ಸಂಧ್ಯಾರಾಣಿ ಕಾಲಂ : ನನಗೆ ಮುತ್ತೆಂದರೆ ಪ್ರೀತಿ, ಪ್ರತಿಭಟನೆಯಲ್ಲ


ನಾವು ಕಾಲೇಜಿನಲ್ಲಿದ್ದಾಗ ಯಂಡಮೂರಿ ವೀರೇಂದ್ರನಾಥ್ ಬರೆದ ಒಂದು ಪುಸ್ತಕ ಓದಿದ್ದೆ, ಅದರಲ್ಲಿ ಒಂದು ಕೊಟೇಶನ್ ಇತ್ತು, A kiss is an agreement between two hearts signed by four lips ಅಂತ. ಮುತ್ತಿನ ಹೆಸರು ಕೇಳಿದರೂ ರೋಮಾಂಚನ ಆಗುತ್ತಿದ್ದ ವಯಸ್ಸಿನಲ್ಲಿ, ಈ ಕೋಟ್ ಓದಿ ಮಹಾನ್ ಥ್ರಿಲ್ ಆಗಿಬಿಟ್ಟಿತ್ತು, ಮರೆಯೋಕೆ ಆಗಿರಲಿಲ್ಲ. ಕೆಲವು ಹೇಳಿಕೆಗಳು ಹೀಗೆ ಮನಸ್ಸಿನಲ್ಲಿ ನಿಂತು ಬಿಡುತ್ತವೆ, ’ಒಂದು ಮುತ್ತು ಸಾಲ ಸಿಗಬಹುದಾ? ಖಂಡಿತಾ ಬಡ್ಡಿಯೊಂದಿಗೆ ಮರಳಿಸುತ್ತೇನೆ’ ಎನ್ನುವ ತುಂಟ ಹೇಳಿಕೆ, ’ಮುತ್ತಿನ ವಿಶೇಷತೆ ಏನಪ್ಪ ಅಂದ್ರೆ, ನೀವು ಕೊಡದೆ ಅದನ್ನ ಪಡೆಯೋಕ್ಕಾಗಲ್ಲ, ಪಡೆಯದೆ ಅದನ್ನ ಕೊಡೋಕ್ಕಾಗಲ್ಲ’ ಎನ್ನುವ ಚಮತ್ಕಾರದ ಹೇಳಿಕೆ, ’ಒಂದು ನಿಮಿಷದ ಮುತ್ತು ೨೬ ಕ್ಯಾಲೊರಿ ಕರಗಿಸುತ್ತದೆ’ ಎನ್ನುವ ದೇವ ವಾಣಿಯಂತಹ ಹೇಳಿಕೆ..   ಹೀಗೆ ಮುತ್ತು ಮತ್ತೆ ಮತ್ತೆ ಹೊಳೆಯುತ್ತಲೇ ಇತ್ತು.
ಹೀಗೆ ಚಿಪ್ಪಿನಲ್ಲಿದ್ದ ಮುತ್ತು ಈಗ ಎಲ್ಲರ ತುಟಿಯ ಮೇಲೆ.. ಸಾರ್ವಜನಿಕ ಮುತ್ತುಗಳ ಪರ ವಿರೋಧವಾಗಿ ಚರ್ಚೆಗಳು ಜೋರು ಜೋರಾಗಿ ನಡೆಯುತ್ತಿವೆ.
ಮೊದಲಿಗೆ ನಾನು ’kiss of love’ ಅನ್ನುವ ಮಾತು ಕೇಳಿದಾಗ ’ಅರೆ ಏನು ಚಂದ’ ಅನ್ನಿಸಿತು. ಪ್ರೀತಿಯ ಮುತ್ತಿಗಿಂತಲೂ ಸುಂದರವಾದದ್ದು ಇನ್ನೇನಿರಲು ಸಾಧ್ಯ? ಆದರೆ ಅದನ್ನು ಯಾಕೆ ಕೆಲವರು ವಿರೋಧಿಸುತ್ತಿದ್ದಾರೆ? ಅಸಲಿಗೆ ಈ ಮಾತು ಶುರುವಾದದ್ದು ಹೇಗೆ? ಈ ಪ್ರಶ್ನೆ ಕಾಡತೊಡಗಿದಂತೆ ಅದರ ಬಗ್ಗೆ ಓದುತ್ತಾ ಹೋದೆ.
ಈ ಮಾತು ಮೊದಲಿಗೆ ಕೇಳಿಬಂದದ್ದು ಸಾಮಾಜಿಕ ತಾಣಗಳಲ್ಲಿ, ಇದರ ದನಿ ಇದ್ದದ್ದು ನೈತಿಕ ಪೋಲೀಸ್ ಗಿರಿಯ ವಿರುದ್ಧ. ಈ ಪ್ರತಿಭಟನೆ ಶುರುವಾಗಿದ್ದು ಕೇರಳದಲ್ಲಿ, ನವೆಂಬರ್ ೨, ೨೦೧೪ ರಲ್ಲಿ. ಈ ಪ್ರತಿಭಟನೆಯ ಹೆಸರಿನಲ್ಲಿ ಫೇಸ್ ಬುಕ್ಕಿನಲ್ಲಿ ಒಂದು ಪುಟವೇ ಪ್ರಾರಂಭವಾಗಿತ್ತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಯುವ ಜನತೆ ಆ ಪುಟವನ್ನು ಲೈಕಿಸುತ್ತಿದ್ದರು. ಕೊಚಿನ್ ನ ಮೆರೀನ್ ಡ್ರೈವ್ ಬೀಚಿನಲ್ಲಿ ನೈತಿಕ ಪೋಲೀಸ್ ಗಿರಿಯನ್ನು ಪ್ರತಿಭಟಿಸಲು ಜನರು ಒಂದುಗೂಡಲು ಕೊಟ್ಟ ಕರೆ ಅದು. ಯಾವುದನ್ನು ನೈತಿಕತೆಯ ಗುತ್ತಿಗೆ ತೆಗೆದುಕೊಂಡವರು ಖಂಡಿಸುತ್ತಿದ್ದರೋ, ಹತ್ತಿಕ್ಕಲು ಪ್ರಯತ್ನಿಸುತ್ತಿದ್ದರು ಅದನ್ನು ಚುಂಬನದ ಅಸ್ತ್ರದಿಂದ ಪ್ರತಿಭಟಿಸುವ ಕರೆ ಅದು. ಆ ಕರೆಗೂ ಒಂದು ಹಿನ್ನಲೆ ಇತ್ತು.
ಕೇರಳದಲ್ಲಿ ನೈತಿಕ ಪೋಲೀಸ್ ಗಿರಿಯ ಹಲವಾರು ಘಟನೆಗಳು ನಡೆದಿದ್ದವು. ವಿವಾಹಿತೆಯೊಬ್ಬಳೊಡನೆ ಸಂಬಂಧ ಇದೆ ಎನ್ನುವ ಅನುಮಾನದಿಂದ ಒಬ್ಬ ಯುವಕನನ್ನು ಒಂದು ಗುಂಪು ಕೊಂದು ಹಾಕಿತ್ತು. ರಾತ್ರಿಯಲ್ಲಿ ಒಟ್ಟಿಗೇ ಪ್ರಯಾಣ ಮಾಡಿದರು ಎನ್ನುವ ಆರೋಪದ ಮೇಲೆ ಒಬ್ಬ ರಂಗ ಕಲಾವಿದೆ ಮತ್ತಾಕೆಯ ಸ್ನೇಹಿತನನ್ನು ಪೋಲಿಸ್ ಕಸ್ಟಡಿಯಲ್ಲಿಟ್ಟುಕೊಳ್ಳಲಾಗಿತ್ತು, ಮಹಿಳೆ ವಿವಾಹಿತೆ ಎನ್ನುವ ಯಾವ ಕುರುಹನ್ನೂ ಹೊಂದಿರಲಿಲ್ಲ ಎನ್ನುವ ಕಾರಣಕ್ಕೆ ಬೀಚಿನಲ್ಲಿ ಒಂದು ಜೋಡಿಯನ್ನು ಬಂಧಿಸಲಾಗಿತ್ತು, ಕಣ್ಣೂರಿನ ಬಸ್ ಸ್ಟಾಂಡಿನಲ್ಲಿ ರಾತ್ರಿ ಗಂಡ ಎ ಟಿ ಎಂ ನಲ್ಲಿ ಹಣ ತರಲು ಹೋಗಿದ್ದರಿಂದ ಒಬ್ಬಳೇ ಕುಳಿತು ಸುಧಾರಿಸಿಕೊಳ್ಳುತ್ತಿದ್ದ ತುಂಬು ಗರ್ಭಿಣಿಯೊಬ್ಬಳ ಮೇಲೆ ಅಮಾನಿಯವಾದ ಹಲ್ಲೆ ಆಗಿತ್ತು. ತನ್ನ ಸಹೋದ್ಯೋಗಿಯೊಂದಿಗೆ ಆತನ ಬೈಕಿನಲ್ಲಿ ಆಫೀಸಿನಿಂದ ಮನೆಗೆ ಹೋಗುತ್ತಿದ್ದಳು ಎನ್ನುವ ಕಾರಣಕ್ಕೆ ಒಬ್ಬ ಪ್ರೊಫೆಸರ್ ಮೇಲೆ ಒಂದು ಗುಂಪು ಹಲ್ಲೆ ಮಾಡಿತ್ತು. ಈ ಎಲ್ಲಾ ಅಮಾನವೀಯ, ಪಟ್ಟಭದ್ರ ಮೂಲಭೂತವಾದಿಗಳ ವಿರುದ್ಧ ಪ್ರತಿಭಟನೆ ಆಗಲೇ ಬೇಕಿತ್ತು. ಹಾಗಾಗಿ ಪ್ರಾರಂಭ ಆಗಿದ್ದು ಈ Kiss of love ಹೋರಾಟ. ಇದರ ವಿರುದ್ಧವಾಗಿ ಅದೇ ಮೂಲಭೂತವಾದಿಗಳ ಗುಂಪು ತಮ್ಮ ತಮ್ಮ ಲಾಠಿ ಹಿಡಿದು ಸಜ್ಜಾದವು. ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಯಿತು.
ಕೇರಳದಲ್ಲಿ ಶುರುವಾದ ಪ್ರತಿಭಟನೆ ನಿಧಾನವಾಗಿ ಬೇರೆ ಕಡೆಗೂ ವ್ಯಾಪಿಸಿತು. ನಮ್ಮ ಬೆಂಗಳೂರಿನಲ್ಲೂ ಈ ಹೋರಾಟದ ದನಿ ಮೊಳಗಿದೆ. ಹ್ಯಾಮ್ಲೆಟ್ ನ ‘To Live or not to live’ ಈಗ To kiss or not to kiss ಸಂದಿಗ್ಧವಾಗಿ ಬದಲಾಗಿದೆ! ಕರ್ನಾಟಕದಲ್ಲಿ ಸಹ ನಾವು ಈ ನೈತಿಕ ಪೋಲೀಸ್ ಗಿರಿಯ ಹುಚ್ಚಾಟವನ್ನು ನೋಡಿದ್ದೇವೆ. ೧೯ರ ವಯಸ್ಸಿಗೆ ದೇಶವನ್ನು ಯಾರು ನಡೆಸಬೇಕು ಎನ್ನುವುದನ್ನು ಆಯ್ಕೆ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆ, ಆದರೆ ಅವರು ಯಾರೊಡನೆ ಒಡನಾಡಬೇಕು ಎನ್ನುವುದನ್ನು ನಿರ್ಧರಿಸುವ ಹಕ್ಕು ನಮ್ಮದು ಎಂದು ಮೂಲಭೂತವಾದಿಗಳು ಪಟ್ಟು ಹಿಡಿದಿದ್ದಾರೆ. ಅವರ ಪಾಡಿಗೆ ಅವರನ್ನು ಬಿಟ್ಟುಬಿಟ್ಟರೆ ರಾತ್ರಿ ಕಳೆಯುವುದರಲ್ಲಿ ಇಡೀ ದೇಶದ ಮನಸ್ಸುಗಳಿಗೆ ಬೇಲಿ ಹಾಕಿ, ಲಾಠಿ ಹಿಡಿದು ನಿಲ್ಲಲು ಅವರ ಸಜ್ಜಾಗಿದ್ದಾರೆ. ಮುತಾಲಿಕ್ ಎನ್ನುವ ವ್ಯಕ್ತಿ ಹಿಂದೆಯೂ ಹೀಗೆಯೇ ತರಳೆ ತೆಗೆದಿದ್ದಾಗ ತುಂಟಿಯೊಬ್ಬಳು ಶುರುಮಾಡಿದ ಪಿಂಕ್ ಚಡ್ಡಿ ಕೊಡುಗೆ ಸರಿಯಾಗೇ ಗುರಿ ಮುಟ್ಟಿತ್ತು, ಮುತಾಲಿಕ್ ನನ್ನು ಜೋಕರ್ ಆಗಿಸಿತ್ತು. ಈಗ ಮತ್ತೆ ಅದೇ ಮಾರಲ್ ಪೋಲೀಸಿಂಗ್ ವಿರುದ್ಧ ಈ ಪ್ರತಿಭಟನೆ.


ಮಾರಲ್ ಪೋಲೀಸಿಂಗ್ ತಪ್ಪು ಅದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಹಲವಾರು ತಪ್ಪುಗಳಾಗುತ್ತಿವೆ. ಇನ್ನೂ ನಿಲ್ಲದ ಅಸ್ಪೃಶ್ಯತೆಯ ಆಚರಣೆ, ಅಸಹ್ಯವಾದ ಮಡೆಸ್ನಾನ ಆಚರಣೆ. ಸಾಲದು ಎನ್ನುವಂತೆ ದೇವಸ್ಥಾನದೊಳಗೆ ಹೋಗಿದ್ದಕ್ಕಾಗೆ ಅಮಾನವೀಯವಾಗಿ ಹೊಡೆಸಿಕೊಂಡ ಆ ಬಾಲಕನನ್ನು ಹೇಗೆ ಮರೆಯುವುದು? ಒಬ್ಬ ಮಂತ್ರಿ ಸಹ ದೇವಾಲಯ ಪ್ರವೇಶಿಸಲು ಹಿಂಜರಿಯುವ ಪರಿಸ್ಥಿತಿಯಲ್ಲಿ ನಮ್ಮ ಸಮಾಜ ಇದೆ ಎನ್ನುವಾಗ ಇನ್ನು ಮಿಕ್ಕವರ ಮಾತೇನು? ಸಾಮಾಜಿಕ ಅಸಮಾನತೆ, ಆರ್ಥಿಕ ಅಸಮಾನತೆ, ಅರ್ಥ, ಮಹತ್ವ ಕಳೆದುಕೊಳ್ಳುತ್ತಿರುವ ಗಾಂಧೀಜಿಯ ಮಾತುಗಳು. ನಿಧಾನವಾಗಿ ಪಾಳೆಪಟ್ಟಿನಂತಾಗುತ್ತಿರುವ ಕರಾವಳಿ. ದಾಭೋಲ್ಕರ್ ಕೊಲೆ ಆಗಿದ್ದು ಒಂದೇ ಸಲ ಅಲ್ಲ. ಪ್ರತಿ ದಿನ ಆಗುತ್ತಿದೆ, ಪದೇ ಪದೇ ಆಗುತ್ತಿದೆ. ಇವೆಲ್ಲಕ್ಕೂ ನನ್ನ ಪ್ರತಿಭಟನೆ ಇದೆ. ಇವುಗಳೆಲ್ಲದರ ವಿರುದ್ಧದ ಪ್ರತಿಭಟನೆಗೆ ನನ್ನ ಬೆಂಬಲ ಇದೆ. ಆದರೆ ಇದನ್ನು ಪ್ರತಿಭಟಿಸಲು ತೆಗೆದುಕೊಂಡ ಹೆಜ್ಜೆಯಿಂದ, ಆರಿಸಿಕೊಂಡ ವಿಧಾನದಿಂದ ಈ ಪ್ರತಿಭಟನೆಯ ಪರವಾಗಿದ್ದ ಹಲವಾರು ದನಿಗಳು ಮೌನವಾಗುತ್ತಿದ್ದಾವೆಯಾ ಎನ್ನುವುದು ನನ್ನ ಪ್ರಶ್ನೆ.
ಅಪರಿಚಿತರು ಪರಿಚಿತರಾಗುವ ಮೊದಲ ಹೆಜ್ಜೆ ಕೈ ಕುಲುಕುವುದು, ಆತ್ಮೀಯರಾದರೆ ಒಂದು ಪ್ರೀತಿಯ ಹಗ್, ಒಮ್ಮೊಮ್ಮೆ ಕಾಣುವ ಕದ್ದ, ಗೆದ್ದ, ಪಡೆದ, ಕೊಟ್ಟ, ಹಂಚಿಕೊಂಡ ಮುತ್ತುಗಳು. ಇಲ್ಲ, ಮನಸೊಪ್ಪಿದಾಗ, ಪ್ರೀತಿ ಮಾಡುವಾಗ ಯಾವುದೂ ತಪ್ಪಲ್ಲ. ಒಮ್ಮೆ ನನ್ನ ಕಣ್ಣ ಮುಂದೆ ಒಂದು ಎಳೆಯ ಜೋಡಿ ಹೋಗುತ್ತಿತ್ತು. ಜಗತ್ತಿನ ಪರಿವೆಯೇ ಇಲ್ಲದ ನಡೆ, ಮಾತು. ಹುಡುಗನ ಯಾವ ಕಿಡಿಗೇಡಿ ಮಾತಿಗೆ ಯಾವ ಮುದ್ದು ಉಕ್ಕಿ ಬಂತೋ ಎನೋ ಹುಡುಗಿ ಮೆಟ್ಟಂಗಾಲಿನಲ್ಲಿ ನಿಂತು, ಕುತ್ತಿಗೆ ಮೇಲೆ ಚಾಚಿ, ಹುಡುಗನನ್ನು ಚುಂಬಿಸಿದಳು. ನಾನು ಕಂಡ ಅತ್ಯಂತ ಸುಂದರ ಮತ್ತು ಇನ್ನೋಸೆಂಟ್ ನೋಟ ಅದು. ಅಷ್ಟು ಪ್ರೀತಿ ಇರುವುದು ತಪ್ಪಾಗಲು ಹೇಗೆ ಸಾಧ್ಯ? ಮುತ್ತು ವರ್ಜ್ಯವಲ್ಲ, ಮುತ್ತು ಅಶ್ಲೀಲವೂ ಅಲ್ಲ. ಅದೊಂದು ಪ್ರೀತಿಯ ಅಭಿವ್ಯಕ್ತಿ, ನೋಟದಂತೆ, ಸ್ಪರ್ಶದಂತೆ, ಮೌನದಂತೆ, ಮಾತಿನಂತೆ. ಹೌದು ಪ್ರೀತಿಗೆ ಮುತ್ತು ವರ್ಜ್ಯವಲ್ಲ. ಆದರೆ ಪ್ರತಿಭಟನೆಗೆ? ಈ ಬಗ್ಗೆ ನನಗೆ ಪ್ರಶ್ನೆಗಳಿವೆ. ಪ್ರೀತಿ ಆ ಕ್ಷಣದ ಸಂವೇದನೆಯ ಪ್ರಾಮಾಣಿಕ ಅಭಿವ್ಯಕ್ತಿ, ಆದರೆ ಪ್ರತಿಭಟನೆ ಹಾಗಲ್ಲ. ಅದೊಂದು ಯೋಜಿತ ಕ್ರಿಯೆ, ಹಾಗೆ ಮುತ್ತು ಒಂದು ’ಯೋಜಿತ ಕ್ರಿಯೆ’ಯ ಭಾಗವಾದಾಗ ತನ್ನ ಬಿಳುಪು, ಹೊಳಪು ಕಳೆದುಕೊಳ್ಳುತ್ತದೇನೋ ಎನ್ನುವುದು ನನ್ನ ಭಾವನೆ.

ಚುಂಬನ ಒಂದು ಅತ್ಯಂತ ಖಾಸಗಿಯಾದ ಕ್ಷಣ, ಅತ್ಯಂತ ತೀವ್ರವಾದ, ಗಾಢವಾದ ಸ್ಪರ್ಶ. ಹಾಗಾಗಿಯೇ ಅದಕ್ಕೆ ಆ ಮಾಂತ್ರಿಕತೆಯಿದೆ. ಇಲ್ಲ ಮುತ್ತಿನ ಸಭ್ಯತೆ ಮತ್ತು ಅಸಭ್ಯತೆಯ ಬಗ್ಗೆ ನನಗ್ಯಾವ ಗೊಂದಲವೂ ಇಲ್ಲ. ಸಾಧಾರಣವಾಗಿ ಕೇಳಿಬರುವ, ’ನಮ್ಮದು ಪವಿತ್ರವಾದ ದೇಶ, ಇದೇನು ವಿದೇಶ ಕೆಟ್ಟು ಹೋಯಿತಾ, ಎಲ್ಲೆಂದರಲ್ಲಿ ಮುತ್ತಿಕ್ಕಲು’ ಎನ್ನುವ ಮಾತಿನಲ್ಲಿ ನನಗೆ ಕೇವಲ ಪೊಳ್ಳುತನವೇ ಕಂಡಿದೆ. ಈ ಪವಿತ್ರವಾದ ದೇಶದಲ್ಲೇ ಇಷ್ಟು ಬಲಾತ್ಕಾರಗಳು ಸಹ ನಡೆಯುತ್ತಿವೆ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಸಹ ಆಗುತ್ತಿದೆ. ಸಾರ್ವಜನಿಕವಾಗಿ ಪ್ರೇಮಿಗಳು ಮುತ್ತು ಕೊಟ್ಟು, ಪಡೆಯುವ ದೇಶಗಳು ನೈತಿಕವಾಗಿ ಬಡವಾಗಿವೆ ಎಂದು ನನಗೆ ಎಂದೂ ಅನ್ನಿಸಿಲ್ಲ. ಪ್ರೀತಿಯಲ್ಲಿರುವವರು ಮನೆಯ ಹೊರಗಡೆ ಮುತ್ತಿಕ್ಕಿಕೊಂಡರೆ ನಾನು ಅವರಿಗೊಂದು ಖಾಸಗಿ ಕ್ಷಣ ಕೊಡಲು ಮುಖ ತಿರುಗಿಸುತ್ತೇನೆಯೇ ಹೊರತು ಅಸಹನೆಯಿಂದಾಗಲೀ, ಅಸಹ್ಯದಿಂದಾಗಲೀ ಅಲ್ಲ. ಆದರೆ ಅದೇ ಮುತ್ತು ಒಂದು ಪ್ರತಿಭಟನೆಗಾಗಿ ಎನ್ನುವುದನ್ನು ಯಾಕೋ ಒಪ್ಪಿಕೊಳ್ಳಲಾಗುತ್ತಿಲ್ಲ.
ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶ ಇದೆ, ಚುಂಬನದ ಸದ್ದಿನಲ್ಲಿ ಈ ಚಳುವಳಿಯ ಆಶಯದ ದನಿ ಕ್ಷೀಣವಾಗಿಬಿಟ್ಟಿತಾ? ಸಾರ್ವಜನಿಕ, ಸಾಮೂಹಿಕ ಚುಂಬನ ಸರಿಯೋ, ತಪ್ಪೋ ಎನ್ನುವುದರ ಚರ್ಚೆಯಲ್ಲಿ ಈ ಇಡೀ ಪ್ರತಿಭಟನೆ ಇರುವುದು ನೈತಿಕ ಪೋಲೀಸ್ ಗಿರಿಯ ವಿರುದ್ಧ ಎನ್ನುವ ಸತ್ಯ ಹಿಂದೆ ದೂಡಲ್ಪಟ್ಟಿದೆಯಾ? ಇದನ್ನೇ ಹಿಡಿದುಕೊಂಡು ನೈತಿಕತೆಯ ದೊಣ್ಣೆ ಹಿಡಿದು, ಪಂಜರ ಕಟ್ಟಲು ಸಿದ್ಧವಾಗಿರುವವರಿಗೆ ನಾವೇ ಅವರ ಮಾತುಗಳನ್ನು ಸಮರ್ಥಿಸಲು ಅಸ್ತ್ರಗಳನ್ನು ಕೊಡುತ್ತಿದ್ದೇವಾ? ಇದು ನನ್ನ ಪ್ರಶ್ನೆ.
ಇಡೀ ಹೋರಾಟ ’ಒಂದು ಮುತ್ತಿನ ಕಥೆ’ಯಾಗಿ ಬದಲಾಗದಿರಲಿ ಅನ್ನುವ ಕಳಕಳಿಯಲ್ಲಿ ನಾನಿದ್ದೇನೆ.
 

‍ಲೇಖಕರು G

November 21, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

22 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ಈಗ ಚರ್ಚೆಯಲ್ಲಿರುವ ಬಹಿರಂಗ ಮುತ್ತಿನ ದಿನದ ಬಗ್ಗೆ ನಿಮಗೆ ಅನ್ನಿಸಿದ ಹಾಗೆ ನೀವು ಹೇಳಿದ್ದೀರಿ, ಸರಿ. ಆದರೆ ಅದೇ ಚುಂಬನ ಪರಸ್ಪರ ಪ್ರೀತಿಯನ್ನು ಮೀರಿ ಬರೀ ಕಾಮದ ಕಣ್ಣಾಗಿಬಿಟ್ಟರೆ ಎಂತೆಂತಹ ಅನಾಚಾರಗಳು ಅನಾಹುತಗಳಾಗಬಹುದು ಎಂಬುದನ್ನು ನೆನೆಸಿಕೊಂಡಾಗ ಏಕೋ ಈಗಲೇ ಆತಂಕವಾಗುತ್ತಾ ಇದೆ.ಒಮ್ಮೆ ಅಂತಹ ಸಂಪ್ರದಾಯವನ್ನು ಆಚರಣೆಗೆ ತಂದ ಮೇಲೆ ಮತ್ತೆ ಅದನ್ನು ತಹಬಂದಿಗೆ ತರಲು ಸಾದ್ಯವಾಗುತ್ತದೆಯೇ ? ಈಗ ಎಲ್ಲರ ಮುಂದಿರುವ ಪ್ರಶ್ನೆ ಇದೇ.ಈಗ ಆ ಆಚರಣೆಯ ಬಗ್ಗೆ ಬಹಳ ಆಸೆ ಪಡುತ್ತಿರುವ ಮತ್ತು ಅದಕ್ಕೆ ಪ್ರೋತ್ಸಾಹದಾಯಕವಾಗಿ ನಿಂತಿರುವವರಿಗೇ ಅನಾಹುತಗಳಾಗಿಬಿಟ್ಟರೆ -ಕೈಮೀರಿ ಹೋದರೆ ಆಗ ಯಾರು ಏನು ತಾನೇ ಮಾಡಲು ಸಾದ್ಯವಾಗುತ್ತದೆ? ನಾನು ಆ ಆಚರಣೆಯ ವಿರೋಧಿಯೆ.

    ಪ್ರತಿಕ್ರಿಯೆ
  2. Swarna

    “ಪ್ರತಿಭಟಿಸಲು ತೆಗೆದುಕೊಂಡ ಹೆಜ್ಜೆಯಿಂದ, ಆರಿಸಿಕೊಂಡ ವಿಧಾನದಿಂದ ಈ ಪ್ರತಿಭಟನೆಯ ಪರವಾಗಿದ್ದ ಹಲವಾರು ದನಿಗಳು ಮೌನವಾಗುತ್ತಿದ್ದಾವೆಯಾ ಎನ್ನುವುದು ನನ್ನ ಪ್ರಶ್ನೆ.”
    ಹೌದು .
    ಪ್ರೀತಿಯ ಲಾಂಛನ ಪ್ರತಿಭಟನೆಯ ದಾರಿ … ಒಪ್ಪಿಕೊಳ್ಳಲು ಕಷ್ಟ

    ಪ್ರತಿಕ್ರಿಯೆ
  3. Sowmya K R

    ಇಡೀ ಹೋರಾಟ ’ಒಂದು ಮುತ್ತಿನ ಕಥೆ’ಯಾಗಿ ಬದಲಾಗದಿರಲಿ ಅನ್ನುವ ಕಳಕಳಿಯಲ್ಲಿ ನಾನಿದ್ದೇನೆ.

    ಪ್ರತಿಕ್ರಿಯೆ
  4. neelanjala

    ಸಂಧ್ಯಾಜಿ,
    ಗೊತ್ತಾ, ನನಗೆ ಈ ಐಡಿಯಾನೆ ತುಂಬಾ ಹಿಡಿಸಿತು. ಪಿಂಕ್ ಚೆಡ್ಡಿ ಕ್ಯಾಂಪೇನ್ ತರಹ. ಯಾವುದನ್ನು ಖಾಸಗಿಯಾಗಿ ಮಾಡಬಾರದು ಅನ್ತಿರೋ ಅದನ್ನು ನಾವು ಪಬ್ಲಿಕ್ ನಲ್ಲಿ ಮಾಡ್ತೀವಿ, ಏನ್ ಮಾಡ್ತೀರಾ ಅಂತ. ಇಲ್ಲಿ ಮುತ್ತು ಅಂದರೆ ಬರೀ ಪ್ರೀತಿಯಲ್ಲ, ಈ ನೈತಿಕ ಪೊಲೀಸ್ ಗಿರಿಯಿಂದ ಆದ ಮತ್ತು ಮುಂದಾಗುವ ದೌರ್ಜನ್ಯದ ಪ್ರತಿ ಸಿಟ್ಟು, ಆಕ್ರೋಶ. ಅದೂ ಅಂತಾ ಜನರನ್ನು, ಸಂಘಟನೆಗಳನ್ನು ಬೀದಿಯಲ್ಲಿ ಅಟ್ಟಾಡಿಸಿಕೊಂಡು ಹೊಡೆಯೋ ಹಿಂಸೆಯ ಹೋರಾಟವು ಅಲ್ಲ. ಒಬ್ಬ ಮನುಷ್ಯನಿಗೆ ಈ ತರಹದ ಒಂದು ಕಾನ್ಸೆಪ್ಟ್ ಹೊಳೆದು ಅದನ್ನು ಸಾಮಾಜಿಕ ತಾಣದ ಮೂಲಕ ಒಂದು ಚಳುವಳಿಯಾಗಿ ಮಾರ್ಪಡಿಸುತ್ತಾನೆ ಅಂದರೆ ಮೆಚ್ಚಲೇ ಬೇಕು. ಅವತ್ತು ಪಬ್ಲಿಕ್ ಟಿವಿನಲ್ಲಿ ಸ್ವಲ್ಪ ಅಷ್ಟೇ ಕೆಲವರ ಮಾತು ಕೇಳಿದ್ದು ನಾನು. ನನಗನಿಸಿದ್ದು ಅಂದರೆ, ಈ ಚಳುವಳಿಯಿಂದಾಗಿ ಯೋಚಿಸುವ ಜನರೆಲ್ಲ ಒಂದು ಸಲ ಈ ಕಾಮದ ಬಗ್ಗೆ, ಮುತ್ತಿನ ಬಗ್ಗೆ, ಖಾಸಗಿ ಮತ್ತು ಬಹಿರಂಗದ ಪ್ರೇಮ ಪ್ರದರ್ಶನಗಳ ಬಗ್ಗೆ ತಮ್ಮ ನಿಲುವನ್ನು ತರ್ಕಿಸಿ ನೋಡುತ್ತಾರೆ. ಏಷ್ಟೋ ಜನರಿಗೆ ಮುತ್ತು ಅನ್ನೋದು ಮುಜುಗರ, ಅಸಹ್ಯ ಮತ್ತೆ ಜಾಸ್ತಿ ಜನಕ್ಕೆ ಕೇವಲ ಕಾಮದ ಅಭಿವ್ಯಕ್ತಿ. ಇವತ್ತಿನ ದಿನ ಬದಲಾಗುತ್ತಿರುವ ಯುವ ಜನತೆಯ ಮನಸ್ಥಿತಿಯನ್ನು, ಸಮಾಜವನ್ನು ಅರ್ಥ ಮಾಡಿಕೋಬೇಕಷ್ಟೆ. ಜೊತೆಗೆ ನನಗೆ ಮಜಾ ಕಾಣೋದು ಈ “ಸಂಸ್ಕೃತಿಯ ರಕ್ಷಣಾಕಾರರು’ ಆಡೋ ಮಾತುಗಳು. ಆಹಾ, ಏನೇನ್ ಡೈಲಾಗ್ ಡೆಲಿವರಿಗಳು. ಅವರಿಗೆ ಈ ಪ್ರತಿಭಟನೆ ಅವರ ವಿರುದ್ಧವೇ ಎಂದು ಗೊತ್ತಾಗಿದೆ. ಅಷ್ಟು ಸಾಕು.
    ಮಂಜುನಾಥ ಅವರೇ, ನೀವು ಹೇಳಿದ್ದು ಸರಿಯಾಗಿದೆ. ಪ್ರತಿಭಟನೆಯ ನೆಪದಲ್ಲಿ ಅಲ್ಲಿ ಪ್ರತಿಭಟನಾಕಾರರ ಮೇಲೆ ಅನಾಹುತಗಳಾದರೆ ಅನ್ನೋದು. ಅದನ್ನು ಇದನ್ನು ಸಂಘಟಿಸಿದವರು ಯೋಚಿಸದೇ ಇರೋಲ್ಲ. ಏನೇನು ಆಗಬಹುದು, ಹಾಗಾದಲ್ಲಿ ಏನೇನು ಮಾಡಬೇಕು ಅನ್ನೋದು ಅವರ ಪಟ್ಟಿಯಲ್ಲಿ ಇಲ್ಲಡಿರುತ್ತಾ? ಫ್ಲಾಶ್ ಮಾಬ್ ಮಾಡಬೇಕಾದರೆ ಪ್ರಾಕ್ಟೀಸ್ ಮಾಡೋ ಜನ ಈ ರೀತಿಯ ಪ್ರತಿಭಟನೆಗಳನ್ನು ಆಯೋಜಿಸುವಾಗ ಯೋಚಿಸಿರಲ್ಲವೇ? ಅವರು ಏನು ಪ್ರೀಪರೇಶನ್ ಮಾಡಿಕೊಳ್ಳದಿದ್ದಲ್ಲಿ ಈ ಪ್ರತಿಭಟನೆ ಫೇಲ್ ಆಗುತ್ತೆ ಅನ್ನೋದು ಅವರಿಗೂ ಗೊತ್ತಿರುತ್ತೆ ಅಲ್ಲವಾ?

    ಪ್ರತಿಕ್ರಿಯೆ
  5. vidyashankar

    Well balanced and sensible voice.
    Only difference between West and us is, they shit in private, display love in public.
    ಸಾರ್ವಜನಿಕ ಜಾಗಗಳಲ್ಲಿ ಕ್ಯಾಕರಿಸಿ ಉಗಿಯಲು, ಮೂತ್ರಿಸಲು, ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ ಮಾಡಲು ಆಗದ ನಾಚಿಕೆ, ಅಡ್ಡಿ ಬಾರದ ಸಂಸ್ಕೃತಿ, ಸಂಸ್ಕಾರ ಮುತ್ತಿಡಲು ಹೋದರೆ ಅಡ್ಡ ಬರುವುದೋ?
    When you dirty the neighborhood , piss in public , do corruption in public offices, when you misuse public funds…. etc culture does not stop you, culture does not shame you…. but when you display affection in public it does…. what a hypocrisy !?
    Kiss and tell me pls…

    ಪ್ರತಿಕ್ರಿಯೆ
  6. Kavya Bhat

    ಸಕಾಲಿಕ ಬರಹ… ಪ್ರತಿಭಟನೆಗಾಗಿ ‘ಮುತ್ತು’ ನನಗೂ ಇಷ್ಟವಾಗ್ತಿಲ್ಲ…. ನೀವು ಹೇಳಿದಂತೆ ಮುತ್ತಿನ ಬಗ್ಗೆ ನನಗೂ ಇರುವ ನವಿರಾದ ಭಾವನೆಗಳು ಯಾಕೋ ಈ ಪ್ರತಿಭಟನೆಯ ಮುತ್ತಿಗೆ ಒಗ್ಗುತ್ತಿಲ್ಲ…. 🙁

    ಪ್ರತಿಕ್ರಿಯೆ
  7. ಶಮ, ನಂದಿಬೆಟ್ಟ

    ನಮ್ಮದು ಪವಿತ್ರವಾದ ದೇಶ, ಇದೇನು ವಿದೇಶ ಕೆಟ್ಟು ಹೋಯಿತಾ, ಎಲ್ಲೆಂದರಲ್ಲಿ ಮುತ್ತಿಕ್ಕಲು’ ಎನ್ನುವ ಮಾತಿನಲ್ಲಿ ನನಗೆ ಕೇವಲ ಪೊಳ್ಳುತನವೇ ಕಂಡಿದೆ. ಈ ಪವಿತ್ರವಾದ ದೇಶದಲ್ಲೇ ಇಷ್ಟು ಬಲಾತ್ಕಾರಗಳು ಸಹ ನಡೆಯುತ್ತಿವೆ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಸಹ ಆಗುತ್ತಿದೆ. ಸಾರ್ವಜನಿಕವಾಗಿ ಪ್ರೇಮಿಗಳು ಮುತ್ತು ಕೊಟ್ಟು, ಪಡೆಯುವ ದೇಶಗಳು ನೈತಿಕವಾಗಿ ಬಡವಾಗಿವೆ ಎಂದು ನನಗೆ ಎಂದೂ ಅನ್ನಿಸಿಲ್ಲ.
    ನೀ ಮಾತ್ರ ಹೀಗೆ ಬರೆಯಲು ಸಾಧ್ಯ ಕಣೇ ಸುಂದ್ರೀ…. ನಿನಗೆ 1000000000000000000000000 ಮುತ್ತು ಇಲ್ಲೇ.. ಅವಧಿ ಮತ್ತು ಅಷ್ಟೂ ಓದುಗರೆದುರಲ್ಲೇ… ಯಾಕೆ ಅಂದೆಯಾ… ನನಗೆ ಮುತ್ತೆಂದರೆ ನಿನ್ನ ಮೇಲಿನ ಪ್ರೀತಿ ಪ್ರೀತಿ ಪ್ರೀತಿ… <3

    ಪ್ರತಿಕ್ರಿಯೆ
  8. kvtirumalesh

    ನೈತಿಕ ಪೋಲೀಸ್ ಗಿರಿಯನ್ನು ಈ ಸಾರ್ವಜನಿಕ ಮುಕ್ತ ಚುಂಬನದಿಂದ ಪ್ರತಿಭಟಿಸುವುದು ಯಶಸ್ವಿಯಾಗದು. ಅಲ್ಲದೆ ಇಂಥಾ ಸಾರ್ವಜನಿಕ ಪ್ರದರ್ಶನವೂ ಸರಿಯಾದುದಲ್ಲ. ಹಲವು ರೀತಿಯ `ಮುತ್ತು’ಗಳಿವೆ: ಕೆನ್ನೆಗೆ ಮುತ್ತು ಕೊಡುವುದೂ ತುಟಿಗೆ ಮುತ್ತು ಕೊಡುವುದೂ ಒಂದೇ ಅಲ್ಲ! ತುಟಿಗೆ ಕೊಡುವ ಮುತ್ತು ಕಾಮದಿಂದ ಕೂಡಿದ್ದು. ಅದಲ್ಲ ಎಂದಾದರೆ, ಅಣ್ಣ ತಂಗಿ ಅಪ್ಪ ಮಗಳು ಮುಂತಾದ ಹತ್ತಿರದ ಸಂಬಂಧಿಗಳು ಯಾಕೆ ಇದನ್ನು ಮಾಡುವುದಿಲ್ಲ? ಅಥವಾ ಹದಿನೈದು ವರ್ಷದ ಬಾಲೆ ಎಂಭತ್ತು ವರ್ಷದ ಮುದುಕನ ತುಟಿಗೆ? ಫ್ರಾಯ್ಡ್ ಇದ್, ಈಗೋ, ಸೂಪರ್ ಈಗೋ ಬಗ್ಗೆ ಮಾತಾಡುವುದನ್ನು ಗಮನಿಸಬೇಕು. ಮಗುವೊಂದು
    ಮನುಷ್ಯನಾಗುವುದೇ ಸ್ವಯಂ ನಿಗ್ರಹವನ್ನು (ಸೆಲ್ಫ್ ಸೆನ್ಸರ್ ಶಿಪ್) ಪಾಲಿಸಿದಾಗ: ಯಾವುದು ಇತರರಿಂದ ಸ್ವೀಕೃತ, ಯಾವುದು ಅಲ್ಲ ಎಬುದನ್ನು ಗಮನಿಸಿ ತನ್ನ ವರ್ತನೆಯನ್ನು ಹೊಂದಿಸಿಕೊಂಡಾಗ.ಸಮಾಜದ ಇಂಥ ಕಲ್ಪನೆಗಳನ್ನೇ ನಾವು ಸಂಸ್ಕೃತಿ ಎನ್ನುವುದು.
    ಸಾರ್ವಜನಿಕ ಮುತ್ತು ಸರಿ ಎಂದಾದರೆ ಸಾರ್ವಜನಿಕ ಮೈಥುನ ಯಾಕೆ ಆಗಬಾರದು? ವೈಫ್ ಸ್ವಾಪಿಂಗ್? ಪೆಡೋಫೈಲ್?
    ಈ ಪ್ರತಿಭಟನಕಾರರು ಅತ್ಯಾಚಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ ಅದು ಸಕಾಲಿಕವಾಗುತ್ತಿತ್ತು. ಆದರೆ ಅವರು ಅತ್ಯಾಚಾರದ ಪರವಾಗಿ ಇದ್ದಾರೋ ಎಂಬ ಸಂದೇಹ ಬರುತ್ತದೆ!!
    ಕೆ.ವಿ. ತಿರುಮಲೇಶ್

    ಪ್ರತಿಕ್ರಿಯೆ
  9. ಅಕ್ಕಿಮಂಗಲ ಮಂಜುನಾಥ

    ತಿರುಮಲೇಶರವರೇ ತಾವು ಹೇಳಿರವುದು ಖಂಡಿತವಾಗಿಯೂ ಸತ್ಯ. ಈಗ ಬಹಿರಂಗ ಚುಂಬನದ ಬಗ್ಗೆ ಹೋರಾಡುತ್ತಿರುವವರು , ಮುಂದೊಂದು ದಿನ ಬಹಿರಂಗ ಮೈಥುನದ ಬಗ್ಗೆಯೂ ಹೋರಾಟಕ್ಕಿಳಿಯಲು ಹಿಂದೆ ಮುಂದೆ ನೋಡಲಾರರು.ಈಗ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ , ಮನುಷ್ಯ ಆಧುನಿಕನಂತೆ ಕಾಣುವ ಆಧಿಮಾನವನಾಗುತ್ತಿರ ಬಹುದೇ ? ಎಂಬ ಸಂಶಯ ಮೂಡುತ್ತಿದೆ. ಹಾಗಾದರೆ ಸುಸಂಸ್ಕೃತನೆನಿಸಿಕೊಂಡ ಮನುಷ್ಯನಿಗೂ ಪ್ರಾಣಿಗಳಿಗೂ ವ್ಯತ್ಯಾಸವಾದರೂ ಏನು ? ಬಡತನ ನಿರುದ್ಯೋಗ, ಭ್ರಷ್ಟಾಚಾರ, ಅತ್ಯಾಚಾರ-ಮುಂತಾದ ಸಹಜ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವುದು ಬಿಟ್ಟು , ಸಮಾಜದ ಸ್ವಾಸ್ಥ್ಯ ಕೆಡಿಸುವ, ಹಿಟ್ಟಿಗೆ ಬಟ್ಟೆಗೆ ಬಾರದ ವಿಷಯಗಳೇ ಬೇಕಾಗಿತ್ತೆ ? ಶಹರಗಳ ಜನ ಇದನ್ನು ಯಾವ ರೀತಿ ಸ್ವಾಗತಿಸುತ್ತಾರೋ ಕಾಣೆ.ಆದರೆ ನಮ್ಮ ಹಳ್ಳಿಗಳ ಕಡೆ ಈಗಾಗಲೇ ಥೂ…..ಛೀ….ಎಂದು ಉಗಿಯ ತೊಡಗಿದ್ದಾರೆ. ಕಾಲೇಜುಗಳ ಕಡೆ ತಮ್ಮ ಹೆಣ್ಣು ಮಕ್ಕಳನ್ನು ಕಳುಹಿಸಲೂ ಹಿಂದು ಮುಂದು ನೋಡುತ್ತಿದ್ದಾರೆ.ಪ್ರಗತಿಪರರೇ… ಪ್ರಗತಿಶೀಲರೇ…ಮುಂದಾಗುವ ಸಮಸ್ಯೆಗಳ ಜವಾಬ್ದಾರಿಯನ್ನು ಹೊರಲಿಕ್ಕೆ ಸಿದ್ಧರಾಗಿದ್ದೀರಾ ?

    ಪ್ರತಿಕ್ರಿಯೆ
  10. Anil Talikoti

    ತೋರಿಕೆ ಎಂಬ ತುರಿಕೆ ಭಯಂಕರ. ನಿಮ್ಮ ಬರಹವೇ ನನ್ನ ಧ್ವನಿ ಕೂಡ. ಯಾವದೋ ಸಂಸ್ಕ್ರತಿಯ ಎರವಲು ತರುವಂತಹ ತೆವಲುಗಳು ಇವು -ಯಾಕೆಂದರೆ ಆ ಸಂಸ್ಕ್ರತಿಗಳಿಂದ ಬೇರೆ ಒಳ್ಳೆಯ ಸಂಗತಿಗಳನ್ನು ಅಳವಡಿಸಿಕೊಳ್ಳುವದು ಇದಕ್ಕಿಂತ ಸಾವಿರ ಪಟ್ಟು ಕಷ್ಟದ್ದು.. ಇಂತಹವನ್ನು ಹುಟ್ಟುಹಾಕುವದು ಅತೀ ಸುಲಭವಾದದ್ದು ಈ ಕಾಲದಲ್ಲಿ -ಅದರ ಉದ್ದೇಶಿತ ಪರಿಣಾಮದ ಅವಧಿ ಕೂಡಾ ಅಷ್ಟೆ. ಪ್ರೀತಿ ಇಷ್ಟು ಅಗ್ಗವಾದರೆ ಹೇಗೆ ಸ್ವಾಮಿ?
    ~ಅನಿಲ

    ಪ್ರತಿಕ್ರಿಯೆ
  11. shankar

    Sandhyravare,when you saw kissers in public you may give privacy.for few it looks like nonsense.ultimately its up to them follow which is good.I oppose to drag culutre and also bad thinking in the name of progressiveness

    ಪ್ರತಿಕ್ರಿಯೆ
  12. Puttaswamy

    ಸಂಧ್ಯಾ ಅವರು ಅಭಿಪ್ರಾಯಪಟ್ಟಂತೆ ನೈತಿಕ ಪೊಲೀಸ್‍ಗಿರಿಯನ್ನು ಪ್ರತಿಭಟಿಸಲಯ ಾಯ್ದುಕೊಂಡ ಮಾರ್ಗ ಅಷ್ಟೊಂದು ಸಮಂಜಸವಾಗಿ ಕಾಣದು. ನನಗೆ ಹಿಂದೆ ಕೆಲವಾರು ಸಂದಭ‍್ಗಳಲ್ಲಿ ಪ್ರೊ.ನಂಜುಂಡಸ್ವಾಮಿಯವರು ರೂಪಿಸುತ್ತಿದ್ದ ನವನವೀನ ಪ್ರತಿಭಟನೆಗಳ ಮಾದರಿಗಳು ನೆನಪಾಗುತ್ತವೆ. ಒಮ್ಮೆ ಭ್ರಷ್ಠ ರಾಜಕಾರಣುಗಳು ಮತ್ತು ಅಧಿಕಾರಿಗಳಿಗೆ ಪ್ರತಿಭಟನೆಯ ುರಿ ಸರಿಯಾಗಿ ಮುಟ್ಟಿಸಲು ಉಗಿಯುವ ‘ಉಗಿಯುವ ಚಳುವಳಿ’ ರೂಪಿಸಿದ್ದರು. ಮತ್ತೊಮ್ಮೆ ನಿಷೇಧಾಜ್ಞೆ ಜಾರಿಯಲ್ಲ್ಲಿದ್ದ ಕಾರಣ ೆಲ್ಲರೂ ಗಹಗಹಿಸಿ ನಗುವ ಚಳುವಳಿಯನ್ನು ರೂಪಿಸಿದ್ದರು. ನಿರೋದ್ಯೋಗಿಗಳು ಬೂಟ್ ಪಾಲಿಷ್ ಮಾಡುವ ಚಳುವಳಿಯಿಂದ ಹಿಡಿದು ಡೈರೆಕ್ಟ್ ಆಕ್ಷನ್‍ವರೆಗೆ ( ಕೆ ಎಫ್ ಸಿ., ಮಾನ್ಸಾಂಟೋ ಇತ್ಯಾದಿ ವಿರುದ್ಧ )ಅವರ ಪ್ರತಿಭಟನೆಯ ವಿಧಾನಗಳು ವ್ಯಾಪಿಸಿದ್ದವು. ನಗರವಾಸಿಗಳು, ನಗರಪ್ರಜ್ಞೆಯವರು, ಸ್ವಲ್ಪ ಕಲಿತವರು, ಲಿಬರಲ್ ಎಂದು ತೋರಿಸಿಕೊಳ್ಳುವವರು ಮತ್ತು ಆರ್ಥಿಕವಾಗಿ ನೆಮ್ಮದಿಯಾಗಿರುವವರಿಂದ ಮಾತ್ರ ಇಂಥ ಚಳುವಳಿಗಳು ರೂಪುಗೊಳ್ಳಲು ಸಾಧ್ಯ. ಪ

    ಪ್ರತಿಕ್ರಿಯೆ
  13. swara

    Kiss of love ಚಳವಳಿ ಹಿಂದಿನ ಉದ್ದೇಶ ಸ್ಪಷ್ಟ. ಆದರೆ ಈ ಪ್ರತಿಭಟನೆ ಕೇವಲ ಟಿವಿಗಳಿಗೆ ಟಿಆರ್ಪಿ ತಂದುಕೊಡುವ ವಿಷಯವಾಗಬಾರದು. ಉದ್ದೇಶಕ್ಕೆ ನನ್ನ ಸಹಮತವಿದೆ, ಆದರೆ ದಾರಿಗಲ್ಲ. ನೈತಿಕ ಪೊಲೀಸ್ ಗಿರಿಗೆ ನಂದು ಒಂದು ದಿಕ್ಕಾರ. ನಿಮ್ಮ ಬರಹ ಚೆನ್ನಾಗಿದೆ.

    ಪ್ರತಿಕ್ರಿಯೆ
  14. Somashekhar

    ಈ ಲೇಖನ ಮತ್ತು ಅದಕ್ಕೆ ಬಂದಿರುವ ಪ್ರತಿಕ್ರಿಯೆ ನೋಡಿ ಆಶ್ಚರ್ಯ ಮತ್ತು ಆಘಾತವಾಯಿತು. ಇಲ್ಲಿ ‘ನೈತಿಕ ಪೋಲಿಸ್ಗಿರಿ’ ಮಾಡುವ ಜನರ ಬಗ್ಗೆ ಹೆಚ್ಚ್ಚು ಚರ್ಚೆ ಮಾಡುವ ಅಗತ್ಯವಿಲ್ಲ ಅನಿಸುತ್ತೆ, ಅವರ ತಲೆಯಲ್ಲಿ ಮಿದಳು ಇರುವ ಸಾಧ್ಯತೆ ಅತ್ಯಂತ ಕ್ಷೀಣವಾದದ್ದು . ಆದರೆ ಸಂಧ್ಯಾರಾಣಿಯವರು ಈ ಸಲ ಅಡ್ಡಗೋಡೆ ಮೇಲೆ ದೀಪವಿತ್ತಂತೆ ನಮ್ಮ ರಾಜಕಾರಣಿಗಳ ವರಸೆಯಲ್ಲಿ ಲೇಖನ ಬರೆದಿದ್ದರೆನಿಸುತ್ತಿದೆ. ಇಲ್ಲಿನ ಮುಖ್ಯ ಸಮಸ್ಯೆ ಎಂದರೆ ‘ಮುತ್ತು’ ಎಂದಾಕ್ಷಣ ಅದನ್ನು ‘sex’ ಜೊತೆ ಸಮೀಕರಿಸುವ ಮನಸ್ಥಿತಿ. ಮುತ್ತನ್ನು ನಿಮ್ಮ ಗೆಳೆಯ/ತಿ ಅಥವಾ ಗಂಡ/ಹೆಂಡತಿ ಗೆ ಕೊಡುವಾಗ ಅದು ಕೇವಲ ಸೆಕ್ಷುಯಲ್ ಆಗಿ ಮಾತ್ರ ಇರಬೇಕಾದ ಅಗತ್ಯವಿಲ್ಲ. ಹಿರಿಯರಾದ ತಿರುಮಲೇಶ್ ರಂತವರೂ ಕೂಡ ‘ ಬಹಿರಂಗ ಹಸ್ತ ಮೈಥುನ ‘ ಎಂದು ವಾದಮಾಡುವುದನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ. ಇಲ್ಲಿ ಒಬ್ಬರಿಗೆ ‘ಮುತ್ತು ‘ ಮುಜುಗರ ತರಿಸುವ ವಿಚಾರವಾದರೆ , ಮತ್ತೆ ಕೆಲವರಿಗೆ ಕೈಕೈ ಹಿಡಿದು ನಡೆವುದೂ ಆಸಹ್ಯವಾಗಿ ಕಾಣಬಹುದು, ಮತ್ತೊಂದಿಷ್ಟು ಜನರಿಗೆ jeans ಬಿಡಿ ಚೂಡಿದಾರ್ ಕೂಡ ‘uncultured’ ಎನಿಸಬಹುದು. ಇದಕ್ಕೆ ಕೊನೆ ಎಲ್ಲಿದೆ ಸ್ವಾಮಿ. ತಮಾಷೆ ಎಂದರೆ ಮುತ್ತನ್ನು ಅತ್ಯಂತ ಸಹಜವಾಗಿ ನೋಡುವ ದೇಶವಾದ ಅಮೇರಿಕಾದಲ್ಲಿ ನೆಲೆಸಿ ( ನಾನೂ ಕೂಡ ಅಮೇರಿಕಾ ವಾಸಿ), ಇಲ್ಲಿನ ಗ್ರೀನ್ ಕಾರ್ಡೋ ಇಲ್ಲ citizenship ಗೋ ಒದ್ದಾಡುವವರೂ ಕೂಡ ಇದನ್ನು ಅನ್ಯ ಸಂಸ್ಕೃತಿ ಎಂದು ಕೀಳಾಗಿ ಜರೆವುದು

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ನಮಸ್ತೆ. ಲೇಖನದಲ್ಲಿ ನನ್ನ ನಿಲುವನ್ನು ನಾನು ಸ್ಪಷ್ಟವಾಗಿಯೇ ಹೇಳಿದ್ದೇನೆ ಸೋಮಶೇಖರ್ ಅವರೆ. ಈ ಪ್ರತಿಭಟನೆ ಶುರುವಾದ್ದು ನೈತಿಕ ಪೋಲೀಸ್ ಗಿರಿಯನ್ನು ವಿರೋಧಿಸಲು. ಅದಕ್ಕೆ ನನ್ನದೂ ವಿರೋಧ ಇದೆ. ಆದರೆ ಪ್ರತಿಭಟನೆಯ ಮಾರ್ಗದ ಬಗ್ಗೆ ನನ್ನ ಸಹಮತ ಇಲ್ಲ.

      ಪ್ರತಿಕ್ರಿಯೆ
  15. Raghav

    ಮುತ್ತು ‘ಮುತ್ತಾ’ಗಿರಲಿ . ಪ್ರತಿಭಟನೆಯ ಸರಕಾಗದಿರಲಿ. ಪ್ರತಿಭಟನೆಯ ಧ್ಯೇಯಕ್ಕೆ ಎಲ್ಲರ ಒಲವಿನ ಬೆಂಬಲವಿರಲಿ. ಪ್ರತಿಭಟನೆಯನ್ನು ಬೆಂಬಲಿಸುತ್ತಾ, ಪ್ರತಿಭಟನೆಯ ದಾರಿಯನ್ನು ವಿರೋಧಿಸುವ ಹಾಗಾಗದಿರಲಿ……. ಆ ಮೂಲಕ ಪ್ರತಿಭಟನೆ ಕ್ಷೀಣವಾಗದಿರಲಿ. ನಿಮ್ಮ “ಮುತ್ತೆಂದರೆ ಪ್ರೀತಿ, ಪ್ರತಿಭಟನೆಯಲ್ಲ” ಗೆ ಅರ್ಥ ತರಲಿ …

    ಪ್ರತಿಕ್ರಿಯೆ
  16. kvtirumalesh

    ಶ್ರೀ ಸೋಮಶೇಖರ ರಾಯರೇ,
    ತಾವು ಅಮೆರಿಕದಲ್ಲಿದ್ದು ಅಮೇರಿಕನರಂತೆ ಮಾತಾಡುತ್ತಿದ್ದೀರಿ. ಅಮೇರಿಕವೇ ಮಾದರಿಯಾಗಬೇಕಿದೆಯೆ? ಸಾರ್ವಜನಿಕ ಮೈಥುನ ಎಂದ ತಕ್ಷಣ ಯಾಕೆ ಗಾಬರಿ ಪಟ್ಟಿರಿ? ಅಮೇರಿಕದಲ್ಲಿ ಇನ್ನೂ ಬಂದಿಲ್ಲ ಎಂದೇ?! ಬರುತ್ತದೆ, ಬೇಗನೆ. ಯಾಕೆಂದರೆ ಸೆಕ್ಸ್ ಶಾಪುಗಳಿವೆ, ಪೆಡೋಫೀಲಿಯಾ ಇದೆ, ವೈಫ್ ಸ್ವಾಪಿಂಗ್ ಇದೆ, ಆರ್ಗೀಸ್ ಇವೆ!
    ಪ್ರಶ್ನೆ: ಮುತ್ತಿಗೂ ಸೆಕ್ಸಿಗೂ ಸಂಬಂಧವಿಲ್ಲ ಎಂದಾದರೆ, ನೀವು ನಿಮ್ಮ ಬೆಳೆದ ಮಗಳ ತುಟಿಗಳನ್ನು ಚುಂಬಿಸುವಿರಾ? ಅಥವಾ ನಿಮ್ಮ ತಮ್ಮನ ಹೆಂಡತಿಯ ತುಟಿಗಳನ್ನು? ಯೋಚಿಸಿ ನೋಡಿ.
    ನಾನೇನೂ ಡಿಪ್ಲೊಮ್ಯಾಟಿಕ್ ಆಗಿ ಬರೆದಿಲ್ಲ; ಒಂದು ನಿಲುವು ತೆಗೆದುಕೊಂಡಿದ್ದೇನೆ.
    ಕೆ.ವಿ.ತಿರುಮಲೇಶ್

    ಪ್ರತಿಕ್ರಿಯೆ
  17. Somashekhar

    ಪ್ರಿಯ ತಿರುಮಲೇಶ್, ನಿಮ್ಮದು ವಿತಂಡ ವಾದ, ವಿವರಿಸಲು ಪ್ರಯತ್ನಿಸುತ್ತೇನೆ.
    ನೀವು ಮತ್ತೆ ಮತ್ತೆ ನಿಮ್ಮ ಮಗಳಿಗೆ, ತಮ್ಮನ ಹೆಂಡತಿಗೆ ಮುತ್ತು ಕೊಡಬಲ್ಲಿರ ಎಂದು ಕೇಳಿರುವುದು ನನ್ನನ್ನು ನಾನೇ ಮತ್ತೊಮ್ಮೆ ನೋಡಿಕೊಳ್ಳುವಂತಾಯಿತು .
    ಕಳೆದ ೮-೯ ವರ್ಷಗಳಿಂದ ನಾನು ಅಮೇರಿಕಾದಲ್ಲಿ ವಾಸ ಮಾಡುತ್ತಿದ್ದೇನೆ. ನಾನು ವೃತ್ತಿಯಿಂದ ಮಕ್ಕಳ ವೈದ್ಯ ಇಲ್ಲಿನ ಜನ ಬಣ್ಣ, ಜಾತಿ ಯಾವುದರ ಹಂಗಿಲ್ಲದೆ ಪರಸ್ಪರ ಅಪ್ಪಿಗೆ ಮತ್ತು ಮುತ್ತು ವಿನಿಮಯ ಮಾಡಿಕೊಳ್ಳುವ ಸಂಸ್ಕೃತಿ ನನಗೆ ಯಾವಾಗಲೂ vulgar ಆಗಿ ಕಂಡಿಲ್ಲ. ನಾನು ನನ್ನ ವ್ಯಕ್ತಿತ್ವದಲ್ಲಿ ಎಷ್ಟು ಅಮೆರಿಕನ್ ಆಗಿರಬಹುದು ಎಂದು ನೋಡಿಕೊಂಡಾಗ ಅದು ಇಂಡಿಯಾದಲ್ಲೇ ಇರುವ ನನ್ನ ಗೆಳೆಯರಿಗಿಂತ ಹೆಚ್ಚೇನು ಅಲ್ಲ ಅನಿಸುತ್ತೆ. ಇನ್ನು ಬೇರೆಯವರ ಮನೆಯಲ್ಲಿ ಏನು ನಡೆಯುತ್ತದೆ ಎಂದು ಕಲ್ಪಿಸಿಕೊಂಡು ಒದ್ದಾಡುವ ಬದಲು ನನ್ನ ಮನೆಯಲ್ಲಿ ಏನು ನಡೆಯುತ್ತದೆ ಎಂದು ವಿವರಿಸುತ್ತೇನೆ. ನನಗೆ ೫ ಮತ್ತು ೮ ನೆ ವಯಸ್ಸಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಎಲ್ಲರಂತೆ ನನ್ನ ಮತ್ತು ನನ್ನ ಹೆಂಡತಿಯ ನಡುವೆ ಪ್ರೀತಿ ಅಭಿಮಾನ ಹೆಚ್ಚಾದಾಗ ಪರಸ್ಪರ ಮುತ್ತು ಕೊಟ್ಟುಕೊಳ್ಳುತ್ತೇವೆ, ಅನೇಕ ಬಾರಿ ಇದು ನಮ್ಮ ಮಕ್ಕಳ ಎದುರೇ ನಡೆಯುತ್ತದೆ. ಕೆಲವು ಬಾರಿ ಅವರು ನಮ್ಮೆಡೆ ಒಂದು ನೋಟ ಹರಿಸಿ ತಮ್ಮ ಪಾಡಿಗೆ ತಾವು ಆಟವಾಡಿಕೊಳ್ಳುತ್ತಾರೆ, ಕೆಲವೊಮ್ಮೆ ಅವರೂ ಕೂಡ ಓಡಿಬಂದು ನಮ್ಮನ್ನು ಸೇರಿಕೊಳ್ಳುತ್ತಾರೆ, ನಾವೆಲ್ಲಾ ಪರಸ್ಪರ ಮುತ್ತು ಕೊಟ್ಟುಕೊಳ್ಳುತ್ತೇವೆ (ಇಲ್ಲಿ ಯಾರೂ ದಯವಿಟ್ಟು ಡೀಪ್ ಕಿಸ್ ಅಥವಾ ಫ್ರೆಂಚ್ ಕಿಸ್ ಮುಂತಾದವುಗಳನ್ನು ಕಲ್ಪಿಸಿಕೊಲ್ಲಬೇಡಿ !). ಇದು ಹೇಗಿರುತ್ತೆ ಅಂದರೆ ಮಕ್ಕಳು ‘ ಹೇ ಪೆಪ್ಪರ್ಮೆಂಟ್ ನಮಗಿಲ್ವ ? ‘ ಎಂದು ಓಡಿ ಬರುವಷ್ಟೇ ಸಹಜವಾಗಿರುತ್ತೆ. ಆದರೆ ಇದು ನಂಗೆ ಸಹಜ ಎಂದಾಕ್ಷಣ ಇದನ್ನು ಎಲ್ಲರ ಎದುರು ಮಾಡಲು ಸಾಧ್ಯವೇ ?. ಖಂಡಿತ ಇಲ್ಲ. ಅದಕ್ಕೆ ಕಾರಣ ನಮ್ಮ ಸುತ್ತ ಹೆಣೆಯಲಾಗಿರುವ ಮಾನಸಿಕ/ ಸಾಮಾಜಿಕ ಸಂಕೋಲೆಗಳು, ಇದರಿಂದ ನಾವೆಲ್ಲರೂ ಸಂಪೂರ್ಣವಾಗಿ ಹೊರಬಂದಿಲ್ಲ. ಆದರೆ ಅದನ್ನು ಮಾಡಲು ಬೇರೆಯವರಿಗೆ ಸಾಧ್ಯವಿದ್ದರೆ, I feel proud about them ಮತ್ತು ಅದಕ್ಕೆ ತಕರಾರು ತೆಗೆಯುವುದು ನನಗೆ ಸರಿ ಎನಿಸುವುದಿಲ್ಲ.
    ಇನ್ನು ‘ನಿಮ್ಮ ಮಗಳಿಗೆ ಮುತ್ತು ಕೊಡಬಲ್ಲಿರಾ’ ಎಂದು ಕೇಳುವ ನಿಮಗೆ ಕೂಡಾ ಮಗಮಗಳು /ಮೊಮ್ಮಕಳು ಇದ್ದಾರೆಂದು ನಂಬಿದ್ದೇನೆ. ನೀವು ಅವರನ್ನು ಮುತ್ತಿಕ್ಕಿ ಮುದ್ದಾಡಿಲ್ಲವೆ?
    ಮುತ್ತನ್ನು ನಿಮ್ಮ ದೃಷ್ಟಿಯಲ್ಲೇ ನೋಡುವುದಾದರೆ ಮಗುವಿನ ತುಟಿಗೆ ಮುತ್ತಿಕುವವರೆಲ್ಲ pedophile ಆಗುತ್ತರಾರಲ್ಲವೇ?. ಮಕ್ಕಳು ಬೆಳೆಯುತ್ತಾ ದೊಡ್ಡವರ ಮಾನಸಿಕ/ದೈಹಿಕ ಹಂಗಿನಿಂದ ನಿಧಾನವಾಗಿ ಬಿಡಿಸಿಕೊಳ್ಳುತ್ತಾರೆ ಮತ್ತು ಅವರೆದೆ ಆದ ಪ್ರೀತಿ ಮತ್ತು identity ಕಂಡುಕೊಳ್ಳುತ್ತಾರೆ , ದೊಡ್ದಮಗ/ಳಿಗೆ ತುಟಿಯ ಮೇಲೆ ಕೊಡವ ಮುತ್ತು ಇದೆ ಕಾರಣಕ್ಕೆ ಕೊಡುವವರಿಗಿಂತಲೂ ಆ ಮಕ್ಕಳಿಗೇ ಇಷ್ಟವಾಗುವುದಿಲ್ಲ. ಆದರೆ ಮನಸ್ಸು ಮತ್ತು ಹೃದಯ ಈ ಸಂಕೋಲೆಗಳಿಂದ ಮುಕ್ತವಾಗಿ ಶುದ್ದವಾಗಿದ್ದರೆ ಇದೂ ಕೂಡ ಸಾದ್ಯ, ಒಂದು light ಸಿಹಿ ಮುತ್ತು ಕಹಿಯಾಗಲು ಸಾಧವಿಲ್ಲ, ಇದನ್ನು ಅನೇಕ ಕಡೆ ನೋಡಬಹುದು.
    ಇನ್ನು pedophile , sex ಶಾಪ್ , ವೈಫ್ ಸ್ವಾಪಿಂಗ್ ಮುಂತಾದ ಗ್ಲೋಬಲ್ ಇಶ್ಯೂ/ಕುರೂಪಗಳನ್ನೆಲ್ಲ ಅಮೆರಿಕನ್ನರ ತಲೆಗೆ ಕಟ್ಟುವುದು ನಿಮ್ಮ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ ಅಷ್ಟೆ. ನಿಮ್ಮ ಕಾಮೆಂಟ್ ನೋಡಿದರೆ ಅದನ್ನು ನೀವೇ ಬರೆದಿರುವುದ ಎಂದು ನಂಬಲಿಕ್ಕೆ ಆಗುತ್ತಿಲ್ಲ
    ಸಂಧ್ಯಾರಾಣಿ ಯವರೇ ನಿಮ್ಮ ಮಾತನ್ನು ಒಪ್ಪುತ್ತೇನೆ, ಪ್ರತಿಭಟನೆಯ ಮಾರ್ಗ ಸರಿ ಇಲ್ಲ ಎಂದು ನಿಮ್ಮ ಅನಿಸಿಕೆ. ಆದರೆ ಪ್ರೀತಿ, ಪ್ರೇಮ, ಸೆಕ್ಸ್ ಎಲ್ಲವನ್ನು ತಲೆತಲಾಂತರಗಳಿಂದ ಪ್ರತಿಭಟನೆಯ ಅಸ್ತ್ರವಾಗಿ ಬಳಸಿಕೊಂಡಿರುವುದನ್ನು ನೀವು ಕಾಣದಾದಿರ. ರೋಮಿಯೋ ಜೂಲಿಯೆಟ್ ಯಿಂದ ಹಿಡಿದು ಮುಸ್ಲಿಮ/ದಲಿತ ಹುಡುಗರ ಹಿಂದೆ ‘ಓಡಿ’ ಹೋಗುವ, ಇದಕ್ಕಾಗಿ ಪ್ರಾಣ ಬಿಡಲು ತಯಾರಿರುವ ಮೇಲ್ವರ್ಗದ ಹುಡುಗಿಯರ ಕ್ರಿಯೆಯ ಹಿಂದೆ ಕೂಡ ಈ ಸಂಪ್ರದಾಯ, ದಬ್ಬಾಳಿಕೆ ವಿರುದ್ದವಾದ ಒಂದು ಪ್ರತಿಭಟನೆಯ ಎಳೆ ಕಾಣುವುದಿಲ್ಲವೆ. ಇವೆಲ್ಲದರಂತೆ ಇದೂ ಕೂಡ ಒಂದು ಮಾರ್ಗ ಅಲ್ಲವೆ?
    ನಮ್ಮ ಸುತ್ತ ಸಂಸ್ಕೃತಿಯ ಹೆಸರಿನಲ್ಲಿ ಕಟ್ಟಿಕೊಂಡಿರುವ ಅನೇಕ ಅಸಂಬದ್ದ ಅಮಾನವೀಯ, ಅನಾಗರಿಕ ನಡವಳಿಕೆಯ ಸಂಕೋಲೆಗಳನ್ನು ಮುರಿಯುವ ಅನೇಕ ವಿದಗಳಲ್ಲಿ ಇದು ಕೂಡ ಒಂದು ಎನ್ನುವುದು ನನ್ನ ಅನಿಸಿಕೆ. ನಾವು ಬಲ ಅಥವಾ ಎಡಪಂಥೀಯ ಕಾರ್ಯಕರ್ಥರಲ್ಲದ ಮಾತ್ರಕ್ಕೆ ನಾವು ಈ ಸಂಕೋಲೆಗಳಿಂದ ಸಂಪೂರ್ಣ ಮುಕ್ತರಲ್ಲ. ಮನುಷ್ಯರಾಗುವ ಕಡೆ ಹೆಜ್ಜೆ ಇಡೋಣ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: