ಸಂಧ್ಯಾರಾಣಿ ಕಾಲಂ : ಈ ಹುಡುಗನ ಕಣ್ಣುಗಳಲ್ಲಿನ್ನು ಕನಸುಗಳು ಮನೆ ಮಾಡಲಿ


ಆಗಾಗ ಕೆ ಎಚ್ ಕಲಾಸೌಧದಲ್ಲಿ, ರಂಗಶಂಕರದಲ್ಲಿ ಆ ಹುಡುಗನನ್ನು ನೋಡುತ್ತಿದ್ದೆ, ಒಮ್ಮೊಮ್ಮೆ ರಂಗದ ಮೇಲೆ, ಕೆಲವೊಮ್ಮೆ ರಂಗಮಂದಿರದ ಹೊರಗೆ. ಸಂಕೋಚದ ಹುಡುಗ, ಕಣ್ಣಲ್ಲಿ ಒಂದು ಮೌನದ ಮೂಟೆ. ಮೌನವೆಂದರೆ ಮೌನವಲ್ಲ, ನಿಶ್ಯಬ್ಧದಾಚೆಗಿನ ನಿಸ್ಸೀಮ ಮೌನದಂತದ್ದು. ಅಲ್ಲಿದ್ದದ್ದು ನೋವೋ, ವಿಷಾದವೋ ಅರ್ಥವಾಗುತ್ತಿರಲಿಲ್ಲ, ಕೇಳುವಷ್ಟು ಪರಿಚಯವಾಗಲೀ, ಸ್ನೇಹವಾಗಲೀ ಇರಲಿಲ್ಲ. ಆದರೆ ಆ ಮುಖವನ್ನು ಸುಲಭವಾಗಿ ಮರೆಯಲಾಗಿರಲಿಲ್ಲ. ಆ ನಂತರ ಮೊನ್ನೆ ಮೊನ್ನೆ ನಡೆದ ಬೆಂಗಳೂರಿನ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಹಬ್ಬದೂಟ ಉಂಡಂತೆ ದಿನಕ್ಕೆ ಮೂರು-ನಾಲ್ಕು ಚಿತ್ರ ನೋಡುವಾಗ ಪಟ್ಟಿಯಲ್ಲಿ ಕನ್ನಡ ಚಿತ್ರದ ಹೆಸರು ನೋಡಿ ಅಲ್ಲಿಗೆ ಹೋಗಿ ಕೂತೆ. ಆ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನೇ ಕೇಳಿದ್ದೆ. ಚಿತ್ರ ಶುರುವಾದಾಗ ಆ ಅದೇ ಹುಡುಗ ತೆರೆಯ ಮೇಲೆ ಕಂಡಿದ್ದ. ಚಿತ್ರದ ಹೆಸರು ’ಹರಿವು’, ಆ ಹುಡುಗ ಸಂಚಾರಿ ವಿಜಯ್.
ಡಾ ಆಶಾ ಬೆನಕಪ್ಪ ಅವರ ಬರಹವನ್ನಾಧರಿಸಿ ಮಾಡಿದ್ದ ಚಿತ್ರ ಅದು. ಮಂಸೋರೆ ಚಿತ್ರಕ್ಕೊಂದು ವಿಶಿಷ್ಟವಾದ ವಲಯವನ್ನು ನಿರ್ಮಿಸಿದ್ದರು. ನನ್ನನ್ನು ನೋಡಿದ ಕೂಡಲೇ ಆಕರ್ಷಿಸಿದ್ದು ಚಿತ್ರದ ಛಾಯಾಗ್ರಹಣ ಮತ್ತು ಧ್ವನಿ. ಮಹಾನಗರದ ಎಲ್ಲಾ ಪದರಗಳನ್ನೂ, ಅದು ಒಡ್ಡುವ ಎಲ್ಲಾ ಸಂಕೀರ್ಣತೆಯನ್ನೂ ಸೆರೆ ಹಿಡಿದಿದ್ದಂತಹ ಧ್ವನಿ ಚಿತ್ರದುದ್ದಕ್ಕೂ ಇತ್ತು. ನೀವು ಗಮನಿಸಿ ನೋಡಿ, ಹಳ್ಳಿಗಳ ಮೌನಕ್ಕಿದ್ದಂತೆ ಮಹಾ ನಗರಗಳ ನಿಶ್ಯಬ್ಧಕ್ಕೂ ಒಂದು ದನಿ ಮತ್ತು ಧ್ವನಿ ಇರುತ್ತದೆ. ಅದು ಹೊಸದಾಗಿ ಬಂದವರಿಗೆ ಗಾಬರಿಯನ್ನೂ, ಬಿಟ್ಟು ಹೋಗಿ ಮತ್ತೆ ಬಂದವರಿಗೆ ನೆನಪಿನ ನಿರಾಳತೆಯನ್ನು, ಇಲ್ಲೇ ಇರುವವರಿಗೆ ಇದ್ದೂ ಕಾಣಿಸದ ಪರಿಚಯವನ್ನೂ ಒದಗಿಸುತ್ತಿರುತ್ತದೆ. ಹಾಗೆ ಚಿತ್ರದ ತಾಂತ್ರಿಕ ಅಂಶಗಳನ್ನು ಇಷ್ಟ ಪಡುತ್ತಿದ್ದಾಗಲೇ ವಿಜಯ್ ತಮ್ಮ ನಟನೆಯಿಂದ ಎಲ್ಲವನ್ನೂ ಮರೆಸುತ್ತಾ ಹೋದರು. ಚಿತ್ರ ಮುಗಿದಾಗ ಮನದಲ್ಲಿ ಉಳಿದದ್ದು ಮನೆಯಲ್ಲೊಬ್ಬರು ತೀರಿಹೋದಾಗ ಮನದಲ್ಲಿ ಉಳಿಯುವ ಮರುಭೂಮಿಯ ಖಾಲಿತನ.
ಅದೊಂದು ಹಳ್ಳಿಗಾಡಿನ ಸಂಸಾರ, ಸುಖವಲ್ಲದಿದ್ದರೂ ಸಂತೋಷದಿಂದ ಇದ್ದ ಗಂಡ-ಹೆಂಡತಿ-ಮಗು. ಹೀಗಿರುವಾಗ ಮಗುವಿನ ಅನಾರೋಗ್ಯ ಮನೆಯಲ್ಲಿ ಬಿರುಗಾಳಿ ಎಬ್ಬಿಸುತ್ತದೆ. ಚಿಕಿತ್ಸೆ ಕೊಡಿಸಿದರೆ ಮಗು ಉಳಿಯಬಹುದು ಎನ್ನುವ ಒಂದೇ ಆಸೆ, ಅಂಗೈ ಅಗಲದ ಜಮೀನು ಮಾರಿ ಅಪ್ಪ ಮಗುವನ್ನು ಹೆಗಲ ಮೇಲೆ ಹೊತ್ತು, ಸ್ಟೌ, ಪಾತ್ರೆ, ಪಗಡಿಯ ಮೂಟೆ ಹೊತ್ತು ನಗರದ ಹಾದಿ ಹಿಡಿಯುವಂತೆ ಮಾಡುತ್ತದೆ. ಅದೊಂದು ಚಿಕ್ಕ ವಿವರ, ಹಳ್ಳಿಯಿಂದ ನಗರಕ್ಕೆ ಬರುವವರು, ಇಲ್ಲಿ ಯಾರೂ ನೆಂಟರಿಲ್ಲದಾಗ ಅಡಿಗೆ ಮಾಡಿಕೊಳ್ಳಲು ಸ್ಟೌವ್ ತರುತ್ತಾರೆ, ಹೋಟಲಿಗೆ ಹೋಗುವ ಖರ್ಚು, ಚಿಕಿತ್ಸೆಗಾದೀತು ಎಂದು ಯೋಚಿಸಿ. ಆ ವಿವರವನ್ನೂ ಗಮನಿಸಿ ಜೋಡಿಸಿರುವ ಚೊಕ್ಕ ಚಿತ್ರ ಅದು. ಅಲ್ಲಿ ಚಿಕಿತ್ಸೆಗೆ ತಂದೆ ಪಡುವ ಪರಿಪಾಟಲು, ಮೌನದಲ್ಲೇ ಆತ ನವೆಯುವ ರೀತಿ ಮನಸ್ಸನ್ನು ಹಿಂಡಿ ಹಾಕುತ್ತದೆ. ಅಪ್ಪನಂತೆ, ಅಮ್ಮನಂತೆ ಆತ ಮಗನನ್ನು ಕಾಯುತ್ತಾನೆ.
ಅಲ್ಲೇ ಅದೇ ಆಸ್ಪತ್ರೆಯಲ್ಲೇ ಇನ್ನೊಂದು ಕುಟುಂಬದ ಕಥೆಯೂ ಇದೆ. ಇಲ್ಲಿ ಆಸ್ಪತ್ರೆಯಲ್ಲಿರುವುದು ವಯಸ್ಸಾದ ತಂದೆ. ಮಗ ರಾತ್ರಿ ಆಸ್ಪತ್ರೆಯಲ್ಲಿ ಉಳಿಯಲಿಕ್ಕೆ ಬಂದು ಬೆಳಗ್ಗೆ ವಾಪಸ್ಸು ಕೆಲಸಕ್ಕೆ ಹೋಗುತ್ತಾನೆ. ಅವನೂ ಕೆಟ್ಟವನಲ್ಲ, ಅಪ್ಪನನ್ನು ನೋಡಿಕೊಳ್ಳುವ ಕರ್ತವ್ಯವನ್ನು ಒಪ್ಪಿಕೊಂಡೇ ನಿರ್ವಹಿಸುತ್ತಿರುತ್ತಾನೆ, ’ಕರ್ತವ್ಯ’ ಎಂದೇ ನಿರ್ವಹಿಸುತ್ತಿರುತ್ತಾನೆ. ಆ ಕರ್ತವ್ಯಕ್ಕೆ ಇನ್ನೊಂದಿಷ್ಟು ಮನಸ್ಸು ಕೊಟ್ಟು ನೋಡುವಂತೆ ಮಾಡಲು ಅವನ ಹೆಂಡತಿ ಮತ್ತು ಅಮ್ಮ ಪ್ರಯತ್ನಿಸುತ್ತಲೇ ಇದ್ದರೂ ತನ್ನ ಕೆಲಸದ ಗಡಿಬಿಡಿಯಲ್ಲಿ ಆ ಆರ್ದ್ರತೆ ಅವನಿಗೆ ಸಾಧ್ಯವಾಗುವುದಿಲ್ಲ.
ಈ ಎರಡು ಸಂದರ್ಭಗಳ ನಡುವಿನ ವೈರುಧ್ಯ ನನ್ನನ್ನು ಅಂದೂ, ಇಂದೂ ಕಾಡುತ್ತಲೇ ಇದೆ. ಇಲ್ಲ ಅದನ್ನು ಹಳ್ಳಿಗರ ಮನಸ್ಥಿತಿ, ಪಟ್ಟಣಿಗರ ಮನಸ್ಥಿತಿ ಎಂದು ಸರಳ ವರ್ಗೀಕರಣ ಮಾಡಲು ನನ್ನಿಂದಾಗುತ್ತಿಲ್ಲ. ಅದು ಅದರಾಚೆಗೂ ಇನ್ನೇನನ್ನೋ ಹೇಳುತ್ತದೆ ಅನ್ನಿಸುತ್ತೆ. ನಮ್ಮ ಮಕ್ಕಳ ಬಗೆಗಿರುವ ’ಸಂಪೂರ್ಣ’ ಹೊಣೆಗಾರಿಕೆ, ನಮ್ಮದೆಲ್ಲವನ್ನೂ ಪಣವಾಗಿಡುವ, ಬಡಿದಾಡುವ ಛಲ, ಇಡೀ ಜಗವನ್ನೇ ಅದಕ್ಕಾಗಿ ಎದುರು ಹಾಕಿಕೊಳ್ಳುವ ಹುಚ್ಚು ಧೈರ್ಯ ಯಾಕೆ ನಮ್ಮ ಅಪ್ಪ-ಅಮ್ಮನ ಬಗೆಗೆ ಬರುವುದಿಲ್ಲ? ಇಲ್ಲ, ಪ್ರೀತಿ ಇರುವುದಿಲ್ಲ ಅಂತಲ್ಲ, ಆದರೆ ನಮ್ಮದೇ ಮಕ್ಕಳ ಕುರಿತು ಇರುವಷ್ಟರ ಮಟ್ಟಿಗೆ ಅದು ಇರುತ್ತದಾ? ಅಪ್ಪ ಅಮ್ಮನ ಬಗ್ಗೆ ಇರುವ ಕರ್ತವ್ಯ ಮಕ್ಕಳ ವಿಷಯ ಬಂದರೆ ನಮ್ಮ ಜೀವದ ಅಸ್ತಿತ್ವದ ಪ್ರಶ್ನೆಯಾಗಿಬಿಡುತ್ತದೆ? ಯಾಕೆ ಅದು ಪ್ರಜ್ಞಾಪೂರಕ ಎಚ್ಚರಕ್ಕಿಂತ ಮಿಗಿಲಾಗಿ ಎದೆಯ ಬಡಿತದ ಹಾಗೆ ಅನಿವಾರ್ಯವಾಗಿಬಿಡುತ್ತದೆ? ಯಾಕೆ ನಿನ್ನೆಗಳಿಗಿಂತ ನಾಳೆಗಳು ಮುಖ್ಯವಾಗಿ ಬಿಡುತ್ತವೆ? ಇದು ನನ್ನ ಪ್ರಶ್ನೆ.

ಇರಲಿ ಮತ್ತೆ ಚಿತ್ರದ ವಿಷಯಕ್ಕೆ ಬರುವುದಾದರೆ ಚಿಕಿತ್ಸೆ ಫಲಕಾರಿ ಆಗುವುದಿಲ್ಲ, ಆಗುವ ಭರವಸೆಯನ್ನು ವೈದ್ಯರೂ ಕೊಟ್ಟಿರುವುದಿಲ್ಲ. ಈಗ ಮಗನನ್ನು ಊರಿಗೆ ಕೊಂಡೊಯ್ಯಬೇಕು, ಊರಲ್ಲಿ ಹೆಂಡತಿ ಮಗನಿಗಾಗಿ ಕಾಯುತ್ತಿದ್ದಾಳೆ. ಅವಳಿಗೆ ಮಗನ ಮುಖ ತೋರಿಸಬೇಕು. ಇವನ ಬಳಿ ಅದಕ್ಕೂ ಹಣವಿಲ್ಲ, ಜಮೀನು ಮಾರಿದ ಹಣ ಬಹುಪಾಲು ಮುಗಿದಿದೆ. ಉಳಿದ ಹಣದಲ್ಲಿ ಮಗ ಇಷ್ಟ ಪಟ್ಟಿದ್ದ ಆಟದ ಸಾಮಾನುಗಳನ್ನು ಕೊಳ್ಳುತ್ತಾನೆ. ಊರಿಗೆ ಹೋಗಲು ಗಾಡಿಗಾಗಿ ವಿಚಾರಿಸಿದರೆ ಅದು ಈತನ ಅಳವಿಗೆ ಮೀರಿದ್ದು. ಕಡೆಗೊಂದು ದೊಡ್ಡ ಟ್ರಂಕ್ ತರುತ್ತಾನೆ. ಊರಿನೆಡೆಗೆ ಇವನ ಪಯಣಕ್ಕೆ ಅಣಿಯಾಗುತ್ತಾನೆ. ಅದೇ ಸ್ಟೌ, ಪಾತ್ರೆ ಇದ್ದ ಮೂಟೆ. ಹೆಗಲ ಮೇಲಿದ್ದ ಮಗನ ಬದಲಿಗೆ ತಲೆಯ ಮೇಲೆ ಒಂದು ಟ್ರಂಕ್. ಊರಿನ ಹಾದಿಯಲ್ಲಿ ಕೂತು ಆ ದಿಕ್ಕಿಗೆ ಹೋಗುವ ಗಾಡಿಗಳಿಗೆ ಕೈ ಇಟ್ಟು ನಿಲ್ಲಿಸುತ್ತಾನೆ. ಕೆಲವು ಗಾಡಿಗಳು ಧೂಳೆಬ್ಬಿಸಿಕೊಂಡು ಹೋಗುತ್ತಲೇ ಇರುತ್ತವೆ, ಕೆಲವು ನಿಂತರೂ ’ಊರಿಗೆ ಹೋದ ಕೂಡಲೇ ನಿಮ್ ರೊಕ್ಕ ಕೊಡ್ತೀನ್ರೀ’ ಅನ್ನೋ ಇವನ ಮಾತನ್ನು ಅಪಹಾಸ್ಯ ಮಾಡಿ ಹೋಗುತ್ತಿರುತ್ತವೆ. ರಾತ್ರಿಯಾಗುತ್ತದೆ, ಅಂಗಡಿ ಪಕ್ಕದಲ್ಲಿ, ಮಹಾನಗರದಲ್ಲಿ, ಒಬ್ಬಂಟಿಯಾಗಿ, ಟ್ರಂಕನ್ನು ಅವಚಿ ಹಿಡಿದುಕೊಂಡು ಈತ ಕೂತೇ ಇರುತ್ತಾನೆ. ಕತ್ತಲು ಕವಿಯುತ್ತಾ ಹೋಗುತ್ತದೆ.
ಅಲ್ಲಿ ಇನ್ನೊಂದು ಸಂಸಾರವಿತ್ತಲ್ಲ, ಅಲ್ಲಿ ಆ ಹಿರಿಯ ಮಗ ಇನ್ನು ಕೆಲಸಕ್ಕೆ ಹೊರಟು ಹೋಗಿಬಿಡುತ್ತಾನೇನೋ ಎನ್ನುವ ಅವಸರಕ್ಕೆ ಏನೋ ಮಾತನಾಡಲು ಹೋಗಿ ನೆತ್ತಿ ಹತ್ತಿ, ಬಾಯಲ್ಲಿಯ ಅಗುಳು ಮಗನ ಮೇಲೆ ಸಿಡುತ್ತದೆ, ಮಗ ಸಿಡಿದೇ ಬಿಡುತ್ತಾನೆ. ಕೂಗಾಡಿ ಹೊರಡುತ್ತಾನೆ, ಬದಿಗೆ ತಿರುಗಿ ಮಲಗಿದ ವಯಸ್ಸಾದ ಅಪ್ಪನ ಕಣ್ಣಲ್ಲಿ ಸದ್ದಿಲ್ಲದೆ ಹನಿಗಳು ಉದುರುತ್ತಲೇ ಇರುತ್ತವೆ.
ಮಗನಿಗೆ ಕೆಲಸದ ಮೇಲೆ ತನ್ನ ಯೂನಿಟ್ ಜೊತೆ ಹೊರಗೆ ಹೋಗಬೇಕಾಗುತ್ತದೆ. ಹೊರಡುತ್ತಾನೆ, ದಾರಿಯಲ್ಲಿ ಈ ತಂದೆ. ಅವನ ಪಾಡು ನೋಡಿ ಮನಸ್ಸು ಕರಗಿ ಅವನನ್ನೂ ಗಾಡಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ನಿಜಕ್ಕೂ ಅದೊಂದು ಮಹಾಪ್ರಸ್ಥಾನದಂತಹ ಪಯಣ. ಆ ಪಯಣದಲ್ಲಿ ಉಳಿದೆಲ್ಲರೂ ಮಾತನಾಡುತ್ತಾರೆ, ಮೌನವಾಗಿರುವುದು ತಂದೆ ಮಾತ್ರ. ಆದರೆ ಆ ಮೌನದಲ್ಲೇ ವಿಜಯ್ ಸಂವಹಿಸುವ ರೀತಿ ಅನನ್ಯ. ತನ್ನ ನೋವು, ದುಗುಡ, ಸಂಕಟ, ಹಸಿವು, ಸುಸ್ತು, ಹತಾಶೆ ಎಲ್ಲವನ್ನೂ ತೆರೆ ತೆರೆಯಾಗಿ ಕಣ್ಣುಗಳಲ್ಲಿ, ಮುಖಭಾವದಲ್ಲಿ ತೆರೆದಿಡುತ್ತಾ ಹೋಗುತ್ತಾರೆ.
ಮಗನ ಜೊತೆ ಆಡುವಾಗ ಆ ಕಣ್ಣುಗಳ ಸಂಭ್ರಮ, ನಗರ ಹಳ್ಳಿಗರ ಹೆಗಲ ಮೇಲೆ ಹೊರಿಸುವ ದೈನ್ಯ, ಆಸ್ಪತ್ರೆಯ ಕಾಂಪೌಂಡರ್ ಮೇಲಿನ ಕೋಪ, ಹಸಿವು, ದಣಿವು, ಎಲ್ಲವನ್ನೂ ತಲೆಯಮೇಲಿನ ಟ್ರಂಕಿನಂತೆ ಹೊರುತ್ತಾ, ಕಡೆಗೊಮ್ಮೆ ಮನಗೆ ವಾಪಸ್ಸಾದ ಮೇಲೆ, ಇಡೀ ಜಗದಲ್ಲಿ ತನ್ನದಾಗಿ ಉಳಿದ ಒಂದೇ ಜೀವ ಹೆಂಡತಿಯ ಮುಖ ಕಂಡದ್ದೇ ಆ ತಲೆಯ ಮೇಲಿನ ಟ್ರಂಕು, ಹೆಗಲ ಮೇಲಿನ ಹೊರೆ ಇಳಿಸಿ ಕರಗಿ ಕಣ್ಣೀರಾಗುವ ತಂದೆಯ ಪಾತ್ರದಲ್ಲಿ ವಿಜಯ್ ರನ್ನು ಎಂದೂ ಮರೆಯಲಾಗುವುದಿಲ್ಲ.
ಚಿತ್ರ ಮುಗಿದ ಮೇಲೂ, ದೀಪ ಹತ್ತಿದ ಮೇಲೂ, ಹೊರಗೆ ಬಂದ ಮೇಲೂ, ಮನೆಗೆ ಬಂದ ಮೇಲೂ ಕಾಡುವುದು ತಂದೆಯ ಮುಖದ, ಕಣ್ಣುಗಳ ಆ ಸಂಕಟ. ಆ ದಿನವೂ ವಿಜಯ್ ರನ್ನು ಅಭಿನಂದಿಸಲಾಗಿರಲಿಲ್ಲ.

ಆಮೇಲೆ ಎಷ್ಟೋ ದಿನಗಳ ನಂತರ ಲಿಂಗದೇವರು ನಿರ್ದೇಶಿಸಿ,  ಜೋಗಿ ಸಂಭಾಷಣೆ ಬರೆದಿದ್ದ ’ನಾನು ಅವನಲ್ಲ, ಅವಳು’ ಚಿತ್ರ ನೋಡಿದೆ. ಆ ಚಿತ್ರದಲ್ಲಿ ಮತ್ತೆ ಅದೇ ವಿಜಯ್. ’ಹರಿವು ’ ಚಿತ್ರದ ಪಾತ್ರ ಒಂದು ತೂಕದ್ದಾದರೆ ಇದು ಇನ್ನೂ ಆಳ. ಸಾಧಾರಣವಾಗಿ ಗಂಡು ಹೆಣ್ಣಿನ ಹಾವ ಭಾವ ನಟಿಸುವಾಗ ಅದು ಕ್ಯಾರಿಕೇಚರ್ ಆಗುವ ಅಪಾಯ ಹೆಚ್ಚು. ಆದರೆ ಎಲ್ಲೂ ಅದು ಹಾಗಾಗದಂತೆ ಅತ್ಯಂತ ಸಹಜವಾಗಿ ಆ ಪಾತ್ರವನ್ನು ತನ್ನದಾಗಿಸಿಕೊಂಡಿದ್ದರು ವಿಜಯ್. Smiling Vidya ಪುಸ್ತಕವನ್ನು ತಮಿಳ್ ಸೆಲ್ವಿ ಕನ್ನಡಕ್ಕೆ ಅನುವಾದಿಸಿ, ಆ ಕಥೆ ಚಿತ್ರವಾಗಿತ್ತು. ನಿಜ ಹೇಳಬೇಕೆಂದರೆ ಅದು ನಾನರಿಯದ ಲೋಕ.
ಗಂಡಿನ ದೇಹದಲ್ಲಿ ಸಿಕ್ಕಿಕೊಂಡ ಹೆಣ್ಣು ಜೀವ ಬಿಡುಗಡೆಗಾಗಿ, ತನ್ನ ಅಸ್ಮಿತೆಗಾಗಿ ಚಡಪಡಿಸುವ, ಹೋರಾಡುವ ಲೋಕ. ಕಥೆಯೊಂದಿಗೆ ಅನುಸಂಧಾನಕ್ಕೂ ಮೊದಲು, ಅದನ್ನು ಅರ್ಥೈಸಿಕೊಳ್ಳುವುದು ಅಗತ್ಯವಾಗಿತ್ತು. ಆ ದೇಹ ಗಂಡಿನದು, ಭಾವನೆಗಳು ಹೆಣ್ಣಿನವು, ಹೆಣ್ಣಿನ ಭಾವಕ್ಕನುಗುಣವಾಗಿ ಆ ಗಂಡು ದೇಹ ಬಾಗುವುದಿಲ್ಲ, ಬಲವಂತವಾಗಿ ಹಾಗೆ ಬಾಗಿಸಿ, ಬಳುಕಿಸಿ ಅವರ ನಡೆ-ನುಡಿ-ಹಾವಭಾವ ಇರುತ್ತದೆ. ಇನ್ನು ಆ ಪಾತ್ರದ ನಟನೆ ಮಾಡುವವರು ಅದನ್ನು ಒಂದು ಎಳೆಯಷ್ಟು ಹೆಚ್ಚು ಮಾಡಿದರೆ ಅತಿರೇಕ, ಒಂದು ಎಳೆಯಷ್ಟು ಕಡಿಮೆ ಮಾಡಿದರೆ ಸಪ್ಪೆಯಾಗಿರುತ್ತದೆ. ಅದನ್ನು ಸಮತೋಲನದಲ್ಲಿ ನಡೆಸಿಕೊಂಡು ಹೋದ ನಟನೆ ವಿಜಯ್ ದು.
ನಾನು ಮೊದಲೇ ಹೇಳಿದಂತೆ ಅದು ನಾನರಿಯದ ಲೋಕ. ನಿರ್ದೇಶಕ ಲಿಂಗದೇವರು ಆ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಹೋಗಿದ್ದರು. ಬಾಲ್ಯದಲ್ಲೇ ಅಕ್ಕನ ಬಟ್ಟೆ, ಅಲಂಕಾರದತ್ತ ಹೊರಳುವ ಆ ಪುಟ್ಟ ಹುಡುಗನ ಆಸೆಯ ಕಂಗಳು, ಕಾಲೇಜಿಗೆ ಹೋದಂತೆ ಹೆಣ್ಣು ಹೆಣ್ಣಾಗಿ ಉಳಿವ ಅವನ ನಡೆ ನುಡಿ, ಕಾಲೇಜಿನಲ್ಲಿ ಎಲ್ಲಾ ಹುಡುಗರ ಕಣ್ಣುಗಳೂ ಹುಡುಗಿಯರ ಹಿಂದೆ ಸುಳಿದರೆ, ಇವನ ಕಣ್ಣಿನಲ್ಲಿರುವುದು ತನ್ನ ಸ್ನೇಹಿತನ ತೋಳು, ಬೆನ್ನುಗಳು. ಮನೆಯಲ್ಲಿ ಅಮ್ಮನಿಗೆ ನಿರಾಸೆ, ಅಪ್ಪನಿಗೆ ಅವಮಾನ. ತನ್ನ ಮಗನಲ್ಲಿರುವ ಹೆಣ್ಣನ್ನು ಆತ ಗುರುತಿಸಲೂ ಆರ, ಒಪ್ಪಿಕೊಳ್ಳಲೂ ಆರ. ಎಲ್ಲೋ ಅದು ಆತನಿಗೆ ತನ್ನ ಸೋಲಿನಂತೆ ಕಾಣುತ್ತಿರುತ್ತದೆ. ಅಕ್ಕರೆಯಿಂದ ಕಾಣುತ್ತಿದ್ದ ಅಕ್ಕ ಮದುವೆಯಾಗಿ ಪಟ್ಟಣದಲ್ಲಿರುತ್ತಾಳೆ. ಅಕ್ಕನ ಮನೆಗೆಂದು ಪಟ್ಟಣಕ್ಕೆ ಬರುವ ಹುಡುಗನೆದುರು ಪಟ್ಟಣ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತದೆ.
ಗಮನಿಸಬೇಕಾದ ಅಂಶವೆಂದರೆ ಇಲ್ಲೂ ಸಹ ಅಕ್ಕ ಅವನನ್ನು ಸಹಿಸಿಕೊಳ್ಳುತ್ತಾಳೆ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾಳೆ ಆದರೆ ಭಾವನಿಗೆ ಅವನ ರೀತಿ ನೀತಿ ಮೊದಲು ವಿಚಿತ್ರವಾಗಿ, ನಂತರ ಅಸಹನೀಯವಾಗಿ, ಅವಮಾನವಾಗಿ ತನ್ನ ಸೋಲಾಗಿ ಕಾಣತೊಡಗುತ್ತದೆ. ಈ ಹುಡುಗನಿಗೆ ತನ್ನ ಕನಸಿನ ಮೊಟ್ಟೆಗೆ ಗುಟ್ಟಿನಲ್ಲಿ ಕಾವು ಕೊಡುವುದನ್ನು ಬಿಟ್ಟು ಬೇರೆ ಮಾರ್ಗವೇ ತಿಳಿಯುವುದಿಲ್ಲ. ಯಾವಾಗ ಮನೆಯಲ್ಲಿದ್ದರೆ ಅದು ಸಾಧ್ಯವಿಲ್ಲ ಎಂದು ತಿಳಿಯುತ್ತದೋ ಮನೆ ಬಿಟ್ಟು ಹೊರದುತ್ತಾನೆ. ಅಷ್ಟರಲ್ಲಿ ಅವನು ಸ್ನಾತಕೋತ್ತರ ಪದವೀಧರನಾಗಿರುತ್ತಾನೆ. ಆ ನಂತರ ತನ್ನತನಕ್ಕಾಗಿ, ತನ್ನ ಮನಸ್ಸಿನಲ್ಲಿನ ಹೆಣ್ಣಿಗೆ ಒಂದು ದೇಹ ಹುಡುಕುವುದರಲ್ಲಿ ಅವನು ಕ್ರಮಿಸುವ ದಾರಿ, ಎದುರಿಸುವ ಕಷ್ಟ, ಹೆಜ್ಜೆಯಿಡುವ ತೃತೀಯಲಿಂಗಿಗಳ ಜಗತ್ತು ಎಲ್ಲವನ್ನೂ ಚಿತ್ರ ಕಥೆಯಾಗಿಸುತ್ತದೆ.
ಇಲ್ಲಿಯವರೆಗೂ ಸೌಮ್ಯವಾಗಿ, ಮರೆ ಮರೆಯಲ್ಲಿ ಹೆಣ್ತನದ ಇರುವಿಕೆಯಾಗಿ ನಟಿಸುವ ಹುಡುಗ ನಂತರ ಮಾನಸಿಕವಾಗಿ ಪೂರ್ಣವಾಗಿ ತನ್ನನ್ನು ಹೆಣ್ಣಾಗಿ ಒಪ್ಪಿಕೊಳ್ಳುವುದಲ್ಲದೇ ದೈಹಿಕವಾಗಿ ಸಹ ಹೆಣ್ಣಾಗಲೂ ಹಿಜ್ರಾಗಳ ಸಮಾಜದೊಳಗೆ ಸೇರಿಕೊಳ್ಳುತ್ತಾನೆ, ಅವರ ಕಟ್ಟಳೆಯಂತೆ ಭಿಕ್ಷೇ ಬೇಡಿ ಹಣ ಸಂಗ್ರಹಿಸುತ್ತಾನೆ. ಆ ನಂತರ ದೈಹಿಕವಾಗಿ ಶಸ್ತ್ರಚಿಕಿತ್ಸೆಗೊಳಗಾಗಿ ಆತ ಹೆಣ್ಣಾಗುವುದು ಚಿತ್ರದ ಕಥೆ. ಈಗ ಆತ ’ಅವನಲ್ಲ, ಅವಳು’.
ಇಡೀ ಚಿತ್ರ ನಿರ್ಮಾಣದಲ್ಲಿ ತೃತೀಯ ಲಿಂಗಿಗಳ ಅನುಭವವನ್ನು ಅವರದೇ ಸಹಯೋಗದೊಂದಿಗೆ ಕಥನವಾಗಿಸಲಾಗಿದೆ. ಇದೆಲ್ಲಾ ಚಿತ್ರದ ತಾಂತ್ರಿಕತೆಗೆ ಸಂಬಂದಿಸಿದ ವಿಷಯ, ಆದರೆ ನಟನೆಯ ವಿಷಯಕ್ಕೆ ಬಂದರೆ ಇಡೀ ಚಿತ್ರದಲ್ಲಿ ನೆನಪಿನಲ್ಲಿ ಉಳಿಯುವುದು ವಿಜಯ್ ಅಭಿನಯ. ಹೆಣ್ಣಾಗಲು ಆತ ಅನುಭವಿಸುವ ತಹತಹ, ಹಿಜ್ರಾಗಳೊಡನೆ ಜೀವನ, ವಿದ್ಯಾವಂತನಾಗಿದ್ದೂ ಬಿಕ್ಷೆ ಬೇಡಲು ಅವನು ಅನುಭವಿಸುವ ಹಿಂಜರಿಕೆ ಎಲ್ಲಾ ಸನ್ನಿವೇಶಗಳಲ್ಲೂ ಮನಸ್ಸು ಮುಟ್ಟುವಂತೆ ಅಭಿನಯಿಸಿರುವ ವಿಜಯ್ ಎರಡು ದೃಶ್ಯಗಳಲ್ಲಿ ತಮ್ಮ ಛಾಪನ್ನೊತ್ತಿಬಿಡುತ್ತಾರೆ.
ಮೊದಲನೆಯದು ಹಿಜ್ರಾಗಳ ಮನೆಗೆ, ಅಲ್ಲೇ ಇರಲು ಹೋದಾಗ, ’ಮನೇನಾ ಹೀಗೇನಾ ಇಟ್ಕೊಳ್ಳೋದು’ ಎಂದು ಸರಳವಾಗಿ ಹೇಳಿ ಮನೆಯನ್ನು ಒಪ್ಪ ಮಾಡಲು ನಿಲ್ಲುತ್ತಾರೆ, ಅತ್ಯಂತ ಸರಳವಾಗಿ ಕಂಡರೂ ಅದರ ಸರಳತೆಯೇ ಇಡೀ ದೃಶ್ಯದ ಜೀವಾಳ. ಅಬ್ಬರವೇ ಇಲ್ಲದ ಸಹಜ ನಡವಳಿಕೆಯಲ್ಲಿ ವಿಜಯ್ ಗೆಲ್ಲುತ್ತಾರೆ. ಹಾಗೆ ಇನ್ನೊಂದು ಸನ್ನಿವೇಶ ಶಸ್ತ್ರಚಿಕಿತ್ಸೆ ಆದ ಮೇಲೆ ಟ್ರೇನಿನಲ್ಲಿ ಜನರ ಹತ್ತಿರ ಹಣ ಕೇಳುವಾಗ, ಒಬ್ಬಾತ ದೈಹಿಕ ಹಲ್ಲೆ ಮಾಡಲು ಮುಂದಾದಾಗ ಆ ಒಂದು ಕ್ಷಣದಲ್ಲಿ ಅವರ ಅಲ್ಲಿಯವರೆಗಿನ ರೊಚ್ಚೆಲ್ಲಾ ಮಾತುಗಳಾದಂತೆ ಎದಿರು ತಿರುಗಿ ನಿಲ್ಲುತ್ತಾರೆ. ಆಗ ನಾವು ಅದು ಒಂದು ಪಾತ್ರ ಎನ್ನುವುದನ್ನು ಮರೆಯುತ್ತೇವೆ ಅಷ್ಟೇ ಅಲ್ಲ, ಅಲ್ಲಿಯವರೆಗೂ ನಾವು ಈ ತೃತೀಯಲಿಂಗಿಗಳನ್ನು ನೋಡಿ ಮಾಡಿದ ತಮಾಶೆ, ಜೋಕ್ ಎಲ್ಲದರ ಬಗೆಗೂ ಲಜ್ಜಿತರಾಗಿ ಬಿಡುತ್ತೇವೆ.
ಈ ಎರಡೂ ಚಿತ್ರಗಳನ್ನು ನೋಡಿದ ಮೇಲೆ ಮತ್ತೆ ಒಮ್ಮೆ ಈ ಹುಡುಗ ಕೆ ಎಚ್ ಕಲಾಸೌಧದಲ್ಲಿ ಸಿಕ್ಕಿದ್ದ. ಅಂದು ಆತನನ್ನು ಅಭಿನಂದಿಸಲೇಬೇಕೆಂದು ಹತ್ತಿರ ಹೋದೆ, ಹುಡುಗ ಯಾರೊಂದಿಗೋ ಫೋನಿನಲ್ಲಿ ಮಾತನಾಡುತ್ತಿದ್ದ. ತೊಂದರೆ ಕೊಡಬಾರದೆಂದು, ಕೈ ಕುಲುಕಿ ಹೊರಟುಬಿಟ್ಟೆ. ಎರಡು ಚಿತ್ರಗಳಲ್ಲಿ ಅಂತಹ ಅಭಿನಯ ನೀಡಿದ ಮೇಲೂ ಹುಡುಗನ ಹುಡುಕಾಟ ನಿಂತ ಹಾಗೆ ಕಂಡಿರಲಿಲ್ಲ. ಅವನ ಅಭಿನಯಕ್ಕೆ ಗಾಂಧಿನಗರ ಬಾಗಿಲು ತೆರೆದ ಹಾಗಿರಲಿಲ್ಲ. ಯಾಕೋ ಅವನ ಕಣ್ಣುಗಳಲ್ಲಿ ಅದೇ ಸ್ಥಬ್ಧತೆ ಇತ್ತು…

ಈ ಸಲ ಪ್ರಶಸ್ತಿ ಬಂದ ಎರಡೂ ಕನ್ನಡ ಚಿತ್ರಗಳಲ್ಲು ಸಂಚಾರಿ ವಿಜಯ್ ನಟಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಉತ್ತಮ ನಟ ಪ್ರಸ್ಜಸ್ತಿ ಗಳಿಸಿ ಕನ್ನಡದ ಮಟ್ಟಿಗೆ ೨೮ ವರ್ಷಗಳ ಬರ ನೀಗಿಸಿದ್ದಾರೆ. ಅದೂ ಈ ಸಲ ಸ್ಪರ್ಧೆಯಲ್ಲಿ ಇದ್ದವರಾದರೂ ಯಾರು? ಅಮೀರ್ ಖಾನ್, ಮುಮ್ಮುಟ್ಟಿ, ಶಾಹಿದ್ ಕಪೂರ್… ಇವರೆಲ್ಲರ ಎದುರಿನಲ್ಲಿ ಮ್ಯಾಚ್ ಗೆದ್ದ ಈ ಹುಡುಗನಿಗೆ ಶುಭಾಶಯಗಳು.ವಿಜಯ್ ಪ್ರಶಸ್ತಿ ಗೆದ್ದ ವಿಷಯ ತಿಳಿಯುತ್ತಲೇ ಬಹುಶಃ ಅವನಷ್ಟೇ ಸಂಭ್ರಮಿಸಿದ ಇನ್ನೊಂದು ಜೀವ ಸಂಚಾರಿ ಮಂಗಳಾ. ಮಂಗಳ ನಿಮಗೂ ಅಭಿನಂದನೆಗಳು..
ಇನ್ನು ಮುಂದೆಯೂ ಆ ಹುಡುಗನ ಫೋನು ಬ್ಯುಸಿಯಾಗಿಯೇ ಇರಲಿ, ಇನ್ನಾದರೂ ಅವನ ಕಣ್ಣುಗಳಲ್ಲಿ ಕನಸುಗಳು ಜಾಗ ಮಾಡಿಕೊಳ್ಳಲಿ.
 

‍ಲೇಖಕರು G

March 28, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

  1. bharathi b v

    ಸಂಚಾರಿ ವಿಜಯ್ ಗೆ ಕಂಗ್ರಾಟ್ಸ್ … ನಾನು ಅವನಲ್ಲ, ಅವಳು ನೋಡಿದಾಗ ಈ ಹುಡುಗನದ್ದು ನಟನೆ ಮಾತ್ರ ಅನ್ನಿಸದಷ್ಟು ಪಾತ್ರದಲ್ಲಿ ಒಂದಾಗಿಹೋಗಿದ್ದ ಅಭಿನಯವಾಗಿತ್ತು. ಛಾಲೆಂಜಿಂಗ್ ಆದ ಪಾತ್ರಗಳು ಈ ಹುಡುಗನನ್ನು ಅರಸಿ ಬರಲಿ …
    ನೀನು ಬರೆದಿರುವುದು ಚೆನ್ನಾಗಿದೆ ಸಂಧ್ಯಾ …

    ಪ್ರತಿಕ್ರಿಯೆ
  2. rashmi

    ಎಂದಿನಂತೆ ನಿಮ್ಮ ಲೇಖನ ಸೂಪರ್. ಲೇಖನದ ಮೂಲಕ ಎರಡು ಚಿತ್ರಗಳನ್ನು ತೋರಿಸಿದಿರಿ. ಥ್ಯಾಂಕ್ಸ್…
    ಹರಿವು ಚಿತ್ರ ಪ್ರಿಮಿಯರ್ನಲ್ಲಿ ನೋಡಿದ್ದೆ. ತುಂಬಾ ಕಾಡಿದ ಚಿತ್ರ ಅದು. ಚಿತ್ರ ಮುಗಿದ ಮೇಲೆ ವಿಜಯ್ ವೇದಿಕೆಯಲ್ಲಿ ನಿಂತು ಮಾತನಾಡುವಾಗಲೂ ನನಗೆ ಸಿನಿಮಾದ ಶರಣಪ್ಪನೇ ಕಾಡ್ತಾ ಇದ್ದ. ನಾನು ಅವನಲ್ಲ ಅವಳು ಚಿತ್ರ ನೋಡಿಲ್ಲ. ಆದರೆ ಪುಸ್ತಕ ಓದಿದ್ದೇನೆ. ಆ ಪುಸ್ತಕ ಓದಿದ ಮೇಲೆ ತೃತೀಯ ಲಿಂಗಿಗಳನ್ನು ನಾನು ನೋಡುವ ದೃಷ್ಟಿ ಬದಲಾಯಿತು, ಒಂದು ಸಾಫ್ಟ್ ಕಾರ್ನರ್ ಬೆಳೆದುಬಿಟ್ಟಿತು. ಆದರೆ ಹಾಗಿರುವವರು ಎಲ್ಲರೂ ಒಳ್ಳೆಯವರಲ್ಲ ಎಂಬುದು ಒಂದು ಅನುಭವದಿಂದ ಕಲಿತುಕೊಂಡೆ. ಈ ಪ್ರಶಸ್ತಿ ಇವರಿಬ್ಬರಿಗೂ ಸಿಗಲೇ ಬೇಕಿತ್ತು, ಸಿಕ್ಕಿದೆ. ಅಭಿನಂದನೆಗಳು ವಿಜಯ್ ಮತ್ತು ಮಂಸೋರೆ ಅವರಿಗೆ.

    ಪ್ರತಿಕ್ರಿಯೆ
  3. vidyashankar

    Once again congratulation Sanchari Vijay, Wish him all the success. Touchy write up. Thanks. 🙂

    ಪ್ರತಿಕ್ರಿಯೆ
  4. mallikarjun talwar

    KELAVAR MUKA NODIDA TAKSHANA KELAVU BHAVAGALU ARTAVAGUTTAVE. ADRE INNU KELAVARU TAMMA BHAVAGALANNU SULABAVAGI BITUUKODUVUDILLA. ANTAVAR SALINALLI VIJAYA NILLUTTARE. TUMBA KHUSHI AAGIDE. AMIRKHANA YAMBA DAITYA PRATIBEYANNU HINDIKKI AWARD TAGONDIDDU KUSHI. VIJAYA GE INNU AVAKASHAGALIGE BARA ILLA. YAKANDRE YALLO ONDU MOOLEYALLI KANNADA CINEMA JAGATTU HOSATANAKKE, PROYOGASHILATEGE TANNA TANU ODDIKOLLUTTIDE. ADRALLI VIJAYA AVARIGU KANDITA ONDU PALU SIGUTTADE. KREEYASHILA HAAGU PRATIBAVANTA MANUSHYA NELADALLI HUGIDARU YADDU NINTU TANNA ASTITVA DAKALISIYE DAKALISUTTANE. KANNADIGA VIJAYA GE CONGRATS.

    ಪ್ರತಿಕ್ರಿಯೆ
  5. Uday Itagi

    ಸಂಧ್ಯಾ ಮೇಡಂ,
    ಎಂದಿನಂತೆ ನಿಮ್ಮ ಲವಲವಿಕೆಯ ನಿರೂಪಣೆಯಲ್ಲಿ ಬರಹ ಸೊಗಸಾಗಿ ಮೂಡಿ ಬಂದಿದೆ. ಎರಡು ಚಿತ್ರಗಳು ಮತ್ತು ವಿಜಯ್ ಬಗ್ಗೆ ಚನ್ನಾಗಿ ಬರಿದಿದ್ದೀರಿ. ಅಂದ್ಹಾಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ನಟ ಪ್ರಶಸ್ತಿ ಗಳಿಸಿ ಕನ್ನಡದ ಮಟ್ಟಿಗೆ 28 ವರ್ಷಗಳ ಬರ ನೀಗಿಸಿದ್ದಾರೆ ಎಂದು ಬರಿದಿದ್ದೀರಿ. ಆದರೆ ನನಗೆ ತಿಳಿದಂತೆ 2000 ರಲ್ಲಿ ಬಂದ “ಮುನ್ನುಡಿ” ಚಿತ್ರದಲ್ಲಿನ ಹಸನಬ್ಬ್ ಪಾತ್ರದ ಅಭಿನಯಕ್ಕಾಗಿ ದತ್ತಾತ್ರೆಯ ಅವರಿಗೆ ಹಾಗೂ 2001 ರಲ್ಲಿ ಬಂದ “ಮತದಾನ”” ಚಿತ್ರದಲ್ಲಿನ ಅಭಿನಯಕ್ಕಾಗಿ ಅವಿನಾಶ್ (ಚಿತ್ರದಲ್ಲಿ ತಾರಾವರ ಪತಿ) ಅವರಿಗೆ ರಾಷ್ಟ್ರಮಟ್ಟದ ಶ್ರೇಷ್ಟ ನಟ ಪ್ರಶಸ್ತಿಗಳು ಲಬಿಸಿಲ್ಲವೇ? ಇಲ್ಲದಿದ್ದರೆ ನಾನು ತಪ್ಪಾಗಿ ಗ್ರಹಿಸಿದ್ದೇನೆಯೇ? ಇದರ ಬಗ್ಗೆ ನನಗೆ clarification ಕೊಡಿ.

    ಪ್ರತಿಕ್ರಿಯೆ
    • Anonymous

      Aadaru Neevene heli Naavu Kannadigaru Abhimanashunyaru.Sumaru eradu dashakagala nantara kannadiganobbanige rastramattadalli shreshta nata prashasti bandide endare Ee huduga vijayge Innu foddamattadalli prachara sigabekittu.patrikegalu mukhaputadalli dodda suddiyannagi maadabahudittu.Hageye Kalavidara sangha ennuvudondide avaru ee hudugananna sanmanisabahudittu.Kannadada eehudugana bagge naavella Hemmepadona.

      ಪ್ರತಿಕ್ರಿಯೆ
    • ಸಂಧ್ಯಾರಾಣಿ

      ನಮಸ್ತೆ ಉದಯ್. ವಿಜಯ್ ಗೆ ರಾಷ್ಟ್ರ ಪ್ರಶಸ್ತಿ ಬಂದಿರುವುದು ಶ್ರೇಷ್ಟನಟ ವಿಭಾಗದಲ್ಲಿ. ನೀವು ಹೇಳಿದ ಪ್ರಶಸ್ತಿಗಳು ಬಂದಿರುವುದು supporting role ವಿಭಾಗದಲ್ಲಿ.

      ಪ್ರತಿಕ್ರಿಯೆ
  6. Sushma Moodbidri

    ಎಂದಿನಂತೆ ಆಪ್ತ ಬರಹ 🙂
    ಸಂಚಾರಿ ವಿಜಯ್ ಕಣ್ಣುಗಳಲ್ಲಿ ಮಿಂಚು ಹೊಳೆಯಲಿ 🙂
    ಆಭಿನಂದನೆಗಳು ಅವರಿಗೆ

    ಪ್ರತಿಕ್ರಿಯೆ
  7. ಲಲಿತಾ ಸಿದ್ಧಬಸವಯ್ಯ

    ಎಸ್, ನಮ್ಮ ಗಾಂಧಿನಗರ ತನ್ನ ಎಂದಿನ ದಿವ್ಯ ಸೋಗಲಾಡಿತನ ಬಿಟ್ಟು ವಿಜಯ್ ಅವರನ್ನು ಕಾಪಾಡಿಕೊಳ್ಳಬೇಕು. ಪ್ರಕಾಶ್ ರೈ ಅಂಥ ಅಭಿಜಾತ ಕಲಾವಿದನ ವಿಷಯದಲ್ಲಿ ಮಾಡಿದ ಹಾಗೆ ಪಕ್ಕದಮನೆಗೆ ಹೋಗಿ ಗುಡ್ಅಕ್ಟರ್ ಅಂತ ಸರ್ಟಿಫಿಕೇಟು ತರೋತನಕ ಕಾಯ್ತಾ ಇದ್ದರೆ ವಿಜಯ್ ಅವರನ್ನು ಕೂಡ ಒಂದು ದಿನ ಪಕ್ಕದ ಮನೆಯಿಂದ ಇಸ್ಕೊಂಡು ಬರಬೇಕಾಗುತ್ತೆ- ಎರಡು ದಿನದ ಮಟ್ಟಿಗೆ ಕೊಡಿ ಅಂತ.

    ಪ್ರತಿಕ್ರಿಯೆ
  8. sanchari

    ಆಹಾ ನಿಮ್ಮ ಹಾರೈಕೆಯ ಮಹಾಪೂರವನ್ನು ನೋಡುತ್ತಿದ್ದರೆ ನಾನೆಂತಹ ಪುಣ್ಯವಂತ ಅನ್ನಿಸುತ್ತಿದೆ

    ಪ್ರತಿಕ್ರಿಯೆ
  9. ಲಕ್ಷ್ಮೀಕಾಂತ ಇಟ್ನಾಳ

    ‘ಹರಿವು, ‘ನಾನು ಅವನಲ್ಲ, ಅವಳು’ಚಿತ್ರಗಳು, ಅದರ ಸ್ಥೂಲ ವಿಳಾಸಗಳಲ್ಲದೇ, ವಿಜಯ್ ಅಭಿನಯದ ಸೊಗಸುಗಾರಿಕೆಯನ್ನು ತುಂಬ ಚನ್ನಾಗಿ, ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಿರಿ ಸಂಧ್ಯಾಜಿ. ಹಾಗೆಯೇ, ನೀವು ಎತ್ತಿರುವ ಪ್ರಶ್ನೆ
    ” ನಮ್ಮ ಅಪ್ಪ-ಅಮ್ಮನ ಬಗೆಗೆ ಬರುವುದಿಲ್ಲ? ಇಲ್ಲ, ಪ್ರೀತಿ ಇರುವುದಿಲ್ಲ ಅಂತಲ್ಲ, ಆದರೆ ನಮ್ಮದೇ ಮಕ್ಕಳ ಕುರಿತು ಇರುವಷ್ಟರ ಮಟ್ಟಿಗೆ ಅದು ಇರುತ್ತದಾ? ಅಪ್ಪ ಅಮ್ಮನ ಬಗ್ಗೆ ಇರುವ ಕರ್ತವ್ಯ ಮಕ್ಕಳ ವಿಷಯ ಬಂದರೆ ನಮ್ಮ ಜೀವದ ಅಸ್ತಿತ್ವದ ಪ್ರಶ್ನೆಯಾಗಿಬಿಡುತ್ತದೆ? ಯಾಕೆ ಅದು ಪ್ರಜ್ಞಾಪೂರಕ ಎಚ್ಚರಕ್ಕಿಂತ ಮಿಗಿಲಾಗಿ ಎದೆಯ ಬಡಿತದ ಹಾಗೆ ಅನಿವಾರ್ಯವಾಗಿಬಿಡುತ್ತದೆ? ಯಾಕೆ ನಿನ್ನೆಗಳಿಗಿಂತ ನಾಳೆಗಳು ಮುಖ್ಯವಾಗಿ ಬಿಡುತ್ತವೆ?” ನಿಜವಾಗಿಯೂ ಗಹನ ಪ್ರಶ್ನೆ. ಬಲು ಗೋಚಲಾದರೂ ಇದು ಬಹುಶ: ಸುಂದರ ಸಂಸ್ಕೃತಿಯೊಂದು ಕರ್ವಟ್ (ಮಗ್ಗಲು) ಬದಲುತ್ತಿರುವ ಕಾಲಘಟ್ಟವೇ! ಚಿಂತನೆಗೆ ಹಚ್ಚಿತು ಧನ್ಯವಾದಗಳು ಮೇಡಂ.

    ಪ್ರತಿಕ್ರಿಯೆ
  10. Vinod Bangalore

    ಸೊಗಸಾದ ಮತ್ತು ಆಪ್ತ ಲೇಖನ. ಆಭಿನಂದನೆಗಳು ಸಂಚಾರಿ ವಿಜಯ್ ಅವರಿಗೆ

    ಪ್ರತಿಕ್ರಿಯೆ
  11. Hema Sadanand Amin /mumbai

    nananthu chitra nodilla. adare sandyaravare nivu iga adannu noduvante nannannu vivasha madiddiri. a huduganannu nimage mareyalagadiddanthe, nanage nimma lekhana mareyalagadu. computer off madida melu…..
    Hema

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: