ಕನ್ನಡಕ್ಕೆ ಅವರು ಇನ್ನೇನು ಕೊಡಬೇಕಿತ್ತು?

nsshankarಎನ್ ಎಸ್ ಶಂಕರ್ ತಮ್ಮ ಚಿತ್ರಗಳ ಮೂಲಕ ಎಲ್ಲರಿಗೂ ಪರಿಚಿತರು. ಅಷ್ಟೇ ಅಲ್ಲ, ಶಂಕರ್ ಉತ್ತಮ ವಿಶ್ಲೇಷಣೆಗೂ ಹೆಸರಾದವರು ಸುದ್ದಿ ಸಂಗಾತಿ, ಮುಂಗಾರು ಪತ್ರಿಕೆಗಳಲ್ಲಿ ಇವರು ಒತ್ತಿದ ಛಾಪು ಮರೆಯಲಾಗದ್ದು.

‘ಕನ್ನಡ ಟೈಮ್ಸ್’ ಪತ್ರಿಕೆಗೆ ಶಂಕರ್ ಅವರು ರಾಜ್ ಬಗ್ಗೆ ಬರೆದ ಬರಹ ಇಲ್ಲಿದೆ. ರಾಜ್ ಅವರ ಹುಟ್ಟು ಹಾಗೂ ಸಾವು ಎರಡನ್ನೂ ಕಂಡ ಈ ಎಪ್ರಿಲ್ ತಿಂಗಳಲ್ಲಿ ಶಂಕರ್ ಅವರ ಈ ಲೇಖನ ಮತ್ತೆ ಅವರ ಹಿರಿಮೆಯನ್ನು ಸಾರುತ್ತಿದೆ.

ರಾಜ್ ಕೊಟ್ಟಿದ್ದು

-ಎನ್.ಎಸ್.ಶಂಕರ್

_41553690_raj203bapನಾನು ಮಾದ್ಯಮಿಕ ಶಾಲೆಯಲ್ಲಿದ್ದೆನೆಂದು ತೋರುತ್ತದೆ; ಪಾಂಡವಪುರದಲ್ಲಿ. ರಾಜ್ ಕುಮಾರ್ ಯಾವುದೋ ಸಮಾರಂಬಕ್ಕೆ ಆ ಊರಿಗೆ ಬಂದಿದ್ದರು. ಆ ವೇಳೆಗಾಗಲೇ ರಾಜ್ ಎಂದರೆ ಅಪಾರ ಭಕ್ತಿಪರವಶತೆ ಬೆಳೆಸಿಕೊಂಡಿದ್ದ ನಾನು, ಸಂಜೆಗತ್ತಲಲ್ಲಿ ಅವರು ಜನಜಂಗುಳಿಯ ನಡುವೆ ವೇದಿಕೆಯತ್ತ ನಡೆದು ಹೋಗುವಾಗ ಒಂದೇ ಒಂದು ಸಲ ಅವರ ಕೈಯೋ ಕಾಲೋ ಸೋಕಿದರೆ ಸಾಕೆಂದು ಹರಸಾಹಸ ಮಾಡಿದೆ. ಆ ಸುಯೋಗ ಅಂದು ಒದಗಲೇ ಇಲ್ಲ. ಮುಂದಕ್ಕೆ ಅವರನ್ನು ಮುಟ್ಟಿ ಕೈಕುಲುಕಿಸಿ ಮಾತನಾಡಿಸುವ ಅವಕಾಶ ಸಿಕ್ಕಿದ್ದು ನಾನು ಪತ್ರಕರ್ತನಾದ ಮೇಲೆ, ಮತ್ತು ಇನ್ನೂ ಮುಂದಕ್ಕೆ ಚಿತ್ರ ನಿರ್ದೇಶಕನಾದ ಮೇಲೆ. ಅದೇ ಚಿಕ್ಕ ಹುಡುಗನಾಗಿ ಅವರನ್ನು ಕಂಡಾಗ ‘ರಾಜ್ ನಾನು ಕಲ್ಪಿಸಿಕೊಂಡಷ್ಟು ಎತ್ತರ ಇಲ್ಲವಲ್ಲ!’ ಎಂದು ಸೋಜಿಗಪಟ್ಟ ನೆನಪು… ಮತ್ತೆ ಅವರನ್ನು ಒಮ್ಮೆ ಮುಟ್ಟಿದರೆ ಸಾರ್ಥಕವೆಂದು ಅಷ್ಟು ಉತ್ಕಟವಾಗಿ ಅನಿಸಿದ್ದೇಕೆ? ಮುಂದಕ್ಕೆ ನಾನು ಈ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಯತ್ತಿಸಿದ್ದಕ್ಕೆ ಆ ರಾಜ್ ಕುಮಾರ್ ಎಂಬ ಮೋಡಿ ಎಷ್ಟರ ಮಟ್ಟಿಗೆ ಕಾರಣವಾಯಿತು?…

ಕೆಲವು ಪ್ರಶ್ನೆಗಳಿಗೆ ಸಂಪೂರ್ಣ ಉತ್ತರ ಸಿಕ್ಕುವುದಿಲ್ಲ.

ನನ್ನಂತೆಯೇ ರಾಜ್ ಕುಮಾರ್ ಅವರನ್ನು ನೋಡಬೇಕು, ಮಾತಾಡಿಸಬೇಕು ಎಂಬ ಉತ್ಕಟ ಹಂಬಲ- ಈ ನಾಡಿನ ಬಹುತೇಕರದ್ದಾಗಿತ್ತು ಎಂದು ಘೋಷಿಸಲು ಸಮೀಕ್ಷೆಯ ಅಗತ್ಯವೇನೂ ಇಲ್ಲ. ರಾಜ್ ಸಮೂಹ ಪ್ರಜ್ಞೆಯನ್ನು ಆವರಿಸಿದ್ದ ಪವಾಡ ಅಂಥದ್ದು.

ನೋಡುತ್ತ ಹೋದರೆ, ರಾಜ್ ತಮ್ಮ ಚಿತ್ರಗಳ ಮೂಲಕ ಗಳಿಸಿಕೊಂಡಿದ್ದ ಸರ್ವಗುಣ ಸಂಪನ್ನತೆಯ ವರ್ಚಸ್ಸು; ಅವರ ಇಮೇಜ್ ಹಾಗೂ ರಾಜ್ ವ್ಯಕ್ತಿತ್ವ- ಇವೆರಡೂ ಒಂದೇ ಎಂದು ಜನ ನಂಬುವಂತಿದ್ದ ಅವರ ನಡವಳಿಕೆ; ವ್ಯಕ್ತಿಯ ನೆರಳೇ ವ್ಯಕ್ತಿಯಾದ ಸೋಜಿಗ ನೆನಪಿಗೆ ಬರುತ್ತದೆ. ರಾಜ್ ತೆರೆಯ ಮೇಲೆ ಸಿಗರೇಟು ಸೇದಿದ್ದಿದೆ. (ತಕ್ಷಣಕ್ಕೆ ‘ವಾತ್ಸಲ್ಯ’ ಚಿತ್ರದ ನೆನಪಾಗುತ್ತಿದೆ.) ರಾಜ್ ವರ್ಚಸ್ಸು ಅದನ್ನು ಮುಂದುವರಿಯಲು ಬಿಡಲಿಲ್ಲ. ಅವರು ದ್ವಿಪಾತ್ರದಲ್ಲಿ ನಟಿಸಿದ ‘ದಾರಿ ತಪ್ಪಿದ
ಮಗ’ ಚಿತ್ರದಲ್ಲಿ ಒಬ್ಬ ಸದ್ಗುಣಿಯಾದರೆ, ಇನ್ನೊಬ್ಬ ದುಷ್ಟ, ಆ ದುಷ್ಟ ಪಾತ್ರದಾರಿ ರಾಜ್-ಹೆಣ್ಣಿನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದನ್ನು ಹೆಂಗಸರು ಸಹಿಸಲಿಲ್ಲ. ‘ನೀವು ಒಂದು ಪಾತ್ರವಾಗಿ ಕೂಡ ಒಂದು ಹೆಣ್ಣನ್ನು ಅವಮಾನ ಮಾಡುವಂತಿಲ್ಲ; ಮಾಡಿದರೆ ಜನ ಅದನ್ನೇ ಅನುಸರಿಸುತ್ತಾರೆ..’ ಅನ್ನುವ ಕೂಗೆದ್ದಿತು! ಅಂದರೆ ತಾವು ಆರಿಸಿಕೊಂಡ ಚಿತ್ರಗಳು ಮತ್ತು ಪಾತ್ರಗಳ ಮೂಲಕ ತೂಗಿ ಕೊಟ್ಟ ಗುಣ ದೋಷಗಳ ತಕ್ಕಡಿ, ತಲೆಮಾರುಗಳ ಕಾಲ ಸಮೂಹದ ಒಳಿತು ಕೆಡುಕಿನ ಕಲ್ಪನೆಗಳ ಬುನಾದಿಯಾಗಿತ್ತು. ಕನ್ನಡ ಸಂಸ್ಕೃತಿಯಲ್ಲಿ ಶ್ರೇಷ್ಠವಾದದ್ದೆಲ್ಲದರ ಮೂರ್ತರೂಪವಾಗಿ ರಾಜ್ ಕಾಣುತ್ತಿದ್ದರು. ಮತ್ತು ಅವರ ಕೈಯಲ್ಲಿ ಕನ್ನಡ ಸುರಕ್ಷಿತ ಎನ್ನುವ ಭಾವ ಉಕ್ಕುತ್ತಿತ್ತು. ಅದಕ್ಕೇ ಅವರಿಗೆ ಅವಮಾನವಾದರೆ ಕನ್ನಡಿಗ ರೊಚ್ಚಿಗೇಳುತ್ತಿದ್ದ. ರಾಜ್ ಹೀಗೆ ಸ್ವತಃ ಪುರಾಣವಾಗಿದ್ದು ನಮ್ಮ ಕಾಲದ ದೊಡ್ಡ ಕೌತುಕಗಳಲ್ಲೊಂದು.

ರಾಜ್ ತಮ್ಮ ಇಮೇಜಿನಿಂದಾಗಿ ಕನ್ನಡದ ಸಾರಸರ್ವಸ್ವದೊಂದಿಗೆ ಸಾಧಿಸಿದ್ದ ಇಂಥ ತಾದ್ಯಾತ್ಮದ ಮೂಲಕವೇ ನಿರ್ವಿವಾದ ಸಾಸ್ಕೃತಿಕ ನಾಯಕನಾಗಿ ರೂಪುಗೊಂಡದ್ದು ಸಹಜವಾಗಿತ್ತು. ಕುವೆಂಪು ಒಂದು ಬಗೆಯಲ್ಲಿ ಕನ್ನಡದ, ಅದರಲ್ಲೂ ಶೂದ್ರ ಸಮೂಹದ ಸ್ವಾಬಿಮಾವನ್ನು ಸಂಕೇತಿಸಿದರೆ, ರಾಜ್ ಇನ್ನೊಂದು ಬಗೆಯಲ್ಲಿ ಕನ್ನಡಿಗನ ಭಾವ ಪ್ರಪಂಚವನ್ನು ಕಲಕಿದರು. ಜನ ತಮ್ಮ ಮೇಲಿಟ್ಟಿದ್ದ ಆರಾಧನಾ ಭಾವವನ್ನು ಕನ್ನಡಾಭಿಮಾನವಾಗಿ ಪರಿವರ್ತಿಸಿದ್ದು -ಬಹುಷಃ ರಾಜ್ ಕುಮಾರರ ಬಹು
ದೊಡ್ಡ ಕೊಡುಗೆ ಎಂಬುದು ನನ್ನ ಗ್ರಹಿಕೆ.

ರಾಜ್ ಕುಮಾರರಿಗೆ ಆರಂಭದಿಂದಲೂ ಬೇರೆಬೇರೆ ಭಾಷೆಗಳಿಂದ ಆಹ್ವಾನಗಳಿದ್ದವು. ಅವರ ಜೊತೆಯ ಕಲ್ಯಾಣ್ ಕುಮಾರ್ ತಮಿಳಿನಲ್ಲೂ ದೊಡ್ಡ ನಟ ಅನಿಸಿಕೊಂಡಿದ್ದಾಗ ಕೂಡ, ರಾಜ್ ಕನ್ನಡ ಬಿಟ್ಟು ಕದಲಲಿಲ್ಲ. ‘ನೀವೇಕೆ ಬೇರೆ ಭಾಷೆಗಳಿಗೆ ಕಾಲಿಡಲಿಲ್ಲ?’ ಎಂದು ಒಮ್ಮೆ ನಾನು ಕೇಳಿದ್ದಕ್ಕೆ ಅವರು ‘ಯಾಕೋ, ಅವಾಗ ಬೇರೆ ಎಲ್ಲೂ ಹೋಗೋದು ಬೇಡ ಅನಿಸಿತು’ ಅಂದಿದ್ದರು. ಅವರ ಕನ್ನಡ ಪ್ರೇಮವೂ ಲೆಕ್ಕಾಚಾರಗಳನ್ನು ಮೀರಿದ ಇಂಥ ಮುಗ್ದ ಆಸೆಯಷ್ಟೇ, ಕನ್ನಡಿಗರ ಕಣ್ಮಣಿಯಾಗಿ ಬೆಳೆದ ರಾಜ್, ಕನ್ನಡ ಭಾಷೆಯ ಚಂದ ಅರಳುವಂತೆ, ಅದರ ಸೊಗಸು ಮನ ಮುಟ್ಟುವಂತೆ ಸಂಭಾಷಣೆ ಹೇಳಿದರು. ಮತ್ತು ಆ ಶೈಲಿ ಅವರನ್ನು ನಾಲ್ಕು ತಲೆಮಾರುಗಳ ಕಾಲ ಅನಕ್ಷರಸ್ಥರ ಪಾಲಿನ ಕನ್ನಡ ಮೇಷ್ಟರನ್ನಾಗಿ ಮಾಡಿತ್ತು..!

ರಾಜ್ ಕುಮಾರರಿಗೆ ಹೀಗೆ ಕನ್ನಡಿಗ ಎಣೆಯಿಲ್ಲದ ಪ್ರೀತಿ ಸುರಿದು ಕೊಟ್ಟರೂ ರಾಜ್ ಪ್ರತಿಯಾಗಿ ಕೊಟ್ಟಿದ್ದೇನು ಎಂದು ಕೇಳುವವರು ನಿನ್ನೆ ಈವತ್ತಿನವರಲ್ಲ. ನಮ್ಮ ಬುದ್ದಿವಂತ ವರ್ಗ ಒಂದು ಪ್ರಶ್ನೆಯನ್ನು ಅನಾದಿಕಾಲದಿಂದಲೂ ಮುಂದಿಡುತ್ತಲೇ ಬಂದಿದೆ. ರಾಜರುಗಳು ಕೆರೆಕಟ್ಟೆ ತೋಡಿಸಿ, ಸಾಲುಮರ ನೆಡಿಸಿ, ಧರ್ಮ ಶಾಲೆ ಕಟ್ಟಿಸಿ ಮಾಡುತ್ತಿದ್ದ ಜನ ಸೌಕರ್ಯಗಳಂತೆಯೇ ಸಾಂಸ್ಕೃತಿಕ ಕೊಡುಗೆಗಳೂ ಕಣ್ಣಿಗೆ ಕಾಣುವಂತಿರಬೇಕು ಅನ್ನುವಂಥದೊಂದು ಕಿರಾಣೀ
ವ್ಯಾಪಾರಿಯ ಮನೋಧರ್ಮ ಆ ಪ್ರಶ್ನೆಯ ಹಿಂದೆ ಇದ್ದಂತಿದೆ! ಇರಲಿ. ರಾಜ್ ತಮ್ಮ ಕಾಯಕದ ಮೂಲಕವೇ ಬಿತ್ತಿದ ಕನ್ನಡ ಪ್ರಜ್ಞೆಯ ಆಚೆಯೂ ಅವರೇನು ಮಾಡಿದರು ಎಂಬುದನ್ನು ನೋಡಿದರೆ ಬಹುಷಃ ಆ ಪ್ರಶ್ನೆಗೆ ಉತ್ತರ ಸಿಗಬಹುದು.

2006042101920301ರಾಜ್ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ ಬಿಡುಗಡೆಯಾಗಿದ್ದು 1954ರಲ್ಲಿ ಕರ್ನಾಟಕ ಏಕೀಕರಣವಾದದ್ದು 1956ರಲ್ಲಿ. ಅದುವರೆಗೆ ಕನ್ನಡನಾಡು ಎಂಬುದು ಅಖಂಡ ಭೂಪ್ರದೇಶವಲ್ಲ. ಆಗ ನಾಡು ಬೌಗೋಳಿಕವಾಗಿ ಒಂದಾದಾಗಲೂ, ಈ ನೆಲದ ಭಾವ ಪ್ರಪಂಚ ಪ್ರತ್ಯೇಕ ತುಂಡುಗಳ ಕೃತಕ ಹೊಲಿಗೆಯಂತೇ ಇತ್ತು.

ಆಗ ಸರ್ವತ್ರ ಭಾವೈಕ್ಯ ಸಾಧಿಸುವುದು ನಾಡ ಮುಂದಿನ ಬಹು ದೊಡ್ಡ ಸವಾಲಾಗಿತ್ತು. ಆಗೇಕೆ, ಈಗಲೂ ಪ್ರಾದೇಶಿಕ ಅಸಮತೋಲನದ ಡಿ.ಎಂ.ನಂಜುಂಡಪ್ಪ ವರದಿಯ ಚರ್ಚೆ ನಡೆದಿಲ್ಲವೇ?… ಈ ಭಾವೈಕ್ಯದ ಕೆಲಸ ಸ್ವಲ್ಪ ಮಟ್ಟಿಗೆ ಏಕೀಕರಣವಾದಿಗಳಿಂದ , ಇನ್ನು ಸ್ವಲ್ಪ ಮಟ್ಟಿಗೆ ಸಾಹಿತಿಗಳಿಂದ ನಡೆಯುತ್ತಾ ಬಂತು.

ನೆನಪಿಡಿ; ಆ ಕಾಲದಲ್ಲಿ ವರ್ಷಕ್ಕೆ ನಾಲ್ಕಾರು ಚಿತ್ರಗಳು ಬಿಡುಗಡೆಯಾದರೆ ಅದೇ ಹೆಚ್ಚು. ಅಂದರೆ ಬಹುಪಾಲು ಕಲಾವಿದರು ಬಿಡುವಾಗಿಯೇ ಇರುತ್ತಿದ್ದರು. ಹೀಗಿರುವಾಗ ರಾಜ್ ಆ ಬಿಡುವಾಗಿರುತ್ತಿದ್ದ ಕಲಾವಿದರನ್ನೆಲ್ಲಾ ಗುಡ್ಡೆ ಹಾಕಿಕೊಂಡು ರಾಜ್ಯಾದ್ಯಂತ ಜನರ ಬಳಿ ಹೋದರು, ಊರೂರು ಸುತ್ತಿದರು. ನಾಟಕಗಳನ್ನು ಆಡಿದರು. ಆ ಮೂಲಕ ಜನರನ್ನು ಭಾವನಾತ್ಮಕವಾಗಿ ಹತ್ತಿರ ಸೆಳೆದುಕೊಂಡು ಕನ್ನಡದ ಬಗ್ಗೆ ಕನ್ನಡ ಚಿತ್ರಗಳ ಬಗ್ಗೆ ಅಕ್ಕರೆ ಉಕ್ಕುವಂತೆ ಮಾಡಿದರು. ಜೀವನ ನಿರ್ವಹಣೆ ಮತ್ತು ಚಿತ್ರೋದ್ಯಮದ ಹಿತ-ಇವಿಷ್ಟೇ ಅವರ ಉದ್ದೇಶವಾಗಿದ್ದರೂ, ಅವರ ಪ್ರಯತ್ನಗಳು ಕ್ರಮೇಣ ಕನ್ನಡನಾಡು, ಕನ್ನಡ ಸಂಸ್ಕೃತಿ ಒಂದು ಎಂಬ ಅಭಿಮಾನವನ್ನು ಚಿಗುರಿಸುತ್ತ ಹೋದವು. ರಾಜ್ ಮುಂದಕ್ಕೆ ಪ್ರವಾಹ ಪರಿಹಾರ ನಿಧಿಸಂಗ್ರಹಕ್ಕೆ ಹೋಗಿದ್ದು ಕೂಡ ಗೋಕಾಕ್ ಚಳುವಳಿಯಷ್ಟೇ ಪ್ರಬಲವಾಗಿ ಕನ್ನಡಿಗರನ್ನು ಪರಸ್ಪರ ಹತ್ತಿರ ತಂದಿದ್ದನ್ನು ನೆನೆಸಿಕೊಳ್ಳಬೇಕು.

ರಾಜ್ ಕುಮಾರರ ಬೇರೆಲ್ಲಾ ಕಾಣಿಕೆಗಳನ್ನು ಮರೆತು ನೋಡಿದರೂ, ಅಖಂಡ ಕನ್ನಡ ಪ್ರಜ್ಞೆಯೊಂದನ್ನು ಸಾದ್ಯವಾಗಿಸಿದ ಅವರ ಪರಿಶ್ರಮವೇ ಮಹತ್ತರ ಸಾಧನೆಯಾಗಿ ಗೋಚರವಾಗುವುದಿಲ್ಲವೇ? ಕನ್ನಡಕ್ಕೆ ಅವರು ಇನ್ನೇನು ಕೊಡಬೇಕಿತ್ತು?

‍ಲೇಖಕರು avadhi

April 25, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. keshav

    ಚೆಂದ, ಆದರೆ ಅಪೂರ್ಣ ಅನಿಸುತ್ತದೆ ಈ ಲೇಖನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: