ಸಂಧ್ಯಾರಾಣಿ ಕಾಲಂ : ನಿಲ್ಲೋ ಗೊಲ್ಲರ ಹುಡುಗ ಕೊಳಲೂದಬ್ಯಾಡಾ..


ಅದು ಬೆಸಗರಹಳ್ಳಿ ರಾಮಣ್ಣ ಕಥಾ ಕಮ್ಮಟ, ಕುಪ್ಪಳ್ಳಿಯಲ್ಲಿದ್ದೆ . ಹಗಲುಗಳು ಕಥೆಗಳನ್ನು ಕುರಿತಾದ ಚರ್ಚೆ, ಮಾತು, ಸಂವಾದದಲ್ಲಿ ಉರುಳುತ್ತಿದ್ದವು. ಸಂಜೆ ಮಾಜಿದ್ ಮಜೀದಿಯ ಕಾಡುವ ಚಿತ್ರಗಳು, ಆಮೇಲೆ ಕವಿ ಮನೆ ಅಥವಾ ಕವಿಶೈಲದವರೆಗೂ ನಡಿಗೆ. ಅಲ್ಲಿನ ಮೌನ, ಆಕಾಶ. ವಾಪಸ್ಸಾದ ಮೇಲೆ ಅಲ್ಲೇ ಅಂಗಳದಲ್ಲಿ ಹುಲಿಕುಂಟೆ ಮೂರ್ತಿ, ಸಬ್ಬನಹಳ್ಳಿ ರಾಜು ತಮಟೆಯಲ್ಲಿ ಬಾರಿಸುತ್ತಿದ್ದ ಮಟ್ಟುಗಳು, ಹಾಡುಗಳು, ಕೆ ವೈ ಎನ್ ಹಾಡುತ್ತಿದ್ದ ಹಾಡುಗಳು, ಓದುತ್ತಿದ್ದ ಕವಿತೆಗಳು …. ನಮ್ಮನ್ನು ಅರಿವೇ ಇಲ್ಲದಂತೆ ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದವು, ನಾವೂ ಸಹ ಆ ಲೋಕದ ಟಿಕೆಟ್ ಗಾಗಿ ಸಾಲು ಹಚ್ಚಿ ಕಾಯುತ್ತಿದ್ದೆವು! ಆಗ ತುಣುಕು ತುಣುಕಾಗಿ ಕೇಳಿದ ಕವಿತೆ ’ಹುಲಿ ಸೀರೆ’, ಅವರೇ ಬರೆದ ಕವಿತೆ. ಆದರೆ ಕೆ ವೈ ಎನ್ ರವರಲ್ಲಿ ಆ ಕವಿತೆಯ ಪೂರ್ಣಪಾಠ ಇರಲಿಲ್ಲ, ನೆನಪಿನ ಮೇಲೆ ಅವರು ಅದರ ಸಾಲುಗಳನ್ನು ಹೇಳಿದ್ದರು. ಆ ಸಾಲುಗಳು ತಾವೇ ಸ್ವತಂತ್ರ ಕವಿತೆಗಳ ಹಾಗಿದ್ದವು, ಗಾಳದ ಹಾಗಿದ್ದವು. ಆ ಸಾಲುಗಳು ನನ್ನನ್ನು ಆಮೇಲೆ ನೆಮ್ಮದಿಯಾಗಿರಲು ಬಿಡಲೇ ಇಲ್ಲ.
ಯಾಕೆ ಕಾಡುತಿದೆ ಸುಮ್ಮನೆ ನನ್ನನು
ಯಾವುದು ಈ ರಾಗ
ಒಂದೇ ಸಮನೆ ಹಾಯುತಲಿದೆ ಅರಿವಿಗೆ
ಗುರುತೇ ತಪ್ಪಿದಾಗ …
ಎಲ್ಲೋ ಏನೋ ಕೆಲಸದಲ್ಲಿರುವಾಗ ಒಂದು ಸಾಲು ನೆನಪಾಗಿ ಹಿಂದಿನ ಊರು ಯಾವುದು, ಮುಂದಿನ ದಾರಿ ಯಾವುದು ಎಂದು ಕೇಳಿದಂತಾಗುತ್ತಿತ್ತು. ಪಯಣ ಶುರುವಾದ ರೀತಿ ಗೊತ್ತಿತ್ತು, ತಲುಪಿದ ಊರಿನ ಚಹರೆಯೂ ತಿಳಿದಿತ್ತು. ಆದರೆ ಕವನ ಕ್ರಮಿಸಿದ ಹಾದಿ? ಅದನ್ನು ನಾನು ಹುಡುಕಲೇ ಬೇಕಿತ್ತು. ಆ ಸಾಲುಗಳು ಯಾವ ತೀವ್ರತೆಯಲ್ಲಿ ನನ್ನನ್ನು ಕಾಡುತ್ತಿದ್ದವೆಂದರೆ ಒಮ್ಮೆ ಪೂರ್ತಿ ಕವಿತೆ ಓದಿಬಿಟ್ಟರೆ ಆ ಸಾಲುಗಳ ಹಿಡಿತದಿಂದ ತಪ್ಪಿಸಿಕೊಳ್ಳಬಹುದು ಎನ್ನುವ ಆಸೆಯಲ್ಲಿ ಆ ಕವಿತೆಯ ಬೆನ್ನುಬಿದ್ದಿದ್ದೆ ನಾನು. ಕವಿತೆ ಬೇಕು ಎಂದು ಕವಿಯನ್ನು ಕಾಡಿದವಳನ್ನು, ಸುಮಾರು ದಿನ ಕಾಯಿಸಿ, ಕಡೆಗೊಂದು ದಿನ ದಕ್ಕಿದ ಕವಿತೆ ’ಹುಲಿಸೀರೆ’.
ಅದೊಂದು ಕಥನ ಕವನ. ಊರಗೌಡನ ಮಗಳು ಗಾಳಿಯಲಿ ತೇಲಿಬಂದ ನಾದನಾವೆಯನ್ನೇರಿ ಪ್ರೇಮದ ಹಾದಿಯನ್ನು ಕ್ರಮಿಸಿದ ಕಥೆ, ಬದುಕಿನ ಪ್ರಯಾಣವನ್ನು ಮುಗಿಸಿದ ಕಥೆ.
ಆ ಹುಡುಗಿ ಆದರೂ ಎಂಥವಳು …
’ತೂಗಿದರೆ ತೆನೆಯವಳು ತಾಗಿದರೆ ಮೊನೆಯವಳು
ಕೆನೆಗಟ್ಟಿದುಣ್ಣೀಮೆ ಸಕ್ಕಾರೆ ಗೊಂಬೆ’.
ಗೌಡನ ಮುದ್ದಿನ ಮಗಳು, ತಾಯಿ ಇಲ್ಲ, ಅಕ್ಕ ತಂಗಿಯರಿಲ್ಲ, ಅಣ್ಣ ತಮ್ಮಂದಿರಿಲ್ಲ, ಸಿರಿ ಇರುವ ಮನೆಯಲ್ಲಿ ಏಕಾಂಗಿ ಹುಡುಗಿ. ಎಲ್ಲಾ ಇದ್ದೂ, ಯಾರೂ ಇಲ್ಲದ ಒಂಟಿತನದಲಿ ಹುಡುಗಿ ಬಿಡುವ ನಿಟ್ಟುಸಿರಿಗೆ
’ ಪಾಪೆಯೊಳಗಿನ ದೀಪ ಅಲುಗೈತೆ ಉಸಿರಿಗೆ’.
ಉಪ್ಪರಿಗೆ ಮೇಲೆ ನಿಂತು ಕೆಳಗೆ ಸಾಗಿಹೋಗುತ್ತಿರುವ ಜೀವನ ನೋಡಿ ನಿಟ್ಟುಸಿರಿಡುವ ಹುಡುಗಿಗೆ ಚಿತ್ರದಲ್ಲಿನ ಗಿಳಿಗಳೆರಡು ಜೀವ ತಾಳಿ, ಸಮಾಧಾನ ಮಾಡುತ್ತವೆ. ನಿನ್ನ ಪ್ರೀತಿಸುವ ಹುಡುಗ ಬರುತ್ತಾನೆ ಎನ್ನುವ ಗಿಳಿಗಳ ಮಾತನ್ನೇ ನಂಬಿ ಕಾಯುತ್ತಾಳೆ ಹುಡುಗಿ. ಬರುವನೆಂಬ ಆಸೆ, ಬಾರದಿದ್ದರೆ ಎನ್ನುವ ಶಂಕೆ,
’ತಲ್ಲಣದ ಮಗ್ಗದಲಿ ಆಸೆ-ನಿರಾಸೆ
ಲಾಳಿ ಆಡುತ್ತಾಲಿತ್ತು ಇರುಳು ಪೂರ.’
ಆಸೆ ನಿರಾಸೆಗಳ ಲಾಳಿ ಆಟದಲ್ಲಿ ಇರುಳು ಸರಿದಿರುತ್ತದೆ, ’ಒಲವೆಂಬ ಹಾಲಿಗೆ ಹೆಪ್ಪನಿಟ್ಟು…’.
ಊರಲ್ಲಿ ಈ ಹುಡುಗಿ ಕಾಯುತ್ತಲಿದ್ದರೆ, ಕಾಡಲ್ಲಿ ಇರುತ್ತಾನೊಬ್ಬ ಗೊಲ್ಲರಾ ಹುಡುಗ. ಪಶುಗಳ ಕಾಯುತ್ತಾನೆ, ಹಾಡುಗಳ ಕಟ್ಟುತ್ತಾನೆ. ಕೊಳಲನ್ನು ಕೈಲಿ ಹಿಡಿದನೆಂದರೆ ’ನಾದ ನವಿಲುಗಳು ನಾಟ್ಯ ಮಾಡುತ್ತಾವೆ’. ಹೀಗೆ ತನ್ನ ಪಾಡಿಗೆ ತಾನಾಯ್ತೋ, ತನ್ನ ಹಾಡಾಯ್ತೋ ಎಂದು ಇದ್ದ ಹುಡುಗನಿಗೆ ಇತ್ತೀಚಿಗೆ
’ಮನಸಲ್ಲಿ ಮನಸಿಲ್ಲ..
ಏನೋ ಮೈ ಹೊಕ್ಕಂಗೆ
ಚಕ್ಕಲಗಿಲಿ ಇಟ್ಟಂಗೆ
ಮೈ ನರಗಳನೆಲ್ಲಾ ಹಗ್ಗ ಹೊಸೆದಂಗೆ
ಮೊತ್ತ ಮೊದಲಿಗೆ ತಾನು
ಒಬ್ಬಂಟಿ ಎಂಬಂಗೆ
ದಿಗುಲೆಂದರೇನೆಂದು ಅರಿಯದವನಲ್ಲಿ
ಭಯವಾಗಿ ಹುಟ್ಟೀತು ಹರೆಯಾದ ಕೋರಿಕೆ’
ಸಂತಸಕ್ಕಾಗಲೀ, ಸಂಕಟಕ್ಕಾಗಲೀ ಅವನ ಸಂಗಾತಿ ಆ ಕೊಳಲು. ಈಗಲೂ ಆತ ತನ್ನೆದೆಯ ದುಮ್ಮಾನವನ್ನೆಲ್ಲಾ ನಾದ ನಾವೆಯ ಮೇಲೆ ತೇಲಿಬಿಡುತ್ತಾನೆ. ದೋಣಿಗಳು ತೀರಗಳ ಸೇರಲೇ ಬೇಕಲ್ಲ? ಕಾಡಿನಾ ದೋಣಿ ಹೋಗಿ ತಲುಪಿದ್ದು ಊರಿನಾ ತೀರಾ, ತಟ್ಟಿದ್ದು ಉಪ್ಪರಿಗೆ ಮೇಲಿನ ಬಾಗಿಲು.
ಇನ್ನೇನು ನನಗೆ ಜೊತೆಗಾರ ಬರುತ್ತಾನೆಂದು ಗಿಳಿಶಾಸ್ತ್ರವನ್ನೇ ನಂಬಿ ಕುಳಿತ ಹುಡುಗಿ ಆಕೆ. ಬಾಗಿಲ ಸದ್ದಿಗೆ ತಟ್ಟನೇಳುತ್ತಾಳೆ, ಮನಸ್ಸಿನ ಬಾಗಿಲನ್ನೂ, ಮನೆಯ ಬಾಗಿಲನ್ನೂ ತೆರೆದು ನಿಲ್ಲುತ್ತಾಳೆ. ಆಕೆ ಕಾದಿದ್ದ ಪ್ರೀತಿ ಅದು, ತಪಿಸಿದ್ದ ಪ್ರೇಮ,
’ಅಂಬು ನಾಟುವ ಮುನ್ನ
ಬಲಿ ಬಿದ್ದ ಮಿಕ’ ಅವಳು.
ದೋಣಿಗೆ ಹಗ್ಗ ಕಟ್ಟಿ ನಿಲ್ಲುಸುವೆನೆಂದುಕೊಂಡಿದ್ದಳು, ಆದರೆ ತನ್ನ ಬದುಕಿನ ದೋಣಿಯ ಹಗ್ಗವನ್ನೂ ಆ ದೋಣಿಗೇ ಕಟ್ಟಿಬಿಟ್ಟಿರುತ್ತಾಳೆ. ಪ್ರೀತಿಗೆ ಬೀಳುವ ಆ ದಿನಗಳು ಎಂಥ ಬೆಡಗು…
’ ಹೆಪ್ಪುಗಟ್ಟಿದ ಹಾಲ ಬಾನೆಯನಿಂತು
ಒಲವೆಂಬ ಮಂತು ಕಡೆಯುತ್ತಲಿತ್ತು
……………………………………..
ಎದೆಯ ಹಚ್ಚೆಯಲ್ಲಿ ಮೂಡಿತ್ತು ಚಿತ್ತಾರ
ನವಿಲ ಕಣ್ಣು’.

ಹಾಡು ಕೇಳಿದ ಹೆಣ್ಣ ಎದೆಯ ಮೇಲೆ ಆ ಕೊಳಲ ನಾದಕ್ಕೆ ಮೇಲೆದ್ದ ನವಿಲಿನಾ ಕಣ್ಣು, ಅದರ ನವಿರು. ಚಿತ್ರವಲ್ಲ ಅದು, ಅಳಿಸದಾ ಹಚ್ಚೆ. ಆಕಾರವಿಲ್ಲದ ಹಾಡು ಎದೆಯ ಮೇಲಿನ ಹಚ್ಚೆಯಾಗುತ್ತದೆ. ಮೊದಲು ಪ್ರೇಮವನ್ನು, ಪ್ರೇಮಿಸುತ್ತೇವೆ ಎನ್ನುವ ಭಾವವನ್ನು ಪ್ರೀತಿಸುತ್ತೇವೆ, ಆಮೇಲೆ ಆ ಪ್ರೇಮಕ್ಕೊಂದು ಆಕಾರ ಕೊಡುತ್ತೇವೆ ಅಂದರೆ ಅದು ಹೀಗೇನಾ? ಹೆಸರಿರದ ಭಾವಕೊಂದು ಹೆಸರು ದಕ್ಕಿ ಅದು ಪ್ರೇಮವಾಗುತ್ತದೆ.
ಹಚ್ಚೆ ಬರೆದಾಗಿದೆ, ಶಾಸ್ತ್ರ ನಿಜವಾಗಿದೆ. ರಾಗದ ಹಿಂದಿರುವ ಮುಖದ ಹುಡುಕಾಟ ಉಪ್ಪರಿಗೆ ಮೇಲಿನ ರಾಜಕುಮಾರಿಗೆ. ಕೇಳಬಹುದಾದರೆ ಯಾರನ್ನು ಕೇಳುವುದು, ಹೇಳುವವರಿದ್ದರೂ ಏನೆಂದು ಕೇಳುವುದು? ಊರ ಹೆಣ್ಣುಮಕ್ಕಳ ಜೊತೆ ಮಾತನಾಡಬೇಕೆಂದುಕೊಂಡು ನೀರು ತರುವ ನೆಪ ಮಾಡಿ ಬಾವಿಗೆ ಹೋಗುತ್ತಾಳೆ. ಇಡೀ ಊರಲ್ಲೆ ಕೊಳಲ ನುಡಿಸುವವರು ಯಾರೂ ಇಲ್ಲ, ಹುಡುಗಿ ಹುಡುಕಾಟಕ್ಕೆ ಉತ್ತರ ಎಲ್ಲಿ? ಬೇಡುತ್ತಾಳೆ ಗಂಗೆಯನ್ನು, ಅವನ ಮುಖ ತೋರು ಎಂದು. ಗಂಗೆಯಾದರೂ ಹೆಣ್ಣು, ಪ್ರೇಮದ ಮೋಡಿ ಬಲ್ಲವಳು, ಅದರ ಬಲೆಗೆ ಸಿಕ್ಕವಳು. ಹುಡುಗಿ ಮೇಲೆ ಕನಿಕರಗೊಂಡು ನೀರಿನಲ್ಲೇ ಹುಡುಗನ ಬಿಂಬ ತೋರಿಸುತ್ತಾಳೆ.
ಗಿಣಿ ಶಾಸ್ತ್ರವಾಗಿದ್ದ ಮಾತು ರಾಗವಾದಾಗಲೇ ಎದೆ ಮೇಲಿನ ಹಚ್ಚೆಯಾಗಿತ್ತು, ಈಗ ಆ ಹಾಡಿನ ಹಿಂದಿನ ಮುಖವೂ ಕಂಡಾಗಿದೆ. ಹುಡುಗಿ ಪ್ರೀತಿಯಲಿ ಕಳೆದುಹೋಗಲು ಇನ್ನೆನು ಬೇಕು? ತೊಳಲಾಡಿ ಹೋಗುತ್ತಾಳೆ ಹೂವಂತಹ ಹೆಣ್ಣು. ಕಡೆಗೊಂದು ದಿನ ಇನ್ನು ತಾಳಲಾರೆನೆಂದುಕೊಂಡು, ಆಳುಗಳ ಕರೆದು ಭಾಷೆ ಮಾಡಿಸಿಕೊಂಡು ಹುಡುಗನನ್ನು ಹುಡುಕಲು ನಾಲ್ಕು ದಿಕ್ಕಿಗೂ ಕಳಿಸುತ್ತಾಳೆ. ಅಂತೂ ಇಂತೂ ಒಬ್ಬ ಆಳು ಅವಳ ಜೀವ ಉಳಿಸುವ ಮಾತನ್ನು ಹಿಡಿದು ಬರುತ್ತಾನೆ, ಪುಟ್ಟ ಗಂಟೊಂದನ್ನು ತರುತ್ತಾನೆ. ಕಾಡಲ್ಲಿನ ಗೊಲ್ಲರ ಹುಡುಗ, ತನ್ನ ಕೊಳಲ ನಾದ ಮೆಚ್ಚಿ, ಶರಣಾದ ಹುಡುಗಿಯ ಪ್ರೀತಿಯನು ಒಪ್ಪಿರುತ್ತಾನೆ, ಪ್ರೇಮವನ್ನು ಅಪ್ಪಿಕೊಂಡಿರುತ್ತಾನೆ. ತನ್ನವಳಿಗಾಗಿ ಉಡುಗೊರೆಯನ್ನೂ ಕಳಿಸಿರುತ್ತಾನೆ. ಆ ಉಡುಗೊರೆಯಾದರೂ ಏನು?
’ಹಲಸಿತ್ತೊ ಜೇನಿತ್ತೊ ಕಾಡುಮಲ್ಲಿಗೆಯಿತ್ತೊ
ಹುಲಿಚರ್ಮದ ಸೀರೆ ಬಳುವಳಿ ಇತ್ತೊ
ಎಂಥ ಚಂದ ಬೆರಗು! ಎಂಥ ಬಣ್ಣದ ಬೆಡುಗು’
ಅಷ್ಟೇ ಅಲ್ಲ, ಪ್ರೇಮವನು ಗೆದ್ದು ತನ್ನನ್ನು ಸೋತ ಹುಡುಗ ತನ್ನ ಪ್ರಾಣದಂತಿದ್ದ ಕೊಳಲನ್ನೇ ಕಳಿಸಿರುತ್ತಾನೆ.
’ಕೊಳಲೀನ ಒಳಗಿತ್ತು ಗೊಲ್ಲನ ಬಿಸಿಯುಸಿರು
ಗಂಧ ಪರಿಮಳವಿತ್ತು ಗಾಳಿಯೊಲು!’.
ಎಂತಹ ಮಧುರವಾದ ಕಲ್ಪನೆ….. ತನ್ನವಳಿಗೆ ಕೊಳಲಿನ ಒಳಗೆ ತನ್ನ ಉಸಿರಿಟ್ಟು ಕಳಿಸುವ ಪ್ರೀತಿಯೆಂತಹ ಕೋಮಲ ಗಾಂಧಾರ..
ಈಗೀಗ ನಾದನೌಕೆಯ ಮೇಲೆ ದಿನವೂ ಪ್ರೇಮದ ನವಿಲುಗಳ ಸವಾರಿ,
’ಉಪ್ಪರಿಗೆ ಮೇಲವಳು ಅಟ್ಟಣಿಗೆ ಮೇಲವನು
ಕೂಡಾಲು ಕಾಯದ ಹಂಗಿಲ್ಲ’.
ಕಾಯದ ಹಂಗಿಲ್ಲದೆ ಕೂಡಿದವರು ಅವರು. ಕೊಳಲಲ್ಲಿನ ಉಸಿರ ಸಾಕ್ಷಿಯಾಗಿ ಜೊತೆಯಾದವರು.
ಪ್ರೇಮ ಹುಡುಗಿಯನ್ನು ಮೊದಲು ಕಾಡಿತ್ತು, ಈಗ ಅದೇ ಪ್ರೇಮ ಅವಳನ್ನು ಹೆಣ್ಣು ಮಾಡಿದೆ. ಎದೆಯೆತ್ತರ ಬೆಳೆದ ಮಗಳಿಗೆ ಗೌಡ ಮದುವೆ ಏರ್ಪಾಟು ಮಾಡುತ್ತಾನೆ. ಹುಡುಗಿ ಸತ್ಯ ಹೇಳಲಾರಳು, ಗೊಲ್ಲ ಹುಡುಗನನ್ನು ಪ್ರೀತಿಸುವೆ ಎಂದರೆ ಅಪ್ಪ ಇಡೀ ಕಾಡನ್ನೇ ಸುಡಿಸಿ ಹಾಕಿಯಾನು ಎನ್ನುವ ಆತಂಕ, ಒಲಿದವನ ಬಿಟ್ಟರೆ ಬದುಕೇ ಇಲ್ಲ ಎನ್ನುವ ತೊಳಲಾಟ. ಉಪ್ಪರಿಗೆ ಇಳಿಯದ, ಬಿಸಿಲಲ್ಲಿ ಮನೆಯಿಂದ ಹೆಜ್ಜೆ ಹೊರಗಿಡದ ಹುಡುಗಿ ಕಡೆಗೆ ಮನೆಯನ್ನು ಬಿಟ್ಟು ಪ್ರೇಮವನ್ನು ಹುಡುಕುವ ನಿರ್ಧಾರ ಮಾಡುತ್ತಾಳೆ. ಉಟ್ಟಿದ್ದ ಸೀರೆ, ತೊಟ್ಟಿದ್ದ ಒಡವೆ ಎಲ್ಲಾ ಬಿಚ್ಚಿಡುತ್ತಾಳೆ. ರಾತ್ರಿಯ ಕಗ್ಗತ್ತಲಲ್ಲಿ ತನ್ನ ಹುಡುಗ ಕಳಿಸಿದ ಹುಲಿ ಸೀರೆಯುಟ್ಟು ಮನೆಯಿಂದ ಹೊರಗೆ ಹೆಜ್ಜೆ ಇಡುತ್ತಾಳೆ. ರಾಗ ನುಡಿಸುವ ಕೊಳಲೇ ಈಗ ಅವಳ ಜೊತೆ ಧೈರ್ಯಕ್ಕೆ. ಕತ್ತಿಯಂತೆ ಕೊಳಲನ್ನು ಕೈಯಲ್ಲಿ ಹಿಡಿದ ಬಾಲೆ, ಬಿರಬಿರನೆ ನಡೆಯುತ್ತಾಳೆ ಕಾಡಿನಾಳಕ್ಕೆ.
ಅಲ್ಲಿ ಅಟ್ಟಣಿಗೆ ಮೇಲೆ ಗೊಲ್ಲ, ಹದಿವಯಸ್ಸಿನ ಹುಡುಗ, ಪ್ರೇಮದಲಿ ಪೂರಾ ನೆಂದಿದ್ದಾನೆ.
’ಅಂಗಾತ ಮಲಗಿದವನ ಅಂಗಾಂಗವೆಲ್ಲ
ತಂಬೂರಿಯಾದಂತೆ ತಂಗಾಳಿ ಸೋಂಕಿಗೆ
ತಟ್ಟನೆ ಬೆರಳೊಂದು ತಂತಿಯ ಮಿಡಿದಂತೆ
ಝಲ್ಲನೆ ಮೈತುಂಬ ತನತಾನ ತುಂಬಿದಂತೆ
ಮೈಯ ನರ ನರವೆಲ್ಲ ಝೇಂಕಾರಗೊಂಡಿತಲ್ಲ
ಕಣ್ಣ ಮುಚ್ಚಿದರೆ ಕಂಡ ಹೆಣ್ಣುಗಳೆಲ್ಲಾ
ಸರತಿ ನಿಲ್ಲುತ್ತಾರೆ!’
ಕೊಳಲನ್ನು ಕಳಿಸಿದ ಹುಡುಗನ ಮೈಯೀಗ ಪ್ರೀತಿಯ ಬೆರಳು ನುಡಿಸುವ ತಂಬೂರಿ. ಹೇಗಿರಬಹುದು ಅವಳು… ಕಾಯದ ಹಂಗಿರದೆ ಅವಳ ಕೂಡಿದವನ ಕಣ್ಣುಗಳಿಗೆ ಈಗ ಅವಳನ್ನು ನೋಡುವ ಹಟ! ಹುಡುಗಿಗೆ ಗಂಗೆ ಪಟವಾಗುತ್ತಾಳೆ, ಹುಡುಗನಿಗೆ ಚಂದ್ರ ವರ ನೀಡುತ್ತಾನೆ. ಚಂದ್ರನ ಮುಖದಲ್ಲಿ ಅವನಿಗೆ ತನ್ನ ಹುಡುಗಿಯ ಮುಖ ತೇಲಿಬರುತ್ತದೆ.
’ಕೊಳಲ ರಂಧ್ರಗಳಲ್ಲಿ ಸೆರೆ ಇದ್ದ ನವಿಲುಗಳು
ಗರಿ ಚಿಗುರಿ ಹಾರಿದವೊ ಹಾಲಗಗನಕ್ಕೆ’
ಇಲ್ಲಿಯವರೆಗೂ ಅವರಿಬ್ಬರ ಜೊತೆಯಿದ್ದ ಎಲ್ಲಾ ದೈವಗಳೂ ಇಲ್ಲಿಂದ ಮುಂದೆ ಅವರ ಕೈಬಿಟ್ಟುಬಿಡುತ್ತಾರೆ. ಹುಲಿಸೀರೆಯುಟ್ಟು ಬಂದ ಹುಡುಗಿಯನ್ನು ಕಂಡು ದನಕರುಗಳು ಬೆಚ್ಚಿ ಕೂಗುತ್ತವೆ, ಪ್ರೇಮದ ಮಾಯಕದಲ್ಲಿದ್ದ ಹುಡುಗ ಬಿಲ್ಲಿಗೆ ಬಾಣಹೂಡುತ್ತಾನೆ.
’ ಎಂದೂ ತಪ್ಪದ ಬೇಟೆ ಇಂದು ತಪ್ಪುವುದೇನು?
ಎದೆಯ ಹಚ್ಚೆಯಲಿ ಆಡುತಿದ್ದಾ ನವಿಲು
ಕತ್ತರಿಸಿ ಬಿತ್ತೊ’
ಹಾಡಿನಿಂದ ಶುರುವಾದ ಪಯಣ ಒಂದು ಬಾಣದಿಂದ ಮುಗಿಯುತ್ತದೆ. ಹುಡುಗಿಯಿಲ್ಲದೆ ಅವನು ಬದುಕಲಾರ.. ಚಿತೆ ಒಟ್ಟುಮಾಡಿದಾ ಹುಡುಗ ಅವಳೊಡನೆ ತಾನೂ ಚಿತೆ ಏರುತ್ತಾನೆ. ನೀರಿನಲಿ ಕಂಡ ಬಿಂಬ ಹೀಗೆ ಬೆಂಕಿಯಲಿ ಕರಗಿಹೋಗುತ್ತದೆ.
ಇಲ್ಲ ಕಥೆ ಅಲ್ಲಿಗೆ ಮುಗಿಯುವುದಿಲ್ಲ…
’ಮತ್ತ್ಯಾವ ಕಾಡಲ್ಲಿ ಇನ್ಯಾವ ಗೊಲ್ಲನು
ಹುಲಿಬೇಟೆಗೆಂದು ಆಟ ಕಟ್ಟಿರುವನೋ
ಮತ್ತ್ಯಾವ ದೇಶದ ಉಪ್ಪರಿಗೆ ಮ್ಯಾಲೆ
ಒಲವ ಬೇಟಕ್ಕೆ ಹುಡುಗಿ ಕಾದಿರುವಳೋ…….’
ಕವನ ಒಮ್ಮೆ ಕೈಗೆ ಸಿಕ್ಕರೆ, ಪೂರ್ತಿಯಾಗಿ ದಕ್ಕಿದರೆ ಅದರೊಳಕ್ಕೆ ಒಮ್ಮೆ ಮುಳುಗಿಬಿಟ್ಟರೆ ಅದರ ಮಾಯೆಯಿಂದ ತಪ್ಪಿಸಿಕೊಂಡುಬಿಡುವೆನಂದುಕೊಂಡಿದ್ದೆ. ಆದರೆ ಅದು ಕೊಳವಲ್ಲ, ನದಿ. ನದಿ ಹರಿಯುತ್ತಲೇ ಇರುತ್ತದೆ, ಈ ಹಾಡು ಸಾಗುತ್ತಲೇ ಇರುತ್ತದೆ, ನಮ್ಮನ್ನು ಕಾಡುತ್ತಲೇ ಇರುತ್ತದೆ.
ಬಿನದಕ್ಕೆ ಪಾಡುತ್ತಿದ್ದ ಬದಗನ ಹಾಡುಕೇಳಿದ ಅಮೃತಮತಿ ’ಮುಟ್ಟಿದ ಮನಮಂ ತಟ್ಟನೆ ಪಸಾಯದಾನಂಗೊಟ್ಟ’ ಕಥೆ ನೆನಪಾಯಿತು. ಹೌದು ಯಾಕೆ ಕಾಡುತ್ತವೆ ಹಾಡುಗಳು ಹೀಗೆ? ಇಹದ ಬಿಗಿ ಬಂಧಗಳನ್ನು ಬಿಡಿಸುವ ಕಲೆಯನ್ನು ಈ ಹಾಡುಗಳಿಗೆ ಹೇಳಿಕೊಟ್ಟವರು ಯಾರು? ಹಾಡಿಗೂ ಸಂತೋಷಕ್ಕೂ ಸಂಬಂಧವಿದೆ ಎನ್ನುತ್ತಾರೆ, ನಿಜ ಇರಬಹುದು, ಆದರೆ ಹಾಡುಗಳಿಗೂ ಕಣ್ಣೀರಿಗೂ ಇರುವ ಸಂಬಂಧ ಮಾತ್ರ ಇನ್ನೂ ಗಾಢ. ಸಂತಸದ ಹಾಡುಗಳು ಅರಳಿಸುತ್ತವೆ, ಆದರೆ ಕಾಡುವ ರಾಗಗಳು ನಮ್ಮೆದೆಯ ತಂತಿಯನ್ನು ಮತ್ತೆ ಮತ್ತೆ ಮೀಟುತ್ತಲೇ ಇರುತ್ತವೆ. ಯಾರೋ ಗುರುತಿರದ, ಹೆಸರಿರದ, ಕಂಡಿರದ ಒಂದು ಹಾಡು ಹೀಗೆ ವರ್ಷಗಳಿಂದ ನನ್ನೊಡನೆ ಉಸಿರಾಡುತ್ತಲೇ ಇದೆ.
ಯಾಕೋ ತುಂಬಾ ವರ್ಷಗಳ ಹಿಂದೆ ಹೀಗೆ ಚಿತ್ತದಲ್ಲಿ ಕೆತ್ತಿಟ್ಟ ಇನ್ನೊಂದು ಪ್ರಯಾಣ ನೆನಪಾಯ್ತು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಟ್ರೇನಿನಲ್ಲಿ ಪ್ರಯಾಣ. ರಾತ್ರಿ ಸುಮಾರು ೧೦ ದಾಟಿರಬಹುದು. ಬೆಂಗಳೂರು ಹಿಂದಾಗಿತ್ತು. ಎಲ್ಲೋ ೩-೪ ಸೀಟುಗಳ ಹಿಂದಿನಿಂದ, ನಮ್ಮದೇ ಬೋಗಿಯ ಯಾವುದೋ ಕಿಟಕಿಯಿಂದ ಒಂದು ಹಾಡು ನುಸುಳಿ ಬಂದಿತ್ತು. ರಾಣಿ ರೂಪಮತಿ ಚಿತ್ರದ ಹಾಡು. ’ಲೌಟ್ ಕೆ ಆ, ಲೌಟ್ ಕೆ ಆ.., ಆ ಲೌಟ್ ಕೆ ಆಜಾ ಮೇರಿ ಮೀತ್ ತುಝೆ ಮೇರೆ ಗೀತ್ ಬುಲಾತಾ ಹೈ..’, ನಿಜ ಹೇಳುತ್ತೇನೆ, ಒಂದೇ ಹಾಡಿನಲ್ಲಿ, ಒಂದೇ ಸಮಯದಲ್ಲಿ, ಅಷ್ಟು ಯಾತನೆ, ಅಷ್ಟು ಪ್ರೀತಿ ತುಂಬಿರುತ್ತದೆ ಎನ್ನುವುದು ಮೊದಲ ಸಲ ನನಗೆ ಅರ್ಥವಾಗಿತ್ತು. ಆಗಿನ್ನು ಪಿಯೂಸಿ ಹುಡುಗಿ ನಾನು, ದಂಗಾಗಿ ಕೂತು ಆ ಹಾಡು ಕೇಳಿದ್ದೆ, ’ಭರಸೆ ಗಗನ್, ಮೇರೆ ಭರಸೆ ನಯನ್, ದೇಖೋ ತರ್ ಸೇ ಹೈ ಮನ್ ಅಬ್ ತೋ ಆಜಾ’, ಆತ ದನಿಯೆತ್ತಿ, ಜಗತ್ತಿನ ನೋವನ್ನೆಲ್ಲಾ ತುಂಬಿಕೊಂಡು ಹಾಡುತ್ತಿದ್ದ. ತನ್ನ ಆತ್ಮವನ್ನೇ ಕಳೆದುಕೊಂಡಂತೆ ಅವನು ಹಾಡುತ್ತಿದ್ದರೆ ಆ ಘಳಿಗೆಯಲ್ಲಿ ಇಡೀ ಜಗತ್ತಿನಲ್ಲಿ ಅದೊಂದೇ ದನಿ ಇದೆ ಅನ್ನಿಸುತ್ತಿತ್ತು ಮತ್ತು ಆ ಘಳಿಗೆಯಲ್ಲಿ ಯಾಕೋ ಅಮೃತ ಮತಿ ನೆನಪಾಗಿಬಿಟ್ಟಳು ಮತ್ತು ಅರ್ಥವಾಗಿಬಿಟ್ಟಳು.
ಹಂಸಗೀತೆಯ ಚಂದ್ರಸಾನಿ ನೆನಪಿದ್ದಾಳಾ? ವೆಂಕಟಸುಬ್ಬಯ್ಯನವರ ಭೈರವಿಗೆ ಒಲಿದವಳು, ಸಮಾಜ, ವೃತ್ತಿಧರ್ಮ ಎಲ್ಲವನ್ನೂ ಮರೆತವಳು, ಹಾಡಿಗಾಗಿ ಸೋತು ಶರಣಾದವಳು?
ಹೌದು ಯಾಕೆ ಕಾಡುತ್ತವೆ ಹಾಡುಗಳು ಹೀಗೆ?
ಅದಿರಲಿ ಹಾಡಿಗೆ ಹೆಣ್ಣುಗಳೇ ಯಾಕೆ ಹೀಗೆ ಸೋಲುತ್ತಾರೆ? ಗಂಡು ಸಹ ಹೀಗೆ ಹಾಡಿಗೆ ಸೋತ, ತಮ್ಮದೆಲ್ಲವನ್ನೂ ಬಿಟ್ಟ, ಹಾಡಿನ ಹೆಜ್ಜೆ ಗುರುತು ಅರಸಿ ಹೋದ ಉದಾಹರಣೆ ಇದೆಯಾ? ಗೊತ್ತಿಲ್ಲ ನನಗೆ. ಮೀರೆ ಹಾಡಿದ ಕಥೆ ಕೇಳಿದ್ದೇವೆ, ಅಕ್ಕ ಹಾಡಿದ ಕಥೆ ಕೇಳಿದ್ದೇವೆ, ಆದರೆ ಅದಕ್ಕೆ ಮಾಧವ ಓಗೊಟ್ಟನೇ? ಚನ್ನಮಲ್ಲಿಕಾರ್ಜುನ ಹಿಂದಿರುಗಿ ನೋಡಿದನೆ? ಇದು ತಿಳಿಯುವುದೇ ಇಲ್ಲ. ಹಾಡುವ ಜೋಗಿಯ ಕಿನ್ನುಡಿ ದನಿಗಾಗಿ ಮುದ್ದಿನ ಮಗನ, ಮುದ್ದಾಡೋ ಗಂಡನ ಬಿಟ್ಟ ಆ ಹೆಸರಿಲ್ಲದ ಹೆಣ್ಣು ಆಮೇಲೆ ಏನಾದಳು?
ಯಾಕೆ ನಾವೇ ಹೀಗೆ,
’ಕರುಳ ಕೊರೆವ ಚಳಿ ಇರುಳಿನಲಿ
ರಾಗದಿ ಮೊಳೆಯುವ ನೋವಿನಲಿ
ಅರಸಿ ಅಲೆವೆ ನಾ ಸುರಿಸುತ ಕಂಬನಿ
ಕಳೆದ ರಾಗಗಳ ಕೊರಗಿನಲಿ’
ಎಂದು ಹಾಡುತ್ತೇವೆ?
ಕಂಬಾರರ ಹಾಡಿನ ಸಾಲುಗಳು ಬಿಟ್ಟೂ ಬಿಡದಂತೆ ನೆನಪಾಗುತ್ತಿವೆ, ಗಜಲ್‌ನ ರೀತಿ ಕಾಣುತ್ತಿವೆ,
’ನಿಲ್ಲೋ ಗೊಲ್ಲರ ಹುಡುಗ ಕೊಳಲೂದಬ್ಯಾಡ‌
ನಮ್ಮಾ ರಾಗದ ಹುಚ್ಚ ಕೆರಳೀಸಬ್ಯಾಡ
ಮಂದೀ ಏನಂದಾರು ನಾ ಹಿಂದೆ ಬರಲು
ಓರಿಗಿ ದೇವರು ಕೋಪಗೊಂಡಾರು…’
ಹೌದು, ಥೇಟ್ ಗಜಲ್ ನಂತೆ. ಗಜಲ್ ನ ಇನ್ನೊಂದು ಅರ್ಥ ’ಗಾಯಗೊಂಡ ಜಿಂಕೆಯ ಕೂಗು’ ಎಂದೂ ಇದೆ ಅಲ್ಲವೆ?

‍ಲೇಖಕರು G

January 23, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

17 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    “ಹುಲಿ ಸೀರೆ” ಕಥನ ಕವನ ನಿಜಕ್ಕೂ ಕಾಡಿತು.

    ಪ್ರತಿಕ್ರಿಯೆ
  2. rashmi

    ಕಾಡುವ ಹಾಡುಗಳು..ಅದರಲ್ಲಡಗಿರುವ ಭಾವನೆಗಳು ಎಷ್ಟು ಚಂದ !…
    ಸುಂದರ ಬರಹ..ಈ ಬರಹವೂ ಕಾಡುತ್ತೆ…ನೆನಪಿನಲ್ಲಿ ಉಳಿದ..ಪ್ರೀತಿಯಂತೆ

    ಪ್ರತಿಕ್ರಿಯೆ
  3. mmshaik

    nija madam gazalge ee athavu ide..jinke heNo gando gottilla…nice.. oLLe katahana odisidiri.. dhannyavadagaLu…

    ಪ್ರತಿಕ್ರಿಯೆ
  4. prashanth

    Kaaduva Olavu, Kaadada Olavu,
    Kaaduthiddaru kadadanthe badukuva anivaryathe,
    Kaadadiddaru kaduvanthe thorisuva vivashathe
    Iduve Jeevana allave Sandya Madam?

    ಪ್ರತಿಕ್ರಿಯೆ
  5. Swarna

    ಕಥನ ಮತ್ತು ನಿಮ್ಮ ಬರಹ ಎರಡೂ ಸೊಗಸಾಗಿದೆ.
    ಕಾಣದ ಎದೆಯ ಹಚ್ಚೆಗಳ ಬಗ್ಗೆ ಕಾಡುವ ಬರಹ .
    ಸಾಧ್ಯವಾದರೆ ಕವನದ ಪೂರ್ಣ ಪಾಠವನ್ನು ಹಂಚಿಕೊಳ್ಳಿ

    ಪ್ರತಿಕ್ರಿಯೆ
  6. samyuktha

    ದಿನವೆಲ್ಲಾ ಇದೇ ಗುಂಗಿನಲ್ಲಿರುವಂತೆ ಮಾಡುವ ಬರಹ!

    ಪ್ರತಿಕ್ರಿಯೆ
  7. Uday Itagi

    ಹೌದು, ಅಷ್ಟಕ್ಕೂ ಹಾಡುಗಳು, ರಾಗಗಳು, ಹೆಂಗಸರನ್ನಷ್ಟೇ ಏಕೆ ಕಾಡುತ್ತವೆ? ಗಂಡಸರನ್ನೇಕೆ ಕಾಡುವದಿಲ್ಲ? ಇದರ ಬಗ್ಗೆ ಒಮ್ಮೆ ಬರೆಯಿರಿ ಮೇಡಂ. ನಾನು ಈ ಹಿಂದೆ ಎಲ್ಲ ಬಿಟ್ಟು ಜೋಗಪ್ಪನ ಹಿಂದೆ ಹೋದವಳ ಬಗ್ಗೆ “ಎಲ್ಲ ಬಿಟ್ಟು ಅವಳು ಅವನು ಹಿಂದೆ ಹೋದದ್ದಾದರು ಏಕೆ?” ಎನ್ನುವ ಲೇಖನದಲ್ಲಿ ಕಾರಣ ತಿಳಿಯಲು ಪ್ರಯತ್ನಪಟ್ಟಿದ್ದೆ. ಆದರದು ಸಾಧ್ಯವಾಗಲೇ ಇಲ್ಲ. ಕೊನೆಗೆ ನಾನು ಹೆಣ್ಣನ್ನು ಬಗೆದಷ್ಟು ಅವಳು ನಿಗೂಢವಾಗುತ್ತಾ ಹೋಗುತ್ತಾಳೆ ಎಂದೇನೋ ಲೇಖನವನ್ನು ಮುಗಿಸಿದ್ದೆ. ಅವಳು ಅಂಥ ಒಳ್ಳೆ ಗಂಡನ ಬಿಟ್ಟು, ಎಳ್ಳಿನ ಹೊಲವನ್ನು ಬಿಟ್ಟು, ಮಗನನ್ನೂ ಬಿಟ್ಟು ಏನೂ ಇಲ್ಲದವನ ಜೊತೆ ಹೊರಟು ಬಿಡುತ್ತಾಳಲ್ಲ? ಅದಕ್ಕೆ ಬಲವಾದ ಕಾರಣವೇನು? ಇದಕ್ಕೆ ಅಮೃತಮತಿಯೂ ಹೊರತಾಗಿಲ್ಲ. ರಾಣಿಯಾದ ಅವಳು ಯಕಶ್ಚಿತ್ ಒಬ್ಬ ಮಾವುತನ ಹಿಂದೆ ಹೊರಟು ಬಿಡುತ್ತಾಳಲ್ಲ? ಇದಕ್ಕೆ ಕಾರಣವೇನು? ನಮಗೆ ಅಂದಿನಿಂದ ಇಂದಿನವರೆಗೂ ರಾಗಗಳನ್ನು ಬೆನ್ನಟ್ಟಿಹೋದ ಹೆಂಗಸರೇ ಸಿಗುತ್ತಾರೆ. ಗಂಡಸರ ಉದಾಹರಣೆಗಳು ಸಿಗುವದಿಲ್ಲ. ಇದಕ್ಕೆ ಹೆಣ್ಣಿನ ಚಂಚಲ ಮನಸ್ಸು ಕಾರಣವೇ? ಅಥವಾ ಹೆಣ್ಣು ಮಾಯೆಯೆಂಬುದು ಸುಳ್ಳು. ಬದಲಿಗೆ ಬರೀ ಗಂಡು ಮಾತ್ರ ಮಾಯೆಯೆ? ಇದರ ಬಗ್ಗೆ ಒಮ್ಮೆ ಬರೆಯಿರಿ ಮೇಡಂ.

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಉದಯ್ ಒಮ್ಮೆ ’ಯಾಕೆ ಯಾಕೆ ಕಾಡುತಿದೆ ಸುಮ್ಮನೆ ನನ್ನನು’ ಎನ್ನುವ ಒಂದು ಬರಹದ ಬಗ್ಗೆ ಮಾತನಾಡಿದ್ದೆವು ಅಲ್ಲವಾ? ಒಂದು ಸಣ್ಣ ಸ್ಪಷ್ಟನೆ ನಾನು ಇಲ್ಲಿ ಕೇಳಿರುವುದು ಗಂಡಸರು ರಾಗಕ್ಕೆ ಸೋತು, ಅದರ ಜಾಡು ಹುಡುಕುತ್ತಾ ಹೋದ ಉದಾಹರಣೆ ಇದೆಯಾ ಎಂದೇ ಹೊರತು, ಎಲ್ಲಾ ಹೆಣ್ಣುಗಳೂ ಹಾಗೆ ಸೋಲುತ್ತಾರೆ ಎಂದಲ್ಲ!

      ಪ್ರತಿಕ್ರಿಯೆ
  8. vishwanath hebballi

    nanage nenneyinndane k s Narasimhaswamy avara “Mysuru Mallige” ya ondondu hadugalu nenapagtha iddavu. Identha kakataliya, eevathina column nalli avarade kavanada prasthapavide…… ’Aa laut ke aa!!!!!’ endo diaryyalli baredu madichittu, haadi maretha mukeshana hadu.
    Hennugale heege antha neevugalu ankoteera, but gandasraddonthara bere hogirodanthoo avalanne nododakke aadre pretend madkollodu hegirutthe andre ” hage Big bazarge bandidde hengoo ille ideyalla ninna collegu matte nodkondu hogona antha bande, matte hegiddiya” ? idonthara bhandu thanaddu. Gollara huduga nee hadbyada, kadabyada chennagide.

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ನಮಸ್ತೆ. ಹಾಡುಗಳು ನಮ್ಮೊಡನೆ ನಿರಂತರ ಸಾಗುವ ಸಂಗಾತಿಗಳು ಅಲ್ಲವಾ? ಇಲ್ಲಿ ನನ್ನ ಪ್ರಶ್ನೆ ಮನಸ್ಸಿನ ಭಾವನೆಗಳನ್ನು ಯಾರು ಹೇಗೆ ಹೇಳುತ್ತಾರೆ ಎಂದಲ್ಲ, ಹಾಗೆ ರಾಗದ ಬೆನ್ನು ಹತ್ತಿ ಗಂಡು ಹೋದ ಕಥೆ ಯಾವುದಾದರೂ ಇದೆಯಾ ಎಂದು. ಹಾಗೆ ಯಾವುದಾದರೂ ಕಥೆ ಇದೆಯಾ?

      ಪ್ರತಿಕ್ರಿಯೆ
      • vishwanath hebballi

        bahushah irlikkilla,……. “ello hinde collegenalli odida nenapu…….Nanna kanasugalu beke? iduvarege bahala kande, kanutale iruve- mundinavakke swagathisalu vele saladagide.. khanditha maralu alla,…anthoo..koduve sweekarisuvira ? — eevarege kandavu banna bannadavu, baayi neeroorisidanthavu, kai beesi karedanthavu, hudugiya baluku nadeyathavu, kendutiyanthavu.., avala ubbidedeya kandu pulakagondathavu, kaige siguvathiddaroo, sigadanthavu—
        —-ninthalli kelavu, kulithalli kelavu, snanada vele nasubisi neerinathavu, malagidaga mulukuvanthavu.., chalaku koduvanthavu, thodeya sandinalli bisiyeri hasiyadanthavu… kanasugalu kanasugalage ulidanthavu, kaige sigadanthavu—
        —-chandra murnoora aravattu degree hotta dina, swarga moore genennuvanthe thoruvavu, satwa kaledu moole hotta
        ammavasyeya dina.. bhayanakavenisi sandugalu bevaridanthavu, kannujjidaga swargadalloo shoonyavannu thoruvanthavu—
        —-NANAGANTHOO sigalilla, nimagadaroo sikkavu… Kolli-kondukolli.. Hum.. neevu kondeera ? Illa duddu kodabedi.. Yavudu beko aarisikolli. NANAGE DAKKADANTHVU NIMAGADAROO DAKKIYAVU….. beke kanasugalu ? Nenapidi
        MARALU alla !!!!
        KANASUGALU Beke ???? !!!!! …… Vishu

        ಪ್ರತಿಕ್ರಿಯೆ
  9. ಶ್ವೇತಾ.ಎ

    ಮನಸ ಮೀಟಿದ ಈ ಬರಹ ಇಂದು,ಮುಂದು,ಎಂದೆಂದೂ ಜೀವಂತ…ಭಾವನೆಗಳ ಸುಳಿಯಲಿ ಒಲವ ಅರಳುವಿಕೆ.. ಅರಳುವುದು ಜೀವನ ಪರ್ಯಂತಾ……

    ಪ್ರತಿಕ್ರಿಯೆ
  10. Arathi ghatikar

    Upparige bittu ilida hudugi ..gollara hudugana kolalina usiraagi hodalu ..amaravaadalu ..innu ade gunginalli. Ee I kathe namannu telusuttade .adbhuta niroopane .

    ಪ್ರತಿಕ್ರಿಯೆ
  11. Anil Talikoti

    ಈ ಭಾವ ಕಾಡುವ ಪಾಡು ಸೊಗಸು-ಇವು ಎದೀಯೊಳಗ ಇಳಿದು ತತ್ತಿ ಬಿತ್ತುವ ಬಾಬತ್ತು !
    ~ಅನಿಲ

    ಪ್ರತಿಕ್ರಿಯೆ
  12. Puttaswamy

    HAMSAGEETE, SANDHYAARAAGA, BHUMIGE BANDA GANDHARVA,SUBBANNA MODALAADA KAADAMBARIGALLALLI raagada bennatti hoda PURAUSHARA kateyide. Alli romantic angle illade irabahudu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: