ಸಂಧ್ಯಾರಾಣಿ ಕಾಲಂ : ಚಂದಿರನನ್ನು ಹುಡುಕುತ್ತಾ ಮರುಭೂಮಿಯ ದಾರಿಯಲ್ಲಿ


’ಚಂದಿರನೂರಿಗೆ ದಾರಿಗಳಿದ್ದರೆ ಕನಸೇ ಇರಬೇಕು…’, ಇರಬೇಕು. ಹಾಗೆಂದೇ ಚಂದಿರನನ್ನು ಹುಡುಕುತ್ತಾ ಒಂದು ಕನಸಿನ ಕೈ ಬೆರಳು ಹಿಡಿದುಕೊಂಡು ನಾನು ಹೋಗಿದ್ದು ಕಚ್ ನ ರಣ್ ಮರುಭೂಮಿಗೆ. ಸುಮಾರು ೪ ದಿನಗಳ ಪ್ರವಾಸ, ಹತ್ತಿರ ಹತ್ತಿರ ೧೫೦೦ ಕಿಮೀ ಗಳ ದೂರ, ನನ್ನ ಊರು ಮತ್ತು ರಣ್ ನ ನಡುವಿನ ಒಂದು ರಾಜ್ಯ ದಾಟಿ ಹೋಗಿದ್ದು ಕೇವಲ ಅವನಿಗಾಗಿಯೇ.
ಈ ಕನಸಿಗೆ ಈಗ ಹತ್ತಿರ ಹತ್ತಿರ ಒಂದು ವರ್ಷದ ವಯಸ್ಸು. ಕಳೆದ ವರ್ಷ ಗೆಳತಿ ಮಂಜುಳಾ ರಣ್ ಗೆ ಹೋಗಿ ಬಂದು ಆ ಬಗ್ಗೆ ಬರೆದಿದ್ದಳು ಮತ್ತು ಅದ್ಭುತವಾದ ಫೋಟೋಗಳನ್ನು ಕಳಿಸಿದ್ದಳು. ಆಗ ನನ್ನನ್ನು ಸೆಳೆದ, ನನ್ನಲ್ಲೇ ಉಳಿದ ಚಿತ್ರ ಆ ಬೆಳ್ಳಿ ಮರುಭೂಮಿಯಲ್ಲಿದ್ದ ಚಂದ್ರನದು. ಅವನ ಬಗ್ಗೆ ಇನ್ನಿಲ್ಲದ ಮೋಹ ಬಂದುಬಿಟ್ಟಿತ್ತು. ನೆಲದುದ್ದಕ್ಕೂ ಬೆಳ್ಳಿ ನೀರು ಚೆಲ್ಲಿದಂತೆ, ಹೆಪ್ಪುಗಟ್ಟಿದ ಮಂಜಿನಂತೆ, ಕಂದನಿಗಾಗಿ ಕಾಸಿಟ್ಟ ಹಾಲನ್ನು ಯಾರೋ ಕೈತಪ್ಪಿ ತಾಕಿಸಿ ಚೆಲ್ಲಿದಂತೆ, ಹಾಲು ಕುಡಿದು, ಬೆನ್ನು ನೇವರಿಸಿಕೊಂಡು ತೇಗುವ ಮೊದಲೇ ಕಂದನ ಗಂಟಲಿಂದ ಉಕ್ಕಿದ ಹಾಲು, ಕೆನ್ನೆ ಮೇಲೆ ಸೋರಿದಂತೆ, ’ನಿನ್ನ ತುಂಟ ಕಣ್ಣಲ್ಲಿದೆ ಮಡಚಿಟ್ಟ ಆಕಾಶವು’ ಹಾಡನ್ನು ನೆನಪಿಸುವ ಅವನ ಕಣ್ಣನ್ನು ದಿಟ್ಟಿಸಿದಾಗ ಅವನ ಕಣ್ಣಿಂದ ನನ್ನ ಕಣ್ಣಿಗೆ ಹರಡುವ ಬೆಳದಿಂಗಳಂತಹ ಬಿಳಿ ಬಿಳಿ ಮರಳು ನೆಲದ ಮೇಲೆ. ಹಾಲಿನ ಪಾತ್ರೆಯಲ್ಲಿ ಕುದಿದು ಕಟ್ಟಿದ ಕೆನೆಯಂತಹ ಚಂದ್ರ ಆಕಾಶದಲ್ಲಿ. ನಡುವೆ ಸುರಿವ ಪ್ರಿತಿಯಂತಹ ಬೆಳದಿಂಗಳು. ಆ ಫೋಟೋಗಳನ್ನು ನೋಡಿ ಹುಚ್ಚಾಗಿದ್ದೆ. ಆಗಿಂದಾಗಲೇ ಹೋಗಿ ಆ ಚಂದ್ರನನ್ನು ಅಲ್ಲೇ, ಆ ಬೆಳ್ಳಿ ಮರುಭೂಮಿಯಲ್ಲೇ ಕೈ ಕುಲುಕಬೇಕು ಅನ್ನಿಸಿತ್ತು.
ಆದರೆ ಅದು ಸುಲಭವಿರಲಿಲ್ಲ. ವರ್ಷಕ್ಕೆ ಮೂರು ತಿಂಗಳು ಮಾತ್ರ ಅಲ್ಲಿ ಉತ್ಸವ. ಉಳಿದಂತೆ ಅದು ಮರುಭೂಮಿಯೇ. ಪ್ರತಿ ವರ್ಷ ಆ ಮೂರು ತಿಂಗಳು ಕಛ್ ಮರುಭೂಮಿಯಲ್ಲಿ ವಸಂತದ ಹಬ್ಬ. ಅಲ್ಲಿ ಆಗ ಶಿಶಿರದಲ್ಲಿ ವಸಂತ. ಮರುಭೂಮಿಯಲ್ಲಿ ಏಳುವ ಟೆಂಟ್ ಗಳು. ಅಲ್ಲಿ ಪ್ರವಾಸಿಗರ ವಾಸ. ಅಲ್ಲೇ ಅವರಿಗೆ ಊಟ. ಅಲ್ಲಿಂದ ಸುತ್ತ ಮುತ್ತಲ ಸ್ಥಳಗಳಿಗೆ ಭೇಟಿ. ಅದು ಕೇವಲ ಆ ಮೂರು ತಿಂಗಳಲ್ಲಿ ಮಾತ್ರ. ಮತ್ತೆ ಆ ಹಬ್ಬಕ್ಕಾಗಿ ನಾನು ಒಂದು ವರ್ಷ ಕಾಯಬೇಕಾಯ್ತು. ಆರು ತಿಂಗಳ ಮೊದಲೇ, ಉತ್ಸವದ ದಿನಾಂಕ ನಿಗದಿಯಾದ ಕೂಡಲೇ ವಿಚಾರಿಸಿ, ಬುಕ್ ಮಾಡಿಸಿದ್ದಾಗಿತ್ತು. ಮೊದಲು ೮-೧೦ ಜನರು ಹೊರಡಬೇಕಾಗಿದ್ದ ಪ್ರವಾಸಕ್ಕೆ ಕೊನೆಗೆ ಹೊರಟಿದ್ದು, ನಾವು ನಾಲ್ವರು ಮತ್ತೊಂದು ಪುಟಾಣಿ. ಈ ನಾಲ್ಕು ಹೆಂಗಸರ ನಡುವೆ ಹೇಗಪ್ಪಾ ಏಗುವುದು ಎಂದು ಯೋಚಿಸುತ್ತಲೇ ಪ್ರವಾಸಕ್ಕೆ ತಯಾರಾಗಿತ್ತು ಈ ಹತ್ತು ವರ್ಷದ ಕೂಸು!
ಮೊದಲೇ ಬುಕ್ ಮಾಡಿಸಿದ್ದು ಹೌದಾದರೂ ಅಲ್ಲಿಗೆ ಹೋಗುವವರೆಗೂ ಅಲ್ಲಿನ ವ್ಯವಸ್ಥೆ ಹೇಗಿರಬಹುದು ಎನ್ನುವುದರ ಬಗ್ಗೆ ಒಂದು ಸಣ್ಣ ಸಂದೇಹ ಇದ್ದೇ ಇತ್ತು. ಮೊದಲು ನಾವು ಇಳಿದದ್ದು ಭುಜ್ ನಲ್ಲಿ. ಅಲ್ಲಿಂದ ಕಛ್ ಸುಮಾರು ೮೦ ಕಿಮೀ ದೂರದಲ್ಲಿದೆ. ನಾವು ಅಲ್ಲಿ ಇಳಿದ ಕೂಡಲೇ ಹೋಗಿ ನಮ್ಮ ಬುಕಿಂಗ್ ಬಗ್ಗೆ ವಿಚಾರಿಸಿದೆವು. ಅಷ್ಟು ಹೊತ್ತಿಗಾಗಲೇ ರಣ್ ಉತ್ಸವದ ಕಡೆಯಿಂದ ನಮ್ಮನ್ನು ಸ್ವಾಗತಿಸಲು ಬಂದಿದ್ದರು. ನಮ್ಮ ನಮ್ಮ ಸೂಟ್ ಕೇಸುಗಳಿಗೆ ಅವರೇ ಪರಿಚಯದ ಪಟ್ಟಿ ಹಚ್ಚಿದರು, ಬಂದ ಬಸ್ಸಿಗೆ ಅವರೇ ತುಂಬಿದರು, ಬಸ್ಸಿನಲ್ಲಿ ಕೂತ ನಮಗೆ ಒಂದು ಸಣ್ಣ ಉಪಹಾರದ ವ್ಯವಸ್ಥೆ ಸಹ ಆಗಿತ್ತು. ಹಿಂದಿನ ರಾತ್ರಿ ಇಡೀ ನಿದ್ದೆ ಇಲ್ಲದೆ ಕಳೆದಿದ್ದರೂ ಮಲಗಲು ಮನಸ್ಸಾಗಲಿಲ್ಲ. ಕಿಟಕಿಯ ಹೊರಗೆ ಕಣ್ಣು ಹಾಯಿಸಿ ಆ ಊರನ್ನು ನನ್ನೊಳಗೆ ಇಳಿಸಿಕೊಳ್ಳತೊಡಗಿದೆ. ಬಸ್ಸಿನಲ್ಲಿದ್ದ ಗೈಡ್ ಇಕ್ಬಾಲ್ ರಣ್ ಉತ್ಸವದ ಬಗ್ಗೆ, ಕಛ್ ಬಗ್ಗೆ, ಆ ಊರಿಗೆ ಕಛ್ ಎನ್ನುವ ಹೆಸರು ಬಂದಿದ್ದರ ಬಗ್ಗೆ ವಿವರಿಸುತ್ತಾ ಇದ್ದ. ಸುಮಾರು ಅರ್ಧ ದಾರಿ ಕಳೆದ ಮೇಲೆ ಹೇಳಿದ, ’ನೋಡಿ ಇಲ್ಲಿಂದ ಮರುಭೂಮಿ ಆರಂಭ, ಇದರಾಚೆಗೆ ನಿಮಗೆ ಹಸಿರು ಗಿಡ ಮರ ಕಾಣುವುದಿಲ್ಲ, ಹೂವು ಅರಳುವುದಿಲ್ಲ, ಇರುವುದೆಲ್ಲಾ ಜೊಂಡಿನ ಪೊದೆಗಳು ಮಾತ್ರ…’ ಇಕ್ಬಾಲ್ ಹೇಳುತ್ತಾ ಹೋದ. ಹೂವು ಅರಳದ, ಹಕ್ಕಿ ಹಾಡದ, ಹಸಿರು ಕಣ್ಣುಬಿಡದ ಆ ಮರಳು ಗಾಡನ್ನೂ ಒಂದು ಪ್ರವಾಸಿ ತಾಣವಾಗಿಸಿದ ಗುಜರಾತಿಗಳ ಜಾಣ್ಮೆಗೆ ನಾನು ತಲೆದೂಗಿದೆ.
ಆ ಟೆಂಟ್ ಗಳ ಊರಿಗೆ ಕಾಲಿಟ್ಟ ಕೂಡಲೇ ಗಮನ ಸೆಳೆದದ್ದು ಅಲ್ಲಿನ ಅದ್ಭುತವಾದ ವ್ಯವಸ್ಥೆ ಮತ್ತು ಅಚ್ಚುಕಟ್ಟುತನ. ನಾವು ಚೆಕ್ ಇನ್ ಆಗಲು ಹೋಗುವಷ್ಟರಲ್ಲಿ ನಮಗಾಗಿ ಒಂದು ಕಪ್ ಬಿಸಿ ಬಿಸಿ ಕಾಫಿ, ನಮಗಾಗಿ ಕಾದಿರಿಸಿದ ಒಂದು ಟೆಂಟ್, ಅಲ್ಲಿಗೆ ಕರೆದೊಯ್ಯಲು ಪುಟ್ಟ ಪುಟ್ಟ ಡೀಸೆಲ್ ಚಾಲಿತ ಬಂಡಿಗಳು, ಅಲ್ಲಿ ಹೋಗಿ ಹೆಜ್ಜೆಯೂರುವುದರಲ್ಲಿ ಬಂದು ತಲುಪಿದ ನಮ್ಮ ಲಗ್ಗೇಜ್ ಗಳು. ಟೆಂಟ್ ನಲ್ಲಿರುವ ಹೊಸ ಅನುಭವಕ್ಕೆ ನನ್ನನ್ನು ನಾನು ತೆರೆದುಕೊಳ್ಳುತ್ತಲೇ ಸಂಜೆ ನೋಡಲಿರುವ ಮರುಭೂಮಿ ಮತ್ತು ಚಂದಿರನನ್ನು ನೆನೆಸಿಕೊಳ್ಳುತ್ತಿದ್ದೆ.

ಸಂಜೆ ಟೀ ಕಡೆಯೂ ಗಮನ ಹರಿಸದೆ, ಅದನ್ನೂ ತ್ಯಾಗ ಮಾಡಿ ಅವಸರವಸರವಾಗಿ ಮರುಭೂಮಿಯತ್ತ ಹೊರಟ ಬಸ್ಸಿಗೆ ಧಾವಿಸಿದ್ದೆವು. ಅಲ್ಲಿ ಹೋಗಿ ಒಂಟೆ ಗಾಡಿಗೂ ಕಾಯುವ ತಾಳ್ಮೆಯಿಲ್ಲದೆ ನಡೆಯುತ್ತಾ ಹೋಗಿದ್ದೆ. ಆ ಮರಳು ಗಾಡಿನಲ್ಲಿದ್ದದ್ದು ಮರಳಲ್ಲ! ಹೌದು, ಅಲ್ಲಿ ಮರಳೇ ಇರಲಿಲ್ಲ. ಅದೊಂದು ಲವಣದ ಹಾಸು. ಜೂನ್ – ಜುಲೈ ತಿಂಗಳಲ್ಲಿ ಸಮುದ್ರದ ನೀರು ಉಕ್ಕಿ ಈ ಪ್ರದೇಶದಲ್ಲಿ ತುಂಬಿಕೊಳ್ಳುತ್ತದೆಯಂತೆ. ಉಕ್ಕಿದ ಸಮುದ್ರ ಶಾಂತವಾಗುತ್ತದೆ, ಮನಸ್ಸಿನಿಂದ ಯಾರೋ ಈಚೆಗಟ್ಟಿದ ಹಾಗೆ, ಕಡಲ ಒಡಲಿನಿಂದ ಹೊರದೂಡಲ್ಪಟ್ಟ ಈ ನೀರು ತಬ್ಬಲಿಯಂತೆ ಇಲ್ಲೇ ಉಳಿದುಬಿಡುತ್ತದೆ. ಬಿರುಬಿಸಿಲಿಗೆ ಕಾದೂ, ಕಾದೂ ನೀರು ಆವಿಯಾಗುತ್ತದೆ, ನೀರಿನಲ್ಲಿನ ಉಪ್ಪು ಮಾತ್ರ ಬಿಳಿ ಹರಳಾಗಿ ಇಲ್ಲೇ ಉಳಿದುಬಿಡುತ್ತದೆ. ಯಾಕೋ ನೋಡುತ್ತಾ, ನೋಡುತ್ತಾ ಮನಸ್ಸಿನಲ್ಲಿ ತೆಳ್ಳಗೆ ಹರಡಿದ ವಿಷಾದ, ’ಆಂಸು ಪೋಂಚೇ ಆಂಸುವೋಂಕೆ ನಿಶಾನ್, ಖುಷ್ಕ್ ಹೋನೇ ಮೆ ವಕ್ತ್ ಲಗತಾ ಹೈ’ – ಮತ್ತೊಂದು ಹನಿ ಕಣ್ಣೀರೇ ಹಿಂದಿನ ಕಣ್ಣೀರಿನ ಕಲೆಯನ್ನು ಅಳಿಸಬೇಕು, ಹೀಗಿರುವಾಗ ಕಣ್ಣೀರು ಒಣಗಲು ಸಮಯ ಬೇಕು – ಎನ್ನುವ ಗಜಲ್ ವಿನಾಕಾರಣ ನೆನಪಾಯಿತು. ಅಲ್ಲಿದ್ದಷ್ಟು ಹೊತ್ತೂ ಒಂದು ಕಣ್ಣೀರಿನ ಜೊತೆಗಿದ್ದಂತಹ ಭಾವ. ಬಿಟ್ಟು ಹೋದ ಸಮುದ್ರ ಬತ್ತುವುದಿಲ್ಲ, ಕೈ ತಪ್ಪಿಸಿಕೊಂಡು ತಬ್ಬಲಿಯಾದ ಆ ನೀರು ಮಾತ್ರ ಕಣ್ಣೀರಾಗಿ ಬಿಡುತ್ತದೆ, ಬಿಟ್ಟು ಹೋದವರಿಗೆ, ಹಿಂದೆ ನಿಂತ ಅಂಗೈ ನೋಡಿಕೊಳ್ಳುವವರ ಸಂಕಟ ಅರ್ಥವಾಗುವುದೇ ಇಲ್ಲ ಎನ್ನುವ ಹಾಗೆ. ಸೂರ್ಯ ಮುಳುಗಿದ, ನಾನು ಚಂದ್ರನಿಗಾಗಿ ಕಾಯುತ್ತಿದ್ದೆ. ಇಲ್ಲಿಗೆ ಬರುವ ಅವಸರದಲ್ಲಿ ಇನ್ನೊಂದು ಎಡವಟ್ಟಾಗಿತ್ತು, ಹುಣ್ಣಿಮೆ ದಿನ ಮರುಭೂಮಿಯಲ್ಲಿ ಚಂದ್ರನ ನೋಡಬೇಕು ಎಂದು ಕನವರಿಸಿದವಳು ಬುಕ್ ಮಾಡುವ ಖುಷಿಯಲ್ಲಿ ನಾನು ಬರುವ ದಿನಗಳು ಹುಣ್ಣಿಮೆಯಾ ಅಲ್ಲವಾ ಎನ್ನುವುದನ್ನೂ ಗಮನಿಸಿರಲಿಲ್ಲ! ನನಗೆ ಸಿಕ್ಕಿದ್ದು ಪಂಚಮಿಯ ಚಂದ್ರ ಮಾತ್ರ. ಬಹುಶಃ ಅದೂ ನನ್ನ ವಿಷಾದಕ್ಕೆ ಕಾರಣವಾಯಿತೇನೋ..

ವಾಪಸ್ ಬಂದು ಟೆಂಟ್ ಹೊಕ್ಕರೆ ಮೈನ ಮೂಳೆ ಮೂಳೆಯನ್ನೂ ಕತ್ತರಿಸುವ ಛಳಿ, ತಾಪಮಾನ ೧೧ ಡಿಗ್ರಿಯಷ್ಟೂ, ನಮಗೂ ಮರುಭೂಮಿಗೂ ನಡುವೆ ಇದ್ದದ್ದು ಒಂದು ಟೆಂಟ್ ನ ಬಟ್ಟೆಯ ಗೋಡೆ ಮಾತ್ರ! ನಡುಗುತ್ತಲೇ ಕೂತಿದ್ದವರನ್ನು ಟೆಂಟ್ ನ ನಡುವೆ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಕರೆದಿತ್ತು. ಹಾಡುಗಳೆಂದರೆ ಹಾರಿ ಹೋಗುವ ಜೀವ ನನ್ನದು, ಅಲ್ಲಿನ ಜಾನಪದ ಕಲಾವಿದರಂತೂ ಮೋಡಿ ಹಾಕುವಂತೆ ಹಾಡುತ್ತಿದ್ದರು. ನಡುಗುತ್ತಲೇ ಹೋಗಿ ’ಧಮಾ ದಮ್ ಮಸ್ತ್ ಕಲಂದರ್’ ಹಾಡಿಗೆ ಹೆಜ್ಜೆ ಕುಣಿಸಿದ್ದು, ಭಾಷೆಯೇ ಅರ್ಥವಾಗದ ಮತ್ಯಾವುದೋ ಹಾಡಿನ ಲಯಕ್ಕೆ ಸೋತು ತಲೆದೂಗಿದ್ದು ಬಿಡಿ ಬಿಡಿ ಸ್ವರಗಳಂತಹ ನೆನಪು! ಮಧ್ಯಾಹ್ನ ಎಸಿ ಹಾಕಿಕೊಂಡು ಮಲಗಿದ್ದ ಜಾಗ ಇದೇ ಏನೂ ಅನ್ನಿಸುವಂತಹ ಛಳಿ, ನಮಗಿಂತಾ ಹೆಚ್ಚಾಗಿ ನಡುಗುತ್ತ, ಏದುಸಿರು ಬಿಡುತ್ತಿದ್ದ ರೂಮ್ ಹೀಟರ್, ಬಿಳಚಿಕೊಂಡಿದ್ದ ಅಂಗೈ-ಅಂಗಾಲುಗಳು, ಬೆಳಗಿನ ಹೊತ್ತಿಗೆ ಈ ಚಳಿ ಕೊಂದೇಬಿಡುತ್ತದೇನೋ ಅನ್ನಿಸಿತ್ತು.
ಮರುದಿನದ ಹೊತ್ತಿಗೆ ಬೆರಗು ಒಂದಿಷ್ಟು ಕರಗಿತ್ತು, ಇಲ್ಲಿನ ಈ ಮರುಭೂಮಿಯನ್ನೇ ಇಷ್ಟು ಚೆನ್ನಾಗಿ ಮಾರ್ಕೆಟ್ ಮಾಡುತ್ತಾ ವರ್ಷದ ಮೂರು ತಿಂಗಳಲ್ಲೇ ಲಕ್ಷ ಲಕ್ಷ ಗಳಿಸುವ ಗುಜರಾತಿಗಳ ಜಾಣತನದಿಂದ ನಾವು ಎಷ್ಟೆಲ್ಲಾ ಕಲಿಯಬೇಕಲ್ಲ ಅನ್ನಿಸಿತು. ನಮ್ಮಲ್ಲಿರುವ ಅದ್ಭುತವಾದ ಚಾರಿತ್ರಿಕ ಹಿನ್ನಲೆಯ ಸ್ಥಳಗಳು, ಸಮತೋಲನದ ಭೌಗೋಳಿಕ ಪರಿಸ್ಥಿತಿ, ಅಲ್ಲಿಗೆ ಹೋಲಿಸಿದರೆ ಸುಲಭವಾಗಿ ಸಿಗುವ ಜಲಸಂಪತ್ತು, ಎಷ್ಟು ಅದ್ಭುತವಾಗಿ ನಾವು ಪ್ರವಾಸೋದ್ಯಮವನ್ನು ಬೆಳೆಸಬಹುದಿತ್ತಲ್ಲಾ ಅನ್ನಿಸಿತು, ಮೈಸೂರಿನ ದಸರ, ಹಂಪಿಯ ಇತಿಹಾಸ, ಬೇಲೂರು-ಹಳೇಬೀಡುಗಳ ಶಿಲ್ಪಗಳು. ಏನೆಲ್ಲಾ ಮಾಡಬಹುದಿತ್ತು ನಾವು.. ಆ ವಿಷಯಕ್ಕೆ ಬಂದರೆ ಪ್ರವಾಸೋದ್ಯಮವನ್ನು ಒಂದು ಬೃಹತ್ ಉದ್ಯಮವನ್ನಾಗಿ ಅಲ್ಲಿ ಬೆಳೆಸಿದ್ದಾರೆ. ಶಿಸ್ತು, ಅಚ್ಚುಕಟ್ಟುತನ, ಅವರ ಮುಖದ ಮಾಸದ ಮುಗುಳ್ನಗೆ, ಧಾವಿಸಿ ಬಂದು ನೆರವಾಗುವ ರೀತಿ ಇವೆಲ್ಲಾ ಆ ಜಾಗವನ್ನು ಅಪ್ಯಾಯಮಾನವಾಗಿಸಿಬಿಡುತ್ತದೆ.
ಅಲ್ಲೇ ಸುತ್ತ ಮುತ್ತಲಿದ್ದ ಕರಕುಶಲ ಅಂಗಡಿಗಳು ನೂರಾರು. ನಾವೆಷ್ಟೇ ಚೌಕಾಸಿ ಮಾಡಿದರೂ ಅವರ ದನಿಯಲ್ಲಿ ಸಿಟ್ಟು ಇಣುಕುತ್ತಿರಲಿಲ್ಲ, ಹುಬ್ಬು ಗಂಟಾಗುತ್ತಿರಲಿಲ್ಲ, ಸೌಜನ್ಯ ಮರೆಯಾಗುತ್ತಿರಲಿಲ್ಲ. ಅವರ ಮಾತು ಮತ್ತು ನಗೂ ಸಹ ಅವರ ಅಂಗಡಿಯ ಬಂಡವಾಳ ಎನ್ನುವುದನ್ನು ಅವರು ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದರು. ಅಲ್ಲಿ ಶಾಪಿಂಗ್ ಮಾಡುವಾಗ ನಾವು ಚೌಕಾಸಿ ಮಾಡಿದ್ದ ಪರಿಯನ್ನು ನೆನಸಿಕೊಂಡರೆ ಈಗಲೂ ನಗು ಬರುತ್ತದೆ. ಅಲ್ಲಿ ಒಂದು ಅಂಗಡಿಯಲ್ಲಿ ಮಂಜಿನ ಬಿಳುಪಂತಹ ಒಂದು ಬಿಳಿ ಶಾಲು, ಅದರ ಒಡಲಲ್ಲಿ ಅಲ್ಲಲ್ಲಿ ಜೋಡಿಸಿದ್ದ ಪುಟ್ಟ ಪುಟ್ಟ ಕನ್ನಡಿಗಳ ಮಿಂಚು, ಅದರ ಮೃದುತ್ವ, ನೋಡಿ ಹೆಜ್ಜೆ ಮುಂದೆ ಸಾಗಿದ್ದರೆ ಕೇಳಿ! ಅಂಗಡಿ ಮುಂದೆ ನಿಂತೇ ಬಿಟ್ಟಿದ್ದೆ. ಅವನ ಬೆಲೆ ಅವನು ಹೇಳಿಯಾಯಿತು, ಅದಕ್ಕೆ ಅಷ್ಟು ಹಣ ಕೊಡಲು ನನಗೆ ಇಷ್ಟ ಇಲ್ಲ, ಶಾಲು ಬಿಟ್ಟು ಹೋಗಲು ಮನಸ್ಸಿಲ್ಲ. ನನ್ನ ಚಿಕ್ಕಪ್ಪನ ಅಂಗಡಿಯೇನೋ ಅನ್ನುವ ಹಾಗೆ ಅಲ್ಲೇ ಇದ್ದ ಸ್ಟೂಲಿನ ಮೇಲೆ ಕುಳಿತೇ ಬಿಟ್ಟಿದ್ದೆ. ನನಗೆ ಬರುತ್ತಿದ್ದ ಹಿಂದಿಯನ್ನೆಲ್ಲಾ ಬಳಸಿ ಅಂಗಡಿಯಾತನ ಜೊತೆ ಚೌಕಾಸಿ ಶುರು ಮಾಡಿದ್ದೆ, ’ನನ್ನ ಹತ್ರ ಇರೋದು ಇಷ್ಟು, ನನಗೆ ಅದು ಬೇಕೇ ಬೇಕು, ಜಾಸ್ತಿ ದುಡ್ಡು ಕೊಡೋಲ್ಲ, ಆ ಶಾಲು ಬಿಟ್ಟು ಹೋಗಲ್ಲ’ ಅಂತ. ಪಾಪ ನನ್ನ ವಾದ, ತರ್ಕ, ಅನುನಯ ಎಲ್ಲಾ ಕೇಳಿ ಆ ಅಂಗಡಿಯಾತ ಮಕ್ಕಳಿಗೆ ಮಿಠಾಯಿ ಕೊಟ್ಟು ಕಳಿಸುವ ಹಾಗೆ, ’ಆಯ್ತು ತಗೊಂಡು ಹೋಗಮ್ಮ, ನನ್ನನ್ನು ಬಿಟ್ಟುಬಿಡು’ ಅನ್ನೋ ಹಾಗೆ ಆ ಶಾಲನ್ನು ನಗು ನಗುತ್ತಲೇ ನನ್ನ ಕೈಲಿಟ್ಟಿದ್ದ!

ಎಂತಹ ಬಣ್ಣಗಳ ನಡುವಿನ ಬದುಕು ಗುಜರಾತಿಗಳದ್ದು. ಬಣ್ಣವನ್ನು ಎಷ್ಟು ಮೋಹಕವಾಗಿ ಅವರು ಸಂಯೋಜಿಸುತ್ತಾರೆ, ಹೊಂದಿಸುತ್ತಾರೆ ಎಂದರೆ ಅವರು ಏನೇ ತಯಾರಿಸಲಿ ಅದಕ್ಕೊಂದು ಚಂದ ಬಂದುಬಿಟ್ಟಿರುತ್ತದೆ. ಮರುದಿನ ಗಾಂಧಿ ನು ಗಾವ್ ಅನ್ನುವ ಕರಕುಶಲ ವಸ್ತುಗಳನ್ನು ತಯಾರಿಸುವ ಹಳ್ಳಿಗೆ ಹೋಗಿದ್ದೆವು. ಅವರ ಸೌಂದರ್ಯ ಪ್ರಜ್ಞೆ, ವರ್ಣ ಪ್ರಜ್ಞೆ ಅವರ್ಣನೀಯ. ಪುಟ್ಟ ಪುಟ್ಟ ಗುಡಿಸಲುಗಳು, ಅದನ್ನು ಅವರಿಟ್ಟುಕೊಂಡಿರುವ ಚಂದ ನೋಡಬೇಕು. ಅಲ್ಲಲ್ಲೇ ನೆಲಕ್ಕೆ, ಗೋಡೆಗೆ ಬರೆದ ರಂಗೋಲಿ, ಬಣ್ಣ ಬಣ್ಣದ ಕಚ್ ಹೆಣಿಗೆ, ಕುಸುರಿ ಕೆತ್ತನೆಯ ಮರದ ಕೆಲಸ, ಬಣ್ಣ ಬಣ್ಣದ ಕನ್ನಡಿ ಉಡುಪು ತೊಟ್ಟು ತಮ್ಮ ನಾಚಿಕೆಯಲ್ಲೇ ನಮ್ಮನ್ನು ಗೆಲ್ಲುವ ಆ ಹೆಣ್ಣು ಮಕ್ಕಳು, ಅವರ ನಡುವೆ ಮುಖ್ಯಮಂತ್ರಿ ಆನಂದೀ ಬಾಯಿಯ ತಂಗಿಯೇನೋ ಅನ್ನುವ ಹಾಗಿನ ಸುನೀತಿ ಬಾಯಿ ಒಬ್ಬಳಿದ್ದಳು. ಅಂಗಡಿಯಲ್ಲಿನ ರಜಾಯಿ, ಕೈಚೀಲಗಳನ್ನು ತೋರಿಸುತ್ತಿದ್ದವಳ ಮೂಗಿನ ನತ್ತು, ಕಿವಿಯ ಓಲೆ ಕಪ್ಪು ಸಾಸರಿನ ಹಾಗೆ ಮಿಂಚುತ್ತಿತ್ತು. ಒಂದು ಫೋಟೋ ತೆಗೆದುಕೊಳ್ಳಲೇ ಎಂದು ಕೇಳಿದಾಗ, ಗತ್ತು-ಗೈರತ್ತಿನಿಂದಲೇ ’ಮಾಮೂಲಾಗಿ ನಾನು ಒಂದು ಫೋಟೋಗೆ ೨೦೦ ರೂ ತಗೋತೀನಿ, ನೀವು ೧೦೦ ರೂ ಕೊಡಿ ಸಾಕು’ ಎಂದವಳ ಜಬರ್ದಸ್ತಿಗೆ ಜೋರಾಗಿ ನಗಲು ಶುರು ಮಾಡಿದ್ದೆ.. ಪಾಪ ಆಮೇಲೆ ಆಕೆಯೂ ನಗುತ್ತಲೇ ಪೋಸು ಕೊಟ್ಟಳು.
ಅಲ್ಲೇ ಹತ್ತಿರದ ಕಾಲಾಡುಂಗುರ್ ಗೆ ನಮ್ಮ ಭೇಟಿ. ಅಲ್ಲಿನ ಅತ್ಯಂತ ಎತ್ತರದ ಪ್ರದೇಶ ಅದು, ಅಲ್ಲಿಂದ ಪಾಕಿಸ್ತಾನದ ಗಡಿ ಕಾಣುತ್ತದೆ ಎಂದು ಹೇಳಿ, ’ಅದೋ ಅಲ್ಲಿ ನೋಡಿ’ ಎಂದು ಮದುವೆಗಳಲ್ಲಿ ಅರುಂಧತಿ ನಕ್ಷತ್ರ ತೋರಿಸುವ ಹಾಗೆ ತೋರಿಸಿದ್ದೂ, ನಾವೂ ಮದುಮಗಳ ಹಾಗೆ ತಲೆ ಆಡಿಸಿದ್ದು ಎಲ್ಲವೂ ಆಗಿತ್ತು. ಅಲ್ಲಿ ಒಂದು ಜಾಗದಲ್ಲಿ ನೆಲಕ್ಕೆ ಅಪರೂಪದ ಅಯಸ್ಕಾಂತದ ಗುಣ ಇರುವುದರಿಂದ ನ್ಯೂಟ್ರಲ್ ಗೇರಿನಲ್ಲೂ ಬಸ್ಸು ಹೇಗೆ ತಗ್ಗು ಪ್ರದೇಶದಿಂದ ಎತ್ತರ ಪ್ರದೇಶಕ್ಕೆ ಹೋಗುತ್ತದೆ ಎಂದು ತೋರಿಸಿದ್ದರು. ಅಯಸ್ಕಾಂತ ಶಕ್ತಿಯ ಮಹತ್ವ, ಮಹಿಮೆ ಗೊತ್ತಿದ್ದರಿಂದ ನಾವು ನಗು ನಗುತ್ತಲೇ ತಲೆ ಆಡಿಸಿದ್ದೆವು.
ಈಗಿನ್ನೂ ಟೆಂಟ್ ಪಟ್ಟಣಕ್ಕೆ ಕಾಲಿಟ್ಟೆವು ಎಂದುಕೊಳ್ಳುವಷ್ಟರಲ್ಲಾಗಲೇ ನಾವು ಹೊರಡುವ ಸಮಯ ಬಂದಾಗಿತ್ತು. ಸ್ವಾಗತ ದ್ವಾರದ ಬಳಿ ನಿಲ್ಲಿಸಿದ್ದ ಅಮಿತಾಭ್ ನ ಬೊಂಬೆಯ ಜೊತೆ ಇನ್ನೂ ಫೋಟೋ ತೆಗೆಸಿಕೊಳ್ಳಬೇಕಿತ್ತು, ಎಷ್ಟು ತೂಕ ಆಗಬಹುದು ಎನ್ನುವ ಯೋಚನೆ ಇಲ್ಲದೆ ಮತ್ತಷ್ಟು ಚಂದದ ಬಣ್ಣಗಳ ಕೈ ಚೀಲಗಳನ್ನು ಕೊಳ್ಳಬೇಕಿತ್ತು, ಒಂದೇ ಒಂದು ಕನ್ನಡಿ ಹಚ್ಚಿದ, ಹೆಣಿಗೆ ಕೆಲಸದ ಲಂಗಾ ಕೊಳ್ಳಬೇಕಿತ್ತು, ಹೀಗೆ ಪಟ್ಟಿಯಲ್ಲಿ ಟಿಕ್ ಮಾಡದ ವಿಷಯಗಳು ಹಲವಾರಿದ್ದವು. ಅಲ್ಲಿಂದ ಊರಿಗೆ ಬಂದ ಮೇಲೂ ಯಾಕೋ ಆ ಊರಿನ ಸೆಳೆತ ಬಿಡುತ್ತಿಲ್ಲ ನನ್ನನ್ನು.
ಇಲ್ಲಿಗೆ ಬಂದ ಮೇಲೆ ಬಿಳಿ ಮರುಭೂಮಿಯ ಫೋಟೋ ನೋಡಿ ಗೆಳತಿ ಆರತಿ, ’ಯಾವ ಹೆಣ್ಣಿನ ಕಂಬನಿ ಹೆಪ್ಪುಗಟ್ಟಿದೆ ಅಲ್ಲಿ’ ಎಂದು ಕೇಳಿದ್ದರು. ಯಾಕೋ ಅದನ್ನು ನೋಡಿದಾಗ ನನಗೂ ಅದು ಹೆಪ್ಪುಗಟ್ಟಿದ ಕಣ್ಣೀರಿನಂತೆಯೇ ಕಂಡಿತ್ತು. ಊರಿಗೆ ಹೋಗಿ ಬಂದ ಮೇಲೂ ನಾನು ಹುಡುಕಿಕೊಂಡು ಹೋದ ಮರುಭೂಮಿಯಲ್ಲಿನ ಹುಣ್ಣಿಮೆಯ ಚಂದ್ರನನ್ನು ನೋಡಲಾಗದ ನಿರಾಸೆ ಎದೆಯನ್ನು ಸಣ್ಣಗೆ ಆದರೆ ನಿರಂತರವಾಗಿ ಕೊರೆಯುವ ಚಾರುಕೇಶಿ ರಾಗದ ಹಾಗೆ ಕೊರೆಯುತ್ತಲೇ ಇದೆ. ಈ ಸಲ ಯಾವುದೇ ಪ್ಯಾಕೇಜಿನ ಹಂಗಿಲ್ಲದೆ, ದಿನಗಳ ಕಟ್ಟುಪಾಡಿಲ್ಲದೆ ಮತ್ತೆ ಹೋಗಬೇಕಾಗಿದೆ ರಣ್ ಗೆ, ಮತ್ತೆ ಚಂದ್ರನ ಹುಡುಕುತ್ತಾ…
 

‍ಲೇಖಕರು G

January 2, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. pallavi

    ಛೆ, ನಾನೂ ಬರ್ತಿದ್ದೆ.ಕಚ್ ಮತ್ತು ಜೈಸಾಲ್ಮೇರ್ ವರ್ಷಗಳ ಕನಸು.ತುಂಬಾ ಚೆನ್ನಾಗಿದೆ ಬರಹ.

    ಪ್ರತಿಕ್ರಿಯೆ
  2. Anil Talikoti

    ಚಂದ್ರ ನಿಮಗೆ ಸಿಕ್ಕನೋ ಇಲ್ಲವೋ , ನನಗಂತೂ ನಿಮ್ಮ ಲೇಖನದಲ್ಲಿ ಸಿಕ್ಕ. ಅನುಪಮ ನಿರೂಪಣೆ!
    ~ಅನಿಲ

    ಪ್ರತಿಕ್ರಿಯೆ
  3. lalithasiddabasavaiah

    ನೋಡಿ ನಿಮ್ಮ ಹಾಗೇನೇ ನಾನೂ ಅದೆಷ್ಟು ಸಲ ಅಂದುಕೊಂಡಿದ್ದೀನೋ, ನಮ್ಮ ಕರ್ನಾಟಕ, ಪ್ರವಾಸೋದ್ಯಮ ಬೆಳೆಸೋಕೆ ಹೇಳಿ ಮಾಡಿಸಿದ ತಾಣ. ಕೆರೆಕೋಡಿ ಬುಡದ ಗದ್ದೆಗೆ ಸುಮ್ಮನೆ ಕಾಲಲ್ಲಿ ವಾರೆ ಮಾಡಿದ್ರು ಅನಾಯೇಸ ನೀರು ಬಿಟ್ಟುಕೊಬಹುದು, ಹಾಗೆ ಕರ್ನಾಟಕದಲ್ಲಿ ತುಸು ನಿಗಾ ಕೊಟ್ಟರು ಸಾಕು ಪ್ರವಾಸವನ್ನ ಎನ್ಕ್ಯಾಷ್ ಮಾಡಿಕೊಬಹುದು. ಹಾಳಾದ ಯಾವ ಪಕ್ಷದ ಯಾವ ಮುಸುಡಿ ಬಂದರೂ ಇದು ಅರ್ಥವೇ ಆಗೊಲ್ಲವಲ್ಲ್ರೀ ಏನ್ಮ್ಮಾಡೋದು ಹೇಳಿ?

    ಪ್ರತಿಕ್ರಿಯೆ
  4. Rekha Rani

    ಚಂದಿರನನ್ನು ನೋಡಲು ನನ್ನ ಕಣ್ಣು ತಪ್ಪಿಸಿ ಹೋಗಿದ್ದೀರಿ!!!… ಮತ್ತು ಚಂದಿರನಿಗೆ ಸಂಗಾತಿ ನೀವೊಬ್ಬರೇ ಅಲ್ಲ ಎನ್ನುವುದು ಯಾವಾಗಲೂ ತಮಗೆ ನೆನಪಿರಲಿ…ಸವತಿ ಮತ್ಸರದಿಂದ ಹೇಳುತ್ತಿದ್ದೇನೆ..ಮುಂದಿನ ಬಾರಿ ನಿಮಗಿಂತಾ ಮೊದಲೇ ನಾನಲ್ಲಿ ಚಂದಿರನ ಬೇಟೆಯಾಡಲು ಹೋಗುತ್ತಿದ್ದೇನೆ…

    ಪ್ರತಿಕ್ರಿಯೆ
  5. ಲಕ್ಷ್ಮೀಕಾಂತ ಇಟ್ನಾಳ

    ಸಂಧ್ಯಾರಾಣಿ ಜಿ, ಕಛ್ ನ ರನ್ ಉತ್ಸವದ ಪದರು ಪದರುಗಳನ್ನು ಬಲು ಆಪ್ತವಾಗಿ, ಸುತ್ತೆಲ್ಲ ನಮ್ಮನ್ನೂ ಜೊತೆಗೊಯ್ಯುತ್ತ ನಮ್ಮನ್ನು ತಟ್ಟುವ ಪರಿ ಬಹುಶ: ನಿಮಗಷ್ಟೆ ಒಲಿದ ಕಲೆ. ಬರಹ ಬಲು ಆಪ್ತವಾಗಿದೆ. ನೋಡಿ, ಈಗ ಮಗಳು ರಾಜಸ್ತಾನಕ್ಕೆ ಹೋಗೋಣ ಎಂದು ಹೇಳುತ್ತಿದ್ದಾಳೆ. ಒಂಥರದಲ್ಲಿ ಎರಡನೆಯ ಸಾರಿ ಹೋಗುತ್ತಿರುವಂತೆ ಒಳ ಅನಿಸಿಕೆ !

    ಪ್ರತಿಕ್ರಿಯೆ
  6. Anuradha.B.Rao

    ತುಂಬಾ ಚೆನ್ನಾಗಿದೆ ನಿಮ್ಮ ಬರಹ . ರಣ್ ಉತ್ಸವ ವನ್ನು ನಮ್ಮದಾಗಿಸಿದ ನಿಮಗೆ ಅಭಿನಂದನೆಗಳು .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: