ಸಂಕಲ್ಪ ತಂಡದ ’ಮಾಕ್‌ಬೆತ್’ ನಾಟಕ

– ಸುಮನ ಶಿವಮೊಗ್ಗ

ಬದುಕಿನಿಂದ ಬಹಿಷ್ಕೃತರಾಗಿ ಒಂಟಿಯಾಗಿ ಶಿಕ್ಷೆ ಅನುಭವಿಸುತ್ತಾ, ನಿರಂತರ ಕೀಳರಿಮೆಯಿಂದ ಬದುಕು ದೂಡುತ್ತಿರುವ ಕೈದಿಗಳಿಗೆ ಬದುಕು ಕಟ್ಟಿಕೊಡಬೇಕು. ನಾವಿನ್ನು ಒಂಟಿ, ನಮ್ಮ ಬದುಕು ಮೂರಾಬಟ್ಟೆಯಾಯಿತು ಎಂದು ಭಾವಿಸುವವರಿಗೆ ಗುಂಪಿನಲ್ಲಿಯೇ ಬದುಕಬೇಕು ಎನ್ನುವ ಮಂತ್ರ ಹೇಳಿಕೊಡಬೇಕು. ಬತ್ತಿದ ಬದುಕಿನೊರತೆಯಲ್ಲಿ ಬೆಳಕು ತುಂಬಿ, ಜೀವ ರಸ ಉಕ್ಕುವಂತೆ ಮಾಡಬೇಕು ಎಂಬುದು ಮೈಸೂರಿನ `ಸಂಕಲ್ಪ’ ರಂಗ ತಂಡದ ಗುರಿ.

ತಂಡವು ಕರ್ನಾಟಕ ಕಾರಾಗೃಹ ಇಲಾಖೆ ಸಹಯೋಗದಲ್ಲಿ ಮೈಸೂರು, ಬೆಂಗಳೂರು, ಧಾರವಾಡ ಕಾರಾಗೃಹ ನಿವಾಸಿಗಳಿಂದ `ಜೈಲಿನಿಂದ ಜೈಲಿಗೆ ರಂಗಯಾತ್ರೆ’ ಶೀರ್ಷಿಕೆಯಡಿ ಇಲ್ಲಿನ ರಂಗಶಂಕರದಲ್ಲಿ ನಾಟಕಗಳನ್ನು ಪ್ರದರ್ಶಿಸಿತು. ಷೇಕ್ಸ್ಪಿಯರನ `ಮ್ಯಾಕ್ಬೆತ್’ ಕನ್ನಡದಲ್ಲಿ `ಮಾರನಾಯಕ’ನಾಗಿ ಏಪ್ರಿಲ್ 30ರಂದು ಪ್ರದರ್ಶನ ಕಂಡಿತು. ಕನ್ನಡದ ಹೆಸರಾಂತ ನಾಟಕಕಾರ ಎಚ್.ಎಸ್.ಶಿವಪ್ರಕಾಶ್ ಅವರು `ಮ್ಯಾಕ್ಬೆತ್’ಗೆ `ಮಾರನಾಯಕ’ನ ರೂಪ ಕೊಟ್ಟಿದ್ದಾರೆ. ಇದಕ್ಕೆ ಒತ್ತಾಸೆಯಾಗಿ ನಿರ್ದೇಶಕ ಹುಲಿಹಪ್ಪ ಕಟ್ಟೀಮನಿ ಅವರು ಕಾರಾಗೃಹ ನಿವಾಸಿಗಳ ಮೂಲಕ ಬದುಕಿನ ಆಮಿಷ, ಕೊಲೆ, ಪ್ರತಿಕೊಲೆ, ಅವಹೇಳನ, ಪಶ್ಚಾತ್ತಾಪಗಳ ನಿಟ್ಟುಸಿರನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.
ಕಿರಿದಾದ ಕೋಣೆಯಲ್ಲಿ ಕುರಿಗಳ ದೊಡ್ಡಿಯಂತೆ ತುಂಬಿರುವ ಕೈದಿಗಳು. ಇವರುಗಳ ನಿರ್ವಹಣೆಗೆ ಕೈದಿಗಳ ಪೈಕಿ ನೇಮಿಸಲ್ಪಟ್ಟ ಒಬ್ಬ ಕಾವಲು ಸಿಬ್ಬಂದಿ, ಇವರೆಲ್ಲರ ಕಾವಲಿಗೆ ಪೊಲೀಸ್ ಸಿಬ್ಬಂದಿ. ಈ ದೃಶ್ಯ ಕಾಣುತ್ತಲೇ ಇದೇನಿದು ನಾವು `ಮಾರನಾಯಕ’ ನಾಟಕ ನೋಡಲು ಬಂದಿದ್ದೇವಾ ಅಥವಾ ಜೈಲನ್ನು ಕಾಣಲು ಬಂದಿದ್ದೇವಾ ಎಂಬ ಅನುಮಾನ ಮೂಡಿಸಿತು. ಆದರೆ ನಿರ್ದೇಶಕ ಕಟ್ಟೀಮನಿ ಅವರು `ಮಾರನಾಯಕ’ನ ನೆಪದಲ್ಲಿ ಕಾರಾಗೃಹವಾಸಿಗಳ ನೋವು?ನಲಿವುಗಳನ್ನೂ ಬಿಚ್ಚಿಡುವ ಮೂಲಕ ನಾಟಕಕ್ಕೆ ಮಾನವೀಯ ಸ್ಪರ್ಶ ನೀಡಿರುವುದು ನಂತರ ಸ್ಪಷ್ಟವಾಯಿತು.

ಕಾರಾಗೃಹ ನಿವಾಸಿಗಳ ಲೋಕಾಭಿರಾಮ ಮಾತುಕತೆ ಮೂಲಕ ನಾಟಕ ಆರಂಭವಾಗುತ್ತದೆ. ತನ್ನ ಅಪರಾಧಕ್ಕೆ ಶಿಕ್ಷೆ ಅನುಭವಿಸುತ್ತಿರುವವನೊಬ್ಬ ಮಾನಸಿಕವಾಗಿ ಜರ್ಜರಿತನಾಗಿ ಕಥೆ ಹೇಳುವ ಮೂಲಕ ತನ್ನನ್ನು ತಾನು ಸಾವರಿಕೊಳ್ಳುತ್ತಿರುತ್ತಾನೆ. ಆದರೆ ದುಃಖದ ಮಡುವಿನಲ್ಲಿ ಮುಳುಗಿರುವ ಹಲವರಿಗೆ ಯಾವ ಕಥೆಯೂ ಬೇಡದಾಗಿರುತ್ತದೆ. ಆ ವೇಳೆಗೆ ಹೊಸ ಅತಿಥಿಯೊಬ್ಬನ ಪ್ರವೇಶವಾಗುತ್ತದೆ. ಆತ ಚರ್ಮ ಕದ್ದಿದ್ದ ಪ್ರಕರಣದಲ್ಲಿ ಬಂದಿದ್ದಾನೆ ಎಂದು ಗೊತ್ತಾಗುತ್ತದೆ. ಅದಕ್ಕೊಬ್ಬ `ಏನು ಮೇಕೆದಾ, ಕುರಿದಾ’ ಎನ್ನುತ್ತಿದ್ದಂತೆ ಅಲ್ಲ `ಹುಲೀದು’ ಎಂಬ ಉತ್ತರ ನೀಡುತ್ತಾನೆ. ಹೆಂಗೆ ಕದ್ದೆ ಎಂಬ ಮರುಪ್ರಶ್ನೆಗೆ `ಹುಲಿ ಕೊಂದು’ ಎಂಬ ಉತ್ತರಕ್ಕೆ ಅಯ್ಯೋ ದಡ್ಡಾ! ಚರ್ಮ ತಗಂಡ್ ಹುಲಿ ಬಿಟ್ಟಿದ್ರೆ ಕೇಸೇ ಆಗ್ತಿರ್ಲಿಲ್ಲ ಎನ್ನುವ ಸಹಕೈದಿಯ ಉತ್ತರ ಪ್ರೇಕ್ಷಕರು ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ.
ಮತ್ತೊಬ್ಬ ತನ್ನ ತಟ್ಟೆಯನ್ನು ಯಾರೂ ಕದಿಯದಿರಲಿ ಎಂದು ಗುರುತು ಮಾಡಿಸಿಕೊಳ್ಳಲು ಹೋದಾಗ ತಟ್ಟೆಯನ್ನೇ ತೂತು ಮಾಡಿದ ಕೈದಿಯೊಬ್ಬ ಟೀಕೆಗೆ ಗುರಿಯಾಗುತ್ತಾನೆ. ಮತ್ತೊಬ್ಬ ಬೀಡಿ ಚಟಕ್ಕಾಗಿ ಜೈಲಿನೊಳಗೇ ಶಾಸ್ತ್ರ ಹೇಳುತ್ತಿರುತ್ತಾನೆ. ಆ ವೇಳೆಗೆ ಇನ್ನೊಬ್ಬನಿಗೆ ಕುಟುಂಬ ಸದಸ್ಯರ ಭೇಟಿಯ ಕರೆ ಬರುತ್ತದೆ. ಆತ ಮರಳಿ ಬಂದಾಗ ಇತರರು `ಮನೆಯಿಂದ ಏನ್ ತಂದಿದ್ದಾರೆ. ಅಯ್ ಸಿಹಿ ಇದೆ ಕಂಡ್ರೋ ಬರ್ರೋ ಎಲ್ಲ ತಿನ್ನಣ’ ಎಂದು ಸಂಭ್ರಮಿಸುತ್ತಾರೆ. ತಂದವನು ತಲೆ ಮೇಲೆ ಕೈ ಹೊತ್ತು ಕುಳಿತಿರುತ್ತಾನೆ. `ನೀನೂ ಸ್ವಲ್ಪ ತಿನ್ನು’ ಎಂದು ಸಹಕೈದಿಗಳು ನೀಡಲು ಬಂದಾಗ, `ಅಯ್ಯೋ ಅದು ನನ್ನ ಅಮ್ಮನ ತಿಥಿ ಸಹಿ. ನಾನು ಹೇಗೆ ತಿನ್ನಲಿ’ ಎಂದು ರೋಧಿಸುತ್ತಾನೆ. `ಮೊದಲೆ ಗೊತ್ತಾಗಿದ್ದರೆ ಪೆರೋಲ್ ಮಾಡಿಸಬಹುದಿತ್ತು’ ಎಂಬ ಪ್ರಶ್ನೆಗೆ `ನನ್ನ ತಾಯಿ ಮಗ ಈಗ ಬರ್ತಾನೆ, ಆಗ ಬರ್ತಾನೆ ಎಂದು ಕಾದೂ ಕಾದೂ ಪ್ರಾಣ ಬಿಟ್ಟರಂತೆ, ಮರಣಪತ್ರ ಕೊಂಡೋಗಿ ಪೆರೋಲ್ ಮಾಡಿಸಲು ಪ್ರಯತ್ನಿಸಿದರಂತೆ. ಆದರೆ ಪೊಲೀಸರು ನಿಮ್ಮ ಮಗನ ಜೀವಕ್ಕೆ ಅಪಾಯವಿದೆ. ಆಚೆ ಬಂದರೆ ತೊಂದರೆಯಾಗಲಿದೆ ಎಂದರಂತೆ. ನಾನು ಮಾಡಿದ ತಪ್ಪಿನಿಂದ ಇಡೀ ಸಂಸಾರವೇ ಹಾಳಾಗಿ ಹೋಯಿತು’ ಎಂದು ಗೋಳಿಡುವಾಗ ಸಭಿಕರ ಕಣ್ಣಾಲಿಗಳೂ ಒದ್ದೆಯಾಗಿದ್ದವು.

ಆ ನಡುವೆ ಕಥೆ ಹೇಳುವವ ಮತ್ತೆ ಎಲ್ಲರನ್ನು ತನ್ನ ಕಥೆ ಕೇಳುವಂತೆ ಕಾಡುತ್ತಾನೆ. `ಬರ್ರೊ ಕಥೆ ಕೇಳನಾ, ಕಥೆ ಹೇಳದಿದ್ದರೆ ಅವನಿಗೆ ನಿದ್ದೆ ಬರಲ್ಲ. ಅವ ನಿದ್ದೆ ಮಾಡದಿದ್ದರೆ ನಮಗೆ ಉಳಿಗಾಲಿಲ್ಲ’ ಎಂದು ಎಲ್ಲರು ಕಥೆ ಕೇಳಲು ಮುಂದಾಗುತ್ತಾರೆ. ಸಾಮ್ರಾಜ್ಯವೊಂದರ ಒಡೆಯ ಭದ್ರಪ್ಪ ನಾಯಕ. ಆತನ ಇಬ್ಬರು ಪುತ್ರರಲ್ಲಿ ಒಬ್ಬ ಅಪ್ಪನ ವಿರುದ್ಧವೇ ಬಂಡಾಯವೇಳುತ್ತಾನೆ. ಅವನನ್ನು ನಿಗ್ರಹಿಸಲು ಭದ್ರಪ್ಪ ನಾಯಕ ತನ್ನ ಸೋದರಳಿಯ ಮಾರನಾಯಕನನ್ನು ನೇಮಿಸುತ್ತಾನೆ. ಯುದ್ಧದಲ್ಲಿ ವಿಜಯಿಯಾಗಿ ಬರುವ ಮಾರನಾಯಕಗಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಲೇ ತನಗೆ ವಯಸ್ಸಾದ ಕಾರಣ ಮತ್ತೊಬ್ಬ ಮಗ ಧೀರನಾಯಕನಿಗೆ ಪಟ್ಟ ಕಟ್ಟುವುದಾಗಿ ಘೋಷಿಸುತ್ತಾನೆ. ಇದನ್ನು ಕೇಳಿದ ಮಾರನಾಯಕನಿಗೆ ಒಳಗೊಳಗೇ ಅಸೂಯೆ. ಸಾಂದಭರ್ಿಕವಾಗಿ ಪ್ರತ್ಯಕ್ಷವಾಗುವ ಕಾಟೇರಿಗಳು ಮಾರನಾಯಕ ನೀನು ರಾಜನಾಗುತ್ತೀಯಾ ಎಂದು ಹುರಿದುಂಬಿಸುತ್ತವೆ. ಅವನ ಪತ್ನಿ ಮಂಗಳೆ ಮುಂದೆಯೂ ಕಾಣಿಸಿಕೊಂಡು ಇದನ್ನೇ ಹೇಳುತ್ತವೆ.

ಮಾರನಾಯಕ ತಾನು ಹೇಗೆ ರಾಜನಾಗುವುದು ಎಂದು ಯೋಚಿಸುತ್ತಲೇ, ಪತ್ನಿ ಮಂಗಳೆ ಮನೆಗೆ ಬಂದಿದ್ದ ಭದ್ರಪ್ಪನಾಯಕನನ್ನು ಮುಗಿಸಲು ಪ್ರೇರೇಪಿಸುತ್ತಾಳೆ. ಅತ್ತ ಭದ್ರಪ್ಪ ನಾಯಕನ ವಧೆಯಾಗುತ್ತಿದ್ದಂತೆ ಇತ್ತ ಮಂಗಳೆ ಗಂಡುಮಗುವಿಗೆ ಜನ್ಮ ನೀಡುತ್ತಾಳೆ. ಧೀರನಾಯಕನೇ ತನ್ನ ತಂದೆಯ ಹತ್ಯೆ ಮಾಡಿದ ಎಂಬ ಸುಳ್ಳಿನ ನಡುವೆ ಮಾರನಾಯಕ ರಾಜನಾಗುತ್ತಾನೆ. ಅತಿಥಿಗಳಿಗೆ ಔತಣಕೂಟ ಏರ್ಪಡಿಸಿದ್ದಾಗ ಭದ್ರಪ್ಪನಾಯಕನ ಆತ್ಮ ಕಂಡು ಹೆದರುವ ಮಾರನಾಯಕ ತಾನು ಮಾಡಿದ ಕೃತ್ಯವನ್ನು ಬಯಲುಗೊಳಿಸುತ್ತಾನೆ. ತನ್ನ ತಂದೆ ಹತ್ಯೆಗೆ ಕಾರಣನಾದ ಮಾರನಾಯಕನ ಮಗುವನ್ನು ಧೀರನಾಯಕ ಕೊಲ್ಲುತ್ತಾನೆ. ಅವನನ್ನು ಕೊಲ್ಲಲು ಅಟ್ಟಿಸಿಕೊಂಡು ಕಾಡಿನೊಳಕ್ಕೆ ಓಡುವ ಮಂಗಳೆ ಗಗನಚುಂಬಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇಷ್ಟಕ್ಕೆಲ್ಲ ನಮ್ಮ ಮನಸ್ಸಿನಲ್ಲಿ ಆಸೆ ಬಿತ್ತಿದ ಕಾಟೇರಿಗಳೇ ಕಾರಣ ಎಂದು ಅವುಗಳ ನಾಶಕ್ಕೆ ಮಾರನಾಯಕ ಮುಂದಾಗುತ್ತಾನೆ. ಮಂಗಳೆಯ ಆತ್ಮ ಕೈಗಂಟಿದ ರಕ್ತದ ಕಲೆಗಳನ್ನು ತೊಳೆಯಲಾಗದೆ ನರಳಾಡುವ ದೃಶ್ಯದ ನಂತರ ಮತ್ತೆ ಕಾರಾಗೃಹ ನಿವಾಸಿಗಳ ಕೊಠಡಿ ಮುನ್ನೆಲೆಗೆ ಬರುತ್ತದೆ.
ಮನದ ಆಸೆಯನ್ನು ಅದುಮಿಡದಿದ್ದರೆ ಸೇಡು, ಪ್ರತೀಕಾರ ಜೀವನವನ್ನು ಹೇಗೆ ಹಾಳು ಮಾಡುತ್ತದೆ ಎಂಬ ಮಾತನ್ನು ನಿದರ್ೆಶಕರು ಕೈದಿಗಳ ಮಾತಿನಲ್ಲೇ ಹೇಳಿಸುವ ಮೂಲಕ ಅವರುಗಳ ಮನಃಪರಿವರ್ತನೆಗೆ ಮಾಡಿದ ಯತ್ನ ಸಿದ್ದಿಸಿದೆ.
ಭದ್ರಪ್ಪ ನಾಯಕನಾಗಿ ಎಸ್.ವಿ.ರಮೆಶ್, ಮಾರನಾಯಕನಾಗಿ ಗಣೇಶ್ ನಾಯಕ್, ಮಂಗಳೆಯಾಗಿ ಅಮೃತಾ ಶೆಟ್ಟಿಗಾರ್ (ಇವರು ಕಾರಾಗೃಹ ನಿವಾಸಿಯಲ್ಲ) ಇತರೆಲ್ಲರ ಅಭಿನಯ ವೃತ್ತಿ ರಂಗಭೂಮಿಯವರನ್ನೂ ನಾಚಿಸುವಂತಿತ್ತು. ನಾಟಕ ಮುಗಿದು ಹೊರಬರುತ್ತಲೇ ರಂಗಕಮರ್ಿಯೊಬ್ಬರು, ತಮ್ಮ ತಂಡದ ಸದಸ್ಯರಿಗೆ ಇವರನ್ನು ನೋಡಿ ಕಲಿಯಿರಿ ಎಂದು ಆಡಿದ ಮಾತು ಕೈದಿಗಳಿಗೆ ನೀಡಿದ ಪ್ರಮಾಣಪತ್ರವಾಗಿತ್ತು. ಪಾತ್ರಧಾರಿಗಳಲ್ಲಿ ಕೆಲವರು ಪೆರೋಲ್ ಮೇಲೆ ಮನೆಗೆ ತೆರಳಿದ್ದರೂ, ರಂಗಯಾತ್ರೆ ನಡೆಯುತ್ತಿದೆ ಎಂದು ತಿಳಿಯುತ್ತಲೇ ತಮ್ಮ ಕುಟುಂಬ ಸದಸ್ಯರನ್ನೂ ನಾಟಕಕ್ಕೆ ಕರೆತಂದುದು ಅವರ ರಂಗ ಬದ್ಧತೆಗೆ ಸಾಕ್ಷಿಯಂತಿತ್ತು.
ನಾಟಕದ ಆರಂಭದಲ್ಲಿ ಕೈದಿಯೊಬ್ಬರು ಹಾಡಿದ ಡಾ.ಜಿ.ಎಸ್.ಶಿವರುದ್ರಪ್ಪನವರ `ಕಾಣದ ಕಡಲಿಗೇ ಹಂಬಲಿಸಿದೇ ಮನ. ಕಾಣಬಲ್ಲೆನೆ ಒಂದು ದಿನ ಕಡಲನು. ಕೂಡಬಲ್ಲೆನೆ ಒಂದು ದಿನ’ ಹಾಡು ಕೈದಿಗಳು ತಮ್ಮ ತಮ್ಮ ಕುಟುಂಬ, ಸಮಾಜವನ್ನು ಸೇರಲು ತವಕಿಸುತ್ತಿರುವುದನ್ನು ಒತ್ತಿ ಹೇಳಿದಂತಿತ್ತು. ಭದ್ರಪ್ಪನಾಯಕ ಮಾರನಾಯಕನ ಮನೆಗೆ ಔತಣಕೂಟಕ್ಕೆ ಬಂದಾಗ ಕೋಳಿ ಅಂಕ ಏರ್ಪಡಿಸಿರಲಾಗುತ್ತದೆ. ಅಲ್ಲಿ ಎರಡು ನೈಜ ಹುಂಜಗಳನ್ನು ರಂಗದ ಮೇಲೆ ತಂದು ಪಂದ್ಯ ಆಡಿಸಲಾಯಿತು. ಅವು ಮೂರು ಬಾರಿ ಜಗಳ ಕಾಯ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
`ನನ್ನ ಜೈಲು ರಂಗಯಾನದಲ್ಲಿ ಇವರುಗಳನ್ನು ಬಿಡುಗಡೆ ಮಾಡಿ ಎಂದು ಎಂದೂ ಒತ್ತಾಯಿಸಿದವನಲ್ಲ. ಇಲ್ಲವಾದಲ್ಲಿ ನಾನು ಇವರ ಏಜೆಂಟ್ ಆದೇನು. ಕಾರಾಗೃಹದಲ್ಲಿ ಬೆಳೆದ ಮರದ ಕಾಯಿಗಳು ಹಣ್ಣಾಗುವ ಹೊತ್ತು ಬಂದಾಗ ಇವು ಹಣ್ಣಾಗಿವೆ. ಇವನ್ನು ಇಲ್ಲೇ ಬಿಟ್ಟರೆ ಕೊಳೆಯುತ್ತವೆ’ ಎಂದು ನಿರ್ದೇಶಕ ಹುಲಗಪ್ಪ ಕಟ್ಟೀಮನಿ ಅವರು ಆಡಿದ ಸೂಚ್ಯಕ ಮಾತುಗಳು ಮನಃಕಲಕಿತು.
ಕಟ್ಟೀಮನಿ ಅವರ ಜೈಲು ರಂಗಯಾನದಲ್ಲಿ ಪತ್ನಿ ಪ್ರಮಿಳಾ ಬೆಂಗ್ರೆ ಅವರ ಪಾತ್ರವೂ ಅಪಾರ

‍ಲೇಖಕರು G

July 22, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: