ಸಂಧ್ಯಾರಾಣಿ ಕಾಲಂ : ’ಚೆರ್ರಿ ತೋಟ’ದ ನೆರಳಿನಲ್ಲಿ

’ಚೆರ್ರಿ ಆರ್ಚರ್ಡ್’, ನಾಟಕಕಾರ ಆಂಟೋನ್ ಚೆಕೋವ್ ನ ಕೊನೆಯ ನಾಟಕ. ಸರಿಸುಮಾರು ೧೧೦ ವರ್ಷಗಳಿಗೂ ಮೊದಲು ಮೊದಲ ಪ್ರದರ್ಶನ ಕಂಡ ನಾಟಕ. ಈ ನಾಟಕದ ಒಂದು ವಿಶೇಷ ಎಂದರೆ ಬರೆಸಿಕೊಳ್ಳುವಾಗ ಒಂದು ’ಕಾಮಿಡಿ’ಯಾಗಿ ಬರೆಸಿಕೊಂಡು, ರಂಗದ ಮೇಲೆ ’ಟ್ರಾಜಿಡಿ’ಯಾಗಿ ಮೂಡಿ ಬಂದ ನಾಟಕ ಇದು. ಬರಹಗಾರನ ಮನಸ್ಸಿನಲ್ಲಿ ಹುಟ್ಟಿದ ಕಥೆ, ಕವನ, ನಾಟಕ ಮತ್ತೆ ಸಹೃದಯರ ಮನಸ್ಸಿನಲ್ಲಿ ತನಗೆ ಬೇಕಾದಂತೆ, ಅಲ್ಲಿನ ಮಣ್ಣಿಗೆ ತಕ್ಕಂತೆ ಕುಡಿಯೊಡೆಯುತ್ತಾ ಹೋಗುತ್ತದೆ ಎನ್ನುವು ಮಾತಿಗೆ ಬಹುಶಃ ಈ ನಾಟಕ ಒಂದು ಉದಾಹರಣೆ. ಈ ನಾಟಕವನ್ನು ನಾನು ಓದಿರಲಿಲ್ಲ, ಹಾಗಾಗಿ ಇದು ರಂಗದ ಮೂಲಕವಾಗಿಯೇ ನನ್ನನ್ನು ಸೇರಬೇಕಿತ್ತು. ಹಾಗೇ ಹೋಗಿದ್ದೆ ನಾಟಕಕ್ಕೆ. ರಂಗಶಂಕರದ ಯುವ ನಾಟಕ ಪ್ರಸ್ತುತಿಯ ನಾಟಕೋತ್ಸವದ ಅಂಗವಾಗಿ ಬೆಂಗಳೂರು ಥಿಯೇಟರ್ ಕಂಪನಿ ಇದನ್ನು ಕೈಗೆತ್ತಿಕೊಂಡಿತ್ತು. ವೆಂಕಟೇಶ್ ಪ್ರಸಾದ್ ನಾಟಕದ ಅನುವಾದ ಮತ್ತು ನಿರ್ದೇಶನ ಮಾಡಿದ್ದರು.
ನಾನು ನೋಡಿದ್ದು ಮೊದಲ ಪ್ರದರ್ಶನ. ಸಾಧಾರಣವಾಗಿ ಅನುವಾದಗೊಂಡ ನಾಟಕಗಳನ್ನು ನೋಡಿದಾಗ ಆ ನಾಟಕಗಳ ದೇಶ ಮತ್ತು ಕಾಲ ಬೇರೆ ಎನ್ನುವ ಒಂದು ಗೆರೆ ಹಾಗೇ ಉಳಿದಿರುತ್ತದೆ. ಅದನ್ನು ರೂಪಾಂತರಗೊಳಿಸಿ ದೇಶ, ಕಾಲ ಮತ್ತು ಹೆಸರುಗಳನ್ನು ’ಇಂದಿ’ಗೆ, ’ಇಲ್ಲಿ’ಗೆ ಅಳವಡಿಸಿಕೊಳ್ಳುವ ಪ್ರಯತ್ನ ಸಹ ಕೆಲವರು ನಡೆಸಿರುವುದನ್ನು ನಾವು ಕಂಡಿದ್ದೇವೆ. ಆದರೆ ಆ ಪ್ರಯತ್ನ ಎಷ್ಟೋ ಸಾರಿ ಬೇರೆ ನಾಟಕವನ್ನೇ ನಮ್ಮ ಕಣ್ಣ ಮುಂದೆ ಇಡುತ್ತದೆ. ಆದರೆ ಚೆರ್ರಿತೋಟದಲ್ಲಿ ಆ ಯಾವ ಪ್ರಯತ್ನವನ್ನೂ ಮಾಡಿಲ್ಲ. ಇಲ್ಲಿ ಚೆರ್ರಿತೋಟವನ್ನು ಬಲವಂತದಿಂದ ಕಾಫಿತೋಟ ಅಥವಾ ದ್ರಾಕ್ಷಿತೋಟ ಮಾಡಲು ಹೋಗಿಲ್ಲ. ಚೆರ್ರಿತೋಟ, ಚೆರ್ರಿತೋಟವಾಗಿಯೇ ನಮ್ಮೊಳಗಿಳಿಯುತ್ತದೆ. ಆ ಮೂಲಕ ನಾಟಕದ ದೇಶ ಮತ್ತು ಕಾಲ ಎರಡೂ ನಮಗೆ ಅದರ ಮೂಲರೂಪದಲ್ಲಿಯೇ ದಕ್ಕುತ್ತದೆ. ನಾಟಕದ ಸಾಂದ್ರತೆ ಮತ್ತು ಪರಿಣಾಮ ಎರಡೂ ತೆಳುವಾಗಿಲ್ಲ. ಆ ಕಾರಣಕ್ಕಾಗಿ ನಿರ್ದೇಶಕ ಮತ್ತು ತಂಡವನ್ನು ಅಭಿನಂದಿಸಬೇಕು.
ನಾಟಕದ ಕಾಲ ೨೦ನೆಯ ಶತಮಾನದ ಆದಿಭಾಗ. ರಷ್ಯಾದಲ್ಲಿ, ಅಷ್ಟೇ ಏಕೆ ಇಡೀ ಜಗತ್ತಿನಲ್ಲಿ ರಾಜವಂಶಗಳ ಪ್ರಭಾವ ವಿಘಟನೆಗೊಂಡು ಅರಸೊತ್ತಿಗೆ ಮತ್ತು ಜಮೀನ್ದಾರೀ ವ್ಯವಸ್ಥೆ ಶಿಥಿಲವಾಗುತ್ತಿದ್ದ ಕಾಲ. ಅಲ್ಲಿಯವರೆಗೂ ನೆಲದ ಮೇಲೆ ಕೂರಿಸಲ್ಪಟ್ಟಿದ್ದ ಮಧ್ಯಮ ವರ್ಗ ಎದ್ದು ನಿಂತು ತನ್ನ ದನಿಯನ್ನು ಕೇಳಬೇಕು ಎಂದು ಕೇಳುತ್ತಿದ್ದ ಕಾಲ. ಆ ಇಡೀ ವ್ಯವಸ್ಥೆ ಮತ್ತು ಸಮಾಜಕ್ಕೆ ಸಂಕೇತವಾಗಿ ಇಲ್ಲಿ ಚೆರ್ರಿತೋಟ ಬರುತ್ತದೆ. ಅದು ಭವ್ಯವಾಗಿ, ಇತಿಹಾಸದ ಪಳಿಯುಳಿಕೆಯಾಗಿದೆ. ಅದನ್ನು ಉಳಿಸಿಕೊಳ್ಳುವುದು ಜಮೀನ್ದಾರೀ ವ್ಯವಸ್ಥೆಗೆ ಬೇಕಿದೆ, ಅದು ಅವರ ಅಹಂ ಗೆ ಭೂಷಣ ಪ್ರಾಯ, ಆದರೆ ಅದನ್ನು ಉಳಿಸಿಕೊಳ್ಳಲು ಅವರು ಯಾವುದೇ ಪ್ರಯತ್ನವನ್ನೂ ಮಾಡುವುದಿಲ್ಲ. ಅವರಿಗೆ ಅದು ಬೇಕು, ಅದರ ಮೂಲಕ ಸಿಗುವುದೆಲ್ಲವೂ ಬೇಕು, ಆದರೆ ಅದಕ್ಕಾಗಿ ಅವರು ಏನನ್ನೂ ಮಾಡಲಾರರು. ಯಾಕೋ ನನಗೆ ಆ ಚೆರ್ರಿತೋಟವನ್ನು ನೋಡುವಾಗ ಅದು ತೋಟದಾಚೆಗೆ ಮನುಷ್ಯ ಸಂಬಂಧಗಳಿಗೂ ಎಷ್ಟು ಹತ್ತಿರ ಅಲ್ಲವಾ ಅನ್ನಿಸಿತು. ಎಷ್ಟೋ ಸಲ ಅದು ಥೇಟ್ ಹಾಗೆಯೇ ಇರುತ್ತದೆ. ಸಂಬಂಧಗಳು ಕೊಡುವ ಸುಖ ಬೇಕು, ನಿರಾಳತೆ ಬೇಕು, ಮಾನಸಿಕ ಸಾಂತ್ವಾನಕ್ಕಾಗಿಯೋ, ಐಹಿಕದ ಅನುಭೋಗಕ್ಕಾಗಿಯೋ ಅದು ಬೇಕು. ಆದರೆ ಅದನ್ನು ಪೋಷಿಸುವ ಹೊಣೆಗಾರಿಕೆ ಮಾತ್ರ ಕಷ್ಟ. ಹೊಣೆಗಾರಿಕೆ ಮತ್ತು ಫಲದ ಅಭಿಲಾಷೆ ಎರಡನ್ನೂ ಹೊಂದಿರುತ್ತಿದ್ದ ಮನೋಭಾವ ನಿಧಾನವಾಗಿ ಫಲದ ಆಭೀಪ್ಸೆಯಾಗಿ ಮಾತ್ರ ಉಳಿದುಕೊಂಡ ಬೆಳವಣಿಗೆ ಎಲ್ಲೂ ದಾಖಲಾಗಿಯೇ ಇಲ್ಲ ಅನ್ನಿಸುತ್ತದೆ. ಆ ಮನೋಭಾವ ಮತ್ತು ಅದರ ಪರಿಣಾಮ ಇಲ್ಲಿ ಚೆರ್ರಿತೋಟದ ರೂಪಕದಲ್ಲಿ ಕಾಣುತ್ತದೆ.
ಇರಲಿ, ಮತ್ತೆ ಕಥೆಗೇ ಹಿಂದಿರುಗುವುದಾದರೆ, ಅದೊಂದು ಎಸ್ಟೇಟ್, ಅದಕ್ಕೆ ಹೊಂದಿಕೊಂಡಂತೆಯೇ ಇರುವ ಚೆರ್ರಿತೋಟ. ತೋಟದ ಒಡತಿ ತನ್ನ ಜೀವನ ಮತ್ತು ಚೆರ್ರಿತೋಟ ಎರಡನ್ನೂ ಬೇಜವಾಬ್ದಾರಿಯಿಂದಲೇ ನಿಭಾಯಿಸಿರುತ್ತಾಳೆ. ಎರಡೂ ಈಗ ಕೈಜಾರುತ್ತಿದೆ. ಅವಳದು ’ಸಾಲವೊಂದನ್ನು ಬಿಟ್ಟು ಮತ್ತೇನನ್ನೂ ಮಾಡದಂಥವನ’ ಜೊತೆಗಿನ ಮದುವೆ. ಆ ಮದುವೆಗೆ ಇಬ್ಬರು ಮಕ್ಕಳು. ಗಂಡ ಸತ್ತಿರುತ್ತಾನೆ. ಅಷ್ಟರಲ್ಲಿ ಇನ್ನೊಬ್ಬ ಅಷ್ಟೇ ಅಯೋಗ್ಯ ವ್ಯಕ್ತಿಯ ಜೊತೆಗೆ ಪ್ರೇಮದಲ್ಲಿ ಬಿದ್ದಿರುತ್ತಾಳೆ. ಮಗ ಈಜಲು ಹೋಗಿ ನದಿಯಲ್ಲಿ ಮುಳುಗಿ ತೀರಿಕೊಂಡಿರುತ್ತಾನೆ. ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ಅವಳು ತನ್ನ ಪ್ರೇಮಿಯ ಜೊತೆ ಊರುಬಿಟ್ಟು ಹೊರಟು ಹೋಗಿರುತ್ತಾಳೆ. ’ಪ್ರಾಣದಷ್ಟು ಪ್ರೀತಿಸುತ್ತೇನೆ’ ಎನ್ನುವ ಚೆರ್ರಿತೋಟವಾಗಲಿ, ಹದಿವಯಸ್ಸಿನ ಮಗಳಾಗಲೀ, ಮನೆಯ ಹೊಣೆಗಾರಿಕೆಯಾಗಲೀ ಯಾವುದೂ ಅವಳನ್ನು ತಡೆಯುವುದಿಲ್ಲ. ಮಗಳೇ ಹೇಳುವ ಹಾಗೆ ’ಹಿಂದಿರುಗಿಯೂ ನೋಡದೆ’ ಅವಳು ಹೆಜ್ಜೆ ಮುಂದಿಟ್ಟು ಬಿಟ್ಟಿರುತ್ತಾಳೆ. ಅವಳ ಹಿಂದೆ ಅವಳ ಎಸ್ಟೇಟನ್ನೂ, ತೋಟವನ್ನೂ, ಮನೆಯನ್ನೂ, ಮಗಳನ್ನೂ ಕಾಪಾಡುವುದು ಅವಳ ಸಾಕುಮಗಳು, ಆ ಮನೆಯ ಮೇಲ್ವಿಚಾರಕಿ ವಾರಿಯಾ. ಆ ಮನೆಯ ಆಳು ಮಗ ಲೋಪಾಹಿನ್. ಕಷ್ಟಪಟ್ಟು, ಕಾಸಿಗೆ ಕಾಸು ಸೇರಿಸಿ, ಒಂದೊಂದೇ ಹೆಜ್ಜೆ ಇಟ್ಟು ಮೇಲೆ ಬಂದವನು. ಮನೆಯ ಕೆಲಸದವಳು ದುನ್ಯಾಶಾ, ಜಮೀನ್ದಾರರ ಮನೆಯಲ್ಲಿ ಕೆಲಸ ಮಾಡುತ್ತಾ ತನ್ನನ್ನೂ ಆ ಮನೆಯ ಹೆಂಗಸರ ಪಾತ್ರದಲ್ಲಿ ಕಲ್ಪಿಸಿಕೊಳ್ಳುವವಳು. ಆ ಮನೆಯ ಮಗಳು ಆನ್ಯ, ಅಮ್ಮ ಪ್ಯಾರಿಸಿನಲ್ಲಿ ಕೆಟ್ಟ ಸಹವಾಸದಲ್ಲಿದ್ದಾಳೆ ಎಂದು ತಿಳಿದು ಹಿರಿಯಳಂತೆ ಹೋಗಿ ಅಮ್ಮನನ್ನು ಅಲ್ಲಿಂದ ಕರೆದುಕೊಂಡು ಬಂದಿರುತ್ತಾಳೆ. ಮನೆಯಲ್ಲಿನ ಖಾಯಂ ವಿದ್ಯಾರ್ಥಿಯೆಡೆಗೆ ಅವಳ ಆರಾಧನೆ. ಅವನಿಗೆ ಜೀವನದ ಬಗ್ಗೆಯೂ ಸ್ಪಷ್ಟತೆಯಿಲ್ಲ, ಅವಳ ಪ್ರೇಮದ ಬಗ್ಗೆಗೂ ಸ್ಪಷ್ಟತೆಯಿಲ್ಲ. ತಾವಿಬ್ಬರೂ ಪ್ರೇಮಕ್ಕಿಂತ ಮೇಲ್ಮಟ್ಟದಲ್ಲಿದ್ದೇವೆ ಎಂದು ಹೇಳುತ್ತಲೇ ಪ್ರೇಮದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಒಂದು ಜಾಮೀನು ಕೈಲಿ ಹಿಡಿದೇ ನಿಂತಿರುತ್ತಾನೆ!
ಮನೆಯೊಡತಿಯ ಅಣ್ಣ ಗಯೇವ್. ತನ್ನ ಮನೆತನದ ಹೆಚ್ಚುಗಾರಿಕೆಯ ಭಾರ ಹೊರಲು ಅವನ ತೋಳು ಶಕ್ತವಾಗಿಲ್ಲ, ಲೋಪಾಹಿನ್ ನ ’ಸಂಸ್ಕೃತಿ’ಯ ಅಪಹಾಸ್ಯ ಮಾಡುವಾಗಲೂ ಅವನು ಆರ್ಥಿಕವಾಗಿ ತಮ್ಮಿಂದ ಮುಂದೆ ಹೋಗಿದ್ದಾನೆ ಎನ್ನುವ ಅರಿವು ಅವನಿಗಿದೆ. ಮನೆ ಉಳಿಸಿಕೊಳ್ಳಲು ’ಏನೋ’ ಆಗಬೇಕು, ಮತ್ತು ಅದನ್ನು ’ಯಾರೋ’ ಮಾಡಬೇಕು. ಮುನಿಸಿಕೊಂಡ ಚಿಕ್ಕಮ್ಮ ಹಣ ಸಹಾಯ ಮಾಡಲಿ ಎಂದು ಕಾಯುತ್ತಾನೆಯೇ ಹೊರತು ತಾನೇನು ಮಾಡಬಹುದು ಎಂದು ಯೋಚಿಸುವುದಿಲ್ಲ. ಮನೆಯ ಆಳು ಪಿಯರ್ಸ್. ಅವನು ಜಮೀನ್ದಾರರ ಮನೆಯ ಆಳುತನಕ್ಕೆ ಎಷ್ಟು ಒಗ್ಗಿಹೋಗಿದ್ದಾನೆಂದರೆ ಜೀತ ವಿಮುಕ್ತಿಯ ದಿನ ಅವನ ಪಾಲಿಗೆ ದೊಡ್ಡ ಕೇಡಿನ ದಿನ. ಮನೆಯವರಿಗೆ ತಾನು ಅನಿವಾರ್ಯ, ಮನೆಗೆ ತಾನು ಅನಿವಾರ್ಯ ಎನ್ನುವ ನಂಬಿಕೆಯಲ್ಲೇ ಅವನ ಬದುಕು ಕಳೆದಿರುತ್ತದೆ. ಕಡೆಗೆ ಚೆರ್ರಿ ತೋಟ ಮತ್ತು ಅದು ಪ್ರತಿನಿಧಿಸುವ ವ್ಯವಸ್ಥೆ ಉಳಿಯುತ್ತದಾ ಇಲ್ಲವಾ ಎನ್ನುವುದರ ಸುತ್ತ ನಾಟಕ ಹೆಣೆಯಲ್ಪಟ್ಟಿದೆ.

ನಾಟಕದಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಇಲ್ಲಿರುವವರೆಲ್ಲರೂ ಬದುಕು ಅವರಿಗಿತ್ತ ಪಾತ್ರಕ್ಕೆ ಹೊಂದದವರು. ಇಲ್ಲಿ ಬೇರು ಮತ್ತು ಫಸಲುಗಳ ನಡುವೆ ನಿರಂತರ ಘರ್ಷಣೆ ಇದೆ. ಅವರು ಬೇರನ್ನು ಮರೆಯಲಾರರು ಮತ್ತು ಬೇರಿನಂತೆ ಉಳಿಯಲೂ ಆರರು. ಲೋಪಾಹಿನ್ ಆಳುಮಗನಾಗಿ ಹುಟ್ಟಿದವನು, ಆದರೆ ನಂತರ ಸ್ವಪ್ರಯತ್ನದಿಂದ ಹಣವಂತನಾಗುತ್ತಾನೆ. ಆದರೆ ತನ್ನ ಬಗೆಗೆ ಅವಲ್ಲಿ ಒಂದು ಸಣ್ಣ ಕೀಳರಿಮೆ ಇದ್ದೇ ಇರುತ್ತದೆ. ಅವನೇ ಹೇಳುವ ಹಾಗೆ ಅವನು ’like a pig in the pastry shop’, ಮನೆಯೋಡತಿ ಲುಬೋವ್ ಮನೆಯ ಒಡತಿ, ತಾಯಿ, ತೋಟದ ಯಜಮಾನತಿ, ಆದರೆ ಅವಳು ಮಕ್ಕಳನ್ನು ನೋಡಿಕೊಳ್ಳುವುದಿರಲಿ, ಮಕ್ಕಳೇ ಅವಳನ್ನು ನೋಡಿಕೊಳ್ಳಬೇಕು. ಮಗನನ್ನು ಕಳೆದುಕೊಂಡ ತನ್ನ ನೋವು, ತನ್ನ ವ್ಯರ್ಥವಾದ ಯೌವನ, ತನ್ನ ಬೆಲೆ ಅರಿಯದ ಪ್ರೇಮಿ.. ಹೀಗೆ ಅವಳ ಕಕ್ಷೆಯಲ್ಲಿ ಅವಳೇ ಸೂರ್ಯ, ತನ್ನ ಯಾವುದೇ ಪಾತ್ರವನ್ನು ಅವಳು ಧರಿಸುವುದಿಲ್ಲ. ವ್ಯವಹಾರದಲ್ಲಾಗಲೀ, ವೈಯಕ್ತಿಕ ಜೀವನದಲ್ಲಾಗಲೀ ಕಣ್ಣೆದುರಿಗೆ ರಾಚುವ ಸತ್ಯವನ್ನು ಒಪ್ಪಿಕೊಳ್ಳಲು ಅವಳು ನಿರಾಕರಿಸುವಲ್ಲಿ ಅವಳ ಜೀವನದ ಸೋಲಿನ ಕಾರಣ ಇದೆ. ಬಹುಶಃ ವಾಸ್ತವದ ನಿರಾಕರಣೆ ಆಗಿನ ಸಾಮಾಜಿಕ, ರಾಜಕೀಯ, ಆರ್ಥಿಕ ವ್ಯವಸ್ಥೆಯ ಬದಲಾವಣೆಗೂ ಕಾರಣ ಇರಬೇಕು. ವಾರಿಯಾ ಮಧ್ಯಮವರ್ಗದಲ್ಲಿ ಹುಟ್ಟಿರುತ್ತಾಳೆ, ಇಲ್ಲಿಗೆ ಆಕೆ ಸಾಕುಮಗಳು. ಜಮೀನ್ದಾರರ ಇಡೀ ಮನೆಯ ಜವಾಬ್ದಾರಿ ಕೈಗೆ ತೆಗೆದುಕೊಂಡಿರುತ್ತಾಳೆ. ತನ್ನನ್ನು ಅವರ ಜೊತೆಯಲ್ಲೇ ಗುರುತಿಸಿಕೊಳ್ಳುವ ಅವಳಿಗೆ ಲೋಪಾಹಿನ್ ಎಸ್ಟೇಟ್ ಕೊಂಡುಕೊಂಡ ಎನ್ನುವುದನ್ನು ಸಹಿಸಲಾಗುವುದಿಲ್ಲ, ಮನೆಯ ಬೀಗದ ಕೈ ಗೊಂಚಲನ್ನು ಎಸೆದು ತನ್ನ ಅಸಹನೆ ತೋರಿಸುತ್ತಾಳೆ. ದುಶ್ಯಾನೆ ತನ್ನ ಮೂಲವನ್ನೇ ಮರೆತು ತಾನು ಕೆಲಸ ಮಾಡುವ ಮನೆಯ ಒಡತಿಯರನ್ನು ಅನುಕರಿಸುತ್ತಿರುತ್ತಾಳೆ. ಪಿಯರ್ಸ್ ತಾನು ಮನೆಯ ಅವಿಭಾಜ್ಯ ಅಂಗ ಎಂದು ತನ್ನನ್ನೇ ನಂಬಿಸಿಕೊಂಡಿರುತ್ತಾನೆ. ಹೀಗೆ ಎಲ್ಲರೂ ತಾವೇನಾಗಿರುತ್ತಾರೋ ಅದನ್ನು ಗುರುತಿಸದೆ ಒಪ್ಪಿಕೊಳ್ಳದೆ ಒದ್ದಾಡುತ್ತಿರುತ್ತಾರೆ. ಜಮೀನ್ದಾರಿ ವ್ಯವಸ್ಥೆ ತನ್ನ ವೈಭವವನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆ, ಮಧ್ಯಮ ವರ್ಗ ತನಗೆ ಹೊಸದಾಗಿ ದೊರಕಿದ ಸವಲತ್ತುಗಳನ್ನು ತನ್ನದಾಗಿಸಿಕೊಳ್ಳಲು, ಹೊಸ ವ್ಯವಸ್ಥೆಯಲ್ಲಿ ತನ್ನ ಸ್ಥಾನ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ.
ಇಂತಹ ಸಂಕೀರ್ಣ ಕಥೆಯನ್ನು ನಾಟಕವಾಗಿಸುವುದು ಸುಲಭದ ಕೆಲಸವಲ್ಲ. ದೇಶ ಕಾಲಗಳ ಪಲ್ಲಟದ ನಡುವೆಯೂ ಅದರ ಮೂಲ ಸೊಗಡನ್ನು ಹಾಗೆಯೇ ಉಳಿಸಿಕೊಳ್ಳುವುದರಲ್ಲಿ ನಿರ್ದೇಶಕ ವೆಂಕಟೇಶ ಪ್ರಸಾದ್ ಯಶಸ್ವಿಯಾಗಿದ್ದಾರೆ. ನಾಟಕದ ಪಾತ್ರಗಳು ಅವರ ಎಲ್ಲಾ ಮಾನವ ಸಹಜ ದೌರ್ಬಲ್ಯಗಳ ಜೊತೆ ಜೊತೆಯಲ್ಲಿಯೇ ನಮ್ಮೊಳಗಿಳಿಯುತ್ತಾರೆ. ಅವರೊಡನೆ ಸ್ಪಂದಿಸುವುದು ನಮಗೆ ಸಾಧ್ಯವಾಗುತ್ತದೆ. ಯಾವುದೇ ಪಾತ್ರದ ಬಾಯಲ್ಲಿ ಏನನ್ನೂ ಹೇಳಿಸದೆಯೇ ಅವರು ನಮ್ಮನ್ನು ನೇರವಾಗಿ ನಾಟಕದ ಜೊತೆಯಲ್ಲಿ ಅನುಸಂಧಾನ ನಡೆಸಲು ಬಿಡುತ್ತಾರೆ. ಅವರ ಈ ಪ್ರಯತ್ನದಲ್ಲಿ ಅವರಿಗೆ ಅದ್ಭುತವಾಗಿ ಸಹಾಯ ಮಾಡಿರುವುದು ಅವರ ಇಡೀ ತಂಡ. ಕುಸಿಯುತ್ತಿರುವ ಜಮೀನ್ದಾರಿ ಮನೆತನದವರ ಹಳೆಯ ಆದರೆ ವೈಭವದ ದಿರಿಸು, ಅವರ ಆಭರಣ ಈ ಎಲ್ಲದರಿಂದ ಆ ಕಾಲವನ್ನು ಕಟ್ಟಿಕೊಟ್ಟಿರುವ ಸುಷ್ಮಾ, ಎಲ್ಲೂ ಗದ್ದಲವಾಗದ ಸಂಗೀತವನ್ನು ಕೊಟ್ಟ ನಿತಿನ್ ಹರಿಹರನ್, ಅರ್ಥಪೂರ್ಣವಾಗಿ ಬೆಳಕಿನ ವಿನ್ಯಾಸ ಮಾಡಿದ ವಿನಯ್ ಚಂದ್ರ, ಮೊದಲ ಪ್ರದರ್ಶನದಲ್ಲಿ ಮನಮುಟ್ಟುವ ಅಭಿನಯ ಕೊಟ್ಟ ಇಡೀ ತಂಡ ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಮನೆಯೊಡತಿಯ ಗತ್ತು ಮತ್ತು ಅವಳ ಕೋಮಲತೆ ಎರಡನ್ನೂ ಕಟ್ಟಿಕೊಡುವ ಲುಬೋವ್ ಆಗಿ ಸೌಮ್ಯ, ಕಾಲು, ನಿಂತ ನೆಲ ಭದ್ರವಾಗಿದ್ದರೂ ಭುಜ ಬಾಗಿಸಿಕೊಂಡ ಲೋಪಾಹೀನ್ ಆಗಿ ವಿಜಯ್ ಕುಲಕರ್ಣಿ, ಹಣ ಇದ್ದಿದ್ದರೆ ನನ್ ಆಗಿಬಿಡುತ್ತಿದ್ದೆ ಎಂದು ಹೇಳುತ್ತಲೇ, ’ಹೆಣ್ಣಾಗಿ ನಾ ಹೇಗೆ ಕೇಳಲಿ, ಮದುವೆಯಾಗು ಎಂದು ಲೋಪಾಹೀನ್ ತಾನೆ ಕೇಳಬೇಕು’ ಎಂದು ಅಸಹಾಯಕಳಾಗಿ ಮಾತನಾಡುವ, ತನ್ನ ಬೇರು ಮತ್ತು ಹೊಸ ಸಂಬಂಧದ ಜವಾಬ್ದಾರಿಯಲ್ಲಿ ನಲುಗುವ ವಾರಿಯಾಳಾಗಿ ಸುರಭಿ, ಹದಿನೇಳನೆಯ ವಯಸ್ಸಿಗೆ ಮಾತ್ರ ಸಾಧ್ಯವಾಗುವ ನಂಬಿಕೆ ಮತ್ತು ಮುಗ್ಧತೆಯಲ್ಲಿ ಪ್ರೀತಿಸುವ ಆನ್ಯಾಳಾಗಿ ತೇಜು, ಚೆಲ್ಲುತನದ ದುನ್ಯಾಶಳಾಗಿ ಬೃಂದಾ, ಭೋಳೆ ಸ್ವಭಾವದ ಎಪಿಖೋಡೇವ್ ಆಗಿ ಸಂದೀಪ್ ಜೈನ್, ಪಿಯರ್ಸ್ ಆಗಿ ಗಿರೀಶ್ ಭಟ್, ಗಯೇಬ್ ಆಗಿ ಪ್ರದೀಪ್ ನಾಡಿಗ್, ಫಿಶ್ಕ್ ಆಗಿ ವಿನೀತ್, ಟ್ರೋಫಿಮೋವ್ ಆಗಿ ಅರುಣ್, ಯಾಶಾನಾಗಿ ವಾಸುಕಿ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ನಾಟಕದ ಕೊನೆಯಲ್ಲಿ ಲೂಪಾಹಿನ್ ತೋಟವನ್ನು ಕೊಂಡ ಎಂದು ಗೊತ್ತಾದ ಮೇಲೆ ಬೀಗದ ಕೈಯನ್ನು ಬೀಸಿ ಎಸೆದ ವಾರ್ಯಾ ಮತ್ತೆ ಬಂದು ಅವನೆದುರಿಗೆ, ಅವನ ಒಪ್ಪಿಗೆಯನ್ನು ಆಪೇಕ್ಷಿಸಿ ನಿಲ್ಲುತ್ತಾಳೆ. ಲೋಪಾಹಿನ್ ಕತ್ತು ತಿರುಗಿಸಿಕೊಂಡು ನಡೆದುಬಿಡುತ್ತಾನೆ. ಈ ಒಂದು ಘಟನೆ ಅವಳ ಇದುವರೆಗಿನ ವ್ಯಕ್ತಿತ್ವಕ್ಕೆ ವ್ಯತಿರೇಕವಾಗಿ ಬಂದಿದೆ ಅನ್ನಿಸಿತು. ನಂತರ ಕಡೆಯ ದೃಶ್ಯದಲ್ಲಿ ಚೆರ್ರಿ ಮರಗಳನ್ನು ಕಡಿದುರುಳಿಸುವ ಸದ್ದು ಕೇಳುತ್ತಿರುವಂತೆಯೇ ಬೆಳಕು ಮಂಕಾಗುತ್ತದೆ. ನಾಟಕ ಮುಗಿದ ಮೇಲೆ, ದೀಪ ಹತ್ತಿಕೊಂಡಾಗ ಕಿಟಕಿಯ ಹೊರಗೆ ಚೆರ್ರಿ ಮರಗಳು ಮೊದಲಿನಂತೆಯೇ ನಿಂತಿರುತ್ತವೆ. ತಾಂತ್ರಿಕವಾಗಿ ಹೇಳುವುದಾದರೆ ಅದು ಸರಿಯೇ, ನಾಟಕ ಮುಗಿದಿರುತ್ತದೆ. ಆದರೆ ನಾಟಕದ ಗುಂಗು ಅಷ್ಟು ಬೇಗನೆ ಮುಗಿಯದಷ್ಟು ತೀವ್ರವಾಗಿರುವುದರಿಂದ ಕಿಟಕಿಯಾಚೆಗೆ ಖಾಲಿ ಜಾಗ ಕಂಡರೆ ಆ ಖಾಲಿತನದ ಪರಿಣಾಮ ಇನ್ನೂ ತೀವ್ರವಾಗಿರುತ್ತದೆ ಅನ್ನಿಸಿತು.
ಬೆಳಕಿನ ವಿನ್ಯಾಸದ ಬಗ್ಗೆ ಇಲ್ಲಿ ಒಂದು ಮಾತನ್ನು ಹೇಳಲೇ ಬೇಕು. ಕಡೆಯಲ್ಲಿ ಚೆರ್ರಿತೋಟ ಹರಾಜಾಯ್ತು ಎಂದು ಗೊತ್ತಾಗುತ್ತದೆ. ಇದುವರೆವಿಗೂ ಅವರನ್ನೆಲ್ಲಾ ಹಿಡಿದಿಟ್ಟಿದ್ದ ಒಂದು ಹಗ್ಗ ತಟ್ಟನೆ ತುಂಡಾದಂತೆ ಆಗಿ ಎಲ್ಲರೂ ದೂರಾಗಿ ಬಿಡುತ್ತಾರೆ. ಪ್ರತಿಯೊಬ್ಬರೂ ನಿಂತ ಜಾಗದಲ್ಲೇ ಒಂದೊಂದು ದ್ವೀಪವಾದಂತೆ ಬೀಳುವ ಬೆಳಕಿನ ಕಲ್ಪನೆಯೇ ಅನನ್ಯ. ಚೆರ್ರಿತೋಟಕ್ಕೆ ಕೊಡಲಿ ಏಟು ಬೀಳುವ ಸದ್ದಿನ ಜೊತೆ ಜೊತೆಯಲ್ಲಿಯೇ ಒಬ್ಬೊಬ್ಬರು ಒಂದೊಂದು ದಾರಿ ಹಿಡಿದು ಮನೆಯಿಂದ ದೂರಾಗುತ್ತಾರೆ. ಅದುವರೆಗೂ ತಾನು ಈ ಮನೆಯ ಅವಿಭಾಜ್ಯ ಅಂಗ, ಮನೆ ಮತ್ತು ಮನೆಗೆ ಸಂಬಂಧಿಸಿದವರೆಲ್ಲರೂ ತನ್ನವರು ಎಂದುಕೊಂಡಿದ್ದ ಪಿಯರ್ಸ್ ಗೆ ಒಂದು ಮಾತು ಹೇಳಬೇಕು ಎಂದು ಸಹಾ ಯಾರಿಗೂ ಅನ್ನಿಸುವುದಿಲ್ಲ. ಅವರೆಲ್ಲರಿಗೂ ತಾನು ಅವರ ವ್ಯವಸ್ಥೆಯನ್ನು ಪೋಷಿಸುವ ಒಂದು ಯಂತ್ರ ಮಾತ್ರ ಆಗಿದ್ದೆ ಎನ್ನುವುದು ಅವನ ಅರಿವಿಗೆ ಬರುತ್ತದೆ. ಆದರೆ ಅವನು ಆ ಅರಿವಿನಿಂದ ಬದಲಾಗುವ ಕಾಲ ಮೀರಿದ್ದಾನೆ. ಈಗ ಒಡೆಯನ ಖುರ್ಚಿಯಲ್ಲಿ ಲುಪಾಹಿನ್ ಕುಳಿತಿರುತ್ತಾನೆ. ಮೆಲ್ಲನೆ ಅವನ ಬಳಿ ಹೋಗುವ ಪಿಯರ್ಸ್ ’ನಿಮಗೇನು ತರಲಿ ಯಜಮಾನ್ರೇ’ ಎಂದು ಕೇಳುತ್ತಾನೆ. ಅಂದರೆ ಬದಲಾಗಿರುವುದು ವ್ಯವಸ್ಥೆಯಾ ಅಥವಾ ವ್ಯವಸ್ಥೆಯನ್ನು ನಿಯಂತ್ರಿಸುವ ವ್ಯಕ್ತಿಗಳಾ? ವ್ಯವಸ್ಥೆ ರೂಪ ಬದಲಾಯಿಸಿಕೊಂಡಾದರೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದಾ? ಈ ಪ್ರಶ್ನೆ ನಾಟಕ ಮುಗಿದ ಮೇಲೂ ನಮ್ಮನ್ನು ಕಾಡುತ್ತಲೇ ಇರುತ್ತದೆ.

‍ಲೇಖಕರು G

June 19, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಲಕ್ಷ್ಮೀಕಾಂತ ಇಟ್ನಾಳ

    ಚೆರ್ರಿ ತೋಟ ವಿಶ್ಲೇಷಣೆಯ ವೈಖರಿ ನಿಜಕ್ಕೂ ಅನನ್ಯ. ನಾಟಕದ ವಿಷಯ ವಸ್ತು ಸಂಕೀರ್ಣವಾಗಿದ್ದರೂ, ಅದನ್ನು ಓದುಗನಿಗೆ ಮನದಟ್ಟು ಮಾಡುವಲ್ಲಿ ತುಂಬ ಯಶಸ್ವೀ ಯಾಗಿದ್ಧೀರಿ, ನಾಟಕದ ವಿವರಗಳೆಲ್ಲವನ್ನೂ ಪರಿಚಯಿಸಿದ್ದಕ್ಕೆ ವಂದನೆಗಳು ಸಂಧ್ಯಾ ಜಿ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: