ಸಂಧ್ಯಾರಾಣಿ ಕಾಲಂ : ಅಂದಹಾಗೆ ನೀವು ಫೆಮಿನಿಸ್ಟಾ?

ಮಹಿಳಾ ದಿನಾಚರಣೆಗೆಂದು ಒಂದು ನೋಟ್ ಬರೆಯಲು ಕುಳಿತಿದ್ದೆ.
“ಹೆಣ್ಣಾಗಿ ನಿಮ್ಮ ಸಂಭ್ರಮದ ಘಳಿಗೆಯ ಬಗ್ಗೆ ಬರೆಯಿರಿ ಎಂದು ಪತ್ರಿಕೆಯಲ್ಲಿದ್ದ ಮಿತ್ರರೊಬ್ಬರ ಕರೆ ಬಂದಾಗ ಸಂತೋಷದಿಂದಲೇ ತಲೆ ಆಡಿಸಿದ್ದೆ, ಸಂಭ್ರಮದ ಘಳಿಗೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವುದೂ ಒಂದು ಸಂಭ್ರಮವೇ ಎನ್ನುವ ಉತ್ಸಾಹದಲ್ಲಿ. ಈಗ ಬರೆಯಲು ಕೂತಿದ್ದೇನೆ, ಎಷ್ಟೊಂದು ಸಂತಸದ ಘಳಿಗೆಗಳು ಸಾಲು ದೀಪಗಳಂತೆ ನನ್ನ ನೆನ್ನೆಗಳನ್ನೆಲ್ಲಾ ಬೆಳಕಾಗಿಸಿದ್ದವು.
ಅಪ್ಪನ ಜೊತೆ ಜಾವಾ ಬೈಕ್ ನಲ್ಲಿ ಕೂತು ಹೆಮ್ಮೆಯಿಂದ ಮನೆ ಖರೀದಿ ಮಾತುಕತೆಗೆ ಹೋಗಿದ್ದು, ಇಂಗ್ಲಿಷ್ ಬರದೆ ಪರದಾಡಿ ಅವಮಾನಕ್ಕೀಡಾಗಿದ್ದ ಹೈಸ್ಕೂಲಿನಲ್ಲಿ, ಹತ್ತನೆಯ ತರಗತಿಯಲ್ಲಿ ಶಾಲೆಗೇ ಹೆಚ್ಚಿನ ಅಂಕ ಗಳಿಸಿದ್ದು, ಎಂತಹ ಪರಿಸ್ಥಿತಿಯಲ್ಲೂ ಓದು ನಿಲ್ಲಿಸದಿದ್ದದ್ದು, ಮೊದಲ ಸಂಬಳದಲ್ಲಿ ಅಪ್ಪನಿಗೆ ಕೈಗಡಿಯಾರ ತಂದದ್ದು, ಮೊದಲ ಲೇಖನ ಬರೆದಾಗ ಕೈ ನಡುಗಿದ್ದು, ಪತ್ರಿಕೆಯಲ್ಲಿ ನನ್ನ ಹೆಸರು ಲೇಖನದ ಜೊತೆ ಬಂದಾಗ ಸಂಭ್ರಮದಲ್ಲಿ ಕಣ್ಣು ಮಂಜಾಗಿದ್ದು, ತಂಗಿಯ ಮಗನಿಗೆ ಎಣ್ಣೆ ಹಚ್ಚಿ ಮೀಯಿಸಿದ್ದು, ಇನ್ನೊಬ್ಬ ಪುಟ್ಟನನ್ನು ಜೋಗುಳ ಹಾಡಿ ಮಲಗಿಸಿದ್ದು ಎಲ್ಲವೂ ನೆನಪಾದವು.
ಆದರೆ ಇವುಗಳಲ್ಲಿ ಎಲ್ಲಾ ಘಳಿಗೆಗಳೂ ನಾನು ಹೆಣ್ಣಾಗಿದ್ದರಿಂದ ಸಿಕ್ಕಿದ್ದಲ್ಲ. ಮತ್ತು ಎಲ್ಲವೂ ಖರೀದಿಗೆ ಸಿಕ್ಕಿದ್ದೂ ಅಲ್ಲ. ಖುಷಿಗೆ, ಸಂಭ್ರಮಕ್ಕೆ ಇವ್ಯಾವುದರ ಹಂಗೂ ಇಲ್ಲ. ಸಂಭ್ರಮ ಹೊರಗಿನ ಜಗತ್ತಿಗೆ ಸಂಬಂಧಿಸಿದ್ದಕ್ಕಿಂತಾ ಹೆಚ್ಚಾಗಿ ಒಳಗಿನ ಜಗತ್ತಿಗೆ ಸಂಬಂಧಿಸಿದ್ದು. ಹಾಗೆ ಸಂತಸ ಹೆಕ್ಕುವ ನಿರ್ಧಾರ ಒಮ್ಮೆ ತೆಗೆದುಕೊಂಡು ಬಿಟ್ಟರೆ ಒಗ್ಗರಣೆಯ ಘಮ, ಮಳೆಯ ಮುತ್ತು, ಹೊಸ ಪುಸ್ತಕ, ಸಿಕ್ಕ ಹಾಡು, ಅವನ ಕಣ್ಣುಗಳಲ್ಲಿನ ಕವನ ಎಲ್ಲವೂ ಸಂತಸ ಉಕ್ಕಿಸುತ್ತದೆ. ಒಮ್ಮೆ ಆ ನಿರ್ಧಾರ ತೆಗೆದುಕೊಂಡು ನೋಡಿ!”.
ಬರೆದು ಮುಗಿಸಿದಾಗ ಅನ್ನಿಸಿದ್ದು ಇದು ಯಾವುದೇ ದಿನದ ಮಾತಾದೀತು, ಮಹಿಳಾ ದಿನಾಚರಣೆಗೆ ಯಾಕೆ ಅಂತ. ಗೊತ್ತಿಲ್ಲ ನನಗೆ, ಹಾಗೆ ಎಂದೂ ಪ್ರತ್ಯೇಕವಾಗಿ ಯೋಚಿಸಲಾಗಿಲ್ಲ ನನಗೆ. ಬಹುಶಃ ಗಂಡು ಮಕ್ಕಳಿಲ್ಲದ ಮನೆಯಲ್ಲಿ, ಹಿರಿಯ ಮಗಳಾಗಿ ಹುಟ್ಟಿದ್ದಕ್ಕಿರಬೇಕು, ಅಪ್ಪ ಎಂದೂ ’ನೀನು ಹೆಣ್ಣು ಮಗು, ಆದ್ದರಿಂದ…..’ ಎಂದು ಹೇಳದೆ ಬೆಳಸಿದ್ದಕ್ಕಿರಬೇಕು, ಬದುಕಿನ ನಿರ್ಧಾರಗಳನ್ನೂ, ಆ ನಿರ್ಧಾರಗಳ ಜವಾಬ್ದಾರಿಯನ್ನೂ ಒಪ್ಪಿಕೊಂಡೇ ಬದುಕಿದ್ದಕ್ಕಿರಬೇಕು, ಏನೇ ಆದರೂ, ಕುಸಿದು ಕೂರದೇ, ’ಸರಿ, ಮುಂದೇನು’ ಎಂದು ಪ್ರಶ್ನೆ ಕೇಳುವುದನ್ನೇ ಬದುಕು ಕಲಿಸಿದಕ್ಕಿರಬೇಕು… ಗೊತ್ತಿಲ್ಲ, ಪ್ರಶ್ನೆ ಎದುರಾದಾಗೆಲ್ಲಾ ನಾನು ಉತ್ತರ ಹುಡುಕಿದ್ದೇನೆ, ಪ್ರತಿ ಸಲ ಉತ್ತರ ಸಿಕ್ಕೇ ಸಿಗುತ್ತದೆ ಎನ್ನುವ ಭರವಸೆ ಇಲ್ಲದಾಗಲೂ ಸಹ. ಹಾಗೆ ಬದುಕಿದ್ದಾಗ ನಾನು ಹೆಣ್ಣು ಅನ್ನುವುದು ತೀರಾ ದೊಡ್ಡ ಸಮಸ್ಯೆ ಎಂದು ನನಗೆಂದೂ ಅನ್ನಿಸಿಲ್ಲ. ನನಗೆ ಹೆಣ್ತನ ಹೊರೆಯಲ್ಲ, ಸಂಭ್ರಮ.
ಅದಕ್ಕೇ ಇರಬೇಕು ಫೆಮಿನಿಸಂ ನನಗೆಂದೂ ಒಂದು ಘೋಷಣೆಯಾಗಿ ಕಂಡಿಲ್ಲ. ಅದು ಪ್ರತಿಭಟನೆ ಎನ್ನುವುದಕ್ಕಿಂತ ಹೆಚ್ಚಾಗಿ ಅದು ನಾನು ಬದುಕುವ ರೀತಿ. ಪ್ರತಿಭಟನೆ ಎನ್ನುವುದರಲ್ಲೇ ಅದು ಇನ್ನೊಬ್ಬರು ಆ ಸತ್ಯವನ್ನು ಒಪ್ಪದ್ದರಿಂದ, ಅವರ ಒಪ್ಪಿಗೆ ನನಗೆ ಮುಖ್ಯವಾದ್ದರಿಂದ, ಅವರನ್ನು ಒಪ್ಪಿಸಲು ನಾನು ಮಾಡುವ ಪ್ರಯತ್ನ ಎನ್ನುವಂತೆ ನನಗೆ ಕಾಣುತ್ತದೆ. ಆದರೆ ನನಗೆ ’ಅವರ’ ಒಪ್ಪಿಗೆ ಮುಖ್ಯವಾಗದೆಯೇ ಇದ್ದರೆ? ಆಗ ಫೆಮಿನಿಸಂ ನನಗೆ ಪ್ರತಿಭಟನೆಯಲ್ಲ, ನನ್ನ ಇರುವಿಕೆಯ ವಿಧಾನ ಅಷ್ಟೇ.
ಹೀಗೆ ಫೆಮಿನಿಸಂ ಬಗ್ಗೆ ಯೋಚಿಸಿದಾಗೆಲ್ಲಾ ನನಗೆ ನೆನಪಾಗುವ ಎರಡು ಹೆಸರುಗಳು ಭಾರ್ಗವಿ ನಾರಾಯಣ್ ಮತ್ತು ಇಂದಿರಾ ಲಂಕೇಶ್. ಇಬ್ಬರೂ ತಮ್ಮ ತಮ್ಮ ಬದುಕಿನ ಬಗ್ಗೆ ಬರೆದುಕೊಂಡಿದ್ದಾರೆ. ಭಾರ್ಗವಿ ಅವರದು ಆತ್ಮ ಚರಿತ್ರೆಯಾದರೆ, ಇಂದಿರಾ ಅವರದು ದಾಂಪತ್ಯ ಗೀತೆ. ಎರಡೂ ಪುಸ್ತಕಗಳ ಹೆಸರುಗಳೂ ಅತ್ಯಂತ ಧ್ವನಿ ಪೂರ್ಣ, ಭಾರ್ಗವಿ ತಮ್ಮ ಪುಸ್ತಕವನ್ನು ’ನಾನು ಭಾರ್ಗವಿ’ ಎಂದು ಹೆಸರಿಸಿದ್ದಾರೆ. ಆ ಹೆಸರಿನಲ್ಲೇ ಒಂದು ಆತ್ಮವಿಶ್ವಾಸವಿದೆ, ಒಂದು ಘನತೆ ಇದೆ. ತಮ್ಮ ಕಾಲದ ಎಲ್ಲಾ ಒಪ್ಪಿತ ಮೌಲ್ಯಗಳ ನದುವೆಯೂ ತಮ್ಮದೇ ಆದ ಜಗತ್ತನ್ನು ಕಟ್ಟಿಕೊಂಡು ಬದುಕಿದವರು ಭಾರ್ಗವಿ.
ಅದೇ ರೀತಿ ಇಂದಿರಾ ಲಂಕೇಶ್ ಅವರ ಪುಸ್ತಕ, ’ಹುಳಿಮಾವು ಮತ್ತು ನಾನು’. ಲಂಕೇಶ್ ತಮ್ಮನ್ನು ತಾವು ’ಹುಳಿಮಾವಿನ ಮರ’ ಎಂದು ಕರೆದುಕೊಳ್ಳುತ್ತಾರೆ, ಇಂದಿರಾ ತಮ್ಮ ಪುಸ್ತಕಕ್ಕೆ ’ಹುಳಿ ಮಾವು ಮತ್ತು ನಾನು’ ಎಂದು ಹೆಸರಿಡುತ್ತಾರೆ. ಕಡಲನ್ನು ಸೇರಿದರೆ ನದಿ ತನ್ನ ಅಸ್ತಿತ್ವವನ್ನು ಕಳೆದುಕೊಂಡುಬಿಡುತ್ತದೆ ಎನ್ನುವವರಿಗೆ ಸವಾಲಾಗುವಂತೆ ಕಡಲಿನಂತಹ ಲಂಕೇಶರ ಜೊತೆಗಿದ್ದೂ ತಮ್ಮತನ ಮತ್ತು ಅಸ್ತಿತ್ವವನ್ನು ಉಳಿಸಿಕೊಂಡ ಜೀವನದಿ ಇಂದಿರಾ.
ಇವರಿಬ್ಬರೂ ನಾನು ಗೌರವಿಸುವ ಮಹಿಳೆಯರು, ಎಂದೂ ಫೆಮಿನಿಸಂ ಬಗ್ಗೆ ಮಾತನಾಡದೆಯೂ ಹೆಣ್ತನದ ಘನತೆ ಕಾಯ್ದುಕೊಂಡು ಬದುಕಿದವರು. ತಮ್ಮ ನಿರ್ಧಾರಗಳನ್ನು ತಾವೆ ತೆಗೆದುಕೊಂಡವರು, ಅವುಗಳ ಜವಾಬ್ದಾರಿಯನ್ನೂ ಹೊತ್ತವರು. ಆರ್ಥಿಕವಾಗಿ ತಮ್ಮನ್ನು ತಾವು ಸ್ವಾವಲಂಬಿಗಳನ್ನಾಗಿಟ್ಟುಕೊಂಡವರು, ಆ ಮೂಲಕ ತಮ್ಮ ದನಿಗೆ ಶಕ್ತಿ ಕಂಡುಕೊಂಡವರು. ಬದುಕು ತಮ್ಮೆದುರಿಗೆ ಎಸೆದ ಎಲ್ಲಾ ಸವಾಲುಗಳ ನಡುವೆಯೂ ಕುಸಿದು ಕೂರದೆ ಮುಂದೆ ನಡೆದವರು. ಬಹುಶಃ ಫೆಮಿನಿಸಂ ಎಂದರೆ ಅದೇ ಏನೋ, ತಮ್ಮ ಅಸ್ತಿತ್ವ, ಇರುವಿಕೆ ಮತ್ತು ಸಂತೋಷಕ್ಕೆ ಇನ್ನೊಬ್ಬರನ್ನು ಆಶ್ರಯಿಸದೆ ಧೈರ್ಯ ಮತ್ತು ನೆಮ್ಮದಿಯನ್ನು ತಮ್ಮೊಳಗೆ ಕಂಡುಕೊಂಡವರು.
ನಾನೆಂದೂ ಎಲ್ಲಾ ಹೆಂಗಸರೂ ಪಾಪದವರು. ಗಂಡಸರೆಲ್ಲಾ ಕೆಟ್ಟವರು, ಹೆಣ್ಣುಗಳ ಎಲ್ಲಾ ಸಂಕಟಕ್ಕೂ ಗಂಡಸರೇ ಕಾರಣ ಎಂದು ಹೇಳಲಾರೆ. ಏಕೆಂದರೆ ಒಳ್ಳೆಯತನ ಮತ್ತು ದುಷ್ಟತನ ಲಿಂಗಾಧಾರಿತವಲ್ಲ ಎಂದು ಬದುಕು ನನಗೆ ಕಲಿಸಿದೆ. ಹಾಗಾಗಿಯೇ ನನಗೆ ಫೆಮಿನಿಸಂ ಎನ್ನುವ ಪದ ಅಷ್ಟು ಸರಳವಾಗಿ ಕಂಡಿಲ್ಲ. ಗಂಡಸರಲ್ಲಿನ ಫೆಮಿನಿಸ್ಟ್ ಗಳನ್ನೂ ನಾನು ಕಂಡಿದ್ದೇನೆ, ಹೆಂಗಸರಲ್ಲಿರುವ ಸನಾತನಿಗಳನ್ನೂ ಸಹ.
ಫೆಮಿನಿಸಂ ಮಾತಿರಲಿ, ಗುಣಗಳನ್ನು, ಸಂವೇದನೆಗಳನ್ನೂ ಸಹ ನಾವು ಹಾಗೆ ಪ್ರತ್ಯೇಕಿಸಿ ನೋಡಲು ಸಾಧ್ಯವಾಗುವುದಿಲ್ಲ. ಅಷ್ಟಕ್ಕೂ ಇದು ಸ್ತ್ರೀ ಸಂವೇದನೆ, ಇದು ಪುರುಷ ಸಂವೇದನೆ ಎಂದು ಖಚಿತವಾಗಿ ವಿಂಗಡನೆ ಮಾಡುವುದೇ ತಪ್ಪು. ಸಂವೇದನೆ ಅಂದರೆ ಸಂವೇದನೆ ಅಷ್ಟೆ. ಇಲ್ಲಿ ನನಗೆ ಕಾಯ್ಕಿಣಿಯವರ ಒಂದು ಕಥೆ ನೆನಪಾಗುತ್ತದೆ. ಅವರ ’ಚಂದಿರನೇತಕೆ ಓಡುವನಮ್ಮ’ ಕಥೆಯನ್ನು ಮೌನೇಶ್ ಬಡಿಗೇರ್ ’ಚಂದಿರನ ಚೂರು’ ಎನ್ನುವ ನಾಟಕವಾಗಿಸಿದ್ದರು.
ಕಥೆ ನಡೆಯುವುದು ಒಂದು ರಾತ್ರಿಯ ಸಮಯ, ಮುಂಬೈಯ ಭಯ ಹುಟ್ಟಿಸುವ ಯಾಂತ್ರೀಕ ಬದುಕಿನ ನಡುವೆ, ’ಕುಂಡೆಗೆ ಕೆಂಪು ದೀಪ ಸಿಕ್ಕಿಸಿಕೊಂಡು ಓಡುವ’, ಮೇಣದ ಬೊಂಬೆಗಳನ್ನು ಹೊತ್ತಂತಹ ಸ್ಕೂಟರು, ಕಾರು ಬಸ್ಸುಗಳು ಮಾತ್ರ ಓಡಾಡುವ ಹಗಲು ಸೋತು ಬಿದ್ದಂತಹ ಇರುಳು. ಪಾರ್ಥಿವ ಎರಡನೆಯ ಶಿಫ್ಟ್ ಮುಗಿಸಿ ಕಾರ್ಖಾನೆಯ ಗಾಡಿ ಇಳಿದು ರಸ್ತೆ ದಾಟುತ್ತಿರುವಾಗ, ವೇಗವಾಗಿ ಓಡುತ್ತಿರುವ ಗಾಡಿಯೊಂದು ಅವನನ್ನು ನೂಕಿ, ಬೀಳಿಸಿ ಹೋಗಿಬಿಡುತ್ತದೆ. ರಸ್ತೆ ಎದ್ದು ಬಂದು ಕಪಾಳಕ್ಕೆ ಬಿದ್ದಂತೆ ಬೀಳುವ ಪಾರ್ಥಿವನ ಕಣ್ಣ ಕೊನೆಯಿಂದಲೇ ರಸ್ತೆ ಶುರುವಾದಂತೆ, ಕಥೆ ಸಹ ಬಿಚ್ಚಿಕೊಳ್ಳತೊಡಗುತ್ತದೆ.
ಹಳ್ಳಿಯಲ್ಲಿ ಹುಟ್ಟಿ, ಬೆಳೆದ ಪಾರ್ಥಿವ ಮುಂಬೈಗೂ ತನ್ನೊಂದಿಗೆ ಹಳ್ಳಿಯ ತುಣುಕೊಂದನ್ನು ಹೊತ್ತು ತಂದಿರುತ್ತಾನೆ. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು, ತಂದೆಯ ಆರೈಕೆಯಲ್ಲಿ ಬೆಳೆಯುವ ಅವನೆದೆಯಲ್ಲಿ ನಿರಂತರವಾಗಿ ಒಬ್ಬ ತಾಯಿ ಇರುತ್ತಾಳೆ. ಅವನ ಹೆಂಡತಿ ಪಮ್ಮಿ. ಭಾರತ ವಿಭಜನೆಗೊಂಡಾಗ ಭಾರತಕ್ಕೆ ಬಂದ ಅವಳ ತಂದೆ ಗೇಟ್ ವೇ ಆಫ್ ಒಂಡಿಯಾದಲ್ಲಿ ಟೋಪಿ ಮಾರುತ್ತಿರುತ್ತಾನೆ, ಒಂದು ಟೋಪಿ ಮಾರಿದರೆ ಒಂದು ತುತ್ತು ಅನ್ನುವ ಪರಿಸ್ಥಿತಿ. ತಂದೆಯನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಳ್ಳುವ ಪಮ್ಮಿ, ಅಪ್ಪನಿಲ್ಲದ ಮನೆಯಲ್ಲಿ ಬೆಳೆಯುವ ಪಮ್ಮಿ ಸ್ವಾಭಾವಿಕವಾಗಿಯೇ ಹೆಣ್ತನದ ಗುಣವನ್ನೂ ಹಿಮ್ಮೆಟ್ಟಿಸುವ ಜವಾಬ್ದಾರಿ, ಲೆಕ್ಕಾಚಾರದೊಂದಿಗೆ ಬೆಳೆಯುತ್ತಾಳೆ. ಅವಳ ಎದೆಯಲ್ಲಿರುವುದು ನಾಳೆಯ ಬಗ್ಗೆ ಒಂದು ದೃಷ್ಟಿಯಿಟ್ಟುಕೊಂಡೇ ಇಂದು ಬದುಕುವ ಒಬ್ಬ ಜವಾಬ್ದಾರೀ ಹೊತ್ತ ತಂದೆ.

ಹೀಗೆ ಅಮ್ಮನಂತಹ ಅಪ್ಪ ಮತ್ತು ಅಪ್ಪನಂತಹ ಅಮ್ಮನ ಮನೆಯ ಕೂಸು ಪ್ರಮೋದ. ತಾನು ಕಳೆದುಕೊಂಡ ಮಮತೆಯೆಲ್ಲವನ್ನೂ ಸುರಿದು ಅಪ್ಪ ಅವನನ್ನು ಲಾಲಿಸಿದರೆ, ತನ್ನ ಹಾಗೆ ಅಭದ್ರತೆಯಲ್ಲಿ ಅವನು ಬಾಳಬಾರದು ಎಂದು ಆರ್ಥಿಕ ಸಧೃಢತೆಯನ್ನೇ ಮಾನದಂಡವಾಗಿ ನಂಬುವ ಪಮ್ಮಿ ಅವನಲ್ಲಿ ಒಬ್ಬ ಬೆಳೆದ ಗಂಡನ್ನು, ಮಿಜಿಮಿಜಿಯಲ್ಲದ ಗಟ್ಟಿ ಮನಸ್ಸಿನ ಬ್ಯುಸಿನೆಸ್ ಮಾನ್ ನನ್ನು ಕಾಣಲು ಪಣತೊಟ್ಟು ಅವನನ್ನು ಬೆಳೆಸುತ್ತಾಳೆ.
ಇದು ಒಂದು ಉದಾಹರಣೆ ಅಷ್ಟೆ. ಹೀಗೆ ಗಂಡಿನಲ್ಲಿ ’ಹೆಣ್ಣು’, ಹೆಣ್ಣಿನಲ್ಲಿ ’ಗಂಡು’ ನಾವು ನೋಡಿಯೇ ಇರುತ್ತೇವೆ. ಹಾಗಿರುವಾಗ ಹೇಗೆ ಪ್ರತ್ಯೇಕಿಸಲಿ ಇದು ಹೆಣ್ಣು ಸಂವೇದನೆ, ಇದು ಗಂಡು ಸಂವೇದನೆ ಎಂದು?
ಇವೆಲ್ಲದರ ನಡುವೆ ಕೆಲವೊಮ್ಮೆ ’ನೀವು ಫೆಮಿನಿಸ್ಟಾ’ ಎಂದು ಕುಹಕದ ದನಿಯಲ್ಲಿ ಯಾರಾದರೂ ಕೇಳಿದರೆ, ಮೊದಲು ಅವರಿಂದ ಆ ಪದಕ್ಕೆ ಅವರ ವ್ಯಾಖ್ಯಾನವನ್ನು ಕೇಳಬೇಕು ಅನ್ನಿಸುತ್ತದೆ. ಮೊದಲೆಲ್ಲಾ ಯಾರಾದರೂ ಹಾಗೆ ಕೇಳಿದರೆ ’ಇಲ್ಲ, ನಾನು ಹ್ಯೂಮನಿಸ್ಟ್’ ಎಂದು ಪಟ್ಟನೆ ಹೇಳುತ್ತಿದ್ದೆ. ಆದರೆ ಇದು ಇಷ್ಟು ಸರಳವಲ್ಲ ಎನ್ನುವುದು ನನಗೆ ಈಗ ಅರ್ಥವಾಗಿದೆ.
ನನ್ನ ಸುತ್ತಲಿನ ಅನೇಕ ಘಟನೆಗಳು, ಕ್ರಿಯೆ ಹಾಗು ಪ್ರತಿಕ್ರಿಯೆಗಳು ನನ್ನನ್ನು ಈ ಬಗ್ಗೆ ಯೋಚಿಸುವಂತೆ ಮಾಡಿವೆ. ಹಾಗೆ ನೋಡಿದರೆ ಜಾತಿಯ ಕಾರಣಕ್ಕೆ, ವರ್ಗದ ಕಾರಣಕ್ಕೆ ಇರುವ ಅಸಮಾನತೆಯ ವಿರುದ್ಧ ಆದಷ್ಟು ತೀವ್ರವಾದ ಪ್ರತಿಭಟನೆ ಹೆಣ್ಣು ಎನ್ನುವ ಕಾರಣಕ್ಕೆ ಇರುವ ಅಸಮಾನತೆಯ ಬಗ್ಗೆ ಆಗಿಲ್ಲ ಎಂದೇ ಹೇಳಬೇಕು. ತಾನು ಹೆಣ್ಣು ಅನ್ನುವ ಕಾರಣಕ್ಕೇ ಮಹಿಳೆ ಮನೆಯ ಒಳಗೆ, ಹೊರಗೆ, ಕೆಲಸ ಮಾಡುವ ಸ್ಥಳದಲ್ಲಿ ಎಲ್ಲಾ ಕಡೆಯೂ ಎದುರಿಸುವ ಸಮಸ್ಯೆಗಳನ್ನು ನೋಡುತ್ತಾ, ಅದರ ಬಗ್ಗೆ ಓದುತ್ತಾ ಹೋದಂತೆ ಸಮಸ್ಯೆಯ ಆಳ ನಮಗೆ ಅರಿವಾಗುತ್ತದೆ.
ಹಳ್ಳಿ, ತಾಲೂಕು, ಕಾಪ್ ಪಂಚಾಯತಿಯ ಮಾತು ಬಿಡಿ, ಇಲ್ಲಿ ನಮ್ಮ ನಡುವಿನಲ್ಲೇ, ಐದಾರು ವರ್ಷಗಳ ಹಿಂದೆ ಒಬ್ಬ ಹೆಣ್ಣು ಮಗಳು ಗಂಡನ ದೈಹಿಕ ಹಿಂಸೆ ತಡೆಯಲಾರದೆ ವಿಚ್ಛೇದನ ತೆಗೆದುಕೊಳ್ಳಬೇಕು ಅಂತಿದ್ದಾಗ, ಅವಳ ಸ್ವಂತ ಅಣ್ಣ, ಅವನೂ ವಿದ್ಯಾವಂತನೇ, ’ಒಂದೆರಡು ಏಟು ತಿಂದರೇನಮ್ಮ, ಸಂಸಾರ ದೊಡ್ಡದು, ಅದನ್ನು ಉಳಿಸಿಕೊಳ್ಳಬೇಕು’ ಅಂದಿದ್ದ. ಇಲ್ಲಿ ನಾನು ಹೇಳಬೇಕು ಅಂತಿರುವುದು ವಿಚ್ಛೇದನ ಮತ್ತು ಅದರ ಕಾರಣದ ಬಗ್ಗೆ ಮಾತ್ರ ಅಲ್ಲ. ಸುಮಾರು ನಲ್ವತ್ತರ ವಯಸ್ಸಿನ, ಸ್ವಾವಲಂಬಿ ಹೆಣ್ಣು ಮಗಳಿಗೂ ಸಹ ಅವಳ ಬದುಕಿನ ನಿರ್ಧಾರ ತೆಗೆದುಕೊಳ್ಳುವ ಶಕ್ತಿ, ಹಕ್ಕು ಇದೆ ಅಂತ ಸ್ವಂತ ಅವಳ ಅಣ್ಣನಿಗೂ ಅನ್ನಿಸಲಿಲ್ಲ ಅಂತ. ಇಲ್ಲಿ ಆ ಹೆಣ್ಣು ಮಗಳ ವಿದ್ಯೆ, ಐದಂಕೆಯ ಸಂಬಳ’ ಅವಳ ಸಾಮಾಜಿಕ ಮತ್ತು ವೈಯಕ್ತಿಕ ಘನತೆ ಯಾವುದೂ ಮುಖ್ಯವಾಗಲಿಲ್ಲ. ಒಂದು ವ್ಯವಸ್ಥೆಯನ್ನು, ಅದು ಎಷ್ಟೇ ಕುಲಗೆಟ್ಟಿರಲಿ, ಉಳಿಸಿಕೊಳ್ಳುವುದಷ್ಟೇ ಮುಖ್ಯವಾಗಿತ್ತು. ಇಲ್ಲಿ ಸಂಸಾರ ಉಳಿಸಿಕೊಳ್ಳುವ ಆಸೆ ಮತ್ತು ನಿರ್ಧಾರ ಅವಳದಾಗಬೇಕೆ ಹೊರತು, ಅವಳಣ್ಣನ ಪೊಳ್ಳು ಮರ್ಯಾದೆ ಕಾಯುವುದಕ್ಕೆ ಅವಳು ಅನುಭವಿಸಬೇಕಾದ ಜೀವಾವಧಿ ಶಿಕ್ಷೆ ಆಗಬಾರದು. ಇದು ಕೇವಲ ಒಂದು ಮೇಲ್ಪದರದ ಉದಾಹರಣೆ ಅಷ್ಟೇ. ಸಮಸ್ಯೆ ಇದಕ್ಕಿಂತಲೂ ಆಳವಾಗಿಯೇ ಇದೆ. ಅವಳಿಗೆ ಆರ್ಥಿಕ ಸ್ವಾತಂತ್ರ್ಯವಾದರೂ ಇತ್ತು, ಅದೂ ಇಲ್ಲದ ಎಷ್ಟೋ ಹೆಂಗಸರು ಎಲ್ಲ ದೌರ್ಜನ್ಯವನ್ನೂ ಸಹಿಸಿಕೊಂಡೇ ಬದುಕುತ್ತಿದ್ದಾರೆ ಎನ್ನುವುದನ್ನೂ ನಾನು ಮರೆತಿಲ್ಲ.
ಮೊನ್ನೆ ಸಹ ಆದದ್ದೇನು? ನಿರ್ಭಯ ಪ್ರಕರಣದ ಅಪರಾಧಿಯನ್ನು ಬಿಬಿಸಿ ಸಂದರ್ಶನ ಮಾಡಿದ ಮೇಲೆ, ಅದೂ ಸಂಬಂಧಪಟ್ಟವರಿಂದ ಅನುಮತಿ ತೆಗೆದುಕೊಂಡೇ ಸಂದರ್ಶನ ಮಾಡಿದ ಮೇಲೆ, ಯಾವಾಗ ಆ ಅಪರಾಧಿ ಮತ್ತು ಆತನ ವಕೀಲ ಆಡಿದ ಜುಗುಪ್ಸೆ ಹುಟ್ಟಿಸುವ ಮಾತುಗಳು ಹೊರಗಡೆ ಬಂದವೋ ಆಗ ಇಂತಹ ಮಾತನಾಡುವವರು ನಮ್ಮ ನಡುವೆ ಇದ್ದಾರೆ ಎನ್ನುವುದು ನಮಗೆ ನಾಚಿಕೆಗೇಡು ಅನ್ನಿಸಲೇ ಇಲ್ಲ. ನಮ್ಮ ಘನಸರ್ಕಾರ ನಮ್ಮ ಸೋ ಕಾಲ್ಡ್ ಮರ್ಯಾದೆ ಉಳಿಸಿಕೊಳ್ಳಲು ಅದು ಪ್ರಸಾರವಾಗದಂತೆ ತಡೆ ಒಡ್ಡಲು ಪ್ರಯತ್ನಿಸಿತು. ಅಂದರೆ ನಮಗೆ ನಮ್ಮ ಸಮಾಜದ ಯೋಚನಾ ವಿಧಾನ ಅವಮಾನ ಅನ್ನಿಸ್ತಿಲ್ಲ, ಇಂತಹ ಅನಾಗರೀಕ ರಾಕ್ಷಸರ ನಡುವೆ ನಮ್ಮ ಹೆಣ್ಣುಮಕ್ಕಳು ಬದುಕುತ್ತಿದ್ದಾರೆ ಅನ್ನುವುದು ಹೀನಾಯ ಅನ್ನಿಸಲಿಲ್ಲ. ಒಬ್ಬ ವಕೀಲ ಎಲ್ಲರೆದುರಲ್ಲಿ ನನ್ನ ಮಗಳು ಹಾಗೆ ರಾತ್ರಿ ಹೊತ್ತು ಗೆಳೆಯನ ಜೊತೆ ಓಡಾಡಿದ್ದರೆ ನಾನೇ ಬೆಂಕಿ ಹಾಕಿ ಸುಡುತ್ತೇನೆ ಅಂದಿದ್ದು ಪಾಶವೀತನದ ಪರಮಾವಧಿ ಅನ್ನಿಸಲಿಲ್ಲ. ಅದು ಜಗದ ಕಣ್ಣಿಗೆ ಬೀಳಬಾರದು ಅಷ್ಟೆ. ಅದನ್ನು ಚಾಪೆಯಡಿ ನೂಕಿ, ಎಲ್ಲಾ ತಪ್ಪನ್ನು ಹೆಣ್ಣಿನ ಮೇಲೆಯೇ ಹೊರಿಸಿ, ವ್ಯವಸ್ಥೆಯನ್ನು ಸರಿಯಾಗಿಟ್ಟೆವು ಎಂದು ನಿಟ್ಟುಸಿರು ಬಿಡುವುದನ್ನು ಕಂಡಾಗ ಆಗ ಉತ್ತರಿಸಬೇಕು ಅನ್ನಿಸುತ್ತದೆ, ಹೌದು, ’ನಾನು ಫೆಮಿನಿಸ್ಟ್, ಮತ್ತು ಇದಕ್ಕೆ ನನ್ನ ಸಮ್ಮತಿ ಇಲ್ಲ’ ಎಂದು.
ಒಬ್ಬ ಅತ್ಯಾಚಾರಿ ’೯ರ ನಂತರ ಮನೆಯಿಂದ ಹೆಣ್ನು ಹೊರಬಂದರೆ ಇನ್ನೇನಾಗುತ್ತೆ’ ಎಂದಾಗ ನಮಗೆ ಅಸಹ್ಯ ಮಾತ್ರ ಆಗುತ್ತದೆ. ಅದೇ ಒಬ್ಬ ವಿದ್ಯಾವಂತ ವಕೀಲ, ಒಬ್ಬ ಮಂತ್ರಿ, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿ, ಹಲವಾರು ಅನುಯಾಯಿಗಳನ್ನು ಹೊಂದಿರುವ ಮುಂದಾಳು ಅಂತಹ ಮಾತುಗಳನ್ನು ಆಡಿದಾಗ ನಮಗೆ ಗಾಬರಿ ಆಗಬೇಕು. ಏಕೆಂದರೆ ಅದು ಒಬ್ಬ ವ್ಯಕ್ತಿಯ ಮಾತಲ್ಲ, ಒಂದು ಮನೋಭಾವ. ಒಂದು ವ್ಯವಸ್ಥೆಯಾಗಿ ಒಪ್ಪಿತವಾದ ಕ್ರೌರ್ಯ. ಇದೇ ಕಾರಣಕ್ಕೆ ತನ್ನ ಲೇಖನಿಯಿಂದ ಮನಮುಟ್ಟುವಂತ ಬರೆಯಬಲ್ಲ ಲೇಖಕ, ಕಾದಂಬರಿಕಾರ ಅಂತಹ ಮೌಲ್ಯಗಳನ್ನು ಅನುಮೋದಿಸುವ ಪಾತ್ರಗಳನ್ನು ಬರೆದಾಗ ನನಗೆ ಆತಂಕವಾಗುತ್ತದೆ. ಏಕೆಂದರೆ ಆತ ಕೇವಲ ಒಬ್ಬ ವ್ಯಕ್ತಿಯಲ್ಲ, ಆತ ತನ್ನ ಅನುಯಾಯಿಗಳ ಮಟ್ಟಿಗೆ ಒಂದು ಬ್ರಾಂಡ್ ಆಗಿರುತ್ತಾನೆ. ಹೌದು ಭೈರಪ್ಪನವರು ತಮ್ಮ ಪಾತ್ರಗಳ ಬಾಯಲ್ಲಿ ’ವಿದ್ಯೆ ಕಲಿತರೆ ಹೆಣ್ಣು ಗಂಡಾಗಿ ಬಿಡುತ್ತಾಳೆ, ಗಂಡು ಹೆಣ್ಣಾಗಿ ಬಿಡುತ್ತಾನೆ’ ಎಂದು ಹೇಳಿಸಿದಾಗ, ಬಳೆ ಕುಂಕುಮ ಇಲ್ಲದ ಹೆಣ್ಣಿನಲ್ಲಿ ಹೆಣ್ತನವೇ ಇಲ್ಲ ಎಂದು ಪ್ರತಿಪಾದಿಸಿದಾಗ, ಅತ್ಯಾಚಾರವನ್ನು ಪ್ರತಿಭಟಿಸುವಾಗಲೂ ಹೆಣ್ಣಿನ ಮನಸ್ಸಿನಲ್ಲೆಲ್ಲೋ ಅದು ಆಗಲಿ ಎನ್ನುವ ಆಸೆ ಇರುತ್ತದೆ ಎಂದು ಪಾತ್ರದ ಬಾಯಲ್ಲಿ ಹೇಳಿಸಿದಾಗ, ತಮ್ಮದೇ ಆದ ಒಂದು ನೀತಿ ಸಂಹಿತೆ ಬರೆದು, ಗಂಡು ಪಾತ್ರಗಳಿಗೆ ಅದರಿಂದ ವಿನಾಯತಿ ಕೊಟ್ಟು, ಅದನ್ನು ಮೀರಿದ ಹೆಣ್ಣುಗಳನ್ನು ಕಡ್ಡಾಯವಾಗಿ ಬದುಕಿನಲ್ಲಿ ಸೋಲಿಸಿದಾಗ… ಆಗ ನನಗೆ ಮೌನವಾಗಿ ಅದನ್ನು ಒಪ್ಪಿಕೊಳ್ಳುವುದಾಗುವುದಿಲ್ಲ. ಅದನ್ನು ಪ್ರತಿಭಟಿಸುವುದು ಫೆಮಿನಿಸಂ ಎನ್ನುವುದಾದರೆ, ಹೌದು ನಾನು ಖಂಡಿತಾ ಫೆಮಿನಿಸ್ಟ್. ಮತ್ತು ಅಂತಹ ಬರಹವನ್ನು ನಾನು ಪ್ರತಿಭಟಿಸುತ್ತೇನೆ.
ಫೆಮಿನಿಸಂ ಎಂದರೆ ಬದುಕುವ ರೀತಿಯೂ ಹೌದು, ಅದಕ್ಕೆ ಅಡ್ಡಿಪಡಿಸಿದರೆ ನಮ್ಮ ಪ್ರತಿಭಟನೆಯೂ ಹೌದು. ಅದು ಬೇಡುವುದಲ್ಲ, ಅದು ನಮ್ಮದು, ಹಕ್ಕಿನಿಂದ ನಮ್ಮದು ಎಂದು ನಾವು ಒಪ್ಪಿಕೊಳ್ಳುವುದು. ಅದನ್ನು ಇನ್ನೊಬ್ಬರನ್ನು ಒಪ್ಪಿಸುವುದಕ್ಕೆ ಎಂದು ಹಾಡದೆ ಕೇವಲ ನಮ್ಮೆದೆಯ ಹಾಡು ಎನ್ನುವ ಕಾರಣಕ್ಕೆ ಹಾಡಿಕೊಳ್ಳುವುದು. ಮತ್ತೊಂದು ಮಹಿಳಾ ದಿನಾಚರಣೆಯ ಹೊಸ್ತಿಲಲ್ಲಿ ನಿಂತಿರುವಾಗ ಮಾಯಾ ಏಂಜಲೋ ಬರೆದ ಈ ಸಾಲುಗಳು ನೆನಪಿಗೆ ಬರುತ್ತಿವೆ, ’ಹಕ್ಕಿ ಹಾಡುವುದು, ತನ್ನಲ್ಲಿ ಉತ್ತರವಿದೆ ಎನ್ನುವುದಕ್ಕಲ್ಲ, ತನ್ನಲ್ಲಿ ಹಾಡು ಇದೆ ಎನ್ನುವ ಕಾರಣಕ್ಕೆ’ ಎಂದು. ಅದನ್ನೇ ಸ್ವಲ್ಪ ಬದಲಿಸಿ ಹೇಳುವುದಾದರೆ, ನಾವು ಹಾಡುವುದು ಕೇಳುವವರೊಬ್ಬರಿದ್ದಾರೆ ಎನ್ನುವುದಕ್ಕಲ್ಲ, ಮತ್ತೊಬ್ಬರನ್ನು ಒಪ್ಪಿಸಲಿಕ್ಕೂ ಅಲ್ಲ, ನಮ್ಮೆದೆಯಲ್ಲಿ ಒಂದು ಹಾಡು ಇದೆ ಎನ್ನುವ ಕಾರಣಕ್ಕೆ. ಹಾಗೆ ನಮ್ಮ ಎದೆಯಲ್ಲಿನ ಹಾಡನ್ನು ಸದಾ ಕಾಲ ಜೀವಂತ ಇಟ್ಟುಕೊಳ್ಳುವುದೇ ಫೆಮಿನಿಸಂ ಆದರೆ, ಹೌದು ನಾನೂ ಸಹ ಫೆಮಿನಿಸ್ಟ್, ಮತ್ತೆ ನೀವು???
 

‍ಲೇಖಕರು G

March 7, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

18 ಪ್ರತಿಕ್ರಿಯೆಗಳು

  1. Anonymous

    ನಾನು ಹ್ಯೂಮನಿಸ್ಟ್ endu pfrtiyobbaroo anubhavisuvudaadare eshtu uttama!

    ಪ್ರತಿಕ್ರಿಯೆ
  2. ಲಲಿತಾ ಸಿದ್ಧಬಸವಯ್ಯ

    ಸಂಧ್ಯಾ, ಲೇಖನ ಅರ್ಥಸಾಂದ್ರಿತ. ಸ್ತ್ರೀವಾದ ತುಸು ಎಡಬಲಕ್ಕೆ ವಾಲಿದರೂ ಅನುಗ್ರಹಿಗಳ ಹಸಾದವೆಂಬೆನಯ್ಯ ಎನ್ನುವ ಸ್ಪಾನ್ಸರಡ್ ಸ್ಥಿತಿಗೆ, ಕಂಡಿದ್ದೀನಿ ಕೂತ್ಕೊ ಎನ್ನುವ ಆಗ್ರಹ ಧಾಟಿಗೆ ಒಳಗಾಗಿಬಿಡುವ ಕತ್ತಿಯ ನಡಿಗೆಯಾಗಿ ಬಿಟ್ಟಿದೆ ಇತ್ತೀಚೆಗೆ. ಇವರ – ಅಂದರೆ ಸ್ತ್ರೀವಾದವನ್ನು ಸೆಮಿನಾರಲ್ಲಿ ಕೊಯ್ಯುವವರ – ಸುಪರ್ದಿನಿಂದ ಬಿಡಿಸಿ ನೀವಂದಂತೆ ಅದನ್ನೊಂದು ಜೀವನವಿಧಾನವಾಗಿ ಬುಡುಬುಡಿಕೆಯಿಲ್ಲದೆ ಒಳಕ್ಕಿಳಿಸಿಕೊಂಡಾಗ ಅದು ” ಸ್ತ್ರೀವಾದ”. ನೀವಿಲ್ಲಿ ಕೊಟ್ಟಿರುವ ಎರಡು ಉದಾಹರಣೆಗಳೂ ಅಂಥವೆ.ಧನ್ಯವಾದ ನಿಮಗು ,ಅವಧಿಗು.

    ಪ್ರತಿಕ್ರಿಯೆ
  3. ಲಕ್ಷ್ಮೀಕಾಂತ ಇಟ್ನಾಳ

    ಮಹಿಳೆಯನ್ನು ನೂರು ಒಳನೋಟಗಳು ಅದು ಹೇಗೆ ಸುಡುತ್ತಿವೆ, …ಸಮಾನತೆ ಬೇರೆ, ಸಮಾನತೆಯ ಸೋಗು ಬೇರೆ..ಅಸಮಾನತೆ ತುಂಬಿದ್ದೇ ಹೆಚ್ಚು…ಇರುವ ಒಂದೇ ಜನುಮವನ್ನು ಅವಳು ಅವಳಾಗಿ ಕಳೆಯಲು ಅವಳಿಗೆ ಎಷ್ಟು ದಿಗ್ಬಂಧನಗಳು..ಫೆಮಿನಿಸ್ಟ್ ಪದದ ಅರ್ಥವಾಯಿತು.. ನಿಮ್ಮೊಂದಿಗಿದ್ದೇವೆ..ನನ್ನೊಳಗೂ ಅಪ್ಪನೊಂದಿಗೆ ಅವ್ವನೂ ಇದ್ದಾಳೆ ಎಂದು ಹೇಳಲು ಹೆಮ್ಮೆ ನನಗೆ! ವಿಷ್ಣುವರ್ಧನ ಭಾರತಿಯವರನ್ನು ನನ್ನ ಎರಡನೆಯ ‘ತಾಯಿ’ ಎಂದದ್ದು ಅದೇಕೊ ನೆನಪಾಯಿತು… ಹೆಣ್ಣಿಗೆ ಆ ಪ್ರಕೃತಿಯ ಸಹಜ ಗುಣವಿದೆ ..ಗುರುತಿಸಬೇಕಷ್ಟೆ…ಮೊದಲು ಮಾನವರಾಗಬೇಕು, ..ನಂತರ ಎಲ್ಲಾ…

    ಪ್ರತಿಕ್ರಿಯೆ
  4. bharathi b v

    ನಮ್ಮೆದೆಯಲ್ಲಿ ಒಂದು ಹಾಡು ಇದೆ ಎನ್ನುವ ಕಾರಣಕ್ಕೆ. ಹಾಗೆ ನಮ್ಮ ಎದೆಯಲ್ಲಿನ ಹಾಡನ್ನು ಸದಾ ಕಾಲ ಜೀವಂತ ಇಟ್ಟುಕೊಳ್ಳುವುದೇ ಫೆಮಿನಿಸಂ ಆದರೆ, ಹೌದು ನಾನೂ ಸಹ ಫೆಮಿನಿಸ್ಟ್, ಮತ್ತೆ ನೀವು??? … Naanu koodaa …

    ಪ್ರತಿಕ್ರಿಯೆ
  5. shammi

    ಫೆಮಿನಿಸಂ ಎಂದರೆ ಬದುಕುವ ರೀತಿಯೂ ಹೌದು, ಅದಕ್ಕೆ ಅಡ್ಡಿಪಡಿಸಿದರೆ ನಮ್ಮ ಪ್ರತಿಭಟನೆಯೂ ಹೌದು. ಅದು ಬೇಡುವುದಲ್ಲ, ಅದು ನಮ್ಮದು, ಹಕ್ಕಿನಿಂದ ನಮ್ಮದು ಎಂದು ನಾವು ಒಪ್ಪಿಕೊಳ್ಳುವುದು. ಅದನ್ನು ಇನ್ನೊಬ್ಬರನ್ನು ಒಪ್ಪಿಸುವುದಕ್ಕೆ ಎಂದು ಹಾಡದೆ ಕೇವಲ ನಮ್ಮೆದೆಯ ಹಾಡು ಎನ್ನುವ ಕಾರಣಕ್ಕೆ ಹಾಡಿಕೊಳ್ಳುವುದು. ಮತ್ತೊಂದು ಮಹಿಳಾ ದಿನಾಚರಣೆಯ ಹೊಸ್ತಿಲಲ್ಲಿ ನಿಂತಿರುವಾಗ ಮಾಯಾ ಏಂಜಲೋ ಬರೆದ ಈ ಸಾಲುಗಳು ನೆನಪಿಗೆ ಬರುತ್ತಿವೆ, ’ಹಕ್ಕಿ ಹಾಡುವುದು, ತನ್ನಲ್ಲಿ ಉತ್ತರವಿದೆ ಎನ್ನುವುದಕ್ಕಲ್ಲ, ತನ್ನಲ್ಲಿ ಹಾಡು ಇದೆ ಎನ್ನುವ ಕಾರಣಕ್ಕೆ’ ಎಂದು. ಅದನ್ನೇ ಸ್ವಲ್ಪ ಬದಲಿಸಿ ಹೇಳುವುದಾದರೆ, ನಾವು ಹಾಡುವುದು ಕೇಳುವವರೊಬ್ಬರಿದ್ದಾರೆ ಎನ್ನುವುದಕ್ಕಲ್ಲ, ಮತ್ತೊಬ್ಬರನ್ನು ಒಪ್ಪಿಸಲಿಕ್ಕೂ ಅಲ್ಲ, ನಮ್ಮೆದೆಯಲ್ಲಿ ಒಂದು ಹಾಡು ಇದೆ ಎನ್ನುವ ಕಾರಣಕ್ಕೆ. ಹಾಗೆ ನಮ್ಮ ಎದೆಯಲ್ಲಿನ ಹಾಡನ್ನು ಸದಾ ಕಾಲ ಜೀವಂತ ಇಟ್ಟುಕೊಳ್ಳುವುದೇ ಫೆಮಿನಿಸಂ ಆದರೆ, ಹೌದು ನಾನೂ ಸಹ ಫೆಮಿನಿಸ್ಟ್, ಮತ್ತೆ ನೀವು???
    nannadu ide dhorane….iddaddannu iddante helalu naachike yaake…hedarike yaake…

    ಪ್ರತಿಕ್ರಿಯೆ
  6. Rj

    ತುಂಬ ಚೆನ್ನಾಗಿ ಮೂಡಿ ಬಂದಿದೆ. ಒಳ್ಳೆಯ ಬರಹ.

    ಪ್ರತಿಕ್ರಿಯೆ
  7. T N Seetharam

    ಹಿರಿದು ನಿ೦ತ ಕತ್ತಿಗಳ ಮಧ್ಯೆ ನೀವು ಹಾಡಿದ ನಿಮ್ಮಲ್ಲಿನ ಹಾಡು ನಮ್ಮೆಲ್ಲರ ಹಾಡೂ ಹೌದು….

    ಪ್ರತಿಕ್ರಿಯೆ
  8. Vidya Rao

    ಫೆಮಿನಿಸಂ ಬದುಕುವ ರೀತಿಯೂ ಹೌದು, ಪ್ರತಿಭಟನೆಯೂ ಹೌದು. ನಾಲ್ಕು ಗೋಡೆಗಳ ಮಧ್ಯೆ ನಡೆಯುವ ದೌರ್ಜನ್ಯವನ್ನು ಮುಚ್ಚಿಟ್ಟು ಸಂಸಾರಗಳನ್ನು ಉಳಿಸಿಕೊಳ್ಳಬೇಕೆಂದು ಉಪದೇಶಿಸುವ ಬೌದ್ಧಿಕ ದಮನದವನ್ನು ಪ್ರಶ್ನಿಸಿ ಬದುಕುವ ಮೂಲಭೂತ ಸ್ವಾತಂತ್ರವನ್ನು ಮನದಟ್ಟು ಮಾಡಿಸುವುದೂ ಸಹ. ಫೆಮಿನಿಸಂ ನ ಅರ್ಥವ್ಯಾಪ್ತಿಯನ್ನು ಬಿಡಿಸುತ್ತಾ ಹೋದಂತೆ ಹತ್ತು ಹಲವು ಒಳಪದರಗಳನ್ನು ತೆರೆದಿಟ್ಟಿದ್ದೀರಿ ನಮ್ಮ ಮುಂದೆ. ಇನ್ನು ಭಾರ್ಗವಿ ಮತ್ತು ಇಂದಿರಾ ಲಂಕೇಶರನ್ನು ಹೆಸರಿಸಿದ್ದು ಬಹಳ ಪ್ರಸ್ತುತ. ಆದರೂ, ಬದುಕೊಂದು ಜೀವನಾನುಭವ. ಅವರವರು ಕಂಡುಕೊಂಡಂತೆ. ಅತ್ಯುತ್ತಮ ಲೇಖನ. ಬಹಳ ಮೆಚ್ಚಿಗೆಯಾಯಿತು. ಅಭಿನಂದನೆಗಳು ತಮಗೆ.

    ಪ್ರತಿಕ್ರಿಯೆ
  9. pushpa

    ನಮಸ್ತೆ ಮೇಡಂ, ಮಹಿಳಾ ದಿನಾಚರಣೆಯ ಶುಭಾಶಯಗಳು ‘ “…..ಹೌದು ನಾನೂ ಸಹ ……..
    ನಿಮ್ಮ ಧನಿಯಲ್ಲಿ ನನ್ನದೂ ಮಾತಿದೆ …….

    ಪ್ರತಿಕ್ರಿಯೆ
  10. umavallish

    ಸಂದ್ಯಾ ಅವರೇ ಮಹಿಳಾದಿನಾಚರಣೆಯ ಶುಬಾಹಾರೈಕೆಗಳು. ಎಲ್ಲಾ ಮಹಿಳೆಯರ ಒಕ್ಕೊರಳಿನಿಂದ,ಹೇಳಬೇಕು ಎನ್ನುವುದಕ್ಕೆ ನೀವೋ0ದು ದ್ವನಿಯಾಗಿದ್ದೀರ.ಇಂತಹ ವಿಚಾರಪೂರ್ಣವಾದ ನಿಮ್ಮಲೇಖನಕ್ಕೆ ನನ್ನ ,ಅಭಿನಂಧನೆಗಳು. ಹೆಮ್ಮೆಯಿಂದ ಹೇಳತ್ತೇನೆ ನಾನು ಒಬ್ಬಳು “ಸ್ತ್ರೀ ವಾದಿ”

    ಪ್ರತಿಕ್ರಿಯೆ
  11. ಅಕ್ಕಿಮಂಗಲ ಮಂಜುನಾಥ

    ಲೇಖನ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ.

    ಪ್ರತಿಕ್ರಿಯೆ
  12. prathibha nandakumar

    ಹಾಗಾದ್ರೆ ಕನ್ನಡದಲ್ಲಿ ಇಂದಿರಾ ಭಾರ್ಗವಿ ಇಬ್ಬರೇನಾ ಆತ್ಮಕತೆ ಬರೆದಿದ್ದು? ನಾನು, ಉಮಾಶ್ರೀ, ಶಶಿಕಲಾ ವೀರಯ್ಯ ಸ್ವಾಮಿ ಮುಂತಾದವರು ಬರೆದಿದ್ದೆಲ್ಲಾ ಏನು?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: