ಸಂಧ್ಯಾರಾಣಿ ಕಾಲಂ : 'ಕೊಟ್ಟುದೆಷ್ಟೋ, ಪಡೆದುದೆಷ್ಟೋ ನಮ್ಮ ನಂಟೇ ಹೇಳಲಿ'


ಕೆಲವು ದಿನಗಳ ಹಿಂದೆ ಒಂದು ಪುಸ್ತಕ ಓದುತ್ತಿದ್ದೆ. ಅದರಲ್ಲಿನ ಒಂದು ಸಾಲು, “Value is not what something is ‘Worth’, that’s fairy-tale. Value is what someone is willing to pay. Or ‘be paid’. ತಮಾಷೆ ಅಂದರೆ ಇಡೀ ಪುಸ್ತಕದಲ್ಲಿ ಹೆಸರನ್ನೂ ಸೇರಿಸಿ ನನಗೆ ನೆನಪಿನಲ್ಲಿ ಉಳಿದದ್ದು ಇದೊಂದೇ ಸಾಲು. ಓದಿ, ಓದಿದ ನಂತರ ಮರೆತುಬಿಡಬಹುದಾದ ಒಂದು ಪುಸ್ತಕ ಅದು. ಆದರೆ ಓದಲು ಶುರು ಮಾಡಿದಾಗಲೇ ಎದುರಾದ ಈ ವಾಕ್ಯವನ್ನು ಮಾತ್ರ ನನ್ನಿಂದ ಮರೆಯಲಾಗಲಿಲ್ಲ. ’ಮೌಲ್ಯ ನಿರ್ಧಾರವಾಗುವುದು ಅದರ ಅಂತರ್ಗತ ಗುಣದಿಂದ ಅಲ್ಲ, ಹಾಗಾಗುವುದು ಕೇವಲ ಕಥೆಗಳಲ್ಲಿ ಮಾತ್ರ. ಮೌಲ್ಯ ನಿರ್ಧಾರವಾಗುವುದು ಅದಕ್ಕೆ ಕೊಳ್ಳುವವರು ಕಟ್ಟುವ ಬೆಲೆಯಿಂದ..’. ಎಷ್ಟು ನಿಜ.. ಯಾಕೋ ಓದಿದಂತೆಲ್ಲಾ ಈ ವಾಕ್ಯ ನನ್ನನ್ನು ಕೊರೆಯುತ್ತಾ ಹೋಯಿತು. ಅದೇ ವಾಕ್ಯವನ್ನು ಫೇಸ್ಬುಕ್ಕಿನಲ್ಲಿ ಹಾಕಿ ನಾನು ಪುಸ್ತಕದ ಓದು ಮುಂದುವರಿಸಿದೆ.
ಆದರೆ ಆಮೇಲೆ ಆ ವಾಕ್ಯ ಬೇರೆಯದೇ ಆಯಾಮ ಪಡೆದುಕೊಳ್ಳುತ್ತಾ ಹೋಯಿತು. ಬಿ ಸುರೇಶ್ ಅದನ್ನು ಓದಿ ’ಮೌಲ್ಯವನ್ನು ಬೆಲೆಗೆ ಸಂವಾದಿಯಾಗಿಸಿದಾಗ “ಮೌಲ್ಯ” ಎಂಬುದರ ಮೌಲ್ಯವೇ ಕುಸಿಯುತ್ತದೆ. ನನಗೆ ಒಂದು ಬರಹ ಇಷ್ಟ ಎಂದಾಗ ನಾನದನ್ನು ಹಣದ ರೂಪದಲ್ಲಿ ಮೌಲ್ಯ ಮಾಡುವುದು ಸೃಜನಶೀಲ ಚಟುವಟಿಕೆಗೆ ಮಾಡುವ ಅವಮಾನವಾಗುತ್ತದೆ.’ ಎಂದು ಪ್ರತಿಕ್ರಯಿಸಿದರು. ಆದರೆ ಅಲ್ಲಿಯವರೆಗೆ ನಾನು ಅದನ್ನು ಹಣಕಾಸಿನ ನೆಲಗಟ್ಟಿನಲ್ಲಿ ನೋಡೇ ಇರಲಿಲ್ಲ. ನಾನು ಅದನ್ನು ಅರ್ಥೈಸಿಕೊಂಡದ್ದು ಭಾವನಾತ್ಮಕ ನೆಲೆಯಲ್ಲಿ ಮಾತ್ರ.
ಹೌದು, ಸಂಪೂರ್ಣ ಭಾವನಾತ್ಮಕ ನೆಲೆಯಲ್ಲಿ. ಒಂದು ವ್ಯಕ್ತಿಯ ಕುರಿತು ನನಗೆ ಇನ್ನಿಲ್ಲದ ಪ್ರೀತಿ ಇರಬಹುದು, ಸ್ನೇಹ ಭಾವ ಇರಬಹುದು, ಆದರೆ ನನ್ನ ಸ್ನೇಹದ, ಪ್ರೇಮದ ಮೌಲ್ಯ ಗಣನೆಗೆ ಬರುವುದು ನನ್ನ ಭಾವದ ಮೇಲಲ್ಲ ಆ ಎದುರಿನ ವ್ಯಕ್ತಿ ನನ್ನ ಭಾವಕ್ಕೆ ಕೊಡುವ ಬೆಲೆಯ ಮೇಲೆ. ಅಂದರೆ ’ನಾನು ಏನು’ ಅನ್ನುವುದಕ್ಕಿಂದ ’ಇನ್ನೊಬ್ಬರ ಕಣ್ಣಿನಲ್ಲಿ ನಾನು ಏನು’ ಅನ್ನುವುದು ಮುಖ್ಯ, ಓದಿದ ತಕ್ಷಣ ’ಅರೆ, This is not fair’ ಅನ್ನಿಸಿತು. ಸುಮ್ಮನೆ ಯೋಚಿಸಿ, ಕಂದನ ಬಗ್ಗೆ ಅಮ್ಮನ ಪ್ರೀತಿ, ಗೆಳತಿಯ ಕಣ್ಣಿನ ಕಾಡಿಗೆಯನ್ನೂ ಮೋಹಿಸುವ ಹುಡುಗನ ಪ್ರೀತಿ, ಅವನ ಒಂದು ಕರೆಗಾಗಿ, ಅವನ ಕಣ್ಣಲ್ಲಿನ ಒಂದು ನಗೆಗಾಗಿ ತಪಿಸುವ ಅವಳ ಪ್ರೇಮ, ಪ್ರತಿ ದಿನ ಇನ್ನೊಂದೆರಡು ಗಂಟೆ ಕಷ್ಟ ಪಟ್ಟು ದುಡಿದು ಬಿಟ್ಟರೆ ಪಾಪ ಮಗ ಕೇಳಿದ ಬೈಕ್ ಕೊಡಿಸಿಬಿಡಬಹುದಲ್ಲವೇ ಎಂದು ಸಿದ್ಧವಾಗಿ ಬಿಡುವ ಅಪ್ಪನ ವಾತ್ಸಲ್ಯ, ಒಂದಿಷ್ಟು ಬೇಗ ಎದ್ದರೆ ಊಟದ ಡಬ್ಬಿಗೆ ವಿಶೇಷ ಏನಾದರೂ ಮಾಡಿಕೊಡಬಹುದು ಎಂದು ಅಲಾರಾಂಗಿಂತ ಮೊದಲೇ ಏಳುವ ಹೆಣ್ಣಿನ ಕಕ್ಕುಲಾತಿ – ಈ ಎಲ್ಲಾ ಪ್ರೀತಿಗಳಿಗೂ ಮೌಲ್ಯ ನಿರ್ಧಾರವಾಗುವುದು ಪ್ರೀತಿ ಪಡೆಯುವವರು ಅದಕ್ಕೆ ಕಟ್ಟುವ ಬೆಲೆಯ ಮೇಲೆ ಎಂದರೆ ಅನ್ಯಾಯ ಅನ್ನಿಸಿಬಿಡುತ್ತದೆ ಅಲ್ಲವೆ?
ಆ ಕವಿತೆಯ ಸಾಲುಗಳು ನೆನಪಾದವು.
ನನ್ನ ಬೆನ್ನಿನ ಮೇಲೆ ನೀನು
ವಸಂತದ ಚಿತ್ರ ಬಿಡಿಸಿದ್ದಕ್ಕೆ,
ನಿನ್ನ ಅಂಗಾಲ ದಿಣ್ಣೆಯಲಿ ನಾನು
ಒತ್ತಡದ ನರ ಹುಡುಕಿ,
ಒತ್ತಿ, ನೀವಿ, ಒತ್ತಡ ಕಳಚಿದ್ದಕ್ಕೆ,
ನಿನ್ನ ಕಣ್ಣುಗಳಲ್ಲಿ ಹೆಪ್ಪುಗಟ್ಟಿದ ಮೋಡ
ನನ್ನ ಕಣ್ಣಲ್ಲಿ ಹನಿಯಾಗಿ
ನಿನ್ನೆದೆಯ ಕಡಲು ತುಳುಕಿದ್ದಕ್ಕೆ..
’ಇವು ಯಾವುದಕ್ಕೂ ಚೌಕಟ್ಟೇ ಇಲ್ಲ,
ಹಾಗಾಗಿ ಇವಕ್ಕೆ ಪಟವಾಗುವ ಅರ್ಹತೆ ಇಲ್ಲ’
ಎಂದು ನೀ ಅಂದ ಮೇಲೆ
ಅವ್ಯಾವುದೂ ’ಇಲ್ಲ’ ಎನ್ನುವುದೇ ಸತ್ಯ
ಎಂದು ನನಗೂ ಅನ್ನಿಸುತ್ತಿದೆ ಈಗೀಗ.

ಹೌದೇ? ಅಷ್ಟು ಸರಳವೇ ಸತ್ಯ ಮತ್ತು ಸುಳ್ಳುಗಳನ್ನು ವಿಭಾಗಿಸುವುದು? ಇಲ್ಲಿ ಪ್ರೀತಿಯ ಸತ್ಯ ನಿರ್ಧಾರವಾಗುವುದು ಅವಳ ಒಪ್ಪಿಗೆಯಲ್ಲಾ ಅಥವಾ ಅವನ ನಿರಾಕರಣೆಯಲ್ಲಾ? ಅಕಸ್ಮಾತ್ ಅವನ ಕಣ್ಣಲ್ಲಿ ಆ ಪ್ರೀತಿಗೆ ಬೆಲೆ ಇಲ್ಲ ಎಂದಾದರೇ ಇವಳ ಪ್ರೀತಿಗೆ ಮೌಲ್ಯವೇ ಇಲ್ಲ ಎನ್ನುವುದು ಯಾವ ನ್ಯಾಯ? Yes it IS not fair.
ಯಾವುದೋ ಒಂದು ಹಳೇ ತೆಲುಗು ಚಿತ್ರ ನೆನಪಾಯಿತು. ಅದರಲ್ಲಿ ಒಂದು ಇಡೀ ಕುಟುಂಬ ಮನೆ ಮಗನ ಓದಿಗಾಗಿ ಕಷ್ಟ ಪಟ್ಟಿರುತ್ತದೆ, ತಮ್ಮೆಲ್ಲಾ ಖರ್ಚುಗಳನ್ನೂ ಮಿತಿಗೊಳಿಸಿಕೊಂಡೂ, ತಮ್ಮೆಲ್ಲಾ ದುಡಿಮೆಯನ್ನೂ ಒಟ್ಟು ಗೂಡಿಸಿ ಅವನ ವಿದ್ಯಾಭ್ಯಾಸಕ್ಕೆ ಕೈ ಜೋಡಿಸಿರುತ್ತದೆ. ಓದಿದ ಮೇಲೆ ಸಾಧಾರಣವಾಗಿ ಸಿನಿಮಾಗಳಲ್ಲಿ ನಡೆಯುವ ಹಾಗೆ ಅವನಿಗೆ ಶ್ರೀಮಂತ ಮನೆಯ ಹೆಣ್ಣೊಬ್ಬಳು ಜೊತೆಯಾಗಿ, ಸಾಧಾರಣವಾಗಿ ಸಿನಿಮಾಗಳಲ್ಲಿ ನಡೆಯುವ ಹಾಗೆ ಅವನು ಮನೆಯವರನ್ನು ನಿರ್ಲಕ್ಷಿಸಿ ಅವಳ ಮನೆ ಸೇರಿಕೊಳ್ಳುತ್ತಾನೆ. ಆದರೆ ಆ ನಂತರದ ಕಥೆ ಕೇಳಿ, ಮಗನ ಅಪ್ಪ ಮಗನ ಮೇಲೆ ಒಂದು ಕೇಸು ಹಾಕುತ್ತಾನೆ, ಕೇಸು ನಡೆಯುತ್ತದೆ, ನ್ಯಾಯಾಧೀಶ ಮಗ ಅವನ ಮನೆಯವರು ಅವನ ಮೇಲೆ ಮಾಡಿದ ಎಲ್ಲಾ ಖರ್ಚನ್ನೂ ಬಡ್ಡಿ ಸಮೇತ ವಾಪಸ್ಸು ಮಾಡಬೇಕು ಎಂದು ತೀರ್ಪು ಕೊಡುತ್ತಾನೆ. ಇದು ನ್ಯಾಯ ಅನ್ನಿಸುತ್ತೆ ಅಲ್ಲವೇ? ಆದರೆ ಬದುಕೇ ಹೇಳು, ಅಂತಹ ನ್ಯಾಯಾಧೀಶನನ್ನು ನಮ್ಮ ಬದುಕಿನ ನ್ಯಾಯ ಕೇಳಲು ಎಲ್ಲಿ ತರೋಣ? ತಂದರೂ ಆ ತೀರ್ಪು ವಾಪಸ್ಸು ಕೊಡಿಸುವುದು ಹಣವನ್ನು ಮಾತ್ರ, ಅವರೆಲ್ಲರೂ ಒಟ್ಟುಗೂಡಿ ಕೊಟ್ಟ ಪ್ರೀತಿಯ ಲೆಕ್ಕ ಹೇಗೆ ತೀರುವುದು? ಹೇಗೆ ಒಪ್ಪಿಸುವುದು ಯಾರನ್ನಾದರೂ ನನ್ನ ಪ್ರೀತಿ, ಪ್ರೇಮ, ಕಳೆದುಕೊಂಡ ನಿದ್ದೆ, ಬಿಟ್ಟ ನಿಟ್ಟುಸಿರು, ಜಾರಿಸಿದ ಕಂಬನಿ, ಕಳೆದುಕೊಂಡ ನಂಬಿಕೆ ಎಲ್ಲವನ್ನೂ ಹಿಂದಿರುಗಿಸಲು??
ಆಕೆ ನನಗೆ ಪರಿಚಿತಳು. ಆಕೆಯಷ್ಟೇ ಅಲ್ಲ, ಆಕೆಯ ಮನೆಯವರೆಲ್ಲಾ ಪರಿಚಿತರು. ಅವಳಿಗೊಬ್ಬನೇ ಮಗ. ಆಕೆ ಮಗನನ್ನು ಸಾಕಿದ್ದು ಥೇಟ್ ರಾಜಕುಮಾರನನ್ನು ಬೆಳಸಿದ ಹಾಗೆ. ಯಾವುದು ಅತ್ಯುತ್ತಮವೋ ಅದೇ ಆಗಬೇಕು ಮಗನಿಗೆ. ಮಗ ಬಯಸಿದ್ದು ಏನೇ ಆಗಲಿ ಅವನಿಗೆ ಸಿಕ್ಕೀತೆಂದೇ ಲೆಕ್ಕ. ಕಲರ್ ಪೆನ್ಸಿಲ್ಲು, ಹೊಸಾ ಬ್ಯಾಗು, ಸೈಕಲ್ಲು, ಬೈಕು … ಓಹೋ ಎಲ್ಲಾ ಸಿಗುತ್ತಲೇ ಹೋಯಿತು. ಬೆಳೆದ ಮಗ ಅಮ್ಮನನ್ನು ಕೇಳದೆ ಒಬ್ಬ ಹುಡುಗಿಯನ್ನು ಪ್ರೀತಿಸಿದ, ಅವಳನ್ನೇ ಮದುವೆಯಾಗುವುದಾಗಿ ನಿರ್ಧರಿಸಿದ. ಅದನ್ನು ಅವನು ಹೇಳಿದ ಮರುಕ್ಷಣ ಅಮ್ಮ ಕೆರಳಿ ನಿಂತಳು. ಮಾತು ಬಿಟ್ಟಳು, ಊಟ ಬಿಟ್ಟಳು. ಸಮಾಧಾನ, ಸಂಧಾನ ಮಾಡಲು ಬಂದ ನೆಂಟರಿಷ್ಟರ ಎದುರು ನಿಂತು ಮಗನನ್ನು ಕೇಳೇಬಿಟ್ಟಳು, ’ನೀನು ಹುಟ್ಟಿದಾಗಿಂದ ಇಷ್ಟೆತ್ತರ ಬೆಳೆಸಲು ಎಷ್ಟು ಕಷ್ಟ ಪಟ್ಟಿದ್ದೀನಿ, ಎಷ್ಟು ಖರ್ಚು ಮಾಡಿದ್ದೀನಿ ಗೊತ್ತಾ?’. ಒಂದೇ ಕ್ಷಣ, ಒಂದೇ ಮಾತು ಅವಳೆಲ್ಲಾ ಪ್ರೀತಿ ಹಣವಾಗಿ ಬದಲಾಗಿ ಹೋಗಿತ್ತು. ಅಮ್ಮನನ್ನು ಕಂಡರೆ ಮಗನಿಗೆ ಇರಬೇಕಾದ ಪ್ರೀತಿಯನ್ನು ಆಕೆ ಖರ್ಚು ಮಾಡಿದ ಹಣದಿಂದ ಅಳೆದುಬಿಟ್ಟಿದ್ದಳು.
ಆದರೆ ಮೌಲ್ಯ ಹಣವೇ ಆಗಬೇಕಿಲ್ಲ ಅಲ್ಲವಾ? ಹಣ ಕೊಟ್ಟು ಎಲ್ಲಾ ಲೆಕ್ಕಾಚಾರಗಳನ್ನೂ ಚುಕ್ತಾ ಮಾಡಲು ಆಗುವುದಿಲ್ಲವಲ್ಲಾ? ಪ್ರೀತಿ, ಸ್ನೇಹ, ನಂಬಿಕೆ, ಪ್ರೇಮ ಅವೆಲ್ಲಾ ಹಾಗೆ ಸಿಗುತ್ತದಾ? ಮರಳಿ ಸಿಕ್ಕಿಬಿಡುತ್ತದಾ? ಕೊಟ್ಟಷ್ಟು? ಕೊಡಬಲ್ಲಷ್ಟೂ?? ಬದುಕಿನ ತಕ್ಕಡಿ ಹಿಡಿದ ಆ ಕೈಯಿ, ಇನ್ನೊಂದು ಬಟ್ಟಲಲ್ಲಿ ಏನು ತುಂಬುತ್ತದೆಯೋ ಬಲ್ಲವರು ಯಾರು?
ಇರಲಿ, ಬರೀ ಭಾವನೆಗಳ ನೆಲಗಟ್ಟಿನ ಮೇಲೆ ಯೋಚಿಸುತ್ತಿದ್ದವಳನ್ನು ಬಿ ಸುರೇಶ್ ಅವರ ’ ಮೌಲ್ಯವನ್ನು ಬೆಲೆಗೆ ಸಂವಾದಿಯಾಗಿಸಿದಾಗ “ಮೌಲ್ಯ” ಎಂಬುದರ ಮೌಲ್ಯವೇ ಕುಸಿಯುತ್ತದೆ. ನನಗೆ ಒಂದು ಬರಹ ಇಷ್ಟ ಎಂದಾಗ ನಾನದನ್ನು ಹಣದ ರೂಪದಲ್ಲಿ ಮೌಲ್ಯ ಮಾಡುವುದು ಸೃಜನಶೀಲ ಚಟುವಟಿಕೆಗೆ ಮಾಡುವ ಅವಮಾನವಾಗುತ್ತದೆ.’ ಎನ್ನುವ ಪ್ರತಿಕ್ರಿಯೆ ಬೇರೆ ದಿಕ್ಕಿನಿಂದ ಯೋಚಿಸಲು ಪ್ರೇರೇಪಿಸಿತು. ನಿಜ ಹಣವನ್ನು ಮೌಲ್ಯದ ಅಳತೆಗೋಲಾಗಿ ಬಳಸುವುದು ಸರಿ ಅಲ್ಲ. ಆದರೆ ಹಣ ಇಂದು ಎಷ್ಟೆಲ್ಲಾ ನೇರ ಮತ್ತು ಬಳಸು ದಾರಿಗಳಲ್ಲಿ ನಮ್ಮನ್ನು ಆಳುತ್ತಿದೆ, ನಡೆಸುತ್ತಿದೆ ಎಂದರೆ, ಹಣವನ್ನು ಸಂವಾದಿಯಾಗಿ ಬಳಸದೇ, ನೋಡದೇ ಇರುವುದೇ ಕಷ್ಟ.
ಅಷ್ಟರಲ್ಲಿ ಜಿ ಎನ್ ನಾಗರಾಜ್ ಅವರು ’ಸೃಜನಶೀಲತೆಯೇ ಮಾನದಂಡವಾಗಿರಬೇಕಾದ ಕಲೆಯ ಪ್ರಪಂಚದಲ್ಲಿ ಸಹ ಮೌಲ್ಯ ನಿರ್ಧಾರವಾಗುವುದು ರೊಕ್ಕದ ಮೂಲಕವೇ, ಅದು ಕೊಡುವ ಪ್ರಚಾರದ ಮೂಲಕವೇ, ಕಡೆಗೆ ಪ್ರಚಾರವೇ ಮಾರಾಟಕ್ಕೆ ಮುಖ್ಯ ಆಧಾರ ಅಲ್ಲವೇ’ ಎನ್ನುವ ಪ್ರಶ್ನೆಯನ್ನು ಎತ್ತಿದರು. ’ ಪ್ರತಿಯೊಬ್ಬರಿಗೂ ಅವರು ಪಡೆಯುವ ಬೆಲೆಯಷ್ಟೇ ಮೌಲ್ಯ ಎಂಬಲ್ಲಿಗೆ ಸಮಾಜದ ದುಸ್ಥಿತಿ ತಲುಪಿದೆ.’ ಎಂದು ಅವರು ಹೇಳಿದಾಗ ಮತ್ತೆ ಅನ್ನಿಸಿದ್ದು ಅದೇ ಮಾತು, ’It is not fair’.
ಮೌಲ್ಯ ನಿರ್ಧರಿಸುವ ವಿಷಯಕ್ಕೆ ಬಂದರೆ, ಹಣ ಬಳಸಿದರೂ, ಭಾವನೆಗಳನ್ನು ಮುಂದೆ ಬಿಟ್ಟರೂ ಇದು ಮಾರುವವನ ಮಾರುಕಟ್ಟೆ ಅಲ್ಲ, ಕೊಳ್ಳುವವನ ಮಾರುಕಟ್ಟೆ, ಸಂಪಾದನೆಗೂ ಮತ್ತು ಸಂವೇದನೆಗೂ. ಇಲ್ಲಿ ಬಯಸಿದಂತೆ ಬೆಳೆಯೂ ಇಲ್ಲ, ಬೆಲೆಯೂ ಇಲ್ಲ.
“ಕೊಡಲು ಕೊಳಲು ಒಲವು ಬಿಟ್ಟು
ಬೇರೆ ಉಂಟೆ ಬಾಳಲಿ,
ಕೊಟ್ಟುದೆಷ್ಟೋ ಪಡೆದುದೆಷ್ಟೋ
ನಮ್ಮ ನಂಟೇ ಹೇಳಲಿ..”
ಎನ್ನುವ ಸಾಲನ್ನು ಹೇಳಬಲ್ಲೆವೇ ನಾವು?
 

‍ಲೇಖಕರು G

October 31, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

14 ಪ್ರತಿಕ್ರಿಯೆಗಳು

  1. Swarna

    “ಕೊಟ್ಟುದೆಷ್ಟೋ ಪಡೆದುದೆಷ್ಟೋ ನಮ್ಮ ನಂಟೇ ಹೇಳಲಿ”
    ನಂಟಿನ ಭಾಷೆ ಬಲ್ಲವರು ಕೇಳುತ್ತಾರೆ .
    ಮೌಲ್ಯ ಅಪಮೌಲ್ಯಗಳಾಚೆಯೂ ಬೆಳೆಯುವ ಬಂಧಗಳ ಸಂಖ್ಯೆ ಬೆಳೆಯಲಿ
    ಕಲೆಯ ವಿಚಾರಕ್ಕೆ ಬಂದರೆ ಕಾಲ, ಸಾಮಾಜಿಕ ಸ್ಥಿತಿ ಗತಿ , ಪ್ರೇಕ್ಷಕನ ಸಾಮರ್ಥ್ಯ ಇನ್ನೂ ಎಷ್ಟೋ parameter ಗಳು
    ಅದರ ಮೌಲ್ಯ ನಿರ್ಧರಿಸುತ್ತವೇನೋ ?
    ಚೆನ್ನಾಗಿದೆ

    ಪ್ರತಿಕ್ರಿಯೆ
  2. vidyashankar

    The cynic knows price of everything but value of nothing.
    “For money you can have everything it is said. No, that is not true. You can buy food, but not appetite; medicine, but not health; soft beds, but not sleep; knowledge but not intelligence; glitter, but not comfort; fun, but not pleasure; acquaintances, but not friendship; servants, but not faithfulness; grey hair, but not honor; quiet days, but not peace. The shell of all things you can get for money. But not the kernel. That cannot be had for money.”
    ― Arne Garborg

    ಪ್ರತಿಕ್ರಿಯೆ
  3. Swarna

    ನೀ ನೀಡಿದಷ್ಟು
    ನನ್ನ ಬೊಗಸೆ ತುಂಬಿದಷ್ಟು
    ನನ್ನ ಮೌಲ್ಯ ಎಂದುಕೊಂಡಿದ್ದೆ
    ಈಗರಿವಾಗಿದೆ ಬೊಗಸೆಯಲ್ಲಿ
    ಆಗಸವನ್ನೂ ತುಂಬಬಹುದು

    ಪ್ರತಿಕ್ರಿಯೆ
  4. shobhavenkatesh

    moulya, bele, srujanasheela chatuvatike,ee moorara bele ee lekhanadalli chenagi muudi bandide.chennagi moodibandide sandhya

    ಪ್ರತಿಕ್ರಿಯೆ
  5. ಡಾ.ಶಿವಾನಂದ ಕುಬಸದ

    ಮೌಲ್ಯಯುತ ಬರೆಹ…!!

    ಪ್ರತಿಕ್ರಿಯೆ
  6. nishagopinath.v

    ಹಣದಿಂದ ಪ್ರೀತಿ, ಭಾವನೆಗಳನ್ನು ಅಳಿಯಬಾರದು. ಇತ್ತಿಚಿಗೆ ಹಣಕಿರುವ ಬೆಲೆ ಯಾವುದೇ ಪ್ರೀತಿ-ಸ್ನೇಹಕ್ಕೆ ಇಲ್ಲ. ಎಲ್ಲಾಭಾವನೆಗಳನ್ನು ಹಣದಿಂದ ಕೊಂಡು ಮಾರುತ್ತಾರೆ.

    ಪ್ರತಿಕ್ರಿಯೆ
  7. Naveen

    ಮೌಲ್ಯದ ವ್ಯಾಕ್ಯಾನ ಹುಡುಕುವಲ್ಲಿ ಲೇಖನ ವಿಫಲವಾಗಿದ್ದರೂ, ಭಾವನಾತ್ಮಕ ನೆಲೆಗಟ್ಟಿನಲ್ಲಿ ಬಹಳ ಗಟ್ಟಿಯಾದ ಹಿಡಿತ ಹೊಂದಿದೆ, ಭಾವನಾತ್ಮಕ ನೆಲೆಗಟ್ಟಿಗೂ, ಮತ್ತು ವಾಸ್ತವದ ಮಾರುಕಟ್ಟೆಗೂ ಎಷ್ಟೊಂದು ವ್ಯತ್ಯಾಸ ಇದೆ ಅಲ್ಲವ ಅನ್ನಿಸಿತು,,,,,,, ಒಳ್ಳೆಯ ಬರಹ ಸಂಧ್ಯಕ್ಕ
    -ಜೀ ಕೇ ನ

    ಪ್ರತಿಕ್ರಿಯೆ
  8. Anil Talikoti

    ಮೋಹಕ ಬರಹ ಎಂದಿನಂತೆ. ಮೌಲ್ಯವನ್ನು ಭಾವನಾತ್ಮಕ ಹಾಗೂ ಹಣಕಾಸು ಇವೆರಡೂ ನಿಟ್ಟಿನಿಂದ ನೋಡಿ ಮಾಪನ ಮಾಡುವದು ಸಾಧ್ಯವೇ ಇಲ್ಲವೇನೋ? ಅವೆರಡೂ ಸಧ್ಯದ ಕಾಲಮಾನದಲ್ಲಿ ಒಂದನ್ನೊಂದು ವಿರೋಧಿಸುವಂತೆ ಕಾಣುತ್ತವೆ -ಯಾರಾದರೂ ಪ್ರಿಯತಮೆಗೆ ‘ನಮ್ದುಕೆ ಲಾಟರಿ ಹೊಡದ್ಬುಟ್ಟೈತೆ ಅಂತ ಕೂಗಿ ಹೇಳಿದರೆ ಅವೆರಡೂ ಒಮ್ಮೆಲೆ ಅರಳಬಹುದೇನೋ. ಹಣದಿಂದ ಸುಖ-ಶಾಂತಿಯಲ್ಲಿ ಮೊದಲ ಅರ್ಧದಷ್ಟಾದರೂ ಸಿಗುವ ಸಾಧ್ಯತೆ ಇದೆ -ಹಣವಿಲ್ಲದಿದ್ದರೆ ಎರಡೂ ಲೇದು.
    ~ಅನಿಲ

    ಪ್ರತಿಕ್ರಿಯೆ
  9. kusumabaale

    ಬದುಕಿನ ತಕ್ಕಡಿಯಲ್ಲಿಟ್ಟು ಹಿಡಿದ ಕೈ ಇನ್ನೊಂದು ಬಟ್ಟಲಲಿ ಏನು ತುಂಬುತ್ತದೋ.?.ಆ ಕುತೂಹಲವೇ ಏನೆಲ್ಲ ಮಾಡಿಸುತ್ತದೆ ನಮ್ಮಿಂದ.

    ಪ್ರತಿಕ್ರಿಯೆ
  10. Raghav

    ’ನೀನು ಹುಟ್ಟಿದಾಗಿಂದ ಇಷ್ಟೆತ್ತರ ಬೆಳೆಸಲು ಎಷ್ಟು ಕಷ್ಟ ಪಟ್ಟಿದ್ದೀನಿ, ಎಷ್ಟು ಖರ್ಚು ಮಾಡಿದ್ದೀನಿ ಗೊತ್ತಾ?’. ಒಂದೇ ಕ್ಷಣ, ಒಂದೇ ಮಾತು ಅವಳೆಲ್ಲಾ ಪ್ರೀತಿ ಹಣವಾಗಿ ಬದಲಾಗಿ ಹೋಗಿತ್ತು. ಅಮ್ಮನನ್ನು ಕಂಡರೆ ಮಗನಿಗೆ ಇರಬೇಕಾದ ಪ್ರೀತಿಯನ್ನು ಆಕೆ ಖರ್ಚು ಮಾಡಿದ ಹಣದಿಂದ ಅಳೆದುಬಿಟ್ಟಿದ್ದಳು….. ಕಳೆದು ಬಿಟ್ಟಿದ್ದಳು ಕೂಡಾ….. “ಇದು ಮನುಶ್ಯರೆಲ್ಲರಿಗೂ ಒಳ್ಳೆಯ ಎಚ್ಛರಿಕೆ….”

    ಪ್ರತಿಕ್ರಿಯೆ
  11. ಲಕ್ಷ್ಮೀಕಾಂತ ಇಟ್ನಾಳ

    ಸಂಧ್ಯಾಜಿ, ಮೌಲ್ಯಗಳಿಗೆ ಹಣದ ಬಟ್ಟೆ ತೊಡಗಿಸಿ ತೂಗುವುದು ನಿರ್ಭಾವುಕತೆಯ ಮತ್ತೊಂದು ಲೋಕ, ಅದು ಹೃದಯಸಂಬಂಧವಲ್ಲದ ಭಾಷೆ. ಆದರೆ ಅಲೌಕಿಕ ಆನಂದ ಪಡೆವ ಆ ಪ್ರೀತಿ ಪ್ರೇಮ ವಿಶ್ವಾಸ, ವಾತ್ಸಲ್ಯಗಳಿಗೆ ಬೆಲೆ ಕಟ್ಟಲಾದೀತೆ, ಮನಷ್ಯರನ್ನು ಬೆಸೆಯುವ, ಮನಸುಗಳನ್ನು ಹಿಡಿದಿಟ್ಟು ಬೆಸೆವ ಅದಕ್ಕೆ ಬೆಲೆ ಕಟ್ಟಿದ ದಿನ ಮಾನವತೆಯ ಆಧೋಗತಿಯ ಆರಂಭವೆಂದೇ ಅರ್ಥೈಸಬೇಕಾಗುತ್ತದಲ್ವೆ. ಮತ್ತೊಮ್ಮೆ ನಮ್ಮನ್ನು ಅಳೆದುಕೊಳ್ಲುವ, ಪ್ರಾಂಜಲತೆಯ ಅಂತರ್ಮುಖಿಯ ಆಪ್ತತೆಯಿಂದ ನೆಂದು ಬರೆದ ಬರಹ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: