ಸಂಧ್ಯಾರಾಣಿ ಕಾಲಂ : ಅಮ್ಮನಂತಹ ಮಗಳೂ, ಮಗುವಿನಂತಹ ಅಪ್ಪನೂ…

ಮೊನ್ನೆ ಮೊನ್ನೆ ಮದರ್ಸ್ ಡೇ ಆಯಿತು. ಗಡಿಯಾರದ ಮುಳ್ಳು ಮುಂದೆ ಸರಿದಂತೆ ನನ್ನಲ್ಲಿ ಸಣ್ಣ ಅಸಹನೆ. ನನ್ನೊಡನೆಯೇ ಬೆಳೆದಿದ್ದ ನನ್ನ ತಂಗಿಯ ಮಗ ಊರಲ್ಲಿದ್ದ. ಅನಗತ್ಯ ಭಾವುಕತೆ ತೋರಿಸಿಕೊಳ್ಳದ ಅವನು ಅಂದು ಹಾರೈಸದಿದ್ದರೆ ನನಗೆ ತೀರಾ ನಿರಾಸೆ ಏನೂ ಆಗುತ್ತಿರಲಿಲ್ಲ, ಆದರೆ ಹಾರೈಸಿದರೆ ಮಾತ್ರ ಒಂದು ಸಂತಸ ಮನಸನ್ನು ತಂಪಾಗಿಸುತ್ತಿತ್ತು. ನಡುಮಧ್ಯಾಹ್ನದ ವೇಳೆಗೆ ಅವನ ಮೆಸೇಜ್ ಬಂತು, ’….ಹ್ಯಾಪ್ಪಿ ಮದರ್ಸ್ ಡೇ…’, ಮುಖದ ಮೇಲಿದ್ದದ್ದು ಅವನ ಕಣ್ಣುಗಳಂತಹ ನಗು. ಅವನು ಹಾರೈಸಿದ್ದಕ್ಕಿಂತ ಹೆಚ್ಚಾಗಿ ಆ ಹಾರೈಕೆ ನನಗೆ ಖುಷಿ ಕೊಡುತ್ತದೆ ಎನ್ನುವುದನ್ನು ಅವನು ಗುರ್ತಿಸಿದ್ದ ಎನ್ನುವುದು ನನ್ನ ಸಂತಸಕ್ಕೆ ಕಾರಣ. ಆ ನಂತರ ಯೋಚಿಸಿದೆ, ನಾನು ನನ್ನ ಅಮ್ಮನಿಗೆ ಹಾಗೆ ಹಾರೈಸಿದ್ದೆನಾ? ಇಲ್ಲ. ಆದರೆ ಅಮ್ಮನ ಹುಟ್ಟುಹಬ್ಬಕ್ಕೆ ಮಾತ್ರ ತಪ್ಪದೆ ಹಾರೈಸುತ್ತಿದ್ದೆ, ಅಮ್ಮನಿಗೆ ಅದು ಖುಷಿ ಕೊಡುತ್ತಿತ್ತು. ಆಗ ಅಮ್ಮನ ಮುಖದಲ್ಲಿರುತ್ತಿದ್ದ ಒಂದು ಸಂಕೋಚ, ಸಣ್ಣ ನಾಚಿಕೆಯ ಮುಗುಳ್ನಗು ನನಗೀಗಲೂ ನೆನಪಿದೆ. ಆದರೆ ಅಮ್ಮ ಬಹುಶಃ ಅಜ್ಜಿಗೆ ಯಾವತ್ತೂ ಯಾವುದಕ್ಕೂ ವಿಶ್ ಮಾಡಿರಲಿಕ್ಕಿಲ್ಲ, ಹಾಗೆಂದು ನನ್ನ ಮಗನ ಪ್ರೀತಿಗಿಂತ, ನನ್ನ ಪ್ರೀತಿಗಿಂತಾ ಅಮ್ಮನ ಪ್ರೀತಿ ಕಡಿಮೆ ಎಂದೇನಲ್ಲ. ಅಥವಾ ಅಮ್ಮನ ಮನಸ್ಸಿನಲ್ಲಿದ್ದ ಗೌರವಕ್ಕಿಂತ ನನ್ನ ಮನಸ್ಸಿನ ಗೌರವ ಅಥವಾ ನನ್ನ ಮಗನ ಮನಸ್ಸಿನ ಗೌರವ ಕಡಿಮೆ ಅಂತಲೂ ಅಲ್ಲ. ಪ್ರೀತಿ ಎಂದರೆ ಇದೆಲ್ಲಕ್ಕೂ ಆಚೆಗಿನದು, ಇದೆಲ್ಲದರ ನಡುವಿನಲ್ಲಿ ಇದ್ದು, ಇವೆಲ್ಲವೂ ಆಗಿರುವುದು.
ನಾವು ’ಮಾದರಿ’ ಎಂದು ಕರೆಯುವ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ಕೆಲವು ಪಲ್ಲಟವಾದರೆ ಕೆಲವು ಬೇರೆ ರೂಪ ಧರಿಸಿ ನಿಲ್ಲುತ್ತದೆ. ಕಾಲ, ಕಾಲಮಾನ, ಸಂಬಂಧ, ಸಂಭೋದನೆ, ಸ್ಪರ್ಶ ಎಲ್ಲವೂ ಹಾಗೆ ಬದಲಾಗುವ ಕಾಲದ ಜೊತೆಯಲ್ಲಿ ಎಲ್ಲವನ್ನೂ ಒಳಗೊಳ್ಳುತ್ತಾ ನದಿಯಾಗಿ ಎದೆಯಿಂದ ಎದೆಗೆ ಪ್ರೀತಿ ಸಾಗುತ್ತಲೇ ಇರುತ್ತದೆ. ಹಾಗೆ ಬದಲಾದ ಕಾಲದಲ್ಲಿ ಅಮ್ಮ ಸಹ ಬದಲಾಗಿದ್ದಾಳೆ. ಇಲ್ಲಾ ಬದಲಾಗಿರುವುದು ’ಅಮ್ಮತನ’ ಅಲ್ಲ ಅದು ಹಾಗೇ ಇದೆ, ಆದರೆ ’ಅಮ್ಮ’ ಬದಲಾಗಿದ್ದಾಳೆ. ಬದಲಾದ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಅನೇಕ ಸಂಬಂಧಗಳನ್ನು ಸ್ಥಿತ್ಯಂತರಗೊಳಿಸಿದೆ. ಅನೇಕ ಸಂಬಂಧಗಳ ಸ್ವರೂಪವನ್ನು ಬದಲಾಯಿಸಿದೆ, ಪಾತ್ರಗಳ ಪಾತ್ರಗಳನ್ನು ವಿಸ್ತರಿಸಿದೆ. ಅಪ್ಪ ದುಡಿದು ತಂದು ಕೈಲಿಡುತ್ತಿದ್ದ ಹಣದಿಂದ ಜಾಣತನದಿಂದ ಸಂಸಾರ ತೂಗಿಸುತ್ತಿದ್ದ ಅಮ್ಮನಿಂದ ಈಗ ಬೆಳಗ್ಗೆ ಬೇಗ ಎದ್ದು, ಅವಸರದಲ್ಲಿ ಒಂದಿಷ್ಟು ವಾಕ್ ಮಾಡಿ, ನಾಳೆಗಳಿಗೆ ಋಣಸಂದಾಯ ಮಾಡಿ, ಇಂದುಗಳನ್ನು ಖರ್ಚು ಮಾಡುತ್ತಾ, ಸ್ನೇಹಿತೆ ಕುಸುಮಬಾಲೆ ಬರೆದ ಕವನದಂತೆ
ಹಾಲುಗಲ್ಲದ
ಕೂಸಿಗೆ ಮುತ್ತಿಟ್ಟು,
ತೊಟ್ಟಿಲಲೇ ಬಿಟ್ಟು,
ವ್ಯಾನಿಟಿ ಏರಿಸಿ
ಲಿಪ್ ಸ್ಟಿಕ್ ಸರಿಮಾಡಿಕೊಂಡು
ಹೊರಟಿದ್ದಾಳೆ,
ಕಂದನ ಕನವರಿಕೆ..
ಬದುಕಲು,
ಭವಿಷ್ಯ ಕಟ್ಟಲು,
ಒಡಲ ಭಾವನೆಗಳ
ಒತ್ತೆಯಿಟ್ಟಿದ್ದಾಳೆ
ಹಾಗೆ ಮಗುವಿಗೆ ಎಚ್ಚರಾದರೆ ಎಲ್ಲಿ ಆ ಅಳು ಸಂಜೆತನಕ ಮನಸಲ್ಲಿ ಅಸಹಾಯಕತೆಯ ಮೊಟ್ಟೆಗೆ ನೋವಿನ ಕಾವು ಕೊಡುತ್ತದೋ ಎಂದು ಸದ್ದು ಮಾಡದೆ ಕದ ದಾಟುವ ಎಲ್ಲ ಅಮ್ಮಂದಿರೂ ಬದಲಾಗಿದ್ದಾರೆ ಮತ್ತು ಬದಲಾಗಿಲ್ಲ. ಇಂದು ಅಪ್ಪ ಸಂಬಳ ತಂದು ಕೊಡುತ್ತಾನೆ ಎನ್ನುವ ಖಾತ್ರಿ ಇಲ್ಲದ ಮನೆಗಳಿವೆ, ಅಪ್ಪನೇ ಇಲ್ಲದ ಒಂಟಿ ಅಮ್ಮಂದಿರ ಮನೆಗಳಿವೆ, ಅಪ್ಪನನ್ನೂ ಅಮ್ಮನೇ ಸಾಕುವ ಮನೆಗಳಿವೆ … ಈ ಎಲ್ಲಾ ಮನೆಗಳಲ್ಲೂ ಅಮ್ಮ ಬದಲಾಗಿದ್ದಾಳೆ, ಅಮ್ಮ ಸ್ವಲ್ಪ ಅಪ್ಪನಾಗಿದ್ದಾಳೆ, ಸ್ವಲ್ಪ ಅಮ್ಮನಾಗಿದ್ದಾಳೆ. ಹಾಗೆ ಅಮ್ಮನಿಲ್ಲದ ಮನೆಗಳೂ ಇವೆ, ಅಪ್ಪ ಅಮ್ಮನಾದ ಮನೆಗಳೂ ಇವೆ. ಯಾವುದೇ ಸಂಬಂಧಕ್ಕೂ ಗ್ಯಾರೆಂಟಿ ಇರದ ಕಾಲಮಾನದ ನಡುವೆ ಬದಲಾವಣೆಯೊಂದೇ ಗ್ಯಾರೆಂಟಿ ಇಲ್ಲಿ.
ಈ ದಿನಮಾನದ ನಡುವಲ್ಲಿ ನಾನು ಕಂಡದ್ದು ಅಮ್ಮನಂತಹ ಒಬ್ಬ ಮಗಳನ್ನು. ಹೌದು ಅವಳು ಅಮ್ಮನಂತಹ ಮಗಳು ಮತ್ತು ಅವನು ಮಗುವಿನಂತಹ ಅಪ್ಪ. ಅವರನ್ನು ನಾನು ಕಂಡಿದ್ದು ಸೂಜಿತ್ ಸರ್ಕಾರ್ ನಿರ್ದೇಶನದ ಪೀಕು ಚಿತ್ರದಲ್ಲಿ. ಅಲ್ಲಿ ಯಾವ ಸಂಬಂಧಗಳಿಗೂ ಅತಿ ಭಾವುಕತೆಯ ಪೋಷಾಕಿರಲಿಲ್ಲ, ತ್ಯಾಗಮಯತೆಯ ಕಿರೀಟ ಇರಲಿಲ್ಲ, ಯಾವುದೇ ಪ್ರೋಟೋಟೈಪ್ ಗಳಿಗೆ ಅವರು ಒಗ್ಗುತ್ತಿರಲಿಲ್ಲ. ಆದರೆ ಅವರ ಬದುಕಿನಲ್ಲಿ ಅದೆಂತಹ ಜೀವಂತಿಕೆ ಇತ್ತು… ಒಂದು ಚಿತ್ರದ ಮುಖ್ಯಪಾತ್ರಗಳು ಅಂದರೆ ಅವು ಹೀಗೇ ಇರಬೇಕು ಎನ್ನುವ ನಮ್ಮ ಸಿದ್ಧ ಮಾದರಿಗಳೆಲ್ಲವನ್ನೂ ಅಲ್ಲಿ ಒಡೆಯಲಾಗಿತ್ತು.
ಅಮಿತಾಭ್ ೭೦ ವರ್ಷದ ವಿಧುರ ತಂದೆ. ಮೂವತ್ತರ ಆಸುಪಾಸಿನಲ್ಲಿರುವ ಮಗಳು ದೀಪಿಕಾ. ಮಗಳಿಗೆ ಮದುವೆಯಾದರೆ ತಾನು ಒಂಟಿಯಾಗಿಬಿಡುತ್ತೇನೇನೋ ಎನ್ನುವ ಸಣ್ಣ ಸ್ವಾರ್ಥ ಅವನಿಗೆ. ಆದರೆ ಹೇಳುವುದು ಮಾತ್ರ ಮದುವೆಯಾಗಿ ಗಂಡನಿಗಾಗಿ ನೀನು ವ್ಯಕ್ತಿತ್ವವನ್ನು ಬಲಿಗೊಡಬೇಡ, ನೀನು ಸಾಧಕಿಯಾಗಬೇಕು ಎಂದು! ಹೆಣ್ಣುಗಳು ಸ್ವಾವಲಂಬಿಗಳಾಗಬೇಕು, ಅವರು ಗಂಡಸರಿಗೇನು ಕಡಿಮೆಯಿಲ್ಲ ಎಂದು ಭಾಷಣ ಮಾಡುವ ಅಪ್ಪ, ಹೆದ್ದಾರಿಯಲ್ಲಿ ಮಗಳು ಗಾಡಿ ಓಡಿಸುವುದನ್ನು ನೋಡಿ ಗಾಬರಿಬಿದ್ದು, ಗಾಡಿ ಟ್ಯಾಕ್ಸಿ ಡ್ರೈವರ್ ಗೆ ಕೊಡು ಎಂದು ಹಠಹಿಡಿಯುವುದು ಅವನ ವಾದದ ಹಿಂದಿರುವ ಪೊಳ್ಳುತನವನ್ನು ನಮ್ಮೆದುರಿಗಿಡುತ್ತದೆ. ’ನೀನು ಮಗುವಾಗಿದ್ದಾಗ ಜವಾಬ್ದಾರಿ ಎಂದು ನಾನು ನಾನು ನಿನ್ನ ಬಿಟ್ಟು ಹೋದೆನಾ? ಇಲ್ಲ ತಾನೆ, ಈಗ ನಿನ್ನ ಸರದಿ, ನನ್ನನ್ನು ನೀನು ನೋಡಿಕೊಳ್ಳಬೇಕು’ ಇದು ಅವನ ವಾದ!
ಜೊತೆಯಲ್ಲಿ ಈತನಿಗೆ ತನ್ನ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ, ಹೆದರಿಕೆ, ಆತಂಕ. ಎಲ್ಲಾ ಟೆಸ್ಟ್ ಮಾಡಿಸಿ, ಅದರಲ್ಲಿ ಎಲ್ಲವೂ ಸರಿಯಾಗಿದೆ ಎಂದು ಬಂದರೆ ’ಅಯ್ಯೋ ಎಲ್ಲಾ ಸರಿ ಇದೆಯಾ’ ಎಂದು ದುಃಖಿಸುವ ಮನೋಭಾವ! ಅಜ್ಜನ ಒಂದೇ ಮತ್ತು ಮಹಾನ್ ಸಮಸ್ಯೆ ಆತನ ಮಲಬದ್ಧತೆ. ಅದನ್ನು ಜಾಗತಿಕ ಸಮಸ್ಯೆಯೋ ಎನ್ನುವಂತೆ ಆತ ಎಲ್ಲರೆದುರಿಗೂ ಕೂತು ಚರ್ಚಿಸುತ್ತಾನೆ, ಜಗತ್ತಿನ ಎಲ್ಲಾ ಆಗುಹೋಗುಗಳನ್ನೂ ಹೇಗೋ ತನ್ನ ಮಲಬದ್ಧತೆಗೆ ತಂದು ಕಟ್ಟುತ್ತಾನೆ! ಮನೆಕೆಲಸದವರನ್ನು ನಂಬದ, ಯಾರನ್ನೂ ಸುಲಭಕ್ಕೆ ಒಳಗೆ ಬಿಟ್ಟುಕೊಳ್ಳದ, ಯಾರಿಗೂ ಉಪದೇಶ ಕೊಡದೆ ಕಳಿಸದ ಪಿರಿಪಿರಿ ಮುದುಕನ ಪಾತ್ರದಲ್ಲಿ ಅಮಿತಾಭ್ ಪ್ರತಿಯೊಬ್ಬರಿಗೂ ಅವರ ಮನೆಯ, ಮನೆತನದ ಹಿರಿಯನೊಬ್ಬನನ್ನು ನೆನಪಿಸದಿದ್ದರೆ ಕೇಳಿ!

ಮಗಳನ್ನು ಆತ ಕಾಯುವುದನ್ನು ನೋಡಬೇಕು. ಮಗಳ ಚಿಕ್ಕಮ್ಮ ಒಂದು ಪಾರ್ಟಿಯಲ್ಲಿ ಅವಿವಾಹಿತನೊಬ್ಬನಿಗೆ ಹುಡುಗಿಯನ್ನು ಪರಿಚಯ ಮಾಡಿಸಿ, ಇವಳಿಗೂ ಮದುವೆ ಆಗಿಲ್ಲ ಎಂದು ಸೂಚ್ಯವಾಗಿ ಹೇಳಿದರೆ, ಅಜ್ಜ ನೇರವಾಗಿ, ’ಇವಳು ನನ್ನ ಮಗಳು, ’ಆರ್ಥಿಕವಾಗಿ, ಭಾವನಾತ್ಮಕವಾಗಿ, ಲೈಂಗಿಕವಾಗಿ ಸ್ವತಂತ್ರಳು… ಇವಳು ಕನ್ಯೆ ಅಲ್ಲ’ ಎಂದು ಪರಿಚಯಿಸುತ್ತಾನೆ. ಸಿಟ್ಟಾದ ಮಗಳು ಮನೆಗೆ ಬಂದುಬಿಡುತ್ತಾಳೆ. ಕುಡಿದು ತೂರಾಡುತ್ತಾ ಮನೆಗೆ ಬಂದ ಅಪ್ಪನನ್ನು ಬೈಯಲೆಂದು ಅವನ ಕೋಣೆಗೆ ನುಗ್ಗಿದ ಅವಳಿಗೆ ಕಾಣುವುದು ಮಗುವಿನಂತೆ ತೂರಾಡುತ್ತಾ ನರ್ತನ ಮಾಡುತ್ತಿರುವ ಅಪ್ಪ. ಆ ಕ್ಷಣದಲ್ಲಿ ಅಮ್ಮನಂತೆ ಮುಗುಳ್ನಗುವ ಅವಳು ಸದ್ದಾಗದಂತೆ ಕದ ದಾಟಿ ತನ್ನ ಕೋಣೆ ಸೇರಿಕೊಳ್ಳುತ್ತಾಳೆ.
ಅಪ್ಪನ ಮಾತುಗಳಿಗೆ ಇವಳೂ ದನಿ ಏರಿಸುತ್ತಾಳೆ. ಅಪ್ಪ ಕೂಗಾಡಿದರೆ ತಾನೂ ಕಿರುಚಾಡುತ್ತಾಳೆ. ಅಪ್ಪ ಹೇಳಿದ ಮಾತು ಕೇಳದಿದ್ದರೆ ಆಕಾಶ ಭೂಮಿ ಒಂದು ಮಾಡುತ್ತಾಳೆ. ಆದರೆ ಅಪ್ಪನ ಆರೋಗ್ಯ ಒಂದಿಷ್ಟು ಏರುಪೇರಾದರೂ ಇರವ ಎಲ್ಲಾ ಕೆಲಸ ಬಿಟ್ಟು, ಅಪ್ಪನ ನೆರೆಗೂದಲ ಕೈಗಳನ್ನು ನೇವರಿಸುತ್ತಾ, ಕಣ್ಣೀರು ಹಾಕುತ್ತಾ ಕೂತುಬಿಡುತ್ತಾಳೆ.
ಅವಳೊಬ್ಬ ಆರ್ಕಿಟೆಕ್ಟ್. ಸ್ನೇಹಿತನ ಜೊತೆಯಲ್ಲಿ ಸ್ವಂತ ಕಛೇರಿ ಇಟ್ಟುಕೊಂಡಿರುತ್ತಾಳೆ. ಈ ಮಗುವಿನಂತಹ ಅಪ್ಪನನ್ನು ಸಾಕುತ್ತಾ ಸಾಕುತ್ತಾ ತನ್ನ ವೈಯಕ್ತಿಕ ಜೀವನ ಮತ್ತು ಕೆಲಸ ಎರಡನ್ನೂ ಸಂಭಾಳಿಸುತ್ತಾ, ಅಪ್ಪ ಮನೆಕೆಲಸದವಳನ್ನು ಓಡಿಸಿದಾಗ ಮನೆಕೆಲಸವನ್ನೂ ಮಾಡುತ್ತಾ, ಕೂಗಾಡುತ್ತಾ, ಥೇಟ್ ಲಂಕೇಶರ ಅವ್ವನಂತೆ, ’ಬನದ ಕರಡಿ’ಯಂತೆ ಬಡಿದಾಡುವ ಇವಳನ್ನು ನೋಡಿದರೆ ಮನಸ್ಸು ತುಂಬಿ ಬರುತ್ತದೆ. ಇವಳಿಗೆ ಯಾವುದೇ ನಯ ನಾಜೂಕು ಗೊತ್ತಿಲ್ಲ. ಅದೆಲ್ಲವೂ ಇವಳಿಗೆ ಕೈಗೆಟುಕದ್ದು. ಅವಳು ನಾಚಿಕೊಂಡು, ಮೃದುಭಾಷಿಣಿಯಂತಿದ್ದರೆ ತೇರು ಸಾಗುವುದಿಲ್ಲ. ಅವಳು ಕೂಗಾದುತ್ತಾಳೆ, ಅಪ್ಪನ ಮೇಲೆ, ಮನೆ ಕೆಲಸದವರ ಮೇಲೆ, ಟ್ಯಾಕ್ಸಿ ಡ್ರೈವರ್ ಮೇಲೆ, ಆಫೀಸಿನಲ್ಲಿ ಸ್ನೇಹಿತನ ಮೇಲೆ … ಎಲ್ಲರ ಮೇಲೂ ಕೂಗಾಡುತ್ತಾ ತನ್ನೊಳಗಿನ ಚಿಕ್ಕ ಹುಡುಗಿಯ ತೊದಲನ್ನು, ಯೌವನದ ಕುದಿಯನ್ನು ಮೌನವಾಗಿಸುತ್ತಾಳೆ.
ಇವರ ಆಫೀಸಿಗೆ ವಾಹನ ಸರಬರಾಜು ಮಾಡುವ ಕಂಪನಿಯ ಒಡೆಯ ಇರ್ಫಾನ್. ಇವಳ ನಾಲಿಗೆಗೆ ಹೆದರಿ ಇವಳ ಮನೆಗೆ ಗಾಡಿ ತೆಗೆದುಕೊಂಡು ಹೋಗಲು ಚಾಲಕರು ನಿರಾಕರಿಸಿದಾಗೆಲ್ಲಾ ಎನೇನೋ ಪುಸಲಾಯಿಸಿ ಅವರನ್ನು ಕಳಿಸುವ ಇವನಿಗೆ ಇವಳನ್ನು ಕಂಡರೆ ಹೇಳಲಾಗದ ಒಂದು ಆಕರ್ಷಣೆ. ಈ ಮೂರೂ ಪಾತ್ರಗಳೂ ಮಾಡುವ ಸಹಪ್ರಯಾಣ ಮೂವರ ಜಗತ್ತುಗಳನ್ನೂ ಒಂದಾಗಿಸುತ್ತಾ ಹೋಗುತ್ತದೆ.
ಈ ಬೆಂಗಾಲಿ ಅಪ್ಪ ಮಗಳಿಗೆ ಕಲ್ಕತ್ತೆಯಲ್ಲಿ ಒಂದು ಮನೆ ಇರುತ್ತದೆ. ಅದನ್ನು ಮಾರುವ ಆಸೆ ಮಗಳಿಗೆ, ಉಳಿಸಿಕೊಳ್ಳುವ ಆಸೆ ಅಪ್ಪನಿಗೆ. ಕಡೆಗೊಮ್ಮೆ ಅಪ್ಪ ಆ ಮನೆ ನೋಡಬೇಕು ಎಂದು ಹಠ ಹಿಡಿದಾಗ ಇರುವ ಎಲ್ಲಾ ಕೆಲಸ ಬಿಟ್ಟು ಮಗಳು ಅಪ್ಪನನ್ನು ದೆಹಲಿಯಿಂದ ಕಲ್ಕತ್ತಾಗೆ ಕರೆದೊಯ್ಯಲು ಸಿದ್ಧವಾಗುತ್ತಾಳೆ. ಅಪ್ಪ ಏರೋಪ್ಲೇನ್ ಹತ್ತುವುದಿಲ್ಲ, ಆ ಏರುವಿಕೆ ಹೃದಯಕ್ಕೆ ಸಲ್ಲದು, ಟ್ರೇನು ಹತ್ತುವುದಿಲ್ಲ – ಅದರ ಸದ್ದು ಎದೆಬಡಿತ ಹೆಚ್ಚಿಸುತ್ತದೆ. ಇನ್ನುಳಿಯುವುದು ಗಾಡಿ ಮಾಡಿಕೊಂಡು ಹೋಗುವುದು. ಇವಳೊಂದಿಗೆ ಗಾಡಿಯಲ್ಲಿ ಆಫೀಸಿನವರೆಗಿನ ಪ್ರಯಾಣಕ್ಕೇ ಹೆದರುವ ಡ್ರೈವರುಗಳು ಇವಳ ಮನೆಮಂದಿಯ ಜೊತೆಗೆ ೪೦ ಗಂಟೆಗಳ ಪ್ರಯಾಣ ಎಂದೊಂಡನೇ ಕೆಲಸಕ್ಕೆ ಬರುವುದನ್ನೇ ತಪ್ಪಿಸಿಕೊಂಡುಬಿಡುತ್ತಾರೆ. ನಿರಾಕರಿಸಬಹುದಾಗಿದ್ದರೂ ಯಾವುದೋ ತನಗೇ ಅರಿಯದ ಕಾರಣಕ್ಕೆ ಸಿಕ್ಕು ಇರ್ಫಾನ್ ತಾನೇ ಗಾಡಿ ತೆಗೆದುಕೊಂಡು ಬರುತ್ತಾನೆ.
ಇವರ ಪ್ರಯಾಣ ಶುರುವಾಗುತ್ತದೆ. ಪೀಕುವಿನ ಪ್ರಪಂಚಕ್ಕೆ ಹೊರಗಿನವನಾಗಿದ್ದ ಇರ್ಫಾನ್ ಸ್ವಲ್ಪ ಸ್ವಲ್ಪವಾಗಿ ಅವಳ ಪ್ರಪಂಚದ ಭಾಗವಾಗುತ್ತಾ ಹೋಗುತ್ತಾನೆ. ಅವನಿಗೆ ಸ್ವಲ್ಪಸ್ವಲ್ಪವಾಗಿ ಅವಳು ಅರ್ಥವಾಗುತ್ತಾ ಹೋಗುತ್ತಾಳೆ. ಅವಳ ಸಿಟ್ಟಿನ ಹಿಂದಿನ ಆತಂಕ, ಜೋರುದನಿಯ ಹಿಂದಿನ ಅಸಹಾಯಕತೆ, ಒರಟು ನಡವಳಿಕೆಯ ಹಿಂದಿನ ಪುಟ್ಟಹುಡುಗಿ ಎಲ್ಲವೂ ಅರ್ಥವಾಗುತ್ತಾ ಹೋಗುತ್ತದೆ. ಅಪ್ಪನ ಕಿರಿಕಿರಿ, ಅಸಹನೆ, ಬೈಗುಳಗಳ ನಡುವೆಯೂ ಅಪ್ಪನ ಆರೋಗ್ಯ ಒಂದಿಷ್ಟು ಹೆಚ್ಚುಕಮ್ಮಿಯಾದರೂ ಒದ್ದಾಡಿ ಹೋಗುವ ಅವಳಲ್ಲಿನ ಅಮ್ಮ ಅವನಿಗೆ ಕಾಣುತ್ತಾಳೆ. ಏನೇ ಆಗಲಿ ಬೇರೆಯವರ ಮುಂದೆ ಅಪ್ಪನನ್ನು ಬಿಟ್ಟುಕೊಡದ ಮಗಳು ಅವನಿಗೆ ಕಾಣುತ್ತಾಳೆ. ಅವಳಿಗಾಗಿ ಅವನು ಅಪ್ಪನನ್ನು ಸಹಿಸಿಕೊಳ್ಳುವುದನ್ನು ಕಲಿಯುತ್ತಾನೆ. ಹಾಗೆ ನೋಡಿದರೆ ಚಿತ್ರದಲ್ಲಿ ಇರ್ಫಾನ್ ಗೆ ಇರುವ ಸಂಭಾಷಣೆಗಳು ಕಡಿಮೆ. ಆದರೆ ಆತ ಎಂತಹ ಅದ್ಭುತ ನಟನೆಂದರೆ ಮೌನದಲ್ಲೇ ಹುಬ್ಬೇರಿಸಿ ಆತ ನೋಡುವ ನೋಟ ಇಡೀ ದೃಶ್ಯಕ್ಕೇ ಒಂದು ಹೊಸ ಆಯಾಮ ಕೊಟ್ಟುಬಿಡುತ್ತದೆ. ಅವನ ಮನೆಯಲ್ಲಿ ಸಹ ಅಮ್ಮನ ಕಿರಿಕಿರಿ ಇರುತ್ತದೆ. ಆದರೆ ಅಮ್ಮನನ್ನು ಪೀಕು ಅಪ್ಪನನ್ನು ಪ್ರೀತಿಸಿದಂತೆ ಬೇಶರತ್ತಾಗಿ ಪ್ರೀತಿಸುವುದು ಅವನಿಗೆ ಸಾಧ್ಯವಾಗಿರುವುದಿಲ್ಲ. ಹಾಗಾಗಿ ಅವಳೆಡೆಗೆ ಅವನ ಗೌರವ ಹೆಚ್ಚುತ್ತದೆ. ಅವಳನ್ನು ಆತ ಗೌರವಿಸಲು ಪ್ರಾರಂಭಿಸುತ್ತಾನೆ.
ಪಯಣದುದ್ದಕ್ಕೂ ಇರ್ಫಾನ್ ಅಪ್ಪನ ಮಲಬದ್ಧತೆಗೆ ತನಗೆ ತಿಳಿದ ಪರಿಹಾರೋಪಾಯಗಳನ್ನು ಸೂಚಿಸುತ್ತಲೇ ಇರುತ್ತಾನೆ. ಅಪ್ಪ ಅದೆಲ್ಲವನ್ನೂ ಕೇಳಿಕೊಳ್ಳುತ್ತಲೇ ಇರುತ್ತಾನೆ. ತನ್ನ ಮಗುವಿನ ಬಗ್ಗೆ ಇನ್ನೊಬ್ಬರು ಸಹ ಕಾಳಜಿ ತೆಗೆದುಕೊಂಡರೆ ಅಮ್ಮ ಕೃತಜ್ಞತೆ, ಹೆಮ್ಮೆಯಿಂದ ಅದನ್ನು ಸ್ವೀಕರಿಸಿವಂತೆ ದೀಪಿಕಾ ಅದನ್ನು ಸಹಜವಾಗಿ ತೆಗೆದುಕೊಳ್ಳುತ್ತಾಳೆ. ಇವೆಲ್ಲದರ ನಡುವೆ ಇವರಿಬ್ಬರ ನಡುವೆ ಏನಾದರೂ ನಡೆಯುತ್ತಿದೆಯಾ ಎಂದು ಅಪ್ಪ ಆಗಾಗ ಓರೆಗಣ್ಣಿನಲ್ಲಿ ಪರಿಶೀಲಿಸುವುದನ್ನು ನೋಡುವುದೆ ಒಂದು ತಮಾಶೆ!
ಪಯಣದ ಕೊನೆಯಲ್ಲಿ ಒಂದು ಸನ್ನಿವೇಶ ಬರುತ್ತದೆ. ಅಜ್ಜನ ಹಿಯರಿಂಗ್ ಏಡ್ ನ ಹೆಚ್ಚುವರಿ ಬ್ಯಾಟರಿ ಕಾಣುವುದಿಲ್ಲ. ಇದ್ದದ್ದು ಮುಗಿಯುತ್ತಾ ಬಂದಿದೆ. ಅದನ್ನು ಊಟಕ್ಕೆ ನಿಲ್ಲಿಸಿದ ಡಾಬಾದಲ್ಲೇ ಬಿಟ್ಟುಬಂದಿದ್ದೇವೆ, ಗಾಡಿ ವಾಪಸ್ ತಿರುಗಿಸು ಎಂದು ಅಜ್ಜ ಹಠ ಹಿಡಿಯುತ್ತಾನೆ. ಇನ್ನೇನು ಕಲ್ಕತ್ತಾ ಹತ್ತಿರ ಬಂತು ಎಂದು ಮಗಳು ಸಮಾಧಾನ ಪಡಿಸಹೊರಟರೆ ’ಹೌದು, ನಾನು ನಿನಗೆ ಭಾರವಾಗಿದ್ದೇನೆ’ ಎಂದೇನೋ ಎಮೋಶನಲ್ ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸುತ್ತಾನೆ. ಮಗಳು ಇನ್ನೇನು ಎಂದಿನಂತೆ ಅದಕ್ಕೆ ಸೋಲಬೇಕು, ಅದುವರೆಗೂ ಮೌನವಾಗಿ ಕೂತಿದ್ದ ಇರ್ಫಾನ್ ಸಿಡಿದುಬಿಡುತ್ತಾನೆ. ’ಅವಳನ್ನು ಎಷ್ಟು ಮಾನಸಿಕವಾಗಿ ಬ್ಲ್ಯಾಕ್ ಮೇಲ್ ಮಾಡುತ್ತೀರಿ, ನಿಮ್ಮನ್ನು ಕಂಡರೆ ಪ್ರೀತಿ ಇದೆ ಅದನ್ನು ಆಯುಧ ಮಾಡಿಕೊಳ್ಳಬೇಡಿ, ಸ್ವಲ್ಪ ಹೊತ್ತು ಕಿವಿ ಕೇಳದಿದ್ದರೆ ಪ್ರಳಯ ಏನೂ ಆಗುವುದಿಲ್ಲ’ ಎಂದು ಅವಳ ಬೆನ್ನಿಗೆ ನಿಂತು ಮಾತನಾಡುತ್ತಾನೆ. ಅದುವರೆಗೂ ತನ್ನ ಎಲ್ಲಾ ಹೋರಾಟಗಳನ್ನೂ ತಾನೇ ಮಾಡುತ್ತಾ, ಬಿದ್ದು ಮೊಣಕಾಲು ಮಂಡಿ ತರಚಿದರೂ ನಿಲ್ಲದಂತೆ ನಡೆಯುತ್ತಾ, ಮಗಳಾಗಿ, ಅಮ್ಮನಾಗಿ, ಯಾವಾಗಲೂ ಕಿರುಚಾಡಿ, ಕೂಗಾಡಿ ಸುಸ್ತಾಗಿದ್ದ ಅವಳಿಗೆ ಮೊದಲ ಸಲ ತನ್ನ ಪರವಾಗಿ ಒಬ್ಬರು ಮಾತನಾಡಿದ್ದಾರೆ ಎಂದರೆ ಅದಕ್ಕೆ ಹೇಗೆ ಪ್ರತಿಕ್ರಯಿಸಬೇಕೋ ಅರ್ಥವಾಗುವುದಿಲ್ಲ. ಅವಳ ಮುಖದಲ್ಲಿ ಮೊದಲ ಸಲ ಮಾರ್ದವತೆ ಕಾಣುತ್ತದೆ. ಕಣ್ತುಂಬಿಬರುತ್ತದೆ. ಮಾತೇ ಇಲ್ಲದ ಆ ದೃಶ್ಯದಲ್ಲಿ ದೀಪಿಕಾ ಎಷ್ಟು ಪುಟ್ಟ ಹುಡುಗಿಯಾಗಿ ಕಾಣುತ್ತಾಳೆ.. ಎಷ್ಟು ಹೆಣ್ಣಾಗಿ ಕಾಣುತ್ತಾಳೆ..
ಪೀಕುವನ್ನು ನೋಡಿದಾಗ ಅನ್ನಿಸಿದ್ದು ತಾಯ್ತನ ಬಹಿರಂಗವಲ್ಲ, ಅಂತರಂಗ. ಅದು ಹೂವಿನ ರಂಗಲ್ಲ, ರೂಪಲ್ಲ, ಅದು ಹೂವಿನ ಪರಿಮಳದಂತೆ ಕಾಣಿಸದೆಯೂ ಇರುವಂಥಾದ್ದು, ಅರಿವಿಗೆ ಮಾತ್ರ ನಿಲುಕುವಂಥಾದ್ದು. ಅದು ಅನುಭವಕ್ಕೆ ಮಾತ್ರ ದಕ್ಕುವ ಗಂಧ… ಅಮ್ಮನಾಗಲು, ಅಪ್ಪನಾಗಲು ಮಗುವನ್ನು ಹೆರಲೇಬೇಕಿಲ್ಲ. ಹೆತ್ತವರೆಲ್ಲಾ ಅಮ್ಮನಾಗುತ್ತಾರೆ, ಅಪ್ಪನಾಗುತ್ತಾರೆ ಎನ್ನುವ ಗ್ಯಾರೆಂಟಿ ಇರುವುದಿಲ್ಲ. ಎಂದೂ ಯಾವುದೇ ಸಿದ್ಧಮಾದರಿಯ ಮಾನದಂಡದ ಪ್ರಕಾರ ’ಅಮ್ಮ’ ನಾಗದ ನಾನು ನನ್ನ ಮಗನನ್ನು ನಿನ್ನೆ ಕೇಳಿದೆ, ’ಅಮ್ಮ ಅಂದರೆ ಹೇಗಿರಬೇಕೋ? ನನ್ನ ಹಾಗೋ ಅಥವಾ ಅಜ್ಜಿಯ ಹಾಗೋ?’, ಒಂದು ಕ್ಷಣವೂ ಯೋಚಿಸದೆ ಅವನು ಉತ್ತರಿಸಿದ ’ಅಮ್ಮ ಅಂದರೆ ಅಮ್ಮ ಇದ್ದ ಹಾಗಿರಬೇಕು ಅಷ್ಟೆ’ ಈ ಉತ್ತರದ ಕಣ್ಣಿಂದ ನೋಡಿದಾಗ ಅನ್ನಿಸಿತು ಒಬ್ಬ ಮಾದರಿ ಅಮ್ಮ ಇದ್ದಾಳೆ ಮತ್ತು ಅವಳು ಪ್ರತಿಯೊಬ್ಬ ಮಗುವಿನ ಬಳಿಯೂ ಇದ್ದಾಳೆ. ಎಷ್ಟು ಮಕ್ಕಳ ಮನಸ್ಸುಗಳೋ ಅಷ್ಟು ಅಮ್ಮಂದಿರು…. ಅಮ್ಮ ಎಂದರೆ ಅದು ಒಂದು ಸಂಭೋದನೆಯಲ್ಲ, ಒಂದು ಸಂಬಂಧ ಸೂಚಕವಲ್ಲ, ಅದು ಒಂದು ಮನೋಭಾವ.
 

‍ಲೇಖಕರು G

May 15, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

22 ಪ್ರತಿಕ್ರಿಯೆಗಳು

  1. Dr. Prabhakar M. Nimbargi

    Your narration, I would love to believe, appears to be better than the picture itself. Many a times silence conveys every emotion, mother’s silence too. Thanks for a deep insight into a mother.

    ಪ್ರತಿಕ್ರಿಯೆ
  2. Vidya Rao

    “ಹಾಗೆ ಮಗುವಿಗೆ ಎಚ್ಚರಾದರೆ ಎಲ್ಲಿ ಆ ಅಳು ಸಂಜೆತನಕ ಮನಸಲ್ಲಿ ಅಸಹಾಯಕತೆಯ ಮೊಟ್ಟೆಗೆ ನೋವಿನ ಕಾವು ಕೊಡುತ್ತದೋ ಎಂದು ಸದ್ದು ಮಾಡದೆ ಕದ ದಾಟುವ ಎಲ್ಲ ಅಮ್ಮಂದಿರೂ ಬದಲಾಗಿದ್ದಾರೆ ಮತ್ತು ಬದಲಾಗಿಲ್ಲ. ಇಂದು ಅಪ್ಪ ಸಂಬಳ ತಂದು ಕೊಡುತ್ತಾನೆ ಎನ್ನುವ ಖಾತ್ರಿ ಇಲ್ಲದ ಮನೆಗಳಿವೆ, ಅಪ್ಪನೇ ಇಲ್ಲದ ಒಂಟಿ ಅಮ್ಮಂದಿರ ಮನೆಗಳಿವೆ, ಅಪ್ಪನನ್ನೂ ಅಮ್ಮನೇ ಸಾಕುವ ಮನೆಗಳಿವೆ … ಈ ಎಲ್ಲಾ ಮನೆಗಳಲ್ಲೂ ಅಮ್ಮ ಬದಲಾಗಿದ್ದಾಳೆ, ಅಮ್ಮ ಸ್ವಲ್ಪ ಅಪ್ಪನಾಗಿದ್ದಾಳೆ, ಸ್ವಲ್ಪ ಅಮ್ಮನಾಗಿದ್ದಾಳೆ. ಹಾಗೆ ಅಮ್ಮನಿಲ್ಲದ ಮನೆಗಳೂ ಇವೆ, ಅಪ್ಪ ಅಮ್ಮನಾದ ಮನೆಗಳೂ ಇವೆ. ಯಾವುದೇ ಸಂಬಂಧಕ್ಕೂ ಗ್ಯಾರೆಂಟಿ ಇರದ ಕಾಲಮಾನದ ನಡುವೆ ಬದಲಾವಣೆಯೊಂದೇ ಗ್ಯಾರೆಂಟಿ ಇಲ್ಲಿ.” ಇದೇ ಅಲ್ಲವೆ ವಾಸ್ತವ? ಕಾಲಕ್ಕೂ, ಮನಸ್ಸುಗಳಿಗೂ, ಸಂದರ್ಭಗಳಿಗೂ ನಡೆಯುವ ಸಂಧಾನ, ವಿಘಟನೆ? ಬಹಳ ಚಂದದ ಲೇಖನ. ಇಷ್ಟವಾಯ್ತು.

    ಪ್ರತಿಕ್ರಿಯೆ
  3. bharathi b v

    ಅಮ್ಮನೆನ್ನುವ ಸಿದ್ಧ ಫ್ರೇಮಿನೊಳಗೆ ಎಂದೂ ಬಿಗಿಯಾಗಿ ತುರುಕಿಸಲ್ಪಡಲು ಒಪ್ಪದ ನಾನೂ ನಿನ್ನಂಥದ್ದೇ ‘ಅಮ್ಮ’! ಯಾಕೋ ಖುಷಿಯಾಗಿಹೋಯ್ತು ನಿನ್ನ ಲೇಖನ ಓದಿ ..

    ಪ್ರತಿಕ್ರಿಯೆ
  4. umavallish

    ಸಂದ್ಯಾ ಅವರೇ ತುಂಬಾ ಮೌಲಿಕ ವಾದ ಬರಹ. ”ತಾಯ್ತನ ಅಂತರಂಗ” ಬಹಳ ಅರ್ಥಪೂರ್ಣವಾದ ಮಾತು.

    ಪ್ರತಿಕ್ರಿಯೆ
  5. Vinod Kumar Bangalore

    ಏನು ? ನಾವು ಸಿನಿಮಾ ನೋಡುವುದು ಬೇಡವೋ ? ನಗು, ಅಳು ಎಲ್ಲವನ್ನ ನಿಮ್ಮ ಲೇಖನದಿಂದ ಹೊರಹೊಮ್ಮಿಸಿದ್ದೀರಿ. ನಿಮ್ಮ ಕೊನೆಯ ಸಾಲುಗಳನ್ನ ನಾನೂ ಒಪ್ಪುತ್ತೇನೆ. ಉದಾಹರಣೆಗೆ ನಾನು ನನ್ನ ಕನಸು ಸಿನಿಮಾದಲ್ಲಿರುವಂತಹ ಅಪ್ಪಂದಿರು, ನಾ ಹತ್ತಿರದಲ್ಲೇ ಕಂಡಂತಹ ಕೆಲವು ಗಂಡಸರು.

    ಪ್ರತಿಕ್ರಿಯೆ
  6. ಕುಸುಮಬಾಲೆ

    ಅಕ್ಕಾ,ಎಂದಿನಂತೆ ಸೂಕ್ಷ್ಮ. ಅವತ್ತು ಫೆನಿನಿಸಂ ಬಗ್ಗೆ ಬರೆದಿದ್ದು.ಭಿನ್ನವೆಂದ ಮಾತ್ರಕ್ಕೆ ಕೀಳಲ್ಲ ಎಂದು ಬರೆದದ್ದು ತುಂಬ ಇಷ್ಟವಾದ ಲೇಖನಗಳು.ಅದರ ನಂತರ ತುಂಬ ಇಷ್ಟದ ಸಾಲಿಗೆ ಇದೂ ಸೇರಿತು.ಮತ್ತು ನನ್ನ ಯಾವತ್ತಿನದೋ ಪದ್ಯ ಹೆಕ್ಕಿದ್ದು ನೋಡಿ,ಓದಿನ ಸೂಕ್ಷ್ಮಕೆ ಬೆರಗಾಗಿದ್ದೇನೆ.

    ಪ್ರತಿಕ್ರಿಯೆ
  7. noname

    ನಾವು ’ಮಾದರಿ’ ಎಂದು ಕರೆಯುವ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ಕೆಲವು ಪಲ್ಲಟವಾದರೆ ಕೆಲವು ಬೇರೆ ರೂಪ ಧರಿಸಿ ನಿಲ್ಲುತ್ತದೆ. ಕಾಲ, ಕಾಲಮಾನ, ಸಂಬಂಧ, ಸಂಭೋದನೆ, ಸ್ಪರ್ಶ ಎಲ್ಲವೂ ಹಾಗೆ ಬದಲಾಗುವ ಕಾಲದ ಜೊತೆಯಲ್ಲಿ ಎಲ್ಲವನ್ನೂ ಒಳಗೊಳ್ಳುತ್ತಾ ನದಿಯಾಗಿ ಎದೆಯಿಂದ ಎದೆಗೆ ಪ್ರೀತಿ ಸಾಗುತ್ತಲೇ ಇರುತ್ತದೆ.
    Made me to ponder.

    ಪ್ರತಿಕ್ರಿಯೆ
  8. ಬಾನಿ

    ಸಂಧ್ಯಾ ನಿಮ್ಮ ಸಾಲುಗಳಲ್ಲಿ ಸೂಜಿಗಲ್ಲಿನಂಥಿ ಶಕ್ತಿಯಿದೆ

    ಪ್ರತಿಕ್ರಿಯೆ
  9. Sarala

    As always, such a nice review Sandhya 🙂
    ಪಿಕು ನೋಡಿದಾಗ ನನ್ನ ಮಗಳನ್ನೇ ದೀಪಿಕಾಳಲ್ಲಿ ಕಂಡೆ ಅದೇ argumentsu ಅದೇ ಜೋರು, ಅದೇ ಪ್ರೀತಿ , ಹಾಗೆ ಅವಳೇ ನನ್ನ ಅಮ್ಮನಾಗುವ ಕ್ಷಣಗಳು 🙂
    ಮುದನೀಡುವ ಆತ್ಮೀಯವೆನಿಸುವ ಅತ್ಯಂತ ಸಹಜವೆನಿಸುವ ದೃಶ್ಯಗಳು ಸಂಭಾಷಣೆಗಳು ನೋಟಗಳನ್ನು ಒಳಗೊಂಡ ಫೀಲ್ ಗುಡ್ ಮೂವಿ

    ಪ್ರತಿಕ್ರಿಯೆ
  10. Sumangala

    ಇಷ್ಟವಾಯಿತು ಸಂಧ್ಯಾ, ತಟ್ಟುವಂತೆ ಬರೆದಿದ್ದೀರಿ… ಪಿಕು ಸಿನಿಮಾ ನೋಡಿದಂತೆ ಆಯಿತು!

    ಪ್ರತಿಕ್ರಿಯೆ
  11. shobha venkatesh

    vimarsheya jothe nimma bhavanegalana sparsha namma manakku chennagi tattutadde sandhya…nannu yavagalu heluva haage nimma lekhana dalli hale beru hosa chigurina chinatanegalu chennagi abhiyakthavaguthade

    ಪ್ರತಿಕ್ರಿಯೆ
  12. ಅಕ್ಕಿಮಂಗಲ ಮಂಜುನಾಥ

    ಲೇಖನ; ಇಷ್ಟವಾಯ್ತು.

    ಪ್ರತಿಕ್ರಿಯೆ
  13. ಲಕ್ಷ್ಮೀಕಾಂತ ಇಟ್ನಾಳ

    beautifully rendered analysis, and the unfolding story of a film, which has a meaning of inner life. Now it is a movie in my list, a must watch. Some of the sentences regarding ‘mother’ are not mere sentences, but lines engrooved deep in the hearts, never to be forgotten. …thank you Sandhya ji for a class writing…..

    ಪ್ರತಿಕ್ರಿಯೆ
  14. ಸಂಧ್ಯಾರಾಣಿ

    ಲೇಖನ ಓದಿದ, ಪ್ರತಿಕ್ರಯಿಸಿದ ನಿಮ್ಮೆಲ್ಲರ ಮನಸ್ಸಿನಲ್ಲಿರುವ ಅಮ್ಮನಿಗೆ ಶರಣು…

    ಪ್ರತಿಕ್ರಿಯೆ
  15. Gn Nagaraj

    ಕೊನೆಯ ಪ್ಯಾರಾದ ಸಮಿಂಗ್ ಅಪ್ ಚೆನ್ನಾಗಿದೆ.

    ಪ್ರತಿಕ್ರಿಯೆ
  16. Anil Talikoti

    ಪೀಕೆ ಇರಲಿ ಯಾ ಪೀಕೂ , ಹೋಗಿ ನೋಡಲೇ ಬೇಕು ಎನಿಸುವ ಚಂದದ ಬರಹ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: