ಸಂಧ್ಯಾರಾಣಿ ಕಾಲಂ : ’ಡರ್ ಲಗ್ ತಾ ಹೈ ತನ್ ಹಾ ಸೋನೆ ಮೆ ಜೀ…’


’ನೀನೇ ಹೇಳೆ, ವಯಸ್ಸಾದಂತೆ ಗಂಡನ ಆಸರೆ, ಸಾಂಗತ್ಯ ಜಾಸ್ತಿ ಬೇಕು ಅನ್ನಿಸುತ್ತದೆಯೋ ಇಲ್ಲವೋ?’, ಅತ್ತೆ ನನ್ನನ್ನು ಕೇಳುತ್ತಿದ್ದರು. ’ಯಾವ ವಯಸ್ಸಿನಲ್ಲಾದರೂ ಅದು ಬೇಕು ಅತ್ತೆ’ ಅಂತ ಒಂದು ಕ್ಷಣ ಸಹ ಯೋಚಿಸದೆ ನಾನು ಉತ್ತರಿಸಿದೆ. ’ಇಲ್ಲ ಕಣೆ, ನಾನು ಹೇಳುತ್ತಿರುವುದು ಬರೀ ಸುತ್ತಾಡೋಕೆ, ಮಾತಾಡೋಕೆ, ಜೊತೇಲಿರೋಕೆ ಮಾತ್ರ ಅಲ್ಲ. ವಯಸ್ಸಾದಂತೆ ಒಂಟಿತನ ಹೆದರಿಕೆ ತರುತ್ತದೆ, ಒಬ್ಬಳೇ ಇರುವಾಗ ನನಗೇನಾದರೂ ಆದರೆ ಯಾರೂ ಇಲ್ಲದೆ, ಏನೂ ಹೇಳದೆ ನಾನು ಸತ್ತೇ ಹೋಗಿಬಿಡುತ್ತೇನೋ ಅನ್ನಿಸುತ್ತದೆ ಗೊತ್ತಾ’ ಅತ್ತೆ ಹೇಳುತ್ತಲೇ ಇದ್ದರು. ನಾನು ಮಾತೇ ಇಲ್ಲದಂತೆ ಅವರನ್ನು ನೋಡುತ್ತಲೇ ಇದ್ದೆ. ನನಗೆ ಬುದ್ಧಿ ಬರುವ ವೇಳೆಗೆ ಅವರು ನನಗೆ ಆ ವಯಸ್ಸಿನಲ್ಲೂ ಅರ್ಥವಾಗುವ ಹಾಗೆ ಸುಂದರಿ. ಅಜ್ಜಿ ಮನೆ ಪಕ್ಕದ್ದೇ ಅವರ ಮನೆ. ಚೂಪಾದ ಮೂಗು, ಎತ್ತರದ ಹೆಣ್ಣು. ಅವರು ಓದುತ್ತಿದ್ದಾಗಲೇ ಒಳ್ಳೆ ಹುದ್ದೆಯಲ್ಲಿದ್ದ ವರ ತಾನಾಗೇ ಹುಡುಕಿ ಬಂದು ಅವರ ಮದುವೆ ಆಗಿತ್ತು. ಮದುವೆ ಆದ ಮೇಲೂ ಅವರೇನು ಓದು ನಿಲ್ಲಿಸಿರಲಿಲ್ಲ, ಕಂಕುಳಲ್ಲಿ ಮಕ್ಕಳನ್ನು ಕಟ್ಟಿಕೊಂಡೇ ಪರೀಕ್ಷೆಗಳಿಗೆ ಕಟ್ಟಿದ್ದರು, ಅಳುವ ಮಕ್ಕಳನ್ನು ತೊಡೆಯ ಮೇಲೆ ಮಲಗಿಸಿ ಆಡಿಸುತ್ತಲೇ ಎಂ ಎ ಪಾಸು ಮಾಡಿದ್ದರು. ಇದು ಸುಮಾರು ೩೫ ವರ್ಷಗಳಿಗೂ ಮೊದಲು.
ಅವರಿಗೆ ಹೋಲಿಸಿದರೆ ಅವರ ಪತಿ ಸ್ವಲ್ಪ ಮೃದು ಸ್ವಭಾವದವರು ಎಂದೇ ಹೇಳಬೇಕು. ಆ ಕಾರಣದಿಂದಲೋ ಅಥವಾ ಹೆಣ್ಣಿನ ದಿಟ್ಟತನ ಆಗ ಒಂದು ಅವಗುಣವಾಗಿ ತೋರುತ್ತಿದ್ದರಿಂದಲೋ ಏನೋ ಎಲ್ಲರೂ, ’ಆತ ದೇವರಂತಹವರು, ಆಕೆ ಹಾಗಲ್ಲ. ಒಂದು ಧೈರ್ಯ ಅಂದ್ರೆ…’ ಎಂದೇ ಮಾತು ಶುರು ಮಾಡುತ್ತಿದ್ದರು. ಸುತ್ತಮುತ್ತಲಿನ ಪರಿಸರ ನಮ್ಮನ್ನು ಹೇಗೆ ತಯಾರು ಮಾಡುತ್ತಿತ್ತು ಅಂದರೆ ವಿಷಯವೇ ತಿಳಿಯದ ನಮಗೂ ಸಹ ಮಾಮ ಪಾಪ, ಈ ಅತ್ತೆಯೇ ಬಜಾರಿ ಅನ್ನಿಸುತ್ತಿತ್ತು. ಅಲ್ಲ ಅವರು ನಮ್ಮ ಮುಂದೆ ಅದ್ಯಾವ ಬಜಾರಿತನ ಮಾಡಿರಲು ಸಾಧ್ಯ? ಆದರೂ ನಾವು ಕಂಡ ಅಮ್ಮ, ಚಿಕ್ಕಮ್ಮರ ಥರಹ ನಾಚದ, ಮೆಲ್ಲಗೆ ಮಾತಾಡದ, ಅಂಗಡಿಗೆ ಹೋಗಬೇಕಾದರೆ ಗಂಡನ ದಾರಿ ಕಾಯದ, ಸ್ಟೀಲ್ ಪಾತ್ರೆಗೆ ದುಡ್ಡು ಹೊಂದಿಸದೆ, ಪರೀಕ್ಷೆ ಕಟ್ಟಿ ಬರೆಯುವ ಈ ಅತ್ತೆಯ ಹಾಗೆ ನಾವು ಇರಬಾರದು ಎಂದೇ ಆಗ ನಮಗೆಲ್ಲಾ ಅನ್ನಿಸುತ್ತಿತ್ತು.
ಬೆಳಗ್ಗೆ ಎದ್ದು ನೀಟಾಗಿ ಆಫೀಸಿಗೆ ಹೋಗಿ ಬಂದು, ಸಂಜೆ ನೆಮ್ಮದಿಯಾಗಿ ಕೂತು ಕವನ ಬರೆಯುವ ಗಂಡ ಯಾವುದಾದರೂ ಆಸ್ತಿ ಮಾಡಿ ನೆಮ್ಮದಿಯಾಗಿರುವಂತೆ ಮಾಡಬಲ್ಲರು ಎನ್ನುವ ನೆಚ್ಚಿಗೆಯಿಲ್ಲದ ಅತ್ತೆ ಹೇಗೋ ಒಂದು ಸೈಟು ಖರೀದಿ ಮಾಡಿ ಮನೆ ಕಟ್ಟಿಸಲು ಶುರು ಮಾಡಿಯೇ ಬಿಟ್ಟಿದ್ದರು. ಬೆಳಗಾಯಿತೆಂದರೆ ತಿಂಡಿ ಮಾಡಿ, ಗಂಡನಿಗೆ ಬಾಕ್ಸ್ ನಲ್ಲಿ ಹಾಕಿ ಕೊಟ್ಟು, ತಾವೂ ಒಂದು ಬಾಕ್ಸಿನಲ್ಲಿ ಅದೇ ತಿಂಡಿ ಹಾಕಿಕೊಂಡು, ಬಾಟಲಿನಲ್ಲಿ ಮಗುವಿಗೆ ಹಾಲು ತುಂಬಿಕೊಂಡು, ಅವನ್ನೂ ಮಗುವಿನ ಬಟ್ಟೆಗಳನ್ನೂ ಒಂದು ವೈರ್ ಬ್ಯಾಗಿನಲ್ಲಿ ತುಂಬಿ, ಮಗುವನ್ನು ಕಂಕುಳಿಗೇರಿಸಿಕೊಂಡು ಸೈಟಿನತ್ತ ಹೊರಟರೆ, ಮತ್ತೆ ಮನೆಗೆ ಬರುತ್ತಿದ್ದದ್ದು ಯಾವ ಕಾಲಕ್ಕೋ.
ಅದೇ ಸಮಯದಲ್ಲಿ ಅಪ್ಪ ಸಹ ಮನೆ ಕಟ್ಟಿಸುತ್ತಿದ್ದರು. ಆದರೆ ಹಾಗೆ ವೈರ್ ಬಾಸ್ಕೆಟ್ ಹಿಡಿದು ಓಡಾಡುವ, ಸೈಟಿನ ಹತ್ತಿರ ಅಲ್ಲಿನ ವಾಚ್ ಮನ್ ಅಮ್ಮನಂತೆಯೇ ಮಗುವನ್ನು ಕಂಕುಳಲ್ಲಿ ಇರುಕಿಕೊಂಡು, ಮೈ ಕೈಗೆ ಸಿಮೆಂಟು ಮೆತ್ತಿಸಿಕೊಂಡು ಓಡಾಡುತ್ತಿದ್ದ ಈ ಅತ್ತೆಗಿಂತ, ಮನೆಯಲ್ಲಿ ಅಪ್ಪ ಬರುವುದನ್ನು ಕಾಯುತ್ತಿದ್ದ, ಮನೆ ಕಟ್ಟಿ ಮುಗಿದ ಮೇಲೆ ಗೌರಿಯಂತೆ ಅಪ್ಪನ ಪಕ್ಕ ಪೂಜೆಗೆ ಕೂರುತ್ತಿದ್ದ ಅಮ್ಮ ನಮಗೆ ದೇವತೆಯಂತೆ ಕಾಣಿಸುತ್ತಿದ್ದರು. ನನಗಿನ್ನೂ ನೆನಪಿದೆ, ಒಂದು ರಾತ್ರಿ ಮಾವ ಬಂದು, ’ಬೆಳಗ್ಗೆ ಮೇಸ್ತ್ರಿಗೆ ದುಡ್ಡು ಕೊಡದಿದ್ದರೆ ಆಳುಗಳು ಕೆಲಸಕ್ಕೆ ಬರೋಲ್ಲವಂತೆ, ಬೇಡ ಅಂದರೆ ನೀನು ಕೇಳೋಲ್ಲ’ ಎಂದು ಗೊಣಗುಟ್ಟಿ ಪುಸ್ತಕ ಹಿಡಿದು ಕುಳಿತಿದ್ದರು. ಅತ್ತೆ ಮಾತೇ ಆಡದೆ ಒಡವೆ ಡಬ್ಬಿ ತೆಗೆದು ಒಡವೆಗಳನ್ನು ಹೊರಗಿಡುತ್ತಿದ್ದರು. ಮರು ದಿನ ಅವರ ಮನೆ ಕೆಲಸ ಮುಂದುವರೆದಿತ್ತು.
ಒದ್ದಾಡಿ ಮನೆ ಕಟ್ಟಿದರು, ಮನೆಯನ್ನು ನಿಲ್ಲಿಸಿದರು, ಮಕ್ಕಳನ್ನು ಓದಿಸಿದರು, ತಾವೇ ಓಡಾಡಿ ಮಕ್ಕಳಿಗೆ ಮದುವೆ ಮಾಡಿದರು. ಗಂಡನನ್ನೂ ಒಂದು ಮಗು ಎನ್ನುವಂತೆ ಆಗಾಗ ಗದರಿಸುತ್ತಾ, ಆಗಾಗ ಸಲಹುತ್ತಾ ನೋಡಿಕೊಂಡರು. ತವರು ಮನೆಯಲ್ಲಿ ಕಡೆಗಣಿಸಿದಾಗಲೂ, ’ಏನೋ ಇವರಿದಾರಲ್ಲ ನನಗೆ, ಅದು ಸಾಕು’ ಅಂತ ಗಂಡನನ್ನು ತೋರಿಸಿ ಹೇಳಿ ನಮ್ಮನ್ನು ಕಕ್ಕಾಬಿಕ್ಕಿ ಮಾಡಿಬಿಡುತ್ತಿದ್ದರು!

ಅಂತಹ ಅತ್ತೆ ಈಗ ನನ್ನೆದಿರು ಕೂತು ’ಒಬ್ಬಳೇ ಇದ್ದಾಗ ಏನಾದರೂ ಆಗಿಬಿಡುತ್ತದೇನೋ ಅಂತ ಹೆದರಿಕೆ ಆಗ್ತಿದೆ ಕಣೆ’ ಅಂದಾಗ ನನಗೆ ಮಾತೇ ಹೊರಟಿರಲಿಲ್ಲ. ಅಲ್ಲೇ ಪಕ್ಕದ ಉಯ್ಯಾಲೆಯಲ್ಲಿ ಮಾವ ಕೂತಿದ್ದರು. ಮೊದಲು ನಾವು ನೋಡಿದ ಹಾಗೇ ಇದ್ದ ದೇವರಂತಹ ಮಾವ. ಇಷ್ಟು ವರ್ಷಗಳಾದ ನಂತರವೂ ಹೆಚ್ಚು ಕಡಿಮೆ ಹಾಗೇ ಇದ್ದರು. ತಲೆಯ ಕೂದಲು ಬಿಳಿ ಆಗಿತ್ತು, ಬೆನ್ನು ಸ್ವಲ್ಪ ಬಾಗಿತ್ತು ಅಷ್ಟೆ. ಮಾವನನ್ನು ತಾಕದ ವಯಸ್ಸು ಅತ್ತೆಯ ಮೈಯಲ್ಲಿ ಮಣೆ ಹಾಕಿಕೊಂಡು ಕೂತುಬಿಟ್ಟಿತ್ತು. ಇಲ್ಲಿ ಮನೆಯನ್ನು, ಮಕ್ಕಳನ್ನೂ ಅತ್ತೆಯ ಸುಪರ್ದಿನಲ್ಲಿ ಬಿಟ್ಟು, ಮನಸ್ಸು ಬಿದ್ದಾಗ ಹಳ್ಳಿಗೆ ಹೋಗಿ ತೋಟದ ಮನೆಯಲ್ಲಿ ಇದ್ದು ಬರುತ್ತಿದ್ದ ಮಾವ ಹಾಗೆ ಪ್ರತಿ ಸಲ ಬಂದಾಗಲೂ ಒಂದಿಷ್ಟು ವಯಸ್ಸು ಅಲ್ಲಿ ಬಿಟ್ಟು ಬರುತ್ತಿದ್ದರು, ಅತ್ತೆಯ ಯೌವನವನ್ನು ಹೋಗುವಾಗ ತೆಗೆದುಕೊಂಡು ಹೋಗುತ್ತಿದ್ದರು. ಮಾವನಿಗಿಂತ ೧೩ ವರ್ಷ ಚಿಕ್ಕವರಾಗಿದ್ದ ಅತ್ತೆ ಈಗ ಮಾವನಿಗಿಂತ ೫ ವರ್ಷ ದೊಡ್ಡವರ ಹಾಗೆ ಕಾಣುತ್ತಿದ್ದರು. ಸ್ಟ್ರಾಂಗ್ ಆಗಿ ಇರುವ ಹಠವೇ ಅತ್ತೆಯ ವೀಕ್ ನೆಸ್ ಆಗಿಬಿಟ್ಟಿತ್ತು. ಅತ್ತೆ ಹಚ್ಚಿದ ಕ್ಯಾಂಡಲ್ ಎರಡು ಕಡೆಯೂ ಉರಿದು ಸುತ್ತಲೂ ಕರಗಿದ ಮೇಣ…
ಅತ್ತೆಯಲ್ಲಿ ನನಗೆ ನನ್ನ ಸುತ್ತಲಿನ, ನನ್ನ ವಯೋಮಾನದ ಸುಮಾರು ಜನ ಕಂಡರು. ನಾವು ಬೆಳೆಯುತ್ತಿದ್ದ ಸಮಯ ಒಂದು ಸಾಮಾಜಿಕ ಸ್ಥಿತ್ಯಂತರದ ಕಾಲ ಎಂದೇ ಹೇಳಬೇಕು. ನಮಗೆ ದಿಟ್ಟತನ ವ್ಯಕ್ತಿತ್ವದಲ್ಲಿ ಮೂಡಿಸಿಕೊಳ್ಳುವುದೂ , ಜವಾಬ್ದಾರಿ ತೆಗೆದುಕೊಳ್ಳುವುದು ಮತ್ತು ಅದನ್ನು ನಡೆಸುವುದು ಒಂದು ಆಕರ್ಷಣೆ ಆಗಿತ್ತು. ಏನೋ ಸಾಧಿಸುವ ಹುಮ್ಮಸ್ಸು, ನೋಡಿ ನಾನು ಸಹ ಮನೆ ತೂಗಿಸ ಬಲ್ಲೆ, ಅಫೀಸ್ ಕೂಡ ನಡೆಸಬಲ್ಲೆ ಎನ್ನುವ ಆತ್ಮವಿಶ್ವಾಸ. ಜೊತೆ ಜೊತೆಗೆ ಮಕ್ಕಳನ್ನೂ ನೋಡಿಕೊಂಡು ಸೂಪರ್ ವುಮನ್ ಗಳಾಗುವ ಕಟ್ಟಾಸೆ. ಅದೂ ನಡೆಯಿತು, ಆದರೆ ಈ ಪ್ರಯಾಣದಲ್ಲಿ ಆದ ಒಂದು ದುರಂತವೆಂದರೆ ಹಾಗೆ ದಿಟ್ಟತನದಲ್ಲಿ ಎಲ್ಲಾ ನಿಭಾಯಿಸುವಾಗಲೂ ಮನಸ್ಸಿಗೆ ಆಸರೆ, ಪ್ರೀತಿ, ಮುಚ್ಚಟೆ ಬೇಕು ಎನ್ನುವುದನ್ನು ಸುತ್ತಲಿನವರು ಮರೆತೇ ಹೋದರು. ಹೆಣ್ಣು ದಿಟ್ಟಳಾಗಿ ಜವಾಬ್ದಾರಿ ನಿರ್ವಹಿಸುವುದು ಎಂದರೆ ಹೆಣ್ತನ ಕಳೆದುಕೊಂಡಂತೆ ಅಲ್ಲ ಅಲ್ಲವಾ?
ಒಂದು ಹೆಣ್ಣು ಸ್ಟ್ರಾಂಗ್ ಅಂದ ತಕ್ಷಣ ಮೊದಲು ಸ್ವಲ್ಪ ಪ್ರತಿರೋಧ ಬರುತ್ತದೆ, ಟೀಕೆ ಬರುತ್ತದೆ, ಆದರೆ ಬರಬರುತ್ತಾ ಹಾಗೆ ಟೀಕೆ ಮಾಡಿದವರೂ ಸಹ ಈ ಹೆಂಗಸರ ತಲೆ ಮೇಲೆ ಜವಾಬ್ದಾರಿ ಹೊರೆಸಿ, ಬೇಸರವಾದಾಗ ಇವರನ್ನು ಟೀಕೆ ಮಾಡಿಕೊಂಡು ದಿನ ತಳ್ಳಿ ಬಿಡುತ್ತಾರೆ. ಆ ಹೆಣ್ಣುಗಳೋ ತಮ್ಮ ಜವಾಬ್ದಾರಿಯ ಜೊತೆಗೆ ಈ ಟೀಕೆಗಳನ್ನೂ ಹೊತ್ತು ಹೇಗೋ ಮುಂದೆ ಹೆಜ್ಜೆ ಎಳೆಯುತ್ತಾ ಹೋಗುತ್ತಿರುತ್ತಾರೆ, ಅವರ ಶಾಪವೆಂದರೆ ಅವರು ’ನನ್ನ ಕೈಲಿ ಆಗದು’ ಎಂದು ಹೇಳಲಾರರು. ಈ ಶಾಪ ಅವರನ್ನೆಂದೂ ಸುಖವಾಗಿರಲು ಬಿಡುವುದಿಲ್ಲ.
ಈ ಮಾತು ನನಗೆ ಮೊನ್ನೆ ಮತ್ತೆ ಮತ್ತೆ ನೆನಪಾಗಿದ್ದು ರಂಗಶಂಕರದಲ್ಲಿ ’ನಿಮಿತ್ತ’ ನಾಟಕ ನೋಡುವಾಗ. ಕೇವಲ ಸಂಭಾಷಣೆಯನ್ನು ಮಾತ್ರ ಬಲವನ್ನಾಗಿಸಿಕೊಂಡ ನಾಟಕ, ನಾಟಕವಾಗಿ ಗೆಲ್ಲದಿದ್ದರೂ ಅದರಲ್ಲಿನ ಹೆಂಡತಿಯ ಪಾತ್ರ ನನ್ನ ಮನಸ್ಸು ಕಲಕಿತ್ತು, ಪ್ರಶ್ನೆಗೆ ಹಚ್ಚಿತ್ತು.
ಅಮ್ಮನ ತಾಳಿಯನ್ನು, ಮಕ್ಕಳ ಚಿನ್ನದ ಮೆಡಲ್ ಅನ್ನು, ಗೋಲಕದಲ್ಲಿಯ ಹಣವನ್ನು ಯಾವುದನ್ನೂ ಬಿಡದೆ ಮಾರಿ ಚಟ ತೀರಿಸಿಕೊಂಡ ಗಂಡ.  ಜೊತೆಯಲ್ಲಿರುವವರೆಗೂ ಹುರಿದು ಮುಕ್ಕಿದ್ದಾನೆ, ಈಗ ಹೃದಯದ ಖಾಯಿಲೆಯಿಂದ ಆಸ್ಪತ್ರೆ ಸೇರಿದ್ದಾನೆ. ಅವಳದು ಒಂದೇ ಪ್ರಶ್ನೆ. ಯಾವ ಸುಖಕ್ಕೆ ಇವನನ್ನು ಉಳಿಸಿಕೊಳ್ಳಲಿ ನಾನು ಅಂತ. ಅತ್ತೆ, ಮಕ್ಕಳು ಎಲ್ಲರೂ ಅವಳಿಗೆ ಮಾನವೀಯತೆಯ, ಹೆಣ್ಣಿನ ಕರ್ತವ್ಯದ, ಹೆಂಡತಿಯ ಜವಾಬ್ದಾರಿಯ ಪಾಠ ಮಾಡುತ್ತಾರೆ. ಅವಳ ಬದ್ಧತೆಯ ಮೇಲೆ ಇವರ ಗಿಲ್ಟ್ ನಿವಾರಣೆ ಆಗಬೇಕು. ಅವಳು ಕೈ ಬಿಟ್ಟರೆ ತಾವ್ಯಾರೂ ಅವನನ್ನು ನೋಡಿಕೊಳ್ಳುವುದಿಲ್ಲ ಅಂತ ಅವರಿಗೂ ಗೊತ್ತು. ಆ ಸಂದರ್ಭ ಬಂದು, ಇವರು ಜವಾಬ್ದಾರಿಯಿಂದ ಹಿಂದೆ ಸರಿದು ಕೆಟ್ಟವರಾಗುವುದು ಅವರಿಗೆ ಬೇಡ, ಹೀಗಾಗಿ ಎಲ್ಲರೂ ಹೆಂಡತಿಗೆ ಬುದ್ಧಿಮಾತು ಹೇಳುವವರೇ!  ಬುದ್ಧಿಮಾತು ಹೇಳುತ್ತಾರೆಯೇ ಹೊರತು ಆಯ್ತು ಬಿಡು, ನಾವು ನೋಡಿಕೊಳ್ಳುತ್ತೆವೆ ಎಂದು ಯಾರೂ ಅಪ್ಪಿ ತಪ್ಪಿ ಸಹ ಹೇಳುವುದಿಲ್ಲ!


ಆತನ ಸಾಲ, ದುರ್ಗುಣ, ಸೋಮಾರಿತನ, ಕಳ್ಳತನ, ಚಟಗಳ ಭಾರ ಎಲ್ಲವನ್ನೂ ಭರಿಸಿದ ಹಾಗೆ ಆಕೆ ಇದನ್ನೂ ಭರಿಸುತ್ತಾಳೆ, ಹಾಗೆ ಭರಿಸದೆ ತಾನು ಜವಾಬ್ದಾರಿಯಿಂದ ಹಿಂದೆ ಸರಿಯಲಾರೆ, ಅತ್ತೆಯ ಥರ ಗಂಡನಿಗೆ ಅಪಘಾತವಾದಾಗ ದೇವರ ಮನೆ ಸೇರಿಕೊಂಡು ಬಾಗಿಲು ಹಾಕಿಕೊಂಡು, ನಿರ್ಧಾರ ತೆಗೆದುಕೊಳ್ಳುವ ಹೊಣೆಯಿಂದ ತಪ್ಪಿಸಿಕೊಂಡು, ಗಂಡನನ್ನು ತಾನಾಗೇ ಸಾಯಲು ಬಿಟ್ಟು, ಬಂದ ಇನ್ಶೂರೆನ್ಸ್ ಹಣದಲ್ಲಿ ಮಕ್ಕಳ ಮದುವೆ ಮಾಡಿ, ’ಅಯ್ಯೋ ನಾನು ಹೆಣ್ಣು’ ಎನ್ನುವ ಸೋಗು ಹಾಕಿ ಅಳುತ್ತಾ ಕೂಡುವುದು ತನ್ನಿಂದ ಆಗದು ಎನ್ನುವುದೂ ಸಹಾ ಅವಳಿಗೆ ಗೊತ್ತು. 
ಗಂಡನನ್ನು ಸಾಯಲು ಬಿಡಬೇಕಾದರೆ ಇಷ್ಟೆಲ್ಲಾ ಮಾತಾಡಿ ಎಲ್ಲರ ಮುಂದೆ ಕೆಟ್ಟವಳಾಗುವ ಬದಲು, ಚಿಕಿತ್ಸೆಯ ಹಣವನ್ನು ಕಟ್ಟುವುದು ಸ್ವಲ್ಪ ತಡ ಮಾಡಿದರೆ ಸಾಕು ಗಂಡ ಚಿಕಿತ್ಸೆ ದೊರಕದೆ ಸಾಯುತ್ತಾನೆ ಎನ್ನುವುದು ಸಹ ಅವಳಿಗೆ ಗೊತ್ತು. ಆದರೂ ಹಣ ಕಟ್ಟುತ್ತಾಳೆ ….. ಹಾಗೆ ಜವಾಬ್ದಾರಿಯಿಂದ ಜಾರಿಕೊಂಡು ದುರ್ಬಲಳಾಗದೇ ಇರುವುದು ಅವಳ ದೌರ್ಬಲ್ಯ, ಅದೇ ಅವಳ ಗಂಡನ, ಮಕ್ಕಳ, ಅತ್ತೆಯ ಬಂಡವಾಳ…. ಇದು ಇಲ್ಲಿನ ವಿಪರ್ಯಾಸ.
ಹೌದು ವಿಪರ್ಯಾಸ, ಯಾವುದೇ ವ್ಯಕ್ತಿಯನ್ನು ಹೊಡೆದು ಹಣ್ಣು ಮಾಡಬೇಕಾದರೆ ತಮ್ಮ ಶಕ್ತಿಯನ್ನು ಬಳಸದೆ, ಆ ವ್ಯಕ್ತಿಯ ಒಳ್ಳೆತನವನ್ನೇ ಅವರ ವಿರುದ್ಧ ಬಳಸುವುದಿದೆಯಲ್ಲ ಅದು ಜಗತ್ತಿನ ಅತಿ ದೊಡ್ಡ ಕ್ರೌರ್ಯ.
ಅದು ಒತ್ತಟ್ಟಿಗಿರಲಿ, ಹೀಗೆ ಸ್ಟ್ರಾಂಗ್ ಆಗಿ ಇರುವ ಹೆಣ್ಣುಗಳು ಬರಬರುತ್ತಾ ಒಂಟಿಯಾಗುತ್ತಾ ಹೋಗುತ್ತಾರಲ್ಲ, ಇದಕ್ಕೇನು ಕಾರಣ. ನಾನು ಒಂಟಿಯಾಗಿದ್ದೇನೆ, ನಿನ್ನ ಆಸರೆ, ನೆರಳು, ನೆರವು ಬೇಕು ಎಂದು ಬಾಯಿ ಬಿಟ್ಟು ಕೇಳದೇ ಇರುವುದೇ ಅವರ ಅಪರಾಧವಾ? ಆ ಅಪರಾಧದ ಮುಂದೆ ಅವರೆಲ್ಲಾ ಕ್ರಿಯೆಯ, ಜವಾಬ್ದಾರಿಯ ನಡವಳಿಕೆ ಸೋತು ನಿಂತುಬಿಡುತ್ತದಾ? ಜವಾಬ್ದಾರಿ ಹೊರುವುದೆಂದರೆ ಪ್ರೀತಿಯನ್ನು ನಿರಾಕರಿಸುವುದಲ್ಲ ಎನ್ನುವುದು ಯಾಕೆ ಅರ್ಥ ಮಾಡಿಕೊಳ್ಳಲು ಕಷ್ಟ ಆಗಿಬಿಡುತ್ತದೆ?
ಧೈರ್ಯ ಅಹಂಕಾರವಲ್ಲ, ಜವಾಬ್ದಾರಿ ಹೊರಲು ಮುಂದೆ ಬರುತ್ತೇವೆ ಎಂದರೆ ನಿಮ್ಮ ಸಹಕಾರ, ಸಹಾಯ ಬೇಡ ಅಂತಲ್ಲ ಅಂತ ಹೇಳುವ ಭಾಷೆ ಯಾವುದು? ಹಾಗೆ ಎಲ್ಲ ಮಾನಸಿಕ ಹೊರೆ ಹೊತ್ತು, ಹೊತ್ತು ಆ ಕಾರಣದಿಂದ ಒಂಟಿಯಾಗಬೇಕು ಎಂದರೆ ನಮ್ಮ ಯೋಚನಾ ರೀತಿಯಲ್ಲೇ ಏನೋ ದೊಷವಿದೆ ಅನ್ನಿಸುವುದಿಲ್ಲವಾ? ವ್ಯಕ್ತಿಯನ್ನು ಅವರ ದೌರ್ಬಲ್ಯಕ್ಕೆ ಕನಿಕರಿಸಿ, ಸಲಹಿ, ಆಸರೆ ನೀಡಿ, ಅದು ತಪ್ಪಲ್ಲ. ಆದರೆ ಹಾಗೆ ದೌರ್ಬಲ್ಯ ತೋರಿಸದ ವ್ಯಕ್ತಿಯ ಗುಣಕ್ಕಾಗಿ ಆ ವ್ಯಕ್ತಿಯನ್ನು ಶಿಕ್ಷಿಸುವುದು ಅಪರಾಧ ಅಲ್ಲವಾ?
ನನ್ನ ಗೆಳತಿಯ ಅಕ್ಕನ ಮಗಳು, ನಾವೆಲ್ಲಾ ಮೆಚ್ಚಿ ’ಅಹುದಹುದು’ ಎಂದ ಬುದ್ಧಿವಂತೆ. ಕಾಲೇಜಿನಲ್ಲಿದ್ದಾಗಲೇ ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡವಳು, ಕೆಲಸ ಮನೆ ಎರಡನ್ನೂ ತೂಗಿಸುತ್ತಾ, ನಗುವನ್ನು ಮುಖದಿಂದ ಓಡಲು ಬಿಡದವಳು. ಆದರೆ ಅವಳ ಒಂದೊಂದು ಮುನ್ನಡೆಯಲ್ಲೂ, ಅವಳ ಒಂದೊಂದು ಪ್ರೊಮೊಶನ್‌ನಲ್ಲೂ ಅವಳ ಗಂಡನಿಗೆ ಅದು ಅವಳ ಗೆಲುವಿಗಿಂತ ಹೆಚ್ಚಾಗಿ ತನ್ನ ಸೋಲು ಅಂತ ಯಾಕೆ ಅನ್ನಿಸಿತು? ಅವಳನ್ನು ಮೀರಿ ಬೆಳೆಯಲಾರೆ ಆದ್ದರಿಂದ ಅವಳನ್ನು ಎಲ್ಲರ ಮುಂದೆ ಕಡೆಗಾಣಿಸಿ, ಕೆಳಗೆಳೆದೇ ತನ್ನ ಸ್ಥಾನ ಕಾಯ್ದುಕೊಳ್ಳಬೇಕು ಅಂತ ಯಾಕನ್ನಿಸಿತು? ಗಂಡನಿಂದ ಪ್ರೀತಿ, ಅರ್ಥ ಮಾಡಿಕೊಳ್ಳುವ ಗುಣ ಮಾತ್ರ ಬಯಸುತ್ತಿದ್ದ ಈ ಜಾಣೆ ತನ್ನ ತಪ್ಪೇ ಇಲ್ಲದೆ ಯಾಕೆ ಒಂಟಿಯಾಗುತ್ತಾ ಹೋದಳು? ಅರ್ಥವಾಗಿಲ್ಲ ನನಗೆ. ಎಲ್ಲಿ ತಪ್ಪುತ್ತಿದೆ ಸಂಬಂಧಗಳ ಕೊಂಡಿ?
ಮೊದಲು ಬಜಾರಿಯಾಗಿ ಕಾಣಿಸುತ್ತಿದ್ದ ಅತ್ತೆಯಲ್ಲಿ ಒಮ್ಮೊಮ್ಮೆ ನನಗೆ ಕನ್ನಡಿ ಕಂಡಂತಾಗುತ್ತದೆ. ಈಗ ಯಾರಾದರು ಅತ್ತೆಯನ್ನು, ’ಅಯ್ಯೋ ನೀನು ಬಿಡಮ್ಮ ಧೈರ್ಯವಂತೆ, ನಮ್ಮ ಪಾಡು ಹೇಳು, ನಮಗೆ ಹೀಗಾಗಬಹುದಾ?’ ಅಂದರೆ ನನಗೆ ಅದು ’ಅಯ್ಯೋ ನೀವು ಬಿಡಿ, ಬಡವರು, ನಿಮಗೆ ಉಪವಾಸ ಇದ್ದು ಅಭ್ಯಾಸ ಇದೆ, ಆದರೆ ನನಗೆ ಊಟ ಸಿಕ್ಕದಿದ್ದರೆ ಏನು ಮಾಡಲಿ’ ಎಂದು ಕೇಳಿಸಿದಂತಾಗುತ್ತದೆ…

‍ಲೇಖಕರು avadhi

September 13, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

27 ಪ್ರತಿಕ್ರಿಯೆಗಳು

  1. anu pavanje

    “ಯಾವುದೇ ವ್ಯಕ್ತಿಯನ್ನು ಹೊಡೆದು ಹಣ್ಣು ಮಾಡಬೇಕಾದರೆ ತಮ್ಮ ಶಕ್ತಿಯನ್ನು ಬಳಸದೆ, ಆ ವ್ಯಕ್ತಿಯ ಒಳ್ಳೆತನವನ್ನೇ ಅವರ ವಿರುದ್ಧ ಬಳಸುವುದಿದೆಯಲ್ಲ ಅದು ಜಗತ್ತಿನ ಅತಿ ದೊಡ್ಡ ಕ್ರೌರ್ಯ”……..ಹೌದು ಸ೦ಧ್ಯಾ…..ಎಷ್ಟು ಚೆನ್ನಾಗಿ ನಮ್ಮೆಲ್ಲರ ಒಳಬಗೆಯ ತಳಮಳವನ್ನ…..ನಮ್ಮ ಗಟ್ಟಿಗಿತ್ತಿತನವೇ ನಮಗೆ ಮುಳುವಾದ ಬಗೆಯನ್ನ ಇಲ್ಲಿ ಒ೦ದೊ೦ದಾಗಿ ಹರಡುತ್ತಾ ಹೋಗಿದ್ದೀರಿ…..ನಾವು ಗಟ್ಟಿಯಾದಷ್ಟು ಟೇಕನ್ ಫಾರ್ ಗ್ರಾ೦ಟೆಡ್ ಆಗುತ್ತಾ ಹೋಗುತ್ತೇವೆ…..ಯಾಕೆ….!!!
    ನಮ್ಮ ಅಳಲು….ಕಸಿವಿಸಿ…ಬೇಸರ….ಕಣ್ಣೀರು ಎಲ್ಲವೋ ನಿಷೇಧವಾಗುತ್ತಾ ಹೋಗುತ್ತದೆ….ನಮಿಗೆ ಇವೆಲ್ಲ ಯಾವುದೂ ಇರೋದೇ ಸಾಧ್ಯ ಇಲ್ಲ ಅ೦ತ ಎಲ್ಲರೂ ತೀರ್ಮಾನಿಸಿಬಿಟ್ಟಿರುತ್ತಾರೆ…..ಆದರೆ ಈ ಎಲ್ಲರೂ ಸಕಲ ಬಗೆಯ ಕರ್ತವ್ಯಗಳನ್ನ ….ಜವಾಬ್ದಾರಿಗಳನ್ನೆಲ್ಲಾ ನಮ್ಮ ತಲೆಗೇ ಕಟ್ಟಿ ತಾವು ಹಾಯಾಗಿರಲು ಬಯಸುತ್ತಾರೆ…
    ನಮಿಗೆ ದೈವತ್ವದ ಪಟ್ಟ ಬೇಡ…..ನಾವು ಕನಿಷ್ಟ ಮನುಷ್ಯರಾಗೇ ಇರೋಣ….!!!

    ಪ್ರತಿಕ್ರಿಯೆ
  2. Anonymous

    “ಅವರ ಶಾಪವೆಂದರೆ ಅವರು ’ನನ್ನ ಕೈಲಿ ಆಗದು’ ಎಂದು ಹೇಳಲಾರರು. ಈ ಶಾಪ ಅವರನ್ನೆಂದೂ ಸುಖವಾಗಿರಲು ಬಿಡುವುದಿಲ್ಲ” ಸಂಧ್ಯಾ ನಡುಕ ಮೂಡಿಸತ್ತೆ ಇದೊಂದೆ ಸಾಲು..!! ನಿಮ್ಮ ಅಭಿವ್ಯಕ್ತಿಯ ಶೈಲಿಗೆ ಎಂದಿನಂತೆ ಮೆಚ್ಚುಗೆಯಿದೆ.. ಈ ಲೇಖನದ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಲು ಪ್ರಾಯಶಃ ನನ್ನಿಂದಾಗದು!

    ಪ್ರತಿಕ್ರಿಯೆ
  3. Manjula

    “ಅವರ ಶಾಪವೆಂದರೆ ಅವರು ’ನನ್ನ ಕೈಲಿ ಆಗದು’ ಎಂದು ಹೇಳಲಾರರು. ಈ ಶಾಪ ಅವರನ್ನೆಂದೂ ಸುಖವಾಗಿರಲು ಬಿಡುವುದಿಲ್ಲ.” ಸಂಧ್ಯಾ ನಡುಕ ಮೂಡಿಸತ್ತೆ ಇದೊಂದೆ ಸಾಲು..!!! ನಿಮ್ಮ ಅಭಿವ್ಯಕ್ತಿಯ ಶೈಲಿಗೆ ಎಂದಿನಂತೆ ಮೆಚ್ಚುಗೆಯಿದೆ .. ಈ ಲೇಖನದ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಲು ಪ್ರಾಯಶಃ ನನ್ನಿಂದಾಗದು

    ಪ್ರತಿಕ್ರಿಯೆ
  4. Sarala

    ಅಂತಸತ್ವ ಇರುವ ಹೆಣ್ಣಿಗೂ ಅಂತ:ಕರಣದ ಬಲ, ಆತ್ಮೀಯತೆಯ ಸಾಂಗತ್ಯ ತನ್ನ ಹತ್ತಿರವರಿಂದ ಬೇಕೇ ಬೇಕು. ಅದಿಲ್ಲದೆ ಹೋದರೆ ಆ ಹೆಣ್ಣು zombie ಆಗ್ತಾ ಹೋಗ್ತಾಳೆ ಇಲ್ಲ depressionge ಒಳಗಾಗುತ್ತಾಳೆ

    ಪ್ರತಿಕ್ರಿಯೆ
  5. vanamala

    ಸಂಧ್ಯಾರವರೇ
    ಜವಾಬ್ದಾರಿಯಿಂದ ಜಾರಿಕೊಂಡು ದುರ್ಬಲಳಾಗದೇ ಇರುವುದು ಅವಳ ದೌರ್ಬಲ್ಯ, ಅದೇ ಅವಳ ಗಂಡನ, ಮಕ್ಕಳ, ಅತ್ತೆಯ ಬಂಡವಾಳ….
    ಧೈರ್ಯ ಅಹಂಕಾರವಲ್ಲ, ಜವಾಬ್ದಾರಿ ಹೊರಲು ಮುಂದೆ ಬರುತ್ತೇವೆ ಎಂದರೆ ನಿಮ್ಮ ಸಹಕಾರ, ಸಹಾಯ ಬೇಡ ಅಂತಲ್ಲ – ಅಂತ ಹೇಳುವ ಭಾಷೆ ಯಾವುದು?
    ತುಂಬಾ ಇಷ್ಟವಾಯ್ತು. ಈ ಪ್ರಶ್ನೆಗಳಿಗೆಲ್ಲಾ ಉತ್ತರ ಇಲ್ಲವೇನೋ ಅನ್ನಿಸುತ್ತೆ…
    ಧನ್ಯವಾದಗಳು..

    ಪ್ರತಿಕ್ರಿಯೆ
  6. Srinidhi Rao

    ’ಅಯ್ಯೋ ನೀನು ಬಿಡಮ್ಮ ಧೈರ್ಯವಂತೆ, ನಮ್ಮ ಪಾಡು ಹೇಳು, ನಮಗೆ ಹೀಗಾಗಬಹುದಾ?’ hum nange konege sikkidu illivaregu idee 🙁
    ಅಯ್ಯೋ ನೀವು ಬಿಡಿ, ಬಡವರು, ನಿಮಗೆ ಉಪವಾಸ ಇದ್ದು ಅಭ್ಯಾಸ ಇದೆ, ಆದರೆ ನನಗೆ ಊಟ ಸಿಕ್ಕದಿದ್ದರೆ ಏನು ಮಾಡಲಿ’ ಎಂದು ಕೇಳಿಸಿದಂತಾಗುತ್ತದೆ…
    kannanchu oddyaayitu sandhyakaa

    ಪ್ರತಿಕ್ರಿಯೆ
  7. Shwetha Hosabale

    “ಗಂಡನಿಂದ ಪ್ರೀತಿ, ಅರ್ಥ ಮಾಡಿಕೊಳ್ಳುವ ಗುಣ ಮಾತ್ರ ಬಯಸುತ್ತಿದ್ದ ಈ ಜಾಣೆ ತನ್ನ ತಪ್ಪೇ ಇಲ್ಲದೆ ಯಾಕೆ ಒಂಟಿಯಾಗುತ್ತಾ ಹೋದಳು? ಅರ್ಥವಾಗಿಲ್ಲ ನನಗೆ. ಎಲ್ಲಿ ತಪ್ಪುತ್ತಿದೆ ಸಂಬಂಧಗಳ ಕೊಂಡಿ?” ಈ ಸಾಲು ಓದುತ್ತಿದ್ದಂತೆ ಮನಸ್ಸಿನಲ್ಲಿ ಅದೇನೋ ವಿಷಾದ ಆವರಿಸಿಕೊಂಡಿತು. ಪರಿಸ್ಥಿತಿ ಹೇಗೇಗೆಲ್ಲಾ ಬರುತ್ತದೆಯಲ್ಲ ಅನಿಸಿತು.

    ಪ್ರತಿಕ್ರಿಯೆ
  8. Prabhakar Nimbargi

    Very beautiful characterization and analysis of a mentally strong woman. Very touchy and well-weighed sentences. Hats off to you! Men should also try to co-operate, if not be malicious with her in her progress. For isn’t it their joint progress as a single family? Yet, life is like that. It is always absurd (in Kannada, saangatyadalloo asaangatya!)

    ಪ್ರತಿಕ್ರಿಯೆ
  9. M.S.Prasad

    Your writing amazes me, I am fascinated by the way you
    create depth in your writing. Its a feast !!!!
    Akshara Daasoha annabahudu ..

    ಪ್ರತಿಕ್ರಿಯೆ
  10. USHA RAI

    ಸಂಧ್ಯಾ, ಯಾವಾಗಿನಂತೆ ಸುಂದರವಾದ, ಮನಮುಟ್ಟುವ ಬರಹ. ನಿಮಗೆ ಎಲ್ಲಾ ಮಹಿಳೆಯರ ಮನದೊಳಗೆ ಹೊಕ್ಕು ಅವರ ಅನುಭವ ಅನುಭಾವಗಳನ್ನು ಒಂದು ಕಡೆ ಕಲೆಹಾಕಿ ಚಂದದ ನಿರೂಪಣೆಯಿಂದ ಓದುಗರ ಮನವನ್ನು ತಟ್ಟಿ ಎಬ್ಬಿಸುವ ಕಲೆ ಕರಗತವಾಗಿದೆ ಎಂದಷ್ಟೇ ಹೇಳಬಲ್ಲೆ. ’ನನ್ನ ಕೈಯಲ್ಲಿ ಆಗದು” ಎಂದು ಹೇಳಲಾಗದ್ದೇ ಒಂದು ಶಾಪವಾಗಿ ಅವರನ್ನು ಸುಖವಾಗಿರಲು ಬಿಡುವುದಿಲ್ಲ ಎನ್ನುವ ಮಾತು ಎಷ್ಟು ನಿಜ!

    ಪ್ರತಿಕ್ರಿಯೆ
  11. Rj

    ಚೆಂದವಿದೆ.ನಿಮ್ಮ ಬರಹ ವಾರದಿಂದ ವಾರಕ್ಕೆ ‘ಕಳಿತು’ ಹೋಗುತ್ತಿದೆ;ಹಾಕಿದ ಉಪ್ಪಿನಕಾಯಿಯಂತೆ.
    ಒಮ್ಮೊಮ್ಮೆ ಬಲವಾದ ಅನುಮಾನ ಕಾಡತೊಡಗುತ್ತದೆ:
    ನೀವು ಲೇಖಕಿಯೋ?ಸೈಕಿಯಾಟ್ರಿಸ್ಟೋ?
    🙂
    -Rj

    ಪ್ರತಿಕ್ರಿಯೆ
  12. preethi

    very beautifully composed. Many ladies of our genre can relate to this article.

    ಪ್ರತಿಕ್ರಿಯೆ
  13. ಉಷಾಕಟ್ಟೆಮನೆ

    ‘ಯಾವುದೇ ವ್ಯಕ್ತಿಯನ್ನು ಹೊಡೆದು ಹಣ್ಣು ಮಾಡಬೇಕಾದರೆ ತಮ್ಮ ಶಕ್ತಿಯನ್ನು ಬಳಸದೆ, ಆ ವ್ಯಕ್ತಿಯ ಒಳ್ಳೆತನವನ್ನೇ ಅವರ ವಿರುದ್ಧ ಬಳಸುವುದಿದೆಯಲ್ಲ ಅದು ಜಗತ್ತಿನ ಅತಿ ದೊಡ್ಡ ಕ್ರೌರ್ಯ.’
    ಹೂಂ…ಇಷ್ಟವಾಯ್ತು.

    ಪ್ರತಿಕ್ರಿಯೆ
  14. sindhu

    ಸಂಧ್ಯಾ
    ಮನಮುಟ್ಟುವ ಬರಹ. ಈ ಬರಹ ನನ್ನ ಮನಸ್ಸಿಗೇ ಕೆಲಿಡೋಸ್ಕೋಪ್ ಇಟ್ಟು ತೂರಿದ ಹಾಗೆ ಇದೆ.
    “ಧೈರ್ಯ ಅಹಂಕಾರವಲ್ಲ, ಜವಾಬ್ದಾರಿ ಹೊರಲು ಮುಂದೆ ಬರುತ್ತೇವೆ ಎಂದರೆ ನಿಮ್ಮ ಸಹಕಾರ, ಸಹಾಯ ಬೇಡ ಅಂತಲ್ಲ ಅಂತ ಹೇಳುವ ಭಾಷೆ ಯಾವುದು? ಹಾಗೆ ಎಲ್ಲ ಮಾನಸಿಕ ಹೊರೆ ಹೊತ್ತು, ಹೊತ್ತು ಆ ಕಾರಣದಿಂದ ಒಂಟಿಯಾಗಬೇಕು ಎಂದರೆ ನಮ್ಮ ಯೋಚನಾ ರೀತಿಯಲ್ಲೇ ಏನೋ ದೊಷವಿದೆ ಅನ್ನಿಸುವುದಿಲ್ಲವಾ? ವ್ಯಕ್ತಿಯನ್ನು ಅವರ ದೌರ್ಬಲ್ಯಕ್ಕೆ ಕನಿಕರಿಸಿ, ಸಲಹಿ, ಆಸರೆ ನೀಡಿ, ಅದು ತಪ್ಪಲ್ಲ. ಆದರೆ ಹಾಗೆ ದೌರ್ಬಲ್ಯ ತೋರಿಸದ ವ್ಯಕ್ತಿಯ ಗುಣಕ್ಕಾಗಿ ಆ ವ್ಯಕ್ತಿಯನ್ನು ಶಿಕ್ಷಿಸುವುದು ಅಪರಾಧ ಅಲ್ಲವಾ?”
    ಎನ್ನುವುದು ಈ ಬರಹದ ಕೋರ್. ಈ ಶಿಕ್ಷಣವನ್ನು ಯಾರು, ಯಾವಾಗ, ಹೇಗೆ ಕೊಡೋದು ಅನ್ನೋ ಕೀ ಸಿಕ್ಕಿಬಿಟ್ರೆ ಎಷ್ಟೋ ಸಮಸ್ಯೆ ಬಗೆಹರಿಯಬಹುದು.
    ಥ್ಯಾಂಕ್ಸ್ ಫಾರ್ ದಿಸ್ ರೈಟ್ ಅಪ್.
    ಪ್ರೀತಿಯಿಂದ,ಸಿಂಧು

    ಪ್ರತಿಕ್ರಿಯೆ
  15. ಪದ್ಮ

    ಸಂಧ್ಯಾ ಮೇಡಂ – ಎಷ್ಟು ಚೆನ್ನಾಗಿ ಬರೀತೀರಿ! ತುಂಬ ಮನಸ್ಸಿಗೆ ಮುಟ್ಟುವಂತೆ…ಓದಿದ ಮೇಲೆ ಸ್ವಲ್ಪ ಹೊತ್ತು ಹಾಗೆ ಕೂತು ಯೋಚಿಸುವಂತಾಯ್ತು…ಒಂದು ಸಾರಿ ಜೋರಾಗಿ ‘ನನ್ನ ಕೈಲಿ ಆಗತ್ತೆ… ಆದರೆ ಮಾಡಲ್ಲ’ ಅಂಥ ಕಿರುಚಿ ಹೇಳಬೇಕು ಅನಿಸತ್ತೆ, ಆದ್ರೆ ಇದುವರೆಗೂ ಸಾಧ್ಯ ಆಗಿಲ್ಲ 🙁 ನೀವೇ ಹಿಂದೆ ಒಂದು ಲೇಖನದಲ್ಲಿ ಬರೆದಂತೆ (ಲೇಡೀಸ್ ಕೂಪೆ ಲೇಖನ) – ‘…ಇವೆಲ್ಲವನ್ನೂ ಮೀರಿದ, ಎರಡನ್ನೂ ಹೊಂದಿಸಿಕೊಂಡು ನಡೆಯುವ ನಡುವಳಿಕೆಯನ್ನು ನನ್ನಮ್ಮ ನನಗೆ ಕಲಿಸಲಿಲ್ಲ ಮಗಳೆ. ಅದನ್ನು ಕಲಿತ ದಿನ ನಾನು ನಿನಗೆ ಹೇಳುತ್ತೇನೆ’

    ಪ್ರತಿಕ್ರಿಯೆ
  16. Aravind

    Thumba chennagi bardideera. Naavella yochisabekada mattu nirvahisbekaada sookshma vichara.

    ಪ್ರತಿಕ್ರಿಯೆ
  17. Anil Talikoti

    ಅದ್ಭುತವಾದ, ಮನದಾಳದಲ್ಲಿ ಗಿರಿ ಗಿರಿ ಗಿರಕಿ ಹೊಡೆಯುತ್ತ, ಕೆಳ ಹೋಗುತ್ತಲೆ ಸುತ್ತಲೂ ರಂದ್ರ ಕೊರೆಯುತ್ತ ಸಾಗುವ drill bit ನಂತೆ ಸರ್ವ ಕಡೆಗೆ ಚಾಚುವ ಬರಹ. ಪ್ರತಿಯೊಂದು ಸಾಲು ಹೌದಲ್ಲವೆ ಎನ್ನುವಂತಿವೆ ಆದರೂ ಒಂದು ಮಾತು, rather an observation – ನೀವು ಕೊಟ್ಟ ಎರಡು ಘಟನೆಗಳು ಒಂದಕ್ಕೊಂದು ಸ್ವಲ್ಪ ವಿರೋಧಿಯಾಗಿಲ್ಲವೆ? ೧) ಹೆಣ್ಣು ಸ್ಟ್ರಾಂಗ್ ಆಗಿ ಇರುವದರಿಂದ ಅವಳ ತಲೆ ಮೇಲೆ ಜವಾಬ್ದಾರಿ ಹೊರೆಸಿ, ನಿರ್ಲಿಪ್ತರಾಗಿರುವವರು ೨) ‘ಅವಳ ಗಂಡನಿಗೆ ಅದು ಅವಳ ಗೆಲುವಿಗಿಂತ ಹೆಚ್ಚಾಗಿ ತನ್ನ ಸೋಲು’ ಎನಿಸುವದು. ಇಲ್ಲಿ ೧,೨ ಅದಲು, ಬದಲು ಆಗಿದ್ದರೂ end result ಅದೇ ಆಗಿರುತ್ತಿತ್ತೊ ಏನೋ? ಒಬ್ಬರಂತೆ ಇನ್ನೊಬ್ಬರಿರಲಾರರು ಎಂಬುವದು ಸತ್ಯವೆ. ಈ ಸಾಮಾಜಿಕ ಸ್ಥಿತ್ಯಂತರದ ಕಾಲದಲ್ಲಿ ಹೆಣ್ಣು ಮೊದಲಿನಿಗಿಂತ ಜಾಸ್ತಿ ಕೆಲೆಸಮಾಡುತ್ತಿರುವದರಲ್ಲಿ ಸಂದೇಹವೆ ಇಲ್ಲಾ. ಆದರೆ ಗಂಡು ಕೂಡಾ ಬಹಳೆ ಬದಲಾಗಿದ್ದಾನೆ ಎಂಬುವದು ನನ್ನ ಅನಿಸಿಕೆ. overall ನನಗೇನೋ ಸಂಬಂಧಗಳ ಕೊಂಡಿ ಮೊದಲಿಗಿಂತ ಹೆಚ್ಚು ಅರ್ಥಪೂರ್ಣವಾಗುತ್ತ ಸಾಗಿದೆ ಎನಿಸುತ್ತದೆ.

    ಪ್ರತಿಕ್ರಿಯೆ
  18. Triveni

    ತುಂಬಾ ಇಷ್ಟವಾಯಿತು. ಹೌದು! ಹೌದು! ಅನ್ನಿಸಿತು.

    ಪ್ರತಿಕ್ರಿಯೆ
  19. Rohith

    ಯೋಚನೆಗೆ ಹಚ್ಚುವ ವಿಚಾರ…ನಿಜ..ಒಳ್ಳೆಯತನದಿದ್ದರೆ, ನಮ್ಮನ್ನು ಪರೀಕ್ಷೆಗೆ ಹಚ್ಚುವಂತೆ ಒಂದರ ಮೇಲೋಂದರಂತೆ ಹೊರೆ ಹೊರೆಸಲಾಗುತ್ತದೆ..
    ನಾವು ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವಾ..?! ಎನಿಸುತ್ತದೆ
    ಥ್ಯಾಂಕ್ಯು ಮೇಡಂ ಉತ್ತಮವಾದ ಬರಹಕ್ಕೆ…ನಿರೂಪಣೆಗೆ… 🙂

    ಪ್ರತಿಕ್ರಿಯೆ
  20. ಸಂಧ್ಯಾರಾಣಿ

    ಲೇಖನ ಓದಿ ಸ್ಪಂದಿಸಿದ ನಿಮಗೆ ವಂದನೆಗಳು …. ಇದು ನಿಮ್ಮೆಲ್ಲರ ಮಾತುಗಳು, ಪದಗಳು ಮಾತ್ರ ನನ್ನವು…

    ಪ್ರತಿಕ್ರಿಯೆ
  21. nempe devaraj

    ಸಂಧ್ಯರವರೆ ನಿಮ್ಮ ಬರವಣಿಗೆ ನಮ್ಮನ್ನೆಲ್ಲ ಒಳಗೊಳಗೇ ಇರಿದಂತೆ ಅನಿಸಿದರೂ ಎಲ್ಲ ಸತ್ಯವನ್ನೂ ಸರಳವಾಗಿ ಹೇಳಿದ್ದೀರಿ.ಲೇಖನ ಚನ್ನಾಗಿದೆ.

    ಪ್ರತಿಕ್ರಿಯೆ
  22. ನಿವೇದಿತ ರವೀಶ್

    ಎಷ್ಟು ಚೆನ್ನಾಗಿ ಮನ ತಟ್ಟುವಂತೆ ಬರದಿದ್ದಿರಿ ಸಂಧ್ಯಾ ಅವರೇ .. …

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: