ಸಂಧ್ಯಾರಾಣಿ ಕಾಲಂ : ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ..


ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು?!
ಕಣ್ಣುಗಳನ್ನು ದಿಟ್ಟಿಸಿದಾಗ ’ಹೃದಯದಲಿ ಇದೇನಿದು ನದಿಯೊಂದು ಓಡಿದೆ’ ಎನ್ನುವ ಸಡಗರವನ್ನು ಇನ್ನ್ಯಾವ ಸಾಲುಗಳು ತಾನೆ ಇಷ್ಟು ಸೊಗಸಾಗಿ ವರ್ಣಿಸಬಹುದು? ಮಾತುಗಳೇ ಬೇಕಿಲ್ಲದೆ ಅದು ಹೇಗೆ ಕಣ್ಣುಗಳ ಭಾಷೆ ಹೃದಯಕ್ಕೆ ಅರ್ಥವಾಗಿಬಿಡುತ್ತವೆ? ಅವೇ ಕ೦ಗಳು ಒಮ್ಮೆ ಎದೆಯಲ್ಲಿ ಬೆಳದಿ೦ಗಳು ಸುರಿಸಿದರೆ ಮತ್ತೊಮ್ಮೆ ಎದೆಯ ಕಡಲನ್ನು ಅಲ್ಲೋಲ ಕಲ್ಲೋಲಗೊಳಿಸುವುದು ಎ೦ತಹ ಸೋಜಿಗ… ಸೂರ್ಯನ೦ತಹ ಮುಖದಲ್ಲಿ ಚ೦ದ್ರನ೦ತಹ ಕಣ್ಣುಗಳು, ಸುತ್ತ ಮುತ್ತಲೂ ಜನರಿದ್ದರೂ, ಅಲ್ಲೊಂದು ಏಕಾ೦ತ ಸೃಷ್ಟಿಸುವ ಒಂದು ಜೊತೆ ಕಣ್ಣುಗಳು, ನೋಡಿದೊಡನೆ ಕರೆಯುವ, ಬಂದೊಡನೆ ಕವನ ಹಾಡುವ ಕಣ್ಣುಗಳು. ಕಡಲ ದ೦ಡೆಯಲ್ಲಿ ಕುಳಿತಾಗ ಥೇಟ್ ಆ ಕಣ್ಣುಗಳೇ ಯಾಕೆ ನೆನಪಾಗಬೇಕು?!
ಪರಿಚಯ ಸ್ನೇಹವಾಗುವ ಘಳಿಗೆಯಲ್ಲಿ ನನ್ನನ್ನು ಸೆಳೆಯುವುದು ಕಣ್ಣುಗಳೇ. ಎ೦ತೆ೦ತಹ ಕಣ್ಣುಗಳು… ದಿಟ್ಟಿ ನೆಡದ೦ತೆ ನೆಲ ನೋಡುವ ಕಣ್ಣುಗಳು, ನೋಟದಾಗೆ ನಗೆಯನ್ನು ಮೀಟುವ, ಬಗೆಯನ್ನು ಮೀಟುವ ತು೦ಟ ಕಣ್ಣುಗಳು, ನೋಟ ತಪ್ಪಿಸುವ ಅಳುಕಿನ ಕಣ್ಣುಗಳು, ಗುಟ್ಟನ್ನು ಬಿಡದ ಬೆಕ್ಕಿನ ಕಣ್ಣುಗಳು, ಜಗತ್ತಿನ ಮುಗ್ಧತೆಯನ್ನು ತು೦ಬಿಕೊ೦ಡ ಕರುವಿನ ಕಣ್ಣುಗಳು, ಕರೆಯುವ ಕಣ್ಣುಗಳು, ಹಾಡುವ ಕಣ್ಣುಗಳು, ಮಾತೇ ಆಡದೆ ಕಾಡುವ ಕಣ್ಣುಗಳು!
’ಕಾಡಬೇಡ ಸರೋಜ, ಹೋದಲ್ಲಿ ಬಂದಲ್ಲಿ ಇಷ್ಟಿಷ್ಟಗಲ ಕಣ್ಣು ಬಿಟ್ಟು’ ಎಂದು ಲಂಕೇಶರಂತಹ ಲಂಕೇಶರನ್ನು ಕಾಡಿದ ಕಣ್ಣುಗಳು, ’ಎಂಥ ಕಣ್ಣು, ಎಂಥ ಕಣ್ಣು, ಎಂಥ ಕಣ್ಣು ನಿನ್ನದೆ, ಅದರ ನಗೆಯ ಬೆಳಕಿನಲ್ಲಿ ತೋಯುತಿಹುದು ನನ್ನೆದೆ’ ಎಂದು ಅಡಿಗರು ಹಾಡಿದಂತಹ ಕಣ್ಣುಗಳು. ’ಹೊಳೆಯ ಸುಳಿಗಳಿಗಿಂತಾ ಆಳ ಕಣ್ಣಿನ ಚೆಲುವು’ ಎಂದು ಕೆ ಎಸ್ ನರಸಿಂಹ ಸ್ವಾಮಿ ಬಣ್ಣಿಸಿದ ಕಣ್ಣುಗಳು.
ನನ್ನ ಕ೦ಗಳಲಿ
ನಿನ್ನ ಕ೦ಗಳ ತು೦ಟತನ
ತು೦ಬಿದ ಮರುಚಣ
ನಿದ್ದೆ ನನ್ನ ಕಣ್ಣಿ೦ದ ಜಾ..
ರಿ, ನಿನ್ನ ಕೆನ್ನೆ ಗುಳಿಗಳಲ್ಲಿ
ಮಗುಚಿಕೊ೦ಡಿತು!
ಎಂದು ಕವಿತೆ ಬರೆಸಿದ ಕಣ್ಣುಗಳು.
’ಹೋದರೆ ಹೋಗು ನನಗೇನು’ ಎಂದು ಬಿಂಕ ಮಾಡುತ್ತಿರುವಾಗ ಹೇಳದೇ ಕೇಳದೆ ನೀರಿನಲ್ಲಿ ತೇಲಿ, ಗುಟ್ಟುಬಿಟ್ಟು ಕೊಡುವ ಚಾಡಿಕೋರ ಕಣ್ಣುಗಳು!
ಸಂತೆಯ ನಡುವೆ ಅತ್ತಿತ್ತ ನೋಡುತ್ತಾ, ಏನೆಲ್ಲಾ ಹುಡುಕುತ್ತಾ ಅಲೆದಾಡುತ್ತಿದ್ದು, ಕಂಡ ಕೂಡಲೇ ಹುಡುಕಿದ್ದು ಕೇವಲ ನಿನ್ನನ್ನು ಮಾತ್ರ ಎಂದು ಸಿಹಿಯಾಗಿ ನಗುವ ಸುಳ್ಳುಬುರುಕ ಕಣ್ಣುಗಳು.

“ಕಣ್ಣು-ಕಣ್ಣು ಕಲೆತಾಗ ಮನವು ಉಯ್ಯಾಲೆ ಆಡಿದೆ ತೂಗಿ..”, ಕಾಮನಬಿಲ್ಲು ಚಿತ್ರದಲ್ಲಿ ಇಷ್ಟಿಷ್ಟಗಲ ಕಣ್ಣುಗಳ ಸರಿತಾ ಕಣ್ಣಲ್ಲಿನ ಸಮರ್ಪಣೆ, ರಾಜ್ ಕಣ್ಣಿನ ತು೦ಟತನ ಮನಸ್ಸಿನಿ೦ದ ಕರಗುವುದೇ ಇಲ್ಲ. “ಇರುಳಲ್ಲು ಕಾಣುವೆ ಕಿರುನಗುವನು, ಕಣ್ಣಲ್ಲಿ ಹುಚ್ಚೆದ್ದ ಹೊ೦ಗನಸನು”, ರಾತ್ರಿಗಳ ಮೇಲೆ ದ೦ಡೆತ್ತಿ ಬ೦ದು, ಕಣ್ಣುಗಳ ನಿದ್ದೆ ಹೊರಹಾಕಿ, ಕಣ್ಣಲ್ಲಿ ನೆಲೆನಿ೦ತ ಧಾಳಿಕೋರ ಕಣ್ಣುಗಳು!
ನಿರಾಳದಲ್ಲಿ ಮೈ ಮುರಿದು ಆಲಸ್ಯದಲ್ಲಿ ಮೇಲೇಳುವ ಕಾಫಿ ಹಬೆಯ ಹಿ೦ದೆ ಗ೦ಭೀರವಾಗಿದ್ದ ಕಣ್ಣುಗಳು, ಹಬೆ ನರ ನಾಡಿಗಳಲ್ಲಿ ಕರಗಿದ೦ತೆಲ್ಲಾ ಮೃದುವಾಗಿ ಬೆರಳ ತುದಿಯಿ೦ದ ಸ್ಪರ್ಶಿಸಲೇಬೇಕು ಎ೦ದು ಇನ್ನಿಲ್ಲದ ತುಡಿತ ಹುಟ್ಟಿಸಿದ ಕಡಲಿನ೦ತಹ ಕಣ್ಣುಗಳು…
“ನಿಮ್ಮ ರೂಪ ಕಣ್ಣಿನಲಿ, ನಿಮ್ಮ ಮಾತೆ ಕಿವಿಗಳಲಿ, ನಿಮ್ಮ ನೋಟ ಇ೦ದೂ ನನ್ನ ಹೃದಯ ವೀಣೆ ಮೀಟಿರಲು..”. ಕಣ್ಣಲ್ಲಿ ಹರಿದ ಹಾಲಿನಂತಹ ಭಾವಕ್ಕೆ ಮಾತಿನ ಹೆಪ್ಪು ಬಿದ್ದು ಪ್ರೀತಿ ಹರಳುಗಟ್ಟುವ ಮೊದಲು, ಜನಗಳ ನಡುವೆ ಏಕಾಂತದ ಚಾದರ ಹೊದ್ದಿಸಿ, ಇಬ್ಬರ ನಡುವೆ ದೀಪ ಹಚ್ಚಿದ ಕಣ್ಣುಗಳು.
ದನಿ ಏನೋ ಹೇಳುತ್ತಿದ್ದರೂ, ಅದೆಲ್ಲವನ್ನೂ ಮರೆಸಿ ಬಗಿಯುವಂತೆ ನೋಡುತ್ತಾ ಮಾತುಗಳೆಲ್ಲವನ್ನೂ ಹಾಡಾಗಿಸಿದ ಮೋಡಿ ಹಾಕುವ ಕಣ್ಣುಗಳು.
ಯಾಕೋ ಆ ತೆಲುಗು ಹಾಡು ನೆನಪಾಗ್ತಾ ಇದೆ. “ಮೌನಮೇಲನೋಯಿ, ಈ ಮರಪು ರಾನಿ ರೇಯಿ, ಎದಲೋ ವೆನ್ನೆಲಾ, ವೆಲಗೇ ಕನ್ನುಲಾ…” . ಮೌನ ಯಾಕೆ ಹುಡುಗಿ ಈಗ, ನಾವು ಎಂದೂ ಮರೆಯಲಾಗದ ರಾತ್ರಿ ಇದು, ಎದೆಯಲ್ಲಿ ಬೆಳದಿಂಗಳು, ಅದರ ಬೆಳಕಲ್ಲಿ ಹೊಳೆಯುವ ನಿನ್ನ ಕಂಗಳು… ಎ೦ದು ಹಾಡು ಮು೦ದುವರೆಯುತ್ತದೆ. ಏನೋ ಇದೆ ಎ೦ದು ಕಣ್ಣುಗಳ ಒಪ್ಪ೦ದ ಆಗಿರುತ್ತದೆ, ಆದರೆ ಅದಕ್ಕಿನ್ನೂ ಮಾತಿನ ಮೊಹರು ಬಿದ್ದಿರುವುದಿಲ್ಲ, ಹುಣ್ಣಿಮೆಯ ರಾತ್ರಿ, ಭೋರಿಡುವ, ಭೋರಿಟ್ಟರೂ ಎಲ್ಲೆ ದಾಟದ ಕಡಲು, ಮೌನದಲ್ಲೇ ಸ೦ವಾದಿಸುವ ಕಮಲ್ ಹಾಸನ್, ಜಯಪ್ರದಾರ ಕಣ್ಣುಗಳು.. ಅಲ್ಲಿ ಆ ದೃಶ್ಯದಲ್ಲಿ ಕೇವಲ ಕಣ್ಣುಗಳೇ ಮಾತನಾಡಬೇಕು. ಜಯಪ್ರದ ವಿವಾಹಿತೆ, ಯಾವುದೋ ಕಾರಣಕ್ಕೆ ಗಂಡ ಬಿಟ್ಟು ದೂರ ಹೋಗಿಬಿಟ್ಟಿರುತ್ತಾನೆ. ಕಮಲ್ ಜೊತೆ ಪರಿಚಯ ಆಗಿ, ಸ್ನೇಹವಾಗಿ, ಪ್ರೇಮ ಇನ್ನೇನು ಬಾಗಿಲು ತಟ್ಟಿ ಹೊಸಿಲಾಚೆ ನಿಂತಿದೆ, ಚಿಲಕ ಸರಿಸಿದರೆ, ಪ್ರೇಮ ಒಳಗೆ. ಆ ಸಂದರ್ಭದಲ್ಲಿ ಇಬ್ಬರ ನಡುವೆ ಅಕಾಶದಗಲ ಬೆಳದಿಂಗಳಂತಹ ಪ್ರೀತಿ. ಮುಂದುವರಿಯುವುದೋ ಬೇಡವೋ ಎಂದು ಹೊಯ್ದಾಡುವ ಮನಸ್ಸಿನಂತಹಾ ಕಡಲು. ಆ ಇಬ್ಬರು ಅದ್ಭುತ ಕಲಾವಿದರ ಕಣ್ಣುಗಳ ಮಾತುಕತೆಗೆ ಮನಸ್ಸು ಸೋತು ಶರಣಾಗಿಬಿಡುತ್ತದೆ.

ಮಾತುಗಳು ಭಾವವನ್ನು ತೆಳುಗೊಳಿಸದೆ ಇದ್ದಾಗ, ಅದು ಕಣ್ಣುಗಳಲ್ಲಿ ಹೆಪ್ಪುಗಟ್ಟುತ್ತವೆಯೇನೋ… ಚ೦ದ್ರಶೇಖರ ಆಲೂರರು ಲಲಿತ ಪ್ರಬ೦ಧದಲ್ಲಿ ಹೇಳುವ ಹಾಗೆ ಕೇವಲ ಕಣ್ಣಿನ ಮೂಲಕವೇ ಜಗತ್ತನ್ನು ಸ್ಪರ್ಶಿಸುವ ಮುಸ್ಲಿ೦ ಹೆಣ್ಣುಗಳ ಕಾಡಿಗೆ ಕಣ್ಣುಗಳು ’ಹೊಳೆಯ ಸುಳಿಗಳಿಗಿ೦ತಾ ಆಳ’…’, ಸುತ್ತಲಿನ ಬುರ್ಖಾದ ನಡುವಿಂದ ಇಷ್ಟೇ ಇಣುಕಿದರು ಎಷ್ಟು ಮಾತುಗಳಿರುತ್ತವೆ ಆ ಕಣ್ಣುಗಳಲ್ಲಿ. ಅದನ್ನು ನೋಡಿದಾಗ ಚಂದ್ರ ಸಹ ಕಪ್ಪು ಆಕಾಶದ ಕಣ್ಣೇ ಅಲ್ಲವೇ ಅನ್ನಿಸಿಬಿಡುತ್ತದೆ. ಇಂತವೇ ಕಣ್ಣುಗಳನ್ನು ನೋಡಿ ’ಮುಳುಗಿದಷ್ಟೂ ಆಳ, ಎ೦ತಹ ಒಲವಿನ ಜಾಲ’ ಅನ್ನುತಾರೆ ಬಿ.ಆರ್.ಲಕ್ಷ್ಮಣ್ ರಾವ್.
ಅದಕ್ಕೇ ಅನ್ನಿಸುವುದು, ’ತೇರೇ ಆಂಖೋ ಕೆ ಸಿವಾ ದುನಿಯಾ ಮೆ ರಖ್ಖಾ ಕ್ಯಾ ಹೈ…’ ನಿನ್ನ ಕಣ್ಣುಗಳ ಬಿಟ್ಟರೆ ಈ ಜಗತ್ತಿನಲ್ಲಿ ಇನ್ನೇನಿದೆ ಹೇಳು? ಇವು ತೆರೆದರೆ ಬೆಳಕು ಹರಿಯುತ್ತದೆ, ಇವು ಬಾಗಿದರೆ ಸಂಜೆ ಕವಿಯುತ್ತದೆ. ನನ್ನ ಸಾವು ಬದುಕು ಎರಡೂ ಈ ಕಣ್ಣೆವೆಗಳ ನೆರಳಿನಲ್ಲಿಯೇ.. ಜೀವನ್ ಸೆ ಭರಿ ತೇರೀ ಆಂಖೆ ಮಜ್ ಬೂರ್ ಕರೆ ಜೀನೇಕೆ ಲಿಯೆ!
ನೋಟದಾಗೆ ನಗೆಯಾ ಮೀಟಿ, ಮೋಜಿನಾಗೆ ಎಲ್ಲೆ ದಾಟಿ, ಮೋಡಿಯಾ ಮಾಡಿದೋರ ಪರಸಂಗಗಳೆಷ್ಟು!
ಯಾವುದೋ ಪುಸ್ತಕದಲ್ಲಿ ಓದಿದ ನೆನಪು, ಒಮ್ಮೆ ಒಬ್ಬ ಬಾಡಿಗೆ ಹಂತಕ ಹಣ ಪಡೆದು ಮೊದಲ ಸಾರಿ ಕೆಲಸಕ್ಕೆ ಹೋಗುವಾಗ ಆ ಕೆಲಸದಲ್ಲಿ ಪಳಗಿದವನು ಹೇಳುವುದು ಒಂದೇ ಮಾತು, ’ಯಾವುದೇ ಕಾರಣಕ್ಕೂ ಕಣ್ಣುಗಳನ್ನು ಮಾತ್ರ ನೋಡಬೇಡ, ನೋಡಿದರೆ ಆ ಕಣ್ಣುಗಳು ನಿನ್ನನ್ನು ಸಾಯುವ ತನಕ ಕಾಡುತ್ತಿರುತ್ತವೆ’ ಅಂತ. ಇದು ತುಂಬಾ ದೂರದ ಮಾತಾಯಿತು, ಯಾರಾದರು ನೊಂದಾಗ, ಮಾತೇ ಆಡದೆ ಸುಮ್ಮನೆ ನಿಮ್ಮೆಡೆಗೆ ನೋಡುತ್ತಾ ನಿಂತಾಗ, ಆ ನೋಟದ ನೋವು ನಿಮ್ಮೆದೆಯಲ್ಲಿ ಕಡೆದಿಟ್ಟ ಶಿಲೆ. ಸಿಟ್ಟಿನಿಂದ ಕೊಟ್ಟ ಉತ್ತರವನ್ನು ಕಾಲ ಅಳಿಸಿಬಿಡಬಹುದು, ಆದರೆ ಆ ನೋಟದ ನೋವು ನಿಮ್ಮನ್ನು ದಿನಗಳು, ವರ್ಷಗಳು ಕಾಡದಿದ್ದರೆ ಕೇಳಿ.. ಸಸ್ಯಾಹಾರವನ್ನು ಕೇವಲ ನನ್ನ ಆಹಾರ ಪದ್ಧತಿಯಾಗಿ ಮಾತ್ರ ನೋಡುವ ನಾನು ನಿರಾಳವಾಗಿ ನಾನ್ ವೆಜಿಟೇರಿಯನ್ ಗಳ ಜೊತೆ ಕೂತು ಊಟ ಮಾಡುತ್ತೇನೆ. ಆದರೆ ಒಮ್ಮೆ ಎದುರಿನ ತಟ್ಟೆಯಲಿ ಕಂಡ ಆ ಮೀನಿನ ಕಣ್ಣು ಇಂದಿಗೂ ನನ್ನನ್ನು ಕಾಡುವುದು ಬಿಟ್ಟಿಲ್ಲ, ಒಮ್ಮೊಮ್ಮೆ ಕನಸಿನಲ್ಲೂ..
ಕಲಾವಿದರನ್ನು ಕೇಳಿ, ಅವರು ಬರೆದ ಚಿತ್ರಕ್ಕೆ, ಕೆತ್ತಿದ ಶಿಲ್ಪಕ್ಕೆ ಜೀವ ಬರುವುದು ಕೊನೆಯದಾಗಿ ಕಣ್ಣನ್ನು ಬಿಡಿಸಿ ಅದಕ್ಕೆ ಬೆಳಕು ತುಂಬಿದಾಗಲೇ … ಹೀಗೆ ಜೀವಕ್ಕೇ ಜೀವ ತುಂಬುವ ಕಣ್ಣುಗಳ ಬಗ್ಗೆ ಏನು ಬರೆಯಲಿ?
`ನಿನ್ನನ್ನು ನೋಡುವ ನನ್ನ ಕ೦ಗಳಿಗೆ ಬಣ್ಣಿಸಲು ನಾಲಿಗೆ ಇಲ್ಲ, ನಿನ್ನ ವರ್ಣಿಸುವ ನನ್ನ ನಾಲಿಗೆಗೆ ನಿನ್ನನ್ನು ನೋಡುವ ಕಣ್ಣುಗಳಿಲ್ಲ, ಅದಕ್ಕೇ ನಿನ್ನ ಸೌ೦ದರ್ಯದ ಮು೦ದೆ ನನ್ನ ವರ್ಣನೆ ಸಪ್ಪೆ’ ಎನ್ನುವ ಜಾಣನ ಮಾತು ಹೆಣ್ಣನ್ನು ಉಬ್ಬಿಸುವುದಾದರೂ, “ನಗುವ ನಯನ, ಮಧುರಾ ಮೌನ, ಮಿಡಿವಾ ಹೃದಯ ಇರೆ ಮಾತೇಕೆ” ಅಲ್ಲವೆ?!
ಕಣ್ಣುಗಳು ಮಾತು ಮರೆತ ಸಂಬಂಧದಲ್ಲಿ ಕನಸುಗಳು ಹುಟ್ಟುವುದಿಲ್ಲ…. ನೆನಪಿಸಿಕೊಳ್ಳಿ, ಕಡೆಯಸಲ ನೀವು ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದು ಯಾವಾಗ, ಕಣ್ಣೆಂಬ ಕಡಲಲ್ಲಿ ಮುಳುಗಿದ್ದು ಯಾವಾಗ?
 

‍ಲೇಖಕರು G

January 9, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

25 ಪ್ರತಿಕ್ರಿಯೆಗಳು

  1. prathibha nandakumar

    ನಾವೆಲ್ಲಾ ಹುಡುಗೀರು ಬರೆದ ಹುಡುಗರ ಕಣ್ಣುಗಳ ಕುರಿತ ಸಾಲುಗಳೆಲ್ಲಾ ನಿಮಗೆ ಹಿತವಾಗಲಿಲ್ಲವಲ್ಲಾ?? ಚೇ …

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಮೇಲೆ ಬರೆದ ಭಾವನೆಗಳು ನಿಮ್ಮದೂ ಅಲ್ಲವಾ ಪ್ರತಿಭಾ ಮೇಡಂ?! ಕಣ್ಣುಗಳ ಕುರಿತದ್ದಾಗಲೀ, ಮನಸ್ಸನ್ನು ಕುರಿತದ್ದಾಗಲೀ, ಬೆಳೆ ಸಾರಿನ ಬಗ್ಗೆಯಾಗಲಿ, ಮರೆತು ತೆಗೆದುಕೊಂಡ ಎಕ್ಸ್ಟ್ರಾ ಹಾಲಿನ ಪಾಕೆಟ್ ಬಗ್ಗೆಯಾಗಲಿ, ಮುತ್ತು ಕೊಟ್ಟ ತಕ್ಷಣ ರಾಜಕುಮಾರ ಕಪ್ಪೆ ಆದ ಕಥೆಯನ್ನಾಗಲಿ, ಇವೆಲ್ಲಾ ಕಟ್ಟಿಕೊಟ್ಟ ನಿಮ್ಮ ಕವನದ ಸಾಲುಗಳನ್ನಾಗಲೀ ಮರೆಯಬಲ್ಲೆನೆ? ಥ್ಯಾಂಕ್ಯೂ ಮೇಡಂ, ಓದಿದ್ದಕ್ಕೆ, ಪ್ರತಿಕ್ರಯಿಸಿದ್ದಕ್ಕೆ 🙂

      ಪ್ರತಿಕ್ರಿಯೆ
      • prathibha nandakumar

        ಆದ್ರೆ ಯಾವ ಹುಡುಗಿಯ ಕವನದ ಸಾಲನ್ನೂ ಹೆಸರಿಸಲಿಲ್ಲವಲ್ಲಾ….

        ಪ್ರತಿಕ್ರಿಯೆ
  2. Srinidhi

    ನೆನಪಿಸಿಕೊಳ್ಳಿ, ಕಡೆಯಸಲ ನೀವು ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದು ಯಾವಾಗ, ಕಣ್ಣೆಂಬ ಕಡಲಲ್ಲಿ ಮುಳುಗಿದ್ದು ಯಾವಾಗ? (Y) (Y)

    ಪ್ರತಿಕ್ರಿಯೆ
  3. suri

    ನಿಮ್ಮ ಕಂಗಳ ಲೇಖನ ಓದಿ ಒಂದು ಪುಟ್ಟ ಶಾಯರಿ ನೆನಪಾಯಿತು. ಬರೆದವರು ನೆನಪಿಲ್ಲ. ಹೀಗಿದೆ ಅದು:
    aapki aankhen oonchi huin to dua ban gayi
    neechi huin to haya ban gayi
    jab jhuk kar uthin to khataa ban gayi
    aur uth kar jhukin to adaa ban gayi.
    ಒಂದೆರಡು ಪದಗಳ ಅರ್ಥ ಹೀಗಿವೆ:
    haya = modesty
    khataa = mistake
    adaa = charm
    ಇಂತಹ ಲೇಖನ ಬರುತ್ತಿರಲಿ.
    ಸೂರಿ

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ವಾಹ್, ಎಂತಹ ಮೋಹಕ ಶಾಯರಿ!ಅನಾಮತ್ತಾಗಿ ತೆಗೆದುಕೊಂಡು ಲೇಖನದಲ್ಲಿ ಸೇರಿಸಿಕೊಳ್ಳಬೇಕು ಅನ್ನಿಸುವಷ್ಟು ಚೆನ್ನಾಗಿದೆ. ಥ್ಯಾಂಕ್ಯೂ ಸರ್

      ಪ್ರತಿಕ್ರಿಯೆ
  4. Anil Talikoti

    ಕಣ್ಣ ನೋಟ ಕಾಡುವ ಬರಹವಿದು -ಸುಂದರ ಬರಹ –ಆದರೂ ಯಾಕೋ ಬಾಡಿಗೆ ಹಂತಕನ ಕಥೆ ಅನವಶ್ಯಕವೆನಿಸಿತು.
    ನಮ್ಮ ಬೇಂದ್ರೆ ನೆನಪಾದರು-
    “ಹೊಳೆಹೊಳೆವಹಾಂಗ ಕಣ್ಣಿರುವ ಹೆಣ್ಣೆ …”
    “ನಿನ್ನ ಕಣ್ಣಿನಾಗ ಕಾಲೂರಿ ಮಳೆಯೂ ನಡು ನಡುಕ ಹುಚ್ಚು ನಗೆ ಆತ್”
    -ಅನಿಲ

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಹಂಗಂತೀರಾ? ನಾನು ಅದನ್ನು ಬರೆದು, ಅಳಿಸಿ ಮತ್ತೆ ಸೇರಿಸಿದ್ದು …. ಕಣ್ಣುಗಳ ಗಾಢ ಶಕ್ತಿಯ ಬಗ್ಗೆ ಹೇಳೋಕೆ ಅದು ಬೇಕು ಅನ್ನಿಸಿತು …

      ಪ್ರತಿಕ್ರಿಯೆ
  5. lalithasiddabasavaiah

    sandhya, article is so nice ,,,, and the query of prathibha is also nice ,,,,, ahha ahha ahha

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಥ್ಯಾಂಕ್ಯೂ ಮೇಡಂ 🙂 ಮೇಲಿರುವ ಹನಿಗವನ,
      ನನ್ನ ಕ೦ಗಳಲಿ
      ನಿನ್ನ ಕ೦ಗಳ ತು೦ಟತನ
      ತು೦ಬಿದ ಮರುಚಣ
      ನಿದ್ದೆ ನನ್ನ ಕಣ್ಣಿ೦ದ ಜಾ..
      ರಿ, ನಿನ್ನ ಕೆನ್ನೆ ಗುಳಿಗಳಲ್ಲಿ
      ಮಗುಚಿಕೊ೦ಡಿತು!
      ಹೆಣ್ಣೊಬ್ಬಳ ಮಾತೇ ಮೇಡಂ!

      ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಕವನಗಳಿಗೆ ಮಾತ್ರ ತಪ್ಪದೆ ಪ್ರತಿಕ್ರಯಿಸುವ ನೀವು, ಈ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಇದು ಕವನದ ಹಾಗೇ ಇರಬಹುದಾ ಅನ್ನಿಸುತ್ತಿದೆ 🙂

      ಪ್ರತಿಕ್ರಿಯೆ
    • ಸಂಧ್ಯಾರಾಣಿ

      🙂 ಸೀರೆಯ ಬಗ್ಗೆ ಬರೆಯಬೇಕಿದೆ ನನಗೆ, ನಿಮ್ಮ ಸುಂದರವಾದ ಕವನದ ಸಾಲುಗಳ ಜಾಡು ಹಿಡಿದು..

      ಪ್ರತಿಕ್ರಿಯೆ
  6. shobhavenkatesh

    entha kannu , entha kannu ,enthaa kannu ninnade haleya chitrageete nenapige bantu sandhya .chennagide lekhana.nimma lekhana dalli metchuva amsha halethu hosatara bhavanegalu maru huttuthave.

    ಪ್ರತಿಕ್ರಿಯೆ
  7. Seema deepak

    dear madam,
    A badige hantaka ra vishya barodu Tejaswi yavara ” Jugari Croos” kadambari yalli.

    ಪ್ರತಿಕ್ರಿಯೆ
  8. ಲಕ್ಷ್ಮೀಕಾಂತ ಇಟ್ನಾಳ

    ಸಂಧ್ಯಾಜಿ, ಕಣ್ಣೆಂಬ ಮಾಯೆಯ ಕುರಿತು, ಸೊಗಸಾದ ಕಾವ್ಯಲಹರಿ. ಕಣ್ಗಳಿಂದ ಬೀರುವ ಪರಿಮಳವನ್ನು ಆಸ್ವಾದಿಸಿದವರು ಸುದೈವಿಗಳು.(ಹಮ್ ನೆ ದೇಖೀಂ ಹೈಂ ಉನ್ ಆಂಖೋಂ ಕಿ ಮಹಕ್ ತಿ ಖೂಶ್ಬೂ), ಕಣ್ಣ ಬೆಳದಿಂಗಳ ಕೊಳದಲ್ಲಿ ಮೀಯುತ್ತ, ಕಂಗಳ ಲೋಕದ ಅನಾವರಣ, ಅವರ್ಣನೀಯವಾದರೂ, ತಾವು ಸಂಗ್ರಹಿಸಿಟ್ಟ ರೀತಿ, ಶ್ಲಾಘನೀಯ. ಸಂಗ್ರಹಯೋಗ್ಯ. ಹೀಗೆಯೇ ನಮಗೆ ಕಾವ್ಯದ ರಸಗವಳವನ್ನು ಉಣಬಡಿಸುತ್ತಿರಿ. ಅತ್ಯುತ್ತಮ ಲೇಖನಕ್ಕೆ ಆಭಿನಂದನೆಗಳೊಂದಿಗೆ ವಂದನೆಗಳು.

    ಪ್ರತಿಕ್ರಿಯೆ
  9. ಶಶಿ

    ಆದ್ರೆ ಇಂಥ ಕಣ್ಣುಗಳನ್ನು ಸುಮ್ಮನೆ ಸುಟ್ಟುಬಿಡುತ್ತಾರೆ ಅಲ್ವ ಮೇಡಂ. ಇಂಥಹ ಸುಂದರವಾದ ಕಣ್ಣುಗಳಿಂದ…………. ನಾವು ಸತ್ತರೂ ಪ್ರಪಂಚವನ್ನು ನೋದುತಿರಬೇಕಾದರೆ ದಯವಿಟ್ಟು ಕಣ್ಣುಗಳನ್ನು ದಾನಮಾಡಿ………… ಕಣ್ಣಿಲ್ಲದವರ ಬಾಳು ಬೆಳಗಿ………… ಎಲ್ಲರೂ……..

    ಪ್ರತಿಕ್ರಿಯೆ
  10. ಅಕ್ಕಿಮಂಗಲ ಮಂಜುನಾಥ

    ಅಯ್ಯಯ್ಯೋ, ಅದೆಷ್ಟೊಂದ್ ಚೆನ್ನಾಗಿದೆಯಪ್ಪಾ ಅಂದ್ರೆ…..
    ಅಷ್ಟೊಂದ್ ಚೆನ್ನಾಗಿದೆ.ಸಂದ್ಯಾ ಅವರಿಗೆ ಅಭಿನಂದನೆಗಳು.

    ಪ್ರತಿಕ್ರಿಯೆ
  11. Guddappa

    KannugaLalliya halavu bhavanegaLAnnu bimbisuva kavanagalannu poNIsida sundara barahakke dhanyavaadagalu. Dukhavannu vyaktapadisuva KannugaLu Bendre Ajjana E kavanadallive…”nee hing nodidara nanna ..Na henge nodali ninna. ….. Ninna kanninaaga kaaloori maleyu nada_ naduka hucchu nagi ataa…”

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: