ಸಂಜೆಗೆ ಶರಾ
ಗೀರ್ವಾಣಿ
ಸಂಜೆಗೆ ಶರಾ ಬರೆಯುವ ಮುನ್ನ
ಕತ್ತಲು ಯೋಚಿಸಬಹುದಿತ್ತು !
ಹಕ್ಕಿ ಮರಿಯಿನ್ನೂ ಗೂಡು ಸೇರಿಲ್ಲ
ಜೀರುಂಡೆಗಳಿಗಿನ್ನೂ ತಾಲೀಮು ಮುಗಿದಿಲ್ಲ
ಗುಬ್ಬಕ್ಕನಿಗಂತೂ ತುತ್ತೇ ಸಿಕ್ಕಿಲ್ಲ
ಏನಿತ್ತು ಅವಸರ ಕತ್ತಲೆಗೆ?
ಕೃಷ್ಣ ಹುಟ್ಟಿಯಾಗಿದೆ
ನಂದ ಯಮುನೆ ದಾಟಿಯಾಗಿದೆ
ಪಾಂಡವರು ಅರಗಿನ ಮನೆಯಿಂದ
ನಡೆದಾಗಿದೆ
ಅಶ್ವತ್ಥಾಮ ಉಪ ಪಾಂಡವರ ಕತ್ತು ಸೀಳಿಯಾಗಿದೆ
ಇನ್ನಂಥ ಧಾವಂತ ಹೇಳಿ ಈ ಇರುಳಿಗೆ?
ಕತ್ತಲೆಗೂ ಹಾದರದ ಹುಕಿ !
ಬೀದಿ ದೀಪಗಳ ಹುಚ್ಚು.
ಶತಮಾನಗಳ ಕಾವಳ ಬೆಳಗಿದ
ಬೀದಿ ದೀಪಗಳ ಹುಚ್ಚು !
ಅದಕ್ಕೇ ಗಡಿಬಿಡಿಯಲ್ಲಿ ಶರಾ ಬರೆಯುತ್ತಿದೆ ಸಂಜೆಗಳಿಗೆ
ಸೂರ್ಯನಿಲ್ಲದ ಹೊತ್ತಲ್ಲಿ ಸೋಡಿಯಂ ಲೈಟಿನೊಡನೆ ಶೃಂಗಾರ
ಯಾಕೆ ಬೇಕಿತ್ತು ಹೇಳಿ ಕತ್ತಲೆಗೆ?
ಕೇಳಿದರೆ ತಿರುಗಿ ಕೇಳುತ್ತದೆ
ಸೂರ್ಯ ಬೆಳಗಿದನಾ ಕತ್ತಲ ಮೂಲೆಗಳನ್ನು?
ಪ್ರಶ್ನೆಗೆ ಪ್ರಶ್ನೆಯೇ ಉತ್ತರವಂತೆ.
ಬೋರಾಗಿದೆಯಂತೆ ಚಿಮಣಿ ಬುಡ್ಡಿಗಳು
ಮಸಿಹಿಡಿದ ಲಾಟೀನಿನ ಗ್ಲಾಸುಗಳು
ದೀಪಕ್ಕೇ ಕಾಲೆಡಗುತ್ತವೆಯಂತೆ ಎಣ್ಣೆ ದೀಪಗಳು !
ಎಲ್ಲ ಸೋಡಿಯಂ ಲೈಟಿನ ಮಹಿಮೆ ಬಿಡಿ
ಸೂರ್ಯಂಗೇ ಟಾಂಗು ಕೊಟ್ಟು
ಕತ್ತಲ ಕತ್ತು ಬಾಚಿ ತಬ್ಬುವ ಬೀದಿ ದೀಪಗಳಿಗೆ
ಯಾರಾದರೂ ಹೇಳಬಹುದಿತ್ತು
ದೀಪದ ಕೆಳಗೆ ಮತ್ತದೇ ಕತ್ತಲು ಎಂದು !





0 Comments