ಸಂಧ್ಯಾರಾಣಿ ಕಾಲಂ : ’ಮಕ್ಕಳ ಬೇಡಿಕೆಗೆ ’ಯೆಸ್’ ಎನ್ನುವ ಮೊದಲು…’

ಮೊನ್ನೆ ಡಾಕ್ಟರ ಶಾಪಿಗೆ ಹೋಗಿದ್ದೆ. ಸಾಲು ಉದ್ದ ಇತ್ತು … ಕಾಯುತ್ತಾ ಕುಳಿತವಳು ವೇಳೆ ಕಳೆಯಲು ಅಲ್ಲಿದ್ದ ಒಂದು ಮ್ಯಾಗಜೀನ್ ಓದಲು ಪ್ರಾರಂಭಿಸಿದೆ. ಅಲ್ಲಿ ಹದಿಹರೆಯದವರ ಪ್ರಶ್ನೆಗಳಿಗೆ ತಜ್ಞರಿಂದ ಉತ್ತರ ಸಿಗುವ ಒಂದು ಅಂಕಣ ಇತ್ತು. ಅಲ್ಲಿ ಒಬ್ಬ ಹೈಸ್ಕೂಲು ಹುಡುಗಿ ಒಂದು ಪ್ರಶ್ನೆ ಕೇಳಿದ್ದಳು. ಅದು ಹೀಗಿತ್ತು : ’ನಾನೀಗ ಹೈಸ್ಕೂಲು ಓದುತ್ತಿದ್ದೇನೆ, ಅಪ್ಪ ಅಮ್ಮ ಇಬ್ಬರು ಕೆಲಸ ಮಾಡುತ್ತಾರೆ, ಆದರೆ ನನಗೆ ಕೊಡುವ ಪಾಕೆಟ್ ಮನಿ ಕೇವಲ (!) ೫೦೦ … ನನ್ನ ಫ್ರೆಂಡ್ಸ್ ಮನೇಲಿ ೩೦೦೦ ರೂ ಕೊಡ್ತಾರೆ. ನಾನು ಹೆಚ್ಚು ಹಣ ಕೇಳಿದರೆ ’ನಿನಗೆ ಬೇಕಾದದ್ದನ್ನೆಲ್ಲಾ ನಾವೇ ಕೊಡಿಸ್ತೀವಿ, ಇನ್ನು ೫೦೦ ರೂಗಿಂತ ಹೆಚ್ಚಿನ ಹಣ ನಿನಗ್ಯಾತಕ್ಕೆ’ ಅಂತಾರೆ. ಆದರೆ ಇದರಿಂದ ನಾನು ಎಲ್ಲರ ಜೊತೆ ಬೆರೆಯೋಕ್ಕೆ ಅಗ್ತಾ ಇಲ್ಲ, ಕೀಳರಿಮೆ ಕಾಡುತ್ತೆ…. ಮೊನ್ನೆ ಅಮ್ಮನ ಪರ್ಸಿನಿಂದ ನನ್ನ ಖರ್ಚಿಗೆ ಹಣ ತೆಗೆದುಕೊಂಡೆ. ಅಮ್ಮನಿಗೆ ಗೊತ್ತಾಗಲಿಲ್ಲ. ನನ್ನ ಸಮಸ್ಯೇನೇ ಅವರಿಗೆ ಅರ್ಥ ಆಗಲ್ಲ, ನಾನು ದುಡ್ಡು ತೆಗೆದರೆ ಏನು ತಪ್ಪು’ ಅಂತ. ಓದಿದವಳು ಶಾಕ್ ಆಗಿ ಕೂತೆ. ಇಲ್ಲ ಅವಳು ಹಣ ತೆಗೆದಿದ್ದಕ್ಕಲ್ಲ, ಅಪ್ಪನ ಅಂಗಿಯಿಂದ ನಾವೂ ಸಹ ಎಷ್ಟೋ ಸಲ ಕಾಸು ಎತ್ತಿದ್ದೇವೆ, ಮಿಠಾಯಿ ತಿಂದಿದ್ದೇವೆ. ಆದರೆ ಆ ಹುಡುಗಿಯ ಪ್ರಶ್ನೆಯಲ್ಲಿದ್ದ ’ಧ್ವನಿ’ ನನ್ನನ್ನು ಬೆಚ್ಚಿಬೀಳಿಸಿತ್ತು. ಆ ಸಾಲುಗಳಲ್ಲಿ ಎಷ್ಟೇ ಹುಡುಕಾಡಿದರೂ ನನಗೆ ಒಂದು ಹನಿ ಗಿಲ್ಟ್ ಕಾಣಲಿಲ್ಲ …. ಇದ್ದದ್ದು ಅಪ್ಪ ಅಮ್ಮನ ಬಗ್ಗೆ ದೂಷಣೆ ಅಷ್ಟೆ.
ಮುಂದೆ ಓದುತ್ತಾ ಹೋದೆ … ಪುಣ್ಯಕ್ಕೆ ಅದಕ್ಕೆ ಉತ್ತರ ಕೊಟ್ಟಿದ್ದ ತಜ್ಞೆ ನೇರ ದನಿಯಲ್ಲಿ ಉತ್ತರ ಕೊಟ್ಟಿದ್ದಳು …. ’ನೀನು ಯಾವುದೇ ಹೆಸರಿನಿಂದ ಕರೆದರು, ಏನೇ ಸಮರ್ಥನೆ ಕೊಟ್ಟರೂ ಇದು ’ಕಳ್ಳತನ’ ಹುಡುಗಿ. ಅಪ್ಪ ಅಮ್ಮನನ್ನು ಇನ್ನು ಸ್ವಲ್ಪ ಹೆಚ್ಚು ಹಣ ಕೇಳು ಅಥವಾ ನಿನ್ನ ಖರ್ಚು ಕಡಿಮೆ ಮಾಡಿಕೋ. ಇಲ್ಲ ಅಂದ್ರೆ ನೀನು ಬಿಡುವಿನ ವೇಳೆಯಲ್ಲಿ ದುಡಿದು ಕೈ ಖರ್ಚಿಗೆ ಹಣ ಸಂಪಾದಿಸಿಕೋ’ ಅಂತ. ಆದರೆ ಯಾಕೋ ನನಗೆ ಅದನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲು ಸಾಧ್ಯ ಆಗಲಿಲ್ಲ. ಇಲ್ಲಿ ತಪ್ಪು ಆ ಹುಡುಗಿಯದು ಮಾತ್ರವಾ? ತಮ್ಮ ಸಾಮಾಜಿಕ ಪ್ರತಿಷ್ಠೆಗಾಗಿಯೋ ಅಥವಾ ತೀರಾ ಸೊಫೆಸ್ಟಿಕೇಟೆಡ್ ಶಾಲೆಯಲ್ಲಿ ಓದಿದರೆ ಮಾತ್ರ ಮಕ್ಕಳು ಮುಂದೆ ಬರುತ್ತಾರೆ ಎಂದು ಅಂತಹ ’ವೈಭವೋಪೇತ ’ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸುವ ಅಪ್ಪ ಅಮ್ಮಂದಿರದು ಇದರಲ್ಲಿ ಏನೂ ಪಾತ್ರ ಇಲ್ಲವಾ? ಆ ಹುಡುಗಿಯನ್ನು ಅಂತಹ ಶಾಲೆಗೆ ಸೇರಿಸುವುದರ ಜೊತೆಗೆ ಒಂದಿಷ್ಟು ಮೌಲ್ಯಗಳನ್ನೂ ಸಹ ಅವರು ಕಲಿಸಬೇಕಿತ್ತಲ್ಲವಾ?
ಭಾರತ ಮಕ್ಕಳ ಬಗ್ಗೆ, ಮಕ್ಕಳ ಭವಿಷ್ಯದ ಬಗ್ಗೆ ಹಗಲಿರುಳು ತಲೆಕೆಡಿಸಿಕೊಳ್ಳುವ, ಅದಕ್ಕಾಗಿ ತಾವು ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧವಾಗುವ ಮೇಲ್ ಮಧ್ಯಮ, ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿರುವ ದೇಶ. ಇಲ್ಲಿ ಮಕ್ಕಳಿಗಾಗಿ ತ್ಯಾಗ ಮಾಡುವುದು ಅಂದರೆ ಅದೊಂದು ಒಪ್ಪಿಕೊಂಡ ತತ್ವ. ಆದರೆ ಹೀಗೆ ತ್ಯಾಗ ಮಾಡಿ ಮಕ್ಕಳಿಗೆ ಬೇಕಾದ್ದು ಒದಗಿಸುವಾಗ ಒಂದು ಎಚ್ಚರಿಕೆಯ ಗಂಟೆ ಆಗೀಗ ಅಪ್ಪ ಅಮ್ಮಂದಿರ ತಲೆಯಲ್ಲಿ ಭಾರಿಸುತ್ತಲೇ ಇರಬೇಕು.
ಕೆಲವು ವರ್ಷಗಳ ಹಿಂದೆ ನಾನು ಭಾಗವಹಿಸಿದ್ದ ಸಭೆ ಒಂದರಲ್ಲಿ ಒಂದು ಭಾಷಣ ಇತ್ತು. ಭಾಷಣದ ಎಲ್ಲಾ ವಿವರಗಳು ಮರೆತು ಹೋಗಿದ್ದರೂ, ಅವರು ಹೇಳಿದ ಒಂದು ವಿಷಯ ನನ್ನ ಮನಸ್ಸಲ್ಲಿ ಹಾಗೇ ಉಳಿದುಕೊಂಡಿದೆ. ಅವರು ನಾವು ಬೆಳೆದ ಪರಿಸರ ಮತ್ತು ಈಗಿನ ಪರಿಸರವನ್ನು ’ನೋ ಜೆನೆರೇಶನ್’ ಮತ್ತು ’ಎಸ್ ಜೆನರೇಶನ್’ ಎಂದು ವಿಭಾಗಿಸಿದ್ದರು. ಇದ್ಯಾವುದು ಹೊಸ ಪದ ಅಂತ ನಾನು ನೆಟ್ಟಗೆ ಕುಳಿತೆ. ಅವರು ಮುಂದುವರಿಸಿದರು, ’ ಮೊದಲೆಲ್ಲಾ ನಾವು ಬೆಳೆಯುವಾಗೆಲ್ಲಾ ನಮಗೆ ಬೇಡಿಕೆಗಳು, ಕೋರಿಕೆಗಳು ಇರಲಿಲ್ಲ ಅಂತಲ್ಲ, ಇದ್ದವು. ಆದರೆ ಅದನ್ನು ಅಮ್ಮನ ಮೂಲಕ ನಾವು ಅಪ್ಪನ ಹತ್ತಿರ ಮಂಡಿಸಿದ ತಕ್ಷಣ ನಮಗೆ ಸಿಗುತ್ತಿದ್ದ ಖಾಯಂ ಉತ್ತರ ’ನೋ’, ಇಲ್ಲ ಅಂತಲೇ. ನಮ್ಮ ಅಪ್ಪ ಅಮ್ಮರಿಗೆ ನಮ್ಮ ಮೇಲೆ ಪ್ರೀತಿ ಇಲ್ಲ ಅಂತಲ್ಲ, ಆದರೆ ಅವರ ಆರ್ಥಿಕ ಮಿತಿ ಮತ್ತು ಅವರು ನಂಬಿದ್ದ ಮೌಲ್ಯಗಳ ಪ್ರಕಾರ ಅನಿವಾರ್ಯವಲ್ಲದ್ದ ಎಲ್ಲವೂ ಐಷಾರಾಮಿ ಅಂತಲೇ ಅನ್ನಿಸ್ತಿತ್ತು. ನಮ್ಮ ಹತ್ತು ಬೇಡಿಕೆಗಳಲ್ಲಿ ೯ ಬೇಡಿಕೆಗಳು ತಿರಸ್ಕೃತ ಆಗೋದು ನಮಗೂ ಗೊತ್ತಿರುತ್ತಿತ್ತು, ಹಾಗಾಗಿ ನಾವೂ ಏನೂ ತಲೆ ಕೇಡಿಸಿಕೊಳ್ಳುತ್ತಾ ಇರಲಿಲ್ಲ. ಆದರೆ ಒಪ್ಪಿಗೆಯಾದ ಆ ಒಂದು ಬೇಡಿಕೆ ನಮ್ಮನ್ನು ತಿಂಗಳುಗಟ್ಟಲೆ ಖುಷಿಯಾಗಿಡ್ತಾ ಇತ್ತು.
ಆದರೆ ಈಗ ಇರುವುದು ’ಯೆಸ್’ ಜೆನರೇಶನ್. ಮಕ್ಕಳು ಕೇಳುವ, ಮಂಡಿಸುವ ಬೇಡಿಕೆಗಳಲ್ಲಿ ಬಹುಪಾಲು ಮೊದಲ ಸುತ್ತಿನಲ್ಲೇ ಪೂರೈಕೆ ಆಗಿಬಿಡುತ್ತವೆ. ಹಲವು ಸಲ ಮಕ್ಕಳ ಪಟ್ಟಿಯಲ್ಲಿ ಇಲ್ಲದ ಬೇಡಿಕೆಗಳು ಸಹ. ಹೀಗಾಗಿ ಈಗ ತಯಾರಾಗುತ್ತಿರುವ ಜನಾಂಗಕ್ಕೆ ’ಆಗೋಲ್ಲ’ ಅನ್ನುವ ಪದವೇ ಅಪರಿಚಿತ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ ಅಂತ ಅವರು ಹೇಳಿದ್ದರು. ಈ ಮಾತು ನಾನು ಕೇಳಿದ್ದೆನಾದರೂ ಅದರ ಅರ್ಥ ಇನ್ನೂ ನನ್ನ ಎದೆಯೊಳಕ್ಕೆ ಇಳಿದಿರಲಿಲ್ಲ. ಅದು ಆಗಲು ನನಗೆ ಮತ್ತೂ ೧೦ ವರ್ಷ ಸಮಯ ಬೇಕಾಯ್ತು.
ಒಮ್ಮೆ ಗೆಳೆಯರ ಗುಂಪು ಹೊರಗೆ ಹೋಗಿದ್ದೆವು. ಗುಂಪಿನಲ್ಲಿ ಒಂದು ಕುಟುಂಬಕ್ಕೆ ಇಬ್ಬರು ಸಣ್ಣ ಸಣ್ಣ ಮಕ್ಕಳು, ಅಮ್ಮ ಆ ಮಕ್ಕಳನ್ನು ನೋಡುಕೊಳ್ಳುವುದಕ್ಕೆ ಸಮಯ ಸಾಲದೆ ಮನೆಯಲ್ಲಿದ್ದಳು. ದುಡಿಯುತ್ತಿದ್ದು ಅಪ್ಪ ಮಾತ್ರ. ಅಪ್ಪ ಒಳ್ಳೆ ಕೆಲಸದಲ್ಲೇ ಇದ್ದ, ಆದರೆ ಜಾಣತನದಿಂದ ಸಂಸಾರ ಸಾಗಿಸಿದರೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬಹುದು ಎನ್ನುವ ಪರಿಸ್ಥಿತಿ. ಇನ್ನೊಂದು ಕುಟುಂಬದಲ್ಲಿ ಒಬ್ಬನೇ ಮಗ. ಹಾಗಾಗಿ ಆ ಮಗುವಿಗೆ ಬೇಕೆನಿಸಿದ್ದು ತೆಗೆದುಕೊಡುವ ಪರಿಸ್ಥಿತಿ ಇತ್ತು ಮನೆಯಲ್ಲಿ. ಮಗುವಿಗೆ ಒಂದು ಆಟ ಆಡುವ ಎಲೆಕ್ಟ್ರಾನಿಕ್ ಉಪಕರಣ ಕೊಡಿಸಿದ್ದರು. ಆ ಮಗು ಉಳಿದ ಮಕ್ಕಳೊಡನೆ ಅದನ್ನು ಆಡುತ್ತಾ ಇತ್ತು. ನಾನು ಅಲ್ಲೇ ಕೂತಿದ್ದೆ.
ಮೊದಲ ಕುಟುಂಬದ ಹಿರಿಯ ಮಗು, ’ಆಶೂ ನೀನು ತುಂಬಾ ಲಕ್ಕಿ’ ಅಂತು. ನಾನು ಅವನ ಕಡೆ ತಿರುಗಿ, ’ಯಾಕೋ’ ಅಂದೆ. ಆಟಿಕೆಗಾಗಿ ಮಗು ಹಾಗೆ ಹೇಳ್ತಿದೆ ಅಂತ ನನ್ನ ಅಂದಾಜು. ’ಅವನು ಒಬ್ಬನೆ ಇದಾನಲ್ಲವಾ ಆಂಟಿ, ನಮ್ಮನೇಲಿ ತಮ್ಮ ಹುಟ್ಟದೆ ಇದ್ದರೆ, ನನಗೂ ಇವೆಲ್ಲಾ ತೆಕ್ಕೊಡ್ತಾ ಇದ್ರು…’ ಅಂತು ಮಗು. ನಾನು ಸ್ಥಬ್ಧಳಾಗಿದ್ದೆ. ದೇವರೆ ಇದೆಂತಹ ವಿಷದ ವಾತಾವರಣದಲ್ಲಿ ಬೆಳೆಸುತ್ತಿದ್ದೇವೆ ನಾವು ಮಕ್ಕಳನ್ನು… ಮಗು ಆಟಿಗೆ ಬೇಕು ಅಂತ ಆಸೆ ಪಡುವುದು ಸಹಜ, ಆದರೆ ತಮ್ಮ ಹುಟ್ಟದಿದ್ದರೆ ತಾನು ಇನ್ನೂ ಸುಖವಾಗಿರಬಹುದಿತ್ತು ಎಂದು ಆಶಿಸುವುದು… ಯಾಕೋ ಜೀರ್ಣಿಸಿಕೊಳ್ಳಲಾಗಲಿಲ್ಲ ನನಗೆ.. ’ಓಡು ಓಡು … ನಿನ್ನ ಗೆಳೆಯನನ್ನು ಹಿಂದೆ ತಳ್ಳಿ ಓಡು ಎಂದು ನಾವು ಕಲಿಸಿದೆವು, ’ಬೇಕು, ಬೇಕು, ಬೇಕು …. ಮನೆಯಲ್ಲಿ ಒಬ್ಬನೇ ಇದ್ದರೆ ಎಲ್ಲವೂ ನನ್ನದೆ’ ಎನ್ನುವುದನ್ನು ವ್ಯವಸ್ಥೆ ಕಲಿಸಿತು…

ಚಿತ್ರ ಕೃಪೆ : ಛಾಯಾ ಭಗವತಿ
ಇದ್ಯಾಕೆ ಹೀಗಾಯ್ತು….? ಹೀಗೆ ಮಕ್ಕಳ ಅಂಗಳಕ್ಕೆ ಮೊಬೈಲು, ಟ್ಯಾಬು, ಪ್ಲೇ ಸ್ಟೇಶನ್ನು ಇವೆಲ್ಲಾ ಹೇಗೆ ಬಂತು?? ಮೊದಲನೆಯದಾಗಿ ಮುಕ್ತ ಮಾರುಕಟ್ಟೆ, ಬದಲಾದ ಆರ್ಥಿಕ ನೀತಿ ದೇಶದೊಳಕ್ಕೆ ಅಪಾರ ಹಣವನ್ನು ಮಾತ್ರ ತರಲಿಲ್ಲ, ಅಪರಿಮಿತ ಸಾಲದ ಅವಕಾಶವನ್ನೂ ಸಹ ತಂದಿತ್ತು. ನೀವು ಮುಂದಿನ ಹದಿನೈದು ವರ್ಷದಲ್ಲಿ ದುಡಿಯುವ ಹಣವನ್ನು ಇಂದೇ ಖರ್ಚು ಮಾಡಬಲ್ಲ ಸವಲತ್ತನ್ನೂ ತಂದಿತ್ತಿತು … ಇದುವರೆಗೂ ಹಣ ಅಂದರೆ ಕೈಯಲ್ಲಿಟ್ಟ ಕಾಸು ಮಾತ್ರ ಅಂದುಕೊಂಡಿದ್ದ ನಮಗೆ ಒಂದು ಪ್ಲಾಸ್ಟಿಕ್ ಕಾರ್ಡ್ ಬ್ಯಾಂಕಿನ ಹಾಗೆ ಬಂದು ಪರ್ಸಿನಲ್ಲಿ ಕೂತಿತು. ಎರಡನೆಯದು ಅಂದರೆ ಮಕ್ಕಳನ್ನು ಬಿಟ್ಟು ಹೊರಗಡೆ ಕೆಲಸಕ್ಕೆ ಹೋಗುತ್ತಿದ್ದೇವೆ ಮತ್ತು ಅವರಿಗೆ ಕೊಡಬೇಕಾದ ಸಮಯವನ್ನು ಕೊಡಲಾಗುತ್ತಿಲ್ಲ ಎಂದು ಅಪ್ಪ ಅಮ್ಮನ ಮನಸ್ಸಿನಲ್ಲಿಯ ಗಿಲ್ಟ್. ಈ ವ್ಯವಸ್ಥೆ ’ಕ್ವಾಲಿಟಿ ಟೈಮ್’ ಎನ್ನುವ ಹೊಸ ಪದವನ್ನೇ ಹುಟ್ಟುಹಾಕಿತು. ಅಂದರೆ ನೀವು ಪರಸ್ಪರ ಜೊತೆಯಲ್ಲಿ ಕಳೆಯುವ ಸಮಯಕ್ಕಿಂತ ಆ ಸಮಯದಲ್ಲಿ ನೀವು ಏನು ಮಾಡುತ್ತೀರಿ ಎನ್ನುವುದು ಮುಖ್ಯವಾಯಿತು. ಆದರೆ ವಿಪರ್ಯಾಸ ಎಂದರೆ ಈ ಕ್ವಾಲಿಟಿ ಟೈಮ್ ಅನ್ನು ವ್ಯಕ್ತಿಗಳ ಬದಲು ವಸ್ತುಗಳು ಆಳತೊಡಗಿದ್ದು.
ಮಕ್ಕಳಿಗೆ ಅವರಿಗೆ ಏನು ಬೇಕು ಅಂತ ಯೋಚಿಸುವುದಕ್ಕೂ ಮೊದಲು, ನಾವು ಎಷ್ಟು ಕೊಡಬಲ್ಲೆವು ಎನ್ನುವುದು ನಿರ್ಣಾಯಕ ಆಗುತ್ತಾ ಹೋಯಿತು. ಇಂದು ೪-೫ ತರಗತಿಯ ಮಕ್ಕಳು ’ಬ್ರಾಂಡ್’ ಬಗ್ಗೆ ಮಾತನಾಡುತ್ತವೆ. ಅವರು ಹಾಕುವ ಶೂ ನಿಂದ ಹಿಡಿದು ತಿನ್ನುವ ಚಾಕೋಲೇಟಿನವರೆಗೂ ಅವರ ಆದ್ಯತೆಗಳಿವೆ, ಪ್ರತಿಯೊಂದರಲ್ಲೂ ಅಭಿಪ್ರಾಯ ಮಂಡಿಸುವಷ್ಟು ಅಸರ್ಟಿವ್ ಇದ್ದಾರೆ ಮಕ್ಕಳು.
ಇನ್ನೊಂದು ಬೆಳವಣಿಗೆ ಎಂದರೆ ಮಕ್ಕಳಿಗೆ ಅಪ್ಪ ಅಮ್ಮ ಕೂತು ಲಕ್ಷಣವಾಗಿ ಲಂಚದ ಅಭ್ಯಾಸ ಮಾಡಿಸಿದ್ದು. ’ಈ ಸಲ ಇಷ್ಟು ಮಾರ್ಕ್ಸ್ ತೆಗೆದರೆ ನಿನಗೆ ವಾಚು, ನಿನ್ನ ಫ್ರೆಂಡ್ ಗಿಂತ ಜಾಸ್ತಿ ಮಾರ್ಕ್ಸ್ ತೆಗೆದರೆ ಈ ಸಲ ಟಚ್ ಸ್ಕ್ರೀನ್ ಮೊಬೈಲ್, ಕ್ಲಾಸಿಗೇ ಫಸ್ಟ್ ಬಂದರೆ ಪ್ಲೇ ಸ್ಟೇಷನ್….’ ಹೀಗೆ ಆಮಿಷಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮಕ್ಕಳು ಒಳ್ಳೆ ಅಂಕ ತೆಗೆದಾಗ ಅದನ್ನು ಪ್ರೋತ್ಸಾಹಿಸುವುದು, ಖುಷಿಗೆ ಏನಾದರೂ ಕೊಡಿಸುವುದು ತಪ್ಪಲ್ಲ. ಆದರೆ ಮಕ್ಕಳಿಗೆ ವಿಪರೀತ ಬೆಲೆಯ ಆಟಿಗೆ ವಸ್ತುಗಳನ್ನು ಕೊಡಿಸುವುದು ಒಂದು ತಪ್ಪು ಮೇಲ್ಪಂಕ್ತಿಯನ್ನು ಹಾಕಿದಂತಾಗುತ್ತದೆ.
ಅದೇ ಸಮಯದಲ್ಲಿ ಆದ ಮಾಧ್ಯಮ ಕ್ರಾಂತಿ. ದೃಶ್ಯ ಮಾಧ್ಯಮ ಜಾಹಿರಾತುಗಳನ್ನು ನೇರ ಮನೆಯ ನಡುಮನೆಗೇ ಹೊತ್ತೊಯ್ದು ಇಡಲು ಪ್ರಾರಂಭಿಸಿತು.
ಹೀಗೆ ಹತ್ತು ಹಲವು ಕಾರಣಗಳಿಂದ ಬೆಳೆದದ್ದು ಮಕ್ಕಳ ಮಾರುಕಟ್ಟೆ… ನಿಮಗೆ ಆಶ್ಚರ್ಯ ಆಗಬಹುದು ಇಂದು ಭಾರತದ ಮಾರುಕಟ್ಟೆಯಲ್ಲಿ ಮುಖ್ಯ ಗಿರಾಕಿಗಳು ಅಂದರೆ ಇಲ್ಲ ಹೆಂಗಸರಲ್ಲ, ಮಕ್ಕಳು. ಹೌದು ಭಾರತದಲ್ಲೇ ಅಲ್ಲ ಇಡೀ ವಿಶ್ವದಲ್ಲೇ ಅತ್ಯಂತ ಫಲಭರಿತವಾದ, ಅತ್ಯಂತ ಲಾಭದಾಯಕವಾದ ಮಾರುಕಟ್ಟೆ ಎಂದರೆ ಮಕ್ಕಳ ಮಾರುಕಟ್ಟೆ. ಹಸುಗೂಸುಗಳಿಗೆ ಬೇಕಾದ, ಬೇಡವಾದ ಹಾಲಿನ ಉತ್ಪನ್ನಗಳಿಂದ ಹಿಡಿದು, ಮಕ್ಕಳು ಬಳಸುವ ಪೆನ್ಸಿಲ್, ಅಳಿಸುವ ಇರೇಸರ್, ಬಣ್ಣ, ಪುಸ್ತಕ, ಜಾಮಿಟ್ರಿ ಬಾಕ್ಸ್, ಊಟದ ಡಬ್ಬಿ, ನೀರಿನ ಬಾಟಲ್, ಆಟಿಗೆ ಎಲ್ಲಕ್ಕೂ ಮೀರಿ ಬೆಳೆಯುವ ಮಕ್ಕಳ ತಿಂಡಿ ತೀರ್ಥ…. ಎಲ್ಲ ಎಲ್ಲವನ್ನೂ ನಿರ್ಧರಿಸುವುದು … ಇಲ್ಲ ಮಗುವಿನ ಅಪ್ಪ ಅಮ್ಮ ಅಲ್ಲ, ಮಗು ಸಹ ಅಲ್ಲ … ಅದನ್ನು ನಿರ್ಧರಿಸುವುದು, ಅದರ ಪ್ರಮಾಣವನ್ನು ನಿರ್ಧರಿಸುವುದು ಯಾವುದೋ ಕಂಪನಿಯಲ್ಲಿ ಕುಳಿತ ಒಬ್ಬ ಆರ್ಥಿಕ ತಜ್ಞ. ಆತ ನಿರ್ಧರಿಸಿದ ಟಾರ್ಗೆಟ್ ಗೆ ಅನುಗುಣವಾಗಿ ಜಾಹಿರಾತಿನ ಹಣ ನಿರ್ಧಾರವಾಗುತ್ತದೆ. ಜಾಹಿರಾತನ್ನು ಪದೇ ಪದೇ, ಪದೇ ಪದೆ ಮಕ್ಕಳು ನೋಡುವ ಚಾನಲ್ ಗಳಲ್ಲಿ ಬಿತ್ತರಿಸಲಾಗುತ್ತದೆ.
ನಾವೆಲ್ಲಾ ಹುಟ್ಟಿದಾಗ ಅಮ್ಮನ ಹಾಲು ನಮ್ಮ ಊಟ. ಆದರೆ ನಾವು ನೋಡುತ್ತಿರುವಂತೆಯೇ ಪರಿಸ್ಥಿತಿ ಬದಲಾಯಿತು. ಗುಂಡು ಗುಂಡಾದ ಮುದ್ದು ಮುದ್ದು ಮಕ್ಕಳ ಫೋಟೋ ಜಾಹೀರಾತಿನಲ್ಲಿ ರಾರಾಜಿಸತೊಡಗಿದವು. ಸರಿ ಮಗುವಿಗೆ ಒಂದು ತಿಂಗಳಿರುವಾಗ ಏನೇನು ಕೊಡಬಹುದು, ಏನೇನು ಕೊಡಬೇಕು ಎನ್ನುವುದನ್ನು ಹತ್ತು ಮಕ್ಕಳನ್ನು ಬೆಳೆಸಿದ ಹೆಂಗಸರಿಗೆ ಮಕ್ಕಳ ಮೋರೆಯನ್ನೇ ನೋಡದ ವಿಶೇಷಜ್ಞರು ಕಲಿಸಿದರು. ಈಗ ಏನಾಯ್ತಪ್ಪ ಅಂದ್ರೆ ಮೊನ್ನೆ ಟಿವಿ ನೋಡುವಾಗ ಅಮೀರ್ ಖಾನ್, ನೆನಪಿಟ್ಟುಕೊಳ್ಳಿ ಅಂತ ಬೆರಳು ಮಡಸಿ ಹೇಳ್ತಾ ಇದ್ದ, ’ಮಕ್ಕಳಿಗೆ ಆರು ತಿಂಗಳು ತುಂಬುವವರೆಗೂ ಅಮ್ಮನ ಹಾಲು ಮಾತ್ರ ಕುಡಿಸಿ, ಬೇರೆ ಮೇಲಿನ ಆಹಾರ ಏನೂ ಬೇಡ, ನೀರು ಸಹ ಬೇಡ’ ಅಂತ. ಹಾಗಾದರೆ ಇಷ್ಟು ದಿನ ಹಸುಕಂದಮ್ಮಗಳ ಹೊಟ್ಟೆಯಲ್ಲಿ ನಾವು ತುಂಬಿದ್ದೇನು?
ಇನ್ನೊಂದು ಜಾಹಿರಾತು. ಮಕ್ಕಳು ಹೆಚ್ಚು ಓದಬೇಕು ಅಂದರೆ ಒಂದು ತಂಪು ಪಾನೀಯ ಬೇಕು ಅನ್ನುತ್ತಾವೆ. ಒಬ್ಬ ಅಮ್ಮ, ಪರಮ ಜಾಣೆಯಂತೆ ಚಿತ್ರಿತವಾದ ಹೆಣ್ಣು, ಅದಕ್ಕೆ ’ಹೂ’ ಅಂದು, ತನ್ನ ಗೆಳತಿಯರಿಗೆ ಹೇಳುತ್ತಾಳೆ. ಪರವಾಗಿಲ್ಲ ಅದರಲ್ಲಿ ಹಣ್ಣಿನ ಸತ್ವ ಇರುತ್ತದೆ’ ಅಂತ. ಅದರಲ್ಲಿ ಹಣ್ಣಿನ ಸತ್ವ ಇದೆ ಅಂತ ಹೇಳುವ ಯಾರೂ ಅದರಲ್ಲಿರುವ ಮಿಕ್ಕ ರಾಸಾಯನಿಕಗಳ ಬಗ್ಗೆ ಮಾತಾಡುವುದೇ ಇಲ್ಲ. ಅಲ್ಲ ಬೆಳೆಯುತ್ತಿರುವ ಮಕ್ಕಳು ಹಣ್ಣಿನ ಸತ್ವ ಕೆಲವು ಭಾಗದಲ್ಲಿ ಇರುವ ಈ ಜ್ಯೂಸುಗಳನ್ನು ಯಾಕೆ ಕುಡೀಬೇಕು, ಅದರ ಬದಲು ಹಣ್ಣನ್ನೇ ತಿನ್ನಬಹುದಲ್ಲಾ? ಅದರ ಜೊತೆಯಲ್ಲಿನ ಮಿಕ್ಕ ಎಲ್ಲವೂ ಮಕ್ಕಳ ಹೊಟ್ಟೆ ಯಾಕೆ ಸೇರಬೇಕು?? ಈಗ ಬೆಳೆಯುತ್ತಿರುವ ಮಕ್ಕಳೆಲ್ಲಾ ನಮ್ಮ ತಿಂಡಿಗಳ ಬಗ್ಗೆ ಹಠಾತ್ ವೈರಾಗ್ಯ ಬೆಳೆಸಿಕೊಂಡು ಮ್ಯಾಗಿ ಮತ್ತಿತರ ಸಿದ್ಧ ತಿಂಡಿಗಳ ಬಗ್ಗೆ ಮೋಹ ಬೆಳೆಸಿಕೊಂಡರಲ್ಲ, ಹೇಗಾಯ್ತು ಇದು. ಎಲ್ಲಾ ಮಕ್ಕಳು ಅಮ್ಮನ ಗರ್ಭದಲ್ಲೇ ಸಾಂಪ್ರದಾಯಿಕ ತಿಂಡಿ ತಿನ್ನುವುದಿಲ್ಲ ಎಂದು ಠರಾವು ಪಾಸು ಮಾಡಿದ ಹಾಗೆ? ಇಲ್ಲಿ ಬಂದದ್ದು ಅದೇ ಜಾಹಿರಾತು. ಮತ್ತೆ ಮತ್ತೆ ಅದನ್ನೇ ಪ್ರಸಾರ ಮಾಡಿ ಬ್ರೇನ್ ವಾಶ್ ಮಾಡಿ, ಅದು ಜಗತ್ತಿನ ಸರ್ವಶ್ರೇಷ್ಠ ಮಕ್ಕಳ ಆಹಾರ ಎನ್ನುವ ಹಾಗೆ ಆಗಿದೆ. ನಮ್ಮ ಸಾಂಪ್ರದಾಯಿಕ ತಿಂಡಿಗಳು, ಬಾಯಾಡಿಸುವ ತಿರು ತಿಂಡಿಗಳಿಗೆಲ್ಲಾ ಯಾವಾಗ ಕಡ್ಡಾಯ ನಿವೃತ್ತಿ ಘೋಷಣೆ ಆಯಿತು??
ಈಗ ತಿಂಡಿಗಳು ಪ್ಯಾಕೆಟ್ ನಲ್ಲಿ ಬರುತ್ತಿವೆ ಮತ್ತು ಎಲ್ಲಕ್ಕೂ expiry date ಇರುತ್ತವೆ. ಹೌದು ಈಗೀಗ ಎಲ್ಲಕ್ಕೂ expiry date ಇರುತ್ತದೆ… ಎಲ್ಲಕ್ಕೂ…
I am what I am ಅನ್ನುವುದು ಹೋಗಿ I am what I have ಹೆಚ್ಚು ಚಲಾವಣೆಯ ನಾಣ್ಯ ಆಗಿದೆ.
ಹಣದ ಕೊರತೆ ಇದ್ದ ಕಾಲ ನಮಗೆ ಹಂಚಿಕೊಂಡು ಬದುಕುವುದನ್ನು ಕಲಿಸಿತು. ಅಗತ್ಯ – ಅನಿವಾರ್ಯತೆಗಳ ನಡುವೆ ವ್ಯತ್ಯಾಸ ಗುರ್ತಿಸುವುದನ್ನು ಕಲಿಸಿತು … ಆದರೆ ಹಣದ ಸಮೃದ್ಧಿ ಯಾಕೆ ನಮ್ಮನ್ನು ಹೆಚ್ಚು ಹೆಚ್ಚು ಸ್ವಾರ್ಥಿಗಳನ್ನಾಗಿಸಿದೆ??
ಹತ್ತು ’ನೋ’ ಗಳ ನಡುವೆ ಬರುತ್ತಿದ್ದ ಒಂದು ’ಯೆಸ್’ ಕೊಡುತ್ತಿದ್ದ ಖುಷಿ ದೊಡ್ಡದಾ ಅಥವಾ ಹತ್ತು ’ಯೆಸ್’ ಗಳ ನಡುವೆ ಬರುವ ಒಂದು ’ನೋ’ ಕೊಡುವ ಆಘಾತ ದೊಡ್ಡದಾ ಮತ್ತು ಅದನ್ನು ಸಹಿಸುವ ಅನುಭವಿಸುವ ಮನಸ್ಸನ್ನು ನಾವು ಬೆಳೆಸುತ್ತಿದ್ದೇವೆ ಎನ್ನುವುದರ ಮೇಲೆ ಈ ಬದಲಾದ ಕಾಲದ, ಬದಲಾದ ಜೀವನ ಮೌಲ್ಯಗಳ ಯಶಸ್ಸು ನಿರ್ಧಾರವಾಗುತ್ತದೆ.
ನಾವು ಕಳುಹಿಸುವ ದುಬಾರಿ ಶಾಲೆಗಳು ಮಕ್ಕಳನ್ನು ಅವರ ಉದ್ಯೋಗಕ್ಕೆ ಮಾತ್ರ ತಯಾರು ಮಾಡುತ್ತವೆ, ಆದರೆ ಅವರನ್ನು ಬದುಕಿಗೆ ತಯಾರು ಮಾಡುವ ಹೊಣೆ ಇರುವುದು ನಮ್ಮ ಮೇಲೆ .. ಮಕ್ಕಳಿಗೆ ಸರಳತೆ ಮತ್ತು ಸಂಯಮಗಳನ್ನು ಕಲಿಸೋಣಾ … ಯಾವುದಕ್ಕೂ ಮಕ್ಕಳ ಬೇಡಿಕೆಗೆ ’ಯೆಸ್’ ಎನ್ನುವ ಮೊದಲು ಒಂದು ’ನೋ’ ಅನ್ನು ಸಹಿಸುವ, ಭರಿಸುವ ಶಕ್ತಿಯನ್ನೂ ಅವರೊಳಗೆ ಬೆಳೆಸೋಣ…

‍ಲೇಖಕರು avadhi

August 2, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

32 ಪ್ರತಿಕ್ರಿಯೆಗಳು

  1. mahantesh

    Very well written. Same thing I am observing in my apartments also.Parents are too busy with their work and always think of Quality time means earning money.

    ಪ್ರತಿಕ್ರಿಯೆ
  2. samudyatha

    “ನಾವು ಕಳುಹಿಸುವ ದುಬಾರಿ ಶಾಲೆಗಳು ಮಕ್ಕಳನ್ನು ಅವರ ಉದ್ಯೋಗಕ್ಕೆ ಮಾತ್ರ ತಯಾರು ಮಾಡುತ್ತವೆ, ಆದರೆ ಅವರನ್ನು ಬದುಕಿಗೆ ತಯಾರು ಮಾಡುವ ಹೊಣೆ ಇರುವುದು ನಮ್ಮ ಮೇಲೆ ”
    – ತುಂಬಾ ಸೂಕ್ತವಾದ ಮಾತನ್ನು ಹೇಳಿದ್ದೀರಿ

    ಪ್ರತಿಕ್ರಿಯೆ
  3. Rj

    ಇವತ್ತಿನ ಒಂದು ಗಂಭೀರ ಸಮಸ್ಯೆಯನ್ನು ಅತ್ಯಂತ ಜತನದಿಂದ ಹೇಳಿದ್ದೀರಿ.
    ನನಗೆ ತುಂಬ ಇಷ್ಟವಾಯಿತು.
    -Rj

    ಪ್ರತಿಕ್ರಿಯೆ
  4. ಶಮ, ನಂದಿಬೆಟ್ಟ

    “I am what I am ಅನ್ನುವುದು ಹೋಗಿ I am what I have ಹೆಚ್ಚು ಚಲಾವಣೆಯ ನಾಣ್ಯ ಆಗಿದೆ.
    ಹಣದ ಕೊರತೆ ಇದ್ದ ಕಾಲ ನಮಗೆ ಹಂಚಿಕೊಂಡು ಬದುಕುವುದನ್ನು ಕಲಿಸಿತು. ಅಗತ್ಯ – ಅನಿವಾರ್ಯತೆಗಳ ನಡುವೆ ವ್ಯತ್ಯಾಸ ಗುರ್ತಿಸುವುದನ್ನು ಕಲಿಸಿತು … ಆದರೆ ಹಣದ ಸಮೃದ್ಧಿ ಯಾಕೆ ನಮ್ಮನ್ನು ಹೆಚ್ಚು ಹೆಚ್ಚು ಸ್ವಾರ್ಥಿಗಳನ್ನಾಗಿಸಿದೆ??
    ಮಕ್ಕಳಿಗೆ ಅವರಿಗೆ ಏನು ಬೇಕು ಅಂತ ಯೋಚಿಸುವುದಕ್ಕೂ ಮೊದಲು, ನಾವು ಎಷ್ಟು ಕೊಡಬಲ್ಲೆವು ಎನ್ನುವುದು ನಿರ್ಣಾಯಕ ಆಗುತ್ತಾ ಹೋಯಿತು.”
    ಸಂಧ್ಯಾ ಇವೆಲ್ಲವೂ ಮೌಲಿಕವಾದ ಪ್ರಶ್ನೆಗಳೇ ಮತ್ತು ಮುಂದಿನ ದಿನಗಳಲ್ಲಿ ಊಹೆಗೂ ನಿಲುಕದ ಗಂಭೀರ ಸಮಸ್ಯೆಯನ್ನು ಸೃಷ್ಟಿ ಮಾಡಬಲ್ಲಂಥವುಗಳು.. ತುಂಬ ನವಿರಾಗಿ ಅಷ್ಟೇ ಗಂಭೀರವಾಗಿ ಹೇಳಿದ ರೀತಿಗೆ ಹ್ಯಾಟ್ಸ್ ಆಫ್..
    ನಮ್ಮ ಮಗುವನ್ನು ನೊಡಿಕೊಳ್ಳಲು ಬರೋ ನಮ್ಮ ಸಹಾಯಕಿ ವಾರಕ್ಕೆ 4-5 ಸಲವಾದರೂ ಹೇಳುತ್ತಾಳೆ “ಅಕ್ಕಾ ಇರೋದು ಒಂದು ಮಗು ಅದಕ್ಕೂ ಕೇಳಿದ್ದೆಲ್ಲ ಕೊಡ್ಸೋಲ್ಲ ಅಂತೀರಲ್ಲ; ಎಷ್ಟು ಮುದ್ದಾಗಿ ಕೇಳಿದ್ರೆ ನಾನು ಸಾಲ ಮಾಡಿಯಾದ್ರೂ ತಂದ್ಕೊಡ್ತಿದ್ದೆ” ಅಂತ. ಕೇಳಿ ಕೇಳಿ ಸಾಕಾಗಿ ನಾನು ತಡೀಲಾರ್ದೆ ಒಂದಿನ ಹೇಳಿದೆ “ಸಾಲ ಮಾಡಿ ತರೋದಕ್ಕೇ ನೀವು ಹಾಗಿದೀರ ಮತ್ತು ನಾ ಹೀಗಿದೀನಿ” ಅಂತ. ಅವತ್ತಿಂದ ಸ್ವಲ್ಪ ಕಡಿಮೆಯಾಗಿದೆಯಾದರೂ ಪೂರ್ತಿ ನಿಂತಿಲ್ಲ. ವಿಶೇಷ ಅಂದರೆ ಅಪ್ಪ ಅಮ್ಮ ತನಗೆ ಅವಶ್ಯಕವಾಗಿದ್ದನ್ನೆಲ್ಲ ಕೊಡಿಸ್ತಾರೆ ಹೊರತು ಕೇಳಿದ್ದನ್ನೆಲ್ಲ ಅಲ್ಲ ಅನ್ನೋದು ಮಗಳಿಗೇ ಅರ್ಥವಾಗಿದೆ.. ಅಷ್ಟರ ಮಟ್ಟಿಗೆ ನಾವು ಖುಷ್…

    ಪ್ರತಿಕ್ರಿಯೆ
  5. Geetha b u

    Very well written sandhya. thought provoking . What can we do?? Nowadays I see young parents not letting their children watch t v. Good for eyes as well as mind. When we as parents compare our children with other children, they too compare us with other parents. Materialistic world breeds materialistic thoughts and consumerism breeds more necessities.

    ಪ್ರತಿಕ್ರಿಯೆ
  6. shobhavenkatesh

    lekhana thuuuuumba chnnagide…intha talksuu parents munde adare chennagiruthe. Yesgala naduve NO. NO galanaduve YES na vicharagalu thumba chennagi muudibandide.

    ಪ್ರತಿಕ್ರಿಯೆ
  7. Raghunandan K

    ವೈಚಾರಿಕ ಲೇಖನ, ವಿಚಾರ ಮಾಡುವವರು ಯಾರು ಅನ್ನುವುದು ಪ್ರಶ್ನೆ..
    ಇಷ್ಟವಾಯಿತು.

    ಪ್ರತಿಕ್ರಿಯೆ
  8. sunil rao

    Beautifully narrated.
    Nanna snehiteyobbalu international school nalli teacher aagi kelsa maadtaale:paata maaduvaaga china wall bagge ivalu baree paata maadidre, aa makkalu adaagle nodkomde bandirtaarante. Ashte alla…”what u know” anno thara teachers hatra maataadtaare.
    Benz car galalli baro makkala kathe idu…
    10 rupai ge appana bali, nooraaru prashne ge uttara kottu…5rupai padeetidda dinagalu nenapaagtide….

    ಪ್ರತಿಕ್ರಿಯೆ
  9. veena shivanna

    Dear sandhya,
    Well written and splendid in terms of contents, volume, examples and many things in it. When ever I read anything, I probably put myself into the subject and think.
    Not sure if this article is targeted for a set of audience or in general. With active 3 decades that I have lived and seen both worlds and having played multiple roles in life (daughter, sister, wife, mother, employee) I ask my self few questions like below.
    1. Was there anything that changed drastically that we are making hue and cry out of it?
    2. Is it only with me or happening everywhere?
    3 Does this whole thing work ? Am I leading it to right path ?
    Well, I know what you are saying and also kind of content that is presented here. As a mother, how does one look at it, as a child educationist how does one look at it, as a parent belonging to previous generation one looks at it. When it comes to my own and others – do we measure it with same scale???
    Couple of times, I have had issues convinicing my own self for the actions of my own and finally blame it on situation. Few times, I as a mother yield to my child’s requests/demand and go give him what is being asked and most of the times, I keep it firm and say NO. Not that I have a formula to it but just it works as it works for every other person.
    There is no perfect parenting, its all situational. My mother managed 4 children and we struggle for one. I suspect how we can compare it with generations when we don’t know how much each generation is measured in terms of number of years? Many a times, for the same subject, me and my spouse cannot convince each other, we more or less belong to same generation and my own siblings has issues with ideas/flow of thoughts.. So Is that all due to this generation thing what is happening? Just questioning myself….!! 🙂

    ಪ್ರತಿಕ್ರಿಯೆ
  10. ಪು. ಸೂ . ಲಕ್ಷ್ಮೀನಾರಾಯಣ ರಾವ್

    ಸಂಧ್ಯಾರಾಣಿಯವರೆ ಜ್ವಲಂತವಾದ ವಿಷಯವೊಂದನ್ನು ಪರಿಣಾಮಕಾರಿಯಾಗಿ ಮಂಡಿಸಿದ್ದೀರಿ, ಒಳ್ಳೆಯದಾಯ್ತು.
    ಈಗಿನ ಕೊಳ್ಳುಬಾಕ ಸಂಸ್ಕೃತಿಯು ಯುವ ಪೋಷಕರನ್ನು ದಾರಿತಪ್ಪಿಸುತ್ತಿದೆ. ಕೊಳ್ಳುವ ಸಾಮರ್ಥ್ಯದ ಮೇಲೆ ಮನುಷ್ಯನ ಶ್ರೇಷ್ಠತೆಯನ್ನು ನಿರ್ಣಯಿಸುವುದನ್ನು ನೋಡುತ್ತಿದ್ದೇವೆ. ಇದಕ್ಕೆಲ್ಲ ಕಾರಣ ನಮ್ಮ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಜಾಗತೀಕರಣದ ಜಾಲ. ಇದರ ಫಲವಾಗಿ ಜಾರಿಗೆ ಬಂದಿರುವ ಮುಕ್ತ ಮಾರುಕಟ್ಟೆಯ ನೀತಿ, ಖಾಸಗೀಕರಣ, ಪಾಶ್ಚ್ಯಾತ್ಯೀಕರಣ ಮತ್ತು ನಮ್ಮ ಸಂಸ್ಕೃತಿ -ಪರಂಪರೆಗಳ ಉತ್ತಮಾಂಶಗಳ ಬಗೆಗೆ ಅರಿವಿಲ್ಲದಿರುವುದು. ಈ ಸಾಂಸ್ಕೃತಿಕ ಹಾಗು ಸಾಮಾಜಿಕ ಸುನಾಮಿಯನ್ನು ತಡೆಯಲು ಸಾಧ್ಯವಿಲ್ಲದಷ್ಟು ಮುಂದೆ ಬಂದುಬಿಟ್ಟಿದ್ದೇವೆ……. . ಉಪ್ಪು ತಿಂದ ಮೇಲೆ ನೀರು ಕುಡಿಯಲೆಬೇಕಲ್ಲವೆ?

    ಪ್ರತಿಕ್ರಿಯೆ
  11. ಶಿವ

    ಬಹಳ ಒಳ್ಳೆಯ ಲೇಖನ. ಓದುತ್ತಾ ಹೋದಂತೆಲ್ಲಾ ಬೇಸರವಾಗುತ್ತದೆ, ಮುಂದೆ ರೂಪುಗೊಳ್ಳುವ ತಲೆಮಾರುಗಳು ಯಾವರೀತಿ ಆಗಿಬಿಡಬಹುದು ಅಂತ ಗಾಬರಿಯೂ ಆಗುತ್ತದೆ. ಇದು ದಿನವೂ ಕಾಣುತ್ತಿರುವ ಸತ್ಯ. ಆದರೆ ಯಾರಿಗೂ ಪರಿಹಾರ ಬೇಡ. ಎಲ್ಲೋ ಅಲ್ಲಿ ಇಲ್ಲಿ ಮಾತ್ರ ಕೆಲವು ಪೋಷಕರು ಪ್ರಜ್ಞಾವಂತರಿದ್ದಾರೆ. ಆದರೆ ಮಕ್ಕಳು ಬೆಳೆಯುವ ವಾತಾವರಣ ಹೇಗಿದೆ ಅಂದರೆ ಇದರಿಂದ ಮಕ್ಕಳು ಅಪ್ಪಅಮ್ಮ ತನಗೇನೋ ಕಡಿಮೆ ಮಾಡುತ್ತಿದ್ದಾರೆ, ಅವರು ಸರಿಯಿಲ್ಲ ಎಂಬ ಭಾವನ ಬೆಳೆಸುವಂತಿದೆ. ಎಲ್ಲಿಗೆ ಹೋಗುತ್ತಿದ್ದೇವೆ ನಾವು. ? 🙁

    ಪ್ರತಿಕ್ರಿಯೆ
  12. Radhika

    Is buying gadgets for kids all that bad? I disagree. Why do we want our kids to grow like how we did but in a totally different atmosphere than ours? Why are we judging that parents who (can afford to) buy gadgets to their kids are setting a wrong example? Why not see the positive side of it? The kid tries its skill at drawing using iPad or reads stories, watches cartoon, is that bad? Changing with times is very much the need of the day but may not be out of pressure but by one’s need.

    ಪ್ರತಿಕ್ರಿಯೆ
    • ಶಿವ

      Yes, child should grow with nature, society, people not with gadgets which creates a mind block and eliminates root level thinking capacity. Moreover , the article is not only particularly conveying about buying gadgets for children. Article explains about how children’s needs and wants should be filtered out by parents for its physical and mental growth to live in the society and nation as a good and useful citizen.

      ಪ್ರತಿಕ್ರಿಯೆ
  13. Anonymous

    ಚೆನ್ನಾಗಿ ಬರೆದಿದ್ದೀರಿ . ನಮಗೆ ಕಲ್ಲು , ಮಣ್ಣು , ಬೆಂಕಿ ಪೊಟ್ಟಣ , ಇಂತಹುದೇ ಆಟಗಳು .ಒಂದು ಪೆನ್ಸಿಲ್ ಕೊಡಿಸಿದರೆ ಅದು ಸಣ್ಣದಾಗುವವರೆಗೂ ನನ್ನ ತಂದೆ ಇನ್ನೊಂದು ಕೊಡಿಸುತ್ತಿರಲಿಲ್ಲ . ನನ್ನ ನಾದಿನಿ ಮೊಮ್ಮಗ ಮೂರು ವರುಷದವನು , ಮೊಬೈಲ್ ಫೋನ್ ತೆಗೆದುಕೊಂಡು ಕಿವಿಗೆ ಹಿಡಿದು ಬಾಗಿಲಿನಿಂದ ಹೊರಗೆ ಹೋಗುತ್ತಾನೆ !! ಸಮಯಕ್ಕೆ ತಕ್ಕಂತೆ ಆಟಿಗೆಗಳು . ನೀವು ಹೇಳಿದಂತೆ ಮಕ್ಕಳಲ್ಲಿ ಆ ಆಲೋಚನಾ ಶಕ್ತಿ ಬೆಳೆಸಬೇಕು . ನಮ್ಮ ಗೊತ್ತಿರುವವರ ಮಗ ಒಂಬತ್ತು ವರ್ಷದವನು .. ಟಿ ವಿ ನೋಡಲು ಬಿಡಲಿಲ್ಲ ಅಂತ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ತೆಗೆಸಲು ತುಂಬಾ ಕಷ್ಟಪಡಬೇಕಾಯ್ತು. ಮೊದಲು ಮನೆಯಲ್ಲಿ ಮಕ್ಕಳೂ ಹೆಚ್ಚು .. ಜೊತೆಯಲ್ಲಿ ಬೆಳೆದದ್ದೇ ಗೊತ್ತಾಗುತ್ತಿರಲಿಲ್ಲ . ಈಗ ಒಂದು ಮಗು .. ನಮಗೆ ಸಿಕ್ಕ ದಿದ್ದ ಸೌಲಭ್ಯ ಮಕ್ಕಳಿಗೆ ಸಿಗಲಿ ಎನ್ನೋ ಮನೋಭಾವ .ನಮ್ಮ ಮನೆ ಕೆಲಸದವಳು ಮಗನಿಗೆ ಸಾಲ ಮಾಡಿ Smartphone ಕೊಡಿಸಿದ್ದಾಳೆ . ‘ ಸಾಲ ಯಾಕೆ ಅಂದರೆ ‘ ನಮಗಂತೂ ಇರಲಿಲ್ಲ ,ನನ್ನ ಮಗ ಮೆರೆಯಲಿ ಬಿಡ್ರಮ್ಮ .. ಅಂದಳು . ಕಣ್ಣ ಮುಚ್ಚಾಲೆ ಆಟ , ಲೆಗೋರಿ , ಕುಂಟಬಿಲ್ಲೆ , ಆಟಗಳೆಲ್ಲಾ ಎಲ್ಲಿ ಹೋದವು ?
    ‘ಮಕ್ಕಳ ಬೇಡಿಕೆಗೆ ’ಯೆಸ್’ ಎನ್ನುವ ಮೊದಲು ಒಂದು ’ನೋ’ ಅನ್ನು ಸಹಿಸುವ, ಭರಿಸುವ ಶಕ್ತಿಯನ್ನೂ ಅವರೊಳಗೆ ಬೆಳೆಸೋಣ…’ ಒಪ್ಪತಕ್ಕ ಮಾತು . ಅಭಿನಂದನೆಗಳು ಸಂಧ್ಯಾ .

    ಪ್ರತಿಕ್ರಿಯೆ
  14. SUNIL B S

    This is what western countries want, they just want to smash our rich culture, I would like to warn all parents, be careful about your child’s ” WANTS ” & put an eye on them always,

    ಪ್ರತಿಕ್ರಿಯೆ
    • Sharadhi

      I hv been in western countries since few decades!, and have plenty of white colleagues, none of them give pocket money to their high-school going kids. This is merely a devastating mimic of west by the so-called corrupt Indian society.

      ಪ್ರತಿಕ್ರಿಯೆ
  15. Sharanappa Bachalapur

    ಇಂದಿನ ದಿನಮಾನದಲ್ಲಿ ಕೊಳ್ಳುವ ಸಂಸ್ಕೃತಿ, ಹಣದ ಮೌಲ್ಯಕ್ಕಿಂತ ಶೋಕಿಗೆ ಆದ್ಯತೆ ನೀಡುತ್ತಿರುವ ಬಗ್ಗೆ ನಿಮ್ಮ ಬರಹ ತುಂಬಾ ಚೆನ್ನಾಗಿದೆ. ನಾನು ಚಿಕ್ಕವನಾಗಿದ್ದಾಗ, ನಮ್ಮಪ್ಪ ನನಗೆ 10 ಪೈಸೆ ನೀಡಬೇಕಾದರೆ ನಾನು ಒಂದು ತಾಸು ಆತನ ಮುಂದೆ ಗಿರಿಕಿ ಹೊಡೆಯಬೇಕಾಗಿತ್ತು. 10 ಪೈಸೆಯಲ್ಲಿ ಪೇಪರ್ ಮಿಂಟ್, ಬಾಂಬೈ ಮಿಠಾಯಿ ಮಾತ್ರ ನಮ್ಮ ಖರ್ಚಿನ ದಾರಿಯಾಗಿದ್ದವು. ಆದರೆ ಇಂದು ನಮ್ಮ ಮಕ್ಕಳು ಕೇಳುವ ಮುನ್ನವೇ 30 ರೂಪಾಯಿಯ ಕಿಂಡರ್ ಜಾಯ್ಸ ಕೊಡುಸುತ್ತೇವೆ.

    ಪ್ರತಿಕ್ರಿಯೆ
  16. ರುದ್ರೇಶ ಕಿತ್ತೂರ ಮುದ್ದೇಬಿಹಾಳ

    ನಿಮ್ಮ ಚಿಂತನ ಲಹರಿ ಸಮಯೋಚಿತವಾಗಿದೆ,ಆದರೆ ಕಾಲಕ್ಕೆ ತಕ್ಕಂತೆ ಮಕ್ಕಳ ಬೇಡಿಕೆಗಳು ,ಆಶೆಯಗಳು ಬದಲಾಗುತ್ತಿರುತ್ತವೆ,ಇಂದು ನಾವು globle village ರೂಪದ ಜಗತ್ತಿನಲ್ಲಿ ಬದುಕುತ್ತಿರುವುದರಿಂದ ನಮ್ಮ ಮಕ್ಕಳ ಬಾಲ್ಯದ ಬೆಳವಣಿಗೆ ಮತ್ತು ನಮ್ಮ ಬಾಲ್ಯದ ಪರಿಸರಕ್ಕೂ ತುಂಬಾ ಅಂತರವಿರುವುದರಿಂದ ನಮಗೆಲ್ಲ ಈ ರೀತಿಯ ದ್ವಂದಗಳು ಕಾಣಿಸುತ್ತವೆ,ಬದಲಾವಣೆ ಎಂಬುದು ಜಗದ ಸಹಜ ನಿಯಮ ಅನುಸರಿಸಿಕೊಂಡು ಬದುಕು ಮದ್ಯ ನಮ್ಮ ತನವನ್ನು ಕಾಪಾಡಿಕೊಳ್ಳಬೇಕೆಂಬ ನಿಮ್ಮ ಕಾಳಜಿಗೆ ಅಭಿನಂದನೆಗಳು.ಬರವಣಿಗೆ ತುಂಬಾ ಚೆನ್ನಾಗಿ .

    ಪ್ರತಿಕ್ರಿಯೆ
  17. bharathi b v

    ಪೆನ್ನಿಗೆ ತುಂಬಿದ ಇಂಕು ಕೂಡಾ ಎಷ್ಟು ದಿನಕ್ಕೆ ಖಾಲಿಯಾಗಬೇಕು ಅನ್ನುವುದನ್ನು ಅಪ್ಪ ಲೆಕ್ಕ ಇಟ್ಟಿರುತ್ತಿದ್ದರು. ಈಗ ಅಷ್ಟೆಲ್ಲಾ ಕೈ ಹಿಡಿದು ಮಾಡುವುದಕ್ಕೆ ಆಗೋದಿಲ್ಲ … ಆದರೆ ನೀನು ಹೇಳಿದ ಹಾಗೆ ನೋ ಅನ್ನುವುದನ್ನು ಕೇಳಿ ಅಭ್ಯಾಸವಾಗಬೇಕು …
    ಅಂದ ಹಾಗೆ ನಿನ್ನ ಬರಹವೆಂದರೆ ‘ಅಲ್ಲಿ ನೋಡು ಬೆಟ್ಟ’ ‘ಇಲ್ಲಿ ನೋಡು ಹೂವು’ ‘ಅಲ್ಲಿ ನೋಡು ನಕ್ಷತ್ರ’ ಅಂತ ಸಾವಕಾಶವಾಗಿ ಪ್ರಯಾಣದ ಪೂರ್ತಿ ಅನುಭವ ಕೊಟ್ಟು ಕೊನೆಗೆ destination ತಲುಪಿದಾಗ ಆಗತ್ತಲ್ಲಾ …ಅದೇ ಅನುಭವ! ಎಷ್ಟೊಂದು vast ಆಗಿರತ್ತೆ ಮಾರಾಯ್ತಿ .. loved it …

    ಪ್ರತಿಕ್ರಿಯೆ
  18. C P NAGARAJA

    ಮಾನ್ಯರೇ ,
    ನಿಮ್ಮ ಬರಹವನ್ನು ಓದುತ್ತಿದ್ದಂತೆಯೆ , ನಾನೊಮ್ಮೆ ಕೇಳಿದ ಭಾಷಣ ನೆನಪಾಯಿತು . ನೋಡಿ , ನಾವು ಈಗ ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದೇವೆ ಎಂದರೆ ” ತರಗತಿಯಲ್ಲಿ ನೀನೇ First rank ಬರಬೇಕು ” ಎಂದು ಹೇಳುವುದು ಮಾತ್ರವಲ್ಲ , ಅದಕ್ಕಾಗಿ ಹಾತೊರೆಯುತ್ತೇವೆ . ಇದರ ಅರ್ಥ ಏನೆಂದರೆ ” ನಿನ್ನ ತರಗತಿಯಲ್ಲಿರುವ ಮಕ್ಕಳನ್ನೆಲ್ಲಾ ತುಳಿದು ನೀನು ಮೇಲಕ್ಕೆ ಬಾ ಅಂತಲ್ವೇ ? ” . ನಾವು ಎಂದಾದರು ಮಕ್ಕಳಿಗೆ ಪ್ರೀತಿಯಿಂದ / ಸಂತೋಷದಿಂದ ಓದು ಅಂತ ಹೇಳಿದ್ದೇವೆಯೇ ? ” ಕಷ್ಟಪಟ್ಟು ಓದು … ಕಷ್ಟಪಟ್ಟು ಓದು ಅಂತ ಯಾವಾಗಲೂ ಹೇಳ್ತಾಯಿರ್ತೀವಿ …. ” . ಊಟ ಮಾಡುವುದನ್ನು / ನೀರು ಕುಡಿಯುವುದನ್ನು ನಾವು ಕಷ್ಟಪಟ್ಕೋಂಡು ಮಾಡೋದು ಸರಿಯೇ ನೀವೇ ಹೇಳಿ ಎಂದು ಸಭಿಕರನ್ನು ಕೇಳಿದ್ದರು . ಮಕ್ಕಳನ್ನು ಬೆಳೆಸುವಾಗ ಮತ್ತು ತರಗತಿಯಲ್ಲಿ ಪಾಠವನ್ನು ಮಾಡುವಾಗ … ಏಕೋ … ಏನೋ … ಈ ಮಾತುಗಳು ನನ್ನನ್ನು ಸದಾ ಕಾಲ ಕಾಡುತ್ತಿದ್ದವು .
    ಸಿ ಪಿ ನಾಗರಾಜ , ಬೆಂಗಳೂರು .

    ಪ್ರತಿಕ್ರಿಯೆ
  19. suseela

    Dear Sandhya,
    I want to hug u dear. Naavu makkalanna SARIYAAGI BELASTHA IDEEVI. SAHAJAVAAGI ALLA.eSTU Eshtuchannagi ,naviraagi, vimarshthmaka vaagi baredideeya. Fantastic sandhya.Hats off to u dear.

    ಪ್ರತಿಕ್ರಿಯೆ
  20. D.Ravivarma

    I am what I am ಅನ್ನುವುದು ಹೋಗಿ I am what I have ಹೆಚ್ಚು ಚಲಾವಣೆಯ ನಾಣ್ಯ ಆಗಿದೆ.
    ಹಣದ ಕೊರತೆ ಇದ್ದ ಕಾಲ ನಮಗೆ ಹಂಚಿಕೊಂಡು ಬದುಕುವುದನ್ನು ಕಲಿಸಿತು. ಅಗತ್ಯ – ಅನಿವಾರ್ಯತೆಗಳ ನಡುವೆ ವ್ಯತ್ಯಾಸ ಗುರ್ತಿಸುವುದನ್ನು ಕಲಿಸಿತು … ಆದರೆ ಹಣದ ಸಮೃದ್ಧಿ ಯಾಕೆ ನಮ್ಮನ್ನು ಹೆಚ್ಚು ಹೆಚ್ಚು ಸ್ವಾರ್ಥಿಗಳನ್ನಾಗಿಸಿದೆ??
    ಹತ್ತು ’ನೋ’ ಗಳ ನಡುವೆ ಬರುತ್ತಿದ್ದ ಒಂದು ’ಯೆಸ್’ ಕೊಡುತ್ತಿದ್ದ ಖುಷಿ ದೊಡ್ಡದಾ ಅಥವಾ ಹತ್ತು ’ಯೆಸ್’ ಗಳ ನಡುವೆ ಬರುವ ಒಂದು ’ನೋ’ ಕೊಡುವ ಆಘಾತ ದೊಡ್ಡದಾ ಮತ್ತು ಅದನ್ನು ಸಹಿಸುವ ಅನುಭವಿಸುವ ಮನಸ್ಸನ್ನು ನಾವು ಬೆಳೆಸುತ್ತಿದ್ದೇವೆ ಎನ್ನುವುದರ ಮೇಲೆ ಈ ಬದಲಾದ ಕಾಲದ, ಬದಲಾದ ಜೀವನ ಮೌಲ್ಯಗಳ ಯಶಸ್ಸು ನಿರ್ಧಾರವಾಗುತ್ತದೆ.
    ನಾವು ಕಳುಹಿಸುವ ದುಬಾರಿ ಶಾಲೆಗಳು ಮಕ್ಕಳನ್ನು ಅವರ ಉದ್ಯೋಗಕ್ಕೆ ಮಾತ್ರ ತಯಾರು ಮಾಡುತ್ತವೆ, ಆದರೆ ಅವರನ್ನು ಬದುಕಿಗೆ ತಯಾರು ಮಾಡುವ ಹೊಣೆ ಇರುವುದು ನಮ್ಮ ಮೇಲೆ .. ಮಕ್ಕಳಿಗೆ ಸರಳತೆ ಮತ್ತು ಸಂಯಮಗಳನ್ನು ಕಲಿಸೋಣಾ … ಯಾವುದಕ್ಕೂ ಮಕ್ಕಳ ಬೇಡಿಕೆಗೆ ’ಯೆಸ್’ ಎನ್ನುವ ಮೊದಲು ಒಂದು ’ನೋ’ ಅನ್ನು ಸಹಿಸುವ, ಭರಿಸುವ ಶಕ್ತಿಯನ್ನೂ ಅವರೊಳಗೆ ಬೆಳೆಸೋಣ…chintanaarha lekhana…kollubaaka samskrut,makkolodane bereyade iruva ashaayakathe,avara iruvannu,badukannu gamanisalaagada ottada,ivellavu naavu makkalige este savalattu kottaru avarannu halavomme ontitanda orradadalli silukive…makkalannu belesabedi beleyalu avaakaasha maadikodi annu maatu tanna arthavannu kaledukondide..amirkhan ii vastvanne tamma cinemaa taare jaminpar nalli hrudayangamaavaagi chitrisiddare…nimma chintane olanota sukshma manasina taakalaata nanage istavaaguttade …

    ಪ್ರತಿಕ್ರಿಯೆ
  21. sugunamahesh

    ತುಂಬಾ ಚೆನ್ನಾಗಿದೆ ಲೇಖನ ಸಂಧ್ಯಾಕ್ಕ… ನಾವು ಇತ್ತೀಚೆಗೆ ಇದೇ ವಿಚಾರವಾಗಿ ನಮ್ಮ ಕನ್ನಡ ಗುಂಪೊಂದಿಗೆ ಚರ್ಚೆ ನಡೆಸಿದ್ದೆವು. ಕೇಳಿದ ತಕ್ಷಣ ಮಕ್ಕಳಿಗೆ ಕೊಡಿಸಿಬಿಟ್ಟರೆ ಅದರ ಬೆಲೆ ಅರ್ಥವೇ ಆಗುವುದಿಲ್ಲ. ಮೊದಲು ಅದರ ಅವಶ್ಯಕತೆ ಎಷ್ಟಿದೆ ಎಂದು ನೋಡಬೇಕಾಗುತ್ತದೆ.

    ಪ್ರತಿಕ್ರಿಯೆ
  22. nagarathna

    thumba hidisithu chennagi helidira,
    illi quality athava quantity alla, bari comparison nanna magala ella friends hatra iro samanu nanna magala hatra irabeku. adara upayoga iga nanna maguge ideyo ilvo, idanna parents ego anna bahudu ansuthe,modalu parents should correct themself, then v can give good moral to kids.

    ಪ್ರತಿಕ್ರಿಯೆ
  23. ಸತೀಶ್ ನಾಯ್ಕ್

    ನಾವುಗಳೂ ಕೂಡಾ ಅದೆಷ್ಟು ನೋ ಗಳ ನಡುವೆಯೇ ಬೆಳೆದು ಬಂದದ್ದು.. ನಮಗೆ ಏನು ಬೇಕು ಅನ್ನುವ ಅರಿವು ಕೂಡ ನಮ್ಮಲ್ಲಿ ಇರಲಿಲ್ಲ.. ಆ ಕ್ಷಣದ ಅನಿವಾರ್ಯತೆ ನಮ್ಮನ್ನ ಆ ಕ್ಷಣಕ್ಕಷ್ಟೇ ಅಪ್ಪನ ಬಳಿ ಏನಾದರೂ ಕೇಳುವಂತೆ ಪುಸಲಾಯಿಸುವಂತೆ ಪ್ರೇರೇಪಿಸುತ್ತಿತ್ತು.. ನಾವು ಕೆಳುತ್ತಿದ್ದುದಾದರೂ ಏನು ಹೊಸ ಚಾಕೊಲೆಟ್ ಬಂದರೆ ನಾಲ್ಕಾಣೆ.. ಹೊಸದಾಗಿ ಲಾಟರಿ ಬಂದರೆ ಹತ್ತು ಪೈಸೆ.. ಯಾವುದಾದರೂ ಜಾತ್ರೆಯೊಳಗೆ ಒಂದು ರುಪಾಯಿ ಬಲೂನು.. ಐದು ರುಪಾಯಿಯ ಕಾರು.. ಸ್ವರ್ಗ ಅದೆಷ್ಟು ಹತ್ತಿರವಿರುತ್ತಿತ್ತು.. ಮತ್ತು ಅದೆಷ್ಟು ಕಾಲ ಜೊತೆಯಲ್ಲೇ ಇರುತ್ತಿತ್ತು. ಅದೆಷ್ಟು ನೋ ಗಳ ನೋವನ್ನ ಒಂದು ಎಸ್ ಮರೆಸಿ ಬಿಡುತ್ತಿತ್ತು. ಅದೆಂಥಾ ಖುಷಿಯಲ್ಲಿ ಮೆರೆಸಿ ಬಿಡುತ್ತಿತ್ತು.. ಆಗ ಕೂಸು ಹುಟ್ಟುವ ಮೊದಲು ಕುಲಾವಿ ಹೊಲೆಸುವುದು ಅಂದರೆ ಮಗುವನ್ನ ಹೇಗೆ ಬೆಳೆಸಬೇಕು.. ಹೇಗೆಲ್ಲ ಪ್ರೀತಿಸಬೇಕು.. ಅನ್ನುವುದಷ್ಟೇ ಆಗಿತ್ತು. ಈಗ ಹೆಣ್ಣು ಮಗುವಾದರೆ ಒಂದು ಥರದ ಬಟ್ಟೆ, ಗಂಡಾದರೆ ಒಂದು ಥರ, ಅವಕ್ಕೆ ಪೂರಕ ಆಟಿಕೆ, ಅವು ತಿನ್ನೋ, ಕುಡಿಯೋ ವಸ್ತುಗಳ ಬಗ್ಗೆ ಚರ್ಚೆ.. ಹುಟ್ಟಿನಿಂದಲೇ ಮಕ್ಕಳನ್ನ ಸ್ವಾಭಾವಿಕತೆಯಿಂದ ದೂರ ಇಡ್ತಿರೋದು ನಾವೇ ಅಲ್ಲವೇ..?? ಮಗು ತಾನು ಒಂದಕ್ಕೆ ಹಂಬಲಿಸಿ ಅದಕ್ಕೆ ಕೈ ಚಾಚಿ ತನ್ನದಾಗಿಸಿಕೊಳ್ಳುವ ಪ್ರಯತ್ನ ಮಾಡುವ ಮೊದಲೇ ಅದನ್ನ ಅವರ ಕೈಗೆ ಕೊಟ್ಟು ಬಿಟ್ಟಿರುತ್ತೇವೆ. ಅತ್ತರೆ ಸಮಾಧಾನ ಮಾಡುವ ಕಳೆಯನ್ನ ಮರೆತಿರುವ ನಾವೇ ಏನಾದರೊಂದನ್ನು ಕೊಟ್ಟು ಸುಮ್ಮನಾಗಿಸುವ ರೀತಿಯನ್ನೇ ಮರೆತು ಬಿಟ್ಟಿದ್ದೇವೆ.. ಬುದ್ಧಿ ಇರದ ವಯಸಲ್ಲೂ ಹಟದಿಂದ ಏನನ್ನಾದರೂ ದಕ್ಕಿಸಿಕೊಳ್ಳಬಹುದು ಅನ್ನುವ ಬುದ್ಧಿಯನ್ನ ನಾವೇ ಕಲಿಸಿಕೊಟ್ಟು ಬಿಟ್ಟಿರುತ್ತೇವೆ ಅವರ ಹಟಕ್ಕೆ ಪೂರಕವಾಗಿ ನಡೆದುಕೊಳ್ಳುತ್ತೇವೆ..!!
    ಇವತ್ತು ಎರಡು ಕುಟುಂಬಗಳು ಅಪರೂಪಕ್ಕೆ ಎದುರಾದರೆ ಶುರುವಾಗುವ ಮೊದಲ ಮಾತೆ ನಿನ್ ಮಕ್ಕಳು ಯಾವ ಸ್ಕೂಲ್ ಅನ್ನೋದು.. ಒಂದು ಪ್ರತಿಷ್ಟಿತ ಸ್ಕೂಲು ಮತ್ತು ಅದರ ಲಕ್ಷಾಂತರ ರುಪಾಯಿಯ ಫೀಸು ನಮ್ಮ ಪ್ರತಿಷ್ಠೆಗಳಲ್ಲಿ ಒಂದು ಪ್ರಮುಖ ಅಂಶ. ಬದಲಾದದ್ದು ಮಕ್ಕಳೇ ಆದರೂ ಬದಲಾಯಿಸಿದ್ದು ನಾವು. ಸಣ್ಣ ಸಣ್ಣ ಶಾಲೆಗಳಲ್ಲಿ ಓದಿದರೂ ಶಿಸ್ತು, ಸಂಯಮ, ಜೀವನ ಪ್ರೀತಿಗಳನ್ನು ಕಲಿಸುತ್ತಿದ್ದವು ಆಗಿನ ಶಾಲೆಗಳು. ಈಗ ಶಾಲೆಯ ಗುಣಮಟ್ಟ ಅಂದರೆ ಮಕ್ಕಳ ಫಲಿತಾಂಶ ಮತ್ತು ಅವರ ಮಾರ್ಕ್ಸ್ ಗಳು ಮಾತ್ರ. ಶಿಸ್ತು ಎಂದರೆ ಬ್ರಾಂಡೆಡ್ ಬಟ್ಟೆಗಳ ಯೂನಿಫಾರ್ಮ್, ಶೂ ಮತ್ತು ಬ್ಯಾಗುಗಳು.. ಶಾಲೆಯಲ್ಲಿ ಕಲಿಸುತ್ತಿರೋದಾದ್ರೂ ಒಬ್ಬರನ್ನ ಮತ್ತೊಬ್ಬರು ಮೀರಿ ಬದುಕುವುದನ್ನೇ.. ಹೊಂದಾಣಿಕೆಯನ್ನ ಯಾವ ಶಾಲೆಯಲ್ಲೂ ಕಲಿಸುತ್ತಿಲ್ಲ. ತಪ್ಪು ನಮ್ಮಲ್ಲೇ ಇದೆ. ಮನೆಯೇ ಮೊದಲ ಪಾಟಶಾಲೆ, ತಾಯಿ ತಂದೆಯರೇ ಮೊದಲ ಗುರು ಅನ್ನೋದನ್ನ ನಾವೇ ಮರೆತಿರುವಾಗ ಫಲ ಇನ್ನೇನು ಇರಲು ಸಾಧ್ಯ. ಸಾಕುವುದೆಂದರೆ ಅದೊಂದು ಕರ್ತವ್ಯ ಅನ್ನುವ ಹಾಗೆ ಆಯ್ತು.
    ಮಕ್ಕಳನ್ನು ಬೆಳೆಸುವೆಡೆಗಿನ ನಮ್ಮ ತಪ್ಪುಗಳು ಮತ್ತು ಅವುಗಳಿಂದ ಮಕ್ಕಳ ಮೇಲೆ ಆಗ್ತಿರೋ ಹಲವು ಪರಿಣಾಮಗಳ ಕುರಿತಾಗಿ ಬೆಳಕು ಚೆಲ್ಲುವ ಅಗತ್ಯವಾದ ವಿಚಾರವುಲ್ಲ ಬರಹ ಸಂಧ್ಯಕ್ಕ.. ತಪ್ಪು ಬೇರಲ್ಲೇ ಇದೆ.. ಸರಿಯಾಗಿ ಬೆಳೆಯದ ಕಾಂಡಕ್ಕೆ ಬೈದು ಉಪಯೋಗವಿಲ್ಲ..
    ಸುಂದರ ಬರಹ.. 🙂

    ಪ್ರತಿಕ್ರಿಯೆ
  24. Kavya Bhat

    ಬಹಳ ಸುಂದರ ಮತ್ತು ನೈಜ ಬರಹ… ಕೊಳ್ಳುಬಾಕ ಸಂಸ್ಕೃತಿಯನ್ನು ನಾವೇ ಮಕ್ಕಳಲ್ಲಿ ಬೆಳೆಸುತ್ತಿದ್ದೇವೆ…!! 🙁

    ಪ್ರತಿಕ್ರಿಯೆ
  25. umavallish

    ತುಂಬಾಚೆನ್ನಾಗಿ ”ಸಾಹಿತ್ಯ ಜನಜೀವನದ ಪ್ರತಿಬಿಂಬ” ಅನ್ನುವ ಮಾತಿಗೆ ”ಕನ್ನಡಿ” ಹಿಡಿದ್ದಿದ್ದೀರಾ, ಸಂದ್ಯಾ ಅವರೇ.

    ಪ್ರತಿಕ್ರಿಯೆ
  26. Anuradha joshi

    Indian hosa generation edurisuttiruv mane mane ya samasseya melin sookta vivechane .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: