ಸಂಧ್ಯಾರಾಣಿ ಕಾಲಂ : ಪಿ ಸಾಯಿನಾಥ್ ಲೋಕದಲ್ಲಿ ನನ್ನ ಪಯಣ


ಅಲ್ಲಿ ಮೂರು ಕಲ್ಲುಗಳನ್ನು ಒಂದರ ಮೇಲೊಂದರಂತೆ ಜೋಡಿಸಲಾಗಿತ್ತು, ಅದರ ಮೇಲೊಂದು ಮರದ ತುಂಡು. ಅದರ ಮೇಲೆ ಕಸರತ್ತು ಮಾಡುವಂತೆ ಆಕೆ ನಿಂತಿದ್ದಳು. ಆ ಕಲ್ಲುಗಳ ಆಕಾರ ಓರೆಕೋರೆ, ಗಾತ್ರ ಸಹ ಬೇರೆ ಬೇರೆ. ಆ ಮರದ ತುಂಡು ಮಾತ್ರ ಆಕೆಗೆ ನಿಲ್ಲಲು ಒಂದು ಸಪಾಟು ನೆಲೆ ಒದಗಿಸಿತ್ತು. ಆಕೆ ಮಹಾರಾಷ್ಟ್ರದ ಯವಾತ್ಮಲ್ ಜಿಲ್ಲೆಯ ಹೆಣ್ಣು. ಆ ಕಲ್ಲು, ಮರದ ತುಂಡುಗಳ ಮೇಲೆ ನಿಂತ ಆಕೆ ಪಕ್ಕದಲ್ಲಿ ಭಾರಿ ಗಾತ್ರದಲ್ಲಿದ್ದ ನೀರಿನ ಟ್ಯಾಂಕಿನಿಂದ, ಪೈಪ್ ಮೂಲಕ ಸೋರುತ್ತಿದ್ದ ಹನಿ ಹನಿ ನೀರನ್ನು ಹಿಡಿಯುತ್ತಿದ್ದಳು. ಇನ್ನಿಲ್ಲದ ತಾಳ್ಮೆ ಮತ್ತು ತಪ್ಪದ ಸಮತೋಲನದಿಂದ ಆಕೆ ತಲೆಯ ಮೇಲೆ ಒಂದು ಪಾತ್ರೆ ಇಟ್ಟುಕೊಂಡು ಅದರಲ್ಲಿ ನೀರನ್ನು ಹಿಡಿಯುತ್ತಿದ್ದಳು. ಆ ಪಾತ್ರೆ ತುಂಬಿದ ಮೇಲೆ ಅದನ್ನು ಕೆಳಗೆ ಇಟ್ಟುಕೊಂಡಿದ್ದ ಕೊಡಕ್ಕೆ ಬಗ್ಗಿಸಿ ಮತ್ತೆ ತಲೆ ಮೇಲೆ ಪಾತ್ರೆ ಹಿಡಿದು ನಿಲ್ಲುತ್ತಿದ್ದಳು. ಎರಡೂ ತುಂಬಿದ ಮೇಲೆ, ಎರಡನ್ನೂ ಹಿಡಿದುಕೊಂಡು ಮನೆಗೆ ಹೋಗಿ, ಮನೆಯಲ್ಲಿದ್ದ ಪಾತ್ರೆಗಳಿಗೆ ಅದನ್ನು ಬಗ್ಗಿಸಿ ಮತ್ತೆ ಬಂದು ನೀರಿಗಾಗಿ ಕಾದು ನಿಲ್ಲುತ್ತಿದ್ದಳು. ಒಂದೊಂದು ಸಲ ಹಾಗೆ ಹೋಗುವಾಗಲೂ ಆಕೆ ಸುಮಾರು ೧೫-೨೦ ಲೀಟರ್ ನೀರನ್ನು ಆ ಲೋಹದ ಕೊಡ, ಪಾತ್ರೆಗಳಲ್ಲಿ ತುಂಬಿಕೊಂಡು ಸುಮಾರು ಅರ್ಧ ಕಿಲೋಮೀಟರ್ ದೂರ ಕ್ರಮಿಸಬೇಕಾಗುತ್ತಿತ್ತು.
ಅದೇ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಶಾರದ ಬಾದ್ರೆ ಮತ್ತು ಆಕೆಯ ಹೆಣ್ಣುಮಕ್ಕಳು ಹೀಗೆ ವರ್ಷಾನುಗಟ್ಟಲೆ ಮನೆ ಹತ್ತಿರದ ಕಿತ್ತಲೆ ಗಿಡಗಳಿಗೆ ಹರಸಾಹಸ ಮಾಡಿ ನೀರುಣಿಸಿದ್ದಾರೆ. ಕಿತ್ತಲೆ ತೋಟದಿಂದ ನೀರಿರುವ ಜಾಗಕ್ಕೆ ಸುಮಾರು ಮುನ್ನೂರು ಮೀಟರ್ ನಷ್ಟು ಅಂತರ, ಅಥವಾ ಹಳ್ಳಿ ಲೆಕ್ಕಾಚಾರದ ಪ್ರಕಾರ ’ಅಲ್ಲೇ ಮನೆ ಪಕ್ಕದಲ್ಲಿ’ ಅನ್ನುವಷ್ಟು ದೂರ. “ಆದರೆ ಆ ಗಿಡಗಳಿಗೆ ಸುಮಾರು ೨೧೪ ದೊಡ್ಡ ಕೊಡಗಳಷ್ಟು ನೀರು ಬೇಕು”, ಅವರು ಹೇಳುತ್ತಾರೆ. ಅಂದರೆ ಹೋಗಿ ಬರಲು ೪೨೮ ಸಲದ ಓಡಾಟ, ಅದರಲ್ಲಿ ಅರ್ಧ ಪ್ರಯಾಣ ತಲೆಯ ಮೇಲೆ ಭಾರ ತುಂಬಿದ ನೀರಿನ ಕೊಡಗಳನ್ನು ಹೊತ್ತು, ಅದು ಆ ಮೂರೂ ಹೆಂಗಸರಿಗೂ ತಲಾ ೪೦ ಕಿಮೀನಷ್ಟು ನಡಿಗೆ, ಅದೂ ನೀರಿನ ಭಾರ ಹೊತ್ತು. ಹಾಗಾಗೆ ಅವರು ’ಸೋಮವಾರ ಅರ್ಧ ತೋಟಕ್ಕೆ ನೀರುಣಿಸಿದರೆ, ಗುರುವಾರ ಇನ್ನರ್ಧ ತೋಟಕ್ಕೆ’ ನೀರು ಹಾಕುತ್ತಾರೆ. ಈ ಕೆಲಸ ಅವರ ಇನ್ನುಳಿದ ಹೊಲದ ಕೆಲಸಗಳ ಹೊರತಾಗಿ, ಆ ಕೆಲಸದ ಜೊತೆ ಜೊತೆಯಲ್ಲಿ ನಡೆಯುವಂತಹದ್ದು. ಅದೂ ಎಂತಹ ಹವಾಮಾನದಲ್ಲಿ? ಏಪ್ರಿಲ್ ಮೇ ತಿಂಗಳಲ್ಲಂತೂ ಅಲ್ಲಿ 45೦ (113°F) ಯಷ್ಟು ಬಿಸಿಲು ಸುಡುತ್ತಿರುತ್ತದೆ.
ಯಾವತ್ಮಲ್ ಜಿಲ್ಲೆಯ ಬೇಬಿತಾಯಿ ಬಾಯಿಯ ಗಂಡ ಇದೇ ಕೃಷಿ ಬಿಕ್ಕಟ್ಟಿಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ. ಹೀಗೆ ಆತ್ಮಹತ್ಯೆ ಮಾಡಿಕೊಂಡ ರೈತರ ವಿಧವೆಯರಿಗೆ ನ್ಯಾಯ ಸಿಗಬೇಕು ಎಂದು ಆಕೆ ದೊಡ್ಡ ಹೋರಾಟವನ್ನೇ ಮಾಡಿದಳು. ಇದೇ ವಿಷಯವನ್ನಿಟ್ಟುಕೊಂಡು ಚುನಾವಣೆಯಲ್ಲೂ ಸ್ಪರ್ಧಿಸಿದ್ದಳು (ಸೋತಳು).
ಇದು ಹಲವು ದಿನಗಳ ಮೊದಲಿನ ಮಾತು. ಈಗಂತೂ ಬರಬರುತ್ತಾ ಹಳ್ಳಿಗಾಡಿನ ನೀರಿನ ಒರತೆಗಳು ಒಣಗುತ್ತಲಿವೆ, ಸಿಕ್ಕಷ್ಟು ನೀರನ್ನು ಬಾಚಿಕೊಂಡು, ಸದಾ ಬಾಯಗಲಿಸಿಕೊಂಡು ಕಾಯುವ ಕೈಗಾರಿಕೆಗಳಿಗೆ ಮತ್ತು ನಗರ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತಿದೆ. ಇದೇ ಸಮಯದಲ್ಲಿ ಬದ್ರೆ ಮತ್ತು ಆಕೆಯ ಹೆಣ್ಣುಮಕ್ಕಳು ಭಾರತದ ಲಕ್ಷಾಂತರ ಹಳ್ಳಿಹೆಂಗಸರ ಹಾಗೆ ಮೈಲಿಗಟ್ಟಲೆ ನೀರಿಗಾಗಿ ನಡೆಯಬೇಕಿದೆ. ಭಾರತವಷ್ಟೇ ಅಲ್ಲ, ಪ್ರಪಂಚದ ಎಲ್ಲಾ ಹಳ್ಳಿಯ ಬಡ ಹೆಣ್ಣುಮಕ್ಕಳಿಗೆ ಇದು ಹೊಸದಲ್ಲ,
ಹಳ್ಳಿಗಾಡಿನ ಬಹಳಷ್ಟು ಹೆಣ್ಣುಮಕ್ಕಳು ತಮ್ಮ ಎಚ್ಚರದ ಮೂರನೆಯ ಒಂದು ಭಾಗದಷ್ಟು ಸಮಯವನ್ನು ಈ ಮೂರು ಕೆಲಸಗಳಲ್ಲಿ ವ್ಯಯಿಸಬೇಕಾಗುತ್ತದೆ – ನೀರು ತರುವುದು, ಉರುವಲನ್ನು ಸಂಗ್ರಹಿಸುವುದು ಮತ್ತು ಗೊಬ್ಬರ ಒಟ್ಟುಮಾಡುವುದು. ಆದರೆ ಈ ಕೆಲಸದ ಹೊರತಾಗಿಯೂ ಅವರು ಮತ್ತೆಷ್ಟೋ ಶ್ರಮದ ಕೆಲಸಗಳನ್ನು ಮಾಡಬೇಕಾಗುತ್ತದೆ. ಹಳ್ಳಿಗಾಡಿನ ಲಕ್ಷಾಂತರ ಮನೆಗಳ ಅರ್ಥವ್ಯವಸ್ಥೆ ಈ ಹೆಣ್ಣುಗಳ ಶ್ರಮದ ಮೇಲೆ ನಿಂತಿದೆ.
ಕೆಲವೇ ತಿಂಗಳುಗಳ ಹಿಂದೆ ಕೇರಳದ ದೂರದ ಮೂಲೆಯಲ್ಲಿರುವ ಹಳ್ಳಿ ಎಡಮಲಕುಡಿಯಲ್ಲಿ ೬೦ ಮಂದಿ ಹೆಂಗಸರು ಒಗ್ಗಟ್ಟಾಗಿ ೧೦೦ಕ್ಕೂ ಹೆಚ್ಚು ಸೌರಶಕ್ತಿ ಉತ್ಪಾದಿಸುವ ಪ್ಯಾನಲ್ ಗಳನ್ನು ವಿದ್ಯುಚ್ಛಕ್ತಿ ಉತ್ಪಾದಿಸಲು ತಮ್ಮ ಹಳ್ಳಿಗೆ ಹೊತ್ತು ತಂದರು. ಅಂದರೆ ಮುನ್ನಾರ್ ಸಮೀಪದ ಪೆಟ್ಟಿಮುಡಿ ಎನ್ನುವ ಊರಿನಿಂದ ಸುಮಾರು ೧೮ ಕಿಮೀನಷ್ಟು ದೂರವನ್ನು ಗುಡ್ಡಗಾಡು ಪ್ರದೇಶದಲ್ಲಿ, ಆನೆಗಳು ಸಂಚರಿಸುವ ಹಾದಿಯಲ್ಲಿ ಕ್ರಮಿಸಬೇಕು, ಅದೂ ಆ ಪ್ಯಾನೆಲ್ ಗಳನ್ನು ಹೊತ್ತುಕೊಂಡು. ಎಡಮಲಕುಡಿಯ ಚುನಾಯಿತ ಪ್ರತಿನಿಧಿಗಳಿಗೆ ಸೌರಶಕ್ತಿಯ ಮಹತ್ವವನ್ನು ವಿವರಿಸಿ ಈ ಸಾಹಸ ಮಾಡಿದ ಆ ಹೆಂಗಸರು ಆದಿವಾಸಿ ಸಮುದಾಯಕ್ಕೆ(ಪ್ರಪಂಚದ ಮಿಕ್ಕೆಲ್ಲೆಡೆ ಅವರನ್ನು ’ಸ್ಥಳೀಯರು’ ಎಂದು ಕರೆಯುತ್ತಾರೆ) ಸೇರಿದವರು, ಅವರಲ್ಲಿ ಬಹಳಷ್ಟು ಜನ ಅನಕ್ಷರಸ್ಥರು.

ಆ ಒಂದೊಂದು ಪ್ಯಾನಲ್ ನ ತೂಕ ಸುಮಾರು ೯ ಕೆ ಜಿ ಯಷ್ಟು, ಹಲವಾರು ಮಹಿಳೆಯರು ತಲಾ ಎರಡೆರಡು ಪ್ಯಾನಲ್ ಗಳನ್ನು ಹೊತ್ತುಕೊಂಡಿದ್ದರು. ಈ ಕೃಶಕಾಯದ ಮಹಿಳೆಯರಲ್ಲಿ ಸುಮಾರು ಜನರ ತೂಕ ೪೦ ಕೇಜಿಗಿಂತಾ ಹೆಚ್ಚಿರಲಾರದು. ಅಂದರೆ ಅವರು ತಮ್ಮ ತೂಕದ ಅರ್ಧದಷ್ಟು ತೂಕ ಹೊತ್ತು ಆ ಗುಡ್ಡಗಾಡಿನ ದಾರಿಯಲ್ಲಿ ನಡೆದು ಬಂದಿದ್ದರು.
ಕಳೆದ ಎರಡು ದಶಕಗಳಲ್ಲಿ ಭಾರತದ ಹಳ್ಳಿಗಳಲ್ಲಿ ಮೂಲಭೂತ ಸ್ವರೂಪದ, ಹಠಾತ್ ಬದಲಾವಣೆಗಳು ಆಗಿವೆ. ಗ್ರಾಮೀಣ ಮಹಿಳೆಯರು ಅದರ ಪರಿಣಾಮವನ್ನೂ ಅನುಭವಿಸಿದ್ದಾರೆ. ಲಕ್ಷಾಂತರ ಮಂದಿ ಹಳ್ಳಿಗಳಿಂದ ಪಟ್ಟಣಗಳಿಗೆ, ಕೃಷಿಯಿಂದ ಬೇರೆ ಕ್ಷೇತ್ರಗಳಿಗೆ ವಲಸೆ ಬಂದಿದ್ದಾರೆ, ಹಾಗೆ ಹೋದವರ ಕೆಲಸದ ಹೊರೆಯನ್ನು ಮನೆಯಲ್ಲೇ ಉಳಿದ ಈ ಮಹಿಳೆಯರು ಸಂಭಾಳಿಸಿದ್ದಾರೆ. ವಲಸೆಗೆ ಲಿಂಗಬೇಧವಿಲ್ಲ, ನಿಜ ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪುರುಷರು ಹಳ್ಳಿಗಳನ್ನು ಬಿಟ್ಟು ಬಂದಿದ್ದಾರೆ. ಮನೆಯಲ್ಲೇ ಉಳಿದ ಮಹಿಳೆಯರು ಕಾಲಾಂತರದಿಂದ ನೋಡಿಕೊಂಡು ಬಂದಿದ್ದ ಪಶು ಸಂಗೋಪನೆ, ಕೋಳಿ ಸಾಕಣೆಯ ಜೊತೆ ಜೊತೆಯಲ್ಲಿ ಹೊಲ ಗದ್ದೆಗಳ ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಬೇಕಾಗಿ ಬಂದಿದೆ. ಈ ಹೊಸ ಕೆಲಸದ ಹೊರೆಯಿಂದ ಅವರಿಗೆ ಪಶುಸಂಗೋಪನೆಗೆ ವೇಳೆ ಸಿಗುತ್ತಿಲ್ಲ.
ಕೃಷಿ ಕ್ಷೇತ್ರದಲ್ಲಿ ೧೯೯೦ರ ಸುಮಾರಿನಲ್ಲೇ ಬೀಜಬಿತ್ತನೆಯ ಶೇ ೭೬ % ಕೆಲಸ ಮತ್ತು ಪೈರು ನೆಡುವುದರಲ್ಲಿ ಶೇ ೯೦% ಕೆಲಸವನ್ನು ಮಹಿಳೆಯರೇ ನಿರ್ವಹಿಸುತ್ತಿದ್ದರು. ಕಣಗಳಿಂದ ಮನೆಗಳಿಗೆ ಕಾಳು ಸಾಗಿಸುವ ಕೆಲಸದ ೮೨ % ಭಾಗ ಹೆಂಗಸರದೇ ಆಗಿತ್ತು. ಮತ್ತೆ ಜಮೀನನ್ನು ಕೃಷಿಗೆ ಹಸನುಗೊಳಿಸುವ ಕೆಲಸದಲ್ಲಿ ಶೇ ೩೨ ಭಾಗ, ಹೈನುಗಾರಿಕೆಯಲ್ಲಿ ಶೇ ೬೯ ಭಾಗ ಹೆಂಗಸರು ನೋಡಿಕೊಳ್ಳುತ್ತಿದ್ದರು. ಇತ್ತೀಚಿಗಂತೂ ಈ ಸಂಖ್ಯೆಯಲ್ಲಿ ಇನ್ನೂ ಹೆಚ್ಚಳವಾಗಿದೆ.
ಜಾರ್ಜ್ ಮೋನ್‌ಬಿಯೋಟ್ ಹೇಳುವ ಹಾಗೆ, ’ಆಸ್ತಿ ಎನ್ನುವುದು ಬಿಡುವಿಲ್ಲದ ಶ್ರಮ ಮತ್ತು ದುಡಿಮೆಯ ಅನಿವಾರ್ಯ ಪ್ರತಿಫಲ ಎನ್ನುವುದಾದರೆ, ಆಫ್ರಿಕಾದ ಪ್ರತಿ ಹೆಣ್ಣು ಮಗಳೂ ಸಹ ಇಂದು ಲಕ್ಷಾಧಿಕಾರಿ ಆಗಿರುತ್ತಿದ್ದಳು’. ಈ ಮಾತು ಜಗತ್ತಿನ ಎಲ್ಲಾ ಬಡ ಹಳ್ಳಿಗಾಡಿನ ಹೆಂಗಸರ ಮಟ್ಟಿಗೂ ಸತ್ಯವೇ ಆಗಿದೆ.
ಮೈಲುಗಲ್ಲುಗಳು ಅಥವಾ ಬೀಸೋಕಲ್ಲುಗಳು?
ಅಕ್ಟೋಬರ್ ೧೫ನ್ನು ವಿಶ್ವಸಂಸ್ಥೆ ಅಂತರ್ರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನ ಎಂದೂ ಅಕ್ಟೋಬರ್ ೧೭ನ್ನು ಅಂತರ್ರಾಷ್ಟ್ರೀಯ ಬಡತನ ನಿವಾರಣ ದಿನ ಎಂದೂ ಘೋಷಿಸಿದೆ. ೨೦೧೪ನ್ನು ಅದು ಅಂತರ್ರಾಷ್ಟ್ರೀಯ ಕುಟುಂಬ ಕೃಷಿ ವರ್ಷವೆಂದೂ ಘೋಷಿಸಿದೆ. ಭಾರತದ ಲಕ್ಷಾಂತ ಮಂದಿ ಗ್ರಾಮೀಣ ಮಹಿಳೆಯರು ಈ ’ಕುಟುಂಬ ಕೃಷಿ’ಯನ್ನು ತಮ್ಮ ಹೆಗಲ ಮೇಲೆ ಹೊತ್ತು ನಿಲ್ಲಿಸಿದ್ದಾರೆ. ಆದರೆ ಇದೇ ಕುಟುಂಬ ಕೃಷಿಯ ಹಕ್ಕುಗಳ ವಿಷಯಕ್ಕೆ ಬಂದರೆ ಅವರು ಆ ಕುಟುಂಬದ ಭಾಗ ಎಂದೇ ಪರಿಗಣಿತವಾಗಿಲ್ಲ ಎನ್ನುವುದು ಕಂಡುಬರುತ್ತದೆ. ಜಮೀನಿನ ಹಕ್ಕುಪತ್ರಗಳಲ್ಲಿ ಅವರ ಹೆಸರು ಕಾಣಬರುವುದು ತುಂಬಾ ಅಪರೂಪ. ಗ್ರಾಮೀಣ ಭಾಗದ ಹೆಚ್ಚಿನ ಸಂಖ್ಯೆಯ ಮಹಿಳೆಯರು ಬಡವರಲ್ಲಿ ಕಡುಬಡವರ ಸಾಲಿಗೆ ಸೇರುತ್ತಾರೆ.
ಮಾಧ್ಯಮಗಳಿಗೆ ಈ ಮೈಲುಗಲ್ಲುಗಳ ಬಗ್ಗೆ ಅಂತಹ ಆಸಕ್ತಿ ಇಲ್ಲ. ಅವರಿಗೆ ಆಸಕ್ತಿ ಹುಟ್ಟಿಸುವ ವಿಷಯ ಅಕ್ಟೋಬರ್ ೨೦ ರ ಫೋರ್ಬ್ಸ್ ಏಷಿಯಾ ಸಂಚಿಕೆಯಲ್ಲಿತ್ತು. ಹೌದು, ಆ ಸಂಚಿಕೆಯಲ್ಲಿ ಭಾರತದ ೧೦೦ ಅತ್ಯಂತ ಧನಿಕರ ಪಟ್ಟಿ ಪ್ರಕಟಗೊಂಡಿತ್ತು. ಅವರೆಲ್ಲರೂ ಈಗ ರೂಪಾಯಿಗಳಲ್ಲಿ ಅಲ್ಲ, ಡಾಲರ್‌ಗಳಲ್ಲಿ ಬಿಲಿಯನೇರ್ ಗಳಾಗಿದ್ದರು. ಇಲ್ಲ ಗ್ರಾಮೀಣ ಮಹಿಳೆಯರ ಬಗ್ಗೆ ಯಾವುದೇ ಮುಖಪುಟ ಲೇಖನ ಪ್ರಕಟವಾಗುವುದಿಲ್ಲ.
ಬಲವಂತದ ಸ್ಥಿತ್ಯಂತರದಿಂದ ಹೆಚ್ಚಿನ ಭಾದೆಗೊಳಗಾಗುವವರು ಹೆಂಗಸರು. ಇದನ್ನು ನಾವು ೧೯೯೦ರಿಂದಲೂ ನೋಡುತ್ತಾ ಬಂದಿದ್ದೇವೆ. ಈ ಸ್ಥಿತ್ಯಂತರ ಹಲವಾರು ಬದುಕುಗಳನ್ನು ಏರುಪೇರು ಮಾಡಿದೆ. ಸರ್ಕಾರ ಅನೇಕ ಸಂದರ್ಭಗಳಲ್ಲಿ ಬಲವಂತದಿಂದ ಖಾಸಗಿ ಮತ್ತು ಸರ್ಕಾರಿ ಕೈಗಾರಿಕಾ ಯೋಜನೆಗಳಿಗಾಗಿ, ವಿಶೇಷ ಆರ್ಥಿಕ ವಲಯಗಳ ಹೆಸರಿನಲ್ಲಿ ಕೃಷಿಭೂಮಿಯನ್ನು ಸ್ವಾಧೀನ ಮಾಡಿಕೊಂಡಿದೆ. ಅಂತಹ ಸಂದರ್ಭಗಳಲ್ಲೆಲ್ಲಾ ಗ್ರಾಮೀಣ ಮಹಿಳೆಯರು ನೀರಿಗಾಗಿ, ಉರುವಲಿಗಾಗಿ, ಗೊಬ್ಬರಕ್ಕಾಗಿ ಕ್ರಮಿಸಬೇಕಾದ ದೂರವೂ ಬೆಳೆಯುತ್ತಾ ಹೋಗಿದೆ. ಜೊತೆಜೊತೆಗೆ ಅವರು ಹೊಸ ಪ್ರದೇಶಗಳಿಗೆ ಹಾಗೆ ಹೋದಾಗ ಅವರು ಅಲ್ಲಿನ ಸ್ಥಳೀಯರಿಂದ ಎದುರಿಸಬೇಕಾದ ವಿರೋಧದ ಪ್ರಮಾಣವೂ ಹೆಚ್ಚಿದೆ. ಮೊದಮೊದಲು ಮನೆಗೆ ಬೇಕಾಗಿದ್ದ ಉರುವಲು ಇತ್ಯಾದಿಗಳನ್ನು ತರುತ್ತಿದ್ದ ಕಾಡಿಗೆ ಈಗ ಅವರಿಗೆ ಪ್ರವೇಶವಿಲ್ಲ. ಭೂಸ್ವಾಧೀನದಲ್ಲಿ ಜಮೀನು ಕಳೆದುಕೊಂಡವರಿಗೆ ಸಿಗುತ್ತಿರುವ ಪರ್ಯಾಯ ಉದ್ಯೋಗಾವಕಾಶಗಳು ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದು ಹೇಳಬಹುದು.
ಒರಿಸ್ಸಾದ ಪೂರ್ವಭಾಗದ ಗುಜ್ಜಾರಿ ಮೊಹಂತಿ ಹೇಳುವ ಹಾಗೆ, ಯಶಸ್ವಿಯಾಗಿ ಕೃಷಿ ನಡೆಸುತ್ತಿರುವವರೂ ಸಹ ಈಗ ಸ್ಥಳಾಂತರದ ಭೀತಿಯಲ್ಲಿ ದಿನಗಳೆಯಬೇಕಾಗಿದೆ. ಗುಜ್ಜಾರಿಗೆ ಈಗ ವಯಸ್ಸು ೭೦ನ್ನು ದಾಟಿದೆ. ಆಕೆ ಒಬ್ಬ ಯಶಸ್ವೀ ವೀಳ್ಯೆದೆಲೆಗಳ ಕೃಷಿಕೆ. ಆದರೆ ಈಗ ಅವಳ ಹಳ್ಳಿ ಸಹ ಉಕ್ಕಿನ ರಾಕ್ಷಸ POSCO ವನ್ನು ಎದುರಿಸಬೇಕಾಗಿದೆ. ಸರ್ಕಾರ ಮೊಹಂತಿಯಂತಹ ಅನೇಕರ ಭೂಮಿಯನ್ನು ಆ ಕೈಗಾರಿಕೆಗೆ ಒದಗಿಸುವುದಾಗಿ ಮಾತುಕೊಟ್ಟಿದೆ.
’ಅವರು ಒದಗಿಸುವ ಉದ್ಯೋಗಾವಕಾಶವಾದರು ಯಾವುದು?’, ಆಕೆ ಪ್ರಶ್ನಿಸುತ್ತಾರೆ. ’ಈ ಕೈಗಾರಿಕೆಗಳು ಕೆಲಸ ಮಾಡುವುದು ಯಂತ್ರಗಳನ್ನು ಬಳಸಿಕೊಂಡು, ಮನುಷ್ಯರ ಶ್ರಮದಿಂದ ಅಲ್ಲ. ಕಂಪ್ಯೂಟರ್ ಗಳು ಹಾಗು ಮೊಬೈಲ್ ಫೋನ್ ಗಳು ಬಂದು ಉದ್ಯೋಗಾವಕಾಶ ಹೆಚ್ಚಾಗಿದೆಯಾ ಅಥವಾ ಕಡಿಮೆ ಆಗಿದೆಯಾ? ಇತ್ತೀಚೆಗೆ ಅಂಚೆ ಪೇದೆಯ ಕೆಲಸ ಸಹ ಹೇಗೆ ಅಪಾಯಕ್ಕೊಳಗಾಗಿದೆ ಗಮನಿಸಿದ್ದೀರಾ? ನನ್ನ ಈ ಸೊಂಪಾದ ವೀಳ್ಯೆದೆಲೆ ತೋಟವನ್ನು ನೋಡಿ, ಅದು ಎಷ್ಟು ಜನರಿಗೆ ಉದ್ಯೋಗಾವಕಾಶ ಒದಗಿಸಬಹು ಎಂದು ಯೋಚಿಸಿ’ ಆಕೆ ಕೇಳುತ್ತಾರೆ.
ಹಳ್ಳಿಗಾಡಿನ ಹೆಂಗಸರು ಇನ್ನೂ ಹೆಚ್ಚಿನ ರೀತಿಯಲ್ಲಿ ದುರಂತಕ್ಕೊಳಗಾಗಿದ್ದಾರೆ. ೧೯೯೫ ರ ಈಚೆಗೆ ಭಾರತದಲ್ಲಿ ಸುಮಾರು ೩,೦೦,೦೦೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರ ಅಪರಾಧ ದಾಖಲಾತಿ ಸಂಸ್ಥೆ ಹೇಳುತ್ತದೆ. ಕಛೇರಿ ದಾಖಲೆಗಳ ಪ್ರಕಾರ ಈ ಸಂತ್ರಸ್ಥರಲ್ಲಿ ಗಣನೀಯ ಸಂಖ್ಯೆಯಲ್ಲಿರುವವರು ಪುರುಷರು. ಈ ಸಾವುಗಳು ಆ ವಿಧವೆಯರ ಹೆಗಲ ಮೇಲೆ ಹೊರಿಸುವ ಸಂಸಾರದ ಭಾರವನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಅವರು ಸಂಸಾರದ ಬಂಡಿ ಎಳೆಯಬೇಕು, ಬ್ಯಾಂಕುಗಳ, ಸಾಲಕೊಟ್ಟವರ, ಅಧಿಕಾರಶಾಹಿಗಳ ಕೈಲಿ ಏಗಬೆಕು.
ಇಲ್ಲಿ ನಾವು ಗಮನಿಸಬೇಕಾದ ಇನ್ನೊಂದು ವಾಸ್ತವಾಂಶ ಇದೆ. ಹೀಗೆ ಆತ್ಮಹತ್ಯೆ ಮಾಡಿಕೊಂಡ ರೈತ ಹೆಣ್ಣುಮಕ್ಕಳ ಸಂಖ್ಯೆ ಎಣಿಕೆಗೇ ಬರದಿರುವ ಕಾರಣ ಎಂದರೆ ಹೆಂಗಸರನ್ನು ’ಕೃಷಿಕೆ’ ಎಂದೇ ಅನೇಕ ಸಲ ಪರಿಗಣಿಸಲಾಗುವುದಿಲ್ಲ. ಅವರು ಕೇವಲ ’ರೈತ ವಿಧವೆ’ಯರೇ ಹೊರತು ರೈತರಲ್ಲ. ಇದಕ್ಕೆ ಕಾರಣ ಜಮೀನಿನ ಹಕ್ಕು ಪತ್ರಗಳಲ್ಲಿ ಅವರ ಹೆಸರು ಇರುವುದಿಲ್ಲ. ಅವರ ಹೆಸರಿನಲ್ಲಿ ಆಸ್ತಿಪತ್ರ ಇರುವುದಿಲ್ಲ. (ಕೃಷಿಯೇತರ ಕುಟುಂಬಗಳಲ್ಲೂ ಸಹ ಆತ್ಮಹತ್ಯೆ ಗ್ರಾಮೀಣ ಹೆಂಗಸರ ಸಾವಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ).
(ಮುಂದುವರಿಯುತ್ತದೆ)
ಮೂಲ ಲೇಖನ : ಪಿ ಸಾಯಿನಾಥ್ ಮತ್ತು ಅನನ್ಯಾ ಮುಖರ್ಜೀ
ಅನುವಾದ : ಎನ್ ಸಂಧ್ಯಾರಾಣಿ
ಸೌಜನ್ಯ : ಉದಯವಾಣಿ
 

‍ಲೇಖಕರು G

December 19, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Anil

    ಸಕಾಲಿಕ ಲೇಖನ .
    ಶ್ರೀ ಸಾಯಿನಾಥರು ನಮ್ಮ ಸಮಾಜದ ನೈಜ ಚಿತ್ರಣವನ್ನು ಬೆತ್ತಲಾಗಿ ಯಾವುದೇ ಅಳುಕಿಲ್ಲದೇ ತೆರೆದಿಡುವವರು.
    ಅವರ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆ – People’s Archive of Rural India.
    ನಾಳೆಯಿಂದ ಕಾರ್ಯಾರಂಭ ಮಾಡಲಿದೆ.
    ವಿವರಗಳಿಗಾಗಿ http://www.ruralindiaonline.org/ ಗೆ ಭೇಟಿ ಕೊಡಿ ಮತ್ತು ಭಾಗಿಯಾಗಿ !

    ಪ್ರತಿಕ್ರಿಯೆ
  2. ಅಕ್ಕಿಮಂಗಲ ಮಂಜುನಾಥ

    ಅಕ್ಷರಃ ಸತ್ಯ. ಇವತ್ತಿನ ಯಾವುದೇ ಪಕ್ಷದ ಆಡಳಿತ ಬಂದರೂ ಅವರು ಮೊಟ್ಟ ಮೊದಲು ಗುರುತಿಸುವುದು ಮತ್ತು ಮಣೆ ಹಾಕುವುದು ಬಂಡವಾಳ ಶಾಹಿಗಳಿಗೆ. ಕಾರಣ ಅವರು ಶ್ರೀಮಂತರಾಗುತ್ತಾ ಹೋಗುತ್ತಾರೆ. ಹಳ್ಳಿಗಾಡಿನ ರೈತರು(ಮಹಿಳೆ ಮತ್ತು ಪುರುಷರು) ಅವರು ಉದ್ಧಾರ ಮಾಡುತ್ತಾರೆಂಬ ಭ್ರಮೆಯಲ್ಲಿ ಅವರು ಕೊಡುತ್ತೇವೆಂದ ಭರವಸೆಗಳ ಆಸೆಗಳಲ್ಲಿ, ಮತ್ತೆ ಮತ್ತೆ ಅಂತಹವರನ್ನೇ ಆಯ್ಕೆ ಮಾಡುತ್ತ, ಹಾಗೆಯೇ ಹಂತ ಹಂತವಾಗಿ ಮತ್ತಷ್ಟು ಬಡವರಾಗುತ್ತಲೇ ಇದ್ದಾರೆ. ಎಷ್ಟೇ ಜನ ಎಷ್ಟೇ ಹೋರಾಟ ಮಾಡಿದರೂ ಬಡತನ, ನಿರುದ್ಯೋಗ ಮುಂದುವರೆಯುತ್ತಲೇ ಇರಬಹುದು ಮತ್ತು ಆತ್ಮ ಹತ್ಯೆಯ ದಾರಿಯಲ್ಲಿ ಸಾಗುತ್ತಲೇ ಇರಬಹುದು. ಹೀಗೆಯೇ ಮುಂದುವರೆದರೆ ಮಾತ್ರ ನಮ್ಮ ಉಳಿಗಾಲವಿರಬಹುದೆಂದು ನಮ್ಮ ಜನ ನಾಯಕರು ಭಾವಿಸಿರಲೂ ಬಹುದು.
    ಮತ್ತಷ್ಟು ವಿಷಯಗಳನ್ನು ತಿಳಿಯಲು ಮುಂದಿನ ವಾರದವರೆವಿಗೆ ಕಾಯುತ್ತಾ-ಮಂಜುನಾಥ, ಅಕ್ಕಿಮಂಗಲ.

    ಪ್ರತಿಕ್ರಿಯೆ
  3. Rj

    ಕಣ್ತೆರೆಸುವ ಚಿತ್ರಣ.
    ಹಳ್ಳಿರೈತರ ಬದುಕಿನ ಬಂಡಿಯಲ್ಲಿ ಮಹಿಳೆಯೆಂಬ ಇನ್ ವಿಸಿಬಲ್ ಮಷೀನ್ ಹೇಗೆ ಕಾರ್ಯಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತದೆ ಅನ್ನುವದನ್ನು ಲೇಖಕರು ಸಮರ್ಥವಾಗಿ ಬಿಂಬಿಸಿದ್ದಾರೆ. ದೈಹಿಕವಾಗಿ ಶ್ರಮ ಬಯಸುವ ಎಲ್ಲ ಕಾರ್ಯಗಳಲ್ಲಿ ಗೋಚರಿಸುವ ಈಕೆ, ದಿನನಿತ್ಯದ ಹೈರಾಣಗಳಲ್ಲಿ ಪ್ರತ್ಯಕ್ಷವಾಗಿ ಗೋಚರಿಸುವ ಈಕೆ, ಅದು ಹೇಗೆ ಸರ್ಕಾರದ ದಾಖಲೆಗಳಲ್ಲಿ ಅಥವಾ ಹೊಲಗದ್ದೆಗಳ ಪಹಣಿ ರೆಕಾರ್ಡ್ಸ್ ಗಳಲ್ಲಿ ಅಗೋಚರ ಆಗಿಬಿಡುತ್ತಾಳೆ ಎಂಬುದೇ ನಾಚಿಕೆ ತಂದಿಡಬಲ್ಲ ಪ್ರಶ್ನೆಯಾಗಿದೆ..
    -Rj

    ಪ್ರತಿಕ್ರಿಯೆ
  4. ಲಕ್ಷ್ಮೀಕಾಂತ ಇಟ್ನಾಳ

    ಗ್ರಾಮೀಣ ಭಾರತದ ಮಹಿಳೆಯರಿಂದಲೇ ಈ ನಾಡು ಕಟ್ಟಲ್ಪಟ್ಟಿದೆ. ನಿಜ ಸಂಸ್ಕೃತಿಯ ಹರಿಕಾರರು. ಈ ನಮ್ಮ ತಾಯಂದಿರು. ಎಲ್ಲಿದ್ದರೂ, ಹೇಗಿದ್ದರೂ ಬದುಕು ಕಟ್ಟಿ ತೋರುವ ಅವರ ಶ್ರದ್ಧೆ ದುಡಿಮೆಗಳಿಗೆ ನವಸಮಾಜದಲ್ಲಿ ಕವಡೆ ಕಾಸಿನ ಬೆಲೆಯಿಲ್ಲ. ಲೇಖನದಲ್ಲಿ ಸೂಚಿಸಿದ ಅಂಕಿಸಂಖ್ಯೆಗಳು ನಿಜಕ್ಕೂ ಒಪ್ಪತಕ್ಕಂತಹವು. ಮಕ್ಕಳ ಪಾಲನೆ ಪೋಷಣೆಯ ಜೊತೆಗೆ ಕುಟುಂಬದ 80-90 ಶೇಕಡ ಖರ್ಚನ್ನು ಗ್ರಾಮೀಣ ಮಹಿಳೆ ನಾನಾ ತರಹದ ಗ್ರಾಮೀಣ ಕಸಬುಗಳನ್ನು ಮಾಡುತ್ತಿದ್ದರೂ, ಸಮಾಜದ ಲೆಕ್ಕದಲ್ಲಿ, ಕುಟುಂಬದಲ್ಲೂ ಕೂಡ ನಗಣ್ಯಳು. ಅತ್ಯುತ್ತಮ ಲೇಖನ. ಮುಂದಿನ ಭಾಗವನ್ನು ಎದುರು ನೋಡುವ ಕುತೂಹಲ ನನಗೂ. ಸ್ವಂತಿಕೆಯ ಅನುವಾದ, ತುಂಬ ಚನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: