ಸಂಧ್ಯಾರಾಣಿ ಕಾಲಂ : ಕ್ಯಾಲೆಂಡರಿನ ಹಂಗಿಲ್ಲದೆ ಕಳೆದ ಆ ದಿನಗಳು


ಬೇಲಿಗಳನ್ನು ದಾಟುವ, ಮಿತಿಗಳನ್ನು ಮೀರುವ, ಕ್ಯಾಲೆಂಡರಿನಿಂದ ದಿನಗಳನ್ನು, ಗಡಿಯಾರದಿಂದ ಕ್ಷಣಗಳನ್ನು ಕದಿಯುವ ಹಂಬಲ ಎಲ್ಲರ ಮನಸ್ಸಿನಲ್ಲೂ ಸುಪ್ತವಾಗಿ ಇದ್ದೇ ಇರುತ್ತದಾ? ಕಾಲದ, ವಯಸ್ಸಿನ ಹಂಗಿಲ್ಲದ ಹಂಬಲ?
ಅದು ನಡುರಾತ್ರಿ ಸುಮಾರು ೧೨ ರ ಸಮಯ, ಟ್ರೇನು ಒಂದೇ ಲಯದಲ್ಲಿ ಸಾಗುತ್ತಾ ಜೋಲಿ ತೂಗುತ್ತಿತ್ತು. ಮುಚ್ಚಿದ ಕಿಟಕಿಯ ಗಾಜಿನಾಚೆ ಒಂದು ಲೋಕ, ನಾವು ಆ ಲೋಕಕ್ಕೆ ಸೇರಿದವರೇ ಅಲ್ಲವೇನೋ ಅನ್ನುವ ಹಾಗೆ, ’ನಿಗೂಡ ಮನುಷ್ಯರು’ ಕಥೆಗಳ ಪಾತ್ರಧಾರಿಗಳೇನೋ ಅನ್ನುವ ಹಾಗೆ, ನಿನ್ನೆ, ನಾಳೆಗಳ ಕೊಂಡಿಯಿಂದ ಕಳಚಿಕೊಂಡ ಒಂದು ’ಇಂದಿ’ನ ಭಾಗಗಳೇನೋ ಅನ್ನುವ ಹಾಗೆ ಪಿಸುದನಿಯಲ್ಲಿ ಮಾತನಾಡುತ್ತಿದ್ದೆವು. ಬೆಂಗಳೂರು ಗಾಲಿಯ ಒಂದೊಂದು ಉರುಳಿಗೂ ದೂರಾಗುತ್ತಿತ್ತು. ಆಚೆ ಇರುವುದು ಗುಲ್ಬರ್ಗಾವೋ, ಸೇಡಂ, ಅಥವಾ ಇನ್ನ್ಯಾವುದೋ ಅರಿಯದ ದಡವೋ ಎನ್ನುವಂತೆ ಅಸ್ಪಷ್ಟವಾಗಿತ್ತು.
ರೈಲಿನಲ್ಲಿ ಕೂತು ಮೂರು ಜೀವನಗಳ ಮಾತುಗಳನ್ನೆಲ್ಲಾ ಆಡುತ್ತಿದ್ದವರು ನಾವು ಮೂವರು, ನಾನು, ಎಚ್ ಎನ್ ಆರತಿ ಮತ್ತು ಬಿ ವಿ ಭಾರತಿ. ನಮ್ಮ ನಿನ್ನೆಗಳು, ಬಿಟ್ಟು ಬಂದ ಕೆಲಸಗಳು, ವಹಿಸಿದ್ದ ಪಾತ್ರಗಳು, ಹೆಗಲಿಗಿದ್ದ ಜವಾಬ್ದಾರಿಗಳು ಎಲ್ಲವನ್ನೂ ಆ ಕ್ಷಣಕ್ಕೆ ಕಳಚಿ ನಾವು ಮಗಳು, ಹೆಂಡತಿ, ಅಮ್ಮ, ಅಕ್ಕ, ತಂಗಿ, ಉದ್ಯೋಗಸ್ಥೆ ಏನೂ ಆಗದೆ ನಾವು ಕೇವಲ ನಾವಷ್ಟೇ ಆಗಿದ್ದ ಕ್ಷಣಗಳು ಅವು. ಟ್ರೇನಿನ ಜನರೆಲ್ಲಾ ಮಲಗಿದ್ದರು, ಪಿಸುಮಾತಿನಲ್ಲಿ ನಾವು ಕೌದಿ ನೇಯುತ್ತಿದ್ದೆವು. ನಾವು ಹೊರಟಿದ್ದು ಸೇಡಂ ಗೆ. ’ಅಮ್ಮ ಪ್ರಶಸ್ತಿ ಪ್ರದಾನ’ ಸಮಾರಂಭಕ್ಕೆ.
ಮರುದಿನ ಪ್ರಶಸ್ತಿ ಪ್ರದಾನ ಇತ್ತು. ಅದೇ ದಿನ ಆರತಿ ಹಿಂದಿರುಗಬೇಕಿತ್ತು. ನಾವು ಇನ್ನೂ ಒಂದು ದಿನ ಇದ್ದು ಗುಲ್ಬರ್ಗಾ ಓಡಾಡುವ ಕಾರ್ಯಕ್ರಮ ಇತ್ತು, ತುಂಬಾ ವರ್ಷಗಳಿಂದ ನೋಡಬೇಕಾಗಿದ್ದ ಬಂದೇ ನವಾಜ಼ ದರ್ಗ, ಶರಣ ಬಸವೇಶ್ವರನ ದೇವಸ್ಥಾನ, ಕೊಳ್ಳಬೇಕಾಗಿದ್ದ ಇಳಕಲ್ ಸೀರೆ, ಖಾನಾವಳಿ ಊಟ ಹೀಗೆ ಒಂದು ಪಟ್ಟಿಯೇ ನಮ್ಮ ಚೀಲದಲ್ಲಿತ್ತು. ಆ ಕ್ಷಣ ಹೇಗಾದರೂ ಮಾಡಿ ಆರತಿಯ ಕಾರ್ಯಕ್ರಮವನ್ನು ಮುಂದೂಡಿ, ನಮ್ಮ ಜೊತೆಗೆ ಗುಲ್ಬರ್ಗಾ ಅಲೆಯುವ ಕಾರ್ಯಕ್ರಮದಲ್ಲಿ ಸೇರಿಸಿಕೊಳ್ಳುವ ಸರ್ವ ಪ್ರಯತ್ನಗಳನ್ನೂ ನಾನೂ, ಭಾರತಿ ಮಾಡುತ್ತಿದ್ದೆವು.
ನಿಧಾನವಾಗಿ ಆರತಿ ಸಹ ಲಹರಿಗೆ ಬೀಳುತ್ತಿದ್ದರು. ಇದ್ದಕ್ಕಿದ್ದಂತೆ, ’ಅಲ್ಲಿಂದ ಹೈದರಾಬಾದು ಬರೀ ಮೂರು ಗಂಟೆಗಳ ಪ್ರಯಾಣ, ನಾವು ಹೈದರಾಬಾದಿಗೆ ಯಾಕೆ ಹೋಗಬಾರದು?’ ಅಂದರು ಆರತಿ, ಅದೂ ಆಫೀಸಿನಿಂದ ಹೋಗುವಾಗ ಹಾಗೆ ಗಾಂಧಿ ಬಜಾರಿಗೆ ಹೋಗಿ, ಕಾಫಿ ಕುಡಿದು ಹೋಗೋಣ ಅನ್ನೋಷ್ಟು ಸಹಜವಾಗಿ! ನಾವಿಬ್ಬರೂ ಅಷ್ಟೊತ್ತಿಗಾಗಲೇ ಆ ಲಹರಿಯಲ್ಲಿ ಎಷ್ಟು ಮುಳುಗಿ ಹೋಗಿದ್ದೆವು ಎಂದರೆ, ’ಹಾ, ಯಾಕೆ ಹೋಗಬಾರದು’ ಎಂದು ಅಷ್ಟೇ ಸಹಜವಾಗಿ ಉತ್ತರಿಸಿದೆವು! ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಮಯ ತೆಗೆದುಕೊಳ್ಳುವ ನಾನು ನನ್ನ ಜೀವನದಲ್ಲೇ ಹೀಗೆ ಇಂಪಲ್ಸೀವ್ ಆದ ನಿರ್ಧಾರ ತೆಗೆದುಕೊಂಡಿದ್ದು ಎರಡೇ ಸಲ. ಮೊದಲನೆಯ ಸಲ ನನ್ನ ತಂಗಿಯ ಮಗನಿಗೆ ಹುಟ್ಟುಹಬ್ಬಕ್ಕೆ ಗಿಟಾರ್ ತೆಗೆದುಕೊಳ್ಳಲು ತಂಗಿಯ ಜೊತೆ ಹೋದವಳು ಗಿಟಾರ್ ನೋಡಿ ಎಂತಹ ಮೋಹಕ್ಕೆ ಬಿದ್ದಿದ್ದೆನೆಂದರೆ, ಆ ಕ್ಷಣದಲ್ಲಿ ಯಾರೇ ನನಗೆ ಇಡೀ ಜಗತ್ತಿನಲ್ಲಿ ನಿನಗೆ ಜರೂರಾಗಿ ಬೇಕಿರುವುದು ಏನು ಎಂದಿದ್ದರೆ, ಮರು ಯೋಚನೆಯಿಲ್ಲದೆ ’ಗಿಟಾರ್’ ಎಂದಿರುತ್ತಿದ್ದೆ! ಆ ಪುಟಾಣಿಗೆ ಗಿಟಾರ್ ಕೊಳ್ಳಲು ಹೋಗಿ ನಾನೂ ಗಿಟಾರ್ ಅಪ್ಪಿಕೊಂಡು ಮನೆಗೆ ಮರಳಿದ್ದೆ. ಎರಡನೆಯದು ಈಗ… ಈಗಲೂ ಅಷ್ಟೆ, ನಾನು ಹೈದರಾಬಾದಿಗೆ ಹೋಗುವುದಕ್ಕೇ ರೈಲು ಹತ್ತಿದ್ದೇನೆ ಎನ್ನುವ ಹಾಗೆ ಮರು ಮಾತಿಲ್ಲದೆ ತಲೆ ಆಡಿಸಿದ್ದೆ. ನಾವು ಈಗಾಗಲೇ ಅವರ ಮಾತುಗಳನ್ನು ಶಿರಸಾವಹಿಸಿ ಒಪ್ಪಿಕೊಂಡಿದ್ದೇವೆ ಎನ್ನುವುದರ ಅರಿವಿಲ್ಲದ ಆರತಿ ಹೈದರಾಬಾದಿನ ಲಾಡ್ ಬಜಾರ್ ನ ಸರಗಳು, ಚೂಡಿಬಜಾರ್ ನ ಬಳೆಗಳು, ಚಾರ್ ಮಿನಾರ್ ನ ಮುತ್ತುಗಳು, ಅವರ ಹಾಡುಗಾರ, ಕವಿ ಸ್ನೇಹಿತನೊಬ್ಬನ ಹಾಡುಗಳ ಆಮಿಷವನ್ನು ನಮ್ಮೆದುರು ಹರಡುತ್ತಿದ್ದರು. ನಾವು ಆಗಲೇ ಹೈದರಾಬಾದನ್ನು ನಮ್ಮ ಪಟ್ಟಿಗೆ ಸೇರಿಸಿಕೊಂಡಾಗಿತ್ತು.
ಬೆಳಗ್ಗೆ ೫.೩೦ ಸುಮಾರಿಗೆ ರೈಲು ಸೇಡಂಗೆ ಬರಬಹುದು ಎಂದು ’ಅಮ್ಮ ಪ್ರಶಸ್ತಿ ಪ್ರತಿಷ್ಠಾನ’ದ ಮಹಿಪಾಲ ರೆಡ್ಡಿ ಮುನ್ನೂರು ಫೋನ್ ಮಾಡಿದ್ದರು. ೫ಕ್ಕೇ ಎದ್ದು ಕಿಟಕಿಯಾಚೆ ಕಣ್ಣು ನೆಟ್ಟು ಕೂತಿದ್ದೆ, ಬೆಂಗಳೂರಿನಲ್ಲಿ ಟ್ರೇನು ಹೊರಡುವ ಸಮಯದಲ್ಲಿ ನನ್ನ ಕೈ ಸೇರಿದ್ದ ಆ ಹೂ ಗುಚ್ಛದ ಕೆಂಪು, ಹಳದಿ ಹೂಗಳು, ಥೇಟ್ ಆ ಹೂಗಳ ಹಿಂದಿನ ಮುಖದಷ್ಟೇ ಚಂದವಾಗಿ ನಗುತ್ತಿದ್ದವು. ಮಿಣುಕು ಮಿಣುಕು ಬೆಳಕಿನಲ್ಲಿ ಕಂಡದ್ದು ’ಚಿತ್ತಾಪುರ’ ಎನ್ನುವ ಹೆಸರು. ಆ ಕ್ಷಣಕ್ಕೆ ನನಗಾದ ಥ್ರಿಲ್ ಅಷ್ಟಿಷ್ಟಲ್ಲ, ’ಅರೆ ಚಿತ್ತಾಪುರ!’ ಎಂದು ಮನಸ್ಸಿನೊಳಗೇ ಉದ್ಗರಿಸಿದೆ. ನನ್ನ ಅಪ್ಪನ ಮೊದಲ ಪೋಸ್ಟಿಂಗ್ ಆದ ಊರು ಅದು, ಚಿತ್ತಾಪುರದ ಬಗ್ಗೆ ಅಪ್ಪ ಹೇಳಿದ್ದ ಎಲ್ಲಾ ಕಥೆಗಳೂ ನೆನಪಿಗೆ ಬಂದವು, ಅಲ್ಲಿನ ಕಪ್ಪು ಮಣ್ಣು, ರೊಟ್ಟಿ ಊಟ, ಖಾರದ ರುಚಿ, ಆಗ ಅಲ್ಲಿ ನಡೆಯುತ್ತಿದ್ದ ಮುಜ್ರಾಗಳು, ಅಲ್ಲಿನ ಜನರ ಸಿಟ್ಟು, ರೊಚ್ಚು, ಪ್ರೀತಿ ಎಲ್ಲವೂ. ಆ ಘಳಿಗೆ ಆ ಊರು ನನ್ನದಾಗಿಬಿಟ್ಟಿತ್ತು. ಚಿತ್ತಾಪುರ ಆದ ಮೇಲೆ ಮಾಳಖೇಡ – ರಾಷ್ಟ್ರಕೂಟರ ರಾಜಧಾನಿ ಮಾನ್ಯಖೇಟ, ಆಮೇಲೆ ಸೇಡಂ.
ಊರಿನ್ನೂ ಎದ್ದಿರಲಿಲ್ಲ, ರೈಲ್ವೇ ನಿಲ್ದಾಣದಲ್ಲಿ ಮಹಿಪಾಲ್ ರೆಡ್ಡಿ ಮುನ್ನೂರು ನಿಂತಿದ್ದರು, ಇಡೀ ಸೇಡಂ ನಲ್ಲಿ ನಮಗಿದ್ದ ಒಬ್ಬರೇ ಪರಿಚಿತರು. ಕೋಣೆ ಸೇರಿ ಮತ್ತೆ ತಯಾರಾಗಿ ಹೊರಟಿದ್ದು ಗುಲ್ಬರ್ಗಾಕ್ಕೆ. ಹಿಂದಿನ ರಾತ್ರಿ ಇದ್ದಕ್ಕಿದ್ದಂತೆ ಹೈದರಾಬಾದ್ ಕಾರ್ಯಕ್ರಮ ನಿಗದಿ ಆಗಿತ್ತಲ್ಲ, ಹಾಗಾಗಿ ಗುಲ್ಬರ್ಗಾಕ್ಕೆ ಅದೇ ದಿನ ಹೋಗುವ ಕಾರ್ಯಕ್ರಮ. ಮರುದಿನ ಲಕ್ಷ್ಮಿ ಜೋಶಿಯವರ ಮನೆಗೆ ಹೋಗುವ ಕಾರ್ಯಕ್ರಮ ಸಹ ಇತ್ತು, ಅವರಿಗೂ ವಿಷಯ ವಿವರಿಸಿ ಕ್ಷಮೆ ಕೇಳಿದ್ದಾಯ್ತು. ನಮ್ಮ ನಮ್ಮ ಮನೆಗಳಿಗೆ ಫೋನ್ ಮಾಡಿ ಬದಲಾದ ನಮ್ಮ ಕಾರ್ಯಕ್ರಮದ ಬಗ್ಗೆ ಹೇಳಬೇಕಿತ್ತು. ನಾವು ಈ ಹಠಾತ್ ನಿರ್ಧಾರ ತೆಗೆದುಕೊಂಡಿದ್ದು ಇರಲಿ, ಕಾರ್ಯಕ್ರಮದಲ್ಲಿ ಒಂದು ಸಣ್ಣ ಬದಲಾವಣೆ ಇದೆ ಎಂದು ಪಕ್ಕದ ರಾಜ್ಯಕ್ಕೆ ಹೋಗುವ ಕಾರ್ಯಕ್ರಮದ ಬಗ್ಗೆ ನಮ್ಮ ನಮ್ಮ ಮನೆಗಳಲ್ಲಿ ಹೇಳಿದಾಗ, ಅವರು ಅದನ್ನು ಎಷ್ಟು ಆರಾಮಾಗಿ ಸ್ವೀಕರಿಸಿದರು ಎಂದರೆ, ಆಗಲೇ ನಮಗೂ ಗೊತ್ತಾಗಿದ್ದು, ನಮ್ಮ ಬಗ್ಗೆ ಈಗಾಗಲೇ ಅವರು ಎಲ್ಲಾ ನಿರೀಕ್ಷೆಗಳನ್ನು ಬಿಟ್ಟಿದ್ದಾರೆ, ನಮ್ಮೆಲ್ಲ ಹುಚ್ಚುತನಗಳೂ ಅವರಿಗೆ ಅಭ್ಯಾಸವಾಗಿ ಹೋಗಿದೆ ಅಂತ!
ನಮ್ಮನ್ನು ಗುಲ್ಬರ್ಗಾಕ್ಕೆ ಕರೆದೊಯ್ದ ಸಾರಥಿ ಬಸೂ. ಮೊದಮೊದಲು ಗಂಭೀರವಾಗಿದ್ದವ ಆಮೇಲೆ ನಮ್ಮ ತಲೆಹರಟೆ, ತಮಾಶೆಗಳಿಗೆ ನಗು ಸೇರಿಸಲಾರಂಭಿಸಿದ್ದ. ’ಏನ್ಮಾಡ್ತೀ ಬಸು?’ ಎಂದಾಗ, ’ಏನಿಲ್ರೀ ಒಂದೆರಡು ಆಟೋ ಅದಾವ್ರೀ, ಒಂದು ಟಂಟಂ ಐತ್ರೀ, ಮತ್ತ ಒಂದು ಪಾನ್ ಶಾಪ್ ಐತ್ರೀ, ಈ ಗಾಡಿ ಮಾತ್ರ ನಾನೇ ಓಡಿಸ್ತೀನ್ರೀ’ ಅಂದ. ’ಓಹೋ ಸಿಟಿ ಟ್ಯಾಕ್ಸಿ ಕಂಪನಿ ಬಿಡಪ್ಪ ನಿನ್ನದು’ ಎಂದು ಹೇಳಿ, ರಾತ್ರಿಗೆ ಒಳ್ಳೇ ಪಾನ್ ಕೊಡಿಸಬೇಕು ನೀನು ಅಂತ ತಾಕೀತು ಮಾಡಿದೆವು.

ಗುಲ್ಬರ್ಗಾ ಎಂದರೆ ನನ್ನ ಮನಸ್ಸಿನಲ್ಲಿದ್ದದ್ದು ಒಂದೇ ಹೆಸರು… ಬಂದೇ ನವಾಜ಼ ದರ್ಗಾ. ಒಮ್ಮೆ ಮನಸ್ಸು ಬಿಚ್ಚಿ ನಿರಾಳವಾಗಿ ಅಳುವ ವಿಷಯ ಬಂದಾಗ ನನ್ನ ಸ್ನೇಹಿತ ಹೇಳಿದ್ದ ಹೆಸರು ಬಂದೇ ನವಾಜ಼ ದರ್ಗ. ’ಅಲ್ಲಿನ ವಿಶಾಲತೆಯಲ್ಲಿ ನನ್ನ ಕಣ್ಣೀರಿಗೆ ಯಾವಾಗಲೂ ಜಾಗ ಸಿಗ್ತಾ ಇತ್ತು’ ಅಂದಿದ್ದ ಅವನು. ಯಾಕೋ ಆ ಘಳಿಗೆಯಿಂದ ನಾನು ಬಂದೇ ನವಾಜನ ಸಾನಿಧ್ಯವನ್ನು ಜಪಿಸುತ್ತಿದ್ದೆ. ಸುಖದ ನೆಲೆಗಳನ್ನು ಹುಡುಕದ ಮನಸ್ಸು ಕಣ್ಣೀರಿನ ಈ ತಾವನ್ನು ಕನಸುತ್ತಿತ್ತು. ಇರಬಹುದೇ ಅಂತಹ ಒಂದು ಜಾಗ, ದುಗುಡಗಳೆಲ್ಲಾ ಕರಗಿ, ಕಣ್ಣೀರಾಗಬಲ್ಲ ನೆರಳು? ಬಸು ದರ್ಗಾದ ಮುಂದೆ ಗಾಡಿ ನಿಲ್ಲಿಸಿದಾಗ ಮೊದಲಿಗೆ ಕಂಡದ್ದು ರಾಶಿ ರಾಶಿ ಗುಲಾಬಿಗಳು. ಹೂವಿನ ಲಡಿ ಹಾರಗಳು. ದರ್ಗಾದ ಅಂಗಳದುದ್ದಕ್ಕೂ ಹೆಜ್ಜೆ ಹಾಕುತ್ತಿದ್ದೆ. ಆ ಬಗ್ಗೆ ಮತ್ತೆ ಬರೆದೇನು.
ವಾಪಸ್ಸು ಬಂದು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೆಜ್ಜೆ ಇಟ್ಟಾಗ ಅಲ್ಲೊಂದು ಗಂಧರ್ವ ಗಾನ ಕೇಳಬಹುದು ಎನ್ನುವ ಅಂದಾಜೇ ನಮಗಿರಲಿಲ್ಲ. ಲಕ್ಷ್ಮಿ ಜೋಶಿ ತಂಡದ ಗಾಯನಕ್ಕೆ ಕಾಲ ದೇಶಗಳ ಹಂಗಿರಲಿಲ್ಲ. ವಚನಗಳನ್ನು ಕೇಳುತ್ತಾ ಕುಳಿತಾಗ, ಆ ರಾತ್ರಿ, ದೇಗುಲದ ಪೌಳಿಯಲ್ಲಿನ ತಂಗಾಳಿ, ಸುತ್ತಲಿನ ಕತ್ತಲು, ಗೋಪುರದ ಪಕ್ಕ ನಗುತ್ತಿದ್ದ ಚಂದಿರ, ಅಲ್ಲೇ ಕಟ್ಟೆಯ ಪಕ್ಕದ ಮರದ ಎಲೆಗಳ ನೆರಳಿನಾಟ, ನಮ್ಮ ಮನಸ್ಸು ಎಲ್ಲವೂ ಹಾಡಿಗೆ ಸಾಥ್ ಕೊಟ್ಟಿದ್ದವು. ಕೊನೆಯದಾಗಿ ಆ ಹೆಣ್ಣುಮಗಳು ಹಾಡಿದ ಭೈರವಿ ರಾಗದ ’ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ’ ಹಾಡಿನ ಗುಂಗು ಇನ್ನೂ ಇಳಿದಿಲ್ಲ. ಸೇಡಂನಂತಹ ದೂರದ ಊರಲ್ಲಿ ಒಂದು ಸಾಹಿತ್ಯಕ ಕಾರ್ಯಕ್ರಮವನ್ನು ೧೪ ವರ್ಷಗಳಿಂದ ನಡೆಸಿಕೊಂಡು ಬರುತ್ತಾ, ಸೇಡಂ ಹೆಸರನ್ನು ಕನ್ನಡ ಸಾಹಿತ್ಯ ಕಟ್ಟುವ ತಾಣವನ್ನಾಗಿ ಮಾಡಿರುವ ಮಹಿಪಾಲರೆಡ್ಡಿ ಮುನ್ನೂರು ಮತ್ತು ’ಅಮ್ಮ’ಬಳಗದ ಸ್ನೇಹಿತರಿಗೆ ನನ್ನ ಅಭಿನಂದನೆಗಳು.
ಕಾರ್ಯಕ್ರಮ ಮುಗಿದಾಗ ರಾತ್ರಿ ೧೧. ನಮ್ಮನ್ನು ನಾವು ಇಳಿದುಕೊಳ್ಳುವ ಜಾಗ ತಲುಪಿಸುವ ಹೊಣೆ ಹೊತ್ತಿದ್ದ ಬಸು, ನಮ್ಮ ಕೋರಿಕೆಯನ್ನು ಮರೆಯದೆ ಎಲ್ಲಿಂದಲೋ ಸಿಹಿ ಪಾನ್ ಕಟ್ಟಿಸಿಕೊಂಡು ಬಂದು ಕೊಟ್ಟಿದ್ದ. ಬಸ್ ತಪ್ಪಿತೆಂದು ಪ್ರವರ ಸಹ ನಮ್ಮೊಂದಿಗೆ ಗೆಸ್ಟ್ ಹೌಸ್ ಗೆ ಮರಳಿದ್ದ. ಕಾರ್ಯಕ್ರಮದಿಂದ ಅವಸರದಲ್ಲಿ ಊಟ ಮಾಡದೆ ಹೊರಟಿದ್ದ ನಾವು, ಗೆಸ್ಟ್ ಹೌಸಿನಲ್ಲಿ ಕೂತು ನೀಟಾಗಿ ಕಟ್ಟಿಕೊಟ್ಟಿದ್ದ ಹಣ್ಣುಗಳನ್ನು ಪಾಂಗಿತವಾಗಿ ತಿಂದದ್ದಾಯ್ತು. ಅಲ್ಲಿ ಹಾಡಿನ ಮೋಡಿ ಒಂದು ತೂಕದ್ದಾದರೆ, ಆಮೇಲೆ ನಾವು ಮೂವರು ಮತ್ತು ಪ್ರವರ ಕೂತು ಕವನಗಳನ್ನು ಓದಿದ್ದು ಮತ್ತೊಂದು ತೂಕ. ಆರತಿಯ ಫೇಶಿಯಲ್ ಕವಿತೆ, ಪ್ರವರನ ಕಪ್ಪು ಹುಡುಗಿಯ ಹಾಡು, ಭಾರತಿಯ ’ಅವಳಿರದೆಯೂ ಇರುವ ಹೆಣ್ಣಿನ ಕವಿತೆ’…. ಅದೊಂದು ಹಾಡು, ಕವಿತೆಗಳ ರಾತ್ರಿ. ಮಾತು, ನಗು, ಕವಿತೆ. ನನ್ನ ಜೊತೆಗಿದ್ದ ಹೂಗಳು ಒಂದಿಷ್ಟೂ ಬಾಡದೆ ನಗುತ್ತಿದ್ದವು.
ಬೆಳಗ್ಗೆ ಎದ್ದು ಹೈದರಾಬಾದಿಗೆ ಮತ್ತೊಂದು ರೈಲು, ಮತ್ತಷ್ಟು ಮಾತು, ’ಹೈದರಾಬಾದಿನಲ್ಲಿ ಸಿಟಿ ಟೂರ್ ಹೋಗ್ತೀರಾ’ ಎಂದು ಭಾರತಿಯ ತಂದೆ ಕೇಳಿದಾಗ, ನಾವು ಚಾರ್ಮಿನಾರ್ ಸುತ್ತಮುತ್ತ ಬಿಟ್ಟು ಬೇರೆಲ್ಲೂ ಹೋಗುವ ಕಾರ್ಯಕ್ರಮವೇ ಇಲ್ಲ ಎಂದಾಗ ಪಾಪ ಅವರು ಅತ್ತಲಿಂದ ಒಂದು ಹತ್ತು ಕ್ಷಣ ಮೌನ.. ಮೂರು ಗಂಟೆ ಚಾರ್ ಮಿನಾರ್ ಸುತ್ತ ಮುತ್ತ ಓಡಾಡಲು ಇನ್ನೊಂದು ರಾಜ್ಯಕ್ಕೆ ಹೋದ ನಮ್ಮ ಬಗ್ಗೆ ಅವರಿಗೆ ಅಪಾರ ಮರುಕ ಬಂದಿರಬೇಕು!
ಸಣ್ಣಗೆ ಉರಿಯುವ ’ಉಗುರು ಜ್ಯೋತಿ’ಗಳಂತಹ ಮುತ್ತಿನ ಸಾಲು ಸಾಲು ಹಾರಗಳನ್ನು ನೇತು ಹಾಕಿದ್ದ ಅಂಗಡಿಗಳು, ಆ ನಾಲ್ಕು ರಸ್ತೆಗಳಲ್ಲಿ ಕ್ಷಣಗಳಂತೆ ಸರಿದು ಹೋದ ಗಂಟೆಗಳು, ಮತ್ತೆ ಆ ಹಾಡುಗಳು, ಕವಿತೆಗಳು, ಹೈದರಾಬಾದಿನಲ್ಲಿ ಕವಿ ಹಾಡುಗಾರ ಯಾಕೂಬ್ ಹಾಡಿದ ಶ್ರೀ ಶ್ರೀ ಹಾಡು, ಹಾಡಿನಲ್ಲಿ ಕದಲಿದ ಜಗನ್ನಾಥನ ರಥ ಚಕ್ರಗಳು, ಕೇಳಿದ ತೆಲುಗು ಜನಪದ ಪ್ರೀತಿಯ ’ಯಂಕಿ ಪಾಟ’ …. ಯಾವುದನ್ನು ಬರೆಯಲಿ? ಎಲ್ಲವೂ ಚಾರ್ ಮಿನಾರಿನ ಮುತ್ತಿನ ಹಾರಗಳ ಹಣತೆ ಹೊಳಪಿನಷ್ಟು ಚಂದ, ಚೂಡಿ ಬಜಾರಿನಲ್ಲಿ ಆ ಅಂಗಡಿಯವ ಬಳೆ ಒಡೆದೀತೋ, ಕೈ ನಲುಗೀತೋ ಎಂಬಷ್ಟು ಮೃದುವಾಗಿ ಏರಿಸಿದ ಬಳೆಗಳ ನಾದದಷ್ಟು ಮಧುರ ಎನ್ನಲೆ? ಪಯಣದುದ್ದಕ್ಕೂ ನನ್ನೊಡನೆ ಇದ್ದ, ನನ್ನ ಜೊತೆ ರೈಲಿನಲ್ಲಿ ಊರೂರು ಅಲೆದು, ನನ್ನೊಡನೆ ಮನೆಗೆ ಮರಳಿದ ಆ ಕೆಂಪು, ಹಳದಿ ಹೂ ಗುಚ್ಛದ ಹೂಗಳಷ್ಟು ಹತ್ತಿರ ಎನ್ನಲೇ?
ಸುತ್ತಾಟ ಎಲ್ಲ ಮುಗಿಸಿ ಬಂದ ಮೇಲೂ ಕಾಡುತ್ತಿದ್ದ ಒಂದು ಪ್ರಶ್ನೆ, ಅದ್ಯಾವ ಹಂಬಲ ನಮ್ಮನ್ನು ಇದ್ದಕ್ಕಿದ್ದಂತೆ ಹೊಸದರ ಅನ್ವೇಷಣೆಯಲ್ಲಿ ಹೊರಡುವಂತೆ ಮಾಡಿತು ಎನ್ನುವುದು. ಆ ನಡುರಾತ್ರಿಯಲ್ಲಿ ಎಚ್ ಎನ್ ಆರತಿ ಆ ಪ್ರಶ್ನೆ ಕೇಳಿದಾಗ, ಒಂದು ಕ್ಷಣ ಸಹ ನಮಗೆ ಅದು ಹುಚ್ಚಾಟ ಅನ್ನಿಸಲೇ ಇಲ್ಲ. ಮೂವರಿಗೂ ಇಲ್ಲಿ ಮನೆ ಇತ್ತು, ಕಾಯುವವರಿದ್ದರು, ಮಾಡಬೇಕಾದ ಕೆಲಸ ಇತ್ತು. ಆದರೆ ಅದೆಲ್ಲವನ್ನೂ ಮೀರಿ ನಮ್ಮನ್ನು ಹೊರಡಿಸಿದ ಆ ತುಡಿತ ಯಾವುದು?
ಈ ಪ್ರಶ್ನೆ ನನ್ನನ್ನು ಬಹಳ ಸಲ ಕಾಡಿದೆ. ಆ ಪ್ರಶ್ನೆ ನನ್ನೊಬ್ಬಳನ್ನೇ ಅಲ್ಲ, ಇನ್ನೂ ಹಲವಾರು ಜನರನ್ನು ಕಾಡಿದೆ ಮತ್ತು ಕಾಡುತ್ತಿದೆ ಎನ್ನುವುದು ಅಂತರ್ಜಾಲದಲ್ಲಿ ಓದಿದ ಒಂದು ಲೇಖನದಿಂದ ಗೊತ್ತಾಯಿತು. ಅದೊಂದು ಮನಶ್ಯಾಸ್ತ್ರ ಸಂಬಂಧೀ ವಿಷಯಗಳನ್ನು ತೋಡಿಕೊಳ್ಳುವ, ಚರ್ಚೆ ಮಾಡುವ ವೇದಿಕೆ. ಅಲ್ಲಿ ಹೀಗೆ ಒಬ್ಬ ನಡು ಹರೆಯದ ವ್ಯಕ್ತಿ, ’ಇಲ್ಲಿರುವ ಎಲ್ಲಾ ಸುಖ, ನೆಮ್ಮದಿ, ಸ್ನೇಹ, ಸಂಬಂಧಗಳ ನಡುವೆಯೇ ಒಮ್ಮೊಮ್ಮೆ ಯಾವುದಾದರೂ ಅಪರಿಚಿತ ಊರಿಗೆ ಹೋಗಿ, ಜೀವನವನ್ನು ಮತ್ತೆ ಶುರು ಮಾಡಬೇಕು ಅನ್ನಿಸುತ್ತಿದೆ. ಇದು ಸಹಜವಾ, ನನಗೇನದ್ರೂ ಆರೋಗ್ಯದ ಸಮಸ್ಯೆ ಇದೆಯಾ’ ಎಂದು ಬರೆದುಕೊಂಡಾಗ ಸುಮಾರು ೨೦-೨೫ ಮಂದಿ ತಮಗೂ ಹೀಗೇ ಅನ್ನಿಸುವುದಾಗಿ ಹೇಳಿಕೊಂಡಿದ್ದರು. ಬದುಕು ಬದುಕಲು ತಾನೆ ಕಾರಣಗಳನ್ನು, ನೆಪಗಳನ್ನೂ ಹುಡುಕಿಕೊಳ್ಳುವುದಂತೆ. ಆ ಕ್ಷಣದಲ್ಲಿ ಆ ಒಂದು ದಿನದ ಅ-ಯೋಜಿತ ಪ್ರಯಾಣ ನಮ್ಮ ನಮ್ಮ ಬೊಗಸೆಗಳಲ್ಲಿ ಒಂದು ಚಿಟ್ಟೆಯನ್ನು ತಂದಿಟ್ಟಿದ್ದಂತೂ ನಿಜ.
ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿವುದೆ ಜೀವನ?
 

‍ಲೇಖಕರು G

December 5, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

19 ಪ್ರತಿಕ್ರಿಯೆಗಳು

  1. Prabhakar M. Nimbargi

    ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿವುದೆ ಜೀವನ? Yes, that’s life. We always seek the unknown. You have made us a part of your journey through your narration.

    ಪ್ರತಿಕ್ರಿಯೆ
  2. ಅಮರದೀಪ್.ಪಿ.ಎಸ್.

    ಮೂರು ಜನರ ಪೈಕಿ ಒಬ್ಬರಾದ್ರೂ ಈ ಟ್ರಿಪ್ಪಿನ ಬಗ್ಗೆ ಬರೀತೀರಾ ಅಂದ್ಕಂಡಿದ್ದೆ….. ನೀವೇ ಬರೆದಿರಿ… ಚೆನ್ನಾಗಿದೆ…

    ಪ್ರತಿಕ್ರಿಯೆ
  3. samyuktha

    🙂 ಆ ಇಪ್ಪತ್ತು ಇಪ್ಪತ್ತೈದು ಜನರ ಜೊತೆಗೆ ನಾನೂ ಒಬ್ಬಳು. ಇರುವುದೆಲ್ಲವ ಬಿಟ್ಟು….
    ಲೇಖನ, ನಿಮ್ಮ ಪ್ರವಾಸದುದ್ದಕ್ಕೂ ನಿಮ್ಮ ಜೊತೆಗೇ ನಗುತಾ, ಘಮಿಸುತಾ ಇದ್ದ ಆ ಹೂಗಳಷ್ಟೇ ಚೆನ್ನಾಗಿದೆ!

    ಪ್ರತಿಕ್ರಿಯೆ
  4. sindhu

    ಸಂಧ್ಯಾ
    ತುಂಬಾ ಚೆನಾಗಿದೆ ಲೇಖನ. ನಿಮ್ಮ ಮೂಡಿಗೆ ಅದೇ ಹಾಡಿನ ಇನ್ನೊಂದು ಸಾಲೂ ಹೊಂದತ್ತೆ.
    ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ.
    ಏನೊ ತೀಡಲು ಎಲ್ಲೋ ತಾಗಲು ಹೊತ್ತಿ ಉರಿವುದು ಕಾತರ.
    …..
    ಮತ್ತೆ ಮತ್ತೆ ಅಡಿಗರನ್ನು ಯಾಕೋ ನೆನಪು ಮಾಡಿದೀರಿ.
    “ಮುರಿದು ಬಿದ್ದ ಮನ ಮರದ ಕೊರಡೊಳೂ ಹೂವು ಹೂವು ಅರಳು”ವಂತೆ ಮಾಡೋ ಅಂತಹದು ನಮ್ಮೊಳಗೆ ಏನೋ ಇರ್ತದೆ. ಯಾವುದೋ ಸನ್ನೆ, ಇನ್ಯಾವುದೋ ಸಲಹೆ, ಮತ್ಯಾರದ್ದೋ ಕಣ್ಣ ಹೊರಳು, ಅಥವಾ ಮಾತಿಲ್ಲದ ಪ್ರತ್ಯುತ್ತರ ಏನೇನನ್ನೋ ಉದ್ದೀಪಿಸಿಬಿಡುತ್ತದೆ.
    ಆ ಉದ್ದೀಪ್ತ ಭಾವನೆಯನ್ನ ಎದೆಗೆತ್ತಿ ನೇವರಿಸುತ್ತ ಸುಮ್ಮನೆ ಹೊರಟರೆ ಹಳೆ ಗಮ್ಯಕ್ಕೇ ಹೊಸಾ ದಾರಿ…
    ಪ್ರೀತಿಯಿಂದ,
    ಸಿಂಧು

    ಪ್ರತಿಕ್ರಿಯೆ
  5. bharathi b v

    ಅಬ್ಬಬ್ಬಾಆಆ ಈಗ್ಲೂ ರೋಮಾಂಚನ ನೆನೆಸಿಕೊಂಡರೆ …. ಇದ್ದುದನ್ನು ಬಿಸಾಕಿ ಎತ್ತಲೋ ಒಂದಿಷ್ಟು ಹೊತ್ತು ಕಳೆದುಹೋದ ನಂತರ ಬದುಕು ಸುಂದರ …. ತುಂಬ ಸುಂದರ ….

    ಪ್ರತಿಕ್ರಿಯೆ
  6. Sushma Moodbidri

    ಆಹಾ..!
    ಎಲ್ಲವನ್ನೂ ಬಿಟ್ಟೆದ್ದಂತೆ ಎಲ್ಲಾದರೂ ಹೋಗಿ ಬರಬೇಕೆಂಬ ಸಣ್ಣ ಆಸೆಗೀಗ ರೆಕ್ಕೆ ಪುಕ್ಕ ಬಲಿತಂತಾಯ್ತು.. 🙂
    ಇಷ್ಟವಾಯಿತು

    ಪ್ರತಿಕ್ರಿಯೆ
  7. Uday Itagi

    ಸಂಧ್ಯಾ ಮೇಡಂ,
    ಒಂದು ಪ್ರಯಾಣದ ಅನುಭವವನ್ನು ಹೀಗೂ ಬರೆಯಬಹುದು ಎಂದು ತೋರಿಸಿಕೊಡಲು ನಿಮ್ಮಂಥವರಿಂದ ಮಾತ್ರ ಸಾಧ್ಯ. ನೀವು ಈ ರೀತಿ ಭಿನ್ನವಾಗಿ ಯೋಚಿಸುವದರಿಂದಲೇ ನನಗೆ ತುಂಬಾ ಇಷ್ಟವಾಗುತ್ತೀರಿ. ಇನ್ನಷ್ಟು ಪ್ರಶಸ್ತಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿ.

    ಪ್ರತಿಕ್ರಿಯೆ
  8. shobhavenakatesh

    chennagide sandhya nimma anubhava,anisike.bhavanegalu olagonda nimma lekhana. iddkiddhage hyderabadge horata reetiyu chennagide. nanu iralillavalla nimma jothe anisitu

    ಪ್ರತಿಕ್ರಿಯೆ
  9. Anonymous

    ಈ ಸಲ ಎಲ್ಲಿಗಾದರೂ ಅಂತಹ ಪ್ರವಾಸ ಹೊರಟರೆ ನನ್ನನ್ನೂ ಕರೆಯಿರಿ ಸಂಧ್ಯಾ ಅವರೇ

    ಪ್ರತಿಕ್ರಿಯೆ
  10. ಅಕ್ಕಿಮಂಗಲ ಮಂಜುನಾಥ

    ವಾವ್ಹ್ ವಾವ್ಹ ್. .ಚೆನ್ನಾಗಿ ನಿರೂಪಿಸಿದ್ದೀರಿ , ಪ್ರವಾಸದ ಅನುಭವವನ್ನ.ತುಂಬಾ ಧನ್ಯವಾದಗಳು ಮೇಡಂ.

    ಪ್ರತಿಕ್ರಿಯೆ
  11. Anil Talikoti

    ಹೊಸದರ ಅನ್ವೇಷಣೆಯಿಲ್ಲದಿರುವ ಮನಸ್ಸು ಮುದುಡಿದಂತೆ ಸೈ. ಹೊಸ ಊರು, ಅಪರಿಚಿತೆಯಲ್ಲಿ ಅಡಗಿದ ಕಲಿಕೆಯ ಪಾಠ ಎಲ್ಲ ಅನುಭವಗಳು ವಿಕಸನಕ್ಕಾಗಿ ಮಡಗಿದ ಮೆಟ್ಟಲುಗಳು ಅನಿಸುತ್ತದೆ ನನಗೆ ಕೆಲವೊಮ್ಮೆ.
    ~anil

    ಪ್ರತಿಕ್ರಿಯೆ
  12. Raghav

    ಎಲ್ಲರೂ ಒಂದು ದಿನದ ಮಟ್ಟಿಗೆ ಗೌತಮ(ಮಿಯ)ರು???
    ಓದಿದ ನಮಗೆ ಕೆಲ ಕ್ಷಣಗಳಾದರೂ ಗೌತಮರಾದ ಅನುಭವ …

    ಪ್ರತಿಕ್ರಿಯೆ
  13. ಡಾ.ಶಿವಾನಂದ ಕುಬಸದ

    …..ಹೀಗಾಗಿಯೇ ನಿಮ್ಮ ಲೇಖನಗಳು ನನಗೆ ಮೆಚ್ಚುಗೆಯಾಗುತ್ತವೆ.

    ಪ್ರತಿಕ್ರಿಯೆ
  14. mahipalreddy munnur

    sandhya madam,
    namma urige sedam ge bandu.. prashasti swiakarisi.. anubhavada museyalli lekhana baredu AMMA prashasti kuritu olleya maatu baredu prashasti gondu maanyate kottiri.
    dhanyavaadagalu

    ಪ್ರತಿಕ್ರಿಯೆ
  15. kusumabaale

    ನನ್ನದೂ ಪ್ರಯಾಣವಾಯ್ತು.ನಿಮ್ಮೊಟ್ಟಿಗೆ ಅಷ್ಟು ಆಪ್ತ ಬರಹ.ಸಂಯುಕ್ತ…ಸಿಂಧು ಜೊತೆ ನಾನೂ ಒಬ್ಬಳಿದ್ದೇನೆ.ದಿನಕ್ಕೊಮ್ಮೆಯಾದರೂ ರೆಕ್ಕೆ ತವಕಿಸುತ್ತದೆ.ಬೇಲಿ ಹಾರಲು.

    ಪ್ರತಿಕ್ರಿಯೆ
  16. lakshmishankarjoshi.

    ಸಂಧ್ಯಾರಾಣಿ,ನಿಮ್ಮ ನಿಷ್ಕಳಂಕ ನಗುವಿನಂತೆ ನಿಮ್ಮ ಬರಹ!ಓಹ್..ಎಷ್ಟು ಆಪ್ತತೆ.ಗೆಳತಿಯರ ಕೂಟ.ಆಟ.ನೋಟ.ತುಂಟಾಟ.ನಾವೇ ನಾವಾದ ಕ್ಷಣಗಳು.ಅವತ್ತು ನನ್ನೊಳಗೆ ನೀನಿಹೆಯೋ,ನಿನ್ನೊಳಗೆ ನಾನೋ ಎನ್ನೊ ಹಾಗಿತ್ತು ನನ್ನ ಸ್ಥಿತಿ.ಪ್ರಶಸ್ತಿ ನನಗೆ ಬಂದ ಹಾಗಿತ್ತು.ನಿಮಗೆ,ನಿಮ್ಮ ಬರಹಕ್ಕೆ ಫಿದಾ!

    ಪ್ರತಿಕ್ರಿಯೆ
  17. vishwanath Hebballi

    kattitta muttugala maaleyannu omme beesagi bidisittu, muttugalu urulida haage kanasugala, bhavanegala haribittu huchebbisi matte neetaagi kattitta aa nimma pravasada anubhoothi. ……vaah kya baat hai.
    aa kaanada thuditha nimmanna sedam nedege seledaddakke haagu Amma prashasthi yavarigoo !……HATSUP
    Hridayapoorvaka dhanyavadagalu.
    Vishwajyoti

    ಪ್ರತಿಕ್ರಿಯೆ
  18. ಶಮ, ನಂದಿಬೆಟ್ಟ

    ’ಅಲ್ಲಿನ ವಿಶಾಲತೆಯಲ್ಲಿ ನನ್ನ ಕಣ್ಣೀರಿಗೆ ಯಾವಾಗಲೂ ಜಾಗ ಸಿಗ್ತಾ ಇತ್ತು’
    ಸುಖದ ನೆಲೆಗಳನ್ನು ಹುಡುಕದ ಮನಸ್ಸು ಕಣ್ಣೀರಿನ ಈ ತಾವನ್ನು ಕನಸುತ್ತಿತ್ತು. ಇರಬಹುದೇ ಅಂತಹ ಒಂದು ಜಾಗ, ದುಗುಡಗಳೆಲ್ಲಾ ಕರಗಿ, ಕಣ್ಣೀರಾಗಬಲ್ಲ ನೆರಳು?
    ವಾಹ್.. ನಾನು ಶರಣು ಶರಣು ನಿನಗೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: