ಸಂಧ್ಯಾರಾಣಿ ಕಾಲಂ : 'ಕೆಲವು ಸಲ ಮದುವೆಯ ಹೆದರಿಕೆ, ಕೆಲವು ಸಲ…'

ಒಂಟಿ ಬದುಕು ಬೈ Chance ಅಥವಾ ಬೈ Choice?

’ನಾನು ನಾಲ್ಕು ಸಲ ಇನ್ನೇನು ಮದುವೆ ಆಗೇ ಹೋಯಿತು ಅನ್ನುವವರೆಗೂ ಹೋಗಿದ್ದೆ, ಕಡೆಗಳಿಗೆಯಲ್ಲಿ ಹಿಂದೆ ಸರಿದುಬಿಟ್ಟೆ. ಹಾಗೆ ಹಿಂದೆ ಸರಿಯಲು ನನಗೆ ತಿಳಿಯದ ಅಜ್ಞಾತ ಭಯ ಸಹ ಒಂದು ಕಾರಣ’ ಈ ಮಾತನ್ನು ಮಾಮೂಲಿನವರು ಯಾರೋ ಹೇಳಿದ್ದರೆ ಓದಿ, ಪಾಪ ಅವನಿಗೆನು ಕಷ್ಟ ಇತ್ತೋ ಅಂದ್ಕೊಂಡು ಸುಮ್ಮನಾಗಿಬಿಡುತ್ತಿದ್ದೆನೇನೋ. ಆದರೆ ಈ ಮಾತನ್ನು ಹೇಳಿದ್ದು ಮೊನ್ನೆ ಮೊನ್ನೆಯವರೆಗೂ ಟಾಟಾ ಸಮೂಹವನ್ನು ನಡೆಸಿದ ರತನ್ ಟಾಟ! ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು!! ಅಷ್ಟರಲ್ಲೇ ಭಾರತದ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಗಳಲ್ಲಿ ಒಬ್ಬರಾದ ರಾಹುಲ್ ಗಾಂಧಿ ಸಹ ಕಾಂಗ್ರೆಸ್ಸ್ ಸಭೆಯೊಂದರಲ್ಲಿ ಹೇಳಿದ್ದರು, ’ಮದುವೆ, ಮಕ್ಕಳು, ಮತ್ತೆ ವಂಶಪಾರಂಪರ್ಯ ರಾಜಕೀಯ ಇವೆಲ್ಲಾ ಯಾಕೆ’ ಅಂತ. ಭಾರತದ ವಿಶ್ವಸುಂದರಿ ಸುಶ್ಮಿತಾ ಸೇನ್ ಸಹ ಮದುವೆಯ ಗೊಡವೆಯೇ ಬೇಡ ಅಂತ ಇಬ್ಬರು ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಅರೆ ಇವೆಲ್ಲಾ ನಮ್ಮ ನಡುವಿನ ಮಾತಲ್ಲ ಬಿಡಿ ಎಂದು ಸುಮ್ಮನಾಗುವ ಮೊದಲೇ ನನ್ನ ಸುತ್ತ ಮುತ್ತಲೂ ನೋಡತೊಡಗಿದೆ.
ನನ್ನ ಗೆಳತಿಯ ಮಗಳು, ಮೆಡಿಕಲ್ ಪದವೀಧರೆ. ಅಪ್ಪ ಅಮ್ಮ ಗಂಡು ಹುಡುಕುತ್ತಿದ್ದಾರೆ ಎಂದು ತಿಳಿದ ಕೂಡಲೇ ಹೇಳಿದ್ದಳು, ’ನನಗೆ ಮದುವೆಯಲ್ಲಿ ಆಸಕ್ತಿ ಇಲ್ಲ, ಯಾರೋ ವ್ಯಕ್ತಿಗಾಗಿ ನನ್ನ ಇಡೀ ವ್ಯಕ್ತಿತ್ವವನ್ನು ಬದಲಾಯಿಸಿಕೊಂಡು, ಹೊಂದಿಕೊಂಡು ನಾನು ಇರಲಾರೆ. ನನ್ನ ಕೆಲಸ, ನನ್ನ ಬದುಕು ನನಗಿದೆ. ನಾನು ಮದುವೆ ಆಗಲಾರೆ. ಸಧ್ಯದಲ್ಲೇ ನಾನು ಬೇರೆ ಅಪಾರ್ಟ್ ಮೆಂಟ್ ಗೆ ಶಿಫ್ಟ್ ಆಗಬೇಕು ಅಂತಿದ್ದೇನೆ. ನನ್ನ ಬದುಕನ್ನು ನಾನು ಬಯಸಿದಂತೆ ಬದುಕಲು ಬಿಡಿ’ ಅಂತ. ಅವರು ಮಾಡುವ ಪ್ರಯತ್ನ ಎಲ್ಲಾ ಮಾಡಿ ಈಗ ಆಕೆಯ ನಿರ್ಧಾರವನ್ನು ಒಪ್ಪಿಕೊಂಡು ಸುಮ್ಮನಾಗಿಬಿಟ್ಟಿದ್ದಾರೆ.
ಮೊದಲು ಮನೆಯವರನ್ನು ಧಿಕ್ಕರಿಸಿ ಆಗಿದ್ದ ಮದುವೆಯನ್ನು ಕಾಲಕ್ರಮೇಣ ಒಪ್ಪಿಕೊಂಡಂತೆಯೇ ಈಗ ಮನೆಯವರನ್ನು ಧಿಕ್ಕರಿಸಿ ಮದುವೆ ಆಗದೆ ಇರುವುದನ್ನೂ ಸಹ ಒಪ್ಪಿಕೊಳ್ಳುತ್ತಾ ಇದೆ ಸಮಾಜ. ಹಾಗೆ ಮದುವೆಯ ಬಂಧದಿಂದ ದೂರವಿಡುವ ಆ ’ಅಜ್ಞಾತ ಹೆದರಿಕೆ’ ಯಾದರೂ ಏನು?
’ಯಹಾ ಹರ್ ಶಕ್ಸ್ ರಿಹಾಯಿ ಮಾಂಗ್ ತಾ ಹೈ ಔರ್ ರಿಹಾ, ಹೊನೆ ಸೆ ಡರ್ ತಾ ಹೈ’ ….. ಇಲ್ಲಿ ಪ್ರತಿ ಜೀವಕ್ಕೂ ಬಿಡುಗಡೆಯ ಆಸೆ ಇದೆ ಮತ್ತು ಬಿಡುಗಡೆಯ ಹೆದರಿಕೆ ಸಹ … ಕೇಳಿದಷ್ಟೂ ಈ ಗಜಲ್ ನನ್ನನ್ನು ಕಾಡುತ್ತಿತ್ತು, ಕೆಣಕುತ್ತಿತ್ತು, ಒಮ್ಮೊಮ್ಮೆ ಪ್ರಶ್ನೆಯಾಗುತ್ತಿತ್ತು, ಹಾಗೇ ಒಮ್ಮೊಮ್ಮೆ ಉತ್ತರವಾಗುತ್ತಿತ್ತು. ಬಿಡುಗಡೆಯ ಹಂಬಲದಲ್ಲೇ ಕಳೆದುಕೊಳ್ಳುವ ಭೀತಿ ಸಹ ಇರುತ್ತದೆ ಅಲ್ಲವಾ? ಬಂಧನ ಒಂದು ರಕ್ಷಣೆ ಕೊಟ್ಟ ಜೊತೆ ಜೊತೆಯಲ್ಲಿಯೇ ಸಣ್ಣಗೆ ಉಸಿರು ಕಟ್ಟಿಸಿದಂತೆ. ಆದರೆ ಈ ಬಿಡುಗಡೆಯ ಆಸೆ ಮತ್ತು ಬಂಧನದ ಪ್ರೀತಿ ಈ ಕಾಲಘಟ್ಟವನ್ನು ಕಾಡಿದ ಹಾಗೆ ಮೊದಲೆಂದೂ ಕಾಡಿರಲಿಲ್ಲವೇನೋ ಎನ್ನಿಸುತ್ತದೆ. ಈಗ ಎಲ್ಲರಿಗೂ ಅವರ ’ಸ್ಪೇಸ್’ ಬೇಕು, ಅವರ ಸ್ವಾತಂತ್ರ್ಯ ಬೇಕು. ಅದಕ್ಕೆ ಪೂರಕವಾದ ವಾತಾವರಣವನ್ನು ಸಹ ಈ ಕಾಲಘಟ್ಟವೇ ನೀಡುತ್ತಿದೆ.
ಒಂಟಿ ಬದುಕು ಈಗ ಕೇವಲ ಒಂದು ಘಟನೆಯ ಪರಿಣಾಮ ಅಥವಾ ಬದುಕು ನೀಡಿದ ಸವಾಲಾಗಿ ಕಾಣುತ್ತಿಲ್ಲ. ಅದು ಒಂದು ಜೀವನ ಶೈಲಿಯಾಗಿ ಅಂಗೀಕೃತಗೊಳ್ಳುತ್ತಿದೆ. ಅದು ಹಣೆಬರಹ ಎಂದಲ್ಲ, ಆಯ್ಕೆ ಎಂದು ಸ್ವೀಕೃತವಾಗುತ್ತಿದೆ. ’ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬಾಳಿನಲಿ…’.
ಬದಲಾದ ಸಾಮಾಜಿಕ ವ್ಯವಸ್ಥೆ ಮತ್ತು ಆರ್ಥಿಕ ಅವಕಾಶ ಗಂಡು ಹೆಣ್ಣಿನ ಎಲ್ಲಾ ಸಮೀಕರಣಗಳನ್ನೂ ಬುಡಮೇಲು ಮಾಡಿಬಿಟ್ಟವು. ಈಗ ಗಂಡಿಗಾಗಲೀ ಹೆಣ್ಣಿಗಾಗಲಿ ಸಂಸಾರ ಎಂದರೆ ಎರಡು ಸಮಾನ ಮನಸ್ಕರು ಮತ್ತು ಎರಡು ಸಮಾನ ತೂಕದ ಒಪ್ಪಿಗೆಗಳು. ಆರ್ಥಿಕ ಸ್ವಾತಂತ್ರ್ಯ ಹೆಣ್ಣು ತನ್ನ ಜೀವನಾಧಾರ ಎಂದು ಮದುವೆಯ ವ್ಯವಸ್ಥೆಯನ್ನು ಒಪ್ಪಿಕೊಳ್ಳುವುದನ್ನು ಸ್ವಲ್ಪ ಮಟ್ಟಿಗೆ ತೊಡೆದು ಹಾಕಿತು. ಜೊತೆಗೆ ಬದಲಾದ ಸಾಮಾಜಿಕ ರೀತಿ ನೀತಿಗಳು ಸಹ. ಕೇವಲ ೨೦ ವರ್ಷಗಳ ಹಿಂದೆ ವಿಚ್ಚೇದನ ಒಂದು ಕಳಂಕವಾಗಿತ್ತು, ಒಂಟಿಯಾಗಿ ಹೆಣ್ಣು ಬದುಕಬಹುದು ಎನ್ನುವುದನ್ನಂತೂ ಒಪ್ಪಿಕೊಳ್ಳಲೇ ಆಗುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ವಿಚ್ಚೇದನವಾಗಲಿ, ಒಂಟಿ ಜೀವನವಾಗಲಿ ಯಾವುದೂ ಒಪ್ಪಲಾರದ ಸಂಗತಿಗಳಲ್ಲ. ಹೆಣ್ಣುಮಕ್ಕಳು ಓದಿ, ಒಳ್ಳೆಯ ಕೆಲಸ ಹಿಡಿಯುತ್ತಿದ್ದಾರೆ, ಅಪ್ಪ ಅಮ್ಮನಿಗೆ ಭಾರ ಎನ್ನುವುದು ಹೋಗಿ, ನಾವು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ನಿಲ್ಲುತ್ತಾರೆ. ಈಗ ಮದುವೆ ಅವರ ಜೀವನದ ಒಂದು ಆಯ್ಕೆಯೇ ಹೊರತು ಅನಿವಾರ್ಯವಲ್ಲ. ಅಲ್ಲದೆ ಈ ಜಾಗತೀಕರಣ ತಂದ ಆರ್ಥಿಕ ವ್ಯವಸ್ಥೆ ಮತ್ತು ಅದರ ಸವಲತ್ತುಗಳು ನಗರದ ಮಟ್ಟಿಗಾದರೂ ಕುಟುಂಬದ ಪಾತ್ರ ಮತ್ತು ಹಿಡಿತ ಎರಡನ್ನೂ ಕಡಿಮೆ ಮಾಡಿಬಿಟ್ಟವು. ಸಮಾಜ ಮತ್ತು ಕುಟುಂಬ ಎರಡರಿಂದಲೂ ವ್ಯಕ್ತಿ ಹೆಚ್ಚು ಸ್ವತಂತ್ರವಾದ ಕಾಲ ಇದು.
ಓದು, ಹೆಚ್ಚಿನ ಓದು, ಕೆಲಸ, ಕೆಲಸದ ಒತ್ತಡ, ಜವಾಬ್ದಾರಿ ಇವೆಲ್ಲಾ ಮದುವೆಯ ವಯಸ್ಸನ್ನು ಮುಂದೂಡಿವೆ. ಒಂದು ವಯಸ್ಸು ದಾಟಿದ ಮೇಲೆ, ಅಭ್ಯಾಸಗಳು ಆಳವಾದ ಮೇಲೆ, ವ್ಯಕ್ತಿತ್ವಗಳು ಹೆಚ್ಚು ಅಸರ್ಟಿವ್ ಆಗಿ, ಜೀವನಶೈಲಿ, ಜೀವನ ವಿಧಾನ ಎಲ್ಲವೂ ಒಂದು ಪಥಕ್ಕೊಳಪಟ್ಟ ಮೇಲೆ ಮದುವೆಯೂ ಸುಲಭವಲ್ಲ, ಹೊಂದಾಣಿಕೆಯೂ.
ಅದೇ ಕಾಲಕ್ಕೆ ಗಂಡಿನ ಯೋಚನಾ ಧಾಟಿಯೂ ಬದಲಾಗಿದೆ. ಮೊದಲಿನಂತೆ ಮನೆ ಸಂಬಾಳಿಸುವುದು ಮತ್ತು ಹಣ ಗಳಿಸುವುದು ಎರಡಕ್ಕೂ ನಡುವೆ ಯಾವುದೇ ಸ್ಪಷ್ಟ ವಿಭಜನಾ ರೇಖೆ ಇಲ್ಲ. ಹೆಣ್ಣು ಮಕ್ಕಳು ಹೊರಗೆ ದುಡಿಯುವುದನ್ನು, ಹಣ ಗಳಿಸುವುದನ್ನು ಕಲಿತ ಹಾಗೆ ಇಂದಿನ ಗಂಡುಗಳೂ ಸಹ ಮನೆ ನೋಡಿಕೊಳ್ಳುವುದನ್ನು, ಅಡಿಗೆ ಮಾಡುವುದನ್ನೂ, ತಮ್ಮನ್ನು ತಾವು ನೋಡಿಕೊಳ್ಳುವುದನ್ನು ಕಲಿತಿದ್ದಾರೆ. ಮೊದಲಿನಂತೆ ಮದುವೆಯಾಗುವವರೆಗೂ ಅಮ್ಮನ ಮಡಿಲು ಆಮೇಲೆ ಹೆಂಡತಿಯ ಹೆಗಲು ಅನ್ನುವಂತಿಲ್ಲ. ಅದಕ್ಕೆ ಅನುವಾಗುವಂತೆ ತಯಾರಾಗಿರುವುದು ಒಂದು ಮುಕ್ತ ಸಾಮಾಜಿಕ ವ್ಯವಸ್ಥೆ.
ಓದು ಮುಗಿದ ಮೇಲೆ ಸಿಗುವ ಕೆಲಸ, ಆ ಕೆಲಸ ನೀಡುವ ಕೈ ತುಂಬುವ ಸಂಪಾದನೆ. ಅವರಷ್ಟೇ ಸ್ವತಂತ್ರವಾಗಿ ಯೋಚಿಸುವ ಗೆಳೆಯ ಗೆಳತಿಯರ ಸಮೂಹ, ಮುಕ್ತತೆಯನ್ನು ಒಪ್ಪಿಕೊಂಡ ಸಾಮಾಜಿಕ ವ್ಯವಸ್ಥೆ ಇವೆಲ್ಲವೂ ಒಂಟಿ ಬದುಕಿಗೆ ಪೂರಕವಾದ ವಾತಾವರಣವನ್ನೇ ನಿರ್ಮಿಸುತ್ತಿದೆ ಎನ್ನಬಹುದು. ಈಗ ಎಲ್ಲವೂ ಕೈಗೆ ಸಿಗುತ್ತದೆ, ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಪ್ಯಾಕ್ ಆಗಿ, ಐಎಸ್ ಐ ಮುದ್ರೆ ಧರಿಸಿ, ಉಪಯೋಗಿಸಲು ಸಿದ್ಧವಾಗಿ, ಎಲ್ಲವೂ ಲಭ್ಯ, ಯಾವುದಕ್ಕೂ ಕೈ ಸುಟ್ಟುಕೊಳ್ಳಬೇಕಿಲ್ಲ, ಶ್ರಮ ಪಡಬೇಕಿಲ್ಲ, ಹಾ ಎಲ್ಲಕ್ಕೂ ಒಂದು ಎಕ್ಸ್ ಪೈರಿ ದಿನಾಂಕ ಸಹ ಕೊಂಡ ದಿನದಿಂದಲೇ ಬರುತ್ತದೆ. ಆದರೆ ಅದನ್ನು ಒಪ್ಪಿಕೊಂಡೇ ಕೈಗೆತ್ತಿಕೊಳ್ಳುವುದರಿಂದ ಆ ಮಟ್ಟಿಗೆ ತಕರಾರು ಯಾಕೆ? ಈಗ ಆಯ್ಕೆಗೆ ಅಪರಿಮಿತ ಅವಕಾಶಗಳು. ಪ್ರಪಂಚ ಒಂದೇ ಸಮಯಕ್ಕೆ ಅತ್ಯಂತ ವಿಶಾಲ ಮತ್ತು ಅದೇ ಸಮಯಕ್ಕೆ ಅತ್ಯಂತ ವ್ಯಕ್ತಿ ಕೇಂದ್ರಿತ ಆಗಿದೆ.
ಹಾಗೆ ನಾವು ಹೊಸದಾಗಿ ಕೇಳಿದ ಇನ್ನೊಂದು ಪದ DINKS, ಅಂದರೆ Double Income, No Kids. ಅಂದರೆ ಮದುವೆ ಅಷ್ಟೇ ಅಲ್ಲ, ಮಕ್ಕಳೂ ತಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಬಾರದು ಎಂದು, ಮಗುವಿನೆಡೆಗಿನ ಕಾಳಜಿ ನಮ್ಮ ಕೆರಿಯರ್ ನ ಬೆಳವಣಿಗೆ ಅಡ್ಡಿ ಎಂದೋ ಯೋಚಿಸುವಾಗ, ಮಕ್ಕಳ ಕಾರಣಕ್ಕೂ ಮದುವೆ ಈಗ ಅನಿವಾರ್ಯವಲ್ಲ. ಕೆಲಸದಲ್ಲಿ ಅತ್ಯಂತ ಯಶಸ್ವಿಯಾದ ದಂಪತಿಗಳು ಈಗ ಮಕ್ಕಳನ್ನು ಮುಂದೂಡುತ್ತಿದ್ದಾರೆ ಅಥವಾ ಮಕ್ಕಳೇ ಬೇಡ ಎಂದುಕೊಳ್ಳುತ್ತಿದ್ದಾರೆ.
ಕೆಲವು ಸಲ ಮದುವೆಯ ಹೆದರಿಕೆ, ಕೆಲವು ಸಲ ಮದುವೆ ಬೇಡುವ ನಿರೀಕ್ಷೆಗಳಿಗೆ ನಾನು ಉತ್ತರ ಒದಗಿಸಬಲ್ಲೆನಾ ಎನ್ನುವ ಹೆದರಿಕೆ, ಒಂದು ಸಂಬಂಧವನ್ನು ಒಪ್ಪಿಕೊಳ್ಳುವ ಹೆದರಿಕೆ, ಕೈ ಜಾರಿದ ಜೀವದ ಸ್ಥಾನವನ್ನು ಮತ್ಯಾರಾದರೂ ತುಂಬಲಾರರು ಎನ್ನುವ ಹೆದರಿಕೆ, ಮದುವೆ ತರುವ ಜವಾಬ್ದಾರಿಗಳ ಹೆದರಿಕೆ…. ಏನೆಲ್ಲಾ ಹೆದರಿಕೆಗಳು ಈಗ…
ಹಾಗೆ ಮದುವೆಯಾಗದೆ ಉಳಿಯಬಹುದು, ಆದರೆ ಸಾಂಗತ್ಯದ ಅವಶ್ಯಕತೆ ದೇಹಕ್ಕೂ ಇರುತ್ತದೆ ಹಾಗೆ ಮನಸ್ಸಿಗೂ. ಮದುವೆ ಒಂದು ಅನಿವಾರ್ಯವಲ್ಲ ಎನ್ನುವ ಹಿಂದೆಯೇ ಸಾಂಗತ್ಯಕ್ಕಾಗಿ ಒಂದು ಸಂಬಂಧ ಬೇಕು ಅನ್ನಿಸುತ್ತದೆ. ಅಂದರೆ ತನ್ನ ವೈಯಕ್ತಿಕ ಸ್ವಾತಂತ್ರ್ಯ ಉಳಿಸಿಕೊಂಡೂ, ಪ್ರೇಮವನ್ನು ಬೇಕೆಂದಾಗ, ಬೇಕೆಂದಷ್ಟು ಪಡೆದು, ಯಾವುದೇ ಹೊಣೆ ಹೊರಬೇಕಾಗಿಲ್ಲದ ಯಾವುದೇ ಬೈಂಡಿಂಗ್ ಇಲ್ಲದ, ಇಬ್ಬರೂ ಒಪ್ಪಿಕೊಂಡ ಸಂಬಂಧ. ಅದಲ್ಲದೇ ಮದುವೆಯ ಹಂಗಿಲ್ಲದ ಲಿವ್ ಇನ್ ಸಂಬಂಧ ಸಹ ಈಗ ಮೊದಲಿನಂತೆ ಹುಬ್ಬೇರಿಸುವುವಂತೆ ಮಾಡುವುದಿಲ್ಲ. ಬೆಂಗಳೂರಿನ ಸಂಪ್ರದಾಯಸ್ಥ ಮನೆಗಳ ನಡುವೆ ಈಗ ಲಿವ್ ಇನ್ ಸಂಸಾರಗಳೂ ಸಹ ಬಾಳ್ವೆ ನಡೆಸುತ್ತಿವೆ.
ಆದರೆ ಈ ಸಂಬಂಧಗಳು ಮದುವೆಗೆ ಒಂದು ಮುನ್ನುಡಿಯಂತೆ ಆಗಬಹುದೇ ಹೊರತು ಮದುವೆಗೆ ಪರ್ಯಾಯವಾಗಲಾರದು. ಬೇಲಿಯಿಲ್ಲದ ಈ ಸಂಬಂಧದ ಆಕರ್ಷಣೆಯೇ ಇದರ ಮಿತಿಯೂ ಹೌದು ಎನ್ನುವುದು ಕಾಲ ತಿಳಿಸುವ ಸತ್ಯ. ಗೋಡೆಗಳಿಲ್ಲದ ಸಂಬಂಧಕ್ಕೆ ಪಾಯಗಳ ಅಗತ್ಯವೂ ಇರುವುದಿಲ್ಲ. ಇರುವುದು ಕೇವಲ ಕಿಟಕಿ ಮತ್ತು ಬಾಗಿಲುಗಳು ಎಂದ ಮೇಲೆ ಬಾಗಿಲುಗಳು ಹೊರಗಿನಿಂದ ಒಳಕ್ಕೆ ತೆರೆದುಕೊಳ್ಳುವಂತೆ, ಒಳಗಿನಿಂದ ಹೊರಗಡೆಗೂ ತೆರೆದುಕೊಳ್ಳುತ್ತದೆ. ಒಂದು ಇನ್ಸೆಕ್ಯೂರಿಟಿ ಯ ಜೊತೆ ಜೊತೆಗೇ ಈ ಸಂಬಂಧಗಳು ಬದುಕಬೇಕಾಗುತ್ತವೆ.
ಆದರೆ ಮಕ್ಕಳ ಪ್ರಶ್ನೆ ಬಂದಾಗ ಮದುವೆ ಲಿವ್ ಇನ್ ಗಿಂತ ಸರಳ ಆಗಿಬಿಡುತ್ತದೆ. ಹೀಗೆ ಲಿವ್ ಇನ್ ನೊಂದಿಗೆ ಸಂಬಂಧ ಶುರು ಮಾಡಿದ ಕಮಲ್ ಮತ್ತು ಸಾರಿಕ ಇಬ್ಬರು ಮಕ್ಕಳಾದ ನಂತರ ಮಕ್ಕಳಿಗೊಂದು ಲೆಜಿಟಮಸಿ ಕೊಡಲೆಂದೇ ಮದುವೆಯಾಗಬೇಕಾಯ್ತು.
ಇಲ್ಲಿ ಯಾವುದನ್ನೂ ತಪ್ಪು ಎಂದು ಹೇಳುವುದು ನನ್ನ ಉದ್ದೇಶ ಅಲ್ಲ. ಆದರೆ ಬಿಡುಗಡೆಯ ಬಯಕೆ ನಮ್ಮನ್ನು ದ್ವೀಪಗಳನ್ನಾಗಿ ಮಾಡುತ್ತಿಲ್ಲ ತಾನೆ? ಏಕೆಂದರೆ ಹಾಗೆ ಬಂಧನಕ್ಕೆ ತೆತ್ತುಕೊಳ್ಳುವವರಿಗಷ್ಟೆ ನಿರೀಕ್ಷೆಯ ಹಕ್ಕು ಇರುತ್ತದೆ. ’ನೋ ಬೈಂಡಿಂಗ್ಸ್’ ಎನ್ನುವುದು ಒಬ್ಬರಿಗೆ ಮಾತ್ರವಲ್ಲ, ಇಬ್ಬರಿಗೂ ಜಾರಿಯಾಗುತ್ತದೆ. ಹಾಗೆ ಒಬ್ಬರು ಆ ಹಕ್ಕನ್ನು ಚಲಾಯಿಸುವಾಗ, ಇನ್ನೊಬ್ಬರು ಅದನ್ನು ತಡೆದುಕೊಳ್ಳಲು, ಒಪ್ಪಿಕೊಳ್ಳಲು ಎಷ್ಟರ ಮಟ್ಟಿಗೆ ಸಾಧ್ಯ ಎನ್ನುವುದರ ಮೇಲೆ ಈ ಒಪ್ಪಂದದ ತಾಕತ್ತು ನಿಂತಿದೆ. ಒಂಟಿ ಬದುಕು ತಪ್ಪಲ್ಲ. ಅದರೆ ಅಲ್ಲಿ ’ಕಂಡಿಶನ್ಸ್ ಅಪ್ಲೈ’ ಎಂದು ಹೇಳಲಾಗುವುದಿಲ್ಲ. ಅದೊಂದು ಟೋಟಲ್ ಪ್ಯಾಕೇಜ್. ಬೆಳಗ್ಗೆ ತಾನೆ ಓದಿದ ಬಸವರಾಜ ಸೂಳಿಭಾವಿ ಅವರ ಸಾಲುಗಳು ನೆನಪಾಗುತ್ತಿವೆ, “ಬೇಲಿಗೂ ಒಂದು ಕಡೆ ಬಾಗಿಲಿರುವುದನ್ನು ಕಂಡಿದ್ದೇನೆ, ತೆರೆದ ಬಾಗಿಲಿಗೂ ಬೇಲಿ ಅಂಟಿರುವುದನ್ನು ನಾನು ನೋಡಿದ್ದೇನೆ”. ಎಲ್ಲ ಬಿಟ್ಟ ಬುದ್ಧನಿಗೆ ತಥಾಗತನಾಗುವ ಬಯಕೆಯ ಬಂಧನ ಇತ್ತು.
ಇದೆಲ್ಲಾ ನೋಡುತ್ತಿರುವಾಗಲೇ ನನ್ನ ಮನಸ್ಸಿಗೆ ಬಂದ ಇನ್ನೊಂದು ಪ್ರಶ್ನೆ, ಆರ್ಥಿಕವಾಗಿ, ಸಾಮಾಜಿಕವಾಗಿ, ಬೌದ್ಧಿಕವಾಗಿ ಇಷ್ಟೊಂದು ಬಲಶಾಲಿಗಳಾದ ನಾವು ನಮ್ಮ ಹಿಂದಿನ ತಲೆಮಾರಿಗಿಂತ ಮಾನಸಿಕವಾಗಿ ದುರ್ಬಲರಾಗಿದ್ದೇವಾ? ಜೀವನ ನಮಗೆ ಒಡ್ಡುವ ಸವಾಲುಗಳ ಹೆದರಿಕೆಯಲ್ಲಿ ಅತ್ಯಂತ ರಕ್ಷಣಾತ್ಮಕವಾಗಿ ಆಡುತ್ತಾ ಆಡುತ್ತಾ ಬದಲಾವಣೆಗೆ, ಸವಾಲಿಗೆ ನಮ್ಮನ್ನು ಒಡ್ಡಿಕೊಳ್ಳಲು ಹಿಂಜರೆಯುತ್ತಿದ್ದೇವಾ? ಹೇಗೇ ಇರಲಿ ಬದುಕನ್ನು ಕಟ್ಟಿಕೊಳ್ಳುವ ಛಲ ಮತ್ತು ಬದುಕನ್ನು ಒಗ್ಗಿಸಿಕೊಳ್ಳುವ ಅಥವಾ ತಾವೇ ಅದಕ್ಕೆ ಒಗ್ಗಿಕೊಳ್ಳುವ ಸಹಿಷ್ಣುತೆ ಎರಡೂ ಅವರಿಗೆ ಹೆಚ್ಚಾಗಿದ್ದವಾ? ಈ ಪ್ರಶ್ನೆ ನನಗೆ ಮೂಡಿದ್ದು ಭಾರ್ಗವಿ ನಾರಾಯಣ್ ಅವರ ಆತ್ಮ ಚರಿತ್ರೆ ಓದುವಾಗ. ನಿಜ ಹೇಳಬೇಕೆಂದರೆ ಇಂದಿನವರಿಗಿಂತ ಹೆಚ್ಚು ಸ್ವಾವಲಂಬಿ ಆಕೆ ಅನ್ನಿಸಿಬಿಟ್ಟರು ನನಗೆ. ಆದರೆ ಈಗ ’ನನಗೆ ಒಗ್ಗಬೇಕು’ ಅನ್ನುವ ಹಠ ಮತ್ತು ಸೀಮಿತ ನೋಟ ನಮ್ಮನ್ನು ಹೆಚ್ಚು ದುರ್ಬಲರನ್ನಾಗಿಸುತ್ತಿದೆಯಾ?
ಮದುವೆ ನಂತರ ಹೆಂಡತಿ ಮನೆಯ ಹೊಸಿಲು ದಾಟಬಾರದು ಎನ್ನುತ್ತಿದ್ದವರೂ ಸಹ ಹೆಣ್ಣಿಗೆ ನೃತ್ಯ ಬರುತ್ತಾ, ಸಂಗೀತ ಬರುತ್ತಾ ಎಂದು ಕೇಳುತ್ತಿದ್ದರು. ಈಗ ಮದುವೆಗೇ ಮೊದಲೇ ಹುಡುಗಿ ನೇರವಾಗಿ ’ನನ್ನ ದೃಷ್ಟಿಯಲ್ಲಿ ಸಂಸಾರ ಅಂದರೆ ಗಂಡ, ಹೆಂಡತಿ, ಮಕ್ಕಳು ಮಾತ್ರ, ಮುಂದೆ ತೊಂದರೆ ಆಗಬಾರದು ಅಂತ ಈಗಲೇ ಹೇಳ್ತಾ ಇದ್ದೀನಿ’ ಅಂತಾಳೆ. ಅದು ಅವರ ನಿರೀಕ್ಷೆ ಮತ್ತು ಸ್ಪೆಸಿಫಿಕೇಶನ್. ಅದನ್ನು ಹೇಳಲೂ ಅವರಿಗೆ ಸಂಕೋಚವಿಲ್ಲ, ಅದು ಪೂರೈಕೆ ಆಗದಿದ್ದರೆ ಕಾಯಲೂ ಅವರು ಸಿದ್ಧರು. ಆದರೆ ಅವರ ನಿರೀಕ್ಷೆಗೆ ಒಂದಿಂಚು ಅತ್ತಿತ್ತಾದರೂ ಆ ಒತ್ತಡ ಅವರಿಗೆ ಬೇಡ. ಏನಾದರೂ ಕೆಟ್ಟರೆ ಅದನ್ನು ರಿಪೇರಿ ಮಾಡುವ ಶ್ರಮಕ್ಕೆ ಹೋಲಿಸಿದರೆ, ಅದನ್ನು ಎಸೆದು ಹೊಸತಕ್ಕೆ ಕೈಚಾಚುವುದು ಲೇಸು ಎನ್ನುವ ಮನೋಭಾವದ ಸಮಯ ಇದು.
ಚಿಕ್ಕ ವಯಸ್ಸಿನವರು ಒಂಟಿ ಬದುಕನ್ನು ಸ್ವಾಗತಿಸುವ ಈ ದಿನಮಾನದಲ್ಲೇ ನಾವು, ವಯಸ್ಸಾದವರು, ವಿಧವೆ-ವಿಧುರರು ವಯಸ್ಸಿನ ಹಂಗು ಮೀರಿ ಮರು ಮದುವೆಯಾಗುವ ಉದಾಹರಣೆಗಳನ್ನೂ ನೋಡುತ್ತಿದ್ದೇವೆ. ಸಾಂಗತ್ಯದ ಬಯಕೆ ಮತ್ತು ಅದಕ್ಕಾಗಿ ಬೇರೆಲ್ಲವನ್ನೂ ಎದುರಿಸುವ ಧೈರ್ಯ ಎರಡೂ ಅವರಲ್ಲಿದೆ ಅನ್ನಿಸುತ್ತದೆ.
ಆದರೆ ನನ್ನ ಗ್ರಹಿಕೆಯ ಆಧಾರದ ಮೇಲೆ ನಾನು ಒಂಟಿ ಉಳಿಯಬಯಸುವವರನ್ನು ಅಳೆಯುವುದು ಎಷ್ಟು ಸರಿ ಅನ್ನಿಸುತ್ತದೆ. ಒಂಟಿತನವನ್ನು ಎದುರಿಸುವ ಧೈರ್ಯ ಈಗಿನ ಜನಾಂಗದವರಲ್ಲಿ ಹೆಚ್ಚು, ಅದಕ್ಕೆ ಬೆಲೆ ತೆರಲೂ ಅವರು ಸಿದ್ಧ ಎನ್ನುವುದು ಸಹಾ ಅಷ್ಟೇ ಸತ್ಯ ಅಲ್ಲವಾ? ಅಥವಾ ಮದುವೆಯನ್ನು ಅತ್ಯಂತ ಸೀರಿಯಸ್ ಆಗಿ ಇವರು ತಗೊಂಡಿದಾರೆ, ಹಾಗಾಗಿ ಅದನ್ನು ನೂರಕ್ಕೆ ನೂರು ಪಾಲಿಸುವ ಬಧ್ಹತೆ ಇದ್ದರೆ ಮಾತ್ರ ಮದುವೆಯಾಗಬೇಕು ಅಂತಿದ್ದಾರೆ ಅಂತ ಸಹ ಹೇಳಬಹುದಾ?
ತಮ್ಮ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಹಕ್ಕು ಎಲ್ಲರಿಗೂ ಇರುತ್ತದೆ. ಆದರೆ ಹಾಗೆ ಕಟ್ಟಿಕೊಳ್ಳುವ ಬದುಕಿಗೆ ತಾವೇ ಜವಾಬ್ದಾರರು ಎನ್ನುವ ಎಚ್ಚರ ಇರಬೇಕು ಅಷ್ಟೇ. ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯದ ಜೊತೆ ಜೊತೆಯಲ್ಲಿಯೇ ಅದರ ಪರಿಣಾಮಗಳನ್ನು ಹೊರಬೇಕಾದ ಹೊಣೆಯೂ ಇರುತ್ತದೆ. ’ಎಂದು ನೋಯದೆ ಇರಲಿ ತಪ್ಪಿದುದಕೆ, ಒಗ್ಗಿಕೊಳುವುದೆ ರೀತಿ ಒಪ್ಪಿದುದಕೆ…’

‍ಲೇಖಕರು avadhi

August 23, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

24 ಪ್ರತಿಕ್ರಿಯೆಗಳು

  1. sunil

    Exactly
    ಬದುಕು ಈಗ ಉದಾತ್ತ ಅನುಭವ ಕೊಡುತ್ತಿದೆ.
    We have many choices, we can be deviant, we have economical strength etc..,
    for singles I think life is as normal as other’s. But a sort of insecurity and physical security to be considered when one decides to b single.

    ಪ್ರತಿಕ್ರಿಯೆ
  2. anu pavanje

    ಸ೦ಧ್ಯಾ…..ಬರಹ ತು೦ಬಾ ಇಷ್ಟವಾಯ್ತು….ನಮ್ಮನಮ್ಮ ಬದುಕು ಕಟ್ಟಿಕೊಳ್ಳೋ ಹಕ್ಕು ನಮಗೆ ಇದೆ ಎ೦ದಾದರೆ ಆ ಬದುಕಿಗೆ ಸ೦ಪೂರ್ಣವಾಗಿ ನಾವೇ ಜವಾಬ್ದಾರರು ಅನ್ನೊ ಎಚ್ಚರ ನಮಗಿದ್ದರೆ ಎಲ್ಲವೂ ಸಸೂತ್ರ…. !
    ಮದುವೆ ಎ೦ಬ ಒ೦ದು ವಿಷಯದಲ್ಲಿ ನಾ ನನ್ನ ಹಕ್ಕು ಚಲಾಯಿಸಲಿಲ್ಲ….ಅಷ್ಟೇ….. ನ೦ತರ ಕಳೆದು ಹೋದ ದಿನಗಳಲ್ಲಿ ನೀ ಹೇಳಿದ ಎಲ್ಲಾ ಘಟ್ಟಗಳೂ ಬ೦ದು ಹೋದವು…ಆಯಾಯ ಘಟ್ಟಗಳು ಅವುಗಳದ್ದೇ ಆದ ಖುಶಿ ಮತ್ತು ಬೇಸರ ಕೊಟ್ಟಿವೆ…ಎಲ್ಲಾ ದಿನಗಳಿಗೂ ನಾನೇ ಜವಾಬ್ದಾರಳು ಆದ ಮೇಲೆ ಈಗ ಬದುಕು ತು೦ಬಾ ಸು೦ದರವಾಗಿದೆ….ತು೦ಬಾ ತು೦ಬಾ ಸು೦ದರವಾಗಿದೆ…. 🙂

    ಪ್ರತಿಕ್ರಿಯೆ
  3. Raghunandan K

    ಹೊಸ ಸಾಮಾಜಿಕತೆಯಡೆಗೆ ಬದಲಾವಣೆಯೆಡೆಗೆ ತುಡಿತ, ಹಳೆದನ್ನ ಮೀರಲಾಗದ ಸೆಳೆತ…
    ಇಷ್ಟವಾಯಿತು ಬರಹ.

    ಪ್ರತಿಕ್ರಿಯೆ
  4. sujathalokesh

    ಮದುವೆ , ಮಕ್ಕಳು, ಸೆಕ್ಸ್ ಇದರಲ್ಲೇ ಸುಖ ಇರೋದಾ !!!!! ಬಂಧನಗಳ ಹೊರತಾಗಿಯೂ ಬದುಕಬಹುದು, ಏನೋ ತಾವು ಬಯಸಿದ್ದನ್ನು ಸಾಧಿಸುವುದರಲ್ಲಿ ಸಂತೋಷ ಸಿಗುತ್ತೆ ಎಂದು ಹೊರಡುವ ಮಂದಿಗೆ ನನ್ನ ಮೆಚ್ಚುಗೆ ಇದೆ.

    ಪ್ರತಿಕ್ರಿಯೆ
  5. umasekhar

    ide matugalu kelavu hennu makkalinda kelidde. nee bareda hage avarella it company products. lekhana tumba chennagide.

    ಪ್ರತಿಕ್ರಿಯೆ
  6. sandhya

    We are still not there ! some class/section of people are gradually accepting this…still a long way to go !

    ಪ್ರತಿಕ್ರಿಯೆ
  7. Shwetha Hosabale

    “ಗೋಡೆಗಳಿಲ್ಲದ ಸಂಬಂಧಕ್ಕೆ ಪಾಯಗಳ ಅಗತ್ಯವೂ ಇರುವುದಿಲ್ಲ. ಇರುವುದು ಕೇವಲ ಕಿಟಕಿ ಮತ್ತು ಬಾಗಿಲುಗಳು” – ತುಂಬಾ ಇಷ್ಟವಾದ ಸಾಲುಗಳು…ಮದ್ವೆ/ಲಿವ್ ಇನ್/ ಅಥವಾ ಒಂಟಿ ಜೀವನ ಯಾವುದಾದ್ರೂ ಸರಿ, ಆದ್ರೆ ಬದುಕು ನಾವಿಷ್ಟಪಟ್ಟಂತೆ ಬಾಳುವ ಹಾಗಿರಬೇಕು, ಒತ್ತಡದಲ್ಲಿ ಖುಷಿಯಿಲ್ಲ.

    ಪ್ರತಿಕ್ರಿಯೆ
  8. ಪ್ರಮೋದ್

    “ಮನುಷ್ಯನೊಬ್ಬ ಸ೦ಘ ಜೀವಿ” ಅ೦ತಾ ಇಪ್ಪತ್ತು ವರ್ಷಗಳ ಹಿ೦ದೆ ಪ್ರೈಮರಿಯಲ್ಲಿದ್ದಾಗ ಓದಿದ್ದು ಈಗ “ಮನುಷ್ಯನೊಬ್ಬ ಒ೦ಟಿ ಜೀವಿ” ಅ೦ತಾ ಡೆಫಿನೇಶನ್ ಬದಲಾಯಿಸುವ ಕಾಲ ಬ೦ದಿದೆ 😀 .. 🙁

    ಪ್ರತಿಕ್ರಿಯೆ
  9. shobhavenkatesh

    bhoota kala ,vartamana kalada badukina chitrana anavaranagoliside nimma ee lekhana. head lineuu ishtavaithu sandhya. nimma lekhanakke yeduru noduthiruthene.

    ಪ್ರತಿಕ್ರಿಯೆ
  10. yash

    ತಮ್ಮ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಹಕ್ಕು ಎಲ್ಲರಿಗೂ ಇರುತ್ತದೆ. ಆದರೆ ಹಾಗೆ ಕಟ್ಟಿಕೊಳ್ಳುವ ಬದುಕಿಗೆ ತಾವೇ ಜವಾಬ್ದಾರರು ಎನ್ನುವ ಎಚ್ಚರ ಇರಬೇಕು ಅಷ್ಟೇ… ಇಷ್ಟವಾಯಿತು.

    ಪ್ರತಿಕ್ರಿಯೆ
  11. ಶಮ, ನಂದಿಬೆಟ್ಟ

    “ಜೀವನ ನಮಗೆ ಒಡ್ಡುವ ಸವಾಲುಗಳ ಹೆದರಿಕೆಯಲ್ಲಿ ಅತ್ಯಂತ ರಕ್ಷಣಾತ್ಮಕವಾಗಿ ಆಡುತ್ತಾ ಆಡುತ್ತಾ ಬದಲಾವಣೆಗೆ, ಸವಾಲಿಗೆ ನಮ್ಮನ್ನು ಒಡ್ಡಿಕೊಳ್ಳಲು ಹಿಂಜರೆಯುತ್ತಿದ್ದೇವಾ?” ನನಗನ್ನಿಸಿದಂತೆ ಹೌದು..
    “ಮತ್ತು ತಮ್ಮ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಹಕ್ಕು ಎಲ್ಲರಿಗೂ ಇರುತ್ತದೆ. ಆದರೆ ಹಾಗೆ ಕಟ್ಟಿಕೊಳ್ಳುವ ಬದುಕಿಗೆ ತಾವೇ ಜವಾಬ್ದಾರರು ಎನ್ನುವ ಎಚ್ಚರ ಇರಬೇಕು ಅಷ್ಟೇ… ” ಇದಂತೂ 100000000000000% ಸತ್ಯ ಮತ್ತು ಆ ಅರಿವಿದ್ದಾಗ ಮಾತ್ರ ಬಾಳು ಸುಂದರ.

    ಪ್ರತಿಕ್ರಿಯೆ
  12. Srinidhi Rao

    ತಮ್ಮ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಹಕ್ಕು ಎಲ್ಲರಿಗೂ ಇರುತ್ತದೆ. ಆದರೆ ಹಾಗೆ ಕಟ್ಟಿಕೊಳ್ಳುವ ಬದುಕಿಗೆ ತಾವೇ ಜವಾಬ್ದಾರರು ಎನ್ನುವ ಎಚ್ಚರ ಇರಬೇಕು ಅಷ್ಟೇ.
    ತು೦ಬ ಇಷ್ಟವಾಯಿತು ೪ ಸಲ ಓದಿದೆ

    ಪ್ರತಿಕ್ರಿಯೆ
  13. Ramesh

    “ಗೋಡೆಗಳಿಲ್ಲದ ಸಂಬಂಧಕ್ಕೆ ಪಾಯಗಳ ಅಗತ್ಯವೂ ಇರುವುದಿಲ್ಲ” ತುಂಬಾ ಇಷ್ಟವಾದ ಸಾಲು. ವ್ಯಕ್ತಿತ್ವ, ವ್ಯಕ್ತಿ ಸ್ವಾತಂತ್ರ್ಯದ ಆಧುನಿಕ ಸ್ವರೂಪ,ತಲ್ಲಣಗಳನ್ನು ಬಹಳ ಪರಿಣಾಮಕಾರಿಯಾಗಿ ಲೇಖನ ಚಿತ್ರಿಸುತ್ತೆ. ವಿವರಣೆಗಳಿಗೆ ನಿಲುವಿನ ಮುದ್ರೆ ಒತ್ತದೆ ತಟಸ್ಥವಾಗಿ ನಿಲ್ಲುವುದು ಬರವಣಿಗೆಯ ಶಕ್ತಿ. ಅತ್ಯುತ್ತಮ ಬರಹ.

    ಪ್ರತಿಕ್ರಿಯೆ
  14. Anuradha.B.Rao

    ಒಂಟಿ ಬದುಕು ಬೈ Chance ಅಥವಾ ಬೈ Choice?.. ಎರಡೂ ಹೌದು ಅನ್ನಿಸುತ್ತದೆ . ತಮ್ಮ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಹಕ್ಕು ಎಲ್ಲರಿಗೂ ಇರುತ್ತದೆ. ಆದರೆ ಹಾಗೆ ಕಟ್ಟಿಕೊಳ್ಳುವ ಬದುಕಿಗೆ ತಾವೇ ಜವಾಬ್ದಾರರು ಎನ್ನುವ ಎಚ್ಚರ ಇರಬೇಕು ಅಷ್ಟೇ. ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯದ ಜೊತೆ ಜೊತೆಯಲ್ಲಿಯೇ ಅದರ ಪರಿಣಾಮಗಳನ್ನು ಹೊರಬೇಕಾದ ಹೊಣೆಯೂ ಇರುತ್ತದೆ. ’ಎಂದು ನೋಯದೆ ಇರಲಿ ತಪ್ಪಿದುದಕೆ, ಒಗ್ಗಿಕೊಳುವುದೆ ರೀತಿ ಒಪ್ಪಿದುದಕೆ…’. Excellent..ಸಂಧ್ಯಾ . ಅಭಿನಂದನೆಗಳು .

    ಪ್ರತಿಕ್ರಿಯೆ
  15. vasanth

    Very good article. I am in the same situation. Unable to decide on marriage. I had similar thoughts in my head. Walking on the double-edged sword.
    Thanks for very good article.

    ಪ್ರತಿಕ್ರಿಯೆ
  16. vanamala

    ಆರ್ಥಿಕವಾಗಿ, ಸಾಮಾಜಿಕವಾಗಿ, ಬೌದ್ಧಿಕವಾಗಿ ಇಷ್ಟೊಂದು ಬಲಶಾಲಿಗಳಾದ ನಾವು ನಮ್ಮ ಹಿಂದಿನ ತಲೆಮಾರಿಗಿಂತ ಮಾನಸಿಕವಾಗಿ ದುರ್ಬಲರಾಗಿದ್ದೇವಾ? – ಹೌದು ಅನ್ನಿಸ್ತಾ ಇದೆ.
    ಇದೇ ಮಾನಸಿಕ ಸ್ಥೈರ್ಯವನ್ನು ಈಗ ನಾವು ನಮ್ಮ ಮಕ್ಕಳಿಗೆ ಕಟ್ಟಿ ಕೊಡಬೇಕು…. ಆಗ ಎಲ್ಲಾ ಸರಿಯಾಗುತ್ತದೆ.

    ಪ್ರತಿಕ್ರಿಯೆ
  17. Chalam

    ಸಂದ್ಯಾ ಮೇಡಮ್‌ ನನ್‌ ಸಮಸ್ಯೆ ನಿಮಗೆ ಹೇಗೆ ಗೊತ್ತಾಗುತ್ತೆ…ತುಂಬಾ ಇಷ್ಟವಾಯ್ತು.

    ಪ್ರತಿಕ್ರಿಯೆ
  18. ಸಂಧ್ಯಾರಾಣಿ

    ಬರಹಕ್ಕೆ ಸ್ಪಂದಿಸಿದ ನಿಮಗೆಲ್ಲಾ ನನ್ನ ವಂದನೆಗಳು 🙂 ಇಂತಹ ಸೂಕ್ಷ್ಮ ವಿಷಯಗಳನ್ನು ಬರೆದಾಗ ಸಿಗುವ ನಿಮ್ಮ ಸಂವೇದನೆಗೆ ನನ್ನ ಸಲಾಂ …

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: