ಸರೋಜಿನಿ ಪಡಸಲಗಿ ಅನುವಾದಿತ ಕವಿತೆ- ಜಗವೇ ಒಂದು ನಾಟಕ ರಂಗ…

ಮೂಲ – ವಿಲಿಯಂ ಷೇಕ್ಸ್ ಪಿಯರ್
ಅನುವಾದ‌ – ಸರೋಜಿನಿ ಪಡಸಲಗಿ

ಈ ಜಗವೊಂದು ನಾಟಕ ರಂಗ
ಪಾತ್ರಧಾರಿ ಇಲ್ಲಿ ಪ್ರತಿ ಜೀವಿಯೂ
ಪ್ರತಿಯೊಬ್ಬರಿಗುಂಟು ಅವರದೇ ಒಂದು ಆಗಮನ ದ್ವಾರ
ಅಂತೆಯೇ ಉಂಟು ನಿರ್ಗಮನ ದ್ವಾರ
ಹಾಗೇ ಉಂಟು ವಿವಿಧ ಪಾತ್ರಗಳು
ಒಂದೊಂದು ವಯಕೆ ಒಂದೊಂದು ಪಾತ್ರ
ಇಹುದು ಏಳು ವಯಗಳ ಏಳು ರೂಪ
ಪಾತ್ರಧಾರಿ ಯ ಮೊದಲ ಅಂಕ
ಅಮ್ಮನ ಮೃದು ತೋಳ ತೆಕ್ಕೆಯಲಿ
ಮೂಗನುಜ್ಜುತ ಅಮ್ಮನೆದೆಗೆ ವಂಯ್ಗುಡುತ ಅಲ್ಲಿಯೇ
ತಾಯ ಮಡಿಲಲಿ ಬಾಯ್ ಜೊಲ್ಲು ಸುರಿಸುತಲಿ
ಮೆಲ್ಲಗೆ ಬೆಳೆಯುತ ಎರಡನೇ ಅಂಕಕೆ ಪ್ರವೇಶ
ಗುಣು ಗುಣು ಗೊಣಗಾಡುತ ಸ್ಕೂಲ್ ಬ್ಯಾಗ್ ಬೆನ್ನಿಗೇರಿಸುತ
ಬೆಳಗಿನ ಹೊಳೆಯುವ ಹೊಸ ಬೆಳಕಲಿ ಸಣ್ಣಗೆ ನುಲಿಯುತ
ಒಲ್ಲದ ಮನದಿಂದ ಶಾಲೆಯತ್ತ ನಡೆವ ಪುಟ್ಟ ಮಗುವೀಗ ಆತ
ಎದೆಯುದ್ದ ಬೆಳೆದ ಮಗುವೀಗ ತನ್ನೊಲವಿನೊಡತಿಯ ದಾರಿ ಕಾಯ್ವ ಪ್ರಿಯಕರನು
ತಡಪಡಿಸುತ ಬಿಸುಸುಯ್ಯುತ ಕಮ್ಮಾರನ ಕುಲುಮೆಯ ತಿದಿಯಂತೆ

ತನ್ನ ಪ್ರಿಯಳ ಬಿಲ್ಲಿನೊಲು ಬಾಗಿದ ಹುಬ್ಬುಗಳ ಚಲುವಿಕೆಯಲಿ ಮುಳುಗಿ ರಂಗು ರಂಗಿನ ನೀಳ್ಗವಿತೆ ಬರೆಯುತ ಕನಸುಗಳಲಿ ಓಲಾಡುತ
ಇನ್ನೀಗ ಬಲು ಕಠಿಣ ಅಂಕ ಇಲ್ಲಿಹನು ಆತ ಸೈನಿಕ
ತನ್ನ ಬಾಳಯುದ್ಧದಲಿ ಹೋರಾಡುತ
ಮೊಗದಿ ಕುರುಚಲು ಗಡ್ಡ ಮೀಸೆ ಎದೆ ತುಂಬ ಆಣೆ ಪ್ರಮಾಣ
ಬಲ್ಲಿದನು ಬಲು ಕಾದಾಡಲು ಪ್ರತಿಷ್ಠೆ ಪ್ರಸಿದ್ಧಿ ಯ ಗಳಿಸಲು
ಅದು ಕ್ಷಣಿಕ ನೀರ್ಗುಳ್ಳೆಯಂತೆ ಎಂಬುದನ್ನು ಮರೆಯುತ
ಬೆಂಕಿಯ ಉಂಡೆಯ ಒಳಹೊಗಲು ಸಿದ್ಧನಾತ
ಈಗ ಪ್ರಬುದ್ಧ ಪ್ರೌಢನ ರಂಗಪ್ರವೇಶ
ಹೊಂದಿಹನು ಸಣ್ಣ ಬೊಜ್ಜಿನೊಂದಿಗೆ ದಪ್ಪ ಮೈಯ
ಪ್ರಭಾವಿ ಪದವಿ ಅಚ್ಚು ಕಟ್ಟಾದ ಗಡ್ಡ ಕಂಗಳಲ್ಲಿ ತೀಕ್ಷ್ಣತೆ ತಲೆತುಂಬ ಚಾಣಾಕ್ಷ ತೆ ಆಧುನಿಕತೆಯ ಪ್ರತೀಕ
ಬಲು ಹೆಮ್ಮೆಯದೀ ಅಂಕ ಬಾಳಿನಲ್ಲಿ
ಈಗಿಹುದು ಇನ್ನು ಹತಾಶೆಯನೊಪ್ಪದ ,ಯುವಕ ತಾನಿನ್ನೂ ಎಂಬ ಒಣಜಂಭದ ಈ ಅಂಕ
ಸೋಲುತಿಹುದು ಕೈ ಕಾಲು ಜೋಲುತಿಹುದು ಮೈ ಚರ್ಮ
ಮೂಗಿನ ಮೇಲೆ ಕನ್ನಡಕ ಅದರಕ್ಕ ಪಕ್ಕ ಉಬ್ಬುಗಳು ತೂಗುವ ಚೀಲದಂತೆ
ಉಡುಗಿ ಹೋದ ದೇಹಕೆ ಜೋತು ಬಿದ್ದಂತಿರುವ ಉಡುಗೆ ತೊಡುಗೆ
ಯಾಜಮಾನ್ಯದ ಗಂಭೀರ ಧ್ವನಿಯಲ್ಲಿ ಅರಿಯದೇ ಒಂದು ಸೌಮ್ಯತೆ
ಈಗ ಬಲು ಘೋರ ಅಂಕದ ಭಾಗ ಈ ರಂಗದಿ
ತಿರುಗಿಹುದು ಜೀವ ಶೈಶವಕೆ ಧ್ವನಿಯಲಿಹುದು ವಂಯ್ಗುಡುವ ಸಣ್ಣ ಸಿಳ್ಳೆಯಂತಹ ಶಬ್ದ
ಬಿಡದದು ಯಾರನೂ ಜೀವನದ ಈ ಕೊನೆಯ ಹಂತ
ಹಲ್ಲಿಲ್ಲ, ದೃಷ್ಟಿಯಿಲ್ಲ ರುಚಿಯಿಲ್ಲ
ಏನೇನೂ ಇಲ್ಲ ಇಹುದು ಬರೀ ಶೂನ್ಯ ಬರೀ ಶೂನ್ಯ
ಶಿಶುವಾಗಿ ಪ್ರವೇಶಿಸಿ ಮತ್ತೆ ಶಿಶುವಿನಂತೆ ನಿರ್ಗಮನ
ಮುಗಿದಿಹುದು ಅಲ್ಲಿಗೊಂದು ಇತಿಹಾಸದ ಅಧ್ಯಾಯ ಜಾರಿಹುದು ಅಂಕದ ಪರದೆ

‍ಲೇಖಕರು Admin

December 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: