ಸಂತರನ್ನು ಕಂಡೊಡನೆ ಸಂದೇಹಪಟ್ಟವರು…

lankeshcolour1.jpg“ಪ್ರೇಮದಂತೆಯೇ ವಿಶ್ವಾಸ ಕೂಡ; ಅದು ಬತ್ತಿಹೋಗುತ್ತದೆ, ಇಲ್ಲವಾಗುತ್ತದೆ. ಅನೇಕಾನೇಕ ಆಕಾಂಕ್ಷೆ, ತೆವಲುಗಳೊಂದಿಗೆ ಕೆಲಸ ಮಾಡುವ ಮನುಷ್ಯ ಶತ್ರುವಾಗುತ್ತಾನೆ, ದ್ರೋಹಿಯಾಗುತ್ತಾನೆ, ಕೊಲೆ ಮಾಡಲೂ ಹೇಸದವನಾಗುತಾನೆ. ಇದು ಸ್ವಾಭಾವಿಕ ಅನ್ನುವುದನ್ನು ಅರಿತರೆ ಮಾತ್ರ ಸಿನಿಕನಾಗುವುದು ತಪ್ಪುತ್ತದೆ.”

—————————————————

ನಟರಾಜ್ ಹುಳಿಯಾರ್

ಕೇಡಿನ ಜೊತೆ ಹೋರಾಡುವ ಶಕ್ತಿಗಳು ಕೇಡಿನಲ್ಲಿ ಲೀನವಾಗಿಬಿಡುವ ವಿಚಿತ್ರವನ್ನು ಲಂಕೇಶ್ ಅನೇಕ ಕಡೆ ಸೂಚಿಸುತ್ತಾರೆ. “ಅಮಾನುಷರೊಂದಿಗೆ ಹೋರಾಡುವ ವ್ಯಕ್ತಿ ಕೊನೆಗೆ ತಾನೇ ಅಚೀನುಷನಾಗದಂತೆ ನೋಡಿಕೊಳ್ಳಬೇಕು ಆಳದ ಕತ್ತಲೆಯನ್ನು ನಾವು ಕಣ್ಣಿಟ್ಟು ನೋಡಿದರೆ, ಆ ಕತ್ತಲ ಲೋಕ ನಮ್ಮೊಳಗೂ ತೀಕ್ಷ್ಣವಾದ ಕಣ್ಣಿಟ್ಟು ನೋಡುತ್ತದೆ” ಎನ್ನುತ್ತಾನೆ ನೀಷೆ. ಸಾಮಾಜಿಕ ಭ್ರಷ್ಟತೆಯ್ ವಿರುದ್ಧ ಹೋರಾಡುತ್ತಾ ಹಾಗೂ ಕೇಡಿನ ಬಗ್ಗೆ ಬರೆಯುತ್ತಾ ಲಂಕೇಶರ ವ್ಯಕ್ತಿತ್ವದಲ್ಲೇ ಕ್ರೌರ್ಯ ಚಿಮ್ಮಿದ್ದನ್ನು ಕಂಡವರಿಗೆ ನೀಷೆ ಹೇಳಿದ್ದು ಎಷ್ಟೊಂದು ಅರ್ಥಪೂರ್ಣವಾಗಿದೆ ಎಂಬುದು ಗೊತ್ತಿರುತ್ತದೆ; ಆ ಮಾತು ನಮ್ಮೆಲ್ಲರಿಗೂ ಅನ್ವಯಿಸುತ್ತದೆ ಎಂಬುದೂ ಗೊತ್ತಾಗುತ್ತದೆ. ಆದರೆ ಎಲ್ಲ ಬಗೆಯ ವ್ಯಕ್ತಿಗಳು, ಸಂದರ್ಭಗಳು, ಸಾಧ್ಯತೆಗಳು ಹಾಗೂ ಸಂಕಥನಗಳನ್ನು ಸಂದೇಹದಿಂದ ಪರೀಕ್ಷಿಸಿದ ಲಂಕೇಶ್ ತಮ್ಮನ್ನು ತಾವು ಅಂಥದ್ದೇ ಮಾನದಂಡಗಳಿಂದ ಪರೀಕ್ಷಿಸಿಕೊಳ್ಳುವಲ್ಲಿ ಹಿಂಜರಿಯಲಿಲ್ಲವೆಂಬುದನ್ನು ಮರೆಯಬಾರದು. ಆ ಪರೀಕ್ಷೆ ಅವರ ಪತ್ರಿಕೆಯ ವೇದಿಕೆಯಲ್ಲಿ ಹೆಚ್ಚಿಗೆ ನಡೆಯದಿರಬಹುದು. ಆದರೆ ಅವರ ಒಟ್ಟು ಬರವಣಿಗೆಯಲ್ಲಿ ಆ ಸ್ವಪರೀಕ್ಷೆ ನಿರಂತರವಾಗಿ ಕಾಣುತ್ತದೆ. ಅವರ ಆತ್ಮಚರಿತ್ರೆಯಲ್ಲಿ ಅದು ಅನೇಕ ಕಡೆ ಸ್ಪಷ್ಟವಾಗಿ ಕಾಣುತ್ತದೆ.

ತಮ್ಮ ಕೊನೆಯ ದಿನಗಳಲ್ಲಿ ಬರೆದ “ಹುಳಿಮಾವಿನ ಮರ”ದ ಹೊತ್ತಿಗೆ ಲಂಕೇಶರು ಸಂದೇಹ-ನಂಬಿಕೆಗಳೆರಡರ ನಡುವೆ ಹೊಯ್ದಾಡುತ್ತಿದ್ದರು. “ಮನುಷ್ಯರನ್ನು ಪೂರ್ತಿಯಾಗಿ ನಂಬುವವನು ಹತಾಶೆಯಿಂದ ಪರಿತಪಿಸಬೇಕಾಗುತ್ತದೆ” ಎನ್ನುವ ಅವರು, ಮನುಷ್ಯನ ಸಹಜಗುಣದ ಬಗ್ಗೆ “ಹುಳಿಮಾವಿನ ಮರ”ದ ಕೊನೆಕೊನೆಗೆ ಬರೆಯುತ್ತಾರೆ: ಪ್ರೇಮದಂತೆಯೇ ವಿಶ್ವಾಸ ಕೂಡ; ಅದು ಬತ್ತಿಹೋಗುತ್ತದೆ, ಇಲ್ಲವಾಗುತ್ತದೆ. ಅನೇಕಾನೇಕ ಆಕಾಂಕ್ಷೆ, ತೆವಲುಗಳೊಂದಿಗೆ ಕೆಲಸ ಮಾಡುವ ಮನುಷ್ಯ ಶತ್ರುವಾಗುತ್ತಾನೆ, ದ್ರೋಹಿಯಾಗುತ್ತಾನೆ, ಕೊಲೆ ಮಾಡಲೂ ಹೇಸದವನಾಗುತಾನೆ. ಇವೆಲ್ಲ ನನ್ನ ಬದುಕಿನ ವಿವಿಧ ಹಂತಗಳಲ್ಲಿ ಕಂಡುಕೊಂಡಿದ್ದು. ಇದು ಸ್ವಾಭಾವಿಕ ಅನ್ನುವುದನ್ನು ಅರಿತರೆ ಮಾತ್ರ ಸಿನಿಕನಾಗುವುದು ತಪ್ಪುತ್ತದೆ.

ಮಾನವನ ಕೇಡನ್ನು ಕಂಡು ದಿಗ್ಭ್ರಮೆಗೊಳ್ಳುವ, ಅದನ್ನು ಎದುರಿಸುವ ದಾರಿಯಿಲ್ಲದೆ ಕುಸಿಯುವವರೆಲ್ಲ ಗ್ರಹಿಸಬೇಕಾದ ಬಹುಮುಖ್ಯ ಅಂಶ ಇದು. ನೀಲು ಪದ್ಯವೊಂದರ ಚುರುಕು ಚಿಂತನೆ ಇದನ್ನೇ ಇನ್ನಷ್ಟು ನೇರವಾಗಿ ಹೇಳಿದಂತಿದೆ:

ಸಂತರನ್ನು ಕಂಡೊಡನೆ
ಸಂದೇಹಪಟ್ಟವರು
ಪಶ್ಚಾತ್ತಾಪಪಡುವ
ಕಷ್ಟದಿಂದ ಮುಕ್ತರು.

ಈವಿಲ್ ನಿಂದ ಮುಕ್ತವಾಗುವುದಕ್ಕೆ ಅಥವಾ ಕೇಡನ್ನು ಮೀರುವುದಕ್ಕೆ ಸಾಮಾನ್ಯವಾಗಿ ಉಳಿದ ಲೇಖಕರು ಹುಡುಕುವ ಆಶಾವಾದಿ, ನೀತಿವಾದಿ ಅಥವಾ ಆಧ್ಯಾತ್ಮಿಕ ಮಾರ್ಗದಲ್ಲಿ ಲಂಕೇಶರಿಗೆ ನಂಬಿಕೆ ಇರಲಿಲ್ಲ. ಬದಲಿಗೆ, ಮನುಷ್ಯ ತನ್ನ ತೀವ್ರ ತಾದಾತ್ಮ್ಯದ ಗಳಿಗೆಯಲ್ಲಿ ಅಥವಾ “ವೃಕ್ಷದ ವೃತ್ತಿ” ಕಥೆಯ ಪಾರ್ವತಿಯಂತೆ ಪರಿಸರದ ಜೊತೆ ಕಂಡುಕೊಳ್ಳುವ ಸಾರ್ಥಕ್ಯದಲ್ಲಿ ತನ್ನ ಈವಿಲ್ ಗುಣ ಮೀರಬಹುದು ಎಂದು ಲಂಕೇಶರಿಗನ್ನಿಸಿತ್ತು. ಈ ಕಾರಣದಿಂದಾಗಿಯೇ ಅವರ ಸಾಹಿತ್ಯ ಕೃತಿಗಳಲ್ಲಿ ಕೇಂದ್ರ ಪಾತ್ರಗಳು ಹೀರೋಗಳಂತೆ ಆಡುವುದಿಲ್ಲ; ಈ ಹೀರೋಗಳು ಮಾತ್ರವೇ ಸಮಾಜಕ್ಕೆ ಹೊಸ ದಿಕ್ಕು ತೋರಿಸುತ್ತಾರೆಂಬ ರಮ್ಯ ನಂಬಿಕೆ ಲಂಕೇಶರ ಕೃತಿಗಳಲ್ಲಿಲ್ಲ. ಅಸಾಧಾರಣ ಗುರಿಗಳು ಹಾಗೂ ಆದರ್ಶ ಕ್ರಿಯೆಗಳಿಗಿಂತ ಸಾಧಾರಣವಾದ, ಆದರೆ ತನ್ನ ಹೃದಯಕ್ಕೆ ಹತ್ತಿರವಾದ ಕ್ರಿಯೆಯಲ್ಲಿ ಅಥವಾ ಶ್ರಮದಲ್ಲಿ ಮುಳುಗಿದ ಹೆಣ್ಣು ಅಥವಾ ಗಂಡು ಸಾಧಿಸುವ ಉದಾತ್ತತೆಯ ಬಗ್ಗೆ ಲಂಕೇಶರಿಗೆ ಹೆಚ್ಚು ಭರವಸೆಯಿದ್ದಂತಿತ್ತು. ಶಿಲ್ಪಿಗಳ ಬಗ್ಗೆ ಅವರು ಒಂದೆಡೆ ಬರೆಯುತ್ತಾರೆ: “ಅರ್ಧ ಶತಮಾನ ಕಾಲ ಒಂದೊಂದು ದೇವಸ್ಥಾನ ನಿರ್ಮಿಸಿದ ಶಿಲ್ಪಿಗಳು ನೀಚರಾಗಿರುವುದಕ್ಕೆ ವೇಳೆಯೇ ಇರುತ್ತಿರಲಿಲ್ಲ.” ಈ ಶಿಲ್ಪಿಗಳಂತೆಯೇ “ಗುಣಮುಖ”ದ ಹಕೀಮ, “ವೃಕ್ಷದ ವೃತ್ತಿ”ಯ ಪಾರ್ವತಜ್ಜಿ, “ಮುಟ್ಟಿಸಿಕೊಂಡವನು” ಕಥೆಯ ಡಾಕ್ಟರ್ ತಿಮ್ಮಪ್ಪ ತಂತಮ್ಮ ವೃತ್ತಿಯಲ್ಲಿ ಆಳವಾಗಿ ಬರೆಯುವ ಮೂಲಕವೇ ಕೇಡನ್ನು ಮೀರಲೆತ್ನಿಸಿದವರು ಅಥವಾ ಮಣಿಸಿದವರು. ಹಾಗೆಯೇ, ಬದುಕಿನ ಹೊಡೆತಕ್ಕೆ ಸಿಕ್ಕು ಸರಿಯಾಗಿ ಬದುಕಲು ಕಲಿಯುವ, ಕೆಲವೊಮ್ಮೆಯಾದರೂ ನೀತಿ ಅನೀತಿಗಳ ಗೆರೆ ದಾಟಿ ನೋಡುವ ತಮ್ಮ ಆಳದ ಕೆಲವು ದಿಕ್ಕುಗಳ ಬಗೆಗಾದರೂ ಖಚಿತವಾಗಿರುವ ಪಾತ್ರಗಳ ಬಗೆಗೂ ಲಂಕೇಶರಿಗೆ ಆಕರ್ಷಣೆಯಿತ್ತು. “ಕಲ್ಲು ಕರಗುವ ಸಮಯ”ದ ತಿಪ್ಪಣ್ಣ-ಶಾಮಲ, “ಮುಸ್ಸಂಜೆಯ ಕಥಾ ಪ್ರಸಂಗ”ದಲ್ಲಿ ಜಾತಿ ಮೀರುವ ಮಂಜ-ಸವಂತ್ರಿ ಮುಂತಾದ ಸಾಮಾನ್ಯರೇ ಲಂಕೇಶರ ಸಾಹಿತ್ಯ ಲೋಕದಲ್ಲಿ ಬಿಡುಗಡೆಯ ಅರ್ಥಪೂರ್ಣ ಮಾರ್ಗ ತೆರೆಯಬಲ್ಲವರು. ಮೇಲೆ ಹೇಳಿದ ಬಹುತೇಕ ಪಾತ್ರಗಳು ಕೆಳಜಾತಿ ಹಾಗೂ ಕೆಳವರ್ಗಗಳಿಂದ ಬಂದಿರುವುದು ತಮ್ಮ ಪತ್ರಿಕೆಯ ಘಟ್ಟದಲ್ಲಿ ಹಾಗೂ ಆ ಮೊದಲು ಕೂಡ ಲಂಕೇಶರು ಗಳಿಸಿಕೊಂಡ ಹೊಸ ಸಮಾಜವಾದಿ ನೋಟದ ಫಲ ಕೂಡ. ಹಾಗೆಯೇ ಸಮಕಲೀನ ರಾಜಕಾರಣದಲ್ಲಿ ಕೂಡ ಅವರು “ದಿಗ್ಗಜರ” ಬಗ್ಗೆ ಹೆಚ್ಚಿನ ನಿರೀಕ್ಷೆಯಿಟ್ಟುಕೊಳ್ಳದೆ, ನಜೀರ್ ಸಾಬ್, ಸಿ ನಾರಾಯಣಸ್ವಾಮಿ, ಶಾಣಪ್ಪ, ಶಿವಮೊಗ್ಗದ ಪೂರ್‍ಯಾನಾಯ್ಕ, ಮೋಟಮ್ಮ ಥರದವರ ಬಗ್ಗೆ ಹೆಚ್ಚು ಭರವಸೆಯಿಟ್ಟುಕೊಂಡಿದ್ದರು.

ಆದರೆ ಹೀರೋಗಳ ಬಗ್ಗೆ ಅನುಮಾನವಿಟ್ಟುಕೊಂಡಿದ್ದ ಲಂಕೇಶರಿಗೆ ತಮ್ಮ ನಾಯಕತ್ವದ ಬಗ್ಗೆ ಗುಪ್ತ ಅಭಿಮಾನವಿದ್ದದ್ದು ಸುಳ್ಳಲ್ಲ!

‍ಲೇಖಕರು avadhi

February 22, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Naveed Ahamed Khan

    manushya beleyuttha thanna matthu thanna parisarada bagge gondalamaya kathaleyannu srushtisikondu daariyannu hudukuva sandarbhadalli nataraj baraha minchu huluvina belakinanthe annisuthade.inthaha belakina sahaayadindale gondala venba kattaleyinda Eche baruva saadhyathegaledege hejje haakbahudagide.Thanks nataraj.- Naveed Ahamed Khan, Tumkur.

    ಪ್ರತಿಕ್ರಿಯೆ
  2. Ananth Murty

    ನನ್ನ ತಂಗಿ ಹೇಳುತ್ತಿದ್ದ ಮಾತುಗಳು ನೆನಪಾಗುತ್ತವೆ. “ಮನುಷ್ಯನ ಸ್ವಭಾವ ಎಂದೂ ಸ್ಥಿರವಲ್ಲ. ಒಬ್ಬ ಮನುಷ್ಯನನ್ನು ಒಳ್ಳೆಯವನು ಅಥವಾ ಕೆಟ್ಟವನು ಎಂದು ನಿರ್ಧರಿಸಿದರೆ ಅದು ಆ ದಿನಕ್ಕೆ ಮಾತ್ರ ಸತ್ಯ. ವ್ಯಕ್ತಿತ್ವಗಳು ಬದಲಾಗುತ್ತಿರುತ್ತವೆ”. ತಂಗಿಯ ಮಾತುಗಳನ್ನು ಗಾಢವಾಗಿ ನಂಬಿದ್ದೇನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: