ಗೆಳೆಯ ನಾಗರಾಜರೆಡ್ಡಿ ಇನ್ನಿಲ್ಲ
ಎಂದರೆ ಮನಸ್ಸೇಕೋ ಒಪ್ಪುತ್ತಿಲ್ಲ

ಆರ್ ಟಿ ವಿಠ್ಠಲಮೂರ್ತಿ
ಮನಸ್ಸು ಮಗುಚಿ ಬಿದ್ದಂತಾಗಿದೆ.
ಮೊನ್ನೆ ಮೊನ್ನೆಯಷ್ಟೇ ಮಗುವಿನಷ್ಟು ಮುಗ್ಧವಾಗಿ: ಸಾರ್,ಏನೇ ಮಾಡಿದರೂ ನೀವು ಸಿಗುವುದೇ ಇಲ್ಲವಲ್ಲ?ಸುಖ ಇದ್ದಾಗ ಸಾವಿರ ಜನ ಸಿಗುತ್ತಾರೆ. ಆದರೆ ಬದುಕಿಗಾಗಿ ಹೋರಾಟ ನಡೆಸುವ ಕಾಲದಲ್ಲಿ ಗೆಳೆಯರಾದವರು ನೀವು. ಈಗ ನಾವು ಸುಖವಾಗಿರುವ ಕಾಲದಲ್ಲಿ ಸಿಗುತ್ತಿಲ್ಲವಲ್ಲ? ಅಂತ ಪೇಚಾಡಿದ್ದ ಗೆಳೆಯ ನಾಗರಾಜ ರೆಡ್ಡಿ ತೀರಿಕೊಂಡಿದ್ದಾರೆ.
ಭಾನುವಾರ ಕೊಲಂಬೋದಲ್ಲಿ ಭಯೋತ್ಪಾದಕರು ನಡೆಸಿದ ಬಾಂಬ್ ಧಾಳಿಯಲ್ಲಿ ನಾಗರಾಜರೆಡ್ಡಿ ತೀರಿಕೊಂಡರು ಅಂತ ಗೆಳೆಯ ರಾಮಚಂದ್ರ ಹೇಳಿದಾಗ ಮನಸ್ಸು ಮೂಕವಾಗಿ ಹೋಯಿತು.
ನಾವು ಬರೋಬ್ಬರಿ ಮೂವತ್ತು ವರ್ಷಗಳ ಗೆಳೆಯರು. ಆಗ ನನ್ನದು, ಗೆಳೆಯ ರಾಮಚಂದ್ರನದು ಕಂಡ ಕಂಡಲ್ಲಿ ಅಲೆದಾಟ, ನಾನೋ ಲಂಡ್ ಬಂಡ್ ಝಂಡಾ ಫಕೀರ್. ರಾಮಚಂದ್ರ ಇದ್ದುದರಲ್ಲಿ ಬೆಟರ್.
ಆದರೆ ಇವರಿದ್ದರಲ್ಲ ನಾಗರಾಜ ರೆಡ್ಡಿ ಹಾಗೂ ಪುರುಷೋತ್ತಮ ರೆಡ್ಡಿ? ಅಗಾಧ ಶ್ರೀಮಂತರು. ಅವತ್ತಿನ ಕಾಲದಲ್ಲಿ ನಲವತ್ತೈದು ಲಕ್ಷ ರೂಪಾಯಿ ಬೆಲೆ ಬಾಳುವ ಬೆಂಜ್ ಕಾರಿನಲ್ಲಿ ಓಡಾಡುತ್ತಿದ್ದರು.
ಬರೀ ಬೆಂಜ್ ಅಲ್ಲ, ಇನ್ನೂ ಹಲವು ಕಾರುಗಳು. ಮುಂದೆ ‘ಹಾಯ್ ಬೆಂಗಳೂರ್’ ಪತ್ರಿಕೆಯ ಸಮಾರಂಭಕ್ಕೆ ಅಂತ ಅತಿಥಿಗಳನ್ನು ಕರೆತರಬೇಕು ಅನ್ನುವಾಗ ನಾನು ಗೆಳೆಯ ರಾಮಚಂದ್ರನಿಗೆ ಗಂಟು ಬೀಳುತ್ತಿದ್ದೆ. ಅವನು ಈ ನಾಗರಾಜರೆಡ್ಡಿ ,ಪುರುಷೋತ್ತಮ ರೆಡ್ಡಿ ಅವರನ್ನು ಹಿಡಿದುಕೊಳ್ಳುತ್ತಿದ್ದ. ಶುರುವಾಗುತ್ತಿತ್ತು ಕಾರುಗಳ ಪೆರೇಡು.
ಈ ಕಾರುಗಳಲ್ಲಿ ಖುಷ್‌ವಂತ್ ಸಿಂಗ್ ಅವರಿಂದ ಹಿಡಿದು ಯಂಡಮೂರಿ ವೀರೇಂದ್ರನಾಥ್ ತನಕ ಈ ದೇಶದ ಮಹಾನ್ ಲೇಖಕರನ್ನು ಕರೆದುಕೊಂಡು ಬಂದು ಅವರನ್ನು ಅಶೋಕಾ ಹೋಟೆಲ್ ಗೋ, ತಾಜ್ ವೆಸ್ಟ್ ಎಂಡ್ ಹೋಟೆಲ್ಲಿಗೋ ಕರೆದುಕೊಂಡು ಹೋಗುತ್ತಿದ್ದೆವು.
ಆಗೆಲ್ಲ ನಾಗರಾಜರೆಡ್ಡಿ ಅವರದೇ ಡ್ರೈವಿಂಗು. ಸಾರ್, ನೀವು ಅತಿಥಿಗಳ ಜತೆ, ನಮ್ಮ ಜತೆ ಕುಳಿತುಕೊಳ್ಳಿ, ನಿಮ್ಮ ಹುಡುಗರನ್ನು ಡ್ರೈವಿಂಗಿಗೆ ಅಂತ ಕರೆದುಕೊಂಡು ಬನ್ನಿ ಎಂದರೆ, ಅಯ್ಯೋ, ಇದರಲ್ಲಿರುವ ಸುಖ ಅದರಲ್ಲಿರುತ್ತದಾ ವಿಠ್ಠಲಮೂರ್ತಿಯವರೇ? ಎಂದು ಒಂದು ಪಿಂಚಿಂಗ್ ಸ್ಮೈಲ್ ಕೊಡುತ್ತಿದ್ದರು ನಾಗರಾಜ ರೆಡ್ಡಿ.
ಆದರೆ ಮೂರು ದಶಕಗಳ ಗೆಳೆತನವಿದ್ದರೂ ಯಾವತ್ತೂ ಹಣಕಾಸಿನ ವಿಷಯ ಬಂದಾಗ ಒಂದು ಪೈಸೆಯ ವ್ಯವಹಾರ ನಮ್ಮ ನಡುವೆ ಇರುತ್ತಿರಲಿಲ್ಲ.
ಆದರೂ: ಸಾರ್, ನಿಮಗೇನೇ ಬೇಕೆಂದರೂ ಸಂಕೋಚ ಪಡಬೇಡಿ. ಗೆಳೆತನದಲ್ಲಿ ವ್ಯವಹಾರ ಬೇಡ. ಆದರೆ ಒಬ್ಬರ ಕಷ್ಟಕ್ಕೆ ಒಬ್ಬರು ಆಗದಿದ್ದರೆ ಅದಕ್ಕೆ ಅರ್ಥವೇ ಇಲ್ಲ ಅನ್ನುವುದು ನಾಗರಾಜರೆಡ್ಡಿ ಅವರ ಪರ್ಮನೆಂಟ್ ಡೈಲಾಗು.
ಕಳೆದ ವರ್ಷ ಕಣ್ಣಿನ ಆಪರೇಷನ್ ಎಂದು ನಾನು ಗಡಿಬಿಡಿಯಲ್ಲಿದ್ದಾಗ ಒಂದು ದಿನ ಫೋನು ಮಾಡಿದ ನಾಗರಾಜ ರೆಡ್ಡಿ: ಸಾರ್,ಆಪರೇಷನ್ ಆದ ಮೇಲೆ ಒಂದು ತಿಂಗಳು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಮ್ಮ ಫಾರಂ ಹೌಸ್ ಗೆ ಬಂದು ಬಿಡಿ. ರೆಸ್ಟು ತೆಗೆದುಕೊಳ್ಳುವಿರಂತೆ ಎಂದಿದ್ದರು.
ಅಯ್ಯೋ, ಆ ಲೆವೆಲ್ಲಿನ ಸೀನ್ ಏನೂ ಇಲ್ಲ ಸಾರ್, ಟೈಮು ಟೈಮಿಗೆ ಕಣ್ಣಿಗೆ ಡ್ರಾಪ್ಸ್ ಹಾಕಿಕೊಂಡರಾಯಿತು. ಅದಕ್ಕೇಕೆ ರೆಸ್ಟು? ನಿಮ್ಮ ಫಾರಂ ಹೌಸ್ ಗೇಕೆ ಗೆಸ್ಟು? ಅಂತ ನಕ್ಕಿದ್ದೆ.
ಅಯ್ಯೋ, ಅದು ಹಾಗಲ್ಲ, ನಾವು ಗೆಳೆಯರಾದ ಶುರುವಿನಲ್ಲಿ ಇದರ ಬಗ್ಗೆ ಏನೂ ಅನ್ನಿಸುತ್ತಿರಲಿಲ್ಲ. ಯಾಕೆಂದರೆ ಎಲ್ಲರೂ ನಮ್ಮ ನಮ್ಮ ಕೆಲಸದಲ್ಲಿ ಬಿಜಿ ಇರುತ್ತಿದ್ದೆವು. ಆದರೆ ಈಗ ಹಾಗಲ್ಲ,ಒಳ್ಳೆ ಗೆಸ್ಟ್ ಹೌಸು ಇದೆ. ಲ್ಯಾಂಬರ್ಗಿನಿ ಕಾರು ಇದೆ. ಬಂದು ನೆಮ್ಮದಿಯಾಗಿದ್ದು ಹೋಗಿ, ರಾಮಚಂದ್ರ ಅವರಿಗೂ ಹೇಳುತ್ತೇನೆ. ಆದರೆ ನೀವು, ಅವರು ಬರುತ್ತೇವೆ ಎಂದು ಹೇಳುತ್ತೀರೇ ವಿನ; ಯಾವತ್ತೂ ಬರುವುದೇ ಇಲ್ಲ ಎಂದು ಪೇಚಾಡಿಕೊಂಡಿದ್ದರು.
ಬದುಕಿನಲ್ಲಿ ಅವರು ಮೇಲಿಂದ ಮೇಲೆ ಮನೆ ಕಟ್ಟಿ ಗೃಹ ಪ್ರವೇಶ ಮಾಡುವುದು. ಬಿಲ್ಡಿಂಗುಗಳನ್ನು ಕಟ್ಟಿ ಪ್ರತಿಷ್ಟಿತ ಐಟಿ ಕಂಪನಿಗಳಿಗೆ ಬಾಡಿಗೆಗೆ ಕೊಡುವುದು, ಇನ್ನೇನೋ ಸಮಾರಂಭ ಮಾಡಿ, ಬನ್ನಿ ಅಂತ ಕರೆಯುವುದು ನಿರಂತರವಾಗಿ ನಡೆಯುತ್ತಲೇ ಇತ್ತು. ಆಗಾಗ ರಾಮಚಂದ್ರ ಕೂಡಾ, ಯೋ ಸುಮ್ಮನೆ ಒಂದು ಸಲ ಬಂದು ಹೋಗಯ್ಯ, ಪಾಪ,ನಾಗರಾಜರೆಡ್ಡಿ ಅದೆಷ್ಟು ಬೇಸರ ಮಾಡಿಕೊಳ್ತಾರೆ? ನನ್ನ ಹೀಟ್ ಟ್ರೀಟ್ ಮೆಂಟ್ ಫ್ಯಾಕ್ಟರಿಯ ಕೆಲಸದ ನಡುವೆ ನಾನು ಕೂಡಾ ಅವರ ಪ್ರೋಗ್ರಾಮುಗಳಿಗೆ ಹೋಗುವುದು ಕಷ್ಟ. ಆದರೂ ಆದಾಗ ಹೋಗಿ ಬರುತ್ತಿರುತ್ತೇನೆ ಎನ್ನುತ್ತಿದ್ದ

Gouse Color
ಆಗೆಲ್ಲ ನಾನು, ರಾಮಣ್ಣ, ನಿನಗೆ ಗೊತ್ತಲ್ಲ? ನಮ್ಮದು ದಿನಾ ವಿಧಾನಸೌಧದ ರೌಂಡು ಬಿಟ್ಟರೆ ಅಲೆದಾಟ, ಆನಂತರ ಹೋಮ್ ಆಫೀಸಿಗೆ ಹೋಗುವುದು ಎನ್ನುತ್ತಿದ್ದೆ. ಈ ಹೋಮ್ ಆಫೀಸು ಅಂದರೆ ಬೇರೇನೂ ಅಲ್ಲ, ನಾವು ಗೆಳೆಯರು ವರದಿಗಾರರ ಕೂಟದ ಕಛೇರಿಗೆ ಇಟ್ಟ ಅನ್ ಅಫೀಷಿಯಲ್ ಹೆಸರು.
ಹೀಗೆ ನೋಡನೋಡುತ್ತಿದ್ದಂತೆಯೇ ಬದುಕು ರಥದ ಚಕ್ರದಂತೆ ಉರುಳಿಕೊಂಡು ಹೋಯಿತು. ಆಗಾಗ ನಾಗರಾಜ ರೆಡ್ಡಿ ಫೋನು ಮಾಡುತ್ತಲೇ ಇದ್ದರು. ಕುಶಲ ವಿಚಾರಿಸುತ್ತಿದ್ದರು. ನೋಡೋಣ. ಯಾವಾಗ ಬರುತ್ತೀರೋ? ಅನ್ನುತ್ತಿದ್ದರು. ಆಗೆಲ್ಲ ನಾನು, ಅಯ್ಯೋ ನೋಡುತ್ತಿರಿ. ಬಂದು ನಿಮ್ಮ ಫಾರಂ ಹೌಸ್ ನಲ್ಲಿ ಟೆಂಟ್ ಹೊಡೆದು ಬಿಡುತ್ತೇವೆ ಎಂದು ನಗುತ್ತಿದ್ದೆ.
ಅವರೂ ತಣ್ಣಗೆ ನಗುತ್ತಿದ್ದರು. ಅಂತಹ ನಾಗರಾಜ ರೆಡ್ಡಿ ಕೆಲಸಕ್ಕೆಂದು ಮೊನ್ನೆ ಶ್ರೀಲಂಕಾಗೆ ಹೋಗಿದ್ದಾರೆ. ಭಾನುವಾರದಂದು ಅವರುಳಿದುಕೊಂಡಿದ್ದ ಹೋಟೆಲ್ ಸಮೀಪ ಬಾಂಬ್ ಸ್ಪೋಟಿಸಿ ನಾಪತ್ತೆಯಾಗಿದ್ದಾರೆ.
ಇವತ್ತು ಸಂಜೆ ಗೆಳೆಯ ರಾಮಚಂದ್ರನ ಫೋನು: ವಿಠ್ಠಲ, ಪಾಪ ನಾಗರಾಜ ರೆಡ್ಡಿ ತೀರಿಕೊಂಡು ಬಿಟ್ಟರು ಕಣೋ ಅಂದ ಆತನಿಗೆ ಮತ್ತೆ ಮಾತೇ ಹೊರಡಲಿಲ್ಲ.
ನನಗೂ ಮನಸ್ಸು ಮಗುಚಿ ಬಿದ್ದಂತಾಯಿತು. ಅಯ್ಯೋ ನೋಡುತ್ತಿರಿ. ನಿಮ್ಮ ಫಾರಂ ಹೌಸ್ ಗೆ ಬಂದು ಟೆಂಟು ಹೊಡೆಯುತ್ತೇವೆ ಅಂತ ನಾಗರಾಜರೆಡ್ಡಿ ಅವರಿಗೆ ಮೊನ್ನೆ ಮೊನ್ನೆಯಷ್ಟೇ ಹೇಳಿದ ನೆನಪು. ಅದು ಈಡೇರುವ ಒಳಗೆ ಅವರೇ ಹೋಗಿದ್ದಾರೆ.
ಬದುಕು ಕೊಡುವ ನೋವುಗಳನ್ನು ಭರಿಸುವುದು ಹೇಗೆ? ಮನಸ್ಸೇಕೋ ಗೆಳೆಯ ನಾಗರಾಜರೆಡ್ಡಿಯ ಸಾವನ್ನು ಒಪ್ಪುತ್ತಿಲ್ಲ.
****
ಗೆಳೆಯ ನಾಗರಾಜ ರೆಡ್ಡಿ,ಎಸ್.ಪಿ.ಬಾಲಸುಬ್ರಹ್ಮಣ್ಯಂ,ರಾಮಚಂದ್ರ ಮತ್ತು ನಾನು (ತಾಜ್ ವೆಸ್ಟ್ ಎಂಡ್ ಹೋಟೆಲ್ ಬಳಿಯ ಚಿತ್ರ)






0 Comments