ಸಂಧ್ಯಾರಾಣಿ ಕಾಲಂ : ಮಹಾನಗರಗಳು ಮತ್ತು ಶಿಶಿರ ಋತುವೂ


ಬೆಳಗ್ಗೆ ಎಳ್ಳು ಬೆಲ್ಲ ತಿನ್ನುವುದಕ್ಕೂ ಮೊದಲು ಸಂಕ್ರಾಂತಿಗೊಂದು ಶುಭಾಶಯ ಬರೆದು, ಅದಕ್ಕೆ ಸ್ನೇಹಿತರ ಹೆಸರುಗಳನ್ನು ಸೇರಿಸುತ್ತಾ ಹೋದೆ, ಇತ್ತೀಚಿಗೆ ಪರಿಚಯ ಆದ ಅವರ ಹೆಸರು ಕಣ್ಣಿಗೆ ಬಿತ್ತು. ಅದನ್ನೂ ಸೇರಿಸಿದೆ. ಮತ್ತಷ್ಟು ಹೆಸರುಗಳನ್ನು ಪೋಣಿಸಿ, ಜೊತೆ ಮಾಡಿ ಶುಭಾಶಯ ಕಳಿಸಿದೆ. ಚಳಿಯ ನಡುವೆ ಮನೆಗೆ ಕಾಲಿಡಲು ಹಿಂಜರಿಯುತ್ತಿದ್ದ ಹಬ್ಬವನ್ನು ಕರೆತಂದೇ ಬಿಡುತ್ತೇನೆ ಎನ್ನುವ ಹಠದಲ್ಲಿ ಬೊಗಸೆಗೆ ಎಳ್ಳು ಬೆಲ್ಲ ಸುರಿದುಕೊಂಡು ತಿನ್ನಬೇಕೆಂದು ಕೂತೆ. ಅಷ್ಟರಲ್ಲಾಗಲೇ ಎಲ್ಲೋ ಏನೋ ತಪ್ಪಾಗಿದೆ ಅನ್ನಿಸುತ್ತಿತ್ತು, ಮನಸ್ಸಿಗೇ ಏನೂ ಸರಿಯಿಲ್ಲ ಅನ್ನಿಸುವ ಕಿರಿಕಿರಿ. ಹಠಾತ್ತಾಗಿ ನೆನಪಾಯಿತು, ಆ ಹೊಸದಾಗಿ ಪರಿಚಯವಾಗಿದ್ದವರ ಮನೆಯಲ್ಲಿ ಇತ್ತೀಚಿಗಷ್ಟೇ ಒಂದು ದುರಂತ ನಡೆದಿತ್ತು. ನೆಮ್ಮದಿಯಿಂದ ಸಾಗುತ್ತಿದ್ದ ದೋಣಿಯ ಒಂದು ಹುಟ್ಟನ್ನು ಯಾರೋ ಎಳೆದು ತೆಗೆದುಕೊಂಡಂತೆ ದೋಣಿ ಆಯ ತಪ್ಪಿತ್ತು. ಮನೆ ತಲ್ಲಣಿಸಿ ಹೋಗಿತ್ತು. ಮತ್ತೆಂದೂ ಅವರು ಮೊದಲಿನಂತಿರಲು ಸಾಧ್ಯವೇ ಇರಲಿಲ್ಲ. ಅವರಿನ್ನೂ ಆ ಹೊಡೆತದಿಂದ ಚೇತರಿಸಿಕೊಳ್ಳಲು ಒದ್ದಾಡುತ್ತಿದ್ದರು. ಅವರಿಗೆ ನಾನು ಅರಿವೇ ಇಲ್ಲದೆ ’ಸಂಕ್ರಾಂತಿ ಸುಗ್ಗಿ ತರಲಿ’ ಎನ್ನುವ ಸಂದೇಶ ಕಳಿಸಿದ್ದೆ. ಕೈಲಿದ್ದ ಬೆಲ್ಲ ನುಂಗಲಾಗಲಿಲ್ಲ, ಇದೇನು ಮಾಡಿದ್ದೆ ನಾನು? ಇಷ್ಟೊಂದು ಸಂವೇದನಾಶೂನ್ಯಳಾಗಿ ನಾನು ನಡೆದುಕೊಂಡಿದ್ದಾದರೂ ಹೇಗೆ? ನಾಚಿಕೆಯಾಗತೊಡಗಿತು.
ಮೊದಲೆಲ್ಲಾ ಎಳ್ಳು-ಬೆಲ್ಲ ಅಕ್ಕ-ಪಕ್ಕದವರಿಗೆ ಕೊಟ್ಟು, ಮನೆಗೆ ಬಂದವರಿಗೆ ಕೊಟ್ಟು ಶುಭಾಶಯ ಹೇಳುತ್ತಿದ್ದೆವು. ಮನೆಯ ಅಂಗಳ ಸಾರಿಸಿ, ಚುಕ್ಕಿ ಎಣಿಸಿ, ರಂಗೋಲಿ ಇಟ್ಟು, ಅಲ್ಲಲ್ಲಿ ಹೂವಿಟ್ಟು ಹಬ್ಬಕ್ಕೆ ಹೊಸಬಟ್ಟೆ ತೊಡಿಸುತ್ತಿದ್ದೆವು. ಈಗ ಎಳ್ಳು-ಬೆಲ್ಲ-ಕಬ್ಬು-ಸಕ್ಕರೆ ಅಚ್ಚಿನ ಒಂದು ಫೋಟೋ ತೆಗೆದು, ಒಂದೆರಡು ಸಾಲು ಬರೆದು, ಮೊಬೈಲ್ ನಲ್ಲಿ ವಿಳಾಸದ ಪುಸ್ತಕ ತೆರೆದು ಅಲ್ಲಿದ್ದ ಹೆಸರುಗಳನ್ನು ಒಟ್ಟಾಗಿ ಆರಿಸಿ, ಇಲ್ಲಿ ಸುರುವಿದರೆ ಆಯಿತು, ಆಮೇಲೇನಿದೆ, ಒಂದು ಗುಂಡಿ ಒತ್ತಿದರೆ ಸಾಕು ಶುಭಾಶಯ ಅವರೆಲ್ಲರ ಬೊಗಸೆಯಲ್ಲಿ. ಆದರೆ ಶುಭಾಶಯ ಹೇಳುವ ಈ ಕ್ರಿಯೆ ಸಲೀಸಾಗುವುದರ ಜೊತೆ ಜೊತೆಯಲ್ಲಿಯೇ ಯಾಂತ್ರಿಕವಾಗುತ್ತಿದೆಯಾ? ಈ ಪ್ರಶ್ನೆ ನನ್ನನ್ನು ಕಾಡತೊಡಗಿತು. ನಾನು ಶುಭಾಶಯ ಕಳಿಸಿದ್ದವರು ಎದುರಾಗಿದ್ದರೆ ಅವರಿದ್ದ ಸ್ಥಿತಿಯಲ್ಲಿ, ಅವರೆದುರಿಗೆ ಸಂಭ್ರಮ ಪಡಬಾರದು ಎಂದು ಎಚ್ಚರ ವಹಿಸುತ್ತಿದ್ದ ನನಗೆ ಮೊಬೈಲ್ ನಲ್ಲಿ ಸಂದೇಶ ಕಳಿಸುವಾಗ ಯಾಕೆ ಅದು ಗಮನಕ್ಕೆ ಬಾರದೆ ಹೋಯಿತು? ನನ್ನ ಸಂದೇಶದ ರೀತಿಯಲ್ಲಿಯೇ ಎಷ್ಟೋ ಸಂದೇಶಗಳು ಅವರ ಮೊಬೈಲ್ ಗೆ ಬಂದಿರಬೇಕು, ಅವಕ್ಕೆಲ್ಲಾ ಅವರು ಏನೆಂದು ಉತ್ತರಿಸಿರಬಹುದು…. ಈ ಯೋಚನೆಯಲ್ಲಿರುವಾಗಲೇ ಅವರ ಉತ್ತರ ಬಂದಿತ್ತು, ’ವಂದನೆಗಳು ಮೇಡಂ, ನಿಮಗೂ ಸಹ ಹಬ್ಬದ ಶುಭಾಶಯಗಳು’, ಯಾಕೋ ಇನ್ನಿಲ್ಲದ ಅವಮಾನ, ಸಂಕೋಚದಿಂದ ನಾನು ಹಿಡಿಯಾದೆ.
ಅಷ್ಟರಲ್ಲಿ ಗೆಳತಿ ರಶ್ಮಿ ಕಾಸರಗೋಡು ಫೇಸ್ ಬುಕ್ಕಿನಲ್ಲಿ ಬರೆದ ಒಂದು ಮಾತು ಓದಿದೆ, ’ ನಮ್ಮ ಸಂಕ್ರಾಂತಿ ಹಬ್ಬ ಆಚರಣೆ ಹೇಗೆ ಅಂದ್ರೆ, ಆಫೀಸಿಗೆ ಬರುತ್ತಾ ದಾರಿಯಲ್ಲಿ ಮನೆಮುಂದೆ ಹಾಕಿದ ಕಲರ್ ಕಲರ್ ರಂಗೋಲಿ ನೋಡ್ತಾ ಕಣ್ತುಂಬಿಕೊಳ್ಳೋದು
ಬಸ್ಸಲ್ಲಿ ಹೊಸ ಡ್ರೆಸ್ ಹಾಕಿದವರನ್ನು ಗಮನಿಸೋದು, ವಾಟ್ಸಾಪ್ನಲ್ಲಿ ಬಂದ ಶುಭಾಶಯ ಸಂದೇಶಗಳಿಗೆ ರಿಪ್ಲೈ ಕಳಿಸೋದು
ಫೇಸ್ಬುಕ್ ನಲ್ಲಿ ಇದು ನಮ್ಮನೆಯ ರಂಗೋಲಿ ಎಂದು ಬರೆದು ಹಾಕಿದ ಫೋಟೋಗೆ, ಎಳ್ಳು ಬೆಲ್ಲಕ್ಕೆ ಲೈಕ್ ಒತ್ತಿ ಸ್ಕ್ರಾಲ್ ಮಾಡುತ್ತಾ ಮುಂದೆ ಹೋಗುವುದು. ಸದ್ಯಕ್ಕೆ ಇಷ್ಟು.. ಮಧ್ಯಾಹ್ನ ಹೊತ್ತಿಗೆ ಹಬ್ಬದೂಟದ ಫೋಟೋ ಅಪ್ಲೋಡ್ ಆಗ್ಬಹುದು…
ಅದಕ್ಕೂ ನಮ್ಮದೊಂದು ಲೈಕು….’. ಹಾಸ್ಟೆಲಿನಲ್ಲಿರುವ ಹುಡುಗಿ ರಶ್ಮಿ, ಹಬ್ಬದ ದಿನ ಮನೆಯಿಂದ ಹೊರಗಿರುವ ಎಲ್ಲರ ಮಾತು ರಶ್ಮಿಯದು. ಹಬ್ಬವನ್ನು ಊರಿನಲ್ಲಿ ಬಿಟ್ಟುಬಂದವರಿಗೆ ಇಲ್ಲಿ ಹಬ್ಬ ಕಾಣುವುದು ಹೀಗೆ. ಮನಸ್ಸು ಮತ್ತೆ ಒಜ್ಜೆ. ಪರಿಚಿತರ ನಡುವೆ ಅಪರಿಚಿತರಾಗಿ ಬದುಕುವ ನಗರದಲ್ಲಿ ನಿಮ್ಮ ಸುತ್ತಲೂ ಒಂದು ಮನೆ ಇಲ್ಲದಾಗ ಅದು ಹಬ್ಬ ಹರಿದಿನಗಳಲ್ಲಿ ನಿಮ್ಮಲ್ಲಿ ತರುವ ಶೂನ್ಯ ಭಯಹುಟ್ಟಿಸಿಬಿಡುತ್ತದೆ.
ಈ ಮಹಾನಗರದಲ್ಲಿ ಯಾವುದೋ ಮುಷ್ಕರ, ಯಾವುದೋ ಬಂದ್ ನಡೆಯುತ್ತದೆ, ಊರು ಕಿಟಕಿ ತೆರೆದಿಟ್ಟು, ಬಾಗಿಲಿಗೆ ಚಿಲಕ ಹಾಕಿಕೊಳ್ಳುತ್ತದೆ, ನಾವೆಲ್ಲಾ ಮನೆಯಲ್ಲಿ ಕೂತು ಟಿವಿಯ ಜೊತೆ ಮಾತನಾಡುತ್ತಿರುತ್ತೇವೆ, ಅಂಗಡಿಗಳಿಗೆ ಬಾಗಿಲು, ಹೋಟಲು, ಮೆಸ್ಸುಗಳಿಗೆ ಬಲವಂತದ ರಜೆ. ನನಗೆ ಆಗೆಲ್ಲಾ ಮನೆ, ರೂಮ್, ಪಿಜಿಗಳಲ್ಲಿ ಅಡುಗೆಯ ಒಲೆಯಿರದ ಖಾಲಿ ಹೊಟ್ಟೆಗಳು ನೆನಪಾಗುತ್ತವೆ. ಊಟ ತಿಂಡಿಗೇನು ಮಾಡಬೇಕು ಅವರು? ಹಳ್ಳಿ, ಟೌನು, ತಾಲೂಕುಗಳಲ್ಲಿ ಒಳ್ಳೆ ಹೋಟಲ್ ಗಳಿರುವುದಿಲ್ಲ ಎನ್ನುವ ಕಾರಣಕ್ಕೆ ಮನೆ ಮನೆಗಳಲ್ಲಿ ಕಾಫಿ, ಟೀ ಆದರೂ ಕಾಸಿಕೊಳ್ಳುತ್ತಾರೆ, ಅನ್ನ ಬೇಯಿಸಿಕೊಳ್ಳುತ್ತಾರೆ. ಆದರೆ ಕಾಸು ಕಾರ್ಡುಗಳ ಕೀಲಿಗೆ ತೆಗೆದುಕೊಳ್ಳುವ ನಗರದ ಹೋಟಲುಗಳ ಬೀಗ ಮನೆಯಲ್ಲಿ ಒಲೆಯ ಅಗತ್ಯವನ್ನೇ ಅಪಹಾಸ್ಯ ಮಾಡಿಬಿಡುತ್ತವೆ. ಅಡಿಗೆ ಒಲೆಗಳಿಲ್ಲದ ಊರಿನಲ್ಲಿ ಬಂದ್ ಎಂದರೆ ಅದೆಷ್ಟೋ ಹೊಟ್ಟೆಗಳ ಉಪವಾಸ, ಅದೆಷ್ಟೋ ಖಾಲಿತನದ ಪರಿಹಾಸ್ಯ. ನಗರಗಳು ಕೊಡುವ ತಲ್ಲಣ, ಏಕಾಂಗಿತನಗಳೇ ಬೇರೆ. ಇಲ್ಲಿ ಮನೆ-ಮನೆಗಳ ನಡುವೆ ಅಂತರ ಕಡಿಮೆ ಇರುತ್ತದೆ, ಆದರೆ ಎಲ್ಲರ ಸುತ್ತಲೂ ಒಂದೊಂದು ದ್ವೀಪವಿರುತ್ತದೆ.

ಜಿಸೆ ಭಿ ದೇಖಿಯೆ ವೋ ಅಪ್ನೆ ಆಪ್ ಮೆ ಗುಮ್ ಹೈ
ಜುಬಾನ್ ಮಿಲಿ ಹೈ ಮಗರ್ ಹಮ್ ಜುಬಾನ್ ನಹಿನ್ ಮಿಲ್ತಾ
ಇಲ್ಲಿ ಯಾರನ್ನೇ ನೋಡಿ, ಅವರಿಗೆ ಅವರದೇ ಲೋಕ
ಇಲ್ಲಿ ಭಾಷೆ ಸಿಗುತ್ತದೆ, ಆದರೆ
ನಮ್ಮ ಭಾಷೆಯನ್ನು ಮಾತನಾಡುವರು ಸಿಗುವುದಿಲ್ಲ
ಹೌದು, ಭಾಷೆ ತಿಳಿದಿರುವುದು ಬೇರೆ, ನಮ್ಮದೇ ಭಾಷೆ ಮಾತನಾಡುವುದು ಬೇರೆ. ನಾನು ತುಂಬಾ ಗೌರವಿಸುವ, ಇಷ್ಟಪಡುವ ನಿರ್ದೇಶಕಿ ಒಬ್ಬರು ಒಮ್ಮೆ ಕರೆ ಮಾಡಿದ್ದರು. ನನ್ನ ಒಂದು ಬರಹದ ಬಗ್ಗೆ ಮಾತನಾಡಿದರು. ಮಾತನಾಡುತ್ತಾ, ಮಾತನಾಡುತ್ತ, ವೇಳೆಯ ಪರಿವೆ ಇಬ್ಬರಿಗೂ ಇರಲಿಲ್ಲ. ಆಗ ಅವರು ಒಂದು ಮಾತು ಹೇಳಿದರು, ’ಅರೆ, ನಾನು ಹೇಳುವುದೆಲ್ಲಾ ನಿಮಗೆ ಅರ್ಥ ಆಗುತ್ತಿದೆ!’. ಆ ಕ್ಷಣ ಆಕೆ ನನಗೆ ನನ್ನವರು ಅನ್ನಿಸಿದ್ದರು. ಹೌದು ಭಾಷೆ ಬರುವುದು ದೊಡ್ಡದಲ್ಲ, ನಮ್ಮ ಭಾಷೆ ಮಾತನಾಡುವವರು ಸಿಗುವುದು ದೊಡ್ಡ ವಿಷಯ ಅನ್ನಿಸಿಬಿಡುತ್ತದೆ ಎಷ್ಟೋ ಸಲ. ಹಾಗೆ ನಮ್ಮ ಭಾಷೆ ಮಾತನಾಡುವವರು ಸಿಗದಾಗ ನಗರಗಳು ತುಂಬುವ ಅನಾಥ ಪ್ರಜ್ಞೆ, ಒಂಟಿತನ ಸಹಿಸಲಾಗುವುದಿಲ್ಲ. ಹೆಚ್ಚಿನ ಸಂಪಾದನೆ, ಐಷಾರಾಮ, ಸವಲತ್ತು, ವೈಭವ ಎಲ್ಲಾ ಕೊಡುವ ನಗರಗಳಲ್ಲಿ ಯಾಕೋ ಮನಸ್ಸು ಮನಸ್ಸುಗಳ ನಡುವೆ ಸಂವಾದ ಸರಳವಾದ ವಿಷಯವಲ್ಲ, ಅದಕ್ಕೆ ಎಷ್ಟೋ ಆಯಾಮ, ಪದರಗಳು, ಅರ್ಥಗಳು ಬಂದುಬಿಡುತ್ತವೆ. ಯಾಕೋ ಆ ಹಾಡಿನ ಉಳಿದ ಸಾಲುಗಳು ಸಹ ಹಠ ಹಿಡಿದು, ಚಕ್ಕಲ ಮಕ್ಕಲ ಹಾಕಿ ಮನಸ್ಸಿನೊಳಗೆ ಕುಳಿತು ಬಿಟ್ಟಿವೆ, ಮನಸ್ಸಿನ ಗೋಡೆಗಳ ಮೇಲೆ ಅದರದೇ ರಿಂಗಣ.
’ಯಹ ಕಿಸಿಕೊ ಮುಕಮ್ಮಲ್ ಜಹಾನ್ ನಹಿ ಮಿಲ್ತಾ, ಕಭಿ ಆಸ್ ಮಾನ್ ತೊ ಕಭಿ ಜಮೀನ್ ನಹಿ ಮಿಲ್ತಾ’ –
ಇಲ್ಲಿ ಯಾರಿಗೂ ಜಗತ್ತು ಪೂರ್ಣವಾಗಿ ಸಿಗುವುದೇ ಇಲ್ಲ, ಭೂಮಿ ಮೇಲೆ ಕಾಲೂರಿದಾಗ ಆಕಾಶ ಕೈ ಚಾಚಿ ಅಣಕಿಸುತ್ತದೆ, ಆಕಾಶ ಕೈಗೆ ತಾಕಿತು ಅನ್ನುವಷ್ಟರಲ್ಲಿ ಕಾಲ ಕೆಳಗಿನ ಭೂಮಿ ಸರಿದುಹೋಗಿರುತ್ತದೆ’. ಯಾವುದೋ ಒಂದು ಖಾಲಿ ಕೈಗೆ ಎಟುಕಿತು ಎನ್ನುವಷ್ಟರಲ್ಲಿ, ಅಲ್ಲಿ ತನಕ ಮುಂಗೈ ಮೇಲೆ ಆಡುತ್ತಿದ್ದ ಗಿಳಿ ರೆಕ್ಕೆ ಬಿಚ್ಚಿ ಹಾರಿರುತ್ತದೆ, ಒಂದು ಕೈ ಈಗಲೂ ಖಾಲಿ ಖಾಲಿ. ಅಪೂರ್ಣತೆಯಲ್ಲೇ ಇಲ್ಲಿನ ತೊಳಲಾಟ, ನಮ್ಮ ಪರದಾಟ.
ಸಂಕ್ರಾಂತಿ ಮುಗಿಯಿತು, ಮತ್ತೆ ಯುಗಾದಿ ಬರುತ್ತದೆ, ಮತ್ತೆ ಹೋಳಿಗೆ, ಮತ್ತೆ ಶುಭಾಶಯ. ಕಳೆದ ವರ್ಷ ಇದ್ದ ಹೆಸರುಗಳಲ್ಲಿ ಕೆಲವು ಹೆಸರುಗಳನ್ನು ಫೋನು ಮರೆತಿರುತ್ತದೆ, ಕೆಲವನ್ನು ನಾವು ಬಿಟ್ಟಿರುತ್ತೇವೆ, ಕೆಲವರು ನಮ್ಮನ್ನು ಬಿಟ್ಟಿರುತ್ತಾರೆ. ಕೆಲವು ಸಲ ನಾವು ಬಿಟ್ಟ ಹೆಸರುಗಳು, ನಮ್ಮನ್ನು ಬಿಟ್ಟ ಹೆಸರುಗಳು ಒಂದೇ ಆಗಿರುವುದಿಲ್ಲ, ನೋವು ಶುರುವಾಗುವುದು ಅಲ್ಲಿ. ನಮ್ಮವರೇ ಆಗಿದ್ದವರ ನೆನಪಿನ ಭಾಗವಾಗದೆ, ಮರೆವಿನ ಭಾಗವಾಗುವುದರಲ್ಲಿ, ಧ್ವನಿಯಾಗಿ, ನೆನಪಾಗಿ ಹತ್ತಿರವಾಗಿರಬೇಕಾದವರಿಗೆ ಹೆಸರಾಗಿ ನೆನಪಿರುವುದರಲ್ಲಿ, ಹೆಗಲಿಗೊರಗಿ, ಕೈ ಹಿಡಿದು ಸ್ಪರ್ಶದೊಡನೆ ಹಂಚಿಕೊಳ್ಳಬೇಕಾದ ಹಬ್ಬ, ಓದುವ ಮೆಸೇಜ್ ಆಗುವುದರಲ್ಲಿ….
ತೇರೆ ಜಹಾನ್ ಮೆ ಐಸಾ ನಹೀ ಕಿ ಪ್ಯಾರ್ ನ ಹೊ
ಜಹಾ ಉಮ್ಮೀದ್ ಹೊ ಇಸ್ಕೀ ವಹಾ ನಹೀ ಮಿಲ್ತಾ…
ಈ ಜಗತ್ತಿನಲ್ಲಿ ಪ್ರೀತಿ ಇಲ್ಲ ಎಂದಲ್ಲ,
ಆದರೆ ಎಲ್ಲಿ ಪ್ರೀತಿಯ ನಿರೀಕ್ಷೆ ಇರುತ್ತದೋ ಅಲ್ಲಿ ಸಿಗುವುದಿಲ್ಲ,
ದುರಂತ ಇರುವುದು ಅಲ್ಲಿ.
ನಿಜ ಇಲ್ಲಿ ಯಾರಿಗೂ ಜಗತ್ತು ಪೂರ್ಣವಾಗಿ ಕೈಗೆ ಸಿಗುವುದೇ ಇಲ್ಲ…
ಶಿಶಿರ ಕಾಲದ ಋತುವಾಗಿರುವಾಗಲೇ ಭರಿಸುವುದು ಕಷ್ಟ. ಇನ್ನು ಅದು ಬಾಳಿನ ಋತುವಾಗಿಬಿಟ್ಟರೆ ಸಹಿಸುವುದು ಇನ್ನೂ ಕಷ್ಟ. ಅದರಲ್ಲೂ ಮಹಾನಗರಗಳ ಮಹಾ ಶಿಶಿರಗಳು ಬಹಳ ಕ್ರೂರ. ಇಲ್ಲಿ ಮನೆಗಳಿಗೆ ಕಿಟಕಿ ಬಾಗಿಲುಗಳಿರುತ್ತವೆ, ಆದರೆ ಬಹಳಷ್ಟು ಸಲ ಗೋಡೆಗಳು ಕುಸಿದುಬಿಟ್ಟಿರುತ್ತವೆ. ಬಯಲಲ್ಲಿ ಏಕಾಕಿಯಾಗಿ ನಿಂತೇ ಛಳಿಯನ್ನು ಸಹಿಸಬೇಕು, ಭರಿಸಬೇಕು, ಹಬ್ಬವನ್ನು ಹಬ್ಬವಾಗಿಸಿಕೊಳ್ಳಬೇಕು. ನಮ್ಮೆಡೆಗೆ ನೋಡಿ ಯಾರೂ ಮುಗುಳ್ನಗುವುದಿಲ್ಲ ಎನ್ನುವುದನ್ನು ಹೇಗೋ ಸಹಿಸಿಕೊಂಡುಬಿಡಬಹುದು, ಆದರೆ ನಮ್ಮ ಕಡೆ ಯಾರೋ ನೋಡಿಕೊಂಡು ನಗುತ್ತಿದ್ದಾರೆ ಎನ್ನುವುದನ್ನು ಭರಿಸುವುದು ಹೇಗೆ?
ಅದಿರಲಿ ಈಗ ನನ್ನ ಆ ಪರಿಚಿತರಿಗೆ, ನಿಮ್ಮ ನೋವು ಸಂಕಟದ ಗಳಿಗೆಗಳಲ್ಲಿ ನನ್ನ ಮನೆಯಲ್ಲಿ ಹಬ್ಬದ ರಂಗೋಲಿಯ ಚುಕ್ಕಿಗಳು ಸಂಭ್ರಮಿಸಲು ನಾಚಿ ಮೌನವಾಗಿವೆ ಎಂದು ಹೇಳುವುದು ಹೇಗೆ? ನಿಮ್ಮ ನೋವಿನಲ್ಲಿ ನಾವು ನಿಮ್ಮೊಂದಿಗಿದ್ದೆವೆ ಎನ್ನುವ ಸಂದೇಶ ಕಳಿಸುವುದು ಹೇಗೆ? ನನ್ನ ಸಂಭ್ರಮದ ಸಾಲುಗಳನ್ನು ಕ್ಷಮಿಸಿಬಿಡಿ ಎಂದು ಕೇಳುವುದು ಹೇಗೆ?
 

‍ಲೇಖಕರು G

January 16, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ಮಹಾ ನಗರಗಳಲ್ಲಿನ ಬದುಕಿನ ಏಕತಾನತೆಯ ಬಗ್ಗೆ , ಕೃತಕ ಬದುಕಿನ ಬಗ್ಗೆ , ಸಂಬಂಧಗಳ ನಡುವಿನ ಗೋಡೆಯ ಬಗ್ಗೆ , ಕುಸಿದು ಹೋಗಿರುವ ಮಾನವೀಯ ಗುಣಗಳ ಬಗ್ಗೆ ಬಿಡಿಸಿ ಬಿಡಿಸಿ ಉದಾಹರಣೆಗಳ ಸಹಿತ ಹೇಳಿದ್ದೀರಿ. ನೀವು ಬದುಕಿರುವ ಜಾಗದಲ್ಲಿ ಹಾಗೆ ಅನ್ನಿಸಿರಬಹುದು. ಆದರೆ ಹಳ್ಳಿಗಳಲ್ಲಿ ಮೇಲೆ ಹೇಳಿರುವ ಗುಣಗಳು ಇನ್ನೂ ಉಳಿದುಕೊಂಡಿವೆ ಎಂದು ಭ್ರಮಿಸಿದರೆ ಖಂಡಿತವಾಗಿ ಭ್ರಮನಿರಸನವಾದೀತು.ಪ್ರತಿಯೊಂದು ಹಳ್ಳಿಯೂ ಬೇಕಾದ ಗುಣಗಳ ದೂರ ನೂಕಿ ಬೇಡವಾದ ನಗರದ ಎಲ್ಲಾ ಬದುಕನ್ನು ಆಪ್ತವಾಗಿಸಕೊಂಡು, ಅತ್ತ ಹಳ್ಳಿಯ ರೀತಿಯಲ್ಲೂ ಬದುಕಲಾರದೆ ಇತ್ತ ನಾಗರೀಕತೆಯ ತುತ್ತ ತುದಿಯಲ್ಲಿರುವ ನಗರಗಳಂತೆಯೂ ಬದುಕಲಾಗದೆ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿಕೊಂಡು ಎಡಬಿಡಂಗಿಗಳಾಗಿ ಬದುಕುವಂತಾಗಿದೆ.ಇಲ್ಲಿ ಮನೆ ಮನೆಗಳ ನಡುವೆ ಮನಸುಗಳ ನಡುವೆ ಅಷ್ಟೇ ಅಲ್ಲ ಹತ್ತಿರದ ಸಂಬಂಧಗಳ ನಡುವೆಯೇ ದೊಡ್ಡ ದೊಡ್ಡ ಕಂದಕಳು ಏರ್ಪಟ್ಟು ಬದುಕು ಭೀಕರವಾಗುತ್ತಿದೆ.
    ಇಂದಿನ ಬದುಕಿನ ಕೃತಕತೆಯ ಬಗ್ಗೆ ಚೆನ್ನಾಗಿ ಹೇಳಿದ್ದೀರಿ. ನಮಸ್ಕಾರ.

    ಪ್ರತಿಕ್ರಿಯೆ
  2. rashmi

    ಚೆಂದ ಬರೆದಿದ್ದೀರಿ.. ಇಲ್ಲಿ ಭಾಷೆ ಸಿಗುತ್ತದೆ ಆದರೆ ನಮ್ಮ ಭಾಷೆಯನ್ನು ಮಾತಾಡುವವರು ಸಿಗುವುದಿಲ್ಲ…100 ಶೇ. ನಿಜ ಈ ಮಾತು

    ಪ್ರತಿಕ್ರಿಯೆ
  3. Anil Talikoti

    ಯಾಂತ್ರಿಕತೆಯ ಇನ್ನೊಂದು ಮಜಲೇನೋ ಇದು. ಯಾಂತ್ರಿಕತೆಯ ಒಂದೇ ಉಪಯುಕ್ತತೆ ಎಂದರೆ ನೋವೋ/ನಲಿವೋ ಕ್ಷಣಿಕವಾಗುವದು. ಇನ್ನೂ ಹಬ್ಬಗಳು ಇರುವದೇ ನೋವನಳಿಸಲಲ್ಲವೆ? ಸೂಕ್ಷ್ಮ ಹೃದಯದ ಸವಾಲಿದು -ಸೊಗಸಾಗಿದೆ.
    ~ಅನಿಲ

    ಪ್ರತಿಕ್ರಿಯೆ
  4. vidyashankar

    ನಮ್ಮೆಡೆಗೆ ನೋಡಿ ಯಾರೂ ಮುಗುಳ್ನಗುವುದಿಲ್ಲ ಎನ್ನುವುದನ್ನು ಹೇಗೋ ಸಹಿಸಿಕೊಂಡುಬಿಡಬಹುದು, ಆದರೆ ನಮ್ಮ ಕಡೆ ಯಾರೋ ನೋಡಿಕೊಂಡು ನಗುತ್ತಿದ್ದಾರೆ ಎನ್ನುವುದನ್ನು ಭರಿಸುವುದು ಹೇಗೆ? this should push us to create identity and success… this is how outside people succeed in cities 🙂 Cheers! After autumn there is spring! I can almost smell it!

    ಪ್ರತಿಕ್ರಿಯೆ
  5. shobhavenkatesh

    bengaloorinida aache hodaga alli nammanu nadesikollava janada preeti vishwasa benagaloorinalli thumba krutaka baduku enisuvudu sandhya neevu heluvudu sari.santhoshadinda mathanaduva manassugale mayavaguthide.manyshayaru,manassugalu,manaveeyate yella kanasaguthide..nimma lekhnadalli eeyella vichara thumba chennagi muudi bandide sandhya

    ಪ್ರತಿಕ್ರಿಯೆ
  6. kusumabaale

    ನಿಜ. ಪ್ರತಿ ಹಬ್ಬಕ್ಕೂ ಊರಿಗೆ ಓಡೋದು ಇದಕ್ಕೇನೆ.ಇಲ್ಲಿ ಎಷ್ಟೊಂದ್ ಜನ ಆದರೆ ಯಾರೂ ಇಲ್ಲ.ಈ ಸಂಕ್ರಾಂತಿಯಲಿ ಅನುಭವಿಸಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: