಡಾಗಿ ಹೋಗುವ ಹೆಣ್ಣು ಈಕೆ. ಒಬ್ಬ ತಮ್ಮ ಓದುವವರೆಗೆ ದುಡಿದರೆ ಸಾಕು, ಆಮೇಲೆ ಮದುವೆಯಾಗಬಹುದು ಎಂದುಕೊಂಡ ಅವಳನ್ನು ’ಮದುವೆಯಾಗು’ ಅಂತ ಯಾರೂ, ಕಡೆಗೆ ಅಮ್ಮ ಸಹ ಹೇಳುವುದಿಲ್ಲ, ಒಬ್ಬರಾದ ಮೇಲೊಬ್ಬರಂತೆ ತಮ್ಮಂದಿರ ಮದುವೆಯಾಗುತ್ತದೆ, ತಂಗಿಯ ಮದುವೆಯಾಗುತ್ತದೆ. ಈಕೆ ಹೆಂಡತಿಯಾಗದೆ, ಪ್ರೇಮಿಯಾಗದೆ, ಅಮ್ಮನಾಗದೆ ಮನೆಗೆ ಅಪ್ಪನಾಗಿ ಉಳಿದುಬಿಡುತ್ತಾಳೆ.
 
ಗಂಜಿ ಹಾಕಿದ ಶಿಸ್ತು ಕಲಿತ ಸೀರೆಯಂತೆಯೇ ಅವಳು, ಸಂಜೆ ವೇಳೆಗೆ ಮುದುರುತ್ತದೆ ಆದರೆ ಅದಕ್ಕೆ ಬಳಕುವ ಸ್ವಾತಂತ್ರ್ಯವಿಲ್ಲ. ಇಲ್ಲಿ ಗಂಜಿ ಬಿದ್ದು ಮಾರ್ದವತೆ ಕಳೆದುಕೊಂಡಿರುವುದು ಆಕೆಯ ಸೀರೆಯಷ್ಟೇ ಅಲ್ಲ… ತನ್ನ ಸುತ್ತಲೂ ತನ್ನದೇ ರಕ್ಷಣೆಗಾಗಿ ಒಂದು ವರ್ತುಲ ನಿರ್ಮಿಸಿಕೊಂಡು, ಅದರಾಚೆ ಇರುವವರಿಗೆಲ್ಲಾ ಧೋರಣೆಯ ಹೆಣ್ಣಾಗಿ ಕಾಣುವ, ಮನಸ್ಸಿನಲ್ಲಿ ಅದೇ ಹತ್ತನೇ ಕ್ಲಾಸ್ ಮುಗಿಸಿ ರಂಗೋಲಿ ಹಾಕುವ ದಿನಗಳಿಗಾಗಿ ಚಡಪಡಿಸುವ ಅಖಿಲಾ. ಸುತ್ತ ಮುತ್ತಲಿನ ಎಲ್ಲರಿಗೂ ಅಕ್ಕ, ದೊಡ್ಡಮ್ಮ, ಮೇಡಂ, ದೊಡ್ಡಕ್ಕ ಆದ ಅವಳ ಎದೆಯಾಳದ ಆಸೆ ಯಾರಾದರೂ ತನ್ನನ್ನು ಹೆಸರು ಹಿಡಿದು ಕರೆಯಬಾರದೇ ಅಂತ. ಇಲ್ಲಿ ಮುಖ್ಯ ಹೆಸರಲ್ಲ, ಹಾಗೆ ಕರೆಯುವವರು ಇದ್ದಾರೆ ಅನ್ನುವ ಭಾವ.
ಅಮ್ಮ ತೀರಿಕೊಂಡ ಮೇಲೆ ಈಕೆ ಅನಿವಾರ್ಯವಾಗಿ ತಂಗಿಯ ಸಂಸಾರವನ್ನು ತನ್ನ ಜೊತೆಗೆ ಇಟ್ಟುಕೊಳ್ಳಬೇಕಾಗಿ ಬರುತ್ತದೆ. ತಂಗಿ ಕೆಟ್ಟವಳಲ್ಲ, ಅಕ್ಕನನ್ನು ಕೆಲಸಕ್ಕೆ ಬಾರದವಳಂತೆ ಚಿತ್ರಿಸಿದರೆ ಮಾತ್ರ ತಾನು ಒಳ್ಳೆಯವಳಾಗಬಹುದು ಎಂದು ತಿಳಿದ ಜಾಣೆ, ಇಡೀ ಸಂದರ್ಭವನ್ನು ತನಗೆ ಬೇಕಾದಂತೆ ತಿರುಗಿಸಿಕೊಂಡು, ಅಕ್ಕನ ಮನೆಯಲ್ಲಿ ತಾವೆಲ್ಲಾ ಇರುವುದು ಅಕ್ಕನಿಗಾಗಿ ಎಂದು ಇಡೀ ಜಗವನ್ನೂ ಕಡೆಗೆ ಅಕ್ಕನನ್ನೂ ನಂಬಿಸಿ ಬಾಯಿ ಮುಚ್ಚಿಸಬಲ್ಲ ಚತುರೆ.
ಹೀಗಿರುವಾಗ ಅಕಸ್ಮಾತ್ತಾಗಿ ಅಖಿಲಾ ತನ್ನ ಹಳೆಯ ಗೆಳತಿಯೊಬ್ಬಳನ್ನು ಭೇಟಿಯಾಗುತ್ತಾಳೆ. ಅವಳ ಮಾತಿನಿಂದ ಪ್ರೇರೇಪಿತಳಾಗಿ ಇನ್ನಾದರೂ ತಾನು ಒಂಟಿಯಾಗಿ ಬದುಕನ್ನು ಬದುಕಬೇಕು, ಸಂಪೂರ್ಣವಾಗಿ ಬದುಕಬೇಕು ಎಂದುಕೊಳ್ಳುವಷ್ಟರಲ್ಲಿ ಮನೆಯಲ್ಲಿ ಎಲ್ಲರೂ ಎದುರು ತಿರುಗುತ್ತಾರೆ. ಆಗ ಆ ಕ್ಷಣದಲ್ಲಿ ಇವಳಿಗೆ ತಾನು ಈಗಾಗಲೇ ಒಂಟಿಯಾಗಿ ಬದುಕುತ್ತಿದ್ದೇನೆ ಎಂದು ಅರಿವಾಗುತ್ತದೆ. ಅದುವರೆಗೂ ಬೇರೆಯವರಿಗಾಗೇ ಕನಸು ಕಂಡ ಕಣ್ಣುಗಳಲ್ಲಿ ಈಗ ಅವಳದೇ ಒಂದು ಕನಸು ಕಣ್ಣು ಮಿಟುಕಿಸುತ್ತದೆ. ಯಾವುದೇ ನಿರ್ಧಾರಕ್ಕೆ ಬರುವ ಮೊದಲು ಸ್ವಲ್ಪ ಸಮಯ ಬೇಕು ಎಂದುಕೊಂಡು ಸ್ವಲ್ಪ ದಿನಗಳ ಮಟ್ಟಿಗೆ ಮೊದಲ ಬಾರಿ ಒಂಟಿಯಾಗಿ ಕನ್ಯಾಕುಮಾರಿಗೆ ಹೊರಡುವ ಈಕೆ ಟ್ರೇನಿನಲ್ಲಿ ಭೇಟಿಯಾದ ಆ ಐದು ಅಪರಿಚಿತ ಹೆಣ್ಣುಗಳೆದುರಲ್ಲಿ ತನ್ನ ಸಮಸ್ಯೆಯನ್ನಿಡುತ್ತಾಳೆ. ಹೆಣ್ಣು ಒಬ್ಬಳೇ ಬದುಕುವುದು ಸಾಧ್ಯವಾ, ಇದು ಅವಳ ಪ್ರಶ್ನೆ. ಇದಕ್ಕೆ ಉತ್ತರ ಹೇಳುತ್ತಾ ಹೇಳುತ್ತಾ ಅವರೆಲ್ಲರೂ ತಮ್ಮ ತಮ್ಮ ಬದುಕಿನ ಪ್ರಶ್ನೆ ಉತ್ತರಗಳನ್ನೂ ಬಿಡಿಸತೊಡಗುತ್ತಾರೆ. ಮದುವೆಯಾಗದೆ ಉಳಿದ ಹೆಣ್ಣು ತನ್ನ ಪ್ರಯಾಣಕ್ಕೆ ಕನ್ಯಾಕುಮಾರಿಯನ್ನೇ ಆರಿಸಿಕೊಳ್ಳುವುದೂ ಇಲ್ಲಿ ಸಾಂಕೇತಿಕವಾಗುತ್ತದೆ.
ಇಲ್ಲಿ ಎಲ್ಲರಿಗಿಂತ ಹಿರಿಯ ಹೆಣ್ಣು ಜಾನಕಿ. ಯಾವುದೇ ಹೆಣ್ಣು ಬಯಸಿ ಬೇಡುವಂತಹ ಗಂಡ, ಒಬ್ಬ ಮಗ. ಮಗ ಮದುವೆಯಾಗಿ ಬೇರೆ ಇದ್ದಾನೆ. ಗಂಡ ಮಗನ ಮುಂದೆ ಸಹ ಹೆಂಡತಿಯನ್ನು ಬಿಟ್ಟುಕೊಟ್ಟವನಲ್ಲ. ಆದರೆ ಅಂತಹ ಗಂಡನನ್ನು ಮನಸಾರ, ಮೈಯಾರ ಒಪ್ಪಿಕೊಳ್ಳಬೇಕಾದರೆ ಆಕೆಗೆ ನಡುವಯಸ್ಸು ದಾಟಿರುತ್ತದೆ. ಅದೊಂದು ಆಕೆಯ ಅರಿವಿಗೇ ಬಾರದ ಹಿಂಜರಿಕೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸಹ. ಅವಳನ್ನು ಕಾಡುವ ಆ ಫ್ರಿಜಿಡಿಟಿಯ ಭಾವ ಅವಳಿಗೆ ಮೊದ ಮೊದಲು ಅರಿವಿಗೆ ಬರುವುದೇ ಇಲ್ಲ. ಜೀವನದ ಕೊನೆಯ ಹಂತದಲ್ಲಿ ಒಮ್ಮೆ ಮಗ ತಾಯಿಯನ್ನು ಏನೋ ಅಂದಾಗ ಪತಿ ತನ್ನ ಪರವಾಗಿ ನಿಂತ ರೀತಿಗೆ, ಆ ಒಂದು ಕ್ಷಣಕ್ಕೆ ಅವಳನ್ನು ಕರಗಿಸುವ ಶಕ್ತಿ ಇರುತ್ತದೆ. ಆ ಘಳಿಗೆಯಲ್ಲಿ ಅವಳು ಒಬ್ಬ ಗಂಡಿನ ಜೊತೆ ತಾನು ಅಂತರ ಕಾಯ್ದು ಕೊಳ್ಳುತ್ತಿದ್ದೇನೆ ಎಂಬುದನ್ನು ಬಿಟ್ಟು ಗಂಡನನ್ನು ದೈಹಿಕವಾಗಿ, ಮಾನಸಿಕವಾಗಿ ತನ್ನವನನ್ನಾಗಿಸಿಕೊಳ್ಳುತ್ತಾಳೆ. ಆಗ ಅವಳಿಗೆ ಅನ್ನಿಸುತ್ತದೆ, ಹಾ ತಾನು ಗಂಡನನ್ನು ಬಿಟ್ಟು ಒಬ್ಬಳೇ ಇರಬಲ್ಲೆ, ಅದು ಕಷ್ಟವಲ್ಲಾ, ಆದರೆ ಹಾಗೆ ಇರುವ ಬದುಕು ಬದುಕಾಗಿರುವುದಿಲ್ಲ ಅಂತ. ಗಂಡ ಬೇಕಿರುವುದು ರಕ್ಷಣೆಗಲ್ಲ, ಸಾಕಲೂ ಅಲ್ಲ, ಸಾಂಗತ್ಯಕ್ಕೆ ಅಂತ.
ದಾಂಪತ್ಯಕ್ಕಿನ್ನೂ ಕಾಲಿಡದ ಆದರೆ ಬಾಲ್ಯ ಮತ್ತು ಕಿಶೋರಾವಸ್ಥೆಯ ಸ್ಥಿತ್ಯಂತರದಲ್ಲಿ ಒದ್ದಾಡುವ ಶೀಲಾ, ಆಗ ತಾನೆ ಒಂದು ಸಾವನ್ನು ನೋಡಿ ಬಂದಿದ್ದಾಳೆ. ಅವಳ ಅಜ್ಜಿಯ ಸಾವು. ಕ್ಯಾನ್ಸರ್ ಜೊತೆಗಿನ ಹೋರಾಟದಲ್ಲಿ ತನ್ನ ಹೆಣ್ತನದ ಭಾಗವನ್ನು ಕಳೆದುಕೊಂಡು, ಅದನ್ನು ಒಪ್ಪಿಕೊಳ್ಳದ ಅಜ್ಜಿಯ ಸಾವು. ಮರು ದಿನ ಆಪರೇಷನ್ ಗೇ ಹೋಗಬೇಕಾಗಿದ್ದರೂ, ಹಿಂದಿನ ದಿನ ತನ್ನ ಗಡ್ಡದ ಮೇಲೆ ಬೆಳೆದ ಒಂದೆರಡು ಕೂದಲನ್ನು ಕಿತ್ತು ಹಾಕಲು ಹೇಳುವ ಅದಮ್ಯ ಜೀವನ ಪ್ರೀತಿಯ ಅಜ್ಜಿ. ಇಲ್ಲಿ ಕಥೆ ಶೀಲಾಳದಲ್ಲ. ಹೆಣ್ಣು ಮೊದಲು ಒಪ್ಪಿಕೊಳ್ಳಬೇಕಾದ್ದು, ಸಂಭ್ರಮಿಸಬೇಕಾದ್ದು ತನ್ನ ಹೆಣ್ತನವನ್ನು, ಬದುಕನ್ನು ಎಂದು ಹೇಳುವ ಅಜ್ಜಿಯ ಜೀವನ ಪ್ರೀತಿಯ ಕಥೆ ಇದು.
ಇವರ ನಡುವೆಯೇ ಇನ್ನೊಬ್ಬ ಹೆಣ್ಣಿದ್ದಾಳೆ. ಮಾರ್ಗರೇಟ್, ಮಾರ್ಗರೇಟ್ ಶಾಂತಿ, ರಸಾಯನ ಶಾಸ್ತ್ರ ಕಲಿಸುವ ಟೀಚರ್. ಮದುವೆಯ ನಂತರ ತನ್ನೆಲ್ಲಾ ಮುಗ್ಧತೆಯನ್ನೂ ಕಳೆದುಕೊಂಡು, ತಣ್ಣನೆಯ ಕ್ರೌರ್ಯದ ಸ್ಯಾಡಿಸ್ಟ್ ಗಂಡನ ಕೈಯಲ್ಲಿ ನರಳಿದ ಹೆಣ್ಣು. ಅವಳ ಗಂಡ ಲೋಕದ ಕಣ್ಣಿಗೆ ಪರಮ ಸಂಭಾವಿತ, ಒಂದು ಪ್ರತಿಷ್ಠಿತ ಶಾಲೆಯ ಪ್ರಿನ್ಸಿಪಾಲ್, ಬೇರೆಯವರಿರಲಿ, ಕಡೆಗೆ ಇವಳ ಮನೆಯವರೇ ’ಅವರು ದೇವರಂತಹ ಮನುಷ್ಯ, ಏನೇ ಆಗಲಿ ಅವರನ್ನು ಮಾತ್ರ ನೋಯಿಸಬೇಡ’ ಎನ್ನುವಂತೆ ಮಾಡಬಲ್ಲ ನಿಪುಣ. ಆದರೆ ಎಂತಹ ನಟನೂ ರಾತ್ರಿ ಬಣ್ಣ ಅಳಿಸಲೇಬೇಕಲ್ಲ, ಹಾಗೆ ಬಣ್ಣ ಅಳಿಸಿದ ನಂತರದ ರಾಕ್ಷಸನನ್ನು ಕಂಡವಳು, ಅವನ ಜೊತೆಗೇ ಬದುಕಬೇಕಾದವಳು ಈ ಮಾರ್ಗರೇಟ್. ಹೆಂಡತಿಯ ಯೌವನದ ಎಳೆತನ ಹಾಳಾಗುತ್ತದೆ ಎಂದು ಮಗುವನ್ನು ಗರ್ಭಪಾತ ಮಾಡಿಸುವ, ಶಾಲೆಯ ಮಕ್ಕಳನ್ನು ಥಣ್ಣನೆಯ ಕ್ರೌರ್ಯದಿಂದ ಹಿಂಸಿಸುವ, ಹೆಂಡತಿಯ ಬದುಕನ್ನು ದನಿ ಎತ್ತರಿಸಿ ಬೈಯದೆಯೂ ನರಕವಾಗಿಸಿಬಿಡುವ ಗಂಡ. ತನಗೆ ಇವನಿಂದ ಯಾವ ರೀತಿಯಲ್ಲೂ ಬಿಡುಗಡೆ ಸಾಧ್ಯವೇ ಇಲ್ಲ ಎಂದು ಅರಿವಾದಾಗ ಈಕೆ ಸಮಸ್ಯೆಯನ್ನು ತನಗಾದಂತೆ ಪರಿಹರಿಸಿಕೊಳ್ಳುತ್ತಾಳೆ.
ಗಂಡನ ಅಹಂ ಇರುವುದೇ ಅವನ ನಿಲುವಿನಿಂದ ಎಂದು ತಿಳಿದುಕೊಳ್ಳುವ ಆಕೆ ಗಂಡನಿಗೆ ರುಚಿ ರುಚಿಯಾಗಿ ಅಡುಗೆ ಮಾಡಿ ಹಾಕುತ್ತಾ, ಹಾಕುತ್ತಾ ಮೊದಲು ಅವನ ದೇಹದ ನಿಲುವನ್ನು ಮತ್ತು ಆ ಮೂಲಕ ಅವನ ಅಹಂ ಅನ್ನು ಮುರಿಯುತ್ತಾಳೆ. ಗಂಡನ ತೂಕ ಏರಿದಂತೆಲ್ಲಾ ಅವನ ಅಹಂ ಮಂಕಾಗುತ್ತಾ ಹೋಗುತ್ತದೆ. ದನಿಯೇರಿಸದೇ ಹಿಂಸಿಸುವ ಗಂಡನನ್ನು ಎದುರುತ್ತರ ಹೇಳದೇ ನಿಯಂತ್ರಿಸುತ್ತಾಳೆ. ಗಂಡ ಜೊತೆಗಿದ್ದಾನೆ ಎಂದರೆ ಅದು ಎಲ್ಲಾ ಸಮಸ್ಯೆಗೂ ಪರಿಹಾರವಲ್ಲ, ಒಂಟಿಯಾಗಿರಲಿ ಅಥವಾ ಜೊತೆಯಲ್ಲಿರಲಿ ನಮ್ಮ ಹಿತವನ್ನು ನಾವು ಕಾಯ್ದುಕೊಳ್ಳಬೇಕು ಮತ್ತು ಪ್ರತಿಯೊಬ್ಬರೂ ಅದನ್ನು ಕಲಿಯಬೇಕು ಎನ್ನುವುದು ಜೀವನ ಅವಳಿಗೆ ಕಲಿಸಿದ ಪಾಠ.
ಇನ್ನು ಪ್ರಭಾದೇವಿ, ಮೇಲ್ವರ್ಗದ ಮಹಿಳೆ. ನೋಡಿದರೆ ಆತ್ಮವಿಶ್ವಾಸಕ್ಕೆ, ಸುಖೀ ಜೀವನಕ್ಕೆ ಆಕಾರ ಬಂದಂತೆ ಇರುವವಳು. ಆಭರಣ ವ್ಯಾಪಾರಿಗಳ ಮನೆತನಕ್ಕೆ ಸೇರಿದ, ಸುಖವಾಗಿ ಬೆಳೆದ, ಅಂತಹುದೇ ಮನೆಗೆ ಸೊಸೆಯಾಗಿ ಹೋದ ಪ್ರಭಾದೇವಿ ಅತ್ತೆ ಮಾವ, ಗಂಡ, ಮನೆ,ಸಮಾಜ ತನ್ನಿಂದ ನಿರೀಕ್ಷಿಸುವ ಎಲ್ಲವನ್ನೂ ತಲೆಯ ಮೇಲೆ ಸೆರಗಂತೆ ಹೊದ್ದವಳು, ಅಕಸ್ಮಾತ್ತಾಗಿ ಗಂಡನ ಜೊತೆಗೆ ವಿದೇಶಕ್ಕೆ ಹೋಗಬೇಕಾಗಿ ಬಂದಾಗ ಆ ಪಯಣ ಅವಳನ್ನು ತನ್ನ ರೆಕ್ಕೆ ಅಗಲಿಸಿ, ಆಕಾಶವನ್ನು ಅಳೆಯುವಂತೆ ಮಾಡುತ್ತದೆ. ಅಲ್ಲಿಂದ ಬಂದ ಪ್ರಭಾ ಹೊಸ ಅಲಂಕಾರ, ಹೊಸ ಉಡುಗೆಗಳ ಜೊತೆ, ಹೊಸ ಆತ್ಮ ವಿಶ್ವಾಸವನ್ನೂ ಹೊತ್ತುಕೊಂಡು ಬಂದಿರುತ್ತಾಳೆ. ಹಾಗೆ ಬಂದ ತನ್ನ ಸೌಂದರ್ಯವನ್ನು ಎಲ್ಲರೂ ಮೆಚ್ಚಬೇಕು, ಹೊಗಳಬೇಕು ಎಂದು ಆಕೆ ಮಾಡುವ ಬಾಲೀಶ ಪ್ರಯತ್ನದಲ್ಲಿ ಎಡವಟ್ಟಾಗಿ ಹೋಗುತ್ತದೆ.
ಇವಳ ಸಲಿಗೆಯನ್ನು ಈಕೆಯ ಪತಿಯ ಗೆಳೆಯ ಇವಳ ’ಬಾ’ ಎನ್ನುವ ಕರೆಯೆಂದು ಅರ್ಥೈಸಿಕೊಂಡು ಯಾರೂ ಇಲ್ಲದಾಗ ನೇರ ಮನೆಗೇ ಬಂದುಬಿಡುತ್ತಾನೆ. ಕಂಗಾಲಾಗಿ ಹೋಗುತ್ತಾಳೆ ಈಕೆ. ಆತ ಬಂದ ಎನ್ನುವುದಕ್ಕಿಂತ ಹೆಚ್ಚಾಗಿ, ಆತ ಹಾಗೆ ಬರುವ ಹಾಗೆ ತನ್ನ ನಡವಳಿಕೆ ಇತ್ತೆ ಎನ್ನುವ ಪ್ರಶ್ನೆ ಅವಳನ್ನು ಸಂಪೂರ್ಣವಾಗಿ ಕುಗ್ಗಿಸಿ ಹಾಕುತ್ತದೆ. ಮತ್ತೆ ಈಕೆ ತಲೆಯ ಮೇಲೆ ಮುಸುಗು ಹಾಕಿಕೊಳ್ಳುತ್ತಾಳೆ, ಒಳಕೋಣೆ ಸೇರಿ ಬಿಸಿಲನ್ನು ಮರೆಯುತ್ತಾಳೆ. ಹೀಗೆ ಇವಳಿಗೆ ಎರಡು ಮಕ್ಕಳಾಗುತ್ತವೆ, ಮಕ್ಕಳು ಬೆಳೆಯುತ್ತವೆ, ಗಂಡನಿಗೂ ಸಹ ತನ್ನ ಸಮ ಸಮ ಸೆಣೆಸುತ್ತಿದ್ದ ಹೆಂಡತಿ ಇವಳೇನಾ ಎನ್ನುವಂತೆ ಮೆತ್ತಗಾಗಿ, ವಿಧೇಯಳಾಗಿ ಬದಲಾಗಿಬಿಡುತ್ತಾಳೆ ಈಕೆ.
ಇಂತಹ ಈಕೆ ಒಮ್ಮೆ ಮಗನನ್ನು ಕರೆದುಕೊಂಡು ಬರಲು ಎಂದು ಕ್ಲಬ್ಬಿಗೆ ಹೋಗಿದ್ದಾಗ ಅಕಸ್ಮಾತ್ತಾಗಿ ಈಜು ಕೊಳದತ್ತ ಹೆಜ್ಜೆ ಹಾಕುತ್ತಾಳೆ. ಆ ಈಜುಕೊಳದ ನೀರು ಇವಳ ಒಳಗಡೆ ಏನನ್ನೋ ನಿದ್ದೆಯಿಂದ ಏಳಿಸುತ್ತದೆ. ತನಗೆ ತಾನೆ ಈಜು ಕಲಿಯಲೆಂದು ಹೊರಡುವ ಈಕೆ ಈಜುತ್ತಾ, ಈಜುತ್ತಾ ತನ್ನ ಆತ್ಮವಿಶ್ವಾಸವನ್ನು ಮರಳಿ ಪಡೆಯುತ್ತಾಳೆ. ಗಂಡನ ಆ ಗೆಳೆಯ ಹಾಗೆ ಬಿರು ಮಧ್ಯಾಹ್ನ ಬಾಗಿಲು ಬಡೆದದ್ದು ಅವನ ಅವಗುಣವೇ ಹೊರತು ಅದಕ್ಕೆ ತನ್ನ ನಡುವಳಿಕೆ ಕಾರಣವಲ್ಲ ಎನ್ನುವ ಸಾಕ್ಷಾತ್ಕಾರದೊಡನೆ ಅವಳೊಳಗಿನ ಅವಳ ಗಿಲ್ಟ್ ನಿಂದ ಅವಳಿಗೆ ಮುಕ್ತಿ ಸಿಗುತ್ತದೆ. ಹೆಣ್ಣಿಗೆ ತನ್ನ ಹೆಣ್ತನ ಹಕ್ಕೇ ಹೊರತು ಹೊರೆಯಲ್ಲ, ಜವಾಬ್ದಾರಿಯಲ್ಲ ಎನ್ನುವುದು ಅವಳು ಕಂಡುಕೊಂಡ ಸತ್ಯ.
ಇವರೆಲ್ಲರೂ ಜೀವನದಲ್ಲಿ, ಸಮಾಜದಲ್ಲಿ ಒಂದು ನೆಮ್ಮದಿಯ ವರ್ಗಕ್ಕೆ ಸೇರಿದವರು, ತಕ್ಕ ಮಟ್ಟಿಗೆ ಒಂದು ಸುರಕ್ಷತೆಯನ್ನು ಅನುಭವಿಸಿದವರು. ಆದರೆ ಅದೇ ಕೂಪೆಯಲ್ಲಿ ಇನ್ನೊಬ್ಬಳಿದ್ದಾಳೆ. ಮರಿಕೊಳಂತು. ನೋಡಿದ ತಕ್ಷಣ ಈಕೆ ತಮ್ಮ ಗುಂಪಿಗೆ ಸೇರಿದವಳಲ್ಲ ಅನ್ನಿಸುವ ಹಾಗೆ, ಒಂದು ಮಾತೇ ಆಗದ ಒಪ್ಪಂದದಂತೆ ತನ್ನ ಪಾಡಿಗೆ ತಾನು ಮೇಲಿನ ಸೀಟು ಹತ್ತಿ, ಮುದುರಿ ಮಲಗಿದವಳು. ಎಲ್ಲರೂ, ಒಬ್ಬೊಬ್ಬರಾಗಿ ಇಳಿದು ಹೋಗಿ, ಅಖಿಲಾ ಒಬ್ಬಳೇ ಉಳಿದಾಗ ನಿಧಾನವಾಗಿ ತನ್ನ ಕಥೆ ಹೇಳುತ್ತಾಳೆ. ಗಂಡಸಿನ ನೆರವಿಲ್ಲದೆ ತಾನು ಎದುರಿಸಿದ ಬದುಕನ್ನು ಕುರಿತು ಹೇಳುತ್ತಾಳೆ. ಆ ಬದುಕು ತನ್ನನ್ನು ಕಲ್ಲಾಗಿಸಿದ್ದನ್ನು ಹೇಳುತ್ತಾಳೆ.
ರೈತನೊಬ್ಬನ ಮಗಳಾದ ಮರಿಕೊಳಂತು, ಅಪ್ಪನ ಸಾವಿನ ನಂತರ ಊರ ಸಾಹುಕಾರರ ಮನೆಯಲ್ಲಿ ಕೆಲಸಕ್ಕೆ ಸೇರಬೇಕಾಗುತ್ತದೆ. ಸಾಹುಕಾರರ ಕಿರಿಯ ಸೊಸೆಯ ಕೈ ಆಳಾದ ಈಕೆಯನ್ನು ಆ ಸೊಸೆ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಆದರೆ ಈಕೆ ವಯಸ್ಸಿಗೆ ಬಂದಾಗ ಮನೆಯ ಗಂಡಸರ ಕಣ್ಣು ಈ ಕೆಲಸದ ಹುಡುಗಿಯ ಮೈಯನ್ನು ಅಳೆಯುವುದನ್ನು ನೋಡಿ ಇವಳನ್ನು ಬೇರೆ ಊರಿಗೆ ಡಾಕ್ಟರರ ಮನೆಗೆ ಕೆಲಸಕ್ಕೆ ಕಳುಹಿಸಿಕೊಡುತ್ತಾಳೆ. ಅಲ್ಲೇ ಈಕೆಗೆ ಆ ಇಬ್ಬರು ಲೇಡಿ ಡಾಕ್ಟರುಗಳ ನಡುವಿನ ಸಂಬಂಧದ ಸ್ವರೂಪ ನಿಧಾನವಾಗಿ ಅರ್ಥವಾಗತೊಡಗುತ್ತದೆ. ಅಲ್ಲಿ ಅವರು ಇವಳನ್ನು ನರ್ಸ್ ತರಬೇತಿಗೆ ಸೇರಿಸುವುದಾಗಿ ಸಹ ಹೇಳಿರುತ್ತಾರೆ. ಅಷ್ಟರಲ್ಲಿ ಊರಿನಲ್ಲಿ ತಾಯಿಗೆ ಹುಷಾರು ತಪ್ಪಿ, ಇವಳು ಊರಿಗೆ ಬರುತ್ತಾಳೆ. ಒಂದು ಸಂಕ್ರಾಂತಿ ಹಬ್ಬದ ದಿನ ಸಾಹುಕಾರರ ಹಿರಿಸೊಸೆಯ ತಮ್ಮ ಇವಳ ಮೇಲೆ ಅತ್ಯಾಚಾರ ಮಾಡುತ್ತಾನೆ. ಅತ್ಯಾಚಾರದ ಆಘಾತದಲ್ಲಿ ಪುಡಿಪುಡಿಯಾಗುವ ಈಕೆಗೆ ತಾನು ಅದೇ ಸ್ಥಿತಿಯಲ್ಲಿ ಹೋಗಿ, ಹತ್ತು ಜನರನ್ನು ಕೂರಿಸಿ ನ್ಯಾಯ ಕೇಳಬೇಕು ಎನ್ನುವುದು ತೋಚದೆ, ತತ್ತರಿಸಿ ಮನೆಗೆ ಬಂದು ಮೈ ತಿಕ್ಕಿ ತಿಕ್ಕಿ ಸ್ನಾನ ಮಾಡಿ ಕೊಳೆ ಹೋಯಿತು ಅಂದುಕೊಳ್ಳುತ್ತಾಳೆ. ಆದರೆ ಹಾಗಾಗುವುದಿಲ್ಲ, ಈಕೆ ಗರ್ಭಿಣಿ ಆಗುತ್ತಾಳೆ. ಸ್ವಂತ ತಾಯಿ ಸಹ ಇವಳ ನಿಜವನ್ನು ನಂಬುವುದಿಲ್ಲ.
ಮಗುವನ್ನು ತೆಗೆಸಲು ಎಂದು ದೊಡ್ಡಮ್ಮನ ಮನೆಗೆ ಹೋಗುವ ಈಕೆ ಅದಾಗದೆ, ಮಗುವನ್ನು ಹಡೆಯಲೇ ಬೇಕಾಗುತ್ತದೆ. ಮಗುವಿನೆಡೆಗೆ ಇವಳೆದೆಯಲ್ಲಿ ಹನಿ ತಾಯ್ತನವಿಲ್ಲ, ಆ ಮಗು ಇವಳಿಗೆ ಆ ಅತ್ಯಾಚಾರದ ನಿಶಾನಿ, ದೇಹದಲ್ಲಿ ಬೆಳೆದು, ಈಗ ಕಣ್ಣೆದುರಲ್ಲಿ ದಿನಾ ದಿನಾ ಬೆಳೆಯುವ ನಿಶಾನಿ. ಮಗುವಿನಿಂದ ದೂರ ಇರಬೇಕು ಎನ್ನುವ ಒಂದೇ ಹಠಕ್ಕೆ ಸಾಹುಕಾರರ ಹುಚ್ಚುಹೆಂಡತಿಯನ್ನು ನೋಡಿಕೊಳ್ಳುವ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಈ ಮಧ್ಯೆ ಸಾಹುಕಾರನ ಹೆಂಡತಿ ಸತ್ತು ಸಾಹುಕಾರನ ಸೊಸೆ ಮತ್ತು ಮಗ ಇಬ್ಬರೂ ಈಕೆಯನ್ನು ಬಳಸಿಕೊಳ್ಳುತ್ತಾರೆ. ಮತ್ತು ಈಕೆ ಒಂದು ಗೆರೆ ದಾಟಿದಳು ಅನ್ನಿಸಿದಾಗ ಮುಲಾಜಿಲ್ಲದೆ ಮನೆಯಿಂದ ಹೊರಗೆ ತಳ್ಳುತ್ತಾರೆ. ಮನೆಯಲ್ಲಿ ತಮ್ಮಂದಿರಿಗೆ ಈಕೆ ನಡತೆಗೆಟ್ಟ ಅಕ್ಕ. ಮಗನನ್ನು ಕರೆದುಕೊಂಡು ಈಕೆ ಮನೆ ಬಿಡುತ್ತಾಳೆ. ಯಾವುದೋ ಹಠಕ್ಕೆ ತನ್ನನ್ನು ಬಲಾತ್ಕಾರ ಮಾಡಿದವನ ಮಗ್ಗದಲ್ಲಿಯೆ ಮಗನನ್ನು ಕೆಲಸಕ್ಕೆ ಸೇರಿಸುತ್ತಾಳೆ. ಹೀಗೆ ಎಲ್ಲವನ್ನೂ ಎದುರಿಸುತ್ತಾ, ಯಾವುದಕ್ಕೂ ಕರಗದ ಕಲ್ಲಾದ ಈಕೆಗೆ ತಾನು ಎಷ್ಟೇ ದ್ವೇಷಿಸಿದರೂ ಮಗ ತನ್ನನ್ನು ಇನ್ನಿಲ್ಲದಂತೆ ಪ್ರೀತಿಸುತ್ತಾನೆ ಎನ್ನುವ ಸತ್ಯವನ್ನು ಎದುರಿಸಲಾಗುವುದಿಲ್ಲ. ಪುಟ್ಟ ಹುಡುಗನ ಆ ಸತ್ಯ ಇವಳನ್ನು ಕರಗಿಸುತ್ತದೆ, ಇವಳು ಮಗನನ್ನೂ, ಬದುಕನ್ನೂ ಒಪ್ಪಿಕೊಳ್ಳುತ್ತಾಳೆ. ಮರಿಕೊಳಂತು ಎಂದರೆ ಕನ್ನಡದಲ್ಲಿ ಮರುಗ. ಅಂದರೆ ಸ್ವಂತ ಅಸ್ತಿತ್ವವಿಲ್ಲದ, ಹೂವಿನ ಜೊತೆಗೆ ಮಾತ್ರ ಬದುಕುವ ಮರುಗ. ಇದುವರೆಗೂ ಆಕೆಯದು ಬರೀ ಕಡ ತಂದ ಬದುಕು, ಕಡ ತಂದ ಹೆಂಡತಿಯ ಪಾತ್ರ, ಕಡ ತಂದ ಪ್ರೇಮಿಯ ಪಾತ್ರ, ಕಡ ತಂದ ಮನೆವಾಳ್ತೆ, ಕಡತಂದ ತಾಯಿಯ ಪಾತ್ರ. ಮೊದಲ ಬಾರಿಗೆ ಆಕೆ ಇಡಿಯಾಗಿ, ಸಂಪೂರ್ಣವಾಗಿ ತಾಯಿಯಾಗಲು ಸಿದ್ಧಳಾಗುತ್ತಾಳೆ. ಮೊದಲ ಬಾರಿಗೆ ಇವಳಿಗೆ ಜೀವನದಲ್ಲಿ ಸಂಪೂರ್ಣವಾಗಿ ತನ್ನದು ಎನ್ನುವ ಒಂದು ಸಂಬಂಧ ಸಿಗುತ್ತದೆ. ಹೆಣ್ಣು ಖಂಡಿತಾ ಗಟ್ಟಿ, ಎಷ್ಟೋ ಸಲ ಗಂಡಿಗಿಂತಲೂ ಗಟ್ಟಿ. ಆದರೆ ಆ ಗಟ್ಟಿತನ ಗಂಧದ ಕೊರಡಿನಲ್ಲಿಯ ಗಂಧದಂತೆ, ತೇದ ಹೊರತು ಇರುವುದು ಗೊತ್ತಾಗುವುದಿಲ್ಲ. ಇದು ಜೀವನ ಮರಿಕೊಳಂತುವಿಗೆ ತೋರಿಸಿಕೊಟ್ಟ ಸತ್ಯ.
ಹೀಗೆ ಒಬ್ಬೊಬ್ಬರೂ ಹೆಣ್ಣು ಎದುರಿಸಬಹುದಾದ ಮನೆಯೊಳಗಿನ, ಹೊರಗಿನ, ಮನಸೊಳಗಿನ ಸವಾಲುಗಳ ಬಗ್ಗೆ ಹೇಳುತ್ತಾ ಹೋಗುತ್ತಾರೆ. ಅಖಿಲಾ ಎಲ್ಲವನ್ನೂ ಕೇಳುತ್ತಾಳೆ. ಅವಳ ಟ್ರೇನು ಕನ್ಯಾಕುಮಾರಿಯನ್ನು ತಲುಪುತ್ತದೆ.
ಸರಿ, ಇಲ್ಲಿಯವರೆಗೂ ಎಲ್ಲಾ ಸರಿ, ಈ ಎಲ್ಲಾ ಮಾತುಗಳನ್ನು ಕೇಳಿ ಅಖಿಲಾ ಬಿಡುಗಡೆಯ, ಮುಕ್ತಿಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಾಳೆ ಎಂದುಕೊಳ್ಳುವಾಗ ಕಾದಂಬರಿಗಾರ್ತಿ ಅನಿತಾ ನಾಯರ್ ನನ್ನ ಹೀರೋಯಿನ್ ಳನ್ನು ಸೋಲಿಸಿಬಿಡುತ್ತಾರೆ. ಹೌದು ಈ ಎಲ್ಲರ ಕಥೆಗಳನ್ನು ಕೇಳುವ, ಆ ಮೂಲಕ ಬದುಕಿನ ಹಲವು ಮುಖಗಳನ್ನೂ ತಿಳಿಯುವ ನನ್ನ ಅಖಿಲಾ ಇಲ್ಲಿ ತನ್ನ ವ್ಯಕ್ತಿತ್ವಕ್ಕೇ ಸರಿಹೊಂದದ ರೀತಿಯಲ್ಲಿ ನಡೆದು ನಿರಾಸೆಗೊಳಿಸಿಬಿಡುತ್ತಾಳೆ…
ಒಂದು ಹೋಟಲ್ ನಲ್ಲಿ ಉಳಿದು, ಬೀಚ್ ನಲ್ಲಿ ಓಡಾಡುವಾಗ ಅಖಿಲಾ ತನ್ನ ವಯಸ್ಸಿನ ಅರ್ಧದಷ್ಟು ವಯಸ್ಸಿನ ಹುಡುಗನನ್ನು ನೋಡುತ್ತಾಳೆ. ತಾನೆ ಕರೆದು ಮಾತನಾಡಿಸುತ್ತಾಳೆ. ತನ್ನ ಹೋಟೆಲ್ ಕೋಣೆಗೆ ಅಹ್ವಾನಿಸುತ್ತಾಳೆ. ಯಾವುದೇ ಪ್ರೀತಿಯ ಮಾತಾಡದೆ, ಯಾವುದೇ ನಾಳೆಯನ್ನು ನೆಚ್ಚದೆ ಅವನನ್ನು ಕೂಡುತ್ತಾಳೆ. ಇಲ್ಲ ಇಲ್ಲಿ ನಾನು ಜಡ್ಜ್ ಮೆಂಟ್ ಆಗುತ್ತಿಲ್ಲ, ನೈತಿಕ ಸವಾಲು ಸಹ ನನ್ನನ್ನು ಕಾಡುತ್ತಿಲ್ಲ. ಅಥವಾ ಅಖಿಲಾ ಯಾರನ್ನೇ ಇಷ್ಟಪಟ್ಟು ಅವರ ಜೊತೆ ಒಂದು ಸಂಬಂಧ ಬೆಳೆಸಿಕೊಂಡರೆ, ಯಾವುದೇ ಹೆಸರಿಲ್ಲದೆ ತನ್ನ ಬದುಕನ್ನು ಹಂಚಿಕೊಂಡರೆ ಅದು ಸಂಪೂರ್ಣವಾಗಿ ಆಕೆಯ ವೈಯಕ್ತಿಕ ವಿಷಯ. ಆದರೆ ನನ್ನನ್ನು ಇಲ್ಲಿ ಕಾಡಿದ್ದು, ಆಕೆ ತನ್ನ ವಯಸ್ಸಿನ ಅರ್ಧ ವಯಸ್ಸಿನ ಹುಡುಗನನ್ನು ತನ್ನ ಬಿಡುಗಡೆಗೆ ’ಬಳಸಿಕೊಂಡಿದ್ದು’ ಎಷ್ಟು ಸರಿ? ಒಬ್ಬ ಗಂಡು ಈ ಕೆಲಸ ಮಾಡಿದರೆ ಇದು ಶೋಷಣೆ ಆಗುವಾಗ ಒಂದು ಹೆಣ್ಣು ಈ ಕೆಲಸ ಮಾಡಿದ ಮಾತ್ರಕ್ಕೆ ಇದು ಶೋಷಣೆ ಅಲ್ಲವಾ? ಮಲಗಿ ಎದ್ದು ಅವನಿಗೊಂದು ಮಾತೂ ಹೇಳದೆ ಊರು ಬಿಟ್ಟು ಹೊರಡುವ ಆಕೆಯದು ಒಂದು ಕ್ರೌರ್ಯ ಅಲ್ಲ ಅಂತೀರಾ? ಮತ್ತೆ ಜೀವನದಲ್ಲಿ ಆ ಹುಡುಗ ಯಾರಾದರೂ ಹೆಂಗಸನ್ನು ನಂಬಬಲ್ಲನಾ, ಗೌರವಿಸಬಲ್ಲನಾ?
ಅದಕ್ಕಿಂತಲೂ ಮುಖ್ಯವಾದ ನನ್ನ ಪ್ರಶ್ನೆ ಎಂದರೆ ಬಿಡುಗಡೆಗಾಗಿ, ಮುಕ್ತಿಗಾಗಿ, ತನ್ನನ್ನು ತಾನು ಕಂಡುಕೊಳ್ಳುವುದಕ್ಕಾಗಿ ಹೊರಡುವ ಈಕೆ ಒಂದು ಗಂಡಿನ ದೇಹದ ಜೊತೆಗೆ ದೇಹವನ್ನು ಹಂಚಿಕೊಳ್ಳುವುದರಿಂದ ಹಾಗೆ ಬಿಡುಗಡೆ ಪಡೆಯುತ್ತಾಳಾ? ಅದು ನಿಜವಾಗಿಯೂ ಬಿಡುಗಡೆಯೇ? ಹಾಗಾದರೆ ಇಷ್ಟು ವರ್ಷಗಳ ಇವಳ ಒಂಟಿ ಜೀವನದ ಹುಡುಕಾಟ ಕೇವಲ ದೇಹಕೇಂದ್ರಿತವೇ? ತನಗಿಂತ ಚಿಕ್ಕ ಹುಡುಗ ಮದುವೆಯಾಗುವೆ ಎಂದಾಗ, ಅವನಿಗಿಂತ ಮೊದಲೇ ತನಗೆ ವಯಸ್ಸಾಗಿಬಿಡುತ್ತದೆ, ಅವನ ಈ ಪ್ರೇಮ ಆಮೇಲೆ ಪಶ್ಚಾತ್ತಾಪವಾಗಬಾರದು ಎಂದು ಅವನನ್ನು ನಿರಾಕರಿಸುವ ಈಕೆ ಯಾವುದೇ ಗಿಲ್ಟ್ ಇಲ್ಲದೆ ಒಬ್ಬ ಹುಡಗನೊಡನೆ ಕೂಡಿ, ಅವನ ಮನಸ್ಸಿನ ಸ್ಥಿತಿಯ ಬಗ್ಗೆ ಒಂದಿಷ್ಟೂ ಯೋಚಿಸದೆ ನಿರಾಳವಾಗಿ ಬರಬಲ್ಲಳು ಎನ್ನುವುದನ್ನು ಯಾಕೋ ನನಗೆ ಒಪ್ಪಿಕೊಳ್ಳಲಾಗಲಿಲ್ಲ. ಹಾಗಾದರೆ ಇವಳ ಬಿಡುಗಡೆ ಇದ್ದದ್ದು ಕೇವಲ ಇವಳ ದೈಹಿಕ ಒಂಟಿತನದಲ್ಲಿಯೇ? ನದಿಯ ಪಯಣದ ಗುರಿ ಕಡಲು ಇರಬಹುದು, ಆದರೆ ನದಿಗೆ ಸಾರ್ಥಕ್ಯ ಅದು ತನ್ನ ನದಿತನವನ್ನು ಉಳಿಸಿಕೊಂಡಾಗ ಅಲ್ಲವೇ? ಪುಸ್ತಕ ಮುಗಿಸಿದ ನನ್ನ ಮನದಲ್ಲಿ ಬರೀ ಪ್ರಶ್ನೆಗಳು.
ಯಾವುದು ಏನೇ ಆಗಲಿ ಅನಿತಾ ನಾಯರ್ ಇದನ್ನು ಹೆಣೆದ ರೀತಿ ನನಗೆ ತುಂಬಾ ಮೆಚ್ಚುಗೆಯಾಯಿತು. ಹೆಣ್ಣು ಎದುರಿಸುವ ಮಾನಸಿಕ, ದೈಹಿಕ, ಸಾಮಾಜಿಕ ಸವಾಲುಗಳನ್ನು ಆಕೆ ಸ್ಪರ್ಷಿಸಿದ ಮತ್ತು ಅವೆಲ್ಲವನ್ನೂ ಕೊಂಡಿಯಾಗಿಸಿದ ಧಾಟಿ ಮನಸ್ಸನ್ನು ಮುಟ್ಟಿತು.
ಅದಕ್ಕಿಂತ ಹೆಚ್ಚಿಗೆ ನನ್ನನ್ನು ಕಲಕಿದ್ದು ಕಥೆಯಲ್ಲಿ ಪ್ರಭಾದೇವಿ ತನ್ನನ್ನು ತಾನು ಕೇಳಿಕೊಳ್ಳುವ, ತನ್ನ ಮಗಳನ್ನು ಕಲ್ಪಿಸಿಕೊಂಡು ಕೇಳುವ ಒಂದು ಪ್ರಶ್ನೆ, ಬಹುಶಃ ಅದು ಈ ಸಂಕ್ರಮಣ ಕಾಲಮಾನದ ಎಲ್ಲಾ ಹೆಣ್ಣುಗಳನ್ನೂ ಕಾಡುವ ಪ್ರಶ್ನೆಯೇ.
’ಮಗಳೇ ಮದುವೆಯ ನಂತರ ನಿನ್ನನ್ನು ನೀನು ಮುಗ್ಧೆ, ಏನೂ ಅರಿಯದವಳು ಎನ್ನುವಂತೆ ಬಿಂಬಿಸಿಕೋ. ಅದು ನಿನ್ನ ಗಂಡನ ’ಗಂಡಸುತನ’ವನ್ನು ಉದ್ದೀಪಿಸುತ್ತದೆ. ಆತ ನಿನ್ನನ್ನು ಸಂರಕ್ಷಿಸುತ್ತಾನೆ, ಕೈ ಹಿಡಿದು ರಸ್ತೆ ದಾಟಿಸುತ್ತಾನೆ, ಆದರೆ ಸ್ವಲ್ಪವೇ ದಿನ, ಆಮೇಲೆ ನಿನ್ನ ಪ್ರತಿ ಹೆಜ್ಜೆಯನ್ನೂ ನಿಯಂತ್ರಿಸುವ ಮಾಲೀಕನಾಗಿಬಿಡುತ್ತಾನೆ.
ಅದೇ ನೀನು ಸ್ವಾವಲಂಬಿ ಎಂದು ತೋರಿಸಿಕೋ, ನಡೆದುಕೋ, ಆತ ಅದಕ್ಕೂ ಹೊಂದಿಕೊಳ್ಳಬಹುದು, ನಿನ್ನನ್ನು ಹಾಗೆ ಒಪ್ಪಿಕೊಳ್ಳಬಹುದು, ಮನೆಯ ಜವಾಬ್ದಾರಿಯನ್ನೂ ನಿನ್ನೊಂದಿಗೆ ಹಂಚಿಕೊಳ್ಳಬಹುದು. ಆದರೆ ನಿನಗೂ ಒಂದು ತೋಳಿನ ಆಸರೆ ಬೇಕು, ಪ್ರೀತಿಯ ಮಾತುಗಳು ಬೇಕು ಎನ್ನುವುದನ್ನು ಮರೆತೇ ಬಿಡುತ್ತಾನೆ. ಇವೆಲ್ಲವನ್ನೂ ಮೀರಿದ, ಎರಡನ್ನೂ ಹೊಂದಿಸಿಕೊಂಡು ನಡೆಯುವ ನಡುವಳಿಕೆಯನ್ನು ನನ್ನಮ್ಮ ನನಗೆ ಕಲಿಸಲಿಲ್ಲ ಮಗಳೆ.  ಅದನ್ನು ಕಲಿತ ದಿನ ನಾನು ನಿನಗೆ ಹೇಳುತ್ತೇನೆ’..
ಯಾಕೆ ಈ ಪ್ರಭಾದೇವಿ ಹೀಗೆ ನಮ್ಮೆಲ್ಲರ ಮಾತುಗಳನ್ನು ಆಡಿಬಿಡುತ್ತಾಳೆ??

‍ಲೇಖಕರು avadhi

May 29, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

22 ಪ್ರತಿಕ್ರಿಯೆಗಳು

  1. sunil

    Pustakave odida haagaaytu…a deep read.
    Nannalloo halavaaru prashnegalu eddive.
    Bahusha ee sookshma sambandha mattu baduku eradakku siddha uttaragalanna hudukodu beda endu…prashnegalannu mounavaagisuttene.

    ಪ್ರತಿಕ್ರಿಯೆ
  2. usha phatak

    ಸಂಧ್ಯಾ ಅವರಿಗ ಸ್ನೇಹ ಪೂರ್ವಕ ನಮಸ್ಕಾರ..
    ನಾನು ಅನಿತಾ ನಾಯರ್ ಅವರ ಪುಸ್ತಕ ಓದಿಲ್ಲ. ಅದರ ಆಂತರ್ಯವನ್ನು ನಿಮ್ಮ ಲೇಖನದಿಂದ ಅರಿತುಕೊಂಡೆ. ಅಖಿಲಾಂಡೇಶ್ವರಿ ಈ ಬೆಳಗಿನಿಂದ ನನ್ನನ್ನೂ ಕಾಡುತ್ತಿದ್ದಾಳೆ.
    ಅಖಿಲೆ ಸಮಾನ್ಯ ಎಲ್ಲ ಹೆಂಗಳೆಯರಂತೆ ಸಮಾಜಮುಖಿ.. ನಿಂದಿತೆಯಾಗಿ ಬದುಕು ಬಾಳುವ ಧೈರ್ಯವಿಲ್ಲದ್ದರಿಂದಲೇ ಲೆಕ್ಕಕ್ಕೆ ಮೀರಿ ತ್ಯಾಗ ಮಾಡುತ್ತಾಳೆ. ಒಂದು ಹಂತದಲ್ಲಿ ತಾನೂ
    ಮದುವೆಯಾಗಿ ಸಮಾಜ ಒಪ್ಪಿಕೊಂಡ ಪರಿಪೂರ್ಣ ಹೆಣ್ತನವನ್ನು ಸಹಜವಾಗಿ ಅನುಭವಿಸುವ ಮನಸ್ಸಾದದ್ದು ನಿಜ. ತನ್ನ ಪಾಲಿನ ಕರ್ತವ್ಯವನ್ನು ಸಮರ್ಥವಾಗಿ ಪಾಲಿಸಿದ
    ನಂತರವೂ ಮನೆಯವರ ಸ್ವಾರ್ಥಪರತೆ ಅಡ್ಡಗಾಲಾಗಿ ಅವಳು ಸಹಜವಾಗಿರಲು ಸಾಧ್ಯವಾಗಲೇಇಲ್ಲ. ಒದಗಿಬಾರದ ಅವಕಾಶವನ್ನು ಪಡೆಯುವ ಸುಪ್ತ ಕಾಮನೆ ಅವಳ ಮನದಲ್ಲೆಲ್ಲೋ
    ಜಾಗೃತವಾಗಿತ್ತು. ಇಂತಹ ಅನುಭವಕ್ಕೆ ಒಗ್ಗಿಕೊಂಡಿರದ ಮನಸ್ಸು ಥಟಕ್ಕನೆ ಚಿಕ್ಕ ವಯಸ್ಸಿನವನೊಡನೆ ಕೂಡುವುದು ಅಸಹಜ. ಹಾಗೆ ಅನ್ನಿಸಿದರೂ,
    1. ಮಹಿಳಾ ಸಹಪ್ರಯಾಣಿಕರ ಕಥೆಗಳು ತನ್ನದಕ್ಕಿಂತ ಭಿನ್ನ ಎಂದು ಅನ್ನಿಸದಿರುವುದೂ,
    2. ಅವೇ ಕಥೆಗಳು ತನ್ನಂತೆ ಅನೇಕರಿರುವ ಸತ್ಯವನ್ನು ತೆರೆದಿಡುವುದೂ, ಒಂದು ಸಮಾಧಾನ ಧೈರ್ಯಗಳನ್ನು ತಂದುಕೊಡುವುದೂ,
    3. ತನ್ನ ಪರಿಸರದ ತನ್ನ ವಯಸ್ಸಿನ ಹೆಂಗಸಿಗೆ ಇಂತಹ ಒಂದು ವಿಲಕ್ಷಣ ಕೇಳಿಯನ್ನು ಬಿಟ್ಟು ಸುರಕ್ಷಿತ ಮದುವೆ (?) ಆಗುಹೋಗುವುದಲ್ಲ ಎಂಬ ಹತಾಶ ಭಾವ ಪ್ರಧಾನವಾಗಿರುವುದೂ
    4. ಹೆಣ್ಣಿಗೆ ತನ್ನ ಹೆಣ್ತನ ಹಕ್ಕೇ ಹೊರತು ಹೊರೆಯಲ್ಲ, ಜವಾಬ್ದಾರಿಯಲ್ಲ ಎಂಬ ಪರಿಜ್ಞಾನೋದಯವಾಗುವುದೂ
    5. ತನ್ನದಲ್ಲದ ಊರಿನಲ್ಲಿ ತಾನು ಹೇಗಿದ್ದರೂ ಯಾರೂ ಗುರುತಿಸಲಾರರು ಎಂಬ ಕ್ಷೇಮ ಭಾವ,
    6. ಜತೆಗೆ ದೊರೆತ ಅವಕಾಶವನ್ನು ಅಪರೂಪದ ಮನಸ್ಥಿತಿಯನ್ನೂ ಉಪಯೋಗಿಸಿಕೊಳ್ಳುವ ಜಾಣ್ಮೆ ತಡವಾಗಿಯಾದರೂ ಕಾಣಿಸಿಕೊಂಡಿರುವುದೂ,
    ಅವಳು ಅಂತಹ ಹೆಜ್ಜೆಯನ್ನು ಇಟ್ಟಿರಲು ಕಾರಣವಾಗಿರಬಹುದೇ..? ಆ ಅಖಿಲಾಂಡೇಶ್ವರಿಯೇ ಬಲ್ಲಳು!!!!
    ಮನಸ್ಸೆಂಬುದು ಒಂದು ಅದ್ಭುತ ರಹಸ್ಯ. ಯಾರಿಗೆ ಯಾವಾಗ ಹೇಗೆ ಏನೆಲ್ಲ ಪ್ರೇರೇಪಿಸುವುದೋ !!!
    ತಮ್ಮ ಅಭಿಮಾನಿ
    ಉಷಾ ಫಾಟಕ್

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಉಷಾ, ನಿಮ್ಮ ಉತ್ತರಕ್ಕೆ ಧನ್ಯವಾದಗಳು. ನೀವಂದದ್ದು ನಿಜ. ನೀವಂದಂತೆ ಅಖಿಲಾಗೆ ಅವೆಲ್ಲಾ ಕಾರಣಗಳಿದ್ದಿರಬಹುದು, ಅಥವಾ ಕಾರಣಗಳೇ ಇಲ್ಲದೆ ಅದು ಆ ಕ್ಷಣದ ಬಿಡುಗಡೆಯ ಭಾವ ಸಹ ಆಗಿರಬಹುದು, ಸರಿಯಲ್ಲ ಎನ್ನಲು ನಾವು ಯಾರು? ಆದರೆ ಅಷ್ಟು ಹೊತ್ತು ಆಕೆಯ ಜೊತೆಗಿದ್ದ ನನ್ನ ಮನಸ್ಸು ಆ ಘಟನೆಯ ನಂತರ ಅವಳ ಜೊತೆ ಊರಿಗೆ ಹಿಂದಿರುಗದೆ ಕನ್ಯಾಕುಮಾರಿಯಲ್ಲೇ ನಿಂತುಬಿಟ್ಟಿತ್ತು. ಆಕೆಯ ಬಿಡುಗಡೆ ಆಯಿತು ನಿಜ, ಆದರೆ ಆ ಸಂಕಲೆಯ ಭಾರ ಇನ್ನು ಆ ಹುಡುಗನ ಕೈಗಳಿಗೆ ಬಿದ್ದರೆ ಅನ್ನುವ ಯೋಚನೆಯಲ್ಲಿದ್ದೆ ನಾನು.. ನಿಮ್ಮ ಪ್ರೀತಿ ಹೀಗೆ ಇರಲಿ ಉಷಾ, ನಿಮ್ಮ ಪ್ರತಿಕ್ರಿಯೆಗಳಿಗಾಗಿ ಕಾಯುತ್ತೇನೆ.

      ಪ್ರತಿಕ್ರಿಯೆ
  3. Sandhya, Secunderabad

    Madam,
    Ee kshana aa pustaka odibidabeku annuvashtu chennagi barediddira.
    Thanks for introducing that book thro’ this column.

    ಪ್ರತಿಕ್ರಿಯೆ
  4. ಹನುಮಂತ ಹಾಲಿಗೇರಿ

    ಈಕೆ ಹೆಂಡತಿಯಾಗದೆ, ಪ್ರೇಮಿಯಾಗದೆ, ಅಮ್ಮನಾಗದೆ ಮನೆಗೆ ಅಪ್ಪನಾಗಿ ಉಳಿದುಬಿಡುತ್ತಾಳೆ.ತಲ್ಲಣದ ಸಾಲು

    ಪ್ರತಿಕ್ರಿಯೆ
  5. Raghunandan K

    ಓದಿದ ಪುಸ್ತಕವೊಂದನ್ನ ತುಂಬಾ ಸೊಗಸಾಗಿ ಆಪ್ತವಾಗುವಂತೆ ಓದಲೇಬೇಕೆನಿಸುವಂತೆ ಹಂಚಿಕೊಂಡಿದ್ದಕ್ಕೆ ಧನ್ಯವಾದ,
    ಗಂಡ ಬೇಕಿರುವುದು ರಕ್ಷಣೆಗಲ್ಲ, ಸಾಕಲೂ ಅಲ್ಲ, ಸಾಂಗತ್ಯಕ್ಕೆ.
    ಹೆಣ್ಣು ಮೊದಲು ಒಪ್ಪಿಕೊಳ್ಳಬೇಕಾದ್ದು, ಸಂಭ್ರಮಿಸಬೇಕಾದ್ದು ತನ್ನ ಹೆಣ್ತನವನ್ನು, ಬದುಕನ್ನು ಎಂದು ಹೇಳುವ ಅಜ್ಜಿಯ ಜೀವನ ಪ್ರೀತಿ
    ಹೆಣ್ಣಿಗೆ ತನ್ನ ಹೆಣ್ತನ ಹಕ್ಕೇ ಹೊರತು ಹೊರೆಯಲ್ಲ, ಜವಾಬ್ದಾರಿಯಲ್ಲ
    ಎನ್ನುವಂತಹ ಭಾವಗಳು ಕಾಡುತ್ತವೆ.

    ಪ್ರತಿಕ್ರಿಯೆ
  6. Chalam

    Nice….ಬಿಡಿ ನಿಮ್ಮನ್ನು ಎಷ್ಟು ಅಂತ ಹೊಗಳೋದು.ನಿಮ್ಮ ಆಯ್ಕೆ,ಅಭಿರುಚಿ ಹಾಗು ಅವನ್ನು ಎಲ್ಲರಿಗೂ ತಲುಪಿಸುವ ರೀತಿ ಅದ್ಬುತ.

    ಪ್ರತಿಕ್ರಿಯೆ
  7. malathi

    Hats off Sandhya!! very very well reviewed.
    Veda and Sandhya(secunderabad):will lend you that book. its a ‘must – read’
    🙂
    malathi S

    ಪ್ರತಿಕ್ರಿಯೆ
  8. ಸಂಧ್ಯಾರಾಣಿ

    ಅಂಕಣ ಓದಿ ಸ್ಪಂದಿಸಿದ ನಿಮಗೆಲ್ಲಾ ನನ್ನ ಧನ್ಯವಾದಗಳು 🙂

    ಪ್ರತಿಕ್ರಿಯೆ
  9. Rohith S H

    ಸಂಧ್ಯಾ ಮೇಡಂ,
    ಅದ್ಬುತವಾದ ಲೇಖನ. ನಿಮ್ಮಿಂದಾಗಿ ಒಂದೊಳ್ಳೆ ಪುಸ್ತಕದ ಪರಿಚಯವಾಯಿತು. ನಿಮ್ಮ ಅಭಿರುಚಿಗೆ ದೊಡ್ಡ ಸಲಾಮ್.
    ನಿಜ, ಲೇಖನದ ಕೊನೆಯಲ್ಲಿ ಬರುವ ಪ್ರಭಾದೇವಿಯ ಮಾತುಗಳು ಅನುಭವದ ಮಾತುಗಳು…
    ನನ್ನ ಅಕ್ಕನಿಗೆ, ತಂಗಿಗೆ ಹಾಗೂ ಗೆಳತಿಯರಿಗೆ ಈ ಪುಸ್ತಕವನ್ನು ಓದುವಂತೆ ಇಂದೇ ತಿಳಿಸುತ್ತೇನೆ

    ಪ್ರತಿಕ್ರಿಯೆ
  10. usha phatak

    ಸಂಧ್ಯಾರಾಣಿಯವರಿಗೆ,
    ನಿಮ್ಮಿಂದ ಸಿಕ್ಕ ಉತ್ತರಕ್ಕೆ ಧನ್ಯವಾದ. ಅವು ನನ್ನೊಳಗಿನ ಕೆಲವು ಪ್ರಶ್ನೆಗಳಾಗಿದ್ದುವಷ್ಟೆ. ನೀವೆಂದಂತೆ ಅದು ಆ ಕ್ಷಣದ ಬಿಡುಗಡೆಯೇ.. ಮುಂದೆ ಯಥಾಪ್ರಕಾರ ’ ಬೇಡಿ ’ !!!
    ನಿಜಕ್ಕೂ ಪುಸ್ತಕ ಓದಿದ ಅನುಭವ ಅಥವ ಅದಕ್ಕಿಂತ ಹೆಚ್ಚಿನದು ದೊರೆಯಿತೇನೋ.!!.
    ನಿಮ್ಮ ಮುಂದಿನ ಲೇಖನದ ನಿರೀಕ್ಷೆಯಲ್ಲಿ,
    ಉಷಾ ಫಾಟಕ್

    ಪ್ರತಿಕ್ರಿಯೆ
  11. malini guruprasanna

    Hennu bidugadeya bhrameyalli swechhege jaridala..? Idu nannannu bahuvaagi noyisida ending. Idara kuritaada nimmella prashnegaloo nannavoo howdu. original oduva kaaturavantoo idde ide. Thanks madam, nimma wonderful narrationgagi.

    ಪ್ರತಿಕ್ರಿಯೆ
  12. Rj

    Excellent work ಕಣ್ರೀ.ತುಂಬ ನಿಧಾನವಾಗಿ ಓದಲೇಬೇಕಾಗಿರುವ ಬರಹವಿದು.ತಡವಾಗಿ ಓದಿದ್ದಕ್ಕೆ ಕೊರಗಿಲ್ಲ ಬಿಡಿ.ಕಾದಂಬರಿಯ ಸೃಷ್ಟಿಕರ್ತೆ ಏನು ಬರೆದಿದ್ದಾಳೆ ಅನ್ನುವದು ನನಗಿಲ್ಲಿ ಮುಖ್ಯವಾಗಲೇ ಇಲ್ಲ.ಬಹುಶಃ ನಾನು ಆ ಕಾದಂಬರಿಯನ್ನೂ ಓದುವದಿಲ್ಲ.ಆದರೆ ಕತೆಯ ಒಳಗೆ ಒಂದು ಸುತ್ತು ಹಾಕಿ ಅದನ್ನು ಜತನದಿಂದ ಹೇಳುವದು ನಿಮಗೆ ಅತ್ಯಂತ ಪ್ರೀತಿಯ ಕೆಲಸ.ಅದಿಷ್ಟನ್ನೂ ತುಂಬ ಪ್ರೀತಿಯಿಂದ ಮಾಡಿದ್ದೀರಿ ಅಂತ ಹೇಳಬಲ್ಲೆ.
    Thank you so much for this,that and everything.. 🙂 Bingo!

    ಪ್ರತಿಕ್ರಿಯೆ
  13. Anuradha.B.Rao

    ಪುಸ್ತಕ ಓದಿರಲಿಲ್ಲ . ಆದರೆ ನಿಮ್ಮ ಲೇಖನದಲ್ಲಿ ಕಥೆ ಯ ಪಕ್ಷಿನೋಟದ ಜೊತೆಗೆ ವಿಮರ್ಶೆ ಎರಡೂ ಇದೆ .ಅಧ್ಭುತವಾದ ಲೇಖನ . ನನಗೆ ಚಲಂ ಅವರ ಅಭಿಪ್ರಾಯ ಇಷ್ಟವಾಯಿತು :)ಪುಸ್ತಕ ಓದಿದ ಮೇಲೆ ಮತ್ತೊಮ್ಮೆ ನಿಮ್ಮ ಲೇಖನ ಓದಬೇಕು . ಅಭಿನಂದನೆಗಳು ಸಂಧ್ಯಾ .

    ಪ್ರತಿಕ್ರಿಯೆ
  14. Hema Sadanand Amin /mumbai

    ಆಪ್ತ ಸಂಧ್ಯಾರವರೇ,
    ಹೆಣ್ಣಿನ ಭಾವನೆಗಳಿಗೆ ಇಂಚು ಇಂಚಾಗಿ ಸಮೀಕ್ಷೆಯ, ಮೂಲಕ ವಿಮರ್ಶೆಯ ಮೂಲಕ ಜಿವ ಕೊಟ್ಟಿಡ್ಡೀರಿ. ಇವೆಲ್ಲಕ್ಕೂ ಮಿಗಿಲಾಗಿ, ನಿಮ್ಮ ಪ್ರಶ್ನೆ ನೂರು ಪ್ರತಿಶತ ಸತ್ಯ. ಭಾವನೆಗೆ ಜಾತಿ, ಬಣ್ಣ ಗಂಡು, ಹೆಣ್ಣೆಂಬ ಭೇಧ ಇರುದಿಲ್ಲ.

    ಪ್ರತಿಕ್ರಿಯೆ
  15. Arathi ghatikar

    ನಿಜಕ್ಕೂ ಒಂದು ಮನ್ಸಿನ್ನಾಳಕಿಳಿಯುವ ವಿಮರ್ಶೆ . ಒಬ್ಬ ಹೆಣ್ಣು ಸಾಮಾಜಿಕ , ಆರ್ಥಿಕ , ದೈಹಿಕ ,ಮಾನಸಿಕ ಎಸ್ಟೊಂದು ಸಂಕೀರ್ಣ ಭಾವಗಳಲ್ಲಿ ಬಿಡುಗಡೆ ಹೊಂದುವ. ಕನಸು. ಕಾಣುತ್ತಾಳೆ ..ಅವಳ ತುಮುಲ ದ್ವಂದ್ವಗಳನ್ನು ಅರತೈಸಿಕೊಳ್ಳುವ ,ಆಪ್ತ ಮನಸುಗಳು ಅವಳ ಸುತ್ತ ಮುತ್ತ ಇವೆಯೇ ? ಎನ್ನುವ. ಪ್ರಶ್ನೆ ಆಗಾಗ ಕಾಡುತ್ತದೆ . ಆ ಪುಸ್ತಕದಲ್ಲಿ ಬರುವ. ಒಂದೊಂದು ಹೆಣ್ಣಿನ ಕಥೆಯನ್ನು , ಮನಸ್ಸಿನ ಪುಟಗಳನ್ನು ನಿಮ್ಮ ಮನತಟ್ಟುವ ವಿಮರ್ಶೆಯಿಂದ , ಮೌಲಿಕ ದೃಷ್ಟಿಕೋನದಿಂದ ಒಂದು ಹೊತ್ತಿಗೆಯನ್ನೇ ನಮ್ಮ ಮುಂದಿಟ್ಟಿದ್ದೀರಿ .. ಸಂದ್ಯಾ , ಮತ್ತೊಮ್ಮೆ ಓದಬೇಕೆನಿಸುವ ನಿಮ್ಮ. ವಿಚಾರ ಸರಣಿ ಗೆ ಅಭಿನಂದನೆಗಳು !

    ಪ್ರತಿಕ್ರಿಯೆ
  16. lakshmikanth itnal

    beautifully narrated inner state of souls. better than what Anita Nayar herself wanted to convey. Hats off Sandhya ji.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: