ಸಂಧ್ಯಾರಾಣಿ ಕಾಲಂ : ಕಥಾ ಕಮ್ಮಟದಲ್ಲಿ ಸಿಕ್ಕ ಕಥೆಗಳು

ಕುಪ್ಪಳಿಯಿಂದ ಬಂದು ಇನ್ನೂ ವಾರ ಆಗಿಲ್ಲ, ಅಲ್ಲಿನ ಬೆಳಗು ಮರೆತಿಲ್ಲ, ಅದಕ್ಕಿಂತ ಹೆಚ್ಚಾಗಿ ಕವಿಶೈಲದ ಇರುಳು ಮರೆತಿಲ್ಲ, ಹುಣ್ಣಿಮೆ ಹೊದಿಸಿದ್ದ ಬೆಳದಿಂಗಳ ಬಿಸುಪು ಮರೆತಿಲ್ಲ, ನಿದ್ದೆಯೂ ಕೂತು ಕಣ್ರೆಪ್ಪೆ ಬಡಿಯದೆ ಕೇಳಿದ ಹಾಡು ಮರೆತಿಲ್ಲ. ಎದೆ ಬಡಿತದ ಲಯದ ಆ ತಮ್ಮಟೆಯ ಲಯ ಮರೆತಿಲ್ಲ. ಹೇಮಾಂಗಣದಲ್ಲಿ ಕೂತು ಮಾಡಿದ ಚರ್ಚೆ, ಮೆಟ್ಟಿಲುಗಳ ಮೇಲೆ ಕೂತು ಮಂಡಿಸಿದ, ಖಂಡಿಸಿದ, ಒಪ್ಪಿಕೊಂಡ, ತಾಳಿಕೊಂಡ ಮಾತುಗಳು, ಮುಸ್ಸಂಜೆಯಲಿ ನೋಡಿದ ಮಜೀದ್ ಮಜೀದಿ ಚಿತ್ರಗಳು, ಇನ್ನೂ ಹತ್ತಿರಾಗುತ್ತಿದ್ದ ಗೆಳತಿಯರು, ಗೊತ್ತೇ ಆಗದೆ ಸ್ನೇಹವಾಗುತ್ತಿದ್ದ ಪರಿಚಯಗಳು, ಉರಿ ಉರಿ ಅನ್ನುತ್ತಿದ್ದ ಕೆಂಪು ಹುಡುಗರ ಕಣ್ಣಿನಲ್ಲಿದ್ದ ಮಗುವಿನ ನಗು, ಅಡಿಗೆಯವರು ಪ್ರೀತಿಯಿಂದ ಬಡಿಸುತ್ತಿದ್ದ ಊಟ, ಅವರ ಮಾತೇ ಇಲ್ಲದ ನಗು, ರಾತ್ರಿ ಆಯಿತೆಂದರೆ ಕೇಳಿ ಬರುತ್ತಿದ್ದ ಕಳೆದ ರಾಗಗಳ ಗುಂಗು… ಉಹೂ ಯಾವುದನ್ನೂ ಮರೆತಿಲ್ಲ. ಹೋಗಿದ್ದು ಬೆಸಗರಹಳ್ಳಿ ರಾಮಣ್ಣ ಕಥಾ ಕಮ್ಮಟಕ್ಕೇನೆ. ಆದರೆ ಕಥಾ ಕಮ್ಮಟ ಅಂದರೆ ನನಗೆ ಇವೆಲ್ಲಾ ಮತ್ತು ಪದಗಳಿಗೆ ಸಿಗದ, ಭಾಸ ಮಾತ್ರ ಆಗುವ ಇನ್ನೂ ಏನೆಲ್ಲಾ. ಕುಪ್ಪಳಿ ಅಂದರೆ ನನಗೆ ಇದೆಲ್ಲಾ..
’ಕಥಾ ಕಮ್ಮಟದಲ್ಲಿ ಕಥೆ ಬರೆಯೋದು ಹೇಳಿ ಕೊಡ್ತಾರ?’ ಸ್ನೇಹಿತರೊಬ್ಬರು ಕೇಳಿದ್ದರು.’ಇಲ್ಲ, ಕಥೆ ಓದೋದು ಹೇಳಿಕೊಡ್ತಾರೆ’, ಮತ್ತೊಬ್ಬ ಸ್ನೇಹಿತರು ಉತ್ತರಿಸಿದ್ದರು. ’ಇಲ್ಲ, ಇದೊಂದು ಗಂಭೀರ ಪ್ರಶ್ನೆ, ಕಮ್ಮಟದಲ್ಲಿ ಕತ್ ಬರೆಯೋದನ್ನು ಕಲಿಸುತ್ತಾರಾ?’ ಆ ಸ್ನೇಹಿತರು ಮತ್ತೆ ಕೇಳಿದ್ದರು. ’ಅಂತಹ ಒಂದು ಮಾಂತ್ರಿಕ ಫಾರ್ಮುಲ ಇದ್ದಿದ್ದರೆ ಎಷ್ಟು ಚೆನ್ನಾಗಿರ್ತಾ ಇತ್ತು, ಆದರೆ ಹಾಗೆ ಯಾವ ಫಾರ್ಮುಲಾ ಆಗಲಿ, ಸಿದ್ಧ ಮಾದರಿಯಾಗಲಿ ಇರಬೇಕಲ್ಲ, ಓದಿದ ಮೇಲೆ ನಮ್ಮೊಳಗೆ ಕಥೆಯೂ, ಕಥೆಯೊಂದಿಗೆ ನಾವೂ ಬೆಳೆಯುತ್ತಾ ಹೋಗುತ್ತೇವೆ’ ಎಂದೇನೋ ನಾನು ಉತ್ತರಿಸಿದೆ. ಆದರೆ ಆಮೇಲೂ ನನ್ನಲ್ಲಿ ಆ ಉತ್ತರದ ಅನುರಣನ ನಡೆದೇ ಇತ್ತು.
ಇಲ್ಲ ಅಲ್ಲಿ ನಮಗೆ ಯಾರೂ ಕೂರಿಸಿಕೊಂಡು ಕಥೆಗಳನ್ನು ಹೇಗೆ ಬರೆಯಬೆಕು ಎನ್ನುವುದನ್ನಿರಲಿ, ಹೇಗೆ ಓದಬೇಕು ಎನ್ನುವುದರ ಬಗ್ಗೆಯೂ ಪಾಠ ಮಾಡಲಿಲ್ಲ. ಅಲ್ಲಿ ನಡೆದದ್ದು ಒಂದು ಮುಕ್ತ ಸಂವಾದ. ನಮಗೆ ೬ ಕಥೆಗಳನ್ನು ಓದಲು ಕೊಡಲಾಗಿತ್ತು. ಕುಟುಂಬ, ಕುಟುಂಬವನ್ನು ನಿಯಂತ್ರಿಸುವ, ನಿರ್ದೇಶಿಸುವ ಕುಟುಂಬದೊಳಗಣ ಮತ್ತು ಹೊರಗಣ ಶಕ್ತಿಗಳು, ಆ ಮೂಲಕ ಕುಟುಂಬದಲ್ಲಿನ ಸಂಘರ್ಷ ಇತ್ಯಾದಿ ನೆಲೆಗಳಲ್ಲಿ ಆ ಕಥೆಗಳ ಬಗ್ಗೆ ಚರ್ಚಿಸಬೇಕಿತ್ತು. ಸುಮಾರು ೭೦ ಮಂದಿ ಇದ್ದ ಗುಂಪು, ಬೇರೆ ಬೇರೆ ವಯಸ್ಸಿನ, ಬೇರೆ ಬೇರೆ ಹಿನ್ನಲೆಯ, ಬೇರೆ ಬೇರೆ ಸಾಂಸ್ಕೃತಿಕ ಜಗತ್ತಿನ, ಜೀವನ ಮೌಲ್ಯ್ಗಗಳನ್ನಿಟ್ಟುಗೊಂಡ ಗುಂಪು ಅದು. ಈ ಭಿನ್ನ ಗುಂಪು ಕಥೆಗಳನ್ನು ಹೇಗೆ ಅರ್ಥೈಸಿಕೊಳ್ಳಬಹುದು ಎನ್ನುವುದನ್ನು ನೋಡಲು ನಾನಂತೂ ಕಾಯುತ್ತಿದ್ದೆ. ಅವರ ಆಲೋಚನೆಗಳು ಭಿನ್ನವಾಗಿರುತ್ತವೆ ಎನ್ನುವುದರ ಬಗ್ಗೆ ನನಗೆ ಯಾವುದೇ ಅನುಮಾನ ಇರಲಿಲ್ಲ. ಆದರೆ ನಾನು ನಿರೀಕ್ಷಿಸದೆಯೇ ನನಗೆ ಅಲ್ಲಿ ದಕ್ಕಿದ್ದು ಕಥೆಗಳ ಬಗ್ಗೆ ವಿಭಿನ್ನ ದೃಷ್ಠಿಕೋನ ಮಾತ್ರ ಅಲ್ಲ, ಇಡೀ ಜೀವನದ ಬಗ್ಗೆ, ಜೀವನ ಶೈಲಿಯ ಬಗ್ಗೆಯೇ ಇರುವ ಬಹುತ್ವ. ಮತ್ತು ಆ ಎಲ್ಲಾ ಬಹುತ್ವಗಳಲ್ಲೂ ಇರುವ ಸತ್ಯ.
ಮೊದಲ ದಿನವೇ ಕೆ ವಿ ನಾರಾಯಣ್ ಅವರು ಕಥೆಗಳ ಸಾರ್ವಕಾಲೀಕತೆಯ ಮುಖ್ಯ ಗುಣ ಅದು ಒಂದು ವಿಚಾರವಾಗೇ ನಿಲ್ಲದೆ ಒಂದು ಪ್ರಕ್ರಿಯೆಯಾಗಿರುವುದರಲ್ಲಿದೆ ಎಂದು ಹೇಳಿದ್ದರು. ನಿಜ ಕಥೆಗಾರ ಕಥೆ ಬರೆಯುವಾಗ ಅದು ಒಂದು ವಿಚಾರ ಮಾತ್ರವಾಗಿದ್ದರೂ ಪ್ರತಿ ಸಲ ಓದುವಾಗಲೂ ಆ ಕಥೆ ಓದಿದವರ ಮನಸ್ಸಿನಲ್ಲಿ ಬೆಳೆಯುತ್ತಾ ಹೋದಾಗ ಅದಕ್ಕೆ ಒಂದು ಪ್ರಕ್ರಿಯೆಯ ಗುಣ ಪ್ರಾಪ್ತವಾಗುತ್ತದೆ. ಹಾಗೆ ಪ್ರಕ್ರಿಯೆಯಾಗುವ ಕಥೆಗಳಿಗೆ ಕಾಲದ ಹಂಗಿರುವುದಿಲ್ಲ. ಹುಟ್ಟುವಾಗ ಕಥೆಗಳಿಗೆ ಕಥೆಗಾರನ ಒಂದು ಧ್ವನಿ ಮಾತ್ರ ಇರಬಹುದು ಆದರೆ ಕಥೆ ಬೆಳೆಯುತ್ತಾ ಹೋದಂತೆ ಕಥೆಗೆ ಎಷ್ಟೊಂದು ಪದರಗಳು, ಆಯಾಮಗಳು, ಧ್ವನಿಗಳು ಪ್ರಾಪ್ತವಾಗುತ್ತಾ ಹೋಗುತ್ತವೆ. ಆಗ ಕಥೆಯಲ್ಲಿ ಯಾವುದು ’ಅಂತಿಮ ಸತ್ಯ’ ಅನ್ನುವುದಿರುವುದಿಲ್ಲ. ಒಂದು ಕಥೆಯಲ್ಲಿ ಹಲವಾರು ಸತ್ಯಗಳಿರಲು ಸಾಧ್ಯ.
ಕಮ್ಮಟದಲ್ಲಿ ನಾವು ಚರ್ಚಿಸಿದ್ದು ಆರು ಕಥೆಗಳ ಬಗ್ಗೆ. ಆ ಆರು ಕಥೆಗಳಲ್ಲೂ ಎಷ್ಟೊಂದು ಕಥೆಗಳು… ಆದರೆ ಆ ಎಲ್ಲಾ ಕಥೆಗಳಲ್ಲೂ ನನ್ನನ್ನು ವೈಯಕ್ತಿಕವಾಗಿ ಕಾಡಿದ್ದು ದೇವನೂರು ಮಹಾದೇವರ ಕಥೆ, ’ಮಾರಿಕೊಂಡವರು’. ಮಾದೇವರ ಈ ಕಥೆ ಮೊದಲ ನೋಟಕ್ಕೆ ಒಂದು ಸರಳ ರೇಖೆಯಂತೆಯೇ ಕಂಡಿತ್ತು. ಎಲ್ಲರೂ ಇದ್ದ ಗುಂಪು, ಸಣ್ಣ ಸಣ್ಣ ಗುಂಪುಗಳಾಗಿ, ಆ ಮೂಲಕ ಎಲ್ಲರೂ ಕಥೆಯ ಬಗ್ಗೆ ಮಾತನಾಡುವ ಅವಕಾಶ ಒದಗಿ ಆ ಪುಟ್ಟ ಪುಟ್ಟ ಗುಂಪಿನಲ್ಲಿ ಚರ್ಚೆಗಳಾದಾಗ, ಆಗ ಆ ಕಥೆ ಒಂದೊಂದೇ ಪದರಗಳನ್ನು ಅನಾವರಣಗೊಳಿಸತೊಡಗಿತು. ಕಥೆ ಇರುವುದು ಹೀಗೆ : ಬೀರ ಮತ್ತು ಲಚುಮಿ ಒಂದು ಊರಿಂದ ಇನ್ನೊಂದು ಊರಿಗೆ ವಲಸೆ ಬಂದವರು. ಅವರಿದ್ದ ಊರಿನಲ್ಲಿ ಪಟೇಲರ ಮನೆಗೆ ಬಂದಿದ್ದವನೊಬ್ಬ ಲಚುಮಿಯನ್ನು ಕೆಣಕಿ, ಬೀರ ಅವನ ಮೇಲೆ ಸಿಟ್ಟಿನಿಂದ ಏರಿ ಹೋಗಿ, ಏನೇನೋ ಆಗಿ ಊರು ಬಿಟ್ಟು ಬಂದಿರುತ್ತಾರೆ. ನಂತರ ಅವರು ಇನ್ನೊಂದು ಊರಿನ ಗೌಡರ ಮನೆಯಲ್ಲಿ ಕೆಲಸಕ್ಕೆ ನಿಲ್ಲುತ್ತಾರೆ. ಆ ಗೌಡರ ಮಗ ಕಿಟ್ಟಪ್ಪ. ಕಿಟ್ಟಪ್ಪ ಇವರಿಬ್ಬರದೇ ಅದ ಮನೆಯನ್ನು ಪ್ರವೇಶಿಸುವುದರೊಂದಿಗೆ ಬೀರ ಮನೆಯಿಂದ ಹೊರಗೆ ಮಲಗುವಂತಾಗುತ್ತದೆ. ಬೀರನಿಗೆ ವಿಷಯ ಅರಿವಾದರೂ ಅದನ್ನು ಸಹಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಅವನದು. ಇದು ಕಥೆ.

ಗುಂಪಿನಲ್ಲಿ ಚರ್ಚೆ ಶುರುವಾದಾಗ ಮೊದಲಿಗೇ ಒಬ್ಬರು ಬೀರನ ಅಸಾಮರ್ಥ್ಯದಿಂದ ಲಚುಮಿ ಕಿಟ್ಟಪ್ಪನ ಬಳಿ ಹೋಗಿದ್ದಾಳೆ ಎಂದು ತೀರ್ಪಿತ್ತುಬಿಟ್ಟರು. ಆದರೆ ಅದು ಅಷ್ಟು ಸರಳವೇ? ಒಂದು ಕಥೆಗೆ ಹಾಗೆ ಒಂದೇ ಆಯಾಮ ಇರಲು ಸಾಧ್ಯವೇ, ಅಸಲಿಗೆ ಬದುಕಿಗೆ ಹಾಗೆ ಒಂದೇ ಆಯಾಮ ಇರಲು ಸಾಧ್ಯವೇ? ಇಲ್ಲಿ ನಾನು ನನ್ನ ಮಾತುಗಳನ್ನೇನೂ ಸೇರಿಸದೆ, ಅಲ್ಲಿ ನಾನು ಕೇಳಿದ, ನನಗೆ ನೆನಪಿರುವ ಸಂಭಾಷಣೆಗಳ ತುಣುಕುಗಳನ್ನಷ್ಟೇ ಬರೆಯುತ್ತೇನೆ.
’ಮನೆ ಒಂದು ಅತ್ಯಂತ ಖಾಸಗಿ ಜಾಗ, ಸಂಸಾರಕ್ಕೂ, ಸಂಬಂಧಗಳಿಗೂ. ಗಂಡು – ಹೆಣ್ಣಿನ ಆ ಖಾಸಗಿ ಜಗತ್ತಿನಲ್ಲಿ ಯಾವಾಗ ಇನ್ನೊಬ್ಬರ ಪ್ರವೇಶ ಆಗುತ್ತದೆಯೋ ಆಗ ಆ ಸಂಬಂಧದ ಮತ್ತು ಆ ಜಗತ್ತಿನ ಪಾವಿತ್ರ್ಯತೆ ಕಳೆದುಹೋಗುತ್ತದೆ’.
’ಹೆಣ್ಣಿಗೆ ಒಂದು ಶೀಲವಿರುವಂತೆ, ಗಂಡಿಗೂ ಒಂದು ಶೀಲ ಇರುತ್ತದೆ. ಹೆಣ್ಣಿನ ಶೀಲವನ್ನು ನಾವು ಲೈಂಗಿಕತೆಗೆ ಮಾತ್ರ ಸೀಮಿತಗೊಳಿಸುತ್ತೇವೆ, ಗಂಡಿನ ಶೀಲ ಆತನ ಬದುಕು, ಅಭ್ಯಾಸ, ಹವ್ಯಾಸ, ನಿಯತ್ತಿನಲ್ಲಿರುತ್ತದೆ. ಇದನ್ನು ಯಾರೇ ಬಿಕರಿಗಿಟ್ಟರೂ, ಯಾವುದನ್ನೇ ಬಿಕರಿಗಿಟ್ಟರೂ ಅವರು ಮಾರಿಕೊಂಡವರೇ ಆಗುತ್ತಾರೆ. ಇಲ್ಲಿ ಗಂಡ ಹೆಂಡತಿ ಇಬ್ಬರೂ ಮಾರಿಕೊಂಡವರೇ’
’ಕಿಟ್ಟಪ್ಪ ಕೊಟ್ಟ ಕಂಬಳಿಯನ್ನು ಬಾಚಿಕೊಳ್ಳುವ ಲಚುಮಿ ಕಿಟ್ಟಪ್ಪನನ್ನು ಹಾಗೆ ಆಹ್ವಾನಿಸಿರಬಾರದೇಕೆ?’
’ಅಲ್ಲ ಕಥೆಯಲ್ಲಿ ಬೈರನ ಬಗ್ಗೆ ಲಚುಮಿಗೆ ಒಂದು ಅಸಹನೆ ಇದೆ, ಬೈರ ಮಾರಿಕೊಂಡಿದ್ದಲ್ಲ, ಲಚುಮಿಯೇ ಕಿಟ್ಟಪ್ಪನನ್ನು ಒಪ್ಪಿಕೊಂಡಿರಬಾರದೇಕೆ? ಆಕೆ ಅದನ್ನು ಪ್ರತಿಭಟಿಸಿದ ಹಾಗೆ ಕಾಣುವುದೇ ಇಲ್ಲ’
’ಇಲ್ಲ, ಒಂದು ಗಮನಿಸಿ, ಇಲ್ಲಿ ಮಾದೇವ ಇಡೀ ಕಥೆಯನ್ನು ಬರೆದಿರುವುದು ಮನೆಯ ಹೊರಗಿನವರಾಗಿ ಅಲ್ಲ, ಮನೆಯ ಒಳಗಿನವರಾಗಿ. ಬೈರನನ್ನು ಚುಡಾಯಿಸಿದಾಗೆಲ್ಲಾ ಹೂವಿನಂತೆ ಅರಳುವ ಲಚುಮಿ, ಕಿಟ್ಟಪ್ಪನ ಪ್ರಸ್ತಾಪ ಬಂದಾಗೆಲ್ಲಾ ಮುದುಡುತ್ತಾ ಹೋಗುತ್ತಾಳೆ. ಕಥೆ ಕೊನೆಯಾಗುವುದು, ’ಕಿಟ್ಟಪ್ಪ ನಕ್ಕ, ಬೈರನೂ ನಕ್ಕ’ ಎಂದು ಅಂದರೆ ಮೊದಲು ನಗುವುದು ಕಿಟ್ಟಪ್ಪ. ಅದು ಅಹಂಕಾರದ, ’ಈಗೇನು ಮಾಡುವೆ’ ಎನ್ನುವ ಉಡಾಫೆಯ ನಗು. ಕಿಟ್ಟಪ್ಪನ ಅ ಉಚಾಯಿಸುವ ನಗುವನ್ನು ಕಂಡ ಮೇಲೆ ಬೈರನಿಗೆ ನಗದೆ ಗತ್ಯಂತರವೆ ಇಲ್ಲ’
’ಕಥೆ ಮುಗಿಯುವಷ್ಟರಲ್ಲಿ ಕಥೆಯ ಎರಡೂ ಗಂಡು ಪಾತ್ರಗಳೂ ಮನೆಯ ಹೊರಗೆ ನಿಂತಿರುತ್ತವೆ. ಮನೆ ಮತ್ತು ಲಚುಮಿ ವಸ್ತುಗಳಂತೆ ಕಾಣುತ್ತಾರೆ. ಅ ಇಬ್ಬರು ಗಂಡಸರಲ್ಲಿ ಇಬ್ಬರೂ ಮಾರಿದವರು ಮತ್ತು ಕೊಂಡವರು. ಒಬ್ಬರು ಮನೆಯನ್ನು ಮಾರಿ ಲಚುಮಿಯನ್ನು ಕೊಂಡಿರುತ್ತಾರೆ, ಇನ್ನೊಬ್ಬರು ಲಚುಮಿಯನ್ನು ಮಾರಿ ಮನೆಯನ್ನು ಕೊಂಡಿರುತ್ತಾರೆ. ಹಾಗಾಗಿ ಇದು ಅವರಿಬ್ಬರ ಮಾರಿ-ಕೊಂಡವರ ಕಥೆ’
ಕಥೆಯಿಂದ ಶುರುವಾದ ಚರ್ಚೆ, ಕಥೆಗಿರುವ ಆರ್ಥಿಕ ಆಯಾಮಗಳು, ಸಾಮಾಜಿಕ ಆಯಾಮ, ವಲಸೆ ಬಂದವರ ಅಸಹಾಯಕತೆ, ಹಣವುಳ್ಳವರ ಎಲ್ಲದಕ್ಕೂ ಬೆಲೆ ಕಟ್ಟುವ ಚಟ, ಹೆಣ್ಣಿನ ಮನಸ್ಸು, ಅವಳ ಆಸೆ ಮತ್ತು ಆಯ್ಕೆ … ಹೀಗೆ ಚರ್ಚೆ ನಡೆಯುತ್ತಲೇ ಹೋಯಿತು.
ಒಂದು ಒಳ್ಳೆಯ ಕಥೆ ಬೆಳೆಯುವುದು ಹೀಗೆ.
ಇಲ್ಲ ಅಲ್ಲಿ ಈ ಎಲ್ಲಾ ಸಂವಾದವನ್ನು ಆಲಿಸುತ್ತಿದ್ದ ಕೆ ವಿ ನಾರಾಯಣ್ ಅವರು ಯಾವುದನ್ನೂ ಅಲ್ಲಗಳೆಯಲಿಲ್ಲ, ಅನುಮೋದಿಸಲೂ ಇಲ್ಲ. ಅವರು ಹೇಳಿದ್ದು ಒಂದೇ ಮಾತು, ’ನಿಮ್ಮ ಮನಸ್ಸಿನಲ್ಲಿ ಒಂದು ರೆಫೆರೆನ್ಸ್ ಪಾಯಿಂಟ್ ಇಟ್ಟುಕೊಂಡು, ಓದಿದ ಕಥೆಗಳನ್ನು ಅದಕ್ಕೆ ಹೋಲಿಸುತ್ತಾ, ಅದರೊಳಗೆ ಬರುವ ಕಥೆಗಳು ಸತ್ಯ, ಆಚೆಗಿನದು ಪೊಳ್ಳು ಎಂದು ನೋಡಬೇಡಿ. ಅದು ಕಥೆಯ ಸಾಮರ್ಥ್ಯಕ್ಕೆ ನೀವು ಮಿತಿ ಹಾಕಿದಂತೆ. ಒಂದು ಒಳ್ಳೆಯ ಕಥೆ ತನ್ನ ಮಿತಿಯನ್ನು ತಾನೇ ದಾಟುತ್ತಿರುತ್ತದೆ. ಹಾಗೆ ರೆಫರೆನ್ಸ್ ಪಾಯಿಂಟ್ ಇಟ್ಟುಕೊಂಡು ಮಿತಿ ಹಾಕುವ ಬಗ್ಗೆ ಒಂದು ಎಚ್ಚರವಿರಲಿ’ ಎಂದು ಮಾತ್ರ. ಸಂವಾದ ಹಳಿ ದಾಟದಂತೆ ಕಾಯುತ್ತಿದ್ದ ಅವರ ಮಾತು, ಮೌನ, ಏರುತ್ತಿದ್ದ ಹುಬ್ಬು, ಮುಖದಲ್ಲಿನ ಪ್ರಶ್ನೆ, ನಗು ಎಲ್ಲವೂ ನಮ್ಮಲ್ಲಿ ಆ ಎಚ್ಚರವನ್ನು ಮೂಡಿಸುತ್ತಿದ್ದವು. ಸಂವಾದ ಸಾಗುತ್ತಿತ್ತು.
ನಮ್ಮ ಕೈಯಲ್ಲಿದ್ದ ಪುಸ್ತಕದಲ್ಲಿ ಆರು ಕಥೆಗಳಿದ್ದವು, ಆದರೆ ಪ್ರತಿಯೊಬ್ಬರ ಮನಸ್ಸಿನಲ್ಲೂ ಆ ಕಥೆಗಿರಬಹುದಾದ ಎಲ್ಲಾ ಆಯಾಮಗಳೂ, ಸ್ವರೂಪಗಳೂ ಸ್ಪಷ್ಟವಾಗುತ್ತಿದ್ದವು.
ಇಷ್ಟೆಲ್ಲಾ ಬರೆದ ಮೇಲೂ ನಾನು ಅಲ್ಲಿ ಕಥೆ ಓದುವುದನ್ನು ಕಲಿಸಿದರು ಎಂದು ಮಾತ್ರ ಹೇಳಲಾರೆ….ನಾನು ಓದಿದ್ದು ಕಥೆಗಳನ್ನು ಮಾತ್ರವೇ? ಆ ಕಥಾ ಕಮ್ಮಟ ಎಂದರೆ ನನಗೆ ಏನೆಲ್ಲ, ಮತ್ತು ಎಷ್ಟೆಲ್ಲಾ.
 

‍ಲೇಖಕರು G

November 14, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. sangeetha raviraj

    Nigoodha manasina prateekave katheyagbahuda?! Thumb asaktidayaka baraha chenbagide

    ಪ್ರತಿಕ್ರಿಯೆ
  2. ಲಕ್ಷ್ಮೀಕಾಂತ ಇಟ್ನಾಳ

    ಕಥಾ ಕಮ್ಮಟದ ಚಿತ್ರಣ ಸೊಗಸಾಗಿದೆ. ಕಥೆಯ ಹೆಣಿಕೆ ಅಷ್ಟು ಸುಲಭದ ಮಾತಲ್ಲವೆಂಬುದು ನಿಜ. ಆದರೆ ಕಥೆಯನ್ನು ರೂಪುಗೊಳಿಸುವ, ಅರಳಿಸುವ ಕುರಿತು ಇವು ಸಹಕಾರಿಯಾಗಬಹದೇನೊ. ಬಲು ಸೊಗಸಾದ ಬರವಣಿಗೆ ಸಂಧ್ಯಾ ಜಿ.

    ಪ್ರತಿಕ್ರಿಯೆ
  3. Puttaswamy

    ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಸಂಘಟಿಸಿದ್ದ ಕಥಾಕಮ್ಮಟದ ಬಗ್ಗೆ ತಾವು ಬರೆದಿರುವುದಕ್ಕೆ ವಂದನೆಗಳೂ. ಒಂದು ತಿದ್ದುಪಡಿ. ಕಥೆಯಲ್ಲಿ ಬರುವ ಪಾತ್ರಗಳು ಬೀರ ಮತ್ತು ಲಕ್ಷ್ಮಿ ಎಂದಿರಬೇಕಿತ್ತು. ಬೀರ ಮಾತ್ರ ಲಕ್ಷ್ಮಿಯನ್ನು ಲಚುಮಿ ಎನ್ನುತ್ತಾನೆ. ನಿರೂಪಕ ಲಕ್ಷ್ಮಿ ಎಂದೇ ಹೇಳುತ್ತಾನೆ.

    ಪ್ರತಿಕ್ರಿಯೆ
  4. harish paidlar

    ಹಣವುಳ್ಳವರ ಹಾಗು ಅವರ ಮನೆಯಲ್ಲಿ ಕೆಲಸ ಮಾಡುವ ಆಳಿನ ನಡುವೆ ನಡೆವ ಸಂಭಾಷಣೆ ಬ್ಲಾಗ್ನಲ್ಲಿ ಸಿಕ್ಕಿದ್ದು.
    ಆನಂದ್ ಕುಂಚನೂರು
    ಒಂದೆಳೆ ಬತ್ತಿ
    ‘ಲೇ ಈರಾs..
    ನೋಡೊ ಆ ದೀಪದ ಕೆಳಗ ಕತ್ತಲಾs..’
    ‘ವ್ಯವಸ್ಥಾ ಮಾಡೆನಿ ಗೌಡ್ರ, ಹಚ್ಚೆನಿ ಅದರಡಿಗೆ ಇನ್ನೊಂದ್ ದೀಪಾ..’ ‘ಮತ್ತದರಡಿಗೆ?’
    ‘ಚಿಂತೀ ಬ್ಯಾಡ್ರಿ, ಒಂದರ ಅಡಿಗೆ ಒಂದು,
    ಅದರ ಕೆಳಗ ಮತ್ತೊಂದು, ಮಗದೊಂದು…ಹಿಂಗs..
    ನಿಮ್ಮಂಗಳದ ತುಂಬ ದೀಪದ ಸಾಲs..ಥೇಟ್ ಬೆಳದಿಂಗಳs..’
    ‘ಹಂಗಾದ್ರ ಹೊಡಿ ಢಂಗೂರ ಊರಿಗೆ
    ಲಕ್ಷದೀಪೋತ್ಸವ ಗೌಡರಿಂದ…’
    ‘ಲೇ ಈರಾs..
    ವಸೂಲಿ ಮಾಡಿದ್ಯೇನೋ ಎಲ್ಲಾರ ಸಾಲಾs..’
    ‘ಇರೋಬಾರೋ ನೆಲಕ್ಕೆಲ್ಲ ನಿಮ್ಹೆಸರ ಬರ್ದನ್ರಿ..’
    ‘ಮತ್ತೇನ ಬಳಕೊಂಡ್ಯೋ..’
    ‘ಅದರ ಉಸಾಬರಿನ ಬಿಡ್ರಿ, ಬಡ್ಡಿಗೆ ರೊಕ್ಕಾ,
    ಚಕ್ರಬಡ್ಡಿಗೆ ಮನಿ ಮಠಾ..ಬರೋಬ್ಬರಿ ಹಸನ ಹಿಂಗs..
    ಅವ್ರ ಮಾಂಸಾ,ಎಲುವು ಯಾರೊ ಕೊಟ್ಟಿದ್ದಂತ, ದೇವ್ರ!
    ತಿರುಪತಿ ಹುಂಡಿ ನಿಮ್ ಭಂಡಾರ..’
    ‘ಹಂಗಾರ ಕೂಗಿ ಹೇಳ ಊರಿಗೆ
    ತುಲಾಭಾರ ಗೌಡ್ರಿಗೆ..!’
    ‘ಲೇ ಈರೂs..
    ಆ ಮೂಲಿಮನಿ ಮಾದೇವಿ ಸತ್ಲಂತಲ್ಲೋ..’
    ‘ಗೊತ್ತಮಾಡ್ಸಿಲ್ಲ ಬಿಡ್ರಿ ಯಾರಿಗೂ, ನೀವ್ ಆಕಿ ಮೈಯುಂಡ ಸುದ್ದಿ’
    ‘ಮತ್ತ ನಂ ಹಳೇ ಹೆಣ್ಣಗೋಳು?’
    ‘ಆರಾಮಿರ್ರೀ..ಮೊನ್ನೆ ಪರವ್ವ,ಗಂಗವ್ವ ನಿನ್ನೆ
    ಇಂದ ಈಕಿ..ಎಲ್ಲಾರೂ ಮಣ್ಣಾಗ!
    ನಿಮ್ಮ (ದಲ್ಲದ)ಸಂತಾನ, ಅಕ್ರಮ ಬಾಣಿಂತನ’
    ಹಂಗಾರ ಕರಿ ಎಲ್ಲಾ ಹೆಣ್ಮಕ್ಳನ್ನೂ
    ಮುತ್ತೈದೇರಿಗೆ ಉಡಿ ತುಂಬೂನು..’
    ಈರಾs..ಲೇ ಈರಾss..
    ನನ್ನ ಕೈಗೆ ಕೋಲ ತಾ…ಹಿತ್ತಲಕ್ಕ ಹೊಗಬೇಕ
    ಹಿಡಿ ನನ್ನ ಕೈ..ನಡಸ ನನ್ನ ಕಣ್ಣಿಲ್ಲದ ದಾರ್ಯಾಗ
    ಎಲ್ಲಿ ಸತ್ತಿ?..
    ಈರಾs..ಲೇ ಈರಾss..
    ನಡು ಮನೆ ಜಂತಿಯಲಿ ತಣ್ಣಗೆ ಸರಕ್ ಎಂಬ ಬಿರುಕು!

    ಪ್ರತಿಕ್ರಿಯೆ
  5. Anil Talikoti

    ಕಥೆಯ ಬಹುತ್ವ ಹಾಗೂ ಪ್ರಕ್ರಿಯೆಯ ಗುಣದ ಬಗ್ಗೆ ನಿಮ್ಮ ಮಾತು ಅತ್ಯಂತ ಸೂಕ್ತವಾಗಿವೆ. ಪ್ರಾಯಶ ನಿಮ್ಮ ಕಥಾಕಮ್ಮಟದಷ್ಟು ದೊಡ್ಡ ಪ್ರಮಾಣದ್ದಲ್ಲವಾದರೂ ಇಲ್ಲಿ (ಅಮೆರಿಕೆಯಲ್ಲಿ) ಗುರುಪ್ರಾಸದ ಕಾಗಿನೆಲೆಯವರೂ ಪ್ರತಿ ತಿಂಗಳು ಬುಕ್ ಕ್ಲಬ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.ಆಯ್ದ ಒಂದು ಒಳ್ಳೆಯ ಕಥೆಯನ್ನು ಓದಿ ಎಲ್ಲರೂ ಮುಕ್ತವಾಗಿ ಅದರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳುವದು ನಿಜಕ್ಕೂ ಕಥೆಗಾರನಿಗೆ. ಕಥೆಗೆ ಸಲ್ಲಬಹುದಾದ ನಿಜ ಗೌರವ.
    ~ಅನಿಲ

    ಪ್ರತಿಕ್ರಿಯೆ
  6. lakshmishankarjoshi.

    NANU NIMJOTE IRABEKUNTA ANISTA IDE.TUMBA CHENNAGI BAREDIDDEERI MADAM.ASOOYE AGUVASHTU…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: