ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಘಮಿತ್ರೆ ನಾಗರಘಟ್ಟ ಹೊಸ ಕವಿತೆ – ಬೆನ್ನಿಗೆಲ್ಲಿಯ ಕಣ್ಣು…

ಸಂಘಮಿತ್ರೆ ನಾಗರಘಟ್ಟ

ಮೆದುವಾದ ಕೈಗಳನ್ನು
ಹಿಡಿದ ಅವ್ವನ ಪ್ರೀತಿ
ಪಿಳ ಪಿಳನೆ ಬಿಡುತ್ತಿದ್ದ
ಕಣ್ಣುಗಳ ಕಂಡು
ಹೆಸರನಿಟ್ಟ ಅಪ್ಪನ ಅಕ್ಕರೆ..
ಸ್ಪರ್ಶವ ಗುರುತಿಸುವಂತಾದ
ಹಸ್ತಗಳಿಗೆ ಆಟಿಕೆಗಳ ಸುರಿದಾಗ
ಆಯ್ದುಕೊಂಡದ್ದು ಪುಸ್ತಕ ಗಳನ್ನೇ
ಗೋಡೆಯೇ ಮಿತ್ರರು
ಬಣ್ಣಗಳೇ ಕನಸುಗಳು
ತೊಟ್ಟ ಫ್ರಾಕ್ ಗೆ ರೆಕ್ಕೆಗಳ ಬಯಸಿದ ಬಾಲ್ಯ
ನಿನಗೆ ಅಪ್ಪನಿಷ್ಟನೋ ಅವ್ವಳೋ ಎಂದು
ಕೇಳುವ ಮಿತ್ರರ ಮಾತು ಮುಗಿಯುವ ಹೊತ್ತಿಗೆ
ಅಪ್ಪ ಸತ್ತ ಸುದ್ದಿ..ಅವನ ಸಾವು
ನನ್ನೊಳಗಿನ ಸಾವು..
ಮತ್ತೆ ಕೆಣಕುವ ಹುಡುಗಾಟಿಕೆಯ
ಮನಸೆಂಬ ಚಿಟ್ಟೆ.. ಕಂಡದ್ದೆಲ್ಲಾ ಸಿಗಬೇಕು..


ಬಯಸಿದ್ದು ಸಿಗದಾಗ‌ ಗಂಟಲೊಳಗೇ
ಅಮುಕಿದ ಆಳದ ಅಳಲಿಗೆ ಲೆಕ್ಕವಿಲ್ಲ
ಕನ್ನಡಿಯಲಿ ಕಂಡ ನನ್ನದೇ ಕಪ್ಪು ವರ್ಣದ
ಚರ್ಮ ಸದಾ ನನ್ನೊಳಗಿನ ಬಣ್ಣದ ನಿರೀಕ್ಷಿತ
ಕನಸುಗಳಿಗೆ ಅಡ್ಡಲಾಗಿ ನಿರ್ಮಿಸಿದ ಗೋಡೆ!
ಅಲ್ಲಿಂದಿಲ್ಲಿಗೆ ಜಿಗಿಯುವ ಮನಸಿಗೆ
ಖಾಲಿ ಕೈಗಳಿಗೆ ಜೋಡಿ ಕೈಯೊಂದನು
ವಯಸ್ಸಿಗೆ ಮೀರಿದ ತಲಾಶ್ ಮಾಡುವ ತವಕದಲಿ
ಬರೆ ಬರೆಸಿಕೊಂಡಾಗ ಅಂತರಾಳದ ಮುಗ್ಧ
ಮನಸಿಗೆ ಬಳಿದುಕೊಂಡ ಮಸಿ ಮೆದುಳನು
ಆವರಿಸಿ- ನೋವು ಬಾದೆಯಾಗಿ ಕೀವಾಗಿ
ಮೆದುಳನು ಆವರಿಸಿ ಕೊಳೆವ ಹೊತ್ತು
ಗಾಯ ಸ್ಮೃತಿ ಯೇ ಮರೆಯಾದಾಗ
ಅಮ್ಮನ ಮಡಿಲೇ ಹಾಸಿಗೆ ಸಾಂತ್ವನ
ಬಿಕ್ಕಿ‌ಬಿಕ್ಕಿ ಅಳುವಾಗ ರೂಪಕಗಳ
ಚಿತ್ರಗಳೇ ನಿವೇದನೆ ಗಾಗೇ ಹುಟ್ಟಿದ
ಸೃಷ್ಟಿ ಯಾದವು…
ಬಿಡಿಸಿದ ಚಿತ್ರಗಳು ಇಂದಿಗೂ
ಕಾಣುವವರ ಕಣ್ಣಿಗೆ ಸೋಜಿಗ
ಬಿಡಿಸಿದ ನನಗದು ಬೆನ್ನಿನಲ್ಲಿ
ಮರೆಯಾದ ಕಣ್ಣು…

‍ಲೇಖಕರು Admin

1 June, 2022

1 Comment

  1. Sudha Adukala

    ಚಂದದ ಕವಿತೆ ಸಂಘಮಿತ್ರಾ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading