ಸಂಘರ್ಷ-ಸಂಭ್ರಮ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಭಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

ಶುರುವಿನ ಮೆಟ್ಟಿಲಿನಿಂದ ಶೃಂಗಕ್ಕೇರುವ ಆಸೆ-ಆಕಾಂಕ್ಷೆಗಳು ಎಲ್ಲ ವೃತ್ತಿಯಲ್ಲೂ ಇರುತ್ತವೆ. ಈ ಬಡ್ತಿಯೇ ಭವಿಷ್ಯದ ಭರವಸೆಯ ಬೆಳಕಾಗಿರುತ್ತದೆ. ಸರ್ಕಾರಿ ಸೇವೆಯಲ್ಲಿ ಸೇವಾ ಹಿರಿತನ ಮತ್ತು ಇಲಾಖೆ ಪರೀಕ್ಷೆಗಳು ಬಡ್ತಿಗೆ ಮುಖ್ಯ ಮಾನದಂಡಗಳು. ಖಾಸಗೀ ಸಂಸ್ಥೆಗಳಲ್ಲೂ ಇಂಥ ಮಾನದಂಡಗಳು ಇರುತ್ತವೆಯಾದರೂ ಅದನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ ಎಂದು ಖಾತ್ರಿಯಾಗಿ ಹೇಳಲಾಗದು. ನಮ್ಮಲ್ಲೂ ವಾರ್ಷಿಕ ಬಡ್ತಿ ನೀಡುವಾಗ ಸೇವಾ ಹಿರಿತನ ಮತ್ತು ದಕ್ಷತೆಗಳೇ ಮುಖ್ಯ ಮಾನದಂಡವಾಗಿರುತ್ತಿತ್ತು. ಒಂದೆರಡು ಅಪವಾದಗಳೂ ಇರಬಹುದು.

ಪ್ರಿಂಟರ್ಸ್ನಲ್ಲಿ ಏಪ್ರಿಲ್ ತಿಂಗಳಿಗೆ ಒಂದು ಮಹತ್ವ ಇತ್ತು. ಸಿಬ್ಬಂದಿಗೆ ವಾರ್ಷಿಕ ಬಡ್ತಿ (ಪ್ರೊಮೊಷನ್ಸ್) ಮತ್ತು ಇನ್‌ಕ್ರಿಮೆಂಟುಗಳನ್ನು, ಹೆಚ್ಚುವರಿ ಇನ್‌ಕ್ರಿಮೆಂಟ್ ಮತ್ತು ಪ್ರೋತ್ಸಾಹದಾಯಕ ಅವಾರ್ಡುಗಳನ್ನು ಈ ತಿಂಗಳಿನಲ್ಲಿ ಕೊಡುವುದು ಇಲ್ಲಿನ ರೂಢಿಯಾಗಿತ್ತು. ಈ ಪ್ರಕ್ರಿಯೆ ಫೆಬ್ರುವರಿ, ಮಾರ್ಚ್ ತಿಂಗಳಲ್ಲೇ ಶುರುವಾಗುತ್ತಿತ್ತು.‌ ಎಲ್ಲ ವಿಭಾಗಗಳಲ್ಲೂ ಈ ವರ್ಷ ಯಾರಿಗೆ ಬಡ್ತಿ ಸಿಗಬಹುದು, ಯಾರಿಗೆ ಡಬ್ಬಲ್ ಇನ್‌ಕ್ರಿಮೆಂಟ್ ಸಿಗಬಹುದು, ಯಾರಿಗೆ ಅವಾರ್ಡ್ ಸಿಗಬಹುದು ಎಂದು ಸಿಬ್ಬಂದಿ ಮಾತನಾಡಿಕೊಳ್ಳುವುದು ಶುರುವಾಗುತ್ತಿತ್ತು. ಕೆಲವರು ತಮಗೆ ಅನ್ಯಾಯವಾಗಿದೆ ಎಂದೂ ತಮ್ಮ ಸೇವಾ ಹಿರಿತನವನ್ನು ಕಡೆಗಣಸಲಾಗಿದೆ, ಈ ವರ್ಷವಾದರೂ ಅದನ್ನು ಸರಿಪಡಿಸಬೇಕೆಂದೂ ವಿಭಾಗಗಗಳ ಮುಖ್ಯಸ್ಥರಿಗೆ ಹೇಳಿಕೊಳ್ಳುವುದು ಶುರುವಾಗುತ್ತಿತ್ತು. ಎಲ್ಲರಿಗೂ ಬಡ್ತಿ ಕೊಡುವುದು ಸಾಧ್ಯವಾಗುತ್ತಿರಲಿಲ್ಲ. ಖಾಲಿ ಇರುವ/ಆಗಲಿರುವ ಹುದ್ದೆಗಳು, ಹೊಸ ಯೋಜನೆಗಳು ಮೊದಲಾದ ಪರಿಗಣನೆಗಳಿರುತ್ತಿದ್ದವು.

ಬಡ್ತಿ ಸಾಧ್ಯವಿಲ್ಲದಿದ್ದಲ್ಲಿ ಸಮರ್ಥರಿಗೆ, ದಕ್ಷತೆ-ಪ್ರತಿಭೆಗಳನ್ನು ಮೆರೆದವರಿಗೆ ಪ್ರೋತ್ಸಾಹದಾಯಕವಾಗಿ ಒಂದು-ಎರಡು-ಮೂರು ಹೆಚ್ಚುವರಿ ಇನ್‌ಕ್ರಿಮೆಂಟುಗಳನ್ನು ಆಡಳಿತ ವರ್ಗ ಉದಾರವಾಗಿ ನೀಡುತ್ತಿತ್ತು. ಕೆಲವರಿಗೆ ಪ್ರೋತ್ಸಾಹದಾಯಕವಾಗಿ ಅವಾರ್ಡುಗಳನ್ನು ಕೊಡುವುದು ಇತ್ತೀಚಿನ ಕ್ರಮವಾಗಿತ್ತು. ಅವಾರ್ಡ್ ಎಂದರೆ ಇಂತಿಷ್ಟು ಮೊತ್ತವನ್ನು ಏಪ್ರಿಲ್ ತಿಂಗಳ ಸಂಬಳದ ಜೊತೆ ಸೇರಿಸಿ (ಒನ್‌ಟೈಂ ಪೇಮೆಂಟ್) ಕೊಡಲಾಗುತ್ತಿತ್ತು. ಇದನ್ನು ಹೆಚ್ಚುವರಿ ಇನ್‌ಕ್ರಿಮೆಂಟಿನಂತೆ ಮೂಲವೇತನದೊಂದಿಗೆ ಸೇರಿಸುತ್ತಿರಲಿಲ್ಲ.

ಬಡ್ತಿ, ಹೆಚ್ಚುವರಿ ಇನ್ ಕ್ರಿಮೆಂಟ್, ಅವಾರ್ಡ್ ಇವುಗಳ ನೀಡಿಕೆಯಲ್ಲಿ ನಿರ್ದೇಶಕರುಗಳ ಮಂಡಳಿಯ, ಅಂದರೆ, ಡೈರೆಕ್ಟರುಗಳದೇ ಪರಮಾಧಿಕಾರವಾಗಿತ್ತು. ಅವರ ತೀರ್ಮಾನವೇ ಆಖೈರು ತೀರ್ಪಾಗಿರುತ್ತಿತ್ತು. ಆಖೈರು ನಿರ್ಧಾರಕ್ಕೆ ಮುನ್ನ ಅವರುಗಳ ಜೊತೆ ಐದಾರು ಮೀಟಿಂಗುಗಳಾದರೂ ಆಗುತ್ತಿತ್ತು. ಈ ಸಭೆಗಳಲ್ಲಿ ಶಿಫಾರಸು ಮಾಡಲಾದ ಹೆಸರಿನವರ ಪ್ರತಿಭೆ, ಸಾಮರ್ಥ್ಯ, ದಕ್ಷತೆ, ನಿಷ್ಠೆ, ವೃತ್ತಿಪರತೆ, ಋಜುತ್ವ (ಇಂಟೆಗ್ರಿಟಿ) ಇವೆಲ್ಲವೂ ಚರ್ಚೆಯಾಗುತ್ತಿದ್ದೆವು. ಇದು ಬಿಟ್ಟು ಬೇರೆ ಪರಿಗಣನೆಗಳಿಂದ ಶಿಫಾರಸು ಮಾಡುವಂತಿರಲಿಲ್ಲ. ಯಾರ ಪರ ವಹಿಸುವಂತೆಯೂ ಇರಲಿಲ್ಲ. ಎಲ್ಲ ಇಲಾಖೆಗಳ ಎಲ್ಲ ಸಿಬ್ಬಂದಿಯ ಪ್ರತಿಭೆ, ಶಕ್ತಿ ಸಾಮರ್ಥ್ಯ, ಶ್ರದ್ಧೆ, ನಿಷ್ಠೆ, ಋಜುತ್ವಗಳ ಬಗ್ಗೆ ನಿರ್ದೇಶಕರುಗಳಿಗೆ ತಿಳಿದಿರುತ್ತಿತ್ತು.

ಸಂಪಾದಕೀಯ ವಿಭಾಗದ ಬಡ್ತಿಗಳ ಬಗ್ಗೆ ಮೊದಲು ಮಾತುಕತೆ ಶುರುವಾಗುತ್ತಿದ್ದುದು ಪ್ರಧಾನ ಸಂಪಾದಕರೂ ಆಗಿದ್ದ ಎಂ.ಡಿ. ಅವರೊಂದಿಗೆ. ಅದು ಒಂದೇ ದಿನ ಮುಗಿಯುತ್ತಿರಲಿಲ್ಲ, ನನ್ನದೊಂದು ಶಿಫಾರಸಿನ ಪಟ್ಟಿಯನ್ನು ಸಲ್ಲಿಸುತ್ತಿದ್ದೆ. ಮೂರು ನಾಲ್ಕು ಬೈಠಕ್‌ಗಳಲ್ಲಿ ಪಟ್ಟಿಯಲ್ಲಿದ್ದ ಒಂದೊಂದು ಹೆಸರಿನವರ ಕಾರ್ಯವೈಖರಿ, ಪ್ರತಿಭೆ, ಶಕ್ತಿಸಾಮರ್ಥ್ಯಗಳ ಬಗ್ಗೆ ಚರ್ಚೆಯಾಗುತ್ತಿತ್ತು. ಮಾತುಕತೆ ಸಮಯದಲ್ಲಿ ಯಾರ‍್ಯಾರು ಬಡ್ತಿ/ಹೆಚ್ಚುವರಿ ಇನ್‌ಕ್ರಿಮೆಂಟ್/ಅವಾರ್ಡ್ಗಳಿಗೆ, ವರ್ಗಾವರ್ಗಿಗಳಿಗೆ ಅರ್ಹರು ಎನ್ನುವ ಅವರ ಅಭಿಪ್ರಾಯವನ್ನು ಹೇಳುತ್ತಿದ್ದರು.

ಏಪ್ರಿಲ್ ಹತ್ತಿರವಾದಂತೆ ಜ್ವರ ಏರುತ್ತಿತ್ತು. ಕೊನೆಗೊಂದು ದಿನ  ಪ್ರಧಾನ ಸಂಪಾದಕರು/ಎಂ.ಡಿ ತಮ್ಮ ತೀರ್ಮಾನ ತಿಳಿಸಿ, ಇನ್ನಿಬ್ಬರು ನಿರ್ದೇಶಕರುಗಳೊಂದಿಗೆ ಚರ್ಚಿಸಲು ಆದೇಶಿಸುತ್ತಿದ್ದರು. ನಾನು ಈ ಪಟ್ಟಿಯನ್ನು ಅವರ ಮುಂದೆ ಮಂಡಿಸುತ್ತಿದ್ದೆ. ಎಂ.ಡಿ.ಯವರ ತೀರ್ಮಾನ ಎಂದು  ಹೇಳುವಂತಿರಲಿಲ್ಲ. ಮತ್ತೆ ಪ್ರತಿ ಹೆಸರಿನ ಬಗ್ಗೆಯೂ ಚರ್ಚೆ. ಕೆಲವು ಹೆಸರುಗಳಿಗೆ ಕಾಟು ಹಾಕಿ ತಮ್ಮ ತೀರ್ಮಾನವನ್ನು ಅವರು ಸೂಚಿಸುತ್ತಿದ್ದರು. ಈ ಮಾರ್ಪಾಟುಗಳೊಂದಿಗೆ ಮತ್ತೆ ಚರ್ಚೆ. ಒಂದೆರಡು ಬದಲಾವಣೆಗಳಿಗೆ  ‘ಓ.ಕೆ’, ಇನ್ನು ಕೆಲವು ಬೇಡ. ಕೊನೆಗೆ ನಿರ್ದೇಶಕರುಗಳೆಲ್ಲರೂ ಒಪ್ಪಿದವರ ಹೆಸರುಗಳನ್ನು ನನ್ನ ಸ್ವಹಸ್ತದಲ್ಲಿ ಬರೆದು ಸಹಿ ಹಾಕಿ, ಅದಕ್ಕೆ ಎಂ.ಡಿ.ಯವರ ಒಪ್ಪಿಗೆಯ ಅಂಕಿತ ಪಡೆದು ಪರ್ಸನಲ್ ಮ್ಯಾನೇಜರಿಗೆ ಕಳುಹಿಸಬೇಕಿತ್ತು. ಪ್ರತಿ ವರ್ಷದ ಪರದಾಟ ಇದಾಗಿತ್ತು.

೧೯೯೮ರಲ್ಲೂ ಎರಡು ಮೂರು ಸುತ್ತಿನ ಪರದಾಟ ಮುಗಿಸಿ ಎಂ.ಡಿ.ಯವರು ಅನುಮೋದಿಸಿದ ಪಟ್ಟಿಯೊಂದಿಗೆ ಇ.ಡಿ.ಯವರನ್ನು ಭೇಟಿಯಾದೆ. ಅಂದಿನ ಸಭೆಗೆ ಸಹಾಯಕ ಸಂಪಾದಕರು ಮತ್ತು ಸುದ್ದಿ ಸಂಪಾದಕರನ್ನೂ ಆಹ್ವಾನಿಸಲಾಗಿತ್ತು.

ಇದೇನೋ ಹೊಸ ಪದ್ಧತಿ ಶುರುವಾಗುತ್ತಿದೆಯಲ್ಲ ಎನಿಸಿತು. ನಾನು ಎಂ.ಡಿ.ಯವರು ಅನುಮೋದಿಸಿದ್ದ ಪಟ್ಟಿಯನ್ನು ನನ್ನ ಶಿಫಾರಸು ಎಂಬಂತೆ ಇ.ಡಿ.ಯವರ ಮುಂದೆ ಮಂಡಿಸಿದೆ. ಚರ್ಚೆ ಶುರುವಾಯಿತು. ಒಂದೊಂದು ಹೆಸರು ಬಂದಾಗಲೂ ಅವರಿಬ್ಬರ ಅಭಿಪ್ರಾಯವನ್ನು ಕೇಳುತ್ತಿದ್ದರು. ಕೆಲವರ ಬಡ್ತಿಗೆ ಅವರು ವಿರೋಧಿಸಿದರು. ಬೇರೆಯವರ ಹೆಸರುಗಳನ್ನು ಮುಂದಕ್ಕೆ ತಂದರು. ಪೀಕಲಾಟಕ್ಕಿಟ್ಟುಕೊಂಡಿತು. ‘ಸುಧಾ’ ಮುಖ್ಯ ಉಪಸಂಪಾದಕರೊಬ್ಬರನ್ನು ಬಡ್ತಿ ಮೇಲೆ ‘ಪ್ರವಾ’ಗೆ ವರ್ಗಾಯಿಸಬೇಕೆಂಬ ಪ್ರಸ್ತಾಪ ಬಂದಾಗ ಅದಕ್ಕೆ ಅವರಿಬ್ಬರೂ ವಿರೋಧ ವ್ಯಕ್ತಪಡಿಸಿದರು.

ಪ್ರಜಾವಾಣಿಯಲ್ಲಿ ಯಾರು ಸೀನಿಯರ್ ಇದಾರೋ ಅವರಿಗೆ ಪ್ರಮೋಷನ್ ಕೊಡಿ ಎಂಬುದು ಇ.ಡಿ.ಯವರ ಅಭಿಪ್ರಾಯವಾಗಿತ್ತು. ಅದು ಸರಿಯೇ. ಆದರೆ ವಾಸ್ತವವಾಗಿ ಅದು ನನ್ನ ತೀರ್ಮಾನವಾಗಿರಲಿಲ್ಲ.

‘ಅದು ನನ್ನ ಶಿಫಾರಸಲ್ಲ ಸರ್, ಎಂ.ಡಿ. ವಾಂಟ್ಸ್ ಹಿಮ್ ಇನ್ ಪ್ರಜಾವಾಣಿ ಎಂ.ಡಿ.ಯವರು ಅನುಮೋದಿಸಿರುವ ಪಟ್ಟಿ ಅದು’

‘ಏನು! ಎಂ.ಡಿ. ಅಪ್ರೂವಲ್ ಪಡೆದುಕೊಂಡು ಇಲ್ಲಿ ಬಂದಿದ್ದೀರಾ?’

‘ಹೌದು ಸರ್’

‘ವಾಟ್! ಯೂ .. @# …’

-ಅಸಮಾಧಾನದ ಆಸ್ಫೋಟ.

ನಾನು ಅವಕ್ಕಾಗಿ ಹೋದೆ.

ಕ್ಷಣ ಸಾವರಸಿಕೊಂಡು. ‘ಸರ್. ನೀವು ನನ್ನನ್ನು ಹೀಗೆ ನಡೆಸಿಕೊಳ್ಳುವುದು ತರವಲ್ಲ’ ಎಂದವನೇ ಸಭೆಯಿಂದ ಹೊರನಡೆದು ನನ್ನ ಜಾಗಕ್ಕೆ ಬಂದು ಬಿಟ್ಟೆ.

ಆ ಮಾತುಗಳನ್ನು ನಾನು ಅವರಿಂದ ನಿರೀಕ್ಷಿಸಿರಲಿಲ್ಲ. ನನ್ನ ಮೈಮನಸ್ಸುಗಳು ಕಂಪಿಸುತ್ತಿದ್ದವು, ನಾನು ಎಂ.ಡಿ.ಯವರು ಅನುಮೋದಿಸಿದ ಪಟ್ಟಿ  ಅದು ಎಂದು ಹೇಳಬಾರದಿತ್ತು. ಆದರೆ ನನ್ನದಲ್ಲದ್ದನ್ನು ಒಪ್ಪಿಕೊಳ್ಳಬಾರದೆಂಬ ಸುಪ್ತಪ್ರಜ್ಞೆಯ ಆಣತಿಯಿಂದಾಗಿಯೋ ಏನೋ ಸತ್ಯ ನನ್ನ ಬಾಯಿಂದ ಆ ಕ್ಷಣ ಹೊರ ಬಂದಿತ್ತು. ನಾನು ಮೊದಲು ಅವರ ಬಳಿ ಹೋಗಬೇಕಾದ ಶಿಷ್ಟಾಚಾರ ಪಾಲಿಸಿಲ್ಲ ಎಂದೋ ಏನೋ  ಕೋಪ ಬಂದಿರಬಹುದು. ಅದರಿಂದ ಅವರಿಗೆ ನೋವಾಗಿರ (ಹರ್ಟ್) ಬಹುದು. ಈ ಸೂಕ್ಷ್ಮ ನನಗೆ ಆ ಸಮಯದಲ್ಲಿ ಹೊಳೆಯಲಿಲ್ಲ. ಇಷ್ಟು ವರ್ಷಗಳ ಅನುಭವ, ವಿವೇಚನೆ ಆ ಕ್ಷಣ ನನ್ನ ಕೈ ಹಿಡದಿರಲಿಲ್ಲ. ಆ ಆಘಾತದಿಂದ ಚೇತರಿಸಿಕೊಂಡು ಯೋಚಿಸಿದೆ.

‘ಹಿಡಿಕೂಳಿಗಾಗಿ ಇಂಥ ಮಾತು ಕೇಳುವ ಸ್ಥಿತಿ ಬಂತಲ್ಲ. ಮುವತ್ತೆರಡು ವರ್ಷಗಳ ಸೇವೆಗೆ ಸರಿಯಾದ ಉಡುಗೊರೆ ಸಿಕ್ಕಿದೆ. ಈ ಅವಮಾನವನ್ನು ಸಹಿಸಿಕೊಂಡು ಇನ್ನು ಇಲ್ಲಿರಬಾರದು’ ಎನ್ನುವ ನಿರ್ಧಾರಕ್ಕೆ ಬಂದೆ. ಅಷ್ಟರಲ್ಲಿ ಫೋನ್ ಟ್ರಿಂಟಿಣಿಸಿತು.

‘ಹಲೋ…ಟು ಮೇಕ್ ಮೈ ಕಾನ್ಷಸ್ ಕ್ಲಿಯರ್ ಐ ಆಮ್ ವಿತಡ್ರಾಯಿಂಗ್ ದೋಸ್ ವರ್ಡ್ಸ್. ಸಾರಿ’

‘ನಿಮ್ಮ ಸೌಜನ್ಯಕ್ಕೆ ಧನ್ಯವಾದಗಳು ಸರ್’

ಪ್ರಾಯಶ್ಚಿತ್ತದ ಮಾತುಗಳಿಂದ ಆಡಿದವರ ಮನಸ್ಸಿಗೆ ನಿರಾಳವಾಗಬಹುದು. ಆದರೆ ಆಡಿಸಿಕೊಂಡವರಿಗೆ?. ಈ ಮಾತುಗಳಿಂದ ನನ್ನ ಆತ್ಮಕ್ಕಾದ ನೋವು ಶಮನಗೊಳ್ಳಲಿಲ್ಲ.

ಒಂದು ಸಾಲಿನ ರಾಜೀನಾಮೆ ಪತ್ರ ಬರೆದು ಅದರೊಂದಿಗೆ ಪ್ರಧಾನ ಸಂಪಾದಕ/ಎಂ.ಡಿ ಅವರನ್ನು ಕಂಡೆ. ರಾಜೀನಾಮೆ ಪತ್ರವನ್ನು ಅವರಿಗೆ ಸಲ್ಲಿಸಿದೆ. ಅವರು ಕಾರಣ ಕೇಳಿದರು. ಸಭೆಯಲ್ಲಿ ನಡೆದುದೆಲ್ಲವನ್ನೂ ಅಸಭ್ಯ ಭಾಷೆ ಪ್ರಯೋಗಿಸಿದ್ದನ್ನೂ ಸಾದ್ಯಂತವಾಗಿ ವಿವರಿಸಿದೆ. ಅವರೇನೂ ಮಾತಾಡಲಿಲ್ಲ. ಸ್ವಲ್ಪ ಮೌನದ ನಂತರ ‘ಡೋಂಟ್ ಇನ್ಸಿಸ್ಟ್ ಆನ್ ಇಟ್’ ಎಂದು ರಾಜೀನಾಮೆ ಪತ್ರವನ್ನು ಪಕ್ಕಕ್ಕಿಟ್ಟರು.

‘ಇಲ್ಲ, ಸರ್ ದಯವಿಟ್ಟು ನನ್ನ ರಾಜೀನಾಮೆಯನ್ನು ಅಂಗೀಕರಿಸಿ. ಆಡಳಿತ ಮಂಡಳಿಯ ನಿರ್ದೇಶಕರುಗಳಲ್ಲಿ ಯಾರೊಬ್ಬರ ವಿಶ್ವಾಸ ಕಳೆದುಕೊಂಡರೂ ಸೇವೆಯಲ್ಲಿ ಮುಂದುವರಿಯುವ ನೈತಿಕ ಹಕ್ಕು ನನಗಿರುವುದಿಲ್ಲ. ನಾನು ಇಂದು ನಿರ್ದೇಶಕರೊಬ್ಬರ ಅವಿಶ್ವಾಸಕ್ಕೆ ಪಾತ್ರನಾಗಿದ್ದೇನೆ ಎಂಬುದು ಅವರಾಡಿದ ನುಡಿಗಳಿಂದ ಸ್ಪಷ್ಟವಾಗಿದೆ. ನಾನಿನ್ನು ಸೇವೆಯಲ್ಲಿ ಮುಂದುವರಿಯುವುದು ಸರಿಯಲ್ಲ. ದಯವಿಟ್ಟು ನಾಳೆಯಿಂದ ಜಾರಿಗೆ ಬರುವಂತೆ ರಾಜೀನಾಮೆ ಒಪ್ಪಿಕೊಳ್ಳಿ. ನನಗೆ ಹೋಗಲು ಅನುಮತಿ ನೀಡಿ’ ಎಂದು ಎದ್ದು ನಿಂತೆ. ಅವರು ಏನೂ ಹೇಳಲಿಲ್ಲ.

‘ಐ ಟೇಕ್ ಲೀವ್ ಆಫ್ ಯು ಸರ್’ ಎಂದು ಹೇಳಿ ಹೊರಬಂದೆ. ಅಂದು ಎಂದಿನಂತೆ ಸಂಜೆ ಸಂಪಾದಕೀಯ ಸಭೆ ಮುಗಿಸಿ ಮನೆಗೆ ಬಂದೆ.

ರಾಜೀನಾಮೆ ದೃಢ ನಿರ್ಧಾರವಾಗಿದ್ದುರಿಂದ ಮರು ದಿನ ಬೆಳಿಗ್ಗೆ ನಿರಾಳವಾಗೇ ಇದ್ದೆ. ಸುಮಾರು ೯-೩೦ರ ಸಮಯವಿರ ಬೇಕು. ಟೆಲಿಫೋನ್ ಟ್ರಿಂಟಿಣಿಸಿತು.

‘ಹಲೋ’

‘ಹಲೋ, ಮಿಸ್ಟರ್ ರಂಗನಾಥ ರಾವ್… ಹಿಯರ್, ವಿ ಆರ್ ನಾಟ್ ಅಕ್ಸೆಪ್ಟಿಂಗ್ ಇವರ್ ರೆಸಿಗ್ನೇಶನ್, ಪ್ಲೀಸ್ ಡೋಂಟ್ ಇನ್ಸಿಸ್ಟ್ ಆನ್ ಇಟ್. ಕಮ್ ಟು ಆಫೀಸ್’

ಇ.ಡಿ. ದನಿಯಂತಿತ್ತು. ನಾನು ಗಲಿಬಿಲಿಗೊಂಡು ಮಾತಾಡಲು ಹವಣಿಸಿತ್ತಿರುವಂತೆಯೇ ‘ಐ ಟೋಲ್ಡ್ ಯು ಡೋಂಟ್ ಇನ್ಸಿಸ್ಟ್ ಆನ್ ಇಟೀಸ್  ಎ ಕ್ಲೋಸ್ಡ್ ಮ್ಯಾಟರ್. ಪ್ಲೀಸ್ ಕಮ್ ಟು ಆಫೀಸ್’ ಎಂದು ಹೇಳಿ ಟೆಲಿಫೋನ್ ಇಟ್ಟುಬಿಟ್ಟರು.   

ನನ್ನ ಸೇವಾ ಅವಧಿ ಇನ್ನು ಒಂದು ವರ್ಷ ಮಾತ್ರ ಇತ್ತು. ಆಡಳಿತ ವರ್ಗ ರಾಜೀನಾಮೆಯನ್ನು ಅಂಗೀಕರಿಸಿರಲಿಲ್ಲ, ನಾನು ಸೇವಾ ಅವಧಿಯನ್ನು ಮುಗಿಸಬೇಕೆಂಬುದು ಅವರ ಇಂಗಿತವಿದ್ದಂತಿತ್ತು. ಬಹಳಷ್ಟು ಯೋಚಿಸಿದೆ. ಮನಸ್ಸಿಗಾದ ನೋವು ಬೇಗ ಮಾಯುವಂಥಾದ್ದಾಗಿರಲಿಲ್ಲ. ಮನಸ್ಸಿನಲ್ಲಿ ಆ ನೋವು, ಕಹಿಗಳನ್ನುಳಿಸಿಕೊಂಡು ಕೆಲಸ ಮಾಡುವುದು ಕಷ್ಟವೆನಿಸಿತು. ಮನಸ್ಸು ವಿಮುಖವಾದ ಮೇಲೂ ನಿಷ್ಠೆಯನ್ನು ನಟಿಸುತ್ತಾ ಕೆಲಸ ಮಾಡುವುದು ಅನೈತಿಕತೆಯಾಗುತ್ತದೆ. ಹೋಗುವುದು ಬೇಡ ಎನ್ನಿಸಿತು. ಆದರೆ ರಾಜೀನಾಮೆ ಅಂಗೀಕಾರವಾಗಿಲ್ಲ. ಕೆಲಸಕ್ಕೆ ಹೋಗದಿದ್ದರೆ ಅದು ಅಕ್ರಮ ಗೈರು ಹಾಜರಿ ಆಗುತ್ತದೆ. ಅದು ಮುಂದಿನ ಕ್ರಮಕ್ಕೆ ಎಡೆಮಾಡಿಕೊಡುತ್ತದೆ. ಕೊನೆಗೆ ಮತ್ತೊಮ್ಮೆ ಎಂ.ಡಿ.ಯವರನ್ನು ನೋಡುವುದೆಂದು ನಿರ್ಧರಿಸಿದೆ.

ಆಫೀಸಿಗೆ ಹೋದ ಕೆಲವು ನಿಮಿಷಗಳಲ್ಲೇ ‘ಸರ್ ಎಂ.ಡಿ.ವಾಂಟ್ಸ್ ಯುʼ ಎಂದು ಪಿ.ಎ. ಕರೆ ಮಾಡಿದರು. ಹೋದೆ ಎಂ.ಡಿ. ಇನ್ನಾವುದೋ ಮಹತ್ವದ ವಿಷಯ ಎತ್ತಿಕೊಂಡರು. ನಂತರ ನನಗೆ ಮಾತನಾಡಲು ಅವಕಾಶ ಕೊಡದೆ ತಮ್ಮ ಕೆಲಸದಲ್ಲಿ ಮಗ್ನರಾದರು. ಈ ಅವಜ್ಞತೆಯಿಂದ ನಾನು ನಿರುಪಾಯನಾಗಿ ಹೊರಬಂದೆ.

ಗಾಯಗೊಂಡ ಸಿಪಾಯಿಯಂತೆ ನನ್ನ ಕೆಲಸದಲ್ಲಿ ತೊಡಗಿಕೊಂಡೆ. ಇದೇ ದಿನಗಳಲ್ಲಿ ಕೆ. ಶ್ರೀಧರಾ ಚಾರ್ ಅವರಿಗೆ ಅಸೋಸಿಯೇಟೆಡ್ ಎಡಿಟರ್ ಆಗಿ ಬಡ್ತಿಯಾಯಿತು. ಇದೊಂದು ಹೊಸ ಬೆಳವಣಿಗೆ. ಈಗ ನಾಮಾಂಕಿತ (ಡೆಸಿಗ್ನೇಷನ್) ಹೊರತು ಶ್ರೀಧರಾಚಾರ್ ವೇತನ ಇತ್ಯಾದಿಗಳಲ್ಲಿ ನನಗೆ ಸರಿಸಮಾನರಾಗಿದ್ದರು. ಇದು, ಒಂದಕ್ಕಿಂತ ಹೆಚ್ಚು ಅಧಿಕಾರ ಕೇಂದ್ರಗಳನ್ನು ಸೃಷ್ಟಿಸುವ ಕಾರ್ಪೊರೆಟ್ ಶೈಲಿಯಲ್ಲೇ ಆಗಿತ್ತು.

ಒಂದೆರಡು  ದಿನಗಳಲ್ಲೇ ನನಗೆ ಇದು ಅನುಭವಕ್ಕೂ ಬಂತು. ನಾನು ರಾತ್ರಿ ೯-೩೦ರವರೆಗೆ, ಕೆಲವೊಮ್ಮೆ ೧೦ರವರೆಗೆ ಆಫೀಸಿನಲ್ಲಿರುತ್ತಿದ್ದೆ. ಯಾವುದೇ ವಿಶೇಷ ಸುದ್ದಿ, ವರದಿ, ಬೆಂಗಳೂರಿನದಿರಲಿ ದಿಲ್ಲಿಯದಿರಲಿ ನನ್ನ ಗಮನಕ್ಕೆ ಬಂದೇ ಹೋಗಬೇಕಿತ್ತು. ಆದರೆ ನನ್ನ ಗಮನಕ್ಕೆ ಬರದೆ ಕೆಲವು ಸುದ್ದಿಗಳು/ವಿಶೇಷ ವರದಿಗಳ ಪ್ರಕಟಣೆ ಶುರುವಾಯಿತು. ಮರು ದಿನ ಇದು ಹೇಗೆ ಎಂದು ಕೇಳಿದಾಗ ‘ತಡ ರಾತ್ರಿ ಬಂತು, ಶ್ರೀಧರಾಚಾರ್ ಅವರನ್ನು ಕೇಳಿಯೇ ತೆಗೆದುಕೊಂಡೆವು, ಶ್ರೀಧರಾಚಾರ್ ಪಾಸ್ ಮಾಡಿದರು’ಎನ್ನುವ ಉತ್ತರ ಸಿಧ್ಧವಿರುತ್ತಿತ್ತು.

ಈ ದಿನಗಳಲ್ಲೇ ಒಂದು ದಿನ ರಾಜ್ಯ ಸಭೆಗೆ ನಾಮಕರಣ ಹೊಂದಲು ಯು.ಆರ್.ಅನಂತ ಮೂರ್ತಿಯವರು ದೆಹಲಿಯಲ್ಲಿ ಲಾಬಿ ನಡೆಸಿದ್ದಾರೆಂಬ ದೆಹಲಿ ವರದಿ ಪ್ರಕಟವಾಯಿತು. ಬೆಳಿಗ್ಗೆ ಈ ಸುದ್ದಿ ನೋಡಿ ನನಗೆ ಆಶ್ಚರ್ಯವಾಯಿತು. ಹಿಂದಿನ ದಿನ ರಾತ್ರ‍್ರಿ ೯ರವರೆಗೆ ಆಫೀಸಿನಲ್ಲಿದ್ದೆ. ಈ ಸುದ್ದಿ ನನ್ನ ಗಮನಕ್ಕೆ ಬಂದಿರಲಿಲ್ಲ. ಮುಖ್ಯ ಉಪಸಂಪಾದಕರನ್ನು ಕೇಳಲಾಗಿ ಸಿದ್ಧ ಉತ್ತರ ಬಂತು. ಅನಂತ ಮೂರ್ತಿಯವರಿಗೆ ಇದರಿಂದ ಅಸಮಾಧಾನವಾಗಿತ್ತು. ಅಂದು ಬೆಳಿಗ್ಗೆಯೇ ಮನೆಗೆ  ಫೋನ್ ಮಾಡಿ ಅವರು-

‘ನಾನು ಈಗ ನಿನ್ನ ಸ್ನೇಹಿತನಾಗಿ ಮಾತನಾಡುತ್ತಿಲ್ಲ. ನಿನ್ನ ಪತ್ರಿಕೆಯಲ್ಲಿ ಬಂದಿರುವ ವರದಿ ಸುಳ್ಳು. ನಾನು ಹಾಗೆ ಮಾಡಿಲ್ಲ. ನನಗೆ ಮಾನಹಾನಿ ಮಾಡಲೆಂದೇ ಈ ಸುದ್ದಿ ಸೃಷ್ಟಿಸಲಾಗಿದೆ’ ಎಂದರು.

‘ಒಂದು ನಿರಾಕರಣೆ ಹೇಳಿಕೆ ಕಳುಹಿಸಿ ಸಾರ್ ಪ್ರಕಟ ಮಾಡೋಣ’

ಅನಂತ ಮೂರ್ತಿ ತುಸು ವ್ಯಗ್ರರಾಗಿದ್ದರು.

‘ಇಲ್ಲ, ನಾನು ಕಳುಹಿಸುವುದಿಲ್ಲ. ನಿನ್ನ ಪತ್ರಿಕಾ ಧರ್ಮ ನೀನು ಪಾಲಿಸು’ ಎಂದರು ಖಡಾಖಂಡಿತವಾಗಿ. ಇದರಿಂದ ನನಗೂ ಬೇಸರವಾಗಿತ್ತು. ದೆಹಲಿ ವರದಿಗಾರನನನ್ನು ಸಮಜಾಯಿಷಿ ಕೇಳಿದಾಗ ಆತ ತನಗೆ ನಂಬಲರ್ಹವಾದ ಮೂಲಗಳಿಂದ ತಿಳಿದು ಬಂದಿದೆ ಎಂದು ತನ್ನ ವರದಿಯನ್ನು ಸಮರ್ಥಿಸಿಕೊಂಡ. ನಂಬಲರ್ಹ ಮೂಲಗಳು ‘ನಾಟಿ’ ಮಾಡಿದ ಸುದ್ದಿ ಅದಾಗಿತ್ತು ಎಂದು ನಂತರ ತಿಳಿದು ಬಂತು. ರಾಷ್ಟ್ರೀಯ ಪತ್ರಿಕೆಗಳೆಂದು ಕರೆಯಲಾದ ಕೆಲವು ಪತ್ರಿಕೆಗಳಲ್ಲಿ ಸಂಪಾದಕೀಯ ವಿಭಾಗದಲ್ಲಿ ಎರಡೆರಡು ಅಧಿಕಾರ ಕೇಂದ್ರಗಳನ್ನು ಸ್ಥಾಪಿಸುವುದು ಸುದ್ದಿಗಳನ್ನು/ವರದಿಗಳನ್ನು ‘ನಾಟಿ’ ಮಾಡುವುದು, ಇಂಥ ‘ನಾಟಿ ಕಥನ’ಗಳಿಂದ ಸಂಪಾದಕನಿಗೆ ಆಘಾತಕಾರಿಯಾದ ಪ್ರಸಂಗಗಳು ನಡೆಯುತ್ತಿರುವ ವಿದ್ಯಮಾನವನ್ನು ಬಲ್ಲವನಾಗಿದೆ. ಆದ್ದರಿಂದ ಹೆಚ್ಚು ವಿಚಲಿತನಾಗಲಿಲ್ಲ.

ಸುವರ್ಣ ಮಹೋತ್ಸವ

ಪ್ರಜಾವಾಣಿಯ ಸುವರ್ಣ ಮಹೋತ್ಸವವನ್ನು ಆಚರಿಸುವದೆಂತು ಎನ್ನುವ ಆಲೋಚನೆ ಶುರುವಾಗಿತ್ತು. ಕಾರ್ಮಿಕ ಸಂಘಟನೆಗಳು ಈಗಾಗಲೇ ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದವು. ನಾನು, ಸಂಪಾದಕೀಯ ವಿಭಾಗದ ಪರವಾಗಿ ಒಂದು ಯೋಜನೆಯನ್ನು ಪ್ರಧಾನ ಸಂಪಾದಕರಾದ ಎಂ.ಡಿ.ಅವರ ಮುಂದಿಟ್ಟೆ.

೧. ಪ್ರತಿ ವರ್ಷವೂ ಸಂಸ್ಥಾಪಕ ಶ್ರೀ ಕೆ.ಎನ್ ಗುರುಸ್ವಾಮಿಯವರ ನಾಮಾಂಕಿತ ಸುಮರ್ಣ ಮಹೋತ್ಸವ ಸ್ಮಾರಕ ಉಪನ್ಯಾಸ ಏರ್ಪಡಿಸುವುದು. ಇದು ಮಾಧ್ಯಮಕ್ಕೆ ಸೀಮಿತವಾಗಿರತಕ್ಕದ್ದು.

. ಸುವರ್ಣ ಮಹೋತ್ಸವದ ಸ್ಮಾರಕವಾಗಿ ಪ್ರಜಾವಾಣಿ,ಟೈಮ್ಸ್ ಲಿಟರರಿ ಸಪ್ಲಿಮೆಂಟ್ ಮಾದರಿ ತ್ರೈಮಾಸಿಕ ಸಾಹಿತ್ಯ ಪುರವಣಿಯೊಂದನ್ನು, ಪ್ರಕಟಿಸುವುದು. ಈ ಪುರವಣಿ ಟ್ಯಾಬ್ಲಾಯ್ಡ್ ಆಕಾರದಲ್ಲಿ ಐವತ್ತು ಪುಟಗಳಷ್ಟಿದ್ದು ಇದಕ್ಕೆ ಪ್ರತಿ ಸಂಚಿಕೆಗೂ  ಪ್ರಖ್ಯಾತ ಸಾಹಿತಿಯೊಬ್ಬರು ಅತಿಥಿ ಸಂಪಾದಕರಾಗಿರಬೇಕು. ಮುಖ್ಯವಾಗಿ ಈ ಪುರವಣಿಯಲ್ಲಿ ಸಾಹಿತ್ಯ ಪರಂಪರೆಯ ಚರ್ಚೆ/ವಿಮರ್ಶೆಗಳ ಜೊತೆಗೆ ಹಿಂದಿನ ಮೂರು ತಿಂಗಳಲ್ಲಿ ಪ್ರಕಟವಾದ ಗಮನಾರ್ಹ ಕೃತಿಗಳ/ಕಾಲಾಕೃತಿ ಪ್ರದರ್ಶನಗಳಗಳ/ರಂಗ ಪ್ರಯೋಗಗಳ ವಸ್ತುನಿಷ್ಠ ವರದಿ, ವಿಮರ್ಶೆಗಳಿಗೆ, ವಿಚಾರ ವಿನಿಮಯಗಳಿಗೆ ಮೀಸಲಾಗಿರಬೇಕು.

. ಸುವರ್ಣ ಮಹೋತ್ಸವದ ಅಂಗವಾಗಿ ಇದುವರೆಗೆ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿರುವ ಎಲ್ಲ  ಕಥೆಗಳನ್ನು ಸೇರಿಸಿ ಸುವರ್ಣ ಕಥಾ ಸಂಚಯ ಪ್ರಕಟಿಸುವುದು-

. ಸುವರ್ಣ ಮಹೋತ್ಸವ ದಿನದಂದು ‘ಚಿನ್ನದ ಪುಟಗಳು’ ಎನ್ನುವ ಒಂದು ವಿಶೇಷ ಸ್ಮೃತಿ ಪುರವಣಿಯನ್ನು ಪ್ರಕಟಿಸುವುದು. 

-ಇದು ಸುವರ್ಣಮಹೋತ್ಸವ ಆಚರಣೆ ಕುರಿತು ನೀಡಿದ  ಹಲವಾರು ಸಲಹೆಗಳಲ್ಲಿ ಮುಖ್ಯವಾದುದು.

ಪ್ರಧಾನ ಸಂಪಾದಕರೂ ಆದ ಎಂ.ಡಿ. ಅವರು ವಿಶೇಷ ಪುರವಣಿ ಕೆಲಸ ಪ್ರಾರಂಭಿಸುವಂತೆ ಆದೇಶವಿತ್ತರು. ಐವತ್ತು ವರ್ಷಗಳ ಹಿಂದಿನ ಸಂಚಿಕೆಗಳನ್ನು ಆಮೂಲಾಗ್ರ ಸಂಶೋಧಿಸಿ ಈ ಪುರವಣಿ ಸಿದ್ಧಪಡಿಸಬೇಕಿತ್ತು. ಕೊನೆಗೆ ಅನುಮೋದನೆ ದೊರೆತದ್ದು ಈ ಪುರವಣಿಗೆ ಮಾತ್ರ. ಕಾರ್ಮಿಕ ಸಂಘಟನೆಗಳು ಸುವರ್ಣ ಮಹೋತ್ಸವದ ನೆನಪಿನ ಕೊಡುಗೆಯಾಗಿ ಒಂದು ಕೈಗಡಿಯಾರವನ್ನು ಉಡುಗೊರೆಯಾಗಿ  ಪಡೆಯುವುದರಲ್ಲಿ ಸಫಲರಾಗಿದ್ದರು.

February 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: