ಸಂಧ್ಯಾರಾಣಿ ಕಾಲಂ : ತೇಜಸ್ವಿ ಲೋಕದಲ್ಲಿನ ಸ್ತ್ರೀಲೋಕ


ಒಬ್ಬ ಸಾಹಿತಿಯನ್ನು, ಚಿಂತಕನನ್ನು ನೆನೆಸಿಕೊಳ್ಳುವ ಅತ್ಯುತ್ತಮ ವಿಧಾನ ಎಂದರೆ ಅವರ ಬರಹಗಳನ್ನು ಓದಿಗೆ, ಮರು ಓದಿಗೆ ಮತ್ತು ಚರ್ಚೆಗೆ ಒಳಪಡಿಸುವುದು ಎನ್ನುವುದು ನನ್ನ ಅಭಿಪ್ರಾಯ. ಆ ಸಾಹಿತಿ/ಚಿಂತಕರನ್ನು ಕಾಲದ ಆಚೆಗೂ ಹೀಗೆ ನಮ್ಮೊಡನೆ ಉಳಿಸಿಕೊಳ್ಳಬಹುದು. ಹೋದ ವಾರ ’ಅವಿರತ’ ತಂಡ ಇಂತಹದ್ದೇ ಒಂದು ಸಾರ್ಥಕ ಪ್ರಯತ್ನ ಕೈಗೊಂಡಿತ್ತು. ಉತ್ಸಾಹಿ ತರುಣ ತರುಣಿಯರ ಈ ಗುಂಪು ತೇಜಸ್ವಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ತೇಜಸ್ವಿ ಬರಹಗಳನ್ನು ಓದುವ ಮತ್ತು ಚರ್ಚಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅಲ್ಲಿ ನಾನು ಮಾತನಾಡಿದ ’ತೇಜಸ್ವಿ ಲೋಕದಲ್ಲಿ ಸ್ತ್ರೀ ಪಾತ್ರಗಳು’ ವಿಷಯದ ಬಗ್ಗೆ ಇಲ್ಲಿ ಕೆಲವು ಮಾತುಗಳು.
’ಸಾಹಿತ್ಯವನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಅದರಲ್ಲೂ ಯುವಜನರು ಸಾಹಿತ್ಯದ ಓದಿನಿಂದ ದೂರವಾಗುತ್ತಿದ್ದಾರೆ’ ಎನ್ನುವ ಮಾತುಗಳ ನಡುವೆಯೂ ನಾನು ಗಮನಿಸಿದ್ದೆಂದರೆ ತೇಜಸ್ವಿಯನ್ನು ಈಗಲೂ ಸಾಹಿತ್ಯಾಸಕ್ತರು ಪ್ರೀತಿಯಿಂದ ಓದುತ್ತಾರೆ. ಅಂದು ಅಲ್ಲಿ ಸೇರಿದ್ದ ಇಪ್ಪತ್ತನ್ನೂ ಮುಟ್ಟದ ಹುಡುಗ ಹುಡುಗಿಯರು ತೇಜಸ್ವಿಯನ್ನು ಅರ್ಥೈಸಿಕೊಂಡ ರೀತಿ, ಅಲ್ಲಿ ಸಿಕ್ಕ ಹೊಸ ದೃಷ್ಟಿಕೋನಗಳು, ತೇಜಸ್ವಿ ಬರಹಕ್ಕೆ ಅವರು ಸ್ಪಂದಿಸಿದ ರೀತಿ ವಿಶೇಷವಾಗಿತ್ತು. ತೇಜಸ್ವಿಯ ಸಾಹಿತ್ಯ ’ಕಾಲವಳಿಸದ ಚೆಲುವು’.
ಒಂದು ಸಲ ನಾನು ನನ್ನ ಇಷ್ಟದ ಪುಸ್ತಕಗಳ ಬಗ್ಗೆ ಮಾತನಾಡುತ್ತಿದ್ದೆ, ಆಗ ತೇಜಸ್ವಿಯವರ ಕಥೆಗಳ ಬಗ್ಗೆ ಹೇಳುತ್ತಾ ತೇಜಸ್ವಿ ಸಾಹಿತ್ಯ ನನ್ನ ಮಟ್ಟಿಗೆ ಮನೆಯಲ್ಲಿ ಅನ್ನ ಸಾರು, ಮುದ್ದೆ, ರೊಟ್ಟಿ, ಪಲ್ಯ, ಮೊಸರನ್ನ ತಿಂದ ಹಾಗೆ ಅಂದಿದ್ದೆ. ಇಲ್ಲಿ ನನ್ನ ಉದ್ದೇಶ ಯಾವುದೇ ಹೆಚ್ಚಿನ ಮಸಾಲೆ ಇಲ್ಲದೆ, ಅಲಂಕಾರ ಇಲ್ಲದೆ, ಯಾವ ವಿಶೇಷಣಗಳೂ ಇಲ್ಲದೆಯೂ ನಮ್ಮದಾಗುವ ಮತ್ತು ಪ್ರತಿ ದಿನ ಕೈಗೆತ್ತಿಕೊಂಡರೂ ಬೇಡ ಅನ್ನಿಸದ ಸಾಹಿತ್ಯ ತೇಜಸ್ವಿಯವರದು ಅಂತ.
ತೇಜಸ್ವಿ ಯಾವತ್ತೂ ವಿಶೇಷಣಗಳ ಸಹಾಯ ತೆಗೆದುಕೊಂಡಿಲ್ಲ, ತಾವು ಹೇಳುವುದು ಜಗತ್ತನ್ನೇ ಬದಲಾಯಿಸುವ ವಿಷಯ ಅನ್ನುವ ಠೇಂಕಾರ ಅವರ ಯಾವುದೇ ಬರಹದಲ್ಲಿ ಕಾಣಿಸುವುದಿಲ್ಲ. ಹೇಳುವುದನ್ನು ಅತ್ಯಂತ ಸರಳವಾಗಿ ಮತ್ತು ನೇರವಾಗಿ ತೇಜಸ್ವಿ ಹೇಳುತ್ತಾರೆ. ಇಲ್ಲಿ ನಾನು ಒಂದು ವಿಷಯ ಹೇಳಬೇಕು, ಹೀಗೆ ಒಂದು ಘನ ಗಂಭೀರವಾದ ಸೆಮಿನಾರ್ ನಡೀತಾ ಇದೆ, ತೇಜಸ್ವಿ ಮಾಮೂಲಿನಂತೆ ಹಿಂದಿನ ಸಾಲಿನಲ್ಲಿ ಕುಳಿತಿದ್ದರಂತೆ, ಕನ್ನಡದ ಮಹಾನ್ ಗಂಭೀರ ಪದಪುಂಜಗಳನ್ನು ಬಳಸಿ ವೇದಿಕೆಯ ಮೇಲೆ ಪ್ರಬಂಧ ಮಂಡಿಸುತ್ತಾ ಇದ್ದಾಗ ತೇಜಸ್ವಿ ಕೇಳೋಷ್ಟೂ ಕೇಳಿ, ಕಡೆಗೆ, ’ದಯವಿಟ್ಟು ಕನ್ನಡದಲ್ಲಿ ಮಾತಾಡ್ರೀ’ ಅಂದರಂತೆ! ಅವರ ಮಾತು, ಬದುಕು, ಬರಹ ಎಲ್ಲವೂ ಹಾಗೆ ಸರಳ.
ಕಥೆಗಾರ್ತಿ ವೈದೇಹಿ ಒಂದು ಸಲ ಮಾತನಾಡುತ್ತಾ ’ಅಂಗಳದಾಚೆಗೆ ಒಂದು ಬದುಕು ಇರುವಂತೆ, ಅಂಗಳದ ಒಳಗೆ, ಹಿತ್ತಲಲ್ಲಿ ಸಹ ಒಂದು ಬದುಕಿದೆ, ಎರಡೂ ಸೇರಿದರೇ ಬದುಕಿನ ನೋಟ ಸಂಪೂರ್ಣ’ ಅಂತ ಹೇಳಿದ್ದರು. ತೇಜಸ್ವಿ ಸಾಹಿತ್ಯದಲ್ಲಿ ನಾವು ಆ ಎರಡು ಬದುಕುಗಳ ಸಂಗಮ ಕಾಣುತ್ತೇವೆ. ಅಲ್ಲಿ ಕರ್ವಾಲೋಗಿರುವಷ್ಟೇ ಮಹತ್ವ ಮಂದಣ್ಣನಿಗೂ ಇದೆ, ಪ್ಯಾರನಿಗೂ ಇದೆ, ಕಿವಿಗೂ ಇದೆ. ಮತ್ತು ತೇಜಸ್ವಿ ಕರ್ವಾಲೋರಲ್ಲೂ ಇದ್ದಾರೆ, ಮಂದಣ್ಣನಲ್ಲೂ ಇದ್ದಾರೆ.
ತೇಜಸ್ವಿ ನವ್ಯದ ಹಲವಾರು ನಂಬಿಕೆಗಳನ್ನು ಒಡೆದು ಹೊರಬಂದವರು. ಅವರ ’ನಿಗೂಢ ಮನುಷ್ಯರು’ ಕಥೆಯಲ್ಲಿ ಅವರ ಈ ನಿಲುವನ್ನ ನಾವು ಕಾಣಬಹುದು. ನವ್ಯದಲ್ಲಿದ್ದ ’ನಾನು’ವಿನ ಹುಡುಕಾಟವನ್ನು ಮೀರಿ ತೇಜಸ್ವಿ ಇಡೀ ಜಗತ್ತನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡವರು. ಮತ್ತು ಆ ಜಗತ್ತನ್ನು ನವೋದಯ ಸಮಯದ ರಮ್ಯತೆಯ ದೃಷ್ಟಿಯಲ್ಲಿ ನೋಡದೆ ವೈಜ್ಞಾನಿಕವಾಗಿ, ವೈಚಾರಿಕವಾಗಿ ನೋಡಿದವರು.
ಅವರ ಮೊದಲಿನ ಕಥೆಗಳಲ್ಲಿ ಅವರು ಕಥೆಗಳನ್ನು ಕಟ್ಟಿಕೊಡುವ ಗಾಢತೆ ನಮ್ಮನ್ನು ಮೊದಲಿಗೆ ತಟ್ಟುತ್ತದೆ. ’ಹುಲಿಯೂರಿನ ಸರಹದ್ದು’ ಆಗಬಹುದು, ’ನಿಗೂಢ ಮನುಷ್ಯರು’ ಆಗಬಹುದು ಅಥವಾ ತ್ಯಕ್ತ ಕಥೆಯೇ ಆಗಬಹುದು. ಆಲನಹಳ್ಳಿಯವರ ’ಕಾಡು’ವಿನಲ್ಲಿ ಇದ್ದ ಹಾಗೆ ತ್ಯಕ್ತದಲ್ಲೂ ಒಬ್ಬ ಕಿಟ್ಟಿ ಇದ್ದಾನೆ. ಅದಮ್ಯ ಜೀವನಪ್ರೀತಿಯ ಸಂಕೇತ. ಅವನಿಗೆ ಶಿಸ್ತು ಕಲಿಸುವ ಜಗತ್ತಿನ ನಿಯಮಾವಳಿಗಳು, ಶಿಷ್ಟ ಜಗತ್ತಿನ ಪ್ರಯತ್ನ, ಆ ಶಿಷ್ಟತೆ ಎಲ್ಲೋ ಕಿಟ್ಟಿಯ ಜೀವನೋತ್ಸಾಹವನ್ನು ಮಂಕಾಗಿಸುವುದು ಎಲ್ಲವನ್ನೂ ತೇಜಸ್ವಿ ಅದ್ಭುತವಾಗಿ ಕಟ್ಟಿಕೊಡುತ್ತಾರೆ. ಕಥೆ ಮತ್ತು ಕಥೆಯ ಆವರಣ ಎಲ್ಲವೂ ನಮಗೆ ಸ್ಪರ್ಶಕ್ಕೆ ಸಿಗುತ್ತದೆ.
ಅವರು ಮಾಡದ ಕೆಲಸವೇ ಇಲ್ಲ, ಅಂಡಮಾನ್ ಬಗ್ಗೆ ಬರೆದರು, ನಾವು ಬೆರಗಿನಲ್ಲಿ ಓದಿದೆವು, ಚಿದಂಬರ ರಹಸ್ಯ ಬರೆದರು, ನಾವು ಏಲಕ್ಕಿ ಘಮದ ನಡುವೆಯೇ ಇರುವ ರಾಜಕೀಯ ನೋಡಿ ನಿಟ್ಟುಸಿರು ಬಿಡುತ್ತಲೇ ರಫಿ ಮತ್ತು ಜಯಂತಿಯ ಪ್ರೇಮ ಗೆದ್ದಿತು ಅಂತ ಸಂಭ್ರಮಿಸಿದೆವು, ಅವರು ಕರ್ವಾಲೋ ಬರೆದರು ನಾವು ೬ ರ ಪಕ್ಕ ೯ ಸೊನ್ನೆ ಹಾಕಿದ್ರೆ ಎಷ್ಟು ಅಂತ ಲೆಕ್ಕ ಹಾಕುತ್ತಲೇ ಆ ಕಾಡಿನ ನಡುವೆ ಅಲೆದಾಡುತ್ತಾ ಹಾರುವ ಓತಿಯನ್ನು ಹುಡುಕಿದೆವು, ಅದರ ಬಾಲದ ತುದಿ ನಮ್ಮ ಬೆವರಿದ ಕೈಗಳಿಂದ ಜಾರುವುದನ್ನು ಅಸಹಾಯಕತೆಯಿಂದ ನೋಡಿದೆವು, ಅವರು ಜುಗಾರಿ ಕ್ರಾಸ್ ಬರೆದರು, ನಾವು ಡಿಟೆಕ್ಟಿವ್ ಕಾದಂಬರಿ ಓದಿದ ಹಾಗೆ ಓದಿದೆವು, ಕನಸಿನಲ್ಲಿ ಆ ಕೆಂಡದಂತೆ ಹೊಳೆಯುವ ರತ್ನವನ್ನು ಕಂಡು ಮೋಹಿಸಿದೆವು, ಮಿಲೇನಿಯಂ ಸೀರೀಸ್ ಬರೆದರು, ನಾವೂ ಕೈ ಕಟ್ಟಿಕೊಂಡು ಓದಿದೆವು, ಅವರು ’ಕಿರಗೂರಿನ ಗಯ್ಯಾಳಿಗಳು’ ಬರೆದರು ನೋಡಿ, ಮೊದಲನೆ ಸಲ ಕಾದಂಬರಿ ಓದುವಾಗ ವಿಷಲ್ ಹಾಕಬೇಕು ಅನ್ಸಿತ್ತು!!

ಹೀಗೆ ತೇಜಸ್ವಿ ಸಾಹಿತ್ಯವನ್ನ ಒಟ್ಟಾರೆಯಾಗಿ ಓದುವಾಗೆಲ್ಲಾ ನಾನು ಅದನ್ನು ಪ್ರೀತಿಸಿದ್ದೇನೆ, ಮೋಹಿಸಿದ್ದೇನೆ, ಬೆರಗಾಗಿದ್ದೇನೆ. ಆದರೆ ಈ ಕಮ್ಮಟದ ಕಾರಣಕ್ಕಾಗಿ ಮೊದಲ ಸಲ ತೇಜಸ್ವಿ ಸಾಹಿತ್ಯದಲ್ಲಿ ಸ್ತ್ರೀಲೋಕ ಅಂತ ಹುಡುಕಲು ಹೋದೆ. ಬಹುಶಃ ಆಗ ನನ್ನ ಮನಸ್ಸಿನಲ್ಲಿದ್ದದ್ದು ತೇಜಸ್ವಿ ಸಹ ಹೆಗ್ಗಡತಿಯಂತಹ, ತಿಮ್ಮಿಯಂತಹ, ಚಿನ್ನಮ್ಮನಂತಹ, ಪೀಂಚಲುವಿನಂತಹ ಸ್ವಯಂ ಸಂಪೂರ್ಣರಾಗಿರುವ ಗಟ್ಟಿ ಹೆಣ್ಣುಗಳ ಚಿತ್ರ ಕೊಟ್ಟಿರಬಹುದು ಎಂದು. ಆದರೆ ಇಲ್ಲಿ ಕಿರಗೂರಿನ ಗಯ್ಯಾಳಿಗಳು ಬಿಟ್ಟರೆ ಮತ್ತೆ ಯಾವ ಪುಸ್ತಕದಲ್ಲೂ, ಕಥೆಯಲ್ಲೂ ಹಾಗೆ ಒಂದು ಗಟ್ಟಿ ಸ್ತ್ರೀ ಪಾತ್ರದ ರಚನೆ ಆಗಿಲ್ಲ ಎಂದೇ ಹೇಳಬೇಕು. ತೇಜಸ್ವಿಯವರಿಗೆ ನಿಸ್ಸಂಶಯವಾಗಿ ಮಹಿಳಾಪರ ಒಲವು ಹಾಗು ಧೋರಣೆಗಳಿತ್ತು ಎನ್ನುವುದು ಅವರ ಒಟ್ಟಾರೆ ಸಾಹಿತ್ಯವನ್ನು ಓದುವಾಗ ಅರಿವಿಗೆ ಬರುತ್ತವೆ. ಆದರೆ ಅದಕ್ಕೆ ಪೂರಕವಾದ ಪಾತ್ರಗಳು ಅವರಿಂದ ಸೃಷ್ಟಿ ಆಗಿಲ್ಲ. ಕಿರಗೂರಿನ ಗಯ್ಯಾಳಿಯಲ್ಲೂ ಸಹ ದಾನಮ್ಮನ ಸಿಟ್ಟು ಅವಳ ವ್ಯಕ್ತಿತ್ವದಲ್ಲಿ ಎಲ್ಲೋ ತಿಂಗಳಿಗೊಮ್ಮೆ ಬಂದು ಹೋಗುವ ಗುಣ ಅಥವಾ ಗುಣ ವಿಕಾರವೇ ಹೊರತು ಅದು ಅವಳ ಸ್ಥಾಯೀ ಗುಣವಲ್ಲ. ಅಲ್ಲಿ ಆಗುವ ಹೆಣ್ಣುಗಳ ಬಂಡಾಯ ಕ್ರಿಯೆಗೆ ಪ್ರತಿಕ್ರಿಯೆಯಾಗಿ, ಆ ಕ್ಷಣದ ಮಿಂಚಾಗಿ ಬರುತ್ತದೆಯೇ ಹೊರತು ಒಂದು ಕ್ರೋಢೀಕೃತ ಸಿದ್ಧತೆಯ ಪ್ರತಿರೋಧವಾಗಿ ಅಲ್ಲ. ಈ ನೆಲೆಯನ್ನಿಟ್ಟುಕೊಂಡು ನಾನು ನೋಡಹೋದಾಗ ನನ್ನ ನೆನಪಿಗೆ ಬಂದಿದ್ದು ತೇಜಸ್ವಿಯವರ ಸಮಕಾಲೀನರೂ, ಅವರ ಹಾಗೆ ಸಮಾಜವಾದಿ ತಾತ್ವಿಕ ಹಿನ್ನಲೆಯಿಂದ ಬಂದ ಲಂಕೇಶರು.
ಹಾಗೆ ನೋಡಲು ಹೋದರೆ ಲಂಕೇಶರು ಸೃಷ್ಟಿಸಿದ ’ಅಕ್ಕ’ ಕಥೆ ಆಗಲಿ, ಕನ್ನಡಕ್ಕೇ ಅದ್ವಿತೀಯವಾದ ’ಅವ್ವ’ ಕವನವಾಗಲಿ, ’ಮುಸ್ಸಂಜೆ ಕಥಾಪ್ರಸಂಗ’ದ ಬಡ್ಡಿಕಾಸು ರಂಗವ್ವನಾಗಲಿ ಅತ್ಯಂತ ಗಟ್ಟಿಯಾದ ಪಾತ್ರಗಳು. ಆ ರೀತಿಯ ಪಾತ್ರಗಳು ತೇಜಸ್ವಿಯವರ ಕಥೆಗಳಲ್ಲಿ ಬಂದಿಲ್ಲ ಎಂದೇ ಹೇಳಬೇಕಾಗುತ್ತದೆ. ಇಲ್ಲಿ ಕೆಲವು ಉದಾಹರಣೆಗಳನ್ನು ಗಮನಿಸೋಣ.

’ಮೇದರಹಳ್ಳಿಯ ಅವಸಾನ’ದಲ್ಲಿ, ’ನಿಗೂಢ ಮನುಷ್ಯರು’ ವಿನಲ್ಲಿ ಸ್ತ್ರೀ ಪಾತ್ರ ಕೇವಲ ಪ್ರಸ್ತಾಪ ಮಾತ್ರ. ಮೇದರಹಳ್ಳಿಯ ಅವಸಾನದಲ್ಲಿ ಪ್ಲಾಸ್ಟಿಕ್ ಬಂದು ಹೇಗೆ ಒಂದು ಹಳ್ಳಿಯ ಅರ್ಥವ್ಯವಸ್ಥೆ, ಆ ಮೂಲಕ ಒಂದು ಸಂಸ್ಕೃತಿಯೇ ಕುಸಿದು ಹೋಯಿತು, ಮನೆ ಹೆಂಗಸರು ವ್ಯಭಿಚಾರಕ್ಕಿಳಿಯಬೇಕಾಯಿತು ಎನ್ನುವುದರ ಒಂದು ಪ್ರಸ್ತಾಪ ಮಾತ್ರ ಬಂದಿದೆ. ಅಲ್ಲೆಲ್ಲೂ ಅವಸಾನಕ್ಕೊಳಗಾದ ಊರಿನ ಹೆಂಗಸರ ನಿಟ್ಟುಸಿರು ದಾಖಲೆ ಆಗಿಲ್ಲ. ಇನ್ನು ನಿಗೂಢ ಮನುಷ್ಯರುವಿನಲ್ಲಿ ಶಾರಿಯ ನಾಲಿಗೆ ಇಲ್ಲದಿರುವುದು ಕಥೆಯ ಮಟ್ಟಿಗೆ ಹಾಗು ಪಾತ್ರದ ಮಟ್ಟಿಗೂ ಸತ್ಯ. ಅವಳ ಜಗತ್ತು ಅನಾವರಣಗೊಳ್ಳುವುದೇ ಇಲ್ಲ. ಅವಳು ಕೇವಲ ಒಂದು ನೆರಳು ಮಾತ್ರ. ಕಥೆ ನಡೆಯುವಾಗಲೂ ಮತ್ತು ಕಥೆ ಮುಗಿದಾಗಲೂ.
’ಅವನತಿ’ ಕಥೆಯ ಮಟ್ಟಿಗೆ ಹೇಳುವುದಾದರೆ ಇಲ್ಲಿ ದುರಂತ ಸೂರಾಚಾರಿಯದೂ ಹೌದು, ಗೌರಿಯದೂ ಹೌದು. ಸ್ಪಂದಿಸಲು ತಿಳಿಯದ ಒಂದು ಕುರುಡು ಊರು ಹೇಗೆ ಸೂರಾಚಾರಿಯ ಕಲೆಯನ್ನು ಅವಲಕ್ಷಣದ ಮಾರಿಗೊಂಬೆ ಮಾಡಲು ಸೀಮಿತಗೊಳಿಸುತ್ತದೆಯೋ ಹಾಗೆ ಸೂರಾಚಾರಿ ಗೌರಿಯ ಸೌಂದರ್ಯವನ್ನು, ಅವಳಲ್ಲಿನ ಜೀವಸೆಲೆಯನ್ನು ಅರಿಶಿನ ಕೊಂಬಿನ ಮೂಲಕ ಸುಟ್ಟುಹಾಕಲು ನೋಡುತ್ತಾನೆ. ಇಲ್ಲಿ ಆಕೆಗೆ ಹುಟ್ಟಿದ ಮಕ್ಕಳೆಲ್ಲಾ ಸ್ವಲ್ಪ ದಿನಗಳಲ್ಲೇ ಸತ್ತಿದ್ದಾರೆ. ಅದಕ್ಕೆ ಗಂಡನಿಗೇನಾದರೂ ಒಳರೋಗವಿರಬಹುದೇ ಎಂದು ಜನ ಮಾತನಾಡಿಕೊಳ್ಳುವುದು ಅವನಲ್ಲಿ ಒಂದು ಅಸಹನೆ ಮೂಡಿಸಿದೆ. ಹಾಗಾಗಿ ಸೂರಾಚಾರಿ ಅದನ್ನು ’ಮೊಲೆರೋಗ’ ಅಂದ ತಕ್ಷಣ ಅದನ್ನು ತಕ್ಷಣ ಒಪ್ಪಿಕೊಂಡು ಬಿಡುತ್ತಾನೆ. ಕಣ್ಣ ಕುರುಡುತನವನ್ನು ಕಳೆಯುವ ಗೌರಿಯ ಮೊಲೆಯ ನರವನ್ನು ಸುಡುವ ಮೂಲಕ ಅವರು ತಮ್ಮ ಕಣ್ಣುಗಳನ್ನು ತಾವೇ ನಾಶಪಡಿಸಿಕೊಳ್ಳುತ್ತಾರೆ. ಅಪ್ರತಿಮ ಸುಂದರಿ ಗೌರಿಯ ಮೊಲೆಯ ಮೇಲಿನ ಆ ನರವನ್ನು ಸುಡುವ ವಿಷಯವನ್ನು ಈ ಗಂಡಸರು ಎಷ್ಟು ಲೋಕಾಭಿರಾಮವಾಗಿ ಮಾತನಾಡುತ್ತಾ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರೆ ಅಲ್ಲಿ ಗೌರಿ ಯಾರಿಗೂ ಮುಖ್ಯವಾಗುವುದೇ ಇಲ್ಲ. ತನ್ನ ಸೌಂದರ್ಯದ ಹೊರತಾಗಿ ಗೌರಿ ಓದುಗರಿಗೆ ಏನೂ ಆಗುವುದೇ ಇಲ್ಲ. ಇಲ್ಲಿ ಗೌರಿ ಊರು ಕಂಡರಿಯದ ಸುಂದರಿ, ಆ ಸೌಂದರ್ಯ ಗಂಡನಲ್ಲಿ ಮೂಡಿಸುವ ಒಂದು ಅಸಹನೆ, ಅದರ ಆಯಾಮಗಳು ನಮಗೆ ಇಲ್ಲಿ ಕಾಣುವುದಿಲ್ಲ, ಒಂದಾದ ಮೇಲೊಂದರಂತೆ ಮಕ್ಕಳನ್ನು ಕಳೆದುಕೊಂಡ ಗೌರಿಯ ಬದುಕಿನ ಪದರಗಳೂ ಸಹ ನಮಗೆ ಅಪರಿಚಿತವೇ.
ಇನ್ನು ಕರ್ವಾಲೋ ಕಾದಂಬರಿಗೆ ಬಂದರೆ, ಇಲ್ಲಿ ಬರುವ ಪಾತ್ರಗಳು ನಿರೂಪಕನ ಹೆಂಡತಿ, ಕರಿಯಪ್ಪನ ಹೆಂಡತಿ, ಯಂಗ್ಟನ ಹೆಂಡತಿ ಮತ್ತು ಮಂದಣ್ಣನ ಹೆಂಡತಿ. ಕರಿಯಪ್ಪನ ಹೆಂಡತಿ ಪಾಪ, ಗಂಡನ ಚಾಳಿಗೆ ತಾತ್ವಿಕ ಕಾರಣಗಳನ್ನು ಸಮಜಾಯಿಶಿ ಕೊಡುತ್ತಾಳೆ. ಮಂದಣ್ಣನ ಹೆಂಡತಿ ರಾಮಿ ಮತ್ತು ಯಂಗ್ಟನ ಹೆಂಡತಿ ನಮಗೆ ಪರಿಚಯ ಆಗುವುದು ಕೇವಲ ಅವರ ದೈಹಿಕ ರೂಪುರೇಶೆಗಳ ಮೂಲಕ ಮಾತ್ರ. ನಿರೂಪಕನ ಹೆಂಡತಿ ಇಲ್ಲಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವೀದರೆ, ಆದರೆ ಇಲ್ಲಿ ಅವಳ ವ್ಯಕ್ತಿತ್ವ ಸಹ ಚರ್ಚೆಯಲ್ಲಿ ’ಕೇಳುಗ’ಳಾಗಿ ಉಳಿಯುತ್ತದೆಯೇ ಹೊರತು, ಒಂದು ಚರ್ಚೆಯಲ್ಲಿ ಭಾಗವಹಿಸುವವಳಾಗಿ ಅಲ್ಲ.
ಯಾಕಿರಬಹುದು ಅಂತ ನಾನು ಯೋಚಿಸುತ್ತಿದ್ದೆ. ಬಹುಷಃ ಒಂದು ಕಾರಣ ಅಂದರೆ ತೇಜಸ್ವಿಗಿದ್ದ ಎಲ್ಲಾ ಹವ್ಯಾಸಗಳೂ ಇಲ್ಲ ಒಂಟಿಯಾಗಿ ಮಾಡುವಂತವು ಅಥವಾ ಗಂಡಸರ ಜೊತೆ ಮಾಡಿದ ಅಲೆದಾಟ, ಚಳುವಳಿಗಳಂತವು. ಅವರ ಫೋಟೋಗ್ರಾಫಿಯಲ್ಲಿ, ಮೀನು ಹಿಡಿಯುವುದರಲ್ಲಿ, ಕಂಪ್ಯೂಟರನ್ನು ಮಣಿಸುವುದರಲ್ಲಿ, ಹಕ್ಕಿಗಳನ್ನು ಕಾಯುವುದರಲ್ಲಿ, ಚಿತ್ರ ಬಿಡಿಸುವುದರಲ್ಲಿ, ಸಂಗೀತದಲ್ಲಿ ಅವರಿಗೆ ಅವರೇ ಸಂಗಾತಿ. ಮಿಕ್ಕಂತೆ ರೈತ ಚಳುವಳಿ, ಪರಿಸರ ಚಳುವಳಿ, ರಾಜಕೀಯ ಚಳುವಳಿಗಳಲ್ಲಿ ತೇಜಸ್ವಿಗೆ ಬಹುಶಃ ಯಾವುದೇ ಗಟ್ಟಿ ವ್ಯಕ್ತಿತ್ವದ ಹೆಣ್ಣು ಸಂಪರ್ಕಕ್ಕೆ ಬರದೆಯೇ ಇರಬಹುದಾ ಅಂತ ಯೋಚಿಸಿದೆ. ಹಾಗೆ ನೋಡಿದರೆ ರಾಜೇಶ್ವರಿಯವರು ಆ ಕಾಲಕ್ಕೇ ಮೈಸೂರು ವಿಶ್ವ ವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಆದರೆ ಅವರ ’ನನ್ನ ತೇಜಸ್ವಿ’ ಓದಿದಾಗ ಕಾಣುವುದು ತೇಜಸ್ವಿ ಮಾತ್ರ, ಎಲ್ಲೂ ರಾಜೇಶ್ವರಿ ಕಾಣುವುದೇ ಇಲ್ಲ. ಅಂದರೆ ಎಂದೂ ತನ್ನನ್ನು ತಾನು ಪ್ರತ್ಯೇಕ ವ್ಯಕ್ತಿಯಾಗಿ ರಾಜೇಶ್ವರಿ ಅವರು ಗುರುತಿಸಿಕೊಳ್ಳದೇ ಇರುವುದು ತೇಜಸ್ವಿಯವರ ನೋಟದ ಮೇಲೂ ಪ್ರಭಾವ ಬೀರಿತ್ತಾ?
ಒಂದು ಸಲ ಶಾಂತವೇರಿ ಗೋಪಾಲ ಗೌಡರು ರಾಜೇಶ್ವರಿಯವರನ್ನು ’ನೀವು ಬರೀತೀರಾ’ ಅಂತ ಕೇಳಿದಾಗ ತೇಜಸ್ವಿ ನಕ್ಕು, ’ಅವಳೇನು ಬರೀತಾಳೆ, ಮನೆ ಸಾಮಾನಿನ ಚೀಟಿ ಬರೆಯಬಹುದು, ಇಲ್ಲಾ ನನಗೆ ಸೋಡಾಚೀಟಿ ಬರೆಯಬಹುದು’ ಅಂತ ನಕ್ಕಿದ್ದರಂತೆ. ರಾಜೇಶ್ವರಿ ಸಹ ಯಾವುದೇ ಕೊಂಕಿಲ್ಲದೆ ಅದನ್ನು ಹೇಳಿಕೊಂಡು ನಗುತ್ತಾರೆ. ಆದರೆ ಅದನ್ನು ಓದುವಾಗ ಎಲ್ಲೋ ನನಗೆ ಮನಸ್ಸು ಹಿಂಡಿದ್ದು ಹೌದು. ಅಫ್ಕೋರ್ಸ್ ಆಮೇಲೆ ರಾಜೇಶ್ವರಿ ’ನನ್ನ ತೇಜಸ್ವಿ’ ಬರೆದು ಅದಕ್ಕೆ ಉತ್ತರಿಸಿದರು, ಆ ಮಾತು ಬೇರೆ.
ಇರಲಿ ಈ ಎಲ್ಲಾ ಕಾರಣಗಳೂ ಅಥವಾ ಇದಕ್ಕೂ ಮೀರಿ ಏನಾದರೂ ಕಾರಣಗಳಿರಬಹುದಾ ಎಂದು ಯೋಚಿಸುತ್ತಾ ಇದ್ದೇನೆ.
ತೇಜಸ್ವಿಯವರ ಪ್ಯಾರ, ಮಂದಣ್ಣ, ಕರ್ವಾಲೋ ಓದುವಾಗ ತೇಜಸ್ವಿಯವರು ಹಾಗೆಯೇ ಅಂಥಾದ್ದೇ ಒಂದು ಸ್ತ್ರೀ ಪಾತ್ರ ಸೃಷ್ಟಿಸಿರುತ್ತಿದ್ದರೆ ಅನ್ನುವ ಬಯಕೆ ಮೂಡುವುದಂತೂ ಹೌದು. ’ಕಾಣ್ತೈತೆ ಆದರೆ ಕಾಣಕ್ಕಿಲ್ಲಾ’ ಮೂಲಕ ಪ್ಯಾರನನ್ನು ಅಜರಾಮರಗೊಳಿಸಿದಂತೆ ತೇಜಸ್ವಿಯ ಯಾವ ಹೆಣ್ಣು ಪಾತ್ರಗಳೂ ಕಡೆದ ಶಿಲ್ಪವಾಗಿ ನಿಲ್ಲುವುದೇ ಇಲ್ಲ.
ರಾಜೇಶ್ವರಿ ಬರೆದ ’ನನ್ನ ತೇಜಸ್ವಿ’ ಬಗ್ಗೆ ಬಾಗೇಶ್ರೀ ಅವರು ಬರೆದ ಲೇಖನಕ್ಕೆ ಪ್ರತಿಕ್ರಯಿಸಿದ ಲಲಿತಾ ಸಿದ್ಧಬಸವಯ್ಯ ಅವರು ’ಸತಿಗೆ ಶಿವ ಅರ್ಧದೇಹ ಕೊಟ್ಟನಂತೆ . ಇಲ್ಲಿ ನಿಜವಾಗಿ ಕೊಟ್ಟದ್ದು ರಾಜೇಶ್ವರಿ! ರಾಜೇಶ್ವರಿ ,ತೇಜಸ್ವಿಯನ್ನು ತನ್ನರ್ಧದಲ್ಲಿ ಕರಗಿಸಿಕೊಂಡು ಬಿಟ್ಟು ಅರ್ಧಪುರುಷೇಶ್ವರ ಆಗಿಬಿಟ್ಟಿದ್ದಾರೆ. ಅವರು ತನ್ನನ್ನು ಕೊಟ್ಟುಕೊಂಡು ತೇಜಸ್ವಿಯನ್ನು ಪಡೆದರು ಮತ್ತು ಭರಿಸಿದರು.ಪಡೆದು ಭರಿಸಿ ಅದರಲ್ಲೆ ಆನಂದಿಸಿದರು. ಬಹುಶಹ ತೇಜಸ್ವಿಗೆ ಈ ಭಾಗ್ಯವಿಲ್ಲ……., ನಾನು ಸನಾಥ ನೀನೇ ಅನಾಥ “…– ಈ ಮಾತು ನೆನಪಾಯಿತು.

‍ಲೇಖಕರು G

September 19, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. Anil Talikoti

    ತೇಜಸ್ವಿ ಕಥೆಗಳಲ್ಲಿ ಗಟ್ಟಿ ಸ್ತ್ರೀ ಪಾತ್ರಗಳೇಕಿಲ್ಲ ಎಂಬ ಪ್ರಶ್ನೆಗೆ ಅತ್ಯಂತ ಯುಕ್ತವಾದ ಮಾತುಗಳಿವು.
    ~ಅನಿಲ

    ಪ್ರತಿಕ್ರಿಯೆ
  2. Rangaswamy mookanahalli

    ನಿಮ್ಮ ಬರಹವು ಅಷ್ಟೆ ತಿಳಿ ಸಾರು ಅನ್ನ ,ಪಲ್ಯ , ರೊಟ್ಟಿಯೇ , ತೇಜಸ್ವಿ ಅವರನ್ನ ಬಿನ್ನವಾಗಿ ನೋಡಿ, ವಿಮರ್ಶಿಸಿದ್ದಿರಿ. ಇಷ್ಟ ಆಯ್ತು.

    ಪ್ರತಿಕ್ರಿಯೆ
  3. ಸತ್ಯನಾರಾಯಣ

    ಲೇಖನ ಚೆನ್ನಾಗಿದೆ. ಅಭಿನಂದನೆಗಳು.
    ನಿಮ್ಮ ಲೇಖನದಲ್ಲಿ ಮಿಸ್ಸಾಗಿರುವ ಎರಡು ಪಾತ್ರಗಂಳೆಂದರೆ ಜುಗಾರಿ ಕ್ರಾಸಿನ ಗೌರಿ ಮತ್ತು ಚಿದಂಬರ ರಹಸ್ಯದ ಜಯಂತಿ. ಆ ಎರಡೂ ಪಾತ್ರಗಳು ಪ್ರಬುದ್ಧವಾದವುಗಳು ಮತ್ತು ಸ್ವತಂತ್ರ್ಯ ಮನೋಭಾವದವುಗಳು ಎಂಬುದನ್ನು ಗಮನಿಸಬೇಕು.
    ಇನ್ನೊಂದು ಅವನತಯಿ ಕಥೆಯ ಗೌರಿ ಪಾತ್ರದ ಬಗ್ಗೆ ಬರೆದಿದ್ದೀರಿ. ಆ ಕಥೆ ಒಂದು ಕುಗ್ರಾಮದಲ್ಲಿ ನಡೆಯುವಂತದ್ದು. ಕುಗ್ರಾಮದ ಜನರ ನಡವಳಿಕೆಗೆ ಸಹಜವಾಗಿಯೇ ಅಲ್ಲಿನ ಪಾತ್ರಗಳು ವರ್ತಿಸುತ್ತವೆ ಎಂಬುದಷ್ಟೇ ಮುಖ್ಯ. ಆದರೆ ಆ ಪಾತ್ರಗಳ ವರ್ತನೆ ಸರಿ ತಪ್ಪು ಎಂಬ ತೀರ್ಮಾನ ಓದುಗನಾಗುವುದು ಎಷ್ಟು ಸರಿ? ಬಯಕೆಯಾಗಬಹುದು ಅಷ್ಟೆ.
    ಕರ್ವಾಲೋದ ನಿರೂಪಕನ ಹೆಂಡತಿಯ ಪಾತ್ರ ಹಾಗೂ ಜುಗಾರಿ ಕ್ರಾಸಿನ ಗೌರಿ ಪಾತ್ರದಲ್ಲಿ ರಾಜೇಶ್ವರಿಯವರ ಬದುಕಿನ ಛಾಯೆಯನನ್ಉ ಗುರುತಿಸಬಹುದು. ಆದರೆ, ಕೃತಿಯೊಂದರ ಪಾತ್ರಗಳ ಜೊತೆಯಲ್ಲಿ ಕೃತಿಕಾರನ ಕುಟುಂಬದವರನ್ನೆಲ್ಲಾ ಹುಡುಕುತ್ತಾ ಹೋಗುವುದು ಎಷ್ಟು ಸರಿ? ಎಂಬ ಪ್ರಶ್ನೆಯೂ ಏಳುತ್ತದೆ ಅಲ್ಲವೆ?

    ಪ್ರತಿಕ್ರಿಯೆ
  4. Somashekhar

    Nice, difference between Tejaswi and Lankesh is probably from the way they lived their life, right ?

    ಪ್ರತಿಕ್ರಿಯೆ
  5. Shivu K

    ಸಂಧ್ಯಾ ಮೇಡಮ್, ತೇಜಸ್ವಿಯವರ ಪುಸ್ತಕಗಳ ನೀವು ಅರ್ಥೈಸಿಕೊಂಡಿರುವ ರೀತಿ ಇಷ್ಟವಾಯ್ತು. ನಿತ್ಯವೂ ತಿಳಿಸಾರು ಅನ್ನ ಇತ್ಯಾದಿ ಸರಳ ಊಟವನ್ನು ಮಾಡಿದರೂ ಕೂಡ ರಾತ್ರಿ, ಮರುದಿನ ಹೀಗೆ ನಿತ್ಯವೂ ಅದೇ ಸರಳ ಊಟ ಇಷ್ಟವಾಗುವಂತೆ ತೇಜಸ್ವಿಯವರ ಎಲ್ಲಾ ಪುಸ್ತಕಗಳು ಮತ್ತೆ ಇಷ್ಟವಾಗುತ್ತವೆ ಮತ್ತು ಓದಿಸಿಕೊಳ್ಳುತ್ತವೆ.

    ಪ್ರತಿಕ್ರಿಯೆ
  6. md

    madam,
    the story lines are mismatching. Actually the stories got swapped
    ರಫಿ ಮತ್ತು ಜಯಂತಿಯ ಪ್ರೇಮ & ಹೊಳೆಯುವ ರತ್ನ – ಚಿದಂಬರ ರಹಸ್ಯ
    ಏಲಕ್ಕಿ ಘಮದ ನಡುವೆಯೇ ಇರುವ ರಾಜಕೀಯ – ಜುಗಾರಿ ಕ್ರಾಸ್

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      md ನಮಸ್ತೆ. ಯಾಕೋ ಸ್ವಲ್ಪ ಗಲಿಬಿಲಿ ಮಾಡಿಕೊಂಡಹಾಗಿದೆ, ರಫಿ ಮತ್ತು ಜಯಂತಿಯ ಪ್ರೀತಿ, ಕೆಸರೂರಿನ ಏಲಕ್ಕಿ ರಾಜಕೀಯ ಚಿದಂಬರ ರಹಸ್ಯ ದಲ್ಲಿ ಬರುತ್ತದೆ . ಜುಗಾರಿ ಕ್ರಾಸ್ ಕಥೆಯಲ್ಲಿ ನೀಲಾಂಜನೆಯ ಹೊಳೆಯುವ ರತ್ನ ಬರುತ್ತದೆ. ಮತ್ತೊಮ್ಮೆ ಗಮನಿಸಿ.

      ಪ್ರತಿಕ್ರಿಯೆ
  7. ಸತ್ಯನಾರಾಯಣ

    ಮೇಡಂ
    ತೇಜಸ್ವಿಯವರ ಸ್ತ್ರೀಸಂವೇದನೆಯನ್ನು ಕುರಿತಂತೆ ಬರೆದಿರುವ ನಿಮ್ಮ ಲೇಖನಕ್ಕೆ ಪೂರಕವಾಗಿ, ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ತೇಜಸ್ವಿ ನೀಡಿದ ಉತ್ತರವನ್ನು ಇಲ್ಲಿ ಕೊಡುತ್ತಿದ್ದೇನೆ. ಬಹುಶಃ ಇದು ನಿಮ್ಮ ಕೆಲವು ಅನುಮಾನಗಳಿಗೆ ಗೊಂದಲಗಳಿಗೆ ಉತ್ತರಿಸಬಲ್ಲುದು ಎಂಬ ನಂಬಿಕೆ ನನ್ನದು. ಈ ನೆಪದಲ್ಲಿ ತೇಜಸ್ವಿಯವರ ಈ ಮಾತುಗಳನ್ನು ಮತ್ತಷ್ಟು ಜನರು ಓದಲಿ ಎಂಬುದು ನನ್ನ ಆಸೆ!
    ಪ್ರಶ್ನೆ: ನಿಮ್ಮ ಕಾದಂಬರಿಗಳಲ್ಲಿ ಪ್ರೇಮ ಸನ್ನಿವೇಶಗಳು ಏಕೆ ಇರುವುದಿಲ್ಲ?
    ಉತ್ತರ: “ಅದಕ್ಕೆ ಕಾರಣ… ಐ ಕಾಂಟ್ ಲೈ. ಮೋಷ್ಟ್ ಆಫ್ ಮೈ ನಾಲೆಡ್ಜ್ ಔಟ್ ಡೋರಿನಲ್ಲಿ ನಡೆಯುತ್ತವೆ. ಮನೆಯೊಳಗೆ ನಡೆಯುವುದಿಲ್ಲ.! ವೇರ್ ಇಟ್ ಈಸ್ ವೆರಿ ಡಿಫಿಕಲ್ಟ್ ಫಾರ್ ವುಮನ್ ಟು ಪಾರ್ಟಿಸಿಪೇಟ್! ಎರಡನೆಯದು, ಅಲ್ಲಿ ಬರುವ ಹೆಂಗಸರು ಎಲ್ಲಾ ಅಡಲ್ಟ್ಸ್. ಆ ಯಂಗ್ಟ, ಅವನ ಹೆಂಡತಿ, ಜುಗಾರಿ ಕ್ರಾಸಿನಲ್ಲಿ ಬರುವ ಹೆಂಗ್ಸು ಅವರೆಲ್ಲಾ ಅಡಲ್ಟ್ಸ್. ಸೀ ದಟ್ ಈಸ್ ದ ಮೇನ್ ಸ್ಟ್ರೀಮ್ ಆಫ್ ಕಾಂಟೆಂಪರರಿ ಸೊಸೈಟಿ. ‘ಅಯ್ಯೋ ನಾನವಳಿಗೆ ಹೇಳಿದರೆ, ನಿನ್ನೆ ಬಿಟ್ಟು ಹೋಗ್ಬಿಡ್ತಿನಿ ಅಂದ್ಬಿಡ್ತಾಳೆ, ಅದಕ್ಕೆ ನಾನು ಹಾಳಾಗೋಗ್ಲಿ ಅಂತ ಸುಮ್ನಿದ್ಬಿಟ್ಟಿದ್ದೀನಿ’ ಅಂತ ಯಂಗ್ಟ್ ಹೇಳ್ತಾನೆ. ಕಾರಂತರ ಸಾಹಿತ್ಯದಲ್ಲಿ ಬರುವ ಹೆಂಗಸರ ಆಟಿಟ್ಯೂಡ್, ಕುವೆಂಪು ಸಾಹೊತ್ಯದಲ್ಲಿ ಬರುವ ಹೆಂಗಸರ ಆಟಿಟ್ಯೂಡ್…. ಅವರುಗಳ ವ್ಯಕ್ತಿತ್ವಕ್ಕೂ ಹಾಗೂ ನನ್ನ ಸಾಹಿತ್ಯದಲ್ಲಿ ಬರುವ ಹೆಂಗಸರ ವ್ಯಕ್ತಿತ್ವಕ್ಕೂ ಡಿಫರೆನ್ಸ್ ನೋಡುತ್ತಾ ಬನ್ನಿ. ಕುವೆಂಪು ಅವರಲ್ಲಿ ತಾಯಿಯಾಗಿ ಬರುತ್ತಾಳೆ; ಕಾರಂತರಲ್ಲಿ ಅವಳು ಆ ಮೂಕಜ್ಜಿಯ ಕನಸು ಅದರಲ್ಲೆಲ್ಲಾ ಒಂದು ವಿಸ್‍ಡಮ್ ಆಗಿ ಬರುತ್ತಾಳೆ. ನನ್ನಲ್ಲಿ ಪೂರಾ ರೆಬಲ್ ಆಗಿಯೇ ಬರುತ್ತಾಳೆ.”

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಸರ್ ನಮಸ್ತೆ,
      ಮೊದಲನೆಯದಾಗಿ ನನ್ನ ಬರಹದ ಧ್ವನಿಯ ಬಗ್ಗೆ ನೀವು ಗಮನಿಸಬೇಕಾದು, ಇಲ್ಲಿ ನಾನು ನನ್ನ ಅಬ್ಸರ್ವೇಶನ್ ಅನ್ನು ಬರೆದಿದ್ದೇನೆಯೇ ಹೊರತು, ಅದನ್ನು ತೇಜಸ್ವಿಯವರ ಬರಹದ ಒಂದು ದೋಷ ಎಂದು ಎಲ್ಲೂ ಹೇಳಿಲ್ಲ. ಹಾಗಾಗಿ ಇಲ್ಲಿ ತೇಜಸ್ವಿಗೆ ಯಾರದೇ ಸಮರ್ಥನೆಯ ಅಗತ್ಯ ಇಲ್ಲ. ಇನ್ನು ಸಂವಾದದಲ್ಲಿ ತೇಜಸ್ವಿ ಉತ್ತರಿಸಿರೋದು ನೀವೇ ಹೇಳಿದ ಹಾಗೆ ಅವರ ಕಾದಂಬರಿಗಳಲ್ಲಿ ಪ್ರೇಮ ಸನ್ನಿವೇಶಗಳು ಏಕೆ ಇಲ್ಲ ಎನ್ನುವುದರ ಬಗ್ಗೆ, ಹಾಗಾಗಿ ಅದು ಇಲ್ಲಿ ಹೇಗೆ ಪ್ರಸ್ತುತ ಆಗುತ್ತದೆ? ಮನೆಯ ಹೊರಗಡೆ ನಡೆಯುವ ಘಟನಾವಳಿಗಳಲ್ಲಿ ಹೆಂಗಸರು ಭಾಗವಹಿಸುವುದು ಕಷ್ಟ ಅದಕ್ಕಾಗಿ ಅವರು ಕಾದಂಬರಿಗಳಲ್ಲಿ ಪ್ರೇಮ ಸನ್ನಿವೇಶಗಳನ್ನು ಬರೆಯುವುದಿಲ್ಲ ಎಂದರೆ ಅದನ್ನು ಅಲ್ಲ ಎನ್ನಲು ನಾವ್ಯಾರು? ಆದರೆ ಅದೇ ಸಮಯದಲ್ಲಿ, ಅದೇ ಔಟ್ ಡೋರ್ ಸನ್ನಿವೇಶಗಳಲ್ಲಿ ಕುವೆಂಪು ಅಧ್ಬುತ ಪ್ರೇಮವನ್ನು ಕಟ್ಟಿಕೊಟ್ಟಿದ್ದಾರೆ ಅಲ್ಲವಾ?
      ಯಂಗ್ಟನ ಹೆಂಡ್ತಿ ಬಿಟ್ಟೋಗ್ತಾಳೆ ಅಂತ ಹೇಳೋದು ಹೆಂಡತಿ ಅಲ್ಲ, ಯಂಗ್ಟ. ಇಲ್ಲಿ ಯಂಗ್ಟನ ಹೆಂಡತಿ ಆ ಅರಣ್ಯ ಸಿಬ್ಬಂದಿಯ ಬಳಿಗೆ ಹೋಗುವುದು ಅವರ ಆರ್ಥಿಕ ಪರಿಸ್ಥಿತಿಯ ಕಾರಣ, ಪರಿಣಾಮವೇ ಹೊರತು ಅದು ಆಕೆಯ ರೆಬೆಲ್ ಗುಣ ಹೇಗಾಗುತ್ತೆ? ಆದರೂ ಆಕೆಯನ್ನು ತೇಜಸ್ವಿ ಸೃಷ್ಟಿಸಿದ ಸ್ತ್ರೀ ಪಾತ್ರಗಳ ಪ್ರತಿನಿಧಿ ಎಂದು ಹೇಗೆ ಹೇಳೋದು?
      ಹಾಗಾಗಿ ತೇಜಸ್ವಿಯವರ ಉತ್ತರ ಹಾಗು ನನ್ನ ಬರಹದ ನಡುವೆ ಗೊಂದಲ ಹುಟ್ಟಿಸಿಕೊಳ್ಳುವುದು ಬೇಡ ಅನ್ನಿಸುತ್ತೆ.

      ಪ್ರತಿಕ್ರಿಯೆ
      • ಸತ್ಯನಾರಾಯಣ

        ನನಗನ್ನಿಸಿದ್ದನ್ನು ನಾನು ಹೇಳಿದರೆ, ಅದು ತೇಜಸ್ವಿಯವರ ಸಮರ್ಥನೆ ಹೇಗಾಗುತ್ತದೆ!? ಇದೊಂದು ಬಗೆಹರಿಯದ ಪ್ರಶ್ನೆ. ಇರಲಿ ಬಿಡಿ.
        ಮೇಡಂ, ಕುವೆಂಪು ಅವರ ‘ಕಾವ್ಯವಿಮರ್ಶೆಯಲ್ಲಿ ಪೂರ್ಣದೃಷ್ಟಿ’ ಎಂಬ ಲೇಖನ, ಕಲಾಕೃತಿಯೊಂದನ್ನು ಅಖಂಡದೃಷ್ಟಿಯಿಂದ ಪರಿಶೀಲಿಸುವುದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂಬುದು ನನ್ನ ಅಭಿಪ್ರಾಯ. ‘ಅಂಶದೃಷ್ಟಿಯಿಂದ ಮಾಡಿದ ಎಲ್ಲ ವ್ಯಾಖ್ಯಾನಗಳಿಗೂ ಪೂರ್ಣದೃಷ್ಟಿಯಲ್ಲಿ ಅಲ್ಪಸ್ವಲ್ಪವಾದರೂ ಸತ್ಯವಿರುತ್ತದೆ’ ಎನ್ನುವ ಹಾಗೆ ನಾನು ನಿಮ್ಮ ಲೇಖನದಲ್ಲಿ ನೀವು ಕಂಡುಕೊಂಡಿರುವ ಸತ್ಯಾಂಶಗಳನ್ನು ಅಲ್ಲಗಳೆದಿಲ್ಲ. ನಿಮ್ಮ ಲೇಖನಕ್ಕೆ ಪೂರಕವಾಗಿಯೇ ತೇಜಸ್ವಿಯವರ ಸಂದರ್ಶನದ ಮಾತುಗಳನ್ನು ನಿಮ್ಮ ಗಮನಕ್ಕೆ ತಂದೆ.
        ಈಗಲೂ ಇನ್ನೊಂದು ಮಾತನ್ನು ಇಲ್ಲಿ ದಾಖಲಿಸುತ್ತಿದ್ದೇನೆ. (ಹೀಗೆ ದಾಖಲಿಸುವುದೇ ತೇಜಸ್ವಿಯವರ ಸಮರ್ಥನೆ ಆಗುವುದಿಲ್ಲ ಎಂಬ ಧೈರ್ಯದಿಂದ)
        “ಸ್ತ್ರೀಯರ ಹೋರಾಟ – ಪರುಷರ ಹೋರಾಟ ಅವೆಲ್ಲಾ ನೀವೆಂತವೋ ಮಾಡಿಕೊಂಡಿರುವುದಷ್ಟೆ ಹೊರತು, ಸೀ… ಎಲ್ಲವೂ ವಿಶಿಷ್ಟವಾಗಿ ಅವರ ಸಮಸ್ಯೆ ಅಂತ ಅನ್ನಿಸುವುದೇ ಇಲ್ಲ. ಸ್ತ್ರಿಯರ ಸಮಸ್ಯೆಯೇನು? ಪರುಷರ ಸಮಸ್ಯೆಯೇನು? ಒಬ್ಬ ರೈಟರ್‌ಗೆ. ಇಟ್ ಈಸ್ ಎ ಹ್ಯೂಮನ್ ಸಿಚ್ಯುಏಷನ್; ನಾಟ್ ಎ ವುಮೆನ್ ಸಿಚ್ಯುಏಷನ್! ಹೌದು. ಈಗ ನೀವು ಕಿರಗೂರಿನ ಗಯ್ಯಾಳಿಗಳಲ್ಲಿ ನೋಡುತ್ತೀರಲ್ಲ. ಅದು ಹೀಗೇ ಒಟ್ಟಾಗಿ ನಡದುಕೊಂಡು ಹೋಗುತ್ತಾ ಇರುತ್ತದೆ. ಹೆಂಗಸರು ಗಂಡಸರು ಎಲ್ಲರೂ ಇರುತ್ತಾರೆ ಅದರಲ್ಲಿ. ಹೆಂಗಸರಿಗೆ ಇರೋ ಸಮಸ್ಯೆಗಳೆಲ್ಲಾ ಅವರಿಗೆ ಸಂಬಂಧಪಟ್ಟಿದ್ದು, ವಿಶಿಷ್ಟವಾದದ್ದು ಅಂತ ನನಗೆ ಇದುವರೆಗೆ ಅನ್ನಿಸಿಯೇ ಇಲ್ಲ. ನಾನು ಸ್ತ್ರೀವಾದಿ ಅನ್ನೋ ಅದಕ್ಕೆ ಇದಕ್ಕೆ ಬೆಲೆಯನ್ನೇ ಕೊಡೋದಿಲ್ಲ. ಒಟ್ಟಾರೆ ಹ್ಯೂಮನ್ ಪರ್‍ಸ್‌ಪೆಕ್ಟೀವ್‌ನಲ್ಲೇ ಅದನ್ನೂ ನೋಡಬೇಕು. ಈಗಾಗಲೇ ನಾವು ರಿಸರ್ವೇಷನ್ ಅದು ಇದು ಅಂತ ಹೇಳಿ, ಜಾತಿ ಮೇಲೆ ಕನ್ಸಿಡರೇಷನ್ ಕೊಡೋದು ಅಂತ ಎಲ್ಲಾ ಮಾಡಿದಿವಿ. ಪ್ಲಸ್ ಇವಾಗ ಇನ್ನೊಂದು ವುಮನ್ ಅಂತ ಕನ್ಸಿಡರೇಷನ್ ಕೊಡೋದು! ಈಕ್ವಾಲಿಟಿ ಬೇಕು ಅಂತ ಇದ್ದರೆ, ದೆ ಹ್ಯಾವ್ ಟು ಫೈಟ್ ಇಟ್ ಔಟ್! ಯಾರು ಯಾವತ್ತು ಕೊಡೋದಿಲ್ಲ ನಿಮಗೆ. ಅವರದ್ದೇ ಆದ ವಿಶಿಷ್ಟ ಸಮಸ್ಯೆ ಅಂತ ಹೇಳಿ, ಅಕ್ಸೆಪ್ಟ್ ಮಾಡಿಕೊಳ್ಳೊದಿಕ್ಕೆ ನಾನು ತಯಾರಿಲ್ಲ.”

        ಪ್ರತಿಕ್ರಿಯೆ
  8. lalithasiddabasavaiah

    ಸಂಧ್ಯಾ ಅವರ ಬರಹದಲ್ಲಿ ಗೊಂದಲಗಳು ಅನುಮಾನಗಳು ಏನೂ ಇಲ್ಲ. ಅತ್ಯಂತ ಸ್ಪಷ್ಟವಾಗಿ “ಕಡೆದ ಶಿಲ್ಪ”ದ ಸಾಮತಿ ಕೊಟ್ಟು ತೇಜಸ್ವೀ ಸ್ತ್ರೀ ಪಾತ್ರಗಳ ಕೊರತೆಯನ್ನು ಹೇಳಿದ್ದಾರೆ. ಇದಕ್ಕೆ ತೇಜಸ್ವಿಯವರೆ ಕೊಟ್ಟ ವಿವರಣೆಯೆ ಸಮಾಧಾನವನ್ನೂ ಕೊಡುತ್ತದೆ. ನಿಜ ಅವರ ಪಾತ್ರಗಳೆಲ್ಲ ಔಟ್ ಡೋರ್ ಸೃಷ್ಟಿಗಳು. ಅವರಿಗೆ ಕುಟುಂಬವೊಂದರ ಒಳಗಿನ ವ್ಯಾಪಾರಗಳನ್ನು ಕಟ್ಟಿಕೊಡುವುದರಲ್ಲಿ ಯಾವ ಆಸಕ್ತಿಯೂ ಇಲ್ಲ. ಹಾಗಾಗಿಯೆ ಅವರು ಸೃಷ್ಟಿಸುವ ಸ್ತ್ರೀಯರು ಪೇಟೆಯಲ್ಲಿ ಜಗಳಕ್ಕೆ ನಿಲ್ಲುವ,ಗಂಡನ ಕೊರಳಪಟ್ಟಿ ಹಿಡಿದು ದಬಾಯಿಸುವಷ್ಟಕ್ಕೆ ರೆಬೆಲ್ ಆಗಿ ಉಳಿಯುತ್ತಾರೆ.ರೆಬೆಲ್ ಎನ್ನುವುದನ್ನು ಅಷ್ಟಕ್ಕೆ ಸೀಮಿತಗೊಳಿಸಲಾಗದು. ಈ ರೆಬೆಲ್ನೆಸ್ ಕೂಡಾ ತೇಜಸ್ವಿಯವರ ವೈನೋದಿಕ ಶೈಲಿಯ ಪೂರಕ ಸಾಮಗ್ರಿಯಾಗಿ ಇರುತ್ತದೆಯೆ ಹೊರತು ಅದೇನು ಆ ಹೆಂಗಸಿನ ಜೀವಸೆಲೆ ಎಂಬಂತೆ ದಾಖಲಾಗುವುದಿಲ್ಲ. ಅದೇ ವೈನೋದಿಕ ಶೈಲಿಯಲ್ಲೆ ಅದ್ದಿ ತೆಗೆದ ಮಂದಣ್ಣ ನಮ್ಮ ಮನದಲ್ಲಿ ನಿಲ್ಲುತ್ತಾನೆಂದರೆ ಯಂಗ್ಟನಹೆಂಡತಿ ಏಕೆ ರಿಜಿಸ್ಟರ್ ಆಗುವುದಿಲ್ಲ? ಅದಕ್ಕೆ ಮತ್ತೆ ಅವರದ್ದೆ ಮಾತುಗಳಲ್ಲಿ ಸಕಾರಣ ಹೊಂದಿಸಿಕೊಳ್ಳಬೇಕು. ಅವರು ಮನೆಯಾಚಿನ ಜಗತ್ತನ್ನು ಕಾಣಬಲ್ಲರು ಮತ್ತು ಅಷ್ಟನ್ನು ಕಾಣುವುದೆ ಮತ್ತು ನನ್ನ ಓದುಗರಿಗೆ ಕಾಣಿಸುವುದೆ ನನ್ನತನ ಎಂದು ನಂಬಿದವರು. ಹಾಗಾಗಿಯೆ ಮನೆಮನೆಯ ತಪಸ್ವಿನಿಯನ್ನು ಕಾಣಲು ಅವರು ಕೈ ಹಾಕಿಯೆ ಇಲ್ಲ. ಇನ್ನೂ ನೋಡ ಹೋದರೆ ಅವರ ಅಣ್ಣನ ನೆನಪುಗಳೆಲ್ಲ ಮನೆಯೊಳಗಿನ ಕುವೆಂಪುವನ್ನು ಆಧರಿಸಿಯೆ ಇಲ್ಲ, ಬದಲಾಗಿ ತೇಜಸ್ವಿಯವರ ಮನೆಯಾಚೆಯ ಸಮಸ್ತ ಚಟುವಟಿಕೆಯಲ್ಲು ಅವರು ಅಪ್ಪನನ್ನು ನಮಗೆ ಕಾಣಿಸುವ ಯತ್ನವನ್ನು ಮಾಡುತ್ತಾರೆ. ಆ ಶ್ಯಾಮಣ್ಣ ಅದೇನು ಪುಣ್ಯ ಮಾಡಿದ್ದರೊ ತೇಜಸ್ವಿಯ ಔಟ್ ಡೋರ್ ಕಾರ್ಯಾಚರಣೆಯ ಲೀಡರ್ ಆದ ಅವರ ಮೂಲಕ ಕುವೆಂಪುವನ್ನು ಕಂಡಷ್ಟು ಸ್ವತಹ ಹೇಮಾವತಿಯವರ ಮೂಲಕ ತೇಜಸ್ವಿ ಕಾಣಲಾರರು. ಈ ಅಣ್ಣನ ನೆನಪು, ಮಗಳು ಕಂಡ ಕುವೆಂಪು, ಮತ್ತು ನನ್ನ ತೇಜಸ್ವಿ ಮೂರನ್ನು ಒಟ್ಟಿಗೆ ಓದಿ, ಅಲ್ಲಿ ಹೆಂಗಸರಿಬ್ಬರು ಕಟ್ಟಿಕೊಡುವ ಕುವೆಂಪುವಿಗೂ ಈ ನೆನಪಿನ ಅಣ್ಣನ ಕಟ್ಟಾಣಿಕೆಗೂ ಅದೆಷ್ಟು ವೈದೃಶ್ಯವಿದೆಯೆಂಬುದನ್ನು ಯಾವ ವ್ಯಾಖ್ಯಾನದ ಸಹಾಯವೂ ಇಲ್ಲದೆ ನಾವು ಅರ್ಥೈಸಿಕೊಳ್ಳಬಹುದು.ತೇಜಸ್ವಿ ಈ ಗಲಾಟೆ ಬೇಡ ಎಂದು ದೂರದ ಕಾಡಲ್ಲು ಕುಂತರು ಅವರೊಳಗಿನ ಮಲೆನಾಡಿನ ಗಂಡಸು ಊರವ್ಯಾಪಾರದಲ್ಲಿ ತನ್ಮಯನಾದಷ್ಟು ಮನೆಯೊಳಗಿನ ಚಟುವಟಿಕೆಯಲ್ಲಿ ಆಸಕ್ತನಾಗಲಾರ. ಈ ನಮ್ಮ ಅನಿಸಿಕೆಯನ್ನು ರಾಜೇಶ್ವರಿಯವರು ಅವರ ತೇಜಸ್ವೀ
    ಕಟ್ಟಾಣಿಕೆಯಲ್ಲಿ ಇನ್ನಷ್ಟು ಗಟ್ಟಿ ಮಾಡಿದ್ದಾರೆನ್ನುವುದು ನನ್ನ ಭಾವನೆ. ತೇಜಸ್ವಿ ಸ್ತ್ರೀಪಾತ್ರಗಳು “ಕಡೆದ ಶಿಲ್ಪ” ಗಳಲ್ಲ ಅಂದರೆ ಅಲ್ಲ ಅಷ್ಟೆ, ಅದಕ್ಕಾಗಿ ರಾಜೇಶ್ವರಿಯವ ರೂ ಸೇರಿದಂತೆ ಸಂಧ್ಯಾ ಅವರೂ ಸೇರಿದಂತೆ ಯಾವ ಲೇಖಕಿಗೂ ತಕರಾರೇನಿಲ್ಲ ಅಂದುಕೊಂಡಿದ್ದೇನೆ. ಆದ್ದರಿಂದ ತೇಜಸ್ವೀ ಸಮರ್ಥನೆಗೆ ತೊಡಗುವುದು ಅಗತ್ಯವಿಲ್ಲವೇನೊ. ಜಗತ್ ಸಾಹಿತ್ಯದಲ್ಲೆ ಕಾಣದ ಒಂದು ವಿಶೇಷವನ್ನು ಈ ಮನೆ ನಮಗೆ ಅಂದರೆ ಕನ್ನಡ ಓದುಗರಿಗೆ ಕೊಟ್ಟಿದೆ. ಮಗನಿಂದ , ಸೊಸೆಯಿಂದ, ಮಗಳಿಂದ , ಮೊಮ್ಮಗಳಿಂದ ತಮ್ಮ ವ್ಯಕ್ತಿ ಚಿತ್ರ ಬರೆಸಿಕೊಂಡವರು ಕುವೆಂಪು ಹೊರತಾಗಿ ಯಾರಿದ್ದಾರೆ? ಸ್ವತಹ ತಮ್ಮ ನೆನಪಿನ ದೋಣಿಯಲ್ಲಿ ಕುವೆಂಪು ಕಂಡಿರುವ ಕುವೆಂಪುಗಿಂತಲೂ ಈ ನಾಲ್ವರು ಕುವೆಂಪುವನ್ನು ಅದೆಂಥ ಭಿನ್ನ ಕೋನದಲ್ಲಿ ಕಡೆದು ನಿಲ್ಲಿಸಿದ್ದಾರೆ ಅಂತ ನನಗೆ ಯಾವಾಗಲು ಆಶ್ಚರ್ಯವಾಗುತ್ತದೆ.
    ಇದು ಹೇಗೆ ಅವರವರ ಕಾಣ್ಕೆಯ ಫಲವೊ ಹಾಗೆ ತೇಜಸ್ವೀ ಹೆಂಗಸರೂ ಅವರ ಕಾಣ್ಕೆಯ ಫಲ.

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಮೇಡಂ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಒಂದು ಕಾಕತಾಳೀಯ ಘಟನೆ ಅಂದರೆ ನಾನು ಹೇಳಿದ ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಭಾಷಾತಜ್ಞ ಮೇಟಿಯವರು, ಹೇಗೆ ಭಾಷೆ ಸಹ ಪುರುಷ ಭಾವನಾ ಪ್ರತಿಫಲನಕ್ಕೇ ಪೂರಕವಾಗಿದೆ ಅಂತ ಉದಾಹರಣೆ ಕೊಟ್ಟರು. ಆಗ ನಿಮ್ಮ ಕವಿತೆಗಳನ್ನು ನೆನಪಿಸಿಕೊಂಡೆವು, ನೀವು ಭಾಷೆಯನ್ನು ಬಳಸುವ ಪರಿಯನ್ನು ಕೆ ವೈ ಎನ್ ವಿವರಿಸಿದ್ದರು, ನಾನು ನಿಮ್ಮ ಉಗಾದಿ ಹಬ್ಬದ ಕವನದಲ್ಲಿ ’ಹೋಳಿಗೆ’ಯ ರೂಪಕವನ್ನು ಹೇಗೆ ಹೊಸದಾಗಿ ಬಳಸಿದ್ದೀರಿ ಅಂತ ಹೇಳಿದೆ. ನಿಮ್ಮ ಪ್ರತಿಕ್ರಿಯೆ ಓದಿ ಇದೆಲ್ಲಾ ನೆನಪಾಯಿತು, ದಯವಿಟ್ಟು ಆ ಕವನವನ್ನು ಇಲ್ಲಿ ಹಾಕಲು ಸಾಧ್ಯವೆ?

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: