ಸಂಧ್ಯಾರಾಣಿ ಕಾಲಂ : ರಾಜ ರವಿವರ್ಮನ ಕಲೆಯೂ, ಬಂದೇ ನವಾಜನ ಅಂಗಳದ ಕಿನ್ನರಿಯರೂ..


ಇಲ್ಲ ಯಾವ ಕಡೆಯಿಂಡ ನೋಡಿದರೂ ಈ ಎರಡೂ ಹೆಸರುಗಳಿಗೆ ಒಂದು ಸಾಮಾನ್ಯ ಕೊಂಡಿ ಕಲ್ಪಿಸುವುದು ಕಷ್ಟ. ಆದರೆ ನನಗೆ ಇಬ್ಬರನ್ನೂ ಬಂಧಿಸುವ ಮತ್ತು ಇಬ್ಬರಿಗೂ ನನ್ನನ್ನು ಬಂಧಿಸುವ ಕೊಂಡಿ ಒಂದು ಸಿಕ್ಕಿತ್ತು.
ಮೊದಲು ನೋಡಿದ್ದು ರಾಜ ರವಿವರ್ಮನ ಕುರಿತಾದ ಕೇತನ್ ಮೆಹ್ತಾ ನಿರ್ದೇಶನದ ಚಿತ್ರ ’ರಂಗ್ ರಸಿಯಾ’. ರಾಜಾ ರವಿವರ್ಮನ ವ್ಯಕ್ತಿತ್ವವನ್ನು ರಣದೀಪ್ ಹೂಡ ಕ್ಯಾನ್ವಾಸಿನ ಚಿತ್ರದಂತೆ ಕಟ್ಟಿಕೊಟ್ಟಿದ್ದ. ಇಡೀ ಚಿತ್ರದ ಮುಖ್ಯಧಾತು ಅವನ ಅಭಿನಯ. ರವಿವರ್ಮನ ಪ್ರತಿಭೆ, ಅಹಂಕಾರ, ವಿಕ್ಷಿಪ್ತತೆ, ಭ್ರಮನಿರಸನ, ಅಸಹನೆ, ವ್ಯವಹಾರದ ಜಗತ್ತಿನಲ್ಲಿ ಸೋತು ನಿಲ್ಲುವ ಒಬ್ಬ ಅಪ್ಪಟ ಕಲಾವಿದನ ಹತಾಶೆ, ಲೋಲುಪತೆ, ರಸಿಕತೆ ಎಲ್ಲವೂ ಅವನಲ್ಲಿ ಒಡಮೂಡಿತ್ತು. ಗಂಡುಹೆಣ್ಣಿನ ನಡುವಿನ ಅನುಸಂಧಾನ ಅಸಭ್ಯವೆನಿಸದೆ ಶೃಂಗಾರವಾಗಿ ಕಾಣುವಂತೆ ಕೇತನ್ ಮೆಹತಾ ಕ್ಯಾಮೆರಾವನ್ನು ಅದ್ಭುತವಾಗಿ ಬಳಸಿದ್ದ. ಯಾವುದೇ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳದೆ ಹೋಗಿದ್ದರೂ, ಅತ್ಯುತ್ತಮ ಚಿತ್ರ ಎನ್ನಲಾಗದಿದ್ದರೂ ಕೆಲವು ಅತ್ಯುತ್ತಮ ಕ್ಷಣಗಳನ್ನು ಕಟ್ಟಿಕೊಟ್ಟ ಚಿತ್ರ ಅದು.
ಚಿತ್ರದ ಹಂದರ ಹೀಗಿದೆ. ಆತ ಒಬ್ಬ ಅಪ್ರತಿಮ ಚಿತ್ರಕಾರ. ಪುರಾಣದ ಯುಗವನ್ನು ತನ್ನ ಕಲೆಯ ಮೂಲಕ ಜನಸಾಮಾನ್ಯರ ಕಲ್ಪನೆಗೆ ಎಟುಕಿಸಿದವನು, ತನ್ನ ಕುಂಚದಿಂದ ಅವರ ಕಣ್ಣುಗಳಲ್ಲಿ ರಾಮಾಯಣ, ಮಹಾಭಾರತ, ಪುರಾಣದ ಕಥೆಗಳನ್ನು ಬರೆದವನು. ಕೇವಲ ಕೆಲವೇ ಮಂದಿಗೆ ಲಭ್ಯವಿದ್ದ ಕಲೆಯ ಸಂತಸವನ್ನೂ, ಅದು ತರುವ ಸಂಭ್ರಮವನ್ನೂ ಮನೆ ಮನೆಗಳಿಗೆ ತಂದುಕೊಟ್ಟವನು. ಅದ್ಭುತವಾದ ಕಲಾವಿದ, ತನ್ನ ಕಲೆಯ ಬಗ್ಗೆ ಕಲಾವಿದನಿಗೆ ಸಹಜವಾದ ಅಹಂಕಾರ ಹೊಂದಿದವ, ಹೊಸತಿಗೆ ತುಡಿಯುವವ, ಹೊಸ ಯೋಜನೆಗಳಿಗೆ ಮಿಡಿಯುವವ. ಭವಿಷ್ಯದ ಬಗ್ಗೆ ಒಂದು ದೂರದೃಷ್ಟಿ ಇರಿಸಿಕೊಂಡವ, ಒಂದು ಪ್ರಿಂಟಿಂಗ್ ಪ್ರೆಸ್ ಮಾಡಬಹುದಾದ ಕ್ರಾಂತಿಯನ್ನು ಮೊದಲೇ ಊಹಿಸಿ ಅದಕ್ಕಾಗಿ ಬಂಡವಾಳ ಹೊಂದಿಸುವ ಸಾಹಸಿ. ಆದರೆ ವ್ಯವಹಾರದ ಜಗತ್ತಿನ ಲಾಭ-ನಷ್ಟಗಳಾಚೆಗೆ ಮಾನವೀಯ ಮಿಡಿತಕ್ಕೆ ಕಿವಿಕೊಟ್ಟು, ನಷ್ಟ ಉಂಟುಮಾಡಿಕೊಳ್ಳುವ ಮುಗ್ಧ. ಹೆಣ್ಣಿನ ಬಗ್ಗೆ ಅಪಾರ ಮೋಹ ಇದ್ದರೂ, ಹೆಣ್ಣನ್ನು ಕೇವಲ ತನ್ನ ಕಲಾಸಾಧನೆಯ ಹಾದಿಗಳಲ್ಲಿ ಒಂದು ವಾಹಕ, ತನ್ನ ಕ್ಯಾನವಾಸಿನ ಬಣ್ಣಗಳಲ್ಲಿ ಒಂದು ಬಣ್ಣ ಎಂದು ಮಾತ್ರ ತಿಳಿದವ. ಅದರಾಚೆಗೆ ಅವಳನ್ನು ಒಂದು ವ್ಯಕ್ತಿಯಾಗಿ ನೋಡಲಾರದವ. ಪ್ರತಿಭೆ, ಅಹಂಕಾರ, ಸಿಟ್ಟು, ಉಡಾಫೆ, ಆತ್ಮ ವಿಶ್ವಾಸ, ತನ್ನ ಪ್ರತಿಭೆಯ ಕಾರಣಕ್ಕೆ ತಾನು ನಿಯಮಾತೀತ ಎನ್ನುವ ಹಮ್ಮು ಎಲ್ಲಾ ಇದೆ. ಅವನೊಂದು ಎಲ್ಲಾ ರಂಗುಗಳನ್ನೂ ಎರಕ ಹೊಯ್ದ ಚಿತ್ರ.
ಕೇರಳದ ತಿರುವಂಕೂರಿನಲ್ಲಿ ಹುಟ್ಟಿದರೂ ಇಡೀ ಭಾರತವನ್ನೇ ತನ್ನ ಕ್ಯಾನವಾಸ್ ಆಗಿಸಿಕೊಂಡವನು. ಅಷ್ಟೇ ಅಲ್ಲ ಭಾರತದ ಚಲನಚಿತ್ರಗಳ ಜನಕ ಎಂದೇ ಕರೆಯುವ ದಾದಾ ಸಾಹೇಬ್ ಫಾಲ್ಕೆ ಚಲನ ಚಿತ್ರಗಳನ್ನು ನಿರ್ಮಿಸಲು ತನ್ನ ಕೈಲಾದ ಸಹಾಯ ಮಾಡಿದವನು. ತಿರುವಂಕೂರಿನ ದೊರೆ ಈತನ ಕಲೆಯನ್ನು ಮೆಚ್ಚಿ ಈತನಿಗೆ ’ರಾಜ’ ಎಂದು ಬಿರುದನ್ನಿತ್ತಿದ್ದನು. ಬರೋಡದ ಮಹಾರಾಜ ಇವನ ಕೈಗಳಲ್ಲಿನ ಮಾಂತ್ರಿಕತೆಗೆ ಮನಸ್ಸೋತು ಬೇಕಾದ ಹಣಸಹಾಯ ಮಾಡುವೆ, ವಿದೇಶಕ್ಕೆ ಹೋಗಿ ಅಲ್ಲಿನ ಸುಂದರ ದೃಶ್ಯಗಳ ಚಿತ್ರ ಬರೆದು ತಂದು ನನ್ನ ಅರಮನೆ ಸಿಂಗರಿಸು ಎಂದು ಹೇಳಿದಾಗ, ಇಲ್ಲ ನಾನು ಅಲ್ಲಿನ ಚಿತ್ರಗಳನ್ನು ಇಲ್ಲಿ ತೋರಿಸುವ ಬದಲು ನಮ್ಮ ಪುರಾಣದ ಚಿತ್ರಗಳನ್ನು ಅಲ್ಲಿನವರಿಗೆ ತೋರಿಸುತ್ತೇನೆ, ಅದಕ್ಕಾಗಿ ಈ ದೇಶದ ಮೂಲೆ ಮೂಲೆ ತಿರುಗುತ್ತೇನೆ ಎಂದವ, ನಾಡಿನ ಮೂಲೆ ಮೂಲೆ ಸುತ್ತಿ, ಭಾರತದ ಸಂಸ್ಕೃತಿಯ ತನ್ನ ಕಾಣ್ಕೆಯನ್ನು ದೇಶಕ್ಕೆ ಕಾಣಿಕೆಯಾಗಿ ಕೊಟ್ಟವ. ಇದು ಇಷ್ಟೇ ಆಗಿದ್ದರೆ ಆತ ದೇಶ ಕಂಡ ದೊಡ್ಡ ಕಲಾವಿದರಲ್ಲಿ ಒಬ್ಬನಾಗಿರುತ್ತಿದ್ದ, ಮತ್ತು ಆತನ ಜೀವನವನ್ನಾಧರಿಸಿದ ’ರಂಗ್ ರಸಿಯಾ’ ಚಿತ್ರ ಒಂದು ಸುಂದರ ಕಲಾಕೃತಿಯಂತಹ ಮತ್ತೊಂದು ಚಿತ್ರವಾಗುತ್ತಿತ್ತು ಅಷ್ಟೆ. ಆದರೆ ಅವೆಲ್ಲಕ್ಕೂ ಮೀರಿದ ಮಾನವೀಯ ಮುಖವೊಂದು ಚಿತ್ರಕ್ಕಿತ್ತು.
ಮೊದಲೇ ಹೇಳಿದ ಹಾಗೆ ಇವನು ತಿರುವಂಕೂರಿನ ಕಲಾವಿದ. ಅಲ್ಲಿನ ರಾಜ ಮನೆತನಕ್ಕೆ ಸೇರಿದ ಒಂದು ಹೆಣ್ಣನ್ನು ಮದುವೆಯಾಗಿರುತ್ತಾನೆ. ಮದುವೆಯ ನಂತರ ಹೆಂಡತಿಯ ಚಿತ್ರ ಬರೆಯ ಬೇಕೆಂದುಕೊಂಡವನನ್ನು ಆಕೆ, ಚಿತ್ರಬರೆಯುವುದು ರಾಜ ಮನೆತನದವರಿಗೆ ಶೋಭಿಸುವುದಿಲ್ಲ ಎಂದು ಅಪಹಾಸ್ಯ ಮಾಡಿಬಿಡುತ್ತಾಳೆ. ಹೆಂಡತಿ ಒಲ್ಲದ ಇವನ ಚಿತ್ರಕ್ಕೆ ವಸ್ತುವಾಗುವವಳು ಅರಮನೆಯಲ್ಲಿ ಕೆಲಸ ಮಾಡುವ ಒಬ್ಬ ದಲಿತ ಹೆಣ್ಣು. ಮುಟ್ಟಬಾರದವಳನ್ನು ಮುಟ್ಟಿ ಚಿತ್ರ ಬರೆಯುತ್ತಾನೆ ಎಂದು ಹೆಂಡತಿ ಸಿಟ್ಟಾಗುತ್ತಾಳೆ.
ಆಮೇಲೆ ಆತ ಬಾಂಬೆಗೆ ಬರುತ್ತಾನೆ. ಅಲ್ಲಿ ದೇವಸ್ಥಾನದಲ್ಲಿ ಒಂದು ಹೆಣ್ಣನ್ನು ನೋಡುವ ಆತ, ಅವಳಲ್ಲಿ ತನ್ನ ಚಿತ್ರಗಳ ಪ್ರೇರಕ ಶಕ್ತಿಯನ್ನು ನೋಡುತ್ತಾನೆ. ಆಕೆ ಸುಗಂಧ. ಅವಳನ್ನು ಮಾಡಲ್ ಆಗಿಟ್ಟುಕೊಂಡು ಚಿತ್ರ ಬರೆಯಬೇಕೆಂದುಕೊಂಡು ಅವಳನ್ನು ಒಪ್ಪಿಸುತ್ತಾನೆ. ಆಕೆ ಒಬ್ಬ ಸಿರಿವಂತನಿಗೆ ಸೇರಿದ ಹೆಣ್ಣು. ಆದರೆ ಅವಳ ಇಹಲೋಕದ ಯಾವ ಕಥೆಯೂ ಆತನಿಗೆ ಬೇಡ, ಅವನಿಗೆ ಆಕೆ ತನ್ನ ಕಲೆಯ ಒಂದು ಸಾಧನ ಮಾತ್ರ. ಆಕೆಯನ್ನಿಟ್ಟುಕೊಂಡು ಆತ ರಾಮಾಯಣ, ಮಹಾಭಾರತದ ಚಿತ್ರಗಳನ್ನು ಪುನಃ ಸೃಷ್ಟಿಸುತ್ತಾನೆ, ಅವಳನ್ನು ಲಕ್ಷ್ಮಿ, ಸರಸ್ವತಿ, ಶಾಕುಂತಲೆ, ದಮಯಂತಿಯನ್ನಾಗಿಸುತ್ತಾನೆ. ಒಂದೊಂದು ಚಿತ್ರ ಮುಗಿದ ಮೇಲೂ ಅವನದು ಕಲಾವಿದ ಅನುಭವಿಸುವ ಧನ್ಯತೆ ಮತ್ತು ನಿಜವಾದ ಕಲಾವಿದ ಅನುಭವಿಸುವ ಖಾಲಿ ಖಾಲಿಯಾದ ಚಡಪಡಿಕೆ. ಒಮ್ಮೆ ಹೀಗೆ ಖಾಲಿ ಹಾಳೆಯ ಮುಂದೆ ಖಾಲಿಯಾಗಿ ಕುಳಿತವನನ್ನು ಆಕೆ ಏನಾಯಿತೆಂದು ಕೇಳುತ್ತಾಳೆ. ರವಿವರ್ಮ ತನ್ನ ಕಲ್ಪನೆಯಲ್ಲಿದ್ದ ಚಿತ್ರದ ಬಗ್ಗೆ ಹೇಳುತ್ತಾ ಹೋಗುತ್ತಾನೆ. ಆತ ಹೇಳುವುದು ಊರ್ವಶಿ – ಪುರೂರವರ ಕಥೆ. ಅಪ್ಸರೆಯ ಚಿತ್ರ ಬರೆಯಲು ಯಾರೂ ಅರ್ಧ ವಸ್ತ್ರದಲ್ಲಿ ತನ್ನ ಮಾಡೆಲ್ ಆಗಲು ಒಪ್ಪುತ್ತಿಲ್ಲ ಎಂದಾಗ ತಾನೆ ಆ ಚಿತ್ರಕ್ಕೆ ಮಾಡೆಲ್ ಆಗಿ ನಿಲ್ಲುತ್ತಾಳೆ. ಮುಂದೆ ಅದೇ ಚಿತ್ರ ತನ್ನನ್ನು ಇಡೀ ಊರಿನಲ್ಲೇ ಬದ್ ನಾಮ್ ಮಾಡಬಹುದು ಎನ್ನುವುದರ ಅರಿವೇ ಇಲ್ಲದೆ ಆ ಚಿತ್ರಕ್ಕೆ ವಸ್ತುವಾಗುತ್ತಾಳೆ. ಸುಗಂಧಳನ್ನು ಆತ ಬಯಸುತ್ತಾನೆ, ಮೋಹಿಸುತ್ತಾನೆ, ಅರಾಧಿಸುತ್ತಾನೆ, ಅವಳ ದೇಹವನ್ನು ಕ್ಯಾನ್ ವಾಸ್ ಮಾಡಿಕೊಂಡು, ತನ್ನ ಪ್ರೀತಿಯನ್ನು ಬಣ್ಣವಾಗಿಸಿಕೊಂಡು ಅವಳನ್ನು ಪ್ರೀತಿ ಮಾಡುತ್ತಾನೆ. ಆದರೆ ಇವೆಲ್ಲದರಾಚೆ ಅವಳ ಪ್ರೇಮ, ಅವಳೆಡೆಗೆ ಇವನ ಮನಸ್ಸಿನಲ್ಲೇ ಸುಪ್ತವಾಗಿರುವ ಪ್ರೇಮ ಇವನಿಗೆ ಅರ್ಥವಾಗುವುದೇ ಇಲ್ಲ. ಅರ್ಥವಾಗುವಷ್ಟರಲ್ಲಿ ಕಾಲ ಮಿಂಚಿಹೋಗಿರುತ್ತದೆ.

ಇರಲಿ, ಕಥೆ ಮುಂದುವರೆದಂತೆಲ್ಲಾ ರವಿವರ್ಮ ಒಂದು ಎತ್ತರದಿಂದ ಇನ್ನೊಂದು ಎತ್ತರಕ್ಕೆ ಏರುತ್ತಾ ಹೋಗುತ್ತಾನೆ. ಬರೋಡದ ರಾಜನಿಗೆ ಮಾತು ಕೊಟ್ಟ ಹಾಗೆ ಚಿತ್ರಗಳನ್ನು ಬರೆಯುತ್ತಾ ಹೋಗುತ್ತಾನೆ. ಎಲ್ಲಾ ಆದ ಮೇಲೆ ರಾಜನಿಗೆ ಅದನ್ನು ಒಪ್ಪಿಸುವ ಮೊದಲು, ಸಾಹಸ ಮಾಡಿ ಸುಗಂಧಳನ್ನು ಕದ್ದು ಕರೆದುಕೊಂಡು ಬಂದು ಅವಳಿಗೆ ಚಿತ್ರಗಳನ್ನು ತೋರಿಸಿ ಮಗುವಿನಂತೆ ಸಂಭ್ರಮಿಸುತ್ತಾನೆ. ಆ ಚಿತ್ರಗಳನ್ನು ರಾಜನಿಗೆ ಒಪ್ಪಿಸುವ ಮುನ್ನ ಅವನದ್ದು ಒಂದೇ ಬೇಡಿಕೆ, ಈ ಚಿತ್ರಗಳನ್ನು ಸಾಮಾನ್ಯ ಜನರೂ ನೋಡುವಂತೆ ಮಾಡಿ ಎಂದು. ರಾಜ ಒಪ್ಪುತ್ತಾನೆ.

ಪ್ರದರ್ಶನದ ದಿನ, ರಾಜ, ರಾಜ ಪರಿವಾರ, ಆತನ ಮಿತ್ರರು, ಸಮಾಜದ, ಸಂಸ್ಕೃತಿಯ ಠೇಕೆ ಹಿಡಿದಿದ್ದೇವೆ ಎಂದುಕೊಂಡವರು, ರಾಜ್ಯದ ಎಲ್ಲಾ ಸಾಮಾನ್ಯ ಜನರೂ ಅಲ್ಲಿ ನೆರೆದಿರುತ್ತಾರೆ. ನೈತಿಕತೆಯ ಠೇಕೆದಾರರಿಗೆ ಈ ಚಿತ್ರಗಳು ಅಪಥ್ಯ, ಅದಕ್ಕೆ ಕಾರಣ ಚಿತ್ರಗಳಾಗಲಿ, ವಸ್ತುವಾಗಲಿ ಅಲ್ಲ. ಈ ಚಿತ್ರಕಾರ ತಮ್ಮ ಮುಂದೆ ತಲೆ ಬಾಗಿ ಶರಣಾಗಲೊಲ್ಲ ಎನ್ನುವುದೇ ಅವರ ಸಿಟ್ಟಿಗೆ ಕಾರಣ. ರವಿವರ್ಮ ಅದಕ್ಕೆ ಸೊಪ್ಪು ಹಾಕುವುದಿಲ್ಲ. ಇದ್ದಕ್ಕಿದ್ದಂತೆ ಪ್ರದರ್ಶನದಲ್ಲಿ ಸದ್ದು-ಗದ್ದಲ. ಏನೆಂದು ನೋಡಿದರೆ ಹಳ್ಳಿಯ ರೈತನೊಬ್ಬ ದೇವರ ಚಿತ್ರಗಳನ್ನು ನೋಡಿ ಮೈಮರೆತು ಉದ್ದಕ್ಕೂ ನಮಸ್ಕಾರ ಹಾಕಿರುತ್ತಾನೆ. ಚಿತ್ರ ನೋಡುತ್ತಿರುವಾಗ ಮೊದಲಿಗೆ ನನಗೆ ಆ ದೃಶ್ಯದ ಮಹತ್ವ ಗೊತ್ತಾಗಲಿಲ್ಲ. ಆಮೇಲೆ ಚಿತ್ರದ ಮುಂದಿನ ಭಾಗದಲ್ಲಿ ರವಿವರ್ಮ ಬಾಂಬೆಯಿಂದ ತನ್ನ ಊರಿಗೆ ಒಮ್ಮೆ ಹೋಗಿರುತ್ತಾನೆ. ಅಲ್ಲಿ ಆತನ ಚಿತ್ರಕ್ಕೆ ವಸ್ತುವಾದ ಆ ದಲಿತರ ಹೆಣ್ಣು ಬಂದವಳೇ ಈತನನ್ನು ಕಂಡು ಒಂದು ಸಲ ತನ್ನ ಜೊತೆ ಬನ್ನಿ ಎಂದು ಕೇಳಿಕೊಳ್ಳುತ್ತಾಳೆ. ಯಾಕೆ ಎಂದು ಹೋದರೆ ಅಲ್ಲಿ ಈತನ ಚಿತ್ರದ ಒಂದು ಕ್ಯಾಲೆಂಡರ್ ನೇತು ಹಾಕಿರುತ್ತದೆ. ಕಣ್ಣೀರು ಕಟ್ಟಿದ ದನಿಯಲ್ಲಿ ಆಕೆ ಹೇಳುತ್ತಾಳೆ, ’ನೀನು ನಮಗೆಲ್ಲಾ ದೇವರನ್ನು ಕೊಟ್ಟೆ… ವಂಶ ಪಾರಂಪರ್ಯವಾಗಿ ನಾವು ದೇಗುಲ ಕಟ್ಟುವ ಕೂಲಿ ಜನರೇ ಹೊರತು ದೇಗುಲದ ಒಳಗೆ ಹೆಜ್ಜೆ ಇಟ್ಟವರಲ್ಲ. ದೇವರು ಹೇಗಿರಬಹುದು ಎನ್ನುವ ಕಲ್ಪನೆಯೆ ನಮಗಿರಲಿಲ್ಲ. ನಿನ್ನ ಚಿತ್ರದ ಮೂಲಕ ಆತ ನಮ್ಮಂಥವರ ಮನೆಗಳಿಗೂ ಬಂದ ಎಂದು ಕಣ್ಣೀರಾಗುತ್ತಾಳೆ.

ಆ ದೃಶ್ಯ ನೋಡುವವರೆಗೂ ನನಗೆ ಆ ನೋವಿನ ಅರಿವೇ ಆಗಿರಲಿಲ್ಲ. ಇಲ್ಲಿ ಪ್ರಶ್ನೆ ಇರುವುದು ದೇವರ ಮೇಲೆ ನಂಬಿಕೆ ಇದೆಯೋ ಇಲ್ಲವೋ ಎನ್ನುವುದಲ್ಲ, ದೇವರಿಗೆ ನೀನು ಬೇಡದಿದ್ದರೆ, ನಿನಗೂ ದೇವರು ಬೇಡ ಅಷ್ಟೇ ಎಂದು ಘೋಷಣೆ ಮಾಡುವುದಲ್ಲ, ನಮಗೆ ದೇವರು ಕೊಡುವ ಆಸರೆ ಬೇಡ ಎನ್ನುವುದು ನಮ್ಮ ಆಯ್ಕೆ ಆಗಿದ್ದರೆ ಸರಿ, ಆದರೆ ಅದು ನಮ್ಮ ಮೇಲೆ ಇನ್ನೊಬ್ಬರು ಹೇರುವ ನಿಷೇಧವಾಗಿದ್ದರೆ ಅದನ್ನು ಸಹಿಸುವುದು ಕಷ್ಟ. ಇಲ್ಲಿ ಪ್ರಶ್ನೆ ಆಯ್ಕೆಯದ್ದಲ್ಲ, ಒಂದು ಸಂಸ್ಕೃತಿಯ ಮುಖ್ಯ ವಾಹಿನಿಗೆ ನೀನು ಸೇರಿಲ್ಲ, ಇಲ್ಲಿನ ನಿನ್ನೆಗಳು ನಿನ್ನವಲ್ಲ, ಇದರ ಭಾಗ ನೀನಲ್ಲ ಎಂದು ಹೇಳುವಾಗ ಬರುವ ತಬ್ಬಲಿತನದ, ಅವಮಾನದ ಪ್ರಶ್ನೆ. ಆ ನೋವು ಅನುಭವಿಸದೆ ಆ ಅವಮಾನ ಅರ್ಥವಾಗುವುದಿಲ್ಲ.
ಅದನ್ನು ನನಗೆ ಅರ್ಥ ಮಾಡಿಸಿದ್ದು ಬಂದೇ ನವಾಜ. ಹೌದು, ಬಂದೇ ನವಾಜ. ಹೋದ ವಾರ ಗುಲ್ಬರ್ಗಾಕ್ಕೆ ಹೋಗಿದ್ದಾಗ, ಬಂದೆ ನವಾಜನ ದರ್ಗಾಕ್ಕೆ ಹೋಗಿದ್ದೆ. ವಿಶಾಲವಾದ ಪ್ರಾಂಗಣ. ಅಲ್ಲಿ ಆಕಾಶ ಎಷ್ಟು ವಿಶಾಲವೋ, ಅಲ್ಲಿನ ಪ್ರಾಂಗಣವೂ ಅಷ್ಟೆ ವಿಶಾಲ. ಕಣ್ಣು ಹಾಯಿಸಿದಲ್ಲೆಲ್ಲಾ ಬರೀ ಗೋರಿಗಳು. ಹೊರಗೆ ಹೂವಿನ ಸಾಲು ಸಾಲು ಲಡಿಗಳು, ಒಳಗೆ ಉದ್ದೋ ಉದ್ದಕ್ಕೆ, ಒಂದೂವರಿ ಅಡಿಯ ಪುಟ್ಟ ಮಕ್ಕಳ ಗೋರಿಯಿಂದ ಹಿಡಿದು, ದೊಡ್ಡವರ ಗೋರಿಯವರೆಗೂ ಸಾಲು ಸಾಲು ಗೋರಿಗಳು. ಕೆಲವು ಹೊರಗೆ ಅಕಾಶದ ಕೆಳಗೆ, ಮರದ ನೆರಳಿನಲ್ಲಿ, ಮೀನಾರುಗಳ ಮರೆಯಲ್ಲಿ. ಮತ್ತೆ ಕೆಲವು ಮೀನಾರುಗಳ ಒಳಗೆ. ಕೆಳಗೆ ಸಮಾಧಿ, ಮೇಲೆ ತಾರಸಿಯುದ್ದಕ್ಕೂ ಕನ್ನಡಿಗಳ ಮಾಯಾಲೋಕ. ಯಾವುದೋ ಟ್ರಾನ್ಸಿನಲ್ಲಿದ್ದಂತೆ ಒಳಗೆ ಹೆಜ್ಜೆ ಇಡಲು ಹೋದವಳನ್ನು ತಡೆದಿದ್ದರು, ’ಇಲ್ಲಿ ಹೆಂಗಸರಿಗೆ ಪ್ರವೇಶವಿಲ್ಲ’. ಹೌದು ಅಲ್ಲಿ ಹೆಂಗಸರಿಗೆ ಪ್ರವೇಶವಿರಲಿಲ್ಲ, ನಮ್ಮ ಯಾವುದೇ ಕ್ರಿಯೆಯ ಕಾರಣವೂ ಇಲ್ಲದೆ ಒಂದೆಡೆಗೆ ನಮ್ಮ ಹುಟ್ಟಿನ ಕಾರಣಕ್ಕೆ ನಮ್ಮ ಪ್ರವೇಶ ಆಗದು ಎಂದರೆ ಆಗುವ ಅವಮಾನ, ನಿರಾಸೆ ಏನು ಅನ್ನುವುದು ಮೊನ್ನೆ ಅರ್ಥವಾಯಿತು, ’ಎದೆಗೆ ಬಿದ್ದ ಅಕ್ಷರ’ ಇನ್ನೂ ಹೆಚ್ಚು ಅರ್ಥವಾಯಿತು. ಜನ್ಮೇಪಿ ದೇವಸ್ಥಾನದ ಹೊಸ್ತಿಲನ್ನು ದಾಟದೆ ಆಚೆ ನಿಂತವರ ಅವಮಾನ, ಅಕಸ್ಮಾತ್ತಾಗಿ ದೇವಸ್ಥಾನಕ್ಕೆ ಹೋದ ಎನ್ನುವ ಕಾರಣಕ್ಕೆ ರಕ್ತ ಬರುವಂತೆ ಪೆಟ್ಟು ತಿಂದ ಆ ಬಾಲಕನ ಅಳಲು, ಮಸೀದಿಯಲ್ಲಿ ಹೆಣ್ಣು ಮಕ್ಕಳಿಗೆ ಯಾಕೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಇಲ್ಲ ಎಂದು ಕೇಳಿದರೆ, ’ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಸೀದಿ ಹೊಕ್ಕುವ ಅವಕಾಶಕ್ಕಿಂತ ಮುಖ್ಯ ವಿದ್ಯಾಭ್ಯಾಸದ ಅವಕಾಶ’ ಎಂದು ಜಾಣತನದಿಂದ ವಿಷಯಾಂತರ ಮಾಡುವ ಜನರ ಬುದ್ಧಿವಂತಿಕೆ, ಹೊರಗಡೆ ಬಿಸಿಲಿನಲ್ಲಿ ಸುಡು ಸುಡು ಸುಡುತ್ತಿರುವ ಹಾಸುಕಲ್ಲುಗಳ ಮೇಲೆ ಕಾಲೂರಿ ನಿಲ್ಲಲಾಗದೆ ಚಡಪಡಿಸುತ್ತಲೇ ಹೊಸ್ತಿಲಾಚೆಗೆ ನಿಂತು ಒಳಗಿನ ತಾರಸಿಯತ್ತ ಕಣ್ಣು ನೆಟ್ಟಿದ್ದ ನಮಗೆ ಅರ್ಥವಾಗಿತ್ತು…. ಇಲ್ಲ ಸುಲಭವಲ್ಲ ಹೊಸ್ತಿಲಾಚೆ ನಿಂತು ಕಾಯುವುದು.

ಅಲ್ಲೇ ಹೊರಗೆ ಪುಟ್ಟ ಕಿನ್ನರಿಯಂತಹ ಹೆಣ್ಣು ಮಕ್ಕಳು ಕೈ ತುಂಬಾ ಮೆಹಂದಿ ಹಚ್ಚಿಕೊಂಡು ದೆವತೆಗಳಂತೆ ನಗುತ್ತಿದ್ದರು. ’ಹಮಾರಾ ಭೀ ಪೋಟೋ ನಿಕಾಲಿಯೇನಾ’ ಎಂದು ರವಿವರ್ಮನ ಪುಟ್ಟ ದೇವತೆಗಳಂತೆ ನಗುತ್ತಾ ಫೋಸು ಕೊಡುತ್ತಿದ್ದರು. ಅವರದ್ದು ಒಂದು ರಾಶಿ ಚಿತ್ರ ತೆಗೆದವಳು, ಅದನ್ನು ಅವರಿಗೆ ತೋರಿಸುತ್ತಿರುವಾಗ ಯಾಕೋ ಬಂದೇ ನವಾಜನನ್ನು ಕಂಡು ಅನುಕಂಪವಾಯಿತು. ತನ್ನ ಮನೆಯಂಗಳದಲ್ಲಿ ಎಂದೂ ಇಂತಹ ಕಿನ್ನರಿಯರ ಕಾಲ್ಗೆಜ್ಜೆ ಕಿಂಕಿಣಿ ಕೇಳಲಾಗದ, ಅವರ ಕೈಯಲ್ಲಿನ ಮೆಹಂದಿ ಪರಿಮಳವನ್ನು ಅನುಭವಿಸಲಾರದ ಆತನನ್ನು ಕಂಡು ಪಾಪ ಅನ್ನಿಸಿತು.
ಶಿವ-ಪಾರ್ವತಿಯರನ್ನು, ಲಕ್ಷ್ಮಿ ಸರಸ್ವತಿಯರನ್ನು ರವಿವರ್ಮ ದೇವಸ್ಥಾನದ ಕಾಂಪೌಂಡು ದಾಟಿಸಿ ಹಳ್ಳಿಹಳ್ಳಿಯ ಮನೆಗಳಿಗೆ ತಂದಹಾಗೆ, ಆ ಪುಟ್ಟ ಕಿನ್ನರಿಯರನ್ನು ಯಾರದರೂ ಬಂದೇನವಾಜನ ಬಳಿಗೆ ಸೇರಿಸಬಹುದೆ?
 

‍ಲೇಖಕರು G

December 12, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

16 ಪ್ರತಿಕ್ರಿಯೆಗಳು

  1. ಡಾ.ಶಿವಾನಂದ ಕುಬಸದ

    ಮನೋಜ್ಞ ಬರಹ….
    “ತನ್ನ ಮನೆಯಂಗಳದಲ್ಲಿ ಎಂದೂ ಇಂತಹ ಕಿನ್ನರಿಯರ ಕಾಲ್ಗೆಜ್ಜೆ ಕಿಂಕಿಣಿ ಕೇಳಲಾಗದ, ಅವರ ಕೈಯಲ್ಲಿನ ಮೆಹಂದಿ ಪರಿಮಳವನ್ನು ಅನುಭವಿಸಲಾರದ ಆತನನ್ನು ಕಂಡು ಪಾಪ ಅನ್ನಿಸಿತು.” ಚೆಂದ ಸಾಲುಗಳು.
    ದೇವರು ಜನರೆದರು ಬರುವುದು ಜನರಿಗೆ ಎಷ್ಟು ಮುಖ್ಯವೋ
    ಜನರೂ ‘ದೇವರಿಗೆ’ ಕಾಣಿಸಿಕೊಳ್ಳುವುದು ಅಷ್ಟೇ ಮುಖ್ಯ…
    ಎರಡನ್ನೂ ನೀವು ಸಮೀಕರಿಸಿದ ರೀತಿ ಇಷ್ಟವಾಯಿತು

    ಪ್ರತಿಕ್ರಿಯೆ
  2. ಲಕ್ಷ್ಮೀಕಾಂತ ಇಟ್ನಾಳ

    ಲೇಖನ ಹೆಣಿಕೆ, ತುಂಬ ಗಟ್ಟಿ, ಅದೇ ಆಪ್ತತೆಯ ಸುಪ್ತ ಭಾವ.

    ಪ್ರತಿಕ್ರಿಯೆ
  3. vidyashankar

    ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಸೀದಿ ಹೊಕ್ಕುವ ಅವಕಾಶಕ್ಕಿಂತ ಮುಖ್ಯ ವಿದ್ಯಾಭ್ಯಾಸದ ಅವಕಾಶ’ ಎಂದು ಜಾಣತನ… 🙁 well said… There are many tragedies and truth beyond us… that thinking should make us humble and more human

    ಪ್ರತಿಕ್ರಿಯೆ
  4. vishwanath Hebballi

    mana kalakidantha anubhava……sundaravada holike mattu su….ra baraha!
    1985-86 collegina dinagalalli obba kudimeeseya huduga bareda bhagna hrudayada alalina saalugala nenapaytu.
    “Ninninda poojisikolluva bhagya nanna Mane devarugaligilla…… Ninninda arishina kunkuma hachhisikolluva bhagya nanna maneya hosthilu/bagilugaligilla! mattu ninna kalgejjeya kinkini.. kelisikollo bhagya maneya angalakkilla.
    It’s wonderfull….Bandenawaz @ Raja Ravivarma
    Ravivarmana kunchada kale bale haagu ninna intha baraha haay Allah kya kehena!….

    ಪ್ರತಿಕ್ರಿಯೆ
  5. Usha Rai

    ರಂಗರಸಿಯಾದ ವಿಶ್ಲೇಷಣೆ ಚೆನ್ನಾಗಿ ಬಂದಿದೆ. ಅದರಲ್ಲೂ ಅದನ್ನು ಬಂದೇ ನವಾಜ್ ನ ವಿಶ್ಲೇಷಣೆಯೊಡನೆ ತಾಳೆ ಹಾಕಿದ್ದು ಇನ್ನೂ ಚಂದ. ನಿಮ್ಮ ಬರಹ ಯಾವಾಗಲೂ ಇಷ್ಟವಾಗುತ್ತೆ.

    ಪ್ರತಿಕ್ರಿಯೆ
  6. ಗುಡ್ಡ

    ಅಕ್ಕಾ,
    ಬಾಲಿವುಡ್ ಸಿನೆಮಾಗಳಿಗೆ ಖಾಲಿ ಪುಗಸೆಟ್ಟೆ ಪ್ರಚಾರ ಕೊಡದೆ ಇದ್ದರೆ ಒಳ್ಳೆಯದು..
    -ಗುಡ್ಡಪ್ಪ

    ಪ್ರತಿಕ್ರಿಯೆ
  7. Sripathi Manjanabailu

    I was out station since 11th of Dec to 13th of Dec.Today I read the article. The blending of God and Deuce is awesome. Fine article.

    ಪ್ರತಿಕ್ರಿಯೆ
  8. Anil Talikoti

    ಕೆಲವೊಂದಿರುತ್ತವೆ -ಎಷ್ಟೇ ಕೆಲಸವಿದ್ದರೂ ಸರಿ ಓದಲೇ ಬೇಕಾದದ್ದು , ಎಷ್ಟೇ ಪ್ರತಿರೋಧವಿರಲಿ ತಪ್ಪನ್ನು ಮುಖಕ್ಕೆತ್ತಿ ತೋರಿಸುವದು. ನಿಮ್ಮ ಇ ಬರಹ ಅದೆರಡನ್ನು ಎಷ್ಟು ಚೆನ್ನಾಗಿ ಮಾಡಿದೆ. ಅಚ್ಚುಕಟ್ಟು ಅಂದರೆ ಏನು ಎಂದು ಈಗ ಅರ್ಥವಾಯಿತು.
    ~ಅನಿಲ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: