’ಇಲ್ಲದ ನೋವನ್ನು ಆರೋಪಿಸಿಕೊಳ್ಳುವುದು ಹೇಗೆ ಸರಿ ಅಲ್ಲವೋ, ಇರುವ ನೋವನ್ನು ಅವಗಣಿಸುವುದು ಸಹ ತರವಲ್ಲ’, ಮೊನ್ನೆ ಒಂದು ದಿನ ಫೇಸ್ ಬುಕ್ಕಿನಲ್ಲಿ ಜೋಗಿ ಅವರು ಬರೆದ ಒಂದು ಸ್ಟೇಟಸ್ ಗೆ ಪ್ರತಿಕ್ರಿಯೆಯಾಗಿ ಈ ಸಾಲುಗಳನ್ನು ಬರೆದಿದ್ದೆ. ನಾನು ಅಷ್ಟು ಬದ್ಧತೆಯಿಂದ ಆ ಸಾಲುಗಳನ್ನು ಬರೆಯಲು ಪ್ರೇರಕವಾದದ್ದು ಒಂದು ನಾಟಕ.
ನೂರಕ್ಕು ಹೆಚ್ಚು ಪ್ರದರ್ಶನಗಳನ್ನು ಕಂಡ ನಾಟಕಗಳ ಮರುಪ್ರದರ್ಶನ ರಂಗಶಂಕರದಲ್ಲಿ ನಡೆಯುತ್ತಿತ್ತು. ಆ ಸಮಯದಲ್ಲಿ ನಾನು ನೋಡಿದ ಎರಡು ನಾಟಕಗಳು, ’ನಮ್ಮೊಳಗೊಬ್ಬ ನಾಜೂಕಯ್ಯ’ ಮತ್ತು ’ಕತ್ತಲೆ ದಾರಿ ದೂರ’. ಎರಡೂ ಎಪ್ಪತ್ತರ ದಶಕದಲ್ಲಿ ಬಂದ ನಾಟಕಗಳು. ಎರಡೂ ಆ ಸಮಯದಲ್ಲಿನ ನೋವು, ಸಂಕಟ, ಹತಾಶೆಯನ್ನು ಹರಳುಗಟ್ಟಿಸಿಕೊಟ್ಟ ನಾಟಕಗಳು. ಎರಡೂ ಆಳವಾಗಿ ಕಲಕಿದ್ದವು. ಆ ಕಾಲದ ಯಾತನೆಯ ದಾಖಲೆಗಳಂತೆ ಕಂಡವು ನನಗೆ. ಹೌದು ನಲಿವುಗಳಂತೆ ನೋವುಗಳಿಗೂ ದಾಖಲಾಗುವ ಹಕ್ಕಿದೆ. ನಗುವಿನ ಹಾಗೆ ಕಣ್ಣೀರಿಗೂ ಅಸ್ತಿತ್ವವಿದೆ. ಕಣ್ಣೀರು ಎಂದು ಅವಗಣಿಸಿದರೆ ಬಹುಶಃ ಬದುಕು ಪೂರ್ಣ ಸ್ವರೂಪದಲ್ಲಿ ನಮಗೆ ದಕ್ಕುವುದಿಲ್ಲ.
ಇರಲಿ ಈಗ ನಾಟಕದ ಬಗ್ಗೆ. ಅಂದು ಇಡೀ ದಿನ ಸಾಹಿತ್ಯ ಸಂಭ್ರಮವವೇ, ಬೆಳಗ್ಗೆ ಉಮಾ ರಾವ್ ಅವರ ಪುಸ್ತಕ ಬಿಡುಗಡೆ, ಮಧ್ಯಾಹ್ನ ಜೋಗೇರ ಪದ, ಸಂಜೆ ಸಮುದಾಯದ ಈ ನಾಟಕ. ಈ ನಾಟಕ ನೀನು ನೋಡಲೇಬೇಕು ತಪ್ಪಿಸಿಕೊಳ್ಳಬೇಡ ಎಂದ ಸ್ನೇಹಿತನ ಮಾತಿನಂತೆ ಜೋಗೇರ ಪದ ಕೇಳುತ್ತಿದ್ದವಳು ಅರ್ಧಕ್ಕೆ ಎದ್ದು, ರಂಗಶಂಕರದತ್ತ ಬಂದಿದ್ದೆ. ನಾಟಕ ನೋಡಿದ ಮೇಲೆ ನಾನು ನಾನಾಗಿರಲಿಲ್ಲ. ನಾಟಕ, ಆ ನಾಟಕದ ಕ್ರೌರ್ಯ, ಅಲ್ಲಿದ್ದ ಅಸಹಾಯಕತೆ, ಪಾತ್ರಗಳ ಮಾನಸಿಕ ಪದರಗಳು, ಅತ್ಯಂತ ಶಕ್ತ ರೂಪಕಗಳು, ಪ್ರತಿಮೆಗಳು ಎಲ್ಲವೂ ನಮ್ಮನ್ನು ನೇರವಾಗಿ ಪಾತ್ರಗಳ ನಡುವೆ ನಿಲ್ಲಿಸಿದ್ದವು. ಅಲ್ಲಿದ್ದ ೬ನೆಯ ನಂಬರ್ ವಾರ್ಡಿನಲ್ಲಿ ನಾನಿದ್ದೆ, ಪ್ರಹಸನದಂತಹ ವಿಚಾರಣೆಯಲಿ ನಾನಿದ್ದೆ, ’ಸುಮ್ಕಿರ್ ಉಡ್ಗಿ ಸುಮ್ಕಿರೆ, ಜುಮ್ಕಿ ಕೊಡ್ತೀನ್ ಸುಮ್ಕಿರೆ’ ಹಾಡಿನಲಿ, ಮಾತೇ ಇಲ್ಲದ ದೋಂಡೆಯ ಯಾತನೆಯಲ್ಲಿ ಎಲ್ಲ ಕಡೆ ನಾನಿದ್ದೆ ಮತ್ತು ಎಲ್ಲವೂ ನನ್ನದಾಗಿತ್ತು. ನಾಟಕದಲ್ಲಿದ್ದ ಕಲಾವಿದರ್ಯಾರೂ ನಟಿಸಿರಲಿಲ್ಲ, ಅವರೇ ಪಾತ್ರಗಳಾಗಿದ್ದರು. ಅವರ ಆ ಲೀನವಾಗುವಿಕೆ ನಾಟಕವನ್ನು ಅತ್ಯಂತ ಪರಿಣಾಮಕಾರಿಯಾಗಿಸಿತ್ತು.
ಡಿ ಆರ್ ನಾಗರಾಜ್ ಬರೆದಿದ್ದ ನಾಟಕ ಅದು, ನರಸಿಂಹನ್ ನಿರ್ದೇಶನ ಮಾಡಿದ್ದ ನಾಟಕ. ತುರ್ತು ಪರಿಸ್ಥಿತಿಯ ಬಗ್ಗೆ ನಾನು ಓದಿದ್ದ ಒಂದು ಪುಸ್ತಕ ’ಬರೋಡ ಡೈನಮೇಟ್ ಸಂಚು’, ಅಲ್ಲಿ ವಾಚ್ಯವಾಗಿದ್ದು ಇಲ್ಲಿ ರೂಪಕವಾಗಿತ್ತು, ಹಾಗಾಗಿ ನಿಧಾನವಾಗಿ ಆವರಿಸಿಕೊಳ್ಳುತ್ತಿತ್ತು.
ಅದೊಂದು ಊರು, ಆ ಊರಿಗೆ ಹೆಸರಿಲ್ಲ, ಹಾಗಾಗಿಯೇ ಅದು ಎಲ್ಲಾ ಊರುಗಳ ಕಥೆಯೂ ಹೌದು. ಅಲ್ಲಿರುವ ಕೆಲವು ’ಹೃದಯವಂತ’ ಜನ ಊರಿಗೆ ಭೂಷಣ ಎಂದು ಆಸ್ಪತ್ರೆ ಕಟ್ಟುತ್ತಾರೆ, ಆಸ್ಪತ್ರೆಯಲ್ಲಿ ವಾರ್ಡುಗಳು ಖಾಲಿ ಇರಬಾರದು ಎಂದುಕೊಂಡು, ಹುಡುಕಿ ಹುಡುಕಿ ಅದರಲ್ಲಿ ಜನರನ್ನು ತುಂಬಿಸುತ್ತಾರೆ, ಖಾಯಿಲೆ ಇದೆಯೋ ಇಲ್ಲವೋ ಅದು ಬೇರೆ ವಿಷಯ. ಆಸ್ಪತ್ರೆ ಖಾಲಿ ಆಗಿರಬಾರದು. ಇವರ ಅಧಿಕಾರವನ್ನು ಪ್ರಶ್ನಿಸುವವರನ್ನು, ಅಥವಾ ಇವರ ಮನದಲ್ಲಿ ಹೆದರಿಕೆ ಹುಟ್ಟಿಸುವವರನ್ನು ತಂದು ಕೂಡಿ ಹಾಕಿರುವುದು ೬ ನೇ ನಂಬರ್ ವಾರ್ಡು, ಇವರ ಪ್ರಕಾರ ಮಾನಸಿಕ ಸ್ಥಿಮಿತ ಇಲ್ಲದವರಿಗಾಗಿ ಇರುವ ವಾರ್ಡು. ಅದನ್ನು ಕಾಯಲು ಗೋವಿಂದನೆಂಬ ಮೂರ್ತ ಕ್ರೌರ್ಯದ ವ್ಯಕ್ತಿ. ಕುಮಾರ ವ್ಯಾಸ ಹೇಳಿದ ಹಾಗೆ `ಅರಸು ರಾಕ್ಷಸ, ಮಂತ್ರಿ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು’ ಎನ್ನುವಂತಹ ಊರು.
೬ನೆಯ ನಂಬರ್ ವಾರ್ಡಿನಲ್ಲಿ ಇರುವವರು ೪ ಜನ. ಜಗನ್ನಾಥ – ಕವಿ ಹೃದಯದವನು, ಅಲ್ಲಿರುವ ಉಳಿದವರಿಗಿಂತ ಹೆಚ್ಚು ಬುದ್ಧಿವಂತ, ತರ್ಕಬದ್ಧವಾಗಿ ಮಾತನಾಡಬಲ್ಲವ. ಎರಡನೆಯವನು ವಾಸು, ಅವನು ಯಾಕಲ್ಲಿದ್ದಾನೆ ಎನ್ನುವುದಾಗಲಿ, ಅವನ ಹಿನ್ನಲೆಯಾಗಲಿ ನಮಗೆ ತಿಳಿಯುವುದಿಲ್ಲ. ಆದರೆ ಅವನ ಬೋಳೆತನದ ಹಿಂದೆ, ತಮಾಶೆ, ಕುಚೇಷ್ಟೆಗಳ ಹಿಂದೆ ಅವನಲ್ಲಿನ ಆಳದ ಭಯ ಆಗಾಗ ಹೊರಗೆ ಬಂದುಬಿಡುತ್ತದೆ. ಮತ್ತೊಬ್ಬ ರಾಜಣ್ಣ, ಇಡೀ ದಿನ ಪದ ಹಾಡುತ್ತಲೇ ನೋವಿನಿಂದ ನರಳುವವನು, ಉಳಿದವನು ದೋಂಡೆ, ಮಾತೇ ಆಡದೆ ದಿನವಿಡೀ ಕಣ್ಣೀರಿಡುತ್ತಿರುತ್ತಾನೆ. ಅವರನ್ನು ಕಾಯುವ ವಾರ್ಡನ್ ಗೋವಿಂದ, ತನ್ನ ಕ್ರೌರ್ಯವನ್ನು ಶಿಸ್ತಿನ ಹೆಸರಲ್ಲಿ ಚಲಾವಣೆ ಮಾಡುತ್ತಿರುತ್ತಾನೆ. ಉಳಿದಂತೆ ಅವನು ಅರಾಧಿಸುವ ಸರೋಜ, ಸರೋಜಳಿಂದ ಆರಾಧಿಸಲ್ಪಡುವ ಕಿರಿಯ ಡಾಕ್ಟರ್ ಇಲ್ಲಿನ ಪಾತ್ರಧಾರಿಗಳು.
ಇಲ್ಲಿ ಕ್ರೌರ್ಯ ಹಲವಾರು ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ಗೋವಿಂದನದು ವ್ಯಕ್ತ ಕ್ರೌರ್ಯ. ಎದುರಿಗೆ ಕಾಣಿಸುತ್ತದೆ, ಅದೊಂದು ಮೃಗಸಹಜವಾದ ಮನೋಭಾವ. ತನ್ನ ಸ್ವಭಾವದ ಬಗ್ಗೆ ಗೋವಿಂದನಿಗೆ ಯಾವುದೇ ಅಳುಕಿಲ್ಲ, ಅಪರಾಧಿ ಭಾವನೆ ಇಲ್ಲ, ಅದನ್ನು ಮರೆಮಾಚುವ ಅಗತ್ಯವೂ ಅವನಿಗೆ ಕಾಣುವುದಿಲ್ಲ. ಆದರೆ ಊರಿನ ದೊಡ್ಡ ಮನುಷ್ಯರದು ಅವ್ಯಕ್ತ ಮತ್ತು ಮಾನಸಿಕ ಕ್ರೌರ್ಯ. ಯಾವಾಗಲೂ ಮಾನಸಿಕ ಕ್ರೌರ್ಯ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಮತ್ತು ಗೋವಿಂದನಂತವರು ಆ ಅಧಿಕಾರದ ರಕ್ಷಕಭಟರಾಗುತ್ತಾರೆ. ಆಸ್ಪತ್ರೆ ಕಟ್ಟಿ, ರೋಗಿಗಳನ್ನು ತಯಾರು ಮಾಡುವ ಕ್ರೌರ್ಯ ಮಾನಸಿಕವಾದರೆ, ಆ ರೋಗಿಗಳನ್ನು ಹೊಡೆದು, ಬಡಿದು, ಹಿಂಸಿಸಿ, ಅವರ ಕೈಯಲ್ಲಿರುವುದನ್ನು ಕಿತ್ತು ಬದುಕುವ ಕ್ರೌರ್ಯ ಗೋವಿಂದನಂತವರದ್ದು.
ಮಾನಸಿಕ ಕ್ರೌರ್ಯಕ್ಕೆ ’ಹೌದು, ಏನೀಗ?’ ಎನ್ನುವ ಬಂಡತನ ಅಥವಾ ಬೋಳೆತನ ಇರುವುದಿಲ್ಲ. ಅದು ತನ್ನ ಪ್ರತಿ ಆಜ್ಞೆಗೂ, ಪ್ರತಿ ಕಾಯಿದೆಗೂ ಒಂದು ಪ್ರೆಸೆಂಟಬಲ್ ಆದ ದಿರಿಸು ತೊಡಿಸಿ, ಅದನ್ನು ಶಿಕ್ಷೆಗೊಳಗಾಗುವವರ ಕೈಲಿ ಒಪ್ಪಿಸಿಯೇ ಮುಂದುವರಿಯುತ್ತದೆ. ಅದಕ್ಕೆ ಆ ಒಂದು ಒಪ್ಪಿಗೆಯ ಅನಿವಾರ್ಯತೆ ಇರುತ್ತದೆ. ಡಾಕ್ಟರ್ ಆನಂದನ ವಿರುದ್ಧ ವಿಚಾರಣೆಯ ನಾಟಕ ಮಾಡಿ, ಇಡೀ ವ್ಯವಸ್ಥೆಯನ್ನು ಅವನ ಎದುರಾಗಿಸಿ, ಅವನನ್ನು ಸೋಲುವಂತೆ ಮಾಡಿ, ಆಮೇಲೆ ಅವನನ್ನು ಆಸ್ಪತ್ರೆಯಲ್ಲಿ ಕೂಡಿಹಾಕುತ್ತದೆ. ಕ್ರೌರ್ಯ ಹಸಿಯಾಗಿದ್ದಾಗ ಗೋವಿಂದನ ಥರಹ ಇರುತ್ತದೆ, ಅದಕ್ಕೊಂದು ಸಾಂಸ್ಥಿಕ ರೂಪ ಬಂದಾಗ, ನಯಾ-ನಾಜೂಕು ಬಂದಾಗ ಅದು ’ಚೇರ್’ ಮನ್ ಆಗಿ ಪಟ್ಟ ಹಿಡಿಯುತ್ತದೆ.
ಇಲ್ಲಿ ಇನ್ನೊಂದು ಎಳೆಯ ಕ್ರೌರ್ಯ ಇದೆ, ಅದು ಪ್ಯಾಸೀವ್ ಆಗಿ ಉಳಿಯುವ, ಮೌನದಿಂದಲೇ ಕ್ರೌರ್ಯವನ್ನು ಬೆಳೆಯಲು, ವಿಜೃಂಭಿಸಲು ಬಿಟ್ಟು, ತನ್ನ ಅಸಹಾಯಕತೆಯನ್ನು, ಅದಕ್ಷತೆಯನ್ನು ಒಳ್ಳೆಯತನದಿಂದ ಮುಚ್ಚಿಟ್ಟುಕೊಳ್ಳುವ ಕ್ರೌರ್ಯ. ಅದು ಡಾ ಆನಂದನ ಕ್ರೌರ್ಯ. ಆತ ಆ ಆಸ್ಪತ್ರೆಯ ಹಿರಿಯ ವೈದ್ಯ. ಅಲ್ಲಿನ ವ್ಯವಸ್ಥೆಯನ್ನು ಸರಿಯಾಗಿಡುವುದು, ಬಿಗಿಯನ್ನು ಕಾಪಾಡಿಕೊಳ್ಳುವುದು ಆತನ ಕರ್ತವ್ಯ. ಅಲ್ಲಿ ಗೋವಿಂದ ರೋಗಿಗಳನ್ನು ಹಿಂಸಿಸುತ್ತಿದ್ದರೆ, ಆಸ್ಪತ್ರೆಯ ವ್ಯವಸ್ಥೆ ಸರಿಯಾಗಿರದಿದ್ದರೆ, ಅದನ್ನು ಸರಿಪಡಿಸಬೇಕಾದ್ದು ಅವನ ಕರ್ತವ್ಯ. ಗೋವಿಂದನನ್ನು ಹದ್ದುಬಸ್ತಿನಲ್ಲಿಡಬೇಕಾದು ಅವನ ಕೆಲಸ. ಆದರೆ ಅವನು ಹಾಗೆ ಮಾಡುವುದಿಲ್ಲ, ಮಾಡುವ ಪ್ರಯತ್ನವನ್ನೂ ಮಾಡುವುದಿಲ್ಲ. ನಿರ್ಧಾರ ತೆಗೆದುಕೊಳ್ಳಬೇಕಾದ ಸಮಯದಲ್ಲಿ ಮೌನವಾಗುಳಿಯುವ ಅವನು ತನಗೆ ತಿಳಿಯದಂತೆಯೇ ಆ ಕ್ರೌರ್ಯಕ್ಕೆ ನೆರವಾಗುತ್ತಿರುತ್ತಾನೆ. ಅದನ್ನು ಸರಿಯಾಗಿ ಗ್ರಹಿಸುವುದು ಜಗನ್ನಾಥ ಮಾತ್ರ. ಅವನ ಆ ಗ್ರಹಿಕೆಯನ್ನು ಎದುರಿಸಲಾರದ ಹೆದರಿಕೆ ಮತ್ತು ಆ ಗ್ರಹಿಕೆಯ ಬಗ್ಗೆ ಮೆಚ್ಚುಗೆ ಎರಡೂ ಆನಂದನಿಗಿದೆ. ಅದಕ್ಕೇ ಆತ ಮತ್ತೆ ಮತ್ತೆ ಜಗನ್ನಾಥನ ಬಳಿ ಬರುತ್ತಾನೆ, ಜಗನ್ನಾಥನ ದೃಷ್ಟಿಯಲ್ಲಿ ಒಳ್ಳೆಯವನಾಗುವುದು ತನಗೆ ಅನಿವಾರ್ಯ ಎನ್ನುವಂತೆ.

ತನ್ನ ಜೊತೆಗೆ ಸಂವಾದಿಸುವವರು ಯಾರೂ ಇಲ್ಲ ಎನ್ನುವ ತಳಮಳ ಅವನಿಗೆ. ಆದರೆ ಆ ಎಲ್ಲಾ ದನಿಗಳನ್ನೂ ಅಡಗಿಸಲು ಇವನೂ ನೆರವಾಗಿರುತ್ತಾನೆ ಎನ್ನುವುದು ಇಲ್ಲಿ ವಿಪರ್ಯಾಸ. ಅವನ ಎಲ್ಲಾ ಮಾತುಗಳೂ ಮೇಲ್ಪದರಲ್ಲಿರುತ್ತವೆ. ನೋವಿನ, ಹಸಿವಿನ, ಅಸಹಾಯಕತೆಯ, ದೈನ್ಯದ ಅರಿವೇ ಇಲ್ಲದ ಅವನು ’ನೋವು ಕೇವಲ ಒಂದು ಭಾವನೆ, ಅದನ್ನು ನಿರ್ಲಕ್ಷಿಸಿದರೆ ಹೊರಟು ಹೋಗುತ್ತದೆ’ ಎನ್ನುವ ಬಾಲೀಶ ವಾದವನ್ನು ಮಾಡುತ್ತಾ, ಜಗನ್ನಾಥನಿಂದ ಅವಹೇಳನಕ್ಕೊಳಗಾಗುತ್ತಿರುತ್ತಾನೆ. ಅವನ ಎಲ್ಲಾ ಆಲೋಚನೆಗಳೂ ಅನುಭವಜನ್ಯವಲ್ಲಾ, ಕೇವಲ ಆಲೋಚನಾಜನ್ಯ, ಆದ್ದರಿಂದಲೆ ಅವನಿಗೆ ಎಲ್ಲವನ್ನೂ ರೊಮಾಂಟಿಕ್ ಆಗಿ ನೋಡುವ ಚಟ.
ಆದರೆ ಜಗನ್ನಾಥ ಹಾಗಲ್ಲ. ಅವನು ನೋವನ್ನು ರಕ್ತ-ಮಾಂಸಗಳ ರೀತಿ ದೈಹಿಕವಾಗಿ ಅನುಭವಿಸಿದವನು. ನೋವುಂಡ ದೇಹ, ಕನಸು ಕಾಣುವ ಮನಸ್ಸು ಎರಡೂ ಇರುವವನು. ನೆಲಕ್ಕೆ ಕಿವಿ ಹಚ್ಚಿ ಚಂದ್ರನ ಹೆಜ್ಜೆ ಸದ್ದು ಕೇಳುವ ಕವಿ ಇಲ್ಲಿ ಕಿವಿಯಲ್ಲಿ ಮೊರ್ರೋ ಎಂದು ಮೊರೆವ ಕತ್ತಲೆಯನ್ನು ಎದುರಿಸಲಾಗದೆ ದೈನೇಸಿ ಆಗಿರುತ್ತಾನೆ. ಆದರೆ ಅವನಲ್ಲಿ ಒಂದು ಅದ್ಭುತವಾದ ಕ್ಲಾರಿಟಿ ಇರುತ್ತದೆ. ಎಲ್ಲಾ ಬದಲಾಗುವ ದಿನ ಬರುತ್ತದೆ ಎನ್ನುವ ನಂಬಿಕೆ ನನಗಿದೆ, ನಿನಗಿಲ್ಲವೆ ಎಂದು ಆನಂದ ಕೇಳಿದಾಗ ಅವನು, ’ನಾನು ಹೇಳಿದ್ದು ನಿನಗೆ ಅದರಲ್ಲಿ ನಂಬಿಕೆ ಇಲ್ಲ ಅಂತ. ಬರುತ್ತೆ! ಅಂಥಾ ಒಂದು ಕಾಲ ಈ ಲೋಕದಲ್ಲಿ ಬಂದೇ ಬರುತ್ತೆ. ನನ್ನ ಮೂಳೆಗಳ ಬುಡದಿಂದ ಬರೋ ಕಂಪನಾನೇ ಹೇಳುತ್ತೆ, ಅದು ಬಂದೇ ಬರಬೇಕು! … ಎಲ್ಲಾ ಸುಖವಾಗಿರೋ ಸಮಾಜ, ಸುಂದರವಾದ ಸಮಾಜ.. ಒಂದಲ್ಲ ಒಂದು ದಿನ ಅಂಥ ಸಮಾಜ ಬಂದೇ ಬರುತ್ತೆ!.. ಆದರೆ ಅದು ಇವತ್ತಿನ ಬಸಿರನ್ನು ಒದ್ದುಕೊಂಡು ಬರಬೇಕು!!’ ಎನ್ನುವ ಸ್ಪಷ್ಟತೆ ಅವನಿಗಿದೆ. ಆ ಸ್ಪಷ್ಟತೆ ಮತ್ತು ಆಶಯದ ಕಾರಣದಿಂದಲೇ ವ್ಯವಸ್ಥೆಗೆ ಅವನ ಬಗ್ಗೆ ಹೆದರಿಕೆ. ಅದಕ್ಕೇ ಅವನನ್ನು ಹೊರಗಿನ ಲೋಕದಲ್ಲಿ ಅದು ಬಿಡುವುದಿಲ್ಲ. ಆ ಕಾರಣದಿಂದಲೇ ಅವನಿಗೆ ಪೋಲೀಸರ ಭಯ ಇದೆ, ’ಯಾರೋ ಧಡಧಡಾಂತ ಬರೋ ಸದ್ದು ಕೇಳಿಸ್ತಾ ಇದೆ….’, ’ಪೋಲೀಸ್ ಜೀಪು ಯಾವ ಬಿಲದಲ್ಲಾದರೂ ನುಗ್ಗಬಹುದು’ ಎನ್ನುವ ಭೀತಿ ಅವನನ್ನು ಕಾಡುತ್ತಿರುತ್ತದೆ.
ರಾಜಣ್ಣನ ಕಥೆ ಬೇರೆಯದು. ಅವನೊಬ್ಬ ಬಡವ, ಮುಗ್ಧ. ಒಂದು ರಾತ್ರಿ ಹೆಂಡತಿ ಇವನ ಎದೆಯ ಮೇಲೆ ತಲೆ ಇಟ್ಟು ಹಾಡೊಂದನ್ನು ಗುನುಗುನಿಸುತ್ತಿದ್ದಾಗಲೇ ಜಮೀನ್ದಾರನ ಆಳುಗಳು ದೊಣ್ಣೆಗಳೊಂದಿಗೆ ಬಂದು, ಅವನ ಹೆಂಡತಿಯನ್ನು ಎಳೆದುಕೊಂಡಿರುತ್ತಾರೆ, ಅವನ ಅಪ್ಪ-ಅಮ್ಮನನ್ನು ಕಟ್ಟಿ ಹಾಕಿ, ಮನೆಗೆ ಬೆಂಕಿ ಹಚ್ಚಿರುತ್ತಾರೆ. ಅವರನ್ನು ಎದುರಿಸಲಾರದೆ ಕೈಗೆ ಸಿಕ್ಕಿದ ಹೆಂಡತಿಯ ರವಿಕೆಯನ್ನು ಕೈಲಿ ಹಿಡಿದು ರಾಜಣ್ಣ ತಪ್ಪಿಸಿಕೊಂಡು ಓಡಿರುತ್ತಾನೆ. ಹಾಗೆ ಓಡಿ ಬಂದೆ ಅನ್ನುವ ಗಿಲ್ಟ್ ಅವನನ್ನು ಬೇಟೆ ಆಡುತ್ತಿರುತ್ತದೆ. ಅವನ ಹೆಂಡತಿಯ ಕಣ್ಣು ಅವನನ್ನು ’ಹೇಡಿ, ಹೇಡಿ’ ಎಂದು ಛೇಡಿಸುತ್ತಿರುತ್ತದೆ. ಅವನ ಮನಸ್ಸಿನ ಗಿಲ್ಟ್ ಎಷ್ಟಿರುತ್ತದೆ ಎಂದರೆ ಮೌನದಲ್ಲಿ ಅವನಿಗೆ ಕೇಳಿಸುವ ಶಬ್ಧ ದೇಗುಲದ ಗಂಟೆ ಮತ್ತು ಇಗರ್ಜಿಯ ಗಂಟೆ. ಆ ಗಂಟೆಯ ಸದ್ದು ಅವನನ್ನು ಅಪರಾಧಿ ಎಂದು ಸಾರುತ್ತಿರುತ್ತದೆ. ಅವರಿಬ್ಬರ ಅತ್ಯಂತ ಹತ್ತಿರದ ಘಳಿಗೆಯಲ್ಲಿ ಹೆಂಡತಿಯನ್ನು ಬಿಟ್ಟು ಓಡಿ ಬಂದ ಅವನ ಕೈಯಲ್ಲಿರುವ ಹೆಂಡತಿಯ ರವಿಕೆ ಅವನ ಒಲವಿನ ನೆನಪೂ ಹೌದು, ಅವನ ತಪ್ಪಿನ ನೆನಪೂ ಹೌದು.
ಇನ್ನು ವಾಸು ಗೋವಿಂದನ ಅಧಿಕಾರವನ್ನು, ಕ್ರೌರ್ಯವನ್ನು ಒಪ್ಪಿಕೊಂಡುಬಿಟ್ಟಿದ್ದಾನೆ. ಅವನು ಹೇಳಿದಂತೆಯೇ ಕೇಳುತ್ತಾನೆ. ಆದರೆ ತನ್ನ ಭೋಳೆತನದ ನಡುವೆಯೇ ಅಲ್ಲಾಡಿಸುವ ಸತ್ಯಗಳನ್ನು ಹೇಳಿಬಿಡುತ್ತಾನೆ, ’ಅದೆಲ್ಲಾ ನಂಗೆ ಅರ್ಥ ಆಗಲ್ಲ ಡಾಕ್ಟ್ರೆ, ರಾಜಣ್ಣ ನೋವಾಗುತ್ತೆ ಅಂತಾನೆ, ಮೂರೊತ್ತೂ ಪದಾ ಹೇಳ್ತಾನೆ, ದೋಂಡೆ ನೋವಾಗಲ್ಲ ಅಂತಾನೆ, ಮೂರೊತ್ತೂ ಕಣ್ಣೀರು ಹಾಕ್ತಾನೆ, ಭಾರಿ ತಮಾಷೆ …. ಡಾಕ್ಟ್ರೆ ನಿನ್ನೆ ರಾತ್ರಿ ವಾಂತಿ ಮಾಡ್ದಾಗ ಗಡ್ಡೆಗಡ್ಡೆ ರಕ್ತ…’ ಎಂದವನ ನೋವಿನ ದನಿ ಕಡೆಗೂ ಡಾಕ್ಟರಿಗೆ ಕೇಳಿಸುವುದೇ ಇಲ್ಲ.
ಆದರೆ ಇದೆಲ್ಲದರ ನಡುವೆ ಕಡೆಗೂ ದೋಂಡೆಯ ಮೂಕರಾಗ ಏನು ಅಂತ ಗೊತ್ತಾಗಲೇ ಇಲ್ಲ. ರೊಚ್ಚಿನಿಂದ, ಏದುಬ್ಬಸ ಬಿಡುತ್ತಾ ಗೋವಿಂದ ಕೂರುವ ಖುರ್ಚಿಗೆ ಕೋಲಿನಿಂದ ರಪ್ ರಪ್ ಎಂದು ಭಾರಿಸುವ ಅವನ ಆ ರೊಚ್ಚಿನ ಮೂಲ ಯಾವುದು ಅಂತ ಗೊತ್ತಾಗುವುದೇ ಇಲ್ಲ.
ಕ್ರೌರ್ಯದ ಆ ಸಸಿ ಚಿಕ್ಕದಾಗಿರುವಾಗ ಅದನ್ನು ಕಿತ್ತು ಹಾಕುವ ಅವಕಾಶ, ಶಕ್ತಿ ಆನಂದನಿಗಿರುತ್ತದೆ. ಆದರೆ ಹಸಿವಿನ, ನೋವಿನ ಪರಿಚಯವೇ ಇಲ್ಲದ ಆನಂದ ಆ ನೋವು ದೈಹಿಕವಲ್ಲ, ಕೇವಲ ಒಂದು ಮಾನಸಿಕ ಸ್ಥಿತಿ ಎಂದು ತನ್ನನ್ನೇ ನಂಬಿಸಿಕೊಂಡು ನೋಯಿಸುವ ಕೈಗಳೆಡೆಗೆ ಕುರುಡಾಗಿಬಿಡುತ್ತಾನೆ. ಕಡೆಗೊಂದು ದಿನ ಆ ಕೈಗಳು ಅವನನ್ನೂ ವಾರ್ಡ್ ನಂಬರ್ ೬ ರ ಒಳಗೆ ಕೂಡಿ ಹಾಕುತ್ತವೆ. ಯಾವುದೇ ಕೆಡುಕಾದಾಗ ಒಂದು ಸಮಾಜದ ಬುದ್ಧಿವಂತ ಸಮೂಹ ಅದನ್ನು ಪ್ರತಿಭಟಿಸದೆ ಉಳಿದಾಗ ಆ ಕೆಡುಕು ಅವರ ಆ ಮೌನದಿಂದಲೇ ಹೇಗೆ ರಕ್ತ ಮಾಂಸಗಳನ್ನು ತುಂಬಿಕೊಂದು ಬೆಳೆದು ವಿಜೃಂಭಿಸುತ್ತದೆ ಎನ್ನುವ ಕಥೆ ಇಲ್ಲಿದೆ.
ಯಾವ ವ್ಯವಸ್ಥೆಗೆ ತನ್ನ ಮೌನದಿಂದ, ನಿಷ್ಕ್ರಿಯತೆಯಿಂದ ಬೆಳೆಯಲು ಅನುವು ಮಾಡಿಕೊಟ್ಟಿರುತ್ತಾನೆಯೋ ಕಡೆಗೊಂದು ದಿನ ಅದೇ ವ್ಯವಸ್ಥೆ ಇವನನ್ನೂ ಬಲಿ ತೆಗೆದುಕೊಳ್ಳುವಷ್ಟು ಬೆಳೆದುಬಿಡುತ್ತದೆ ಎನ್ನುವ ನಾಟಕದ ಒಳದನಿ ತುರ್ತು ಪರಿಸ್ಥಿತಿಯ ಆ ದಿನಗಳಿಗಷ್ಟೇ ಅಲ್ಲ, ಈ ದಿನಗಳಿಗೂ ಎಷ್ಟು ಪ್ರಸ್ತುತ ಅಲ್ಲವೇ? ಒಂದು ಕಲಾಕೃತಿಯ ಸಾರ್ವತ್ರಿಕತೆ ಮತ್ತು ಕಾಲಾತೀತತೆ ಇರುವುದು ಇಲ್ಲಿ.
ಸಂಧ್ಯಾರಾಣಿ ಕಾಲಂ : ಕತ್ತಲೆ ದಾರಿ ದೂರ, ಚುಕ್ಕಿ ಚಂದ್ರ ಇಲ್ಲದ ಲೋಕ…
ನಿಮಗೆ ಇವೂ ಇಷ್ಟವಾಗಬಹುದು…

ಇದನ್ನ ನೋಡುವಾಗ ಎಷ್ಟು ಸ್ತಬ್ಧರಾಗಿ ಕೂತಿದ್ವಿ … ಅಲ್ಲಾಡಿಸಿ ಬಿಡ್ತು ಈ ನಾಟಕ ….
ಉತ್ತಮ ಲೇಖನ
ನಾನೆ ಕೂತು ನಾಟಕ ನೋಡಿದಂತಾಯಿತು. ನಾಟಕಕ್ಕೆ ಸುಂದರ ನುಡಿಕಟ್ಟಿನ ಭಾಷ್ಯ. ನಾಟಕದ ಆಶಯ, ಸಂದೇಶಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಿರಿ. “ಅವನ ಎಲ್ಲಾ ಆಲೋಚನೆಗಳೂ ಅನುಭವಜನ್ಯವಲ್ಲಾ, ಕೇವಲ ಆಲೋಚನಾಜನ್ಯ, ಆದ್ದರಿಂದಲೆ ಅವನಿಗೆ ಎಲ್ಲವನ್ನೂ ರೊಮಾಂಟಿಕ್ ಆಗಿ ನೋಡುವ ಚಟ” ನಿಜ ನುಡಿಗಳು.
ಮೇಡಂ, ಯಾರಿಗೂ ಗೊತ್ತಾಗದ ಹಾಗೆ ನಾಟಕದ ರೀಡಿಂಗ್ ಗೆ ಬಂದಿದ್ರಾ..?! detailed analysis! 🙂
ಲೇಖನದಲ್ಲಿ ಸೂಚಿಸಿರುವ ಒಳನೋಟಗಳು ’ಕತ್ತಲ ದಾರಿ’ಗೆ ಬೆಳಕು ಚೆಲ್ಲುತ್ತವೆ…..:)
soooperb! and thank you!! 🙂
ನಾವು ಬೆಂಗಳೂರಿಗೆ ಬಂದು ನಾಟಕ ನೋಡಲು ಆಗುವುದಿಲ್ಲ ಬಿಡಿ ಮೇಡಂ ನಿಮ್ಮ ಲೇಖನ ಓದಿದರೆ ನಾಟಕ ನೋಡಿದಂತೆ ಬಿಡಿ .ಚೆನ್ನಾಗಿದ್ದೀರಾ? ಸುವರ್ಣ
”ನಾಟಕ ನೋಡಿದ ಮೇಲೆ ನಾನು ನಾನಾಗಿರಲಿಲ್ಲ. ನಾಟಕ, ಆ ನಾಟಕದ ಕ್ರೌರ್ಯ, ಅಲ್ಲಿದ್ದ ಅಸಹಾಯಕತೆ, ಪಾತ್ರಗಳ ಮಾನಸಿಕ ಪದರಗಳು, ಅತ್ಯಂತ ಶಕ್ತ ರೂಪಕಗಳು, ಪ್ರತಿಮೆಗಳು ಎಲ್ಲವೂ ನಮ್ಮನ್ನು ನೇರವಾಗಿ ಪಾತ್ರಗಳ ನಡುವೆ ನಿಲ್ಲಿಸಿದ್ದವು.” ನಾಟಕ ಹೇಗಿತ್ತು ಎಂಬುದಕ್ಕೆ ಇಷ್ಟು ಪದಗಳು ಸಾಕು ಎನಿಸುತ್ತದೆ, ಶಕ್ತಿಶಾಲಿ ಬರವಣಿಗೆ, ಪರಕಾಯ ಪ್ರವೇಶದಂತೆ ಪ್ರತಿಯೊಬ್ಬ ಓದುಗರಿಗೂ ತಾವೇ ಆ ನಾಟಕಗಳನ್ನು ಮೈದುಂಬಿಕೊಂಡಂತೆ ಅನಿಸುವುದು, ಅಕ್ಷರಗಳಲ್ಲೂ ಶಿಲ್ಪವನ್ನು ಕೆತ್ತುವುದೆಂದರೆ ಇದೇ ಏನೋ!ಅಭಿನಂದನೆಗಳು ಮೇಡಂ ಜಿ.