ಸಂಧ್ಯಾರಾಣಿ ಕಾಲಂ : ಮೊನ್ನೆ ನನಗೆ ಮತ್ತೆ ಜೀವಿ ಸಿಕ್ಕಿದ್ದಳು


ಮೊನ್ನೆ ಜೀವಿ ಸಿಕ್ಕಿದ್ದಳು… ಯಾವುದೋ ವಿಚಾರ ಸಂಕಿರಣದ ಬಿಡುವಿನಲ್ಲಿ, ಅಲ್ಲಿ ಮಾರಾಟಕ್ಕಿದ್ದ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಾ ಇದ್ದಾಗ ಜೋಡಿಸಿಟ್ಟ ಪುಸ್ತಕಗಳ ನಡುವಿಂದ ಮೆಲ್ಲನೆ ಇಣುಕಿದಳು. ಮತ್ತೆ ಮರೆಯಾಗಲೇ ಇಲ್ಲ. ಮನೆಗೆ ಬಂದವಳು, ಹುಡುಕಾಡಿ ಪುಸ್ತಕ ಮತ್ತೆ ಕೈಗೆತ್ತಿಕೊಂಡೆ. ಜೀವಿಯೊಡನೆ ಮಾತಿಗಿಳಿದೆ. ಜೀವಿ ಮಣ್ಣಿನ ಮಗಳು, ನೇರವಂತಿಕೆ, ಸಹಜ ಸ್ಪಂದನ ಅವಳಿಗೆ ಭೂಮಿಯಲ್ಲಿ ಕಾಳು ಮೊಳಕೆ ಒಡೆಯುವಷ್ಟೇ ಸಹಜ. ಜೀವಿ ತನ್ನ ಮನಸ್ಸನ್ನು ಸಂಪೂರ್ಣವಾಗಿ ಪ್ರೇಮಕ್ಕೆ ಒಡ್ಡಿಕೊಂಡವಳು. ಮಳೆ, ತಂಗಾಳಿ, ಬಿರುಗಾಳಿ, ಸುಡು ಬಿಸಿಲು ಹೀಗೆ ಪ್ರೀತಿಯ ಎಲ್ಲಾ ಬಗೆಗೂ ಎದೆಯಾರ ಸ್ಪಂದಿಸಿದವಳು..
ಒಂದು ಪುಸ್ತಕ ನಮಗೆ ಯಾಕೆ ನಮಗೇ ಗೊತ್ತಿಲ್ಲದೆ ನಮ್ಮದಾಗಿ ಬಿಡುತ್ತದೆ? ಯಾಕೆ ಮತ್ತೆ ಮತ್ತೆ ಅದನ್ನು ಹುಡುಕಿಕೊಂಡು ಹೋಗುವಂತೆ ಮಾಡುತ್ತದೆ? ಬಹುಶಃ ಉತ್ತರಿಸಲೇಬೇಕೆಂದು ಕುಳಿತರೆ, ಕಾರಣಗಳನ್ನು ಪಟ್ಟಿ ಮಾಡಿಯೂ ಬಿಡಬಹುದೇನೋ, ಆದರೆ ಆ ಪಟ್ಟಿಯಲ್ಲಿ ಉತ್ತರ ಪೂರ್ಣವಾಗಿರುತ್ತದೆ ಎನ್ನುವುದರ ಖಾತ್ರಿ ಇಲ್ಲ ನನಗೆ. ಅದು ಯಾರೋ ಒಬ್ಬರು ನಮಗೆ ಯಾಕೆ ಇಷ್ಟವಾಗುತ್ತಾರೆ ಎಂದು ಹೇಳಲು ಹೋದಂತೆ. ಅದನ್ನು ಪಟ್ಟಿಮಾಡುವ ಕ್ರಿಯೆಯೇ ಅಸಹಜ. ಉತ್ತರ ತಾರ್ಕಿಕವಾದಷ್ಟೂ, ಭಾವ ತನ್ನ ಮಾಂತ್ರಿಕತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಅವರು ಇಷ್ಟ ಅಂದರೆ ಇಷ್ಟ ಅಷ್ಟೇ, ಹಾಗೆ ನನ್ನನ್ನು ಮತ್ತೆ ಮತ್ತೆ ಓದಿಸಿಕೊಂಡ ಪುಸ್ತಕ ಪನ್ನಾಲಾಲ್ ಪಟೇಲ್ ಬರೆದು, ಕನ್ನಡಕ್ಕೆ ಅನುವಾದಗೊಂಡಿರುವ ’ಜನುಮದ ಜೋಡಿ’.
ಹಾಗೆ ನೋಡಿದರೆ ನಾನು ಕಣ್ಣರಳಿಸಿ ಓದುವ ತೇಜಸ್ವಿ, ಅಂತರಂಗಕ್ಕೆ ನೇರ ಮಾತನಾಡುವಂತೆ ಬರೆಯುವ ದೇವನೂರು, ಸಹಜತೆಯ ಬದುಕಿಗೊಂದು ಅಸಾಧಾರಣ ಕಲಾತ್ಮಕತೆ ಲೇಪಿಸಿಬಿಡುವ ಲಂಕೇಶ್, ಬುದ್ಧಿ ಭಾವಕ್ಕೆ ಸವಾಲೆಸೆಯುವ ಅನಂತಮೂರ್ತಿ, ಗಲ್ಜಾರರ ಕವಿತೆ ಇವೆಲ್ಲದರ ನಡುವೆ ಈ ಪುಸ್ತಕ ನನಗೆ ಯಾಕೆ ಇಷ್ಟ ಎಂದರೆ ನಾನು ಈಗಲೂ ಕಾರಣ ಹೇಳಲಾರೆ. ಈ ಪುಸ್ತಕ ನನಗಿಷ್ಟ ಅಷ್ಟೆ. ಈ ಗುಜರಾತಿ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದವರ್ಯಾರು ಅಂತ ನನಗೆ ಗೊತ್ತಿಲ್ಲ. ಆದರೆ ಎಲ್ಲೂ ಇದು ಒಂದು ಅನುವಾದ ಅನ್ನಿಸದೆ, ಸಹಜವಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಈ ಕಾದಂಬರಿ ಚಲನಚಿತ್ರವೂ ಆಯಿತು. ಆ ಚಿತ್ರದ ’ಮಣಿ, ಮಣಿ, ಮಣಿ, ಮಣಿ, ಮಣಿಗೊಂದು ದಾರ’ ನನ್ನ ಇಷ್ಟದ ಹಾಡಾದರೂ, ನಾನು ಆ ಚಿತ್ರವನ್ನು ನೋಡಿಲ್ಲ. ಹಾಗಾಗಿ ನನ್ನ ಮನದಲ್ಲಿರುವುದು ನಾನೇ ಕಟ್ಟಿಕೊಂಡ ಚಿತ್ರ.
ಪುಸ್ತಕದ ಕಥೆ ಸರಳ, ಜಾತ್ರೆಗೆಂದು ಹೊರಟ ಕಾನಜಿಗೆ ರಾಟುವಾಳದ ತೊಟ್ಟಿಲೊಳಗೆ ಅಕಸ್ಮಾತಾಗಿ ನಾಯಿಂದರ ಹುಡುಗಿ ಜೀವಿ ಜೊತೆಯಾಗುತ್ತಾಳೆ. ಅಷ್ಟೆ, ಆಮೇಲೆ ಅವರಿಬ್ಬರ ಜೀವನವೂ ಸಾಕ್ಷಾತ್ ಆ ರಾಟುವಾಳದ ತೊಟ್ಟಿಲಂತೆ ಆಗಿಬಿಡುತ್ತದೆ, ಯಾವ ನಿಯಂತ್ರಣವೂ ಅವರ ಕೈಯಲ್ಲಿಲ್ಲ… ಆ ತೊಟ್ಟಿಲು ಅವರಿಬ್ಬರ ಮುಂದಿನ ಬದುಕಿನ ಸಂಕೇತ.. ಗೌಡರ ಹುಡುಗ ಕಾನಜಿ, ನಾಯಿಂದರ ಹುಡುಗಿ ಜೀವಿ, ಅವರಿಬ್ಬರನ್ನು ಒಂದಾಗಲು ಬಿಡದ ಜಾತಿಯ ಅಡ್ಡಗೋಡೆ, ಗೋಡೆಯ ಅಸ್ತಿಭಾರ ಗಟ್ಟಿಯಾಗಿಡುವ ಹಳ್ಳಿಯ ಸಾಮಾಜಿಕ ವ್ಯವಸ್ಥೆ. ಇವೆಲ್ಲದರ ನಡುವೆಯೂ ಟಿಸಿಲೊಡೆಯುವ, ಪ್ರೀತಿಯೊಂದನ್ನೇ ಬಸಿದುಕೊಂಡು ಬದುಕುವ ಅವರ ಒಲವು.
ಪ್ರೀತಿ ತೋರಿಸುವ ದಾರಿಗಳು ಅನೂಹ್ಯ. ಆ ಪ್ರೀತಿ ಅವರಿಬ್ಬರಲ್ಲಿ ಹೇಗೆ ಏಕರೂಪವಾಗಿ ಪ್ರವಹಿಸುತ್ತದೆ ಎಂದರೆ, ಜೀವಿ ತನ್ನವಳಾಗದಿದ್ದರೂ ಸರಿ ತನ್ನ ಕಣ್ಣೆದುರಲ್ಲಿ ಇದ್ದರೂ ಸಾಕು ಎಂದು ಕಾನಜಿ ಅವಳನ್ನು ತನ್ನೂರಿನ ನಾಯಿಂದ ಧೂಳನನ್ನು ಮದುವೆಗಾಗಲು ಕೇಳುತ್ತಾನೆ. ಆ ಘಳಿಗೆಯಲ್ಲಿ ಅವನು ತನ್ನನ್ನೇ ವರಿಸು ಎಂದು ಕೇಳುವವನೇನೋ ಎಂದು ಕಾತರದಲ್ಲಿ ಕಾಯುತ್ತಿರುವ ಜೀವಿ ಮರುಮಾತಿಲ್ಲದೆ, ಗಂಡು ಯಾರು, ಏನು ಎಂದೂ ಸಹ ಕೇಳದೆ ಒಪ್ಪಿಕೊಳ್ಳುತ್ತಾಳೆ. ಮನೆಯಲ್ಲಿ ಹೇಳದೆ ಕೇಳದೆ ಸರಿರಾತ್ರಿಯಲ್ಲಿ ತನ್ನವನ ಜೊತೆಗೆ ಹೊರಟು ಬಿಡುತ್ತಾಳೆ, ಬೇರೆಯವನ ಮಡದಿಯಾಗಲು. ಪ್ರೀತಿ ಅಂದರೆ ಹಾಗೆ ಸಂಪೂರ್ಣ ಶರಣಾಗತಿಯಾ?
ಧೂಳ ವಿಧುರ, ಅಲ್ಲದೆ ಅಂಗವಿಕಲ, ಅದ್ಯಾವುದೂ ಅವಳ ಕಣ್ಣಿಗೆ ಕಾಣುವುದೇ ಇಲ್ಲ. ಕಾನಜಿಯನ್ನುಳಿದು ಇನ್ನೇನೂ ಅವಳ ಕಣ್ಣಿಗೆ ಕಾಣುವುದೇ ಇಲ್ಲ.. “ಹೋರಿಯ ಕುಲದ ನೆಲೆ ಕೊಂಬಿನಲ್ಲಿ, ಕುದುರಿಯದು ಕಿವಿಯಲ್ಲಿ ಅಂತಾರಲ್ಲ, ಹಾಗೆ ಮನುಷ್ಯನದು ಆತನ ಎದೆಯ ಕುದಿಯಲ್ಲಿ ಅಂತ ನನಗಂತೂ ಅನ್ನಿಸ್ತದೆ ನೋಡು..” ಅನ್ನುವ ಸಾಲುಗಳು ಪ್ರೇಮ ಹೃದಯಜನ್ಯ, ಮನುಷ್ಯನ ಇರುವಿಕೆ ಪ್ರೇಮ ಜನ್ಯ ಎಂಬುದನ್ನು ಮನಗಾಣಿಸಿಬಿಡುತ್ತವೆ.

ಮದುವೆಯೂ ಆಗಿಬಿಡುತ್ತದೆ. ಆದರೆ ಧೂಳನನ್ನು ವರಿಸಿ ಜೀವಿ ಯಾವ ಸುಖವನ್ನೂ ಸುರಿದುಕೊಳ್ಳುವುದಿಲ್ಲ, ಒಳಗೊಳಗೇ ಧೂಳನಿಗೂ ಗೊತ್ತು ಅವಳಂಥಹ ಚಂದುಳ್ಳಿ ಚಲುವಿಗೆ ತಾನು ಸರಿ ಜೋಡಿಯಲ್ಲ ಅಂತ, ಈ ಕೀಳರಿಮೆ ಮುಚ್ಚಿಕೊಳ್ಳಲು, ಅವಳ ಮೇಲೆ ಅಧಿಕಾರ ಸ್ಥಾಪಿಸಲು ಅವನು ಹಿಡಿಯುವ ದಾರಿ, ಅವಳನ್ನು ಹೊಡೆದು ಬಡಿದು ಊರವರ ಮುಂದೆ ತನ್ನ ಗಂಡಸ್ಥನ ಸಾಬೀತು ಪಡಿಸಿಕೊಳ್ಳುವುದು. ಅವನ ಸಂಕಟವೂ ಸಣ್ಣದಲ್ಲ. ಕಣ್ಣೆದುರಲ್ಲಿ ದೇವತೆಯಂತೆ ಹೊಳೆವ ಹೆಂಡತಿ, ತನ್ನನ್ನೆಂದೂ ಪ್ರೀತಿಸದ, ಎಂದೂ ಪೂರ್ಣವಾಗಿ ತನ್ನವಳಾಗದ ಹೆಂಡತಿ. ಅದೇ ಊರಿನಲ್ಲಿ, ಕಣ್ಣೆದುರಲ್ಲೇ  ಓಡಾಡುವ, ತನಗಿಂತಲೂ ಎತ್ತರದಲ್ಲಿರುವ ಅವಳ ಹಳೆಯ ಪ್ರೇಮಿ. ಅವನ ಸೋಲು, ಅವಮಾನ, ಅಂಗವಿಕಲತೆ ಅವನನ್ನು ಮತ್ತಷ್ಟು ಕ್ರೂರಿಯಾಗಿಸುತ್ತಾ ಹೋಗುತ್ತದೆ. ಸಹಿಸುತ್ತಾಳೆ ಜೀವಿ. ಅವನ ಕುಡಿತ, ಬಡಿತ, ಊರವರ ಅನುಮಾನದ ನೋಟ, ಚುಚ್ಚು ಮಾತು, ಎಲ್ಲವನ್ನೂ.  ಅವಳ ಚಿತ್ತಭಿತ್ತಿಯಲ್ಲಿರುವ ಒಂದೇ ಚಿತ್ರ ಕಾನಜಿ, ಕಾನಜಿ ಮತ್ತು ಕಾನಜಿ.
ಎಲ್ಲೂ ಅವಳು ಲೌಕಿಕ ಜಾಣತನ ತೋರಿಸುತ್ತಾ ಕಾನಜಿಯನ್ನು ಹೀಗಳೆಯುವುದಿಲ್ಲ, ಅವನೊಡನೆ ತನ್ನ ಸಂಬಂಧ ಅಲೌಕಿಕ, ಪವಿತ್ರ ಎಂದು ಪದಗಳ ಚೌಕಟ್ಟನ್ನು ಹಾಕುವುದಿಲ್ಲ, ಅವನನ್ನು ಕೆಟ್ಟವನನ್ನಾಗಿಸಿ, ಪತಿಯನ್ನು ಹೊಗಳಿ ತನ್ನ ಪಾತಿವ್ರತ್ಯ ಸಾಬೀತು ಪಡಿಸಿಕೊಳ್ಳುವುದಿಲ್ಲ, ಆಕೆ ಗೆಲ್ಲುವುದು ಇಲ್ಲಿ, ತಪ್ಪೋ ಸರಿಯೋ ಅವಳ ಪ್ರೀತಿಗೆ, ಅದರ ಪರಿಣಾಮಕ್ಕೆ ಅವಳು ಪೂರ್ಣ ಜವಾಬ್ದಾರಿ ಹೊರುತ್ತಾಳೆ, ಅವಳ ಮಟ್ಟಿಗೆ ಪ್ರೇಮವೇ ಸತ್ಯ, ಪ್ರೇಮವೇ ಶಿವ.. ಪ್ರೇಮವೇ ಕಾನಜಿ…
ಇನ್ನು ಕಾನಜಿ : ಮನಸ್ಸಿನ ವ್ಯಾಪಾರ ಬಲ್ಲವರು ಯಾರು? ಮನಸ್ಸು ಎಂದು ತರ್ಕದ ಮಾತು ಕೇಳಿದೆ? ತಾನು ಕಂಡ ಕ್ಷಣದಿಂದ ಪ್ರೀತಿಸಿದ, ಧೇನಿಸಿದ, ಕಣ್ಣೆದುರಲ್ಲಿದ್ದರೆ ಸಾಕು ಎಂದು ಕನವರಿಸಿದ ಜೀವಿ ತನ್ನ ಊರಿನಲ್ಲೇ ಇದ್ದಾಳೆ, ತನ್ನ ಗೆಳೆಯನ ಮನೆಯ ಜಗಲಿಯಾಚಿಗೆ ಅವಳ ಮನೆ, ಆದರೆ ಅವಳು ಇರುವ ಮನೆ ತನ್ನದಲ್ಲ, ಅವಳು ಹೆಜ್ಜೆ ಇಡುವ ಅಂಗಳ ತನ್ನದಲ್ಲ, ಹೋಗಲಿ ಅವಳು ಸುಖವಾಗಿ ಆದರೂ ಇದ್ದಾಳಾ ಅಂದರೆ ಅದೂ ಇಲ್ಲ, ಅವಳನ್ನು ಇಂತಲ್ಲಿಗೆ ತಂದು ಸೇರಿಸಿದವ ತಾನು ಎಂಬ ಅಪರಾಧಿಪ್ರಜ್ಞೆ ಬೇರೆ ಅವನನ್ನು ದಹಿಸ ತೊಡಗುತ್ತದೆ.. ಅವನ ಪ್ರೀತಿ ಕೇವಲ ದೈಹಿಕವಲ್ಲ, ಬರೀ ಐಹಿಕವೂ ಅಲ್ಲ, ಅಗ್ನಿಯಲ್ಲಿ ಬಿದ್ದ ಉಮೆಯನ್ನು ಹೆಗಲ ಮೇಲೆ ಹೊತ್ತು ತಿರುಗಿದ ಶಿವನ ಪ್ರೀತಿ ಅದು… ತಾನೂ ಉರಿಯುತ್ತಾನೆ, ತಾನು ಬೇಯುತ್ತಾನೆ..ಊರಿಗೇ ಊರೇ ಅವನೆಡೆಗೆ ಗೌರವದಿಂದ, ಅವನ ವ್ಯಕ್ತಿತ್ವದೆಡೆಗೆ ಒಂದು ಭಯದಿಂದ ನೋಡುವಾಗ, ಈತ ಧೂಳನ ಎದಿರು ಹಿಡಿಯಾಗಿ ಬೇಡುತ್ತಾನೆ, ’ಜೀವಿಯದೇನೂ ತಪ್ಪಿಲ್ಲ, ಅವಳನ್ನು ಚಂದ ನೋಡಿಕೋ’ ಅಂತ. ಅವಳಿಗಾಗಿ ಎಲ್ಲ ಆರೋಪ ಹೊರುತ್ತಾನೆ. ಅವಳನ್ನು ಅರೋಪಗಳಿಂದ ತಪ್ಪಿಸಲು ಪರದಾಡುತ್ತಾನೆ. ಕಡೆಗೆ ತಾನಿದ್ದರೆ ಅವಳಿಗೆ ಸುಖವಿಲ್ಲ ಎಂದುಕೊಂಡು ಊರು ಬಿಟ್ಟು ಪಟ್ಟಣಕ್ಕೆ ಹೊರಟು ಹೋಗುತ್ತಾನೆ. ಅವಳು ತನ್ನ ಕಣ್ಣೆದುರಿಗಿದ್ದರೆ ಸಾಕು ಎಂದು ಅವಳನ್ನು ಊರಿಗೆ ತರುವ ಕಾನಜಿ ತಾನೇ ಊರು ಬಿಟ್ಟು ತೆರಳುತ್ತಾನೆ, ಅವನು ಹೇಳಿದ ಎಂದು ಅವನು ಹೇಳಿದವನೊಂದಿಗೆ ತಾಳಿ ಕಟ್ಟಿಸಿಕೊಳ್ಳುವ ಜೀವಿ ಒಬ್ಬಳೇ ಉಳಿಯುತ್ತಾಳೆ ಒಲೆಯ ಮೇಲಿನ ಅನ್ನದ ಕುದಿಯಂತೆ..
ಬೇಡದ ಮದುವೆಯನ್ನೂ, ತನ್ನವನಾಗದ ಗಂಡನನ್ನೂ ಸಹಿಸಿಕೊಳ್ಳಲು ಜೀವಿಗಿದ್ದ ಒಂದೇ ಒಂದು ಕಾರಣವೂ ತಪ್ಪುತ್ತದೆ, ಅವಳನ್ನು ಜೀವನಕ್ಕೆ ಬೆಸೆದಿದ್ದ ಒಂದೇ ಒಂದು ಕೊಂಡಿ ಕಳಚಿ ಬೀಳುತ್ತದೆ, ಜೀವಿಗೆ ಬದುಕಲು ಕಾರಣಗಳಿರುವುದಿಲ್ಲ, ಹಾಗೆ ಇದುವರೆಗೂ ಅವಳಿಗೆ ಸಾಯಲೂ ಸಹ ಕಾರಣ ಇರುವುದಿಲ್ಲ. ಅವಳ ಬದುಕಿಗೆ ಕಾರಣವಾಗಿ ಬಂದ ಕಾನಜಿ ಅವಳ ಸಾವಿಗೆ ಒಂದು ಕಾರಣ ಒದಗಿಸಿ ನಿರ್ಗಮಿಸುತ್ತಾನೆ.
ತನಗೆ ಎಂದು ರೊಟ್ಟಿಯಲ್ಲಿ ವಿಷ ಕಲಸಿಟ್ಟು ರೊಟ್ಟಿ ಬಡಿಯತೊಡಗುತ್ತಾಳೆ ಜೀವಿ. ಅಷ್ಟರಲ್ಲಿ ಕುಡಿದು ಮನೆಗೆ ಬಂದ ಧೂಳ ಅವಳನ್ನು ಸಾಯುವಂತೆ ಹೊಡೆಯುತ್ತಾನೆ. ನೆರೆಹೊರೆಯವರು ಬಂದು ಅವಳನ್ನು ಬಿಡಿಸಿಕೊಂಡು ತಮ್ಮ ಮನೆಗೆ ಕರೆದುಕೊಡು ಹೋಗುತ್ತಾರೆ, ಧೂಳ ಆ ರೊಟ್ಟಿ ತಿನ್ನುತ್ತಾನೆ. ವಿಷ ಅವನನ್ನು ಕೊಲ್ಲುತ್ತದೆ. ಗಂಡನನ್ನು ಕೊಂದವಳು ಎಂಬ ಹೊಸ ಆರೋಪ ಅವಳ ಮೇಲೆ. ಅವಳ ಅಂತಃಪ್ರಜ್ಞೆ, ಬಿಡುಗಡೆಯ ಒಂದೇ ದಾರಿ ಎಂದರೆ ಅರಿವನ್ನು ಕಳಚಿಕೊಳ್ಳುವುದು ಎಂದು ಅರಿತುಕೊಳ್ಳುತ್ತದೆ. ಜೀವಿ ಹುಚ್ಚಿಯಾಗುತ್ತಾಳೆ.
ಜೀವಿ ಕಾನಜಿಯನ್ನು ಮನಸಿನಲ್ಲಿಟ್ಟುಕೊಡ ಹೆಣ್ಣು ಎಂದು ದೂಷಿಸಿದ ಊರು ಅವಳು ಹುಚ್ಚಿಯಾದಾಗ ಅವಳನ್ನು ಪೊರೆಯುತ್ತದೆ. ಪುಸ್ತಕದ ಸೊಗಸಿರುವುದು ಇಲ್ಲಿ. ಇಲ್ಲಿ ಯಾವುದೂ ಕಪ್ಪು ಬಿಳುಪು ಪಾತ್ರಗಳಿಲ್ಲ. ಎಲ್ಲರೂ ರಕ್ತ ಮಾಂಸಗಳುಳ್ಳ, ಪ್ರೀತಿ ದ್ವೇಷ ಇರುವವರು. ಜೀವಿಯನ್ನು ಮೊದಲು ಬೈದವರೇ ಅವಳು ಹುಚ್ಚಿಯಾದಾಗ ಮರುಗುತ್ತಾರೆ.
ಮತ್ತೆ ಕಾರ್ತಿಕ ಹುಣ್ಣಿಮೆ ಬರುತ್ತದೆ, ಮತ್ತೆ ಜಾತ್ರೆ, ಊರವರು ಮಲಾಪಹಾರಿ ನದಿಯಲ್ಲಿ ಮುಳುಗೆದ್ದರೆ ಜೀವಿಯ ಹುಚ್ಚು ಕಡಿಮೆ ಆದೀತೆಂದು ಅವಳನ್ನು ರಮಿಸಿ ಜಾತ್ರೆಗೆ ಕರೆದುಕೊಂಡು ಬರುತ್ತಾರೆ. ಅಲ್ಲಿಗೆ ಬರುತ್ತಾನೆ ಕಾನಜಿ. ಜಾತ್ರೆಯಲ್ಲಿ ಶುರುವಾದ ಅವರ ಪ್ರೀತಿ ಜಾತ್ರೆಯಲ್ಲಿ ಮುಗಿಯುತ್ತದೆ, ಮಲಾಪಹಾರಿ ನದಿಯಲ್ಲಿ ಮುಳುಗದೆಯೇ ಜೀವಿಯ ಶಾಪ ವಿಮೋಚನೆ ಆಗುತ್ತದೆ. ’….ಅಲ್ಲ ಅವಳು ಬಾಳುವೆಯ ಹೊಳೆಯೊಳಗೆ ಮುಳುಗೆದ್ದದ್ದು ಸಾಲದೇನು! ಅದಕ್ಕಿಂತ ಮಲಾಪಹಾರಿ ಇನ್ನಾವುದು?’ ಅನ್ನುತ್ತಾನೆ ಕಾನಜಿ. ಕಾದಂಬರಿ ಮುಗಿಯುವುದು ಈ ಮಾತುಗಳಿಂದ…’ಏನಪಾ, ಮನುಷ್ಯನ ಆಟಾ, ಅವನ ಎದಿಯಾಗ ಹಿಡಿ ನೆತ್ತರ ಇರಾಣಿಲ್ಲ; ಆದರ ಅದರ ಒಲವಿನ ಆಳ ಮುಗಿಲಿನಾ ಅಳತೆಗೂ ಮೀರೈತಲ್ಲಪಾ ಅಂತೀನಿ!”.
ಲೋಕದ ಯಾವ ಅಳತೆಗೋಲಿನಿಂದಲೂ ನನಗೆ ಇವಳನ್ನು ಅಳೆಯಲಾಗುವುದಿಲ್ಲ, ಯಾವ ಚೌಕಟ್ಟಿನಿಂದಲೂ ಇವಳನ್ನು ಹಿಡಿದಿಡಲಾಗುವುದಿಲ್ಲ, ಯಾವ ಮಾನದಂಡದಿಂದಲೂ ಇವಳನ್ನು ತೂಗಲಾಗುವುದಿಲ್ಲ. ಅವಳೂ ಸಹ ಬಹುಶಃ ಯಾವ ಹೆಜ್ಜೆಯನ್ನೂ ಯೋಚಿಸಿ, ಅಳೆದು-ತೂಗಿ ಇಟ್ಟವಳಲ್ಲ. ಅವಳ ಸತ್ಯ ಪ್ರೇಮ, ಹಾಗೆ ಅವಳ ನಿಯತ್ತು ಸಹ ಪ್ರೇಮದಿಂದ ಪ್ರಾರಂಭವಾಗಿ, ಕಾನಜಿಯಲ್ಲಿ ನೆಲೆಯಾಗುತ್ತದೆ.
ಪುಸ್ತಕ ಓದಿ ಮುಗಿಸಿದ ಮೇಲೂ ಜೀವಿ ಮನಸ್ಸನ್ನು ಜಗ್ಗುತ್ತಳೇ ಇದ್ದಾಳೆ…

‍ಲೇಖಕರು G

April 10, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

16 ಪ್ರತಿಕ್ರಿಯೆಗಳು

  1. Sandhya, Secunderabad

    Madam, Ee pustaka eegale oodabibidabeku anta annistide. Jeevi/Kanaji nimma maatugalalle aaptaragutta hoguttare.
    Ee pustaka parichayisiddakkagi – Thanks.

    ಪ್ರತಿಕ್ರಿಯೆ
  2. ರಾಧಿಕಾ

    ಪುಸ್ತಕದ ಹೆಸರು ’ಜೀವಿ’ ಅಂತಾನಾ? ಯಾರು ಬರೆದಿರುವುದು?

    ಪ್ರತಿಕ್ರಿಯೆ
  3. sindhu

    ಸಂಧ್ಯಾ,
    ಇದು ನನಗೂ ಇಷ್ಟದ ಕಥೆ ಪುಸ್ತಕ. ನೀವು ಮತ್ತೆ ಅದನ್ನ ಕಥೆಯಾಗಿ ಹೇಳಿದ್ದು… ಎಷ್ಟ್ ಚೆನಾಗಿ ಬಂದಿದೆ ಗೊತ್ತಾ.
    ಇದರ ಅನುವಾದ ಬರಗೂರು ರಾಮಚಂದ್ರಪ್ಪ ಅವರದ್ದು ಅನಿಸುತ್ತೆ.
    ಏನಪಾ, ಮನುಷ್ಯನ ಆಟಾ, ಅವನ ಎದಿಯಾಗ ಹಿಡಿ ನೆತ್ತರ ಇರಾಣಿಲ್ಲ; ಆದರ ಅದರ ಒಲವಿನ ಆಳ ಮುಗಿಲಿನಾ ಅಳತೆಗೂ ಮೀರೈತಲ್ಲಪಾ ಅಂತೀನಿ!”

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಬರಹದ ಧಾಟಿ ನೋಡಿದರೆ ಬರಗೂರು ಅನ್ನಿಸೋಲ್ಲ ಸಿಂಧು…

      ಪ್ರತಿಕ್ರಿಯೆ
  4. ಲಕ್ಷ್ಮೀಕಾಂತ ಇಟ್ನಾಳ

    ಜೀವಿಯ ಕಥಾನಕ, ಅವಳ ಬಾಳಿನ ಸಾರ, ಕಥಾಹೂರಣದೊಂದಿಗೆ ಚರ್ಚೆ, ಚರ್ಚೆಯೊಂದಿಗೆ ಒಳಸಂವಾದ ಸುಂದರವಾಗಿ ಮುಡಿಸಿದ್ದೀರಿ, ನೇರಾ ಎದೆಯೊಳಗೆ ಇಳಿದ ಆಲೋಚನೆಗಳು, ಎಲ್ಲವೂ ಆಪ್ತ, ಆಪ್ತ. ಅಭಿನಂದನೆಗಳು ಸಂಧ್ಯಾ ಜಿ ಒಂದೊಳ್ಳೆಯ ಪುಸ್ತಕ ಪರಿಚಿಯಿಸಿದ್ದಕ್ಕೆ. ಓದಬೇಕೆನಿಸಿದೆ.

    ಪ್ರತಿಕ್ರಿಯೆ
  5. boranna

    ಜನುಮದ ಜೋಡಿ-ನ್ಯಾಶನಲ್ ಬುಕ್ ಟ್ರಸ್ಟ್ ಆಪ್ ಇಂಡಿಯಾ

    ಪ್ರತಿಕ್ರಿಯೆ
  6. ಎಚ್.ಎಸ್. ರಾಘವೇಂದ್ರ ರಾವ್

    ಈ ಕಾದಂಬರಿಯ ಬಗ್ಗೆ ಇಲ್ಲಿ ಬರೆದಿದ್ದು ಬಹಳ ಸಂತೋಷವಾಯಿತು. ಜನುಮದ ಜೋಡಿ’ ಮತ್ತು ‘ಜೀವನ-ೊಂದು ನಾಟಕ’ ಪನ್ನಾಲಾಲ್ ಪಟೇಲ್ ಅವರ ಮಹಾನ್ ಕಾದಂಬರಿಗಳು. ನಾನು ವಿದ್ಯಾರ್ಥಿಯಾದಾಗಿನಿಂದ ಇವುಗಳನ್ನು ಓದುತ್ತಾ ಬಂದಿದ್ದೇನೆ. ಗ್ರಾಮಜೀವನದ ವಿವರಗಳು ಹಾಗೂ ಅಲ್ಲಿನ ಪಾತ್ರಗಳು ಕರ್ನಾಟಕಕ್ಕೂ ಹಿಡಿದ ಕನ್ನಡಿಯಂತಿವೆ. ಇದರ ಹಾಗೆಯೇ ಫಣೀಶ್ವರನಾಥ ರೇಣು ಅವರ ‘ಮಾಸಿದ ಸೆರಗು’ ಮತ್ತು ಮಾಣಿಕ್ ಬ್ಯಾನರ್ಜಿ ಅವರ ‘ಬೊಂಬೆಕುಣಿತದ ಕಥಾಪ್ರಸಂಗ’ ನಮ್ಮ ನಾಡಿನ ಅತ್ಯುತ್ತಮ ಕಾದಂಬರಿಗಳ ಸಾಲಿಗೆ ಸೇರುತ್ತವೆ. ಇವುಗಳನ್ನು ಕನ್ನಡಕ್ಕೆ ತರಿಸಿದ ಸಾಹಿತ್ಯ ಅಕಾಡೆಮಿ ಮತ್ತು ಎನ್.ಬಿ.ಟಿ.ಗಳಿಗೆ ಮತ್ತು ಈ ಕಾದಂಬರಿಯ ಬಗ್ಗೆ ಬರೆದ ಶ್ರೀಮತಿ ಸಂಧ್ಯಾ ಅವರಿಗೆ ವಂದನೆಗಳು.

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಸರ್,
      ನನ್ನ ಬರಹವನ್ನು ಓದಿ, ಪ್ರತಿಕ್ರಯಿಸಿದ್ದಕ್ಕೆ ಧನ್ಯವಾದಗಳು. ಜೀವಿ ನನ್ನನ್ನು ಸದಾ ಕಾಡುವ ಜೀವ. ’my choice’ ಎನ್ನುವ ಘೋಷಣೆಗಳಿಲ್ಲದೆ ಬದುಕಿನ ಘನತೆಯನ್ನು ಕಾಯ್ದುಕೊಂಡ ಹೆಣ್ಣು ಅವಳು. ಇಲ್ಲಿ ಯಾವುದೂ ಕಪ್ಪು ಬಿಳುಪು ಪಾತ್ರಗಳಿಲ್ಲ, ಸನ್ನಿವೇಶಗಳಿಲ್ಲ, ಅದಕ್ಕೆಂದೇ ನನಗೆ ಇದು ಜೀವನಕ್ಕೆ ತುಂಬಾ ಹತ್ತಿರ ಅನ್ನಿಸುತ್ತೆ. ನೀವು ಬರೆದ ಇನ್ನೆರಡು ಪುಸ್ತಕಗಳನ್ನು ಓದಿಲ್ಲ ಸರ್, ಓದುತ್ತೇನೆ. ಮತ್ತೊಮ್ಮೆ ವಂದನೆಗಳು.

      ಪ್ರತಿಕ್ರಿಯೆ
  7. ಎಚ್.ಎಸ್. ರಾಘವೇಂದ್ರ ರಾವ್

    ‘ಜನುಮದ ಜೋಡಿ’ಯನ್ನು ಕನ್ನಡಕ್ಕೆ ತಂದವರು ಶ್ರೀ ಕೃಷ್ಣಕುಮಾರ ಕಲ್ಲೂರ ಅವರು. ಗೆಳೆಯರ ಗುಂಪಿನ ಸದಸ್ಯರಾಗಿದ್ದ ಇವರು ಬೇಂದ್ರೆಯವರ ಆಪ್ತರು. ‘ಜೀವನ’ ಿವರ ಸ್ವಂತ ಕತೆಗಳ ಸಂಕಲನ. ಇವರ ‘ಗುಬ್ಬಿ ಸಂಸಾರ’ ಕನ್ನಡದ ಶ್ರೇಷ್ಠ ಕತೆಗಳಲ್ಲಿ ಒಂದು.

    ಪ್ರತಿಕ್ರಿಯೆ
  8. Gn Nagaraj

    ” ಯಾವ ದೇವರ ಹರಕೆ ಏನು ಮಾಡೀತಣ್ಣಾ
    ಎದೆಯ ಬೇನೆಗೆ ಏನೊ ಮದ್ದು
    ಸುಖದಾ ಬಣ್ಣಾತೊಡೆದು ದಃಖವ ಮರೆಮಾಚಿ
    ಸಾಗೋದೆ ಬಾಳ್ವೆಯ ಜಿದ್ದು ”
    …………….
    “ಏಳು ಕಳ್ಳದ ದೆವಿ ಎಲ್ಲಮ್ಮ ೊಲಿದು
    ಬೇಡಿಕೊಂಬರ ಹರಕೆ ನೀಡವ್ವ ನಲಿದು
    ನಾಡದೇವಿಯೆ ನಿನ್ನ ಪಾದಕ್ಕೆ ಶರಣಾ
    ನಾಡಾಡಿಗಳ ಸಲಹು ತೋರುತ್ತಾ ಕರುಣ”
    ಹೀಗೆ ಈ ಕಾದಂಬರಿಯ ಎಷ್ಟೊಂದು ಹಾಡುಗಳು ನನ್ನ ಮನಸ್ಸಿನಲ್ಲಿ ಮನೆ ಮಾಡಿವೆ. ಮೂಲದಲ್ಲಿ ಈ ಎಲ್ಲಾ ಹಾಡುಗಳಿವೆಯೊ ಇಲ್ಲವೋ ನನಗೆ ಅನುಮಾನ. ಇವು ಸ್ವತಂತ್ರ ರಚನೆಗಳಾಗಿ ಕಾದಂಬರಿಯನ್ನು ಬೆಳಗುತ್ತವೆ.
    ನನಗೂ ಈ ಕಾದಂಬರಿಗೂ ಎರಡು ದಶಕಗಳ ಅನುಬಂಧ. ಈ ಕಾದಂಬರಿಯ ಕನ್ನಡ ಅನುವಾದದ ಮೊದಲ ಪ್ರತಿಗಳನ್ನು ಕೊಂಡವರಲ್ಲಿ ನಾನೂ ಒಬ್ಬ. ಅಂದಿನಿಂದ ಇಂದಿನಿವರೆಗು ಈ ಕಾದಂಬರಿಯನ್ನು ಅದೆಷ್ಟು ಜನರ ಕೈಯಲ್ಲಿ ಓದಿಸಿದ್ದೇನೋ ನನಗೆ ಲೆಕ್ಕವಿಲ್ಲ. ನನ್ನ ತಂಗಿ ತಮ್ಮಂದಿರು ತಾಯಿ ಎಲ್ಲಾ ಓದಿದ್ದಾರೆ. ಹತ್ತು ವರ್ಷಗಳ ಕಾಲ ೀ ಕಾದಂಬರಿ ನಾನು ಭಾಗವಹಿಸಿದ ಮದುವೆಗಳಲ್ಲಿ ನೀಡಿದ ಉಡುಗೊರೆ ಕೂಡ.
    ಈ ಕಾದಂಬರಿ ೊಳ್ಳೆಯ ಸಿನೆಮಾ ಆದಾಗ ಬಹಳ ಖುಷಿಪಟ್ಟೆ . ಅದನ್ನೂ ಬಹಳ ಜನರಿಗೆ ನೋಡುವಂತೆ ಮಾಡಿದೆ. ಆಗ ” ಜನುಮದ ಜೋಡಿ ಎಲ್ಲರೂ ನೊಡಿ ” ” ಜನುಮದ ಜೋಡಿ ತಪ್ಪದೆ ನೋಡಿ ” ಈ ಘೋಷಣೆಗಳನ್ನು ಪ್ಲಕಾರ್ಡ್ ಗಳ ರೂಪದಲ್ಲಿ ಬರೆದು ಕೆಲ ಹಳ್ಳಿಗಾಡಿನ ಪ್ರದೇಶಗಳಲ್ಲಿ ರಸ್ತೆಗಳ ಪಕ್ಕದಲ್ಲಿ ಇಟ್ಟಿದ್ದೆವು. ರೈತರು ಕೂಲಿಕಾರರು ಬಂಡಿ , ಟ್ರಾಕ್ಟರುಗಳಲ್ಲಿ ಬಂದು ಸಿನೆಮಾ ನೊಡಲು ಪ್ರೇರೆಪಿಸಿದ್ದೆವು.
    ಈ ಗುಜರಾತೀ ಕಾದಂಬರಿ ‘ ಮಳೆಲಾ ಜೀವ ‘ ಬರೆದ ಪನ್ನಾಲಾಲ್ ಪಟೇಲ್ ರವರಿಗೆ ಕೂಡ ಜ್ಞಾನ ಪೀಠ ಪ್ರಶಸ್ತಿ ನೀಡಲಾಗಿದೆ. ಈ ಕಾದಂಬರಿಯ ಅನುವಾದ ಹೆಚ್ ಎಸ್ ರಾಘವೇಂದ್ರ ರಾವ್ ರವರು ಹೇಳಿದಂತೆ ಕೃಷ್ಣ ಕುಮಾರ್ ಕೊಲ್ಲೂರ ಅವರದು. ಅವರು ಯಾರಿಗು ತಿಳಿಯದಂತೆ ಅಜ್ಞಾತರಾಗಿಯೆ ಉಳಿದು ಬಿಟ್ಟದ್ದಲ್ಲದೆ ಎಷ್ಟೇ ಒತ್ತಾಯ ಮಾಡಿದರೂ ಬೇರೆ ಯಾವ ಅನುವಾದ ಮಾಡಲು ಒಪ್ಪಿಕೊಳ್ಲಲಿಲ್ಲವಂತೆ.

    ಪ್ರತಿಕ್ರಿಯೆ
  9. Gn Nagaraj

    ಸಂಧ್ಯಾರವರು ಈ ಕಾದಂಬರಿಯ ಬಗ್ಗೆ , ಕೇಂದ್ರ ಪಾತ್ರಗಳ ಬಗ್ಗೆ ಬರೆದು ಮತ್ತೆ ಇಲ್ಲಿಯ ೋದುಗರ ಗಮನ ಸೆಳೆದಿರುವುದಕ್ಕೆ ಮತ್ತು ನಮಗೆ ಮತ್ತೆ ನೆನಪಿಸಿದ್ದಕ್ಕೆ ವಂದನೆಗಳು. ಈ ಕಾದಂಬರಿಯಪ್ರೇಮ ಕಥೆಯ ದುರಂತ ನಮ್ಮ ಜಾತಿ ವಿಭಜಿತ ಸಮಾಜ ರಚನೆಯ ದುರಂತ . ಅಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಜೀವಿ ಮತ್ತು ಕಾನಜಿಯ ವರ್ತನೆಗಳು ಬಹಳ ಸಹಜವಾಗಿ ಮುಡಿ ಬಂದಿವೆ ಎಲ್ಲಿಯೂ ಕೃತಕ ಆಶಾವಾದವನ್ನು ತೂರಿಸಿಲ್ಲ ೆನ್ನುವುದೇ ಪನ್ನಾಲಾಲ್ ಪಟೇಲರ ಮಹತ್ವ. ಕುವೆಂಪುರವರು ತಮ್ಮ ಮಹತ್ವದ ಕಾದಂಬರಿಗಳಲ್ಲಿ ಮಧ್ಯ ಪ್ರವೇಶಿಸಿ ಕಾದಂಬರಿಯ ೋಟವನ್ನು ಅಸಹಜವಾಗಿಸಿ ಬಿಡುತ್ತಾರೆ . ಅಂತಹದು ಇಲ್ಲಿ ಸಂಭವಿಸಿಲ್ಲ ೆನ್ನುವುದೇ ಹೆಚ್ಚುಗಾರಿಕೆ .
    ಜಾತಿ ವಿಭಜಿತ ಸಮಾಜದ ನಿರ್ಬಂಧಗಳ ಕಟುತ್ವದಿಂದಾಗಿ ಈ ಸಾವಿರಾರು ವರ್ಷಗಳಲ್ಲಿ ಕೋಟಿಗಟ್ಟಲೇ ಜನರು ಇಂತಹ ದುರವಸ್ಥೆಯ ಜೀವನವನ್ನು ನಡೆಸುತ್ತಾ ಬಂದಿದ್ದಾರೆ. ಇಂತ ಪರಿಸ್ಥಿತಿಯಿಂದಾಗಿಯೇ ‘ ಮೊಗ್ಗಾಗಿ ಬಾರೊ ತುರುಬೀಗೆ ” ಹೊಂಟಾಳು ಜೋಗಿಯ ಹಿಂದುಗಡೆ ‘ ಹತ್ವರ್ಷದಿಂದ ಬಳಸಿದ್ದ ಕೊಡನಲ್ಲೆ ಎಂದು ಕೊಡವನ್ನು ಒಡೆದು ಅಳುವ ಪ್ರಸಂಗಗಳು ನಮ್ಮ ಜಾನಪದದಲ್ಲಿ ಉದ್ಭವಿಸಿವೆ.ಈ ಜಾತಿ ವ್ಯವಸ್ಥೆಯನ್ನು ನಾಶ ಮಾಡದೆ ಈ ದುರಂತಗಳನ್ನು ಸುಖಾಂತಗಳನ್ನಾಗಿ ಮಾಡುವುದು ಸಾಧ್ಯವೆ ಇಲ್ಲ.

    ಪ್ರತಿಕ್ರಿಯೆ
  10. Anil Talikoti

    ಜಾತಿ ಏಕೆ ಭರತ ಭೂಮಿ ಮೇಲಿದೆ ?
    ಬೇರೆ ಎಲ್ಲೂ ಜಾಗವಿಲ್ಲದೆ,
    then what about ಪ್ರೀತಿ
    ಅದೂ ಭರತ ಭೂಮಿಯ ತಟದಲ್ಲೇ ಇದೆ
    ಪ್ರೀತಿನೆ ಒಂದಿನ ಜಾತಿಗೆ ಮಚ್ಚು ಹಚ್ಚಬೇಕು
    ಆ ‘ಒಂದಿನ’ ಮಾತ್ರ ಸಾಪೇಕ್ಷ
    ಒಂದೆಂದರೆ ಒಂದು ಯುಗವೇನೋ ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: