ಶ್ರೀವಿದ್ಯಾ ಸೊಬಗಿನ ನೃತ್ಯ ಸಿರಿ…

ಶಿವಾನಿ ಹೊಸಮನಿ

ಬೆಂಗಳೂರಿನ ಸೇವಾಸದನದಲ್ಲಿ ಭಾನುವಾರದ ಸಂಜೆಯಂದು ಶ್ರದ್ಧಾ ಡ್ಯಾನ್ಸ್ ಸೆಂಟರ್‌ನ ನೃತ್ಯಗುರು ಶ್ರೀಮತಿ ಶಮಾ ಕೃಷ್ಣ ಅವರ ಶಿಷ್ಯೆ ಕುಮಾರಿ ಶ್ರೀವಿದ್ಯಾ ಸುಬ್ರಹ್ಮಣ್ಯಂ ಅವರ ರಂಗಪ್ರವೇಶವು ಆತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

ದೇವಾಲಯ ನೃತ್ಯ ಸಂಪ್ರದಾಯದ ಮಲ್ಲಾರಿಯೊಂದಿಗೆ ತಮ್ಮ ರಂಗ ಪ್ರವೇಶವನ್ನು ಆರಂಭಿಸಿದ ಕುಮಾರಿ ಶ್ರೀವಿದ್ಯಾ ನಾಟ್ಯದ ಅಧಿದೇವತೆ ನಟರಾಜ, ವಿದ್ವಾಂಸರು, ಗುರುಗಳು ಹಾಗೂ ಸಭಿಕರಿಗೆ ನಮಸ್ಕರಿಸಿ ಸುಂದರ ಚಲನೆಗಳೊಂದಿಗೆ ಮೋಹಕವಾದ ನೃತ್ತ ಭಾಗಗಳೊಂದಿಗೆ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರು.

ವಿದ್ವಾನ್ ಶ್ರೀ ಹರಿ ರಂಗಸ್ವಾಮಿ ಅವರು ರಚಿಸಿದ ನಾಟರಾಗ ಖಂಡ ತ್ರಿಪುಟ ತಾಳದಲ್ಲಿ ನಿಬದ್ಧವಾಗಿದ್ದ ಈ ಮಲ್ಲಾರಿ ಆದಿ ಶಂಕರಚಾರ್ಯರು ರಚಿಸಿದ ಅಜಂ ನಿರ್ವಿಕಲ್ಪಂ ನಿರಾಕಾರ ಮೇಕಂ ಗಣೇಶ ಶ್ಲೋಕದ ಮೂಲಕ ದೈವಸ್ವರೂಪಿ ಪರಬ್ರಹ್ಮ ರೂಪನಾದ, ನಿರ್ವಿಕಲ್ಪನು, ನಿರಾಕಾರನು ಆದ, ಆನೆಯ ತಲೆ ಹೊತ್ತ, ಸರ್ವತ್ರ ವಾಸಿಸುವ, ವಿದ್ಯಾ ಬುದ್ಧಿ ಪ್ರದಾತ, ಮೂಲಾಧಾರ ಗಣಪತಿಯನ್ನು ವರ್ಣಿಸಿದರು. ಆಕರ್ಷಕ ಭಂಗಿಗಳು ಹಾಗೂ ಸರಳ ಕಥಾನಕಗಳ ಮೂಲಕ ಗಣೇಶನನ್ನು ಸ್ತುತಿಸಿದರು.

ರಸಿಕ ಪ್ರಿಯ ರಾಗದ ಜತಿಸ್ವರವನ್ನು ಪ್ರಸ್ತುತ ಪಡಿಸಿದ ಕಲಾವಿದೆ, ತಾಳದಲ್ಲಿ ವೈವಿಧ್ಯತೆ ಹಾಗು ಶೃತಿ ಲಯ ಜ್ಞಾನದ ಪರಿಚಯ ನೀಡಿದರು. ಚಾರಿಗಳು ಹಾಗೂ ಕರಣಗಳ ಮನಮೋಹಕ ವಿನ್ಯಾಸಗಳೊಂದಿಗೆ ರೂಪುಗೊಂಡಿದ್ದ ಜತಿಸ್ವರದಲ್ಲಿ ಕಲಾವಿದೆಯ ಕ್ಲಿಷ್ಟ ಅಂಗ ವಿನ್ಯಾಸಗಳು, ಲಾಸ್ಯ ಬದ್ಧ ಚಲನೆಗಳ ಬಳಕೆ, ಸ್ಥಿರತೆ ಎಲ್ಲವೂ ಅದರ ಅಂದ ಹೆಚ್ಚಿಸಿದವು. ಕಟಿಚಿನ್ನಂ, ಸ್ವಸ್ತಿಕರೇಚಿತಂ, ಮತ್ತಲಿ, ಘೂರ್ಣಿತಂ, ರೇಚಿತ ನಿಕುಟಂ, ನಾಗಾಪಸರ್ಪಿತಂ, ಆಕ್ಷಿಪ್ತ ರೇಚಿತ,ನಿಶುಂಬಿತಂ, ಕ್ರಾಂತಂ, ಡೋಲಾಪಾದ, ಅಲಾತಂ, ಎಡಕ ಕ್ರೀಡಿತ, ಮುಂತಾದ ಕರಣಗಳನ್ನು ಸುಲಲಿತವಾಗಿ ಮೈಗೂಡಿಸಿಕೊಂಡು ಪ್ರದರ್ಶಿಸಿ ಕಾರ್ಯಕ್ರಮದ ಮೆರಗು ಹೆಚ್ಚಿಸಿದರು.

ಶ್ರೀರಮಾ ಸರಸ್ವತಿ ದೇವಿ ಸ್ತುತಿಯಲ್ಲಿ ಬುದ್ಧಿ, ಶಕ್ತಿ, ಶ್ರದ್ಧಾ ಈ ತ್ರಿಗುಣಗಳಿಗೆ ತಾಯಿಯೇ ಮೂಲ, ಅಗ್ನಿ, ಜಲ, ವಾಯು,ಭೂಮಿ, ಆಕಾಶ ಈ ಪಂಚಭೂತಗಳಲ್ಲಿ ವಿಲೀನವಾಗಿದ್ದಾಳೆ ಎಂದು ಕೊಂಡಾಡಲಾಯಿತು. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ, ಜ್ಞಾನದ ಅಧಿದೇವತೆಯಾದ ಸರಸ್ವತಿಯಿಂದ ಸೇವೆ ಸ್ವೀಕರಿಸುವವಳು. ತಾರಾ, ಮಂತ್ರಿ ಇತ್ಯಾದಿ ದೇವತೆಗಳಿಂದ ಸುತ್ತುವರಿದವಳು. ಗುರುಗುಹ ಮತ್ತು ಸ್ವತಃ ಶಿವನೊಂದಿಗೆ ರಾರಾಜಿಸುವವಳು ಎಂಬ ಮನೋಹರ ವರ್ಣನೆ ಹೊಂದಿದ ಈ ನೃತ್ಯ ಭಾಗವನ್ನು ಕಲಾವಿದೆಯು ಹಸ್ತ ಖಚಿತತೆ, ಭಕ್ತಿ ಭಾವ ಹಾಗೂ ಆಕರ್ಷಕ ಚಲನವಲನಗಳೊಂದಿಗೆ ನಿರೂಪಿಸಿದರು. ಮುತ್ತುಸ್ವಾಮಿ ದೀಕ್ಷಿತರು ರಚಿಸಿದ ನಾಸಾಮಣಿ ರಾಗದ ಈ ಕೃತಿಯು ಸುಂದರವಾಗಿ ಮೂಡಿ ಬಂತು.

ಮಾರ್ಗಂನ ಮುಖ್ಯ ಭಾಗವಾದ ವರ್ಣದಲ್ಲಿ ನಾಯಕಿ ಮಹಾಲಕ್ಷ್ಮಿ ವಿರಹೋತ್ಕಂಟಿತೆಯಾದರೂ ಲೋಕಕಲ್ಯಾಣಾರ್ಥವಾಗಿ ತನ್ನಿಂದ ದೂರವಾಗಿರುವ ತನ್ನ ನಾಯಕ ಶ್ರೀಹರಿಯ ಮೇಲೆ ಮುನಿದು, ಖಂಡಿತೆಯೂ ಆಗಿದ್ದಾಳೆ. ದುಷ್ಟ ಶಿಕ್ಷೆ, ಶಿಷ್ಟ ರಕ್ಷೆಗಾಗಿ ತನ್ನ ನಾಯಕ ಹತ್ತು ಅವತಾರಗಳನ್ನು ತಳೆಯುತ್ತಾ ಕೌಟುಂಬಿಕ ಜವಾಬ್ದಾರಿಗಳನ್ನು ಮರೆಯುತ್ತಿದ್ದಾನೆ ಎಂಬ ಆರೋಪ ಲಕ್ಷ್ಮಿಯದ್ದು. ಹರಿಯ ಹತ್ತು ಅವತಾರಗಳನ್ನು ಇಲ್ಲಿ ವಿವರಿಸಲಾಯಿತು. ಕಾಂತ ಶ್ರೀಹರಿ ಏಕೆ ಇನ್ನೂ ನನ್ನ ಬಳಿ ಬಾರನು ಎಂಬ ತೊಳಲಾಟವನ್ನು ಕಲಾವಿದೆ ತಮ್ಮ ನುರಿತ ಅಭಿನಯದೊಂದಿಗೆ ಅಭಿನಯಿಸಿದರು. ಮತ್ಸ್ಯ, ಕೂರ್ಮ,ವರಾಹ, ನರಸಿಂಹ, ಬಲಿ, ಪರಶುರಾಮ, ಶ್ರೀರಾಮ, ಬಲರಾಮ, ಕೃಷ್ಣ ಹೀಗೆ ಹಲವಾರು ರೂಪಗಳನ್ನು ತಳೆದು ಲೋಕದ ರಕ್ಷಣೆ ಮಾಡುವ ನಾರಾಯಣ ಇನ್ನಾವ ರೂಪವನ್ನು ತಳೆದು ಯಾರನ್ನು ಸಂಹಾರ ಮಾಡಲು ಹೋಗಿದ್ದಾನೋ , ಹಿಂದಿರುಗಿ ಬರಲು ಯಾರ ಮಾತಿಗಾಗಿ ಕಾಯುತ್ತಿದ್ದಾನೋ ಎಂದು ತನ್ನ ನೋವನ್ನು ವ್ಯಕ್ತಪಡಿಸುವ ದೇವಿಯ ಮನಸ್ಸಿನ ಅಳಲನ್ನು ಸೂಕ್ತವಾಗಿ ತೋರಿದರು. ವಿಶಿಷ್ಟ ಜತಿಗಳು, ಕಥಾನಕಗಳ ವಿವರವಾದ ಚಿತ್ರೀಕರಣ, ಕಲಾವಿದಯ ಲಯದಲ್ಲಿ ಖಚಿತತೆ ಹಾಗೂ ಅಭಿನಯದಲ್ಲಿ ಸಮತೋಲನಕ್ಕೆ ಹಿಡಿದ ಕನ್ನಡಿಯಂತಿತ್ತು. 10 ಅವತಾರಗಳ ಪ್ರಸ್ತಾಪ, ಆ ಪ್ರಸ್ತಾಪಗಳ ಮೇಲೆ ಹೆಮ್ಮೆ ಹಾಗೂ ಪತ್ನಿಯಾಗಿ ತನ್ನ ಬೇಡಿಕೆಯನ್ನು ಪರಿಪೂರ್ಣವಾಗಿ ಕಲಾವಿದೆ ಶ್ರೀವಿದ್ಯಾ ಹೊರಹೊಮ್ಮಿಸಿದರು.

ನಟರಾಜನ ಭಂಗಿಯ ಪ್ರತಿ ವಿನ್ಯಾಸಕ್ಕೂ ಒಂದು ಅರ್ಥವಿದೆ. ಬಲಗಾಲು ಕುಂಚಿತ ಪಾದದಲ್ಲಿದ್ದು ಅಜ್ಞಾನದ ಮೇಲೆ ಶಿವ ಸಾಧಿಸಿದ ಜಯದ ಸಂಕೇತವಾಗಿದೆ. ಮೇಲೆ ಎತ್ತಲಾಗಿರುವ ಎಡಗಾಲು ಅಜ್ಞಾನವನ್ನು ಕಳೆದುಕೊಂಡವರು ಜ್ಞಾನದ ಕಡೆ ಬೆಳೆಯುತ್ತಾರೆ ಎಂದು ಸೂಚಿಸುತ್ತದೆ. ನರ್ತಿಸುವಾಗ ಬಿಚ್ಚಿರುವ ಜಟೆಗಳು, ನರ್ತನದ ರಭಸವನ್ನು ಚಿತ್ರಿಸುತ್ತದೆ. ಮೂರು ಕಣ್ಣುಗಳು ಸೂರ್ಯ ಚಂದ್ರ ಅಗ್ನಿಯನ್ನು ಪ್ರತಿನಿಧಿಸುತ್ತವೆ. ನಟರಾಜ ಭOಗಿಯಲ್ಲಿ ಶಿವ ಆನಂದ ನರ್ತನದಲ್ಲಿ ತಲ್ಲೀನನಾಗಿರುವುದನ್ನು ಕಾಣುತ್ತೇವೆ. ಇದನ್ನು ಕಂಡ ಪಾರ್ವತಿ ಶಿವನ ನರ್ತನದ ಸೊಬಗನ್ನು ವಿವರಿಸುವ ವೈಖರಿಯನ್ನು ಕಲಾವಿದೆ ಈ ಕೃತಿಯ ಮೂಲಕ ನಮ್ಮ ಕಣ್ಣಿಗೆ ಕಟ್ಟಿಕೊಟ್ಟರು. ರಾಗ ಪರಸ್ ಮತ್ತು ಆದಿತಾಳದಲ್ಲಿ ನಿಬದ್ಧವಾಗಿದ್ದ, ಪಲ್ಲವಿ ದೊರೆಸ್ವಾಮಿ ಅಯ್ಯರ್ ಅವರ ರಚನೆಯಾದ ಕೃತಿಯಲ್ಲಿ ವಿದ್ಯುಕ್ತವಾದ ಜತಿಗಳು, ಶಿವನ ಸುಂದರ ವರ್ಣನೆಯಲ್ಲಿ ಕಲಾವಿದೆ ತಮ್ಮ ಅಂಗ ಶುದ್ದಿ, ಪಾದ ಭೇದಗಳು ಹಾಗೂ ಮನೋಹರ ಅಭಿನಯದ ಮೂಲಕ ದಿವ್ಯಾನುಭೂತಿ ನೀಡಿದರು
ಅಭಿನಯ ಪ್ರಧಾನವಾದ ಪದಂನಲ್ಲಿ ನಾಯಕಿಯು ಅಭಿಸಾರಿಕೆ. ರಾಜನ ಜೊತೆ ಸಂಬಂಧವಿರುವ ನಾಯಕಿ ಯಾರು ಏನೇ ಗಾಳಿ ಸುದ್ದಿ ಹಬ್ಬಿಸಿದರು ಕಿವಿಗೆ ಹಾಕಿಕೊಳ್ಳುವುದಿಲ್ಲ.

ಧೀರ ರಾಜನ ಜೊತೆ ಹತ್ತಿರದ ಸಖ್ಯದ ಅದೃಷ್ಟ ಆಕೆಗೆ ಒದಗಿರುವಾಗ ಆಕೆ ತನ್ನ ಬೆನ್ನ ಹಿಂದೆ ಮಾತನಾಡುವವರ ಮಾತಿಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲವೆಂದು ತನ್ನ ಸಖಿಗೆ ಹೇಳುತ್ತಾಳೆ. ಹೊಟ್ಟೆ ಕಿಚ್ಚುಪಡುವ ಇವರು ಸುಮ್ಮನೆ ಗುಲ್ಲು ಹಬ್ಬಿಸುತ್ತಾರೆ. ಮೊದಲ ನೋಟದಲ್ಲಿ ರಾಜನ ಮೇಲೆ ಪ್ರೀತಿ ಹುಟ್ಟಿದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾಳೆ. ಇಂತಹ ಪ್ರೌಢ ನಾಯಿಕೆಯ ಹಾವಭಾವಗಳು, ಆಕೆಯ ಆತ್ಮವಿಶ್ವಾಸ, ಯಾರಿಗೂ ಹೆದರದೆ ಇರುವ ಸ್ವಭಾವವನ್ನು ಕಲಾವಿದೆ ಅತ್ಯಂತ ಪ್ರೌಢಿಮೆಯೊಂದಿಗೆ ಪ್ರಸ್ತುತ ಪಡಿಸಿದರು.ಬೇಗಡೆ ರಾಗ, ಮಿಶ್ರ ಛಾಪು ತಾಳ, ಸುಬ್ಬರಾಮ ಅಯ್ಯರ್ ಅವರ ರಚನೆ ಈ ಪದಂ.

ಆನಂದಯುತವಾದ ಸಂಭ್ರಮಯುಕ್ತವಾದ ತಿಲ್ಲಾನದಲ್ಲಿ, ಶೊಲ್ಲು ಕಟ್ಟುಗಳ ವಿನ್ಯಾಸಗಳು, ಅಡವುಗಳ ಕ್ರಿಯಾತ್ಮಕ ಜೋಡಣೆಗಳು, ವಿವಿಧ ಗತಿಗಳು, ಆಕರ್ಷಕ ರಂಗಾಕ್ರಮಣ ಹಾಗೂ ಮುಕ್ತಾಯಗಳ ಸಮ್ಮಿಲನವನ್ನು ಪ್ರದರ್ಶಿಸಲಾಯಿತು. ಕೊನೆಯ ಸಾಲುಗಳಲ್ಲಿ ಸಮ್ಮೋಹಿನಿಯಾದ ಆದಿಪರಾಶಕ್ತಿ ಸ್ವರೂಪಿಣಿ ತಾಯಿ ಮಹಾಮಾಯೆ ಅಂಬೆಯನ್ನು ತನ್ನಲ್ಲಿರುವ ಅಹಂ ಕಳೆದು ತಾಯಿಯನ್ನು ಭಜಿಸುವ ಭಾಗ್ಯವನ್ನು ನೀಡುವಂತೆ ಕಲಾವಿದೆ ಬೇಡಿಕೊಂಡರು. ವಲಚಿ ರಾಗದಲ್ಲಿದ್ದ ದ್ವಾರಕೀ ಕೃಷ್ಣ ಸ್ವಾಮಿ ಅವರ ರಚನೆಯಾದ ತಿಲ್ಲಾನವನ್ನು ನರ್ತಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಗರುಡಗಮನತವ ಮಂಗಳಂನ ಮೂಲಕ ತಮ್ಮ ಧನ್ಯತಾಭಾವವನ್ನು ವ್ಯಕ್ತಪಡಿಸಿ ಸುಂದರ ಸಂಜೆಗೆ ಸೂಕ್ತ ಅಂತ್ಯ ನೀಡಿದರು
ಕಲಾವಿದೆಗೆ ಮಾರ್ಗದರ್ಶನ ನೀಡಿ, ಎಲ್ಲಾ ನೃತ್ಯಗಳಿಗೆ ನೃತ್ಯ ಸಂಯೋಜಿಸಿ, ಪ್ರೋತ್ಸಾಹಿಸಿ ನಟುವಾಂಗವನ್ನು ನಿರ್ವಹಿಸಿ ಗುರು ಶ್ರೀಮತಿ ಶಮಾ ಕೃಷ್ಣ ಅವರು ರಂಗಪ್ರವೇಶದ ಯಶಸ್ಸಿನಲ್ಲಿ ಪ್ರಮುಖ ಪಾಲುದಾರರು.

ಹಾಗೆಯೇ ಸಂಗೀತ ಸಹಕಾರದಲ್ಲಿ ವಿದ್ವಾನ್ ಶ್ರೀ ದೇಬೂರ್ ಶ್ರೀನಿವಾಸನ್ ಶ್ರೀವತ್ಸ ಅವರು, ಮೃದಂಗ ವಾದನದಲ್ಲಿ ವಿದ್ವಾನ್ ಶ್ರೀ ಗಂಪಲಹಳ್ಳಿ ಗುರುಮೂರ್ತಿ ಅವರು, ಕೊಳಲು ವಾದನದಲ್ಲಿ ವಿದ್ವಾನ್ ಶ್ರೀ ಮಹೇಶ್ ಸ್ವಾಮಿಯವರು ಹಾಗೂ ರಿದಂ ಪ್ಯಾಡ್ ಸಹಕಾರದಲ್ಲಿ ವಿದ್ವಾನ್ ಶ್ರೀ ಕಾರ್ತಿಕ್ ವೈಧಾತ್ರಿ ಅವರು ಕುಮಾರಿ ಶ್ರೀವಿದ್ಯಾ ಅವರ ಯಶಸ್ವೀ ರಂಗಪ್ರವೇಶದ ಪಾಲುದಾರರಾಗಿದ್ದರು. ಶ್ರೀಯುತ ಸುಗ್ಗನಹಳ್ಳಿ ಷಡಕ್ಷರಿಯವರ ನಿರರ್ಗಳವಾದ ನಿರೂಪಣೆ ಸಂಜೆಯ ಮೆರುಗನ್ನು ಹೆಚ್ಚಿಸಿತು.

ಶ್ರದ್ಧಾ ಡ್ಯಾನ್ಸ್ ಸೆಂಟರ‍್ನ ಗುರು ಶ್ರೀಮತಿ ಶಮಾ ಕೃಷ್ಣ ಅವರ ಶಿಷ್ಯೆ ಶ್ರೀವಿದ್ಯಾ ಅವರ ಕನಸಿನ ಈ ಸುಂದರ ಸಂಜೆಯಂದು ಖ್ಯಾತ ನೃತ್ಯಗುರು ಶ್ರೀಮತಿ ಪದ್ಮಿನಿ ರವಿಯವರು, ನಾಡಿನ ಪ್ರಸಿದ್ಧ ಕುಚಿಪುಡಿ ನೃತ್ಯಗುರು ಶ್ರೀಮತಿ ವೀಣಾಮೂರ್ತಿ ವಿಜಯ್ ಅವರು ಹಾಗೂ ಖ್ಯಾತ ಭರತನಾಟ್ಯ ಕಲಾವಿದೆ ಹಾಗೂ ನೃತ್ಯಗುರು ಶ್ರೀಮತಿ ಅನುರಾಧಾ ವಿಕ್ರಾಂತ್ ಅವರು ಉಪಸ್ಥಿತರಿದ್ದು ಕಲಾವಿದೆಗೆ ಶುಭ ಹಾರೈಸಿದರು.

‍ಲೇಖಕರು Admin

December 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: