ಸಂಧ್ಯಾರಾಣಿ ಕಾಲಂ : ಪಿ ಸಾಯಿನಾಥ್ ಹೇಳಿದ ’ನೋವು ಮತ್ತು ವ್ಯಂಗ್ಯ’ದ ಕಥೆ

(ಕಳೆದ ವಾರ ಬರೆದಿದ್ದ ಲೇಖನದ ಮುಂದುವರೆದ ಭಾಗ)

ನೋವು ಮತ್ತು ವ್ಯಂಗ್ಯ
ಇಲ್ಲಿ ವ್ಯಂಗ್ಯ ಇರುವುದು ಜಗತ್ತಿನೆಲ್ಲೆಡೆ ಎಷ್ಟೊಂದು ಜನ ಮಹಿಳೆಯರು ವರ್ಷಾನುವರ್ಷ ಅಷ್ಟು ಕಷ್ಟಕಾರ್ಪಣ್ಯಗಳನ್ನು ಸಹಿಸುತ್ತಿದ್ದಾರೆ ಎನ್ನುವುದರಲ್ಲಲ್ಲ. ಈ ಕಾಲಘಟ್ಟದ ಎಷ್ಟೋ ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ಮುನ್ನೋಟ, ದರ್ಶನ ಇರುವುದು ಅವರಲ್ಲೇ ಎನ್ನುವುದರಲ್ಲಿ. ಅವುಗಳಲ್ಲಿ ಮುಖ್ಯವಾದ ಕೆಲವೆಂದರೆ ಆಹಾರದ ಸಂರಕ್ಷಣೆ, ಪರಿಸರ ನ್ಯಾಯ, ಒಂದು ಸಾಮಾಜಿಕ ಮತ್ತು ಧೃಡವಾದ ಅರ್ಥವ್ಯವಸ್ಥೆಯನ್ನು ಕಟ್ಟಬಲ್ಲ ಕ್ಷಮತೆ ಇತ್ಯಾದಿ.
ಆದರೆ ಅವೆಲ್ಲಾ ಆಗಬೇಕು ಎಂದರೆ ನಮಗೆ ಬೇಕಾಗಿರುವುದು ಅಲ್ಲೊಂದು ಇಲ್ಲೊಂದು ಆಗುವ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲ, ಮೂಲಭೂತವಾದ ಸಮಗ್ರ ಬದಲಾವಣೆ.
ಅನಿಶ್ಚಿತವಾಗಿ ಕೃಷಿಯಲ್ಲಿ ಕೂಲಿಯಾಳಾಗಿ ದುಡಿಯುವ ಬದಲು ಸ್ವತಂತ್ರ ಹಿಡುವಳಿದಾರರಾಗಿ ದುಡಿಯಲು ಬಯಸುತ್ತೇವೆಂದು ಹೆಚ್ಚು ಹೆಚ್ಚು ಹಳ್ಳಿಯ ಹೆಂಗಸರು ಹೇಳುವುದನ್ನು ನೀವೂ ಕೇಳಿರಬಹುದು. ಏಕೆಂದರೆ ಆಗ ಅವರಿಗೆ ತಮ್ಮ ಸಮಯ ಹಾಗು ಶ್ರಮದ ಮೇಲೆ ನಿಯಂತ್ರಣ ಇರುತ್ತದೆ. ಅಷ್ಟೇ ಅಲ್ಲ ಅವರು ಏನನ್ನು ಬೆಳೆಯಬೇಕು ಮತ್ತು ಹೇಗೆ ಬೆಳೆಯಬೇಕು ಎನ್ನುವುದು ಸಹ ಅವರ ನಿರ್ಣಯವೇ ಆಗಿರುತ್ತದೆ. ಹಳ್ಳಿ ಹೆಂಗಸರ ಈ ಬಯಕೆ ಈಡೇರಬೇಕಾದರೆ ಜರೂರಾಗಿ ಎರಡು ಕೆಲಸಗಳು ಆಗಬೇಕು.
ಮೊದಲನೆಯದು ಸಂಪನ್ಮೂಲಗಳ ಹಕ್ಕಿನ ಕುರಿತು ಒಂದು ಸಧೃಡವಾದ ವ್ಯವಸ್ಥೆ, ಅದರಲ್ಲೂ ಮುಖ್ಯವಾಗಿ ನೆಲ ಸಂಪನ್ಮೂಲ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಗುರುತಿಸಿದ ಹಾಗೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಮಹಿಳೆಯರು ಸ್ವಂತ ಜಾಗ ಹೊಂದುವ ಅಥವಾ ಸ್ವಂತ ಹೆಸರಿನಲ್ಲಿ ನೆಲವನ್ನು ಗುತ್ತಿಗೆಗೆ ತೆಗೆದುಕೊಳ್ಳುವ ಸಾಧ್ಯತೆಗಳು ಕಡಿಮೆ. ಅಕಸ್ಮಾತ್ ಅವರ ಹೆಸರಿನಲ್ಲಿ ನೆಲ ಇದ್ದದ್ದೇ ಆದರೆ ಅದು ಬಹಳಷ್ಟು ಸಲ ಕಡಿಮೆ ದರ್ಜೆಯದ್ದಾಗಿರುತ್ತದೆ ಅಥವಾ ಕಡಿಮೆ ವಿಸ್ತೀರ್ಣದ್ದಾಗಿರುತ್ತದೆ. ಇದು ಪ್ರಪಂಚದ ಎಲ್ಲಾ ಕಡೆಗೂ ಹೊಂದುವಂತಹ ಮಾತು, ಮತ್ತು ಈ ಮಾತು ಜಾನುವಾರು ಮತ್ತು ಇನ್ನಿತರ ಆಸ್ತಿಯ ಸ್ವಾಮಿತ್ವದ ವಿಷಯಕ್ಕೂ ಸತ್ಯ.
ಎರಡನೆಯದು ಮಹಿಳೆಯರಲ್ಲಿ ಅಂತರ್ಗತವಾಗಿರುವ ಒಗ್ಗಟ್ಟು ಮತ್ತು ಸಹಕಾರೀ ಮನೋಭಾವವನ್ನು ಸಮರ್ಥವಾಗಿ ಬಳಸಿಕೊಳ್ಳಬಲ್ಲ ಸಂಸ್ಥೆಗಳನ್ನು ಕಟ್ಟುವುದು.
ಇವೆರಡೂ ಆಗಬೇಕಾದರೆ ನಮ್ಮ ಯೋಚನಾಕ್ರಮದಲ್ಲೇ ಮೂಲಭೂತವಾದ ಬದಲಾವಣೆಗಳಾಗಬೇಕಿದೆ. ವ್ಯಕ್ತಿ ಆಧಾರಿತ ಸಣ್ಣ ಸಣ್ಣ ಸಾಲಗಳ ಮಾದರಿ ಪ್ರಪಂಚವನ್ನು ಹಲವಾರು ವರ್ಷಗಳಿಂದಾ ವ್ಯಾಪಿಸಿದೆ. ಅದೇ ಕಾಲಕ್ಕೆ ಈ ಮಾದರಿ ಮುಖ್ಯವಾಗಿ ಹೆಣ್ಣಿನ ಜೀವನದ ಮೇಲೆ ಮಾಡಿದ ಆಘಾತಕಾರಿ ಪರಿಣಾಮಗಳನ್ನು ನಾವು ನೋಡುತ್ತಲೇ ಬಂದಿದ್ದೇವೆ. ಭಾರತದಲ್ಲಿ ಇದರ ಭೀಕರ ಪರಿಣಾಮ ಕಂಡದ್ದು ಆಂಧ್ರ ಪ್ರದೇಶದಲ್ಲಿ. ಸಣ್ಣ ಸಾಲ ತೀರಿಸಲಾಗದ ಕಾರಣಕ್ಕೆ ಆದ ಅನೇಕ ಆತ್ಮಹತ್ಯಾ ಪ್ರಕರಣಗಳ ಪರಿಣಾಮವಾಗಿ ಸಣ್ಣ ಸಾಲ ಕೊಡುವ ಯೋಜನೆಗಳನ್ನೇ ನಿಷೇಧಿಸಲು ಆದೇಶ ಹೊರಡಿಸಲಾಯಿತು. ಸಣ್ಣ ಸಾಲ ಯೋಜನೆ ಆಫ್ರಿಕಾದ ಸಹಾರ ಭಾಗದಲ್ಲಿ ಮತ್ತು ಲ್ಯಾಟಿನ್ ಅಮೇರಿಕಾ ಪ್ರದೇಶದಲ್ಲಿ ಉಂಟು ಮಾಡಿರುವ ಸಮಸ್ಯೆಗಳ ಬಗ್ಗೆ ಅನೇಕ ಅಧ್ಯಯನಗಳು ಬೆಳಕನ್ನು ಚೆಲ್ಲಿವೆ. ಅದರಲ್ಲೂ ಈಗ ವಾಲ್ ಸ್ಟ್ರೀಟ್ ನ ತಿಮಿಂಗಲಗಳಿಗೂ ಈ ರೊಟ್ಟಿಯ ತುಣುಕಿನ ಮೇಲೆ ಕಣ್ಣು ಬಿದ್ದಿದೆ.
ಈ ನಿಟ್ಟಿನಲ್ಲಿ ಸ್ವಸಹಾಯ ಗುಂಪುಗಳು ಸಣ್ಣ ಸಾಲ ಯೋಜನೆಗಳಿಗೆ ಪರ್ಯಾಯವಾಗಿ ಬೆಳೆಯುತ್ತಿವೆ ಮತ್ತು ತಮ್ಮ ತಮ್ಮ ನೆಲೆಗಳಲ್ಲಿ ಒಂದು ಪರ್ಯಾಯ ವ್ಯವಸ್ಥೆಯನ್ನು ಸಹಾ ರೂಪಿಸುತ್ತಿವೆ. ಆದರೆ ಈ ಸ್ವಸಹಾಯ ಗುಂಪುಗಳು ಬಹಳಷ್ಟು ಸಲ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತವೆಯೇ ಹೊರತು ಲಿಂಗ ತಾರತಮ್ಯ ಇರುವ ಬೇರೆ ಕ್ಷೇತ್ರಗಳತ್ತ ಗಮನ ಹರಿಸುತ್ತಿಲ್ಲ. ಉದಾಹರಣೆಗೆ ಅದು ಮನೆಯಾಗಿರಬಹುದು, ಸಮುದಾಯವಾಗಿರಬಹುದು, ಕಾರ್ಯ ಕ್ಷೇತ್ರವಾಗಿರಬಹುದು, ರಾಜಕೀಯ ಕ್ಷೇತ್ರವಾಗಿರಬಹುದು, ಇವೆಲ್ಲವೂ ಒಂದಕ್ಕೊಂದು ಮೂಲಭೂತವಾಗಿ ಸಂಬಂಧಿಸಿದ್ದೇ ಆಗಿದೆ.
ಅವುಗಳೆಲ್ಲವನ್ನೂ ಪರಸ್ಪರ ಜೋಡಿಸಿಕೊಂಡು ಕೆಲಸ ಮಾಡಿದಾಗ ದೊಡ್ಡಮಟ್ಟದ ಬದಲಾವಣೆ ಸಾಧ್ಯ.
ಒಗ್ಗಟ್ಟು ಹೊಸ ಹಾದಿಗಳನ್ನು ಸೃಷ್ಟಿಸುತ್ತದೆ
ಕೇರಳದ ’ಕುಟುಂಬಶ್ರೀ’ ಇದಕ್ಕೊಂದು ಅತ್ಯುತ್ತಮ ಉದಾಹರಣೆ. ಇದು ಬಡತನದ ರೇಖೆಗಿಂತಾ ಕೆಳಗಿರುವ ಸುಮಾರು ನಾಲ್ಕು ದಶಲಕ್ಷ ಮಹಿಳೆಯರ ಒಕ್ಕೂಟ.
೧೯೯೮ರಲ್ಲಿ ಕೇರಳ ಸರ್ಕಾರದಿಂದ ಚಾಲನೆಗೊಂಡ ಈ ಯೋಜನೆಯ ಲಕ್ಷ್ಯ ಅಂಚಿಗೆ ತಳ್ಳಲ್ಪಟ್ಟ ಮಹಿಳೆಯರ ಸಾಮೂಹಿಕ ಕ್ಷಮತೆಯನ್ನು ಚಾಲನೆಗೊಳಿಸುವುದು ಮತ್ತು ಅದನ್ನು ಸಧೃಡಗೊಳಿಸುವುದು ಮತ್ತು ಆ ಮೂಲಕ ಅವರು ತಮ್ಮ ಬಡತನದ ಕಾರಣವನ್ನು ಹುಡುಕಿಕೊಳ್ಳಲು ಪ್ರೇರೇಪಿಸುವುದು. ಕೇರಳದ ಜನತಾ ಯೋಜನೆಯಡಿಯಲ್ಲಿ ಚಾಲ್ತಿಗೊಂಡ ಈ ಯೋಜನೆಯ ಗುರಿ ಇದ್ದದ್ದು ಸರ್ಕಾರ ಮತ್ತು ನಾಗರೀಕರ ನಡುವೆ ಇರಬಹುದಾದ ಬೇಲಿಯನ್ನು ನಿವಾರಿಸುವುದು. ಈ ಯೋಜನೆಯ ಹುಡುಕಾಟ ಇದ್ದದ್ದು ಸಮುದಾಯದ ತಳಮಟ್ಟದಿಂದ ಯೋಜನೆಗಳನ್ನು ರೂಪಿಸುವುದು. ಅದೇ ಪ್ರಕಾರವಾಗಿ, ಕುಟುಂಬಶ್ರೀ ಪ್ರಾರಂಭದಿಂದಲೂ ಸಮುದಾಯ ಮತ್ತು ಆಡಳಿತ ಯಂತ್ರ ಒಟ್ಟೊಟ್ಟಿಗೆ ಕೆಲಸ ಮಾಡುವಂತೆ ನೋಡಿಕೊಂಡಿದೆ. ಅದರ ನಿರ್ವಾಹಕ ಮಂಡಳಿಯಲ್ಲಿ ಸ್ಥಳೀಯ ಸ್ವಯಂ ಸರ್ಕಾರದ ರಾಜ್ಯ ಸಚಿವ ಮುಖ್ಯಸ್ಥನ ಜಾಗದಲ್ಲಿರುತ್ತಾನೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕುಟುಂಬಶ್ರೀಯ ಕಛೇರಿ ಇರುತ್ತದೆ. ಅಲ್ಲಿ ಒಬ್ಬ ಕ್ಷೇತ್ರಾಧಿಕಾರಿ ಇರುತ್ತಾನೆ. ಈ ವ್ಯವಸ್ಥೆಯ ಮುಖ್ಯ ಉದ್ದೇಶ ರಾಜ್ಯದೆಲ್ಲೆಡೆ ಇರುವ ಸಮುದಾಯ ಜಾಲದ ಚಟುವಟಿಕೆಗಳಿಗೆ ನೆರವು ನೀಡುವುದು. ಈ ಸಮುದಾಯ ಜಾಲದಲ್ಲಿ ಸುಮಾರು ೪ ದಶಲಕ್ಷ ಹೆಂಗಸರಿದ್ದಾರೆ. ಆದಾಯ ನಿರ್ಮಾಣದ ಅನೇಕ ಚಟುವಟಿಕೆಗಳಲ್ಲಿ ಅವರೆಲ್ಲಾ ತೊಡಗಿರುತ್ತಾರೆ. ಜೊತೆಜೊತೆಯಲ್ಲಿಯೇ ಸಾಮಾಜಿಕ ಅಸಮಾನತೆ ಮತ್ತು ಸಾಮಾಜಿಕ ಅನ್ಯಾಯದ ವಿರುದ್ಧ ಸಹ ಅವರ ಒಕ್ಕೂಟ ಹೋರಾಟ ನಡೆಸುತ್ತಿರುತ್ತದೆ.
ಕುಟುಂಬಶ್ರೀಯ ಸಾಂಸ್ಥಿಕ ರಚನೆಯ ಸ್ವರೂಪ ಅದನ್ನು ಬೇರೆ ಎಲ್ಲಾ ಸಂಘಟನೆಗಳಿಗಿಂತಾ ಭಿನ್ನವಾಗಿಸಿದೆ. ಅದು ಸಾಮುದಾಯಿಕ ಒಗ್ಗಟಿನ ಮೂರು ಸ್ತರಗಳಲ್ಲಿ ಕೆಲಸ ಮಾಡುತ್ತದೆ. ಮೊದಲನೆಯ ಹಂತದಲ್ಲಿ ’ನೆರೆಹೊರೆ ಗುಂಪು’ ಇರುತ್ತದೆ, ಅದರಲ್ಲಿ ೧೦ರಿಂದ ೨೦ ಮಹಿಳೆಯರಿರುತ್ತಾರೆ. ಈ ’ನೆರೆಹೊರೆ ಗುಂಪು’ಗಳು ಸೇರಿ ’ಪ್ರಾದೇಶಿಕ ಅಭಿವೃದ್ಧಿ ಸೊಸೈಟಿ’ ಗಳಾಗಿರುತ್ತವೆ. ಎಲ್ಲಾ ’ಪ್ರಾದೇಶಿಕ ಅಭಿವೃದ್ಧಿ ಸೊಸೈಟಿ’ಗಳೂ ಸೇರಿ ಪಂಚಾಯತಿ ಮಟ್ಟದಲ್ಲಿ ’ಸಮುದಾಯ ಅಭಿವೃದ್ಧಿ ಸೊಸೈಟಿ’ ಗಳಾಗಿರುತ್ತವೆ.
ಈ ಕುಟುಂಬಶ್ರೀ ಪ್ರಯೋಗದಿಂದ ಕೆಲವು ಪ್ರಮುಖ ಪರಿಣಾಮಗಳಾಗಿವೆ.
ಮೊದಲನೆಯದಾಗಿ ಇದು ಮಹಿಳೆಯರು ತಮ್ಮ ಮೇಲೆ ಸಮಾಜ ವಿಧಿಸಿರುವ ಪ್ರತ್ಯೇಕತೆಯನ್ನು ಭೇದಿಸಲು ಸಹಾಯ ಮಾಡಿದೆ. ಈ ಪ್ರತ್ಯೇಕತೆ ಮಹಿಳೆಯರ ಮೇಲೆ ಉಂಟು ಮಾಡುವ ಪರಿಣಾಮ ನಮ್ಮ ಎಣಿಕೆಗೂ ಮೀರಿದ್ದು.
ಕಾಸ್ಟೋರಿಕಾದಲ್ಲಿ ನಾವು ಮಹಿಳೆಯರ ಅಭಿವೃದ್ಧಿಯ ಬಗ್ಗೆ ನಡೆಸಿದ ಒಂದು ಅಧ್ಯಯನದ ಸಮಯದಲ್ಲಿ ಮಧ್ಯ ಮತ್ತು ದಕ್ಷಿಣ ಅಮೇರಿಕಾದ ಮಹಿಳೆಯರ ಒಕ್ಕೂಟ ಈ ಪ್ರತ್ಯೇಕತೆ ಮಹಿಳೆಯರ ಅಭಿವೃದ್ಧಿಗೆ ಮೊದಲ ಅಡ್ಡಗೋಲು ಎಂದು ಗುರುತಿಸಿದ್ದರು. ಈ ಒಕ್ಕೂಟದ ಧ್ಯೇಯವಾಕ್ಯ ’ಒಂಟಿಯಾಗಿ ಸಾಧಿಸುವುದಕ್ಕಿಂತ ಹೆಚ್ಚಿನದ್ದನ್ನು ನಾವು ಜೊತೆಯಾಗಿ ಸಾಧಿಸಬಲ್ಲೆವು’. ಇದು ಸಂಪರ್ಕ, ಸಹಯೋಗ ಮತ್ತು ಒಗ್ಗಟ್ಟಿನ ಅಗತ್ಯಕ್ಕೆ ದನಿಕೊಟ್ಟಿದೆ.

ಮಹಿಳೆ ಎದುರಿಸುವ ಪ್ರತ್ಯೇಕತೆ ಹಲವಾರು ಹಂತಗಳಲ್ಲಿರುತ್ತದೆ ಮತ್ತು ಅದು ದೊಡ್ಡಮಟ್ಟದಲ್ಲಿ ಆರ್ಥಿಕ ಪ್ರಭಾವವನ್ನು ಬೀರುತ್ತದೆ. ಯಶಸ್ವೀ ಸಣ್ಣ ಉದ್ಯಮಗಳನ್ನು ಬೆಳೇಸುವುದು ಕಷ್ಟ. ತಮ್ಮ ಗೃಹಕೃತ್ಯಗಳ ಜೊತೆ ಜೊತೆಯಲ್ಲಿಯೇ ಮಹಿಳೆಯರು ಉತ್ಪಾದನಾ ಮತ್ತು ಮಾರುಕಟ್ಟೆಯ ನಿರ್ವಹಣೆಯ ವಿವಿಧ ಹಂತಗಳನ್ನು ತಾವೇ ನಿರ್ವಹಿಸಬೇಕಾಗುತ್ತದೆ. ಮೂಲಭೂತವಾಗಿ ಈ ಪ್ರತ್ಯೇಕತೆ ಅವರ ಆತ್ಮವಿಶ್ವಾಸಕ್ಕೆ ಧಕ್ಕೆಯನ್ನುಂಟುಮಾಡುತ್ತದೆ. ಅದೇ ಒಟ್ಟಾಗಬಲ್ಲ ಸಾಧ್ಯತೆ ಅದೇ ಮಹಿಳೆಯರಲ್ಲಿ ಯಶಸ್ಸಿನ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ. ಈ ಒಗ್ಗೂಡುವಿಕೆ ಒಂಟಿಯಾಗಿ ಕೆಲಸ ಮಾಡುವಾಗ ಸಾಧ್ಯವಾಗದ ಮೂಲಭೂತ ಉದ್ಯಮಶೀಲತೆಯನ್ನು ಬೆಳೆಸುತ್ತದೆ.
ನೆರೆಹೊರೆಯ ಮಹಿಳೆಯರನ್ನು ಒಂದುಗೂಡಿಸುವ ಮೂಲಕ ಕುಟುಂಬಶ್ರೀ ಇದನ್ನು ಸಾಧ್ಯಗೊಳಿಸಿದೆ. ಅವರಲ್ಲಿ ಬಹಳಷ್ಟು ಮಂದಿಗೆ ತಮ್ಮನ್ನು ತಾವು ಕಂಡುಕೊಳ್ಳಲು ಮನೆಯ ಹೊರತಾಗಿ ಇದು ಮೊದಲ ಅಥವಾ ಒಂದೇ ಕ್ಷೇತ್ರ. ಇಲ್ಲಿ ಅವರು ಅವರಂತೆಯೇ ಇರುವ ಮಿಕ್ಕ ಮಹಿಳೆಯರ ಜೊತೆ ಒಡನಾಡುತ್ತಾರೆ. ಮುಂದುವರೆಯುತ್ತಾ ವಾರ್ಡು ಮತ್ತು ಹಳ್ಳಿಗಳ ಮಟ್ಟದಲ್ಲಿಯೂ ಆ ಒಡನಾಟ ವಿಸ್ತರಿಸುತ್ತದೆ. ಕುಟುಂಬಶ್ರೀಯ ಉದ್ಯಮಗಳು, ತಿಂಗಳ ಮಾರುಕಟ್ಟೆಗಳು, ಆಹಾರದ ಹಬ್ಬಗಳು ಮತ್ತಿತರ ಯೋಜನೆಗಳು ಮಹಿಳೆಯರಿಗೆ ಬೇರೆ ರೀತಿಯಲ್ಲಿ ಸಿಗದಂತಹ ಅವಕಾಶಗಳನ್ನು ಒದಗಿಸುತ್ತವೆ. ಅವರ ಅಂತರ್ಜಾಲ ತಾಣದ ಪ್ರಕಾರ ಇತ್ತೀಚೆಗೆ ನಡೆದ ಕುಟುಂಬಶ್ರೀ ಆಹಾರೋತ್ಸವ ರೂ ೩.೨೨ ಕೋಟಿಗಳಷ್ಟು ವಹಿವಾಟನ್ನು ಕಂಡಿದೆ, ಅವರ ೧೪೩೪ ಮಾಸಿಕ ಮಾರುಕಟ್ಟೆಗಳು ರೂ ೪.೫೧ ಕೋಟಿ ಲಾಭವನ್ನು ತಂದಿದೆ.
ಎರಡನೆಯದಾಗಿ ಕುಟುಂಬಶ್ರೀ ಅವರ ಜೀವನದಲ್ಲಿ ಆದಾಯ ಉತ್ಪಾದಿಸುವ ಹಲವಾರು ಸಾಧ್ಯತೆಗಳನ್ನು ಮತ್ತು ಆ ಮೂಲಕ ಅಪರಿಮಿತ ಸಾಮಾಜಿಕ ಪರಿಣಾಮಗಳನ್ನು ಉಂಟು ಮಾಡಿದೆ.
ಸಂಘಕೃಷಿ ಅಥವಾ ಸಮಷ್ಟಿ ಕೃಷಿ ಆ ಸಾಧ್ಯತೆಗಳ ಪೈಕಿ ಒಂದು. ಈಗ ಹಾಗೆ ಸುಮಾರು ೨,೦೦,೦೦೦ ಮಂದಿ ಮಹಿಳೆಯರು ಅಂತಹ ಗುಂಪುಗಳಲ್ಲಿ ಸಂಘಟನೆಗೊಂಡು ಹತ್ತಿರ ಹತ್ತಿರ ೧,೦೦,೦೦೦ ಎಕರೆ ನೆಲವನ್ನು ಕೃಷಿ ಮಾಡುತ್ತಿದ್ದಾರೆ. ೨೦೦೭ರಲ್ಲಿ ಇದು ಸ್ಥಳೀಯ ಆಹಾರ ಉತ್ಪಾದನೆಗೆ ಒತ್ತುಕೊಡುವ ಉದ್ದೇಶದಿಂದ ಶುರುವಾಯಿತು. ಕೇರಳದ ಮಹಿಳೆಯರು ಈ ಕೃಷಿ ವಿಧಾನವನ್ನು ಉತ್ಸಾಹದಿಂದ ತಮ್ಮದಾಗಿಸಿಕೊಂಡರು. ಅಲ್ಲಿ ಈಗ ಸುಮಾರು ೪೭,೦೦೦ ಸಮಷ್ಟಿ ಕೃಷಿ ಗುಂಪುಗಳು ರಾಜ್ಯಾದ್ಯಂತ ಮಹಿಳಾ ಕೃಷಿಕರನ್ನು ಹೊಂದಿವೆ. ಈ ಸಮಷ್ಟಿ ಕೃಷಿ ಗುಂಪುಗಳು ಪಾಳು ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಳ್ಳುತ್ತವೆ, ಅವನ್ನು ಪುನರುಜ್ಜೀವನಗೊಳಿಸುತ್ತವೆ, ಅವನ್ನು ಕೃಷಿಗೆ ಸಜ್ಜುಗೊಳಿಸುತ್ತವೆ. ಸದಸ್ಯರ ಅಗತ್ಯದ ಆಧಾರದ ಮೇಲೆ ಆ ನೆಲದಿಂದ ಬಂದ ಉತ್ಪನ್ನವನ್ನು ಉಪಯೋಗಿಸುವುದೋ ಅಥವಾ ಮಾರುವುದೋ ಎನ್ನುವುದನ್ನು ನಿರ್ಧರಿಸುತ್ತಾರೆ. ಇಲ್ಲಿ ನಾವು ಹಲವಾರು ಸ್ಪೂರ್ತಿದಾಯಕ ಉದಾಹರಣೆಗಳನ್ನು ನೋಡಬಹುದು. ಪೆರಂಬ್ರಾದಲ್ಲಿ ಕುಟುಂಬಶ್ರೀ ಮಹಿಳೆಯರು ಪಂಚಾಯತ್ ನ ಸಹಯೋಗದಲ್ಲಿ ಕೆಲಸ ಮಾಡಿ ಸುಮಾರು ೨೬ ವರ್ಷಗಳಿಂದ ಪಾಳುಬಿದ್ದಿದ್ದ ೧೪೦ ಎಕರೆ ಜಮೀನನ್ನು ಕೃಷಿಯೋಗ್ಯವನ್ನಾಗಿಸಿದ್ದಾರೆ. ಅಲ್ಲಿ ಅವರು ಈಗ ಭತ್ತ, ತರಕಾರಿ ಮತ್ತು ಟ್ಯಾಪಿಯೋಕಾ ಬೆಳೆಯುತ್ತಿದ್ದಾರೆ.
ಇದು ಕೇರಳದ ಕೃಷಿ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಒಂದು ಎದ್ದು ಕಾಣುವಂತಹ ಬದಲಾವಣೆಯನ್ನು ತರುತ್ತಿದೆ. ಸಾವಿರಾರು ಕುಟುಂಬಶ್ರೀ ಮಹಿಳೆಯರು ಕಡಿಮೆ ಸಂಬಳದ ಕೂಲಿಯಾಳುಗಳಿಂದ ಸ್ವತಂತ್ರ ಸಾಗುವಳಿದಾರರಾಗಿ ಪರಿವರ್ತನೆಗೊಂಡಿದ್ದಾರೆ. ಸ್ವತಂತ್ರ ಸಾಗುವಳಿದಾರರಾಗಿ ಅವರಿಗೆ ಅವರ ಶ್ರಮ ಮತ್ತು ಸಮಯದ ಮೇಲೆ ಹೆಚ್ಚಿನ ನಿಯಂತ್ರಣ ಸಿಗುತ್ತಿದೆ. ಅಷ್ಟೇ ಅಲ್ಲ ಬೆಳೆ, ಉತ್ಪಾದನಾ ವಿಧಾನ ಮತ್ತು ಮುಖ್ಯವಾಗಿ ಉತ್ಪನ್ನ ಇವುಗಳ ಮೇಲೆ ಸಹ ಅವರಿಗೆ ನಿಯಂತ್ರಣ ಸಿಗುತ್ತಿದೆ.
ಸುಮಾರು ೧,೦೦,೦೦೦ ಮಹಿಳೆಯರು ಈಗ ಸಾವಯವ ಕೃಷಿಯನ್ನು ಕೈಗೊಂಡಿದ್ದಾರೆ, ಇನ್ನೂ ಹಲವರು ಆ ಹಾದಿಯಲ್ಲಿದ್ದಾರೆ. ಕುಟುಂಬಶ್ರೀ ಕೃಷಿಕರು ಪರಿಸರ ನಾಶವನ್ನು ತಪ್ಪಿಸುವ ಪರ್ಯಾಯ ಕೃಷಿ ಪದ್ಧತಿಯ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದಾರೆ.
ಒಂದು ಸಂಘಟನೆಗೆ ಸೇರಿದ್ದೇವೆ ಎನ್ನುವ ಆ ಮಹಿಳೆಯರ ಅರಿವು ಇನ್ನೂ ಹಲವು ಪರಿಣಾಮಗಳನ್ನು ಹೊಂದಿದೆ. ಕುಟುಂಬಶ್ರೀ ಮಹಿಳೆಯರು ರಾಜಕೀಯದಲ್ಲೂ ಭಾಗವಹಿಸುತ್ತಿದ್ದಾರೆ. ೨೦೧೦ ರಲ್ಲಿ ೧೧,೭೭೩ ಮಂದಿ ಪಂಚಾಯತ್ ಚುನಾವಣೆಯಲ್ಲಿ ಭಾಗವಹಿಸಿದ್ದಾರೆ ಮತ್ತು ಅದರಲ್ಲಿ ೫,೪೮೫ ಮಂದಿ ಮಹಿಳೆಯರು ಗೆದ್ದಿದ್ದಾರೆ.
ಇತ್ತೀಚಿನ ವಾರಂಗಲ್ ಜಿಲ್ಲೆಯ ತೆಲಾಂಗಣದಲ್ಲಿ ನಡೆದ ಕೃಷಿ ಕಾರ್ಮಿಕರ ರಾಷ್ಟ್ರೀಯ ಸಮ್ಮೇಳನದಲ್ಲಿ ಒಬ್ಬರಾದ ಮೇಲೊಬ್ಬರಂತೆ ಭಾಷಣಕಾರರು ಒತ್ತಿ ಹೇಳಿದ ಅಂಶ : ಕೃಷಿ ಕಾರ್ಮಿಕರು ಈಗಿರುವ ಹಾಗೆ ಇರಬಾರದು, ಅವರು ಭೂಮಿ ರಹಿತರಾಗಿರಬಾರದು. ಅವರು ಉತ್ಪಾದಕರಾಗಬೇಕು, ಭೂ ಮಾಲಿಕರಾಗಬೇಕು. ಕುಟುಂಬಶ್ರೀಯ ಮಹಿಳೆಯರು ಈ ದಿಸೆಯಲ್ಲಿಯೇ ಕಾರ್ಯಪ್ರವೃತ್ತರಾಗಿದ್ದಾರೆ. ಹಾಗೆ ಉತ್ಪಾದಕರಾಗುವತ್ತ ಆಗುತ್ತಿರುವ ಪರಿವರ್ತನೆ ನೆಲರಹಿತ ಕೃಷಿಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ.
ಯಾಕೆ? ಇದರಿಂದ ಅವರಿಗೆ ಸಿಗುವ ಲಾಭವಾದರೂ ಏನು?
(ಮುಂದುವರಿಯುತ್ತದೆ)
ಮೂಲ ಲೇಖನ : ಪಿ ಸಾಯಿನಾಥ್ ಮತ್ತು ಅನನ್ಯಾ ಮುಖರ್ಜೀ
ಅನುವಾದ : ಎನ್ ಸಂಧ್ಯಾರಾಣಿ
ಸೌಜನ್ಯ : ಉದಯವಾಣಿ
 

‍ಲೇಖಕರು G

December 26, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಲಕ್ಷ್ಮೀಕಾಂತ ಇಟ್ನಾಳ

    ನಿಜಕ್ಕೂ ಮಹಿಳಾ ಕಾರ್ಮಿಕರ, ಕೆಲಸಗಾರರ, ಕೂಲಿ ಮಾಡುವ ಕೆಳಹಂತದ ಸಮುದಾಯಗಳ ಅಭಿವೃದ್ಧಿಗಾಗಿ ತುಡಿಯುವ, ಅದಕ್ಕೊಂದು ದಾರಿಯ ಸೂಕ್ಷ್ಮ ಎಳೆಗಳು ಸಮಗ್ರವಾಗಿ ಅಧ್ಯಯನಶೀಲವಾಗಿ ತುಂಬ ಚಿಂತನಾರ್ಹವಾಗಿ ಮೂಡಿದ ಲೇಖನ. ಬಲು ಮೆಚ್ಚುಗೆಯಾಯಿತು. ಇದರ ಅಂಶಗಳು ಇಲ್ಲಿಯೂ ಕಾರ್ಯಗತವಾಗಿ ನಮ್ಮ ಕೂಲ ಜನಗಳ ಬದುಕು ಸುಂದರವಾಗಲಿ ಎಂಬ ಹಾರೈಕೆ. ತಮಗೂ, ಪಿ ಸಾಯಿನಾಥ ಅವರಿಗೂ ಅಭಿನಂದನೆಗಳು ಸಲ್ಲಬೇಕು.

    ಪ್ರತಿಕ್ರಿಯೆ
  2. Anil Talikoti

    ಪ್ರಚಲಿತ ಸಮಸ್ಯೆಯನ್ನು ಆಳವಾಗಿ ವಿಶ್ಲೇಷಿಸುವ ಸಾಯಿನಾಥರ ಲೇಖನದ ಅನುವಾದ ತುಂಬಾ ಚೆನ್ನಾಗಿದೆ.
    -ಅನಿಲ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: