ಸಂಧ್ಯಾರಾಣಿ ಕಾಲಂ : ಈಗ ಅನಂತ್ ನಾಗ್ Vs ಅನಂತ್ ನಾಗ್!


 
ತೆರೆಯ ಮೇಲೆ ಆತ ಬಂದರೆ ಸಾಕು, ದಿಲೀಪ್ ಕುಮಾರ್ ನ ’ಉಡೆ ಜಬ್ ಜಬ್ ಜುಲ್ಫೆ ತೇರೆ, ಕಂವಾರಿಯೋಂಕ ದಿಲ್ ಮಚ್ ಲೇ’! ಹೌದು, ರೇಶ್ಮೆಗಿಂತಲೂ ನಾಜೂಕಾಗಿದ್ದ, ಹಣೆಯ ಮೇಲೆ ಸಮುದ್ರದ ತೆರೆಯಂತೆ ಬೀಳುತ್ತಿದ್ದ ತಲೆಗೂದಲನ್ನು ಆತ ಬೆರಳುಗಳಿಂದ ಹಿಂದಕ್ಕೊತ್ತಿ ಕೂರಿಸುತ್ತಿದ್ದರೆ ಡಿಟ್ಟೋ ಈ ಹಾಡು ನೆನಪಾಗುತ್ತಿತ್ತು! ಇವನ ಜೇನು ಕಣ್ಣು, ಒಂದು ನಮೂನೆ ಉಚ್ಚಾರಣೆಯ ಕನ್ನಡ ಭಾಷೆ, ನಿಲುವು ಎಲ್ಲವೂ ಆಕರ್ಷಕ… ಆಗ ನಮಗೆ ಪೋಸ್ಟರುಗಳು ಸಿಗುತ್ತಿರಲಿಲ್ಲ, ಆದರೆ ಸರಾಸರಿ ನೋಡಿದರೆ ಈತನ ಚಿತ್ರವಿದ್ದ ಪೇಪರ್ ಗಳೇ ಹೆಚ್ಚಾಗಿ ಕಾಲೇಜು ಹುಡುಗಿಯರ ಪುಸ್ತಕಗಳ ಬೈಂಡ್ ಆಗಿರುತ್ತಿದ್ದವು. ನಾನು ಅನಂತ್ ನಾಗ್ ಬಗ್ಗೆ ಮಾತನಾಡುತ್ತಿದ್ದೇನೆ.
ಅನಂತ್ ನಾಗ್ ಅಥವಾ ಅನಂತ್ ನಾಗರಕಟ್ಟೆ ಕರ್ನಾಟಕದವರೇ ಆದರೂ ಇವರು ಬಂದದ್ದು ಮುಂಬೈ ಬಸ್ ಮೂಲಕ .. ಶ್ಯಾಂ ಬೆನಗಲ್ ಅವರ ಕಲಾತ್ಮಕ ಚಿತ್ರಗಳಿಂದ ಬಂದ ಈ ಹುಡುಗ ಕನ್ನಡದ ಕಮರ್ಶಿಯಲ್ ನಟನಾಗಿ ಬೆಳೆಯುವಾಗ ಈ ಹುಡುಗನ ಪಾಲಿಗಿದ್ದ ಬಂಡವಾಳ ಕೇವಲ ಪ್ರತಿಭೆ. ಚಿತ್ರ ಜಗತ್ತಿನ ಯಾವುದೇ ಕೌಟುಂಬಿಕ ಹಿನ್ನಲೆ ಇಲ್ಲದೆ, ಬೆನ್ನಿಗೆ ಯಾವುದೇ ಕಮರ್ಶಿಯಲ್ ಚಿತ್ರದ ಯಶಸ್ಸಿನ ಪ್ಯಾರಾಚೂಟ್ ಇಲ್ಲದೆ ಈ ತರುಣ ಬಾಂಬೆಯಿಂದ ಬೆಂಗಳೂರಿಗೆ ಧುಮುಕಿದ್ದ. ನಿಶಾಂತ್, ಕಲಿಯುಗ್, ಗೆಹ್ರಾಯಿ, ಭೂಮಿಕಾ, ಮಂಗಳ್ ಸೂತ್ರ್. ಯುವ, ಕೊಂಡುರಾ, ಉತ್ಸವ್ ಮುಂತಾದ ಹಲವಾರು ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ಅನಂತ್ ಕನ್ನಡಕ್ಕೆ ಬಂದದ್ದು ಸಂಕಲ್ಪ ಎಂಬ ಹೊಸ ಅಲೆಯ ಚಿತ್ರದ ಮೂಲಕ.
ಹಿಂದೆಯೇ ಬಂದದ್ದು ಹಂಸಗೀತೆ. ಅದು ಸುಲಭದ ಪಾತ್ರವಾಗಿರಲಿಲ್ಲ. ತರಾಸು ಅವರ ಭೈರವಿ ವೆಂಕಟಸುಬ್ಬಯ್ಯನನ್ನು ಹೂಬೇಹೂಬು ಕಣ್ಣ ಮುಂದೆ ನಿಲ್ಲಿಸಿಬಿಟ್ಟರು ಅನಂತ್. ಸಣ್ಣವಯಸ್ಸಿನಲ್ಲೇ ಒಲಿದ ಅಪಾರವಾದ ಆ ಪ್ರತಿಭೆ, ಹಾಗಾಗೇ ಬಂದ ಅತಿಯಾದ ಆತ್ಮ ವಿಶ್ವಾಸ, ಕಣ್ಣ ಕೊನೆಯಲ್ಲಿ, ತುಟಿಯ ಕೊಂಕಿನಲ್ಲಿ ಆ ಆತ್ಮವಿಶ್ವಾಸ ಅಹಂಕಾರವಾದ ಪರಿ… ಅಂತಹ ಅಪ್ರತಿಮ ವಿದ್ವಾಂಸ ಚಂದ್ರಾಸಾನಿಯ ಎದಿರು ಪ್ರೇಮದಲ್ಲಿ ತಲೆಬಾಗುವುದು, ಅದಕ್ಕಾಗಿ ತನ್ನ ತಂಬೂರಿಯನ್ನೇ ಒತ್ತೆ ಇಡುವುದು…. ತರಾಸು ರವರ ಭಾವಪೂರಿತ ಪುಸ್ತಕವನ್ನು ಸಿನಿಮಾ ಆಗಿಸುವುದು ಸುಲಭವಲ್ಲ, ಆದರೆ ಈ ಹೊಸ ನಟ ಆ ಪಾತ್ರದಲ್ಲಿ ಒಡಮೂಡಿಬಿಟ್ಟಿದ್ದ. ನಂತರ ಬಯಲುದಾರಿ, ಕನ್ನೇಶ್ವರ ರಾಮ, ನಾ ನಿನ್ನ ಬಿಡಲಾರೆ, ಬರ, ಅವಸ್ಥೆ,… ಹೀಗೆ ಸಾಲು ಸಾಲು ಚಿತ್ರಗಳು ಬಂದವು.
ಆ ದಿನಗಳಲ್ಲಿ ಒಂದು ಚಿತ್ರ ಬಂದಿತ್ತು, ’ಧೈರ್ಯ ಲಕ್ಷ್ಮಿ’ ಅಂತ. ಅದರಲ್ಲಿ ಲಕ್ಷ್ಮಿಯದು ಟೈಟಲ್ ರೋಲ್. ಅನಂತ್ ನಾಗ್ ರವರದ್ದು ಹೆಣ್ಣೆಂದರೆ ಹೆದರುವ, ನಡುಗುವ ಗಂಡಿನ ಪಾತ್ರ. ಆ ಪಾತ್ರದಲ್ಲಿ ಅವರು ಎಷ್ಟು ಸಹಜವಾಗಿ ಅಭಿನಯಿಸಿದ್ದರು ಎಂದರೆ ಬಹುಷಃ ಅದು ಅವರಲ್ಲಿದ್ದ ಕಾಮಿಕ್ ಟೈಮಿಂಗ್ ಅನ್ನು ಸಿದ್ಧ ಮಾಡಿ ತೋರಿಸಿದ ಪಾತ್ರ. ಮುಂದೆ ಹಾಗೆ ಅನಂತ್ ಗೆ ಅಂತ ಒಂದು ರೀತಿಯ ಪಾತ್ರಗಳು ಚಿತ್ರರಂಗದಲ್ಲಿ ಮೀಸಲಾಯಿತು. ಆದರೆ ಹಾಸ್ಯಕ್ಕೆಂದೂ ಅನಂತ್ ಟೈಪ್ ಕಾಸ್ಟ್ ಆಗಲಿಲ್ಲ ಅನ್ನೋದು ಅನಂತ್ ರ ಪ್ರತಿಭೆಯ ವಿಸ್ತಾರಕ್ಕೆ ಒಂದು ಉದಾಹರಣೆ.
ಅನಂತ್ ನಾಗ್ ಅಂದ ಕೂಡಲೇ ಜೊತೆ ಜೊತೆಯಲ್ಲೇ ಶಂಕರ್ ನಾಗ್ ಅನ್ನೋ ಹೆಸರು ನಮಗರಿವಿಲ್ಲದಂತೇ ಬಂದುಬಿಡುತ್ತದೆ ಅಲ್ಲವೇ? ಅಣ್ಣ ತಮ್ಮಂದಿರಿಬ್ಬರದೂ ಅಗಾಧವಾದ ಪ್ರತಿಭೆ. ಶಂಕರ್ ನಾಗ್ ರಲ್ಲಿ ಒಂದು ಅಂತರ್ಗತವಾದ ಒರಟುತನ, ಒಂದು ಸೆಕ್ಶುವಲ್ ಸೆಳೆತ ಇತ್ತು. ಆತನ ವೇಗದ ನಡಿಗೆ, ಬಿರುಸಿನ ಮಾತು, ಚುರುಕು ಕಣ್ಣು, ನೋಡಿದರೆ ಒಮ್ಮೆ ಎದೆ ’ಝಲ್’ ಅನ್ನಬೇಕು! ಆದರೆ ಅನಂತ ಹಾಗಲ್ಲ, ನಾಜೂಕಾಗಿ ಸಂಜೆ ವಾಕಿಂಗ್ ಗೆ ಕರೆದೊಯ್ದು, ಮಲ್ಲಿಗೆ ಹೂ ಕೊಡಿಸಿ, ಜೋಪಾನವಾಗಿ ಕರೆತಂದು ಮನೆಗೆ ಬಿಡುವ ಗೆಳೆಯ. ಅನಂತ್ ಫ್ರೇಂನೊಳಗಣ ಚಿತ್ರ, ಶಂಕರ್ ಜೊತೆಗಿದ್ದು ಕಾಡುವ, ಕಾಡಿಸಿಕೊಳ್ಳುವ, ಒಡನಾಡಿ, ಹಾಗಾಗೆ ಇಬ್ಬರಿಗೂ ಚಿತ್ರರಂಗದಲ್ಲಿ ಪ್ರತ್ಯೇಕ ಸ್ಥಾನ, ಮಾರು ಕಟ್ಟೆ ಇತ್ತು.

ಇಬ್ಬರಿಗೂ ರಾಜಕೀಯ ಪ್ರಜ್ಞೆ ಮತ್ತು ಬದ್ಧತೆ ಎರಡೂ ಇದ್ದವು, ಒಂದೇ ಪ್ರಾಂತ್ಯದವರೆಂಬ ಕಾರಣಕ್ಕೋ ಅಥವಾ ಸಮಾನ ಮೌಲ್ಯಗಳ ಕಾರಣಕ್ಕೂ ಇಬ್ಬರೂ ರಾಮಕೃಷ್ಣ ಹೆಗಡೆಯವರನ್ನು ಬೆಂಬಲಿಸಿದ್ದರು. ಹೆಗಡೆ ಸಂಪುಟದ ಪೋಸ್ಟರ್ ಬಾಯ್ಸ್ ಎಂದು ಸಹಾ ಇವರನ್ನು ಕರೆಯುತ್ತಿದ್ದರು. ಅನಂತ್ ನಾಗ್ ಚುನಾವಣೆಯಲ್ಲೂ ಸ್ಪರ್ಧಿಸಿದ್ದಾರೆ, ಸೋತಿದ್ದಾರೆ, ಗೆದ್ದಿದ್ದಾರೆ.
ಅಣ್ಣ ತಮ್ಮಂದಿರ ಕಂಗಳಲ್ಲಿ ದಿನಕ್ಕೊಂದು ಕನಸು ಕುಡಿಯೊಡೆಯುತ್ತಿತ್ತು, ಅಥವಾ ಅದನ್ನು ಹೀಗೆ ಹೇಳಬಹುದೇನೋ, ತಮ್ಮನ ಕಣ್ಣಲ್ಲಿ ಕುಡಿಯೊಡಿಯುತ್ತಿದ್ದ ಕನಸುಗಳನ್ನು ಕಾಪಿಡುತ್ತಿದ್ದದ್ದು ಅಣ್ಣ. ಕಂಟ್ರಿ ಕ್ಲಬ್, ಸಂಕೇತ್ ಸ್ಟುಡಿಯೋ, ನಂದಿ ಬೆಟ್ಟಕ್ಕೆ ರೋಪ್ ವೇ ಯೋಜನೆ, ಅಮ್ಯೂಸ್ ಮೆಂಟ್ ಪಾರ್ಕ್, ಮಧ್ಯಮ ವರ್ಗದ ಜನರ ಮನೆ ಕಟ್ಟುವ ಕನಸಿಗೆ ಕಡಿಮೆ ಬೆಲೆಯ ಇಟ್ಟಿಗೆಗಳು. ಮೆಟ್ರೋ ರೈಲು ಯೋಜನೆ (ಹೌದು, ಈ ಮೆಟ್ರೋದ ಕನಸನ್ನು ಶಂಕರ್ ಅಂದೇ ಕಂಡಿದ್ದರು, ಒಮ್ಮೆ ಯೋಚಿಸಿ, ಆಗ ಈ ಯೋಜನೆ ಪ್ರಾರಂಭವಾಗಿದ್ದಿದ್ದರೆ ಟ್ರಾಫಿಕ್ ಸಮಸ್ಯೆಗಳು ಎಷ್ಟರ ಮಟ್ಟಿಗೆ ಕಡಿಮೆ ಇರುತ್ತಿತ್ತು, ಪರಿಸರ ಮಾಲಿನ್ಯ ಎಷ್ಟು ಕಡಿಮೆ ಇರುತ್ತಿತ್ತು, ವಾಹನಗಳ ದಟ್ಟಣೆ ಎಷ್ಟು ಕಡಿಮೆ ಇರುತ್ತಿತ್ತು). ಮುಂದಿನ ಮೂವತ್ತು ವರ್ಷಗಳ ವಿಷನ್ ಅದು. ಅಷ್ಟರಲ್ಲೇ ಕನ್ನಡಿಗರು ಎಂದೂ ಮರೆಯದಂತಹ ಒಂದು ಅಪಘಾತ, ಹಿಂದಿನ ದಿನ ಎಲ್ಲರ ಜೊತೆ ನಗುತ್ತಾ ಮಾತನಾಡಿದ ಶಂಕರ್ ಮರುದಿನ ಬೆಳಗಿನ ವೇಳೆಗೆ ’ಇನ್ನಿಲ್ಲ’ ಎನ್ನುವ ಸುದ್ದಿಯಾಗಿದ್ದರು. ಆಗ ಅನಂತ ತಲ್ಲಣಿಸಿದ ರೀತಿಯಿತ್ತಲ್ಲ, ತಮ್ಮನಿರಲಿ, ಮಗನಿಗಾಗಿ ಸಹ ಯಾವ ತಂದೆಯಾಗಲೀ ಹಾಗೆ ಪರಿತಪಿಸಿರಲಿಕ್ಕಿಲ್ಲ…

ಕೇವಲ ನಟನಾಗಿ ಮಾತ್ರ ಪರಿಚಿತನಾಗಿದ್ದ ಅನಂತ್ ರನ್ನು ನನ್ನ ಮನೆಯ ಸದಸ್ಯನೇನೋ ಅನ್ನುವ ಹಾಗೆ ನಮ್ಮಲ್ಲಿ ಒಡಮೂಡಿಸಿದ್ದು ಅವರು ಲಂಕೇಶ್ ಪತ್ರಿಕೆಗೆ ಬರೆಯುತ್ತಿದ್ದ ’ನನ್ನ ತಮ್ಮ ಶಂಕರ’ ಎನ್ನುವ ಮಾಲಿಕೆ. ಅವರಿಗೂ ತಮ್ಮನಿಗೂ ವಯಸ್ಸಿನಲ್ಲಿ ಅಂತಹ ವ್ಯತ್ಯಾಸವೇನೂ ಇಲ್ಲ, ಆದರೂ ತಮ್ಮನನ್ನು ಎಂದೂ ಮಗನಂತೆಯೇ ಬೆಳೆಸಿದವರು ಅನಂತ್. ಅಪ್ಪ-ಅಮ್ಮ ತಮ್ಮ ಮೊದಲ ಮಗುವಿನ ಬಗ್ಗೆ ಸಂಭ್ರಮದಿಂದ ಹೇಳಿಕೊಳ್ಳುತ್ತಾರಲ್ಲ ಹಾಗೆ ಹೇಳಿಕೊಳ್ಳುತ್ತಾರೆ ಅವರು ತಮ್ಮ ಶಂಕರನ ಬಗ್ಗೆ, ಪುಸ್ತಕ ಓದುತ್ತಾ, ಓದುತ್ತಾ ’ನಮ್ಮ ಶಂಕರ್’ ಇನ್ನಷ್ಟು ನಮ್ಮವನಾಗದಿದ್ದರೆ ಕೇಳಿ. ಅಣ್ಣ ತಮ್ಮ ಇಬ್ಬರಿಗೂ ಪರಸ್ಪರರಲ್ಲಿದ್ದ ಪ್ರೀತಿ ಅಭಿಮಾನಗಳು ಒಂದೇ ರೀತಿ. ಅವರಿಬ್ಬರೂ ನಟಿಸಿದ್ದ ಮಿಂಚಿನ ಓಟ, ಆಕ್ಸಿಡೆಂಟ್ ಚಿತ್ರಗಳು ಇಂದಿಗೂ ನೆನಪಾಗಿ ಕಾಡುತ್ತವೆ.
ಶಂಕರ್ ನನ್ನು ಕಳೆದುಕೊಂಡ ಮೇಲೆ ಅನಂತ್ ರ ಅಂತಃಸತ್ವವೇ ಹೊರಟು ಹೋಯಿತೇನೋ…. ಒಮ್ಮೆ ಮದ್ರಾಸಿಗೆ ಯಾವುದೋ ಶೂಟಿಂಗ್ ಗೆಂದು ಹೋಗಿದ್ದ ಅನಂತ್ ನಡು ರಾತ್ರಿ ಪತ್ನಿ ಗಾಯತ್ರಿಗೆ ಫೋನ್ ಮಾಡಿ, ತಮಗಿನ್ನು ಬದುಕುವ ಆಸೆಯಿಲ್ಲ, ಕೊನೆ ವಿದಾಯ ಹೇಳಲು ಫೋನ್ ಮಾಡಿದೆ ಎಂದರಂತೆ. ಗಾಯತ್ರಿ ಪರಿಸ್ಥಿತಿ ಏನಾಗಿರಬೇಡ? ಎಲ್ಲೋ ದೂರದ ಊರಿನಲ್ಲಿ ಬದುಕಿನ ಕೊನೆಯ ಮೆಟ್ಟಿಲಿಂದ ’ಇದೋ ಹಾರುತ್ತೇನೆ’ ಎಂದು ನಿಂತಿರುವ ಗಂಡ. ಯಾರಿಗಾದರೂ ಫೋನ್ ಮಾಡಿ ಸಹಾಯ ಕೇಳೋಣವೆಂದರೆ, ಫೋನ್ ಇಟ್ಟರೇ ಈ ಮನುಷ್ಯ ಏನು ಮಾಡಿಕೊಳ್ಳುತ್ತಾನೋ ಎನ್ನುವ ಭಯ. ಇಡೀ ರಾತ್ರಿ ಮಾತನಾಡುತ್ತಾ, ಆಡುತ್ತಾ ಗಂಡನನ್ನು ಒಂದೊಂದು ಹೆಜ್ಜೆ ಬದುಕಿನತ್ತ ಕರೆದುಕೊಂಡು ಬಂದು, ಬೆಳಗಿನ ಜಾವ ಗಂಡ, ’ನಿದ್ದೆ ಬರ್ತಾ ಇದೆ, ಮಲಗ್ತೀನಿ’ ಅಂದಾಗ ನಿಟ್ಟುಸಿರಿಟ್ಟು. ಗಂಡ ಮಲಗಿದ ಮೇಲೆ, ಹೋಟಲಿನವರಿಗೆ ಫೋನ್ ಮಾಡಿದ್ದರಂತೆ.
ನಟನ ವೈಯಕ್ತಿಕ ಬದುಕು ಏನೇ ಇರಲಿ, ಕ್ಯಾಮೆರಾ ಸ್ಟಾರ್ಟ್ ಆಗಿ, ’ಆಕ್ಶನ್’ ಅಂದ ಮೇಲೆ ಆತ ಎಷ್ಟು ಮಟ್ಟಿಗೆ ಪಾತ್ರವಾಗುತ್ತಾನೆ ಎನ್ನುವುದರ ಮೇಲೆ ಆ ನಟನ ನಟನಾಗುವಿಕೆ ಸಿದ್ಧವಾಗುತ್ತದೆ. ಅನಂತರನ್ನು ಹಾಗೆ ನೋಡಬೇಕಾದರೆ ನೋಡಬೇಕಾದ ಚಿತ್ರ ಬೆಳದಿಂಗಳ ಬಾಲೆ. ’ವೆನ್ನೆಲ್ಲೋ ಆಡಪಿಲ್ಲ’ ಎನ್ನುವ ಯಂಡಮೂರಿಯ ತೆಲುಗು ಕಾದಂಬರಿ, ಕನ್ನಡಕ್ಕೆ ಅನುವಾದವಾಗಿ, ಸುಧಾದಲ್ಲಿ ಧಾರಾವಾಹಿಯಾಗಿ ಬಂದಾಗಲೇ ನಮ್ಮೆಲ್ಲರನ್ನೂ ಒಂದೇ ಏಟಿಗೆ ಬೌಲ್ ಮಾಡಿ ಬಿಸಾಕಿತ್ತು. ಪ್ರತಿ ವಾರ ಮುಂದಿನ ಕಂತಿಗಾಗಿ ತುದಿಗಾಲಲ್ಲಿ ಕಾಯುತ್ತಿದ್ದೆವು, ಗಂಧರ್ವ ಕನ್ಯೆಯಂತಹ ನಾಯಕಿ, ಅವಳ ಬುದ್ಧಿವಂತಿಕೆ, ನಾಯಕನಿಗೆ ಆಕೆ ಎಸೆಯುವ ಸವಾಲುಗಳು, ಚೆಸ್ ಆಟಗಾರ ನಾಯಕ, ಚೆಸ್ ಆಟದ ರೀತಿಯಲ್ಲೇ ಒಂದೊಂದೇ ಮನೆ ಜರುಗಿ, ಮುಂದುವರೆದು ರಾಣಿಯನ್ನು ಸಮೀಪಿಸುವ ಆ ಧಾರಾವಾಹಿ… ಸುನಿಲ್ ಕುಮಾರ್ ದೇಸಾಯಿ ಆ ಕಥೆಯನ್ನು ಕೈಗೆತ್ತಿಕೊಂಡಾಗ ಅವರಿಗಿದ್ದ ಒಂದೇ ಆಯ್ಕೆ ಅನಂತ್. ಅಕಸ್ಮಾತ್ ಅನಂತ್ ಆ ಪಾತ್ರದಲ್ಲಿ ನಟಿಸದಿದ್ದರೆ ನಾನು ಆ ಚಿತ್ರವನ್ನೇ ಮಾಡುತ್ತಿರಲಿಲ್ಲ ಎಂದು ದೇಸಾಯಿ ಒಂದು ಸಂದರ್ಶನದಲ್ಲಿ ಹೇಳುತ್ತಾರೆ.

ಆ ಚಿತ್ರ ಮಾಡುವಾಗಾಗಲೇ ಅನಂತ್ ರಿಗೆ ನಡುವಯಸ್ಸು. ಆದರೆ ಅದನ್ನು ನೋಡುವಾಗ ಅವರ ವಯಸ್ಸು ಯಾರಿಗೆ ನೆನಪಿಗೆ ಬಂದಿತ್ತು? ಅವಳಿಗಾಗಿ ಪರಿತಪಿಸುವ, ’ರೇವಂತ್, ಯೂ ಆರ್ ಗೋಯಿಂಗ್ ಟು ಲೂಸ್ ಹರ್’ ಎಂದು ಒದ್ದಾದುವ ಅನಂತ್ ರನ್ನು ನೋಡಿದಾಗ ಆ ತಳಮಳದಲ್ಲಿ ಎಲ್ಲರೂ ತಮ್ಮ ಅಂತಹ ಒಂದು ಘಳಿಗೆಯನ್ನು ನೆನೆಸಿಕೊಂಡಿದ್ದರು. ಅದು ಕೇವಲ ಅನಂತ್ ನಾಗ್ ಚಿತ್ರ, ಉಳಿದವರೆಲ್ಲಾ ಚೆಸ್ ಆಟದ ಕಾಯಿಗಳು ಅದರಲ್ಲಿ ಎಂದು ಅನ್ನಿಸುವ ಹಾಗೆ ಪಾತ್ರವನ್ನು ಆವಾಹಿಸಿಕೊಂಡಿದ್ದರು ಅನಂತ್.
ಬಹುಷಃ ಅನಂತ್ ಗೆ ನಟನೆಯಲ್ಲಿದ್ದ ಎರಡೇ ತೊಡಕುಗಳು ಅಂದರೆ ನೃತ್ಯ ಮತ್ತು ಹೊಡೆದಾಟ. ಅಲ್ಲಿ ಅವರು ಎಷ್ಟು ಪರೆದಾಡುತ್ತಿದ್ದರು ಅಂದರೆ ಅದು ಅಚಾನಕ್ ಹಾಸ್ಯ ಸನ್ನಿವೇಶ ಆಗೋಗ್ತಾ ಇತ್ತು!
ಅನಂತ್ ರವರ ಅಭಿನಯ ಹಾಗೆ ಮತ್ತೊಮ್ಮೆ ಮಿಂಚಿದ್ದು, ಕಾಮನಬಿಲ್ಲು ಚಿತ್ರದಲ್ಲಿ. ಗೆಳೆಯ ರಾಜ್ ಕುಮಾರ್ ಗೆ ಊರಿನ ಚಿಕ್ಕ ಗೌಡನಿಂದ ಮೋಸವಾಗಿದ್ದು ಗೊತ್ತಾಗ ಕೂಡಲೇ ಮಚ್ಚೆಳೆದುಕೊಂಡು ತಿರುಗಿ ಬೀಳುವ ಪ್ರಾಣ ಸ್ನೇಹಿತನ ಪಾತ್ರದಲ್ಲಿ, ಆ ಘಳಿಗೆಯಲ್ಲಿ ಅನಂತ್ ನಿಜಕ್ಕೂ ರಾಜ್ ಕುಮಾರ್ ರನ್ನು ಮರೆಸಿಬಿಟ್ಟಿದ್ದರು. ನಿಷ್ಕರ್ಷ ಚಿತ್ರದ ಸಣ್ಣ ಪಾತ್ರದಲ್ಲೂ ಅನಂತ್ ನೆನಪಿನಲ್ಲಿ ಳಿಯುತ್ತಾರೆ.
’ನೋಡಿ ಸ್ವಾಮಿ ನಾವಿರೋದು ಹೀಗೆ’ ಯಲ್ಲಿ ಕಂಚು ಕಂಠದ ಭೀಮ್ ಸೇನ್ ಜೋಶಿ ಯವರ ಸ್ವರವೇ ತಾನಾಗಿ ನಟಿಸಿದ್ದ ’ಭಾಗ್ಯದ ಲಕ್ಷ್ಮಿ ಬಾರಮ್ಮ’ ಹಾಡನ್ನು ಮರೆಯಲಾದೀತೆ?
ಮೊನ್ನೆ ಮೊನ್ನೆ ಬಂದ ಮೌನಿ, ಪಂಚರಂಗಿ, ಪರಮಾತ್ಮ, ಗಣೇಶ ಸೀರೀಸ್ ಚಿತ್ರಗಳು, ಅನೇಕ ಹಾಸ್ಯ ಚಿತ್ರಗಳು ಮತ್ತು ಅದಕ್ಕೆ ಸಂಪೂರ್ಣ ವ್ಯತಿರಿಕ್ತವಾದ ನೋಡಿ ಸ್ವಾಮಿ ನಾವಿರೋದು ಹೀಗೆ ಯ ಗಂಭೀರ ಸಂಗೀತಗಾರ… ಯಾವುದನ್ನು ಹೆಳುವುದು. ಅನಂತ್ ಗೆ ಯಾವುದೇ ಇಮೇಜ್ ಚೌಕಟ್ಟಾಗಲೇ ಇಲ್ಲ.
ಆಯಿತು ಇನ್ನು ಅನಂತ್ ನಾಗ್ ರ ಚಾರ್ಮ್ ಗೆ ನಾವು ಪ್ರತಿರೋಧಕ ಶಕ್ತಿ ಬೆಳೆಸಿಕೊಂಡಿದ್ದೇವೆ ಅಂದುಕೊಂಡಾಗ ಬಂದ ಕವಿತಾ ಲಂಕೇಶರ ’ಪ್ರೀತಿ, ಪ್ರೇಮ, ಪ್ರಣಯ’ ಮತ್ತೆ ನಮ್ಮ ಅನಿಸಿಕೆಯನ್ನು ಸುಳ್ಳು ಮಾಡಿತ್ತು. ಇಡೀ ಚಿತ್ರದಲ್ಲಿ ಮಕ್ಕಳಿಗಿಂತ, ಮೊಮ್ಮಗನಿಗಿಂತಾ ಚಟುವಟಿಕೆಯಲ್ಲಿ ಮನಸ್ಸನ್ನು ಆವರಿಸಿಕೊಂಡಿದ್ದು ಮತ್ತೆ ಅನಂತ ನಾಗ್! ಆ ಪಾತ್ರವನ್ನು, ಆ ಸನ್ನಿವೇಶಗಳನ್ನು ಹಾಸ್ಯಾಸ್ಪದವಾಗದಂತೆ ನಿಭಾಯಿಸುವ ಸವಾಲನ್ನು ಅನಂತ ನಿರಾಯಾಸವಾಗಿ ನಿಭಾಯಿಸಿದ್ದರು.
ಅವರು ಸಪ್ತಭಾಷಾ ತಾರೆ. ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಮರಾಠಿಯ ಅಮೋಲ್ ಪಾಲೇಕರ್ ನಿರ್ದೇಶನದ ‘ಅನಹತ್’, ಮಲಯಾಳಂನ ‘ಸ್ವಾತಿ ತಿರುನಾಳ್’, ತೆಲುಗಿನ ‘ಅನುಗ್ರಹಂ’, ಇಂಗ್ಲಿಷಿನ ‘ಸ್ಟಂಬಲ್’ ಮುಂತಾದ ಹಲವಾರು ಚಿತ್ರಗಳು ಇಲ್ಲಿ ಉದಾಹರಣೆಗಳು ಮಾತ್ರ.
ಇಂತಹ ಅನಂತ್ ಮಾಲ್ಗುಡಿ ಡೇಸ್ ನ ಮಿಠಾಯಿವಾಲಾನ ಮರೆಯಲಾಗದ ಪಾತ್ರದ ನಂತರ ತುಂಬಾ ದಿನಗಳ ಮೇಲೆ ಟಿವಿ ಗೆ ಬಂದಿದ್ದರು, ಗರ್ವ ಧಾರಾವಾಹಿಯ ಮೂಲಕ. ಪ್ರಕಾಶ್ ಬೆಳವಾಡಿಯವರ ನಿರ್ದೇಶನ. ಅಲ್ಲಿದ್ದದ್ದೆಲ್ಲಾ ಘಟಾನುಘಟಿಗಳೇ. ಅನಂತ್, ಜಯಶ್ರೀ, ಭಾರ್ಗವಿ ನಾರಾಯಣ್, ಸುಧಾ ಬೆಳವಾಡಿ, ಎಂ ಡಿ ಪಲ್ಲವಿ, ನಾಗೇಶ್ ಶಾ ಇನ್ನೂ ಹಲವಾರು ರಂಗಭೂಮಿ ಪ್ರತಿಭೆಗಳು. ಅನಂತ್ ಪಾತ್ರ ಒಬ್ಬ ಲಿಕ್ಕರ್ ಉದ್ಯಮಪತಿಯದ್ದು. ಆ ಪಾತ್ರ ಹರಿ ಖೋಡೆಯವರನ್ನು ಹೋಲುತ್ತದೆ ಎಂದು ಹೇಳಲಾಗುತ್ತಿತ್ತು. ಆ ಪಾತ್ರಕ್ಕೆ ಬೇಕಾದ ಗತ್ತು, ಒಬ್ಬ ಉದ್ಯಮಿಯಾಗಿ ಖಡಕ್ ನಡವಳಿಕೆ, ಅಪ್ಪನಾಗಿ, ಮಗನಾಗಿ…. ಆ ಕಿರುತೆರೆಯಲ್ಲಿ ಅನಂತ್ ನಟನೆಯ ವಿಶ್ವ ವಿದ್ಯಾಲಯವನ್ನೇ ತೆರೆದಿಟ್ಟಿದ್ದರು.
ನಂತರ ಬಂದದ್ದು ಪ್ರೀತಿ ಇಲ್ಲದ ಮೇಲೆ, ವಿನು ಬಳಂಜ ಅವರ ನಿರ್ದೇಶನದಲ್ಲಿ. ಒಬ್ಬ ನ್ಯಾಯಾಧೀಶ ಮತ್ತವನ ಸಂಸಾರ, ಅಚಾನಕ್ಕಾಗಿ ಆತನ ಹೆಂಡತಿಯಾಗಿ ಒದಗಿ ಬರುವ ಚಿಕ್ಕ ವಯಸ್ಸಿನ ಹೆಂಡತಿ, ಧಾರಾವಾಹಿಯ ಸಮಯಕ್ಕನುಗುಣವಾಗಿ ನಮ್ಮ ಊಟದ ಸಮಯ ನಿರ್ಧಾರವಾಗುತ್ತಿತ್ತು.
ಈಗ ಇಷ್ಟು ವರ್ಷಗಳ ಮೇಲೆ ಮತ್ತೆ ಕಿರುತೆರೆಗೆ ಬಂದಿದ್ದಾರೆ ಅನಂತ್. ಸಾಧಾರಣವಾಗಿ ಒಬ್ಬ ನಟನ ಎರದು ಚಿತ್ರಗಳು ಒಂದೇ ಸಮಯಕ್ಕೆ ಬಿಡುಗಡೆಯಾಗುವುದಿಲ್ಲ, ಪರಸ್ಪರ ಸ್ಪರ್ಧೆಗೆ ಬೀಳಬಾರದು ಎಂದೇ ಸ್ವಲ್ಪ ದಿನಗಳ ಅಂತರದಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುತ್ತಾರೆ. ಆದರೆ ಕನ್ನಡ ಕಿರುತೆರೆಯಲ್ಲೀಗ ಅನಂತ್ ನಾಗ್ ವರ್ಸಸ್ ಅನಂತ್ ನಾಗ್ ಕಾಲ!
ಹೌದು ಅನಂತ ಈ ಟಿವಿಯಲ್ಲಿ ಜೋಗಿ ಮತ್ತು ವಿನು ಬಳಂಜರ ಚಿಟ್ಟೆ ಹೆಜ್ಜೆ ಜಾಡು ಮತ್ತು ಜೀ ಟಿ ವೀಯಲ್ಲಿ ಶ್ರೀರಾಂ ಮತ್ತು ನಾಗತಿಹಳ್ಳಿ ಕಾಂಬಿನೇಶನ್ನಿನಲ್ಲಿ ’ನಿತ್ಯೋತ್ಸವ’ ದಲ್ಲಿ ಬರುತ್ತಿದ್ದಾರೆ. ಅದೂ ಒಂದೇ ಸಮಯದಲ್ಲಿ! ಸಧ್ಯ ಧಾರಾವಾಹಿಗಳು ಮರುಪ್ರಸಾರ ಆಗುತ್ತವೆ ಎನ್ನುವುದೊಂದು ಸಮಾಧಾನಕಾರಿ ವಿಷಯ!
ಮೊನ್ನೆ ಟಿವಿ ವಾಹಿನಿ ಒಂದರಲ್ಲಿ ಒಂದು ಸಂವಾದ ನಡೆಯುತ್ತಿತ್ತು. ಅದರಲ್ಲಿ ಅನಂತ್ ಸಹ ಇದ್ದರು, ಆಗ ಮಾತನಾಡಿದ್ದ ಹೊಸ ನಟಿ ನಯನಾಳಿಂದ ಹಿಡಿದು, ನಟಿ ಸೀತಾ ಕೋಟೆ ಯವರ ವರೆಗೆ ಅಲ್ಲಿದ್ದ, ಕಾಲ್ ಮಾಡಿದ್ದ ಹೆಂಗಳೆಯರ ದೃಷ್ಟಿಯಲ್ಲಿ ಅನಂತ ನಾಗ್ ಚಾರ್ಮ್ ಒಂದಿಷ್ಟಾದರೂ ಕುಂದಿರಲಿಲ್ಲ! ಅಥವಾ ಅನಂತ್ ಅವರ ಭಾಷೆಯಲ್ಲೇ ಹೇಳುವುದಾದರೆ, ಸ್ಕಾಚ್ ಹಳೆಯದಾದಷ್ಟೂ ಅದರ ಮೋಹಕ ಗೊಳಿಸುವ ಸಾಮರ್ಥ್ಯ ಹೆಚ್ಚಾಗುತ್ತಾ ಹೋಗುತ್ತದೆ! ಚಿಟ್ಟೆ ಹೆಜ್ಜೆ ಜಾಡು ಹಿಡಿಯುತ್ತಾ ಹೋಗುವ ಅನಂತ್ ನಾಗರನ್ನು ನೋಡಿದರೆ ಈ ಮಾತನ್ನು ಪ್ರಮಾಣಿಸಿ ನೋಡದೆಯೇ ಒಪ್ಪಿಬಿಡಬೇಕು ಅನ್ನಿಸುತ್ತಿದೆ!

‍ಲೇಖಕರು avadhi

September 27, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

24 ಪ್ರತಿಕ್ರಿಯೆಗಳು

  1. sunil rao

    Beautiful and beautiful writeup as ananth nag
    Avara sanna sanna expression, mukhada charye, nagu haagu dhwaniyannu naanu innillada haage preetisuttene.
    Itteechege shuruvaada chitte hejjeyalloo..
    Ananth effects ide…
    Malgudi days episode antoo mareyo haage illa…

    ಪ್ರತಿಕ್ರಿಯೆ
  2. Sharmila

    “ಸ್ಕಾಚ್ ಹಳೆಯದಾದಷ್ಟೂ ಅದರ ಮೋಹಕ ಗೊಳಿಸುವ ಸಾಮರ್ಥ್ಯ ಹೆಚ್ಚಾಗುತ್ತಾ ಹೋಗುತ್ತದೆ” neevu anubhavisi heege heltiddeeraa akka?

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ‘ಅಥವಾ ಅನಂತ್ ಅವರ ಭಾಷೆಯಲ್ಲೇ ಹೇಳುವುದಾದರೆ, ಸ್ಕಾಚ್ ಹಳೆಯದಾದಷ್ಟೂ ಅದರ ಮೋಹಕ ಗೊಳಿಸುವ ಸಾಮರ್ಥ್ಯ ಹೆಚ್ಚಾಗುತ್ತಾ ಹೋಗುತ್ತದೆ! ಚಿಟ್ಟೆ ಹೆಜ್ಜೆ ಜಾಡು ಹಿಡಿಯುತ್ತಾ ಹೋಗುವ ಅನಂತ್ ನಾಗರನ್ನು ನೋಡಿದರೆ ಈ ಮಾತನ್ನು ಪ್ರಮಾಣಿಸಿ ನೋಡದೆಯೇ ಒಪ್ಪಿಬಿಡಬೇಕು ಅನ್ನಿಸುತ್ತಿದೆ!’ – ಪ್ರಮಾಣಿಸಿ ನೋಡದೆಯೇ ಒಪ್ಪುತ್ತೇನೆ ಶರ್ಮಿಳಾ 🙂
      – ಸಂಧ್ಯಾ ರಾಣಿ

      ಪ್ರತಿಕ್ರಿಯೆ
  3. K.S Parameshwar

    ಬರವಣಿಗೆಯ ಬಗೆಗೆ ಮಾತಿಲ್ಲ. ಸಿಂಪ್ಲಿ ಸೂಪರ್ಬ್ ಸಂಧ್ಯಾ. ಅನಂತ್ ಸರ್ ನೋಡಿಯೇ ನಾನು ಕೈತುಂಬಾ ಸಂಬಳ ಬರುತ್ತಿದ್ದ ಇದ್ದ ಕೆಲಸ ಬಿಟ್ಟು ಸಿನಿಮಾ ಕಡೆ ವಾಲಿದ್ದು.

    ಪ್ರತಿಕ್ರಿಯೆ
  4. Pramod

    ಸೂಪರ್ 🙂 ಅನ೦ತ್ ನಾಗ್ ಅವರು ಸೀನ್ ಶೂಟಿ೦ಗ್ ಮಾಡುವಾಗ ಬೇಕಾದ ಎನರ್ಜಿ, ಕ್ಯಾರೆಕ್ಟರ್ ಸ್ಟ್ರೆ೦ಥ್ ಎಲ್ಲಾ ಪ್ರಾಕ್ಟೀಸ್ ಅಲ್ಲೇ ಖಾಲಿ ಆಗುತ್ತೆ ಅ೦ತ ಪ್ರಾಕ್ಟೀಸ್ ನಲ್ಲಿ ಸುಮ್ಮನೆ ಡೈಲಾಗ್ ಓದುತ್ತಿದ್ದರ೦ತೆ 🙂
    ನ್ಯಾಚುರಲ್, ರಿಯಲಿಸ್ಟಿಕ್, ಪರ್ಫೆಕ್ಟ್ ಕಾಮಿಡಿ, ಡೈಲಾಗ್ ಟೈಮಿ೦ಗ್ ನಟನೆಗೆ ಅನ೦ತ್ ನಾಗ್ ಸಾಟಿಯೇ ಇಲ್ಲ.

    ಪ್ರತಿಕ್ರಿಯೆ
  5. ananth ks

    ಅನಂತನಾಗ ಬಗ್ಗೆ ಬರೆದ ಉತ್ತಮ ಲೇಖನ ತಮಗೆ ಅನಂತಾನಂತ ವಂದನೆಗಳು

    ಪ್ರತಿಕ್ರಿಯೆ
  6. g.n.nagaraj

    ಅಂಬಾ ತವ ಪದಾಂಭೋಜ ಭಕ್ತಿಂ ದೇಹಿಮೇ, ತ್ರಿಪುರ ಭೈರವೀ, ನಾಮ ಸಮೇತಂ ಕೃತ ಸಂಕೇತಂ ವಾದಯತೇ ಮೃದು ವೇಣುಂ,ವದಸಿಯದಿ ಕಿಂಚಿದಪಿ ದಂತರುಚಿ ಕೌಮುದೀ, ಹೀಗೆ ಹಂಸಗೀತೆಯ ೀ ಹಾಡುಗಳನ್ನು ಅನಂತನಾಗ್ ರವರು ಅಭಿನಯಿಸಿದ ರೀತಿ ಗಿವಿ ಐಯ್ಯರ್ ಚಿತ್ರ ರೂಪಿಸಿದ ರೀತಿ ಯೇ ಸಂಸ್ಕೃತ ಎಂದೂ ಕಲಿಯದ ನನಗೆ ಸಂಸ್ಕೃತ ಕಲಿಸಿದವರು.ಜಯದೇವಕವಿಯ ‘ ಗೀತ ಗೋವಿಂದ’ದ ಪರಿಚಯ ಮಾಡಿಸಿದವರು.ಹಂಸಗೀತೆಯ ಹಾಡುಗಳನ್ನೆಲ್ಲಾ ಬಾಯಿಪಾಠ ಮಾಡಿಸಿದವರು.ಅನಂತನಾಗ್ ರಂತಹ ಪ್ರತಿಭಾನ್ವಿತ ನಟರನ್ನು ಬಳಸಿಕೊಳ್ಳಲಾರದ ಬೌದ್ಧಿಕ ದಾರಿದ್ರ್ಯ ನಮ್ಮ ಸಿನೆಮಾ ರಂಗಕ್ಕೆ. ಪಾರ್ಮುಲಾಗಳಲ್ಲೇ ಸಿಕ್ಕಿ ರೀಮೇಕ್ ಗಳಲ್ಲೇ ಮುಳಗಿ ನಮ್ಮ ಸಂಸ್ಕೃತಿಯನ್ನೇ ಹೊಲಸೆಬ್ಬಿಸುತ್ತಿರುವ, ಬೇಜವಾಬ್ದಾರಿ ಉಡಾಳತನವನ್ನು ಕ್ರೌರ್ಯದ ಮನೋಭಾವವನ್ನು ಬೆಳೆಸುವುದರಲ್ಲಿ ಕೃತಾರ್ಥವಾಗುತ್ತಿರುವ ನಮ್ಮ ಚಲನ ಚಿತ್ರ ವ್ಯವಸ್ಥೆ, ಮುಖ್ಯಾವಾಗಿ ರಾಜ್ಯಾದ್ಯಂತ ಕಿರು ಥಿಯೇಟರ್ ಗಳ ಜಾಲವೊಂದರ ಅಭಾವ ನಮ್ಮ ದೇಶದ ರಾಜ್ಯದ ಚಲನಚಿತ್ರ ಸಾಧ್ಯತೆಗಳನ್ನು ನುಂಗಿ ನೊಣೆಯುತ್ತಿದೆ.ನೋಡುಗರೇ ಒಂದು ಚಳುವಳಿಯಾಗಿ ಒಂದು ನೋಡುಗ ಜಾಲವನ್ನು ರೂಪಿಸಿಕೊಳ್ಳುವವರೆಗೂ ಇಂತಹ ಅನೇಕ ಪ್ರತಿಭೆಗಳು ಕಾಡ ಬೆಳದಿಂಗಳು. ಧಾರಾವಾಹಿಗಳೂ ಅವರ ಪ್ರತಿಭೇಗೇ ಸವಾಲಾಗುವ, ಅದನ್ನು ‘ಮಾಲ್ಗುಡಿ ಡೇಸ್’ ನಂತಹ ಉತ್ತಮ ಸಮಾಜವನ್ನು ರೂಪಿಸುವ ಕೆಲಸದಲ್ಲಿ ಬಳಸುವ ಪಾತ್ರಗಳೇನಲ್ಲ.

    ಪ್ರತಿಕ್ರಿಯೆ
  7. ಉಷಾಕಟ್ಟೆಮನೆ

    ಕನ್ನಡ ಚಿತ್ರರಂಗದಲ್ಲಿ ಮೇರು ನಟರಿರಬಹುದು, ಆದರೆ ಪ್ರಣಯ ಸನ್ನಿವೇಶಗಳನ್ನು ಅತ್ಯಂತ ಸಹಜವಾಗಿ, ನವೀರಾಗಿ ಅಭಿವ್ಯಕ್ತಿಸಬಲ್ಲ ಏಕೈಕ ನಟರೆಂದರೆ ಅನಂತನಾಗ್ ಮಾತ್ರ. ಹಾಗಾಗಿಯೇ ಅವರು ನನ್ನ ಅತ್ಯಂತ ಮೆಚ್ಚಿನ ನಟ. ಅವರ ಬೆಳದಿಂಗಳ ಬಾಲೆ ಇಂದಿಗೂ ನನ್ನ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಒಂದು..ಆ ಚಿತ್ರದ ಕೊನೆಯ ದೃಶ್ಯವನ್ನು ನಾನೆಂದೂ ಮರೆಯಲಾರೆ. ನಾಯಕಿಯ ಮುಖದರ್ಶನಕ್ಕೆಂದು ಮುಂದಡಿಯಿಟ್ಟ ಕಾಲನ್ನು ಆತ ಹಿಂತೆಗೆದುಕೊಳ್ಳುವ ರೀತಿ..ಆಗಿನ ಆತನ ಮುಖ ಭಾವ ಇಂದಿಗೂ ನನಗೆ ಹಲವು ವಿಷಯಗಳಿಗೆ ಸ್ಪೂರ್ತಿ. ಕೆಲವು ಕನಸುಗಳು ಕನಸಾಗಿಯೇ ಇರಬೇಕು.
    ಅವರ ’ನಿತ್ಯೋತ್ಸವ’ ಧಾರಾವಾಹಿಯನ್ನು ವೀಕ್ಷಿಸಲು ನಾನು ಉತ್ಸುಕಳಾಗಿದ್ದೇನೆ.. ಯಾಕೆಂದರೆ ಮಧ್ಯವಯಸ್ಸಿನ ನಂತರದ ಗಂಡು-ಹೆಣ್ಣಿನ ಸಾಂಗತ್ಯದ ಕಥಾ ಹಂದರವನ್ನು ಹೊಂದಿದೆಯಂತೆ..!

    ಪ್ರತಿಕ್ರಿಯೆ
  8. Gopaal Wajapeyi

    Anant Nag avarannu namma munde ‘nillisida’ nimma reeti tumba ishta aayitu.

    ಪ್ರತಿಕ್ರಿಯೆ
  9. paresh

    just watched an interview with ananthnag in suvarna news now the artticle great

    ಪ್ರತಿಕ್ರಿಯೆ
  10. bharathi b v

    Flash back ge karkondu hogi bittiddi Sandhya oduvashtoo hottu. Tumba chendada baraha

    ಪ್ರತಿಕ್ರಿಯೆ
  11. Anonymous

    ಅಕ್ಕ ತುಂಬಾ ಖುಷಿ ಆಯಿತು ಓದಿ…. ಇವರೆಲ್ಲ ನಮಗೆ ಸ್ಪೂರ್ತಿ ,,,, ಎಲ್ಲಾ ವಿಚಾರವನ್ನ ನಮ್ಮೆಲರ ಮುಂದೆ ಇಟ್ಟ ನಿನಗೂ ಧನ್ಯವಾದ ಅಕ್ಕ…

    ಪ್ರತಿಕ್ರಿಯೆ
  12. Ganadhalu srikanta

    ಪ್ರೀತಿ ಪ್ರೇಮ ಪ್ರಣಯ – ಸಿನಿಮಾ ರಿಲೀಸ್ ಆದಾಗ ಕೆಲವು ಹೆಂಗಳೆಯರು ಅನಂತ್ ಗೆ ಫೋನಾಯಿಸಿ, ನನಗೂ ನಿಮ್ಮಂತಹ ಗೆಳತನ ಬೇಕು ಎಂದಿದ್ದರಂತೆ. ಸ್ವತಃ ಅನಂತ್ ಅವರೇ ಸಿನಿಮಾ ಕುರಿತು ಮಾತನಾಡುವಾ ಈ ಸಂದರ್ಭಗಳನ್ನು ವಿವರಿಸಿದ್ದರು. ಅಂಥ ನೈಜ ಅಭಿನಯದ ಹೀರೋ ಅವರು. ಲೇಖಕಿ ಸಂಧ್ಯಾರಾಣಿ ಅವರು್ದರ, ಅನಂತ ನಾಗ್ ಅವರ ವಿಶ್ವರೂಪ ದರ್ಶನ ಮಾಡಿಸಿದ್ದಾರೆ. ಅಭಿಮಾನಿಗಳ ಮನದ ಮಾತುಗಳಿಗೆ ಅಕ್ಷರರೂಪ ನೀಡಿದ್ದಾರೆ. ಅಭಿನಂದನೆಗಳು

    ಪ್ರತಿಕ್ರಿಯೆ
  13. Anonymous

    ಮೆಚ್ಚಿನ ನಟನ ಬಗ್ಗೆ ಬರೆದ ಲೇಖನ ಓದಿ ಖುಷಿ ಆಯಿತು. ಧಾರಾವಾಹಿ ಕಡಿಮೆ ನೋಡುವ ನಾನು ನಿತ್ಯೋತ್ಸವ ನೋಡಲು ತೀರ್ಮಾನಿಸಿರುವೆ.
    ಮಾಲಾ

    ಪ್ರತಿಕ್ರಿಯೆ
  14. ರುಕ್ಮಿಣಿಮಾಲಾ

    ನೆಚ್ಚಿನ ನಟನ ಬಗ್ಗೆ ಬರೆದ ಲೆಖನ ಓಡಿ ಖುಷಿ ಆಯಿತು. ಧಾರಾವಾಹಿ ಕಡಿಮೆ ನೋಡುವ ನಾನು ನಿತ್ಯೋತ್ಸವ ನೋಡಲು ತೀರ್ಮಾನಿಸಿರುವೆ
    ಮಾಲಾ

    ಪ್ರತಿಕ್ರಿಯೆ
  15. nagraj.harapanahalli

    ಅನಂತನಾಗ್ ಅವರ ತವರು ಜಿಲ್ಲೆಯಲ್ಲಿ ಕಳೆದ 18 ವರ್ಷದಿಂದ ಇದ್ದೇನೆ. ಅನಂತ ಮೂಡಿಬಂದ ನೆಲದ ಸತ್ವ ಅಂತಹದ್ದು. ಬರೆಹ ಸೊಗಸಾಗಿದೆ.

    ಪ್ರತಿಕ್ರಿಯೆ

Trackbacks/Pingbacks

  1. ನಟ ಅನಂತನಾಗ್ ಹೀಗಂದರು.. « ಅವಧಿ / avadhi - [...] ಹಿನ್ನೆಲೆಯಲ್ಲಿ ಬರೆದ ಲೇಖನ ಇಲ್ಲಿದೆ. ಇದಕ್ಕೆ ಅನಂತನಾಗ್ ಬರೆದ ಪ್ರತಿಕ್ರಿಯೆಯೂ [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: